ಹಾನಿರಹಿತವಾದ ನುಣ್ಣಗಿನ ಷೇವ್
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಒಬ್ಬ ವ್ಯಕ್ತಿಯು ಪ್ರತಿ ದಿನ ಷೇವ್ಮಾಡುವುದಕ್ಕಾಗಿ ಐದು ನಿಮಿಷಗಳಷ್ಟು ಸಮಯವನ್ನು ವ್ಯಯಿಸುತ್ತಾನೆ. ಹೀಗೆಯೇ, ಇದನ್ನು 50 ವರ್ಷದ ವರೆಗೆ ಮುಂದುವರಿಸುತ್ತಾ ಇರುವುದಾದರೆ, ಅವನು ತನ್ನ ಜೀವಮಾನಕಾಲದಲ್ಲಿ ಸುಮಾರು 63 ದಿನಗಳಷ್ಟು ಸಮಯವನ್ನು ಕೇವಲ ತನ್ನ ಮುಖದಲ್ಲಿರುವ ಕೂದಲನ್ನು ತೆಗೆಯುವುದಕ್ಕಾಗಿ ಕಳೆಯುತ್ತಾನೆ! ಈ ದಿನನಿತ್ಯದ ರೂಢಿಯ ಕುರಿತು ಪುರುಷರಿಗೆ ಹೇಗೆ ಅನಿಸುತ್ತದೆ?
ಇತ್ತೀಚೆಗೆ ಮಾಡಿದ ಒಂದು ಅನೌಪಚಾರಿಕ ಸರ್ವೆಯಿಂದ ಷೇವಿಂಗ್ ಕುರಿತು ಈ ಹೇಳಿಕೆಯು ದೊರಕಿತು: “ನನಗದು ಇಷ್ಟವೇ ಇಲ್ಲ.” “ನನಗೆ ಅದನ್ನು ಮಾಡಲು ಕಿಂಚಿತ್ತೂ ಮನಸ್ಸಿಲ್ಲ.” “ಜೀವಿತದ ಅಡಚಣೆಗಳಲ್ಲೊಂದು.” “ಸಾಧ್ಯವಾಗುವಾಗಲ್ಲೆಲ್ಲಾ ಅದನ್ನು ತಪ್ಪಿಸಬಯಸುವ ಒಂದು ಸಂಗತಿ.” ಕೆಲವು ವ್ಯಕ್ತಿಗಳಿಗೆ ಅವರ ಮುಖದ ಮೇಲಿನ ಕೂದಲನ್ನು ತೆಗೆಯುವುದರ ಕುರಿತು ಇಷ್ಟೊಂದು ಬಲವಾದ ಅನಿಸಿಕೆಯಿರುವುದಾದರೂ, ಅವರು ಅದನ್ನು ಯಾಕೆ ಮಾಡುತ್ತಾರೆ? ಷೇವಿಂಗ್ ಕುರಿತು ಸ್ವಲ್ಪ ಹೆಚ್ಚನ್ನು ನಾವು ಕಲಿತುಕೊಳ್ಳೋಣ. ನಮಗೆ ಉತ್ತರವು ಸಿಕ್ಕಿದರೂ ಸಿಗಬಹುದು.
ಚಿಪ್ಪಿನಿಂದ ಬಳಸಿಬಿಸಾಡಬಹುದಾದ ಕ್ಷೌರಕತ್ತಿಯ ವರೆಗೆ
ಚಿಪ್ಪಿನಿಂದ ಇಲ್ಲವೇ ಷಾರ್ಕ್ ಮೀನಿನ ಹಲ್ಲಿನಿಂದ ಷೇವಿಂಗ್ ಮಾಡುವುದನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಅಥವಾ ಚೂಪಾದ ಗಡುಸು ಕಲ್ಲಿನ ತುಂಡಿನಿಂದ ಷೇವಿಂಗ್ಮಾಡುವುದರ ಕುರಿತೇನು? ಷೇವಿಂಗ್ಗಾಗಿ ಸಾಧನಗಳನ್ನು ಆರಿಸುವುದರಲ್ಲಿ ಮಾನವರು ಅಸಾಧಾರಣ ಚಾತುರ್ಯವನ್ನು ತೋರಿಸಿದ್ದಾರೆ! ಪ್ರಾಚೀನ ಈಜಿಪ್ಟಿನಲ್ಲಿ ಸಣ್ಣ ಕೊಡಲಿಯನ್ನು ಹೋಲುವ ತಾಮ್ರದ ಕ್ಷೌರಕತ್ತಿಯನ್ನು ಉಪಯೋಗಿಸಿ ಪುರುಷರು ಷೇವ್ಮಾಡುತ್ತಿದ್ದರು. ಇತ್ತೀಚೆಗೆ, ಅಂದರೆ 18ನೇ ಮತ್ತು 19ನೇ ಶತಮಾನಗಳಲ್ಲಿ, ಇಂಗ್ಲೆಂಡಿನಲ್ಲಿರುವ ಮುಖ್ಯವಾಗಿ ಶೆಫಿಲ್ಡ್ ಎಂಬ ಸ್ಥಳದಲ್ಲಿ, ಮಡಚಿಡುವ ಮೊನಚಾದ ಉದ್ದ ಕ್ಷೌರಕತ್ತಿಯನ್ನು ಉಪಯೋಗಿಸಲಾಗುತ್ತಿತ್ತು. ಅತ್ಯುತ್ತಮವಾಗಿ ಅಲಂಕರಿಸಲಾದ ಹೆಚ್ಚಿನ ಈ ಕ್ಷೌರಕತ್ತಿಗಳಿಗೆ ಟೊಳ್ಳು ಬುಡದ ಸ್ಟೀಲ್ ಬ್ಲೇಡ್ ಇದ್ದು, ಉಪಯೋಗಿಸದೆ ಇದ್ದ ಸಮಯದಲ್ಲಿ ಹಿಡಿಯೊಳಗೆ ಸುರಕ್ಷಿತವಾಗಿ ಮಡಚಿಡುವ ಸೌಲಭ್ಯವಿತ್ತು. ಈ ಸಾಧನಗಳನ್ನು ಬಹಳ ಜಾಗರೂಕತೆಯಿಂದ ಉಪಯೋಗಿಸಬೇಕಿತ್ತು ಮತ್ತು ಅವುಗಳನ್ನು ಉಪಯೋಗಿಸುವುದರಲ್ಲಿ ನಿಪುಣರಾಗುವಷ್ಟರಲ್ಲಿ, ಅನೇಕ ಗಾಯಗಳನ್ನು ಮತ್ತು ರಕ್ತಸ್ರಾವವನ್ನು ಖಂಡಿತವಾಗಿ ಮಾಡಿಕೊಂಡಿರುವರೆಂಬುದರಲ್ಲಿ ಸಂದೇಹವಿಲ್ಲ. ಕೈಚಳಕವಿಲ್ಲದವರು ಅದನ್ನು ಉಪಯೋಗಿಸಲು ಪ್ರಾರಂಭಿಸಿದಾಗ ತೀಕ್ಷ್ಣವಾದ ನೋವನ್ನು ಉಂಟುಮಾಡಿರಬಹುದು. ಹೀಗಿದ್ದರೂ, ಇಪ್ಪತ್ತನೇ ಶತಮಾನವು ಇದಕ್ಕೆ ಪರಿಹಾರವನ್ನು ಒದಗಿಸಿದೆ.
ಇಸವಿ 1901ರಲ್ಲಿ, ಕಿಂಗ್ ಕ್ಯಾಂಪ್ ಜಿಲೇಟ್ ಎಂಬ ಅಮೆರಿಕದಲ್ಲಿರುವ ಪುರುಷನು, ಬಳಸಿಬಿಸಾಡಬಹುದಾದ ಬ್ಲೇಡುಳ್ಳ ಸುರಕ್ಷಿತ ಕ್ಷೌರಕತ್ತಿಯನ್ನು ತಯಾರಿಸುವ ಹಕ್ಕನ್ನು ಪಡೆದನು. ಅವನ ವಿಚಾರವು ಬಹಳಷ್ಟು ಯಶಸ್ಸನ್ನು ಗಳಿಸಿತು ಮತ್ತು ಕ್ರಮೇಣವಾಗಿ ಬೇರೆ ಬೇರೆ ತರಹದ ನಮೂನೆಗಳು ಬಂದವು. ಅವುಗಳಲ್ಲಿ ಬೆಳ್ಳಿ ಮತ್ತು ಚಿನ್ನದಲ್ಲಿ ಅದ್ದಿದ ಹಿಡಿಗಳುಳ್ಳ ಕ್ಷೌರಕತ್ತಿಗಳೂ ಇದ್ದವು. ಎರಡು ಅಥವಾ ಮೂರು ಬ್ಲೇಡ್ಗಳುಳ್ಳ ಕ್ಷೌರಕತ್ತಿಗಳು, ಬಗ್ಗಿಸಲಾಗುವ, ತಿರುಗುವ ತುದಿಯನ್ನು ಅಂಟಿಸಿದ್ದ ಕ್ಷೌರಕತ್ತಿಗಳಂತಹ ಪೂರ್ಣವಾಗಿ ಬಳಸಿಬಿಸಾಡಬಹುದಾದ ಕ್ಷೌರಕತ್ತಿಗಳು ಸಹ ಇತ್ತೀಚೆಗೆ ಬಂದಿವೆ.
ನಿಜ, 1931ರಲ್ಲಿ ಮಾರುಕಟ್ಟೆಗೆ ಪ್ರಪ್ರಥಮವಾಗಿ ಬಂದ ವಿದ್ಯುತ್ ಕ್ಷೌರಕತ್ತಿಗಳನ್ನು ಮರೆಯಲಿಕ್ಕಿಲ್ಲ. ಅದರ ಪರಿಣಾಮಕಾರಿತ್ವ ಮತ್ತು ಜನಪ್ರಿಯತೆಯು ನಿಧಾನವಾಗಿ ಬೆಳೆಯಿತು. ಆದರೆ, ಬ್ಲೇಡಿನ ಹರಿತವಾದ ತುದಿಯಿಂದ ನಿಜವಾಗಿಯೂ ಹಾನಿರಹಿತವಾದ ನುಣ್ಣಗಿನ ಷೇವಿಂಗ್ ಅನ್ನು ಬಯಸುವ ಅನೇಕರು ಈಗಲೂ ಅದನ್ನು ಆರಿಸುತ್ತಾರೆ.
ಸ್ಟೈಲಿನಲ್ಲಿರುವ ಮತ್ತು ಸ್ಟೈಲಿನಲ್ಲಿಲ್ಲದ ಇತಿಹಾಸ
ಪ್ರಾಚೀನ ಸಮಯಗಳಿಂದಲೂ, ಮಾನವಕುಲಕ್ಕೆ ಗಡ್ಡದ ವಿಷಯದಲ್ಲಿ ಸ್ಟೈಲಿನಲ್ಲಿರುವ ಮತ್ತು ಸ್ಟೈಲಿನಲ್ಲಿಲ್ಲದ ಇತಿಹಾಸವಿದೆ. ಪ್ರಾಚೀನ ಐಗುಪ್ತದಲ್ಲಿನ ದೈನಂದಿನ ಜೀವನ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಹೇಳಲಾದಂತೆ, ಪ್ರಾಚೀನ ಐಗುಪ್ತ್ಯರು “ತಮ್ಮ ಮೈಮೇಲೆ ಕೂದಲು ಬೆಳೆಯುವಂತೆ ಬಿಡುತ್ತಿರಲಿಲ್ಲ ಮತ್ತು ಉತ್ತಮವಾಗಿ ತಯಾರಿಸಲ್ಪಟ್ಟ ಸ್ವಚ್ಛವಾದ ತೊಗಲಿನ ಪೆಟ್ಟಿಗೆಗಳಲ್ಲಿ ಇಡುತ್ತಿದ್ದ ಕ್ಷೌರಕತ್ತಿಯನ್ನು ಉಪಯೋಗಿಸಿ ಚೊಕ್ಕವಾಗಿ ಗಡ್ಡವನ್ನು ಬೋಳಿಸುವುದರಲ್ಲಿ ಅವರು ಹೆಮ್ಮೆಪಡುತ್ತಿದ್ದರು.” ಇಬ್ರಿಯ ಕೈದಿಯಾಗಿದ್ದ ಯೋಸೇಫನು ಫರೋಹನ ಮುಂದೆ ಬರುವ ಮುಂಚೆ ತಾನು ಕ್ಷೌರಮಾಡಿಸಿಕೊಂಡನೇಕೆಂಬುದನ್ನು ತಿಳಿದುಕೊಳ್ಳಲು ಈ ಪದ್ಧತಿಯು ನಮಗೆ ಸಹಾಯಮಾಡಬಲ್ಲದು.—ಆದಿಕಾಂಡ 41:14.
ಅಶ್ಶೂರ್ಯದವರು ಸೊಗಸಾದ ಗಡ್ಡಗಳನ್ನು ಬೆಳೆಸುತ್ತಿದ್ದ ಪುರುಷರ ಕುಲಕ್ಕೆ ಸೇರಿದವರಾಗಿದ್ದರು. ವ್ಯರ್ಥವಾಗಿ ಹೋಗುವ ಮಟ್ಟಿಗೂ, ಅವರು ತಮ್ಮ ಗಡ್ಡಗಳಿಗೆ ಲಕ್ಷ್ಯ ಮತ್ತು ಗಮನವನ್ನು ಕೊಡುವುದರಲ್ಲಿ, ಅಂದರೆ ಅವುಗಳನ್ನು ಹೆಚ್ಚು ಗುಂಗುರುಗುಂಗುರಾಗಿ ಮಾಡಲು, ಹೆಣೆಯಲು ಮತ್ತು ಅಚ್ಚುಕಟ್ಟಾಗಿ ತೋರಲು ತಮ್ಮ ಹಣವನ್ನೆಲ್ಲಾ ಪೋಲುಮಾಡುತ್ತಿದ್ದರು.
ಪ್ರಾಚೀನ ಕಾಲದ ಇಸ್ರಾಯೇಲ್ಯರು ಗಡ್ಡವನ್ನು ಸಾಕಷ್ಟು ಉದ್ದ ಬೆಳೆಸುತ್ತಿದ್ದರು ಮತ್ತು ಅದನ್ನು ಬಹಳ ನೀಟಾಗಿ ಇಡಲು ಅವರು ಒಂದು ಕ್ಷೌರಕತ್ತಿಯನ್ನು ಉಪಯೋಗಿಸುತ್ತಿದ್ದರು. ಹಾಗಾದರೆ, ಇಸ್ರಾಯೇಲ್ಯ ಪುರುಷರು “ಚಂಡಿಕೆ ಬಿಡಬಾರದು” ಅಥವಾ ತಮ್ಮ “ಗಡ್ಡವನ್ನು ವಿಕಾರಗೊಳಿಸಬಾರದು” ಎಂಬ ದೇವರ ನಿಯಮವು ಏನನ್ನು ಅರ್ಥೈಸಿತು? ಈ ನಿಯಮವು, ಒಬ್ಬನು ತನ್ನ ಕೂದಲು ಅಥವಾ ಗಡ್ಡವನ್ನು ಅಚ್ಚುಕಟ್ಟಾಗಿಡುವುದಕ್ಕೆ ವಿರುದ್ಧವಾಗಿರಲಿಲ್ಲ. ಅದರ ಬದಲು, ತಮ್ಮ ಸುತ್ತಲಿನ ವಿಧರ್ಮಿ ಜನಾಂಗದವರ ವಿಪರೀತ ಧಾರ್ಮಿಕ ಆಚಾರಗಳನ್ನು ಅನುಕರಿಸುವುದರಿಂದ ಇಸ್ರಾಯೇಲ್ಯ ಪುರುಷರು ದೂರವಿರಬೇಕಿತ್ತೆಂಬುದನ್ನು ಇದು ಸೂಚಿಸುತ್ತಿತ್ತು.a—ಯಾಜಕಕಾಂಡ 19:27; ಯೆರೆಮೀಯ 9:25, 26; 25:23; 49:32.
ಪ್ರಾಚೀನ ಗ್ರೀಕ್ ಸಮಾಜದಲ್ಲಿ, ನುಣ್ಣಗೆ ಬೋಳಿಸಿದ ಶ್ರೀಮಂತರನ್ನು ಬಿಟ್ಟರೆ, ಬೇರೆ ಎಲ್ಲ ಪುರುಷರು ಸಾಮಾನ್ಯವಾಗಿ ಗಡ್ಡವನ್ನು ಬಿಡುತ್ತಿದ್ದರು. ರೋಮಿನಲ್ಲಿ ಷೇವ್ಮಾಡುವ ಅಭ್ಯಾಸವು ಸಾ.ಶ.ಪೂ. ಎರಡನೇ ಶತಮಾನದಲ್ಲೇ ಆರಂಭವಾದಂತೆ ತೋರುತ್ತದೆ ಮತ್ತು ಇದಾದ ಅನೇಕ ಶತಮಾನಗಳ ವರೆಗೆ, ದಿನನಿತ್ಯ ಷೇವ್ಮಾಡುವುದು ಒಂದು ಪದ್ಧತಿಯಾಗಿ ಉಳಿದುಬಿಟ್ಟಿತು.
ಹಾಗಿದ್ದರೂ, ರೋಮನ್ ಸಾಮ್ರಾಜ್ಯದ ಪತನದೊಂದಿಗೆ, ಗಡ್ಡ ಬೆಳೆಸುವುದು ಪುನಃ ಒಮ್ಮೆ ಫ್ಯಾಷನ್ ಆಗಿ ಬಿಟ್ಟಿತು. ಸುಮಾರು 17ನೇ ಶತಮಾನದ ಎರಡನೇ ಭಾಗದ ವರೆಗೂ, ಅಂದರೆ ಮುಂದಿನ 1,000 ವರ್ಷಗಳ ವರೆಗೂ ಅದು ಅಸ್ತಿತ್ವದಲ್ಲಿತ್ತು. ನುಣ್ಣಗೆ ಬೋಳಿಸಿದ ತೋರಿಕೆಯು 18ನೇ ಶತಮಾನದ ವರೆಗೂ ಮುಂದುವರೆಯಿತು. ಆದರೆ ನಂತರ, ಸಾ. ಶ. ಹತ್ತೊಂಬತ್ತನೆಯ ಶತಮಾನದ ಮಧ್ಯ ಭಾಗದಿಂದ ಕೊನೆಯ ಭಾಗದ ವರೆಗಿನ ಅವಧಿಯಲ್ಲಿ, ಗಡ್ಡ ಬೆಳೆಸುವ ಫ್ಯಾಷನ್ ಪುನಃ ಒಮ್ಮೆ ಜನಪ್ರಿಯವಾಗತೊಡಗಿತು. ಆದುದರಿಂದಲೇ, ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದ ಸಿ. ಟಿ. ರಸ್ಸಲ್ ಮತ್ತು ಜೊತೆ ಕ್ರೈಸ್ತರಾಗಿದ್ದ ಡಬ್ಲ್ಯೂ. ಈ. ವ್ಯಾನ್ ಆ್ಯಮ್ಬರ್ಗ್ರ ಚಿತ್ರಗಳಲ್ಲಿ, ಆ ಸಮಯಕ್ಕೆ ತಕ್ಕದ್ದಾಗಿದ್ದ ಮತ್ತು ಗೌರವಾರ್ಹವಾಗಿದ್ದ ಸ್ಟೈಲಿನ ಮತ್ತು ಅಚ್ಚುಕಟ್ಟಾದ ಗಡ್ಡಗಳು ಇದ್ದವೆಂದು ತೋರಿಬರುತ್ತದೆ. ಆದರೂ, ಇಪ್ಪತ್ತನೇ ಶತಮಾನದ ಆದಿಭಾಗದಿಂದ ಹಿಡಿದು ನಮ್ಮ ದಿನಗಳ ವರೆಗೆ ಅನೇಕ ದೇಶಗಳಲ್ಲಿ ಷೇವಿಂಗ್ ಪುನಃ ಒಮ್ಮೆ ಜನಪ್ರಿಯತೆಯನ್ನು ಗಳಿಸಿದೆ.
ಬ್ಲೇಡನ್ನು ಉಪಯೋಗಿಸಿ ಕನ್ನಡಿಯ ಮುಂದೆ ನಿಂತು, ದಿನನಿತ್ಯದ ಈ ರೂಢಿಯನ್ನು ಮಾಡಿಮುಗಿಸುವ ಲಕ್ಷಾಂತರ ಪುರುಷರಲ್ಲಿ ನೀವು ಒಬ್ಬರೋ? ಹಾಗಿರುವುದಾದರೆ, ಅದು ನೋವುರಹಿತ, ರಕ್ತರಹಿತ ಮತ್ತು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿರುವಂತೆ ನೀವು ಬಯಸುತ್ತೀರಿ ಎಂಬುದರಲ್ಲಿ ಸಂದೇಹವಿಲ್ಲ. ಇದನ್ನು ಸಾಧಿಸಲು, “ಬ್ಲೇಡಿನಿಂದ ಷೇವ್ಮಾಡುವವರಿಗೆ ಸೂಚನೆಗಳು” ಎಂಬ ಬಾಕ್ಸ್ನಲ್ಲಿರುವ ಸಲಹೆಗಳನ್ನು ಪರಿಗಣಿಸಲು ನೀವು ಬಯಸಬಹುದು. ಈ ಸೂಚನೆಗಳಲ್ಲಿ ಕೆಲವೊಂದನ್ನು ನೀವು ಈಗಾಗಲೇ ಪಾಲಿಸುತ್ತಿದ್ದಿರಬಹುದು. ವಿಷಯವು ಏನೇ ಆಗಿರಲಿ, ಸ್ವಚ್ಛವಾದ ಹಾನಿರಹಿತವಾದ ನುಣ್ಣಗಿನ ಷೇವ್ ಮಾಡುವುದರಲ್ಲಿ ಆನಂದಿಸಿರಿ!
[ಪಾದಟಿಪ್ಪಣಿಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕದ ಸಂಪುಟ 1, 266 ಮತ್ತು 1021 ಪುಟಗಳನ್ನು ನೋಡಿರಿ.
[ಪುಟ 23ರಲ್ಲಿರುವ ಚೌಕ/ಚಿತ್ರಗಳು]
ಬ್ಲೇಡಿನಿಂದ ಷೇವ್ಮಾಡುವವರಿಗೆ ಸೂಚನೆಗಳು
ಬ್ಲೇಡಿನಿಂದ ಪರಿಣಾಮಕಾರಿಯಾಗಿ ಷೇವ್ಮಾಡಲು ಪುರುಷರ ಕೂದಲುಗಳು (ಇಂಗ್ಲಿಷ್) ಎಂಬ ಪುಸ್ತಕವು ಈ ಕೆಳಗಿನ ಸೂಚನೆಗಳನ್ನು ನೀಡುತ್ತದೆ.b
1. ನಿಮ್ಮ ಗಲ್ಲಮೀಸೆಗಳನ್ನು ಮೃದುಗೊಳಿಸುವುದು: ಮುಖದ ಮೇಲಿರುವ ಕೂದಲನ್ನು ಸಮಗ್ರವಾಗಿ ಮೃದುಗೊಳಿಸಲು ಇರುವ ಏಕೈಕ ಮಾರ್ಗವು, ಸಾಕಷ್ಟು ಬಿಸಿ ನೀರನ್ನು ಗಲ್ಲಮೀಸೆಗೆ ಹಾಕುವುದೇ ಆಗಿದೆ. ಸಾಧ್ಯವಿರುವುದಾದರೆ, ಸ್ನಾನದ ನಂತರ ಷೇವ್ಮಾಡಿ. ಮುಖದ ಮೇಲೆ ಹಾಕಿದ ನೀರು ಗಲ್ಲಮೀಸೆಗಳನ್ನು ಮೃದುಗೊಳಿಸುತ್ತದೆ.
2. ಷೇವಿಂಗ್ನ ಮುನ್ನ ಹಚ್ಚುವ ಉತ್ಪನ್ನಗಳು: ವಿವಿಧ ರೀತಿಯ ಸಾಬೂನುಗಳು, ಸಾಬೂನು ನೊರೆಗಳು, ಕ್ರೀಮ್ಗಳು ಮತ್ತು ಜೆಲ್ಗಳು ಪ್ರಾಮುಖ್ಯವಾಗಿ ಮೂರು ವಿಷಯಗಳನ್ನು ಪೂರೈಸುತ್ತವೆ. (1) ಅವು ಗಲ್ಲಮೀಸೆಯನ್ನು ಒದ್ದೆ ಮಾಡುತ್ತವೆ, (2) ಅವು ಗಲ್ಲಮೀಸೆಯನ್ನು ನೆಟ್ಟಗೆ ಇರಿಸುತ್ತವೆ, (3) ಕ್ಷೌರಕತ್ತಿಯು ಚರ್ಮದ ಮೇಲೆ ಹೆಚ್ಚು ಸುಲಭವಾಗಿ ಜಾರುವಂತೆ ಸಾಧ್ಯವಾಗಲು ಅವು ಅದನ್ನು ನಯಗೊಳಿಸುತ್ತವೆ. ನಿಮಗೆ ಅತ್ಯುತ್ತಮವಾಗಿರುವ ಸಾಧನವನ್ನು ಆರಿಸಿಕೊಳ್ಳಿರಿ. ಓ! ನೀವು ಹೇರ್ ಕಂಡೀಷನರ್ ಅನ್ನು ಎಂದಾದರೂ ಪ್ರಯತ್ನಿಸಿದ್ದೀರೋ? ಅದು ಸಹ ಕೂದಲನ್ನು ಮೃದುಗೊಳಿಸಲು ತಯಾರಿಸಲಾಗಿದೆ.
3. ಸರಿಯಾದ ಕ್ಷೌರಕತ್ತಿಯನ್ನು ಸರಿಯಾದ ವಿಧದಲ್ಲಿ ಉಪಯೋಗಿಸುವುದು: ಸರಿಯಾದ ಕ್ಷೌರಕತ್ತಿಯು ಹರಿತವಾದ ಕ್ಷೌರಕತ್ತಿಯಾಗಿರುತ್ತದೆ. ಹರಿತವಲ್ಲದ ಕ್ಷೌರಕತ್ತಿಗಳು ನಿಮ್ಮ ಚರ್ಮಕ್ಕೆ ಹಾನಿಯನ್ನು ಉಂಟುಮಾಡಬಲ್ಲವು. ಕೂದಲಿನ ಬೆಳೆವಣಿಗೆಯ ದಿಕ್ಕಿನಲ್ಲೇ ಕತ್ತರಿಸಿರಿ. ಕೂದಲಿನ ಬೆಳವಣಿಗೆಯ ದಿಕ್ಕಿಗೆ ಅಭಿಮುಖವಾಗಿ ಷೇವ್ಮಾಡುವುದು ಹಾನಿರಹಿತವಾದ ನುಣ್ಣಗಿನ ಷೇವ್ ಅನ್ನು ಕೊಡಬಹುದು. ಆದರೆ, ಅದು ಚರ್ಮದ ಕೆಳಗಿನ ಭಾಗದಲ್ಲಿರುವ ಗಲ್ಲಮೀಸೆಗಳನ್ನು ಕತ್ತರಿಸಬಲ್ಲದು ಮತ್ತು ಕೂದಲು ಚರ್ಮದ ಸಣ್ಣ ರಂಧ್ರಗಳ ಮೂಲಕ ಬೆಳೆಯುವ ಬದಲು, ಅವುಗಳು ಸುತ್ತಲಿರುವ ಅಂಗಾಂಶದ ಮೂಲಕ ಬೆಳೆಯುವುದಕ್ಕೆ ಕಾರಣವಾಗಬಲ್ಲದು. ಕೆಲವು ಮೂಲಗಳಿಗನುಸಾರ, ಜಾಗ್ರತೆ ವಹಿಸದೆ ಷೇವ್ಮಾಡುವ ಪುರುಷರ ಮತ್ತು ಸ್ತ್ರೀಯರ ಅಭ್ಯಾಸಗಳು, ಚರ್ಮದ ಮೇಲಿನ ಸಣ್ಣಗಂತಿಗಳಿಗೆ ನಡಿಸುವ ವೈರಲ್ ಸೋಂಕುಗಳಿಗೆ ಕಾರಣವಾಗಿರಸಾಧ್ಯವಿದೆ.
4. ಷೇವಿಂಗ್ನ ನಂತರ ಚರ್ಮದ ರಕ್ಷಣೆ: ನೀವು ಪ್ರತಿ ಸಲ ಷೇವ್ಮಾಡುವಾಗ, ಚರ್ಮದ ಅತಿ ಸೂಕ್ಷ್ಮವಾಗಿರುವ ಪದರವನ್ನು ತೆಗೆಯುತ್ತೀರಿ, ಹೀಗಾಗಿ ನಿಮ್ಮ ಚರ್ಮವು ಆಕ್ರಮಣಕ್ಕೆ ಸುಲಭಭೇದ್ಯವಾಗುತ್ತದೆ. ಆದುದರಿಂದ, ಉಳಿದಿರುವ ಪುಡಿಗೂದಲುಗಳನ್ನು ತೆಗೆಯಲು ಮೊದಲು ಶುದ್ಧವಾದ ಬಿಸಿ ನೀರಿನಿಂದ ನಿಮ್ಮ ಮುಖವನ್ನು ತೊಳೆಯುವುದು ಪ್ರಾಮುಖ್ಯ. ನಂತರ ನಿಮ್ಮ ಚರ್ಮದ ಸಣ್ಣ ರಂಧ್ರಗಳನ್ನು ಮುಚ್ಚಲು ತಂಪಾಗಿರಿಸಿರಿ ಮತ್ತು ಒದ್ದೆಯಾಗಿಡಿ. ನೀವು ಬಯಸುವುದಾದರೆ, ನಿಮ್ಮ ಚರ್ಮವನ್ನು ರಕ್ಷಿಸಲು ಮತ್ತು ತಾಜಾಗೊಳಿಸಲು ಷೇವ್ ನಂತರದ ಆದ್ರತೆಯನ್ನು ಕಾಪಾಡುವ (ಮಾಯಿಸ್ಚರೈಸಿಂಗ್) ಲೋಷನ್ ಅನ್ನು ನೀವು ಹಚ್ಚಬಹುದು.
[ಪಾದಟಿಪ್ಪಣಿ]
b ಈ ಲೇಖನವು ಪುರುಷರು ಮಾಡುವ ಷೇವಿಂಗ್ ಕುರಿತು ಚರ್ಚಿಸುತ್ತದೆ. ಅನೇಕ ದೇಶಗಳಲ್ಲಿ ಸ್ತ್ರೀಯರು ತಮ್ಮ ದೇಹದ ಭಾಗಗಳನ್ನು ಷೇವ್ಮಾಡಿಕೊಳ್ಳುತ್ತಾರೆ. ಹಾಗಾಗಿ, ಅವರಿಗೂ ಸಹ ಇಲ್ಲಿ ಸೂಚಿಸಲಾಗಿರುವ ಕೆಲವು ವಿಷಯಗಳು ಸಹಾಯಕಾರಿಯಾಗಿರಬಹುದು.
[ಪುಟ 24ರಲ್ಲಿರುವ ಚೌಕ/ಚಿತ್ರ]
ಗಲ್ಲಮೀಸೆ ಅಂದರೆ ಏನು?
ಮುಖದ ಮೇಲೆ ಬೆಳೆಯುವ ಕೂದಲುಗಳನ್ನು ಗಲ್ಲಮೀಸೆ ಎಂದು ಕರೆಯುತ್ತೇವೆ. ಇದು ಕ್ಯಾರೆಟಿನ್ ಮತ್ತು ಇದಕ್ಕೆ ಸಂಬಂಧಿಸಿದ ಇತರ ಸಸಾರಜನಕಗಳಿಂದ ರಚಿಸಲ್ಪಟ್ಟಿದೆ. ಕ್ಯಾರೆಟಿನ್ ಮಾನವ ಮತ್ತು ಪ್ರಾಣಿಗಳ ಶರೀರದಿಂದ ಉತ್ಪಾದಿಸಲ್ಪಡುವ ಒಂದು ರಾಸಾಯನಿಕ ಪದಾರ್ಥ. ಇದು, ಗಂಧಕದಿಂದ ಕೂಡಿದ ಸಸಾರಜನಕವಾಗಿದ್ದು ಕೂದಲು, ಉಗುರುಗಳು, ರೆಕ್ಕೆಗಳು, ಗೊರಸುಗಳು ಮತ್ತು ಕೊಂಬಿನ ಮೂಲಪದಾರ್ಥವಾಗಿದೆ. ಮಾನವ ಶರೀರದಲ್ಲಿರುವ ಬೇರೆಲ್ಲಾ ಕೂದಲುಗಳಿಗಿಂತಲೂ, ಗಲ್ಲಮೀಸೆಯು ಅತಿಗಡುಸಾದ ಮತ್ತು ಅತಿ ಬೇಗನೇ ಪೂರ್ವಸ್ಥಿತಿಗೆ ಬರುವ ಸ್ವಭಾವವುಳ್ಳದ್ದಾಗಿದೆ. ಇದು ಮುರಿಯಲು ಸಾಧ್ಯವಿರುವಷ್ಟು ದಪ್ಪದ ತಾಮ್ರದ ತಂತಿಯಷ್ಟೇ ದಪ್ಪವಾಗಿರುತ್ತದೆ. ಸಾಮಾನ್ಯ ವ್ಯಕ್ತಿಯ ಮುಖದಲ್ಲಿ 25,000ಕ್ಕಿಂತಲೂ ಹೆಚ್ಚು ಕೂದಲುಗಳು ಇರುತ್ತವೆ ಮತ್ತು ಪ್ರತಿ 24 ತಾಸುಗಳಿಗೆ ಸುಮಾರು ಅರ್ಧ ಮಿಲಿಮೀಟರಿನಷ್ಟು ಉದ್ದ ಬೆಳೆಯುತ್ತದೆ.
[ಕೃಪೆ]
Men: A Pictorial Archive from Nineteenth-Century Sources/Dover Publications, Inc.
[ಪುಟ 24ರಲ್ಲಿರುವ ಚಿತ್ರಗಳು]
ಷೇವಿಂಗ್ಗೆ ಸ್ಟೈಲಿನಲ್ಲಿರುವ ಮತ್ತು ಸ್ಟೈಲಿನಲ್ಲಿಲ್ಲದ ಇತಿಹಾಸವೊಂದಿದೆ
ಈಜಿಪ್ಟಿನವನು
ಅಶ್ಶೂರ್ಯದವನು
ರೋಮ್ ನಿವಾಸಿ
[ಕೃಪೆ]
Museo Egizio di Torino
Photographs taken by courtesy of the British Museum