ಅಧ್ಯಯನ ಲೇಖನ 47
ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು
“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಉಪಯುಕ್ತವಾಗಿದೆ.”—2 ತಿಮೊ. 3:16.
ಗೀತೆ 37 ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ
ಕಿರುನೋಟa
1-2. ಯಾಜಕಕಾಂಡ ಪುಸ್ತಕದ ಬಗ್ಗೆ ಕ್ರೈಸ್ತರಾದ ನಾವು ಯಾಕೆ ಆಸಕ್ತಿ ತೋರಿಸಬೇಕು?
ಅಪೊಸ್ತಲ ಪೌಲ ತನ್ನ ಸ್ನೇಹಿತನಾದ ಯುವ ತಿಮೊಥೆಯನಿಗೆ ‘ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಉಪಯುಕ್ತವಾಗಿದೆ’ ಎಂದು ಹೇಳಿದನು. (2 ತಿಮೊ. 3:16) ಅದರಲ್ಲಿ ಯಾಜಕಕಾಂಡ ಪುಸ್ತಕ ಕೂಡ ಒಂದು. ಈ ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆಯೇನು? ಈ ಪುಸ್ತಕದಲ್ಲಿ ನಿಯಮಗಳ ಪಟ್ಟಿನೇ ಇದೆ, ಇದು ನಮ್ಮ ಕಾಲಕ್ಕೆ ಸೂಕ್ತವಾಗಿಲ್ಲ ಎಂದು ಕೆಲವರು ನೆನಸಬಹುದು. ಆದರೆ ಕ್ರೈಸ್ತರು ಆ ರೀತಿ ಯೋಚಿಸಲ್ಲ.
2 ಯಾಜಕಕಾಂಡ ಪುಸ್ತಕವನ್ನು ಸುಮಾರು 3,500 ವರ್ಷಗಳ ಹಿಂದೆ ಬರೆದಿರುವುದಾದರೂ ಅದನ್ನು ಯೆಹೋವನು “ನಮ್ಮನ್ನು ಉಪದೇಶಿಸುವುದಕ್ಕಾಗಿ” ಸಂರಕ್ಷಿಸಿಟ್ಟಿದ್ದಾನೆ. (ರೋಮ. 15:4) ಕೆಲವೊಂದು ವಿಷಯಗಳ ಬಗ್ಗೆ ಯೆಹೋವನ ಅನಿಸಿಕೆ ಏನು, ಆತನು ಹೇಗೆ ಯೋಚಿಸುತ್ತಾನೆ ಅನ್ನುವುದನ್ನು ಯಾಜಕಕಾಂಡ ಪುಸ್ತಕದಿಂದ ತಿಳುಕೊಳ್ಳಬಹುದು. ಆದುದರಿಂದ ನಾವು ಈ ಪುಸ್ತಕದಲ್ಲಿರುವುದನ್ನು ಕಲಿಯಲು ಆಸಕ್ತಿ ತೋರಿಸಬೇಕು. ಈ ಪ್ರೇರಿತ ಪುಸ್ತಕದಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಅವುಗಳಲ್ಲಿ ನಾಲ್ಕನ್ನು ನಾವೀಗ ಪರಿಗಣಿಸೋಣ.
ನಾವು ಹೇಗೆ ಯೆಹೋವನ ಮೆಚ್ಚುಗೆ ಪಡೆಯಬಹುದು?
3. ದೋಷಪರಿಹಾರಕ ದಿನದಂದು ಪ್ರಾಣಿಗಳನ್ನು ಯಾಕೆ ಯಜ್ಞವಾಗಿ ಕೊಡಲಾಗುತ್ತಿತ್ತು?
3 ಮೊದಲನೇ ಪಾಠ: ನಮ್ಮ ಯಜ್ಞಗಳನ್ನು ಯೆಹೋವನು ಸ್ವೀಕರಿಸಬೇಕೆಂದರೆ ನಾವು ಆತನ ಮೆಚ್ಚುಗೆ ಪಡೆಯಬೇಕು. ಪ್ರಾಚೀನ ಇಸ್ರಾಯೇಲಿನಲ್ಲಿ ದೋಷಪರಿಹಾರಕ ದಿನದಂದು ಜನರೆಲ್ಲರೂ ಒಟ್ಟುಗೂಡುತ್ತಿದ್ದರು ಮತ್ತು ಮಹಾ ಯಾಜಕನು ಪ್ರಾಣಿಗಳನ್ನು ಯಜ್ಞವಾಗಿ ಅರ್ಪಿಸುತ್ತಿದ್ದನು. ಈ ಯಜ್ಞಗಳು ಇಸ್ರಾಯೇಲ್ಯರಿಗೆ ತಾವು ಪಾಪಿಗಳಾಗಿದ್ದೇವೆ, ತಮಗೆ ಕ್ಷಮೆಯ ಅಗತ್ಯವಿದೆ ಅನ್ನುವುದನ್ನು ನೆನಪಿಸುತ್ತಿದ್ದವು. ಮಹಾ ಯಾಜಕನು ಯಜ್ಞವಾಗಿ ಕೊಟ್ಟಂಥ ಪ್ರಾಣಿಗಳ ರಕ್ತವನ್ನು ದೇವದರ್ಶನದ ಗುಡಾರದಲ್ಲಿದ್ದ ಅತಿ ಪವಿತ್ರ ಸ್ಥಳಕ್ಕೆ ತರುವ ಮುಂಚೆ ಒಂದು ಪ್ರಾಮುಖ್ಯ ಕೆಲಸವನ್ನು ಮಾಡಬೇಕಿತ್ತು. ಅದು ಇಸ್ರಾಯೇಲ್ ಜನಾಂಗದ ಪಾಪಕ್ಕೆ ಕ್ಷಮೆ ಸಿಗುವುದಕ್ಕಿಂತ ತುಂಬ ಮುಖ್ಯವಾಗಿತ್ತು.
4. ಯಾಜಕಕಾಂಡ 16:12, 13 ರಲ್ಲಿ ತಿಳಿಸಿದಂತೆ ದೋಷಪರಿಹಾರಕ ದಿನದಂದು ಮಹಾ ಯಾಜಕನು ಅತಿ ಪವಿತ್ರ ಸ್ಥಳಕ್ಕೆ ಮೊದಲ ಬಾರಿ ಪ್ರವೇಶಿಸುವಾಗ ಏನು ಮಾಡುತ್ತಿದ್ದನು? (ಮುಖಪುಟ ಚಿತ್ರ ನೋಡಿ.)
4 ಯಾಜಕಕಾಂಡ 16:12, 13 ಓದಿ. ದೋಷಪರಿಹಾರಕ ದಿನದಂದು ಏನು ನಡೆಯುತ್ತಿತ್ತೆಂದು ಚಿತ್ರಿಸಿಕೊಳ್ಳಿ. ಮಹಾ ಯಾಜಕನು ದೇವದರ್ಶನ ಗುಡಾರದ ಒಳಗೆ ಪ್ರವೇಶಿಸುತ್ತಿದ್ದನು. ಆ ದಿನದಂದು ಅವನು ಮೂರು ಬಾರಿ ದೇವದರ್ಶನ ಗುಡಾರದ ಅತಿ ಪವಿತ್ರ ಸ್ಥಳಕ್ಕೆ ಹೋಗುತ್ತಿದ್ದನು. ಮೊದಲನೇ ಬಾರಿ ಪ್ರವೇಶಿಸುವಾಗ ಅವನ ಒಂದು ಕೈಯಲ್ಲಿ ಪರಿಮಳಧೂಪ ಇರುವ ಒಂದು ಚಿಕ್ಕ ಪಾತ್ರೆ, ಇನ್ನೊಂದು ಕೈಯಲ್ಲಿ ಕೆಂಡ ತುಂಬಿರುವ ಚಿನ್ನದ ಧೂಪಾರತಿ ಇರುತ್ತಿತ್ತು. ಅತಿ ಪವಿತ್ರ ಸ್ಥಳದ ದ್ವಾರವನ್ನು ಮುಚ್ಚಿರುವ ತೆರೆಯ ಮುಂದೆ ಹೋದಾಗ ಅಲ್ಲಿ ಒಂದು ಕ್ಷಣ ನಿಂತು, ನಂತರ ತುಂಬ ಭಯಭಕ್ತಿಯಿಂದ, ಗೌರವದಿಂದ ಅವನು ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿ ಒಡಂಬಡಿಕೆಯ ಮಂಜೂಷದ ಮುಂದೆ ನಿಲ್ಲುತ್ತಿದ್ದನು. ಒಂದರ್ಥದಲ್ಲಿ ಅವನು ಯೆಹೋವನ ಮುಂದೆಯೇ ನಿಂತಂತೆ ಇರುತ್ತಿತ್ತು. ಆಮೇಲೆ ಆ ಯಾಜಕನು ತುಂಬ ಜಾಗ್ರತೆಯಿಂದ ಪರಿಮಳಧೂಪವನ್ನು ಕೆಂಡದ ಮೇಲೆ ಹಾಕುತ್ತಿದ್ದನು. ಆಗ ಇಡೀ ಕೋಣೆಯು ಸುವಾಸನೆಯಿಂದ ತುಂಬುತ್ತಿತ್ತು.b ನಂತರ ಯಜ್ಞವಾಗಿ ಕೊಟ್ಟಂಥ ಪ್ರಾಣಿಗಳ ರಕ್ತವನ್ನು ತಗೊಂಡು ಅವನು ಅತಿ ಪವಿತ್ರ ಸ್ಥಳಕ್ಕೆ ಪುನಃ ಪ್ರವೇಶಿಸುತ್ತಿದ್ದನು. ಹೀಗೆ ಅವನು ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ರಕ್ತವನ್ನು ಅರ್ಪಿಸುತ್ತಿದ್ದನು.
5. ಮಹಾ ಯಾಜಕನು ಪರಿಮಳಧೂಪ ಹಿಡುಕೊಂಡು ಅತಿ ಪವಿತ್ರ ಸ್ಥಳವನ್ನು ಹೇಗೆ ಪ್ರವೇಶಿಸುತ್ತಿದ್ದನು? ಇದರಿಂದ ನಾವೇನು ಕಲಿಯಬಹುದು?
5 ದೋಷಪರಿಹಾರಕ ದಿನದಂದು ಪರಿಮಳಧೂಪವನ್ನು ಸುಡುತ್ತಿದ್ದ ವಿಷಯದಿಂದ ನಾವೇನು ಕಲಿಯಬಹುದು? ಯೆಹೋವನ ನಂಬಿಗಸ್ತ ಸೇವಕರು ಮಾಡುವ ಪ್ರಾರ್ಥನೆಗಳು ಧೂಪದಂತೆ ಇವೆ ಎಂದು ಬೈಬಲ್ ತಿಳಿಸುತ್ತದೆ. (ಕೀರ್ತ. 141:2; ಪ್ರಕ. 5:8) ಮಹಾ ಯಾಜಕನು ಯೆಹೋವನ ಸನ್ನಿಧಿಯ ಮುಂದೆ ತುಂಬ ಭಯಭಕ್ತಿಯಿಂದ, ಗೌರವದಿಂದ ಧೂಪವನ್ನು ತರುತ್ತಿದ್ದನು. ಅದೇರೀತಿ, ನಾವು ಯೆಹೋವನಿಗೆ ತುಂಬ ಭಯಭಕ್ತಿಯಿಂದ, ಗೌರವದಿಂದ ಪ್ರಾರ್ಥನೆ ಮಾಡಬೇಕು. ಒಂದು ಮಗು ತನ್ನ ತಂದೆಯ ಹತ್ತಿರ ಮಾತಾಡುವಂತೆ ನಾವು ಇಡೀ ವಿಶ್ವದ ಸೃಷ್ಟಿಕರ್ತನಾಗಿರುವ ಯೆಹೋವನ ಹತ್ತಿರ ಮಾತಾಡಬಹುದು, ಆತನಿಗೆ ಆಪ್ತರಾಗಬಹುದು. (ಯಾಕೋ. 4:8) ಈ ಅವಕಾಶ ಕೊಟ್ಟಿರುವುದಕ್ಕಾಗಿ ಯೆಹೋವನಿಗೆ ಆಭಾರಿಗಳಾಗಿದ್ದೇವೆ. ಯೆಹೋವನು ನಮ್ಮನ್ನು ಆಪ್ತಮಿತ್ರರಂತೆ ವೀಕ್ಷಿಸುತ್ತಾನೆ. (ಕೀರ್ತ. 25:14) ಈ ಸುಯೋಗವನ್ನು ನಾವು ಮಾನ್ಯ ಮಾಡುವುದರಿಂದ ಆತನಿಗೆ ನೋವಾಗುವಂಥ ಯಾವ ವಿಷಯವನ್ನೂ ಮಾಡುವುದಿಲ್ಲ.
6. ಮಹಾಯಾಜಕನು ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ಯಜ್ಞ ಅರ್ಪಿಸುತ್ತಿದ್ದ ವಿಷಯದಿಂದ ಯೇಸು ಬಗ್ಗೆ ನಾವೇನು ಕಲಿಯುತ್ತೇವೆ?
6 ಮಹಾ ಯಾಜಕನು ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ಯಜ್ಞವನ್ನು ಅರ್ಪಿಸಬೇಕಿತ್ತು ಅನ್ನುವುದನ್ನು ಗಮನಿಸಿ. ಮೊದಲಿಗೆ ಪರಿಮಳಧೂಪವನ್ನು ಸುಡುವ ಮೂಲಕ ದೇವರು ತನ್ನನ್ನು ಮೆಚ್ಚಿದ್ದಾನೆ ಎಂದು ಅವನು ಖಚಿತಪಡಿಸಿಕೊಳ್ಳುತ್ತಿದ್ದನು. ನಾವಿದರಿಂದ ಯೇಸು ಬಗ್ಗೆ ಒಂದು ವಿಷಯವನ್ನು ಕಲಿಯಬಹುದು. ಯೇಸು ಭೂಮಿಯಲ್ಲಿದ್ದಾಗ ಮನುಷ್ಯರಿಗಾಗಿ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸುವುದಕ್ಕಿಂತ ಮುಂಚೆ ಅದಕ್ಕಿಂತಲೂ ಪ್ರಾಮುಖ್ಯವಾದ ಒಂದು ವಿಷಯವನ್ನು ಮಾಡಬೇಕಿತ್ತು. ಅದೇನಾಗಿತ್ತು? ಯೆಹೋವನು ಯೇಸುವಿನ ಯಜ್ಞ ಸ್ವೀಕರಿಸಬೇಕೆಂದರೆ ಯೇಸು ಜೀವನಪೂರ್ತಿ ಯೆಹೋವನು ಹೇಳಿದಂತೆ ನಡಕೊಳ್ಳಬೇಕಿತ್ತು, ನಿಷ್ಠೆಯಿಂದ ಇರಬೇಕಿತ್ತು. ಹೀಗೆ ಯೆಹೋವನು ಹೇಳುವ ತರ ಜೀವನ ಮಾಡುವುದೇ ಸರಿ ಎಂದು ಯೇಸು ತೋರಿಸಿಕೊಡಬೇಕಿತ್ತು. ತನ್ನ ತಂದೆಯ ಆಳ್ವಿಕೆಯೇ ಸರಿಯಾದದ್ದು, ನ್ಯಾಯವಾದದ್ದು ಎಂದು ಯೇಸು ರುಜುಪಡಿಸಬೇಕಿತ್ತು.
7. ಯೇಸು ತನ್ನ ಜೀವನವಿಡೀ ಯೆಹೋವನನ್ನು ಹೇಗೆ ಸಂತೋಷಪಡಿಸಿದನು?
7 ಯೇಸು ಭೂಮಿಯಲ್ಲಿದ್ದಷ್ಟು ಕಾಲ ಯೆಹೋವನು ಹೇಳಿದಂತೆಯೇ ನಡಕೊಂಡನು, ಒಂದು ಮಾತನ್ನೂ ಮೀರಲಿಲ್ಲ. ಅದೆಂಥ ಪ್ರಲೋಭನೆ, ಕಷ್ಟಗಳು ಬಂದರೂ ಕ್ರೂರವಾಗಿ ತನ್ನನ್ನು ಕೊಲ್ಲಲಾಗುತ್ತದೆ ಅಂತ ಗೊತ್ತಿದ್ದರೂ ಯೇಸು ತನ್ನ ತಂದೆಯ ಆಳ್ವಿಕೆಯೇ ಸರಿ ಎಂದು ರುಜುಪಡಿಸಬೇಕೆಂಬ ದೃಢತೀರ್ಮಾನದಿಂದ ಹಿಂದೆ ಸರಿಯಲಿಲ್ಲ. (ಫಿಲಿ. 2:8) ಕಷ್ಟಗಳು ಬಂದಾಗ ಯೇಸು “ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ” ಪ್ರಾರ್ಥಿಸಿದನು. (ಇಬ್ರಿ. 5:7) ಆತನು ಮನಬಿಚ್ಚಿ ಮಾಡುತ್ತಿದ್ದ ಪ್ರಾರ್ಥನೆಗಳು ಯೆಹೋವನಿಗೆ ಆತನೆಷ್ಟು ನಿಷ್ಠಾವಂತನಾಗಿದ್ದಾನೆಂದು ತೋರಿಸಿಕೊಡುತ್ತಿದ್ದವು. ಅಷ್ಟೇ ಅಲ್ಲ, ಕೊನೇ ತನಕ ವಿಧೇಯನಾಗಿ ಇರಬೇಕೆಂಬ ಆತನ ಆಸೆಯನ್ನು ಹೆಚ್ಚಿಸುತ್ತಿದ್ದವು. ಯೆಹೋವನಿಗೆ ಯೇಸುವಿನ ಪ್ರಾರ್ಥನೆಯು ಪರಿಮಳಧೂಪದ ಸುವಾಸನೆಯಂತಿತ್ತು. ಯೇಸು ತನ್ನ ಜೀವನವಿಡೀ ಯೆಹೋವನನ್ನು ಸಂತೋಷಪಡಿಸಿದನು ಮತ್ತು ಆತನ ಆಳ್ವಿಕೆಯೇ ಸರಿಯಾದದ್ದು ಎಂದು ತೋರಿಸಿಕೊಟ್ಟನು.
8. ಯೇಸು ಕ್ರಿಸ್ತನ ಜೀವನ ರೀತಿಯನ್ನು ನಾವು ಹೇಗೆ ಅನುಕರಿಸಬಹುದು?
8 ಯೇಸುವಿನಂತೆ ನಾವು ಸಹ ಯೆಹೋವನು ಹೇಳಿದಂತೆ ನಡಕೊಳ್ಳಲು ಮತ್ತು ಆತನಿಗೆ ನಿಷ್ಠೆಯಿಂದ ಇರಲು ನಮ್ಮಿಂದಾಗುವುದೆಲ್ಲವನ್ನು ಮಾಡೋಣ. ಕಷ್ಟ-ಪರೀಕ್ಷೆಗಳು ಬಂದಾಗಲೂ ಯೆಹೋವನಿಗೆ ಇಷ್ಟ ಆಗುವ ತರ ನಡಕೊಳ್ಳಬೇಕೆಂದು ನಾವು ಬಯಸುವುದರಿಂದ ಆತನ ಸಹಾಯಕ್ಕಾಗಿ ಎಡೆಬಿಡದೆ ಪ್ರಾರ್ಥಿಸೋಣ. ಹೀಗೆ ಯೆಹೋವನ ಆಳ್ವಿಕೆಗೆ ನಮ್ಮ ಬೆಂಬಲ ತೋರಿಸೋಣ. ಯೆಹೋವನಿಗೆ ಇಷ್ಟ ಇಲ್ಲದ ವಿಷಯಗಳನ್ನು ಮಾಡಿದರೆ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳಲ್ಲ, ಆದರೆ ಆತನಿಗೆ ಇಷ್ಟವಾಗುವಂಥ ವಿಷಯಗಳನ್ನು ಮಾಡಿದರೆ ನಮ್ಮ ಮನದಾಳದ ಪ್ರಾರ್ಥನೆಗಳನ್ನು ಆತನು ಕೇಳುತ್ತಾನೆ ಎಂದು ನಮಗೆ ಗೊತ್ತಿದೆ. ಅಂಥ ಪ್ರಾರ್ಥನೆಗಳು ಯೆಹೋವನಿಗೆ ಸುವಾಸನೆ ಬೀರುವ ಪರಿಮಳಧೂಪದಂತೆ ಇರುತ್ತವೆ. ನಾವು ಯೆಹೋವನು ಹೇಳಿದಂತೆ ನಡಕೊಂಡು ನಿಷ್ಠೆಯಿಂದ ಇದ್ದರೆ ಆತನಿಗೆ ಸಂತೋಷವಾಗುತ್ತದೆ.—ಜ್ಞಾನೋ. 27:11.
ಯೆಹೋವನ ಸೇವೆ ಮಾಡಲು ನಮಗಿರುವ ಕಾರಣ
9. ಇಸ್ರಾಯೇಲ್ಯರು ಸಮಾಧಾನಯಜ್ಞವನ್ನು ಯಾಕೆ ಅರ್ಪಿಸುತ್ತಿದ್ದರು?
9 ಎರಡನೇ ಪಾಠ: ನಾವು ಯೆಹೋವನಿಗೆ ಕೃತಜ್ಞರಾಗಿರುವುದರಿಂದ ಆತನ ಸೇವೆ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚನ್ನು ತಿಳುಕೊಳ್ಳಲು ಪ್ರಾಚೀನ ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಸಮಾಧಾನಯಜ್ಞಗಳ ಬಗ್ಗೆ ನೋಡೋಣ.c ಇಸ್ರಾಯೇಲ್ಯರು “ಕೃತಜ್ಞತೆಯನ್ನು ತೋರಿಸುವದಕ್ಕಾಗಿ” ಸಮಾಧಾನಯಜ್ಞಗಳನ್ನು ಅರ್ಪಿಸುತ್ತಿದ್ದರು ಎಂದು ಯಾಜಕಕಾಂಡ ಪುಸ್ತಕದಲ್ಲಿ ತಿಳಿಸಲಾಗಿದೆ. (ಯಾಜ. 7:11-13, 16-18) ಇದು ಕಡ್ಡಾಯವಾಗಿ ಕೊಡಬೇಕಾಗಿದ್ದ ಯಜ್ಞವಾಗಿರಲಿಲ್ಲ. ಸ್ವಇಷ್ಟದಿಂದ ಕೊಡುತ್ತಿದ್ದ ಯಜ್ಞ ಇದಾಗಿತ್ತು. ಯೆಹೋವನನ್ನು ಮನದಾಳದಿಂದ ಪ್ರೀತಿಸುತ್ತಿದ್ದ ಕಾರಣ ಸ್ವಯಂ ಪ್ರೇರಿತವಾಗಿ ಈ ಯಜ್ಞವನ್ನು ಕೊಡಲಾಗುತ್ತಿತ್ತು. ಈ ಯಜ್ಞವನ್ನು ಅರ್ಪಿಸುತ್ತಿದ್ದ ವ್ಯಕ್ತಿ, ಅವನ ಕುಟುಂಬ ಮತ್ತು ಯಾಜಕರು ಯಜ್ಞವಾಗಿ ಕೊಟ್ಟ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು. ಆದರೆ ಆ ಪ್ರಾಣಿಯ ಕೆಲವು ಭಾಗಗಳನ್ನು ಯೆಹೋವನಿಗೆ ಮಾತ್ರ ಅರ್ಪಿಸಬೇಕಿತ್ತು. ಅವು ಯಾವ ಭಾಗಗಳು?
10. ಯಾಜಕಕಾಂಡ 3:6, 12, 14-16 ರಲ್ಲಿ ವಿವರಿಸಿರುವ ಸಮಾಧಾನಯಜ್ಞಗಳು ಯೆಹೋವನಿಗೆ ಯೇಸು ಮಾಡಿದ ಸೇವೆ ತರ ಇದ್ದವು ಎಂದು ಹೇಗೆ ಹೇಳಬಹುದು?
10 ಮೂರನೇ ಪಾಠ: ಯೆಹೋವನ ಮೇಲೆ ಪ್ರೀತಿ ಇರುವ ಕಾರಣ ನಾವು ಆತನಿಗೆ ಅತ್ಯುತ್ತಮವಾದದ್ದನ್ನು ಕೊಡುತ್ತೇವೆ. ಯೆಹೋವನು ಪ್ರಾಣಿಯ ಕೊಬ್ಬನ್ನು ಅತ್ಯುತ್ತಮ ಭಾಗವಾಗಿ ಪರಿಗಣಿಸುತ್ತಿದ್ದನು. ಪ್ರಾಣಿಯ ಇನ್ನೂ ಕೆಲವು ಅಂಗಗಳು ಕೂಡ ಅಮೂಲ್ಯವಾಗಿವೆ ಎಂದು ಆತನು ಹೇಳಿದ್ದನು. ಅದರಲ್ಲಿ ಕಿಡ್ನಿಗಳು (ಹುರುಳಿಕಾಯಿಗಳು ಅಥವಾ ಮೂತ್ರಪಿಂಡಗಳು) ಮತ್ತು ಲಿವರ್ (ಕಾಳಿಜ ಅಥವಾ ಪಿತ್ತಜನಕಾಂಗ) ಕೂಡ ಸೇರಿದ್ದವು. (ಯಾಜಕಕಾಂಡ 3:6, 12, 14-16 ಓದಿ.) ಹಾಗಾಗಿ ಇಸ್ರಾಯೇಲ್ಯನೊಬ್ಬ ಸ್ವಯಂಪ್ರೇರಿತನಾಗಿ ಅಂಥ ಮುಖ್ಯ ಅಂಗಗಳನ್ನು ಮತ್ತು ಕೊಬ್ಬನ್ನು ಅರ್ಪಿಸಿದಾಗ ಯೆಹೋವನಿಗೆ ಸಂತೋಷವಾಗುತ್ತಿತ್ತು. ಇಂಥ ಯಜ್ಞವನ್ನು ಕೊಡುತ್ತಿದ್ದ ಇಸ್ರಾಯೇಲ್ಯನು ತಾನು ಯೆಹೋವನಿಗೆ ಉತ್ತಮವಾದದ್ದನ್ನು ಕೊಡಲು ಬಯಸುತ್ತೇನೆಂದು ತೋರಿಸಿಕೊಡುತ್ತಿದ್ದನು. ಇದೇ ರೀತಿಯಲ್ಲಿ ಯೇಸು ಸಹ ಯೆಹೋವನ ಮೇಲಿದ್ದ ಪ್ರೀತಿಯಿಂದ ಸ್ವಯಂಪ್ರೇರಿತನಾಗಿ ತನ್ನಿಂದಾದಷ್ಟು ಅತ್ಯುತ್ತಮ ಸೇವೆಯನ್ನು ಮಾಡಿದನು. (ಯೋಹಾ. 14:31) ಯೇಸುವಿಗೆ ಯೆಹೋವನ ಚಿತ್ತ ಮಾಡುವುದೇ ಸಂತೋಷ ಕೊಡುತ್ತಿತ್ತು, ದೇವರ ನಿಯಮಗಳ ಮೇಲೆ ತುಂಬ ಪ್ರೀತಿ ಇತ್ತು. (ಕೀರ್ತ. 40:8) ಯೇಸು ಸ್ವಇಷ್ಟದಿಂದ ಸೇವೆ ಮಾಡುತ್ತಿದ್ದದ್ದನ್ನು ನೋಡಿ ಯೆಹೋವನಿಗೆ ಎಷ್ಟು ಖುಷಿಯಾಗಿರಬೇಕಲ್ವಾ?
11. (ಎ) ನಮ್ಮ ಸೇವೆ ಹೇಗೆ ಸಮಾಧಾನಯಜ್ಞಗಳಂತೆ ಇದೆ? (ಬಿ) ಇದರಿಂದ ನಮಗೆ ಹೇಗೆ ಸಮಾಧಾನ ಸಿಗುತ್ತದೆ?
11 ಯೆಹೋವನಿಗೆ ನಾವು ಮಾಡುವ ಸೇವೆಯೂ ಆ ಸಮಾಧಾನಯಜ್ಞಗಳಂತೆಯೇ ಇದೆ. ಯಾಕೆಂದರೆ ಇದರಿಂದಲೇ ಯೆಹೋವನ ಮೇಲೆ ನಮಗೆಷ್ಟು ಪ್ರೀತಿ ಇದೆ ಎಂದು ತೋರಿಸಿಕೊಡುತ್ತೇವೆ. ಪೂರ್ಣಹೃದಯದಿಂದ ನಾವು ಯೆಹೋವನನ್ನು ಪ್ರೀತಿಸುವುದರಿಂದ ಆತನಿಗೆ ಅತ್ಯುತ್ತಮವಾಗಿರುವುದನ್ನು ಕೊಡುತ್ತೇವೆ. ಲಕ್ಷಾಂತರ ಜನರು ಯೆಹೋವನನ್ನು ಮತ್ತು ಆತನ ನೀತಿ-ನಿಯಮಗಳನ್ನು ಪ್ರೀತಿಸಿರುವುದರಿಂದ ತಾವಾಗಿಯೇ ಬಂದು ಆತನ ಸೇವೆ ಮಾಡುತ್ತಿದ್ದಾರೆ. ಇದನ್ನು ನೋಡುವಾಗ ಯೆಹೋವನಿಗೆ ಎಷ್ಟು ಖುಷಿಯಾಗಬಹುದಲ್ವಾ? ಯೆಹೋವನು ನಾವೇನೆಲ್ಲಾ ಮಾಡುತ್ತೇವೆ ಅನ್ನುವುದನ್ನಷ್ಟೇ ಅಲ್ಲ ನಾವು ಯಾಕೆ ಮಾಡುತ್ತೇವೆ ಅನ್ನುವುದನ್ನೂ ನೋಡುತ್ತಾನೆ ಮತ್ತು ಮಾನ್ಯಮಾಡುತ್ತಾನೆ ಎಂಬ ವಿಷಯದಿಂದ ನಮಗೆ ಸಮಾಧಾನ ಸಿಗುತ್ತದೆ. ಉದಾಹರಣೆಗೆ, ನಿಮಗೆ ವಯಸ್ಸಾಗಿರುವ ಕಾರಣ ಇನ್ನು ಮುಂದಕ್ಕೆ ನೀವು ಬಯಸಿದಷ್ಟು ಸೇವೆ ಮಾಡಕ್ಕಾಗದಿದ್ದರೆ ಚಿಂತೆ ಮಾಡಬೇಡಿ. ಯೆಹೋವನಿಗೆ ನಿಮ್ಮ ಇತಿಮಿತಿಗಳು ಗೊತ್ತು ಅನ್ನುವುದನ್ನು ಮರೆಯದಿರಿ. ಯೆಹೋವನ ಸೇವೆ ಹೆಚ್ಚು ಮಾಡಕ್ಕಾಗುತ್ತಿಲ್ಲ ಅಂತ ನಿಮಗನಿಸಬಹುದು. ಆದರೆ ನಿಮ್ಮಿಂದಾಗುವಷ್ಟು ಸೇವೆ ಮಾಡುವಾಗ ಅದರ ಹಿಂದಿರುವ ನಿಮ್ಮ ಪ್ರೀತಿಯನ್ನು ಯೆಹೋವನು ನೋಡುತ್ತಾನೆ. ನೀವು ಅತ್ಯುತ್ತಮವಾದುದನ್ನು ಕೊಡುವಾಗ ಆತನಿಗೆ ಸಂತೋಷವಾಗುತ್ತದೆ.
12. ಸಮಾಧಾನಯಜ್ಞಗಳನ್ನು ಕೊಟ್ಟಾಗ ಯೆಹೋವನಿಗೆ ಹೇಗನಿಸುತ್ತಿತ್ತು? ಇದರಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ?
12 ಸಮಾಧಾನಯಜ್ಞದಿಂದ ನಾವೇನನ್ನು ಕಲಿಯಬಹುದು? ಪ್ರಾಣಿಯ ಉತ್ತಮ ಭಾಗಗಳು ಬೆಂಕಿಯಿಂದ ಸುಟ್ಟಾಗ ಅದರಿಂದ ಹೊಗೆ ಮೇಲೆ ಹೋಗುತ್ತಿತ್ತು ಮತ್ತು ಇದರಿಂದಾಗಿ ಯೆಹೋವನಿಗೆ ಸಂತೋಷವಾಗುತ್ತಿತ್ತು. ಅದೇರೀತಿ, ನೀವು ಸ್ವಇಷ್ಟದಿಂದ ನಿಮ್ಮಿಂದಾದಷ್ಟು ಉತ್ತಮವಾಗಿ ಸೇವೆ ಮಾಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ ಅನ್ನುವುದನ್ನು ಮರೆಯದಿರಿ. (ಕೊಲೊ. 3:23) ಆತನು ನಿಮ್ಮ ಕಡೆ ನೋಡಿ ಖುಷಿಪಡುತ್ತಿರುವುದನ್ನು ಚಿತ್ರಿಸಿಕೊಳ್ಳಿ! ನಿಮ್ಮಿಂದ ಎಷ್ಟು ಸೇವೆ ಮಾಡಕ್ಕಾಗುತ್ತೆ ಅನ್ನುವುದು ಯೆಹೋವನಿಗೆ ಮುಖ್ಯ ಅಲ್ಲ. ನೀವು ಮಾಡುವ ಸೇವೆ ಜಾಸ್ತಿನೇ ಆಗಿರಲಿ, ಕಡಿಮೆನೇ ಆಗಿರಲಿ ಅದನ್ನು ಮಾಡಕ್ಕೆ ನೀವು ಹಾಕುವ ಪ್ರಯತ್ನವನ್ನು ಯೆಹೋವನು ಅಮೂಲ್ಯವಾಗಿ ನೋಡುತ್ತಾನೆ, ಯಾವತ್ತೂ ಮರೆಯಲ್ಲ.—ಮತ್ತಾ. 6:20; ಇಬ್ರಿ. 6:10.
ಯೆಹೋವನು ತನ್ನ ಸಂಘಟನೆಯನ್ನು ಆಶೀರ್ವದಿಸುತ್ತಿದ್ದಾನೆ
13. ಯಾಜಕಕಾಂಡ 9:23, 24 ರ ಪ್ರಕಾರ ಹೊಸದಾಗಿ ನೇಮಿತವಾದ ಯಾಜಕರಿಗೆ ತನ್ನ ಬೆಂಬಲ ಇದೆ ಎಂದು ಯೆಹೋವನು ಹೇಗೆ ತೋರಿಸಿಕೊಟ್ಟನು?
13 ನಾಲ್ಕನೇ ಪಾಠ: ಯೆಹೋವನು ತನ್ನ ಸಂಘಟನೆಯ ಭೂಭಾಗವನ್ನು ಆಶೀರ್ವದಿಸುತ್ತಿದ್ದಾನೆ. ಕ್ರಿ.ಪೂ. 1512 ರಲ್ಲಿ ದೇವದರ್ಶನ ಗುಡಾರವನ್ನು ಸೀನಾಯಿ ಬೆಟ್ಟದ ತಪ್ಪಲಲ್ಲಿ ಇಟ್ಟಾಗ ಏನಾಯಿತೆಂದು ನೋಡಿ. (ವಿಮೋ. 40:17) ಮೋಶೆಯು ಆರೋನ ಮತ್ತು ಅವನ ಮಕ್ಕಳನ್ನು ಯಾಜಕರನ್ನಾಗಿ ಅಭಿಷೇಕಿಸಿದನು. ಆ ಸಂದರ್ಭದಲ್ಲಿ ಯಾಜಕರು ತಮ್ಮ ಮೊದಲ ಯಜ್ಞಗಳನ್ನು ಕೊಡುವಾಗ ಅದನ್ನು ನೋಡಲು ಇಡೀ ಇಸ್ರಾಯೇಲ್ ಜನಾಂಗವೇ ಅಲ್ಲಿ ಕೂಡಿಬಂದಿತ್ತು. (ಯಾಜ. 9:1-5) ಹೊಸದಾಗಿ ನೇಮಿತವಾದ ಯಾಜಕರಿಗೆ ತನ್ನ ಬೆಂಬಲ ಇದೆ ಎಂದು ಯೆಹೋವನು ಹೇಗೆ ತೋರಿಸಿದನು? ಆರೋನ ಮತ್ತು ಮೋಶೆ ಜನರನ್ನು ಆಶೀರ್ವದಿಸುತ್ತಿದ್ದಂತೆ ಯೆಹೋವನ ಸನ್ನಿಧಿಯಿಂದ ಬೆಂಕಿ ಹೊರಟು ಯಜ್ಞವೇದಿಯ ಮೇಲಿದ್ದ ಪ್ರಾಣಿಯಜ್ಞವನ್ನು ಸಂಪೂರ್ಣವಾಗಿ ದಹಿಸಿಬಿಟ್ಟಿತು.—ಯಾಜಕಕಾಂಡ 9:23, 24 ಓದಿ.
14. ಆರೋನನ ಕುಟುಂಬದಲ್ಲಿದ್ದ ಯಾಜಕರು ಇಂದು ಯಾರನ್ನು ಸೂಚಿಸುತ್ತಾರೆ?
14 ಸ್ವರ್ಗದಿಂದ ಬೆಂಕಿ ಬಂದದ್ದರಿಂದ ಏನು ಗೊತ್ತಾಯಿತು? ಯಾಜಕ ಸೇವೆ ಮಾಡಲು ತಾನು ಆರಿಸಿದ ಆರೋನ ಮತ್ತು ಅವನ ಮಕ್ಕಳಿಗೆ ತನ್ನ ಬೆಂಬಲ ಇದೆ ಅನ್ನುವುದನ್ನು ತೋರಿಸಲು ಯೆಹೋವನು ತನ್ನ ಸನ್ನಿಧಿಯಿಂದ ಬೆಂಕಿಯನ್ನು ಕಳುಹಿಸಿದ್ದನು. ಇದನ್ನು ಇಸ್ರಾಯೇಲ್ಯರು ಕಣ್ಣಾರೆ ನೋಡಿದಾಗ ತಾವು ಸಹ ಯಾಜಕರಿಗೆ ತಮ್ಮ ಸಂಪೂರ್ಣ ಬೆಂಬಲ ಕೊಡಬೇಕು ಅಂತ ಅರ್ಥಮಾಡಿಕೊಂಡರು. ಯೆಹೋವನು ಅಂದು ಇಸ್ರಾಯೇಲಿನ ಯಾಜಕರಿಗೆ ಬೆಂಬಲ ಕೊಟ್ಟಿದ್ದು ನಮಗೆ ಇಂದು ಯಾಕೆ ಪ್ರಾಮುಖ್ಯವಾದ ವಿಷಯವಾಗಿದೆ? ಯಾಕೆಂದರೆ ಆಗಿನ ಯಾಜಕರು ಇನ್ನೂ ಉನ್ನತರಾದ, ತುಂಬ ಪ್ರಾಮುಖ್ಯ ಯಾಜಕರ ಮುನ್ಛಾಯೆ ಆಗಿದ್ದರು. ಈ ಪ್ರಾಮುಖ್ಯ ಯಾಜಕರಲ್ಲಿ ಯೇಸು ಮಹಾ ಯಾಜಕನಾಗಿದ್ದಾನೆ ಮತ್ತು ಆತನೊಟ್ಟಿಗೆ 1,44,000 ಮಂದಿ ಯಾಜಕರಾಗಿ ಮತ್ತು ರಾಜರಾಗಿ ಸ್ವರ್ಗದಲ್ಲಿ ಸೇವೆ ಮಾಡಲಿದ್ದಾರೆ.—ಇಬ್ರಿ. 4:14; 8:3-5; 10:1.
15-16. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಯೆಹೋವನು ಹೇಗೆ ಬೆಂಬಲ ಕೊಡುತ್ತಿದ್ದಾನೆ?
15 ಯೇಸು 1919 ರಲ್ಲಿ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಗುಂಪನ್ನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನಾಗಿ’ ನೇಮಿಸಿದನು. ಈ ಆಳು ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿದೆ ಮತ್ತು ಕ್ರಿಸ್ತನ ಹಿಂಬಾಲಕರಿಗೆ “ತಕ್ಕ ಸಮಯಕ್ಕೆ ಆಹಾರವನ್ನು” ಕೊಡುತ್ತಿದೆ. (ಮತ್ತಾ. 24:45) ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ ದೇವರು ಬೆಂಬಲ ಕೊಡುತ್ತಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವಾ?
16 ನಂಬಿಗಸ್ತ ಆಳು ಮಾಡುತ್ತಿರುವ ಕೆಲಸವನ್ನು ತಡೆಯಲು ಸೈತಾನ ಮತ್ತು ಅವನ ಬೆಂಬಲಿಗರು ತುಂಬ ಪ್ರಯತ್ನಿಸುತ್ತಿದ್ದಾರೆ. ಯೆಹೋವನ ಸಹಾಯ ಇಲ್ಲದಿದ್ದರೆ ಆಳಿಗೆ ಈ ಕೆಲಸವನ್ನು ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ಎರಡು ಮಹಾಯುದ್ಧಗಳು ನಡೆದಿವೆ, ಲೋಕವ್ಯಾಪಕವಾಗಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ. ಜೊತೆಗೆ ದೇವಜನರು ಅನ್ಯಾಯ, ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆಯೂ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಭೂಮಿಯಲ್ಲಿರುವ ಕ್ರಿಸ್ತನ ಹಿಂಬಾಲಕರಿಗೆ ಆಧ್ಯಾತ್ಮಿಕ ಆಹಾರ ಕೊಡುವುದನ್ನು ಮುಂದುವರಿಸಿದೆ. ಇಂದು ನಮಗೆ ಸಿಗುತ್ತಿರುವ ಹೇರಳವಾದ ಆಧ್ಯಾತ್ಮಿಕ ಆಹಾರದ ಬಗ್ಗೆ ಯೋಚಿಸಿ. 900ಕ್ಕಿಂತ ಹೆಚ್ಚು ಭಾಷೆಗಳಲ್ಲಿ, ಉಚಿತವಾಗಿ ಸಿಗುತ್ತಿದೆ! ಈ ಆಳಿಗೆ ದೇವರ ಸಂಪೂರ್ಣ ಬೆಂಬಲ ಇದೆ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಾರುವ ಕೆಲಸದ ಮೇಲೂ ಯೆಹೋವನ ಆಶೀರ್ವಾದ ಇದೆ ಅನ್ನುವುದಕ್ಕೆ ಆಧಾರ ಇದೆ. “ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ” ನಿಜವಾಗಲೂ ಸಾರಲಾಗುತ್ತಿದೆ. (ಮತ್ತಾ. 24:14) ಯೆಹೋವನು ತನ್ನ ಸಂಘಟನೆಯನ್ನು ಮಾರ್ಗದರ್ಶಿಸುತ್ತಿದ್ದಾನೆ ಮತ್ತು ಅದರ ಕೆಲಸಗಳನ್ನು ಆಶೀರ್ವದಿಸುತ್ತಿದ್ದಾನೆ ಎಂದು ನಾವು ಕಣ್ಮುಚ್ಚಿ ನಂಬಬಹುದು.
17. ಯೆಹೋವನ ಸಂಘಟನೆಯನ್ನು ನಾವು ಹೇಗೆ ಬೆಂಬಲಿಸಬಹುದು?
17 ಯೆಹೋವನ ಸಂಘಟನೆಯ ಭಾಗವಾಗಿರಲು ನಿಮಗೆ ಹೆಮ್ಮೆ ಅನಿಸುತ್ತಾ? ಮೋಶೆಯ ಸಮಯದಲ್ಲಿ ಯೆಹೋವನು ಸ್ವರ್ಗದಿಂದ ಬೆಂಕಿ ಕಳುಹಿಸುವ ಮೂಲಕ ತಾನು ನೇಮಿಸಿದವರನ್ನು ಬೆಂಬಲಿಸುತ್ತೇನೆ ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟನು. ಅದೇರೀತಿ, ಇಂದು ಆತನು ತನ್ನ ಸಂಘಟನೆಯನ್ನು ಬಳಸುತ್ತಿದ್ದೇನೆ ಎಂದು ತೋರಿಸಲು ಆಧಾರವನ್ನು ಕೊಟ್ಟಿದ್ದಾನೆ. ಆತನ ಸಂಘಟನೆಯ ಭಾಗವಾಗುವ ಅವಕಾಶ ಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ಕೃತಜ್ಞರಾಗಿರಬೇಕು. (1 ಥೆಸ. 5:18) ಯೆಹೋವನ ಸಂಘಟನೆಯನ್ನು ನಾವು ಹೇಗೆ ಬೆಂಬಲಿಸಬಹುದು? ನಮ್ಮ ಪ್ರಕಾಶನಗಳಲ್ಲಿ, ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಕೊಡಲಾಗುವ ಬೈಬಲಾಧಾರಿತ ನಿರ್ದೇಶನಗಳನ್ನು ಪಾಲಿಸುವ ಮೂಲಕ ನಾವು ಅದನ್ನು ಬೆಂಬಲಿಸಬಹುದು. ಸಾರುವ ಮತ್ತು ಕಲಿಸುವ ಕೆಲಸದಲ್ಲೂ ನಮ್ಮಿಂದಾದಷ್ಟು ಹೆಚ್ಚು ಭಾಗವಹಿಸುವ ಮೂಲಕ ನಾವು ಬೆಂಬಲಿಸಬಹುದು.—1 ಕೊರಿಂ. 15:58.
18. ನೀವು ಯಾವ ದೃಢತೀರ್ಮಾನ ಮಾಡಿದ್ದೀರಿ?
18 ಯಾಜಕಕಾಂಡ ಪುಸ್ತಕದಿಂದ ಕಲಿತ ಪಾಠಗಳನ್ನು ನಾವು ಅನ್ವಯಿಸಲು ದೃಢತೀರ್ಮಾನ ಮಾಡೋಣ. ನಮ್ಮ ಯಜ್ಞಗಳನ್ನು ಯೆಹೋವನು ಸ್ವೀಕರಿಸಲು ಆತನ ಮೆಚ್ಚುಗೆ ಪಡಕೊಳ್ಳೋಣ. ಯೆಹೋವನಿಗೆ ಕೃತಜ್ಞರಾಗಿರುವ ಕಾರಣ ಆತನ ಸೇವೆ ಮಾಡೋಣ. ನಾವು ಹೃದಯಾಳದಿಂದ ಯೆಹೋವನನ್ನು ಪ್ರೀತಿಸುವುದರಿಂದ ಆತನಿಗೆ ಅತ್ಯುತ್ತಮವಾದುದನ್ನು ಕೊಡುವುದನ್ನು ಮುಂದುವರಿಸೋಣ. ಮತ್ತು ಇಂದು ಆತನು ಉಪಯೋಗಿಸುತ್ತಿರುವ ಸಂಘಟನೆಯನ್ನು ಬೆಂಬಲಿಸಲು ನಮ್ಮಿಂದಾದ ಎಲ್ಲವನ್ನೂ ಮಾಡೋಣ. ಈ ಎಲ್ಲಾ ವಿಷಯಗಳನ್ನು ಮಾಡುವ ಮೂಲಕ ಯೆಹೋವನ ಸಾಕ್ಷಿಗಳಾಗಿ ಸೇವೆ ಮಾಡಲು ನಮಗೆ ಸಿಕ್ಕಿರುವ ಸುಯೋಗವನ್ನು ಆನಂದಿಸುತ್ತಿದ್ದೇವೆ ಎಂದು ಆತನಿಗೆ ತೋರಿಸಿಕೊಡೋಣ!
ಗೀತೆ 114 ದೇವರ ಸ್ವಂತ ಗ್ರಂಥ—ಒಂದು ನಿಧಿ
a ಪ್ರಾಚೀನ ಕಾಲದ ಇಸ್ರಾಯೇಲ್ಯರಿಗೆ ಯೆಹೋವನು ಕೊಟ್ಟಿದ್ದ ನಿಯಮಗಳು ಯಾಜಕಕಾಂಡ ಪುಸ್ತಕದಲ್ಲಿವೆ. ಕ್ರೈಸ್ತರಾದ ನಾವು ಆ ನಿಯಮಗಳನ್ನು ಪಾಲಿಸುವ ಅಗತ್ಯ ಇಲ್ಲದಿದ್ದರೂ ಇಂದು ಅವುಗಳಿಂದ ನಮಗೆ ಪ್ರಯೋಜನಗಳಿವೆ. ಯಾಜಕಕಾಂಡ ಪುಸ್ತಕದಿಂದ ನಾವು ಯಾವ ಅಮೂಲ್ಯ ಪಾಠಗಳನ್ನು ಕಲಿಯಬಹುದು ಎಂದು ಈ ಲೇಖನದಲ್ಲಿ ನೋಡಲಿದ್ದೇವೆ.
b ದೇವದರ್ಶನದ ಗುಡಾರದಲ್ಲಿ ಸುಡುತ್ತಿದ್ದ ಪರಿಮಳಧೂಪವನ್ನು ಪವಿತ್ರವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಪ್ರಾಚೀನ ಇಸ್ರಾಯೇಲಿನಲ್ಲಿ ಇದನ್ನು ಯೆಹೋವನ ಆರಾಧನೆಗೆ ಮಾತ್ರ ಉಪಯೋಗಿಸುತ್ತಿದ್ದರು. (ವಿಮೋ. 30:34-38) ಒಂದನೇ ಶತಮಾನದ ಕ್ರೈಸ್ತರು ಆರಾಧನೆ ಮಾಡುವಾಗ ಪರಿಮಳಧೂಪವನ್ನು ಸುಡುತ್ತಿದ್ದರು ಅನ್ನಲು ಯಾವುದೇ ದಾಖಲೆ ಇಲ್ಲ.
c ಸಮಾಧಾನಯಜ್ಞದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಪುಸ್ತಕದ ಸಂಪುಟ 2, ಪುಟ 526 ಮತ್ತು 2012 ಜನವರಿ 15 ರ ಕಾವಲಿನಬುರುಜುವಿನ ಪುಟ 19, ಪ್ಯಾರ 11 ನ್ನು ನೋಡಿ.
d ಚಿತ್ರ ವಿವರಣೆ: ದೋಷಪರಿಹಾರಕ ದಿನದಂದು ಇಸ್ರಾಯೇಲಿನ ಮಹಾ ಯಾಜಕನು ಧೂಪ ಮತ್ತು ಉರಿಯುತ್ತಿರುವ ಕೆಂಡ ಹಿಡಿದುಕೊಂಡು ಅತಿ ಪವಿತ್ರ ಸ್ಥಾನಕ್ಕೆ ಹೋಗಿದ್ದಾನೆ. ಇದರಿಂದ ಇಡೀ ಕೋಣೆ ಸುವಾಸನೆಯಿಂದ ತುಂಬುತ್ತದೆ. ನಂತರ ಅವನು ದೋಷಪರಿಹಾರಕ ರಕ್ತವನ್ನು ತೆಗೆದುಕೊಂಡು ಪುನಃ ಪವಿತ್ರ ಸ್ಥಾನಕ್ಕೆ ಹೋಗುತ್ತಾನೆ.
e ಚಿತ್ರ ವಿವರಣೆ: ಒಬ್ಬ ಇಸ್ರಾಯೇಲ್ಯನು ತನ್ನ ಕುಟುಂಬದ ಪರವಾಗಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸಲು ಸಮಾಧಾನಯಜ್ಞ ಅರ್ಪಿಸಲಿಕ್ಕಾಗಿ ಒಂದು ಕುರಿಯನ್ನು ಯಾಜಕನಿಗೆ ಕೊಡುತ್ತಿದ್ದಾನೆ.
f ಚಿತ್ರ ವಿವರಣೆ: ಯೇಸು ಭೂಮಿಯಲ್ಲಿ ಸೇವೆ ಮಾಡುತ್ತಿದ್ದಾಗ, ಯೆಹೋವನ ಆಜ್ಞೆಗಳನ್ನು ತಪ್ಪದೆ ಪಾಲಿಸುವ ಮೂಲಕ ಮತ್ತು ತನ್ನ ಹಿಂಬಾಲಕರೂ ಅವನ್ನು ಪಾಲಿಸುವಂತೆ ಸಹಾಯ ಮಾಡುವ ಮೂಲಕ ದೇವರ ಮೇಲೆ ತನಗೆಷ್ಟು ಪ್ರೀತಿ ಇದೆ ಎಂದು ತೋರಿಸಿಕೊಟ್ಟನು.
g ಚಿತ್ರ ವಿವರಣೆ: ಒಬ್ಬ ವೃದ್ಧ ಸಹೋದರಿ ತನಗೆ ಒಳ್ಳೇ ಆರೋಗ್ಯ ಇಲ್ಲದಿದ್ದರೂ ಯೆಹೋವನಿಗೆ ತನ್ನಿಂದಾದ ಅತ್ಯುತ್ತಮ ಸೇವೆ ಮಾಡಲು ಪತ್ರದ ಮೂಲಕ ಸಾಕ್ಷಿಕಾರ್ಯ ಮಾಡುತ್ತಿದ್ದಾರೆ.
h ಚಿತ್ರ ವಿವರಣೆ: ಆಡಳಿತ ಮಂಡಲಿಯ ಸದಸ್ಯರಾಗಿರುವ ಸಹೋದರ ಗೆರಿಟ್ ಲಾಶ್ 2019 ರ ಫೆಬ್ರವರಿಯಲ್ಲಿ ಜರ್ಮನ್ ಭಾಷೆಯ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಈ ಇಬ್ಬರು ಸಹೋದರಿಯರಂತೆ ಇಂದು ಜರ್ಮನಿಯಲ್ಲಿರುವ ಪ್ರಚಾರಕರು ಹೊಸದಾಗಿ ಬಿಡುಗಡೆಯಾಗಿರುವ ಬೈಬಲನ್ನು ಸೇವೆಯಲ್ಲಿ ಸಂತೋಷದಿಂದ ಬಳಸುತ್ತಿದ್ದಾರೆ.