ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಜನವರಿ 4-10
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 18-19
“ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ”
ಕಾವಲಿನಬುರುಜು19.06 ಪುಟ 27 ಪ್ಯಾರ 10
ಸೈತಾನ ತೋಡಿರುವ ಗುಂಡಿಗೆ ಬೀಳಬೇಡಿ
ಇಸ್ರಾಯೇಲ್ಯರ ಸುತ್ತಮುತ್ತ ಇದ್ದ ಜನಾಂಗದವರು ಯಾವ ಯಾವ ಅನೈತಿಕ ವಿಷಯಗಳನ್ನು ಮಾಡುತ್ತಾರೆ ಅಂತ ತಿಳಿಸಿದ ನಂತರ ಯೆಹೋವನು ಹೇಳಿದ್ದು: ‘ನಾನು ನಿಮ್ಮನ್ನು ಬರಮಾಡುವ ಕಾನಾನ್ ದೇಶದ ಆಚರಣೆಗಳನ್ನು ನೀವು ಅನುಸರಿಸಬಾರದು. ಅವರ ದೇಶವು ಅಶುದ್ಧವಾಗಿ ಹೋದದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ.’ ಕಾನಾನ್ಯರ ಕೆಟ್ಟ ಜೀವನರೀತಿಯನ್ನು ಪರಿಶುದ್ಧನಾಗಿರುವ ಯೆಹೋವನು ಎಷ್ಟು ದ್ವೇಷಿಸಿದನೆಂದರೆ ಅವರು ವಾಸಿಸುತ್ತಿದ್ದ ಪ್ರದೇಶವನ್ನು ಕೂಡ ಅಶುದ್ಧ ಅಂತ ಹೇಳಿದನು.—ಯಾಜ. 18:3, 25.
ಕಾವಲಿನಬುರುಜು17.02 ಪುಟ 20 ಪ್ಯಾರ 13
ಯೆಹೋವನು ತನ್ನ ಜನರನ್ನು ನಡಿಸುತ್ತಾನೆ
13 ಬೇರೆ ಜನಾಂಗಗಳ ನಾಯಕರಿಗೆ ದೇವರ ವಾಕ್ಯದ ಮಾರ್ಗದರ್ಶನ ಇರಲಿಲ್ಲ, ಮಾನವ ಜ್ಞಾನ ಮಾತ್ರ ಇತ್ತು. ಕಾನಾನಿನ ನಾಯಕರು ಮತ್ತು ಜನರು ಘೋರವಾದ ವಿಷಯಗಳನ್ನು ಮಾಡುತ್ತಿದ್ದರು. ನಿಷಿದ್ಧವಾದ ರಕ್ತಸಂಬಂಧಿಗಳೊಡನೆ ಮದುವೆ ಮಾಡಿಕೊಳ್ಳುತ್ತಿದ್ದರು, ಸಲಿಂಗಕಾಮ ಇತ್ತು, ಪಶು ಮತ್ತು ಮನುಷ್ಯನ ಸಂಭೋಗ ನಡೆಯುತ್ತಿತ್ತು, ಮಕ್ಕಳನ್ನು ಬಲಿ ಕೊಡುತ್ತಿದ್ದರು ಮತ್ತು ವಿಗ್ರಹಾರಾಧನೆ ಇತ್ತು. (ಯಾಜ. 18:6, 21-25) ಶುದ್ಧತೆಯ ವಿಷಯದಲ್ಲಿ ದೇವರು ಇಸ್ರಾಯೇಲ್ಯರಿಗೆ ಕೆಲವು ನಿಯಮಗಳನ್ನು ಕೊಟ್ಟಿದ್ದನು. ಇಂಥ ನಿಯಮಗಳು ಬಾಬೆಲಿನ ಮತ್ತು ಐಗುಪ್ತದ ನಾಯಕರಿಗೆ ಇರಲಿಲ್ಲ. (ಅರ. 19:13) ಆದರೆ ಇಸ್ರಾಯೇಲಿನ ನಾಯಕರು ತಮ್ಮ ಜನರಿಗೆ ಆರಾಧನೆಯನ್ನು ಶುದ್ಧವಾಗಿಡುವಂತೆ, ಶಾರೀರಿಕವಾಗಿ ಶುದ್ಧವಾಗಿರುವಂತೆ ಮತ್ತು ಲೈಂಗಿಕ ಅಶುದ್ಧತೆಯಿಂದ ದೂರವಿರುವಂತೆ ಹೇಳುತ್ತಿದ್ದರು. ಯೆಹೋವನೇ ಈ ಎಲ್ಲಾ ನಿರ್ದೇಶನಗಳನ್ನು ಕೊಡುತ್ತಿದ್ದನು ಎಂಬುದು ಸ್ಪಷ್ಟ.
ಕಾವಲಿನಬುರುಜು14 10/1 ಪುಟ 7 ಪ್ಯಾರ 2
ಕಷ್ಟಗಳನ್ನು ದೇವರು ಹೇಗೆ ತೆಗೆದುಹಾಕುತ್ತಾನೆ?
ಕೆಟ್ಟತನವನ್ನು ಮಾಡುತ್ತಲೇ ಮುಂದುವರಿಯುವ ಮತ್ತು ಬದಲಾಗಲು ಒಪ್ಪದ ಅವಿಧೇಯ ಜನರಿಗೆ ಏನಾಗುವುದು? “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು” ಎಂಬ ಆಶ್ವಾಸನೆಯನ್ನು ಬೈಬಲ್ ಕೊಡುತ್ತದೆ. (ಜ್ಞಾನೋಕ್ತಿ 2:21, 22) ಕೆಡುಕರೇ ಇಲ್ಲದ ನಿರಾತಂಕ ವಾತಾವರಣದಲ್ಲಿ ವಿಧೇಯ ಮಾನವರಲ್ಲಿರುವ ಪಾಪಪ್ರವೃತ್ತಿ ಕ್ರಮೇಣ ಇಲ್ಲವಾಗುವುದು.—ರೋಮನ್ನರಿಗೆ 6:17, 18; 8:21.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು06 7/1 ಪುಟ 14 ಪ್ಯಾರ 11
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ”
11 ತನ್ನ ಜನರ ವಿಷಯದಲ್ಲಿ ದೇವರಿಗಿರುವ ಹಿತಚಿಂತನೆಯನ್ನು ತೋರಿಸಿದ ಮೋಶೆಯ ಧರ್ಮಶಾಸ್ತ್ರದ ಎರಡನೆಯ ಅಂಶವು ಹಕ್ಕಲಾಯುವ ಹಕ್ಕಾಗಿತ್ತು. ಇಸ್ರಾಯೇಲ್ಯ ರೈತನೊಬ್ಬನು ತನ್ನ ಹೊಲದ ಫಲವನ್ನು ಕೊಯ್ಯಿಸುವಾಗ, ಕೊಯ್ಲಿನ ಕೆಲಸಗಾರರು ಬಿಟ್ಟುಹೋಗಿರುವುದನ್ನು ಬಡವರು ಸಂಗ್ರಹಿಸುವಂತೆ ಅನುಮತಿಸಬೇಕೆಂದು ಯೆಹೋವನು ಆಜ್ಞಾಪಿಸಿದನು. ರೈತರು ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಪೂರ್ತಿಯಾಗಿ ಕೊಯ್ಯಬಾರದಾಗಿತ್ತು ಮಾತ್ರವಲ್ಲ, ಉದುರಿದ ದ್ರಾಕ್ಷಿ ಮತ್ತು ಆಲಿವ್ ಹಣ್ಣುಗಳನ್ನು ಶೇಖರಿಸಬಾರದಾಗಿತ್ತು. ಹೊಲದಲ್ಲಿ ತಿಳಿಯದೆ ಬಿಟ್ಟಿದ್ದ ಧಾನ್ಯ ತೆನೆಗಳನ್ನು ಹಿಂದಿರುಗಿ ಹೋಗಿ ಸಂಗ್ರಹಿಸಬಾರದಾಗಿತ್ತು. ಇದು ಬಡವರು, ಪರದೇಶಿಯರು, ವಿಧವೆಯರು ಮತ್ತು ಅನಾಥರಿಗಾಗಿ ಮಾಡಲಾದ ಪ್ರೀತಿಯ ಏರ್ಪಾಡಾಗಿತ್ತು. ಹಕ್ಕಲಾಯುವುದು ಶ್ರಮಭರಿತ ಕೆಲಸವಾಗಿದ್ದರೂ, ಅದರ ಮೂಲಕ ಅವರು ಭಿಕ್ಷೆಬೇಡುವುದನ್ನು ತಪ್ಪಿಸಸಾಧ್ಯವಿತ್ತು.—ಯಾಜಕಕಾಂಡ 19:9, 10; ಧರ್ಮೋಪದೇಶಕಾಂಡ 24:19-22; ಕೀರ್ತನೆ 37:25.
ಜನವರಿ 11-17
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 20-21
“ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ”
ಕಾವಲಿನಬುರುಜು04 10/15 ಪುಟ 11 ಪ್ಯಾರ 12
ಪರದೈಸಿನ ನಿರೀಕ್ಷೆಗೆ ಆಧಾರವಿದೆಯೆ?
12 ಅಷ್ಟುಮಾತ್ರವಲ್ಲ, ನಾವು ಅಲಕ್ಷಿಸಬಾರದಂಥ ಇನ್ನೊಂದು ವಿಚಾರವೂ ಇದೆ. ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ಹೊಳೆ ದಾಟಿ ಆಚೆಯಿರುವ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.” (ಧರ್ಮೋಪದೇಶಕಾಂಡ 11:8) ಯಾಜಕಕಾಂಡ 20:22, 24 ರಲ್ಲಿ ಅದೇ ದೇಶದ ಕುರಿತಾಗಿ ತಿಳಿಸಲ್ಪಟ್ಟಿದೆ: “ಈ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು; ಹಾಗೆ ನಡೆದರೆ ನಾನು ನಿಮ್ಮನ್ನು ಯಾವ ದೇಶಕ್ಕೆ ಬರಮಾಡಿ ಅದನ್ನು ನಿವಾಸಕ್ಕಾಗಿ ಕೊಡುತ್ತೇನೋ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ. ನಿಮಗಾದರೋ—ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ; ಹಾಲೂ ಜೇನೂ ಹರಿಯುವಂಥ ಆ ದೇಶವನ್ನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವೆನು.” ಹೌದು, ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು, ಯೆಹೋವ ದೇವರೊಂದಿಗಿನ ಒಳ್ಳೇ ಸಂಬಂಧದ ಮೇಲೆ ಹೊಂದಿಕೊಂಡಿತ್ತು. ಇಸ್ರಾಯೇಲ್ಯರು ದೇವರಿಗೆ ವಿಧೇಯರಾಗಲು ತಪ್ಪಿಹೋದದ್ದರಿಂದಲೇ, ಬಾಬೆಲಿನವರು ಅವರನ್ನು ಸೋಲಿಸಿ ಅವರ ನಿವಾಸಸ್ಥಳದಿಂದ ಅವರನ್ನು ಹೊರಡಿಸುವಂತೆ ಆತನು ಅನುಮತಿಸಿದನು.
it-1-E ಪುಟ 1199
ಪಿತ್ರಾರ್ಜಿತ ಆಸ್ತಿ
ಒಬ್ಬ ವ್ಯಕ್ತಿ ತೀರಿಹೋಗ್ವಾಗ ಅವನ ಮಕ್ಕಳಿಗೋ ಅಥ್ವಾ ಸೂಕ್ತ ಹಕ್ಕುದಾರರಿಗೋ ಸಿಗುವಂಥ ಅವನ ಆಸ್ತಿನೇ ಪಿತ್ರಾರ್ಜಿತ ಆಸ್ತಿ. ಅಪ್ಪಅಮ್ಮನಿಂದ ಅಥ್ವಾ ತಾತಮುತ್ತಾತರಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಸಿಗೋ ಯಾವುದೇ ವಸ್ತುನೂ ಪಿತ್ರಾರ್ಜಿತ ಅಂತ ಕರಿಬಹುದು. ಹೀಬ್ರು ಭಾಷೆಯಲ್ಲಿ ಪಿತ್ರಾರ್ಜಿತ ಪದಕ್ಕೆ ಮುಖ್ಯವಾಗಿ ನಶಲ್ ಅನ್ನೋ ಕ್ರಿಯಾಪದವನ್ನ ಬಳಸಲಾಗಿದೆ. ಈ ಪದ, ಒಬ್ಬ ವ್ಯಕ್ತಿ ತಾತ ಮುತ್ತಾತನಿಂದ ಸೊತ್ತು ಅಥ್ವಾ ಆಸ್ತಿ ಪಡಕೊಳ್ಳೋದು ಅಥ್ವಾ ಮುಂದಿನ ಪೀಳಿಗೆಯವ್ರಿಗೆ ಅದನ್ನ ಕೊಡೋದು ಅನ್ನೋ ಅರ್ಥ ಕೊಡುತ್ತೆ. (ಅರ 26:55; ಯೆಹೆ 46:18) ಪಿತ್ರಾರ್ಜಿತ ಪದಕ್ಕೆ ಹೀಬ್ರುವಿನಲ್ಲಿ ಯಾರಾಶ್ ಅನ್ನೋ ಇನ್ನೊಂದು ಕ್ರಿಯಾಪದನೂ ಬಳಸಲಾಗಿದೆ. ಕೆಲವು ವಚನಗಳಲ್ಲಿ ಈ ಕ್ರಿಯಾಪದವನ್ನು “ವಾರಸುದಾರ” ಅನ್ನೋ ಅರ್ಥ ಬರೋಕೆ ಬಳಸಲಾಗಿದೆ. ಆದ್ರೆ ಹೆಚ್ಚಿನ ವಚನಗಳಲ್ಲಿ ಪಿತ್ರಾರ್ಜಿತವಾಗಿ ಬರುವಂಥ ಆಸ್ತಿಯನ್ನಲ್ಲ ಬೇರೆ ಆಸ್ತಿಯನ್ನ ‘ತಮ್ಮದಾಗಿ ಮಾಡಿಕೊಳ್ಳೋದು’ ಅನ್ನೋ ಅರ್ಥ ಬರುವಂತೆ ಈ ಪದವನ್ನ ಬಳಸಲಾಗಿದೆ. (ಆದಿ 15:3; ಯಾಜ 20:24) ಈ ಕ್ರಿಯಾಪದಕ್ಕೆ ಇನ್ನೊಂದು ಅರ್ಥನೂ ಇದೆ. ಒಂದು ಪ್ರದೇಶದ ಮೇಲೆ ಸೈನಿಕರು ದಾಳಿ ಮಾಡಿ ಅದನ್ನ ‘ವಶಪಡಿಸಿಕೊಳ್ಳೋದು’ ಮತ್ತು ಅಲ್ಲಿರೋ ಜನ್ರನ್ನ ‘ಓಡಿಸಿಬಿಡೋದು’ ಅನ್ನೋ ಅರ್ಥನೂ ಈ ಪದಕ್ಕಿದೆ. (ಧರ್ಮೋ 2:12; 31:3) ಪಿತ್ರಾರ್ಜಿತ ಪದಕ್ಕೆ ಗ್ರೀಕ್ನಲ್ಲಿ ಕ್ಲೆರೋಸ್ ಅನ್ನೋ ಪದ ಬಳಸಲಾಗಿದೆ. ಈ ಪದದ ಅರ್ಥ ‘ಚೀಟು ಹಾಕೋದು’ ಅಂತ. ನಂತರ ಈ ಪದಕ್ಕೆ “ಪಾಲು” ಅನ್ನೋ ಅರ್ಥ ಬಂತು. ಕೊನೆಗೆ “ಪಿತ್ರಾರ್ಜಿತ” ಅಂತನೂ ಅರ್ಥ ಬಂತು.—ಮತ್ತಾ 27:35; ಅಕಾ 1:17; 26:18.
it-1-E ಪುಟ 317 ಪ್ಯಾರ 2
ಪಕ್ಷಿಗಳು
ಜಲಪ್ರಳಯದ ನಂತ್ರ ನೋಹ, ಪ್ರಾಣಿಗಳ ಜೊತೆಗೆ ಕೆಲವು ‘ಶುದ್ಧ ಪಕ್ಷಿಗಳನ್ನ’ ಕೂಡ ದೇವ್ರಿಗೆ ಬಲಿಯಾಗಿ ಕೊಟ್ಟ. (ಆದಿ 8:18-20) ಆಗಿನಿಂದ ಮನುಷ್ಯರು ಪಕ್ಷಿಗಳ ಮಾಂಸವನ್ನು ತಿನ್ನಬಹುದು ಅಂತ ದೇವರು ಹೇಳಿದನು. ಆದ್ರೆ ರಕ್ತವನ್ನು ಮಾತ್ರ ತಿನ್ನಬಾರದಿತ್ತು. (ಆದಿ 9:1-4; ಯಾಜ 7:26; 17:13 ಹೋಲಿಸಿ.) ಬಹುಶಃ ದೇವರು ಆಗ ಕೆಲವು ಪಕ್ಷಿಗಳ ಬಲಿಯನ್ನ ಮಾತ್ರ ತಾನು ಸ್ವೀಕರಿಸ್ತೇನೆ ಅಂತ ಹೇಳಿರಬಹುದು. ಈ ಕಾರಣದಿಂದಲೇ ಆ ಸಮಯದಲ್ಲಿ ಕೆಲವು ಪಕ್ಷಿಗಳನ್ನ ‘ಶುದ್ಧ ಪಕ್ಷಿಗಳು’ ಅಂತ ಕರೆದಿರಬಹುದು. ಮೋಶೆಯ ನಿಯಮ ಪುಸ್ತಕ ಬರೋ ತನಕ ಯಾವ ಪಕ್ಷಿಯನ್ನೂ ಅಶುದ್ಧ ಅಂತ ನೆನಸ್ತಿರಲಿಲ್ಲ. ಆಮೇಲೆನೇ ಕೆಲವು ಪಕ್ಷಿಗಳನ್ನ “ಅಶುದ್ಧ” ಅಂತ ಕರೆಯಲಾಯ್ತು. ಅವನ್ನು ತಿನ್ನೋ ಹಾಗಿರಲಿಲ್ಲ. (ಯಾಜ 11:13-19, 46, 47; 20:25; ಧರ್ಮೋ 14:11-20) ಯಾವ್ಯಾವ ಕಾರಣಗಳಿಂದ ಈ ಪಕ್ಷಿಗಳು ‘ಅಶುದ್ಧವಾಗಿದ್ದವು’ ಅನ್ನೋದಕ್ಕೆ ಬೈಬಲ್ ಹೆಚ್ಚಿನ ವಿವರ ಕೊಟ್ಟಿಲ್ಲ. ಅಶುದ್ಧ ಪಕ್ಷಿಗಳ ಪಟ್ಟಿಯಲ್ಲಿರೋ ಹೆಚ್ಚಿನ ಪಕ್ಷಿಗಳು ಬೇಟೆಯಾಡುವಂಥ ಪಕ್ಷಿಗಳು. ಹಾಗಂತ ಈ ಕಾರಣಕ್ಕೇ ಅವು ಅಶುದ್ಧವಾಗಿದ್ದವು ಅಂತ ಹೇಳಕ್ಕಾಗಲ್ಲ. ಯಾಕಂದ್ರೆ ಬೇಟೆಯಾಡದಂಥ ಪಕ್ಷಿಗಳೂ ಆ ಪಟ್ಟಿಯಲ್ಲಿದ್ವು. ಹೊಸ ಒಪ್ಪಂದ ಶುರುವಾದ ಮೇಲೆ, ಅಶುದ್ಧ ಪಕ್ಷಿಗಳನ್ನು ತಿನ್ನಬಾರದು ಅನ್ನೋ ನಿಯಮ ರದ್ದಾಯ್ತು. ಇದನ್ನ ದೇವರು ಪೇತ್ರನಿಗೆ ಕೊಟ್ಟ ದರ್ಶನದಲ್ಲಿ ಹೇಳಿದನು.—ಅಕಾ 10:9-15.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 563
ಗಾಯ ಮಾಡಿಕೊಳ್ಳೋದು
ಸತ್ತವರಿಗೋಸ್ಕರ ಬದುಕಿರುವವ್ರು ತಮ್ಮ ದೇಹಕ್ಕೆ ಗಾಯ ಮಾಡಿಕೊಳ್ಳಬಾರ್ದು ಅಂತ ದೇವರು ನಿಯಮ ಪುಸ್ತಕದಲ್ಲಿ ಬರೆಸಿದ್ದನು. (ಯಾಜ 19:28; 21:5; ಧರ್ಮೋ 14:1) ಇದಕ್ಕೆ ಕಾರಣ ಏನಂದ್ರೆ ಇಸ್ರಾಯೇಲ್ಯರು ಯೆಹೋವನಿಗೆ ಪವಿತ್ರ ಜನ್ರಾಗಿದ್ರು. ವಿಶೇಷ ಸೊತ್ತಾಗಿದ್ರು. (ಧರ್ಮೋ 14:2) ಇಸ್ರಾಯೇಲ್ಯರು ಮೂರ್ತಿಪೂಜೆಗೆ ಸಂಬಂಧಪಟ್ಟ ಯಾವ ಆಚಾರವನ್ನೂ ಮಾಡಬಾರದಿತ್ತು. ಹಾಗಂದ ಮೇಲೆ ಸತ್ತವರಿಗೋಸ್ಕರ ಗೋಳಾಡ್ತಾ ತಮ್ಮ ದೇಹಕ್ಕೆ ಗಾಯ ಮಾಡಿಕೊಳ್ಳೋದು ತುಂಬ ದೊಡ್ಡ ತಪ್ಪಾಗಿತ್ತು. ಅದ್ರಲ್ಲೂ ಇಸ್ರಾಯೇಲ್ಯರಿಗೆ ಸತ್ತವ್ರ ಸ್ಥಿತಿ ಬಗ್ಗೆ, ಸತ್ತವ್ರು ಮತ್ತೆ ಜೀವಂತವಾಗಿ ಎದ್ದು ಬರ್ತಾರೆ ಅನ್ನೋದ್ರ ಬಗ್ಗೆ ಚೆನ್ನಾಗಿ ಗೊತ್ತಿತ್ತು. (ದಾನಿ 12:13; ಇಬ್ರಿ 11:19) ದೇಹಕ್ಕೆ ಗಾಯ ಮಾಡಿಕೊಳ್ಳಬಾರ್ದು ಅಂತ ದೇವ್ರು ಕೊಟ್ಟ ನಿಯಮ ಇಸ್ರಾಯೇಲ್ಯರಿಗೆ ದೇವರ ಸೃಷ್ಟಿಯಾಗಿರೋ ಮಾನವ ದೇಹನಾ ಗೌರವಿಸಬೇಕು ಅನ್ನೋದನ್ನೂ ನೆನಪಿಸ್ತಿತ್ತು.
ಜನವರಿ 18-24
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 22-23
“ಇಸ್ರಾಯೇಲಿನ ಹಬ್ಬಗಳಿಂದ ನಮಗಿರೋ ಪಾಠ”
it-1-E ಪುಟ 826-827
ಹುಳಿ ಇಲ್ಲದ ರೊಟ್ಟಿ ಹಬ್ಬ
ಹುಳಿ ಇಲ್ಲದ ರೊಟ್ಟಿ ಹಬ್ಬದ ಮೊದಲ್ನೇ ದಿನ ಇಸ್ರಾಯೇಲ್ಯರು ಒಂದು ವಿಶೇಷ ಸಭೆಗಾಗಿ ಕೂಡಿಬರಬೇಕಿತ್ತು. ಆ ದಿನ ಸಬ್ಬತ್ ಕೂಡ ಆಗಿರ್ತಿತ್ತು. ಹಬ್ಬದ ಎರಡನೇ ದಿನ ಅಂದ್ರೆ ನೈಸಾನ್ 16 ರಂದು ಬಾರ್ಲಿಯ ಮೊದಲ ಬೆಳೆಯ ತೆನೆಗಳ ಒಂದು ಕಟ್ಟನ್ನ ಪುರೋಹಿತನಿಗೆ ತಂದುಕೊಡಬೇಕಿತ್ತು. ಪ್ಯಾಲೇಸ್ಟೀನ್ನಲ್ಲಿ ಮೊದಮೊದ್ಲು ಕೊಯ್ಲಿಗೆ ಬರೋ ಬೆಳೆ ಅಂದ್ರೆ ಅದು ಬಾರ್ಲಿ ಬೆಳೆ. ಹಬ್ಬಕ್ಕೆ ಮುಂಚೆನೇ ಯಾರೂ ಹೊಸ ಬೆಳೆಯ ಹಸಿ ತೆನೆಯನ್ನಾಗಲಿ, ಅದ್ರಿಂದ ಮಾಡಿದ ರೊಟ್ಟಿಯನ್ನಾಗಲಿ, ಸುಟ್ಟ ತೆನೆಯನ್ನಾಗಲಿ ತಿನ್ನಬಾರದಿತ್ತು. ಅಂಥ ಮೊದಲ ಬೆಳೆಯನ್ನ ಪುರೋಹಿತ ಯೆಹೋವ ದೇವರ ಎದುರಲ್ಲಿ ಹಿಂದೆ ಮುಂದೆ ಆಡಿಸಿ ಅರ್ಪಿಸ್ತಿದ್ದ. ಜೊತೆಗೆ ದೋಷ ಇಲ್ಲದ ಒಂದು ವರ್ಷದೊಳಗಿರುವ ಟಗರನ್ನ ಸರ್ವಾಂಗಹೋಮ ಬಲಿಯಾಗಿ ಕೊಡ್ತಿದ್ದ. ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟನ್ನ ಧಾನ್ಯ ಅರ್ಪಣೆಯಾಗಿ ಮತ್ತು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡ್ತಿದ್ದ. (ಯಾಜ 23:6-14) ಯಜ್ಞವೇದಿ ಮೇಲೆ ಯಾವುದೇ ಧಾನ್ಯವನ್ನಾಗಲಿ, ಅದ್ರ ಹಿಟ್ಟನ್ನಾಗಲಿ ಸುಡಬೇಕು ಅನ್ನೋ ಆಜ್ಞೆ ನಿಯಮ ಪುಸ್ತಕದಲ್ಲಿ ಇರಲಿಲ್ಲ. ಆದ್ರೆ ಮುಂದೆ ಪುರೋಹಿತರು ಅದನ್ನು ಸುಡೋಕೆ ಶುರುಮಾಡಿದ್ದರು. ಮೊದಲ ಬೆಳೆಯ ಧಾನ್ಯ ಅರ್ಪಣೆಯನ್ನು ಮತ್ತು ಬಲಿಯನ್ನ ಪುರೋಹಿತ ಇಡೀ ಇಸ್ರಾಯೇಲ್ ಜನಾಂಗಕ್ಕೋಸ್ಕರ ಯೆಹೋವ ದೇವ್ರಿಗೆ ಅರ್ಪಿಸ್ತಿದ್ದ. ಅದೇ ತರ ಇಸ್ರಾಯೇಲಿನಲ್ಲಿ ಜಮೀನಿದ್ದ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬ ಕೂಡ ಯೆಹೋವನಿಗೆ ಧನ್ಯವಾದ ಹೇಳೋಕೆ ಈ ಅರ್ಪಣೆಯನ್ನು ಕೊಡಬಹುದಿತ್ತು.—ವಿಮೋ 23:19; ಧರ್ಮೋ 26:1, 2.
ಈ ಹಬ್ಬ ಮಾಡೋಕೆ ಕಾರಣ. ಈ ಹಬ್ಬದ ಸಮಯದಲ್ಲಿ ಇಸ್ರಾಯೇಲ್ಯರು ಹುಳಿ ಇಲ್ಲದ ರೊಟ್ಟಿಯನ್ನ ತಿನ್ನಬೇಕು ಅಂತ ಯೆಹೋವನು ಮೋಶೆಯ ಮೂಲಕ ಹೇಳಿದ್ದನು. ಇದ್ರ ಬಗ್ಗೆ ವಿಮೋಚನಕಾಂಡ 12:14-20 ರಲ್ಲಿದೆ. 19 ನೇ ವಚನದಲ್ಲಿ “ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಲೇಬಾರದು” ಅಂತ ಯೆಹೋವ ಕಟ್ಟುನಿಟ್ಟಾಗಿ ಹೇಳಿದ್ದನು. ಪ್ರತಿವರ್ಷ ಅವ್ರು ಆಚರಿಸ್ತಿದ್ದ ಈ ಹಬ್ಬ, ನಾದಿದ ಹಿಟ್ಟಿಗೆ ಹುಳಿ ಹಾಕದೆ ಅವಸರ ಅವಸರವಾಗಿ ಈಜಿಪ್ಟಿಂದ ಹೊರಗೆ ಬಂದಿದ್ದನ್ನ ಅವ್ರಿಗೆ ನೆನಪಿಸ್ತಿತ್ತು. (ವಿಮೋ 12:34) ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಗುಲಾಮರಾಗಿ ಎಷ್ಟು ಕಷ್ಟಪಡ್ತಿದ್ರು, ಅದ್ರಿಂದ ಅವ್ರನ್ನ ಯೆಹೋವ ಹೇಗೆ ಬಿಡಿಸಿದನು ಅನ್ನೋದನ್ನ ನೆನಪಿಸ್ತಿತ್ತು. “ಈಜಿಪ್ಟಿಂದ ಹೊರಗೆ ಬಂದ ದಿನವನ್ನ ಜೀವನಪೂರ್ತಿ ನೆನಪಲ್ಲಿಡೋಕೆ ಹೀಗೆ ಮಾಡಬೇಕು” ಅಂತ ಯೆಹೋವ ಅವ್ರಿಗೆ ಹೇಳಿದ್ದನು. (ಧರ್ಮೋ 16:3) ಅವ್ರಿಗೆ ಈಗ ಇದ್ದ ಸ್ವಾತಂತ್ರ್ಯವನ್ನ ಮತ್ತು ಯೆಹೋವನು ಅವ್ರನ್ನ ಬಿಡುಗಡೆ ಮಾಡಿದ್ದನ್ನ ಮನಸ್ಸಲ್ಲಿಟ್ಟು ವರ್ಷದಲ್ಲಿ ಮೂರು ಹಬ್ಬಗಳನ್ನ ಅವ್ರು ಆಚರಿಸ್ತಿದ್ರು. ಅದ್ರಲ್ಲಿ ಹುಳಿ ಇಲ್ಲದ ರೊಟ್ಟಿ ಹಬ್ಬ ಮೊದಲ್ನೇದು.—ಧರ್ಮೋ 16:16.
it-2-E ಪುಟ 598 ಪ್ಯಾರ 2
ವಾರಗಳ ಹಬ್ಬ (50 ನೇ ದಿನದ ಹಬ್ಬ)
50 ನೇ ದಿನದ ಹಬ್ಬದಂದು ಯೆಹೋವನಿಗೆ ಗೋದಿಯ ಮೊದಲ ಬೆಳೆಯನ್ನು ಅರ್ಪಿಸಬೇಕಿತ್ತು. ಇದು ಬಾರ್ಲಿಯ ಮೊದಲ ಬೆಳೆಯನ್ನು ಅರ್ಪಿಸೋ ವಿಧಾನಕ್ಕಿಂತ ಭಿನ್ನವಾಗಿತ್ತು. ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು (4.4 ಲೀ.) ನುಣ್ಣಗಿನ ಹಿಟ್ಟಿಗೆ ಹುಳಿಬೆರೆಸಿ ಸುಟ್ಟು ಎರಡು ರೊಟ್ಟಿ ಮಾಡಬೇಕಿತ್ತು. ಈ ಎರಡು ರೊಟ್ಟಿಗಳನ್ನ ‘ಮನೆಯಿಂದ ತರಬೇಕಿತ್ತು’ ಅಂದ್ರೆ ಆರಾಧನೆಗೋಸ್ಕರ ಮಾಡೋ ರೊಟ್ಟಿ ತರ ಇರದೆ ದಿನ ಮನೇಲಿ ಮಾಡಿಕೊಂಡು ತಿನ್ನೋ ರೊಟ್ಟಿ ತರ ಇರಬೇಕಿತ್ತು. (ಯಾಜ 23:17) ಇದ್ರ ಜೊತೆಗೆ ಸರ್ವಾಂಗಹೋಮ ಬಲಿಯನ್ನ ಮತ್ತು ಪಾಪಪರಿಹಾರಕ ಬಲಿಯನ್ನ ಕೊಡಬೇಕಿತ್ತು. ಅಷ್ಟೇ ಅಲ್ಲ, ಎರಡು ಗಂಡು ಕುರಿಮರಿಗಳನ್ನ ಸಮಾಧಾನ ಬಲಿಯಾಗಿ ಕೊಡಬೇಕಿತ್ತು. ಪುರೋಹಿತನು ಈ ರೊಟ್ಟಿಗಳನ್ನ ಮತ್ತು ಕುರಿಮರಿಯ ತುಂಡುಗಳನ್ನ ಕೈಗಳಲ್ಲಿಟ್ಟು ಅದನ್ನ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕಿತ್ತು. ಈ ರೊಟ್ಟಿಯನ್ನ ಮತ್ತು ಕುರಿಮರಿಗಳನ್ನ ಯೆಹೋವನಿಗೆ ಅರ್ಪಿಸಿದ ಮೇಲೆ ಪುರೋಹಿತ ಅದನ್ನ ಸಮಾಧಾನ ಬಲಿಯಾಗಿ ತಿನ್ನಬಹುದಿತ್ತು.—ಯಾಜ 23:18-20.
ಕಾವಲಿನಬುರುಜು14 5/15 ಪುಟ 28 ಪ್ಯಾರ 11
ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?
11 ಯೆಹೋವನ ಸಂಘಟನೆಯು ನಮ್ಮ ಒಳ್ಳೇದಕ್ಕಾಗಿಯೇ ಅಪೊಸ್ತಲ ಪೌಲನ ಈ ಸಲಹೆಯನ್ನು ಪಾಲಿಸುವಂತೆ ಹೇಳುತ್ತದೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” (ಇಬ್ರಿ. 10:24, 25) ಪ್ರಾಚೀನ ಇಸ್ರಾಯೇಲ್ಯರು ಪ್ರತಿ ವರ್ಷ ಹಬ್ಬಗಳನ್ನು ಆಚರಿಸಲಿಕ್ಕಾಗಿ ಹಾಗೂ ಇನ್ನಿತರ ಸಮಯಗಳಲ್ಲೂ ಆರಾಧನೆಗಾಗಿ ಒಟ್ಟಾಗಿ ಸೇರಿಬರುತ್ತಿದ್ದರು. ಅವು ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಿದವು. ಮಾತ್ರವಲ್ಲ ಆನಂದಭರಿತ ಸಂದರ್ಭಗಳು ಅವಾಗಿದ್ದವು. ನೆಹೆಮೀಯನ ಸಮಯದಲ್ಲಿ ಆಚರಿಸಲಾದ ಪರ್ಣಶಾಲೆಗಳ ಹಬ್ಬ ಇದಕ್ಕೊಂದು ಉದಾಹರಣೆ. (ವಿಮೋ. 23:15, 16; ನೆಹೆ. 8:9-18) ನಾವು ಕೂಡ ನಮ್ಮ ಕೂಟಗಳಿಂದ, ಸಮ್ಮೇಳನ ಮತ್ತು ಅಧಿವೇಶನಗಳಿಂದ ತದ್ರೀತಿಯ ಪ್ರಯೋಜನ ಪಡೆಯುತ್ತೇವೆ. ಹಾಗಾಗಿ ನಾವು ಈ ಎಲ್ಲವುಗಳಿಗೆ ಹಾಜರಾಗೋಣ. ಏಕೆಂದರೆ ಇವು ನಮ್ಮ ಸಂತೋಷವನ್ನೂ ಆಧ್ಯಾತ್ಮಿಕ ಆರೋಗ್ಯವನ್ನೂ ವರ್ಧಿಸುತ್ತವೆ.—ತೀತ 2:2.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು19.02 ಪುಟ 3 ಪ್ಯಾರ 3
ಸದಾ ಸಮಗ್ರತೆ ಕಾಪಾಡಿಕೊಳ್ಳಿ!
3 ಯೆಹೋವನ ಸೇವಕರು ಹೇಗೆ ಸಮಗ್ರತೆ ತೋರಿಸುತ್ತಾರೆ? ಅವರು ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸುತ್ತಾರೆ. ಏನೇ ಆದರೂ ಆ ಪ್ರೀತಿಯನ್ನು ಅವರು ಬಿಟ್ಟುಕೊಡಲ್ಲ. ಎಲ್ಲಾ ಸಮಯದಲ್ಲೂ ಆತನಿಗೆ ಇಷ್ಟವಾದದ್ದನ್ನು ಮಾಡುತ್ತಾರೆ. ಬೈಬಲಿನಲ್ಲಿ ಸಮಗ್ರತೆ ಎಂಬ ಈ ಪದವನ್ನು ಹೇಗೆ ಬಳಸಲಾಗಿದೆ ಎಂದು ನೋಡೋಣ. ಬೈಬಲಿನಲ್ಲಿ “ಸಮಗ್ರತೆ” ಎಂದು ಭಾಷಾಂತರವಾಗಿರುವ ಪದದ ಅರ್ಥ ಏನೆಂದರೆ ಸಂಪೂರ್ಣವಾಗಿರುವುದು, ಲೋಪದೋಷ ಇಲ್ಲದಿರುವುದು. ಉದಾಹರಣೆಗೆ, ಇಸ್ರಾಯೇಲ್ಯರು ಯೆಹೋವನಿಗೆ ಪ್ರಾಣಿ ಯಜ್ಞಗಳನ್ನು ಕೊಡಬೇಕಿತ್ತು. ಆ ಪ್ರಾಣಿಗಳು ಪೂರ್ಣಾಂಗವಾಗಿ ಇರಬೇಕಿತ್ತು. (ಯಾಜ. 22:21, 22) ಕಾಲಿಲ್ಲದ, ಕಿವಿ ಇಲ್ಲದ, ಕಣ್ಣಿಲ್ಲದ ಅಥವಾ ರೋಗವಿರುವ ಪ್ರಾಣಿಗಳನ್ನು ಅವರು ಯಜ್ಞವಾಗಿ ಕೊಡಬಾರದಿತ್ತು. ಯಾವುದೇ ದೋಷ ಇಲ್ಲದ, ಆರೋಗ್ಯಕರವಾದ ಪ್ರಾಣಿಗಳನ್ನು ಯೆಹೋವನಿಗೆ ಯಜ್ಞವಾಗಿ ಕೊಡಬೇಕಿತ್ತು. (ಮಲಾ. 1:6-9) ಯೆಹೋವನಿಗೆ ಒಂದು ವಿಷಯ ಸಂಪೂರ್ಣವಾಗಿರುವುದು ಅಥವಾ ದೋಷ ಇಲ್ಲದೆ ಇರುವುದು ಎಷ್ಟು ಮುಖ್ಯ ಎಂದು ಇದರಿಂದ ಅರ್ಥವಾಗುತ್ತದೆ. ನೀವು ಒಂದು ಹಣ್ಣನ್ನೋ ಉಪಕರಣವನ್ನೋ ಪುಸ್ತಕವನ್ನೋ ಖರೀದಿಸಲು ಹೋಗುತ್ತೀರಿ ಎಂದು ನೆನಸಿ. ಅದು ಸ್ವಲ್ಪ ಹಾಳಾಗಿದ್ದರೆ ಅಥವಾ ಪುಸ್ತಕದಲ್ಲಿ ಕೆಲವು ಪುಟಗಳೇ ಇಲ್ಲ ಅಂದರೆ ನೀವದನ್ನು ತಗೊಳ್ತೀರಾ? ಖಂಡಿತ ಇಲ್ಲ. ನಾವು ತಗೊಳ್ಳುವ ವಸ್ತು ಚೆನ್ನಾಗಿರಬೇಕು, ಸಂಪೂರ್ಣವಾಗಿ ಇರಬೇಕೆಂದು ಬಯಸುತ್ತೇವೆ. ನಾವು ಯೆಹೋವನಿಗೆ ತೋರಿಸುವ ಪ್ರೀತಿ, ನಿಷ್ಠೆ ಸಹ ಅದೇ ರೀತಿ ಲೋಪದೋಷ ಇಲ್ಲದೆ ಸಂಪೂರ್ಣವಾಗಿ ಇರಬೇಕೆಂದು ಆತನು ಬಯಸುತ್ತಾನೆ.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು07-E 7/15 ಪುಟ 26
ವಾಚಕರಿಂದ ಪ್ರಶ್ನೆಗಳು
ಕೊಯ್ಲು ಆರಂಭ ಆದಾಗ್ಲೇ ಹುಳಿ ಇಲ್ಲದ ರೊಟ್ಟಿ ಹಬ್ಬಕ್ಕೆ ಇಸ್ರಾಯೇಲಿನ ಎಲ್ಲ ಗಂಡಸ್ರು ಕೂಡಿ ಬರ್ತಿದ್ರಿಂದ ಬಾರ್ಲಿಯ ಮೊದಲ ಬೆಳೆಯನ್ನ ಕೊಯ್ಲು ಮಾಡಿ ಅದನ್ನ ಯೆಹೋವನ ಆರಾಧನಾ ಸ್ಥಳಕ್ಕೆ ಯಾರು ತಗೊಂಡು ಹೋಗ್ತಾ ಇದ್ರು?
ಯೆಹೋವನು ಇಸ್ರಾಯೇಲ್ಯರಿಗೆ ನಿಯಮ ಪುಸ್ತಕದಲ್ಲಿ ಹೀಗೆ ತಿಳಿಸಿದ್ದನು: “ವರ್ಷದಲ್ಲಿ ಮೂರು ಸಲ ಅಂದ್ರೆ ಹುಳಿ ಇಲ್ಲದ ರೊಟ್ಟಿ ಹಬ್ಬ, ವಾರಗಳ ಹಬ್ಬ, ಚಪ್ಪರಗಳ ಹಬ್ಬದ ಸಮಯದಲ್ಲಿ ನಿಮ್ಮಲ್ಲಿರೋ ಗಂಡಸ್ರೆಲ್ಲ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆತನ ಮುಂದೆ ಬರಬೇಕು.” (ಧರ್ಮೋಪದೇಶಕಾಂಡ 16:16) ರಾಜ ಸೊಲೊಮೋನನ ಸಮಯದಿಂದ ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ ಕೂಡಿಬರ್ತಿದ್ರು.
ಈ ಮೂರು ಹಬ್ಬಗಳಲ್ಲಿ ಮೊದ್ಲಿಗೆ ನಡಿತಾ ಇದ್ದಿದ್ದೇ ಹುಳಿ ಇಲ್ಲದ ರೊಟ್ಟಿ ಹಬ್ಬ. ಇದು ವಸಂತ ಕಾಲದ ಆರಂಭದಲ್ಲಿ ನಡಿತಿತ್ತು. ನೈಸಾನ್ 14 ನೇ ದಿನದಂದು ಪಸ್ಕ ಹಬ್ಬವನ್ನ ಆಚರಿಸಿದ ಮಾರನೇ ದಿನ ಅಂದ್ರೆ ನೈಸಾನ್ 15 ರಿಂದ ಈ ಹಬ್ಬ ಶುರುವಾಗಿ ಏಳು ದಿನಗಳ ತನಕ ಅಂದ್ರೆ ನೈಸಾನ್ 21 ಕ್ಕೆ ಮುಗಿತಿತ್ತು. ಯೆಹೂದಿ ಕ್ಯಾಲೆಂಡರ್ ಪ್ರಕಾರ ನೈಸಾನ್ ತಿಂಗಳು ವರ್ಷದ ಮೊದಲ ತಿಂಗಳು. ಆ ತಿಂಗಳ 16 ನೇ ತಾರೀಕು ಅಂದ್ರೆ ಹುಳಿ ಇಲ್ಲದ ರೊಟ್ಟಿ ಹಬ್ಬದ 2 ನೇ ದಿನದಂದು ಆ ವರ್ಷದ ಮೊದಲ ಬೆಳೆಯ ಕೊಯ್ಲು ಆರಂಭ ಆಗ್ತಿತ್ತು. ಆ ದಿನ ಯೆಹೋವನ ಆರಾಧನಾ ಸ್ಥಳದಲ್ಲಿ ಮಹಾ ಪುರೋಹಿತ ಬಾರ್ಲಿಯ ‘ಮೊದಲ ಬೆಳೆಯ ತೆನೆಗಳ ಒಂದು ಕಟ್ಟನ್ನ ಯೆಹೋವ ದೇವರ ಎದುರಲ್ಲಿ ಹಿಂದೆ ಮುಂದೆ ಆಡಿಸಿ’ ಅದನ್ನ ಅರ್ಪಿಸ್ತಿದ್ದ. (ಯಾಜಕಕಾಂಡ 23:5-12) ಪ್ರಶ್ನೆ ಏನಂದ್ರೆ, ಹುಳಿ ಇಲ್ಲದ ರೊಟ್ಟಿ ಹಬ್ಬಕ್ಕೆ ಎಲ್ಲ ಗಂಡಸ್ರು ಹೋಗ್ತಿದ್ರು ಅಂದ್ಮೇಲೆ ಪುರೋಹಿತನಿಗೆ ಮೊದಲ ಬೆಳೆಯನ್ನ ಕೊಯ್ದು ಯಾರು ತಂದುಕೊಡ್ತಿದ್ರು?
ಹುಳಿ ಇಲ್ಲದ ರೊಟ್ಟಿ ಹಬ್ಬದ ಸಮ್ಯದಲ್ಲಿ ಯೆಹೋವನಿಗೆ ಮೊದಲ ಬೆಳೆಯ ಕೊಯ್ಲನ್ನ ತಂದು ಅರ್ಪಿಸಬೇಕು ಅಂತ ಕೊಟ್ಟ ಆಜ್ಞೆ ಇಡೀ ಇಸ್ರಾಯೇಲ್ ಜನಾಂಗಕ್ಕೇ ಕೊಡಲಾಗಿತ್ತು. ಅದನ್ನ ಪ್ರತಿಯೊಬ್ರು ಹೊಲಕ್ಕೆ ಹೋಗಿ ಕೊಯ್ದು ಆರಾಧನಾ ಸ್ಥಳಕ್ಕೆ ತಂದು ಅರ್ಪಿಸೋ ಅಗತ್ಯ ಇರ್ಲಿಲ್ಲ. ಬದ್ಲಿಗೆ ಇಡೀ ಜನಾಂಗದ ಪರವಾಗಿ ಯಾರಾದ್ರೂ ಒಬ್ರನ್ನ ಈ ಕೆಲಸಕ್ಕೆ ನೇಮಿಸಬಹುದಿತ್ತು. ಆ ವ್ಯಕ್ತಿ ಹತ್ರದಲ್ಲೇ ಇದ್ದ ಬಾರ್ಲಿಯ ಹೊಲಕ್ಕೆ ಹೋಗಿ ಕೊಯ್ಲಿಗೆ ಬಂದ ಬಾರ್ಲಿಯ ತೆನೆಯನ್ನ ಕೊಯ್ದು ಆರಾಧನಾ ಸ್ಥಳಕ್ಕೆ ತಂದು ಅರ್ಪಿಸಬಹುದಿತ್ತು. ಇದ್ರ ಬಗ್ಗೆ ಎನ್ಸೈಕ್ಲಪಿಡೀಯ ಜುಡೈಕಾ ಹೀಗೆ ತಿಳಿಸುತ್ತೆ: “ಯೆರೂಸಲೇಮಿನ ಸುತ್ತಮುತ್ತ ಇದ್ದ ಪ್ರದೇಶದಲ್ಲಿ ಮಾಗಿದ ಬಾರ್ಲಿ ತೆನೆ ಸಿಕ್ಕಿದ್ರೆ ಅದನ್ನ ಕಿತ್ತು ತರ್ತಿದ್ರು. ಅಲ್ಲೆಲ್ಲೂ ಮಾಗಿದ ತೆನೆ ಸಿಕ್ಕಿಲ್ಲಾಂದ್ರೆ ಇಸ್ರಾಯೇಲಲ್ಲಿ ಬೇರೆ ಎಲ್ಲಿಂದಾದ್ರೂ ಹುಡುಕಿ ತರ್ತಿದ್ರು. ಇದನ್ನ ಸಾಮಾನ್ಯವಾಗಿ ಮೂರು ಪುರುಷರು ಕೀಳ್ತಿದ್ರು. ಪ್ರತಿಯೊಬ್ರ ಹತ್ರನೂ ಒಂದೊಂದು ಕುಡುಗೋಲು ಮತ್ತು ಬುಟ್ಟಿ ಇರ್ತಿತ್ತು.” ನಂತ್ರ ಆ ಬಾರ್ಲಿಯ ತೆನೆಯನ್ನ ಮಹಾ ಪುರೋಹಿತನಿಗೆ ತಂದುಕೊಡ್ತಿದ್ರು. ಅವನು ಅದನ್ನ ಯೆಹೋವನಿಗೆ ಅರ್ಪಿಸ್ತಿದ್ದ.
ಇಸ್ರಾಯೇಲ್ಯರು ಮೊದಲ ಬೆಳೆಯನ್ನ ಯೆಹೋವನಿಗೆ ಅರ್ಪಿಸೋ ಸಂದರ್ಭದಲ್ಲಿ ಆತನಿಗೆ ಧನ್ಯವಾದ ಹೇಳೋಕೆ ಒಂದು ಒಳ್ಳೇ ಅವಕಾಶ ಸಿಕ್ತಿತ್ತು. ಆತನು ಅವ್ರ ಹೊಲ-ಬೆಳೆಯನ್ನ ಆಶೀರ್ವದಿಸಿದ್ದಾನೆ ಅಂತ ನೆನಸ್ಕೊಳ್ಳೋಕೆ ಇದು ಒಳ್ಳೇ ಸಂದರ್ಭ ಆಗಿತ್ತು. (ಧರ್ಮೋಪದೇಶಕಾಂಡ 8:6-10) ಅಷ್ಟೇ ಅಲ್ಲ, ಮೊದಲ ಬೆಳೆಯನ್ನ ಅರ್ಪಿಸೋ ಏರ್ಪಾಡು ‘ಮುಂದೆ ಬರೋ ಒಳ್ಳೇ ವಿಷ್ಯಗಳ ನೆರಳಾಗಿತ್ತು.’ (ಇಬ್ರಿಯ 10:1) ಆಸಕ್ತಿಯ ವಿಷ್ಯ ಏನಂದ್ರೆ, ಕ್ರಿಸ್ತ ಶಕ 33 ರಲ್ಲಿ ಯೇಸು ತೀರಿಹೋದಾಗ ನೈಸಾನ್ 16 ರಂದು ಅಂದ್ರೆ ಮೊದಲ ಬೆಳೆಯನ್ನ ಅರ್ಪಿಸೋ ದಿನದಂದೇ ಅವ್ನು ಜೀವಂತವಾಗಿ ಎದ್ದುಬಂದನು. ಯೇಸು ಬಗ್ಗೆ ಅಪೊಸ್ತಲ ಪೌಲ ಹೀಗೆ ಬರೆದ: “ದೇವರು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದನು. ತೀರಿಹೋಗಿ ಮತ್ತೆ ಜೀವ ಪಡ್ಕೊಂಡು ಬಂದವ್ರಲ್ಲಿ ಮೊದಲ ವ್ಯಕ್ತಿ ಆತನೇ. . . . ಪ್ರತಿಯೊಬ್ರೂ ತಮ್ಮ ತಮ್ಮ ಸರದಿ ಪ್ರಕಾರ ಮತ್ತೆ ಜೀವ ಪಡ್ಕೊಳ್ತಾರೆ. ಆ ಸರದಿ ಹೀಗಿದೆ: ಮೊದ್ಲು ಕ್ರಿಸ್ತ, ಆಮೇಲೆ ಕ್ರಿಸ್ತನಿಗೆ ಸೇರಿದವರು. ಇವರು ಕ್ರಿಸ್ತ ವಾಪಸ್ ಹೋಗೋ ಸಮಯದಲ್ಲಿ ಮತ್ತೆ ಜೀವ ಪಡ್ಕೊಳ್ತಾರೆ.” (1 ಕೊರಿಂಥ 15:20-23) ಮಹಾ ಪುರೋಹಿತ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಿ ಅರ್ಪಿಸ್ತಿದ್ದ ಮೊದಲ ಬೆಳೆಯ ತೆನೆಗಳ ಕಟ್ಟು ಏನನ್ನ ಸೂಚಿಸ್ತು? ತೀರಿಹೋದ ಮೇಲೆ ಜೀವಂತವಾಗಿ ಎದ್ದುಬಂದ ಯೇಸು ಕ್ರಿಸ್ತನನ್ನ ಅದು ಸೂಚಿಸ್ತು. ತೀರಿಹೋದವ್ರಲ್ಲಿ ಜೀವಂತವಾಗಿ ಎದ್ದುಬಂದು ಶಾಶ್ವತ ಜೀವ ಪಡ್ಕೊಂಡವ್ರಲ್ಲಿ ಮೊದಲ ವ್ಯಕ್ತಿನೇ ಯೇಸು. ಹೀಗೆ ಮನುಷ್ಯರನ್ನ ಪಾಪ-ಮರಣದಿಂದ ಬಿಡಿಸೋಕೆ ಯೇಸು ದಾರಿ ತೆರೆದನು.
ಜನವರಿ 25-31
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 24-25
“ಬಿಡುಗಡೆ ವರ್ಷ ಮತ್ತು ಭವಿಷ್ಯದಲ್ಲಿ ಸಿಗೋ ಬಿಡುಗಡೆ”
it-1-E ಪುಟ 871
ಸ್ವಾತಂತ್ರ್ಯ
ಸ್ವಾತಂತ್ರ್ಯವನ್ನ ಇಷ್ಟಪಡೋ ದೇವರು. ಜನ್ರೆಲ್ಲ ಸ್ವತಂತ್ರರಾಗಿರಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಈಜಿಪ್ಟಿನ ಗುಲಾಮಗಿರಿಯಿಂದ ಇಸ್ರಾಯೇಲ್ಯರನ್ನ ಆತನು ಬಿಡಿಸಿದ್ದನು. ತನ್ನೆಲ್ಲಾ ಮಾತುಗಳನ್ನ ಕೇಳೋದಾದ್ರೆ ಬಡತನದಿಂದ್ಲೂ ಬಿಡುಗಡೆ ಸಿಗುತ್ತೆ ಅಂತ ಯೆಹೋವ ಅವ್ರಿಗೆ ಹೇಳಿದನು. (ಧರ್ಮೋ 15:4, 5) ಒಬ್ಬ ಇಸ್ರಾಯೇಲ್ಯನಿಗೆ ತನ್ನನ್ನ, ತನ್ನ ಕುಟುಂಬನ ನೋಡಿಕೊಳ್ಳೋಕೆ ಆಗದಷ್ಟು ತೀರ ಬಡತನ ಇರೋದಾದ್ರೆ ಅವನು ತನ್ನನ್ನ ಗುಲಾಮಗಿರಿಗೆ ಮಾರಿಕೊಳ್ಳಬಹುದು ಅಂತ ನಿಯಮ ಪುಸ್ತಕ ಹೇಳಿತ್ತು. ಆದ್ರೆ ಆರು ವರ್ಷ ಸೇವೆ ಮಾಡಿದ ಮೇಲೆ ಏಳನೇ ವರ್ಷದಲ್ಲಿ ಅವನಿಗೆ ಬಿಡುಗಡೆ ಆಗ್ಬೇಕು ಅಂತ ನಿಯಮ ಪುಸ್ತಕ ಹೇಳಿತ್ತು. (ವಿಮೋ 21:2) ಜೂಬಿಲಿ ವರ್ಷದಲ್ಲಿ (ಅಂದ್ರೆ ಪ್ರತಿ 50 ನೇ ವರ್ಷ) ದೇಶದವರಿಗೆಲ್ಲಾ ಬಿಡುಗಡೆಯನ್ನ ಘೋಷಿಸಬೇಕಿತ್ತು. ಆಗ ಇಸ್ರಾಯೇಲ್ಯ ದಾಸ ಕೂಡ ಬಿಡುಗಡೆಯಾಗಿ ಮನೆಗೆ ವಾಪಸ್ ಹೋಗಬೇಕಿತ್ತು.—ಯಾಜ 25:10-19.
it-1-E ಪುಟ 1200 ಪ್ಯಾರ 2
ಪಿತ್ರಾರ್ಜಿತ ಆಸ್ತಿ
ಇಸ್ರಾಯೇಲ್ನಲ್ಲಿ ಪ್ರತಿ ಕುಟುಂಬಕ್ಕೂ ಜಮೀನು ಇರ್ತಿತ್ತು. ಅದು ಮಕ್ಕಳಿಂದ ಮೊಮ್ಮಕ್ಕಳಿಗೆ ದಾಟಿ ದಾಟಿ ಅದೇ ವಂಶದಲ್ಲಿ ಉಳಿತಿತ್ತು. ಹಾಗಾಗಿ ಅದನ್ನ ಶಾಶ್ವತವಾಗಿ ಮಾರೋ ಹಕ್ಕು ಯಾರಿಗೂ ಇರಲಿಲ್ಲ. ಆದ್ರೆ ಸ್ವಲ್ಪ ಸಮಯಕ್ಕೆ ಜಮೀನನ್ನ ಮಾರಬಹುದಿತ್ತು. ಹೇಗಂದ್ರೆ ಮುಂದಿನ ಜೂಬಿಲಿ ವರ್ಷಕ್ಕೆ ಇನ್ನೆಷ್ಟು ವರ್ಷ ಬಾಕಿ ಇರ್ತಿತ್ತೋ ಅಷ್ಟು ವರ್ಷ ಸಿಗ್ತಿದ್ದ ಬೆಳೆಯ ಬೆಲೆಯನ್ನ ಲೆಕ್ಕ ಹಾಕಿ ಆ ಬೆಲೆಗೆ ಜಮೀನನ್ನ ಭೋಗ್ಯಕ್ಕೆ ಕೊಡಬಹುದಿತ್ತು. ಜಮೀನಿನ ಮಾಲಿಕ ಮಾರುವಾಗ ತಗೊಂಡ ಬೆಲೆಯನ್ನ ಜೂಬಿಲಿ ವರ್ಷದೊಳಗೆ ವಾಪಸ್ ಕೊಟ್ಟು ಜಮೀನನ್ನ ತಗೊಳ್ಳದೇ ಇದ್ರೆ ಜೂಬಿಲಿ ವರ್ಷದಲ್ಲಿ ಆ ಜಮೀನು ಮತ್ತೆ ಅವನಿಗೇ ವಾಪಸ್ ಸಿಗ್ತಿತ್ತು. (ಯಾಜ 25:13, 15, 23, 24) ಈ ನಿಯಮ ಗೋಡೆಯಿಲ್ಲದ ಪಟ್ಟಣಗಳಲ್ಲಿದ್ದ ಮನೆಗಳಿಗೂ ಅನ್ವಯವಾಗ್ತಿತ್ತು. ಯಾಕಂದ್ರೆ ಅಂಥ ಪಟ್ಟಣಗಳಿಗೆ ಗೋಡೆ ಇಲ್ಲದಿದ್ದ ಕಾರಣ ಮನೆಗಳನ್ನ ಹೊಲದ ಭಾಗ ಅಂತ ನೆನಸಲಾಗ್ತಿತ್ತು. ಆದ್ರೆ ಸುತ್ತ ಗೋಡೆ ಇರೋ ಪಟ್ಟಣದಲ್ಲಿ ಇರೋ ಒಂದು ಮನೆಯನ್ನ ಮಾರಿದ್ರೆ ಒಂದು ವರ್ಷದೊಳಗೆ ಆ ಮನೆಯ ಮಾಲಿಕನು ತಾನು ತಗೊಂಡ ಹಣವನ್ನ ಕೊಟ್ಟು ಮನೆಯನ್ನು ವಾಪಸ್ ತಗೊಬೇಕಿತ್ತು. ಇಲ್ಲಾಂದ್ರೆ ಆ ಮನೆ ಖರೀದಿ ಮಾಡಿದವನಿಗೇ ಸೇರಿಬಿಡ್ತಿತ್ತು. ಲೇವಿಯರು ತಮ್ಮ ಪಟ್ಟಣಗಳಲ್ಲಿದ್ದ ಮನೆಯನ್ನ ಮಾರಿದ್ರೆ ಅದನ್ನ ಯಾವಾಗ ಬೇಕಾದ್ರೂ ಅವ್ರು ವಾಪಸ್ ಖರೀದಿಸಬಹುದಿತ್ತು. ಯಾಕಂದ್ರೆ ಇಸ್ರಾಯೇಲ್ ದೇಶದಲ್ಲಿ ಅವ್ರಿಗೆ ಪಿತ್ರಾರ್ಜಿತವಾಗಿ ಯಾವ ಆಸ್ತಿನೂ ಸಿಕ್ಕಿರಲಿಲ್ಲ.—ಯಾಜ 25:29-34.
it-2-E ಪುಟ 122-123
ಜೂಬಿಲಿ
ಜೂಬಿಲಿ ವರ್ಷದ ನಿಯಮವನ್ನ ಇಸ್ರಾಯೇಲ್ಯರು ಪಾಲಿಸ್ತಾ ಇದ್ದಿದ್ರಿಂದ ಅವ್ರೆಲ್ಲಾ ಚೆನ್ನಾಗಿದ್ರು. ಅವ್ರಲ್ಲಿ ಯಾರೂ ಬಡತನದಿಂದ ಕಷ್ಟಪಡಬೇಕಿರಲಿಲ್ಲ. ಇವತ್ತು ಅನೇಕ ದೇಶಗಳಲ್ಲಿ ಒಂದೋ ತುಂಬ ಶ್ರೀಮಂತರಿರುತ್ತಾರೆ ಅಥ್ವಾ ತುಂಬ ಬಡವರಿರುತ್ತಾರೆ. ಆದ್ರೆ ಇಸ್ರಾಯೇಲ್ನಲ್ಲಿ ಈ ತರದ ಪರಿಸ್ಥಿತಿ ಇರ್ಲಿಲ್ಲ. ಅಲ್ಲಿ ಯಾರಿಗೂ ಯಾವುದಕ್ಕೂ ಕೊರತೆ ಇರಲಿಲ್ಲ, ಎಲ್ರಿಗೂ ಕೆಲ್ಸ ಇತ್ತು. ತಮ್ಮಲ್ಲಿದ್ದ ಕಲೆ ಕೌಶಲ್ಯವನ್ನ ಉಪಯೋಗಿಸಿ ಚೆನ್ನಾಗಿ ದುಡಿತಾ ಇದ್ದಿದ್ರಿಂದ ದೇಶದ ಆರ್ಥಿಕ ಸ್ಥಿತಿನೂ ಚೆನ್ನಾಗಿತ್ತು. ಯೆಹೋವನ ಆಶೀರ್ವಾದದಿಂದ ದೇಶದಲ್ಲಿ ಒಳ್ಳೇ ಬೆಳೆಯಾಗ್ತಿತ್ತು. ಅಷ್ಟೇ ಅಲ್ಲ ಯೆಹೋವನ ನಿಯಮಗಳ ಬಗ್ಗೆ ಕಲಿಸಲಾಗ್ತಿತ್ತು. ಎಷ್ಟರ ತನಕ ಜನ್ರು ದೇವ್ರ ಮಾತಿನ ಪ್ರಕಾರ ನಡಕೊಳ್ತಿದ್ರೋ ಅಷ್ಟರ ತನಕ ದೇವ್ರು ಇಷ್ಟಪಡೋ ತರ ರಾಜ್ಯಭಾರ ನಡಿತಿತ್ತು, ಜನ್ರೆಲ್ಲಾ ಖುಷಿಖುಷಿಯಾಗಿ ಇರ್ತಿದ್ರು.—ಯೆಶಾ. 33:22.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು10 1/1 ಪುಟ 12 ಪ್ಯಾರ 3
ಯಾರಾದರೂ ನಿಮ್ಮ ಮನನೋಯಿಸಿದಾಗ
ಇಸ್ರಾಯೇಲ್ಯನೊಬ್ಬನು ತನ್ನ ಜನಾಂಗದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಅವನ ಕಣ್ಣು ಕಿತ್ತುಹಾಕಿದರೆ ಹಲ್ಲೆನಡೆಸಿದವನಿಗೆ ಧರ್ಮಶಾಸ್ತ್ರಕ್ಕನುಸಾರ ನ್ಯಾಯವಾದ ಶಿಕ್ಷೆಯಾಗುತ್ತಿತ್ತು. ಆದರೆ ಈ ಶಿಕ್ಷೆಯನ್ನು ಹಲ್ಲೆನಡೆಸಿದವನಿಗಾಗಲಿ ಅವನ ಕುಟುಂಬದಲ್ಲೊಬ್ಬರಿಗಾಗಲಿ ವಿಧಿಸುವುದು ಅನ್ಯಾಯಕ್ಕೊಳಗಾದವನ ಕೆಲಸವಾಗಿರಲಿಲ್ಲ. ಅನ್ಯಾಯವನ್ನು ಯೋಗ್ಯ ರೀತಿಯಲ್ಲಿ ಇತ್ಯರ್ಥಮಾಡಲು ವಿಷಯವನ್ನು ಅಧಿಕಾರಿಗಳು ಅಂದರೆ ನೇಮಿತ ನ್ಯಾಯಾಧಿಪತಿಗಳ ಬಳಿಗೆ ಕೊಂಡೊಯ್ಯಬೇಕೆಂದು ಧರ್ಮಶಾಸ್ತ್ರವು ಅವಶ್ಯಪಡಿಸಿತು. ಒಬ್ಬನು ಉದ್ದೇಶಪೂರ್ವಕವಾಗಿ ಅಪರಾಧ ಅಥವಾ ಹಿಂಸಾತ್ಮಕ ಕೃತ್ಯವೆಸಗಿದರೆ ತನಗೂ ಅಂಥದ್ದೇ ಕೃತ್ಯದಿಂದ ಶಿಕ್ಷೆವಿಧಿಸಲಾಗುವುದೆಂಬ ಅರಿವು ಅಂಥ ದುಷ್ಕೃತ್ಯಗಳನ್ನು ಮಾಡದಂತೆ ತಡೆಯಸಾಧ್ಯವಿತ್ತು. ಅದಲ್ಲದೆ ಇನ್ನೂ ಹೆಚ್ಚಿನ ವಿಷಯಗಳು ಸೇರಿದ್ದವು.
ಫೆಬ್ರವರಿ 1-7
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 26-27
“ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?”
ಕಾವಲಿನಬುರುಜು08 4/15 ಪುಟ 4 ಪ್ಯಾರ 8
‘ವ್ಯರ್ಥಕಾರ್ಯಗಳನ್ನು’ ತೊರೆಯಿರಿ
8 “ಧನ” ದೇವರಾಗಲು ಹೇಗೆ ಸಾಧ್ಯ? ಉದಾಹರಣೆಗಾಗಿ, ಪುರಾತನ ಇಸ್ರಾಯೇಲಿನ ಹೊಲದಲ್ಲಿ ಒಂದು ಕಲ್ಲು ಇದೆಯೆಂದು ಕಲ್ಪಿಸಿಕೊಳ್ಳಿ. ಅಂಥ ಕಲ್ಲನ್ನು ಮನೆ ಅಥವಾ ಗೋಡೆ ಕಟ್ಟಲು ಉಪಯೋಗಿಸಸಾಧ್ಯವಿದೆ. ಆದರೆ, ಅದನ್ನೇ ಪವಿತ್ರ “ಕಂಬ”ವನ್ನಾಗಿ ಅಥವಾ “ವಿಚಿತ್ರವಾಗಿ ಕೆತ್ತಿದ ಕಲ್ಲು”ಗಳನ್ನಾಗಿ ಎತ್ತಿನಿಲ್ಲಿಸುವಲ್ಲಿ ಅದು ಯೆಹೋವನ ಜನರಿಗೆ ಎಡವುಗಲ್ಲಾಗುತ್ತದೆ. (ಯಾಜ. 26:1) ಅದೇ ರೀತಿಯಲ್ಲಿ ಹಣಕ್ಕೆ ಅದರದ್ದೇ ಆದ ಸ್ಥಾನವಿದೆ. ಕೇವಲ ಜೀವನಸಾಗಿಸಲಷ್ಟೇ ಅದು ನಮಗೆ ಆವಶ್ಯ. ಅಲ್ಲದೆ ಯೆಹೋವನ ಸೇವೆಯಲ್ಲಿಯೂ ಅದನ್ನು ಸದುಪಯೋಗಿಸಸಾಧ್ಯವಿದೆ. (ಪ್ರಸಂ. 7:12; ಲೂಕ 16:9) ಆದರೆ, ನಮ್ಮ ಕ್ರೈಸ್ತ ಸೇವೆಗಿಂತಲೂ ಹಣದ ಬೆನ್ನಟ್ಟುವಿಕೆಯನ್ನು ನಾವು ಪ್ರಥಮವಾಗಿಡುವಲ್ಲಿ ಅದು ನಮಗೆ ದೇವರಾಗುತ್ತದೆ. (1 ತಿಮೊಥೆಯ 6:9, 10 ಓದಿ.) ಹಣ ಗಳಿಸುವುದೇ ಜನರ ಪರಮ ಗುರಿಯಾಗಿರುವ ಈ ಲೋಕದಲ್ಲಿ ನಮಗೆ ಅದರ ಕುರಿತು ಸಮತೂಕದ ನೋಟವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.—1 ತಿಮೊ. 6:17-19.
it-1-E ಪುಟ 223 ಪ್ಯಾರ 3
ಭಯಭಕ್ತಿ
ಯೆಹೋವ ಮೋಶೆಯನ್ನ ಉಪಯೋಗಿಸಿದ ರೀತಿ ಮತ್ತು ಅವನ ಜೊತೆ ನಡಕೊಂಡ ರೀತಿಯಿಂದ ಜನ್ರಿಗೆ ಮೋಶೆಯನ್ನ ನೋಡಿದಾಗ ಆಶ್ಚರ್ಯ (ಹೀಬ್ರು ಪದ, ಮೊಹ್ರಾ) ಆಯ್ತು, ಅವನನ್ನ ನಂಬಿದ್ರು. (ಧರ್ಮೋ 34:10, 12; ವಿಮೋ 19:9) ಈ ರೀತಿ ನಂಬಿಕೆ ಇಟ್ಟವ್ರು ಮೋಶೆಯ ಅಧಿಕಾರಕ್ಕೆ ಗೌರವ ತೋರಿಸಿದ್ರು. ದೇವ್ರು ಮೋಶೆ ಮೂಲಕ ಮಾತಾಡ್ತಿದ್ದಾನೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರು. ಯೆಹೋವನ ಆರಾಧನಾ ಸ್ಥಳದ ಮೇಲೂ ಇಸ್ರಾಯೇಲ್ಯರಿಗೆ ಗೌರವ ಇತ್ತು. (ಯಾಜ 19:30; 26:2) ಜನ್ರು ಯೆಹೋವನನ್ನ ಆತನು ಹೇಳೋ ರೀತಿ ಆರಾಧನೆ ಮಾಡಿ ಮತ್ತು ಆತನು ಕೊಟ್ಟ ಆಜ್ಞೆಗಳನ್ನ ಪಾಲಿಸಿ ಆ ಆರಾಧನಾ ಸ್ಥಳದ ಮೇಲೆ ಭಯಭಕ್ತಿ ಇದೆ ಅಂತ ತೋರಿಸಿಕೊಟ್ರು.
ಕಾವಲಿನಬುರುಜು91-E 3/1 ಪುಟ 17 ಪ್ಯಾರ 10
“ಶಾಂತಿಯ ದೇವರು” ನಿಮ್ಮ ಹೃದಯ ಕಾಪಾಡ್ಲಿ
10 ಯೆಹೋವ ಇಸ್ರಾಯೇಲ್ಯರಿಗೆ, “ನೀವು ಯಾವಾಗ್ಲೂ ನನ್ನ ನಿಯಮಗಳನ್ನ, ಆಜ್ಞೆಗಳನ್ನ ಕೇಳಿ ಅದ್ರ ಪ್ರಕಾರ ನಡಿದ್ರೆ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬರೋ ತರ ಮಾಡ್ತೀನಿ. ನಿಮ್ಮ ಜಮೀನಲ್ಲಿ ಚೆನ್ನಾಗಿ ಬೆಳೆಯಾಗೋ ತರ, ಮರಗಳು ಜಾಸ್ತಿ ಹಣ್ಣು ಕೊಡೋ ತರ ಮಾಡ್ತೀನಿ. ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ. ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ. ನಿಮ್ಮ ದೇಶದೊಳಗೆ ಕ್ರೂರ ಪ್ರಾಣಿಗಳು ಬರದೇ ಇರೋ ತರ ಮಾಡ್ತೀನಿ. ಯಾರೂ ನಿಮ್ಮ ವಿರುದ್ಧ ಯುದ್ಧಕ್ಕೆ ಬರಲ್ಲ. ನಾನು ನಿಮ್ಮ ಮಧ್ಯ ನಡೆದಾಡ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ. ನೀವು ನನ್ನ ಜನರಾಗಿ ಇರ್ತಿರ” ಅಂತ ಹೇಳಿದನು. (ಯಾಜಕಕಾಂಡ 26:3, 4, 6, 12) ಇಸ್ರಾಯೇಲ್ಯರು ಎಷ್ಟರ ತನಕ ಯೆಹೋವ ಹೇಳಿದ ಮಾತನ್ನ ಪಾಲಿಸ್ತಾ ಇದ್ರೋ ಅಷ್ಟರ ತನಕ ಅವ್ರಿಗೆ ಶಾಂತಿ ಇರ್ತಿತ್ತು. ಅಂದ್ರೆ ಅವ್ರಿಗೆ ಯಾವ್ದೇ ಶತ್ರುಗಳ ಕಾಟ ಇರ್ತಾ ಇರ್ಲಿಲ್ಲ, ಯಾವ್ದಕ್ಕೂ ಕೊರತೆ ಇರ್ತಿರಲಿಲ್ಲ, ಯೆಹೋವನ ಜೊತೆ ಆಪ್ತ ಸಂಬಂಧ ಇರ್ತಿತ್ತು.—ಕೀರ್ತನೆ 119:165.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 617
ಕಾಯಿಲೆಗಳು
ದೇವರ ನಿಯಮ ಮುರಿದ ಕಾರಣ ಬಂದ ಕಾಯಿಲೆ. ಇಸ್ರಾಯೇಲ್ಯರು ದೇವರ ಜೊತೆ ಮಾಡಿಕೊಂಡ ಒಪ್ಪಂದವನ್ನ ಮುರಿದ್ರೆ ಅವ್ರಿಗೆ ಕಾಯಿಲೆ ಬರೋ ತರ ಮಾಡ್ತೀನಿ ಅಂತ ದೇವ್ರು ಮುಂಚೆನೇ ಎಚ್ಚರಿಕೆ ಕೊಟ್ಟಿದ್ದನು. (ಯಾಜ 26:14-16, 23-25; ಧರ್ಮೋ 28:15, 21, 22) ಒಳ್ಳೇ ಆರೋಗ್ಯ ಇರೋದು, ಯೆಹೋವನ ಜೊತೆ ಒಳ್ಳೇ ಸಂಬಂಧ ಇರೋದು ಆತನ ಆಶೀರ್ವಾದ ಅಂತ ಬೈಬಲಿನ ಅನೇಕ ವಚನಗಳಿಂದ ಗೊತ್ತಾಗುತ್ತೆ. (ಧರ್ಮೋ 7:12, 15; ಕೀರ್ತ 103:1-3; ಜ್ಞಾನೋ 3:1, 2, 7, 8; 4:21, 22; ಪ್ರಕ 21:1-4) ಆದ್ರೆ ಕಾಯಿಲೆ ಬರೋದು ಅಪರಿಪೂರ್ಣತೆಯಿಂದ ಮತ್ತು ಪಾಪದಿಂದ ಅಂತನೂ ಬೈಬಲ್ ಹೇಳುತ್ತೆ. (ವಿಮೋ 15:26; ಧರ್ಮೋ 28:58-61; ಯೆಶಾ 53:4, 5; ಮತ್ತಾ 9:2-6, 12; ಯೋಹಾ 5:14) ಕೆಲವೊಂದು ಸಂದರ್ಭಗಳಲ್ಲಿ ಯೆಹೋವ ದೇವ್ರು ನೇರವಾಗಿ ತಕ್ಷಣನೇ ಕೆಲವ್ರಿಗೆ ಕಾಯಿಲೆ ಬರುವಂತೆ ಮಾಡಿದ್ದಾನೆ. ಉದಾಹರಣೆಗೆ, ಮಿರ್ಯಾಮ, ಉಜ್ಜೀಯ ಮತ್ತು ಗೇಹಜಿಗೆ ಕುಷ್ಠ ಬರೋ ತರ ಮಾಡಿದನು. (ಅರ 12:10; 2ಪೂರ್ವ 26:16-21; 2ಅರ 5:25-27) ಆದ್ರೆ ಅನೇಕ ಸಂದರ್ಭಗಳಲ್ಲಿ ಜನ್ರಿಗೆ ಕಾಯಿಲೆ ಬಂದಿದ್ದು ಮತ್ತು ದೇಶದಲ್ಲಿ ಕಾಯಿಲೆ ಹರಡಿದ್ದು ಕೆಲವ್ರು ಮಾಡಿದ ಕೆಟ್ಟ ಕೆಲ್ಸದಿಂದ ಅಥ್ವಾ ಅವ್ರಲ್ಲಿದ್ದ ಪಾಪದಿಂದ. ಅವರೇನು ಬಿತ್ತಿದ್ರೋ ಅದನ್ನೇ ಕೊಯ್ದರು. ಅವರು ಹಿಡಿದ ಕೆಟ್ಟ ದಾರಿಯಿಂದ ಕಾಯಿಲೆಗಳನ್ನ ಅನುಭವಿಸಿದ್ರು. (ಗಲಾ 6:7, 8) ತುಂಬ ನೀಚವಾದ ಲೈಂಗಿಕ ಅನೈತಿಕತೆಯನ್ನ ಮಾಡಿದವ್ರು “ನಾಚಿಕೆಗೆಟ್ಟ ಕೆಲಸಗಳನ್ನ ಮಾಡಿ ತಮ್ಮ ದೇಹಗಳಿಗೇ ಗೌರವ ಕೊಡಲಿಲ್ಲ.” ಹಾಗಾಗಿ ಅವ್ರು ‘ತಮ್ಮ ತಪ್ಪಿಗೆ ಸರಿಯಾದ ಶಿಕ್ಷೆಯನ್ನ ಪೂರ್ತಿ ಅನುಭವಿಸೋಕೆ’ ದೇವ್ರು ಬಿಟ್ಟುಬಿಟ್ಟನು ಅಂತ ಅಪೊಸ್ತಲ ಪೌಲ ಹೇಳಿದ.—ರೋಮ 1:24-27.
ಫೆಬ್ರವರಿ 8-14
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 1-2
“ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ”
ಕಾವಲಿನಬುರುಜು94 12/1 ಪುಟ 9 ಪ್ಯಾರ 4
ನಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯ ಯುಕ್ತವಾದ ಸ್ಥಾನ
4 ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಇಸ್ರಾಯೇಲ್ನ ಮೇಲುನೋಟವನ್ನು ನೀವು ಪಡೆದಿದ್ದರೆ, ನೀವು ಏನನ್ನು ನೋಡುತ್ತಿದ್ದಿರಿ? ವಿಶಾಲವಾದ, ಆದರೆ ಬಹುಶಃ 30 ಲಕ್ಷ ಯಾ ಅದಕ್ಕಿಂತಲೂ ಹೆಚ್ಚು ಜನರಿಗೆ ಸ್ಥಳ ಒದಗಿಸಿದ ಗುಡಾರಗಳ ಕ್ರಮಬದ್ಧ ರಚನೆ. ಅವು ಮೂರು ಕುಲಗಳನುಸಾರ ವಿಭಾಗಿಸಲ್ಪಟ್ಟು, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಕಡೆಗೆ ಗುಂಪುಗೂಡಿಸಲ್ಪಟ್ಟಿದ್ದವು. ಇನ್ನೂ ಹತ್ತಿರಕ್ಕೆ ಇಣಕಿ ನೋಡುವುದಾದರೆ, ಶಿಬಿರದ ಮಧ್ಯ ಭಾಗಕ್ಕೆ ಹತ್ತಿರವಾಗಿ ಇನ್ನೊಂದು ಗುಂಪನ್ನು ಸಹ ನೀವು ಗಮನಿಸಿದಿರ್ದಬಹುದು. ಗುಡಾರಗಳ ಈ ನಾಲ್ಕು ಚಿಕ್ಕ ಗುಂಪುಗಳು ಲೇವಿ ಕುಲದ ಕುಟುಂಬಗಳ ವಾಸಸ್ಥಾನವಾಗಿದ್ದವು. ಶಿಬಿರದ ಮಧ್ಯದಲ್ಲಿ, ಬಟ್ಟೆಯ ಗೋಡೆಯಿಂದ ಬೇರ್ಪಡಿಸಲ್ಪಟ್ಟ ಒಂದು ಪ್ರದೇಶದಲ್ಲಿ, ಅಪೂರ್ವವಾದೊಂದು ರಚನೆಯಿತ್ತು. ಅದು “ದೇವದರ್ಶನದ ಗುಡಾರ” ಯಾ ಸಾಕ್ಷಿಗುಡಾರವಾಗಿತ್ತು. ಅದನ್ನು “ಜಾಣ” ಇಸ್ರಾಯೇಲ್ಯರು ಯೆಹೋವನ ಯೋಜನೆಗನುಸಾರ ಕಟ್ಟಿದ್ದರು.—ಅರಣ್ಯಕಾಂಡ 1:52, 53; 2:3, 10, 17, 18, 25; ವಿಮೋಚನಕಾಂಡ 35:10.
it-1-E ಪುಟ 397 ಪ್ಯಾರ 4
ಪಾಳೆಯ (ಕ್ಯಾಂಪ್)
ಇಸ್ರಾಯೇಲ್ಯರ ಪಾಳೆಯ ಅಂದ್ರೆ ಕ್ಯಾಂಪ್ ತುಂಬ ದೊಡ್ಡದಾಗಿತ್ತು. ಅವ್ರಲ್ಲಿದ್ದ ಸೈನಿಕರ ಸಂಖ್ಯೆನೇ 6,03,550 ಇತ್ತು. ಅದಲ್ಲದೇ ತುಂಬ ಹೆಂಗಸ್ರು, ಮಕ್ಕಳು, ವಯಸ್ಸಾದವ್ರು ಮತ್ತು ವಿಕಲಚೇತನರೂ ಇದ್ರು. 22,000 ಲೇವಿಯರೂ ಇದ್ರು. ಜೊತೆಗೆ ‘ಇಸ್ರಾಯೇಲ್ಯರಲ್ಲದ ಬೇರೆ ಜನ್ರೂ’ ಇದ್ರು. ಹೀಗೆ ಒಟ್ಟು 30,00,000ಕ್ಕಿಂತ ಜಾಸ್ತಿ ಜನ ಇದ್ರು. (ವಿಮೋ 12:38, ಪಾದಟಿಪ್ಪಣಿ, 44; ಅರ 3:21-34, 39) ಇಷ್ಟು ಜನ್ರಿಗೆ ಕ್ಯಾಂಪ್ ಹಾಕೋಕೆ ಎಷ್ಟು ಜಾಗ ಬೇಕಿತ್ತು ಅಂತ ಸರಿಯಾಗಿ ಹೇಳೋಕೆ ಆಗಲ್ಲ. ಮೋವಾಬ್ ಬಯಲು ಪ್ರದೇಶಗಳಲ್ಲಿ ಯೆರಿಕೋ ಮುಂದೆ ಪಾಳೆಯ ಹಾಕಿದಾಗ ಆ ಪಾಳೆಯ “ಬೇತ್ಯೆಷಿಮೋತಿಂದ ಹಿಡಿದು ಆಬೇಲ್ಶಿಟ್ಟೀಮಿನ ತನಕ” ಇತ್ತು ಅಂತ ಬೈಬಲ್ ಹೇಳುತ್ತೆ.—ಅರ 33:49.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 764
ಹೆಸ್ರು ಪಟ್ಟಿ
ಹೆಚ್ಚಾಗಿ ಕುಲ ಅಥ್ವಾ ಮನೆತನದ ಪ್ರಕಾರ ಹೆಸ್ರನ್ನು, ವಂಶಾವಳಿಯನ್ನು ಪಟ್ಟಿ ಮಾಡ್ತಿದ್ರು. ಇಸ್ರಾಯೇಲಿನಲ್ಲಿ ಬರೀ ಜನಗಣತಿ ಮಾಡಕ್ಕೋಸ್ಕರ ಹೆಸ್ರು ಪಟ್ಟಿ ಮಾಡ್ತಿರಲಿಲ್ಲ. ಬದ್ಲಿಗೆ ತೆರಿಗೆ ವಸೂಲಿ ಮಾಡೋಕೆ, ಜನ್ರನ್ನ ಸೈನ್ಯಕ್ಕೆ ಸೇರಿಸಿಕೊಳ್ಳೋಕೆ ಅಥ್ವಾ ಆರಾಧನಾ ಸ್ಥಳದಲ್ಲಿ ಕೆಲ್ಸ (ಲೇವಿಯರ ಕೆಲ್ಸ) ವಹಿಸೋಕೂ ಹೆಸ್ರು ಪಟ್ಟಿ ಮಾಡ್ತಿದ್ರು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು08-E 7/1 ಪುಟ 21
ನಿಮಗೆ ಗೊತ್ತಿತ್ತಾ?
ಇಸ್ರಾಯೇಲ್ ಜನಾಂಗದಲ್ಲಿ 13 ಕುಲಗಳಿದ್ರೂ ಬೈಬಲ್ ಇಸ್ರಾಯೇಲನ್ನ 12 ಕುಲದ ಜನಾಂಗ ಅಂತ ಯಾಕೆ ಹೇಳುತ್ತೆ?
ಯಾಕೋಬನ ಗಂಡುಮಕ್ಕಳಿಂದ ಬಂದ ಕುಟುಂಬಗಳು, ಕುಲಗಳು ಸೇರಿ ಇಸ್ರಾಯೇಲ್ ಜನಾಂಗ ಆಯ್ತು. (ಇಸ್ರಾಯೇಲ್ ಅನ್ನೋದು ಯಾಕೋಬನ ಇನ್ನೊಂದು ಹೆಸ್ರು.) ಯಾಕೋಬನಿಗೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ದಾನ್, ನಫ್ತಾಲಿ, ಗಾದ್, ಅಶೇರ್, ಇಸ್ಸಾಕಾರ್, ಜೆಬುಲೂನ್, ಯೋಸೇಫ, ಬೆನ್ಯಾಮೀನ್ ಅನ್ನೋ 12 ಮಕ್ಕಳಿದ್ರು. (ಆದಿಕಾಂಡ 29:32–30:24; 35:16-18) ಇವ್ರಲ್ಲಿ 11 ಮಕ್ಕಳ ಹೆಸ್ರೇ ಅವ್ರ ಕುಲಗಳಿಗೂ ಬಂತು. ಆದ್ರೆ ಯೋಸೇಫನ ಕುಲಕ್ಕೆ ಅವನ ಹೆಸ್ರು ಬರ್ಲಿಲ್ಲ. ಅದ್ರ ಬದ್ಲು ಅವ್ನ ಇಬ್ರು ಗಂಡು ಮಕ್ಕಳಾದ ಎಫ್ರಾಯೀಮ್ ಮತ್ತು ಮನಸ್ಸೆ ಹೆಸ್ರಲ್ಲಿ ಎರಡು ಕುಲಗಳು ಬಂತು. ಅವ್ರೇ ಆ ಎರಡು ಕುಲಗಳ ನಾಯಕರಾಗಿದ್ರು. ಹೀಗೆ ಇಸ್ರಾಯೇಲಲ್ಲಿ ಒಟ್ಟು 13 ಕುಲಗಳಿದ್ವು. ಹಾಗಿದ್ರೂ ಬೈಬಲ್ ಯಾಕೆ ಇಸ್ರಾಯೇಲನ್ನ 12 ಕುಲದ ಜನಾಂಗ ಅಂತ ಹೇಳುತ್ತೆ?
ಈ ಕುಲಗಳಲ್ಲಿ ಲೇವಿ ಕುಲದ ಗಂಡಸ್ರನ್ನ ದೇಶದರ್ಶನ ಗುಡಾರದಲ್ಲಿ ನಂತ್ರ ದೇವಾಲಯದಲ್ಲಿ ಸೇವೆ ಮಾಡೋಕೆ ಯೆಹೋವ ಆರಿಸ್ಕೊಂಡನು. ಹಾಗಾಗಿ ಅವ್ರು ಸೈನ್ಯದಲ್ಲಿ ಸೇವೆ ಮಾಡಬೇಕಾಗಿ ಇರ್ಲಿಲ್ಲ. ಯೆಹೋವ ಮೋಶೆಗೆ, “ನೀನು ಲೇವಿ ಕುಲದ ಗಂಡಸರ ಹೆಸ್ರನ್ನ ಮಾತ್ರ ಸೇರಿಸ್ಕೊಳ್ಳಬಾರದು. ಅವ್ರ ಸಂಖ್ಯೆಯನ್ನ ಬೇರೆ ಇಸ್ರಾಯೇಲ್ಯರ ಸಂಖ್ಯೆ ಜೊತೆ ಸೇರಿಸಬಾರದು. ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ, ಪವಿತ್ರ ಡೇರೆಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನ ನೋಡ್ಕೊಳ್ಳೋಕೆ ನೀನು ಲೇವಿಯರನ್ನ ನೇಮಿಸಬೇಕು” ಅಂತ ಹೇಳಿದನು.—ಅರಣ್ಯಕಾಂಡ 1:49, 50.
ಇಸ್ರಾಯೇಲ್ಯರು ಕಾನಾನ್ ದೇಶವನ್ನ ವಶ ಮಾಡ್ಕೊಂಡಾಗ ಲೇವಿ ಕುಲದವ್ರಿಗೆ ಜಮೀನಲ್ಲಿ ಪಾಲಾಗ್ಲಿ, ಆಸ್ತಿಯಾಗ್ಲಿ ಸಿಗ್ಲಿಲ್ಲ. ಆದ್ರೆ ಇಡೀ ಇಸ್ರಾಯೇಲ್ ಪ್ರದೇಶಗಳಲ್ಲಿ ಚದುರಿಹೋಗಿದ್ದ 48 ಪಟ್ಟಣಗಳನ್ನ ಅವ್ರಿಗೇ ಅಂತ ಕೊಡಲಾಯ್ತು.—ಅರಣ್ಯಕಾಂಡ 18:20-24; ಯೆಹೋಶುವ 21:41.
ಈ ಎರಡು ಕಾರಣಗಳಿಂದಾಗಿ, ಇಸ್ರಾಯೇಲ್ಯರ ಕುಲಗಳನ್ನ ಲೆಕ್ಕ ಹಾಕುವಾಗ ಲೇವಿ ಕುಲವನ್ನ ಸೇರಿಸ್ಕೊಳ್ಳದೆ ಒಟ್ಟು 12 ಕುಲ ಅಂತ ಬೈಬಲ್ ಹೇಳುತ್ತೆ.—ಅರಣ್ಯಕಾಂಡ 1:1-15.
ಫೆಬ್ರವರಿ 15-21
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 3-4
“ಲೇವಿಯರ ಸೇವೆ”
it-2-E ಪುಟ 683 ಪ್ಯಾರ 3
ಪುರೋಹಿತ
ಮೋಶೆಗೆ ಕೊಟ್ಟ ಒಪ್ಪಂದದ ನಿಯಮದ ಪ್ರಕಾರ. ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಗುಲಾಮಗಿರಿ ಮಾಡ್ತಿದ್ದಾಗ ಯೆಹೋವ ಹತ್ತನೇ ಶಿಕ್ಷೆ ತಂದ ಸಮಯದಲ್ಲಿ ಈಜಿಪ್ಟಿನ ಎಲ್ಲಾ ಮೊದಲ ಗಂಡುಮಕ್ಕಳನ್ನ ನಾಶಮಾಡಿದನು. ಆದ್ರೆ ಇಸ್ರಾಯೇಲಿನ ಮೊದಲ ಗಂಡುಮಕ್ಕಳೆಲ್ಲಾ ತನಗೆ ಸೇರಿದ್ದಾರೆ ಅಂತ ಹೇಳಿದನು. (ವಿಮೋ 12:29; ಅರ 3:13) ಇದರರ್ಥ ಅವರನ್ನ ಯೆಹೋವ ವಿಶೇಷ ಸೇವೆಗೆ ಆರಿಸಿಕೊಂಡಿದ್ದನು. ಇಸ್ರಾಯೇಲಿನ ಎಲ್ಲಾ ಮೊದಲ ಗಂಡುಮಕ್ಕಳನ್ನ ಪುರೋಹಿತ ಸೇವೆಗೆ ಮತ್ತು ಆರಾಧನಾ ಸ್ಥಳವನ್ನ ನೋಡ್ಕೊಳ್ಳೋ ಕೆಲ್ಸಕ್ಕೆ ನೇಮಿಸಬಹುದಿತ್ತು. ಆದ್ರೆ ಲೇವಿ ಕುಲದ ಗಂಡಸರನ್ನ ಈ ಸೇವೆ ಮಾಡೋಕೆ ಆರಿಸಿಕೊಂಡನು. ಈ ಕಾರಣಕ್ಕೆ ಇಸ್ರಾಯೇಲ್ಯರ ಎಲ್ಲಾ 12 ಕುಲಗಳ ಮೊದಲ ಗಂಡುಮಕ್ಕಳನ್ನ ಆರಿಸಿಕೊಳ್ಳೋ ಬದ್ಲು ಲೇವಿ ಕುಲದ ಗಂಡಸ್ರನ್ನ ಮಾತ್ರ ಆರಿಸಿಕೊಂಡನು. (ಯೋಸೇಫನ ಮಕ್ಕಳಾದ ಮನಸ್ಸೆ ಮತ್ತು ಎಫ್ರಾಯಿಮ್ಯರನ್ನ ಎರಡು ಕುಲಗಳಾಗಿ ಲೆಕ್ಕಕ್ಕೆ ತಗೊಂಡಿದ್ರಿಂದ ಇಸ್ರಾಯೇಲಿನಲ್ಲಿ ಲೇವಿಯರನ್ನ ಬಿಟ್ಟು ಇನ್ನೂ 12 ಕುಲಗಳಿದ್ವು.) ಆ 12 ಕುಲಗಳಲ್ಲಿದ್ದ ಮೊದಲ ಗಂಡುಮಕ್ಕಳನ್ನ ಲೆಕ್ಕ ಹಾಕಿದಾಗ ಲೇವಿ ಕುಲದಲ್ಲಿದ್ದ ಒಟ್ಟು ಗಂಡಸ್ರಿಗಿಂತ 273 ಗಂಡುಮಕ್ಕಳು ಜಾಸ್ತಿ ಇದ್ರು. ಒಬ್ಬೊಬ್ಬ ಗಂಡುಮಗುವಿಗೂ ಐದೈದು ಶೆಕೆಲ್ನಷ್ಟು (ಸುಮಾರು 800 ರೂಪಾಯಿ) ಬಿಡುಗಡೆ ಬೆಲೆಯನ್ನು ಆರೋನ ಮತ್ತವನ ಗಂಡುಮಕ್ಕಳಿಗೆ ಕೊಟ್ಟು ಅವ್ರನ್ನ ಬಿಡಿಸಬೇಕಿತ್ತು. (ಅರ 3:11-16, 40-51) ಯೆಹೋವ ಈ ಏರ್ಪಾಡಿನ ಬಗ್ಗೆ ಹೇಳೋ ಮುಂಚೆನೇ ಇಸ್ರಾಯೇಲಲ್ಲಿ ಲೇವಿಕುಲದ ಆರೋನನ ಕುಟುಂಬದ ಎಲ್ಲಾ ಗಂಡಸರನ್ನ ಪುರೋಹಿತ ಸೇವೆಗೆ ಆರಿಸಿಕೊಂಡಿದ್ದನು.—ಅರ 1:1; 3:6-10.
it-2-E ಪುಟ 241
ಲೇವಿಯರು
ಕೆಲಸಗಳು. ಲೇವಿಯ ಮಕ್ಕಳು ಗೇರ್ಷೋನ್ (ಗೇರ್ಷೋಮ್), ಕೆಹಾತ್, ಮೆರಾರೀ. ಈ ಮೂರು ಮಕ್ಕಳ ಕುಟುಂಬ ಸೇರಿನೇ ಲೇವಿ ಕುಲ ಆಯ್ತು. (ಆದಿ 46:11; 1ಪೂರ್ವ 6:1, 16) ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಪವಿತ್ರ ಡೇರೆಯ ಅಕ್ಕಪಕ್ಕನೇ ಈ ಮೂರು ಕುಟುಂಬಗಳು ಡೇರೆ ಹಾಕೊಳ್ಳಬೇಕಿತ್ತು. ಕೆಹಾತ್ಯರಲ್ಲಿ ಆರೋನನ ಕುಟುಂಬ ಪೂರ್ವ ದಿಕ್ಕಲ್ಲಿ ಅಂದ್ರೆ ದೇವದರ್ಶನದ ಡೇರೆಯ ಎದುರಲ್ಲಿ ಡೇರೆ ಹಾಕೊಂಡ್ರು. ಉಳಿದ ಕೆಹಾತ್ಯರು ದಕ್ಷಿಣದಲ್ಲಿ, ಗೇರ್ಷೋನ್ಯರು ಪಶ್ಚಿಮದಲ್ಲಿ ಮತ್ತು ಮೆರಾರೀಯರು ಉತ್ತರದಲ್ಲಿ ಡೇರೆ ಹಾಕೊಂಡ್ರು. (ಅರ 3:23, 29, 35, 38) ಪವಿತ್ರ ಡೇರೆಯ ಭಾಗಗಳನ್ನ ಬಿಡಿಸೋದು, ಅದನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಗೊಂಡು ಹೋಗೋದು ಮತ್ತು ಆ ಭಾಗಗಳನ್ನ ಜೋಡಿಸೋದು ಇದೆಲ್ಲಾ ಲೇವಿಯರು ಮಾಡಬೇಕಾಗಿದ್ದ ಕೆಲ್ಸ ಆಗಿತ್ತು. ಪವಿತ್ರ ಡೇರೆಯನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಗೊಂಡು ಹೋಗ್ವಾಗ ಆರೋನ ಮತ್ತವನ ಮಕ್ಕಳು ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ ಮಧ್ಯೆ ಇದ್ದ ಪರದೆಯನ್ನ ತೆಗಿಬೇಕಿತ್ತು. ಮಂಜೂಷವನ್ನ, ವೇದಿಗಳನ್ನ, ಪವಿತ್ರ ಪೀಠೋಪಕರಣಗಳನ್ನ, ಪಾತ್ರೆಗಳನ್ನ ಬಟ್ಟೆಯಿಂದ ಮುಚ್ಚಬೇಕಿತ್ತು. ಇದನ್ನೆಲ್ಲಾ ಕೆಹಾತ್ಯರು ಹೊತ್ತುಕೊಂಡು ಹೋಗ್ಬೇಕಿತ್ತು. ಗೇರ್ಷೋನ್ಯರು ಡೇರೆ ಬಟ್ಟೆಗಳನ್ನ, ಹೊದಿಕೆಗಳನ್ನ, ಪರದೆಗಳನ್ನ, ಅಂಗಳದಲ್ಲಿ ತೂಗಬಿಟ್ಟಿದ್ದ ಪರದೆಗಳನ್ನ, ಡೇರೆ ಹಗ್ಗಗಳನ್ನ ಹೊತ್ತುಕೊಂಡು ಹೋಗ್ತಿದ್ರು. ಮೆರಾರೀಯರು ಪವಿತ್ರ ಡೇರೆಯ ಎಲ್ಲ ಚೌಕಟ್ಟುಗಳನ್ನ, ಕೋಲುಗಳನ್ನ, ಕಂಬಗಳನ್ನ, ಅಡಿಗಲ್ಲುಗಳನ್ನ, ಡೇರೆಯ ಗೂಟಗಳನ್ನ, ಹಗ್ಗಗಳನ್ನ (ಪವಿತ್ರ ಡೇರೆಯ ಅಂಗಳದ ಸುತ್ತ ಇದ್ದ ಡೇರೆಯ ಹಗ್ಗಗಳನ್ನ) ಹೊತ್ತುಕೊಂಡು ಹೋಗ್ತಿದ್ರು.—ಅರ 1:50, 51; 3:25, 26, 30, 31, 36, 37; 4:4-33; 7:5-9.
it-2-E ಪುಟ 241
ಲೇವಿಯರು
ಮೋಶೆಯ ದಿನದಲ್ಲಿ ಲೇವಿಯ ಗಂಡಸ್ರು 30 ವರ್ಷ ದಾಟಿದ ಮೇಲೆನೇ ದೇವದರ್ಶನ ಡೇರೆಯಲ್ಲಿ ಸೇವೆ ಶುರುಮಾಡಬೇಕಿತ್ತು. ಉದಾಹರಣೆಗೆ, ದೇವದರ್ಶನ ಡೇರೆಯನ್ನ, ಡೇರೆಯಲ್ಲಿದ್ದ ವಸ್ತುನ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಗೊಂಡು ಹೋಗೋದು. (ಅರ 4:46-49) ಕೆಲವು ಕೆಲ್ಸಗಳನ್ನ 25 ನೇ ವಯಸ್ಸಲ್ಲೂ ಮಾಡ್ತಿದ್ರು. ಆದ್ರೆ ಕಷ್ಟದ ಕೆಲ್ಸಗಳನ್ನ ಅಂದ್ರೆ ಡೇರೆಯನ್ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಗೊಂಡು ಹೋಗುವಂಥ ಕೆಲ್ಸನ ಬಹುಶಃ ಮಾಡ್ತಾ ಇರಲಿಲ್ಲ. (ಅರ 8:24) ಆದ್ರೆ ರಾಜ ದಾವೀದನ ಸಮಯದಷ್ಟಕ್ಕೆ ಲೇವಿಯರು 20 ವರ್ಷಕ್ಕೇ ಸೇವೆ ಶುರುಮಾಡಬಹುದಿತ್ತು. ಇದಕ್ಕೆ ದಾವೀದ ಒಂದು ಕಾರಣ ಕೊಟ್ಟ. ಇನ್ನು ಸ್ವಲ್ಪ ಸಮ್ಯದಲ್ಲೇ ದೇವಾಲಯವನ್ನ ಕಟ್ಟಕ್ಕಿದ್ರು. ಹಾಗಾಗಿ ಡೇರೆಯನ್ನಾಗ್ಲಿ ಡೇರೆಯ ಉಪಕರಣಗಳನ್ನಾಗ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರೋ ಅಗತ್ಯ ಇಲ್ಲ ಅಂತ ಅವನು ಹೇಳಿದ. ಲೇವಿಯರು 50 ವರ್ಷದ ತನಕ ಸೇವೆ ಮಾಡಬಹುದಿತ್ತು. (ಅರ 8:25, 26; 1ಪೂರ್ವ 23:24-26) ಲೇವಿಯರಿಗೆ ನಿಯಮ ಪುಸ್ತಕದ ಬಗ್ಗೆ ಚೆನ್ನಾಗಿ ಗೊತ್ತಿರಬೇಕಿತ್ತು. ಯಾಕಂದ್ರೆ ನಿಯಮ ಪುಸ್ತಕವನ್ನ ಅವ್ರು ಎಲ್ರ ಮುಂದೆ ಓದಬೇಕಿತ್ತು. ಅಷ್ಟೇ ಅಲ್ಲ ಅದ್ರಲ್ಲಿರೋ ವಿಷ್ಯಗಳನ್ನ ಕಲಿಸೋ ಜವಾಬ್ದಾರಿನೂ ಅವ್ರಿಗಿತ್ತು.—1ಪೂರ್ವ 15:27; 2ಪೂರ್ವ 5:12; 17:7-9; ನೆಹೆ 8:7-9.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು06 8/1 ಪುಟ 24 ಪ್ಯಾರ 13
ದೇವರಿಗೆ ಭಯಪಟ್ಟು ವಿವೇಕಿಗಳಾಗಿರಿ!
13 ಸಂಕಟಕಾಲದಲ್ಲಿ ಯೆಹೋವನ ಸಹಾಯವನ್ನು ಪಡೆದುಕೊಂಡದ್ದು ದಾವೀದನಲ್ಲಿದ್ದ ದೇವಭಯವನ್ನು ಆಳವಾಗಿಸಿ, ಅವನಿಗೆ ದೇವರಲ್ಲಿದ್ದ ಭರವಸೆಯನ್ನು ಬಲಪಡಿಸಿತು. (ಕೀರ್ತನೆ 31:22-24) ಆದರೂ, ಮೂರು ಗಮನಾರ್ಹ ಸಂದರ್ಭಗಳಲ್ಲಿ ದಾವೀದನಲ್ಲಿದ್ದ ದೇವಭಯವು ಕ್ಷೀಣಿಸಲಾಗಿ, ಅದು ಭಯಂಕರ ಪರಿಣಾಮಗಳನ್ನುಂಟುಮಾಡಿತು. ಇವುಗಳಲ್ಲಿ ಮೊದಲನೆಯದು, ಯೆಹೋವನ ಒಡಂಬಡಿಕೆಯ ಮಂಜೂಷವನ್ನು ದೇವರ ಧರ್ಮಶಾಸ್ತ್ರ ವಿಧಿಸಿದಂತೆ, ಯಾಜಕರ ಹೆಗಲುಗಳ ಮೇಲೆ ಅಲ್ಲ ಬದಲಿಗೆ ಬಂಡಿಯ ಮೇಲೆ ರವಾನಿಸಲು ದಾವೀದನು ಏರ್ಪಡಿಸಿದ ಸಂಗತಿಯಾಗಿತ್ತು. ಬಂಡಿ ನಡೆಸುತ್ತಿದ್ದ ಉಜ್ಜನು, ಮಂಜೂಷವು ಬೀಳದಂತೆ ಅದನ್ನು ಹಿಡಿದಾಗ ಆ “ತಪ್ಪಿನ [“ಪೂಜ್ಯಭಾವವಿಲ್ಲದ ಕೃತ್ಯದ,” NW] ಸಲುವಾಗಿ” ಆ ಕೂಡಲೇ ಸತ್ತನು. ಹೌದು, ಉಜ್ಜನ ತಪ್ಪು ಗಂಭೀರವಾಗಿತ್ತಾದರೂ, ಮುಖ್ಯವಾಗಿ ಈ ದುರಂತಕ್ಕೆ ಕಾರಣವು ದೇವರ ಧರ್ಮಶಾಸ್ತ್ರಕ್ಕೆ ದಾವೀದನು ಯೋಗ್ಯ ಗೌರವವನ್ನು ತೋರಿಸಲು ತಪ್ಪಿದ್ದೇ ಆಗಿತ್ತು. ದೇವರಿಗೆ ಭಯಪಡುವುದೆಂದರೆ ಆತನ ಏರ್ಪಾಡಿಗನುಸಾರ ಕ್ರಿಯೆಗೈಯುವುದೆಂದರ್ಥ.—2 ಸಮುವೇಲ 6:2-9; ಅರಣ್ಯಕಾಂಡ 4:15; 7:9.
ಫೆಬ್ರವರಿ 22-28
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 5-6
“ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?”
it-2-E ಪುಟ 477
ನಾಜೀರ
ಯಾರಾದ್ರೂ ನಾಜೀರನಾಗೋ ವಿಶೇಷ ಹರಕೆ ಹೊತ್ಕೊಂಡ್ರೆ ಅವನು ಮೂರು ವಿಷ್ಯಗಳನ್ನ ಮಾಡಬಾರದಿತ್ತು. (1) ಮತ್ತುಬರಿಸೋ ಯಾವ್ದನ್ನೂ ಕುಡಿಬಾರದಿತ್ತು. ಕಾಯಿ ದ್ರಾಕ್ಷಿ, ಹಣ್ಣು ದ್ರಾಕ್ಷಿ, ಒಣ ದ್ರಾಕ್ಷಿಯಿಂದ ಮಾಡಿದ ಯಾವ್ದನ್ನೂ ತಿನ್ನಬಾರದಿತ್ತು. ಅಷ್ಟೇ ಅಲ್ಲ, ತಾಜಾ ದ್ರಾಕ್ಷಾರಸ, ದ್ರಾಕ್ಷಾಮದ್ಯ, ಹುಳಿರಸ ಕುಡಿಬಾರದಿತ್ತು. (2) ತನ್ನ ತಲೆಕೂದಲನ್ನ ಕತ್ತರಿಸಬಾರದಿತ್ತು. (3) ಶವವನ್ನ ಮುಟ್ಟಬಾರದಿತ್ತು. ಅದು ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ ಯಾರದೇ ಆಗಿದ್ರೂ ಮುಟ್ಟಬಾರದಿತ್ತು.—ಅರ 6:1-7.
ವಿಶೇಷ ಹರಕೆ. ನಾಜೀರನಾಗಿರೋದು ಅಂದ್ರೆ ‘ಅದಕ್ಕಂತಾನೇ ಇರೋನು, ಮೀಸಲು’ ಅಂತ ಅರ್ಥ. ಈ ವಿಶೇಷ ಹರಕೆಯನ್ನ ಹೊತ್ಕೊಂಡವನು ‘ಯೆಹೋವನಿಗಾಗಿ ನಾಜೀರನಾಗಿ’ ಇರಬೇಕಿತ್ತೇ ಹೊರತು ಮನುಷ್ಯರ ಮೆಚ್ಚಿಗೆ ಗಳಿಸೋಕೆ ಅಥ್ವಾ ತಾನೊಬ್ಬ ದೊಡ್ಡ ದೇವಭಕ್ತ ಅಂತ ತೋರಿಸ್ಕೊಳ್ಳೋಕೆ ಅಲ್ಲ. ಅವನು ‘ನಾಜೀರನಾಗಿ ಇರೋ ದಿನ ತನಕ ಯೆಹೋವನ ದೃಷ್ಟಿಯಲ್ಲಿ ಪವಿತ್ರನಾಗಿ’ ಇರ್ತಿದ್ದ.—ಅರ 6:2, 8.
ನಾಜೀರರಿಗೆ ಕೊಟ್ಟಂಥ ನಿಯಮಗಳಿಗೆ ಯೆಹೋವನ ಆರಾಧನೆಯಲ್ಲಿ ವಿಶೇಷ ಅರ್ಥ ಇತ್ತು. ಮಹಾ ಪುರೋಹಿತರು ತಮ್ಮ ನೇಮಕವನ್ನ ಮಾಡ್ವಾಗ ಯಾವ ಶವವನ್ನೂ ಮುಟ್ಟಬಾರದಿತ್ತು. ಅವ್ರ ಆಪ್ತ ಸಂಬಂಧಿಕರ ಶವವನ್ನೂ ಮುಟ್ಟಬಾರದಿತ್ತು. ಅದೇ ರೀತಿ ಆ ನಿಯಮವನ್ನ ನಾಜೀರರೂ ಪಾಲಿಸಬೇಕಿತ್ತು. ಮಹಾ ಪುರೋಹಿತರಿಗೆ ಮತ್ತು ಪುರೋಹಿತರಿಗೆ ಗಂಭೀರ ಜವಾಬ್ದಾರಿಗಳಿದ್ವು. ಹಾಗಾಗಿ ಅವರು ದ್ರಾಕ್ಷಾಮದ್ಯ ಕುಡಿದು ಪವಿತ್ರ ಡೇರೆ ಒಳಗೆ ಹೋಗಬಾರದಿತ್ತು.—ಯಾಜ 10:8-11; 21:10, 11.
ನಾಜೀರನಾದವನು (ಹೀಬ್ರು ಪದ ನಾಜ಼ಿರ್) ‘ತನ್ನ ತಲೆಕೂದಲನ್ನ ಕತ್ತರಿಸಬಾರದಿತ್ತು.’ ಅದು ಅವನಿಗೆ ಕಿರೀಟವಾಗಿತ್ತು. ಅವನ ತಲೆ ಕೂದಲನ್ನ ನೋಡಿದವರು ಅವನು ನಾಜೀರನ ಹರಕೆ ಹೊತ್ಕೊಂಡಿದ್ದಾನೆ ಅಂತ ಗುರುತಿಸ್ತಿದ್ರು. (ಅರ 6:5) ಸಬ್ಬತ್ತಲ್ಲಿ ಮತ್ತು ಜೂಬಿಲಿ ವರ್ಷದಲ್ಲಿ “ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿ“ ಬಗ್ಗೆ ಹೇಳುವಾಗ್ಲೂ ನಾಜ಼ಿರ್ ಅನ್ನೋ ಹೀಬ್ರು ಪದವನ್ನೇ ಬೈಬಲ್ ಬಳಸಿದೆ. (ಯಾಜ 25:5, 11) ಆಸಕ್ತಿಯ ವಿಷ್ಯ ಏನಂದ್ರೆ, ಮಹಾ ಪುರೋಹಿತನ ತಲೆ ಮೇಲೆ ಇರ್ತಿದ್ದ ಪೇಟಕ್ಕೆ ಕಟ್ಟಿದ ಚಿನ್ನದ ಫಲಕದ ಮೇಲೆ “ಯೆಹೋವ ಪವಿತ್ರನು” ಅಂತ ಕೆತ್ತಲಾಗಿತ್ತು. ಇದು “ಪವಿತ್ರ ಚಿಹ್ನೆ ಆಗಿತ್ತು.” [‘ಪವಿತ್ರ ಚಿಹ್ನೆಗೆ’ ಬಳಸಿರೋ ಹೀಬ್ರು ಪದ ನೇಜ಼ೆರ್. ಇದು ನಾಜ಼ಿರ್ ಪದದಿಂದ ಬಂದಿದೆ.] (ವಿಮೋ 39:30, 31) ಅದೇ ತರ ಇಸ್ರಾಯೇಲಿನ ರಾಜರು ಧರಿಸ್ತಿದ್ದ ಕಿರೀಟವನ್ನ ನೇಜ಼ೆರ್ ಅಂತ ಕರೀತಾ ಇದ್ರು. (2ಸಮು 1:10; 2ಅರ 11:12) ಒಬ್ಬ ಕ್ರೈಸ್ತ ಸಹೋದರಿಗೆ ಮುಸುಕಿನ ಬದ್ಲು ಉದ್ದ ಕೂದಲು ಕೊಡಲಾಗಿದೆ ಅಂತ ಅಪೊಸ್ತಲ ಪೌಲ ಹೇಳಿದ. ಅದು ಸಭೆಯಲ್ಲಿ ಪುರುಷನ ಸ್ಥಾನ ತಮಗಿಲ್ಲ, ದೇವ್ರ ಏರ್ಪಾಡಿಗೆ ತಾನು ಅಧೀನಳಾಗಬೇಕು ಅನ್ನೋದನ್ನ ಸ್ತ್ರೀಗೆ ನೆನಪು ಹುಟ್ಟಿಸ್ತಿತ್ತು. ಹಾಗಾಗಿ ಒಬ್ಬ ನಾಜೀರ (ಸ್ತ್ರೀಯರ ತರ) ತಲೆ ಕೂದಲನ್ನ ಕತ್ತರಿಸದೇ ಇರೋದು, ದ್ರಾಕ್ಷಾಮದ್ಯ ತಗೊಳ್ಳದೇ ಇರೋದು ಮತ್ತು ಶುದ್ಧರಾಗಿ ಇರೋದು ತಮಗೆ ತಾವು ಹೆಚ್ಚು ಪ್ರಾಮುಖ್ಯತೆ ಕೊಡ್ದೆ ಸಂಪೂರ್ಣ ಅಧೀನತೆಯಿಂದ ಯೆಹೋವನ ಇಷ್ಟ ಮಾಡ್ತೀವಿ ಅಂತ ತೋರಿಸಿಕೊಡ್ತಿತ್ತು.—1ಕೊರಿಂ 11:2-16.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು05 1/15 ಪುಟ 30 ಪ್ಯಾರ 2
ವಾಚಕರಿಂದ ಪ್ರಶ್ನೆಗಳು
ಸಂಸೋನನಾದರೋ ತೀರ ಭಿನ್ನ ಅರ್ಥದಲ್ಲಿ ನಾಜೀರನಾಗಿದ್ದನು. ಸಂಸೋನನ ಜನನಕ್ಕೆ ಮುಂಚೆಯೇ ಯೆಹೋವನ ದೂತನು ಅವನ ತಾಯಿಗೆ ಹೀಗೆ ತಿಳಿಸಿದನು: “ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು ಅಂದನು.” (ನ್ಯಾಯಸ್ಥಾಪಕರು 13:5) ಸಂಸೋನನು ನಾಜೀರತನದ ಹರಕೆಯನ್ನು ಮಾಡಿಕೊಳ್ಳಲಿಲ್ಲ. ದೈವಿಕ ನೇಮಕದಿಂದಲೇ ಅವನು ಒಬ್ಬ ನಾಜೀರನಾಗಿದ್ದನು, ಮತ್ತು ಅವನ ಜೀವಮಾನದಾದ್ಯಂತ ಅವನು ನಾಜೀರನಾಗಿರಲಿದ್ದನು. ಶವವನ್ನು ಮುಟ್ಟಬಾರದು ಎಂಬ ನಿರ್ಬಂಧವು ಇವನ ವಿಷಯದಲ್ಲಿ ಅನ್ವಯವಾಗುತ್ತಿರಲಿಲ್ಲ. ಒಂದುವೇಳೆ ಇದು ಅವನಿಗೆ ಅನ್ವಯವಾಗುತ್ತಿದ್ದಲ್ಲಿ, ಅವನು ಒಂದು ಶವವನ್ನು ಆಕಸ್ಮಿಕವಾಗಿ ಮುಟ್ಟಿದ ಬಳಿಕ, ಅವನ ಜನನದ ಸಮಯದಲ್ಲೇ ಆರಂಭಗೊಂಡ ಜೀವಮಾನದಾದ್ಯಂತದ ನಾಜೀರತನವನ್ನು ಹೇಗೆ ತಾನೇ ಪುನಃ ಆರಂಭಿಸಸಾಧ್ಯವಿತ್ತು? ಆದುದರಿಂದ, ಜೀವಮಾನದಾದ್ಯಂತ ನಾಜೀರರಾಗಿ ಇರಲಿದ್ದವರ ಆವಶ್ಯಕತೆಗಳು ಯಾರು ಸ್ವಇಷ್ಟದಿಂದ ನಾಜೀರರಾಗುತ್ತಿದ್ದರೋ ಅವರ ಆವಶ್ಯಕತೆಗಳಿಗಿಂತ ಭಿನ್ನವಾಗಿದ್ದವು ಎಂಬುದು ಸುವ್ಯಕ್ತ.