ಮಾನಮರ್ಯಾದೆ ತೋರಿಸಲು ನೀವು ಮುಂದಾಗುತ್ತೀರೋ?
“ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾ. 12:10.
ಲೋಕದ ಕೆಲವು ಭಾಗಗಳಲ್ಲಿ, ವಯಸ್ಕರ ಮುಂದೆ ಯುವ ಜನರು ಗೌರವಪೂರ್ವಕವಾಗಿ ಮೊಣಕಾಲೂರುವುದು ಪದ್ಧತಿಯಾಗಿದೆ. ಅವರು ಹಿರಿಯ ವ್ಯಕ್ತಿಗಳಿಗಿಂತ ಉದ್ದಕಾಣದಂತೆ ಹೀಗೆ ಮಾಡಲಾಗುತ್ತದೆ. ಇಂಥ ಸಮುದಾಯಗಳಲ್ಲಿ, ಮಕ್ಕಳು ವಯಸ್ಕರಿಗೆ ಬೆನ್ನುತೋರಿಸುವುದೂ ಅಗೌರವವೆಂದು ಎಣಿಸಲಾಗುತ್ತದೆ. ಬೇರೆ ಬೇರೆ ಸಂಸ್ಕೃತಿಗಳಲ್ಲಿ ವಿಭಿನ್ನ ರೀತಿಗಳಲ್ಲಿ ಗೌರವವನ್ನು ತೋರಿಸಲಾಗುತ್ತದಾದರೂ ಇಂಥ ಪದ್ಧತಿಗಳು ನಮಗೆ ಮೋಶೆಯ ಧರ್ಮಶಾಸ್ತ್ರವನ್ನು ಜ್ಞಾಪಕಕ್ಕೆ ತರುತ್ತವೆ. ಅದರಲ್ಲಿ ಈ ಆಜ್ಞೆಯು ಸೇರಿತ್ತು: “ತಲೆನರೆತ ವೃದ್ಧರ ಮುಂದೆ [ಗೌರವದಿಂದ] ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” (ಯಾಜ. 19:32) ವಿಷಾದಕರವಾಗಿ, ಇಂದು ಅನೇಕ ಸ್ಥಳಗಳಲ್ಲಿ ಇತರರಿಗೆ ಮರ್ಯಾದೆ ತೋರಿಸುವ ಸ್ವಭಾವ ಕಣ್ಮರೆಯಾಗುತ್ತಿದೆ ಮತ್ತು ಎಲ್ಲೆಲ್ಲೂ ಅವಮರ್ಯಾದೆ ತೋರಿಸುವವರೇ ಕಾಣಸಿಗುತ್ತಿದ್ದಾರೆ.
2 ದೇವರ ವಾಕ್ಯವಾದರೋ, ಮಾನಮರ್ಯಾದೆ ತೋರಿಸುವ ಸಂಗತಿಗೆ ತುಂಬ ಮಹತ್ತ್ವ ಕೊಡುತ್ತದೆ. ನಾವು ಯೆಹೋವನಿಗೂ ಯೇಸುವಿಗೂ ಮಾನಕೊಡಬೇಕೆಂದು ಅದು ಹೇಳುತ್ತದೆ. (ಯೋಹಾ. 5:23) ನಮ್ಮ ಕುಟುಂಬ ಸದಸ್ಯರಿಗೆ, ಜೊತೆ ವಿಶ್ವಾಸಿಗಳಿಗೆ ಮತ್ತು ಸಭೆಯ ಹೊರಗಿನ ಕೆಲವರಿಗೂ ಮಾನಕೊಡುವಂತೆ ನಮಗೆ ಅಪ್ಪಣೆಕೊಡಲಾಗಿದೆ. (ರೋಮಾ. 12:10; ಎಫೆ. 6:1, 2; 1 ಪೇತ್ರ 2:17) ನಾವು ಯೆಹೋವನಿಗೆ ಮಾನ ತೋರಿಸುವ ಕೆಲವು ವಿಧಗಳಾವುವು? ನಮ್ಮ ಕ್ರೈಸ್ತ ಸಹೋದರ ಸಹೋದರಿಯರಿಗೆ ನಾವು ಮಾನಮರ್ಯಾದೆ ಅಥವಾ ಗಾಢವಾದ ಗೌರವವನ್ನು ಹೇಗೆ ತೋರಿಸಬೇಕು? ಇವುಗಳನ್ನೂ, ಸಂಬಂಧಪಟ್ಟ ಇನ್ನಿತರ ಪ್ರಶ್ನೆಗಳನ್ನೂ ಪರಿಗಣಿಸೋಣ.
ಯೆಹೋವನಿಗೂ ಆತನ ಹೆಸರಿಗೂ ಮಾನಕೊಡಿ
3 ಯೆಹೋವನಿಗೆ ಮಾನಸಲ್ಲಿಸುವ ಒಂದು ಪ್ರಮುಖ ವಿಧವು, ಆತನ ಹೆಸರಿಗೆ ಯೋಗ್ಯ ಗೌರವ ತೋರಿಸುವುದಾಗಿದೆ. ಎಷ್ಟೆಂದರೂ ನಾವು ‘ಆತನ ಹೆಸರಿಗಾಗಿರುವ ಒಂದು ಪ್ರಜೆ’ ಆಗಿದ್ದೇವಲ್ಲವೇ? (ಅ. ಕೃ. 15:14) ಸರ್ವಶಕ್ತ ದೇವರಾದ ಯೆಹೋವನ ನಾಮಧಾರಿಗಳಾಗಿರುವುದು ನಮಗೊಂದು ದೊಡ್ಡ ಗೌರವವೇ ಸರಿ. ಪ್ರವಾದಿ ಮೀಕನು ಹೇಳಿದ್ದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ನಾವು ಧರಿಸಿಕೊಂಡಿರುವ ಹೆಸರಿನ ಬಗ್ಗೆ ಇತರರಲ್ಲಿ ಸದಭಿಪ್ರಾಯ ಮೂಡಿಸುವ ವಿಧದಲ್ಲಿ ದಿನಾಲೂ ಜೀವಿಸುವ ಮೂಲಕ ನಾವು ‘ಯೆಹೋವನ ಹೆಸರಿನಲ್ಲಿ ನಡೆಯುತ್ತೇವೆ.’ ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಜ್ಞಾಪಕಹುಟ್ಟಿಸಿದಂತೆಯೇ, ನಾವು ಸಾರುವ ಸುವಾರ್ತೆಗೆ ಹೊಂದಿಕೆಯಲ್ಲಿ ಜೀವಿಸದಿದ್ದರೆ, ದೇವರ ಹೆಸರು ದೂಷಣೆಗೆ ಇಲ್ಲವೇ ಅಪಖ್ಯಾತಿಗೆ ಗುರಿಯಾಗುತ್ತದೆ.—ರೋಮಾ. 2:21-24.
4 ನಮ್ಮ ಸಾಕ್ಷಿಕಾರ್ಯದ ಮೂಲಕವೂ ನಾವು ಯೆಹೋವನಿಗೆ ಮಾನಕೊಡುತ್ತೇವೆ. ಹಿಂದಿನಕಾಲದಲ್ಲಿ, ಯೆಹೋವನು ಇಸ್ರಾಯೇಲ್ ಜನಾಂಗವನ್ನು ತನ್ನ ಸಾಕ್ಷಿಗಳಾಗುವಂತೆ ಆಮಂತ್ರಿಸಿದನು. ಆದರೆ ಅವರು ಆ ಪಾತ್ರವನ್ನು ನಿಭಾಯಿಸಲು ತಪ್ಪಿಹೋದರು. (ಯೆಶಾ. 43:1-12) ಅವರು ಅನೇಕಸಲ ಯೆಹೋವನಿಗೆ ಬೆನ್ನುಹಾಕಿ “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” (ಕೀರ್ತ. 78:40, 41) ಕಟ್ಟಕಡೆಗೆ, ಆ ಜನಾಂಗವು ಯೆಹೋವನ ಅನುಗ್ರಹವನ್ನು ಸಂಪೂರ್ಣವಾಗಿ ಕಳಕೊಂಡಿತು. ಇಂದು ಯೆಹೋವನಿಗೆ ಸಾಕ್ಷಿಗಳಾಗಿರಲು ಮತ್ತು ಆತನ ನಾಮವನ್ನು ಪ್ರಸಿದ್ಧಪಡಿಸಲು ನಮಗೆ ಸಿಕ್ಕಿರುವ ಸದವಕಾಶಕ್ಕಾಗಿ ನಾವೆಷ್ಟು ಆಭಾರಿಗಳು! ನಾವಾತನನ್ನು ಪ್ರೀತಿಸುವುದರಿಂದ ಮತ್ತು ಆತನ ನಾಮವು ಪರಿಶುದ್ಧವಾಗಬೇಕೆಂದು ಬಯಸುವುದರಿಂದ ಹೀಗೆ ಮಾಡುತ್ತೇವೆ. ನಮ್ಮ ಸ್ವರ್ಗೀಯ ತಂದೆ ಮತ್ತು ಆತನ ಉದ್ದೇಶಗಳ ಕುರಿತ ಸತ್ಯ ತಿಳಿದಿರುವ ನಮಗೆ ಅದನ್ನು ಸಾರದೇ ಸುಮ್ಮನಿರಲಾದೀತೆ? ಅಪೊಸ್ತಲ ಪೌಲನಂದದ್ದು: “ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” ನಮಗೂ ಹೀಗೆಯೇ ಅನಿಸುತ್ತದೆಯಲ್ಲವೇ?—1 ಕೊರಿಂ. 9:16.
5 ಕೀರ್ತನೆಗಾರ ದಾವೀದನು ತಿಳಿಸಿದ್ದು: “ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೋಗುವವರನ್ನು ನೀನು ಕೈಬಿಡುವವನಲ್ಲ.” (ಕೀರ್ತ. 9:10) ನಾವು ನಿಜವಾಗಿಯೂ ಯೆಹೋವನನ್ನು ತಿಳಿದುಕೊಂಡಿರುವಲ್ಲಿ ಮತ್ತು ಆತನ ಹೆಸರನ್ನು ಗೌರವಿಸುತ್ತಿರುವಲ್ಲಿ, ಪ್ರಾಚೀನಕಾಲದ ಆತನ ನಂಬಿಗಸ್ತ ಸೇವಕರಂತೆಯೇ ನಾವಾತನಲ್ಲಿ ಭರವಸೆಯನ್ನಿಡುವೆವು. ಯೆಹೋವನಲ್ಲಿ ಈ ಭರವಸೆ ಮತ್ತು ನಂಬಿಕೆಯನ್ನಿಡುವುದು, ಆತನಿಗೆ ಮಾನಸಲ್ಲಿಸುವ ಮತ್ತೊಂದು ವಿಧವಾಗಿದೆ. ದೇವರ ವಾಕ್ಯವು ಆತನಲ್ಲಿ ಭರವಸೆಯಿಡುವುದನ್ನು ಮತ್ತು ಆತನನ್ನು ಗೌರವಿಸುವುದನ್ನು ಹೇಗೆ ಜೋಡಿಸುತ್ತದೆಂಬುದನ್ನು ಗಮನಿಸಿರಿ. ಪ್ರಾಚೀನ ಇಸ್ರಾಯೇಲ್ ಜನಾಂಗವು ಯೆಹೋವನಲ್ಲಿ ಭರವಸೆಯಿಡಲು ತಪ್ಪಿಹೋದಾಗ ಆತನು ಮೋಶೆಗೆ ಹೀಗೆ ಕೇಳಿದ್ದನು: “ಈ ಜನರು ಇನ್ನು ಎಷ್ಟರ ಮಟ್ಟಿಗೆ ನನ್ನನ್ನು ಅಲಕ್ಷ್ಯಮಾಡುವರೋ [“ಅಗೌರವಿಸುವರೋ,” NW]; ನಾನು ನಡಿಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ.” (ಅರ. 14:11) ಇದಕ್ಕೆ ತದ್ವಿರುದ್ಧವಾದ ಮಾತೂ ಸತ್ಯವಾಗಿದೆ. ಕಷ್ಟಗಳ ಸಮಯದಲ್ಲಿ ಯೆಹೋವನು ನಮ್ಮನ್ನು ಸಂರಕ್ಷಿಸಿ ಪೋಷಿಸುವನೆಂಬ ಭರವಸೆಯಿಂದಿರುವ ಮೂಲಕ ನಾವಾತನನ್ನು ಗೌರವಿಸುತ್ತೇವೆಂದು ತೋರಿಸುವೆವು.
6 ಯೆಹೋವನಿಗೆ ಮನದಾಳದಿಂದ ಗೌರವ ತೋರಿಸಬೇಕೆಂದು ಯೇಸು ಸೂಚಿಸಿದನು. ಯಥಾರ್ಥವಲ್ಲದ ಆರಾಧನೆ ಸಲ್ಲಿಸುತ್ತಿದ್ದವರೊಂದಿಗೆ ಮಾತಾಡುವಾಗ, ಯೇಸು ಯೆಹೋವನ ಈ ಮಾತುಗಳನ್ನು ಉಲ್ಲೇಖಿಸಿದನು: “ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಮನಸ್ಸು ನನಗೆ ದೂರವಾಗಿದೆ.” (ಮತ್ತಾ. 15:8) ಯೆಹೋವನನ್ನು ನಾವು ಹೃತ್ಪೂರ್ವಕವಾಗಿ ಪ್ರೀತಿಸುವಲ್ಲಿ ಆತನನ್ನು ಯಥಾರ್ಥವಾಗಿ ಗೌರವಿಸುವೆವು. (1 ಯೋಹಾ. 5:3) ನಾವು ಯೆಹೋವನ ಈ ವಾಗ್ದಾನವನ್ನೂ ಮನಸ್ಸಿನಲ್ಲಿಡುತ್ತೇವೆ: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು.”—1 ಸಮು. 2:30.
ಮುಂದಾಳುತ್ವ ವಹಿಸುವವರು ಇತರರಿಗೆ ಗೌರವ ತೋರಿಸುತ್ತಾರೆ
7 ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ, “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂಬ ಬುದ್ಧಿವಾದ ಕೊಟ್ಟನು. (ರೋಮಾ. 12:10) ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಸಹೋದರರು, ತಮ್ಮ ಮೇಲ್ವಿಚಾರಣೆಯಡಿ ಇರುವವರಿಗೆ ಮಾನಮರ್ಯಾದೆ ತೋರಿಸಲು ‘ಮುಂದಾಗಬೇಕು’ ಅಂದರೆ ಮಾದರಿಯನ್ನಿಡಬೇಕು. ಈ ವಿಷಯದಲ್ಲಿ, ಭಾರೀ ಜವಾಬ್ದಾರಿಯುಳ್ಳವರು ಪೌಲನ ಮಾದರಿಯನ್ನು ಅನುಸರಿಸತಕ್ಕದ್ದು. (1 ಥೆಸಲೊನೀಕ 2:7, 8 ಓದಿ.) ಪೌಲನು, ಸ್ವತಃ ಮಾಡಲು ಸಿದ್ಧನಿರದ ವಿಷಯಗಳನ್ನು ತಮ್ಮಿಂದ ನಿರೀಕ್ಷಿಸುವುದಿಲ್ಲ ಎಂಬುದು ಅವನು ಸಂದರ್ಶಿಸಿದ ಸಭೆಗಳಲ್ಲಿದ್ದ ಸಹೋದರರಿಗೆ ಚೆನ್ನಾಗಿ ತಿಳಿದಿತ್ತು. ಪೌಲನು ಜೊತೆ ವಿಶ್ವಾಸಿಗಳಿಗೆ ಗೌರವ ಕೊಟ್ಟನು ಮತ್ತು ಪ್ರತಿಯಾಗಿ ಅವರಿಂದ ಗೌರವ ಪಡೆದನು. ಆದುದರಿಂದ ಪೌಲನು ಅವರಿಗೆ “ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದಾಗ, ಅವನ ಉತ್ತಮ ಮಾದರಿ ನೋಡಿ ಅನೇಕರು ಸಂತೋಷದಿಂದ ಪ್ರತಿಕ್ರಿಯಿಸಿದರೆಂಬ ಖಾತ್ರಿ ನಮಗಿರಬಲ್ಲದು.—1 ಕೊರಿಂ. 4:16.
8 ಒಬ್ಬ ಜವಾಬ್ದಾರಿಯುತ ಸಹೋದರನು ತನ್ನ ಮೇಲ್ವಿಚಾರಣೆಯಡಿ ಇರುವವರಿಗೆ ಗೌರವ ತೋರಿಸುವ ಇನ್ನೊಂದು ವಿಧ, ತಾನು ಯಾವುದಕ್ಕಾದರೂ ವಿನಂತಿಸುವಾಗ ಹಾಗೂ ನಿರ್ದೇಶನಗಳನ್ನು ಕೊಡುವಾಗ ಪ್ರತಿಬಾರಿ ಕಾರಣಗಳನ್ನು ಹೇಳುವುದೇ. ಹೀಗೆ ಮಾಡುವ ಮೂಲಕ ಅವನು ಯೇಸುವನ್ನು ಅನುಕರಿಸುತ್ತಾನೆ. ಉದಾಹರಣೆಗೆ, ಕೊಯ್ಲಿನ ಕೆಲಸಕ್ಕಾಗಿ ಹೆಚ್ಚು ಕೆಲಸಗಾರರನ್ನು ಕಳುಹಿಸಲು ಪ್ರಾರ್ಥಿಸಿರಿ ಎಂದು ಯೇಸು ಶಿಷ್ಯರಿಗೆ ಹೇಳಿದಾಗ, ಹಾಗೆ ಏಕೆ ಮಾಡಬೇಕೆಂದು ಕೂಡ ಹೇಳಿದನು. ಅವನಂದದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾ. 9:37, 38) ಅದೇ ರೀತಿಯಲ್ಲಿ, ಅವನು ತನ್ನ ಶಿಷ್ಯರಿಗೆ “ಎಚ್ಚರವಾಗಿರ್ರಿ” ಎಂದು ಹೇಳಿದಾಗ ಅದಕ್ಕೆ ಕಾರಣ ಕೊಟ್ಟನು. ಅವನಂದದ್ದು: “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” (ಮತ್ತಾ. 24:42) ಅನೇಕಾನೇಕ ಸಲ, ಯೇಸು ತನ್ನ ಶಿಷ್ಯರಿಗೆ ಅವರೇನು ಮಾಡಬೇಕೆಂದು ಹೇಳಿದ್ದು ಮಾತ್ರವಲ್ಲ, ಅವರದನ್ನು ಏಕೆ ಮಾಡಬೇಕೆಂದೂ ಹೇಳಿದನು. ಈ ರೀತಿಯಲ್ಲಿ ಆತನು ಅವರಿಗೆ ಗೌರವ ತೋರಿಸಿದನು. ಅನುಕರಿಸಲು ಕ್ರೈಸ್ತ ಮೇಲ್ವಿಚಾರಕರಿಗಾಗಿ ಎಂಥ ಉತ್ತಮ ಮಾದರಿ!
ಯೆಹೋವನ ಸಭೆ ಹಾಗೂ ಅದರ ನಿರ್ದೇಶನವನ್ನು ಗೌರವಿಸಿ
9 ಯೆಹೋವನನ್ನು ಗೌರವಿಸಬೇಕಾದರೆ, ಲೋಕವ್ಯಾಪಕ ಕ್ರೈಸ್ತ ಸಭೆಯನ್ನೂ ಅದರ ಪ್ರತಿನಿಧಿಗಳನ್ನೂ ನಾವು ಗೌರವಿಸಬೇಕು. ನಂಬಿಗಸ್ತ ಆಳು ವರ್ಗ ಕೊಡುವ ಶಾಸ್ತ್ರಾಧಾರಿತ ಸಲಹೆಯನ್ನು ಪಾಲಿಸುವಾಗ ನಾವು ಯೆಹೋವನ ಏರ್ಪಾಡಿಗೆ ಗೌರವ ತೋರಿಸುತ್ತೇವೆ. ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ನೇಮಿತ ಪುರುಷರಿಗೆ ಅಗೌರವ ತೋರಿಸುವವರನ್ನು ಖಂಡಿಸುವ ಅಗತ್ಯವನ್ನು ಅಪೊಸ್ತಲ ಯೋಹಾನನು ಮನಗಂಡನು. (3 ಯೋಹಾನ 9-11 ಓದಿ.) ಯೋಹಾನನ ಮಾತುಗಳಿಂದ ತಿಳಿದುಬರುವ ಸಂಗತಿಯೇನೆಂದರೆ, ಆಗಿನ ಕೆಲವರು ಮೇಲ್ವಿಚಾರಕರನ್ನು ಮಾತ್ರವಲ್ಲ ಅವರ ಬೋಧನೆ ಹಾಗೂ ನಿರ್ದೇಶನಗಳನ್ನೂ ಅಗೌರವಿಸುತ್ತಿದ್ದರು. ಸಂತೋಷಕರವಾಗಿ, ಹೆಚ್ಚಿನ ಕ್ರೈಸ್ತರು ಹಾಗಿರಲಿಲ್ಲ. ಅಪೊಸ್ತಲರು ಇನ್ನೂ ಬದುಕಿದ್ದಾಗಲೇ, ಸಹೋದರರಲ್ಲಿ ಅಧಿಕಾಂಶ ಮಂದಿ, ಮುಂದಾಳುತ್ವವಹಿಸುವವರಿಗೆ ಗಾಢ ಗೌರವ ತೋರಿಸುತ್ತಿದ್ದರೆಂಬುದು ವ್ಯಕ್ತ.—ಫಿಲಿ. 2:12.
10 “ನೀವೆಲ್ಲರು ಸಹೋದರರು” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದರಿಂದ, ಕ್ರೈಸ್ತ ಸಭೆಯಲ್ಲಿ ಅಧಿಕಾರದ ಸ್ಥಾನಗಳಿರಬಾರದೆಂದು ಕೆಲವರು ತರ್ಕಿಸುತ್ತಾರೆ. (ಮತ್ತಾ. 23:8) ಆದರೆ, ಹೀಬ್ರು ಹಾಗೂ ಗ್ರೀಕ್ ಶಾಸ್ತ್ರಗಳಲ್ಲಿ, ದೇವದತ್ತ ಅಧಿಕಾರವಿದ್ದ ಹಲವಾರು ಪುರುಷರ ಉದಾಹರಣೆಗಳಿವೆ. ಯೆಹೋವನು ಮಾನವ ಪ್ರತಿನಿಧಿಗಳ ಮೂಲಕ ನಿರ್ದೇಶನ ಕೊಡುತ್ತಾನೆಂಬುದಕ್ಕೆ, ಪ್ರಾಚೀನಕಾಲದ ಹೀಬ್ರು ಜನರಲ್ಲಿದ್ದ ಮೂಲಪಿತೃಗಳು, ನ್ಯಾಯಸ್ಥಾಪಕರು ಮತ್ತು ರಾಜರ ಕುರಿತ ಇತಿಹಾಸವು ಹೇರಳ ಪುರಾವೆ ಕೊಡುತ್ತದೆ. ನೇಮಿತ ಪುರುಷರಿಗೆ ಜನರು ಯೋಗ್ಯ ಗೌರವ ಕೊಡದಿದ್ದಾಗ ಯೆಹೋವನು ಅವರನ್ನು ಶಿಕ್ಷಿಸಿದನು.—2 ಅರ. 1:2-17; 2:19, 23, 24.
11 ಅದೇ ರೀತಿಯಲ್ಲಿ, ಪ್ರಥಮ ಶತಮಾನದ ಕ್ರೈಸ್ತರು ಅಪೊಸ್ತಲರ ಅಧಿಕಾರವನ್ನು ಮಾನ್ಯಮಾಡಿದರು. (ಅ. ಕೃ. 2:42) ಉದಾಹರಣೆಗೆ ಪೌಲನು ತನ್ನ ಸಹೋದರರಿಗೆ ನಿರ್ದೇಶನ ಕೊಟ್ಟನು. (1 ಕೊರಿಂ. 16:1; 1 ಥೆಸ. 4:1) ಹಾಗಿದ್ದರೂ, ತನ್ನ ಮೇಲೆ ಅಧಿಕಾರವಿದ್ದವರಿಗೆ ಆತನು ಸಹ ಸಂತೋಷದಿಂದ ಅಧೀನನಾದನು. (ಅ. ಕೃ. 15:22; ಗಲಾ. 2:9, 10) ಹೌದು, ಪೌಲನಿಗೆ ಕ್ರೈಸ್ತ ಸಭೆಯಲ್ಲಿ ಅಧಿಕಾರವಿದ್ದವರ ಕುರಿತ ಯೋಗ್ಯ ನೋಟವಿತ್ತು.
12 ನಾವು ಇದರಿಂದ ಕಲಿಯುವ ಪಾಠದಲ್ಲಿ ಎರಡು ಅಂಶಗಳಿವೆ. ಮೊದಲನೆಯದ್ದೇನೆಂದರೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅದರ ಆಡಳಿತ ಮಂಡಳಿಯ ಮೂಲಕ ಪುರುಷರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸುವುದು ಶಾಸ್ತ್ರಾಧಾರಿತವಾಗಿದ್ದು, ಕೆಲವು ನೇಮಿತ ಪುರುಷರಿಗೆ ಇತರ ನೇಮಿತ ಪುರುಷರ ಮೇಲೆ ಅಧಿಕಾರವನ್ನು ಕೊಡಲಾಗುತ್ತದೆ. (ಮತ್ತಾ. 24:45-47; 1 ಪೇತ್ರ 5:1-3) ಎರಡನೆಯದ್ದೇನೆಂದರೆ, ನೇಮಿತ ಪುರುಷರ ಸಮೇತ ನಾವೆಲ್ಲರೂ, ನಮ್ಮ ಮೇಲೆ ಅಧಿಕಾರವಿರುವವರಿಗೆ ಮಾನಮರ್ಯಾದೆ ತೋರಿಸಬೇಕು. ಲೋಕವ್ಯಾಪಕ ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಣೆಯ ಸ್ಥಾನದಲ್ಲಿರುವವರಿಗೆ ನಾವು ಮಾನಕೊಡಬಹುದಾದ ಕೆಲವೊಂದು ಪ್ರಾಯೋಗಿಕ ವಿಧಗಳಾವುವು?
ಸಂಚರಣಾ ಮೇಲ್ವಿಚಾರಕರಿಗೆ ಗೌರವ ತೋರಿಸುವುದು
13 ಪೌಲನು ತಿಳಿಸಿದ್ದು: “ಸಹೋದರರೇ, ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ.” (1 ಥೆಸ. 5:12, 13) ಖಂಡಿತವಾಗಿಯೂ ಸಂಚರಣಾ ಮೇಲ್ವಿಚಾರಕರು ಸಹ ‘ಪ್ರಯಾಸಪಡುತ್ತಾರೆ.’ ಆದುದರಿಂದ, ನಾವು ಅವರಿಗೆ ‘ಬಹಳವಾಗಿ ಸನ್ಮಾನಮಾಡೋಣ.’ ಇದನ್ನು ಮಾಡುವ ಒಂದು ವಿಧ, ಅವರು ಕೊಡುವ ಸಲಹೆ ಹಾಗೂ ಉತ್ತೇಜನಕ್ಕೆ ಮನಃಪೂರ್ವಕವಾಗಿ ಪ್ರತಿಕ್ರಿಯಿಸುವುದಾಗಿದೆ. ಅಂಥ ಮೇಲ್ವಿಚಾರಕನೊಬ್ಬನು ನಂಬಿಗಸ್ತನಾದ ಆಳು ವರ್ಗದಿಂದ ಬಂದಿರುವ ಯಾವುದೇ ನಿರ್ದೇಶನವನ್ನು ನಮಗೆ ದಾಟಿಸುವಾಗ, “ಮೇಲಣಿಂದ ಬರುವ ವಿವೇಕವು” ನಾವು “ವಿಧೇಯರಾಗಲು ಸಿದ್ಧರಾಗಿರುವಂತೆ” ಮಾಡುವುದು.—ಯಾಕೋ. 3:17, NW.
14 ಆದರೆ, ಯಾವುದೇ ಒಂದು ಕೆಲಸವನ್ನು ನಾವು ಮಾಡುತ್ತಿರುವ ವಿಧಾನಕ್ಕಿಂತ ಭಿನ್ನವಾದ ವಿಧಾನದಲ್ಲಿ ಮಾಡುವಂತೆ ಕೇಳಲ್ಪಟ್ಟಾಗ ಆಗೇನು? ನಾವು ಗೌರವ ತೋರಿಸುವವರಾಗಿರುವಲ್ಲಿ, ‘ಹಾಗೆಲ್ಲ ಇಲ್ಲಿ ಮಾಡಲಾಗುವುದಿಲ್ಲ’ ಎಂದೋ, ಅಥವಾ ‘ಇದು ಬೇರೆ ಕಡೆಗಳಲ್ಲಿ ನಡೆಯಬಹುದು ಆದರೆ ನಮ್ಮ ಸಭೆಯಲ್ಲಿ ನಡೆಯುವುದಿಲ್ಲ’ ಎಂದೋ ಆಕ್ಷೇಪಿಸಲು ನಮಗೆ ಮನಸ್ಸಾಗುವಾಗ ಅದನ್ನು ನಿಗ್ರಹಿಸುವೆವು. ನಾವು ನಿರ್ದೇಶನವನ್ನು ಪಾಲಿಸಲು ಪ್ರಯಾಸಪಡುವೆವು. ಇದನ್ನು ಮಾಡಲು, ಸಭೆ ಯೆಹೋವನದ್ದು ಮತ್ತು ಯೇಸು ಅದರ ಶಿರಸ್ಸು ಎಂಬ ಮಾತನ್ನು ಯಾವಾಗಲೂ ಮನಸ್ಸಿನಲ್ಲಿಡುವುದು ನೆರವಾಗುವುದು. ಸಂಚರಣಾ ಮೇಲ್ವಿಚಾರಕನೊಬ್ಬನ ನಿರ್ದೇಶನವನ್ನು ಸಂತೋಷದಿಂದ ಸ್ವೀಕರಿಸಿ, ಅದನ್ನು ಸಭೆಯಲ್ಲಿ ಪಾಲಿಸಲಾಗುವಾಗ, ಅದು ಹೃತ್ಪೂರ್ವಕ ಗೌರವದ ಪುರಾವೆಯಾಗಿದೆ. ಕೊರಿಂಥದಲ್ಲಿದ್ದ ಸಹೋದರರು, ಭೇಟಿನೀಡುತ್ತಿದ್ದ ಹಿರಿಯನಾದ ತೀತನು ಕೊಟ್ಟ ನಿರ್ದೇಶನಕ್ಕೆ ತೋರಿಸಿದ ಗೌರವಪೂರ್ವಕ ವಿಧೇಯತೆಗಾಗಿ ಅಪೊಸ್ತಲ ಪೌಲನು ಅವರನ್ನು ಶ್ಲಾಘಿಸಿದನು. (2 ಕೊರಿಂ. 7:13-16) ತದ್ರೀತಿಯಲ್ಲಿ, ಸಂಚರಣಾ ಮೇಲ್ವಿಚಾರಕರ ಮಾರ್ಗದರ್ಶನವನ್ನು ನಾವು ಎಷ್ಟು ಸಿದ್ಧಮನಸ್ಸಿನಿಂದ ಅನ್ವಯಿಸಿಕೊಳ್ಳುತ್ತೇವೋ ಅದು, ಸಾರುವ ಕೆಲಸದಲ್ಲಿ ನಮ್ಮ ಆನಂದವನ್ನು ಅಷ್ಟೇ ಹೆಚ್ಚಿಸುವುದು ಎಂಬ ವಿಷಯದಲ್ಲಿ ಖಾತ್ರಿಯಿಂದಿರಬಲ್ಲೆವು.—2 ಕೊರಿಂಥ 13:11 ಓದಿ.
“ಎಲ್ಲರನ್ನು ಸನ್ಮಾನಿಸಿರಿ”
15 ಪೌಲನು ಬರೆದದ್ದು: “ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ಬುದ್ಧಿಹೇಳು. ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು [‘ಗೌರವಿಸು,’ NW].” (1 ತಿಮೊ. 5:1-4) ಹೌದು, ಕ್ರೈಸ್ತ ಸಭೆಯಲ್ಲಿರುವವರೆಲ್ಲರನ್ನು ಗೌರವಿಸುವಂತೆ ದೇವರ ವಾಕ್ಯ ನಮಗೆ ಬುದ್ಧಿಹೇಳುತ್ತದೆ. ಆದರೆ ನಿಮ್ಮ ಹಾಗೂ ಸಭೆಯಲ್ಲಿರುವ ಸಹೋದರ ಇಲ್ಲವೇ ಸಹೋದರಿಯ ಮಧ್ಯೆ ವೈಯಕ್ತಿಕ ಮನಸ್ತಾಪವಿರುವಲ್ಲಿ ಆಗೇನು? ಈ ಕಾರಣಕ್ಕೆ ನೀವು ಆ ಜೊತೆ ಕ್ರೈಸ್ತನಿಗೆ ಗೌರವತೋರಿಸದೆ ಇರುತ್ತೀರೋ? ಅಥವಾ ದೇವರ ಆ ಸೇವಕನಲ್ಲಿ ಇರುವ ಆಧ್ಯಾತ್ಮಿಕ ಗುಣಗಳನ್ನು ಗುರುತಿಸುವ ಮೂಲಕ ನಿಮ್ಮ ಮನೋಭಾವವನ್ನು ಬದಲಾಯಿಸಬಲ್ಲಿರೋ? ವಿಶೇಷವಾಗಿ ಅಧಿಕಾರದ ಸ್ಥಾನದಲ್ಲಿರುವವರು ತಮ್ಮ ಸಹೋದರರ ಬಗ್ಗೆ ಗೌರವಪೂರ್ವಕ ನೋಟವನ್ನು ಕಾಪಾಡಿಕೊಳ್ಳಬೇಕು. ಅವರೆಂದೂ ‘ಮಂದೆಯ ಮೇಲೆ ದೊರೆತನ ಮಾಡಬಾರದು.’ (1 ಪೇತ್ರ 5:3) ಹೌದು, ಸದಸ್ಯರ ಮಧ್ಯೆ ಇರುವ ಹೃತ್ಪೂರ್ವಕ ಪ್ರೀತಿಯಿಂದ ಗುರುತಿಸಲ್ಪಡುವ ಕ್ರೈಸ್ತ ಸಭೆಯಲ್ಲಿ, ಪರಸ್ಪರರಿಗೆ ಮಾನಮರ್ಯಾದೆ ತೋರಿಸಲು ನಮಗೆ ಹಲವಾರು ಅವಕಾಶಗಳಿವೆ.—ಯೋಹಾನ 13:34, 35 ಓದಿ.
16 ನಾವು ಕೇವಲ ಕ್ರೈಸ್ತ ಸಭೆಯಲ್ಲಿರುವವರಿಗೆ ಮಾತ್ರ ಗೌರವ ತೋರಿಸುವುದಿಲ್ಲ. ಪೌಲನು ತನ್ನ ದಿನದಲ್ಲಿದ್ದ ಕ್ರೈಸ್ತರಿಗೆ ಬರೆದದ್ದು: “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ.” (ಗಲಾ. 6:10) ಈ ಮೂಲತತ್ತ್ವವನ್ನು, ಒಬ್ಬ ಜೊತೆಕೆಲಸಗಾರನೋ ಶಾಲಾ ಸಹಪಾಠಿಯೋ ನಮ್ಮೊಂದಿಗೆ ಒರಟಾಗಿ ನಡೆದುಕೊಳ್ಳುವಾಗ ಅನ್ವಯಿಸಿಕೊಳ್ಳುವುದು ಸುಲಭವಲ್ಲ ಎಂಬುದು ಒಪ್ಪತಕ್ಕದ್ದೇ. ಅಂಥ ಸನ್ನಿವೇಶಗಳಲ್ಲಿ, ನಾವು ಈ ಮಾತುಗಳನ್ನು ನೆನಪಿನಲ್ಲಿಡಬೇಕು: “ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ.” (ಕೀರ್ತ. 37:1) ಈ ಸಲಹೆಯನ್ನು ಅನ್ವಯಿಸುವಲ್ಲಿ, ವಿರೋಧಿಗಳೊಂದಿಗೂ ಗೌರವಪೂರ್ವಕವಾಗಿ ನಡೆದುಕೊಳ್ಳಲು ನಮಗೆ ಸಾಧ್ಯವಾಗುವುದು. ಅಲ್ಲದೇ, ನಮಗೆ ನಮ್ಮ ಕುರಿತು ನಮ್ರ ನೋಟವಿರುವುದಾದರೆ ಸಾರ್ವಜನಿಕ ಶುಶ್ರೂಷೆಯಲ್ಲಿ ತೊಡಗಿರುವಾಗ, ಎಲ್ಲರೊಂದಿಗೂ “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ನಡೆದುಕೊಳ್ಳುವೆವು. (1 ಪೇತ್ರ 3:15) ನಮ್ಮ ತೋರಿಕೆ ಹಾಗೂ ಉಡುಗೆತೊಡುಗೆ ಸಹ, ನಾವು ಯಾರಿಗೆ ಸಾರುತ್ತೇವೋ ಅವರ ಕಡೆಗೆ ನಮಗಿರುವ ಗೌರವವನ್ನು ತೋರಿಸಬಲ್ಲದು.
17 ನಾವು ಜೊತೆ ವಿಶ್ವಾಸಿಗಳೊಂದಿಗೆ ವ್ಯವಹರಿಸುತ್ತಿರಲಿ, ಸಭೆಯ ಹೊರಗಿನವರೊಂದಿಗೆ ವ್ಯವಹರಿಸುತ್ತಿರಲಿ ಈ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇವೆ: “ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ.”—1 ಪೇತ್ರ 2:16, 17.
ನಿಮ್ಮ ಉತ್ತರವೇನು?
ನೀವು
• ಯೆಹೋವನಿಗೆ,
• ಸಭಾ ಹಿರಿಯರಿಗೆ ಮತ್ತು ಸಂಚರಣಾ ಮೇಲ್ವಿಚಾರಕರಿಗೆ,
• ಸಭೆಯ ಪ್ರತಿಯೊಬ್ಬ ಸದಸ್ಯನಿಗೆ ಮತ್ತು
• ಯಾರಿಗೆ ಸಾರುತ್ತೀರೋ ಅವರಿಗೆ, ಹೇಗೆ ಯೋಗ್ಯ ಗೌರವ ತೋರಿಸಬಲ್ಲಿರಿ?
[ಅಧ್ಯಯನ ಪ್ರಶ್ನೆಗಳು]
1. ಇಂದು ಲೋಕದ ಅನೇಕ ಭಾಗಗಳಲ್ಲಿ ಯಾವ ಸ್ವಭಾವ ಕಣ್ಮರೆಯಾಗುತ್ತಿದೆ?
2. ನಾವು ಯಾರಿಗೆಲ್ಲ ಮಾನಕೊಡಬೇಕೆಂದು ಬೈಬಲ್ ಹೇಳುತ್ತದೆ?
3. ಯೆಹೋವನಿಗೆ ಮಾನಸಲ್ಲಿಸುವ ಒಂದು ಪ್ರಮುಖ ವಿಧ ಯಾವುದು?
4. ಯೆಹೋವನಿಗೆ ಸಾಕ್ಷಿಗಳಾಗಿರುವ ಸದವಕಾಶದ ಬಗ್ಗೆ ನಿಮಗೆ ಹೇಗನಿಸುತ್ತದೆ?
5. ಯೆಹೋವನಲ್ಲಿ ನಂಬಿಕೆಯಿಡುವುದಕ್ಕೂ, ಆತನನ್ನು ಗೌರವಿಸುವುದಕ್ಕೂ ಏನು ಸಂಬಂಧ?
6. ಯೆಹೋವನಿಗೆ ಗಾಢ ಗೌರವ ತೋರಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ?
7. (ಎ) ಜವಾಬ್ದಾರಿಯುಳ್ಳ ಸಹೋದರರು ತಮ್ಮ ಮೇಲ್ವಿಚಾರಣೆಯಡಿ ಇರುವವರಿಗೆ ಏಕೆ ಮಾನ ಸಲ್ಲಿಸಬೇಕು? (ಬಿ) ಪೌಲನು ಜೊತೆ ವಿಶ್ವಾಸಿಗಳಿಗೆ ಹೇಗೆ ಗೌರವ ತೋರಿಸಿದನು?
8. (ಎ) ಯೇಸು ತನ್ನ ಶಿಷ್ಯರಿಗೆ ಗೌರವ ತೋರಿಸಿದ ಒಂದು ಪ್ರಮುಖ ವಿಧ ಯಾವುದು? (ಬಿ) ಇಂದು ಮೇಲ್ವಿಚಾರಕರು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?
9. ಲೋಕವ್ಯಾಪಕ ಕ್ರೈಸ್ತ ಸಭೆ ಹಾಗೂ ಅದರ ಪ್ರತಿನಿಧಿಗಳಿಗೆ ನಾವು ತೋರಿಸುವ ಗೌರವವು ಏನನ್ನು ಸೂಚಿಸುತ್ತದೆ? ವಿವರಿಸಿ.
10, 11. ಕ್ರೈಸ್ತ ಸಭೆಯಲ್ಲಿ ಕೆಲವರಿಗೆ ಅಧಿಕಾರವಿರುವುದು ಏಕೆ ಯೋಗ್ಯ ಎಂಬುದನ್ನು ಬೈಬಲಿನಿಂದ ವಿವರಿಸಿರಿ.
12. ಬೈಬಲಿನ ಉದಾಹರಣೆಗಳಿಂದ ನಾವು ಅಧಿಕಾರದ ಕುರಿತ ಯಾವ ಎರಡು ಅಂಶಗಳುಳ್ಳ ಪಾಠವನ್ನು ಕಲಿಯಬಲ್ಲೆವು?
13. ಕ್ರೈಸ್ತ ಸಭೆಯ ಆಧುನಿಕ ದಿನದ ಪ್ರತಿನಿಧಿಗಳಿಗೆ ನಾವು ಹೇಗೆ ಗೌರವ ತೋರಿಸಬಲ್ಲೆವು?
14. ಸಭೆಯು ಸಂಚರಣಾ ಮೇಲ್ವಿಚಾರಕರಿಗೆ ಹೃತ್ಪೂರ್ವಕ ಗೌರವವನ್ನು ಹೇಗೆ ತೋರಿಸುತ್ತದೆ, ಮತ್ತು ಫಲಿತಾಂಶವೇನು?
15. ನಾವು ಜೊತೆ ವಿಶ್ವಾಸಿಗಳಿಗೆ ಗೌರವ ತೋರಿಸುವ ಕೆಲವು ವಿಧಗಳಾವುವು?
16, 17. (ಎ) ನಾವು ಯಾರಿಗೆ ಸಾರುತ್ತೇವೊ ಅವರಿಗೆ ಮಾತ್ರವಲ್ಲದೆ ವಿರೋಧಿಗಳಿಗೂ ಏಕೆ ಗೌರವತೋರಿಸಬೇಕು? (ಬಿ) ನಾವು ‘ಎಲ್ಲರನ್ನೂ ಸನ್ಮಾನಿಸುವುದು’ ಹೇಗೆ?
[ಪುಟ 23ರಲ್ಲಿರುವ ಚಿತ್ರ]
ಪ್ರಥಮ ಶತಮಾನದ ಕ್ರೈಸ್ತರು ಆಡಳಿತ ಮಂಡಳಿಯ ಮೇಲ್ವಿಚಾರಣೆಯನ್ನು ಮಾನ್ಯಮಾಡಿದರು
[ಪುಟ 24ರಲ್ಲಿರುವ ಚಿತ್ರ]
ಪ್ರತಿಯೊಂದೂ ದೇಶದಲ್ಲಿರುವ ಹಿರಿಯರು, ಆಡಳಿತ ಮಂಡಳಿಯಿಂದ ನೇಮಿತರಾದ ಸಂಚರಣಾ ಮೇಲ್ವಿಚಾರಕರನ್ನು ಗೌರವಿಸುತ್ತಾರೆ