“ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ”
“ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ?”—ಮಾರ್ಕ 11:17.
1. ಯಾವ ರೀತಿಯ ಸಂಬಂಧವನ್ನು ಆದಾಮ ಹವ್ವರು ಮೂಲತಃ ದೇವರೊಂದಿಗೆ ಅನುಭವಿಸಿದರು?
ಆದಾಮ ಹವ್ವರು ಸೃಷ್ಟಿಸಲ್ಪಟ್ಟಾಗ, ಅವರು ತಮ್ಮ ಸ್ವರ್ಗೀಯ ತಂದೆಯೊಂದಿಗೆ ಒಂದು ಆಪ್ತ ಸಂಬಂಧವನ್ನು ಅನುಭವಿಸಿದರು. ಯೆಹೋವ ದೇವರು ಅವರೊಂದಿಗೆ ಸಂವಾದಿಸಿದನು ಮತ್ತು ಮಾನವಕುಲಕ್ಕಾಗಿ ತನ್ನ ಅದ್ಭುತಕರವಾದ ಉದ್ದೇಶವನ್ನು ರೇಖಿಸಿದನು. ಖಂಡಿತವಾಗಿಯೂ, ಸೃಷ್ಟಿಯ ಆತನ ಮಹತ್ತಾದ ಕ್ರಿಯೆಗಳಿಗಾಗಿ ಅವರು ಯೆಹೋವನ ಸ್ತುತಿಯಲ್ಲಿ ಗಟ್ಟಿಯಾಗಿ ಉದ್ಗರಿಸಲು ಅನೇಕ ವೇಳೆ ಪ್ರೇರಿಸಲ್ಪಟ್ಟಿದ್ದರು. ಆದಾಮ ಹವ್ವರು, ಮಾನವ ಕುಟುಂಬದ ಭಾವಿ ಮೂಲ ಜನಕರೋಪಾದಿ ತಮ್ಮ ಪಾತ್ರದ ಕುರಿತು ಅವಲೋಕಿಸಿದಾಗ, ಅವರಿಗೆ ಮಾರ್ಗದರ್ಶನೆಯ ಅಗತ್ಯವಿದ್ದಲ್ಲಿ, ತಮ್ಮ ಪ್ರಮೋದವನ ಮನೆಯ ಯಾವುದೇ ಸ್ಥಳದಿಂದ ದೇವರನ್ನು ಅವರು ಸಮೀಪಿಸಸಾಧ್ಯವಿತ್ತು. ಅವರಿಗೆ ದೇವಾಲಯದಲ್ಲಿನ ಒಬ್ಬ ಯಾಜಕನ ಸೇವೆಗಳ ಅಗತ್ಯವಿರಲಿಲ್ಲ.—ಆದಿಕಾಂಡ 1:28.
2. ಆದಾಮ ಹವ್ವರು ಪಾಪಮಾಡಿದಾಗ ಯಾವ ಬದಲಾವಣೆಯು ಸಂಭವಿಸಿತು?
2 ಒಬ್ಬ ದಂಗೆಕೋರ ದೇವದೂತನು ಹವ್ವಳನ್ನು, ಆಕೆಯು ದೇವರ ಪರಮಾಧಿಕಾರವನ್ನು ನಿರಾಕರಿಸುವಲ್ಲಿ, ಆಕೆ “ದೇವರಂತೆ ಆಗಿ” ಬಿಡುವಳೆಂದು ಹೇಳಿ, ಆಕೆಯ ಜೀವನ ಸ್ಥಿತಿಯು ಉತ್ತಮಗೊಳ್ಳುವುದೆಂದು ಯೋಚಿಸುವಂತೆ ಮಾಡಿದಾಗ ಸ್ಥಿತಿಯು ಪರಿವರ್ತನಗೊಂಡಿತು. ಅಂತೆಯೇ, ಹವ್ವಳು ದೇವರು ಪ್ರತಿಬಂಧಿಸಿದ್ದ ಮರದಿಂದ ಹಣ್ಣನ್ನು ತಿಂದಳು. ಅನಂತರ ಆಕೆಯ ಗಂಡನನ್ನು ಪ್ರಲೋಭಿಸಲು ಸೈತಾನನು ಹವ್ವಳನ್ನು ಬಳಸಿದನು. ದುಃಖಕರವಾಗಿ, ಆದಾಮನು ತನ್ನ ಹೆಂಡತಿಯೊಂದಿಗಿನ ಸಂಬಂಧವನ್ನು ದೇವರೊಂದಿಗಿನ ಅವನ ಸಂಬಂಧಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ ಎಣಿಸಿದನೆಂದು ತೋರಿಸುತ್ತಾ, ತನ್ನ ಪಾಪಪೂರ್ಣ ಹೆಂಡತಿಯ ಮಾತಿಗೆ ಕಿವಿಗೊಟ್ಟನು. (ಆದಿಕಾಂಡ 3:4-7) ಕಾರ್ಯತಃ, ಆದಾಮ ಹವ್ವರು ಸೈತಾನನನ್ನು ತಮ್ಮ ದೇವರಾಗಿ ಆರಿಸಿಕೊಂಡರು.—ಹೋಲಿಸಿ 2 ಕೊರಿಂಥ 4:4.
3. ಆದಾಮ ಹವ್ವರ ದಂಗೆಯ ಕೆಟ್ಟ ಫಲಿತಾಂಶಗಳು ಯಾವುವಾಗಿದ್ದವು?
3 ಹಾಗೆ ಮಾಡುವುದರಲ್ಲಿ ಪ್ರಥಮ ಮಾನವ ದಂಪತಿಗಳು, ದೇವರೊಂದಿಗಿನ ತಮ್ಮ ಅಮೂಲ್ಯವಾದ ಸಂಬಂಧವನ್ನು ಮಾತ್ರವಲ್ಲ, ಒಂದು ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನೂ ಕಳೆದುಕೊಂಡರು. (ಆದಿಕಾಂಡ 2:16, 17) ಅವರ ಪಾಪಪೂರ್ಣ ಶರೀರಗಳು ಕಟ್ಟಕಡೆಗೆ ಅವರು ಸಾಯುವ ತನಕ ಕ್ಷಯಿಸಿದವು. ಅವರ ಸಂತತಿಯು ಈ ಪಾಪಪೂರ್ಣ ಸ್ಥಿತಿಯನ್ನು ಪಿತ್ರಾರ್ಜಿತವಾಗಿ ಪಡೆಯಿತು. “ಹೀಗೆ,” ಬೈಬಲು ವಿವರಿಸುವುದು, “ಮರಣವು . . . ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
4. ಪಾಪಪೂರ್ಣ ಮಾನವಕುಲದ ಮುಂದೆ ದೇವರು ಯಾವ ನಿರೀಕ್ಷೆಯನ್ನು ಪ್ರಸ್ತುತಪಡಿಸಿದನು?
4 ಪಾಪಪೂರ್ಣ ಮಾನವಕುಲವನ್ನು ತಮ್ಮ ಪವಿತ್ರ ಸೃಷ್ಟಿಕರ್ತನೊಂದಿಗೆ ರಾಜಿಮಾಡಿಕೊಳ್ಳಲು ಯಾವುದೊ ವಿಷಯವು ಬೇಕಾಗಿತ್ತು. ಆದಾಮ ಹವ್ವರಿಗೆ ದಂಡನೆಯನ್ನು ವಿಧಿಸುತ್ತಿದ್ದಾಗ, ಮಾನವಕುಲವನ್ನು ಸೈತಾನನ ದಂಗೆಯ ಪರಿಣಾಮಗಳಿಂದ ರಕ್ಷಿಸಲಿದ್ದ ಒಂದು “ಸಂತಾನ”ವನ್ನು ವಾಗ್ದಾನಿಸುವ ಮೂಲಕ, ದೇವರು ಅವರ ಭಾವಿ ಸಂತತಿಗೆ ನಿರೀಕ್ಷೆಯನ್ನು ನೀಡಿದನು. (ಆದಿಕಾಂಡ 3:15) ತದನಂತರ, ಆಶೀರ್ವಾದದ ಸಂತಾನವು ಅಬ್ರಹಾಮನ ಮುಖಾಂತರ ಬರುವುದೆಂದು ದೇವರು ಪ್ರಕಟಪಡಿಸಿದನು. (ಆದಿಕಾಂಡ 22:18) ಈ ಪ್ರೀತಿಯ ಉದ್ದೇಶವನ್ನು ಮನಸ್ಸಿನಲ್ಲಿಡುತ್ತಾ, ದೇವರು ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್ಯರನ್ನು ತನ್ನ ಆದುಕೊಂಡ ರಾಷ್ಟ್ರವಾಗಿ ಪರಿಣಮಿಸಲು ಆರಿಸಿಕೊಂಡನು.
5. ಇಸ್ರಾಯೇಲ್ನೊಂದಿಗಿನ ದೇವರ ನಿಯಮದ ಒಡಂಬಡಿಕೆಯ ವಿವರಗಳಲ್ಲಿ ನಾವು ಏಕೆ ಆಸಕ್ತರಾಗಿರಬೇಕು?
5 ಸಾ.ಶ.ಪೂ. 1513ರಲ್ಲಿ, ಇಸ್ರಾಯೇಲ್ಯರು ದೇವರೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಗೆ ಪ್ರವೇಶಿಸಿದರು ಮತ್ತು ಆತನ ನಿಯಮಗಳಿಗೆ ವಿಧೇಯರಾಗಲು ಒಪ್ಪಿದರು. ಇಂದು ದೇವರನ್ನು ಆರಾಧಿಸಲು ಬಯಸುವವರೆಲ್ಲರಿಗೆ ಆ ನಿಯಮದ ಒಡಂಬಡಿಕೆಯು ಮಹಾ ಆಸಕ್ತಿಯ ವಿಷಯವಾಗಿರಬೇಕು, ಏಕೆಂದರೆ ಅದು ವಾಗ್ದತ್ತ ಸಂತಾನದ ಕಡೆಗೆ ನಿರ್ದೇಶಿಸಿತು. ಅದು “ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆ”ಯನ್ನು ಪಡೆದಿತ್ತೆಂದು ಪೌಲನು ಹೇಳಿದನು. (ಇಬ್ರಿಯ 10:1) ಈ ಹೇಳಿಕೆಯನ್ನು ಪೌಲನು ಮಾಡಿದಾಗ, ಅವನು ಸಾಗಿಸಸಾಧ್ಯವಿದ್ದ ಸಾಕ್ಷಿಗುಡಾರ ಅಥವಾ ಆರಾಧನೆಯ ಗುಡಾರದಲ್ಲಿನ ಇಸ್ರಾಯೇಲಿನ ಯಾಜಕರ ಸೇವೆಯನ್ನು ಚರ್ಚಿಸುತ್ತಿದ್ದನು. ಅದು “ಯೆಹೋವನ ಮಂದಿರ” ಅಥವಾ “ಯೆಹೋವನ ಆಲಯ” (NW) ಎಂಬುದಾಗಿ ಕರೆಯಲ್ಪಟ್ಟಿತು. (1 ಸಮುವೇಲ 1:9, 24) ಯೆಹೋವನ ಭೂಆಲಯದಲ್ಲಿ ನಡಿಸಲ್ಪಡುವ ಪವಿತ್ರ ಸೇವೆಯನ್ನು ಪರಿಶೀಲಿಸುವ ಮೂಲಕ, ಯಾವುದರ ಮುಖಾಂತರ ಇಂದು ಪಾಪಪೂರ್ಣ ಮಾನವರು ದೇವರೊಂದಿಗೆ ರಾಜಿಮಾಡಿಕೊಳ್ಳಬಲ್ಲರೊ, ಆ ಕರುಣಾಭರಿತ ಏರ್ಪಾಡನ್ನು ಹೆಚ್ಚು ಪೂರ್ಣವಾಗಿ ಗಣ್ಯಮಾಡಲು ನಮಗೆ ಸಾಧ್ಯವಾಗುವುದು.
ಮಹಾಪವಿತ್ರಸ್ಥಾನ
6. ಮಹಾಪವಿತ್ರಸ್ಥಾನದಲ್ಲಿ ಏನು ಇರಿಸಲ್ಪಟ್ಟಿತ್ತು, ಮತ್ತು ಅಲ್ಲಿ ದೇವರ ಸಾನ್ನಿಧ್ಯವು ಹೇಗೆ ಪ್ರತಿನಿಧಿಸಲ್ಪಟ್ಟಿತ್ತು?
6 “ಆದರೂ ಪರಾತ್ಪರನು ಕೈಯಿಂದ ಕಟ್ಟಿದ ಮನೆಗಳಲ್ಲಿ ವಾಸಮಾಡುವವನಲ್ಲ” ಎಂಬುದಾಗಿ ಬೈಬಲು ತಿಳಿಸುತ್ತದೆ. (ಅ. ಕೃತ್ಯಗಳು 7:48) ಹಾಗಿದ್ದರೂ, ತನ್ನ ಭೂಆಲಯದಲ್ಲಿ ದೇವರ ಸಾನ್ನಿಧ್ಯವು, ಮಹಾಪವಿತ್ರಸ್ಥಾನವೆಂದು ಕರೆಯಲ್ಪಟ್ಟ, ಅತಿ ಒಳಗಿನ ಅರೆಯಲ್ಲಿನ ಒಂದು ಮೋಡದಿಂದ ಪ್ರತಿನಿಧಿಸಲ್ಪಟ್ಟಿತು. (ಯಾಜಕಕಾಂಡ 16:2) ಈ ಮೋಡವು ಮಹಾಪವಿತ್ರಸ್ಥಾನಕ್ಕೆ ಬೆಳಕನ್ನು ಒದಗಿಸುತ್ತಾ, ಅತ್ಯುಜ್ವಲವಾಗಿ ಪ್ರಕಾಶಿಸಿತೆಂಬುದು ನಿಸ್ಸಂಶಯ. ಅದು ‘ಆಜ್ಞಾಶಾಸನಗಳ ಮಂಜೂಷ’ವೆಂದು ಕರೆಯಲ್ಪಟ್ಟ ಮತ್ತು ಯಾವುದರಲ್ಲಿ ಕಲ್ಲಿನ ಹಲಗೆಗಳ ಮೇಲೆ ಕೆತ್ತಲ್ಪಟ್ಟ, ದೇವರು ಇಸ್ರಾಯೇಲಿಗೆ ಕೊಟ್ಟಿದ್ದ ಕೆಲವೊಂದು ಆಜ್ಞೆಗಳಿದ್ದವೊ, ಆ ಪವಿತ್ರ ಪೆಟ್ಟಿಗೆಯ ಮೇಲ್ಗಡೆ ನಿಂತಿತ್ತು. ಮಂಜೂಷದ ಕೃಪಾಸನದ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಬಂಗಾರದ ಎರಡು ಕೆರೂಬಿಗಳಿದ್ದವು. ಇವು ದೇವರ ಸ್ವರ್ಗೀಯ ಸಂಸ್ಥೆಯಲ್ಲಿರುವ ಉನ್ನತ ಸ್ಥಾನದ ಆತ್ಮ ಜೀವಿಗಳನ್ನು ಚಿತ್ರಿಸಿದವು. ಬೆಳಕಿನ ಆ ಅದ್ಭುತಕರವಾದ ಮೇಘವು, ಕೃಪಾಸನದ ಮೇಲೆ ಮತ್ತು ಕೆರೂಬಿಗಳ ನಡುವೆ ಇತ್ತು. (ವಿಮೋಚನಕಾಂಡ 25:22) ಇದು, ಜೀವಂತ ಕೆರೂಬಿಗಳಿಂದ ಆಧರಿಸಲ್ಪಟ್ಟ ಒಂದು ಸ್ವರ್ಗೀಯ ರಥದ ಮೇಲೆ, ಸಿಂಹಾಸನಾರೂಢನಾಗಿರುವ ಸರ್ವಶಕ್ತ ದೇವರನ್ನು ಚಿತ್ರಿಸಿತು. (1 ಪೂರ್ವಕಾಲವೃತ್ತಾಂತ 28:18) ಇದು ರಾಜ ಹಿಜ್ಕೀಯನು, “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ,” ಎಂದು ಏಕೆ ಪ್ರಾರ್ಥಿಸಿದನೆಂಬುದನ್ನು ವಿವರಿಸುತ್ತದೆ.—ಯೆಶಾಯ 37:16.
ಪವಿತ್ರಸ್ಥಾನ
7. ಪವಿತ್ರಸ್ಥಾನದಲ್ಲಿ ಯಾವ ಪೀಠೋಪಕರಣಗಳಿದ್ದವು?
7 ಸಾಕ್ಷಿಗುಡಾರದ ಎರಡನೆಯ ಅರೆಯು ಪವಿತ್ರಸ್ಥಾನವೆಂದು ಕರೆಯಲ್ಪಟ್ಟಿತು. ಈ ವಿಭಾಗದೊಳಗೆ, ಪ್ರವೇಶದ್ವಾರದ ಎಡಬದಿಯಲ್ಲಿ ಒಂದು ಸುಂದರವಾದ ಏಳು ಕವಲುಗಳ ದೀಪಸ್ತಂಭವಿತ್ತು, ಮತ್ತು ಬಲಬದಿಯಲ್ಲಿ ನೈವೇದ್ಯವಾದ ರೊಟ್ಟಿಗಳ ಒಂದು ಮೇಜಿತ್ತು. ನೇರವಾಗಿ ಮುಂದುಗಡೆ, ಸುಡುತ್ತಿರುವ ಧೂಪದ ಸುವಾಸನೆಯು ಏರಿಹೋದ ಒಂದು ಯಜ್ಞವೇದಿಯು ನಿಂತಿತ್ತು. ಅದು ಪವಿತ್ರಸ್ಥಾನವನ್ನು ಮಹಾಪವಿತ್ರಸ್ಥಾನದಿಂದ ಬೇರ್ಪಡಿಸಿದ ಒಂದು ತೆರೆಯ ಮುಂದೆ ಇತ್ತು.
8. ಪವಿತ್ರಸ್ಥಾನದಲ್ಲಿ ಯಾಜಕರು ಯಾವ ಕರ್ತವ್ಯಗಳನ್ನು ಕ್ರಮವಾಗಿ ನಿವರ್ಹಿಸಿದರು?
8 ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, ಯಾಜಕನೊಬ್ಬನು ಸಾಕ್ಷಿಗುಡಾರವನ್ನು ಪ್ರವೇಶಿಸಿ, ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕಿತ್ತು. (ವಿಮೋಚನಕಾಂಡ 30:7, 8) ಬೆಳಗ್ಗೆ, ಧೂಪವು ಸುಡುತ್ತಿದ್ದಾಗ, ಬಂಗಾರದ ದೀಪಸ್ತಂಭದ ಮೇಲೆ ಹರಡಿರುವ ಏಳು ದೀಪಗಳಲ್ಲಿ ಎಣ್ಣೆಯನ್ನು ಮತ್ತೆ ತುಂಬಬೇಕಿತ್ತು. ಸಂಜೆಯಲ್ಲಿ ಪವಿತ್ರಸ್ಥಾನಕ್ಕೆ ಬೆಳಕನ್ನು ಒದಗಿಸಲು ದೀಪಗಳು ಹೊತ್ತಿಸಲ್ಪಟ್ಟವು. ಪ್ರತಿ ಸಬ್ಬತ್ ದಿನದಂದು, ಯಾಜಕನೊಬ್ಬನು ನೈವೇದ್ಯವಾದ ರೊಟ್ಟಿಗಳ ಮೇಜಿನ ಮೇಲೆ 12 ಹೊಸ ರೊಟ್ಟಿಗಳನ್ನು ಇಡಬೇಕಿತ್ತು.—ಯಾಜಕಕಾಂಡ 24:4-8.
ಅಂಗಳ
9. ನೀರಿನ ಗಂಗಾಳದ ಉದ್ದೇಶವು ಏನಾಗಿತ್ತು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
9 ಸಾಕ್ಷಿಗುಡಾರಕ್ಕೆ, ಗುಡಾರದ ತೆರೆಗಳ ಒಂದು ಆವರಣದಿಂದ ಸುತ್ತುವರಿಯಲ್ಪಟ್ಟ ಒಂದು ಅಂಗಳವೂ ಇತ್ತು. ಈ ಅಂಗಳದಲ್ಲಿ ಒಂದು ದೊಡ್ಡ ಗಂಗಾಳವಿತ್ತು, ಇಲ್ಲಿ ಯಾಜಕರು ಪವಿತ್ರಸ್ಥಾನವನ್ನು ಪ್ರವೇಶಿಸುವ ಮೊದಲು ತಮ್ಮ ಕೈಕಾಲುಗಳನ್ನು ತೊಳೆದುಕೊಂಡರು. ಅಂಗಳದಲ್ಲಿದ್ದ ಯಜ್ಞವೇದಿಯ ಮೇಲೆ ಬಲಿಗಳನ್ನು ಅರ್ಪಿಸುವ ಮುಂಚೆಯೂ ಅವರು ಕೈಕಾಲುಗಳನ್ನು ತೊಳೆದುಕೊಳ್ಳಬೇಕಿತ್ತು. (ವಿಮೋಚನಕಾಂಡ 30:18-21) ಶುಚಿತ್ವದ ಈ ಆವಶ್ಯಕತೆಯು ಇಂದು ದೇವರ ಸೇವಕರಿಗೆ ಒಂದು ಬಲವಾದ ಮರುಜ್ಞಾಪನವಾಗಿದೆ ಏನೆಂದರೆ, ತಮ್ಮ ಆರಾಧನೆಯು ದೇವರಿಗೆ ಸ್ವೀಕಾರಾರ್ಹವಾಗಿರಬೇಕೆಂದು ಅವರು ಬಯಸುವುದಾದರೆ, ಅವರು ಶಾರೀರಿಕ, ನೈತಿಕ, ಮಾನಸಿಕ ಮತ್ತು ಆತ್ಮಿಕ ಶುದ್ಧತೆಗಾಗಿ ಹೆಣಗಾಡಬೇಕು. (2 ಕೊರಿಂಥ 7:1) ಕ್ರಮೇಣವಾಗಿ, ಯಜ್ಞವೇದಿಯ ಮೇಲಿನ ಬೆಂಕಿಗಾಗಿ ಕಟ್ಟಿಗೆ ಮತ್ತು ಗಂಗಾಳಕ್ಕಾಗಿ ನೀರು, ಇಸ್ರಾಯೇಲ್ಯರಲ್ಲದ ದೇವಾಲಯದ ದಾಸರಿಂದ ಒದಗಿಸಲ್ಪಟ್ಟವು.—ಯೆಹೋಶುವ 9:27.
10. ಯಜ್ಞವೇದಿಯ ಮೇಲೆ ಮಾಡಲ್ಪಟ್ಟ ಕೆಲವೊಂದು ಅರ್ಪಣೆಗಳಾವುವು?
10 ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, ಯಜ್ಞವೇದಿಯ ಮೇಲೆ ಒಂದು ಎಳೆಯ ಯಜ್ಞಾರ್ಪಿತ ಗಂಡು ಕುರಿಯು, ಧಾನ್ಯ ಹಾಗೂ ಪಾನದ್ರವ್ಯಾರ್ಪಣೆಯೊಂದಿಗೆ ಸುಡಲ್ಪಡುತ್ತಿತ್ತು. (ವಿಮೋಚನಕಾಂಡ 29:38-41) ಇತರ ಯಜ್ಞಾರ್ಪಣೆಗಳು ವಿಶೇಷ ದಿನಗಳಂದು ಮಾಡಲ್ಪಟ್ಟವು. ಕೆಲವೊಮ್ಮೆ ಒಂದು ಯಜ್ಞಾರ್ಪಣೆಯು, ನಿರ್ದಿಷ್ಟವಾದೊಂದು ವೈಯಕ್ತಿಕ ಪಾಪದ ಕಾರಣ ಮಾಡಲ್ಪಡಬೇಕಿತ್ತು. (ಯಾಜಕಕಾಂಡ 5:5, 6) ಬೇರೆ ಸಮಯಗಳಲ್ಲಿ ಒಬ್ಬ ಇಸ್ರಾಯೇಲ್ಯನು ಕಾಣಿಕೆಯಾಗಿ ಒಂದು ಸಮಾಧಾನಯಜ್ಞವನ್ನು ಅರ್ಪಿಸಸಾಧ್ಯವಿತ್ತು, ಅದರಲ್ಲಿ ಭಾಗಗಳು ಯಾಜಕರಿಂದ ಮತ್ತು ಅರ್ಪಣೆಯನ್ನು ಮಾಡಿದವನಿಂದ ತಿನ್ನಲ್ಪಟ್ಟವು. ಇದು, ಸಾಂಕೇತಿಕವಾಗಿ ಮಾತಾಡುವುದಾದರೆ, ಪಾಪಿಗಳಾದ ಮಾನವರು, ದೇವರೊಂದಿಗೆ ಒಂದು ಊಟದಲ್ಲಿ ಆನಂದಿಸುತ್ತಾ, ಆತನೊಂದಿಗೆ ಶಾಂತಿಯಲ್ಲಿರಸಾಧ್ಯವಿತ್ತು ಎಂಬುದನ್ನು ಸೂಚಿಸಿತು. ಅನ್ಯದೇಶೀಯನೂ ಯೆಹೋವನ ಒಬ್ಬ ಆರಾಧಕನಾಗಿ, ಆತನ ಆಲಯದಲ್ಲಿ ಕಾಣಿಕೆಯ ಅರ್ಪಣೆಗಳನ್ನು ಪ್ರಸ್ತುತಪಡಿಸಲು ಸುಯೋಗ ಪಡೆದವನಾಗಿರಸಾಧ್ಯವಿತ್ತು. ಆದರೆ ಯೆಹೋವನಿಗೆ ಯೋಗ್ಯವಾದ ಘನತೆಯನ್ನು ತೋರಿಸುವ ಸಲುವಾಗಿ, ಯಾಜಕರು ಅತ್ಯುತ್ತಮ ಗುಣಮಟ್ಟದ ಅರ್ಪಣೆಗಳನ್ನು ಮಾತ್ರ ಸ್ವೀಕರಿಸಸಾಧ್ಯವಿತ್ತು. ಧಾನ್ಯ ಅರ್ಪಣೆಗಳ ಹಿಟ್ಟು ಚೆನ್ನಾಗಿ ಪುಡಿಮಾಡಲ್ಪಟ್ಟಿರಬೇಕಿತ್ತು, ಮತ್ತು ಯಜ್ಞಾರ್ಪಣೆಗಳಿಗಾಗಿದ್ದ ಪ್ರಾಣಿಗಳು ಯಾವ ದೋಷವೂ ಇಲ್ಲದೆ ಇರಬೇಕಿತ್ತು.—ಯಾಜಕಕಾಂಡ 2:1; 22:18-20; ಮಲಾಕಿಯ 1:6-8.
11. (ಎ) ಪ್ರಾಣಿ ಯಜ್ಞಾರ್ಪಣೆಗಳ ರಕ್ತದೊಂದಿಗೆ ಏನು ಮಾಡಲಾಯಿತು, ಮತ್ತು ಇದು ಯಾವುದನ್ನು ಸೂಚಿಸಿತು? (ಬಿ) ಮಾನವ ಹಾಗೂ ಪ್ರಾಣಿಯ—ಇವೆರಡರ—ರಕ್ತದ ಕುರಿತು ದೇವರ ನೋಟವು ಏನಾಗಿದೆ?
11 ಈ ಯಜ್ಞಾರ್ಪಣೆಗಳ ರಕ್ತವನ್ನು ಯಜ್ಞವೇದಿಯ ಬಳಿಗೆ ತರಲಾಯಿತು. ಇದು, ಒಬ್ಬ ವಿಮೋಚಕನ—ಯಾರ ಸುರಿಸಲ್ಪಟ್ಟ ರಕ್ತವು ಶಾಶ್ವತವಾಗಿ ಅವರ ಪಾಪಗಳಿಗೆ ಪರಿಹಾರ ಒದಗಿಸಿ, ಅವರನ್ನು ಮರಣದಿಂದ ರಕ್ಷಿಸಸಾಧ್ಯವಿತ್ತೊ, ಅಂತಹ ಒಬ್ಬನ—ಆವಶ್ಯಕತೆಯಿರುವ ಪಾಪಿಗಳು ಅವರಾಗಿದ್ದರೆಂಬುದಾಗಿ, ರಾಷ್ಟ್ರಕ್ಕೆ ಒಂದು ದೈನಿಕ ಮರುಜ್ಞಾಪನದಂತೆ ಕಾರ್ಯಮಾಡಿತು. (ರೋಮಾಪುರ 7:24, 25; ಗಲಾತ್ಯ 3:24; ಹೋಲಿಸಿ ಇಬ್ರಿಯ 10:3.) ರಕ್ತದ ಈ ಪವಿತ್ರ ಉಪಯೋಗವು, ರಕ್ತವು ಜೀವವನ್ನು ಪ್ರತಿನಿಧಿಸುತ್ತದೆ ಮತ್ತು ಜೀವವು ದೇವರಿಗೆ ಸೇರಿರುತ್ತದೆ ಎಂಬುದನ್ನು ಸಹ ಇಸ್ರಾಯೇಲ್ಯರಿಗೆ ಮರುಜ್ಞಾಪಿಸಿತು. ಮಾನವರಿಂದ ರಕ್ತದ ಬೇರೆ ಯಾವುದೇ ಉಪಯೋಗವು, ಎಲ್ಲ ಸಂದರ್ಭಗಳಲ್ಲಿಯೂ ದೇವರಿಂದ ನಿಷೇಧಿಸಲ್ಪಟ್ಟಿದೆ.—ಆದಿಕಾಂಡ 9:4; ಯಾಜಕಕಾಂಡ 17:10-12; ಅ. ಕೃತ್ಯಗಳು 15:28, 29.
ದೋಷಪರಿಹಾರ ದಿನ
12, 13. (ಎ) ದೋಷಪರಿಹಾರ ದಿನವು ಏನಾಗಿತ್ತು? (ಬಿ) ಮಹಾ ಯಾಜಕನು ಮಹಾಪವಿತ್ರಸ್ಥಾನದೊಳಗೆ ರಕ್ತವನ್ನು ತರಸಾಧ್ಯವಿರುವ ಮೊದಲು, ಅವನು ಏನು ಮಾಡಬೇಕಾಗಿತ್ತು?
12 ವರ್ಷಕ್ಕೊಮ್ಮೆ, ಯಾವುದು ದೋಷಪರಿಹಾರ ದಿನವೆಂದು ಕರೆಯಲ್ಪಟ್ಟಿತೊ ಆ ದಿನದಂದು, ಇಡೀ ಇಸ್ರಾಯೇಲ್ ರಾಷ್ಟ್ರವು—ಯೆಹೋವನನ್ನು ಆರಾಧಿಸಿದ ಅನ್ಯದೇಶೀಯರನ್ನು ಸೇರಿಸಿ—ಸಕಲ ಕೆಲಸವನ್ನು ನಿಲ್ಲಿಸಿ, ಉಪವಾಸಮಾಡಬೇಕಿತ್ತು. (ಯಾಜಕಕಾಂಡ 16:29, 30) ಈ ಪ್ರಾಮುಖ್ಯವಾದ ದಿನದಂದು, ರಾಷ್ಟ್ರವು ಮತ್ತೊಂದು ವರ್ಷಕ್ಕಾಗಿ ದೇವರೊಂದಿಗೆ ಶಾಂತಿಪೂರ್ಣ ಸಂಬಂಧಗಳಲ್ಲಿ ಆನಂದಿಸುವಂತೆ, ಒಂದು ದೃಷ್ಟಾಂತದ ರೂಪವುಳ್ಳ ವಿಧದಲ್ಲಿ ಪಾಪದಿಂದ ಶುದ್ಧೀಕರಿಸಲ್ಪಟ್ಟಿತು. ನಾವು ದೃಶ್ಯವನ್ನು ಕಲ್ಪಿಸಿಕೊಂಡು, ಕೆಲವೊಂದು ಅತ್ಯುಜ್ವಲ ಭಾಗಗಳನ್ನು ಪರಿಗಣಿಸೋಣ.
13 ಮಹಾ ಯಾಜಕನು ಸಾಕ್ಷಿಗುಡಾರದ ಅಂಗಳದಲ್ಲಿದ್ದಾನೆ. ನೀರಿನ ಗಂಗಾಳದ ಬಳಿ ತನ್ನನ್ನು ತೊಳೆದುಕೊಂಡ ತರುವಾಯ, ಯಜ್ಞಾರ್ಪಣೆಗಾಗಿ ಅವನೊಂದು ಹೋರಿಯನ್ನು ವಧಿಸುತ್ತಾನೆ. ಹೋರಿಯ ರಕ್ತವು ಒಂದು ಪಾತ್ರೆಯೊಳಗೆ ಹೊಯ್ಯಲ್ಪಡುತ್ತದೆ; ಅದು ಲೇವಿಯ ಯಾಜಕೀಯ ಗೋತ್ರದ ಪಾಪಗಳಿಗೆ ಪರಿಹಾರವಾಗಿ ಒಂದು ವಿಶೇಷವಾದ ವಿಧದಲ್ಲಿ ಬಳಸಲ್ಪಡುವುದು. (ಯಾಜಕಕಾಂಡ 16:4, 6, 11) ಆದರೆ ಯಜ್ಞಾರ್ಪಣೆಯೊಂದಿಗೆ ಮುಂದುವರಿಯುವ ಮೊದಲು, ಮಹಾ ಯಾಜಕನು ಮಾಡಬೇಕಾದ ಯಾವುದೊ ವಿಷಯವಿದೆ. ಅವನು ಸುಗಂಧಿತ ಧೂಪದ್ರವ್ಯವನ್ನು (ಬಹುಶಃ ಅದನ್ನು ಒಂದು ಪಾತ್ರೆಯೊಳಗೆ ಹಾಕುತ್ತಾ) ಮತ್ತು ಒಂದು ಬೆಂಕಿಯ ಹಿಡುಕದೊಳಗೆ ಯಜ್ಞವೇದಿಯಿಂದ ಕೆಂಪಗೆ ಕಾದ ಕೆಂಡಗಳನ್ನು ತೆಗೆದುಕೊಳ್ಳುತ್ತಾನೆ. ಈಗ ಅವನು ಪವಿತ್ರಸ್ಥಾನವನ್ನು ಪ್ರವೇಶಿಸಿ, ಮಹಾಪವಿತ್ರಸ್ಥಾನದ ತೆರೆಯ ಕಡೆಗೆ ನಡೆಯುತ್ತಾನೆ. ಅವನು ನಿಧಾನವಾಗಿ ತೆರೆಯ ಸುತ್ತ ಹಾದುಹೋಗಿ, ಒಡಂಬಡಿಕೆಯ ಮಂಜೂಷದ ಎದುರಿಗೆ ನಿಲ್ಲುತ್ತಾನೆ. ಮುಂದೆ, ಬೇರೆ ಯಾವುದೇ ಮಾನವನ ದೃಷ್ಟಿಗೆ ಅಗೋಚರವಾಗಿ, ಉರಿಯುತ್ತಿರುವ ಕೆಂಡಗಳ ಮೇಲೆ ಅವನು ಧೂಪದ್ರವ್ಯವನ್ನು ಹೊಯ್ಯುತ್ತಾನೆ, ಮತ್ತು ಮಹಾಪವಿತ್ರಸ್ಥಾನವು ಸುವಾಸನೆಯ ಮೇಘದಿಂದ ತುಂಬಿಹೋಗುತ್ತದೆ.—ಯಾಜಕಕಾಂಡ 16:12, 13.
14. ಮಹಾಪವಿತ್ರಸ್ಥಾನವನ್ನು ಮಹಾ ಯಾಜಕನು ಎರಡು ಭಿನ್ನವಾದ ಪ್ರಾಣಿಗಳ ರಕ್ತದೊಂದಿಗೆ ಏಕೆ ಪ್ರವೇಶಿಸಬೇಕಿತ್ತು?
14 ಈಗ ದೇವರು ಕರುಣೆಯನ್ನು ತೋರಿಸಲು ಮತ್ತು ಒಂದು ದೃಷ್ಟಾಂತದ ರೂಪವುಳ್ಳ ವಿಧದಲ್ಲಿ ಪ್ರಸನ್ನಗೊಳಿಸಲ್ಪಡಲು ಸಿದ್ಧನಾಗಿದ್ದಾನೆ. ಈ ಕಾರಣಕ್ಕಾಗಿ, ಮಂಜೂಷದ ಕೃಪಾಸನವು “ಕರುಣಾಸನ” ಅಥವಾ “ಪರಿಹಾರಕ ಕೃಪಾಸನ” ಎಂಬುದಾಗಿ ಕರೆಯಲ್ಪಟ್ಟಿತು. (ಇಬ್ರಿಯ 9:5, NW, ಪಾದಟಿಪ್ಪಣಿ) ಮಹಾ ಯಾಜಕನು ಅತಿಪವಿತ್ರಸ್ಥಾನದಿಂದ ಹೊರಗೆಹೋಗಿ, ಹೋರಿಯ ರಕ್ತವನ್ನು ತೆಗೆದುಕೊಂಡು, ಮಹಾಪವಿತ್ರಸ್ಥಾನವನ್ನು ಪುನಃ ಪ್ರವೇಶಿಸುತ್ತಾನೆ. ನಿಯಮದಲ್ಲಿ ಆಜ್ಞಾಪಿಸಲ್ಪಟ್ಟಂತೆ, ಅವನು ರಕ್ತದೊಳಗೆ ತನ್ನ ಬೆರಳನ್ನು ಅದ್ದಿ, ಅದನ್ನು ಮಂಜೂಷದ ಕೃಪಾಸನದ ಎದುರಿಗೆ ಏಳು ಬಾರಿ ಚಿಮುಕಿಸುತ್ತಾನೆ. (ಯಾಜಕಕಾಂಡ 16:14) ಅನಂತರ ಅವನು ಅಂಗಳಕ್ಕೆ ಮತ್ತೆ ಹೋಗಿ ಒಂದು ಹೋತವನ್ನು ವಧಿಸುತ್ತಾನೆ, ಇದು “ಜನರಿಗೋಸ್ಕರ” ಒಂದು ಪಾಪಾರ್ಪಣೆಯಾಗಿದೆ. ಹೋತದ ರಕ್ತದಲ್ಲಿ ಕೊಂಚವನ್ನು ಅವನು ಮಹಾಪವಿತ್ರಸ್ಥಾನದೊಳಕ್ಕೆ ತರುತ್ತಾನೆ ಮತ್ತು ಹೋರಿಯ ರಕ್ತದೊಂದಿಗೆ ಅವನು ಮಾಡಿದಂತೆಯೇ ಹೋತದ ರಕ್ತದೊಂದಿಗೆ ಮಾಡುತ್ತಾನೆ. (ಯಾಜಕಕಾಂಡ 16:15) ದೋಷಪರಿಹಾರ ದಿನದಂದು ಇತರ ಪ್ರಮುಖ ಸೇವೆಗಳೂ ನಡೆದವು. ಉದಾಹರಣೆಗೆ, ಮಹಾ ಯಾಜಕನು ಎರಡನೆಯ ಹೋತದ ತಲೆಯ ಮೇಲೆ ತನ್ನ ಕೈಗಳನ್ನು ಇಟ್ಟು, ಅದರ ಮೇಲೆ “ಇಸ್ರಾಯೇಲ್ಯರ ಎಲ್ಲಾ . . . ಅಪರಾಧಗಳ”ನ್ನು ನಿವೇದಿಸಬೇಕಿತ್ತು. ಅನಂತರ ಈ ಜೀವಂತ ಹೋತವು, ಒಂದು ಸಾಂಕೇತಿಕವಾದ ಅರ್ಥದಲ್ಲಿ ರಾಷ್ಟ್ರದ ಪಾಪಗಳನ್ನು ಹೊತ್ತುಕೊಂಡುಹೋಗಲು ಅರಣ್ಯದೊಳಗೆ ಬಿಟ್ಟುಬಿಡಲ್ಪಟ್ಟಿತು. ಈ ವಿಧದಲ್ಲಿ ಪ್ರತಿ ವರ್ಷ, ‘ಯಾಜಕರು, ಮತ್ತು ಜನಸಮೂಹ’ದವರಿಗಾಗಿ ದೋಷಪರಿಹಾರವು ಮಾಡಲ್ಪಟ್ಟಿತು.—ಯಾಜಕಕಾಂಡ 16:16, 21, 22, 33.
15. (ಎ) ಸೊಲೊಮೋನನ ದೇವಾಲಯವು ಹೇಗೆ ಸಾಕ್ಷಿಗುಡಾರಕ್ಕೆ ಸದೃಶವಾಗಿತ್ತು? (ಬಿ) ಸಾಕ್ಷಿಗುಡಾರ ಮತ್ತು ದೇವಾಲಯ—ಇವೆರಡರಲ್ಲಿಯೂ—ನಡೆಸಲ್ಪಟ್ಟ ಪವಿತ್ರ ಸೇವೆಯ ಕುರಿತು ಇಬ್ರಿಯರಿಗೆ ಬರೆದ ಪುಸ್ತಕವು ಏನು ಹೇಳುತ್ತದೆ?
15 ದೇವರ ಒಡಂಬಡಿಕೆಯ ಜನರೋಪಾದಿ ಇಸ್ರಾಯೇಲಿನ ಇತಿಹಾಸದ ಪ್ರಥಮ 486 ವರ್ಷಗಳ ವರೆಗೆ, ಸಾಗಿಸಸಾಧ್ಯವಿದ್ದ ಸಾಕ್ಷಿಗುಡಾರವು ಅವರಿಗೆ, ತಮ್ಮ ದೇವರಾದ ಯೆಹೋವನನ್ನು ಆರಾಧಿಸುವ ಸ್ಥಳವಾಗಿ ಕಾರ್ಯಮಾಡಿತು. ಅನಂತರ, ಇಸ್ರಾಯೇಲಿನ ಸೊಲೊಮೋನನಿಗೆ ಒಂದು ಚಿರಸ್ಥಾಯಿ ಕಟ್ಟಡವನ್ನು ನಿರ್ಮಿಸುವ ಸುಯೋಗವು ಕೊಡಲ್ಪಟ್ಟಿತು. ಈ ಆಲಯವು ಬಹಳ ದೊಡ್ಡದೂ, ಸವಿಸ್ತಾರವಾದದ್ದೂ ಆಗಿದ್ದರೂ, ದೈವಿಕವಾಗಿ ಒದಗಿಸಲ್ಪಟ್ಟ ಯೋಜನೆಯು ಸಾಕ್ಷಿಗುಡಾರದ ಅದೇ ನಮೂನೆಯನ್ನು ಅನುಸರಿಸಿತು. ಸಾಕ್ಷಿಗುಡಾರದಂತೆ, ಅದು “ಮನುಷ್ಯನು ಹಾಕದ” ಯೆಹೋವನು “ಹಾಕಿದ” ಆರಾಧನೆಗಾಗಿರುವ ಹೆಚ್ಚು ದೊಡ್ಡದಾದ, ಹೆಚ್ಚು ಪರಿಣಾಮಕಾರಿಯಾದ ಏರ್ಪಾಡಿನ ದೃಷ್ಟಾಂತದ ರೂಪವುಳ್ಳದ್ದಾಗಿತ್ತು.—ಇಬ್ರಿಯ 8:2, 5; 9:9, 11.
ಮೊದಲನೆಯ ಮತ್ತು ಎರಡನೆಯ ದೇವಾಲಯ
16. (ಎ) ದೇವಾಲಯವನ್ನು ಸಮರ್ಪಿಸುವಾಗ ಯಾವ ಪ್ರೀತಿಯ ವಿನಂತಿಯನ್ನು ಸೊಲೊಮೋನನು ಮಾಡಿದನು? (ಬಿ) ಯೆಹೋವನು ಸೊಲೊಮೋನನ ಪ್ರಾರ್ಥನೆಗೆ ತನ್ನ ಸ್ವೀಕೃತಿಯನ್ನು ಹೇಗೆ ತೋರಿಸಿದನು?
16 ಆ ಮಹಿಮಾಭರಿತ ದೇವಾಲಯವನ್ನು ಸಮರ್ಪಿಸುವಾಗ, ಸೊಲೊಮೋನನು ಈ ಪ್ರೇರಿತ ವಿನಂತಿಯನ್ನು ಸೇರಿಸಿದನು: “ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದಂಥ ಒಬ್ಬೊಬ್ಬ ಪರದೇಶಿಯೂ ನಿನ್ನ ನಾಮಮಹತ್ತು . . . ಇವುಗಳ ವರ್ತಮಾನ ಕೇಳಿ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಕೇಳಿ ಅವರು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಾನು ಈ ಆಲಯವನ್ನು ನಿನ್ನ ಹೆಸರಿನದಾಗಿ ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು.” (2 ಪೂರ್ವಕಾಲವೃತ್ತಾಂತ 6:32, 33) ಸುಸ್ಪಷ್ಟವಾದ ವಿಧದಲ್ಲಿ, ದೇವರು ಸೊಲೊಮೋನನ ಸಮರ್ಪಣಾ ಪ್ರಾರ್ಥನೆಗೆ ತನ್ನ ಅಂಗೀಕಾರವನ್ನು ತೋರಿಸಿದನು. ಆಕಾಶದಿಂದ ಬೆಂಕಿಬಿದ್ದು ಯಜ್ಞವೇದಿಯ ಮೇಲಿದ್ದ ಪ್ರಾಣಿಯ ಯಜ್ಞಾರ್ಪಣೆಗಳನ್ನು ದಹಿಸಿಬಿಟ್ಟಿತು, ಮತ್ತು ಯೆಹೋವನ ಮಹಿಮೆಯು ಆಲಯದಲ್ಲಿ ತುಂಬಿಕೊಂಡಿತು.—2 ಪೂರ್ವಕಾಲವೃತ್ತಾಂತ 7:1-3.
17. ಸೊಲೊಮೋನನಿಂದ ಕಟ್ಟಲ್ಪಟ್ಟಿದ್ದ ದೇವಾಲಯಕ್ಕೆ ಕಟ್ಟಕಡೆಗೆ ಏನು ಸಂಭವಿಸಿತು, ಮತ್ತು ಏಕೆ?
17 ದುಃಖಕರವಾಗಿ, ಇಸ್ರಾಯೇಲ್ಯರು ತಮ್ಮಲ್ಲಿದ್ದ ಯೆಹೋವನ ಸ್ವಸ್ಥಕರ ಭಯವನ್ನು ಕಳೆದುಕೊಂಡರು. ಸಕಾಲದಲ್ಲಿ, ಅವರು ರಕ್ತಪಾತ, ಮೂರ್ತಿಪೂಜೆ, ವ್ಯಭಿಚಾರ, ಅಗಮ್ಯ ಗಮನದ ಕ್ರಿಯೆಗಳ ಮತ್ತು ಅನಾಥರ, ವಿಧವೆಯರ ಹಾಗೂ ವಿದೇಶೀಯರ ದುರುಪಚಾರದ ಮುಖಾಂತರ ಆತನ ಮಹಾ ಹೆಸರನ್ನು ಅಪವಿತ್ರಗೊಳಿಸಿದರು. (ಯೆಹೆಜ್ಕೇಲ 22:2, 3, 7, 11, 12, 26, 29) ಹೀಗೆ, ಸಾ.ಶ.ಪೂ. 607ರ ವರ್ಷದಲ್ಲಿ, ದೇವಾಲಯವನ್ನು ನಾಶಗೊಳಿಸಲು ಬಾಬೆಲಿನ ಸೇನೆಗಳನ್ನು ತರುವ ಮೂಲಕ ದೇವರು ನ್ಯಾಯತೀರ್ಪನ್ನು ಜಾರಿಗೊಳಿಸಿದನು. ಬದುಕಿ ಉಳಿದಿದ್ದ ಇಸ್ರಾಯೇಲ್ಯರು ಬಾಬೆಲಿಗೆ ಸೆರೆವಾಸಿಗಳಂತೆ ಕೊಂಡೊಯ್ಯಲ್ಪಟ್ಟರು.
18. ಎರಡನೆಯ ದೇವಾಲಯದಲ್ಲಿ, ಯೆಹೋವನ ಆರಾಧನೆಯನ್ನು ಮನಃಪೂರ್ವಕವಾಗಿ ಸಮರ್ಥಿಸಿದ ಕೆಲವು ಇಸ್ರಾಯೇಲ್ಯರಲ್ಲದ ಪುರುಷರಿಗೆ ಯಾವ ಸುಯೋಗಗಳು ತೆರೆದುಕೊಂಡವು?
18 70 ವರ್ಷಗಳ ತರುವಾಯ, ಪಶ್ಚಾತ್ತಾಪಿಗಳಾದ ಯೆಹೂದಿ ಉಳಿಕೆಯವರು ಯೆರೂಸಲೇಮಿಗೆ ಹಿಂದಿರುಗಿದರು ಮತ್ತು ಯೆಹೋವನ ದೇವಾಲಯವನ್ನು ಪುನಃ ಕಟ್ಟುವ ಸುಯೋಗವು ಅವರಿಗೆ ಅನುಗ್ರಹಿಸಲ್ಪಟ್ಟಿತು. ಆಸಕ್ತಿಕರವಾಗಿ, ಈ ಎರಡನೆಯ ದೇವಾಲಯದಲ್ಲಿ ಸೇವೆ ಸಲ್ಲಿಸಲು ಯಾಜಕರ ಹಾಗೂ ಲೇವಿಯರ ಕೊರತೆ ಇತ್ತು. ಆದಕಾರಣ, ಇಸ್ರಾಯೇಲ್ಯರಲ್ಲದ ದೇವಾಲಯದ ದಾಸರಿಂದ ಬಂದವರಾದ ದೇವಸ್ಥಾನದಾಸರಿಗೆ (ನೆತಿನಿಮ್), ದೇವರ ಆಲಯದ ಶುಶ್ರೂಷಕರೋಪಾದಿ ಹೆಚ್ಚಿನ ಸುಯೋಗಗಳು ಕೊಡಲ್ಪಟ್ಟವು. ಹಾಗಿದ್ದರೂ, ಅವರೆಂದೂ ಯಾಜಕರು ಮತ್ತು ಲೇವಿಯರಿಗೆ ಸಮಾನರಾಗಲಿಲ್ಲ.—ಎಜ್ರನು 7:24; 8:17, 20.
19. ಎರಡನೆಯ ದೇವಾಲಯದ ಸಂಬಂಧದಲ್ಲಿ ಯಾವ ವಾಗ್ದಾನವನ್ನು ದೇವರು ಮಾಡಿದನು, ಮತ್ತು ಈ ಮಾತುಗಳು ಹೇಗೆ ಸತ್ಯವಾಗಿ ಪರಿಣಮಿಸಿದವು?
19 ಆರಂಭದಲ್ಲಿ, ಎರಡನೆಯ ದೇವಾಲಯವು ಮೊದಲನೆಯ ದೇವಾಲಯಕ್ಕೆ ಯಾವುದೇ ಹೋಲಿಕೆಯಿಲ್ಲದ್ದಾಗಿ ಕಂಡುಬಂದಿತು. (ಹಗ್ಗಾಯ 2:3) ಆದರೆ ಯೆಹೋವನು ವಾಗ್ದಾನಿಸಿದ್ದು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಆ ಆಲಯವನ್ನು ವೈಭವದಿಂದ ತುಂಬಿಸುವೆನು; . . . ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು.” (ಹಗ್ಗಾಯ 2:7, 9) ಮುಂತಿಳಿಸಿದಂತೆಯೇ, ಎರಡನೆಯ ದೇವಾಲಯವು ಖಂಡಿತವಾಗಿಯೂ ಹೆಚ್ಚಿನ ಮಹಿಮೆಯನ್ನು ಗಳಿಸಿತು. ಅದು ಮೊದಲನೆಯ ದೇವಾಲಯಕ್ಕಿಂತ 164 ವರ್ಷಗಳು ಹೆಚ್ಚಾಗಿ ಉಳಿಯಿತು ಮತ್ತು ಇನ್ನೂ ಹೆಚ್ಚಿನ ದೇಶಗಳಿಂದ ಬಂದ ಇನ್ನೂ ಹೆಚ್ಚಿನ ಆರಾಧಕರು ಅದರ ಅಂಗಳಗಳೊಳಗೆ ಗುಂಪುಗೂಡಿದರು. (ಹೋಲಿಸಿ ಅ. ಕೃತ್ಯಗಳು 2:5-11.) ಎರಡನೆಯ ದೇವಾಲಯದ ಜೀರ್ಣೋದ್ಧಾರವು ರಾಜ ಹೆರೋದನ ದಿನಗಳಲ್ಲಿ ಆರಂಭಿಸಿತು, ಮತ್ತು ಅದರ ಅಂಗಳಗಳು ವಿಸ್ತರಿಸಲ್ಪಟ್ಟವು. ಸುದೃಢವಾದ ಕಲ್ಲಿನ ವೇದಿಕೆಯ ಮೇಲೆ ಎತ್ತರಿಸಲ್ಪಟ್ಟು, ಸುಂದರವಾದ ಕಂಬ ಸಾಲುಗಳಿಂದ ಸುತ್ತುವರಿಯಲ್ಪಟ್ಟಿದ್ದ ಆ ದೇವಾಲಯವು, ವೈಭವದಲ್ಲಿ ಸೊಲೊಮೋನನಿಂದ ಕಟ್ಟಲ್ಪಟ್ಟ ಮೂಲಭೂತ ದೇವಾಲಯಕ್ಕೆ ಸಮಾನವಾಗಿತ್ತು. ಅದು ಯೆಹೋವನನ್ನು ಆರಾಧಿಸಲು ಬಯಸಿದ ರಾಷ್ಟ್ರಗಳ ಜನರಿಗಾಗಿ ಒಂದು ದೊಡ್ಡದಾದ ಹೊರ ಅಂಗಳವನ್ನು ಒಳಗೊಂಡಿತ್ತು. ಒಂದು ಕಲ್ಲಿನ ತಡೆಯು, ಅನ್ಯಜನಾಂಗಗಳ ಈ ಸಭೆಯನ್ನು ಇಸ್ರಾಯೇಲ್ಯರಿಗಾಗಿ ಮಾತ್ರ ಮೀಸಲಾಗಿಡಲ್ಪಟ್ಟಿದ್ದ ಒಳ ಅಂಗಳಗಳಿಂದ ಬೇರ್ಪಡಿಸಿತು.
20. (ಎ) ಪುನರ್ಕಟ್ಟಲ್ಪಟ್ಟ ದೇವಾಲಯವನ್ನು ಯಾವ ಎದ್ದುಕಾಣುವ ವ್ಯತ್ಯಾಸವು ಗುರುತಿಸಿತು? (ಬಿ) ಯೆಹೂದ್ಯರು ದೇವಾಲಯವನ್ನು ತಪ್ಪಾಗಿ ವೀಕ್ಷಿಸಿದರೆಂಬುದನ್ನು ಯಾವುದು ತೋರಿಸಿತು, ಮತ್ತು ಇದಕ್ಕೆ ಪ್ರತ್ಯುತ್ತರವಾಗಿ ಯೇಸು ಏನು ಮಾಡಿದನು?
20 ಈ ಎರಡನೆಯ ದೇವಾಲಯವು, ಅದರ ಅಂಗಳಗಳೊಳಗೆ ದೇವರ ಪುತ್ರನಾದ ಯೇಸು ಕ್ರಿಸ್ತನು ಕಲಿಸಿದ ಮಹಾ ಪ್ರಖ್ಯಾತಿಯನ್ನು ಅನುಭವಿಸಿತು. ಆದರೆ ಮೊದಲನೆಯ ದೇವಾಲಯದ ಸಂಬಂಧದಲ್ಲಿ ಸಂಭವಿಸಿದಂತೆ, ಸಾಮಾನ್ಯವಾಗಿ ಯೆಹೂದ್ಯರಲ್ಲಿ ತಾವು ದೇವರ ಆಲಯದ ಪಾಲಕರಾಗಿರುವ ಸುಯೋಗದ ಯೋಗ್ಯವಾದ ನೋಟವಿರಲಿಲ್ಲ. ಅವರು ವ್ಯಾಪಾರಿಗಳನ್ನು ಅನ್ಯಜನರ ಅಂಗಳದಲ್ಲಿ ವ್ಯಾಪಾರ ನಡೆಸುವಂತೆಯೂ ಅನುಮತಿಸಿದರು. ಅಷ್ಟೇ ಅಲ್ಲದೆ, ಯೆರೂಸಲೇಮಿನ ಸುತ್ತಲೂ ವಸ್ತುಗಳನ್ನು ಹೊತ್ತುಕೊಂಡು ಹೋಗುವಾಗ, ಜನರು ದೇವಾಲಯವನ್ನು ಒಂದು ಸೀಳುದಾರಿಯೋಪಾದಿ ಉಪಯೋಗಿಸುವಂತೆ ಅನುಮತಿಸಲ್ಪಟ್ಟರು. ತನ್ನ ಮರಣಕ್ಕೆ ನಾಲ್ಕು ದಿನಗಳ ಮುಂಚೆ, “ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ,” ಎಂಬುದಾಗಿ ಯೇಸು ಹೇಳುತ್ತಾ ಇದ್ದಾಗ, ಅವನು ದೇವಾಲಯವನ್ನು ಇಂತಹ ಧಾರ್ಮಿಕವಲ್ಲದ ಆಚರಣೆಗಳಿಂದ ಸ್ವಚ್ಛಗೊಳಿಸಿದನು.—ಮಾರ್ಕ 11:15-17.
ದೇವರು ತನ್ನ ಭೂಆಲಯವನ್ನು ಸದಾಕಾಲಕ್ಕೂ ಪರಿತ್ಯಜಿಸುತ್ತಾನೆ
21. ಯೆರೂಸಲೇಮಿನ ದೇವಾಲಯದ ಸಂಬಂಧದಲ್ಲಿ ಯೇಸು ಏನನ್ನು ಸೂಚಿಸಿದನು?
21 ದೇವರ ಶುದ್ಧಾರಾಧನೆಯನ್ನು ಎತ್ತಿಹಿಡಿಯುವುದರಲ್ಲಿ ಯೇಸುವಿನ ಧೈರ್ಯವಂತ ಕ್ರಿಯೆಯ ಕಾರಣ, ಯೆಹೂದಿ ಧಾರ್ಮಿಕ ನಾಯಕರು ಅವನನ್ನು ಕೊಲ್ಲಲು ದೃಢನಿರ್ಧಾರ ಮಾಡಿದ್ದರು. (ಮಾರ್ಕ 11:18) ತಾನು ಬೇಗನೆ ಕೊಲೆಗೈಯಲ್ಪಡುವೆನೆಂದು ತಿಳಿದಿದ್ದು, ಯೇಸು ಯೆಹೂದಿ ಧಾರ್ಮಿಕ ನಾಯಕರಿಗೆ ಹೇಳಿದ್ದು: “ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:37, 38) ಹೀಗೆ, ಬೇಗನೆ ದೇವರು ಯೆರೂಸಲೇಮಿನಲ್ಲಿನ ಭೌತಿಕ ದೇವಾಲಯದಲ್ಲಿ ಆಚರಿಸಲ್ಪಟ್ಟ ಆರಾಧನೆಯ ವಿಧವನ್ನು ಇನ್ನು ಮುಂದೆ ಸ್ವೀಕರಿಸದಿರುವನೆಂಬುದನ್ನು ಅವನು ಸೂಚಿಸಿದನು. ಅದು ಇನ್ನು ಮುಂದೆ “ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ”ವಾಗಿರದು. ಯೇಸುವಿನ ಶಿಷ್ಯರು ಮಹೋನ್ನತವಾದ ದೇವಾಲಯದ ಕಟ್ಟಡಗಳ ಕಡೆಗೆ ಅವನ ಗಮನ ಸೆಳೆದಾಗ, ಅವನು ಹೇಳಿದ್ದು: “ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ, ಎಲ್ಲಾ ಕೆಡವಲ್ಪಡುವದು.”—ಮತ್ತಾಯ 24:1, 2.
22. (ಎ) ದೇವಾಲಯದ ಕುರಿತಾದ ಯೇಸುವಿನ ಮಾತುಗಳು ಹೇಗೆ ನೆರವೇರಿದವು? (ಬಿ) ಒಂದು ಭೂನಗರದ ಮೇಲೆ ತಮ್ಮ ನಿರೀಕ್ಷೆಗಳನ್ನು ಕೇಂದ್ರೀಕರಿಸುವ ಬದಲಿಗೆ, ಆದಿ ಕ್ರೈಸ್ತರು ಏನನ್ನು ಕೋರಿದರು?
22 ಯೇಸುವಿನ ಪ್ರವಾದನೆಯು 37 ವರ್ಷಗಳ ನಂತರ, ಸಾ.ಶ. 70ರಲ್ಲಿ ರೋಮನ್ ಸೇನೆಗಳು ಯೆರೂಸಲೇಮ್ ಮತ್ತು ಅದರ ದೇವಾಲಯವನ್ನು ನಾಶಪಡಿಸಿದಾಗ ನೆರವೇರಿತು. ದೇವರು ಖಂಡಿತವಾಗಿಯೂ ತನ್ನ ಭೌತಿಕ ಆಲಯವನ್ನು ಪರಿತ್ಯಜಿಸಿದ್ದನೆಂಬುದಕ್ಕೆ ಅದು ಗಮನಾರ್ಹ ಪ್ರಮಾಣವನ್ನು ಒದಗಿಸಿತು. ಯೆರೂಸಲೇಮಿನಲ್ಲಿ ಮತ್ತೊಂದು ದೇವಾಲಯದ ಪುನರ್ಕಟ್ಟುವಿಕೆಯನ್ನು ಯೇಸು ಎಂದಿಗೂ ಮುಂತಿಳಿಸಲಿಲ್ಲ. ಆ ಭೂನಗರದ ಕುರಿತು, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದುದು: “ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ; ಇನ್ನು ಮುಂದೆ ಆಗುವ ಪಟ್ಟಣವನ್ನು ಹಾರೈಸುತ್ತಾ ಇದ್ದೇವೆ.” (ಇಬ್ರಿಯ 13:14) ಆದಿ ಕ್ರೈಸ್ತರು “ಸ್ವರ್ಗೀಯ ಯೆರೂಸಲೇಮ್” (NW)ನ—ದೇವರ ನಗರಸದೃಶ ರಾಜ್ಯದ—ಭಾಗವಾಗುವುದಕ್ಕೆ ಎದುರುನೋಡಿದರು. (ಇಬ್ರಿಯ 12:22) ಹೀಗೆ, ಯೆಹೋವನ ಸತ್ಯಾರಾಧನೆಯು ಇನ್ನು ಮುಂದೆ ಭೂಮಿಯ ಮೇಲಿನ ಒಂದು ಭೌತಿಕ ದೇವಾಲಯದಲ್ಲಿ ಕೇಂದ್ರೀಕೃತವಾಗಿರುವುದಿಲ್ಲ. ದೇವರು ತನ್ನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸಲು ಬಯಸುವವರೆಲ್ಲರಿಗಾಗಿ ಸ್ಥಾಪಿಸಿರುವ ಶ್ರೇಷ್ಠವಾದ ಏರ್ಪಾಡನ್ನು, ನಾವು ನಮ್ಮ ಮುಂದಿನ ಲೇಖನದಲ್ಲಿ ಪರಿಗಣಿಸುವೆವು.—ಯೋಹಾನ 4:21, 24.
ಪುನರ್ವಿಮರ್ಶಾ ಪ್ರಶ್ನೆಗಳು
◻ ದೇವರೊಂದಿಗಿನ ಯಾವ ಸಂಬಂಧವನ್ನು ಆದಾಮ ಹವ್ವರು ಕಳೆದುಕೊಂಡರು?
◻ ಸಾಕ್ಷಿಗುಡಾರದ ವೈಶಿಷ್ಟ್ಯಗಳು ನಮಗೆ ಆಸಕ್ತಿಯದ್ದಾಗಿರಬೇಕು ಏಕೆ?
◻ ಸಾಕ್ಷಿಗುಡಾರದ ಅಂಗಳದಲ್ಲಿನ ಚಟುವಟಿಕೆಗಳಿಂದ ನಾವು ಏನನ್ನು ಕಲಿಯುತ್ತೇವೆ?
◻ ತನ್ನ ದೇವಾಲಯವು ನಾಶಗೊಳ್ಳುವಂತೆ ದೇವರು ಏಕೆ ಅನುಮತಿಸಿದನು?
[ಪುಟ 10,11 ರಲ್ಲಿರುವಚಿತ್ರಗಳು]
ಹೆರೋದನಿಂದ ಪುನರ್ಕಟ್ಟಲ್ಪಟ್ಟ ದೇವಾಲಯ
1. ಮಹಾಪವಿತ್ರಸ್ಥಾನ
2. ಪವಿತ್ರಸ್ಥಾನ
3. ಸರ್ವಾಂಗಹೋಮದ ವೇದಿಕೆ
4. ನೀರಿನ ಗಂಗಾಳ
5. ಯಾಜಕರ ಸಭೆ
6. ಇಸ್ರಾಯೇಲಿನ ಸಭೆ
7. ಸ್ತ್ರೀಯರ ಸಭೆ