ಸೇಡರಿನಿಂದ ರಕ್ಷಣೆಗೆ
“ಮಹಾ ರಕ್ಷಣಾ ಪಾತ್ರೆಯನ್ನು ತೆಗೆದುಕೊಂಡು ಯೆಹೋವನ ನಾಮವನ್ನು ಪ್ರಖ್ಯಾತಿ ಪಡಿಸುವೆನು.”—ಕೀರ್ತನೆ 116:13.
1. ಯಾವ ಸರ್ವ ಸಮಯಗಳ ಜನಪ್ರಿಯ ಹಾಡು ನಿಮ್ಮ ಭವಿಷ್ಯದ ಮೇಲೆ ಪರಿಣಾಮವನ್ನುಂಟು ಮಾಡಬಹುದು?
ನಿಮಗೆ ದೀರ್ಘಾನಂದ ಭವಿಷ್ಯತ್ತನ್ನು ತರುವ ಹಾಡನ್ನು ಕೇಳಲು ನೀವು ಹೇಗೆ ಸಂತೋಷಿಸುವಿರಿ? ವಾಸ್ತವವಾಗಿ, ಇಂಥ ಒಂದು ಹಾಡು ಸರ್ವಕಾಲ ಪ್ರೀತಿಪಾತ್ರ ಹಾಡಾಗಿದೆ. ಆದರೂ, ಈ ಅರ್ಥಗರ್ಭಿತ ಹಾಡನ್ನು ತಿಳಿದು ಅದರಲ್ಲಿ ಆನಂದಿಸಲು ಅನೇಕ ಜನರಿಗಿಂತ ನೀವು ಉತ್ತಮ ಸ್ಥಾನದಲ್ಲಿದ್ದೀರಿ. ಯೆಹೂದ್ಯರು ಅದನ್ನು ಹಾಲೆಲ್ (ಸ್ತುತಿ) ಎಂದು ಕರೆಯುತ್ತಾರೆ. ಕೀರ್ತನೆ 113 ರಿಂದ 118 ನ್ನು ಒಳಗೊಂಡಿರುವ ಇದು ನಮ್ಮನ್ನು “ಹಲ್ಲೆಲೂಯಾ” ಅಥವಾ “ಯಾಹುವನ್ನು ಸ್ತುತಿಸಿ” ಎಂದು ಹಾಡುವಂತೆ ಪ್ರೋತ್ಸಾಹಿಸುತ್ತದೆ.
2. ಈ ಹಾಡನ್ನು ಹೇಗೆ ಉಪಯೋಗಿಸಲಾಗುತ್ತದೆ ಮತ್ತು ಅದು ಸೇಡರಿಗೆ ಹೇಗೆ ಸಂಬಂಧಿತವಾಗಿದೆ?
2 ಯೆಹೂದ್ಯರು ಹಾಲೆಲ್ ಹಾಡನ್ನು ತಮ್ಮ ಪಸ್ಕಾಚರಣೆಯಲ್ಲಿ ಹಾಡುತ್ತಾರೆ. ಈ ಹಾಡುವಿಕೆ, ಪಶುಯಜ್ಞಗಳು ಮಾಡಲ್ಪಡುತ್ತಿದ್ದ ದೇವಾಲಯವೊಂದು ದೇವರಿಗಿದ್ದ ಕಾಲದಿಂದ ಆರಂಭವಾಯಿತೆಂದು ಸ್ಪಷ್ಟವಾಗುತ್ತದೆ. ಇಂದು, ಇದನ್ನು ಯೆಹೂದಿ ಮನೆಗಳಲ್ಲಿ ಪಸ್ಕಾಚರಣೆ ಮತ್ತು ಸೇಡರ್ ಎಂದು ಕರೆಯಲ್ಪಡುವ ಊಟದ ಸಮಯದಲ್ಲಿ ಹಾಡಲಾಗುತ್ತದೆ. ಆದರೆ ಈ ಹಾಡುವವರಲ್ಲಿ, ಕೀರ್ತನೆ 116:13 ರಲ್ಲಿ ಹೇಳಿರುವ “ಮಹಾ ರಕ್ಷಣಾ ಪಾತ್ರೆಯನ್ನು ತೆಗೆದುಕೊಂಡು ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು” ಎಂಬುದರ ನಿಜಾರ್ಥವನ್ನು ತಿಳಿಯುವವರು ಕೇವಲ ಕೊಂಚ ಮಂದಿಯೇ. ಹಾಗಾದರೆ ರಕ್ಷಣೆಯು ಪಸ್ಕಕ್ಕೆ ಏಕೆ ಸಂಬಂಧಿತವಾಗಿದೆ, ಮತ್ತು ನಿಮ್ಮ ರಕ್ಷಣೆ ಇದರಲ್ಲಿ ಸೇರಿರಬಹುದೋ?
ಪಸ್ಕ—ರಕ್ಷಣೆಯ ಉತ್ಸವ
3. ಸೇಡರಿನ ಹಿನ್ನೆಲೆ ಏನು?
3 ಇಸ್ರಾಯೇಲ್ಯರು ಐಗುಪ್ತದಲ್ಲಿ ದಬ್ಬಾಳಿಕೆ ನಡಿಸುತ್ತಿದ್ದ ಫರೋಹನೊಬ್ಬನ ಗುಲಾಮರಾಗಿದ್ದರೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಕೊನೆಗೆ, ಯೆಹೋವನು ತನ್ನ ಜನರನ್ನು ವಿಮೋಚನೆಗೆ ನಡೆಸಲು ಮೋಶೆಯನ್ನೆಬ್ಬಿಸಿದನು. ದೇವರು ಒಂಭತ್ತು ವ್ಯಾಧಿಗಳನ್ನು ಈಜಿಪ್ಟಿನ ಮೇಲೆ ತಂದ ಬಳಿಕ ಮೋಶೆಯು ಹತ್ತನೆಯದನ್ನು ಪ್ರಕಟಿಸಿದನು. ಪ್ರತಿಯೊಂದು ಐಗುಪ್ತ್ಯ ಮನೆಯ ಚೊಚ್ಚಲು ಮಗುವನ್ನು ಯೆಹೋವನು ಕೊಲಲ್ಲಿದ್ದನು. (ವಿಮೋಚನಕಾಂಡ 11:1-10) ಆದರೆ, ಇಸ್ರಾಯೇಲ್ಯರು ಬದುಕಿ ಉಳಿಯಲಿದ್ದರು. ಹೇಗೆ? ಅವರು ಒಂದು ಕುರಿಯನ್ನು ಕೊಯ್ದು ಅದರ ರಕ್ತವನ್ನು ತಮ್ಮ ಬಾಗಿಲ ನಿಲುವು ಮತ್ತು ಹಾಸು ಮರಕ್ಕೆ ಸವರಿ, ಮನೆಯೊಳಗೆ ಕುರಿಮರಿ, ಹುಳಿಯಿಲ್ಲದ ರೊಟ್ಟಿ ಮತ್ತು ಕಹಿಪಲ್ಯವನ್ನು ತಿನ್ನಬೇಕಾಗಿತ್ತು. ಆ ಸೇಡರಿನ ಸಮಯದಲ್ಲಿ ದೇವರು ಅವರ ಚೊಚ್ಚಲ ಮಕ್ಕಳನ್ನು ಕೊಲ್ಲದೆ “ದಾಟಿಹೋಗಲಿದ್ದನು.”—ವಿಮೋಚನಕಾಂಡ 12:1-13.
4, 5. ಪಸ್ಕವು ಅನೇಕರನ್ನು ರಕ್ಷಣೆಗೆ ನಡಿಸಿದ್ದು ಹೇಗೆ? (ಕೀರ್ತನೆ 106:7-10)
4 ಈ ಹತ್ತನೆಯ ವ್ಯಾಧಿಗೆ ಪ್ರತ್ಯುತ್ತರವಾಗಿ ಫರೋಹನು ಮೋಶೆಗೆ ಹೇಳಿದ್ದು: “ನೀವೂ, ಇಸ್ರಾಯೇಲ್ಯರೆಲ್ಲರೂ ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ; ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸಿರಿ.” (ವಿಮೋಚನಕಾಂಡ 12:29-32) ಈ ಇಬ್ರಿಯರೂ, ಅವರೊಂದಿಗೆ ಸಹಾನುಭೂತಿ ತೋರಿಸಿದ “ಬಹುಮಂದಿ” ಅನ್ಯರೂ ಹೊರಟುಹೋದ ಮೇಲೆ ಫರೋಹನು ಮನಸ್ಸು ಬದಲಾಯಿಸಿ ಅವರನ್ನು ಅಟಿಕ್ಟೊಂಡು ಹೋದನು. ದೇವರು ಆಗ ಅದ್ಭುತಕರವಾಗಿ ತನ್ನ ಜನರು ಕೆಂಪು ಸಮುದ್ರದ ಮಧ್ಯೆ ಪಾರಾಗುವಂತೆ ಸಹಾಯ ಮಾಡಿದನು. ಫರೋಹನೂ ಅವನ ಬೆನ್ನಟ್ಟುತ್ತಿದ್ದ ಸೈನ್ಯವೂ ನಾಶವಾದರು.—ವಿಮೋಚನಕಾಂಡ 12:38; 14:5-28; ಕೀರ್ತನೆ 78:51-53; 136:13-15.
5 ಮೋಶೆ ಕೆಂಪು ಸಮುದ್ರದ ಬಳಿ ಇಸ್ರಾಯೇಲ್ಯರಿಗೆ ಹೇಳಿದ್ದು: “ಸುಮ್ಮನೆ ನಿಂತಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ.” ಆ ಬಳಿಕ ಅವರು ಹಾಡಿದ್ದು: “ನನ್ನ ಬಲವೂ ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ. ಆತನನ್ನು ವರ್ಣಿಸುವೆವು.” (ವಿಮೋಚನಕಾಂಡ 14:13; 15:2) ಹೌದು, ಹತ್ತನೆಯ ವ್ಯಾಧಿಯಿಂದ ಮತ್ತು ಕೆಂಪು ಸಮುದ್ರದಿಂದ ಇಸ್ರಾಯೇಲ್ಯರಿಗಾದ ಬಿಡುಗಡೆ ಒಂದು ರಕ್ಷಣೆಯಾಗಿತ್ತು. ಆದುದರಿಂದ ಕೀರ್ತನೆಗಾರನು ಯೋಗ್ಯವಾಗಿಯೇ ಯೆಹೋವನನ್ನು “ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡಿಸಿದಾತ”ನಾದ ದೇವರೆಂದು ವರ್ಣಿಸಿದನು.—ಕೀರ್ತನೆ 68:6, 20; 74:12-14 78:12, 13, 22.
6, 7. ಪಸ್ಕವನ್ನು ಆರಂಭಿಸಿದ್ದೇಕೆ, ಆದರೆ ಪ್ರಥಮ ಪಸ್ಕದಿಂದ ಭಿನ್ನತೆಯುಳ್ಳದ್ದಾಗಿ ಇದು ಇಂದು ಆಚರಿಸಲ್ಪಡುವದೇಕೆ?
6 ಈ ಇಬ್ರಿಯರು ಪಸ್ಕವನ್ನು ರಕ್ಷಣಾಸ್ಮಾರಕವಾಗಿ ಆಚರಿಸಬೇಕಿತ್ತು. ದೇವರಂದದ್ದು: “ಆ ದಿನವು ನಮಗೆ ಜ್ಞಾಪಕಾರ್ಥವಾಗಿರುವುದು. ಅದರಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಮಾಡಬೇಕು. ಅದನ್ನು . . . ತಲತಲಾಂತರಕ್ಕೂ ಆಚರಿಸಬೇಕು.” (ವಿಮೋಚನಕಾಂಡ 12:14) ಪ್ರತಿಯೊಂದು ಪಸ್ಕದೂಟ ಅಥವಾ ಸೇಡರಿನಲ್ಲಿ, ತಂದೆಯು ತನ್ನ ಕುಟುಂಬಕ್ಕೆ ಆ ರಕ್ಷಣೆಯ ಕುರಿತು ಜ್ಞಾಪಕ ಹುಟ್ಟಿಸಬೇಕಾಗಿತ್ತು. ಯೆಹೋವನು ನಿರ್ದೇಶಿಸಿದ್ದು: “ಮುಂದೆ ನಿಮ್ಮ ಮಕ್ಕಳು—ನೀವು ನಡಿಸುವ ಈ ಆಚಾರವೇನೆಂದು ನಿಮ್ಮನ್ನು ಕೇಳುವಾಗ ನೀವು ಅವರಿಗೆ—ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿ ಇಸ್ರಾಯೇಲ್ಯ ಮನೆಗಳನ್ನು ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು ಎಂದು ಹೇಳಬೇಕು.”—ವಿಮೋಚನಕಾಂಡ 12:25-27.
7 ಯೆಹೂದ್ಯರು ಈ ದಿನಗಳ ತನಕವೂ ಪಸ್ಕದ ಸೇಡರನ್ನು ಆಚರಿಸುವುದು ಈ ವೃತ್ತಾಂತದ ಐತಿಹಾಸಿಕತೆಯನ್ನು ದೃಢಪಡಿಸುತ್ತದೆ. ದಿ ಒರಿಜಿನ್ಸ್ ಅಫ್ ಸೇಡರ್ ಪುಸ್ತಕ ಹೇಳುವುದು: “ಬೈಬಲಿನಲ್ಲಿ ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬದ ವಿಷಯ ಸವಿಸ್ತಾರವಾದ ಚರ್ಚೆ ಸೇರಿದೆ. ಆದರೂ ಈ ವರ್ಣನೆ, ಸಮಯಾನಂತರದ ಈ ರಜಾದಿನಾಚರಣೆಗೆ ಹೊಂದಿಕೊಂಡಿರುವುದಿಲ್ಲ. ಬೈಬಲಿನ ಸಂಸ್ಕಾರ, ನಿರ್ದಿಷ್ಟವಾಗಿ, ಪಸ್ಕದ ಯಜ್ಞದ ಮೇಲೆ ಕೇಂದ್ರೀಕರಿಸುತ್ತಾದರೂ ಬೈಬಲಿನ ನಂತರದ ಗ್ರಂಥಗಳಲ್ಲಿ ಇದು ಕೇಂದ್ರ ಸ್ಥಾನವನ್ನು ಹಿಡಿದಿರುವದಿಲ್ಲ.” ಇದಕ್ಕೆ ಮುಖ್ಯ ಕಾರಣ ಪಶುಯಜ್ಞಕ್ಕಾಗಿ ಯೆಹೂದ್ಯರಿಗೆ ಒಂದು ದೇವಾಲಯ ಇಲ್ಲದಿರುವುದೇ.
8. ಪಸ್ಕವನ್ನು ಪರಿಗಣಿಸಲು ಯಾವ ವಿಶೇಷ ಕಾರಣ ನಮಗಿದೆ?
8 ದೇವರು ಪ್ರಾಚೀನ ಇಸ್ರಾಯೇಲ್ಯರಿಗೆ ಕೊಟ್ಟ ಹಬ್ಬಗಳನ್ನು ಕ್ರೈಸ್ತರು ಉಪಯುಕ್ತವಾಗಿ ಅಭ್ಯಾಸಿಸಬಹುದು.a ಆದರೆ ಸದ್ಯ ಈ ಪಸ್ಕದ ಕೆಲವು ಭಾಗಗಳು ನಮ್ಮ ವಿಶೇಷ ಗಮನಕ್ಕೆ ಯೋಗ್ಯವಾಗಿವೆ. ಯೆಹೂದ್ಯನಾಗಿದ್ದ ಯೇಸು ಪಸ್ಕವನ್ನಾಚರಿಸಿದ್ದನು. ಅವನು ಕೊನೆಯ ಸಲ ಅದನ್ನಾಚರಿಸಿದಾಗ ಕ್ರೈಸ್ತರಿಗಿರುವ ಒಂದೇ ದೈವಿಕ ಆಚರಣೆಯಾದ ಕರ್ತನ ಸಂಧ್ಯಾ ಭೋಜನವನ್ನು, ಯೇಸುವಿನ ಮರಣದ ಸ್ಮಾರಕವನ್ನು ಹೇಗೆ ಅಚರಿಸಬೇಕೆಂದು ತೋರಿಸಿದನು. ಹೀಗೆ, ಆ ಕ್ರೈಸ್ತ ಆಚರಣೆ ಆ ಪಸ್ಕಕ್ಕೆ ಸಂಬಂಧಿತವಾಗಿದೆ.
ಪಸ್ಕದ ಕುರಿಮರಿಗಿಂತಲೂ ಹೆಚ್ಚು ಪ್ರಾಮುಖ್ಯ
9, 10. ಪಸ್ಕದ ಕುರಿಮರಿ ವಿಶೇಷವಾದ ಅಥವಾ ಅದ್ವಿತೀಯ ಬಲಿಯಾಗಿದ್ದದ್ದು ಹೇಗೆ?
9 ಇಬ್ರಿಯ 10:1ರಲ್ಲಿ ‘ಧರ್ಮಶಾಸ್ತ್ರವು ಬರಲಿರುವ ಒಳ್ಳೇ ವಿಷಯಗಳ ನೆರಳಾಗಿದೆ’ ಎಂದು ಹೇಳಲಾಗಿದೆ. ಮೆಕ್ಲಿಂಟಕ್ ಮತ್ತು ಸ್ಟ್ರೋಂಗ್ರವರ ಸೈಕ್ಲೊಪೀಡಿಯಾ ಆಫ್ ಬಿಬ್ಲಿಕಲ್, ಥಿಯಾಲಾಜಿಕಲ್ ಆ್ಯಡ್ ಎಕೀಸ್ಲಿಯಾಸಿಕ್ಟಲ್ ಲಿಟ್ರೇಚರ್ ಹೇಳುವುದು: “ಧರ್ಮಶಾಸ್ತ್ರದಲ್ಲಿರುವ ಇನ್ನಾವ ಒಳ್ಳೇ ವಿಷಯಗಳ ನೆರಳೂ ಪಸ್ಕ ಹಬ್ಬದೊಂದಿಗೆ ಸ್ಪರ್ಧಿಸ ಸಾಧ್ಯವಿಲ್ಲ.” ವಿಶೇಷವಾಗಿ, ಪಸ್ಕದ ಕುರಿಮರಿಗೆ, ದೇವರು ಚೊಚ್ಚಲು ಮಕ್ಕಳನ್ನು ಮತ್ತು ಕೊನೆಗೆ ಐಗುಪ್ತದಿಂದ ಇಬ್ರಿಯರನ್ನು ರಕ್ಷಿಸಿದ್ದನ್ನು ಸ್ಮರಿಸುವ ಆಚರಣೆಗೂ ಮೀರಿದ ಅರ್ಥವಿದೆ.
10 ಆ ಕುರಿಮರಿ ಅನೇಕ ವಿಧಗಳಲ್ಲಿ ಅದ್ವಿತೀಯವಾಗಿದೆ. ಉದಾಹರಣೆಗೆ, ಮೋಶೆಯ ಧರ್ಮಶಾಸ್ತ್ರ ಹೇಳಿರುವ ಅನೇಕ ಪ್ರಾಣಿಯಜ್ಞಗಳನ್ನು ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಪಾಪ ಅಥವಾ ಅಪರಾಧಕ್ಕಾಗಿ ಸಮರ್ಪಿಸಿ, ಪ್ರಾಣಿಗಳ ಅಂಶಗಳನ್ನು ಬಲಿಪೀಠದಲ್ಲಿ ಸುಡಬೇಕಾಗಿತ್ತು. (ಯಾಜಕಕಾಂಡ 4:22-35) ಸಮಾಧಾನ ಯಜ್ಞದಲ್ಲಿ ಸ್ವಲ್ಪ ಮಾಂಸವನ್ನು ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ ಅಥವಾ ಇತರ ಯಾಜಕರಿಗೆ ಕೊಡಲಾಗುತಿತ್ತು. (ಯಾಜಕಕಾಂಡ 7:11-38) ಆದರೆ ಪಸ್ಕಲ್ ಅಥವಾ ಪಸ್ಕದ ಕುರಿಮರಿಯನ್ನು ಬಲಿಪೀಠದಲ್ಲಿ ಉಪಯೋಗಿಸಲಾಗುತ್ತಿರಲಿಲ್ಲ. ಇದನ್ನು ಒಂದು ಜನರ ಗುಂಪು, ಸಾಧಾರಣವಾಗಿ ಒಂದು ಕುಟುಂಬವು ಸಮರ್ಪಿಸಿ ಅವರೇ ಅದನ್ನು ತಿನ್ನುತ್ತಿದ್ದರು.—ವಿಮೋಚನಕಾಂಡ 12:4, 8-11.
11. ಪಸ್ಕದ ಕುರಿಮರಿಯ ವಿಷಯದಲ್ಲಿ ಯೆಹೋವನ ದೃಷ್ಟಿಕೋನವೇನಾಗಿತ್ತು ಮತ್ತು ಅದು ಯಾವುದನ್ನು ಸೂಚಿಸಿತು? (ಅರಣ್ಯಕಾಂಡ 9:13)
11 ಯೆಹೋವನು ಪಸ್ಕದ ಕುರಿಮರಿಯನ್ನು ಎಷ್ಟು ಅಮೂಲ್ಯವಾಗಿ ದೃಷ್ಟಿಸಿದನೆಂದರೆ ಆತನು ಅದನ್ನು “ನನ್ನ ಯಜ್ಞ” ಎಂದು ಕರೆದನು. (ವಿಮೋಚನಕಾಂಡ 23:18; 34:25, NW) ತಜ್ಞರು “ಪಸ್ಕಲ್ ಯಜ್ಞ ಸರ್ವೋತ್ಕೃಷ್ಟವಾದ ಯೆಹೋವನ ಯಜ್ಞ” ಎಂದು ಹೇಳಿದ್ದಾರೆ. ಈ ಕುರಿಮರಿಯು ಯೇಸುವಿನ ಯಜ್ಞಕ್ಕೆ ಅಲ್ಲಗಳೆಯಲಾರದ ರೀತಿಯಲ್ಲಿ ಕೈತೋರಿಸಿತು ಅಥವಾ ಸೂಚಿಸಿತು. ಅಪೊಸ್ತಲ ಪೌಲನು ಯೇಸುವನ್ನು “ನಮ್ಮ ಪಸ್ಕದ ಯಜ್ಞದ ಕುರಿಮರಿಯು ಕೊಯಿದದೆ” ಎಂದು ಹೇಳಿದುದರಿಂದ ಇದು ನಮಗೆ ತಿಳಿಯುತ್ತದೆ. (1 ಕೊರಿಂಥದವರಿಗೆ 5:7) ಯೇಸುವನ್ನು “ದೇವರು . . . ನೇಮಿಸಿದ ಕುರಿ” ಮತ್ತು “ವಧಿತನಾದ ಕುರಿ” ಎಂದು ಗುರುತಿಸಲಾಗಿದೆ. —ಯೋಹಾನ 1:29; ಪ್ರಕಟನೆ 5:12; ಅಪೊಸ್ತಲರ ಕೃತ್ಯ 8:32.
ಜೀವ ರಕ್ಷಿಸುವ ರಕ್ತ
12. ಪ್ರಥಮ ಪಸ್ಕದಲ್ಲಿ ಕುರಿಮರಿಯ ರಕ್ತ ಯಾವ ಪಾತ್ರ ವಹಿಸಿತು?
12 ಐಗುಪ್ತದಲ್ಲಿ ಕುರಿಮರಿಯ ರಕ್ತವು ರಕ್ಷಣೆಗೆ ತಿರುಗುಗೂಟವಾಗಿತ್ತು. ಯೆಹೋವನು ಚೊಚ್ಚಲು ಮಕ್ಕಳನ್ನು ಹತಿಸಿದಾಗ ಬಾಗಿಲ ನಿಲುವುಗಳಲ್ಲಿ ರಕ್ತವಿದ್ದ ಮನೆಗಳನ್ನು ದಾಟಿಹೋದನು. ಇದಲ್ಲದೆ, ಇಬ್ರಿಯರಿಗೆ, ತಮ್ಮ ಚೊಚ್ಚಲು ಮಕ್ಕಳ ಮರಣಕ್ಕಾಗಿ ಶೋಕಿಸುವ ಅವಕಾಶವಿಲ್ಲದರಿಂದ ಅವರು ಕೆಂಪು ಸಮುದ್ರವನ್ನು ದಾಟಿ ಸ್ವಾತಂತ್ರ್ಯಕ್ಕೆ ನಡೆದುಹೋಗುವ ಸ್ಥಾನದಲಿದ್ದರು.
13, 14. ಯೇಸುವಿನ ರಕ್ತವು ಹೇಗೆ ಜೀವರಕ್ಷಕವೂ ರಕ್ಷಣೆಗೆ ಆವಶ್ಯಕವೂ ಆಗಿದೆ? (ಎಫೆಸದವರಿಗೆ 1:13)
13 ರಕ್ತ—ಯೇಸುವಿನ ಸುರಿಸಲ್ಪಟ್ಟ ರಕ್ತ—ಇಂದು ಸಹ ರಕ್ಷಣೆಯಲ್ಲಿ ಸೇರಿಕೊಂಡಿದೆ. ಸಾ. ಶ. 32 ರಲ್ಲಿ, “ಯೆಹೂದ್ಯರ ಪಸ್ಕ ಹಬ್ಬವು ಹತ್ತರ” ವಾಗಿದ್ದಾಗ, ಯೇಸು ಒಂದು ದೊಡ್ಡ ಗುಂಪಿಗೆ ಹೇಳಿದ್ದು: “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ.” (ಯೋಹಾನ 6:4, 54, 55) ಆಲಿಸುತ್ತಿದ್ದ ಆ ಎಲ್ಲಾ ಯೆಹೂದ್ಯರ ಮನಸ್ಸಿಗೆ ಬರಲಿಕ್ಕಿದ್ದ ಪಸ್ಕ ಮತ್ತು ಕುರಿಮರಿಯ ರಕ್ತವು ಐಗುಪ್ತದಲ್ಲಿ ಉಪಯೋಗಿಸಲಾಗಿದ್ದ ವಿಷಯವು ಬಂದಿದಿರ್ದಬೇಕು.
14 ಯೇಸು ಆಗ, ಕರ್ತನ ರಾತ್ರಿ ಭೋಜನದಲ್ಲಿ ಉಪಯೋಗಿಸಲಾಗುವ ಚಿಹ್ನಾವಸ್ತುಗಳ ಕುರಿತು ಚರ್ಚಿಸಲಿಲ್ಲ. ಕ್ರೈಸ್ತರಿಗಿರುವ ಆ ಹೊಸ ಆಚರಣೆ ಇನ್ನೊಂದು ವರ್ಷದ ತನಕ ಸ್ಥಾಪಿಸಲ್ಪಡಲಿಲ್ಲ. ಈ ಕಾರಣದಿಂದ, ಸಾ. ಶ. 32 ರ ಯೇಸುವಿನ ಮಾತುಗಳಿಗೆ ಕಿವಿಗೊಟ್ಟ ಅಪೊಸ್ತಲರೂ ಇದರ ವಿಷಯ ಏನೂ ತಿಳಿದಿರಲಿಲ್ಲ. ಆದರೂ ನಿತ್ಯ ರಕ್ಷಣೆಗೆ ತನ್ನ ರಕ್ತ ಅಗತ್ಯವೆಂದು ಯೇಸು ಅಲ್ಲಿ ತೋರಿಸಿದನು. ಪೌಲನು ವಿವರಿಸಿದ್ದು: “ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ.” (ಎಫೆಸದವರಿಗೆ 1:7) ಮತ್ತು ಯೇಸುವಿನ ರಕ್ತದ ಆಧಾರದ ಮೇರೆಗೆ ದೊರೆಯುವ ಪಾಪ ಕ್ಷಮೆಯ ಮೂಲಕ ಮಾತ್ರ ನಾವು ಸದಾಕಾಲ ಜೀವಿಸಬಲ್ಲೆವು.
ಯಾವ ರಕ್ಷಣೆ ಮತ್ತು ಎಲ್ಲಿ?
15. ಐಗುಪ್ತದಲ್ಲಿನ ಇಬ್ರಿಯರಿಗೆ ಯಾವ ರಕ್ಷಣೆ ಮತ್ತು ಸುಯೋಗಗಳ ಸಾಧ್ಯತೆ ಇತ್ತು, ಮತ್ತು ಯಾವುದರ ಸಾಧ್ಯತೆ ಇರಲಿಲ್ಲ? (1 ಕೊರಿಂಥದವರಿಗೆ 10:1-5)
15 ಪುರಾತನ ಐಗುಪ್ತದಲ್ಲಿ ಒಂದು ಪರಿಮಿತ ರಕ್ಷಣೆ ಮಾತ್ರ ನಡೆದಿತ್ತು. ಐಗುಪ್ತವನ್ನು ಬಿಟ್ಟುಹೋದ ಯಾರೂ ನಿರ್ಗಮನವಾದ ಮೇಲೆ ತಮಗೆ ನಿತ್ಯಜೀವ ಕೊಡಲ್ಪಡುತ್ತದೆಂದು ನಿರೀಕ್ಷಿಸಿರಲಿಲ್ಲ. ರಾಷ್ಟ್ರಕ್ಕೆ ಯಾಜಕರಾಗಿ ಲೇವ್ಯರ ನೇಮಕವಾದದ್ದು ನಿಜ. ಆದರೆ ಇವರೆಲ್ಲರೂ ಸಾಯಲಿಕ್ಕಿದ್ದರು. (ಅಪೊಸ್ತಲರ ಕೃತ್ಯ 2:29; ಇಬ್ರಿಯ 7:11, 23, 27) ಐಗುಪ್ತವನ್ನು ಬಿಟ್ಟುಹೋದ “ಬಹುಮಂದಿ ಅನ್ಯ”ರಿಗೆ ಈ ಸುಯೋಗಗಳಿಲ್ಲವಾದರೂ ಅವರು ಇಬ್ರಿಯರೊಂದಿಗೆ ವಾಗ್ದಾನ ದೇಶವನ್ನು ಮುಟ್ಟಿ ಅಲ್ಲಿ ದೇವರನ್ನಾರಾಧಿಸುತ್ತಾ ಮಾಮೂಲಿ ಜೀವನವನ್ನು ನಡಿಸುವುದನ್ನು ನಿರೀಕ್ಷಿಸಬಹುದಾಗಿತ್ತು. ಹೀಗಿದ್ದರೂ, ಯೆಹೋವನ ಕ್ರೈಸ್ತ ಪೂರ್ವದ ಸೇವಕರಿಗೆ, ದೇವರು ಎಲ್ಲಿ ಮಾನವ ಕುಲವು ಜೀವಿಸುವಂತೆ ಉದ್ದೇಶಿಸಿದ್ದನೋ ಆ ಭೂಮಿಯಲ್ಲಿ ಅನಂತ ಜೀವನದಲ್ಲಿ ಅನಂದಿಸುವುದನ್ನು ನಿರೀಕ್ಷಿಸುವಂತೆ ಆಧಾರವಿತ್ತು. ಇದು ಯೇಸು, ಯೋಹಾನ 6:54 ರಲ್ಲಿ ಹೇಳಿರುವ ವಾಗ್ದಾನಕ್ಕೆ ಹೊಂದಿಕೆಯಲ್ಲಿರಲಿಕ್ಕಿತ್ತು.
16. ದೇವರ ಪುರಾತನ ಕಾಲದ ಸೇವಕರು ಯಾವ ರೀತಿಯ ರಕ್ಷಣೆಯನ್ನು ನಿರೀಕ್ಷಿಸಬಹುದಾಗಿತ್ತು?
16 ಭೂಮಿ ವಾಸಿಸಲ್ಪಡಲಿಕ್ಕಾಗಿ ಸೃಷ್ಟಿಸಲ್ಪಟ್ಟಿದೆ ಮತ್ತು ಯಥಾರ್ಥವಂತರು ಅದರಲ್ಲಿ ಸದಾ ಜೀವಿಸುವರೆಂದು ಪ್ರೇರಿತರಾಗಿ ಬರೆಯುವಂತೆ ದೇವರು ತನ್ನ ಕೆಲವು ಪ್ರಾಚೀನ ಸೇವಕರುಗಳನ್ನು, ಉಪಯೋಗಿಸಿದನು. (ಕೀರ್ತನೆ 37:9-11; ಜ್ಞಾನೋಕ್ತಿ 2:21, 22; ಯೆಶಾಯ 45:18) ಆದರೆ ಸಾಯುವಲ್ಲಿ, ಸತ್ಯಾರಾಧಕರು ಇಂಥ ರಕ್ಷಣೆಯನ್ನು ಹೇಗೆ ಪಡೆಯ ಸಾಧ್ಯವು? ದೇವರು ಅವರನ್ನು ಭೂಮಿಯ ಮೇಲೆ ಪುನರ್ಜೀವಿಸುವಂತೆ ಮಾಡಿಯೇ. ದೃಷ್ಟಾಂತಕ್ಕೆ, ಯೋಬನು, ದೇವರು ತನ್ನನ್ನು ಜ್ಞಾಪಿಸಿಕೊಂಡು ಪುನಃ ಜೀವಿಸುವಂತೆ ಕರೆಯುವನು ಎಂಬ ನಿರೀಕ್ಷೆಯಲಿದ್ಲನ್ದು. (ಯೋಬ 14:13-15; ದಾನಿಯೇಲ 12:13) ಹೀಗೆ, ಒಂದು ವಿಧದ ರಕ್ಷಣೆ ಭೂಮಿಯ ಮೇಲೆ ನಿತ್ಯಜೀವಕ್ಕಾಗಿದೆ ಎಂಬದು ಸ್ಪಷ್ಟ .— ಮತ್ತಾಯ 11:11.
17. ಇತರರು ಇನ್ನಾವ ಭಿನ್ನವಾದ ರಕ್ಷಣೆಯನ್ನು ಪಡೆಯಬಹುದೆಂದು ಬೈಬಲು ತೋರಿಸುತ್ತದೆ?
17 ಯೇಸು ಕ್ರಿಸ್ತನು ತನ್ನ ಪುನರುತ್ಥಾನದ ಬಳಿಕ ಎಲ್ಲಿಗೆ ಹೊದನೋ ಆ ಸ್ವರ್ಗ ಜೀವಿತದ ರಕ್ಷಣೆಯೂ ಇದೆ ಎಂದು ಬೈಬಲು ತಿಳಿಸುತ್ತದೆ. “ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ. ದೇವದೂತರೂ ಅಧಿಕಾರಗಳೂ ಮಹತ್ವಗಳೂ ಆತನ ಸ್ವಾಧೀನವಾಗಿವೆ.” (1 ಪೇತ್ರ 3:18, 22; ಎಫೆಸದವರಿಗೆ 1:20-22; ಇಬ್ರಿಯ 9:24) ಆದರೆ ಸ್ವರ್ಗಕ್ಕೆ ಒಯ್ಯಲ್ಪಡುವ ಒಬ್ಬನೇ ಮಾನವನು ಯೇಸುವಾಗಿರಲಿಲ್ಲ. ದೇವರು ಭೂಮಿಯಿಂದ ಸಂಬಂಧಸೂಚಕವಾಗಿ ಚಿಕ್ಕ ಸಂಖ್ಯೆಯಾಗಿರುವ ಇತರರನ್ನೂ ಕರೆದೊಯ್ಯಲು ನಿಶ್ಚಯಿಸಿದ್ದಾನೆ. ಯೇಸು ಅಪೊಸ್ತಲರಿಗೆ ಹೇಳಿದ್ದು: “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ. . . . ನಿಮಗೆ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧ ಮಾಡಿದ ಮೇಲೆ ತಿರುಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹಾ ಇರಬೇಕು.”—ಯೋಹಾನ 14:2, 3.
18. ಸ್ವರ್ಗೀಯ ಜೀವನದ ರಕ್ಷಣೆಯ ಮೇಲೆ ಕೇಂದ್ರೀಕರಿಸಲು ಈಗ ನಮಗೆ ಯಾವ ಕಾರಣವಿದೆ?
18 ಯೇಸುವಿನೊಂದಿಗೆ ಸ್ವರ್ಗೀಯ ಜೀವನಕ್ಕೆ ದೊರೆಯುವ ರಕ್ಷಣೆ ಪ್ರಥಮ ಪಸ್ಕದಲ್ಲಿ ಸೇರಿದ್ದ ಪರಿಮಿತ ರಕ್ಷಣೆಗಿಂತ ಎಷ್ಟೋ ಮಹತ್ವದ್ದಾಗಿದೆ. (2 ತಿಮೊಥಿ 2:10) ಯೇಸು ತನ್ನ ಹಿಂಬಾಲಕರಿಗಾಗಿ ಯಾವುದು ಸ್ವರ್ಗೀಯ ಜೀವನಕ್ಕಾಗಿ ರಕ್ಷಣೆಯನ್ನು ಕೇಂದ್ರವಾಗಿಟ್ಟಿತೋ ಆ ಹೊಸ ಆಚರಣೆಯನ್ನು ಕೊನೆಯ ಕ್ರಮಬದ್ಧ ಸೇಡರ್ ಅಥವಾ ಪಸ್ಕದೂಟದ ಸಾಯಂಕಾಲ ಸ್ಥಾಪಿಸಿದನು. ಅವನು ಅಪೊಸ್ತಲರಿಗೆ, “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಹೇಳಿದನು. (ಲೂಕ 22:19) ಕ್ರೈಸ್ತರು ಈ ಆಚರಣೆಯನ್ನು ಹೇಗೆ ಆಚರಿಸಬೇಕೆಂದು ಪರಿಗಣಿಸುವ ಮೊದಲು ಯಾವಾಗ ಆಚರಿಸಬೇಕೆಂಬದನ್ನು ಪರಿಗಣಿಸೋಣ.
ನೇಮಕವಾದ ಕಾಲ
19. ಪಸ್ಕ ಮತ್ತು ಕರ್ತನ ಸಂಧ್ಯಾ ಭೋಜನವನ್ನು ಒಂದಕ್ಕೊಂದು ಸೇರಿಸಿಕೊಳ್ಳುವದು ನ್ಯಾಯಸಮ್ಮತವೇಕೆ?
19 “ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ” ಎಂದು ಯೇಸು ಹೇಳಿದ್ದನು. (ಲೂಕ 22:15) ಆ ಬಳಿಕ ಅವನು, ತನ್ನ ಹಿಂಬಾಲಕರು ತನ್ನ ಮರಣದ ಸ್ಮಾರಕವಾಗಿ ಆಚರಿಸಬೇಕಾಗಿದ್ದ ಕರ್ತನ ಸಂಧ್ಯಾ ಭೋಜನದ ಹೊರಮೇರೆಯನ್ನು ಕೊಟ್ಟನು. (ಲೂಕ 22:19, 20) ಪಸ್ಕ ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಆದುದರಿಂದ, ಕರ್ತನ ಸಂಧ್ಯಾ ಭೋಜನವೂ ವಾರ್ಷಿಕವಾಗಿ ಆಚರಿಸಲ್ಪಡಬೇಕಾಗಿರುವುದು ಸಮಂಜಸ. ಯಾವಾಗ? ನ್ಯಾಯಸಮ್ಮತವಾಗಿಯೇ, ವಸಂತಕಾಲದಲ್ಲಿ, ಪಸ್ಕದ ಸಮಯದಲ್ಲಿ. ಅಂದರೆ, ಯೇಸು ಶುಕ್ರವಾರ ಮರಣಿಸಿದನೆಂಬ ಕಾರಣದಿಂದ ಯಾವಾಗಲೂ ಶುಕ್ರವಾರವೇ ಆಚರಿಸುವ ಬದಲು (ಯೆಹೂದಿ ಕ್ಯಾಲೆಂಡರಿನಲ್ಲಿ) ನೈಸಾನ್ 14 ಯಾವಾಗ ಬರುತ್ತದೋ ಆ ದಿನ ಆಚರಿಸಬೇಕೆಂದು ಅರ್ಥ.
20. ಯೆಹೋವನ ಸಾಕ್ಷಿಗಳಿಗೆ ನೈಸಾನ್ 14 ರ ಮೇಲೆ ಆಸಕ್ತಿಯೇಕೆ?
20 ಆದುದರಿಂದ ಪೌಲನು, “ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ” ಎಂದು ಬರೆದಾಗ ಆ ನೈಸಾನ್ 14 ನೇ ತಾರೀಕು ಅವನ ಮನಸ್ಸಿನಲ್ಲಿದ್ದಿರಬೇಕು. (1 ಕೊರಿಂಥದವರಿಗೆ 11:26) ಮುಂದಿನ ಎರಡು ಶತಮಾನಗಳಲ್ಲಿ ಅನೇಕ ಕ್ರೈಸ್ತರು ನೈಸಾನ್ 14 ರಂದು ಅದನ್ನು ಆಚರಿಸಿದರು. ಇವರನ್ನು “14 ನೇ” ಎಂಬದಕ್ಕೆ ಲ್ಯಾಟಿನ್ ಭಾಷೆಯಾದ “ಕಾರ್ಟ್ವೊಡೆಸಿಮನ್ಸ್” ಎಂದು ಕರೆಯಲಾಯಿತು. ಮೆಕ್ಲಿಂಟಕ್ ಮತ್ತು ಸ್ಟ್ರೋಂಗ್ ವರದಿ ಮಾಡುವುದು: “ಏಸ್ಯಾ ಮೈನರಿನ ಚರ್ಚುಗಳು ಕರ್ತನ ಮರಣವನ್ನು ನೈಸಾನ್ ತಿಂಗಳ 14 ರಂದು ಬರುವ ದಿನದಲ್ಲಿ ಆಚರಿಸಿದರು. ಆ ದಿನದಲ್ಲಿ, ಸರ್ವ ಪುರಾತನ ಚರ್ಚಿನ ಅಭಿಪ್ರಾಯಕ್ಕನುಸಾರ ಕ್ರೂಶಾರೋಹಣ ನಡೆಯಿತು.” ಇಂದು, ಯೆಹೋವನ ಸಾಕ್ಷಿಗಳು ವಾರ್ಷಿಕವಾಗಿ ನೈಸಾನ್ 14 ರಂದು ಬರುವ ದಿನದಲ್ಲಿ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುತ್ತಾರೆ. ಆದರೆ ಕೆಲವರು, ಈ ದಿನವು ಯೆಹೂದ್ಯರು ಪಸ್ಕವನ್ನು ಆಚರಿಸುವ ದಿನಕ್ಕಿಂತ ಭಿನ್ನವಾಗಿದೆ ಎಂದು ಗಮನಿಸಿದ್ದಾರೆ. ಇದೇಕೆ?
21. ಪಸ್ಕದ ಕುರಿಮರಿಯನ್ನು ಯಾವಾಗ ವಧಿಸಬೇಕಿತ್ತು, ಆದರೆ ಇಂದು ಯೆಹೂದ್ಯರು ಏನು ಮಾಡುತ್ತಾರೆ?
21 ಇಬ್ರಿಯ ದಿವಸವು ಸೂರ್ಯಾಸ್ತಮಾನ (ಸುಮಾರು 6 ಗಂಟೆ) ದಿಂದ ಆರಂಭವಾಗಿ ಮರುದಿನದ ಸೂರ್ಯಾಸ್ತಮಾನದಲ್ಲಿ ಅಂತ್ಯಗೊಳ್ಳುತ್ತದೆ. ಪಸ್ಕದ ಕುರಿಮರಿಯನ್ನು ನೈಸಾನ್ 14 ರಂದು “ಎರಡು ಸಾಯಂಕಾಲಗಳ ಮಧ್ಯೆ” ಕೊಯ್ಯಬೇಕೆಂದು ದೇವರು ಆಜ್ಞಾಪಿಸಿದ್ದನು. (ವಿಮೋಚನಕಾಂಡ 12:6, NW) ಇದು ಯಾವಾಗ? ಆಧುನಿಕ ಯೆಹೂದ್ಯರು ರಬ್ಬಿಗಳ ದೃಷ್ಟಿಕೋನವನ್ನು ಅಪ್ಪಿಕೊಂಡು ಕುರಿಮರಿಯನ್ನು ನೈಸಾನ್ 14 ರ ಅಂತ್ಯ ಸಮೀಪಿಸುವಾಗ ಅಂದರೆ ಸೂರ್ಯನು ಕೆಳಗಿಳಿಯಲು ಆರಂಭಿಸುವಾಗ (ಸುಮಾರು 3 ಗಂಟೆ) ಮತ್ತು ನಿಜ ಸೂರ್ಯಾಸ್ತಮಾನದ ಮಧ್ಯೆ ಕೊಯ್ಯಬೇಕೆಂದು ಹೇಳುತ್ತಾರೆ. ಈ ಕಾರಣದಿಂದ, ಅವರು ತಮ್ಮ ಸೇಡರನ್ನು ಸೂರ್ಯಾಸ್ತಮಾನದ ಮೇಲೆ ಅಂದರೆ ನೈಸಾನ್ 15 ಆರಂಭವಾದ ಮೇಲೆ ಆಚರಿಸುತ್ತಾರೆ.—ಮಾರ್ಕ 1:32.
22. ಯೆಹೂದ್ಯರು ಆಚರಿಸುವ ಪಸ್ಕದ ತಾರೀಕು ಸ್ಮಾರಕ ದಿನದ ತಾರೀಕಿಗಿಂತ ಭಿನ್ನವಾಗುವ ಸಾಧ್ಯತೆ ಇರಲು ಒಂದು ಕಾರಣವೇನು? (ಮಾರ್ಕ 14:17; ಯೋಹಾನ 13:30)
22 ಆದರೆ ಈ ಮಾತುಗಳ ಅರ್ಥವನ್ನು ಭಿನ್ನವಾಗಿ ತಿಳಿಯುವರೇ ನಮಗೆ ಸಕಾರಣವದೆ. ಧರ್ಮೋಪದೇಶಕಾಂಡ 16:6, ಇಸ್ರಾಯೇಲ್ಯರಿಗೆ ಸ್ಪಷ್ಟವಾಗಿ, ಅವರು “ಪಸ್ಕದ ಯಜ್ಞವನ್ನು ಸಾಯಂಕಾಲ, ಸೂರ್ಯಾಸ್ತಮಾನದಲ್ಲಿ ವಧಿಸಬೇಕು” ಎಂದು ಹೇಳಿಯದೆ. (ಜ್ಯೂವಿಷ್ ತನಾಕ್ ಭಾಷಾಂತರ) ಇದು, “ಎರಡು ಸಾಯಂಕಾಲಗಳ ಮಧ್ಯೆ” ಎಂಬದು (ನೈಸಾನ್ 14 ರಂದು ಆರಂಭವಾಗುವ) ಸೂರ್ಯಾಸ್ತಮಾನದಿಂದ ಹಿಡಿದು ನಿಜವಾಗಿ ಕತ್ತಲೆಯಾಗುವ ತನಕ ಇರುವ ನಸುಬೆಳಕನ್ನು ಸೂಚಿಸುತ್ತದೆಂದು ತೋರುತ್ತದೆ. ಪುರಾತನದ ಕಾರೈಟ್ ಯೆಹೂದ್ಯರುb ಇದನ್ನು ಈ ಅರ್ಥದಲ್ಲಿ ತಿಳಿದರು ಮತ್ತು ಸಮಾರ್ಯದವರುc ಇದನ್ನು ಈ ದಿನಗಳ ತನಕವೂ ಇದೇ ಅರ್ಥದಲ್ಲಿ ತಿಳಿಯುತ್ತಾರೆ. ಪಸ್ಕದ ಕುರಿಮರಿ ನೈಸಾನ್ 15 ರಲ್ಲಲ್ಲ, “ನೇಮಕವಾದ ಕಾಲ”ವಾದ ನೈಸಾನ್ 14 ರಲ್ಲಿ ವಧಿಸಲ್ಪಟ್ಟಿತ್ತೆಂಬದನ್ನು ನಾವು ಅಂಗೀಕರಿಸುವುದೇ, ನಮ್ಮ ಸ್ಮಾರಕದಿನ ಹಲವು ಸಲ, ಯೆಹೂದಿ ತಾರೀಕಿಗಿಂತ ಭಿನ್ನವಾಗುವುದಕ್ಕೆ ಒಂದು ಕಾರಣ.—ಅರಣ್ಯಕಾಂಡ 9:2-5.
23. ಇಬ್ರಿಯ ಕ್ಯಾಲೆಂಡರಿಗೆ ತಿಂಗಳುಗಳನ್ನು ಸೇರಿಸುವುದೇಕೆ, ಮತ್ತು ಆಧುನಿಕ ಯೆಹೂದ್ಯರು ಇದನ್ನು ಹೇಗೆ ಸೇರಿಸುತ್ತಾರೆ?
23 ನಮ್ಮ ತಾರೀಕು ಯೆಹೂದ್ಯರ ತಾರೀಕಿಗಿಂತ ಭಿನ್ನವಾಗಿರಲು ಇನ್ನೊಂದು ಕಾರಣವು ಯಾವ ಪದ್ಧತಿ ಸಾ. ಶ. ನಾಲ್ಕನೆಯ ಶತಮಾನದ ತನಕ ಸ್ಥಿರೀಕರಿಸಲ್ಪಡಲಿಲ್ಲವೋ ಆ ಪೂರ್ವ ನಿಶ್ಚಿತ ಕ್ಯಾಲೆಂಡರನ್ನು ಅವರು ಉಪಯೋಗಿಸುವುದರಿಂದಲೇ. ಇದನ್ನು ಉಪಯೋಗಿಸಿ, ಅವರು ನೈಸಾನ್ 1 ಕ್ಕೆ ತಾರೀಕುಗಳನ್ನು ದಶಕ ಅಥವಾ ಶತಕಗಳ ಮುಂಚೆಯೇ ನಿರ್ಣಯಿಸ ಸಾಧ್ಯವಿದೆ. ಇದಲ್ಲದೆ, ಪುರಾತನದ ಚಂದ್ರಮಾನ ಕ್ಯಾಲೆಂಡರಿಗೆ, ಅದು ಋತುಗಳಿಗೆ ಹೊಂದಿಕೊಂಡಿರುವಂತೆ ಮಾಡಲು ಒಮ್ಮೊಮ್ಮೆ 13 ತಿಂಗಳುಗಳನ್ನು ಕೂಡಿಸಲೇ ಬೇಕಾಗುತ್ತಿತ್ತು. ಆದರೆ ಈಗಿನ ಯೆಹೂದಿ ಕ್ಯಾಲೆಂಡರು ಉದಾಹರಣೆಗೆ, 19 ವರ್ಷಗಳ ಒಂದು ಕಾಲಚಕ್ರದಲ್ಲಿ, ಅದನ್ನು 3, 6, 8, 11, 14, 17 ಮತ್ತು 19 ನೇ ವರ್ಷಗಳಿಗೆ ಕೂಡಿಸಲಾಗುತ್ತದೆ.
24, 25. (ಎ)ಯೇಸುವಿನ ಕಾಲದಲ್ಲಿ ತಿಂಗಳುಗಳನ್ನು ಹೇಗೆ ನಿಶ್ಚಯಿಸಲಾಗುತ್ತಿತ್ತು ಮತ್ತು ಅಧಿಕ ಮಾಸಗಳನ್ನು ಹೇಗೆ ನಿರ್ಧರಿಸಲಾಗುತ್ತಿತ್ತು? (ಬಿ) ಕರ್ತನ ಸಂಧ್ಯಾ ಭೋಜನದ ತಾರೀಕು ಯೆಹೋವನ ಸಾಕ್ಷಿಗಳಿಂದ ಹೇಗೆ ಸ್ಥಾಪಿಸಲ್ಪಡುತ್ತದೆ?
24 ಆದರೆ ಇಮಿಲ್ ಶ್ಹೂರರ್ ಹೇಳುವುದು: “ಯೇಸುವಿನ ಕಾಲದಲ್ಲಿ [ಯೆಹೂದ್ಯರಿಗೆ] ಇನ್ನೂ ಒಂದು ನಿಶ್ಚಿತ ಕ್ಯಾಲೆಂಡರ್ ಇರಲಿಲ್ಲ. ಆದರೆ ಅವರು ಕೇವಲ ಅನುಭವಾತ್ಮಕ ಅವಲೋಕನದಿಂದ ಪ್ರತಿ ಹೊಸ ತಿಂಗಳನ್ನು ಅಮಾವಾಸ್ಯೆಯ ಚಂದ್ರನ ತೋರಿಬರುವಿಕೆಯಿಂದ ಮತ್ತು ಇದೇ ರೀತಿಯ ಅವಲೋಕನದಿಂದ ಆರಂಭಿಸಿ” ಬೇಕಾದಂತೆ ತಿಂಗಳನ್ನು ಕೂಡಿಸಿದರು. “ವರ್ಷಾಂತ್ಯದಲ್ಲಿ, ಪಸ್ಕವು ಮೇಘ ಸಂಕ್ರಾಂತಿ (ಸುಮಾರು ಮಾರ್ಚ್ 21) ಗಿಂತ ಮೊದಲು ಬೀಳುತ್ತದೆಂದು ಗಮನಿಸಿದ್ದಲ್ಲಿ ನೈಸಾನಿನ ಮೊದಲು ಅಧಿಕ ಮಾಸವನ್ನು ಕೂಡಿಸಬೇಕೆಂದು ಆಜ್ಞೆ ವಿಧಿಸಲಾಗುತ್ತಿತ್ತು.” (ದಿ ಹಿಸ್ಟರಿ ಆಫ್ ಜ್ಯೂವಿಷ್ ಪೀಪಲ್ ಇನ್ ದ ಏಜ್ ಆಫ್ ಜೀಸಸ್ ಕ್ರೈಸ್ಟ್, ಸಂಪುಟ 1) ಹೀಗೆ, ಅಧಿಕಮಾಸ ಸ್ವಾಭಾವಿಕವಾಗಿ ಬರುತ್ತದೆಯೇ ಹೊರತು ಸ್ವೇಚ್ಛಾನುಸಾರದಿಂದ ಕೂಡಿಸಿ ಅಲ್ಲ.
25 ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿ ಕರ್ತನ ಸಂಧಾ ಭೋಜನದ ತಾರೀಕನ್ನು ಪುರಾತನ ವಿಧಾನಕ್ಕೆ ಅನುಸಾರವಾಗಿ ನಿಶ್ಚಯಿಸುತ್ತದೆ. ಅಮಾವಾಸ್ಯೆಯ ಚಂದ್ರನನ್ನು ವಿಷುವತ್ಸಂಕ್ರಾಂತಿಗೆ ಅತಿ ಸಮೀಪವಾಗಿ ಯೆರೂಸಲೇಮಿನ ಸೂರ್ಯಾಸ್ತಮಾನದಲ್ಲಿ ಯಾವಾಗ ಅವಲೋಕಿಸ ಬಹುದೆಂಬದರ ಮೇಲೆ ಹೊಂದಿಕೊಂಡು ನೈಸಾನ್ 1ನ್ನು ನಿರ್ಣಯಿಸಲಾಗುತ್ತದೆ. ಅಂದಿನಿಂದ 14 ದಿನಗಳನ್ನು ಲೆಕ್ಕಿಸುವಲ್ಲಿ ನೈಸಾನ್ 14 ಬರುತ್ತದೆ. ಮತ್ತು ಈ ದಿನ ಸಾಧಾರಣವಾಗಿ ಹುಣ್ಣಿಮೆಯ ದಿನ. (ವಾಚ್ಟವರ್, ಜೂನ್ 15, 1977, ಪುಟ 383-4 ನೋಡಿ.) ಈ ಬೈಬಲ್ ವಿಧಾನಕ್ಕೆ ಹೊಂದಿಕೊಂಡು, ಈ ವರ್ಷ, ಭೂವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಆ ಸ್ಮಾರಕ ದಿನವನ್ನು ಮಾರ್ಚ್ 30 ಕ್ಕೆ ಸೂರ್ಯಾಸ್ತಮಾನವಾದ ಮೇಲೆ ಆಚರಿಸಬೇಕೆಂದು ಹೇಳಲಾಗಿದೆ.
26. ಕರ್ತನ ಸಂಧ್ಯಾ ಭೋಜನದ ಯಾವ ಹೆಚ್ಚಿನ ವೈಶಿಷ್ಟ್ಯಗಳು ನಮ್ಮ ಗಮನಕ್ಕೆ ಅರ್ಹವಾಗಿವೆ?
26 ಈ ತಾರೀಕು, ಯೇಸು ಯಾವ ದಿವಸ ಕೊನೆಯ ಕ್ರಮಬದ್ಧ ಪಸ್ಕವನ್ನಾಚರಿಸಿದನೋ ಆ ದಿನಕ್ಕೆ ಅನುರೂಪವಾಗಿದೆ. ಆದರೂ ಈ ಸ್ಮಾರಕ ದಿನಾಚರಣೆ ಯೆಹೂದಿ ಸೇಡರ್ ಚಿತ್ರಿಸುವ ರಕ್ಷಣೆಗೂ ಹೆಚ್ಚಿನ ರಕ್ಷಣೆಯನ್ನು ಗಮನಕ್ಕೆ ತರುತ್ತದೆ. ಕರ್ತನ ಸಂಧ್ಯಾ ಭೋಜನದಲ್ಲಿ ಏನು ನಡಿಯುತ್ತದೆ, ಅದರ ಅರ್ಥವೇನು ಮತ್ತು ಇದರಲ್ಲಿ ನಮ್ಮ ರಕ್ಷಣೆ ಹೇಗೆ ಸೇರಿರುತ್ತದೆ ಎಂದು ನಾವೆಲ್ಲರೂ ತಿಳಿಯುವದು ಆವಶ್ಯಕ. (w90 2/15)
[ಅಧ್ಯಯನ ಪ್ರಶ್ನೆಗಳು]
b ಮೆಕ್ಲಿಂಟಕ್ ಮತ್ತು ಸ್ಟ್ರೋಂಗ್ ಇವರನ್ನು “ಯೆಹೂದಿ ಸಭಾಮಂದಿರದ ಅತ್ಯಂತ ಪುರಾತನ ಮತ್ತು ಅತಿ ಗಮನಾರ್ಹ ಪಂಥಗಳಲ್ಲಿ ಒಂದು ಎಂದೂ, ಇವರನ್ನು ಪ್ರತ್ಯೇಕಿಸುವ ಸಿದ್ಧಾಂತವು ಲಿಖಿತ ಶಾಸ್ತ್ರದ ಶಬ್ದಾರ್ಥಕ್ಕೆ ಅವರು ಕಟ್ಟುನಿಟ್ಟಾಗಿ ಅಂಟಿಕೊಳ್ಳುವುದೇ,” ಎಂದೂ ವರ್ಣಿಸುತ್ತಾರೆ.
c “ಅವರು ಸಂಜೆ ಪಶುಗಳನ್ನು ಕೊಯ್ಯುತ್ತಾರೆ . . . ಮಧ್ಯರಾತ್ರಿ ಪ್ರತಿ ಕುಟುಂಬವು ಮಾಂಸ ತಿಂದು . . . ಉಳಿದ ಮಾಂಸ ಎಲುಬುಗಳನ್ನು ಪ್ರಾತಃಕಾಲಕ್ಕೆ ಮುಂಚೆ ಸುಡುತ್ತದೆ. . . . ಕೆಲವು ಪಂಡಿತರು, ಈ ಸಮಾರ್ಯ ಧರ್ಮ, ಬೈಬಲಿನ ಧರ್ಮಗಳನ್ನು ರಬ್ಬಿಗಳ ಯೆಹೂದಿ ಮತ ಪುನಃ ರೂಪಿಸುವುದಕ್ಕೆ ಮೊದಲಿದ್ದ ಧರ್ಮವನ್ನು ಒತ್ತಾಗಿ ಹೋಲಬಹುದೆಂದು ಸೂಚಿಸುತ್ತಾರೆ.”—ದಿ ಒರಿಜಿನ್ಸ್ ಆಫ್ ದ ಸೇಡರ್.
ನೀವು ಹೇಗೆ ಉತ್ತರ ಕೊಡುವಿರಿ?
◻ ಪಸ್ಕವು ಯೋಗ್ಯವಾಗಿಯೇ ಹೇಗೆ ರಕ್ಷಣೆಯೊಂದಿಗೆ ಕೂಡಿಕೊಂಡಿದೆ?
◻ ಯೇಸುವಿನ ಯಜ್ಞವು ಪಸ್ಕದ ಕುರಿಮರಿ ಸಾಧಿಸಿದ್ದಕ್ಕಿಂತ ಹೆಚ್ಚನ್ನು ಹೇಗೆ ಸಾಧಿಸಬಲ್ಲದು?
◻ ಯೇಸುವಿನ ಮೂಲಕ ಯಾವ ರಕ್ಷಣೆ ದೊರೆಯುತ್ತದೆ?
◻ ಯೆಹೋವನ ಸಾಕ್ಷಿಗಳು ಕರ್ತನ ಸಂಧ್ಯಾ ಭೋಜನಕ್ಕೆ ತಕ್ಕ ಸಮಯವನ್ನು ಹೇಗೆ ಸ್ಥಾಪಿಸುತ್ತಾರೆ?