ಯೆಹೋವನ ವಾಕ್ಯವು ಸಜೀವವಾದದ್ದು
ಯಾಜಕಕಾಂಡ ಪುಸ್ತಕದ ಮುಖ್ಯಾಂಶಗಳು
ಇಸ್ರಾಯೇಲ್ಯರು ಐಗುಪ್ತದ ಬಂದಿವಾಸದಿಂದ ವಿಮೋಚಿಸಲ್ಪಟ್ಟು ಒಂದು ವರ್ಷವೂ ದಾಟಿರಲಿಲ್ಲ. ಒಂದು ಹೊಸ ಜನಾಂಗವಾಗಿ ಸಂಘಟಿಸಲ್ಪಟ್ಟಿದ್ದ ಅವರು, ಈಗ ಕಾನಾನ್ ದೇಶಕ್ಕೆ ಹೋಗುವ ಮಾರ್ಗದಲ್ಲಿದ್ದರು. ಒಂದು ಪರಿಶುದ್ಧ ಜನಾಂಗವು ಅಲ್ಲಿ ವಾಸಿಸಬೇಕೆಂಬುದು ಯೆಹೋವನ ಉದ್ದೇಶವಾಗಿತ್ತು. ಕಾನಾನ್ಯರ ಜೀವನಶೈಲಿ ಮತ್ತು ಧಾರ್ಮಿಕ ಆಚರಣೆಗಳಾದರೊ ಅತೀ ಕೀಳ್ಮಟ್ಟದ್ದಾಗಿದ್ದವು. ಆದುದರಿಂದ ಸತ್ಯ ದೇವರು, ಇಸ್ರಾಯೇಲ್ ಸಮೂಹವನ್ನು ತನ್ನ ಸೇವೆಗಾಗಿ ಪ್ರತ್ಯೇಕವಾಗಿರಿಸುವಂಥ ನಿಬಂಧನೆಗಳನ್ನು ಅವರಿಗೆ ಕೊಟ್ಟನು. ಇವುಗಳನ್ನು ಬೈಬಲಿನ ಯಾಜಕಕಾಂಡ ಪುಸ್ತಕದಲ್ಲಿ ದಾಖಲಿಸಲಾಗಿದೆ. ಬಹುಶಃ ಸಾ.ಶ.ಪೂ. 1512ರಲ್ಲಿ, ಸೀನಾಯಿ ಅರಣ್ಯದಲ್ಲಿ ಪ್ರವಾದಿಯಾದ ಮೋಶೆಯಿಂದ ಬರೆಯಲ್ಪಟ್ಟಿರುವ ಈ ಪುಸ್ತಕವು, ಒಂದು ಚಾಂದ್ರಮಾನ ತಿಂಗಳಿಗಿಂತಲೂ ಕಡಿಮೆ ಸಮಯವನ್ನು ಆವರಿಸುತ್ತದೆ. (ವಿಮೋಚನಕಾಂಡ 40:17; ಅರಣ್ಯಕಾಂಡ 1:1-3) ತನ್ನ ಆರಾಧಕರು ಪವಿತ್ರರಾಗಿರುವಂತೆ ಯೆಹೋವನು ಪದೇಪದೇ ಪ್ರಚೋದಿಸುತ್ತಾನೆ.—ಯಾಜಕಕಾಂಡ 11:44; 19:2; 20:7, 26.
ಇಂದು ಯೆಹೋವನ ಸಾಕ್ಷಿಗಳು, ಮೋಶೆಯ ಮುಖಾಂತರ ದೇವರು ಕೊಟ್ಟಿರುವ ಧರ್ಮಶಾಸ್ತ್ರದ ಕೆಳಗಿರುವುದಿಲ್ಲ. ಯಾಕಂದರೆ ಯೇಸು ಕ್ರಿಸ್ತನ ಮರಣವು ಆ ಧರ್ಮಶಾಸ್ತ್ರವನ್ನು ರದ್ದುಗೊಳಿಸಿತು. (ರೋಮಾಪುರ 6:14; ಎಫೆಸ 2:11-16) ಹಾಗಿದ್ದರೂ, ಯಾಜಕಕಾಂಡದಲ್ಲಿ ಕಂಡುಬರುವ ನಿಬಂಧನೆಗಳು ನಮಗೆ ಪ್ರಯೋಜನದಾಯಕವಾಗಿದ್ದು, ನಮ್ಮ ದೇವರಾದ ಯೆಹೋವನ ಆರಾಧನೆಯ ಬಗ್ಗೆ ಬಹಳಷ್ಟನ್ನು ಕಲಿಸಬಲ್ಲದು.
ಪವಿತ್ರ ಹೋಮದ್ರವ್ಯಗಳು —ಸ್ವಯಂಪ್ರೇರಿತ ಮತ್ತು ಕಡ್ಡಾಯ
ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿದ್ದ ಹೋಮದ್ರವ್ಯಗಳು ಮತ್ತು ಯಜ್ಞಗಳಲ್ಲಿ ಕೆಲವು ಸ್ವಯಂಪ್ರೇರಿತವಾಗಿದ್ದವು ಮತ್ತು ಇನ್ನೂ ಕೆಲವು ಕಡ್ಡಾಯವಾಗಿದ್ದವು. ಉದಾಹರಣೆಗೆ, ಸರ್ವಾಂಗಹೋಮವು ಸ್ವಯಂಪ್ರೇರಿತವಾಗಿತ್ತು. ಅದನ್ನು ಪೂರ್ಣವಾಗಿ ದೇವರಿಗೆ ಅರ್ಪಿಸಲಾಗುತ್ತಿತ್ತು. ಯೇಸು ಕ್ರಿಸ್ತನು ಸಹ ಹಾಗೆಯೇ ಒಂದು ಈಡು ಯಜ್ಞವಾಗಿ ತನ್ನನ್ನು ಸಿದ್ಧಮನಸ್ಸಿನಿಂದ ಮತ್ತು ಪೂರ್ಣವಾಗಿ ಕೊಟ್ಟುಬಿಟ್ಟನು. ಸ್ವಯಂಪ್ರೇರಿತವಾಗಿದ್ದ ಸಮಾಧಾನಯಜ್ಞವನ್ನಾದರೊ [“ಸಹಭಾಗಿ ಯಜ್ಞ,” NW] ಹಂಚಲಾಗುತ್ತಿತ್ತು. ಅದರ ಒಂದು ಭಾಗವನ್ನು ವೇದಿಯ ಮೇಲೆ ದೇವರಿಗೆ ಅರ್ಪಿಸಲಾಗುತ್ತಿತ್ತು, ಇನ್ನೊಂದು ಭಾಗವನ್ನು ಯಾಜಕನು ತಿನ್ನುತ್ತಿದ್ದನು ಹಾಗೂ ಮತ್ತೊಂದು ಭಾಗವನ್ನು ಅರ್ಪಿಸುವವನು ತಿನ್ನುತ್ತಿದ್ದನು. ಅದೇ ರೀತಿಯಲ್ಲಿ ಅಭಿಷಿಕ್ತ ಕ್ರೈಸ್ತರಿಗೆ ಕ್ರಿಸ್ತನ ಮರಣದ ಜ್ಞಾಪಕಾಚರಣೆಯು ಒಂದು ಸಹಭಾಗಿ ಭೋಜನವಾಗಿದೆ.—1 ಕೊರಿಂಥ 10:16-22.
ದೋಷಪರಿಹಾರಕಯಜ್ಞಗಳು ಮತ್ತು ಪ್ರಾಯಶ್ಚಿತ್ತಯಜ್ಞಗಳು ಕಡ್ಡಾಯವಾಗಿದ್ದವು. ದೋಷಪರಿಹಾರಕಯಜ್ಞವು, ಅರಿವಿಲ್ಲದೆ ಇಲ್ಲವೆ ತಿಳಿಯದೆ ಮಾಡಲ್ಪಟ್ಟ ಪಾಪಗಳಿಗಾಗಿ ಪರಿಹಾರಕೊಡುತ್ತಿತ್ತು. ಒಬ್ಬನು ಇನ್ನೊಬ್ಬ ವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಿದ್ದಲ್ಲಿ ಪ್ರಾಯಶ್ಚಿತ್ತಯಜ್ಞವು ದೇವರನ್ನು ಸಮಾಧಾನಪಡಿಸುತ್ತಿತ್ತು ಇಲ್ಲವೆ ಅದು ಪಶ್ಚಾತ್ತಾಪಪಟ್ಟಿರುವ ತಪ್ಪಿತಸ್ಥನೊಬ್ಬನಿಗೆ ಕೆಲವೊಂದು ಹಕ್ಕುಗಳನ್ನು ಪುನಃಸ್ಸ್ಥಾಪಿಸುತ್ತಿತ್ತು, ಅಥವಾ ಈ ಎರಡೂ ಕಾರ್ಯಗಳನ್ನು ಸಾಧಿಸುತ್ತಿತ್ತು. ಯೆಹೋವನ ಸಮೃದ್ಧ ಒದಗಿಸುವಿಕೆಗಳಿಗಾಗಿ ಗಣ್ಯತೆಯಿಂದ ಮಾಡಲಾಗುತ್ತಿದ್ದ ಧಾನ್ಯನೈವೇದ್ಯಗಳೂ ಇದ್ದವು. ಈ ಎಲ್ಲಾ ವಿಷಯಗಳು ನಮಗೆ ಆಸಕ್ತಿದಾಯಕವಾಗಿವೆ, ಯಾಕಂದರೆ ಧರ್ಮಶಾಸ್ತ್ರದಲ್ಲಿ ಆಜ್ಞಾಪಿಸಲಾಗಿರುವ ಯಜ್ಞಗಳು ಯೇಸು ಕ್ರಿಸ್ತನಿಗೂ ಅವನ ಯಜ್ಞಕ್ಕೂ, ಇಲ್ಲವೆ ಅದರಿಂದ ಬರುವ ಪ್ರಯೋಜನಗಳಿಗೆ ಮುನ್ಸೂಚಿಸಿದವು.—ಇಬ್ರಿಯ 8:3-6; 9:9-14; 10:5-10.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
2:11 [ಸತ್ಯವೇದವು Reference Edition ಪಾದಟಿಪ್ಪಣಿ ನೋಡಿ], 12—“ಹೋಮ”ವಾಗಿ ಅರ್ಪಿಸುವ ಜೇನು ಯೆಹೋವನಿಗೆ ಏಕೆ ಸ್ವೀಕಾರಯೋಗ್ಯವಾಗಿರಲಿಲ್ಲ? ಇಲ್ಲಿ ತಿಳಿಸಲ್ಪಟ್ಟಿರುವ ಜೇನು, ಜೇನುನೊಣಗಳ ಜೇನಿಗೆ ಸೂಚಿಸುತ್ತಿಲ್ಲ. ಅದನ್ನು “ಹೋಮ”ಮಾಡಬಾರದಾಗಿದ್ದರೂ, ಅದನ್ನು ‘ಹುಟ್ಟುವಳಿಯ ಪ್ರಥಮಫಲ’ಗಳಲ್ಲಿ ಸೇರಿಸಲಾಗಿತ್ತು. (2 ಪೂರ್ವಕಾಲವೃತ್ತಾಂತ 31:5) ಈ ಜೇನು, ಹಣ್ಣುಗಳ ರಸ ಇಲ್ಲವೆ ಷರಬತ್ತು ಆಗಿದ್ದಿರಬಹುದು. ಅದು ಹುಳಿಹಿಡಿಯುವ ಸಾಧ್ಯತೆಯಿದ್ದುದರಿಂದ, ಅದನ್ನು ವೇದಿಯ ಮೇಲೆ ಅರ್ಪಿಸುವುದು ಸ್ವೀಕಾರಯೋಗ್ಯವಾಗಿರಲಿಲ್ಲ.
2:13—“ಎಲ್ಲಾ ನೈವೇದ್ಯ”ಗಳಿಗೆ ಉಪ್ಪನ್ನು ಏಕೆ ಸೇರಿಸಬೇಕಾಗಿತ್ತು? ಯಜ್ಞಗಳ ಸ್ವಾದವನ್ನು ಹೆಚ್ಚಿಸಲಿಕ್ಕಾಗಿ ಇದನ್ನು ಮಾಡಲಾಗುತ್ತಿರಲಿಲ್ಲ. ಭೂಸುತ್ತಲೂ ಉಪ್ಪನ್ನು, ಆಹಾರಸಂರಕ್ಷಣೆಗಾಗಿ ಉಪಯೋಗಿಸಲಾಗುತ್ತದೆ. ಅದು ಕೊಳೆಯುವಿಕೆ ಹಾಗೂ ಹಾಳಾಗುವಿಕೆಯಿಂದ ಮುಕ್ತಿಯನ್ನು ಪ್ರತಿನಿಧಿಸುವುದರಿಂದ, ನೈವೇದ್ಯಗಳೊಂದಿಗೆ ಅರ್ಪಿಸಲಾಗುತ್ತಿತ್ತೆಂದು ವ್ಯಕ್ತವಾಗುತ್ತದೆ.
ನಮಗಾಗಿರುವ ಪಾಠಗಳು:
3:17. ಕೊಬ್ಬನ್ನು ಅತ್ಯುತ್ತಮ ಇಲ್ಲವೆ ಅತ್ಯಂತ ರುಚಿಕರವಾದ ಭಾಗವಾಗಿ ಎಣಿಸಲಾಗುತ್ತಿದ್ದುದರಿಂದ, ಅದನ್ನು ತಿನ್ನುವುದರ ಕುರಿತಾದ ನಿಷೇಧವು, ಅತ್ಯುತ್ತಮವಾದ ಭಾಗವು ಯೆಹೋವನಿಗೆ ಸೇರಿದಂಥದ್ದಾಗಿದೆ ಎಂಬ ವಿಷಯವನ್ನು ಇಸ್ರಾಯೇಲ್ಯರ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿಸಿರಬೇಕೆಂದು ವ್ಯಕ್ತವಾಗುತ್ತದೆ. (ಆದಿಕಾಂಡ 45:18) ನಾವು ಯೆಹೋವನಿಗೆ ನಮ್ಮ ಸರ್ವೋತ್ತಮವಾದುದ್ದನ್ನು ಕೊಡಬೇಕೆಂಬುದನ್ನು ಇದು ನಮಗೆ ಜ್ಞಾಪಕಹುಟ್ಟಿಸುತ್ತದೆ.—ಜ್ಞಾನೋಕ್ತಿ 3:9, 10; ಕೊಲೊಸ್ಸೆ 3:23, 24.
7:26, 27. ಇಸ್ರಾಯೇಲ್ಯರು ರಕ್ತವನ್ನು ತಿನ್ನಬಾರದಾಗಿತ್ತು. ದೇವರ ದೃಷ್ಟಿಕೋನದಲ್ಲಿ, ರಕ್ತವು ಜೀವವನ್ನು ಪ್ರತಿನಿಧಿಸುತ್ತಿತ್ತು. “ರಕ್ತವೇ ಪ್ರಾಣಾಧಾರ” ಎಂದು ಯಾಜಕಕಾಂಡ 17:11 ತಿಳಿಸುತ್ತದೆ. ರಕ್ತದಿಂದ ದೂರವಿರುವುದು, ಇಂದಿನ ಸತ್ಯಾರಾಧಕರಿಗಾಗಿಯೂ ಒಂದು ಮಟ್ಟವಾಗಿರುತ್ತದೆ.—ಅ. ಕೃತ್ಯಗಳು 15:28, 29.
ಪವಿತ್ರ ಯಾಜಕತ್ವವನ್ನು ಸ್ಥಾಪಿಸಲಾಗುತ್ತದೆ
ಯಜ್ಞಗಳು ಮತ್ತು ಹೋಮದ್ರವ್ಯಗಳಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವ ಜವಾಬ್ದಾರಿಯನ್ನು ಯಾರಿಗೆ ಕೊಡಲಾಗಿತ್ತು? ಯಾಜಕರಿಗೆ ವಹಿಸಲಾಗಿತ್ತು. ದೇವರ ನಿರ್ದೇಶನದ ಮೇರೆಗೆ ಮೋಶೆಯು, ಮಹಾ ಯಾಜಕನಾಗಲಿದ್ದ ಆರೋನ ಮತ್ತು ಉಪಯಾಜಕರಾಗಲಿದ್ದ ಅವನ ನಾಲ್ಕು ಮಂದಿ ಪುತ್ರರಿಗಾಗಿ ಒಂದು ಪ್ರತಿಷ್ಠಾಪನೆಯ ಸಮಾರಂಭವನ್ನು ನಡೆಸಿದನು. ಮರುದಿನದಿಂದ ಯಾಜಕತ್ವವು ಕೆಲಸಮಾಡಲಾರಂಭಿಸಿತು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
9:9—ಯಜ್ಞವೇದಿಯ ಬುಡದಲ್ಲಿ ರಕ್ತವನ್ನು ಹೊಯಿದುಬಿಡುವ ಮತ್ತು ಅದನ್ನು ಬೇರೆಬೇರೆ ವಸ್ತುಗಳ ಮೇಲೆ ಹಾಕುವುದರ ಮಹತ್ವಾರ್ಥವೇನು? ಪ್ರಾಯಶ್ಚಿತ್ತದ ಉದ್ದೇಶಗಳಿಗಾಗಿ ಯೆಹೋವನು ರಕ್ತವನ್ನು ಸ್ವೀಕರಿಸುತ್ತಾನೆಂಬುದನ್ನು ಇದು ಪ್ರದರ್ಶಿಸಿತು. ಇಡೀ ಪ್ರಾಯಶ್ಚಿತ್ತ ಏರ್ಪಾಡನ್ನು ರಕ್ತದ ಮೇಲೆ ಆಧಾರಿಸಲಾಗಿತ್ತು. ಅಪೊಸ್ತಲ ಪೌಲನು ಬರೆದುದು: “ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ.”—ಇಬ್ರಿಯ 9:22.
10:1, 2—ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹುವಿನ ಪಾಪದಲ್ಲಿ ಏನು ಒಳಗೂಡಿದ್ದಿರಬಹುದು? ನಾದಾಬ್ ಮತ್ತು ಅಬೀಹು ತಮ್ಮ ಯಾಜಕೀಯ ಕರ್ತವ್ಯಗಳ ವಿಷಯದಲ್ಲಿ ಸ್ವೇಚ್ಛೆಯಿಂದ ನಡೆದುಕೊಂಡ ಸ್ವಲ್ಪಸಮಯದ ನಂತರವೇ, ದೇವಗುಡಾರದಲ್ಲಿ ಸೇವೆಮಾಡುತ್ತಿರುವಾಗ ಯಾಜಕರು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದನ್ನು ಯೆಹೋವನು ನಿಷೇಧಿಸಿದನು. (ಯಾಜಕಕಾಂಡ 10:8) ಇದು, ಆರೋನನ ಇಬ್ಬರು ಪುತ್ರರು ಇಲ್ಲಿ ವರ್ಣಿಸಲ್ಪಟ್ಟಿರುವ ಸಂದರ್ಭದಲ್ಲಿ ಮಧ್ಯದ ಪ್ರಭಾವದಡಿ ಇದ್ದರೆಂಬುದನ್ನು ಸೂಚಿಸುತ್ತದೆ. ಆದರೆ ಅವರ ಮರಣದ ನಿಜ ಕಾರಣವು, ಅವರು ‘ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಅದರ ಮೇಲೆ ಧೂಪದ್ರವ್ಯವನ್ನು ಹಾಕಿ ಆತನ ಸನ್ನಿಧಿಯಲ್ಲಿ ಸಮರ್ಪಿಸಿದ್ದು’ ಆಗಿತ್ತು.
ನಮಗಾಗಿರುವ ಪಾಠಗಳು:
10:1, 2. ಇಂದಿರುವ ಯೆಹೋವನ ಜವಾಬ್ದಾರಿಯುತ ಸೇವಕರು ದೈವಿಕ ಆವಶ್ಯಕತೆಗಳನ್ನು ಪೂರೈಸಬೇಕು. ಅಷ್ಟುಮಾತ್ರವಲ್ಲದೆ, ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಿರುವಾಗ ದುರಹಂಕಾರಿಗಳಾಗಿರಬಾರದು.
10:8. ಮದ್ಯ ಪಾನೀಯಗಳ ಪ್ರಭಾವದ ಕೆಳಗಿರುವಾಗ, ನಾವು ದೇವದತ್ತ ಕರ್ತವ್ಯಗಳನ್ನು ನಿರ್ವಹಿಸಬಾರದು.
ಪವಿತ್ರಾರಾಧನೆಯು ಶುದ್ಧತೆಯನ್ನು ಅವಶ್ಯಪಡಿಸುತ್ತದೆ
ಶುದ್ಧ ಹಾಗೂ ಅಶುದ್ಧ ಪ್ರಾಣಿಗಳ ಕುರಿತಾದ ಆಹಾರದ ನಿಬಂಧನೆಗಳು ಇಸ್ರಾಯೇಲ್ಯರಿಗೆ ಎರಡು ವಿಧಗಳಲ್ಲಿ ಪ್ರಯೋಜನ ತಂದವು. ಈ ನಿಬಂಧನೆಗಳು ಹಾನಿಕಾರಕ ಜಂತುಗಳಿಂದ ಸೋಂಕಿತರಾಗುವುದರಿಂದ ಅವರನ್ನು ಸಂರಕ್ಷಿಸಿತು ಮತ್ತು ಅವರ ಹಾಗೂ ಅವರ ಸುತ್ತಲಿನ ಜನಾಂಗಗಳ ನಡುವಿನ ಅಡ್ಡಗಟ್ಟನ್ನು ಬಲಪಡಿಸಿತು. ಇನ್ನಿತರ ನಿಬಂಧನೆಗಳು, ಹೆಣಗಳಿಂದ ಅಶುದ್ಧರಾಗುವುದು, ಹೆರಿಗೆಯಾದ ಸ್ತ್ರೀಯರ ಶುದ್ಧೀಕರಣ, ಕುಷ್ಠರೋಗಕ್ಕೆ ಸಂಬಂಧಿತ ಕ್ರಿಯಾವಿಧಾನಗಳು, ಮತ್ತು ಗಂಡುಹೆಣ್ಣಿನ ಲೈಂಗಿಕ ಸ್ರಾವದಿಂದ ಪರಿಣಮಿಸುವ ಅಶುದ್ಧತೆಗೆ ಸಂಬಂಧಪಟ್ಟದ್ದಾಗಿದ್ದವು. ಅಶುದ್ಧರಾಗಿದ್ದಂಥ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವುದು ಯಾಜಕರ ಕೆಲಸವಾಗಿತ್ತು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
12:2, 5—ಮಗುವನ್ನು ಹೆರುವುದು ಒಬ್ಬ ಸ್ತ್ರೀಯನ್ನು ಏಕೆ ‘ಅಶುದ್ಧಳನ್ನಾಗಿ’ ಮಾಡುತ್ತಿತ್ತು? ಸಂತಾನೋತ್ಪತ್ತಿಯ ಅಂಗಾಂಗಗಳನ್ನು ಪರಿಪೂರ್ಣ ಮಾನವ ಜೀವವನ್ನು ದಾಟಿಸಲಿಕ್ಕಾಗಿ ನಿರ್ಮಿಸಲಾಗಿತ್ತು. ಆದರೆ ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮಗಳಿಂದಾಗಿ, ಅಪರಿಪೂರ್ಣ ಮತ್ತು ಪಾಪಪೂರ್ಣವಾದ ಜೀವವನ್ನು ಮಗುವಿಗೆ ದಾಟಿಸಲಾಗುತ್ತಿತ್ತು. ಹೆರಿಗೆ, ಹಾಗೂ ಮುಟ್ಟು ಮತ್ತು ವೀರ್ಯಸ್ಖಲನದಂಥ ಇತರ ವಿಷಯಗಳು ಬರಮಾಡುತ್ತಿದ್ದ ‘ಅಶುದ್ಧತೆಯ’ ತಾತ್ಕಾಲಿಕ ಅವಧಿಗಳು, ಪಿತ್ರಾರ್ಜಿತವಾಗಿ ಬಂದಿರುವ ಪಾಪಪೂರ್ಣತೆಯನ್ನು ಮನಸ್ಸಿಗೆ ತರುತ್ತಿದ್ದವು. (ಯಾಜಕಕಾಂಡ 15:16-24; ಕೀರ್ತನೆ 51:5; ರೋಮಾಪುರ 5:12) ಶುದ್ಧೀಕರಣಕ್ಕಾಗಿ ಪೂರೈಸಲ್ಪಡಬೇಕಾಗಿದ್ದ ನಿಬಂಧನೆಗಳು, ಮಾನವಕುಲದ ಪಾಪಪೂರ್ಣತೆಯನ್ನು ಮುಚ್ಚಲು ಮತ್ತು ಮಾನವ ಪರಿಪೂರ್ಣತೆಯನ್ನು ಪುನಸ್ಸ್ಥಾಪಿಸಲು ಒಂದು ಈಡು ಯಜ್ಞದ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇಸ್ರಾಯೇಲ್ಯರಿಗೆ ಸಹಾಯಮಾಡಿತು. ಈ ರೀತಿಯಲ್ಲಿ ಈ ಧರ್ಮಶಾಸ್ತ್ರವು ಅವರನ್ನು ‘ಕ್ರಿಸ್ತನಿಗೆ ಸೇರುವ ತನಕ ಕಾಯುವ ಆಳು’ ಆಗಿತ್ತು.—ಗಲಾತ್ಯ 3:24.
15:16-18—ಈ ವಚನಗಳಲ್ಲಿ ತಿಳಿಸಲ್ಪಟ್ಟಿರುವ “ವೀರ್ಯಸ್ಖಲನ” ಏನಾಗಿದೆ? ಇದು ರಾತ್ರಿಸಮಯದಲ್ಲಿನ ವಿಸರ್ಜನೆ ಹಾಗೂ ವೈವಾಹಿಕ ಲೈಂಗಿಕ ಸಂಬಂಧಕ್ಕೆ ಸೂಚಿಸುತ್ತದೆಂದು ತೋರುತ್ತದೆ.
ನಮಗಾಗಿರುವ ಪಾಠಗಳು:
11:45. ಯೆಹೋವ ದೇವರು ಪರಿಶುದ್ಧನಾಗಿದ್ದಾನೆ ಮತ್ತು ಆತನಿಗೆ ಪವಿತ್ರಸೇವೆ ಸಲ್ಲಿಸುವವರು ಪರಿಶುದ್ಧರಾಗಿರಬೇಕು. ಅವರು ಪರಿಶುದ್ಧತೆಯನ್ನು ಬೆನ್ನಟ್ಟಬೇಕು ಮತ್ತು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಸ್ವಚ್ಛರಾಗಿರಬೇಕು.—2 ಕೊರಿಂಥ 7:1; 1 ಪೇತ್ರ 1:15, 16.
12:8. ಯಜ್ಞಕ್ಕಾಗಿ ಬಡವರು ಹೆಚ್ಚು ವೆಚ್ಚದ ಕುರಿಯನ್ನು ಕೊಡುವ ಬದಲಿಗೆ ಪಕ್ಷಿಗಳನ್ನು ಅರ್ಪಿಸುವಂತೆ ಯೆಹೋವನು ಅನುಮತಿಸಿದನು. ಆತನು ಬಡವರ ವಿಷಯದಲ್ಲಿ ಪರಿಗಣನೆಯನ್ನು ತೋರಿಸುತ್ತಾನೆ.
ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕು
ಪಾಪಗಳಿಗಾಗಿ ಅತ್ಯಂತ ಪ್ರಾಮುಖ್ಯ ಯಜ್ಞಗಳನ್ನು, ವಾರ್ಷಿಕ ದೋಷಪರಿಹಾರಕ ದಿನದಂದು ಅರ್ಪಿಸಲಾಗುತ್ತಿತ್ತು. ಯಾಜಕರಿಗಾಗಿ ಮತ್ತು ಲೇವಿ ಗೋತ್ರಕ್ಕಾಗಿ ಒಂದು ಹೋರಿಯನ್ನು ಅರ್ಪಿಸಲಾಗುತ್ತಿತ್ತು. ಇಸ್ರಾಯೇಲಿನ ಯಾಜಕರಲ್ಲದ ಗೋತ್ರಗಳಿಗಾಗಿ ಒಂದು ಹೋತವನ್ನು ಬಲಿಕೊಡಲಾಗುತ್ತಿತ್ತು. ಇನ್ನೊಂದು ಹೋತವನ್ನು, ಅದರ ಮೇಲೆ ಜನರ ಪಾಪಗಳನ್ನು ಅರಿಕೆಮಾಡಿದ ನಂತರ, ಅರಣ್ಯದೊಳಕ್ಕೆ ಜೀವಂತವಾಗಿ ಕಳುಹಿಸಲಾಗುತ್ತಿತ್ತು. ಈ ಎರಡು ಹೋತಗಳನ್ನು ಒಂದೇ ದೋಷಪರಿಹಾರಕಯಜ್ಞವಾಗಿ ಪರಿಗಣಿಸಲಾಗುತ್ತಿತ್ತು. ಇದೆಲ್ಲವೂ, ಯೇಸು ಕ್ರಿಸ್ತನು ಯಜ್ಞವಾಗಿ ಅರ್ಪಿಸಲ್ಪಡುವನು ಮತ್ತು ಪಾಪಗಳನ್ನು ಹೊತ್ತುಕೊಂಡೂ ಹೋಗುವನೆಂಬ ವಾಸ್ತವಾಂಶದ ಕಡೆಗೆ ಕೈತೋರಿಸಿತು.
ಮಾಂಸವನ್ನು ತಿನ್ನುವುದರ ಮತ್ತು ಇತರ ವಿಷಯಗಳ ಕುರಿತಾದ ನಿಬಂಧನೆಗಳು, ನಾವು ಯೆಹೋವನನ್ನು ಆರಾಧಿಸುವಾಗ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವುದರ ಅಗತ್ಯವನ್ನು ಒತ್ತಿಹೇಳುತ್ತದೆ. ಯಥೋಚಿತವಾಗಿಯೇ, ಯಾಜಕರು ತಮ್ಮನ್ನು ಪರಿಶುದ್ಧರಾಗಿರಿಸಿಕೊಳ್ಳಬೇಕಾಗಿತ್ತು. ಮೂರು ವಾರ್ಷಿಕ ಹಬ್ಬಗಳು, ಮಹಾ ಉಲ್ಲಾಸದ ಹಾಗೂ ಸೃಷ್ಟಿಕರ್ತನಿಗೆ ಉಪಕಾರ ಸಲ್ಲಿಸುವ ಸಂದರ್ಭಗಳಾಗಿದ್ದವು. ತನ್ನ ಪವಿತ್ರ ನಾಮದ ಅಪಪ್ರಯೋಗ, ಸಬ್ಬತ್ತ್ದಿನಗಳು ಮತ್ತು ಜೂಬಿಲಿಯ ಆಚರಣೆ, ಬಡವರ ಕಡೆಗಿನ ನಡತೆ, ಮತ್ತು ಆಳುಗಳ ಉಪಚಾರದ ಬಗ್ಗೆಯೂ ಯೆಹೋವನು ತನ್ನ ಜನರಿಗೆ ನಿಬಂಧನೆಗಳನ್ನು ಕೊಟ್ಟನು. ದೇವರಿಗೆ ವಿಧೇಯರಾಗುವುದರಿಂದ ಬರುವ ಆಶೀರ್ವಾದಗಳು ಮತ್ತು ಅವಿಧೇಯರಾಗುವುದರಿಂದ ಬರುವ ಶಾಪಗಳು ತಿಳಿಸಲ್ಪಟ್ಟವು. ಹರಕೆಗಳು ಮತ್ತು ಕೊಡಬೇಕಾದ ಹಣ, ಪಶುಗಳ ಚೊಚ್ಚಲು ಮರಿಗಳು, ಮತ್ತು ಎಲ್ಲವುಗಳಲ್ಲಿ ‘ಯೆಹೋವನಿಗೆ ಮೀಸಲಾಗಿರುವ’ ದಶಮಾಂಶವನ್ನು ಕೊಡುವುದಕ್ಕೆ ಸಂಬಂಧಿಸಿದ ನೈವೇದ್ಯಗಳ ಕುರಿತಾಗಿಯೂ ನಿಬಂಧನೆಗಳಿದ್ದವು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
16:29—ಇಸ್ರಾಯೇಲ್ಯರು ಹೇಗೆ ‘ಪ್ರಾಣವನ್ನು ಕುಂದಿಸಿಕೊಳ್ಳಬೇಕಾಗಿತ್ತು?’ ದೋಷಪರಿಹಾರಕ ದಿನದಂದು ಅನುಸರಿಸಲಾಗುತ್ತಿದ್ದ ಈ ಕಾರ್ಯವಿಧಾನವು, ಪಾಪಗಳಿಗಾಗಿ ಕ್ಷಮೆಯನ್ನು ಪಡೆಯುವುದಕ್ಕೆ ಸಂಬಂಧಿಸಿತ್ತು. ಆ ಸಮಯದಲ್ಲಿ ಉಪವಾಸಮಾಡುವುದನ್ನು, ಪಾಪಪೂರ್ಣತೆಯ ಅಂಗೀಕಾರದೊಂದಿಗೆ ಜೋಡಿಸಲಾಗುತ್ತಿತ್ತೆಂಬುದು ವ್ಯಕ್ತವಾಗುತ್ತದೆ. ಹೀಗಿರುವುದರಿಂದ ‘ಪ್ರಾಣವನ್ನು ಕುಂದಿಸಿಕೊಳ್ಳುವುದು’ ಬಹುಮಟ್ಟಿಗೆ, ಉಪವಾಸಮಾಡುವುದಕ್ಕೆ ಸೂಚಿಸುತ್ತಿತ್ತು.
19:27—“ಚಂಡಿಕೆ ಬಿಡಬಾರದು, ಗಡ್ಡವನ್ನು ವಿಕಾರಗೊಳಿಸಬಾರದು” ಎಂಬ ಆಜ್ಞೆಯ ಅರ್ಥವೇನಾಗಿತ್ತು? ಯೆಹೂದ್ಯರು, ವಿಧರ್ಮಿಗಳ ನಿರ್ದಿಷ್ಟ ಆಚರಣೆಗಳನ್ನು ನಕಲುಮಾಡುವಂಥ ವಿಧದಲ್ಲಿ ತಮ್ಮ ಗಡ್ಡಗಳನ್ನು ಇಲ್ಲವೆ ಕೂದಲನ್ನು ಬಿಡುವುದರಿಂದ ತಡೆಯಲು ಈ ನಿಯಮವನ್ನು ಕೊಡಲಾಗಿತ್ತೆಂದು ತೋರುತ್ತದೆ. (ಯೆರೆಮೀಯ 9:25, 26; 25:23; 49:32) ಆದರೆ ಯೆಹೂದ್ಯರು ತಮ್ಮ ಗಡ್ಡಗಳನ್ನು ಇಲ್ಲವೆ ಮುಖದ ಮೇಲಿನ ಕೂದಲನ್ನು ಕತ್ತರಿಸಲೇಬಾರದೆಂಬುದನ್ನು ದೇವರ ಆಜ್ಞೆಯು ಅರ್ಥೈಸಲಿಲ್ಲ.—2 ಸಮುವೇಲ 19:24.
25:35-37—ಇಸ್ರಾಯೇಲ್ಯರು ಯಾವುದೇ ಸಂದರ್ಭದಲ್ಲಿ ಬಡ್ಡಿಹಣವನ್ನು ತೆಗೆದುಕೊಳ್ಳುವುದು ತಪ್ಪಾಗಿತ್ತೊ? ಹಣವನ್ನು ವ್ಯಾಪಾರದ ಉದ್ದೇಶಗಳಿಗಾಗಿ ಸಾಲಕೊಡಲಾಗುತ್ತಿದ್ದಲ್ಲಿ ಬಡ್ಡಿಯನ್ನು ಕೇಳಸಾಧ್ಯವಿತ್ತು. ಆದರೆ ಬಡತನವನ್ನು ನಿವಾರಿಸಲಿಕ್ಕಾಗಿ ಕೇಳಲಾಗುತ್ತಿದ್ದ ಸಾಲಗಳಿಗಾಗಿ ಬಡ್ಡಿ ಕೇಳುವುದನ್ನು ಧರ್ಮಶಾಸ್ತ್ರವು ನಿಷೇಧಿಸಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಗಾಲಾಗಿರುವ ನೆರೆಯವನ ಪರಿಸ್ಥಿತಿಯ ಲಾಭತೆಗೆದುಕೊಳ್ಳುವುದು ತಪ್ಪಾಗಿತ್ತು.—ವಿಮೋಚನಕಾಂಡ 22:25.
26:19—‘ಆಕಾಶವು ಕಬ್ಬಿಣದಂತೆಯೂ ಭೂಮಿಯು ತಾಮ್ರದಂತೆಯೂ’ ಆಗುವುದು ಹೇಗೆ? ಮಳೆಯ ಕೊರತೆಯಿಂದಾಗಿ ಕಾನಾನ್ ದೇಶದ ಮೇಲಣ ಆಕಾಶಗಳು ತೋರಿಕೆಯಲ್ಲಿ, ಗಟ್ಟಿಯಾದ ಮತ್ತು ರಂಧ್ರಗಳಿಲ್ಲದ ಕಬ್ಬಿಣದಂಥಾಗಲಿತ್ತು. ಮಳೆಯಿಲ್ಲದೆ ಭೂಮಿ ತಾಮ್ರಬಣ್ಣದ್ದು, ಲೋಹದಂತೆ ಉಜ್ವಲತೆಯುಳ್ಳದ್ದು ಆಗಿರಲಿತ್ತು.
26:26—‘ಹತ್ತು ಮಂದಿ ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಡುವುದರ’ ಅರ್ಥವೇನು? ಸಾಮಾನ್ಯವಾಗಿ ಪ್ರತಿಯೊಬ್ಬ ಹೆಂಗಸಿಗೆ, ತನ್ನ ಎಲ್ಲಾ ರೊಟ್ಟಿಸುಡುವಿಕೆಗಾಗಿ ಒಂದು ಪ್ರತ್ಯೇಕ ಒಲೆ ಬೇಕಾಗುತ್ತಿತ್ತು. ಆದರೆ ಆಹಾರದ ಅಭಾವವು ಎಷ್ಟೊಂದು ಇರುವುದೆಂದರೆ, ಹತ್ತುಮಂದಿ ಹೆಂಗಸರಿಗೆ ತಮ್ಮ ಎಲ್ಲಾ ರೊಟ್ಟಿಸುಡುವಿಕೆಗಾಗಿ ಒಂದೇ ಒಲೆ ಸಾಕಾಗುವುದೆಂಬುದನ್ನು ಈ ಮಾತುಗಳು ತೋರಿಸಿದವು. ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ತಪ್ಪಿಬೀಳುವುದಕ್ಕಾಗಿ ಮುಂತಿಳಿಸಲಾದಂಥ ಫಲಿತಾಂಶಗಳಲ್ಲಿ ಇದು ಒಂದಾಗಿತ್ತು.
ನಮಗಾಗಿರುವ ಪಾಠಗಳು:
20:9. ಒಂದು ದ್ವೇಷಭರಿತ ಹಾಗೂ ಕುತ್ಸಿತ ಮನೋಭಾವವು, ಯೆಹೋವನ ದೃಷ್ಟಿಯಲ್ಲಿ ಕೊಲೆಮಾಡುವುದಕ್ಕೆ ಸಮಾನವಾಗಿದೆ. ಆದುದರಿಂದಲೇ ಆತನು, ಒಬ್ಬನು ತನ್ನ ಹೆತ್ತವರನ್ನು ನಿಜವಾಗಿ ಕೊಲೆಗೈದರೆ ಅನುಭವಿಸಬೇಕಾದ ದಂಡನೆಯನ್ನೇ, ಹೆತ್ತವರನ್ನು ದೂಷಿಸುವವನಿಗಾಗಿಯೂ ವಿಧಿಸಿದನು. ಜೊತೆ ವಿಶ್ವಾಸಿಗಳಿಗಾಗಿ ಪ್ರೀತಿಯನ್ನು ತೋರಿಸುವಂತೆ ಇದು ನಮ್ಮನ್ನು ಪ್ರೇರಿಸಬೇಕಲ್ಲವೊ?—1 ಯೋಹಾನ 3:14, 15.
22:32; 24:10-16, 23. ಯೆಹೋವನ ಹೆಸರನ್ನು ಎಂದೂ ನಿಂದಿಸಬಾರದು. ಅದರ ಬದಲು, ನಾವಾತನ ಹೆಸರನ್ನು ಸ್ತುತಿಸಬೇಕು ಮತ್ತು ಅದರ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸಬೇಕು.—ಕೀರ್ತನೆ 7:17; ಮತ್ತಾಯ 6:9.
ಯಾಜಕಕಾಂಡವು ನಮ್ಮ ಆರಾಧನೆಯ ಮೇಲೆ ಪರಿಣಾಮಬೀರುವ ವಿಧ
ಇಂದು ಯೆಹೋವನ ಸಾಕ್ಷಿಗಳು ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವುದಿಲ್ಲ. (ಗಲಾತ್ಯ 3:23-25) ಆದರೆ ಯಾಜಕಕಾಂಡದಲ್ಲಿ ಏನನ್ನು ಹೇಳಲಾಗಿದೆಯೊ, ಅದು ವಿಭಿನ್ನ ವಿಷಯಗಳ ಕುರಿತು ಯೆಹೋವನ ದೃಷ್ಟಿಕೋನವೇನೆಂಬುದರ ಬಗ್ಗೆ ನಮಗೆ ಒಳನೋಟವನ್ನು ಕೊಡುವುದರಿಂದ, ಅದು ನಮ್ಮ ಆರಾಧನೆಯ ಮೇಲೆ ಪರಿಣಾಮಬೀರಬಲ್ಲದು.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿ ತಯಾರಿಯಲ್ಲಿ ನೀವು ವಾರದ ಬೈಬಲ್ ವಾಚನವನ್ನು ಮಾಡುತ್ತಿರುವಾಗ, ದೇವರು ತನ್ನ ಸೇವಕರಿಂದ ಪರಿಶುದ್ಧತೆಯನ್ನು ಅಪೇಕ್ಷಿಸುತ್ತಾನೆಂಬ ವಾಸ್ತವಾಂಶವು ನಿಸ್ಸಂದೇಹವಾಗಿ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುವುದು. ಈ ಬೈಬಲ್ ಪುಸ್ತಕವು, ನೀವು ಪರಮೋನ್ನತನಿಗೆ ನಿಮ್ಮ ಉತ್ತಮೋತ್ತಮವಾದದ್ದನ್ನು ಕೊಡುತ್ತಾ, ಆತನಿಗೆ ಸ್ತುತಿಯನ್ನು ತರುವ ಪರಿಶುದ್ಧತೆಯನ್ನು ಯಾವಾಗಲೂ ಕಾಪಾಡಿಕೊಳ್ಳುವಂತೆಯೂ ನಿಮ್ಮನ್ನು ಪ್ರಚೋದಿಸಬಲ್ಲದು.
[ಪುಟ 21ರಲ್ಲಿರುವ ಚಿತ್ರ]
ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುತ್ತಿದ್ದ ಯಜ್ಞಗಳು, ಯೇಸು ಕ್ರಿಸ್ತನಿಗೂ ಆತನ ಯಜ್ಞದೆಡೆಗೂ ಕೈತೋರಿಸಿದವು
[ಪುಟ 22ರಲ್ಲಿರುವ ಚಿತ್ರ]
ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯು ಅಪಾರ ಆನಂದದ ಸಂದರ್ಭವಾಗಿತ್ತು
[ಪುಟ 23ರಲ್ಲಿರುವ ಚಿತ್ರ]
ಪರ್ಣಶಾಲೆಗಳ ಜಾತ್ರೆಯಂಥ ವಾರ್ಷಿಕ ಉತ್ಸವಗಳು, ಯೆಹೋವನಿಗೆ ಉಪಕಾರಸಲ್ಲಿಸುವ ಸಂದರ್ಭಗಳಾಗಿದ್ದವು