ಅಧ್ಯಯನ ಲೇಖನ 6
ಯೆಹೋವ ಮಾಡೋದೆಲ್ಲ ಸರಿಯಾಗೇ ಇರುತ್ತೆ ಅಂತ ನಂಬಿ
“ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ, ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ. ಆತನು ಯಾವತ್ತೂ ಅನ್ಯಾಯ ಮಾಡಲ್ಲ, ಆತನು ನಂಬಿಗಸ್ತ ದೇವರು, ಆತನು ನೀತಿವಂತ ನ್ಯಾಯವಂತ ದೇವರು.”—ಧರ್ಮೋ. 32:4.
ಗೀತೆ 152 ಯೆಹೋವ ನೀನೇ ಆಶ್ರಯ
ಕಿರುನೋಟa
1-2. (ಎ) ಜನ ಯಾಕೆ ಅಧಿಕಾರಿಗಳನ್ನ ನಂಬಲ್ಲ? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
ಇವತ್ತು ಜನ ಅಧಿಕಾರಿಗಳನ್ನ ನಂಬೋದೇ ಇಲ್ಲ. ಯಾಕಂದ್ರೆ ರಾಜಕೀಯ ವ್ಯಕ್ತಿಗಳು ಅಥವಾ ವಕೀಲರು, ನ್ಯಾಯಾಧೀಶರು ಶ್ರೀಮಂತರಿಗೆ ಸಹಾಯ ಮಾಡ್ತಾರೆ, ಬಡವರಿಗೆ ಅನ್ಯಾಯ ಮಾಡ್ತಾರೆ. ಇದನ್ನೆಲ್ಲ ನೋಡುವಾಗ “ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ” ಅಂತ ಬೈಬಲಲ್ಲಿ ಹೇಳಿರೋದು ಎಷ್ಟು ನಿಜ ಅಂತ ಗೊತ್ತಾಗುತ್ತೆ. (ಪ್ರಸಂ. 8:9) ಅಷ್ಟೇ ಅಲ್ಲ, ಧರ್ಮಗುರುಗಳು ಕೆಟ್ಟದಾಗಿ ನಡಕೊಳ್ಳೋದ್ರಿಂದ ಜನರಿಗೆ ದೇವರ ಮೇಲಿರೋ ನಂಬಿಕೆನೂ ಹೋಗಿಬಿಟ್ಟಿದೆ. ಅದಕ್ಕೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಯೆಹೋವನ ಮೇಲೆ ಮತ್ತು ಆತನು ನೇಮಿಸಿರೋ ಸಹೋದರರ ಮೇಲೆ ನಂಬಿಕೆ ಇಡೋಕೆ ಸಹಾಯ ಮಾಡಬೇಕು.
2 ಬೈಬಲ್ ವಿದ್ಯಾರ್ಥಿಗಳು ಮಾತ್ರ ಅಲ್ಲ ನಾವು ತುಂಬ ವರ್ಷಗಳಿಂದ ಸತ್ಯದಲ್ಲಿದ್ದರೂ ಯೆಹೋವ ಮತ್ತು ಆತನ ಸಂಘಟನೆ ಮೇಲಿರೋ ನಂಬಿಕೆಯನ್ನ ಕಳಕೊಳ್ಳಬಾರದು. ಯೆಹೋವ ಏನೇ ಮಾಡಿದ್ರೂ ಸರಿಯಾಗೇ ಇರುತ್ತೆ ಅಂತ ನಂಬಬೇಕು. ಆದ್ರೆ ಕೆಲವು ಸನ್ನಿವೇಶಗಳಲ್ಲಿ ಇದನ್ನ ಮಾಡೋಕೆ ನಮಗೆ ಕಷ್ಟ ಅನಿಸಬಹುದು. ಅಂಥ ಮೂರು ಸನ್ನಿವೇಶಗಳನ್ನ ಈ ಲೇಖನದಲ್ಲಿ ನೋಡೋಣ. (1) ಬೈಬಲಲ್ಲಿರೋ ಕೆಲವು ಘಟನೆಗಳನ್ನ ಓದುವಾಗ (2) ಯೆಹೋವನ ಸಂಘಟನೆಯಿಂದ ನಿರ್ದೇಶನಗಳು ಸಿಕ್ಕಾಗ (3) ಮುಂದೆ ನಮಗೆ ಕಷ್ಟ ತೊಂದರೆಗಳು ಬಂದಾಗ.
ಬೈಬಲನ್ನ ಓದುವಾಗ ಯೆಹೋವನನ್ನು ನಂಬಿ
3. ಬೈಬಲಲ್ಲಿ ಕೆಲವು ಘಟನೆಗಳನ್ನ ಓದುವಾಗ ನಮಗೆ ಯಾವ ಪ್ರಶ್ನೆಗಳು ಬರುತ್ತೆ?
3 ಬೈಬಲಲ್ಲಿ ಯಾವುದಾದ್ರೂ ಘಟನೆ ಓದುವಾಗ ‘ಯೆಹೋವ ಯಾಕೆ ಈ ತರ ನಡಕೊಂಡನು? ಆತನು ಯಾಕೆ ಈ ತರ ತೀರ್ಮಾನ ತಗೊಂಡನು?’ ಅಂತ ನಮಗೆ ಅನಿಸಬಹುದು. ಉದಾಹರಣೆಗೆ, ಅರಣ್ಯಕಾಂಡ ಪುಸ್ತಕದಲ್ಲಿ ನೋಡಿದ್ರೆ ಒಬ್ಬ ವ್ಯಕ್ತಿ ಸಬ್ಬತ್ ದಿನದಲ್ಲಿ ಕಟ್ಟಿಗೆ ಕೂಡಿಸ್ತಿದ್ದ ಅಂತ ಯೆಹೋವ ಅವನಿಗೆ ಮರಣಶಿಕ್ಷೆ ಕೊಟ್ಟನು. ಆದ್ರೆ ಎರಡನೇ ಸಮುವೇಲ ಪುಸ್ತಕ ಓದುವಾಗ ದಾವೀದ ವ್ಯಭಿಚಾರ ಮಾಡಿ ಕೊಲೆ ಮಾಡಿದ್ರೂ ಅವನನ್ನ ಕ್ಷಮಿಸಿದನು. (ಅರ. 15:32, 35; 2 ಸಮು. 12:9, 13) ದಾವೀದ ಇಷ್ಟು ದೊಡ್ಡ ತಪ್ಪು ಮಾಡಿದ್ರೂ ಯೆಹೋವ ಅವನನ್ನ ಕ್ಷಮಿಸಿದನು, ಆದ್ರೆ ಆ ಇಸ್ರಾಯೇಲ್ಯ ವ್ಯಕ್ತಿ ಚಿಕ್ಕ ತಪ್ಪು ಮಾಡಿದ್ರೂ ಅವನಿಗೆ ಯಾಕೆ ಮರಣಶಿಕ್ಷೆ ಕೊಟ್ಟನು ಅನ್ನೋ ಪ್ರಶ್ನೆ ನಮಗೆ ಬರಬಹುದು. ಬೈಬಲ್ ಓದುವಾಗ ನಾವು 3 ವಿಷಯಗಳನ್ನ ಮನಸ್ಸಲ್ಲಿಟ್ರೆ ನಮಗೆ ಇದಕ್ಕೆ ಉತ್ತರ ಸಿಗುತ್ತೆ. ಅದನ್ನ ಈಗ ನೋಡೋಣ.
4. ಯೆಹೋವ ಕೊಡೋ ತೀರ್ಪು ಯಾವಾಗಲೂ ಸರಿಯಾಗೇ ಇರುತ್ತೆ ಅಂತ ಆದಿಕಾಂಡ 18:20, 21 ಮತ್ತು ಧರ್ಮೋಪದೇಶಕಾಂಡ 10:17ರಿಂದ ಹೇಗೆ ಗೊತ್ತಾಗುತ್ತೆ?
4 ಬೈಬಲಲ್ಲಿ ಕೆಲವು ಘಟನೆಗಳ ಬಗ್ಗೆ ಪೂರ್ತಿ ಮಾಹಿತಿ ಕೊಟ್ಟಿಲ್ಲ. ಉದಾಹರಣೆಗೆ, ದಾವೀದ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಅಂತ ನಮಗೆ ಗೊತ್ತು. (ಕೀರ್ತ. 51:2-4) ಆದ್ರೆ ಸಬ್ಬತ್ ದಿನದಲ್ಲಿ ನಿಯಮ ಮುರಿದ ಆ ವ್ಯಕ್ತಿ ಅವನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟನಾ ಇಲ್ವಾ ಅಂತ ನಮಗೆ ಗೊತ್ತಿಲ್ಲ. ಈ ಮುಂಚೆ ಅವನು ದೇವರ ನಿಯಮಗಳನ್ನ ಮುರಿದಿದ್ದನಾ? ಯೆಹೋವ ಎಚ್ಚರಿಕೆ ಕೊಟ್ಟಿದ್ದರೂ ಅವನು ತಿದ್ದಿಕೊಂಡಿಲ್ವಾ? ಅದರ ಬಗ್ಗೆ ಬೈಬಲ್ನಲ್ಲಿ ಎಲ್ಲೂ ಇಲ್ಲ. ಆದ್ರೆ ಯೆಹೋವ “ಯಾವತ್ತೂ ಅನ್ಯಾಯ ಮಾಡಲ್ಲ” ಅಂತ ನಮಗೆ ಗೊತ್ತು. (ಧರ್ಮೋ. 32:4) ಮನುಷ್ಯರು, ಬೇರೆಯವರು ಹೇಳೋದನ್ನ ಕೇಳಿಸಿಕೊಂಡು ಒಬ್ಬರಿಗೆ ಒಂಥರ ಇನ್ನೊಬ್ಬರಿಗೆ ಇನ್ನೊಂಥರ ತೀರ್ಪು ಕೊಡ್ತಾರೆ. ಆದ್ರೆ ಯೆಹೋವ ಹಾಗಲ್ಲ. ಪೂರ್ತಿ ಮಾಹಿತಿ ತಿಳ್ಕೊಂಡು ತೀರ್ಪು ಕೊಡ್ತಾನೆ. (ಆದಿಕಾಂಡ 18:20, 21; ಧರ್ಮೋಪದೇಶಕಾಂಡ 10:17 ಓದಿ.) ಹಾಗಾಗಿ ನಾವು ಯೆಹೋವನ ಬಗ್ಗೆ ಜಾಸ್ತಿ ತಿಳಿದುಕೊಂಡಷ್ಟು ಆತನು ಯಾವ ತೀರ್ಮಾನ ತಗೊಂಡರೂ ಅದು ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ. ಆಗ ನಾವು ಬೈಬಲಲ್ಲಿರೋ ಘಟನೆಗಳನ್ನ ಓದುವಾಗ ನಮ್ಮ ಮನಸ್ಸಿಗೆ ಪ್ರಶ್ನೆಗಳು ಬಂದ್ರೂ, ಅದಕ್ಕೆ ನಮಗೆ ಈಗ ಉತ್ತರ ಸಿಕ್ಕಿಲ್ಲ ಅಂದ್ರೂ “ಯೆಹೋವ ಎಲ್ಲ ವಿಷ್ಯಗಳಲ್ಲೂ ನೀತಿವಂತ” ಅನ್ನೋ ಗ್ಯಾರಂಟಿ ನಮಗಿರುತ್ತೆ.—ಕೀರ್ತ. 145:17.
5. ನಾವು ಅಪರಿಪೂರ್ಣರಾಗಿರೋದ್ರಿಂದ ಏನಾಗಬಹುದು? (“ಅಪರಿಪೂರ್ಣತೆ ದೃಷ್ಟಿಯನ್ನ ಮೊಬ್ಬಾಗಿಸುತ್ತೆ” ಅನ್ನೋ ಚೌಕ ನೋಡಿ.)
5 ನಾವು ಅಪರಿಪೂರ್ಣರಾಗಿರೋದ್ರಿಂದ ಸರಿಯಾಗಿ ಯೋಚಿಸದೆ ಇರಬಹುದು. ನಮ್ಮನ್ನ ಯೆಹೋವ ಆತನ ತರ ಸೃಷ್ಟಿ ಮಾಡಿರೋದ್ರಿಂದ ಎಲ್ಲರಿಗೂ ನ್ಯಾಯ ಸಿಗಬೇಕಂತ ಆಸೆ ಪಡ್ತೀವಿ. (ಆದಿ. 1:26) ಆದ್ರೆ ನಾವು ಅಪರಿಪೂರ್ಣರಾಗಿರೋದ್ರಿಂದ ಕೆಲವೊಮ್ಮೆ ನಮಗೆ ಎಲ್ಲಾ ಗೊತ್ತು ಅಂದ್ಕೊಂಡು ತಪ್ಪಾಗಿ ತೀರ್ಪು ಮಾಡಿಬಿಡಬಹುದು. ಉದಾಹರಣೆಗೆ, ಯೆಹೋವ ನಿನೆವೆಯ ಜನರಿಗೆ ಕರುಣೆ ತೋರಿಸಿದ್ದು ಯೋನನಿಗೆ ಇಷ್ಟ ಆಗಲಿಲ್ಲ. (ಯೋನ 3:10–4:1) ಆದ್ರೆ ಯೆಹೋವ ಕರುಣೆ ತೋರಿಸಿದ್ರಿಂದ ಪಶ್ಚಾತ್ತಾಪ ಪಟ್ಟ 1,20,000ಕ್ಕಿಂತ ಹೆಚ್ಚು ಜನರ ಜೀವ ಉಳೀತು. ಇದ್ರಿಂದ ಯೆಹೋವನ ಯೋಚನೆ ಸರಿಯಾಗಿತ್ತು, ಯೋನನ ಯೋಚನೆ ತಪ್ಪಾಗಿತ್ತು ಅಂತ ಗೊತ್ತಾಗುತ್ತೆ.
6. ಯೆಹೋವ ನಮಗೆ ಎಲ್ಲಾನೂ ಹೇಳೋ ಅವಶ್ಯಕತೆ ಇದೆಯಾ? ವಿವರಿಸಿ.
6 ಯೆಹೋವ ದೇವರು ಎಲ್ಲ ವಿಷಯವನ್ನೂ ನಮಗೆ ಹೇಳಬೇಕು ಅಂತೇನಿಲ್ಲ. ಆದ್ರೂ ಹಿಂದಿನ ಕಾಲದಲ್ಲಿ ಆತನು ತೀರ್ಮಾನ ತಗೊಂಡಾಗ ಅಥವಾ ತಗೊಳ್ಳೋ ಮುಂಚೆ ತನ್ನ ಜನರಿಗೆ ಅದರ ಬಗ್ಗೆ ಏನನಿಸುತ್ತೆ ಅಂತ ಕೇಳ್ತಿದ್ದನು. (ಆದಿ. 18:25; ಯೋನ 4:2, 3) ಕೆಲವೊಮ್ಮೆ ಆತನು ಯಾಕೆ ಆ ತೀರ್ಮಾನ ತಗೊಳ್ತಿದ್ದಾನೆ ಅಂತನೂ ಹೇಳ್ತಿದ್ದನು. (ಯೋನ 4:10, 11) ಆದ್ರೆ ಸ್ವಲ್ಪ ಯೋಚಿಸಿ, ನಮಗೆ ಜೀವ ಕೊಟ್ಟಿರೋದೇ ಯೆಹೋವ. ಹಾಗಾಗಿ ಆತನು ತೀರ್ಮಾನ ತಗೊಳ್ಳೋ ಮುಂಚೆಯಾಗಲಿ ಅಥವಾ ತಗೊಂಡ ಮೇಲಾಗಲಿ ನಮ್ಮ ಒಪ್ಪಿಗೆ ಕೇಳೋ ಅವಶ್ಯಕತೆ ಇಲ್ಲ ಅಲ್ವಾ?—ಯೆಶಾ. 40:13, 14; 55:9.
ನಿರ್ದೇಶನ ಸಿಕ್ಕಾಗ ಯೆಹೋವನನ್ನು ನಂಬಿ
7. ನಮಗೆ ಯಾರನ್ನ ನಂಬೋಕೆ ಕಷ್ಟ ಆಗುತ್ತೆ ಮತ್ತು ಯಾಕೆ?
7 ಯೆಹೋವ ಏನೇ ಮಾಡಿದ್ರೂ ಅದು ಸರಿಯಾಗೇ ಇರುತ್ತೆ ಅಂತ ನಾವು ಖಂಡಿತ ನಂಬ್ತೀವಿ. ಆದ್ರೆ ಆತನು ನೇಮಿಸಿರೋ ಸಹೋದರರನ್ನ ನಾವು ನಂಬ್ತೀವಾ? ಆ ಸಹೋದರರು ನಿರ್ದೇಶನಗಳನ್ನ ಕೊಟ್ಟಾಗ ಇದು ಯೆಹೋವನಿಂದ ಬಂದಿರೋ ನಿರ್ದೇಶನ ಅನಿಸುತ್ತಾ ಅಥವಾ ಅವರ ಮನಸ್ಸಿಗೆ ಬಂದಿದ್ದನ್ನ ಹೇಳ್ತಿದ್ದಾರೆ ಅನಿಸುತ್ತಾ? ಹಿಂದಿನ ಕಾಲದಲ್ಲೂ ತುಂಬ ಜನರಿಗೆ ಈ ತರ ಯೋಚನೆ ಬಂದಿರಬಹುದು. ಉದಾಹರಣೆಗೆ, ಸಬ್ಬತ್ತಿನ ನಿಯಮ ಮುರಿದ ಆ ವ್ಯಕ್ತಿಗೆ ಮರಣಶಿಕ್ಷೆ ಕೊಟ್ಟಾಗ ಅವನ ಸಂಬಂಧಿಕರಲ್ಲಿ ಯಾರಿಗಾದ್ರು ‘ಮೋಶೆ ನಿಜವಾಗಲೂ ಯೆಹೋವನನ್ನು ಕೇಳಿ ಈ ಶಿಕ್ಷೆ ಕೊಟ್ಟನಾ?’ ಅಂತ ಸಂಶಯ ಬಂದಿರಬಹುದು. ಊರೀಯನ ಸ್ನೇಹಿತರಲ್ಲಿ ಯಾರಾದ್ರೂ ‘ದಾವೀದ ರಾಜ ಆಗಿರೋದ್ರಿಂದ ಅವನ ಅಧಿಕಾರ ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಂಡಿರಬೇಕು’ ಅಂತ ಯೋಚಿಸಿರಬಹುದು. ಆದ್ರೆ ನಾವು ಮನಸ್ಸಲ್ಲಿಡಬೇಕಾದ ವಿಷಯ ಏನಂದ್ರೆ, ತಾನು ನೇಮಿಸಿರೋ ವ್ಯಕ್ತಿಗಳ ಮೇಲೆ ಯೆಹೋವನಿಗೆ ತುಂಬ ನಂಬಿಕೆಯಿದೆ. ಒಂದುವೇಳೆ ನಾವು ಅವರನ್ನ ನಂಬಲಿಲ್ಲ ಅಂದ್ರೆ ಯೆಹೋವನನ್ನು ನಂಬಿಲ್ಲ ಅಂತ ಅರ್ಥ.
8. ಒಂದನೇ ಶತಮಾನದಲ್ಲಿದ್ದ ಹಾಗೆ ಇವತ್ತು ಸಭೆಗಳನ್ನ ಹೇಗೆ ನಡೆಸಲಾಗುತ್ತಿದೆ? (ಅಪೊಸ್ತಲರ ಕಾರ್ಯ 16:4, 5)
8 ಇವತ್ತು ಯೆಹೋವ ದೇವರು ಭೂಮಿಯಲ್ಲಿರೋ ತನ್ನ ಸಂಘಟನೆಯನ್ನ ನೋಡಿಕೊಳ್ಳೋಕೆ ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿದ್ದಾನೆ. (ಮತ್ತಾ. 24:45) ಈ ಆಳು ಒಂದನೇ ಶತಮಾನದ ಆಡಳಿತ ಮಂಡಳಿಯ ತರಾನೇ ಇವತ್ತು ಭೂಮಿಯಲ್ಲಿರೋ ಎಲ್ಲಾ ಸಭೆಗಳನ್ನ ನೋಡಿಕೊಳ್ತಿದೆ ಮತ್ತು ಹಿರಿಯರಿಗೆ ನಿರ್ದೇಶನಗಳನ್ನ ಕೊಡುತ್ತಿದೆ. (ಅಪೊಸ್ತಲರ ಕಾರ್ಯ 16:4, 5 ಓದಿ.) ಆ ಹಿರಿಯರು ತಮಗೆ ಸಿಕ್ಕಿದ ನಿರ್ದೇಶನಗಳನ್ನ ಪಾಲಿಸ್ತಾ ಸಭೆಯವರಿಗೂ ಕಲಿಸ್ತಾರೆ. ಹಾಗಾಗಿ ಸಂಘಟನೆ ಮತ್ತು ಹಿರಿಯರು ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ, ಯೆಹೋವ ಮಾಡೋದು ಯಾವಾಗಲೂ ಸರಿಯಾಗೇ ಇರುತ್ತೆ ಅಂತ ನಂಬ್ತೀವಿ ಅನ್ನೋದನ್ನ ತೋರಿಸಿಕೊಡ್ತೀವಿ.
9. ಹಿರಿಯರು ಮಾಡೋ ನಿರ್ಧಾರನ ಒಪ್ಪಿಕೊಳ್ಳೋಕೆ ನಮಗೆ ಯಾವಾಗ ಕಷ್ಟ ಆಗುತ್ತೆ ಮತ್ತು ಯಾಕೆ?
9 ಕೆಲವೊಮ್ಮೆ ಹಿರಿಯರು ಹೇಳೋದನ್ನ ಮಾಡೋಕೆ ನಮಗೆ ಕಷ್ಟ ಆಗಬಹುದು. ಉದಾಹರಣೆಗೆ, ತುಂಬ ಜನ ಸತ್ಯಕ್ಕೆ ಬರುತ್ತಿರೋದ್ರಿಂದ ಈಗ ಸಭೆಗಳಲ್ಲಿ ಮತ್ತು ಸರ್ಕಿಟ್ಗಳಲ್ಲಿ ಕೆಲವು ಬದಲಾವಣೆಗಳು ಆಗ್ತಿದೆ. ಇದ್ರಿಂದ ಬೇರೆ ಸಭೆಗೆ ಹೋಗಿ ಸಹಾಯ ಮಾಡೋಕೆ ಹಿರಿಯರು ಪ್ರಚಾರಕರಿಗೆ ಹೇಳಬಹುದು. ಆಗ ನಮಗೆ ನಮ್ಮ ಸ್ನೇಹಿತರನ್ನ, ಕುಟುಂಬದವರನ್ನ ಬಿಟ್ಟು ಹೋಗೋಕೆ ಬೇಜಾರಾಗಬಹುದು. ಯಾವ ಪ್ರಚಾರಕರು ಯಾವ ಸಭೆಗೆ ಹೋಗಬೇಕು ಅಂತ ಯೆಹೋವ ದೇವರು ಬಂದು ಹಿರಿಯರ ಹತ್ರ ಹೇಳಿರಲ್ಲ. ಹಾಗಾಗಿ ಹಿರಿಯರು ಮಾಡೋ ನಿರ್ಧಾರಗಳನ್ನ ಒಪ್ಪಿಕೊಳ್ಳೋಕೆ ಕಷ್ಟ ಆಗಬಹುದು. ಆದ್ರೆ ಹಿರಿಯರು ಸರಿಯಾಗೇ ನಿರ್ಧಾರ ಮಾಡ್ತಾರೆ ಅಂತ ಯೆಹೋವ ನಂಬ್ತಾನೆ. ಹಾಗಾಗಿ ನಾವೂ ನಂಬಬೇಕು.b
10. ನಾವು ಯಾಕೆ ಹಿರಿಯರ ಮಾತು ಕೇಳಬೇಕು ಅಂತ ಇಬ್ರಿಯ 13:17 ಹೇಳುತ್ತೆ?
10 ಕೆಲವೊಮ್ಮೆ ಹಿರಿಯರು ಮಾಡೋ ನಿರ್ಧಾರಗಳು ನಮಗೆ ಇಷ್ಟ ಇಲ್ಲಾಂದ್ರೂ ಯಾಕೆ ಅವರ ಮಾತನ್ನ ಕೇಳಬೇಕು? ಹೀಗೆ ಮಾಡೋದ್ರಿಂದ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಿಂದ ಇರೋಕಾಗುತ್ತೆ. (ಎಫೆ. 4:2, 3) ಅಷ್ಟೇ ಅಲ್ಲ, ಹಿರಿಯರ ಮಂಡಳಿ ತಗೊಳ್ಳೋ ತೀರ್ಮಾನಗಳನ್ನ ನಾವು ಒಪ್ಪಿಕೊಂಡು ಅವರು ಹೇಳೋ ತರ ನಡ್ಕೊಂಡ್ರೆ ಸಭೆಯಲ್ಲಿ ಎಲ್ಲರೂ ಖುಷಿಯಾಗಿರೋಕೆ ಆಗುತ್ತೆ. (ಇಬ್ರಿಯ 13:17 ಓದಿ.) ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ಹಿರಿಯರನ್ನ ನಂಬ್ತಿರೋದ್ರಿಂದ ಸಭೆ ನೋಡಿಕೊಳ್ಳೋ ಜವಾಬ್ದಾರಿಯನ್ನ ಅವರಿಗೆ ಕೊಟ್ಟಿದ್ದಾನೆ. ನಾವು ಅವರ ಮಾತನ್ನ ಕೇಳಿದ್ರೆ ಯೆಹೋವನ ಮೇಲೆ ನಂಬಿಕೆ ತೋರಿಸಿದ ಹಾಗಾಗುತ್ತೆ.—ಅ. ಕಾ. 20:28.
11. ನಾವು ಯಾವ ವಿಷಯಗಳನ್ನ ಮನಸ್ಸಲ್ಲಿ ಇಟ್ರೆ ಹಿರಿಯರು ಮಾಡೋ ನಿರ್ಧಾರ ಸರಿಯಾಗೇ ಇರುತ್ತೆ ಅಂತ ನಂಬೋಕೆ ಆಗುತ್ತೆ?
11 ಕೆಲವು ವಿಷಯಗಳನ್ನ ಮನಸ್ಸಲ್ಲಿಟ್ರೆ ಹಿರಿಯರು ಮಾಡೋ ನಿರ್ಧಾರ ಸರಿಯಾಗೇ ಇರುತ್ತೆ ಅಂತ ನಂಬೋಕೆ ಆಗುತ್ತೆ. ಸಭೆಯವರಿಗಾಗಿ ಯಾವುದಾದ್ರೂ ತೀರ್ಮಾನ ಮಾಡೋಕೆ ಮುಂಚೆ ಅವರು ಪವಿತ್ರಶಕ್ತಿಗಾಗಿ ಪ್ರಾರ್ಥಿಸುತ್ತಾರೆ. ಆಮೇಲೆ ಬೈಬಲ್ ಮತ್ತು ಸಂಘಟನೆ ಅದರ ಬಗ್ಗೆ ಏನು ಹೇಳುತ್ತೆ ಅಂತ ನೋಡ್ತಾರೆ. ಅಷ್ಟೇ ಅಲ್ಲ, ಅವರಿಗೆ ಯೆಹೋವ ದೇವರನ್ನ ಖುಷಿಪಡಿಸಬೇಕು ಮತ್ತು ಸಭೆಯವರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆನೂ ಇದೆ. ಸಭೆಯನ್ನ ನೋಡಿಕೊಳ್ಳೋ ವಿಷಯದಲ್ಲಿ ಯೆಹೋವನಿಗೆ ಅವರು ಲೆಕ್ಕ ಕೊಡಬೇಕು ಅನ್ನೋದೂ ಅವರಿಗೆ ಗೊತ್ತು. (1 ಪೇತ್ರ 5:2, 3) ಇವತ್ತು ಲೋಕದಲ್ಲಿ ಜನರು ಜಾತಿ, ದೇಶ, ಭಾಷೆ ಅಂತ ಕಚ್ಚಾಡ್ತಿದ್ದಾರೆ. ಆದ್ರೆ ಯೆಹೋವನ ಜನರು ಹಾಗಿಲ್ಲ. ಅವರು ಒಂದೇ ದೇವರನ್ನ ಆರಾಧಿಸ್ತಾ ಒಗ್ಗಟ್ಟಾಗಿದ್ದಾರೆ. ಯೆಹೋವ ದೇವರ ಆಶೀರ್ವಾದ ಇಲ್ಲ ಅಂದಿದ್ರೆ ನಮ್ಮ ಸಂಘಟನೆ ಹೀಗೆ ಇರೋಕೆ ಆಗ್ತಿತ್ತಾ?
12. ಒಬ್ಬ ವ್ಯಕ್ತಿ ಪಶ್ಚಾತ್ತಾಪ ಪಟ್ಟಿದ್ದಾನಾ ಇಲ್ವಾ ಅಂತ ಹಿರಿಯರು ಹೇಗೆ ತಿಳಿದುಕೊಳ್ತಾರೆ?
12 ಸಭೆಯ ಶುದ್ಧತೆಯನ್ನು ಕಾಪಾಡೋ ಜವಾಬ್ದಾರಿಯನ್ನ ಯೆಹೋವ ಹಿರಿಯರಿಗೆ ಕೊಟ್ಟಿದ್ದಾನೆ. ಹಾಗಾಗಿ ಸಭೆಯಲ್ಲಿ ಯಾರಾದ್ರೂ ತಪ್ಪು ಮಾಡಿದ್ರೆ ಅವರು ಸಭೆಯಲ್ಲಿ ಇರಬೇಕಾ ಬೇಡವಾ ಅನ್ನೋ ತೀರ್ಮಾನವನ್ನ ಹಿರಿಯರು ಮಾಡಬೇಕು ಅಂತ ಯೆಹೋವ ಬಯಸ್ತಾನೆ. ಆದ್ರೆ ಇದನ್ನ ಮಾಡೋದು ಅಷ್ಟು ಸುಲಭ ಅಲ್ಲ. ತಪ್ಪು ಮಾಡಿದ ವ್ಯಕ್ತಿ ತಾನು ಮಾಡಿದ್ದು ದೊಡ್ಡ ತಪ್ಪು ಅಂತ ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟಿದ್ದಾನಾ? ಅವನು ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ಬರೀ ಹೇಳಿಕೊಳ್ತಿದ್ದಾನಾ ಅಥವಾ ಆ ತಪ್ಪು ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾನಾ? ಆ ತಪ್ಪನ್ನ ಮತ್ತೆ ಮಾಡಬಾರದು ಅಂತ ತೀರ್ಮಾನ ಮಾಡಿದ್ದಾನಾ? ಅವನು ಈ ತರ ತಪ್ಪು ಮಾಡೋಕೆ ಅವನ ಫ್ರೆಂಡ್ಸ್ ಕಾರಣ ಆಗಿದ್ರೆ ಅವರ ಸಹವಾಸ ಬಿಟ್ಟುಬಿಡೋಕೆ ಮನಸ್ಸು ಮಾಡಿದ್ದಾನಾ? ಅಂತೆಲ್ಲಾ ಯೋಚನೆ ಮಾಡ್ತಾರೆ. ಆದ್ರೆ ತೀರ್ಮಾನ ಮಾಡೋ ಮುಂಚೆ ಅವರು ಪ್ರಾರ್ಥನೆ ಮಾಡ್ತಾರೆ. ನಡೆದಿರೋ ವಿಷಯದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ತಾರೆ. ಬೈಬಲ್ ಇದರ ಬಗ್ಗೆ ಏನು ಹೇಳುತ್ತೆ ಅಂತ ನೋಡ್ತಾರೆ. ತಪ್ಪು ಮಾಡಿದವನ ಮನೋಭಾವ ಹೇಗಿದೆ ಅಂತನೂ ನೋಡ್ತಾರೆ. ಹಿರಿಯರು ಇದನ್ನೆಲ್ಲ ಮಾಡಿದ ಮೇಲೆ ಆ ತಪ್ಪು ಮಾಡಿದ ವ್ಯಕ್ತಿ ಸಭೆಯಲ್ಲಿ ಇರಬೇಕಾ ಬೇಡವಾ ಅಂತ ತೀರ್ಮಾನ ಮಾಡ್ತಾರೆ. ಕೆಲವೊಮ್ಮೆ ಬಹಿಷ್ಕಾರ ಮಾಡ್ತಾರೆ.—1 ಕೊರಿಂ. 5:11-13.
13. ನಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಬಹಿಷ್ಕಾರ ಆದಾಗ ನಮಗೆ ಏನು ಅನಿಸಬಹುದು?
13 ಹಿರಿಯರು ಮಾಡಿದ ತೀರ್ಮಾನ ಸರಿಯಾಗಿದೆ ಅಂತ ನಂಬೋಕೆ ನಮಗೆ ಯಾವಾಗ ಕಷ್ಟ ಆಗುತ್ತೆ? ನಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಬಹಿಷ್ಕಾರ ಆದಾಗ ತುಂಬ ಕಷ್ಟ ಆಗುತ್ತೆ. ‘ಹಿರಿಯರು ಎಲ್ಲಾ ವಿಷಯವನ್ನ ತಿಳಿದುಕೊಂಡೇ ಬಹಿಷ್ಕಾರ ಮಾಡಿದ್ರಾ? ಯೆಹೋವ ದೇವರ ತರ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರಾ?’ ಅಂತ ನಮಗೆ ಅನಿಸಬಹುದು. ಆದ್ರೂ ಹಿರಿಯರು ಮಾಡಿದ್ದೇ ಸರಿ ಅಂತ ನಂಬೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
14. ನಮ್ಮವರಿಗೆ ಬಹಿಷ್ಕಾರ ಆದಾಗ ನಾವು ಏನನ್ನ ಮನಸ್ಸಲ್ಲಿಡಬೇಕು?
14 ಬಹಿಷ್ಕಾರ ಮಾಡೋ ಏರ್ಪಾಡನ್ನ ಮಾಡಿರೋದು ಯೆಹೋವ. ಇದರಿಂದ ಸಭೆಯವರಿಗೂ ಒಳ್ಳೇದಾಗುತ್ತೆ, ತಪ್ಪು ಮಾಡಿದ ವ್ಯಕ್ತಿಗೂ ಪ್ರಯೋಜನ ಆಗಬಹುದು. ಒಂದುವೇಳೆ ತಪ್ಪು ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡದೆ ಇದ್ರೂ ಅವನನ್ನ ಸಭೆಯಲ್ಲಿ ಇಟ್ಟುಕೊಂಡ್ರೆ ಅವನನ್ನ ನೋಡಿ ಬೇರೆಯವರೂ ಹಾಳಾಗ್ತಾರೆ. (ಗಲಾ. 5:9) ಅಷ್ಟೇ ಅಲ್ಲ, ಅಂಥ ವ್ಯಕ್ತಿನ ಬಹಿಷ್ಕಾರ ಮಾಡಲಿಲ್ಲ ಅಂದ್ರೆ ಅವನು ಮಾಡಿದ್ದು ಎಷ್ಟು ದೊಡ್ಡ ತಪ್ಪು ಅಂತ ಅವನಿಗೆ ಗೊತ್ತಾಗಲ್ಲ ಮತ್ತು ಆ ತಪ್ಪನ್ನ ತಿದ್ದಿಕೊಂಡು ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋಕೂ ಪ್ರಯತ್ನ ಮಾಡಲ್ಲ. (ಪ್ರಸಂ. 8:11) ಒಬ್ಬ ವ್ಯಕ್ತಿನ ಬಹಿಷ್ಕಾರ ಮಾಡಬೇಕಾ ಇಲ್ವಾ ಅಂತ ಹಿರಿಯರು ತುಂಬ ಹುಷಾರಾಗಿ, ಜವಾಬ್ದಾರಿಯಿಂದ ತೀರ್ಮಾನ ಮಾಡ್ತಾರೆ ಅಂತ ನಾವು ನಂಬಬಹುದು. ಯಾಕಂದ್ರೆ ಅವರು ಹಿಂದಿನ ಕಾಲದ ನ್ಯಾಯಾಧೀಶರ ತರ “ಮನುಷ್ಯರಿಗೋಸ್ಕರ ಅಲ್ಲ, ಯೆಹೋವನಿಗೋಸ್ಕರ ತೀರ್ಪು” ಮಾಡ್ತಿದ್ದಾರೆ ಅಂತ ಹಿರಿಯರಿಗೆ ಚೆನ್ನಾಗಿ ಗೊತ್ತು.—2 ಪೂರ್ವ. 19:6, 7.
ಯೆಹೋವನನ್ನು ಈಗ ನಂಬಿದ್ರೆ ಮುಂದಕ್ಕೂ ನಂಬ್ತೀವಿ
15. ಯೆಹೋವ ಕೊಡೋ ನಿರ್ದೇಶನವನ್ನ ಈಗಿಂದಾನೇ ಯಾಕೆ ಪಾಲಿಸಬೇಕು?
15 ಅಂತ್ಯ ಹತ್ರ ಇರೋದ್ರಿಂದ ಮುಂಚೆಗಿಂತ ಈಗ ಯೆಹೋವನ ಮೇಲೆ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳಬೇಕು. ಯಾಕಂದ್ರೆ ಮಹಾ ಸಂಕಟ ಬಂದಾಗ ನಮಗೆ ಸಿಗೋ ನಿರ್ದೇಶನಗಳು ವಿಚಿತ್ರ ಅನಿಸಬಹುದು, ಇದನ್ನ ನಮ್ಮಿಂದ ಮಾಡಕ್ಕಾಗಲ್ಲ ಅನಿಸಬಹುದು. ಯೆಹೋವ ದೇವರು ನೇರವಾಗಿ ಮಾತಾಡಲ್ಲ ನಿಜ, ಆದ್ರೆ ತಾನು ನೇಮಿಸಿರೋ ವ್ಯಕ್ತಿಗಳ ಮೂಲಕ ನಮ್ಮ ಜೊತೆ ಮಾತಾಡ್ತಾನೆ. ಆ ಸಮಯದಲ್ಲಿ ಯಾವುದಾದ್ರೂ ನಿರ್ದೇಶನ ಸಿಕ್ಕಾಗ ‘ಅದನ್ನ ಯೆಹೋವನೇ ಹೇಳಿದನಾ ಅಥವಾ ಈ ಸಹೋದರರು ಅವರಿಗೆ ಅನಿಸಿದ್ದನ್ನ, ಅವರಿಗೆ ಇಷ್ಟ ಬಂದಿದ್ದನ್ನ ಹೇಳ್ತಿದ್ದಾರಾ’ ಅಂತೆಲ್ಲಾ ಯೋಚನೆ ಮಾಡಿಕೊಂಡು ಕೂತ್ಕೊಳ್ಳೋಕೆ ಟೈಮ್ ಇರಲ್ಲ. ಆಗ ಏನು ಮಾಡ್ತೀರಾ? ಅದಕ್ಕೇ ನಮಗೆ ಸಿಗೋ ನಿರ್ದೇಶನಗಳನ್ನ ಈಗಿಂದಾನೇ ಪಾಲಿಸಬೇಕು. ನಾವು ಈಗ ಪಾಲಿಸಿದ್ರೆ ಮಹಾ ಸಂಕಟದಲ್ಲೂ ಪಾಲಿಸ್ತೀವಿ.—ಲೂಕ 16:10.
16. ಯೆಹೋವ ನ್ಯಾಯತೀರ್ಪು ಮಾಡುವಾಗ ಆತನನ್ನ ನಂಬೋಕೆ ನಮಗೆ ಯಾಕೆ ಕಷ್ಟ ಆಗಬಹುದು?
16 ಯೆಹೋವ ಈ ಲೋಕಕ್ಕೆ ನ್ಯಾಯತೀರ್ಪು ಮಾಡುವಾಗ ಆತನನ್ನ ನಂಬೋಕೆ ನಮಗೆ ಕಷ್ಟ ಆಗಬಹುದು. ಯಾಕಂದ್ರೆ ನಮ್ಮ ಸಂಬಂಧಿಕರು, ಎಲ್ಲಾ ಜನರು ಯೆಹೋವನ ಬಗ್ಗೆ ತಿಳ್ಕೊಬೇಕು, ಅವರ ಜೀವವನ್ನ ಉಳಿಸಿಕೊಳ್ಳಬೇಕು ಅನ್ನೋದೇ ನಮ್ಮ ಆಸೆ. ಆದ್ರೆ ಅರ್ಮಗೆದೋನ್ನಲ್ಲಿ ಈ ನಿರ್ಧಾರ ಮಾಡೋಕೆ ಯೆಹೋವ ಯೇಸುನ ನೇಮಿಸಿದ್ದಾನೆ. (ಮತ್ತಾ. 25:31-33; 2 ಥೆಸ. 1:7-9) ಯಾರನ್ನ ಉಳಿಸಬೇಕು ಯಾರನ್ನ ಬಿಡಬೇಕು ಅನ್ನೋದು ಯೆಹೋವನ ಕೈಯಲ್ಲಿದೆ, ನಮ್ಮ ಕೈಯಲ್ಲಿಲ್ಲ. (ಮತ್ತಾ. 25:34, 41, 46) ಅಂಥ ಸಮಯದಲ್ಲೂ ಯೆಹೋವ ಮಾಡಿದ ತೀರ್ಮಾನನೇ ಸರಿ ಅಂತ ನಾವು ಒಪ್ಪಿಕೊಳ್ತೀವಾ? ಅಥವಾ ಯೆಹೋವನನ್ನು ಬಿಟ್ಟು ಹೋಗ್ತೀವಾ? ಹಾಗಾಗಿ ನಾವು ಮುಂದೆ ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂದ್ರೆ ಈಗಿಂದಾನೇ ನಂಬಿಕೆ ಇಡೋಕೆ ಕಲಿಬೇಕು.
17. ಮುಂದೆ ಯೆಹೋವ ತಗೊಳ್ಳೋ ತೀರ್ಮಾನದಿಂದ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ?
17 ಯೆಹೋವ ದೇವರು ಈಗಿನ ಸರ್ಕಾರಗಳನ್ನ ನಾಶ ಮಾಡಿ ಹೊಸ ಲೋಕ ತಂದಾಗ ಜೀವನ ಹೇಗಿರುತ್ತೆ ಅಂತ ಯೋಚಿಸಿ. ಆಗ ಸುಳ್ಳುಧರ್ಮ ಇರಲ್ಲ, ಜನರ ಕಷ್ಟನ ಇನ್ನೂ ಜಾಸ್ತಿ ಮಾಡ್ತಿರೋ ಈ ಸರ್ಕಾರ ಮತ್ತು ದುರಾಸೆ ತುಂಬಿರೋ ಆರ್ಥಿಕ ವ್ಯವಸ್ಥೆ ಇರಲ್ಲ. ನಮ್ಮೆಲ್ಲರಿಗೂ ಒಳ್ಳೇ ಆರೋಗ್ಯ ಇರುತ್ತೆ. ಸಾವಿರಲ್ಲ, ಮುದುಕರಾಗಲ್ಲ, ಸೈತಾನ ಮತ್ತು ಅವನ ದೂತರನ್ನ ಸಾವಿರ ವರ್ಷ ಬಂಧಿಸ್ತಾರೆ. ಅವರು ಯೆಹೋವನ ವಿರುದ್ಧ ತಿರುಗಿ ಬಿದ್ದಿದ್ರಿಂದ ಏನೆಲ್ಲಾ ಸಮಸ್ಯೆ ಆಯ್ತೋ ಅದೆಲ್ಲಾ ಸರಿಹೋಗುತ್ತೆ. (ಪ್ರಕ. 20:2, 3) ಯೆಹೋವ ಮಾಡಿದ್ದೇ ಸರಿ ಅಂತ ನಾವು ಈಗ ನಂಬಿಕೆಯಿಟ್ಟಿದ್ದಕ್ಕೆ ಆಗ ನಾವು ಎಷ್ಟು ಸಂತೋಷ ಪಡ್ತೀವಿ ಅಲ್ವಾ?
18. ಇಸ್ರಾಯೇಲ್ಯರಿಂದ ನಮಗೇನು ಪಾಠ? (ಅರಣ್ಯಕಾಂಡ 11:4-6; 21:5)
18 ಹೊಸ ಲೋಕಕ್ಕೆ ಹೋದ ಮೇಲೂ ಯೆಹೋವನ ಮೇಲೆ ನಂಬಿಕೆ ಇಡೋಕೆ ನಮಗೆ ಕಷ್ಟ ಆಗೋ ಪರಿಸ್ಥಿತಿ ಬರಬಹುದು. ಈಜಿಪ್ಟಿನಲ್ಲಿ ದಾಸರಾಗಿದ್ದ ಇಸ್ರಾಯೇಲ್ಯರನ್ನ ಬಿಡಿಸಿಕೊಂಡು ಬಂದಮೇಲೆ ಅವರು ಏನು ಮಾಡಿದ್ರು ಅಂತ ಸ್ವಲ್ಪ ನೆನಪಿಸಿಕೊಳ್ಳಿ. ಅವರು ಈಜಿಪ್ಟಿನಲ್ಲಿ ಸಿಗ್ತಿದ್ದ ರುಚಿರುಚಿಯಾದ ಊಟನ ನೆನಸಿಕೊಂಡು ಯೆಹೋವ ಕೊಟ್ಟ ಮನ್ನವನ್ನ ಚೆನ್ನಾಗಿಲ್ಲ ಅಂತ ದೂರುತ್ತಿದ್ದರು. (ಅರಣ್ಯಕಾಂಡ 11:4-6; 21:5 ಓದಿ.) ಮಹಾ ಸಂಕಟ ಆದಮೇಲೆ ನಾವೂ ಇಸ್ರಾಯೇಲ್ಯರ ತರ ಆಗಿಬಿಡಬಹುದು. ಇಡೀ ಭೂಮಿನ ಪರದೈಸಾಗಿ ಮಾಡೋಕೆ ಎಷ್ಟೆಲ್ಲಾ ಕೆಲಸ ಮಾಡಬೇಕಾಗುತ್ತೆ ಅಂತ ನಮಗೆ ಗೊತ್ತಿಲ್ಲ. ಹಾಗಾಗಿ ಮೊದಮೊದಲು ನಮಗೆ ಜೀವನ ಮಾಡೋಕೆ ಕಷ್ಟ ಆಗಬಹುದು. ಹಾಗಂತ ನಾವು ಯೆಹೋವನನ್ನು ದೂರುತ್ತೀವಾ ಅಥವಾ ಆತನು ಕೊಟ್ಟಿರೋ ವಿಷಯಗಳಿಗೆ ಋಣಿಗಳಾಗಿ ಇರುತ್ತೀವಾ? ಯೆಹೋವ ನಮಗೋಸ್ಕರ ಮಾಡಿರೋ ವಿಷಯಗಳಿಗೆ ನಾವು ಈಗ ಋಣಿಗಳಾಗಿದ್ರೇನೇ ಮುಂದೆನೂ ಋಣಿಗಳಾಗಿರೋಕೆ ಆಗುತ್ತೆ.
19. ಈ ಲೇಖನದಲ್ಲಿ ನಾವೇನು ಕಲಿತ್ವಿ?
19 ಯೆಹೋವ ಏನೇ ಮಾಡಿದ್ರೂ ಅದು ಯಾವಾಗಲೂ ಸರಿಯಾಗೇ ಇರುತ್ತೆ ಅಂತ ನಂಬ್ತೀವಿ. ಅಷ್ಟೇ ಅಲ್ಲ, ಆತನು ನೇಮಿಸಿರೋ ವ್ಯಕ್ತಿಗಳೂ ಎಲ್ಲವನ್ನು ಸರಿಯಾಗೇ ಮಾಡ್ತಾರೆ ಅಂತ ನಂಬಬೇಕು. ಯಾಕಂದ್ರೆ ಯೆಹೋವ ಅವರನ್ನ ನಂಬ್ತಾನೆ. “ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ” ಅಂತ ಪ್ರವಾದಿ ಯೆಶಾಯನಿಂದ ಯೆಹೋವ ಹೇಳಿಸಿದ ಮಾತನ್ನ ನಾವು ಯಾವಾಗಲೂ ನೆನಪಲ್ಲಿ ಇಟ್ಟುಕೊಳ್ಳಬೇಕು.—ಯೆಶಾ. 30:15.
ಗೀತೆ 37 ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ
a ನಾವು ಯೆಹೋವನನ್ನು ಮತ್ತು ಆತನು ನೇಮಿಸಿರೋ ಸಹೋದರರನ್ನ ಯಾಕೆ ನಂಬಬೇಕು ಅಂತ ಈ ಲೇಖನದಲ್ಲಿ ನೋಡೋಣ. ಇದ್ರಿಂದ ಈಗ ನಮಗೆ ಏನೆಲ್ಲಾ ಪ್ರಯೋಜನ ಆಗುತ್ತೆ ಮತ್ತು ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಹೇಗೆ ಸಹಾಯ ಆಗುತ್ತೆ ಅಂತನೂ ನೋಡೋಣ.
b ಹಿರಿಯರು ಕೆಲವು ಸಹೋದರ ಸಹೋದರಿಯರ ಪರಿಸ್ಥಿತಿ ನೋಡಿ ಅವರನ್ನ ಬೇರೆ ಸಭೆಗೆ ನೇಮಿಸದೆ ಇರಬಹುದು. ನವೆಂಬರ್ 2002ರ ನಮ್ಮ ರಾಜ್ಯ ಸೇವೆಯಲ್ಲಿರೋ “ಪ್ರಶ್ನಾ ಚೌಕ” ನೋಡಿ.