ಆಶ್ರಯನಗರಗಳು—ದೇವರ ದಯೆಯುಳ್ಳ ಮುನ್ನೇರ್ಪಾಡು
“ಕೈತಪ್ಪಿ ಮತ್ತೊಬ್ಬನನ್ನು ಕೊಂದವನು . . . [“ಯಾವನೇ ಆಗಲಿ,” NW] ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.”—ಅರಣ್ಯಕಾಂಡ 35:15.
1. ಜೀವ ಮತ್ತು ರಕ್ತಾಪರಾಧದ ಕುರಿತು ದೇವರ ನೋಟವೇನು?
ಯೆಹೋವ ದೇವರು ಮಾನವ ಜೀವವನ್ನು ಪವಿತ್ರವೆಂದೆಣಿಸುತ್ತಾನೆ. ಮತ್ತು ಜೀವವು ರಕ್ತದಲ್ಲಿರುತ್ತದೆ. (ಯಾಜಕಕಾಂಡ 17:11, 14) ಆದುದರಿಂದ, ಭೂಮಿಯ ಮೇಲೆ ಜನಿಸಿದ ಪ್ರಥಮ ಮಾನವನಾದ ಕಾಯಿನನು, ತನ್ನ ಸಹೋದರನಾದ ಹೇಬೆಲನ ಕೊಲೆ ಮಾಡಿದಾಗ ತನ್ನ ಮೇಲೆ ರಕ್ತಾಪರಾಧವನ್ನು ತಂದುಕೊಂಡನು. ಆದಕಾರಣ, ದೇವರು ಕಾಯಿನನಿಗೆ ಹೇಳಿದ್ದು: “ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ.” ಕೊಲೆಗೈಯಲ್ಪಟ್ಟ ಸ್ಥಳದಲ್ಲಿನ ನೆಲವನ್ನು ಕಲುಷಿತಮಾಡಿದ ರಕ್ತವು, ಕ್ರೂರವಾಗಿ ಕಡಮೆಮಾಡಲ್ಪಟ್ಟ ಜೀವನಕ್ಕೆ ಮೌನವಾದ, ಆದರೂ ಶಕ್ತಿಯುತವಾದ ಸಾಕ್ಷ್ಯವನ್ನು ನೀಡಿತು. ಪ್ರತೀಕಾರಕ್ಕಾಗಿ ಹೇಬೆಲನ ರಕ್ತವು ದೇವರನ್ನು ಕೂಗಿತು.—ಆದಿಕಾಂಡ 4:4-11.
2. ಜಲಪ್ರಳಯದ ನಂತರ ಜೀವಕ್ಕಾಗಿದ್ದ ಯೆಹೋವನ ಗೌರವವು ಹೇಗೆ ಒತ್ತಿಹೇಳಲ್ಪಟ್ಟಿತು?
2 ಭೌಗೋಲಿಕ ಜಲಪ್ರಳಯದಿಂದ ಪಾರಾದವರೋಪಾದಿ, ನೀತಿವಂತನಾದ ನೋಹ ಮತ್ತು ಅವನ ಕುಟುಂಬವು ನಾವೆಯಿಂದ ಹೊರಬಂದ ತರುವಾಯ, ಮಾನವ ಜೀವಕ್ಕಾಗಿರುವ ದೇವರ ಗೌರವವು ಒತ್ತಿಹೇಳಲ್ಪಟ್ಟಿತು. ಆ ಸಮಯದಲ್ಲಿ, ರಕ್ತವನ್ನಲ್ಲ ಆದರೆ ಪ್ರಾಣಿಯ ಮಾಂಸವನ್ನು ಒಳಗೂಡುವಂತೆ ಯೆಹೋವನು ಮಾನವಜಾತಿಯ ಆಹಾರಪಥ್ಯವನ್ನು ವಿಸ್ತರಿಸಿದನು. ಆತನು ಹೀಗೂ ಆಜ್ಞಾಪಿಸಿದನು: “ಇದಲ್ಲದೆ ನಿಮ್ಮ ರಕ್ತವನ್ನು ಸುರಿಸಿ ಜೀವತೆಗೆಯುವವರಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ ಮನುಷ್ಯನಾಗಿದ್ದರೆ, ಹತವಾದವನು ಅವನ ಸಹೋದರನಾಗಿರುವದರಿಂದ, ಅವನಿಗೂ ಮುಯ್ಯಿತೀರಿಸುವೆನೆಂದು ತಿಳಿದುಕೊಳ್ಳಿರಿ. ನರಹತ್ಯವು ಸಹೋದರಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.” (ಆದಿಕಾಂಡ 9:5, 6) ಕೊಲೆಗಾರನು ಎಲ್ಲಿ ಸಿಕ್ಕಿದರೂ ಅವನನ್ನು ಮರಣಕ್ಕೆ ಗುರಿಮಾಡುವ, ಹತವಾದವನ ಸಮೀಪಬಂಧುವಿನ ಹಕ್ಕನ್ನು ಯೆಹೋವನು ಗುರುತಿಸಿದನು.—ಅರಣ್ಯಕಾಂಡ 35:19.
3. ಜೀವದ ಪಾವಿತ್ರ್ಯತೆಯ ಮೇಲೆ ಯಾವ ಒತ್ತನ್ನು ಮೋಶೆಯ ಧರ್ಮಶಾಸ್ತ್ರವು ಇರಿಸಿತು?
3 ಪ್ರವಾದಿಯಾದ ಮೋಶೆಯ ಮುಖಾಂತರ ಇಸ್ರಾಯೇಲಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ, ಜೀವದ ಪಾವಿತ್ರ್ಯತೆಯು ಸತತವಾಗಿ ಒತ್ತಿಹೇಳಲ್ಪಟ್ಟಿತು. ಉದಾಹರಣೆಗೆ, ದೇವರು ಆಜ್ಞಾಪಿಸಿದ್ದು: “ನರಹತ್ಯ ಮಾಡಬಾರದು.” (ವಿಮೋಚನಕಾಂಡ 20:13) ಒಬ್ಬ ಗರ್ಭವತಿ ಸ್ತ್ರೀಯ ಸಂಬಂಧದಲ್ಲಾಗುವ ಒಂದು ಕೇಡಿನ ಕುರಿತು ಮೋಶೆಯ ಧರ್ಮಶಾಸ್ತ್ರದಲ್ಲಿ ಏನನ್ನು ಹೇಳಲಾಗಿತ್ತೊ, ಅದರಲ್ಲಿಯೂ ಜೀವಕ್ಕಾಗಿ ಗೌರವವು ವ್ಯಕ್ತವಾಗಿತ್ತು. ಇಬ್ಬರು ಪುರುಷರ ನಡುವಿನ ಹೋರಾಟದ ಪರಿಣಾಮವಾಗಿ ಆಕೆ ಅಥವಾ ಆಕೆಯ ಅಜನಿತ ಮಗುವು ಹಾನಿಕರ ಅಪಘಾತವನ್ನು ಅನುಭವಿಸುವುದಾದರೆ, ನ್ಯಾಯಾಧೀಶರು ಪರಿಸ್ಥಿತಿಗಳನ್ನು ಮತ್ತು ಉದ್ದೇಶಪೂರ್ವಕತೆಯ ಮಟ್ಟವನ್ನು ತೂಗಿನೋಡಬೇಕೆಂದು ಧರ್ಮಶಾಸ್ತ್ರವು ನಿರ್ದಿಷ್ಟಪಡಿಸಿತು, ಆದರೂ ದಂಡನೆಯು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ,” ಅಥವಾ ಜೀವಕ್ಕೆ ಪ್ರತಿಯಾಗಿ ಜೀವವಾಗಿರಸಾಧ್ಯವಿತ್ತು. (ವಿಮೋಚನಕಾಂಡ 21:22-25) ಹಾಗಿದ್ದರೂ, ಇಸ್ರಾಯೇಲ್ಯ ಕೊಲೆಗಾರನೊಬ್ಬನು ತನ್ನ ಹಿಂಸಾತ್ಮಕ ಕ್ರಿಯೆಯ ಪರಿಣಾಮಗಳಿಂದ ಹೇಗಾದರೂ ತಪ್ಪಿಸಿಕೊಳ್ಳಸಾಧ್ಯವಿತ್ತೊ?
ಕೊಲೆಗಾರರಿಗೆ ಆಶ್ರಯವೊ?
4. ಇಸ್ರಾಯೇಲಿನ ಹೊರಗೆ, ಗತಕಾಲದಲ್ಲಿ ಆಶ್ರಯದ ಯಾವ ಸ್ಥಳಗಳು ಅಸ್ತಿತ್ವದಲ್ಲಿದ್ದವು?
4 ಇಸ್ರಾಯೇಲನ್ನು ಬಿಟ್ಟು ಇತರ ಜನಾಂಗಗಳಲ್ಲಿ, ಕೊಲೆಗಾರರಿಗೆ ಮತ್ತು ಬೇರೆ ಅಪರಾಧಿಗಳಿಗೆ ಆಶ್ರಯವು ನೀಡಲ್ಪಟ್ಟಿತ್ತು. ಪ್ರಾಚೀನ ಎಫೆಸದಲ್ಲಿ ಆರ್ಟಿಮಿಸ್ ದೇವತೆಯ ಮಂದಿರದಂತಹ ಸ್ಥಳಗಳಲ್ಲಿ ವಿಷಯವು ಹೀಗಿತ್ತು. ತದ್ರೀತಿಯ ಸ್ಥಳಗಳ ಕುರಿತು, ಹೀಗೆ ವರದಿಸಲಾಗಿದೆ: “ಕೆಲವು ದೇವಾಲಯಗಳು ಅಪರಾಧಿಗಳ ಪೋಷಣ ಸ್ಥಾನವಾಗಿದ್ದವು; ಮತ್ತು ಅನೇಕ ವೇಳೆ ಆಶ್ರಯಸ್ಥಾನಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು ಅನಿವಾರ್ಯವಾಯಿತು. ಅಥೆನ್ಸ್ ಪಟ್ಟಣದಲ್ಲಿ ನಿರ್ದಿಷ್ಟ ಆಶ್ರಯಸ್ಥಾನಗಳು ಮಾತ್ರ ಆಶ್ರಯಗಳಾಗಿ ಕಾನೂನಿನ ಮೂಲಕ ಗುರುತಿಸಲ್ಪಟ್ಟವು (ಉದಾಹರಣೆಗೆ, ಗುಲಾಮರಿಗಾಗಿ ತಿಸೀಯಸ್ನ ಮಂದಿರ); ಟೈಬೀರಿಯಸ್ನ ಸಮಯದಲ್ಲಿ, ದೇವಾಲಯಗಳಲ್ಲಿ ದುಷ್ಕರ್ಮಿಗಳ ಸಭೆಗಳು ಎಷ್ಟು ಅಪಾಯಕಾರಿಯಾಗಿದ್ದವೆಂದರೆ, ಆಶ್ರಯದ ಹಕ್ಕು (ಇಸವಿ 22ರಲ್ಲಿ) ಕೆಲವೇ ಪಟ್ಟಣಗಳಿಗೆ ಸೀಮಿತವಾಗಿತ್ತು.” (ದ ಜ್ಯೂವಿಷ್ ಎನ್ಸೈಕ್ಲೊಪೀಡಿಯ, 1909, ಸಂಪುಟ II, ಪುಟ 256) ತದನಂತರ, ಕ್ರೈಸ್ತಪ್ರಪಂಚದ ಚರ್ಚುಗಳು ಆಶ್ರಯದ ಸ್ಥಾನಗಳಾದವು, ಆದರೆ ಇದು ಅಧಿಕಾರವನ್ನು ನಾಗರಿಕ ಅಧಿಕಾರಿಗಳಿಂದ ಪುರೋಹಿತವರ್ಗಕ್ಕೆ ಸಾಗಿಸಿತು ಮತ್ತು ನ್ಯಾಯದ ಯೋಗ್ಯ ನಿರ್ವಹಣೆಯ ವಿರುದ್ಧ ಕೆಲಸಮಾಡಿತು. ಅಪಪ್ರಯೋಗಗಳು ಕಟ್ಟಕಡೆಗೆ ಈ ಏರ್ಪಾಡಿನ ರದ್ದುಮಾಡುವಿಕೆಗೆ ನಡೆಸಿದವು.
5. ಯಾರಾದರೊಬ್ಬರು ಕೊಲ್ಲಲ್ಪಟ್ಟಾಗ ಅದು ಅಲಕ್ಷ್ಯದಿಂದಾಯಿತೆಂದು ದಯೆಗಾಗಿ ವಾದಿಸಲು ನಿಯಮವು ಅನುಮತಿಸಲಿಲ್ಲವೆಂಬುದಕ್ಕೆ ಯಾವ ಪ್ರಮಾಣವಿದೆ?
5 ಇಸ್ರಾಯೇಲ್ಯರಲ್ಲಿ, ಉದ್ದೇಶಪೂರ್ವಕ ಕೊಲೆಗಾರರಿಗೆ ಆಶ್ರಯ ನೀಡಲ್ಪಡುತ್ತಿರಲಿಲ್ಲ. ದೇವರ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡುವ ಒಬ್ಬ ಲೇವಿ ಯಾಜಕನೂ ಒಂದು ಕೃತ್ರಿಮ ಕೊಲೆಗಾಗಿ, ಮರಣದಂಡನೆಗೆ ಒಯ್ಯಲ್ಪಡಬೇಕಿತ್ತು. (ವಿಮೋಚನಕಾಂಡ 21:12-14) ಅಷ್ಟೇ ಅಲ್ಲದೆ, ಒಬ್ಬನು ಕೊಲ್ಲಲ್ಪಟ್ಟಾಗ, ಅದು ಅಲಕ್ಷ್ಯದಿಂದಾಯಿತೆಂದು ದಯೆಗಾಗಿ ವಾದಿಸಲು ನಿಯಮವು ಅನುಮತಿಸಲಿಲ್ಲ. ಉದಾಹರಣೆಗೆ, ಮನುಷ್ಯನೊಬ್ಬನು ತನ್ನ ಹೊಸ ಮನೆಯ ಚಪ್ಪಟೆಯಾದ ಚಾವಣಿಗೆ ಕೈಪಿಡಿ ಗೋಡೆಯನ್ನು ಕಟ್ಟಬೇಕಿತ್ತು. ಇಲ್ಲವಾದಲ್ಲಿ, ಚಾವಣಿಯಿಂದ ಯಾರಾದರು ಬಿದ್ದು ಮರಣಹೊಂದುವಲ್ಲಿ, ಮನೆಯ ಮೇಲೆ ರಕ್ತಾಪರಾಧವು ಬರಲಿತ್ತು. (ಧರ್ಮೋಪದೇಶಕಾಂಡ 22:8) ಇನ್ನೂ ಹೆಚ್ಚಾಗಿ, ಹಾಯುವ ಸ್ವಭಾವವುಳ್ಳ ಒಂದು ಹೋರಿಯ ಒಡೆಯನು ಎಚ್ಚರಿಸಲ್ಪಟ್ಟಿದ್ದರೂ, ಪ್ರಾಣಿಯನ್ನು ಕಟ್ಟಿಹಾಕದೆ ಹೋದುದರಿಂದ ಅದು ಯಾರನ್ನಾದರೂ ಸಾಯಿಸಿದಾದ್ದರೆ, ಹೋರಿಯ ಒಡೆಯನ ಮೇಲೆ ರಕ್ತಾಪರಾಧವು ಬರುತ್ತಿತ್ತು ಮತ್ತು ಅವನನ್ನು ಕೊಲ್ಲಸಾಧ್ಯವಿತ್ತು. (ವಿಮೋಚನಕಾಂಡ 21:28-32) ಜೀವಕ್ಕಾಗಿ ದೇವರ ಉನ್ನತ ಗೌರವದ ಇನ್ನೂ ಹೆಚ್ಚಿನ ಪುರಾವೆಯು ಇದರಲ್ಲಿ ವ್ಯಕ್ತವಾಗಿದೆ, ಹೇಗೆಂದರೆ ಯಾರಾದರೊಬ್ಬನು ಒಬ್ಬ ಕಳ್ಳನನ್ನು ಸಾಯುವಂತೆ ಹೊಡೆಯುವುದಾದರೆ—ಮತ್ತು ಇದು ಬಲವಂತವಾಗಿ ಒಳನುಗ್ಗುವವನನ್ನು ನೋಡಿ ಗುರುತಿಸಬಹುದಾದ ಹಗಲಿನ ಸಮಯದಲ್ಲಿ ಸಂಭವಿಸುವುದಾದರೆ—ಅವನು ರಕ್ತಾಪರಾಧಿಯಾಗಲಿದ್ದನು. (ವಿಮೋಚನಕಾಂಡ 22:2, 3) ಹಾಗಾದರೆ, ಸ್ಪಷ್ಟವಾಗಿಗಿ ದೇವರ ಪರಿಪೂರ್ಣವಾಗಿ ಸರಿದೂಗಿಸಲ್ಪಟ್ಟ ಕಟ್ಟಳೆಗಳು, ಉದ್ದೇಶಪೂರ್ವಕ ಕೊಲೆಗಾರರು ಮರಣ ದಂಡನೆಯನ್ನು ತಪ್ಪಿಸಿಕೊಳ್ಳುವಂತೆ ಅನುಮತಿಸಲಿಲ್ಲ.
6. ‘ಜೀವಕ್ಕೆ ಪ್ರತಿಯಾಗಿ ಜೀವ’ ಎಂಬ ನಿಯಮವು ಪ್ರಾಚೀನ ಇಸ್ರಾಯೇಲಿನಲ್ಲಿ ಹೇಗೆ ನೆರವೇರಿತು?
6 ಪ್ರಾಚೀನ ಇಸ್ರಾಯೇಲಿನಲ್ಲಿ ಒಂದು ಕೊಲೆಯು ಮಾಡಲ್ಪಟ್ಟಿದ್ದಲ್ಲಿ, ಹತವಾದವನ ರಕ್ತಕ್ಕೆ ಮುಯ್ಯಿ ತೀರಿಸಲ್ಪಡಬೇಕಿತ್ತು. ಕೊಲೆಗಾರನು “ರಕ್ತದ ಮುಯ್ಯಿಗಾರ”ನಿಂದ ಕೊಲ್ಲಲ್ಪಟ್ಟಾಗ, ‘ಜೀವಕ್ಕೆ ಪ್ರತಿಯಾಗಿ ಜೀವ’ದ ನಿಯಮವು ಸರಿಹೋಗುತ್ತಿತ್ತು. (ಅರಣ್ಯಕಾಂಡ 35:19, NW) ಮುಯ್ಯಿಗಾರನು ಕೊಲೆಯಾದ ವ್ಯಕ್ತಿಯ ಹತ್ತಿರದ ಪುರುಷ ಸಂಬಂಧಿಯಾಗಿದ್ದನು. ಆದರೆ ಉದ್ದೇಶರಹಿತ ಕೊಲೆಗಾರರ ಕುರಿತೇನು?
ಯೆಹೋವನ ದಯೆಯುಳ್ಳ ಮುನ್ನೇರ್ಪಾಡು
7. ಉದ್ದೇಶರಹಿತವಾಗಿ ಯಾರಾದರೊಬ್ಬರನ್ನು ಕೊಲ್ಲುವವರಿಗಾಗಿ ದೇವರು ಯಾವ ಮುನ್ನೇರ್ಪಾಡನ್ನು ಮಾಡಿದನು?
7 ಯಾರಾದರೊಬ್ಬರನ್ನು ಆಕಸ್ಮಿಕವಾಗಿ ಅಥವಾ ಉದ್ದೇಶರಹಿತವಾಗಿ ಕೊಂದವರಿಗೆ, ದೇವರು ಪ್ರೀತಿಯಿಂದ ಆಶ್ರಯನಗರಗಳನ್ನು ಒದಗಿಸಿದನು. ಇವುಗಳ ಕುರಿತು ಮೋಶೆಗೆ ಹೀಗೆ ಹೇಳಲಾಯಿತು: “ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು—ನೀವು ಯೊರ್ದನ್ ಹೊಳೆಯನ್ನು ದಾಟಿ ಕಾನಾನ್ ದೇಶವನ್ನು ಸೇರಿದನಂತರ ಆಶ್ರಯಸ್ಥಾನಗಳಾಗುವದಕ್ಕೆ ಪಟ್ಟಣಗಳನ್ನು ನೇಮಿಸಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು. ಅವನು ಸಭೆಯವರಿಂದ ತೀರ್ಪು ಹೊಂದುವದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯಸ್ಥಾನಗಳು ನಿಮ್ಮೊಳಗೆ ಇರಬೇಕು. ಹೀಗೆ ಆಶ್ರಯಸ್ಥಾನಗಳಾಗಿರುವದಕ್ಕಾಗಿ ನೀವು ಯೊರ್ದನ್ ಹೊಳೆಯ ಈಚೆ ಮೂರು, ಕಾನಾನ್ದೇಶದಲ್ಲಿ ಮೂರು ಅಂತು ಆರು ಪಟ್ಟಣಗಳನ್ನು ನೇಮಿಸಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು . . . [“ಯಾವನೇ ಆಗಲಿ,” NW] ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.”—ಅರಣ್ಯಕಾಂಡ 35:9-15.
8. ಆಶ್ರಯನಗರಗಳು ಎಲ್ಲಿದ್ದವು, ಮತ್ತು ಉದ್ದೇಶರಹಿತ ಕೊಲೆಗಾರರು ಅವುಗಳನ್ನು ತಲಪುವಂತೆ ಹೇಗೆ ಸಹಾಯಿಸಲ್ಪಟ್ಟರು?
8 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ, ಅವರು ವಿಧೇಯತೆಯಿಂದ ಆರು ಆಶ್ರಯನಗರಗಳನ್ನು ಸ್ಥಾಪಿಸಿದರು. ಈ ನಗರಗಳಲ್ಲಿ ಮೂರು—ಕೆದೆಷ್, ಶೆಕೆಮ್, ಮತ್ತು ಹೆಬ್ರೋನ್—ಯೊರ್ದನ್ ನದಿಯ ಪಶ್ಚಿಮ ದಿಕ್ಕಿನಲ್ಲಿದ್ದವು. ಯೊರ್ದನಿನ ಪೂರ್ವಕ್ಕೆ ಆಶ್ರಯನಗರಗಳಾದ ಗೋಲಾನ್, ರಾಮೋತ್, ಮತ್ತು ಬೆಚೆರ್ ಇದ್ದವು. ಈ ಆರು ಆಶ್ರಯನಗರಗಳು ಒಳ್ಳೆಯ ಸ್ಥಿತಿಯಲ್ಲಿಡಲ್ಪಟ್ಟ ದಾರಿಗಳಲ್ಲಿ ಅನುಕೂಲಕರವಾಗಿ ಇದ್ದವು. ಈ ದಾರಿಗಳ ಉದ್ದಕ್ಕೂ ಸೂಕ್ತವಾದ ಸ್ಥಳಗಳಲ್ಲಿ, “ಆಶ್ರಯ” ಎಂಬ ಪದವಿರುವ ಸೂಚನಾಫಲಕಗಳಿದ್ದವು. ಈ ಸೂಚನಾಫಲಕಗಳು ಆಶ್ರಯನಗರದ ದಿಕ್ಕಿನ ಕಡೆಗೆ ಕೈತೋರಿಸಿದವು, ಮತ್ತು ಉದ್ದೇಶರಹಿತ ಕೊಲೆಗಾರನು ಅತಿ ಸಮೀಪದ ನಗರಕ್ಕೆ ತನ್ನ ಜೀವವನ್ನು ಉಳಿಸಿಕೊಳ್ಳಲು ಓಡಿಹೋದನು. ಅಲ್ಲಿ ಅವನು ರಕ್ತದ ಮುಯ್ಯಿಗಾರನಿಂದ ರಕ್ಷಣೆಯನ್ನು ಪಡೆಯಬಹುದಿತ್ತು.—ಯೆಹೋಶುವ 20:2-9.
9. ಆಶ್ರಯನಗರಗಳನ್ನು ಯೆಹೋವನು ಏಕೆ ಒದಗಿಸಿದನು, ಮತ್ತು ಯಾರ ಪ್ರಯೋಜನಕ್ಕಾಗಿ ಅವು ಒದಗಿಸಲ್ಪಟ್ಟವು?
9 ದೇವರು ಆಶ್ರಯನಗರಗಳ ಮುನ್ನೇರ್ಪಾಡನ್ನು ಮಾಡಿದ್ದೇಕೆ? ದೇಶವು ನಿರಪರಾಧಿ ರಕ್ತದಿಂದ ಮಲಿನಗೊಳ್ಳದಂತೆ ಮತ್ತು ರಕ್ತಾಪರಾಧವು ಜನರ ಮೇಲೆ ಬರದಂತೆ ಇವುಗಳನ್ನು ಒದಗಿಸಲಾಯಿತು. (ಧರ್ಮೋಪದೇಶಕಾಂಡ 19:10) ಯಾರ ಪ್ರಯೋಜನಕ್ಕಾಗಿ ಆಶ್ರಯನಗರಗಳು ಒದಗಿಸಲ್ಪಟ್ಟವು? ನಿಯಮವು ಹೇಳಿದ್ದು: “ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲ್ಯನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವ [“ನೆಲಸಿಗ,” NW]ನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.” (ಅರಣ್ಯಕಾಂಡ 35:15) ಹೀಗೆ, ನಿಷ್ಪಕ್ಷಪಾತವಾಗಿರಲು ಮತ್ತು ದಯೆಗಾಗಿ ಅನುಮತಿ ನೀಡುವಾಗ ನ್ಯಾಯದ ಉದ್ದೇಶಗಳನ್ನು ಪೂರೈಸಲು, ಯೆಹೋವನು ಉದ್ದೇಶರಹಿತ ಕೊಲೆಗಾರರಾದ (1) ಸ್ವದೇಶೀ ಇಸ್ರಾಯೇಲ್ಯರಿಗೆ, (2) ಇಸ್ರಾಯೇಲಿನಲ್ಲಿರುವ ಪರದೇಶಿ ನಿವಾಸಿಗಳಿಗೆ, ಅಥವಾ (3) ದೇಶದಲ್ಲಿ ವಾಸಮಾಡುತ್ತಿದ್ದ ಇತರ ದೇಶಗಳಿಂದ ಬಂದ ನೆಲಸಿಗರಿಗೆ, ಆಶ್ರಯನಗರಗಳನ್ನು ಬದಿಗಿಡುವಂತೆ ಇಸ್ರಾಯೇಲ್ಯರಿಗೆ ಹೇಳಿದನು.
10. ಆಶ್ರಯನಗರಗಳು ದೇವರಿಂದ ಮಾಡಲ್ಪಟ್ಟ ದಯೆಯ ಮುನ್ನೇರ್ಪಾಡೆಂದು ಏಕೆ ಹೇಳಸಾಧ್ಯವಿದೆ?
10 ವ್ಯಕ್ತಿಯೊಬ್ಬನು ಉದ್ದೇಶರಹಿತ ಕೊಲೆಗಾರನಾಗಿದ್ದರೂ, ದೇವರ ಆಜ್ಞೆಯ ಕೆಳಗೆ ಅವನನ್ನು ಕೊಲ್ಲಬೇಕಾದುದು ಗಮನಾರ್ಹವು: “ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.” ಆದಕಾರಣ, ಆಶ್ರಯನಗರಗಳಲ್ಲಿ ಒಂದಕ್ಕೆ ಒಬ್ಬ ಉದ್ದೇಶರಹಿತ ಕೊಲೆಗಾರನು ಓಡಿಹೋಗಬಹುದಿದ್ದ ವಿಷಯವು, ಯೆಹೋವ ದೇವರ ದಯೆಯುಳ್ಳ ಮುನ್ನೇರ್ಪಾಡಿನಿಂದ ಮಾತ್ರ ಸಾಧ್ಯವಿತ್ತು. ಸಾಮಾನ್ಯವಾಗಿ ಜನರಿಗೆ, ರಕ್ತದ ಮುಯ್ಯಿಗಾರನಿಂದ ಓಡಿಹೋಗುತ್ತಿದ್ದ ಯಾವನಿಗೇ ಆಗಲಿ ಸಹಾನುಭೂತಿ ಇತ್ತೆಂಬುದು ವ್ಯಕ್ತ, ಯಾಕೆಂದರೆ ತಾವು ತದ್ರೀತಿಯ ತಪ್ಪನ್ನು ಉದ್ದೇಶರಹಿತವಾಗಿ ಮಾಡಿ, ಆಶ್ರಯ ಮತ್ತು ದಯೆಯ ಅಗತ್ಯವನ್ನು ಕಂಡುಕೊಳ್ಳಬಹುದೆಂದು ಅವರೆಲ್ಲರಿಗೆ ತಿಳಿದಿತ್ತು.
ಆಶ್ರಯಕ್ಕಾಗಿ ಓಟ
11. ಪ್ರಾಚೀನ ಇಸ್ರಾಯೇಲಿನಲ್ಲಿ, ಒಬ್ಬ ಜೊತೆ ಕೆಲಸಗಾರನನ್ನು ಮನುಷ್ಯನೊಬ್ಬನು ಆಕಸ್ಮಿಕವಾಗಿ ಕೊಂದರೆ ಏನು ಮಾಡಬಹುದಿತ್ತು?
11 ಆಶ್ರಯಕ್ಕಾಗಿದ್ದ ದೇವರ ದಯೆಯುಳ್ಳ ಏರ್ಪಾಡಿಗಾಗಿ ನಿಮ್ಮ ಗಣ್ಯತೆಯನ್ನು ಒಂದು ದೃಷ್ಟಾಂತವು ಸರಿಯಾಗಿ ವರ್ಧಿಸಬಹುದು. ಪ್ರಾಚೀನ ಇಸ್ರಾಯೇಲಿನಲ್ಲಿ ಕಟ್ಟಿಗೆಯನ್ನು ಕಡಿಯುತ್ತಿದ್ದ ಒಬ್ಬ ವ್ಯಕ್ತಿ ನೀವಾಗಿದಿರ್ದೆಂದು ಊಹಿಸಿಕೊಳ್ಳಿರಿ. ಕೊಡಲಿಯು ಅದರ ಕಾವಿನಿಂದ ಜಾರಿ ಒಬ್ಬ ಜೊತೆಕೆಲಸಗಾರನಿಗೆ ಹಾನಿಕರವಾಗಿ ತಗಲಿತೆಂದು ಭಾವಿಸಿರಿ. ನೀವು ಏನು ಮಾಡುವಿರಿ? ಒಳ್ಳೆಯದು, ನಿಯಮವು ಈ ಸನ್ನಿವೇಶಕ್ಕಾಗಿಯೇ ಏರ್ಪಾಡನ್ನು ಮಾಡಿತು. ನಿಸ್ಸಂದೇಹವಾಗಿ, ನೀವು ಈ ದೇವದತ್ತ ಏರ್ಪಾಡಿನ ಲಾಭವನ್ನು ಪಡೆಯುವಿರಿ: “ಆ ಪಟ್ಟಣಗಳ ಸಂಗತಿ ಹೇಗಂದರೆ—ಯಾವನಾದರೂ ದ್ವೇಷವಿಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. ದೃಷ್ಟಾಂತ—ಒಬ್ಬ ಮನುಷ್ಯನು ಕಟ್ಟಿಗೆಯನ್ನು ಕಡಿಯಬೇಕೆಂದು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋಗಿ ಅಲ್ಲಿ ಒಂದು ಮರವನ್ನು ಕಡಿಯಬೇಕೆಂದು ಕೊಡಲಿಯಿಂದ ಹೊಡೆಯುತ್ತಿರುವಾಗ ಕೊಡಲಿಯು ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿದರ್ದಿಂದ ಅವನು ಸತ್ತರೆ ಹೊಡೆದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.” (ಧರ್ಮೋಪದೇಶಕಾಂಡ 19:4, 5) ನೀವು ಒಂದು ಆಶ್ರಯನಗರವನ್ನು ತಲಪುವುದಾದರೂ, ಸಂಭವಿಸಿದ ಸಂಗತಿಯ ಎಲ್ಲ ಹೊಣೆಗಾರಿಕೆಯಿಂದ ನೀವು ಮುಕ್ತರಾಗಿರಲಾರಿರಿ.
12. ಒಬ್ಬ ಉದ್ದೇಶರಹಿತ ಕೊಲೆಗಾರನು ಒಂದು ಆಶ್ರಯನಗರವನ್ನು ತಲಪಿದ ತರುವಾಯ ಯಾವ ಕಾರ್ಯವಿಧಾನವು ಅನುಸರಿಸಲ್ಪಡಲಿತ್ತು?
12 ನೀವು ಆದರದಿಂದ ಬರಮಾಡಿಕೊಳ್ಳಲ್ಪಟ್ಟರೂ, ಆಶ್ರಯನಗರದ ಪ್ರವೇಶದ್ವಾರದಲ್ಲಿ ಹಿರಿಯರಿಗೆ ನಿಮ್ಮ ಸನ್ನಿವೇಶವನ್ನು ಸಾದರಪಡಿಸಬೇಕಾಗಿತ್ತು. ನಗರವನ್ನು ಪ್ರವೇಶಿಸಿದ ನಂತರ, ಕೊಲೆಯು ಸಂಭವಿಸಿದ ಕ್ಷೇತ್ರದ ಮೇಲೆ ಕಾನೂನುಪರಿಧಿಯಿರುವ ನಗರದ ದ್ವಾರಗಳಲ್ಲಿ, ಇಸ್ರಾಯೇಲಿನ ಸಭೆಯನ್ನು ಪ್ರತಿನಿಧಿಸುವ ಹಿರಿಯರ ಮುಂದೆ ನ್ಯಾಯವಿಧಿಸಲ್ಪಡಲು ನಿಮ್ಮನ್ನು ಹಿಂದೆ ಕಳುಹಿಸಲಾಗುವುದು. ಅಲ್ಲಿ ನಿಮ್ಮ ನಿರ್ದೋಷವನ್ನು ರುಜುಪಡಿಸುವ ಅವಕಾಶ ನಿಮಗಿರುವುದು.
ಕೊಲೆಗಾರರು ನ್ಯಾಯವಿಚಾರಣೆಯಲ್ಲಿರುವಾಗ
13, 14. ಒಬ್ಬ ಕೊಲೆಗಾರನ ನ್ಯಾಯವಿಚಾರಣೆಯ ಸಮಯದಲ್ಲಿ ಯಾವ ಕೆಲವು ವಿಷಯಗಳನ್ನು ಹಿರಿಯರು ಕಂಡುಹಿಡಿಯಲು ಬಯಸುವರು?
13 ನ್ಯಾಯಪರಿಧಿಯ ನಗರದ ದ್ವಾರಗಳಲ್ಲಿ ಹಿರಿಯರ ಮುಂದೆ ನ್ಯಾಯವಿಚಾರಣೆಯು ನಡೆಯುವ ಸಂದರ್ಭದಲ್ಲಿ, ನಿಮ್ಮ ಹಿಂದಿನ ನಡತೆಯ ಮೇಲೆ ಹೆಚ್ಚಿನ ಒತ್ತನ್ನು ಹಾಕಲಾಗಿತ್ತೆಂಬುದನ್ನು ನೀವು ನಿಸ್ಸಂದೇಹವಾಗಿ ಕೃತಜ್ಞತೆಯಿಂದ ಗಮನಿಸುವಿರಿ. ಹತವಾದವನೊಂದಿಗಿನ ನಿಮ್ಮ ಸಂಬಂಧವನ್ನು ಹಿರಿಯರು ಜಾಗರೂಕವಾಗಿ ತೂಗಿನೋಡುವರು. ನೀವು ಆ ಮನುಷ್ಯನನ್ನು ದ್ವೇಷಿಸಿ, ಹೊಂಚುಹಾಕಿ, ಅವನು ಸಾಯುವಂತೆ ಉದ್ದೇಶಪೂರ್ವಕವಾಗಿ ಹೊಡೆದಿರೊ? ಹಾಗಿರುವಲ್ಲಿ, ಹಿರಿಯರು ನಿಮ್ಮನ್ನು ರಕ್ತದ ಮುಯ್ಯಿಗಾರನಿಗೆ ಒಪ್ಪಿಸುತ್ತಿದ್ದರು ಮತ್ತು ನೀವು ಸಾಯುತ್ತಿದ್ದಿರಿ. ‘ನಿರಪರಾಧಿಯ ರಕ್ತದ ದೋಷವು ಇಸ್ರಾಯೇಲಿನಲ್ಲಿ ಉಳಿಯಬಾರದು’ ಎಂಬ ನಿಯಮದ ಆವಶ್ಯಕತೆಯ ಅರಿವು ಈ ಜವಾಬ್ದಾರ ಪುರುಷರಿಗೆ ಇರಬೇಕಿತ್ತು. (ಧರ್ಮೋಪದೇಶಕಾಂಡ 19:11-13) ತುಲನಾತ್ಮಕವಾಗಿ, ಇಂದು ನ್ಯಾಯ ನಿರ್ಣಾಯಕ ಕ್ರಿಯೆಯೊಂದರಲ್ಲಿ, ತಪ್ಪುಗಾರನೊಬ್ಬನ ಹಿಂದಿನ ಮನೋಭಾವ ಮತ್ತು ನಡತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ, ಶಾಸ್ತ್ರಗಳೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಕ್ರೈಸ್ತ ಹಿರಿಯರಿಗೆ ಅವುಗಳ ಒಳ್ಳೆಯ ಪರಿಚಯವಿರಬೇಕು.
14 ದಯಾಪರವಾಗಿ ಪರೀಕ್ಷಿಸುತ್ತಾ, ಹತವಾದವನಿಗೆ ಸುಳಿವು ಕೊಡದೆ ನೀವು ಅವನ ಬೆನ್ನಟ್ಟಿದಿರೊ ಎಂದು ತಿಳಿಯಲು ನಗರದ ಹಿರಿಯರು ಬಯಸಬಹುದು. (ವಿಮೋಚನಕಾಂಡ 21:12, 13) ಅವಿತುಕೊಂಡಿದ್ದ ಸ್ಥಳವೊಂದರಿಂದ ನೀವು ಅವನನ್ನು ಆಕ್ರಮಿಸಿದಿರೊ? (ಧರ್ಮೋಪದೇಶಕಾಂಡ 27:24) ಆ ವ್ಯಕ್ತಿಯನ್ನು ಕೊಲ್ಲುವ ಯಾವುದಾದರೂ ಕುಟಿಲ ಯೋಜನೆಯನ್ನು ಅವಲಂಬಿಸುವಷ್ಟು ಕೋಪದಿಂದ ನೀವು ಅವನ ವಿರುದ್ಧವಾಗಿ ಉದ್ರೇಕಗೊಂಡಿದ್ದಿರೊ? ಹಾಗಿದ್ದಲ್ಲಿ, ನೀವು ಮರಣಕ್ಕೆ ಯೋಗ್ಯರಾಗಿರುವಿರಿ. (ವಿಮೋಚನಕಾಂಡ 21:14) ವಿಶೇಷವಾಗಿ ನಿಮ್ಮ ಮತ್ತು ಹತವಾದವನ ನಡುವೆ ವೈರತ್ವ ಅಥವಾ ದ್ವೇಷ ಇತ್ತೊ ಎಂಬುದನ್ನು ಹಿರಿಯರು ತಿಳಿದುಕೊಳ್ಳಬೇಕಾಗುವುದು. (ಧರ್ಮೋಪದೇಶಕಾಂಡ 19:4, 6, 7; ಯೆಹೋಶುವ 20:5) ಹಿರಿಯರು ನಿಮ್ಮನ್ನು ನಿರ್ದೋಷಿಯೆಂದು ಕಂಡುಕೊಂಡು ಆಶ್ರಯನಗರಕ್ಕೆ ನಿಮ್ಮನ್ನು ಹಿಂದೆ ಕಳುಹಿಸಿದರೆಂದು ಇಟ್ಟುಕೊಳ್ಳೋಣ. ತೋರಿಸಲ್ಪಟ್ಟ ದಯೆಗಾಗಿ ನೀವು ಎಷ್ಟು ಕೃತಜ್ಞತೆಯುಳ್ಳವರಾಗಿರುವಿರಿ!
ಆಶ್ರಯನಗರದಲ್ಲಿ ಜೀವನ
15. ಒಬ್ಬ ಉದ್ದೇಶರಹಿತ ಕೊಲೆಗಾರನ ಮೇಲೆ ಯಾವ ಆವಶ್ಯಕತೆಗಳು ಹೇರಲ್ಪಟ್ಟಿದ್ದವು?
15 ಒಬ್ಬ ಉದ್ದೇಶರಹಿತ ಕೊಲೆಗಾರನು ಆಶ್ರಯನಗರದಲ್ಲಿ ಅಥವಾ ಅದರ ಗೋಡೆಗಳ ಹೊರಗೆ 1,000 ಮೊಳಗಳ (ಸುಮಾರು 1,450 ಅಡಿಗಳು) ಅಂತರದೊಳಗೆ ಉಳಿಯಬೇಕಿತ್ತು. (ಅರಣ್ಯಕಾಂಡ 35:2-4) ಅವನು ಆ ಬಿಂದುವನ್ನು ಮೀರಿ ಅಲೆದಾಡುವುದಾದರೆ, ರಕ್ತದ ಮುಯ್ಯಿಗಾರನನ್ನು ಸಂಧಿಸಬಹುದು. ಆ ಪರಿಸ್ಥಿತಿಗಳ ಕೆಳಗೆ, ಮುಯ್ಯಿಗಾರನು ನಿರ್ಭಯದಿಂದ ಕೊಲೆಗಾರನನ್ನು ಸಾಯಿಸಬಹುದಿತ್ತು. ಆದರೆ ಕೊಲೆಗಾರನು ಸರಪಳಿಗಳಿಂದ ಕಟ್ಟಲ್ಪಟ್ಟಿರಲಿಲ್ಲ ಅಥವಾ ಬಂಧಿಸಲ್ಪಟ್ಟಿರಲ್ಲಿಲ. ಆಶ್ರಯನಗರದ ಒಬ್ಬ ನಿವಾಸಿಯಂತೆ, ಅವನು ಒಂದು ಕಸಬನ್ನು ಕಲಿತು, ಕೆಲಸಗಾರನಾಗಿದ್ದು, ಸಮಾಜದ ಒಬ್ಬ ಉಪಯುಕ್ತ ಸದಸ್ಯನಾಗಿ ಸೇವೆ ಸಲ್ಲಿಸಬೇಕಿತ್ತು.
16. (ಎ) ಉದ್ದೇಶರಹಿತ ಕೊಲೆಗಾರನು ಆಶ್ರಯನಗರದಲ್ಲಿ ಎಷ್ಟು ಕಾಲ ಉಳಿಯಬೇಕಿತ್ತು? (ಬಿ) ಮಹಾಯಾಜಕನ ಮರಣವು ಒಬ್ಬ ಕೊಲೆಗಾರನಿಗೆ ಆಶ್ರಯನಗರವನ್ನು ಬಿಡುವ ಸಾಧ್ಯತೆಯನ್ನು ಏಕೆ ಉಂಟುಮಾಡಿತು?
16 ಉದ್ದೇಶರಹಿತ ಕೊಲೆಗಾರನು ಎಷ್ಟು ಕಾಲ ಆಶ್ರಯನಗರದಲ್ಲಿ ಉಳಿಯಬೇಕಿತ್ತು? ಬಹುಶಃ ಅವನ ಜೀವಿತದ ಉಳಿದ ಸಮಯದ ವರೆಗೆ. ಹೇಗೂ ಇರಲಿ, ನಿಯಮವು ಹೇಳಿದ್ದು: “ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.” (ಅರಣ್ಯಕಾಂಡ 35:26-28) ಮಹಾಯಾಜಕನ ಮರಣವು ಉದ್ದೇಶರಹಿತ ಕೊಲೆಗಾರನಿಗೆ ಆಶ್ರಯನಗರವನ್ನು ಬಿಡುವ ಅನುಮತಿಯನ್ನು ಏಕೆ ನೀಡಿತು? ಒಳ್ಳೆಯದು, ಮಹಾಯಾಜಕನು ಜನಾಂಗದಲ್ಲಿದ್ದ ಅತ್ಯಂತ ಪ್ರಖ್ಯಾತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. ಆದುದರಿಂದ ಅವನ ಮರಣವು ಎಂತಹ ಗಮನಾರ್ಹವಾದ ಘಟನೆಯಾಗಿರುವುದೆಂದರೆ, ಅದು ಇಸ್ರಾಯೇಲಿನ ಎಲ್ಲ ಗೋತ್ರಗಳ ಆದ್ಯಂತ ಗೊತ್ತಾಗುವುದು. ಆಶ್ರಯನಗರಗಳಲ್ಲಿರುವ ಎಲ್ಲ ಆಶ್ರಿತರು ಆಗ, ರಕ್ತದ ಮುಯ್ಯಿಗಾರರಿಂದಾಗುವ ಅಪಾಯದಿಂದ ಮುಕ್ತರಾಗಿ ತಮ್ಮ ಮನೆಗಳಿಗೆ ಹಿಂದಿರುಗಬಹುದಿತ್ತು. ಏಕೆ? ಏಕೆಂದರೆ ಕೊಲೆಗಾರನನ್ನು ಕೊಲ್ಲುವ ಮುಯ್ಯಿಗಾರನ ಅವಕಾಶವು ಮಹಾಯಾಜಕನ ಮರಣದೊಂದಿಗೆ ತೀರಿಹೋಯಿತೆಂದು ದೇವರ ನಿಯಮವು ವಿಧಿಸಿತ್ತು ಮತ್ತು ಇದು ಎಲ್ಲರಿಗೆ ತಿಳಿದಿತ್ತು. ಅದಾದ ಮೇಲೆ ಸಂಬಂಧಿಕರ ಮುಂದಿನ ಪೀಳಿಗೆಯಲ್ಲಿ ಒಬ್ಬನು ಮರಣದ ಮುಯ್ಯಿತೀರಿಸುವುದಾದರೆ, ಅವನು ಕೊಲೆಗಾರನಾಗುವನು ಮತ್ತು ಅಂತಿಮವಾಗಿ ಕೊಲೆಗಾಗಿ ದಂಡನೆಯನ್ನು ಹೊಂದುವನು.
ಶಾಶ್ವತ ಪರಿಣಾಮಗಳು
17. ಉದ್ದೇಶರಹಿತ ಕೊಲೆಗಾರನ ಮೇಲೆ ಹೇರಲ್ಪಟ್ಟ ಪ್ರತಿಬಂಧಗಳ ಸಂಭವನೀಯ ಪರಿಣಾಮಗಳು ಏನಾಗಿದ್ದವು?
17 ಉದ್ದೇಶರಹಿತ ಕೊಲೆಗಾರನ ಮೇಲೆ ಹೇರಲ್ಪಟ್ಟ ಪ್ರತಿಬಂಧಗಳ ಸಂಭವನೀಯ ಪರಿಣಾಮಗಳು ಏನಾಗಿದ್ದವು? ತಾನು ಯಾವುದೊ ವ್ಯಕ್ತಿಯ ಮರಣಕ್ಕೆ ಕಾರಣನೆಂಬುದಕ್ಕೆ ಅವು ಮರುಜ್ಞಾಪನವಾಗಿದ್ದವು. ಪ್ರಾಯಶಃ, ಅವನು ಇನ್ನುಮೇಲೆ ಮಾನವ ಜೀವವನ್ನು ಪವಿತ್ರವೆಂದು ಕಾಣುವನು. ಅಲ್ಲದೆ, ತಾನು ದಯೆಯಿಂದ ಉಪಚರಿಸಲ್ಪಟ್ಟಿದ್ದೆನೆಂದು ಅವನೆಂದೂ ಮರೆಯನು. ದಯೆಯು ತೋರಿಸಲ್ಪಟ್ಟ ಕಾರಣ, ಅವನು ಇತರರ ಕಡೆಗೆ ದಯಾಪರನಾಗಿರಲು ಖಂಡಿತವಾಗಿ ಬಯಸುವನು. ತಮ್ಮ ಪ್ರತಿಬಂಧಗಳೊಂದಿಗೆ ಆಶ್ರಯನಗರಗಳ ಏರ್ಪಾಡು ಸಾಮಾನ್ಯವಾಗಿ ಜನರಿಗೂ ಪ್ರಯೋಜನಕರವಾದದ್ದಾಗಿತ್ತು. ಅದು ಹೇಗೆ? ಅವರು ಮಾನವ ಜೀವದ ಕುರಿತು ಅಜಾಗರೂಕರೂ ಉದಾಸೀನರೂ ಆಗಿರಬಾರದೆಂಬ ವಿಷಯವನ್ನು ಅದು ಖಂಡಿತವಾಗಿ ಅವರ ಮನಸ್ಸುಗಳ ಮೇಲೆ ಅಚೊತ್ಚಿದ್ತಿರ್ದಬೇಕು. ಆದಕಾರಣ, ಆಕಸ್ಮಿಕ ಮರಣದಲ್ಲಿ ಫಲಿಸಬಹುದಾದ ಅಜಾಗರೂಕತೆಯನ್ನು ತೊರೆಯುವ ಅಗತ್ಯದ ಕುರಿತು ಕ್ರೈಸ್ತರು ಮರುಜ್ಞಾಪಿಸಲ್ಪಡಬೇಕು. ಅಷ್ಟೇ ಅಲ್ಲದೆ, ಆಶ್ರಯನಗರಗಳ ದೇವರ ದಯೆಯುಳ್ಳ ಏರ್ಪಾಡು, ದಯೆಯನ್ನು ತೋರಿಸುವುದು ಸೂಕ್ತವಾಗಿರುವಾಗ ಹಾಗೆ ಮಾಡುವಂತೆ ನಮ್ಮನ್ನು ಪ್ರೇರಿಸಬೇಕು.—ಯಾಕೋಬ 2:13.
18. ಆಶ್ರಯನಗರಗಳ ವಿಷಯವಾಗಿ ದೇವರ ಏರ್ಪಾಡು ಯಾವ ವಿಧಗಳಲ್ಲಿ ಲಾಭಕರವಾಗಿತ್ತು?
18 ಯೆಹೋವ ದೇವರ ಆಶ್ರಯನಗರಗಳ ಮುನ್ನೇರ್ಪಾಡು ಇತರ ವಿಧಗಳಲ್ಲಿಯೂ ಲಾಭಕರವಾಗಿತ್ತು. ನ್ಯಾಯವಿಚಾರಣೆಯ ಮೊದಲು ಕೊಲೆಗಾರನ ದೋಷದ ಪೂರ್ವ ಭಾವನೆಯ ಕೆಳಗೆ ಅವನನ್ನು ಬೆನ್ನಟ್ಟುವ ಜಾಗೃತಾ ಸಮಿತಿಗಳನ್ನು ಜನರು ರಚಿಸಲಿಲ್ಲ. ಬದಲಿಗೆ ಅವರು ಅವನನ್ನು ಉದ್ದೇಶಪೂರ್ವಕ ಕೊಲೆಯ ವಿಷಯದಲ್ಲಿ ನಿರ್ದೋಷಿಯೆಂದು ಭಾವಿಸಿದರು, ಸುರಕ್ಷತೆಗೆ ಓಡುವಂತೆ ಕೂಡ ಸಹಾಯಮಾಡಿದರು. ಇನ್ನೂ ಹೆಚ್ಚಾಗಿ, ಆಶ್ರಯನಗರಗಳ ಮುನ್ನೇರ್ಪಾಡು, ಸೆರೆಮನೆಗಳಲ್ಲಿ ಮತ್ತು ಕಾರಾಗೃಹಗಳಲ್ಲಿ ಕೊಲೆಗಾರರನ್ನು ಇಡುವ ಆಧುನಿಕ ದಿನದ ಏರ್ಪಾಡುಗಳಿಗೆ—ಅಲ್ಲಿ ಅವರು ಸಾರ್ವಜನಿಕರಿಂದ ಆರ್ಥಿಕವಾಗಿ ಬೆಂಬಲಿಸಲ್ಪಡುತ್ತಾರೆ ಮತ್ತು ಅನೇಕ ವೇಳೆ ಇತರ ತಪ್ಪಿತಸ್ಥರ ನಿಕಟ ಸಹವಾಸದ ಕಾರಣ ಇನ್ನೂ ಕೆಟ್ಟ ಅಪರಾಧಿಗಳಾಗುತ್ತಾರೆ—ವ್ಯತಿರಿಕ್ತವಾಗಿತ್ತು. ಆಶ್ರಯನಗರದ ಏರ್ಪಾಡಿನಲ್ಲಿ, ದುಬಾರಿಯ ಗೋಡೆಗಳ್ಳುಳ್ಳ, ಕಬ್ಬಿಣದ ಸಲಾಕಿಗಳಿಂದ ಬಿಗಿದ ಸೆರೆಮನೆ—ಇವುಗಳಿಂದ ನಿವಾಸಿಗಳು ಎಷ್ಟೋ ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ—ಗಳನ್ನು ಕಟ್ಟುವುದು, ಕಾಪಾಡುವುದು ಮತ್ತು ರಕ್ಷಿಸುವುದು ಅಗತ್ಯವಾಗಿರಲ್ಲಿಲ್ಲ. ಕಾರ್ಯತಃ, ಕೊಲೆಗಾರನು “ಸೆರೆಮನೆ”ಯನ್ನು ಅರಸಿದನು ಮತ್ತು ನಿಗದಿತ ಸಮಯದ ವರೆಗೆ ಅಲ್ಲಿ ತಂಗಿದನು. ಅವನು ಕೆಲಸಗಾರನೂ ಆಗಿರಬೇಕಿತ್ತು, ಹೀಗೆ ಜೊತೆ ಮಾನವರಿಗೆ ಪ್ರಯೋಜನ ತರಲು ಏನನ್ನಾದರೂ ಮಾಡಬೇಕಿತ್ತು.
19. ಆಶ್ರಯನಗರಗಳ ಸಂಬಂಧದಲ್ಲಿ ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
19 ಉದ್ದೇಶರಹಿತ ಕೊಲೆಗಾರರ ಸಂರಕ್ಷಣೆಗಾಗಿ ಇಸ್ರಾಯೇಲಿನ ಆಶ್ರಯನಗರಗಳ ಯೆಹೋವನ ಏರ್ಪಾಡು ನಿಶ್ಚಯವಾಗಿಯೂ ದಯಾಪರವಾಗಿತ್ತು. ಈ ಮುನ್ನೇರ್ಪಾಡು ಜೀವಕ್ಕಾಗಿ ಗೌರವವನ್ನು ಖಂಡಿತವಾಗಿ ಪ್ರವರ್ಧಿಸಿತು. ಹಾಗಿದ್ದರೂ, 20ನೆಯ ಶತಮಾನದಲ್ಲಿ ಜೀವಿಸುತ್ತಿರುವ ಜನರಿಗೆ ಪ್ರಾಚೀನ ಸಮಯದ ಆಶ್ರಯನಗರಗಳು ಅರ್ಥವನ್ನು ಹೊಂದಿವೆಯೊ? ನಾವು ಯೆಹೋವನ ಮುಂದೆ ರಕ್ತಾಪರಾಧಿಗಳಾಗಿರಲು ಮತ್ತು ಆತನ ದಯೆಯು ನಮಗೆ ಬೇಕೆಂದು ಗ್ರಹಿಸದೆ ಇರುವುದು ಸಾಧ್ಯವೊ? ಇಸ್ರಾಯೇಲಿನ ಆಶ್ರಯನಗರಗಳಲ್ಲಿ ನಮಗೆ ಯಾವುದಾದರೂ ಆಧುನಿಕ ದಿನದ ಮಹತ್ವವಿದೆಯೆ?
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ಮಾನವ ಜೀವವನ್ನು ಹೇಗೆ ವೀಕ್ಷಿಸುತ್ತಾನೆ?
◻ ಉದ್ದೇಶರಹಿತ ಕೊಲೆಗಾರರಿಗೆ ದೇವರು ಯಾವ ದಯೆಯುಳ್ಳ ಮುನ್ನೇರ್ಪಾಡನ್ನು ಮಾಡಿದನು?
◻ ಕೊಲೆಗಾರನೊಬ್ಬನು ಒಂದು ಆಶ್ರಯನಗರಕ್ಕೆ ಪ್ರವೇಶವನ್ನು ಹೇಗೆ ಪಡೆದನು, ಮತ್ತು ಎಷ್ಟು ಕಾಲ ಅವನು ಅಲ್ಲಿ ಉಳಿಯಬೇಕಿತ್ತು?
◻ ಉದ್ದೇಶರಹಿತ ಕೊಲೆಗಾರನ ಮೇಲೆ ಹೇರಲ್ಪಟ್ಟ ಪ್ರತಿಬಂಧಗಳ ಸಂಭವನೀಯ ಪರಿಣಾಮಗಳು ಏನಾಗಿದ್ದವು?
[ಪುಟ 12ರಲ್ಲಿರುವಚಿತ್ರ]
ಇಸ್ರಾಯೇಲಿನ ಆಶ್ರಯನಗರಗಳು ಅನುಕೂಲಕರವಾಗಿ ಸ್ಥಾಪಿಸಲ್ಪಟ್ಟಿದ್ದವು
(For fully formatted text, see publication)
ಕೆದೆಷ್ ಯೊರ್ದನ್ ನದಿ ಗೋಲಾನ್
ಶೆಕೆಮ್ ರಾಮೋತ್
ಹೆಬ್ರೋನ್ ಬೆಚೆರ್