ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಸೆಪ್ಟೆಂಬರ್ 7-13
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 23-24
“ಲೋಕದ ಜನರನ್ನ ಹಿಂಬಾಲಿಸಬೇಡಿ”
ಕಾವಲಿನಬುರುಜು18.08 ಪುಟ 4 ಪ್ಯಾರ 7-8
ಸತ್ಯ ಏನೆಂದು ನಿಮಗೆ ಗೊತ್ತಾ?
7 ನಿಮ್ಮ ಸ್ನೇಹಿತರಿಗೆ ಇ-ಮೇಲ್ಗಳನ್ನು, ಮೆಸೆಜ್ಗಳನ್ನು ಕಳುಹಿಸುವುದಕ್ಕೆ ನಿಮಗೆ ಇಷ್ಟನಾ? ನ್ಯೂಸ್ನಲ್ಲಿ ಯಾವುದಾದರೂ ಆಸಕ್ತಿಕರ ಸುದ್ದಿ ಬಂದರೆ ಅಥವಾ ಯಾವತ್ತಿಗೂ ಕೇಳಿರದಂಥ ಅನುಭವವನ್ನು ಕೇಳಿಸಿಕೊಂಡರೆ ಅದನ್ನು ಒಬ್ಬ ವರದಿಗಾರನಂತೆ ಬೇರೆಯವರಿಗೆ ತಕ್ಷಣ ತಿಳಿಸಲು ನಿಮಗೆ ಮನಸ್ಸಾಗುತ್ತದಾ? ಒಂದು ಇ-ಮೇಲ್ ಅಥವಾ ಮೆಸೆಜ್ ಕಳುಹಿಸುವ ಮುಂಚೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ಸುದ್ದಿ ಸತ್ಯನಾ? ಇದು ನಿಜ ಅಂತ ಹೇಳುವುದಕ್ಕೆ ನನ್ನ ಹತ್ತಿರ ಸರಿಯಾದ ಆಧಾರ ಇದೆಯಾ?’ ನಿಮಗೆ ಖಚಿತವಾಗಿ ಗೊತ್ತಿಲ್ಲದಿದ್ದರೆ ನೀವು ಸುಳ್ಳನ್ನು ಹಬ್ಬಿಸುತ್ತಿದ್ದೀರಿ ಎಂದಾಗುತ್ತದೆ. ಹಾಗಾಗಿ ಸರಿಯಾದ ಆಧಾರ ಇಲ್ಲದಿರುವ ಯಾವುದೇ ವಿಷಯವನ್ನು ದಯವಿಟ್ಟು ಕಳುಹಿಸಬೇಡಿ. ಅದನ್ನು ಡಿಲೀಟ್ ಮಾಡಿ!
8 ನಿಮಗೆ ಬಂದ ಇ-ಮೇಲ್ಗಳನ್ನು ಅಥವಾ ಮೆಸೆಜ್ಗಳನ್ನು ಹಿಂದೆ ಮುಂದೆ ಯೋಚಿಸದೆ ಬೇರೆಯವರಿಗೆ ಕಳುಹಿಸುವುದು ಯಾಕೆ ಅಪಾಯ ಅನ್ನುವುದಕ್ಕೆ ಇನ್ನೊಂದು ಕಾರಣ ಇದೆ. ಕೆಲವು ದೇಶಗಳಲ್ಲಿ ನಮ್ಮ ಕೆಲಸಕ್ಕೆ ನಿರ್ಬಂಧ ಹಾಕಲಾಗಿದೆ ಅಥವಾ ನಿಷೇಧವನ್ನೂ ಮಾಡಲಾಗಿದೆ. ಇಂಥ ದೇಶಗಳಲ್ಲಿ ನಮ್ಮನ್ನು ವಿರೋಧಿಸುವವರು ಉದ್ದೇಶಪೂರ್ವಕವಾಗಿ ನಮ್ಮನ್ನು ಹೆದರಿಸುವಂಥ ಅಥವಾ ಒಬ್ಬರ ಮೇಲೊಬ್ಬರಿಗೆ ಅನುಮಾನ ಬರುವಂಥ ಕಟ್ಟುಕಥೆಗಳನ್ನು ಹಬ್ಬಿಸಬಹುದು. ಹಿಂದೆ ಇದ್ದ ಸೋವಿಯತ್ ಒಕ್ಕೂಟದಲ್ಲಿ ಏನಾಯಿತೆಂದು ನೋಡಿ. ಅಲ್ಲಿನ ಗುಪ್ತದಳದಲ್ಲಿದ್ದವರು (ಕೆ.ಜಿ.ಬಿ.) ಯೆಹೋವನ ಜನರಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಸಹೋದರರು ಮೋಸ ಮಾಡಿದ್ದಾರೆ ಎನ್ನುವ ವದಂತಿಯನ್ನು ಹಬ್ಬಿಸಿದರು. ದುಃಖಕರವಾಗಿ ಅನೇಕ ಸಹೋದರರು ಈ ವದಂತಿಯನ್ನು ನಂಬಿ ಯೆಹೋವನ ಸಂಘಟನೆಯನ್ನು ಬಿಟ್ಟುಹೋದರು. ಅವರಲ್ಲಿ ಅನೇಕರು ನಂತರ ಪುನಃ ಬಂದರು, ಆದರೆ ಕೆಲವರು ವಾಪಸ್ ಬರಲೇ ಇಲ್ಲ. ಈ ವದಂತಿಯನ್ನು ನಂಬಿ ತಮ್ಮ ನಂಬಿಕೆಯನ್ನು ಕಳಕೊಂಡರು. (1 ತಿಮೊ. 1:19) ನಾವು ಇಂಥ ಅಪಾಯದಿಂದ ಹೇಗೆ ದೂರ ಇರಬಹುದು? ತಪ್ಪಾದ ಅಥವಾ ಖಚಿತವಾಗಿ ಗೊತ್ತಿಲ್ಲದ ಕಥೆಗಳನ್ನು ಹಬ್ಬಿಸಲೇಬಾರದು. ನಾವು ಕೇಳಿಸಿಕೊಳ್ಳುವ ವಿಷಯಗಳನ್ನೆಲ್ಲಾ ನಂಬಬಾರದು. ಬದಲಿಗೆ ಅದಕ್ಕೆ ಆಧಾರ ಹುಡುಕಬೇಕು.
it-1-E ಪುಟ 11 ಪ್ಯಾರ 3
ಆರೋನ
ಆರೋನ ತಪ್ಪು ಮಾಡಿದ ಅಂತ ಅನಿಸುವ ಮೂರು ಸಂದರ್ಭಗಳಲ್ಲಿಯೂ ಆ ತಪ್ಪು ಮಾಡುವಂತೆ ಪ್ರೇರೇಪಿಸಿದ್ದು ಬೇರೆಯವ್ರು ಅನ್ನೋದು ಗಮನಿಸಬೇಕಾದ ವಿಷಯ. ಅವ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಅಥ್ವಾ ಬೇರೆಯವ್ರ ಒತ್ತಡಕ್ಕೆ ಮಣಿದು ನ್ಯಾಯವಾದ ಮಾರ್ಗವನ್ನು ಬಿಟ್ಟು ತಪ್ಪು ಹೆಜ್ಜೆ ಇಟ್ಟ. ಮೊದ್ಲು ತಪ್ಪು ಮಾಡಿದ ಸಂದರ್ಭದಲ್ಲಿ ಅವ್ನು ಜನ್ರ ಒತ್ತಡಕ್ಕೆ ಮಣಿಯದೆ, “ದುಷ್ಕಾರ್ಯವನ್ನು ಮಾಡುವವರು ಬಹುಮಂದಿ ಆದಾಗ್ಯೂ ಅವ್ರ ಜೊತೆಯಲ್ಲಿ ಸೇರಬಾರದು” ಅನ್ನೋ ಆಜ್ಞೆಯಲ್ಲಿರೋ ತತ್ವವನ್ನು ಪಾಲಿಸಬೇಕಿತ್ತು. ಪಾಲಿಸಿದ್ದಿದ್ರೆ ಆ ತಪ್ಪನ್ನ ಮಾಡ್ತಿರಲಿಲ್ಲ. (ವಿಮೋ 23:2) ಇಷ್ಟೆಲ್ಲಾ ಆದ್ರೂ ಆರೋನನ ಹೆಸರನ್ನು ಬೈಬಲಿನಲ್ಲಿ ಗೌರವಾರ್ಹವಾಗಿ ಬಳಸಲಾಗಿದೆ. ಅಷ್ಟೇ ಅಲ್ಲ, ಯೇಸು ಭೂಮಿಯಲ್ಲಿದ್ದಾಗ ಆರೋನನ ಯಾಜಕತ್ವ ಇನ್ನೂ ಚಾಲ್ತಿಯಲ್ಲಿದೆ ಅನ್ನೋದನ್ನ ಅರ್ಥಮಾಡ್ಕೊಂಡಿದ್ದನು ಮತ್ತು ಅದ್ರಲ್ಲಿದ್ದ ನಿಯಮವನ್ನು ಪಾಲಿಸ್ತಿದ್ದನು.—ಕೀರ್ತ 115:10, 12; 118:3; 133:1, 2; 135:19; ಮತ್ತಾ 5:17-19; 8:4.
it-1-E ಪುಟ 343 ಪ್ಯಾರ 5
ಕುರುಡುತನ
ಲಂಚ ತಗೊಂಡು ಸರಿಯಾದ ನ್ಯಾಯ ಒದಗಿಸದೆ ಇರೋದನ್ನ ಕುರುಡುತನಕ್ಕೆ ಹೋಲಿಸಲಾಗಿದೆ. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ನ್ಯಾಯಾಧಿಪತಿಗಳು ಲಂಚ ತಗೊಳ್ಳಬಾರದಿತ್ತು, ಯಾರಾದ್ರೂ ಉಡುಗೊರೆ ಕೊಟ್ಟರೆ ತಗೊಳ್ಳಬಾರದಿತ್ತು ಮತ್ತು ಯಾರಿಗೂ ಬೇಧಭಾವ ಮಾಡಬಾರದಿತ್ತು. ಯಾಕಂದ್ರೆ ಇಂಥ ವಿಷ್ಯಗಳು ಅವ್ರನ್ನ ಕುರುಡರನ್ನಾಗಿ ಮಾಡ್ತಿತ್ತು ಮತ್ತು ಸರಿಯಾದ ನ್ಯಾಯ ಒದಗಿಸೋಕೆ ಕಷ್ಟವಾಗ್ತಿತ್ತು. ಅದಕ್ಕೆ ಧರ್ಮಶಾಸ್ತ್ರದಲ್ಲಿ “ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ,” “ಲಂಚವು ಬುದ್ಧಿವಂತರನ್ನೂ ಕುರುಡನಂತೆ ಮಾಡುತ್ತದೆ” ಅಂತ ತಿಳಿಸಿಲಾಗಿದೆ. (ವಿಮೋ 23:8; ಧರ್ಮೋ 16:19) ಒಬ್ಬ ನ್ಯಾಯಾಧೀಶ ಎಷ್ಟೇ ಪ್ರಾಮಾಣಿಕನಾಗಿದ್ರೂ ತಿಳುವಳಿಕೆ ಇದ್ದವನಾಗಿದ್ರೂ ಒಂದ್ವೇಳೆ ಅವ್ನು ಉಡುಗೊರೆ ತಗೊಂಡಲ್ಲಿ ಅವ್ನಿಗೆ ಗೊತ್ತಿದ್ದೋ ಗೊತ್ತಿಲ್ಲದೆನೋ ಆ ಉಡುಗೊರೆ ಕೊಟ್ಟವನ ಪಕ್ಷವಹಿಸೋ ಸಾಧ್ಯತೆ ಇತ್ತು. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯ ಬಗ್ಗೆ ಇರೋ ಭಾವನೆಗಳ ಮೇಲಾಧರಿಸಿನೂ ತೀರ್ಪು ಕೊಡಬಾರದಿತ್ತು. “ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು” ಅಂತ ಧರ್ಮಶಾಸ್ತ್ರ ತಿಳಿಸಿತ್ತು. (ಯಾಜ 19:15) ಹಾಗಾಗಿ ಬಡವನ ಮುಖ ನೋಡಿ ಪಾಪ ಅನಿಸಿನೋ ಅಥ್ವಾ ಜನ್ರ ಮೆಚ್ಚಿಗೆ ಗಳಿಸಲಿಕ್ಕಾಗಿನೋ ಒಬ್ಬ ನ್ಯಾಯಾಧೀಶ ಶ್ರೀಮಂತನ ವಿರುದ್ಧ ಅನ್ಯಾಯವಾಗಿ ತೀರ್ಪು ಕೊಡಬಾರದಿತ್ತು.—ವಿಮೋ 23:2, 3.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು16.10 ಪುಟ 9 ಪ್ಯಾರ 4
ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ
4 ಯೆಹೋವನು ಇಸ್ರಾಯೇಲ್ಯರಿಗೆ ಅನ್ಯಜನರನ್ನು ಗೌರವಿಸಿ ಎಂದಷ್ಟೇ ಹೇಳದೆ, ಒಂದು ಕಾಲದಲ್ಲಿ ತಾವೂ ಪರದೇಶಿಯರಾಗಿದ್ದೇವು ಎನ್ನುವುದನ್ನು ನೆನಪಿಸಿಕೊಳ್ಳುವಂತೆ ಹೇಳಿದನು. (ವಿಮೋಚನಕಾಂಡ 23:9 ಓದಿ.) ಇಸ್ರಾಯೇಲ್ಯರು ಐಗುಪ್ತದಲ್ಲಿ ದಾಸತ್ವಕ್ಕೆ ಒಳಗಾಗುವ ಮುಂಚೆಯೇ, ಐಗುಪ್ತ್ಯರು ಅವರನ್ನು ದ್ವೇಷಿಸುತ್ತಿದ್ದರು. ಏಕೆಂದರೆ ಇಸ್ರಾಯೇಲ್ಯರು ಅವರಿಗಿಂತ ಬಹಳಷ್ಟು ಭಿನ್ನರಾಗಿದ್ದರು. (ಆದಿ. 43:32; 46:34; ವಿಮೋ. 1:11-14) ಇಸ್ರಾಯೇಲ್ಯರು ಪರದೇಶಿಯರಾಗಿದ್ದಾಗ ಅವರ ಜೀವನ ಮುಳ್ಳಿನ ಹಾದಿಯಾಗಿತ್ತು. ಅದನ್ನು ಅವರು ಮರೆಯದೆ, ತಮ್ಮ ಮಧ್ಯೆಯಿದ್ದ ಅನ್ಯಜನರಿಗೆ ದಯೆ ತೋರಿಸಬೇಕೆಂದು ಯೆಹೋವನು ಬಯಸಿದನು.—ಯಾಜ. 19:33, 34.
it-2-E ಪುಟ 393
ಮೀಕಾಯೇಲ
1. ಬೈಬಲಿನಲ್ಲಿ ಗಬ್ರಿಯೇಲ ದೇವದೂತನ ಹೆಸ್ರನ್ನ ಬಿಟ್ರೆ ಇನ್ನೊಬ್ಬ ದೇವದೂತನ ಹೆಸರು ಮಾತ್ರ ಇದೆ. ಅವ್ನೇ ಮೀಕಾಯೇಲ. ಅವ್ನನ್ನು “ಪ್ರಧಾನ ದೇವದೂತ” ಅಂತನೂ ಕರೆಯಲಾಗಿದೆ. (ಯೂದ 9) ಮೀಕಾಯೇಲನ ಹೆಸ್ರು ಮೊದ್ಲು ಉಲ್ಲೇಖವಾಗಿರೋದು ದಾನಿಯೇಲ ಪುಸ್ತಕದ 10 ನೇ ಅಧ್ಯಾಯದಲ್ಲಿ. ಅಲ್ಲಿ ಅವ್ನನ್ನ “ಪ್ರಧಾನ ದಿವ್ಯ ಪಾಲಕರಲ್ಲೊಬ್ಬ” ಅಂತ ವರ್ಣಿಸಲಾಗಿದೆ. “ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ” ಹೋರಾಡುತ್ತಿದ್ದ ದೇವದೂತನಿಗೆ ಸಹಾಯ ಮಾಡಲಿಕ್ಕಾಗಿ ಮೀಕಾಯೇಲನು ಮುಂದೆ ಬರೋದ್ರ ಬಗ್ಗೆ ಅಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, “[ದಾನಿಯೇಲನ ಜನರ] ಪಾಲಕನಾದ ಮೀಕಾಯೇಲ” ಮತ್ತು “[ದಾನಿಯೇಲನ] ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕನಾದ ಮೀಕಾಯೇಲ” ಅಂತನೂ ವರ್ಣಿಸಲಾಗಿದೆ. (ದಾನಿ 10:13, 20, 21; 12:1) ಇದ್ರಿಂದ, ಇಸ್ರಾಯೇಲ್ಯರು ಮರಳುಗಾಡಿನಲ್ಲಿ ಇದ್ದಾಗ ಅವ್ರನ್ನು ಮುನ್ನಡೆಸಿದ್ದ ದೇವದೂತನು ಮೀಕಾಯೇಲನೇ ಆಗಿದ್ದಾನೆ ಅಂತ ಗೊತ್ತಾಗುತ್ತೆ. (ವಿಮೋ 23:20, 21, 23; 32:34; 33:2) ಇದನ್ನು ಇನ್ನೂ ಸ್ಪಷ್ಟೀಕರಿಸುವ ಆಧಾರ ಯೂದ 9 ರಲ್ಲಿದೆ. ಅಲ್ಲಿ ‘ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಪಿಶಾಚನೊಂದಿಗೆ ಭಿನ್ನಾಭಿಪ್ರಾಯದ ಕಾರಣ ವಾಗ್ವಾದ ಮಾಡಿದನು’ ಅಂತಿದೆ.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ವಾಚಕರಿಂದ ಪ್ರಶ್ನೆಗಳು
ಸರ್ಕಾರಿ ನೌಕರರಿಗೆ ಉಡುಗೊರೆ ಅಥವಾ ಹಣ (ಟಿಪ್ಸ್) ಕೊಡುವುದು ಸರಿಯಾ ತಪ್ಪಾ ಎಂದು ನಿರ್ಧರಿಸಲು ಕ್ರೈಸ್ತರಿಗೆ ಯಾವುದು ಸಹಾಯಮಾಡುತ್ತದೆ?
▪ ಈ ಪ್ರಶ್ನೆಗೆ ಉತ್ತರ ತಿಳಿಯಲು ಹಲವಾರು ವಿಷಯಗಳನ್ನು ಮನಸ್ಸಿನಲ್ಲಿಡಬೇಕು. ಮೊದಲಾಗಿ ಕ್ರೈಸ್ತರು ಪ್ರಾಮಾಣಿಕರಾಗಿರಬೇಕು. ದೇಶದ ನಿಯಮಗಳಿಗೆ ವಿಧೇಯರಾಗುವ ಕರ್ತವ್ಯ ಅವರಿಗಿದೆ. ಆದರೆ ಅವು ಯೆಹೋವನ ನಿಯಮಗಳಿಗೆ ವಿರುದ್ಧವಾಗಿರದಿದ್ದಾಗ ಮಾತ್ರ. (ಮತ್ತಾ. 22:21; ರೋಮ. 13:1, 2; ಇಬ್ರಿ. 13:18) ಅಲ್ಲದೆ ಸ್ಥಳೀಯ ಪದ್ಧತಿಗಳನ್ನು, ಜನರ ಸೂಕ್ಷ್ಮ ಭಾವನೆಗಳನ್ನು ಗೌರವಿಸುವ ಮತ್ತು ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸುವ ಹಂಗು ಸಹ ಅವರಿಗಿದೆ. (ಮತ್ತಾ. 22:39; ರೋಮ. 12:17, 18; 1 ಥೆಸ. 4:11, 12) ಈ ಎಲ್ಲ ಬೈಬಲ್ ತತ್ವಗಳನ್ನು ಅನ್ವಯಿಸುವಾಗ ಸರ್ಕಾರಿ ನೌಕರರ ಸೇವೆಗಾಗಿ ಹಣ, ಉಡುಗೊರೆ ಕೊಡುವ ವಿಷಯದಲ್ಲಿ ಬೇರೆಬೇರೆ ದೇಶಗಳಲ್ಲಿರುವ ಕ್ರೈಸ್ತರ ನೋಟ ಬೇರೆಬೇರೆ ಆಗಿರಬಹುದು.
ಅನೇಕ ದೇಶಗಳಲ್ಲಿ ಸಮಾಜದ ವ್ಯಕ್ತಿಯೊಬ್ಬನಿಗೆ ಕೆಲವು ಸೇವಾಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ಅವುಗಳನ್ನು ಪಡೆಯುವಾಗ ಅವನು ಸರ್ಕಾರಿ ನೌಕರರಿಗೆ ಏನೂ ಕೊಡಬೇಕಾಗಿಲ್ಲ. ಏಕೆಂದರೆ ಅವರ ಕೆಲಸಕ್ಕೆ ಸರ್ಕಾರವೇ ಸಂಬಳ ಕೊಡುತ್ತದೆ. ಸಂಬಳಕ್ಕಿಂತ ಹೆಚ್ಚೇನನ್ನೂ ಅವರು ಕೇಳುವಂತಿಲ್ಲ, ಅಪೇಕ್ಷಿಸುವಂತೆಯೂ ಇಲ್ಲ. ಇನ್ನೂ ಕೆಲವು ದೇಶಗಳಲ್ಲಿ, ಸರ್ಕಾರಿ ನೌಕರರು ನಾಗರಿಕರಿಗಾಗಿ ನ್ಯಾಯಬದ್ಧ ರೀತಿಯಲ್ಲಿ ಕೆಲಸ ಮಾಡಿಕೊಟ್ಟರೂ ಅದಕ್ಕಾಗಿ ನಾಗರಿಕರಿಂದ ಏನನ್ನೊ ಕೇಳುವುದು ಅಥವಾ ಪಡೆಯುವುದು ಕಾನೂನುಬಾಹಿರ ಅಂದರೆ ಲಂಚವೆಂದು ಪರಿಗಣಿಸಲಾಗುತ್ತದೆ. ನಾಗರಿಕರು ಕಾನೂನುಬಾಹಿರವಲ್ಲದ ಕೆಲಸವನ್ನು ಮಾಡಿಕೊಡುವಂತೆ ಕೇಳಿಕೊಳ್ಳುವಾಗ ಅದಕ್ಕಾಗಿ ಒಳ್ಳೇ ಮನಸ್ಸಿನಿಂದ ಉಡುಗೊರೆ ಕೊಡುವುದನ್ನು ಸಹ ಲಂಚವೆಂದು ಎಣಿಸಲಾಗುತ್ತದೆ. ಈ ಸನ್ನಿವೇಶಗಳಲ್ಲಿ ಕ್ರೈಸ್ತನೊಬ್ಬನು ಉಡುಗೊರೆಯನ್ನು ಅಥವಾ ಹಣವನ್ನು ಕೊಡಬೇಕಾ ಬೇಡವಾ ಎಂಬ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಅದು ಖಂಡಿತವಾಗಿ ತಪ್ಪು.
ಆದರೆ ಈ ವಿಷಯಗಳ ಬಗ್ಗೆ ಕೆಲವು ದೇಶಗಳಲ್ಲಿ ನಿಯಮಗಳಿಲ್ಲ ಅಥವಾ ನಿಯಮಗಳಿದ್ದರೂ ಕಟ್ಟುನಿಟ್ಟಾಗಿ ಜಾರಿಯಲ್ಲಿ ಇರುವುದಿಲ್ಲ. ಆದ್ದರಿಂದ ಸರ್ಕಾರಿ ನೌಕರರಿಗೆ ಹಣ ಅಥವಾ ಉಡುಗೊರೆ ತಕ್ಕೊಳ್ಳುವುದು ತಪ್ಪೆಂದು ಅನಿಸುವುದಿಲ್ಲ. ಕೆಲವು ದೇಶಗಳಲ್ಲಿ, ಸರ್ಕಾರಿ ಅಧಿಕಾರಿಗಳು ಜನಸೇವೆ ಮಾಡುವ ಬದಲು ಅವರಿಂದಲೇ ಹಣ ಕಿತ್ತುಕೊಳ್ಳುತ್ತಾರೆ ಅಥವಾ ಅಧಿಕಾರವನ್ನು ದುರುಪಯೋಗಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಅವರ ಕೈಬಿಸಿ ಮಾಡದಿದ್ದರೆ ಜನರ ಕೆಲಸವನ್ನು ಮಾಡಿಕೊಡುವುದಿಲ್ಲ. ಉದಾಹರಣೆಗೆ ಮದುವೆ ರಿಜಿಸ್ಟರ್ ಮಾಡುವ, ಆದಾಯ ತೆರಿಗೆ ಪಡೆಯುವ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವ ಅಧಿಕಾರಿಗಳು ಟಿಪ್ಸ್ ಕೊಡುವಂತೆ ಒತ್ತಾಯಿಸುತ್ತಾರೆ. ಅವರಿಗೆ ಹಣ ಸಿಗುವುದಿಲ್ಲ ಎಂದು ಗೊತ್ತಾದರೆ ಬೇಕುಬೇಕೆಂದು ಕೆಲಸ ಮುಂದೂಡಿ ತೊಂದರೆ ಕೊಡುತ್ತಾರೆ. ಹೀಗೆ ನಾಗರಿಕರು ತಮ್ಮ ನ್ಯಾಯಬದ್ಧ ಸೌಲಭ್ಯ ಪಡೆಯುವುದನ್ನು ಕಷ್ಟವಾಗಿ ಮಾಡುತ್ತಾರೆ. ಒಂದು ವರದಿ ಹೇಳುವ ಪ್ರಕಾರ ಒಂದು ದೇಶದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ಹೊತ್ತಿರುವ ಸ್ಥಳಕ್ಕೆ ಬಂದರೂ ತಮಗೆ ಮೊದಲು ದೊಡ್ಡ ಟಿಪ್ಸ್ ಸಿಗದಿದ್ದರೆ ಬೆಂಕಿಯನ್ನು ಆರಿಸಲು ಆರಂಭಿಸುವುದೇ ಇಲ್ಲ.
ಮೇಲೆ ತಿಳಿಸಿರುವ ಪರಿಸ್ಥಿತಿಗಳು ವ್ಯಾಪಕವಾಗಿರುವ ಸ್ಥಳಗಳಲ್ಲಿ ಟಿಪ್ಸ್ ಕೊಡದೇ ಇರುವುದು ಅಸಾಧ್ಯವೆಂದು ಕೆಲವರಿಗೆ ಅನಿಸಿಬಿಟ್ಟಿದೆ. ಇಂಥ ಪರಿಸ್ಥಿತಿಗಳಲ್ಲಿ, ಕ್ರೈಸ್ತನೊಬ್ಬನು ಟಿಪ್ಸ್ ಕೊಡುವುದನ್ನು ಒಂದು ನ್ಯಾಯಬದ್ಧ ಸೇವೆಯ ಪೂರೈಕೆಗಾಗಿ ಕೊಡುವ ಅಧಿಕ ಶುಲ್ಕವಾಗಿ ಪರಿಗಣಿಸಬಹುದು. ಆದರೆ ಭ್ರಷ್ಟತೆಯು ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ಕ್ರೈಸ್ತನೊಬ್ಬನು ದೇವರ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಲಕ್ಷಿಸಬಾರದು. ನ್ಯಾಯವಾಗಿ ಸಿಗಬೇಕಾದ ವಿಷಯವನ್ನು ಪಡೆಯಲು ಟಿಪ್ಸ್ ಕೊಡುವುದಕ್ಕೂ ಅನ್ಯಾಯವಾದ ಕೆಲಸವನ್ನು ಮಾಡಿಸಿಕೊಳ್ಳಲು ಟಿಪ್ಸ್ ಕೊಡುವುದಕ್ಕೂ ತುಂಬ ವ್ಯತ್ಯಾಸವಿದೆ. ಕೆಲವರು ತಮಗೆ ಹಕ್ಕಿಲ್ಲದ ಸೌಲಭ್ಯ ಪಡೆಯಲು ಅಧಿಕಾರಿಗಳಿಗೆ ಹಣಕೊಡುತ್ತಾರೆ ಅಥವಾ ನ್ಯಾಯಬದ್ಧ ದಂಡದಿಂದ ತಪ್ಪಿಸಿಕೊಳ್ಳಲು ಒಬ್ಬ ಪೊಲೀಸ್ಗೆ, ಸರ್ಕಾರಿ ಇನ್ಸ್ಪೆಕ್ಟರ್ಗೆ ಹಣ ನೀಡುತ್ತಾರೆ. ಈ ರೀತಿಯ ಉಡುಗೊರೆ ಕೊಟ್ಟು ಬೇರೆಯವರನ್ನು ಭ್ರಷ್ಟರನ್ನಾಗಿ ಮಾಡುವುದಾಗಲಿ ಅಂಥ ಉಡುಗೊರೆ ಸ್ವೀಕರಿಸಿ ನಾವೇ ಭ್ರಷ್ಟರಾಗುವುದಾಗಲಿ ತಪ್ಪು. ಎರಡೂ ಕ್ರಿಯೆಗಳು ನ್ಯಾಯವನ್ನು ತಿರುಚುತ್ತವೆ.—ವಿಮೋ. 23:8; ಧರ್ಮೋ. 16:19; ಜ್ಞಾನೋ. 17:23.
ಅಧಿಕಾರಿಗಳು ಹಣ-ಟಿಪ್ಸ್ ಕೇಳುವಾಗ ಹೆಚ್ಚಿನ ಪ್ರೌಢ ಕ್ರೈಸ್ತರು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯಿಂದಾಗಿ ಅದನ್ನು ಕೊಡುವುದು ತಪ್ಪೆಂದು ಎಣಿಸುತ್ತಾರೆ. ಏಕೆಂದರೆ ಹಾಗೆ ಟಿಪ್ಸ್ ಕೊಡುವುದು ಭ್ರಷ್ಟಾಚಾರಕ್ಕೆ ಬೆಂಬಲಕೊಟ್ಟಂತೆ ಆಗುತ್ತದೆ, ಅದು ತಪ್ಪಲ್ಲ ಎಂದು ಹೇಳಿದಂತೆ ಆಗುತ್ತದೆ ಎಂದು ಅವರು ನೆನಸುತ್ತಾರೆ. ಹಾಗಾಗಿ ಯಾವುದೇ ರೀತಿಯ ಉಡುಗೊರೆ ಕೇಳಿದರೂ ಅವರು ಕೊಡುವುದಿಲ್ಲ.
ಕಾನೂನುಬಾಹಿರವಾದ ಸೌಲಭ್ಯ ಪಡೆದುಕೊಳ್ಳಲು ಉಡುಗೊರೆ ಕೊಡುವುದು ಲಂಚಕ್ಕೆ ಸಮ ಆಗಿರಸಾಧ್ಯ ಎಂದು ಪ್ರೌಢ ಕ್ರೈಸ್ತರು ಅರಿತಿದ್ದಾರೆ. ಆದರೆ ಸ್ಥಳೀಯ ಸನ್ನಿವೇಶ ಮತ್ತು ಜನರ ಮನೋಭಾವದಿಂದಾಗಿ ಕೆಲವು ಕ್ರೈಸ್ತರು ನ್ಯಾಯಬದ್ಧ ಸೇವಾಸೌಲಭ್ಯ ಪಡೆಯಲು ಅಥವಾ ಕೆಲಸ ವಿಳಂಬವಾಗುವುದನ್ನು ತಡೆಯಲು ಸಣ್ಣ ಉಡುಗೊರೆ ಅಥವಾ ಸ್ವಲ್ಪ ಹಣ ಕೊಡಬಹುದು. ಕೆಲವು ಕ್ರೈಸ್ತರು ಏನು ಮಾಡುತ್ತಾರೆಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದ ನಂತರ ತಮಗೆ ದೊರೆತ ಚಿಕಿತ್ಸೆಗೆ ಕೃತಜ್ಞತೆಯಿಂದ ಡಾಕ್ಟರರಿಗೆ, ನರ್ಸ್ಗಳಿಗೆ ಉಡುಗೊರೆಯನ್ನು ಕೊಡುತ್ತಾರೆ. ಇದನ್ನು ಚಿಕಿತ್ಸೆಯ ಮುಂಚೆ ಕೊಡುವುದಕ್ಕಿಂತ ಚಿಕಿತ್ಸೆಯ ನಂತರ ಕೊಡುವುದು ಒಳ್ಳೇದೆಂದು ಅವರು ನೆನಸುತ್ತಾರೆ. ಇದು, ಆ ಉಡುಗೊರೆಯು ಲಂಚವಾಗಿ ಅಥವಾ ಹೆಚ್ಚು ಉತ್ತಮ ಸೇವೆ ಪಡೆಯಲಿಕ್ಕಾಗಿ ನೀಡಲಾಗಿತ್ತು ಎಂಬ ಭಾವನೆ ಮೂಡಿಸುವುದಿಲ್ಲ.
ಪ್ರತಿಯೊಂದು ದೇಶದಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶವನ್ನು ಇಲ್ಲಿ ಚರ್ಚಿಸುವುದು ಅಸಾಧ್ಯ. ಸ್ಥಳೀಯ ಪರಿಸ್ಥಿತಿ ಏನೇ ಆಗಿರಲಿ ಈ ವಿಷಯದಲ್ಲಿ ಕ್ರೈಸ್ತರು ತಕ್ಕೊಳ್ಳುವ ನಿರ್ಣಯ ನಂತರ ಅವರ ಮನಸ್ಸಾಕ್ಷಿಯನ್ನು ಚುಚ್ಚಬಾರದು. (ರೋಮ. 14:1-6) ನ್ಯಾಯಕ್ಕೆ ವಿರುದ್ಧವಾದ ಕೆಲಸಗಳನ್ನು ಅವರು ನಿರಾಕರಿಸಬೇಕು. (ರೋಮ. 13:1-7) ಯೆಹೋವನ ಹೆಸರಿಗೆ ಕಳಂಕ ತರಬಹುದಾದ ಅಥವಾ ಇತರರನ್ನು ಎಡವಿಸಬಹುದಾದ ಯಾವುದೇ ವಿಷಯವನ್ನು ಅವರು ಮಾಡಬಾರದು. (ಮತ್ತಾ. 6:9; 1 ಕೊರಿಂ. 10:32) ಕೊನೆಯದಾಗಿ, ಅವರ ನಿರ್ಣಯವು ನೆರೆಯವರನ್ನು ಅವರು ಪ್ರೀತಿಸುತ್ತಾರೆಂದು ತೋರಿಸಬೇಕು.—ಮಾರ್ಕ 12:31.
ಸೆಪ್ಟೆಂಬರ್ 14-20
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 25-26
“ಮಂಜೂಷ – ದೇವದರ್ಶನ ಗುಡಾರದ ಪ್ರಾಮುಖ್ಯ ಪೆಟ್ಟಿಗೆ”
it-1-E ಪುಟ 165
ಒಡಂಬಡಿಕೆಯ ಮಂಜೂಷ
ಮಾದರಿ ಮತ್ತು ವಿನ್ಯಾಸ. ಯೆಹೋವನು ಮೋಶೆಗೆ ಗುಡಾರ ಕಟ್ಟಲು ನಿರ್ದೇಶನ ಕೊಡುವಾಗ ಮೊದ್ಲಿಗೆ ಒಡಂಬಡಿಕೆಯ ಮಂಜೂಷದ ಮಾದರಿ ಮತ್ತು ವಿನ್ಯಾಸ ಹೇಗಿರಬೇಕು ಅಂತ ತಿಳಿಸಿದನು. ಯಾಕಂದ್ರೆ ಮಂಜೂಷವು, ದೇವದರ್ಶನ ಗುಡಾರದ ಮತ್ತು ಇಸ್ರಾಯೇಲ್ಯರ ಇಡೀ ಪಾಳೆಯದ (ಕ್ಯಾಂಪ್) ಮುಖ್ಯ ಭಾಗವಾಗಿತ್ತು. ಮಂಜೂಷದ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರವಿತ್ತು. (ಅಂದ್ರೆ ಸುಮಾರು 3.5 ಅಡಿ ಉದ್ದ, 2.2 ಅಡಿ ಅಗಲ, 2.2 ಅಡಿ ಎತ್ತರ). ಒಡಂಬಡಿಕೆಯ ಮಂಜೂಷವನ್ನು ಅಕೇಶಿಯ ಮರದಿಂದ ಅಥ್ವಾ ಜಾಲೀ ಮರದಿಂದ ಮಾಡಬೇಕಿತ್ತು. ಅದ್ರ ಒಳಗೆ ಮತ್ತು ಹೊರಗೆ ಚೊಕ್ಕ ಬಂಗಾರದ ತಗಡಿನ ಹೊದಿಕೆ ಹಾಕಬೇಕಿತ್ತು. ಆ ಪೆಟ್ಟಿಗೆಯ ಎಲ್ಲಾ ಅಂಚಿನಲ್ಲೂ ಚಿನ್ನದ ಗೋಟು ಅಥ್ವಾ ಚಿನ್ನದ ಕಲಾಕೃತಿ ರಚಿಸಬೇಕಿತ್ತು. ಒಡಂಬಡಿಕೆಯ ಮಂಜೂಷದ ಮುಚ್ಚಳವನ್ನು ಚಿನ್ನದ ಹೊದಿಕೆಯಿರೋ ಮರದಿಂದಲ್ಲ ಬದ್ಲಿಗೆ ಪೂರ್ತಿ ಬಂಗಾರದಿಂದ ಮಾಡಿಸಬೇಕಿತ್ತು. ಅದ್ರ ಉದ್ದ ಅಗಲ ಒಡಂಬಡಿಕೆಯ ಮಂಜೂಷದ ಪೆಟ್ಟಿಗೆಯಷ್ಟೇ ಇರಬೇಕಿತ್ತು. ಆ ಮುಚ್ಚಳದ ಎರಡು ಕೊನೆಗಳಲ್ಲಿ ಬಂಗಾರದ ಎರಡು ಕೆರೂಬಿಗಳ ಆಕಾರವನ್ನು ಮಾಡಿಸಬೇಕಿತ್ತು. ಆ ಕೆರೂಬಿಗಳು ಎದುರುಬದುರಾಗಿ ತಮ್ಮ ತಲೆ ತಗ್ಗಿಸಿ ಮುಚ್ಚಳವನ್ನು ನೋಡುತ್ತಿರುವಂತೆ ಮತ್ತು ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಮುಚ್ಚಳವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇರಬೇಕಿತ್ತು. (ವಿಮೋ 25:10, 11, 17-22; 37:6-9) ಈ ಮುಚ್ಚಳವನ್ನು “ಕೃಪಾಸನ” ಅಥ್ವಾ “ಪಾಪನಿವಾರಣಾರ್ಥಕ ಮುಚ್ಚಳ” ಅಂತನೂ ಕರೆಯಲಾಗಿದೆ.—ವಿಮೋ 25:17; ಇಬ್ರಿ 9:5.
it-1-E ಪುಟ 166 ಪ್ಯಾರ 2
ಒಡಂಬಡಿಕೆಯ ಮಂಜೂಷ
ಒಡಂಬಡಿಕೆಯ ಮಂಜೂಷದಲ್ಲಿ ದೇವರು ಕೊಟ್ಟ ಸಲಹೆ ಸೂಚನೆಗಳು ಅಥ್ವಾ ದಶಾಜ್ಞೆಗಳಿರೋ ಎರಡು ಹಲಗೆಗಳು ಇದ್ದವು. (ವಿಮೋ 25:16) ಅದ್ರ ಜೊತೆಗೆ “ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆ ಮತ್ತು ಆರೋನನ ಚಿಗುರಿದ ಕೋಲು” ಸಹ ಇದ್ದವು. ಆದ್ರೆ ಸೊಲೊಮೋನ ದೇವಾಲಯ ಕಟ್ಟುವ ಮುಂಚೆ ಯಾವುದೋ ಒಂದು ಸಮಯದಲ್ಲಿ ಅವುಗಳನ್ನು ಅಲ್ಲಿಂದ ತೆಗೆಯಲಾಗಿತ್ತು. (ಇಬ್ರಿ 9:4; ವಿಮೋ 16:32-34; ಅರ 17:10; 1ಅರ 8:9; 2ಪೂರ್ವ 5:10) ಮೋಶೆ ತೀರಿಹೋಗುವ ಸ್ವಲ್ಪ ಸಮಯದ ಮುಂಚೆ “ಈ ಧರ್ಮಶಾಸ್ತ್ರವನ್ನು ಗ್ರಂಥರೂಪವಾಗಿ” ಬರೆದು ಅದನ್ನು ಲೇವಿಯರಿಗೆ ಕೊಟ್ಟು ಮಂಜೂಷದ ಒಳಗೆ ಇಡಿ ಅಂತ ಹೇಳಲಿಲ್ಲ. ಬದ್ಲಿಗೆ “ನಿಮ್ಮ ದೇವರಾದ ಯೆಹೋವನ ಆಜ್ಞಾಶಾಸನಗಳ ಮಂಜೂಷದ ಬಳಿಯಲ್ಲಿ ಇಡಿರಿ. . . . ಇದು ನಿಮಗೆ ವಿರೋಧವಾಗಿ ಸಾಕ್ಷಿಕೊಡುವದಾಗಿರಲಿ” ಅಂತ ಹೇಳಿದನು.—ಧರ್ಮೋ 31:24-26.
it-1-E ಪುಟ 166 ಪ್ಯಾರ 3
ಒಡಂಬಡಿಕೆಯ ಮಂಜೂಷ
ದೇವರ ಸಾನಿಧ್ಯ. ಒಡಂಬಡಿಕೆಯ ಮಂಜೂಷ ಎಲ್ಲಿವರೆಗೆ ಅಸ್ತಿತ್ವದಲ್ಲಿತ್ತೋ ಅಲ್ಲಿವರೆಗೆ ಅದರಲ್ಲಿ ದೇವರ ಸಾನಿಧ್ಯವಿತ್ತು. ಸ್ವತಃ ಯೆಹೋವನೇ, ‘ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು; ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತಾಡುವೆನು’ ಮತ್ತು ‘ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವೆನು’ ಅಂತ ಹೇಳಿದನು. (ವಿಮೋ 25:22; ಯಾಜ 16:2) ಯೆಹೋವನು ಕೆರೂಬಿಗಳ ಮಧ್ಯದಲ್ಲಿ ಆಸೀನನಾಗಿದ್ದಾನೆ ಅಂತ ಸಮುವೇಲ ಬರೆದನು. (1ಸಮು 4:4) ಇದ್ರಿಂದ ಕೆರೂಬಿಗಳು ಯೆಹೋವನ ರಥವನ್ನ ಸೂಚಿಸ್ತಿದ್ವು ಅಂತ ಗೊತ್ತಾಗುತ್ತೆ. (1ಪೂರ್ವ 28:18, 19) ಹಾಗಾಗಿಯೇ “ಮೋಶೆ ಯೆಹೋವನ ಸಂಗಡ ಮಾತಾಡಬೇಕೆಂದು ದೇವದರ್ಶನದ ಗುಡಾರದ ಒಳಗೆ ಹೋದಾಗ ಆಜ್ಞಾಶಾಸನಗಳ ಮಂಜೂಷದ ಮೇಲಣ ಕೃಪಾಸನದ ಮೇಲಿಂದ ಆ ಎರಡು ಕೆರೂಬಿಗಳ ನಡುವೆಯಿಂದ ತನ್ನ ಸಂಗಡ ಮಾತಾಡುವ ಯೆಹೋವನ ಸ್ವರವು ಅವನಿಗೆ ಕೇಳಿಸಿತು. ಹೀಗೆ ಆತನು ಅವನ ಸಂಗಡ ಮಾತಾಡಿದನು.” (ಅರ 7:89) ಯೆಹೋಶುವ ಮತ್ತು ಮಹಾ ಯಾಜಕನಾದ ಫೀನೆಹಾಸ ಕೂಡ ಒಡಂಬಡಿಕೆಯ ಮಂಜೂಷದ ಮುಂದೆ ಯೆಹೋವನನ್ನ ವಿಚಾರಿಸಿದ್ರು. (ಯೆಹೋ 7:6-10; ನ್ಯಾಯ 20:27, 28) ಆದ್ರೆ ಮಹಾ ಯಾಜಕನು ಮಾತ್ರ ಅತೀ ಪವಿತ್ರ ಸ್ಥಾನಕ್ಕೆ ಹೋಗಿ ಮಂಜೂಷವನ್ನು ನೋಡಬಹುದಿತ್ತು, ಅದೂ ಕೂಡ ವರ್ಷಕ್ಕೆ ಒಂದೇ ಬಾರಿ. ಅವ್ನು ಅಲ್ಲಿಗೆ ಯೆಹೋವನ ಜೊತೆ ಮಾತಾಡ್ಲಿಕ್ಕಲ್ಲ ಬದ್ಲಿಗೆ ದೋಷ ಪರಿಹಾರಕ ದಿನದಂದು ಕೊಡುತ್ತಿದ್ದ ಯಜ್ಞವನ್ನು ಅರ್ಪಿಸಲಿಕ್ಕಾಗಿ ಹೋಗ್ತಿದ್ದನು.—ಯಾಜ 16:2, 3, 13, 15, 17; ಇಬ್ರಿ 9:7.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1-E ಪುಟ 432 ಪ್ಯಾರ 1
ಕೆರೂಬಿ
ಇಸ್ರಾಯೇಲ್ಯರು ಮರಳುಗಾಡಿನಲ್ಲಿದ್ದಾಗ ಮಾಡಿದಂಥ ದೇವದರ್ಶನದ ಗುಡಾರದಲ್ಲಿ ಕೆರೂಬಿಯರನ್ನು ಪ್ರತಿನಿಧಿಸುತ್ತಿದ್ದ ಆಕಾರಗಳಿದ್ದವು. ಬಂಗಾರದಿಂದ ಮಾಡಿದ್ದ ಆ ಕೆರೂಬಿಗಳನ್ನು ಮಂಜೂಷದ ಮೇಲಿನ ಮುಚ್ಚಳದ ಎರಡು ತುದಿಗಳಲ್ಲಿ ಇಡಲಾಗಿತ್ತು. ಅವುಗಳನ್ನ ಎದುರುಬದುರಾಗಿ ಇಡಲಾಗಿತ್ತು ಮತ್ತು ಅವುಗಳ ತಲೆ ಬಾಗಿತ್ತು. ಇದು ಪೂಜ್ಯ ಭಾವವನ್ನು ಸೂಚಿಸ್ತಿತ್ತು. ಅವುಗಳಿಗೆ ಎರಡೆರಡು ರೆಕ್ಕೆಗಳಿದ್ದವು. ಅವು ಮೇಲಕ್ಕೆ ಚಾಚಿ ಮಂಜೂಷವನ್ನು ಮುಚ್ಚಿದ್ದವು. ಇದು ಕಾವಲನ್ನು ಮತ್ತು ಸಂರಕ್ಷಣೆಯನ್ನು ಸೂಚಿಸುತ್ತಿತ್ತು. (ವಿಮೋ 25:10-21; 37:7-9) ಗುಡಾರ ಮಾಡಲು ಬಳಸಿದ ಬಟ್ಟೆಗಳಲ್ಲೂ ಕೆರೂಬಿಗಳ ಚಿತ್ರಗಳನ್ನು ಕಸೂತಿ ಮಾಡಲಾಗಿತ್ತು. ಅಷ್ಟೇ ಅಲ್ಲ, ಪವಿತ್ರ ಸ್ಥಾನ ಮತ್ತು ಅತೀ ಪವಿತ್ರ ಸ್ಥಾನದ ಮಧ್ಯೆ ಇದ್ದ ತೆರೆಯ ಮೇಲೂ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಲಾಗಿತ್ತು.—ವಿಮೋ 26:1, 31; 36:8, 35.
it-2-E ಪುಟ 936
ನೈವೇದ್ಯವಾದ ರೊಟ್ಟಿ
ದೇವದರ್ಶನ ಗುಡಾರದ ಮತ್ತು ಸೊಲೊಮೋನ ಕಟ್ಟಿದ ದೇವಾಲಯದ ಪವಿತ್ರ ಸ್ಥಾನದಲ್ಲಿ ಒಂದು ಮೇಜನ್ನು ಇಡಲಾಗಿತ್ತು. ಅದ್ರ ಮೇಲೆ ಇಡುತ್ತಿದ್ದ ಹನ್ನೆರಡು ರೊಟ್ಟಿಗಳೇ ನೈವೇದ್ಯವಾದ ರೊಟ್ಟಿಗಳಾಗಿದ್ವು. ಪ್ರತಿ ಸಬ್ಬತ್ ದಿನದಲ್ಲಿ ಹಳೆ ರೊಟ್ಟಿಗಳನ್ನು ತೆಗೆದು ತಾಜಾ ರೊಟ್ಟಿಗಳನ್ನು ಇಡಲಾಗ್ತಿತ್ತು. (ವಿಮೋ 35:13; 39:36; 1ಅರ 7:48; 2ಪೂರ್ವ 13:11; ನೆಹೆ 10:32, 33) ನೈವೇದ್ಯವಾದ ರೊಟ್ಟಿಗಿರುವ ಹೀಬ್ರು ಪದದ ಮೂಲಾರ್ಥ ‘ಸಮ್ಮುಖದ ರೊಟ್ಟಿ’ ಅಂತಾಗಿದೆ. ಸಮ್ಮುಖ ಅನ್ನೋ ಪದ ಸನ್ನಿಧಿಯನ್ನ ಸೂಚಿಸುತ್ತೆ. (2ಅರ 13:23) ಹಾಗಾಗಿ ಯೆಹೋವನ ‘ಸಮ್ಮುಖದಲ್ಲಿಡುತ್ತಿದ್ದ’ ರೊಟ್ಟಿಗಳು ಆತನಿಗೆ ಯಾವಾಗ್ಲೂ ನೈವೇದ್ಯವಾಗಿ ಅರ್ಪಿಸಿದಂತೆ ಇರ್ತಿತ್ತು.—ವಿಮೋ 25:30.
ಸೆಪ್ಟೆಂಬರ್ 21-27
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 27-28
“ಯಾಜಕರ ವಿಶೇಷ ಬಟ್ಟೆಯಿಂದ ನಾವು ಕಲಿಯೋ ಪಾಠ”
it-2-E ಪುಟ 1143
ಊರೀಮ್ ಮತ್ತು ತುಮ್ಮೀಮ್
ಕೆಲವು ಬೈಬಲ್ ವಿಮರ್ಶಕರು ಊರೀಮ್ ಮತ್ತು ತುಮ್ಮೀಮನ್ನು ಚೀಟುಗಳು ಅಂತ ನೆನಸ್ತಿದ್ರು. ಜೇಮ್ಸ್ ಮಫೆಟ್ಸ್ ಭಾಷಾಂತರದ ವಿಮೋಚನಕಾಂಡ 28:30 ರಲ್ಲಿ ಊರೀಮ್ ಮತ್ತು ತುಮ್ಮೀಮನ್ನು “ಪವಿತ್ರ ಚೀಟುಗಳು” ಅಂತ ತಿಳಿಸಲಾಗಿದೆ. ಕೆಲವ್ರ ಪ್ರಕಾರ ಊರೀಮ್ ಮತ್ತು ತುಮ್ಮೀಮ್ ಮೂರು ಚೀಟುಗಳಾಗಿದ್ದವು. ಒಂದ್ರಲ್ಲಿ “ಹೌದು” ಅಂತ, ಇನ್ನೊಂದ್ರಲ್ಲಿ “ಇಲ್ಲ” ಅಂತ ಬರೆಯಲಾಗಿತ್ತು. ಮೂರನೇ ಚೀಟಿಯಲ್ಲಿ ಏನೂ ಬರೆಯದೆ ಹಾಗೆ ಖಾಲಿ ಬಿಡಲಾಗಿತ್ತು. ಒಂದು ಸಮಸ್ಯೆಗೆ ಉತ್ತರ ಕಂಡು ಹಿಡಿಯಲು ಇವುಗಳನ್ನ ಬಳಸ್ತಿದ್ರು. “ಹೌದು” ಅಥ್ವಾ “ಇಲ್ಲ” ಅನ್ನುವ ಚೀಟಿ ಬಿದ್ದಲ್ಲಿ ಅದನ್ನೇ ಉತ್ರವಾಗಿ ಪರಿಗಣಿಸಲಾಗ್ತಿತ್ತು. ಒಂದು ವೇಳೆ ಮೂರನೇದು ಅಂದ್ರೆ ಖಾಲಿ ಇರೋದು ಬಿದ್ರೆ ಅದಕ್ಕೆ ಏನೂ ಉತ್ರ ಇಲ್ಲ ಅಂತಾಗಿತ್ತು. ಇನ್ನು ಕೆಲವ್ರು ಊರೀಮ್ ಮತ್ತು ತುಮ್ಮೀಮ್ ಎರಡು ಚಪ್ಪಟೆಯಾಗಿರೋ ಕಲ್ಲುಗಳು ಇರಬೇಕು ಅಂತ ನೆನಸ್ತಾರೆ. ಅದ್ರ ಒಂದು ಕಡೆ ಬಿಳಿ ಮತ್ತೊಂದು ಕಡೆ ಕಪ್ಪು ಇರ್ತಿತ್ತು. ಆ ಎರಡು ಕಲ್ಲುಗಳನ್ನು ಕೆಳಗೆ ಹಾಕಿದಾಗ ಎರಡರ ಮೇಲ್ಭಾಗವೂ ಬಿಳಿ ಕಾಣಿಸಿದ್ರೆ ಉತ್ತರ “ಹೌದು” ಅಂತ, ಕಪ್ಪು ಭಾಗ ಕಾಣಿಸಿದ್ರೆ ಉತ್ರ “ಇಲ್ಲ” ಅಂತಾಗಿತ್ತು. ಒಂದು ಬಿಳಿ ಮತ್ತೊಂದು ಕಪ್ಪು ಬಿದ್ರೆ ಅದರರ್ಥ ಯಾವ ಉತ್ತರನೂ ಇಲ್ಲ ಅಂತಾಗಿತ್ತು. ಒಂದ್ಸಲ ರಾಜ ಸೌಲ, ಫಿಲಿಷ್ಟಿಯರ ಮೇಲೆ ದಾಳಿ ಮಾಡೋದಾ ಬೇಡವಾ ಅಂತ ಯಾಜಕನ ಮೂಲಕ ವಿಚಾರಿಸ್ತಾನೆ. ಆದ್ರೆ ಅವ್ನಿಗೆ ಯಾವುದೇ ಉತ್ರ ಸಿಗ್ಲಿಲ್ಲ. ಇದಕ್ಕೆ ಕಾರಣ ಇಸ್ರಾಯೇಲ್ಯರಲ್ಲಿ ಯಾರೋ ಒಬ್ರು ತಪ್ಪು ಮಾಡಿದ್ದೇ ಆಗಿತ್ತು. ಅದಕ್ಕೆ ಸೌಲನು ಯೆಹೋವನಿಗೆ ‘ಇಸ್ರಾಯೇಲ್ ದೇವರೇ, ತುಮ್ಮೀಮನ್ನು ಕೊಡು’ ಅಂದನು. ಆ ವಿಚಾರಣೆಯಾದ ಮೇಲೆ ಜನರಲ್ಲ, ಸೌಲ ಮತ್ತು ಯೋನಾತಾನರಲ್ಲಿ ಒಬ್ರು ಅಪರಾಧಿ ಅನ್ನೋದು ಗೊತ್ತಾಯ್ತು. ಆಮೇಲೆ ಅವ್ರಿಬ್ರ ಮಧ್ಯೆ ಚೀಟು ಹಾಕಲಾಯ್ತು. ಈ ಘಟನೆಯಲ್ಲಿ ಸೌಲ ‘ತುಮ್ಮೀಮನ್ನು ಕೊಡು’ ಅಂತ ವಿಚಾರಿಸಿದ್ದಕ್ಕೂ ಮತ್ತು ನಂತ್ರ ಚೀಟು ಹಾಕಿದ್ದಕ್ಕೂ ವ್ಯತ್ಯಾಸ ಇದೆ ಅಂತ ಅನಿಸೋದಾದ್ರೂ ಇವೆರಡರ ಮಧ್ಯೆ ಸಂಬಂಧ ಇದೆ ಅಂತ ಕಾಣುತ್ತೆ.—1ಸಮು 14:36-42.
it-1-E ಪುಟ 849 ಪ್ಯಾರ 3
ಹಣೆ
ಇಸ್ರಾಯೇಲ್ಯರ ಮಹಾ ಯಾಜಕ. ಇಸ್ರಾಯೇಲಿನ ಮಹಾ ಯಾಜಕನ ಮುಂಡಾಸಿನ ಮುಂಭಾಗ ಅಂದ್ರೆ ಅವ್ನ ಹಣೆಯ ಮೇಲೆ “ಚೊಕ್ಕ ಬಂಗಾರದ ಪಟ್ಟವನ್ನು” ಅಥ್ವಾ “ಪರಿಶುದ್ಧ ಕಿರೀಟವಾಗಿರುವ ಪಟ್ಟವನ್ನು” ಕಟ್ಟಬೇಕಿತ್ತು. ಅದ್ರ ಮೇಲೆ ‘ಪವಿತ್ರವಾದದ್ದು ಯೆಹೋವನಿಗೆ ಮೀಸಲು’ ಅನ್ನೋ ಲಿಪಿಯನ್ನು ಕೆತ್ತಿಸಬೇಕಿತ್ತು. (ವಿಮೋ 28:36-38; 39:30) ಮಹಾ ಯಾಜಕನು ಯೆಹೋವನ ಆರಾಧನೆಯ ಮುಖ್ಯ ಪ್ರತಿನಿಧಿ ಆಗಿದ್ದರಿಂದ ಅವ್ನು ಪರಿಶುದ್ಧವಾಗಿರೋದು ತುಂಬ ಪ್ರಾಮುಖ್ಯವಾಗಿತ್ತು. ಅವ್ನ ಹಣೆಯ ಪಟ್ಟದ ಮೇಲಿದ್ದ ಈ ಲಿಪಿ ಎಲ್ಲಾ ಇಸ್ರಾಯೇಲ್ಯರಿಗೆ ಯೆಹೋವನ ಸೇವೆ ಮಾಡಬೇಕಂದ್ರೆ ತಾವು ಪರಿಶುದ್ಧರಾಗಿರಬೇಕು ಅನ್ನೋದನ್ನು ಯಾವಾಗ್ಲೂ ನೆನಪಿಸ್ತಿತ್ತು. ಈ ಲಿಪಿಯು ಉನ್ನತ ಮಹಾ ಯಾಜಕನಾದ ಯೇಸು ಕ್ರಿಸ್ತನನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಯೆಹೋವನ ಪವಿತ್ರತೆಯನ್ನ ಎತ್ತಿಹಿಡಿಯುವ ಯಾಜಕ ಸೇವೆಯನ್ನು ಮಾಡಲು ಯೇಸು ಆಯ್ಕೆಯಾದದ್ದನ್ನು ಸೂಚಿಸುತ್ತದೆ.—ಇಬ್ರಿ 7:26.
ಕಾವಲಿನಬುರುಜು08 8/15 ಪುಟ 15 ಪ್ಯಾರ 17
ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ
17 ಯೆಹೋವನಿಗೆ ಆರಾಧನೆ ಸಲ್ಲಿಸುವಾಗ ನಾವು ಘನತೆಯಿಂದ ನಡೆದುಕೊಳ್ಳಲು ವಿಶೇಷ ಗಮನಕೊಡಬೇಕು. “ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು” ಎನ್ನುತ್ತದೆ ಪ್ರಸಂಗಿ 5:1 (NIBV). ಪವಿತ್ರ ಸ್ಥಳದಲ್ಲಿರುವಾಗ ಕಾಲಿನ ಕೆರಗಳನ್ನು ತೆಗೆದಿಡುವಂತೆ ಯೆಹೋವನು ಮೋಶೆ ಯೆಹೋಶುವರಿಗೆ ಆಜ್ಞಾಪಿಸಿದ್ದನು. (ವಿಮೋ. 3:5; ಯೆಹೋ. 5:15) ತಮ್ಮ ಗೌರವ ಮತ್ತು ಭಕ್ತಿಭಾವದ ಸಂಕೇತವಾಗಿ ಅವರು ಹೀಗೆ ಮಾಡಬೇಕಾಗಿತ್ತು. “ರಹಸ್ಯಾಂಗವು ಕಾಣಿಸದಂತೆ” ಇಸ್ರಾಯೇಲಿನ ಯಾಜಕರು ನಾರಿನ ಚಡ್ಡಿಗಳನ್ನು ತೊಡಲೇಬೇಕಿತ್ತು. (ವಿಮೋ. 28:42, 43) ಇದು, ಅವರು ಯಜ್ಞವೇದಿಯ ಬಳಿ ಕೆಲಸಮಾಡುವಾಗ ಅಸಭ್ಯ ರೀತಿಯಲ್ಲಿ ಮೈಕಾಣದಂತೆ ತಡೆಯುತ್ತಿತ್ತು. ಯಾಜಕನ ಕುಟುಂಬದ ಪ್ರತಿ ಸದಸ್ಯನು ಘನತೆಯ ದೈವಿಕ ಮಟ್ಟವನ್ನು ಕಾಪಾಡಿಕೊಳ್ಳಬೇಕಿತ್ತು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು12-E 8/1 ಪುಟ 26 ಪ್ಯಾರ 1-3
ನಿಮಗೆ ಗೊತ್ತಿತ್ತಾ?
ಮಹಾ ಯಾಜಕನ ವಿಶೇಷ ಬಟ್ಟೆಯ ಎದೆಕವಚದಲ್ಲಿದ್ದ ರತ್ನಗಳು ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿದ್ವು?
ಇಸ್ರಾಯೇಲ್ಯರು ಈಜಿಪ್ಟಿನಿಂದ ಹೊರಬಂದು ಮರಳುಗಾಡಿನಲ್ಲಿದ್ದಾಗ ಮಹಾಯಾಜಕನ ಎದೆಕವಚವನ್ನು ಮಾಡಬೇಕೆಂದು ದೇವರು ಆಜ್ಞೆ ಕೊಟ್ಟನು. (ವಿಮೋಚನಕಾಂಡ 28:15-21) ಈ ಎದೆಕವಚದಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕ, ಕೆಂಪರಲು, ನೀಲ, ಪಚ್ಚೆ, ಸುವರ್ಣ ರತ್ನ, ಗೋಮೇಧಕ, ಧೂಮ್ರ ಮಣಿ, ಪೀತ ರತ್ನ, ಬೆರುಲ್ಲ, ವೈಡೂರ್ಯದಂಥ ರತ್ನಗಳು ಇದ್ದವು. ಈ ಎಲ್ಲಾ ಅಮೂಲ್ಯ ಮುತ್ತು ರತ್ನಗಳು ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿದ್ವು?
ಬೈಬಲ್ ಕಾಲಗಳಲ್ಲಿ ಜನರಿಗೆ ರತ್ನಗಳು ತುಂಬ ಅಮೂಲ್ಯವಾಗಿದ್ವು. ಅದ್ರ ಮಾರಾಟ ಅಥ್ವಾ ಖರೀದಿ ಮಾಡ್ತಿದ್ರು. ಉದಾಹರಣೆಗೆ ಈಜಿಪ್ಟಿನವ್ರು ಈಗಿನ ಇರಾನ್, ಅಫ್ಘಾನಿಸ್ತಾನ ಮತ್ತು ಬಹುಶಃ ಭಾರತದಿಂದಲೂ ರತ್ನಗಳನ್ನ ಖರೀದಿಸ್ತಿದ್ರು. ಈಜಿಪ್ಟಿನ ಗಣಿಪ್ರದೇಶಗಳಿಂದಲೂ ಅನೇಕ ಮುತ್ತು ರತ್ನಗಳನ್ನು ತೆಗೆಯಲಾಗ್ತಿತ್ತು. ಈ ಗಣಿಗಾರಿಕೆಯ ಪ್ರದೇಶಗಳು ಈಜಿಪ್ಟಿನ ಸರ್ವಾಧಿಕಾರಿಯ ಆಳ್ವಿಕೆ ಕೆಳಗೆ ಬರುತ್ತಿದ್ವು. ಪೂರ್ವಜನಾದ ಯೋಬನು ಸಹ ತನ್ನ ಸಮಕಾಲೀನರ ಬಗ್ಗೆ ತಿಳಿಸುತ್ತಾ ಅವ್ರು ಅಮೂಲ್ಯ ನಿಧಿಗಳಿಗಾಗಿ ಸುರಂಗಗಳನ್ನು ತೋಡುತ್ತಿದ್ದಾರೆ ಅಂತ ವರ್ಣಿಸಿದನು. ಅವ್ರು ತೆಗೆದ ವಸ್ತುಗಳಲ್ಲಿ ಇಂದ್ರನೀಲ ಮಣಿಗಳು ಇದ್ವು ಅನ್ನೋದನ್ನು ಯೋಬನು ತಿಳಿಸಿದ್ದಾನೆ.—ಯೋಬ 28:1-11, 19.
ಇಸ್ರಾಯೇಲ್ಯರು ಈಜಿಪ್ಟಿನಿಂದ ಹೊರಬಂದಾಗ ಅವ್ರು “ಐಗುಪ್ತ್ಯರ ಸೊತ್ತನ್ನು ಸುಲುಕೊಂಡರು” ಅಂದ್ರೆ ಅವ್ರಲ್ಲಿರೋ ಅಮೂಲ್ಯ ವಸ್ತುಗಳನ್ನು ತಗೊಂಡು ಬಂದ್ರು ಅಂತ ಬೈಬಲ್ ತಿಳಿಸುತ್ತೆ. (ವಿಮೋಚನಕಾಂಡ 12:35, 36) ಹಾಗಾಗಿ ಮಹಾ ಯಾಜಕನ ಎದೆಕವಚಕ್ಕಾಗಿ ಬಳಸಲಾದ ರತ್ನಗಳು ಇಸ್ರಾಯೇಲ್ಯರು ಈಜಿಪ್ಟಿನಿಂದ ತಗೊಂಡು ಬಂದ ರತ್ನಗಳಾಗಿವೆ ಅಂತ ಹೇಳಬಹುದು.
it-1-E ಪುಟ 1130 ಪ್ಯಾರ 2
ಪವಿತ್ರತೆ
ಪ್ರಾಣಿಗಳು ಮತ್ತು ಬೆಳೆ. ಆಕಳುಗಳ ಮತ್ತು ಆಡುಕುರಿಗಳ ಚೊಚ್ಚಲು ಗಂಡು ಮರಿಗಳು ಯೆಹೋವನಿಗೆ ಪವಿತ್ರವಾಗಿದ್ದವು ಮತ್ತು ಆ ಪವಿತ್ರತೆಯಿಂದ ಇಸ್ರಾಯೇಲ್ಯರು ಅವುಗಳನ್ನು ಬಿಡಿಸಬಾರದಿತ್ತು. ಅವುಗಳನ್ನು ಯೆಹೋವನಿಗೆ ಯಜ್ಞವಾಗಿ ಕೊಡಬೇಕಿತ್ತು ಮತ್ತು ಅವುಗಳ ಸ್ವಲ್ಪ ಭಾಗವನ್ನು ಯಾಜಕರಿಗೆ ಕೊಡ್ಬೇಕಿತ್ತು. (ಅರ 18:17-19) ಪ್ರಥಮಫಲ ಮತ್ತು ದಶಮಾಂಶವು ಪವಿತ್ರವಾಗಿದ್ದವು. ಅವುಗಳನ್ನು ಯಜ್ಞವಾಗಿ ಮತ್ತು ಕಾಣಿಕೆಯಾಗಿ ಅರ್ಪಿಸಬೇಕಿತ್ತು. ಯಾಕಂದ್ರೆ ಅವು ಗುಡಾರದ ಸೇವೆಗೆ ಮೀಸಲಾಗಿದ್ದ ವಸ್ತುಗಳಾಗಿದ್ದವು. (ವಿಮೋ 28:38) ಯೆಹೋವನಿಗೆ ಪವಿತ್ರವಾಗಿದ್ದ ಎಲ್ಲಾ ವಸ್ತುಗಳನ್ನ ಆತನ ಸೇವೆಗೆ ಬಳಸಬೇಕಿತ್ತೇ ಹೊರತು ಬೇರೆ ಯಾವುದಕ್ಕೂ ಬಳಸಬಾರದಿತ್ತು. ಉದಾಹರಣೆಗೆ, ದಶಮಾಂಶದ ಬಗ್ಗೆ ಇದ್ದ ನಿಯಮವನ್ನು ನೋಡಿ. ಒಬ್ಬ ವ್ಯಕ್ತಿ ಒಂದು ವಸ್ತುವನ್ನ ದಶಮಾಂಶಕ್ಕಂತ ಎತ್ತಿಟ್ಟಿದ್ದಾನೆ ಅಂದ್ಕೊಳ್ಳಿ. ಉದಾಹರಣೆಗೆ ಗೋದಿ ಬೆಳೆ. ನಂತ್ರ ಅವನೋ ಅಥ್ವಾ ಅವ್ನ ಮನೆಲಿರೋವ್ರೋ ಆ ಗೋದಿಯಲ್ಲಿ ಸ್ವಲ್ಪ ಭಾಗವನ್ನ ಗೊತ್ತಿಲ್ಲದೇ ಅಡಿಗೆಗಾಗಿ ತಗೊಂಡ್ರೆ ಏನಾಗ್ತಿತ್ತು? ಆ ವ್ಯಕ್ತಿ ದೇವರಿಗೆ ಸೇರಿದ ವಸ್ತುಗಳ ಮೇಲೆ ಇದ್ದ ನಿಯಮವನ್ನ ಮುರಿದಂತಾಗುತ್ತಿತ್ತು. ಅವ್ನು ದಂಡದ ರೂಪದಲ್ಲಿ ಆ ಪೂರ್ತಿ ದಶಮಾಂಶದ ಬೆಲೆ ಜೊತೆಗೆ ಇನ್ನೂ ಇಪ್ಪತ್ತು ಶೇಕಡದಷ್ಟು ಹಣವನ್ನು ಕಟ್ಟಬೇಕಾಗಿತ್ತು. ಅದ್ರ ಜೊತೆಗೆ ಪೂರ್ಣಾಂಗವಾದ ಟಗರು ಅಂದ್ರೆ ಯಾವುದೇ ದೋಷವಿಲ್ಲದ ಟಗರನ್ನು ಯಜ್ಞವಾಗಿ ಅರ್ಪಿಸಬೇಕಿತ್ತು. ಹೀಗೆ ಮಾಡೋದು ಯೆಹೋವನಿಗೆ ಸೇರಿದ ಪವಿತ್ರ ವಸ್ತುಗಳನ್ನು ಗೌರವಿಸಬೇಕು ಅನ್ನೋದನ್ನು ತೋರಿಸಿಕೊಡ್ತಿತ್ತು.—ಯಾಜ 5:14-16.
ಸೆಪ್ಟೆಂಬರ್ 28–ಅಕ್ಟೋಬರ್ 4
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 29-30
“ಯೆಹೋವನಿಗೆ ಕಾಣಿಕೆ”
it-2-E ಪುಟ 764-765
ನೋಂದಣಿ
ಸೀನಾಯಿ ಹತ್ರ. ಯೆಹೋವನ ಆಜ್ಞೆಯಂತೆ ಇಸ್ರಾಯೇಲ್ಯರ ಮೊದಲ ನೋಂದಣಿ ನಡೆದದ್ದು ಸೀನಾಯಿ ಹತ್ರ ಅವ್ರು ಕ್ಯಾಂಪ್ ಮಾಡಿಕೊಂಡಾಗ. ಅಷ್ಟರಲ್ಲಿ ಅವ್ರು ಈಜಿಪ್ಟಿನಿಂದ ಬಂದು ಎರಡು ವರ್ಷ ಎರಡು ತಿಂಗಳಾಗಿತ್ತು. ಈ ನೋಂದಣಿ ಕೆಲ್ಸದಲ್ಲಿ ಮೋಶೆಗೆ ಸಹಾಯ ಮಾಡ್ಲಿಕ್ಕಾಗಿ ಪ್ರತಿಯೊಂದು ಕುಲದಿಂದ ಒಬ್ಬ ಮುಖ್ಯಸ್ಥನನ್ನು ಆರಿಸಲಾಗಿತ್ತು. ಅವ್ರು ತಮ್ಮ ಕುಲದಲ್ಲಿರುವವ್ರ ನೋಂದಣಿ ಮಾಡುವ ಪೂರ್ಣ ಜವಾಬ್ದಾರಿ ವಹಿಸ್ಬೇಕಿತ್ತು. 20 ಅಥ್ವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷರ ನೋಂದಣಿ ಮಾಡ್ಬೇಕಿತ್ತು. ಮಿಲಿಟರಿಯಲ್ಲಿ ಸೇರಿಸಲಿಕ್ಕಾಗಿ ಈ ನೋಂದಣಿ ಮಾಡಲಾಯ್ತು. ಲೆಕ್ಕಿಸಲ್ಪಟ್ಟ ಪ್ರತಿ ಪುರುಷನು ಗುಡಾರದ ಸೇವೆಗಾಗಿ ಅರ್ಧ ಶೆಕೆಲ್ ಅಂದ್ರೆ ಹತ್ತಿರತ್ತಿರ 83 ರೂ. ಅನ್ನು ಕಾಣಿಕೆಯಾಗಿ ಕೊಡ್ಬೇಕಿತ್ತು. (ವಿಮೋ 30:11-16; ಅರ 1:1-16, 18, 19) ಹೀಗೆ ನೋಂದಣಿಯಾದವ್ರ ಒಟ್ಟು ಸಂಖ್ಯೆ 6,03,550. ಇದ್ರಲ್ಲಿ ಲೇವಿ ಕುಲದವ್ರು ಸೇರಿರಲಿಲ್ಲ. ಯಾಕಂದ್ರೆ ಅವ್ರಿಗೆ ಪಿತ್ರಾರ್ಜಿತ ಆಸ್ತಿ ಇರಲಿಲ್ಲ ಮತ್ತು ಅವ್ರು ಗುಡಾರದ ಸೇವೆಗಾಗಿ ತೆರಿಗೆಯನ್ನು ಕೊಡಬೇಕಾಗಿರಲಿಲ್ಲ. ಮಿಲಿಟರಿಯಲ್ಲೂ ಸೇರಬೇಕಾಗಿರಲಿಲ್ಲ.—ಅರ 1:44-47; 2:32, 33; 18:20, 24.
it-1-E ಪುಟ 502
ಕಾಣಿಕೆ
ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲ್ಯರು ಕೆಲವೊಂದು ಕಾಣಿಕೆ ಕೊಡಬೇಕಿತ್ತು. ಮೋಶೆಯು ಇಸ್ರಾಯೇಲ್ಯರ ನೋಂದಣಿ ಮಾಡ್ದಾಗ 20 ವರ್ಷ ಅಥ್ವಾ ಅದಕ್ಕಿಂತ ಮೇಲ್ಪಟ್ಟ ಪುರುಷರೆಲ್ಲರೂ ತಮ್ಮ ಪ್ರಾಣ ರಕ್ಷಣೆಗಾಗಿ ದೇವದರ್ಶನದ ಗುಡಾರಕ್ಕೆ ಅರ್ಧ ಶೆಕೆಲ್ ಅನ್ನು (ಹತ್ತಿರತ್ತಿರ 83 ರೂ.) ಕಪ್ಪವಾಗಿ ಕೊಡ್ಬೇಕಿತ್ತು. ಇದು ಅವ್ರು ಯೆಹೋವನಿಗೆ ಕೊಡುತ್ತಿದ್ದ ಕಾಣಿಕೆಯಾಗಿತ್ತು. (ವಿಮೋ 30:11-16) ಯೆಹೂದಿ ಇತಿಹಾಸಕಾರನಾದ ಜೋಸೀಫಸ್ ಪ್ರಕಾರ ಈ ಕಾಣಿಕೆಯೇ ಮುಂದೆ ಪ್ರತಿವರ್ಷ ಕಟ್ಟುತ್ತಿದ್ದ ದೇವಾಲಯದ ತೆರಿಗೆಯಾಗಿತ್ತು.—2ಪೂರ್ವ 24:6-10; ಮತ್ತಾ 17:24.
ಕಾವಲಿನಬುರುಜು11-E 11/1 ಪುಟ 12 ಪ್ಯಾರ 1-2
ನಿಮಗೆ ಗೊತ್ತಿತ್ತಾ?
ಯೆರೂಸಲೇಮಿನಲ್ಲಿದ್ದ ದೇವಾಲಯದ ಸೇವೆಗಳಿಗೆ ಬೇಕಾದ ಹಣ ಎಲ್ಲಿಂದ ಸಿಗ್ತಿತ್ತು?
ದೇವಾಲಯದಲ್ಲಿ ನಡೆಯುತ್ತಿದ್ದ ಅನೇಕ ಸೇವೆಗಳಿಗೆ ತೆರಿಗೆ ರೂಪದಲ್ಲಿ ಕಟ್ಟುತ್ತಿದ್ದ ಹಣವನ್ನ ಬಳಸಲಾಗ್ತಿತ್ತು. ಮುಖ್ಯವಾಗಿ ದಶಮಾಂಶವಾಗಿ ಕೊಡುತ್ತಿದ್ದ ಹಣವನ್ನ ಬಳಸಲಾಗ್ತಿತ್ತು. ಬೇರೆ ರೀತಿಯ ತೆರಿಗೆಯ ಹಣವನ್ನು ಕೂಡ ಸೇವೆಗಾಗಿ ಬಳಸಲಾಗ್ತಿತ್ತು. ಉದಾಹರಣೆಗೆ, ದೇವದರ್ಶನದ ಗುಡಾರದ ನಿರ್ಮಾಣ ಮಾಡುವಾಗ ಯೆಹೋವನು ಮೋಶೆಯ ಹತ್ರ ಹೆಸರು ನೋಂದಣಿಯಾಗಿರುವ ಪ್ರತಿ ಇಸ್ರಾಯೇಲ್ಯನು ತನಗೆ ಕಾಣಿಕೆಯಾಗಿ ಅರ್ಧ ಶೆಕೆಲ್ ಅನ್ನು ಕೊಡಬೇಕೆಂದು ನಿರ್ದೇಶನ ಕೊಟ್ಟಿದ್ದನು.—ವಿಮೋಚನಕಾಂಡ 30:12-16.
ಬಹುಶಃ ನಂತ್ರನೂ ಇದೇ ಸಂಪ್ರದಾಯ ಮಂದುವರೆದಿರಬಹುದು. ಎಲ್ಲಾ ಯೆಹೂದಿಗಳು ಪ್ರತಿ ವರ್ಷ ಈ ಮೊತ್ತವನ್ನು ದೇವಾಲಯದ ತೆರಿಗೆಯಾಗಿ ಕಟ್ಟಬೇಕಿತ್ತು. ಯೇಸು ಪೇತ್ರನಿಗೆ ಮೀನಿನ ಬಾಯಿಂದ ನಾಣ್ಯವನ್ನು ತಗೊಂಡು ಬಾ ಅಂತ ಹೇಳಿದ್ದು ಕೂಡ ಈ ತೆರಿಗೆಯನ್ನು ಕಟ್ಟೋದಕ್ಕೇ ಆಗಿರಬೇಕು.—ಮತ್ತಾಯ 17:24-27.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1-E ಪುಟ 1029 ಪ್ಯಾರ 4
ಕೈ
ಕೈ ಇಡುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥ್ವಾ ವಸ್ತು ಮೇಲೆ ಕೈ ಇಡೋದು ಬೇರೆಬೇರೆ ಅರ್ಥವನ್ನ ಸೂಚಿಸ್ತಿತ್ತು. ಒಬ್ಬನನ್ನ ಒಂದು ಕೆಲ್ಸಕ್ಕೆ ನೇಮಿಸುವಾಗ, ಒಂದು ವಿಶೇಷ ಜವಾಬ್ದಾರಿಯನ್ನು ಒಪ್ಪಿಸುವಾಗ, ಒಬ್ಬ ವ್ಯಕ್ತಿಯನ್ನು ಗುರುತಿಸಲಿಕ್ಕಾಗಿ ಅಥವಾ ಒಂದು ವಿಶೇಷ ಸೇವೆಗೆ ಅರ್ಹನಾಗಿದ್ದಾನೆ ಅಂತ ಸೂಚಿಸಲು ಅವ್ನ ಮೇಲೆ ಕೈ ಇಡಲಾಗ್ತಿತ್ತು. ಕೆಲವೊಮ್ಮೆ ಪ್ರಾಣಿಗಳನ್ನು ಬಲಿಕೊಡ್ಲಿಕ್ಕಾಗಿ ಅವುಗಳ ಮೇಲೆ ಕೈ ಇಡಲಾಗ್ತಿತ್ತು. ಉದಾಹರಣೆಗೆ, ಆರೋನ ಮತ್ತು ಅವ್ನ ಮಕ್ಕಳನ್ನು ಯಾಜಕರಾಗಿ ಅಭಿಷೇಕಿಸುವಾಗ ಅವ್ರು ತಮ್ಮ ಕೈಗಳನ್ನ ಹೋರಿ ಮತ್ತು ಎರಡು ಟಗರುಗಳ ತಲೆ ಮೇಲೆ ಇಟ್ರು. ಇದು ಆ ಪ್ರಾಣಿಗಳನ್ನು ಬಲಿ ಕೊಡಲಾಗ್ತಿದೆ ಅನ್ನೋದಕ್ಕೆ ಸೂಚನೆಯಾಗಿತ್ತು. ಈ ಬಲಿ ಕೊಟ್ಟ ಮೇಲೆನೇ ಅವ್ರು ಯಾಜಕರಾಗಿ ಸೇವೆ ಮಾಡಲು ಸಾಧ್ಯವಾಯ್ತು. (ವಿಮೋ 29:10, 15, 19; ಯಾಜ 8:14, 18, 22) ಇಸ್ರಾಯೇಲ್ಯರ ನಾಯಕನಾಗಿ ಯೆಹೋಶುವನನ್ನು ಆರಿಸಿಕೊಳ್ಳುವಂತೆ ಯೆಹೋವನು ಮೋಶೆಗೆ ಹೇಳಿದಾಗಲೂ ಮೋಶೆ ಅವ್ನ ಮೇಲೆ ಕೈಯಿಟ್ಟನು. ಆಗ ಯೆಹೋಶುವನು “ಜ್ಞಾನವರ ಸಂಪನ್ನನಾದನು” ಮತ್ತು ಇಸ್ರಾಯೇಲ್ಯರ ನಾಯಕನಾಗಲು ಸಮರ್ಥನಾದನು. (ಧರ್ಮೋ 34:9) ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ಆಶೀರ್ವದಿಸಲು ಅವ್ನ ಮೇಲೆ ಕೈಯಿಡಲಾಗ್ತಿತ್ತು. (ಆದಿ 48:14; ಮಾರ್ಕ 10:16) ಯೇಸು ತಾನು ವಾಸಿಮಾಡಿದ ರೋಗಿಗಳ ಮೇಲೆ ಕೈ ಇಟ್ಟನು. (ಮತ್ತಾ 8:3; ಮಾರ್ಕ 6:5; ಲೂಕ 13:13) ಕೆಲ್ವು ಸಂದರ್ಭಗಳಲ್ಲಿ ಅಪೊಸ್ತಲರು ಸಹ ಬೇರೆಯವ್ರಿಗೆ ಪವಿತ್ರಾತ್ಮದ ವರವನ್ನ ಕೊಡ್ಲಿಕ್ಕಾಗಿ ಅವ್ರ ಮೇಲೆ ತಮ್ಮ ಕೈಗಳನ್ನಿಟ್ರು.—ಅಕಾ 8:14-20; 19:6.
it-1-E ಪುಟ 114 ಪ್ಯಾರ 1
ಅಭಿಷಿಕ್ತ, ಅಭಿಷೇಕಿಸುವುದು
ಯೆಹೋವನು ಮೋಶೆಗೆ ಧರ್ಮಶಾಸ್ತ್ರ ಕೊಟ್ಟಾಗ ಅಭಿಷೇಕ ತೈಲವನ್ನು ಯಾವ ವಸ್ತುಗಳಿಂದ ತಯಾರಿಸಬೇಕು ಅಂತ ನಿರ್ದೇಶನ ಕೊಟ್ಟಿದ್ದನು. ಅದ್ರಲ್ಲಿ ಅನೇಕ ಸುಗಂಧ ದ್ರವ್ಯಗಳು ಸೇರಿದ್ದವು. ಅವು ಯಾವುವೆಂದರೆ ಅಚ್ಚ ರಕ್ತಬೋಳ, ಲವಂಗಚಕ್ಕೆ, ಬಜೆ, ದಾಲ್ಚಿನ್ನಿ ಮತ್ತು ಒಲೀವ್ ಎಣ್ಣೆ. (ವಿಮೋ 30:22-25) ಅನುಮತಿ ಇಲ್ಲದವ್ರು ಈ ಮಿಶ್ರಣ ಉಪಯೋಗಿಸಿ ತೈಲವನ್ನ ಮಾಡಬಾರದಿತ್ತು ಮತ್ತು ಅದನ್ನು ಸಾಮಾನ್ಯ ಬಳಕೆಗಾಗಲಿ ಅಥ್ವಾ ಅರ್ಹನಲ್ಲದ ವ್ಯಕ್ತಿಯ ತಲೆ ಮೇಲೆ ಹಚ್ಚೋದಕ್ಕಾಗಲಿ ಉಪಯೋಗಿಸಬಾರದಿತ್ತು. ಒಂದು ವೇಳೆ ಹಾಗೆ ಮಾಡಿದ್ರೆ ಅದು ತುಂಬ ಗಂಭೀರವಾದ ತಪ್ಪಾಗ್ತಿತ್ತು. (ವಿಮೋ 30:31-33) ಒಬ್ಬ ವ್ಯಕ್ತಿಯನ್ನು ಒಂದು ವಿಶೇಷ ಕೆಲ್ಸಕ್ಕಾಗಿ ಯೆಹೋವನು ಆರಿಸಿಕೊಂಡಾಗ ಆ ವ್ಯಕ್ತಿಯ ತಲೆ ಮೇಲೆ ಈ ಪವಿತ್ರ ತೈಲವನ್ನು ಸುರಿಸಲಾಗ್ತಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಈ ತೈಲವನ್ನು ಹಗುರವಾಗಿ ಎಣಿಸಬಾರದಿತ್ತು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ರಾಜ್ಯ ಸೇವೆ 1/11 ಪುಟ 4 ಪ್ಯಾರ 5-7; ಪುಟ 6 ರ ಚೌಕ
5 ಕುಟುಂಬ ಇಡೀ ಸಂಜೆಯನ್ನು ಚರ್ಚೆಯಲ್ಲೇ ಕಳೆಯಬೇಕೋ? ದಂಪತಿಗಳು ಮತ್ತು ಮಕ್ಕಳಿರುವ ಕುಟುಂಬಗಳು ಬೈಬಲ್ ಆಧಾರಿತ ವಿಷಯಗಳನ್ನು ಒಟ್ಟಿಗೆ ಚರ್ಚಿಸುವಾಗ ಪರಸ್ಪರರಿಗೆ ಪ್ರೋತ್ಸಾಹ ಸಿಗುತ್ತದೆ ನಿಜ. (ರೋಮ. 1:12) ಅಲ್ಲದೆ ಕುಟುಂಬ ಸದಸ್ಯರು ಹೆಚ್ಚು ಆಪ್ತರೂ ಆಗುತ್ತಾರೆ. ಹೀಗಿರುವುದರಿಂದ, ಬೈಬಲ್ ಆಧರಿತ ಚರ್ಚೆಗಳು ಕುಟುಂಬ ಆರಾಧನೆಯ ಪ್ರಧಾನ ಭಾಗವಾಗಿರಬೇಕು. ಇದರ ಜೊತೆಗೆ ಪ್ರತಿಯೊಬ್ಬ ಕುಟುಂಬ ಸದಸ್ಯನು ವೈಯಕ್ತಿಕ ಅಧ್ಯಯನವನ್ನೂ ಮಾಡಬಹುದು. ಉದಾಹರಣೆಗೆ ಗುಂಪು ಚರ್ಚೆಯ ಬಳಿಕ, ಕುಟುಂಬದವರೆಲ್ಲರೂ ಒಟ್ಟಿಗೆ ಇದ್ದುಕೊಂಡೇ ತಮ್ಮತಮ್ಮ ಅಧ್ಯಯನ ಮುಂದುವರಿಸುತ್ತಾ ಕೂಟಗಳ ತಯಾರಿಯನ್ನು ಪೂರ್ಣಗೊಳಿಸಬಹುದು ಇಲ್ಲವೆ ಪತ್ರಿಕೆಗಳನ್ನು ಓದಬಹುದು. ಕೆಲವು ಕುಟುಂಬಗಳು ಆ ಇಡೀ ಸಾಯಂಕಾಲ ಟಿವಿ ಆನ್ ಮಾಡುವುದೇ ಇಲ್ಲ.
6 ಚರ್ಚೆಯನ್ನು ಹೇಗೆ ನಡೆಸಬಹುದು? ಅದಕ್ಕಾಗಿ ಯಾವಾಗಲೂ ಪ್ರಶ್ನೋತ್ತರ ವಿಧಾನವನ್ನೇ ಬಳಸಬೇಕಾಗಿಲ್ಲ. ಕುಟುಂಬ ಆರಾಧನೆಯ ಸಂಜೆಗೆ ಕಳೆತರಲು ಮತ್ತು ಸ್ವಾರಸ್ಯಕರವನ್ನಾಗಿ ಮಾಡಲು ಅನೇಕ ಕುಟುಂಬಗಳಲ್ಲಿ ನಮ್ಮ ವಾರ ಮಧ್ಯದ ಕೂಟದಂಥ ಕಾರ್ಯಕ್ರಮವಿದೆ. ಅಂದರೆ, ಅವರ ಚರ್ಚೆಯನ್ನು ಹಲವಾರು ಭಾಗಗಳಾಗಿ ವಿಭಾಗಿಸಿ ಅವುಗಳನ್ನು ಭಿನ್ನ ಭಿನ್ನ ವಿಧಗಳಲ್ಲಿ ನಿರ್ವಹಿಸುತ್ತಾರೆ. ಉದಾಹರಣೆಗೆ, ಅವರು ಜೊತೆಯಾಗಿ ಬೈಬಲ್ಓದುತ್ತಾರೆ, ಕೂಟಗಳ ಯಾವುದಾದರೊಂದು ಭಾಗಕ್ಕಾಗಿ ತಯಾರಿಸುತ್ತಾರೆ ಮತ್ತು ಶುಶ್ರೂಷೆಗಾಗಿ ಪ್ರ್ಯಾಕ್ಟಿಸ್ ಸೆಷನ್ಗಳನ್ನು ನಡೆಸುತ್ತಾರೆ. ಪುಟ 6 ರಲ್ಲಿ ಕೆಲವೊಂದು ಸಲಹೆಗಳಿವೆ.
7 ಯಾವ ರೀತಿಯ ಪರಿಸರವಿರುವಂತೆ ಹೆತ್ತವರು ನೋಡಿಕೊಳ್ಳಬೇಕು? ಪ್ರೀತಿಭರಿತವಾದ, ಹಾಯಾದ ಪರಿಸರವಿದ್ದಲ್ಲಿ ನಿಮ್ಮ ಕುಟುಂಬ ವಿಷಯಗಳನ್ನು ಚೆನ್ನಾಗಿ ಕಲಿಯುವುದು. ಹವಾಮಾನ ಒಳ್ಳೇದಿದ್ದರೆ ನೀವು ಕೆಲವೊಮ್ಮೆ ಮನೆಯ ಹೊರಗೂ ಅಧ್ಯಯನ ನಡೆಸಬಹುದು. ಅಗತ್ಯವಿದ್ದಾಗಲೆಲ್ಲ ಮಧ್ಯಮಧ್ಯ ತುಸು ವಿರಾಮವನ್ನೂ ತೆಗೆದುಕೊಳ್ಳಿ. ಕೆಲವು ಕುಟುಂಬಗಳಲ್ಲಿ ಚರ್ಚೆಯ ನಂತರ ಉಪಾಹಾರ ನೀಡಲಾಗುತ್ತದೆ. ಕುಟುಂಬ ಆರಾಧನೆಯಲ್ಲಿ ಹೆತ್ತವರು ಮಕ್ಕಳನ್ನು ಗದರಿಸುವುದಿಲ್ಲ ಇಲ್ಲವೆ ಶಿಕ್ಷಿಸುವುದಿಲ್ಲವಾದರೂ ಒಂದುವೇಳೆ ಕುಟುಂಬದಲ್ಲಿ ಯಾವುದೋ ಪ್ರವೃತ್ತಿ ಇಲ್ಲವೆ ಸಮಸ್ಯೆ ಇದೆಯೆಂದು ಗಮನಕ್ಕೆ ಬಂದರೆ ಅದನ್ನು ನಿಭಾಯಿಸಲು ಅವರು ಸ್ವಲ್ಪ ಸಮಯ ಕೊಡಬೇಕಾದೀತು. ಆದರೆ, ವೈಯಕ್ತಿಕವಾದ ನಾಜೂಕಾದ ವಿಷಯಗಳಿರುವಲ್ಲಿ ಮಕ್ಕಳನ್ನು ಒಡಹುಟ್ಟಿದವರ ಮುಂದೆ ಪೇಚಾಟಕ್ಕೊಳಪಡಿಸಬೇಡಿ. ವಾರದ ಬೇರಾವುದೋ ಸಮಯದಲ್ಲಿ ಅವರು ಒಬ್ಬರೇ ಇರುವಾಗ ಅದನ್ನು ಚರ್ಚಿಸಿರಿ. ಕುಟುಂಬ ಆರಾಧನೆಯ ಸಂಜೆಯು ನೀರಸವೂ, ಗೆಲವಿಲ್ಲದ್ದೂ ಆಗಿರಬಾರದು ಬದಲಾಗಿ ನಾವು ಆರಾಧಿಸುವ ಸಂತೋಷದ ದೇವರನ್ನು ಪ್ರತಿಬಿಂಬಿಸಬೇಕು.—1 ತಿಮೊ. 1:11.
[ಪುಟ 6 ರಲ್ಲಿರುವ ಚೌಕ]
ಜೋಪಾನವಾಗಿಡಿ
ಕುಟುಂಬ ಆರಾಧನೆಯ ಸಂಜೆಗಾಗಿ ಕೆಲವು ಉಪಾಯಗಳು
ಬೈಬಲ್:
• ವಾರದ ಬೈಬಲ್ ವಾಚನದ ಒಂದು ಭಾಗವನ್ನು ಜೊತೆಯಾಗಿ ಓದಿ. ಕೆಲವೊಂದು ಬೈಬಲ್ವೃತ್ತಾಂತಗಳನ್ನು ಈ ಶೈಲಿಯಲ್ಲಿ ಓದಬಹುದು: ಒಬ್ಬರು ಕಥಾನಿರೂಪಣೆಯನ್ನು, ಉಳಿದವರು ವಿವಿಧ ವ್ಯಕ್ತಿಗಳ ಸಂಭಾಷಣಾ ಭಾಗಗಳನ್ನು ಓದಬಹುದು.
• ಬೈಬಲ್ ವಾಚನದ ಒಂದು ಭಾಗವನ್ನು ಅಭಿನಯಿಸಿ.
• ವಾರದ ಬೈಬಲ್ ವಾಚನ ಮಾಡಿ ಆ ಅಧ್ಯಾಯಗಳ ಬಗ್ಗೆ ಅವರಿಗೆದ್ದ ಒಂದೆರಡು ಪ್ರಶ್ನೆಗಳನ್ನು ಬರೆದು ತರುವ ನೇಮಕವನ್ನು ಕುಟುಂಬದ ಪ್ರತಿಯೊಬ್ಬರಿಗೂ ಮುಂದಾಗಿಯೇ ಕೊಡಿ. ಆಮೇಲೆ ಕುಟುಂಬವಾಗಿ ಎಲ್ಲ ಪ್ರಶ್ನೆಗಳ ಉತ್ತರಗಳಿಗಾಗಿ ಸಂಶೋಧನೆಮಾಡಿ.
• ಒಂದು ಚಿಕ್ಕ ಕಾರ್ಡ್ನ ಒಂದು ಬದಿಯಲ್ಲಿ ಬರೀ ಬೈಬಲ್ವಚನ, ಅದರ ಇನ್ನೊಂದು ಬದಿಯಲ್ಲಿ ಆ ವಚನದ ವಾಕ್ಯಗಳನ್ನು ಪ್ರತಿ ವಾರ ಬರೆದಿಡಿ. ಅದನ್ನು ಬಾಯಿಪಾಠ ಮಾಡಲು ಮತ್ತು ವಿವರಿಸಲು ಪ್ರಯತ್ನಿಸಿ. ಹೀಗೆ ನೀವು ತಯಾರಿಸಿದ ಕಾರ್ಡುಗಳ ಸಂಗ್ರಹ ಮಾಡಿ, ಅವುಗಳಲ್ಲಿ ಎಷ್ಟೊಂದು ವಚನಗಳು ನಿಮಗೆ ನೆನಪಿದೆಯೆಂದು ಪ್ರತಿ ವಾರ ಪುನರವಲೋಕಿಸಿ.
• ಬೈಬಲ್ ವಾಚನದ ರೆಕಾರ್ಡಿಂಗ್ ಆಲಿಸುತ್ತಾ, ನಿಮ್ಮ ನಿಮ್ಮ ಬೈಬಲ್ಗಳಲ್ಲಿ ಅನುಸರಿಸಿ.
ಕೂಟಗಳು:
• ಕೂಟಗಳ ಯಾವುದಾದರೊಂದು ಭಾಗಕ್ಕಾಗಿ ಜೊತೆಗೂಡಿ ತಯಾರಿಸಿ.
• ಮುಂದಿನ ವಾರದ ರಾಜ್ಯ ಗೀತೆಗಳನ್ನು ಪ್ರ್ಯಾಕ್ಟಿಸ್ ಮಾಡಿ.
• ಕುಟುಂಬದಲ್ಲಿ ಯಾರಿಗಾದರೂ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣವಿದ್ದರೆ ಇಲ್ಲವೆ ಸೇವಾ ಕೂಟದಲ್ಲಿ ಪ್ರತ್ಯಕ್ಷಾಭಿನಯವಿದ್ದರೆ ಅದನ್ನು ಹೇಗೆ ಸಾದರಪಡಿಸುವುದು ಎಂಬುದರ ಬಗ್ಗೆ ಚರ್ಚಿಸಿರಿ ಇಲ್ಲವೆ ಕುಟುಂಬದ ಮುಂದೆ ರಿಹರ್ಸ್ ಮಾಡಿ.
ಕುಟುಂಬದ ಅಗತ್ಯಗಳು:
• ಯುವ ಜನರ ಪ್ರಶ್ನೆಗಳು ಇಲ್ಲವೆ ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಪುಸ್ತಕದಿಂದ ಮಾಹಿತಿ ಚರ್ಚಿಸಿರಿ.
• ಶಾಲೆಯಲ್ಲಿ ಏಳಬಹುದಾದ ಒಂದು ಸನ್ನಿವೇಶವನ್ನು ಹೇಗೆ ನಿರ್ವಹಿಸುವುದೆಂದು ಪ್ರ್ಯಾಕ್ಟಿಸ್ ಸೆಷನ್ ಮಾಡಿ.
• ಮಕ್ಕಳು ಹೆತ್ತವರಂತೆ ಅಭಿನಯಿಸಲಿ. ಅವರು ಮುಂಚೆಯೇ ಒಂದು ವಿಷಯದ ಬಗ್ಗೆ ಸಂಶೋಧನೆ ಮಾಡಿ, ಮಕ್ಕಳಂತೆ ಅಭಿನಯಿಸುತ್ತಿರುವ ತಮ್ಮ ಹೆತ್ತವರಿಗೆ ಆ ವಿಷಯದ ಬಗ್ಗೆ ಮನವೊಪ್ಪಿಸಲಿಕ್ಕಾಗಿ ಕಾರಣಗಳನ್ನು ಕೊಟ್ಟು ವಿವರಿಸಲಿ.
ಶುಶ್ರೂಷೆ:
• ವಾರಾಂತ್ಯಕ್ಕಾಗಿ ನಿರೂಪಣೆಗಳನ್ನು ತಯಾರಿಸಲು ಪ್ರ್ಯಾಕ್ಟಿಸ್ ಸೆಷನ್ಗಳನ್ನು ಮಾಡಿ.
• ಜ್ಞಾಪಕಾಚರಣೆಯ ಅವಧಿಯಲ್ಲಿ ಇಲ್ಲವೆ ರಜಾಕಾಲದಲ್ಲಿ ಶುಶ್ರೂಷೆಯನ್ನು ಹೆಚ್ಚಿಸಲು ಕುಟುಂಬವು ಇಡಬಹುದಾದ ಪ್ರಾಯೋಗಿಕ ಗುರಿಗಳ ಕುರಿತು ಚರ್ಚಿಸಿರಿ.
• ಶುಶ್ರೂಷೆಯಲ್ಲಿ ಏಳಬಹುದಾದ ಭಿನ್ನಭಿನ್ನ ಪ್ರಶ್ನೆಗಳನ್ನು ಉತ್ತರಿಸುವುದು ಹೇಗೆಂದು ಸಂಶೋಧನೆಮಾಡಲು ಪ್ರತಿ ಕುಟುಂಬ ಸದಸ್ಯನಿಗೆ ಕೆಲವು ನಿಮಿಷ ಕೊಟ್ಟು, ಆಮೇಲೆ ಪ್ರ್ಯಾಕ್ಟಿಸ್ ಸೆಷನ್ ಮಾಡಿ.
ಹೆಚ್ಚಿನ ಸಲಹೆಗಳು:
• ಇತ್ತೀಚಿನ ಪತ್ರಿಕೆಗಳಿಂದ ಒಂದು ಲೇಖನವನ್ನು ಜೊತೆಯಾಗಿ ಓದಿ.
• ಕುಟುಂಬದ ಸದಸ್ಯರಲ್ಲಿ ಪ್ರತಿಯೊಬ್ಬರೂ ಇತ್ತೀಚಿನ ಪತ್ರಿಕೆಗಳಿಂದ ಅವರವರಿಗೆ ಇಷ್ಟವಾಗುವ ಯಾವುದೇ ಲೇಖನವನ್ನು ಓದಿಬರುವಂತೆ ಹೇಳಿ. ಅವರು ಆಮೇಲೆ ಲೇಖನದ ಬಗ್ಗೆ ವಿವರವಾಗಿ ತಿಳಿಸಲಿ.
• ಆಗಾಗ್ಗೆ ನಿಮ್ಮ ಕುಟುಂಬ ಆರಾಧನೆಯಲ್ಲಿ ಸೇರುವಂತೆ ಒಬ್ಬ ಪ್ರಚಾರಕನನ್ನೊ ದಂಪತಿಯನ್ನೊ ಆಮಂತ್ರಿಸಿರಿ. ಅವರ ಇಂಟರ್ವ್ಯೂ ಅನ್ನೂ ಮಾಡಬಹುದು.
• ನಮ್ಮ ವಿಡಿಯೋಗಳಲ್ಲಿ ಯಾವುದಾದರೊಂದನ್ನು ನೋಡಿ, ಚರ್ಚಿಸಿ.
• ಎಚ್ಚರ! ಪತ್ರಿಕೆಯಿಂದ “ಯುವಜನರ ಪ್ರಶ್ನೆ” ಲೇಖನವನ್ನು ಜೊತೆಯಾಗಿ ಚರ್ಚಿಸಿ.
• ಕಾವಲಿನಬುರುಜು ಪತ್ರಿಕೆಯ “ನಿಮ್ಮ ಮಕ್ಕಳಿಗೆ ಕಲಿಸಿರಿ” ಅಥವಾ “ಯುವಜನರಿಗಾಗಿ” ಲೇಖನವನ್ನು ಜೊತೆಯಾಗಿ ಚರ್ಚಿಸಿ.
• ನಮ್ಮ ಪತ್ರಿಕೆಗಳಿಂದ ಅನುಭವಗಳನ್ನು ಇಲ್ಲವೆ ಕಳೆದ ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆಯಾದ ಪ್ರಕಾಶನದ ಒಂದು ಭಾಗವನ್ನು ಓದಿ ಚರ್ಚಿಸಿ.
• ಅಧಿವೇಶನ ಇಲ್ಲವೆ ಸಮ್ಮೇಳನಕ್ಕೆ ಹಾಜರಾಗಿ ಬಂದ ನಂತರ ಮುಖ್ಯಾಂಶಗಳನ್ನು ಚರ್ಚಿಸಿರಿ.
• ಯೆಹೋವನ ಸೃಷ್ಟಿಕಾರ್ಯಗಳನ್ನು ನೇರವಾಗಿ ಗಮನಿಸಿ, ಅದು ಯೆಹೋವನ ಬಗ್ಗೆ ನಮಗೇನನ್ನು ಕಲಿಸುತ್ತದೆಂದು ಚರ್ಚಿಸಿರಿ.
• ಒಂದು ಪ್ರತಿಕೃತಿಯನ್ನೊ, ಭೂಪಟವನ್ನೋ, ನಕ್ಷೆಯನ್ನೋ ಒಟ್ಟಾಗಿ ತಯಾರಿಸುವ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಿ.