ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ
“ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು.”—2 ತಿಮೊ. 2:2.
1, 2. ಅನೇಕರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಹೇಗನಿಸುತ್ತದೆ?
ಜನರು ಸಾಮಾನ್ಯವಾಗಿ ಸ್ಥಾನಮಾನಗಳಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ. ಒಬ್ಬ ವ್ಯಕ್ತಿಗಿರುವ ಸ್ಥಾನ ಅಧಿಕಾರದ ಮೇಲೆ ಹೊಂದಿಕೊಂಡು ಅವನಿಗೆ ಗೌರವ ಕೊಡುತ್ತಾರೆ. ಆದ್ದರಿಂದ ಕೆಲವು ಸಂಸ್ಕೃತಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುವಾಗ “ಏನ್ ಕೆಲಸ ಮಾಡ್ತೀರಿ?” ಅಂತ ಕೇಳುತ್ತಾರೆ.
2 ಬೈಬಲು ಜನರ ಬಗ್ಗೆ ಮಾತಾಡುವಾಗ ಕೆಲವೊಮ್ಮೆ ಅವರು ಏನು ಕೆಲಸ ಮಾಡುತ್ತಿದ್ದರು ಅನ್ನುವುದನ್ನು ಸಹ ತಿಳಿಸುತ್ತದೆ. “ತೆರಿಗೆ ವಸೂಲಿಗಾರನಾಗಿದ್ದ ಮತ್ತಾಯ” “ಚರ್ಮಕಾರನಾದ ಸೀಮೋನ” “ಪ್ರಿಯ ವೈದ್ಯನಾದ ಲೂಕ” ಎಂಬವರ ಬಗ್ಗೆ ನಾವು ಬೈಬಲಿನಲ್ಲಿ ಓದುತ್ತೇವೆ. (ಮತ್ತಾ. 10:3; ಅ. ಕಾ. 10:6; ಕೊಲೊ. 4:14) ಯೆಹೋವನ ಸೇವೆಯಲ್ಲಿ ಜನರಿಗಿದ್ದ ನೇಮಕಗಳ ಬಗ್ಗೆ ಸಹ ನಾವು ಬೈಬಲಿನಲ್ಲಿ ಓದುತ್ತೇವೆ. ರಾಜ ದಾವೀದ, ಪ್ರವಾದಿ ಎಲೀಯ, ಅಪೊಸ್ತಲ ಪೌಲನ ಬಗ್ಗೆ ಉಲ್ಲೇಖಗಳಿವೆ. ಯೆಹೋವನು ಕೊಟ್ಟಿದ್ದ ನೇಮಕಗಳನ್ನು ಈ ವ್ಯಕ್ತಿಗಳು ತುಂಬ ಮಾನ್ಯಮಾಡಿದರು. ಅದೇ ರೀತಿ ಯೆಹೋವನ ಸೇವೆಯಲ್ಲಿ ನಮಗೆ ಯಾವ ನೇಮಕ ಸಿಕ್ಕಿದೆಯೋ ಅದನ್ನು ನಾವು ಸಹ ತುಂಬ ಮಾನ್ಯಮಾಡಬೇಕು.
3. ವಯಸ್ಸಿನಲ್ಲಿ ದೊಡ್ಡವರು ತಮಗಿಂತ ಚಿಕ್ಕವರಿಗೆ ಯಾಕೆ ತರಬೇತಿ ಕೊಡಬೇಕು? (ಲೇಖನದ ಆರಂಭದ ಚಿತ್ರ ನೋಡಿ.)
3 ಯೆಹೋವನ ಸೇವೆ ಮಾಡುವುದು ನಮಗೆ ತುಂಬ ಇಷ್ಟ. ನಮ್ಮ ನೇಮಕಗಳೆಂದರೆ ನಮಗೆ ಪಂಚಪ್ರಾಣ. ನಮಗೆ ನಮ್ಮ ನೇಮಕ ಎಷ್ಟು ಇಷ್ಟ ಅಂದರೆ ಜೀವಂತ ಇರುವ ವರೆಗೆ ಅದನ್ನು ಮಾಡುತ್ತಾ ಇರಲು ಬಯಸುತ್ತೇವೆ. ಆದರೆ ನಮಗೆ ವಯಸ್ಸಾಗುತ್ತಾ ಹೋಗುತ್ತದೆ ಅನ್ನುವುದು ದುಃಖದ ಸಂಗತಿ. ಚಿಕ್ಕ ವಯಸ್ಸಲ್ಲಿ ಮಾಡಿದಷ್ಟು ನಮ್ಮಿಂದ ಮಾಡಕ್ಕಾಗಲ್ಲ. (ಪ್ರಸಂ. 1:4) ಇದರಿಂದ ಸಾರುವ ಕೆಲಸವನ್ನು ಮಾಡುವಾಗ ಕೆಲವು ಸವಾಲುಗಳು ಎದುರಾಗುತ್ತವೆ. ಇಂದು ಸಾರುವ ಕೆಲಸ ತುಂಬ ವೇಗವಾಗಿ ಸಾಗುತ್ತಿದೆ. ಯೆಹೋವನ ಸಂಘಟನೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ಮುಟ್ಟಿಸಲಿಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಆದರೆ ಈ ನವನವೀನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳುವುದೇ ಕೆಲವೊಮ್ಮೆ ದೊಡ್ಡವರಿಗೆ ಕಷ್ಟವಾಗುತ್ತದೆ. (ಲೂಕ 5:39) ವಯಸ್ಸಾಗುತ್ತಾ ಹೋದಾಗ ಯೌವನದಲ್ಲಿದ್ದ ಶಕ್ತಿ ಬಲ ಕಡಿಮೆ ಆಗಿಬಿಡುತ್ತದೆ. (ಜ್ಞಾನೋ. 20:29) ಆದ್ದರಿಂದ ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ದೊಡ್ಡವರು ತಮಗಿಂತ ಚಿಕ್ಕ ವಯಸ್ಸಿನವರಿಗೆ ಪ್ರೀತಿಯಿಂದ ತರಬೇತಿ ಕೊಡಬೇಕು. ಇದು ವಿವೇಕಯುತವೂ ಆಗಿದೆ.—ಕೀರ್ತನೆ 71:18 ಓದಿ.
4. ಕೆಲವರಿಗೆ ಜವಾಬ್ದಾರಿಯನ್ನು ವಹಿಸಿಕೊಡುವುದು ಯಾಕೆ ಕಷ್ಟವಾಗುತ್ತದೆ? (“ಜವಾಬ್ದಾರಿ ವಹಿಸಿಕೊಡದಿರಲು ಕಾರಣಗಳು” ಎಂಬ ಚೌಕ ನೋಡಿ.)
4 ಅಧಿಕಾರದ ಸ್ಥಾನದಲ್ಲಿರುವವರಿಗೆ ತಮಗಿಂತ ಚಿಕ್ಕ ವಯಸ್ಸಿನವರಿಗೆ ಜವಾಬ್ದಾರಿಯನ್ನು ವಹಿಸಿಕೊಡುವುದು ಕೆಲವೊಮ್ಮೆ ಕಷ್ಟ ಆಗುತ್ತದೆ. ತಮ್ಮ ಅಚ್ಚುಮೆಚ್ಚಿನ ನೇಮಕವನ್ನು ಬಿಟ್ಟುಕೊಡಲು ಅವರಿಗೆ ಮನಸ್ಸಾಗಲಿಕ್ಕಿಲ್ಲ. ‘ನನಗೀ ಕೆಲಸ ತುಂಬ ಇಷ್ಟ, ಹೇಗೆ ಬಿಟ್ಟುಕೊಡ್ಲಿ’ ಎಂದು ಒಳಗೊಳಗೆ ಕೊರಗಬಹುದು. ‘ನಾನು ಈ ಕೆಲಸವನ್ನು ಮುಂದೆ ನಿಂತು ಮಾಡಿಲ್ಲವಾದರೆ ಇದು ಸರಿಯಾಗಿ ಆಗುವುದಿಲ್ಲ’ ಎಂಬ ಭಾವನೆ ಸಹ ಇರುತ್ತದೆ. ಇದನ್ನು ಹೇಗೆ ಒಳ್ಳೇದಾಗಿ ಮಾಡುವುದೆಂದು ಬೇರೆಯವರಿಗೆ ಕಲಿಸುವಷ್ಟು ಪುರುಸೊತ್ತಿಲ್ಲ ಎಂದು ಅವರು ನೆನಸಬಹುದು. ಚಿಕ್ಕ ವಯಸ್ಸಿನವರಿಗೂ ಒಂದು ಮಾತು: ಹೆಚ್ಚಿನ ಜವಾಬ್ದಾರಿ ಸಿಗುವ ವರೆಗೆ ತಾಳ್ಮೆಯಿಂದಿರಿ.
5. ನಾವು ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
5 ನಾವು ಈ ಲೇಖನದಲ್ಲಿ ಈ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ. ಒಂದು, ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ದೊಡ್ಡವರು ತಮಗಿಂತ ಚಿಕ್ಕ ವಯಸ್ಸಿನವರಿಗೆ ಸಹಾಯ ಮಾಡುವುದು ಯಾಕೆ ಪ್ರಾಮುಖ್ಯ ಮತ್ತು ಇದನ್ನು ಹೇಗೆ ಮಾಡಬಹುದು? (2 ತಿಮೊ. 2:2) ಎರಡು, ಚಿಕ್ಕ ವಯಸ್ಸಿನವರು ಹೆಚ್ಚು ಅನುಭವವಿರುವ ದೊಡ್ಡ ವಯಸ್ಸಿನ ಸಹೋದರರೊಂದಿಗೆ ಕೆಲಸಮಾಡುವಾಗ ಯಾಕೆ ಸರಿಯಾದ ಮನೋಭಾವ ಇಟ್ಟುಕೊಳ್ಳಬೇಕು? ಮೊದಲು, ಒಂದು ವಿಶೇಷ ನೇಮಕವನ್ನು ಸರಿಯಾಗಿ ನಿರ್ವಹಿಸಲು ರಾಜ ದಾವೀದನು ತನ್ನ ಮಗನನ್ನು ಹೇಗೆ ಸಿದ್ಧಪಡಿಸಿದನು ಎಂದು ನೋಡೋಣ.
ದಾವೀದನು ಸೊಲೊಮೋನನನ್ನು ಸಿದ್ಧಪಡಿಸಿದನು
6. (ಎ) ರಾಜ ದಾವೀದನು ಏನು ಮಾಡಲು ಬಯಸಿದನು? (ಬಿ) ಆದರೆ ಯೆಹೋವನು ಅವನಿಗೆ ಏನು ಹೇಳಿದನು?
6 ಸೌಲನಿಂದಾಗಿ ದಾವೀದನು ಅನೇಕ ವರ್ಷಗಳ ವರೆಗೆ ಅಲೆಮಾರಿಯಾಗಿ ಜೀವಿಸಬೇಕಿತ್ತು. ಅವನು ರಾಜನಾದ ಮೇಲೆ ತನ್ನ ಐಷಾರಾಮಿ ಅರಮನೆಯಲ್ಲಿ ಜೀವಿಸಲು ಆರಂಭಿಸಿದ. ಆದರೆ ಅವನ ಮನಸ್ಸಲ್ಲಿ ಒಂದು ಕೊರಗಿತ್ತು. “ನಾನು ದೇವದಾರುಮರದ ಮನೆಯಲ್ಲಿ ವಾಸವಾಗಿದ್ದೇನೆ; ಯೆಹೋವನ ನಿಬಂಧನಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ” ಎಂದು ಪ್ರವಾದಿ ನಾತಾನನಿಗೆ ತಿಳಿಸಿದ. ಯೆಹೋವನಿಗೆ ಒಂದು ಸುಂದರವಾದ ಆಲಯವನ್ನು ಕಟ್ಟಬೇಕೆಂದು ದಾವೀದ ಆಸೆಪಟ್ಟನು. ನಾತಾನನು ದಾವೀದನಿಗೆ, “ಮನಸ್ಸಿದ್ದಂತೆ ಮಾಡು, ದೇವರು ನಿನ್ನ ಸಂಗಡ ಇರುತ್ತಾನೆ” ಅಂದನು. ಆದರೆ ಯೆಹೋವನ ಯೋಚನೆ ಬೇರೆ ಆಗಿತ್ತು. ಯೆಹೋವನು ದಾವೀದನಿಗೆ “ನೀನು ನನಗೆ ಆಲಯವನ್ನು ಕಟ್ಟಬಾರದು” ಎಂದು ನಾತಾನನ ಮೂಲಕ ಹೇಳಿಸಿದನು. ಯೆಹೋವನು ದಾವೀದನ ಸಂಗಡ ಇರುತ್ತೇನೆಂದು ಹೇಳಿದನಾದರೂ, ದಾವೀದನ ಮಗ ಆಲಯವನ್ನು ಕಟ್ಟಬೇಕೆಂದು ಯೆಹೋವನು ಹೇಳಿದನು. ಆಗ ದಾವೀದ ಏನು ಮಾಡಿದನು?—1 ಪೂರ್ವ. 17:1-4, 8, 11, 12; 29:1.
7. ಆಲಯ ಕಟ್ಟುವ ವಿಷಯದಲ್ಲಿ ಯೆಹೋವನಿಗೆ ಬೇರೆ ಯೋಚನೆ ಇದ್ದಾಗ ದಾವೀದ ಏನು ಮಾಡಿದನು?
7 ದಾವೀದನು ಯೆಹೋವನಿಗೆ ಒಂದು ಆಲಯವನ್ನು ಕಟ್ಟಲು ತುಂಬ ಆಸೆಪಟ್ಟನು. ಆದರೆ ದೇವರ ಯೋಚನೆ ಬೇರೆ ಅಂತ ತಿಳಿದಾಗ ತುಂಬ ದುಃಖ ಆಗಿರಬೇಕು. ಆದರೂ ತನ್ನ ಮಗ ಕಟ್ಟಲಿದ್ದ ಆಲಯದ ಕೆಲಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟನು. ಈ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬೇಕೆಂದು ಪಟ್ಟಿಮಾಡಿದನು. ಆಲಯದಲ್ಲಿ ಉಪಯೋಗಿಸಲಿಕ್ಕಾಗಿ ಕಬ್ಬಿಣ, ತಾಮ್ರ, ಬೆಳ್ಳಿ, ಚಿನ್ನ, ಮರವನ್ನು ರಾಶಿರಾಶಿಯಾಗಿ ಶೇಖರಿಸಿದನು. ಈ ಆಲಯವನ್ನು ಕಟ್ಟಿದ ಕೀರ್ತಿ ತನಗೆ ಬರಲ್ಲ ಎಂದು ದಾವೀದನಿಗೆ ಗೊತ್ತಿತ್ತು. ಅದನ್ನು ಮುಂದೆ ಸೊಲೊಮೋನ ಕಟ್ಟಿದ ಆಲಯ ಎಂದೇ ಕರೆಯಲಾಯಿತು. ತನಗೆ ಕೀರ್ತಿ ಸಿಗಲ್ಲ ಅಂತ ಗೊತ್ತಿದ್ದರೂ ದಾವೀದ ಸೊಲೊಮೋನನಿಗೆ, “ನನ್ನ ಮಗನೇ, ನೀನು ಕೃತಾರ್ಥನಾಗುವಂತೆಯೂ ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ” ಎಂದು ಹೇಳಿ ಪ್ರೋತ್ಸಾಹಿಸಿದನು.—1 ಪೂರ್ವ. 22:11, 14-16.
8. (ಎ) ಆಲಯವನ್ನು ಕಟ್ಟುವ ಸಾಮರ್ಥ್ಯ ಸೊಲೊಮೋನನಿಗಿಲ್ಲ ಎಂದು ದಾವೀದ ಯಾಕೆ ನೆನಸಿರಬಹುದು? (ಬಿ) ಆದರೆ ದಾವೀದ ಏನು ಮಾಡಿದ?
8 ಒಂದನೇ ಪೂರ್ವಕಾಲವೃತ್ತಾಂತ 22:5 ಓದಿ. ಸೊಲೊಮೋನ ಇನ್ನೂ ಚಿಕ್ಕ ಹುಡುಗ, ಅವನಿಂದ ಇಷ್ಟು ದೊಡ್ಡ ಕೆಲಸವನ್ನು ಹೇಗೆ ಮಾಡಲಿಕ್ಕಾಗುತ್ತೆ ಎಂದು ದಾವೀದ ಯೋಚಿಸಿರಬೇಕು. ಯಾಕೆಂದರೆ ಸೊಲೊಮೋನ ‘ಎಳೇ ಪ್ರಾಯದವನಾಗಿದ್ದ,’ ಅವನಿಗೆ ಹೆಚ್ಚು ಅನುಭವ ಇರಲಿಲ್ಲ. ಆದರೆ ಆಲಯವನ್ನು ‘ಅಧಿಕ ಶೋಭಾಯಮಾನವಾಗಿ’ ಕಟ್ಟಬೇಕಿತ್ತು. ಈ ವಿಶೇಷ ಕೆಲಸವನ್ನು ಮಾಡಿ ಮುಗಿಸಲು ಯೆಹೋವನು ಸೊಲೊಮೋನನಿಗೆ ಸಹಾಯ ಮಾಡುತ್ತಾನೆಂದು ದಾವೀದ ಅರ್ಥಮಾಡಿಕೊಂಡನು. ಸೊಲೊಮೋನ ಇಷ್ಟು ಬೃಹತ್ತಾದ ಕೆಲಸವನ್ನು ಮಾಡಿ ಮುಗಿಸಲು ದಾವೀದನು ತನ್ನಿಂದಾದ ಸಹಾಯವನ್ನು ಮಾಡಿದನು.
ತರಬೇತಿ ಕೊಡಿ, ಸಂತೋಷ ಪಡಿ
9. ವೃದ್ಧ ಸಹೋದರರು ಬೇರೆಯವರಿಗೆ ಜವಾಬ್ದಾರಿಗಳನ್ನು ಸಂತೋಷದಿಂದ ವಹಿಸಿಕೊಡಬೇಕು ಯಾಕೆ? ಒಂದು ಉದಾಹರಣೆ ಕೊಡಿ.
9 ದೊಡ್ಡ ವಯಸ್ಸಿನ ಸಹೋದರರು ತಮಗಿಂತ ಚಿಕ್ಕವರಿಗೆ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಡಬೇಕಾದ ಪರಿಸ್ಥಿತಿ ಬಂದಾಗ ನಿರುತ್ಸಾಹಗೊಳ್ಳುವ ಆವಶ್ಯಕತೆ ಇಲ್ಲ. ಯೆಹೋವನ ಕೆಲಸ ಮುಖ್ಯ ಅಂತ ನಮ್ಮೆಲ್ಲರಿಗೂ ಗೊತ್ತು. ಚಿಕ್ಕ ಪ್ರಾಯದವರಿಗೆ ಜವಾಬ್ದಾರಿಗಳನ್ನು ವಹಿಸಿಕೊಟ್ಟರೆ ಯೆಹೋವನ ಕೆಲಸ ಚೆನ್ನಾಗಿ ನಡೆಯುತ್ತಾ ಹೋಗುತ್ತದೆ. ಈ ಉದಾಹರಣೆ ಪರಿಗಣಿಸಿ. ನೀವು ಚಿಕ್ಕ ಹುಡುಗನಾಗಿದ್ದಾಗ ನಿಮ್ಮ ಅಪ್ಪ ಗಾಡಿ ಓಡಿಸುತ್ತಿದ್ದರು. ನೀವು ಸ್ವಲ್ಪ ದೊಡ್ಡವರಾದಾಗ ಗಾಡಿ ಹೇಗೆ ಓಡಿಸುವುದೆಂದು ಅಪ್ಪ ಹೇಳಿಕೊಟ್ಟರು. ಆಮೇಲೆ ನೀವು ಲೈಸನ್ಸ್ ತೆಗೆದುಕೊಂಡು ಗಾಡಿ ಓಡಿಸಲು ಆರಂಭಿಸಿದ್ರಿ. ನೀವು ಗಾಡಿ ಓಡಿಸಲು ಆರಂಭಿಸಿದ ಮೇಲೂ ಅಪ್ಪ ಕೆಲವು ಸಲಹೆಗಳನ್ನು ಕೊಡುತ್ತಿದ್ದರು. ಕೆಲವೊಮ್ಮೆ ನೀವು ಕೆಲವೊಮ್ಮೆ ನಿಮ್ಮ ತಂದೆ ಗಾಡಿ ಓಡಿಸುತ್ತಾ ಇದ್ರಿ. ಆದರೆ ಅಪ್ಪನಿಗೆ ವಯಸ್ಸಾಗುತ್ತಾ ಹೋದಾಗ ನೀವು ಹೆಚ್ಚಾಗಿ ಗಾಡಿ ಓಡಿಸಿದ್ರಿ. ಆಗ ಅಪ್ಪಗೆ ಬೇಜಾರಾಗಿತ್ತಾ? ಇಲ್ಲ. ನೀವು ಗಾಡಿ ಓಡಿಸುವಾಗ ಅವರು ಆರಾಮವಾಗಿ ಕೂತುಕೊಂಡು ಬರುತ್ತಿದ್ದರು. ಅದೇ ರೀತಿ, ತಮ್ಮಿಂದ ತರಬೇತಿ ಪಡೆದ ಯೌವನಸ್ಥರು ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧರಾಗುವಾಗ ವೃದ್ಧ ಸಹೋದರರಿಗೆ ತುಂಬ ಸಂತೋಷವಾಗುತ್ತದೆ.
10. ಸ್ಥಾನಮಾನಗಳ ಬಗ್ಗೆ ಮೋಶೆಗೆ ಯಾವ ಮನೋಭಾವ ಇತ್ತು?
10 ಬೇರೆಯವರಿಗೆ ಕೆಲವು ನೇಮಕಗಳು ಸಿಗುವಾಗ ನಾವು ಹೊಟ್ಟೆಕಿಚ್ಚುಪಡಬಾರದು. ಕೆಲವು ಇಸ್ರಾಯೇಲ್ಯರು ಪ್ರವಾದಿಗಳಂತೆ ವರ್ತಿಸಲು ಆರಂಭಿಸಿದಾಗ ಮೋಶೆ ಹೊಟ್ಟೆಕಿಚ್ಚುಪಡಲಿಲ್ಲ. (ಅರಣ್ಯಕಾಂಡ 11:24-29 ಓದಿ.) ಅವನ ಸಹಾಯಕನಾದ ಯೆಹೋಶುವ ಪ್ರವಾದಿಸುವವರನ್ನು ತಡೆಯಲು ಪ್ರಯತ್ನಿಸಿದನು. ಆದರೆ ಮೋಶೆ ಅವನಿಗೆ, “ನನ್ನ ಗೌರವವನ್ನು ಕಾಪಾಡಬೇಕೆಂದಿದ್ದೀಯೇ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮೀಯವರಗಳನ್ನು ಹೊಂದಿದವರೂ ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೇದು” ಅಂದನು. ಕೆಲಸವನ್ನು ಮುಂದೆ ನಿಂತು ನಡೆಸುತ್ತಿರುವುದು ಯೆಹೋವನು ಅಂತ ಮೋಶೆಗೆ ಗೊತ್ತಿತ್ತು. ತನಗೆ ಗೌರವ ಸಿಗುತ್ತಿಲ್ಲ ಅನ್ನುವುದರ ಬಗ್ಗೆ ಮೋಶೆ ತಲೆ ಕೆಡಿಸಿಕೊಳ್ಳಲಿಲ್ಲ. ಯೆಹೋವನ ಸೇವಕರೆಲ್ಲರಿಗೂ ನೇಮಕಗಳು ಸಿಗಬೇಕೆಂದು ಬಯಸಿದನು. ನಮ್ಮ ಕುರಿತಾಗಿ ಏನು? ಯೆಹೋವನ ಸೇವೆಯಲ್ಲಿ ಬೇರೆಯವರಿಗೆ ನೇಮಕಗಳು ಸಿಕ್ಕಿದಾಗ ನಮಗೆ ಸಂತೋಷವಾಗುತ್ತದಾ?
11. ಬೇರೆಯವರಿಗೆ ಜವಾಬ್ದಾರಿ ಕೊಡುವ ವಿಷಯದ ಬಗ್ಗೆ ಒಬ್ಬ ಸಹೋದರ ಏನು ಹೇಳಿದ್ದಾರೆ?
11 ನಮ್ಮಲ್ಲಿರುವ ಅನೇಕ ಸಹೋದರರು ಎಷ್ಟೋ ವರ್ಷಗಳಿಂದ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿದ್ದಾರೆ. ತಮಗಿಂತ ಚಿಕ್ಕ ಪ್ರಾಯದವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲು ತರಬೇತಿ ಸಹ ಕೊಟ್ಟಿದ್ದಾರೆ. ಪೀಟರ್ ಎಂಬ ಸಹೋದರ ಇದನ್ನೇ ಮಾಡಿದರು. ಇವರು 74 ವರ್ಷ ಪೂರ್ಣ ಸಮಯದ ಸೇವೆಯಲ್ಲಿ ಕಳೆದಿದ್ದಾರೆ. 35 ವರ್ಷ ಯೂರೋಪ್ನಲ್ಲಿರುವ ಒಂದು ಶಾಖಾ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. ಸರ್ವಿಸ್ ಡಿಪಾರ್ಟ್ಮೆಂಟ್ನ ಮೇಲ್ವಿಚಾರಕರಾಗಿ ತುಂಬ ವರ್ಷ ಸೇವೆ ಮಾಡಿದ್ದಾರೆ. ಆಮೇಲೆ ಇವರ ನೇಮಕವನ್ನು ಪೌಲ್ ಎಂಬ ಸಹೋದರನಿಗೆ ಕೊಡಲಾಯಿತು. ಈ ಪೌಲ್ ಪೀಟರ್ ಕೆಳಗೆ ಎಷ್ಟೋ ವರ್ಷ ಕೆಲಸ ಮಾಡಿದ್ದರು. ತನ್ನ ಮೆಚ್ಚಿನ ನೇಮಕ ಹೋಯಿತಲ್ಲಾ ಎಂದು ಪೀಟರ್ ದುಃಖಪಟ್ಟರಾ? ಇಲ್ಲ. ಅವರು ಹೇಳಿದ್ದು: “ತರಬೇತಿ ಪಡೆದಿರುವ ಸಹೋದರರು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮುಂದೆ ಬರುತ್ತಿರುವುದನ್ನು ನೋಡಿ ನನಗೆ ತುಂಬ ಸಂತೋಷವಾಗುತ್ತದೆ. ಅವರು ಕೆಲಸವನ್ನು ತುಂಬ ಚೆನ್ನಾಗಿ ಮಾಡುತ್ತಿದ್ದಾರೆ.”
ದೊಡ್ಡವರ ಮೇಲೆ ಗೌರವ ಇರಲಿ
12. ರೆಹಬ್ಬಾಮನಿಂದ ನಾವು ಯಾವ ಪಾಠ ಕಲಿಯಬಹುದು?
12 ಸೊಲೊಮೋನನ ಮಗ ರೆಹಬ್ಬಾಮ ರಾಜನಾದಾಗ, ಈ ಹೊಸ ನೇಮಕವನ್ನು ಹೇಗೆ ನಿರ್ವಹಿಸಲಿ ಎಂದು ತನ್ನ ತಂದೆಯ ಕಾಲದ ಮಂತ್ರಿಗಳನ್ನು ಕೇಳಿದನು. ಅವರು ಕೊಟ್ಟ ಸಲಹೆ ಇವನಿಗೆ ಇಷ್ಟವಾಗಲಿಲ್ಲ. ತನ್ನ ಜೊತೆ ಬೆಳೆದುಬಂದ ಯೌವನಸ್ಥರು ಕೊಟ್ಟ ಸಲಹೆಯಂತೆ ಮಾಡಿದ. ಇದರಿಂದ ಫಲಿತಾಂಶ ಭಯಂಕರವಾಗಿತ್ತು. (2 ಪೂರ್ವ. 10:6-11, 19) ನಮಗೇನು ಪಾಠ? ನಮಗಿಂತ ಹೆಚ್ಚು ಅನುಭವ ಇರುವ, ವಯಸ್ಸಿನಲ್ಲಿ ದೊಡ್ಡವರಾದ ವ್ಯಕ್ತಿಗಳ ಹತ್ತಿರ ಸಲಹೆ ಕೇಳುವುದು ಒಳ್ಳೇದು. ಯೌವನಸ್ಥರು ಎಲ್ಲವನ್ನೂ ಹಳೇ ವಿಧಾನದಲ್ಲೇ ಮಾಡಬೇಕು, ಹೊಸತನ ಇರಬಾರದು ಅಂತಿಲ್ಲ. ಆದರೆ ಹಳೇ ವಿಧಾನಗಳೆಲ್ಲಾ ಉಪಯೋಗಕ್ಕೆ ಬರಲ್ಲ ಎಂದು ತಳ್ಳಿಹಾಕಬಾರದು. ಹಳೇ ವಿಧಾನಗಳಲ್ಲಿದ್ದ ಒಳ್ಳೇ ವಿಷಯಗಳನ್ನು ಗುರುತಿಸಿ ಪಾಲಿಸಬೇಕು.
13. ಯುವ ಪ್ರಾಯದವರು ದೊಡ್ಡವರೊಂದಿಗೆ ಕೆಲಸಮಾಡುವಾಗ ಏನು ಮಾಡಬೇಕು?
13 ಕೆಲವೊಮ್ಮೆ ಯುವ ಪ್ರಾಯದವರು ಹೆಚ್ಚು ಅನುಭವವಿರುವ ದೊಡ್ಡವರು ಮಾಡುವ ಕೆಲಸದ ಮೇಲೆ ಉಸ್ತುವಾರಿ ವಹಿಸುವಂತೆ ನೇಮಿಸಲಾಗುತ್ತದೆ. ಯುವ ಪ್ರಾಯದ ಸಹೋದರರು ದೊಡ್ಡವರಿಂದ ಕೆಲಸ ಕಲಿಯುವುದು ವಿವೇಕಯುತ. ನಾವು ಹಿಂದೆ ನೋಡಿದ ಆ ಅನುಭವದಲ್ಲಿ ಪೀಟರ್ ಜಾಗದಲ್ಲಿ ಪೌಲ್ ಮೇಲ್ವಿಚಾರಕರಾದ ಮೇಲೆ ಹೀಗಂದರು: “ನಾನು ಆಗಾಗ ಸಹೋದರ ಪೀಟರ್ ಅವರ ಸಲಹೆ ಪಡೀತಿದ್ದೆ. ಡಿಪಾರ್ಟ್ಮೆಂಟ್ನಲ್ಲಿದ್ದ ಬೇರೆಯವರೂ ಇದನ್ನೇ ಮಾಡುವಂತೆ ಹೇಳಿದೆ.”
14. ಅಪೊಸ್ತಲ ಪೌಲ ಮತ್ತು ತಿಮೊಥೆಯ ಒಗ್ಗಟ್ಟಿನಿಂದ ಕೆಲಸ ಮಾಡಿದ್ದನ್ನು ನೋಡಿ ನಾವೇನು ಕಲಿಯುತ್ತೇವೆ?
14 ತಿಮೊಥೆಯನು ಅಪೊಸ್ತಲ ಪೌಲನಿಗಿಂತ ತುಂಬ ಚಿಕ್ಕವನಾಗಿದ್ದ. ಆದರೂ ಇವರಿಬ್ಬರೂ ಒಟ್ಟಿಗೆ ತುಂಬ ವರ್ಷ ಸೇವೆ ಮಾಡಿದರು. (ಫಿಲಿಪ್ಪಿ 2:20-22 ಓದಿ.) ಪೌಲನು ಕೊರಿಂಥದವರಿಗೆ ಹೇಳಿದ್ದು: “ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ; ಅವನು ಕರ್ತನಲ್ಲಿ ನನಗೆ ಪ್ರಿಯನೂ ನಂಬಿಗಸ್ತನೂ ಆದ ಮಗನಾಗಿದ್ದಾನೆ; ನಾನು ಎಲ್ಲ ಕಡೆಯಲ್ಲಿರುವ ಪ್ರತಿಯೊಂದು ಸಭೆಯಲ್ಲಿ ಬೋಧಿಸುತ್ತಿರುವ ಪ್ರಕಾರವೇ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ನನ್ನ ಕಾರ್ಯವಿಧಾನಗಳನ್ನು ಅವನು ನಿಮ್ಮ ಮನಸ್ಸಿಗೆ ತರುವನು.” (1 ಕೊರಿಂ. 4:17) ಪೌಲ ಮತ್ತು ತಿಮೊಥೆಯ ತುಂಬ ಒಗ್ಗಟ್ಟಿನಿಂದ ಕೆಲಸ ಮಾಡಿದರು ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಪೌಲನು “ಕ್ರಿಸ್ತ ಯೇಸುವಿನ ಸಂಬಂಧದಲ್ಲಿ [ತನ್ನ] ಕಾರ್ಯವಿಧಾನಗಳನ್ನು” ತಿಮೊಥೆಯನಿಗೆ ಕಲಿಸಿದನು. ತಿಮೊಥೆಯನು ಇದನ್ನೆಲ್ಲಾ ತುಂಬ ಚೆನ್ನಾಗಿ ಅರ್ಥಮಾಡಿಕೊಂಡನು. ಇದರಿಂದ ಪೌಲನಿಗೆ ತಿಮೊಥೆಯನೆಂದರೆ ತುಂಬ ಇಷ್ಟ. ತಿಮೊಥೆಯನು ಕೊರಿಂಥದಲ್ಲಿದ್ದ ಸಹೋದರ ಸಹೋದರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ಪೌಲನಿಗಿತ್ತು. ಹಿರಿಯರು ಅಪೊಸ್ತಲ ಪೌಲನನ್ನು ಅನುಕರಿಸುತ್ತಾ ಬೇರೆಯವರಿಗೆ ತರಬೇತಿ ಕೊಡಬೇಕು. ಆಗ ಅವರು ಸಭೆಯಲ್ಲಿ ಒಳ್ಳೇ ರೀತಿಯಲ್ಲಿ ಮುಂದಾಳತ್ವ ವಹಿಸಲು ಸಾಧ್ಯವಾಗುತ್ತದೆ.
ನಮ್ಮೆಲ್ಲರಿಗೂ ಒಂದು ಪ್ರಾಮುಖ್ಯ ಪಾತ್ರ ಇದೆ
15. ಯಾವುದೇ ಬದಲಾವಣೆ ನಮ್ಮನ್ನು ಬಾಧಿಸುವಾಗ ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಕೊಟ್ಟ ಸಲಹೆಯ ಬಗ್ಗೆ ಯೋಚಿಸುವುದು ಯಾಕೆ ಪ್ರಾಮುಖ್ಯ?
15 ಯೆಹೋವನ ಸಂಘಟನೆಯಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡುವಾಗ ನಮ್ಮೆಲ್ಲರಿಗೂ ತುಂಬ ಖುಷಿಯಾಗುತ್ತದೆ. ಈ ಎಲ್ಲಾ ಪ್ರಗತಿಯಿಂದಾಗಿ ಕೆಲವು ಬದಲಾವಣೆಗಳನ್ನು ತರಬೇಕಾಗುತ್ತದೆ. ಇಂಥ ಬದಲಾವಣೆಗಳು ನಮ್ಮನ್ನು ಬಾಧಿಸುವಾಗ ಸ್ವಲ್ಪ ಕಷ್ಟ ಆಗಬಹುದು. ನಾವು ದೀನರಾಗಿದ್ದು ‘ನನಗೇನು ಬೇಕು ಅನ್ನುವುದು ಮುಖ್ಯ ಅಲ್ಲ, ಯೆಹೋವನ ಕೆಲಸ ನಡೆಯುವುದು ಮುಖ್ಯ’ ಅನ್ನುವ ಮನೋಭಾವ ಇಟ್ಟುಕೊಂಡರೆ ಸಂತೋಷ ಸಿಗುತ್ತದೆ. ನಮ್ಮಲ್ಲಿ ಒಗ್ಗಟ್ಟೂ ಇರುತ್ತದೆ. ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದದ್ದು: “ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು.” ದೇಹದಲ್ಲಿರುವ ಪ್ರತಿಯೊಂದು ಅಂಗಕ್ಕೆ ಒಂದು ಪಾತ್ರವಿರುವಂತೆ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಒಂದು ಪಾತ್ರ ಇದೆ ಎಂದು ಪೌಲ ವಿವರಿಸಿದನು.—ರೋಮ. 12:3-5.
16. ಸಭೆಯಲ್ಲಿ ಸಮಾಧಾನ ಐಕ್ಯ ಇರಲಿಕ್ಕೋಸ್ಕರ ಪ್ರತಿಯೊಬ್ಬ ಕ್ರೈಸ್ತನು ಏನು ಮಾಡುತ್ತಾನೆ?
16 ಯೆಹೋವನ ಜನರೆಲ್ಲರೂ ದೇವರ ರಾಜ್ಯಕ್ಕೋಸ್ಕರ ಏನು ಬೇಕಿದ್ದರೂ ಮಾಡಲು ಸಿದ್ಧರಿದ್ದಾರೆ. ವಯಸ್ಸಿನಲ್ಲಿ ದೊಡ್ಡವರು ತಮಗಿಂತ ಚಿಕ್ಕವರಿಗೆ ತರಬೇತಿ ಕೊಡುತ್ತಾರೆ. ಯುವ ಸಹೋದರರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಗೌರವದಿಂದ ವಿನಯಶೀಲರಾಗಿ ನಡಕೊಳ್ಳುತ್ತಾರೆ. ಪರಿಸ್ಥಿತಿ ಬದಲಾದಾಗಲೂ ತಮ್ಮ ಪತ್ನಿಯರು ಕೊಡುವ ಸಹಕಾರವನ್ನು ವಿವಾಹಿತ ಸಹೋದರರು ತುಂಬ ಮೆಚ್ಚುತ್ತಾರೆ. ಇವರು ಅಕ್ವಿಲನಿಗೆ ಸಂಪೂರ್ಣ ಸಹಕಾರ ಕೊಟ್ಟ ಅವನ ಪತ್ನಿ ಪ್ರಿಸ್ಕಿಲ್ಲಳಂತೆ ಇದ್ದಾರೆ.—ಅ. ಕಾ. 18:2.
17. ಯೇಸು ತನ್ನ ಶಿಷ್ಯರಿಗೆ ಯಾವ ತರಬೇತಿ ಕೊಟ್ಟನು?
17 ಬೇರೆಯವರಿಗೆ ತರಬೇತಿ ಕೊಡುವ ವಿಷಯದಲ್ಲಿ ಯೇಸು ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. ತಾನು ಹೋದ ಮೇಲೆ ಬೇರೆಯವರು ಸಾರುವ ಕೆಲಸವನ್ನು ಮುಂದುವರಿಸಬೇಕೆಂದು ಅವನಿಗೆ ಗೊತ್ತಿತ್ತು. ಅವನ ಶಿಷ್ಯರು ಅಪರಿಪೂರ್ಣರಾಗಿದ್ದರೂ ಸಾರುವ ಕೆಲಸವನ್ನು ತನಗಿಂತ ಹೆಚ್ಚು ಮಾಡುವರು ಎಂದು ಯೇಸುವಿಗೆ ಭರವಸೆ ಇತ್ತು. (ಯೋಹಾ. 14:12) ಯೇಸು ಕೊಟ್ಟ ತರಬೇತಿಯಿಂದ ಅವರು ತಮ್ಮಿಂದ ಸಾಧ್ಯವಿರುವ ಎಲ್ಲಾ ದೇಶಗಳಿಗೂ ಹೋಗಿ ಸುವಾರ್ತೆಯನ್ನು ಸಾರಲು ಸಾಧ್ಯವಾಯಿತು.—ಕೊಲೊ. 1:23.
18. (ಎ) ಹೊಸ ಲೋಕದಲ್ಲಿ ನಾವು ಯಾವ ಕೆಲಸ ಮಾಡಲಿಕ್ಕಿದ್ದೇವೆ? (ಬಿ) ಈಗ ನಮಗೆ ಯಾವ ಕೆಲಸವನ್ನು ಮಾಡಲಿಕ್ಕಿದೆ?
18 ಯೇಸು ತೀರಿಹೋದ ಮೇಲೆ ಯೆಹೋವನು ಅವನನ್ನು ಪುನರುತ್ಥಾನಗೊಳಿಸಿ ಹೆಚ್ಚಿನ ಕೆಲಸವನ್ನು ವಹಿಸಿಕೊಟ್ಟನು. ಅವನಿಗೆ “ಎಲ್ಲ ಸರಕಾರಕ್ಕಿಂತಲೂ ಅಧಿಕಾರಕ್ಕಿಂತಲೂ ಶಕ್ತಿಗಿಂತಲೂ ಪ್ರಭುತ್ವಕ್ಕಿಂತಲೂ” ದೊಡ್ಡದಾದ ಅಧಿಕಾರವನ್ನು ಕೊಟ್ಟನು. (ಎಫೆ. 1:19-21) ಒಂದುವೇಳೆ ಅರ್ಮಗೆದೋನ್ ಬರುವ ಮುಂಚೆಯೇ ನಾವು ನಂಬಿಗಸ್ತರಾಗಿ ಸತ್ತರೆ ಯೆಹೋವನು ನಮ್ಮನ್ನು ಹೊಸ ಲೋಕದಲ್ಲಿ ಜೀವ ಕೊಟ್ಟು ಎಬ್ಬಿಸುವನು. ಅಲ್ಲಿ ನಮಗೆ ಸಂತೃಪ್ತಿ ತರುವ ಎಷ್ಟೋ ಕೆಲಸಗಳನ್ನು ಮಾಡಲಿಕ್ಕಿದೆ. ಈಗ ನಮಗೆ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಉಲ್ಲಾಸಭರಿತ ಕೆಲಸ ಇದೆ. ಕರ್ತನ ಸೇವೆಯಲ್ಲಿ ಮಾಡಲು ತುಂಬ ಕೆಲಸ ಇದೆ. ನಾವು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನಮಗೆ ಸಿಕ್ಕಿರುವ ಕೆಲಸವನ್ನು ಸಂತೋಷದಿಂದ ಮಾಡೋಣ.—1 ಕೊರಿಂ. 15:58.