ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಮೇ 1-7
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 32-34
“ಇಸ್ರಾಯೇಲ್ ಪುನಸ್ಥಾಪಿಸಲ್ಪಡುವುದೆಂಬ ಸೂಚನೆ”
it-1 105 ¶2
ಅನಾತೋತ್
ಯೆರೆಮೀಯನು ಸಹ ಅನಾತೋತಿನವನು. ಆದರೆ ಅವನಿಗೆ ‘ತನ್ನ ಸ್ವಂತ ಜನರಲ್ಲಿ ಗೌರವ ಸಿಗಲಿಲ್ಲ.’ ಯೆಹೋವನ ಸತ್ಯ ಸಂದೇಶವನ್ನು ತಿಳಿಸಿದ್ದಕ್ಕಾಗಿ ಅವರು ಅವನ ಪ್ರಾಣಕ್ಕೆ ಹೊಂಚುಹಾಕಿದರು. (ಯೆರೆ 1:1; 11:21-23; 29:27) ಇದರಿಂದಾಗಿ ಯೆಹೋವನು ಆ ಪಟ್ಟಣಕ್ಕೆ ವಿಪತ್ತನ್ನು ಮುಂತಿಳಿಸಿದನು. ಬಾಬೆಲಿನವರು ಆ ಪ್ರದೇಶದ ಮೇಲೆ ದಾಳಿಮಾಡಿದಾಗ ಆ ಕೇಡು ಅವರ ಮೇಲೆ ಬಂತು. (ಯೆರೆ 11:21-23) ಯೆರೂಸಲೇಮಿನ ಪತನಕ್ಕೆ ಮುಂಚೆ ಯೆರೆಮೀಯನು ತನ್ನ ನ್ಯಾಯಬದ್ಧ ಹಕ್ಕಿಗನುಸಾರ ಅನಾತೋತಿನಲ್ಲಿದ್ದ ತನ್ನ ಸೋದರನೆಂಟನ ಆಸ್ತಿಯನ್ನು ಖರೀದಿಸಿದನು. ಇದು ಯೆಹೂದ್ಯರ ಬಂದಿವಾಸದ ನಂತರ ಪುನಃಸ್ಥಾಪನೆ ಆಗಲಿದೆ ಎಂಬುದಕ್ಕೆ ಮುನ್ ಸೂಚನೆಯಾಗಿತ್ತು. (ಯೆರೆ 32:7-9) ಆ ಬಂದಿವಾಸವನ್ನು ಮುಗಿಸಿ ಜೆರುಬ್ಬಾಬೆಲ್ನ ಜೊತೆ ಹಿಂತಿರುಗಿ ಬಂದ ಮೊದಲ ಗುಂಪಿನಲ್ಲಿ ಅನಾತೋತಿನ 128 ಮಂದಿ ಪುರುಷರಿದ್ದರು. ಪುನಃಸ್ಥಾಪನೆಯಾದ ಪಟ್ಟಣಗಳಲ್ಲಿ ಅನಾತೋತ್ ಕೂಡ ಸೇರಿತ್ತು. ಹೀಗೆ ಯೆರೆಮೀಯನ ಪ್ರವಾದನೆ ನೆರವೇರಿತು.—ಎಜ್ರ 2:23; ನೆಹೆ 7:27; 11:32.
jr 152 ¶22-23
“ನನ್ನನ್ನು ಅರಿಯುವದೆಂದರೆ ಇದೇನಾ?”
22 ಯಾರಾದರೂ ಯೋಚಿಸದೆ ಹೇಳುವ ಮಾತುಗಳು ಅಥವಾ ನಡತೆಯು ನಮ್ಮನ್ನು ನೋಯಿಸುವಾಗ ನಾವು ಯೆಹೋವನನ್ನು ಅನುಕರಿಸುತ್ತೇವಾ? ಯೆಹೋವನು ಪುರಾತನ ಯೆಹೂದ್ಯರನ್ನು ಕ್ಷಮಿಸಿದಾಗ ತಾನು ಅವರನ್ನು “ಶುದ್ಧೀಕರಿಸುವೆನು” ಎಂದು ಹೇಳಿದನು. (ಯೆರೆಮೀಯ 33:8 ಓದಿ) ಪಶ್ಚಾತ್ತಾಪ ಪಟ್ಟವರ ತಪ್ಪುಗಳನ್ನು ಪುನಃ ನೆನಪಿಗೆ ತರದಿರುವ ಮೂಲಕ, ತನ್ನ ಸೇವೆಯಲ್ಲಿ ಅವರಿಗೆ ಹೊಸ ಆರಂಭವನ್ನು ಕೊಡುವ ಮೂಲಕ ಯೆಹೋವನು ಅವರನ್ನು ಶುದ್ಧೀಕರಿಸುತ್ತಾನೆ. ದೇವರಿಂದ ಕ್ಷಮೆಯನ್ನು ಹೊಂದುವುದೆಂದರೆ ಅಪರಿಪೂರ್ಣತೆ ಹೋಗಿದೆ ಎಂದಲ್ಲ. ಪರಿಪೂರ್ಣರಾಗಿ, ಪಾಪರಹಿತರು ಆಗುತ್ತೇವೆ ಎಂದರ್ಥವೂ ಅಲ್ಲ. ಆದರೂ ‘ಶುದ್ಧೀಕರಿಸುವೆನು’ ಎಂದು ದೇವರು ಹೇಳಿದ್ದರಲ್ಲಿ ನಮಗೊಂದು ಪಾಠವಿದೆ. ಏನೆಂದರೆ ನಾವು ಸಹ ಇತರರ ತಪ್ಪುಗಳನ್ನು, ದೋಷಗಳನ್ನು ಪುನಃ ನೆನಪಿಗೆ ತರದಂತೆ ಶ್ರಮಿಸಬೇಕು. ಇದು ನಾವು ಪ್ರೀತಿಸುವ ಆ ವ್ಯಕ್ತಿಯ ಭಾವೀನೆಗಳನ್ನು ಸಾಂಕೇತಿಕವಾಗಿ ಶುದ್ಧೀಕರಿಸುವುದಕ್ಕೆ ಸಮಾನವಾಗಿದೆ. ಹೇಗೆ?
23 ನಿಮಗೆ ವಂಶಪಾರಂಪರ್ಯವಾಗಿ ಬಂದ ಒಂದು ಅಮೂಲ್ಯ ಹೂದಾನಿ ನಿಮಗೆ ಉಡುಗೊರೆಯಾಗಿ ಸಿಕ್ಕಿದೆ ಎಂದು ನೆನಸಿ. ಅದಕ್ಕೆ ಕೊಳೆಹತ್ತಿದರೆ ಅಥವಾ ಕಲೆಯಾದರೆ ನೀವದನ್ನು ಕೂಡಲೆ ಬಿಸಾಡಿಬಿಡುವಿರಾ? ಇಲ್ಲ. ಬದಲಾಗಿ ಜಾಗ್ರತೆಯಿಂದ ತೊಳೆದು ಶುದ್ಧೀಕರಿಸುವಿರಿ. ಕಲೆಗಳನ್ನು ಅಥವಾ ಕೊಳೆಯನ್ನು ತೆಗೆದುಹಾಕಲು ಪ್ರಯತ್ನಿಸುವಿರಿ. ಅದು ಸುಂದರವಾಗಿ ಕಾಣಿಸುವಂತೆ, ಬೆಳಕಿನಲ್ಲಿ ಮಿನುಗುವುದನ್ನು ನೋಡುವಂತೆ ಬಯಸುವಿರಿ. ತದ್ರೀತಿಯಲ್ಲಿ, ನಿಮ್ಮ ಮನನೋಯಿಸಿದ ಸಹೋದರ ಅಥವಾ ಸಹೋದರಿಯ ಕಡೆಗಿರುವ ಯಾವುದೇ ಕಹಿಭಾವನೆ ಅಥವಾ ಕೋಪವನ್ನು ತೆಗೆದುಹಾಕಲು ನೀವು ಯಥಾರ್ಥ ಪ್ರಯತ್ನಮಾಡಬೇಕು. ನಿಮಗೆ ನೋವು ಮಾಡಿದ ಅವರ ನಡೆನುಡಿಗಳ ಬಗ್ಗೆ ಯಾವಾಗಲೂ ಯೋಚಿಸುತ್ತಾ ಇರಬಾರದು. ಆ ಭಾವನೆಯನ್ನು ತೆಗೆದುಹಾಕಲು ಹೋರಾಡಬೇಕು. ಆಗ ನೀವು ಯಾರನ್ನು ಕ್ಷಮಿಸಿದ್ದೀರೊ ಅವರ ಬಗ್ಗೆ ಇರುವ ಕಹಿ ಭಾವನೆಗಳನ್ನು ಶುದ್ಧೀಕರಿಸುವಿರಿ. ಕಳೆದು ಹೋದ ಆಪ್ತ ಗೆಳೆತನವು ಪುನಃ ಸಿಗುವುದು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
jr 173 ¶10
ಹೊಸ ಒಡಂಬಡಿಕೆಯಿಂದ ನೀವು ಪ್ರಯೋಜ ಪಡೆಯಬಹುದು
10 ಯೆರೆಮೀಯನು ಬರಲಿದ್ದ ಮೆಸ್ಸೀಯನನ್ನು ದಾವೀದನ “ಮೊಳಿಕೆ” ಎಂದು ಸೂಚಿಸಿದ್ದಾನೆ. ಅದು ಸೂಕ್ತವಾಗಿದೆ. ಯೆರೆಮೀಯನು ಪ್ರವಾದಿಯಾಗಿದ್ದಾಗಲೇ ದಾವೀದನ ರಾಜವಂಶವು ಕಡಿಯಲ್ಪಟ್ಟಿತ್ತು. ಆದರೂ ಅದರ ಬುಡ ನಾಶ ಆಗಲಿಲ್ಲ. ಕಾಲಾನಂತರ ಯೇಸು ರಾಜ ದಾವೀದನ ವಂಶದಲ್ಲಿ ಜನಿಸಿದನು. ಯೇಸುವನ್ನು “ಯೆಹೋವನು ನಮ್ಮ ಸದ್ಧರ್ಮ (ನೀತಿನ್ಯಾಯ)” ಎಂಬ ಹೆಸರಿನಿಂದ ಕರೆಯಸಾಧ್ಯವಿದೆ. ಏಕೆಂದರೆ ಆ ಗುಣದ ಬಗ್ಗೆ ದೇವರಿಗಿದ್ದ ಆಳವಾದ ಚಿಂತನೆಯನ್ನು ಆ ವಚನ ಎತ್ತಿಹೇಳುತ್ತದೆ. (ಯೆರೆಮೀಯ 23:5, 6 ಓದಿ.) ದೇವರು ತನ್ನ ಏಕಜಾತ ಪುತ್ರ ಭೂಮಿಯಲ್ಲಿ ಕಷ್ಟವನ್ನು ಅನುಭವಿಸಿ ಸಾಯುವಂತೆ ಕಳುಹಿಸಿಕೊಟ್ಟನು. ಆ ಮೂಲಕ ದಾವೀದನ ‘ಮೊಳಿಕೆಯ’ ವಿಮೋಚನಾ ಯಜ್ಞದ ಮೌಲ್ಯವನ್ನು ಯೆಹೋವನು ಪಾಪಗಳ ಕ್ಷಮೆಗೆ ಆಧಾರವಾಗಿ ಅನ್ವಯಿಸಸಾಧ್ಯವಿತ್ತು. ಇದು ದೇವರ ನೀತಿನ್ಯಾಯಕ್ಕೆ ಹೊಂದಿಕೆಯಲ್ಲಿತ್ತು. (ಯೆರೆ. 33:15) ಇದು ಕೆಲವು ಮಾನವರನ್ನು “ಜೀವಕ್ಕಾಗಿ ನೀತಿವಂತರೆಂದು” ನಿರ್ಣಯಿಸಲು ಮತ್ತು ಪವಿತ್ರಾತ್ಮದಿಂದ ಅಭಿಷೇಕಿಸಲು ದಾರಿ ತೆರೆಯಿತು. ಹೀಗೆ ಅವರು ಹೊಸ ಒಡಂಬಡಿಕೆಯ ಪಕ್ಷಗಳಾಗಿ ಪರಿಣಮಿಸಿದರು. ಈ ಹೊಸ ಒಡಂಬಡಿಕೆಯ ನೇರ ಭಾಗವಲ್ಲದವರು ಸಹ ಅದರಿಂದ ಪ್ರಯೋಜನ ಪಡೆಯಲು ಸಾಧ್ಯ ಮತ್ತು ಪಡೆಯುವರು ಎಂಬುದು ನೀತಿನ್ಯಾಯದ ಬಗ್ಗೆ ದೇವರಿಗಿರುವ ಆಳವಾದ ಚಿಂತನೆಯ ಇನ್ನೊಂದು ಪುರಾವೆ.—ರೋಮ. 5:18.
ಮೇ 8-14
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 35-38
“ಎಬೆದ್ಮೆಲೆಕ—ಧೈರ್ಯ ಮತ್ತು ದಯೆಗೆ ಉತ್ತಮ ಮಾದರಿ”
it-2 1228 ¶3
ಚಿದ್ಕೀಯ
ಚಿದ್ಕೀಯನು ಅತಿ ದುರ್ಬಲ ರಾಜನಾಗಿದ್ದ ಎನ್ನುವುದು ನಿಜ. ಹೇಗೆಂದರೆ, ಸ್ವಲ್ಪ ಸಮಯದ ಬಳಿಕ ಪ್ರಧಾನರು ಚಿದ್ಕೀಯನ ಬಳಿಗೆ ಬಂದು, ಮುತ್ತಿಗೆ ಹಾಕಲ್ಪಟ್ಟ ಜನರ ನೈತಿಕ ಬಲವನ್ನು ಕುಂದಿಸಿದಕ್ಕಾಗಿ ಯೆರೆಮೀಯನಿಗೆ ಮರಣದಂಡನೆ ವಿಧಿಸಬೇಕೆಂದು ವಿನಂತಿಸಿದರು. ಆಗ ಚಿದ್ಕೀಯನು, “ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ; ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ” ಎಂದನು. ಆದರೂ ಅನಂತರ ಚಿದ್ಕೀಯನು, ಎಬೆದ್ಮೆಲೆಕನು ಮಾಡಿದ ಅರಿಕೆಗೆ ಕಿವಿಗೊಟ್ಟು ಯೆರೆಮೀಯನನ್ನು ಬಾವಿಯಿಂದ ಹೊರಗೆತ್ತಲು ಮೂವತ್ತು ಪುರುಷರನ್ನು ಕರಕೊಂಡು ಹೋಗುವಂತೆ ಅಪ್ಪಣೆಕೊಟ್ಟನು. ತದನಂತರ ಚಿದ್ಕೀಯನು ಇನ್ನೊಮ್ಮೆ ಯೆರೆಮೀಯನನ್ನು ಭೇಟಿಯಾದನು. ಪ್ರವಾದಿಯನ್ನು ತಾನು ಸಾಯಿಸುವುದಿಲ್ಲವೆಂದೂ ಸಾಯಿಸಲು ಹುಡುಕುವವವರ ಕೈಗೂ ಸಿಕ್ಕಿಸಿ ಹಾಕುವುದಿಲ್ಲವೆಂದೂ ಆಶ್ವಾಸನೆಕೊಟ್ಟನು. ಆಗ ಯೆರೆಮೀಯನು ಚಿದ್ಕೀಯನಿಗೆ ಬಾಬೆಲಿನ ಸರದಾರರರಿಗೆ ಶರಣಾಗುವಂತೆ ಹೇಳಿದನು. ಆದರೆ ಯೆಹೂದ್ಯರು ಕಸ್ದೀಯರಿಗೆ ತಿರುಗಿಬಿದ್ದಿದ್ದ ಕಾರಣ ಚಿದ್ಕೀಯನು ಪ್ರತೀಕಾರಕ್ಕೆ ಹೆದರಿದನು. ಅವನು ಯೆರೆಮೀಯನ ಪ್ರೇರಿತ ಬುದ್ಧಿವಾದಕ್ಕೆ ಕಿವಿಗೊಡಲಿಲ್ಲ. ಅದಲ್ಲದೆ ತನ್ನ ಖಾಸಗಿ ಭೇಟಿಯಲ್ಲಿ ತಾನು ಚರ್ಚಿಸಿದ ವಿಷಯವನ್ನು ಸಂಶಯಗ್ರಸ್ತ ಪ್ರಧಾನರಿಗೆ ತಿಳಿಸಬಾರದೆಂದು ಚಿದ್ಕೀಯನು ಯೆರೆಮೀಯನನ್ನು ಕೇಳಿಕೊಂಡನು. ಇದರಿಂದ ಅವನೆಷ್ಟು ಹೆದರಿದ್ದನೆಂದು ಗೊತ್ತಾಗುತ್ತದೆ.—ಯೆರೆ 38:1-28.
w12 5/1 31 ¶2-3
ತನ್ನ ಸೇವೆ ಮಾಡುವವರಿಗೆ ಬಹುಮಾನ ಕೊಡುವವನು
ಎಬೆದ್ಮೆಲೆಕನು ಯಾರು? ಯೆಹೂದದ ರಾಜ ಚಿದ್ಕೀಯನ ಆಸ್ಥಾನದಲ್ಲಿ ಅವನು ಒಬ್ಬ ಅಧಿಕಾರಿಯಾಗಿದ್ದ. ಅಪನಂಬಿಗಸ್ತ ಯೆಹೂದದ ಮೇಲೆ ಬರಲಿದ್ದ ನಾಶನದ ಬಗ್ಗೆ ಎಚ್ಚರಿಸಲು ದೇವರು ಕಳುಹಿಸಿದ್ದ ಯೆರೆಮೀಯನ ಸಮಕಾಲೀನ ಇವನು. ದೇವರಿಗೆ ಭಯಪಡದ ಪ್ರಧಾನರ ಮಧ್ಯೆ ಇದ್ದರೂ ಎಬೆದ್ಮೆಲೆಕನು ದೇವಭಕ್ತನೂ ಯೆರೆಮೀಯನನ್ನೂ ತುಂಬ ಗೌರವಿಸುವವನೂ ಆಗಿದ್ದನು. ದುಷ್ಟ ಪ್ರಧಾನರು ಯೆರೆಮೀಯನ ಮೇಲೆ ದೇಶದ್ರೋಹಿ ಎಂಬ ಸುಳ್ಳಾರೋಪವನ್ನು ಹೊರಿಸಿ ಅವನನ್ನು ಸಾಯಿಸಲು ಕೆಸರಿನ ಗುಂಡಿಗೆ ದೂಡಿದಾಗ ಎಬೆದ್ಮೆಲೆಕನ ದೇವಭಕ್ತಿಯ ಗುಣಗಳು ಹೊರಬಂದವು. (ಯೆರೆಮೀಯ 38:4-6) ಎಬೆದ್ಮೆಲೆಕನು ಏನು ಮಾಡಿದನು?
ಪ್ರಧಾನರ ಪ್ರತೀಕಾರದ ಭಯವನ್ನು ಮೆಟ್ಟಿನಿಂತು ಎಬೆದ್ಮೆಲೆಕನು ಧೈರ್ಯದಿಂದ ಕ್ರಿಯೆಗೈದನು. ಯೆರೆಮೀಯನಿಗಾದ ಅನ್ಯಾಯವನ್ನು ಪ್ರತಿಭಟಿಸಲು ಚಿದ್ಕೀಯನನ್ನು ನೇರವಾಗಿ ಭೇಟಿಯಾದನು. ಒಳಸಂಚುಗಾರರಿಗೆ ಕೈತೋರಿಸಿಯೊ ಎಂಬಂತೆ, “ಇವರು ಪ್ರವಾದಿ ಯೆರೆಮೀಯನಿಗೆ ಮಾಡಿದ್ದೆಲ್ಲ ದುಷ್ಟಕಾರ್ಯವೇ ಸರಿ” ಎಂದು ಅರಸನಿಗೆ ಹೇಳಿದನು. (ಯೆರೆಮೀಯ 38:9) ಎಬೆದ್ಮೆಲೆಕನಿಗೆ ಯಶಸ್ಸು ಸಿಕ್ಕಿತು. ಚಿದ್ಕೀಯನ ಅಪ್ಪಣೆಯ ಮೇರೆಗೆ 30 ಪುರುಷರನ್ನು ಕರಕೊಂಡು ಹೋಗಿ ಯೆರೆಮೀಯನನ್ನು ಕಾಪಾಡಿದನು.
w12 5/1 31 ¶4
ತನ್ನ ಸೇವೆ ಮಾಡುವವರಿಗೆ ಬಹುಮಾನ ಕೊಡುವವನು
ಎಬೆದ್ಮೆಲೆಕನು ಈಗ ಇನ್ನೊಂದು ಒಳ್ಳೇ ಗುಣವಾದ ದಯೆಯನ್ನು ತೋರಿಸಿದನು. ಅವನು ಕೋಣೆಯಿಂದ “ಜೀರ್ಣವಾದ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು ಬಾವಿಯೊಳಗೆ ಹಗ್ಗಗಳಿಂದ ಯೆರೆಮೀಯನಿಗೆ ಮುಟ್ಟಿಸಿದನು.” ಬಟ್ಟೆಯ ಆ ಹರಕು ಚಿಂದಿಪಂದಿಗಳೇಕೆ? ಯೆರೆಮೀಯನನ್ನು ಆ ಆಳವಾದ ಕೆಸರಿನ ಗುಂಡಿಯಿಂದ ಮೇಲಕ್ಕೆ ಎತ್ತುವಾಗ ಆತನ ಕಂಕುಳಿನ ಚರ್ಮಕ್ಕೆ ಹಾನಿಯಾಗದಂತೆ.—ಯೆರೆಮೀಯ 38:11-13.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 759
ರೇಕಾಬ್ಯರು
ಯೆಹೋವನು ಅವರು ತೋರಿಸಿದ ಗೌರವಭರಿತ ವಿಧೇಯತೆಯನ್ನು ಮೆಚ್ಚಿದನು. ಒಬ್ಬ ಮಾನವ ತಂದೆಗೆ ಅವರು ತೋರಿಸಿದ ವಿಧೇಯತೆಗೂ ಯೆಹೂದ್ಯರು ತಮ್ಮ ನಿರ್ಮಾಣಿಕನಿಗೆ ತೋರಿಸಿದ ಅವಿಧೇಯತೆಗೂ ಎಷ್ಟು ಅಜಗಜಾಂತರ! (ಯೆರೆ 35:12-16) ಯೆಹೋವನು ರೇಕಾಬ್ಯರಿಗೆ ಈ ಪ್ರತಿಫಲದಾಯಕ ವಾಗ್ದಾನ ಕೊಟ್ಟನು: “ರೇಕಾಬನ ಮಗನಾದ ಯೋನದಾಬನ ಸಂತಾನದವರೊಳಗೆ ನನ್ನ ಸಮ್ಮುಖ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು.”—ಯೆರೆ 35:19.
ಮೇ 15-21
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 39-43
“ಯೆಹೋವನು ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವನು”
it-2 1228 ¶4
ಚಿದ್ಕೀಯ
ಯೆರೂಸಲೇಮಿನ ಪತನ. ಕೊನೆಗೆ (ಕ್ರಿ.ಪೂ. 607 ರಲ್ಲಿ) “ಚಿದ್ಕೀಯನ ಆಳಿಕೆಯ ಹನ್ನೊಂದನೆಯ ವರುಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿವಸ” ಯೆರೂಸಲೇಮ್ ಪತನಗೊಂಡಿತು. ಅದೇ ರಾತ್ರಿಯಲ್ಲಿ ಚಿದ್ಕೀಯನೂ ಅವನ ಸೈನಿಕರೂ ಪಲಾಯನಗೈದರು. ಕಸ್ದೀಯರು ಚಿದ್ಕೀಯನನ್ನೂ ಅವನ ಸೈನಿಕರನ್ನೂ ಬೆನ್ನಟ್ಟಿದರು ಮತ್ತು ಯೆರಿಕೋ ಬಯಲಿನಲ್ಲಿ ಚಿದ್ಕೀಯನನ್ನು ಹಿಡಿದು ರಿಬ್ಲದಲ್ಲಿದ್ದ ನೆಬೂಕದ್ನೆಚ್ಚರನ ಬಳಿಗೆ ಕರತಂದರು. ಚಿದ್ಕೀಯನ ಗಂಡುಮಕ್ಕಳನ್ನು ಅವನ ಕಣ್ಣೆದುರಲ್ಲೇ ಕೊಲ್ಲಲಾಯಿತು. ಆ ಸಮಯದಲ್ಲಿ ಚಿದ್ಕೀಯನು ಕೇವಲ 32 ಪ್ರಾಯದವನಾಗಿದ್ದರಿಂದ ಅವನ ಮಕ್ಕಳು ಚಿಕ್ಕವರಾಗಿದ್ದಿರಬಹುದು. ತನ್ನ ಗಂಡುಮಕ್ಕಳ ಕೊಲೆಯನ್ನು ನೋಡಿದ ಬಳಿಕ ಚಿದ್ಕೀಯನ ಕಣ್ಣುಗಳನ್ನು ಕಿತ್ತು, ಅವನಿಗೆ ಬೇಡಿಹಾಕಿ ಬಂಧಿಸಿ ಬಾಬೆಲಿಗೆ ಒಯ್ದರು. ಅವನು ಅಲ್ಲಿ ಬಂದಿಯಾಗಿರುವಾಗಲೇ ಸತ್ತನು.—2ಅರ 25:2-7; ಯೆರೆ 39:2-7; 44:30; 52:6-11; ಹೋಲಿಸಿ ಯೆರೆ 24:8-10; ಯೆಹೆ 12:11-16; 21:25-27.
w12 5/1 31 ¶5
ತನ್ನ ಸೇವೆ ಮಾಡುವವರಿಗೆ ಬಹುಮಾನ ಕೊಡುವವನು
ಎಬೆದ್ಮೆಲೆಕನು ಮಾಡಿದ್ದನ್ನು ಯೆಹೋವನು ಗಮನಿಸಿದನು. ಆತನು ಅದನ್ನು ಮೆಚ್ಚಿದನಾ? ಯೆಹೂದದ ನಾಶವು ಬಂದೇ ಬರುವುದೆಂದು ಯೆರೆಮೀಯನ ಮೂಲಕ ದೇವರು ಎಬೆದ್ಮೆಲೆಕನಿಗೆ ತಿಳಿಸಿದನು. ಬಳಿಕ ದೇವರು ಅವನಿಗೆ ‘ರಕ್ಷಣೆಯು ಖಂಡಿತವಾಗಿ ಆಗುವುದೆಂದು ಆಶ್ವಾಸನೆ ಕೊಟ್ಟನು’ ಎಂದು ಒಬ್ಬ ವಿದ್ವಾಂಸ ಹೇಳಿದ್ದಾನೆ. ಯೆಹೋವನು ಹೇಳಿದ್ದು, ‘ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು . . . ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವದಿಲ್ಲ. ನೀನು ಖಡ್ಗಕ್ಕೆ ತುತ್ತಾಗದೆ ಅದರ ಬಾಯೊಳಗಿಂದ ನಿನ್ನ ಪ್ರಾಣವನ್ನು ಸೆಳಕೊಂಡು ಹೋಗುವಿ.’ ಎಬೆದ್ಮೆಲೆಕನನ್ನು ಕಾಪಾಡುವೆನೆಂದು ಯೆಹೋವನು ಹೇಳಿದ್ದೇಕೆ? ಯೆಹೋವನೇ ಹೇಳಿದ್ದು, “ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು.” (ಯೆರೆಮೀಯ 39:16-18) ಎಬೆದ್ಮೆಲೆಕನು ಕ್ರಿಯೆಗೈದದ್ದು ಯೆರೆಮೀಯನ ಬಗ್ಗೆ ಕಾಳಜಿಯಿಂದ ಮಾತ್ರವಲ್ಲ ಯೆಹೋವನಲ್ಲಿ ಅವನಿಗಿದ್ದ ದೃಢಭರವಸೆ ಮತ್ತು ನಂಬಿಕೆಯಿಂದಲೂ ಎಂದು ಆತನಿಗೆ ಗೊತ್ತಿತ್ತು.
it-2 482
ನೆಬೂಜರದಾನ
ನೆಬೂಕದ್ನೆಚ್ಚರನ ಅಪ್ಪಣೆಯ ಮೇರೆಗೆ ನೆಬೂಜರದಾನನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದನು. ಅವನನ್ನು ದಯೆಯಿಂದ ಉಪಚರಿಸಿ, ಬೇಕಾದದನ್ನು ಆರಿಸಿಕೊಳ್ಳುವಂತೆ ಬಿಟ್ಟನು, ಅವನನ್ನು ನೋಡಿಕೊಳ್ಳುವೆನೆಂದೂ ಹೇಳಿದನು. ಅವನಿಗೆ ಆಹಾರ ವಸ್ತುಗಳನ್ನೂ ಒದಗಿಸಿದನು. ನೆಬೂಜರದಾನನು ಬಾಬೆಲಿನ ಅರಸನ ಪರವಾಗಿ ಕಾರ್ಯನಡಿಸಿ ಯೆಹೂದದಲ್ಲಿ ಉಳಿದ ಜನರ ಮೇಲೆ ಗೆದಲ್ಯನನ್ನು ರಾಜ್ಯಪಾಲನಾಗಿಯೂ ನೇಮಿಸಿದನು, (2ಅರ 25:22; ಯೆರೆ 39:11-14; 40:1-7; 41:10) ಸುಮಾರು ಐದು ವರ್ಷದ ಬಳಿಕ ಅಂದರೆ ಕ್ರಿ.ಪೂ. 602 ರಲ್ಲಿ ನೆಬೂಜರದಾನನು ಪ್ರಾಯಶಃ ಸುತ್ತಲಿನ ಪ್ರದೇಶಗಳಿಗೆ ಪಲಾಯನಗೈದಿದ್ದ ಬೇರೆ ಯೆಹೂದ್ಯರನ್ನೂ ಹಿಡಿದು ಸೆರೆಗೊಯ್ದನು.—ಯೆರೆ 52:30.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 463 ¶4
ಕಾಲಗಣನೆ
ಯೆರೂಸಲೇಮಿಗೆ ಕೊನೆಯ ಮುತ್ತಿಗೆಯು ಹಾಕಲ್ಪಟ್ಟದ್ದು ಚಿದ್ಕೀಯನ ಆಳಿಕೆಯ 9ನೆಯ ವರ್ಷದಲ್ಲಿ. (ಕ್ರಿ.ಪೂ. 609) ಅದು ನಾಶವಾದದ್ದು ಅವನ ಆಳಿಕೆಯ 11ನೆಯ ವರ್ಷದಲ್ಲಿ (ಕ್ರಿ.ಪೂ. 607 ರಲ್ಲಿ). ಇದು ನೆಬೂಕದ್ನೆಚ್ಚರನ ಆಳಿಕೆಯ 19ನೆಯ ವರ್ಷಕ್ಕೆ (ಸಿಂಹಾಸನವೇರಿದ ಕ್ರಿ.ಪೂ. 625 ರಿಂದ ಲೆಕ್ಕಿಸುವಾಗ) ಸರಿಬೀಳುತ್ತದೆ. (2ಅರ 25:1-8) ಆ ವರ್ಷದ ಐದನೆ ತಿಂಗಳಲ್ಲಿ (ಅಬೀಬ್ ತಿಂಗಳು, ಜುಲೈ–ಆಗಸ್ಟ್ ತಿಂಗಳುಗಳ ನಡುವೆ) ಪಟ್ಟಣಕ್ಕೆ ಬೆಂಕಿಯಿಡಲಾಯಿತು, ಗೋಡೆಗಳನ್ನು ಕೆಡವಲಾಯಿತು, ಹೆಚ್ಚಿನವರನ್ನು ಬಂದಿವಾಸಿಗಳಾಗಿ ಒಯ್ಯಲಾಯಿತು. “ದೇಶದ ಜನರಲ್ಲಿ ಕೇವಲ ಬಡವರನ್ನು” ಬಿಟ್ಟುಹೋಗಲಾಯಿತು. ಈ ಜನರು ನೆಬೂಕದ್ನೆಚ್ಚರನು ನೇಮಿಸಿದ ರಾಜ್ಯಪಾಲ ಗೆದಲ್ಯನು ಕೊಲೆಯಾಗುವ ತನಕ ಅಲ್ಲೇ ಉಳಿದು ಅನಂತರ ಐಗುಪ್ತಕ್ಕೆ ಓಡಿಹೋದರು. ಹೀಗೆ ಕೊನೆಗೆ ಯೆಹೂದವು ಸಂಪೂರ್ಣವಾಗಿ ಬರೀದಾಯಿತು. (2ಅರ 25:9-12, 22-26) ಇದು ನಡೆದದ್ದು ಏಳನೆಯ ತಿಂಗಳಾದ ಎತಿನಿಮ್ (ಅಥವಾ ತಿಶ್ರಿಯಲ್ಲಿ, ಸೆಪ್ಟಂಬರ್-ಅಕ್ಟೋಬರ್ ತಿಂಗಳ ನಡುವೆ). ಹೀಗೆ ಯೆಹೂದದ 70 ವರ್ಷಗಳ ಬರೀದಾಗುವಿಕೆಯ ಲೆಕ್ಕ ಕ್ರಿ.ಪೂ. 607 ಅಕ್ಟೋಬರ್ 1 ರ ಸುಮಾರಿಗೆ ಆರಂಭಿಸಿ ಕ್ರಿ.ಪೂ. 537 ಕ್ಕೆ ಕೊನೆಗೊಳ್ಳುತ್ತದೆ. ಕ್ರಿ.ಪೂ. 537 ನೇ ವರ್ಷದ 7 ನೇ ತಿಂಗಳೊಳಗೆ ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದ ಯೆಹೂದ್ಯರ ಮೊದಲ ಗುಂಪು ಸ್ವದೇಶವಾದ ಯೆಹೂದಕ್ಕೆ ಹಿಂತಿರುಗಿ ಬಂತು. ಅದು ದೇಶ ಸಂಪೂರ್ಣವಾಗಿ ಬರೀದಾಗಿ ಹೋಗಿ 70 ವರ್ಷಗಳು ಕಳೆದ ನಂತರವೇ.—2ಪೂರ್ವ 36:21-23; ಎಜ್ರ 3:1.
ಮೇ 22-28
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 44-48
“ಮಹಾಪದವಿಯನ್ನು ನಿರೀಕ್ಷಿಸಬೇಡ”
jr 104-105 ¶4-6
ನಿನಗೋಸ್ಕರ “ಮಹಾಪದವಿಯನ್ನು ನಿರೀಕ್ಷಿಸಬೇಡ”
4 ಬಾರೂಕನ ಚಿಂತೆಗೆ ಕಾರಣ ಅವನು ಘನಮಾನ ಕೀರ್ತಿಗಳನ್ನು ಪಡೆಯಲು ಬಯಸಿದ್ದೇ ಆಗಿರಬಹುದು. ಬಾರೂಕನಿಗೆ ಯೆರೆಮೀಯನು ಹೇಳಿದ ಮಾತುಗಳನ್ನು ಬರೆಯುವ ಕೆಲಸವಿತ್ತು. ಆದರೂ ಅವನು ಯೆರೆಮೀಯನ ಲೇಖಕ ಅಥವಾ ವೈಯಕ್ತಿಕ ಕಾರ್ಯದರ್ಶಿ ಮಾತ್ರವೇ ಆಗಿದ್ದಿರಲಿಕ್ಕಿಲ್ಲ. ಯೆರೆಮೀಯ 36:32 ರಲ್ಲಿ ಬಾರೂಕನನ್ನು “ಲೇಖಕ” (ಕಾರ್ಯದರ್ಶಿ, NW) ಎಂದು ಹೇಳಿದೆ. ಪುರಾತನ ವಸ್ತು ಶಾಸ್ತ್ರದ ಪುರಾವೆಯು ಅರಸನ ಆಸ್ಥಾನದಲ್ಲಿ ಅವನೊಬ್ಬ ಮೇಲಧಿಕಾರಿಯಾಗಿದ್ದನೆಂದು ಸೂಚಿಸುತ್ತದೆ. ವಾಸ್ತವದಲ್ಲಿ ಯೆಹೂದದ ಪ್ರಧಾನರಲ್ಲಿ ಒಬ್ಬನಾಗಿದ್ದ ‘ಎಲೀಷಾಮನಿಗೆ’ ಸಹ “ಲೇಖಕ” ಎಂಬ ಅದೇ ಹುದ್ದೆಯಿತ್ತು. ಇದು, ಎಲೀಷಾಮನ ಜೊತೆಕೆಲಸಗಾರ ಬಾರೂಕನಿಗೆ ಸಹ “ಅರಮನೆಯಲ್ಲಿ ಲೇಖಕನ ಕೋಣೆಗೆ” ಪ್ರವೇಶವಿತ್ತೆಂದು ಸೂಚಿಸುತ್ತದೆ. (ಯೆರೆ. 36:11, 12, 14) ಹಾಗಾಗಿ ಬಾರೂಕನು ಅರಸನ ಅರಮನೆಯಲ್ಲಿ ಒಬ್ಬ ಸುಶಿಕ್ಷಿತ ಅಧಿಕಾರಿಯಾಗಿದ್ದಿರಬೇಕು. ಅವನ ಸೋದರನಾದ ಸೆರಾಯನು ಅರಸ ಚಿದ್ಕೀಯನ ಸರಬರಾಯಿ ಕಾರುಬಾರಿಯಾಗಿದ್ದು, ಅರಸನೊಂದಿಗೆ ಮಹತ್ವದ ಕೆಲಸಕ್ಕಾಗಿ ಬಾಬೆಲಿಗೆ ಪ್ರಯಾಣ ಮಾಡಿದ್ದನು. (ಯೆರೆಮೀಯ 51:59 ಓದಿ.) ಸರಬರಾಯಿ ಕಾರುಬಾರಿಯಾಗಿದ್ದ ಸೆರಾಯನು ಅರಸನಿಗೆ ಪ್ರಯಾಣಕ್ಕೆ ಬೇಕಾದ ಸಂಗ್ರಹಗಳನ್ನು, ವಸತಿಯನ್ನು ಪ್ರಾಯಶಃ ಏರ್ಪಡಿಸುತ್ತಿದ್ದನು. ಇದು ಉನ್ನತಾಧಿಕಾರಿಯ ಕೆಲಸ ನಿಶ್ಚಯ.
5 ಮೇಲಧಿಕಾರ ನಡಿಸುವುದು ರೂಢಿಯಾಗಿರುವ ಒಬ್ಬನಿಗೆ ಯೆಹೂದದ ವಿರುದ್ಧವಾಗಿ ಪದೇ ಪದೇ ತೀರ್ಪಿನ ಸಂದೇಶವನ್ನು ಬರೆಯುತ್ತಾ ಇರುವುದು ಬೇಸರಿಕೆ ಹುಟ್ಟಿಸುವ ವಿಷಯ ಎಂಬದನ್ನು ನಾವು ಅರ್ಥಮಾಡಿಕೊಳ್ಳಬಹುದು. ವಾಸ್ತವದಲ್ಲಿ ದೇವರ ಪ್ರವಾದಿಗೆ ಬೆಂಬಲ ಕೊಟ್ಟಿರುವುದು ಬಾರೂಕನ ಕೆಲಸವನ್ನು ಮತ್ತು ಉನ್ನತ ಹುದ್ದೆಯನ್ನು ಅಪಾಯಕ್ಕೆ ಹಾಕಿರಲೂಬಹುದು. ಅಲ್ಲದೆ, ಯೆರೆಮೀಯ 45:4 ರಲ್ಲಿ ನಾವು ಓದುವಂತೆ, ಒಂದುವೇಳೆ ಯೆಹೋವನು ತಾನು ಕಟ್ಟಿದ್ದನ್ನು ತಾನೇ ಕೆಡವಿಹಾಕಿದರೆ ಆಗುವ ಫಲಿತಾಂಶಗಳನ್ನು ಯೋಚಿಸಿರಿ. ಬಾರೂಕನು ನಿರೀಕ್ಷಿಸಿದ ಮಹಾ ಪದವಿಗಳು ಅಂದರೆ ಅರಸನ ಅರಮನೆಯಲ್ಲಿ ಹೆಚ್ಚಿನ ಸ್ಥಾನಮಾನ ಅಥವಾ ಪ್ರಾಪಂಚಿಕ ಸಂಪತ್ತು ಎಲ್ಲವೂ ಆಗ ವ್ಯರ್ಥವಾಗಿ ಹೋಗುತ್ತಿತ್ತಲ್ಲಾ. ತೀರ್ಪಿಗೊಳಗಾದ ಆ ಕಾಲದ ಯೆಹೂದಿ ವ್ಯವಸ್ಥೆಯಲ್ಲಿ ಭದ್ರವಾದ ಸ್ಥಾನಮಾನಗಳನ್ನು ಬಾರೂಕನು ನಿರೀಕ್ಷಿಸಿದ್ದಾದರೆ ಅವನನ್ನು ಆ ಭಾವನೆಗಳಿಂದ ತಡೆದಿಡಲು ದೇವರಿಗೆ ಸಕಾರಣಗಳಿದ್ದವು.
6 ಇನ್ನೊಂದು ಕಡೆ ಬಾರೂಕನ ‘ಮಹಾ ಪದವಿಗಳಲ್ಲಿ’ ಪ್ರಾಪಂಚಿಕ ಐಶ್ವರ್ಯ ಸಹ ಕೂಡಿದ್ದಿರಬಹುದು. ಯೆಹೂದದ ಸುತ್ತಲಿನ ಜನಾಂಗಗಳು ಐಶ್ವರ್ಯ ಆಸ್ತಿಪಾಸ್ತಿಗಳ ಮೇಲೆ ಬಹಳವಾಗಿ ಆತುಕೊಂಡಿದ್ದರು. ಮೋವಾಬ್ ತನ್ನ “ಧನರಾಶಿಯಲ್ಲಿ” ಭರವಸೆಯಿಟ್ಟಿತ್ತು. ಅಮ್ಮೋನ್ ಕೂಡ ಹಾಗೆಯೇ ಮಾಡಿತ್ತು. ಬಾಬೆಲನ್ನು “ಧನಭರಿತಪುರಿ” ಎಂದು ಯೆರೆಮೀಯನು ವರ್ಣಿಸುವಂತೆ ಯೆಹೋವನು ಹೇಳಿದ್ದನು. (ಯೆರೆ 48:1, 7; 49:1, 4; 51:1, 13) ಆದರೆ ಅವು ದೇವರ ಶಾಪಕ್ಕೆ ಗುರಿಯಾಗಿದ್ದ ದೇಶಗಳಾಗಿದ್ದವು.
jr 103 ¶2
ನಿನಗೋಸ್ಕರ “ಮಹಾಪದವಿಯನ್ನು ನಿರೀಕ್ಷಿಸಬೇಡ”
2 “ನನ್ನ ಗತಿಯನ್ನು ಏನು ಹೇಳಲಿ. ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ” ಎಂದು ಬಾರೂಕನು ಮರುಗಿದನು. ನಾವೂ ಕೆಲವೊಮ್ಮೆ ಇಂಥ ಬಳಲಿಕೆಯ ಮಾತುಗಳನ್ನು ಗಟ್ಟಿಯಾಗಿ ಇಲ್ಲವೆ ಮನಸ್ಸಿನಲ್ಲೇ ಅಂದುಕೊಂಡಿರಬಹುದು. ಬಾರೂಕನು ಅದನ್ನು ಹೇಗೆಯೇ ಮಾಡಿದ್ದಿರಲಿ ಯೆಹೋವನು ಅದನ್ನು ಆಲಿಸುತ್ತಿದ್ದನು. ಬಾರೂಕನನ್ನು ಅಷ್ಟು ದುಃಖಪಡಿಸಿದ್ದು ಯಾವುದು ಎಂದು ಹೃದಯದ ಪರೀಕ್ಷಕನಾದ ಯೆಹೋವನಿಗೆ ಗೊತ್ತಿತ್ತು. ಯೆರೆಮೀಯನ ಮೂಲಕ ದೇವರು ಬಾರೂಕನನ್ನು ದಯೆಯಿಂದ ತಿದ್ದಿದನು. (ಯೆರೆಮೀಯ 45:1-5 ಓದಿ.) ಬಾರೂಕನು ಅಷ್ಟು ಬಳಲಿಹೋದದ್ದು ಯಾಕೆಂದು ನೀವು ಸಹ ಯೋಚಿಸಿರಬಹುದು. ಅವನಿಗೆ ದೊರೆತ ನೇಮಕದಿಂದಾಗಿ ಹಾಗೆ ಮಾಡಿದನಾ ಅಥವಾ ಅದನ್ನು ನಿರ್ವಹಿಸಲು ಅಲ್ಲಿದ್ದ ಕಷ್ಟದ ಪರಿಸ್ಧಿತಿಗಳಿಂದಾಗಿ ಮಾಡಿದನಾ? ಅವನ ಭಾವನೆಗಳು ನಿಜವಾಗಿಯೂ ಹೃದಯದಿಂದ ಉಕ್ಕೇರಿದವು. ಬಾರೂಕನು “ಮಹಾಪದವಿಯನ್ನು ನಿರೀಕ್ಷಿಸಿದ್ದನು.” ಅವು ಯಾವುವು? ದೇವರ ಸಲಹೆ ಮತ್ತು ಮಾರ್ಗದರ್ಶನವನ್ನು ಅವನು ಸ್ವೀಕರಿಸಿದರೆ ಅವನಿಗೆ ಯೆಹೋವನು ಯಾವ ಆಶ್ವಾಸನೆಕೊಡುತ್ತಿದ್ದನು? ಬಾರೂಕನ ಅನುಭವದಿಂದ ನಾವು ಯಾವ ಪಾಠ ಕಲಿಯಬಹುದು?
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 430
ಕೆಮೋಷ್
ಪ್ರವಾದಿಯಾದ ಯೆರೆಮೀಯನು ಮೋವಾಬಿಗೆ ಬರುವ ವಿಪತ್ತನ್ನು ಮುಂತಿಳಿಸುತ್ತ ಮೋವಾಬಿನ ಮುಖ್ಯ ದೇವರಾದ ಕೆಮೋಷ್ ಮತ್ತು ಅವನ ಯಾಜಕರೂ ಪ್ರಧಾನರೂ ಬಂದಿವಾಸಿಗಳಾಗಿ ಹೋಗುವರೆಂದು ಸೂಚಿಸಿದನು. ಮೋವಾಬ್ಯರು ತಮ್ಮ ದೇವರ ಶಕ್ತಿಹೀನತೆಯಿಂದಾಗಿ ನಾಚಿಕೆಗೆ ಗುರಿಯಾಗುವರು. ಹೇಗೆ ಹತ್ತು ಕುಲಗಳ ರಾಜ್ಯವಾದ ಇಸ್ರಾಯೇಲ್ ಬೆತೆಲಿನಲ್ಲಾದ ಬಸವನ ಆರಾಧನೆಯಿಂದಾಗಿ ನಾಚಿಕೆಗೆ ಗುರಿಯಾದರೋ ಹಾಗೆ.—ಯೆರೆ 48:7, 13, 46.
it-2 422 ¶2
ಮೋವಾಬ್
ಮೋವಾಬಿನ ಕುರಿತ ಪ್ರವಾದನೆಗಳ ಸತ್ಯವಾದ ನೆರವೇರಿಕೆಯನ್ನು ಅಲ್ಲಗಳೆಯಸಾಧ್ಯವಿಲ್ಲ. ಶತಮಾನಗಳ ಹಿಂದೆ ಮೋವಾಬ್ಯರ ಇಡೀ ಜನಾಂಗವೇ ಹಾಳಾಗಿ ಇನ್ನು ಜನಾಂಗವೆನಿಸಲಿಲ್ಲ. (ಯೆರೆ 48:42) ಇಂದು ಮೋವಾಬ್ಯ ನಗರಗಳೆನಿಸಿದ ನೇಬೋ, ಹೆಷ್ಬೋನ್, ಅರೊಯೇರ್, ಬೆತ್-ಗಮೂಲ್, ಬಾಳ್-ಮಿಯೋನ್ ಹೇಳಹೆಸರಿಲ್ಲದೆ ಹೋಗಿದೆ. ಇತರ ಅನೇಕ ಸ್ಥಳಗಳು ಕೂಡ ಅಜ್ಞಾತವಾಗಿವೆ.
ಮೇ 29–ಜೂನ್ 4
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 49-50
“ಯೆಹೋವನು ದೀನರನ್ನು ಆಶೀರ್ವದಿಸಿ ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ”
it-1 54
ಹಗೆ, ವಿರೋಧ
ದೇವಜನರು ಅಪನಂಬಿಗಸ್ತರಾದಾಗ ಅವರ ವಿರೋಧಿಗಳು ಅವರನ್ನು ಸದೆಬಡಿದು ಸೋಲಿಸುವಂತೆ ದೇವರು ಬಿಟ್ಟನು. (ಕೀರ್ತ 89:42; ಪ್ರಲಾ 1:5, 7, 10, 17; 2:17; 4:12) ಶತ್ರುಗಳು ಈ ವಿಜಯವನ್ನು ತಪ್ಪಾಗಿ ಅರ್ಥಮಾಡಿಕೊಂಡರು. ತಮಗೆ ಪ್ರಾಶಸ್ತ್ಯವನ್ನು ಕೊಟ್ಟುಕೊಂಡು ತಮ್ಮ ದೇವರುಗಳನ್ನು ಸ್ತುತಿಸಿದರು ಅಥವಾ ಯೆಹೋವನ ಜನರನ್ನು ಬಾಧಿಸಿದ್ದಕ್ಕಾಗಿ ತಮಗೆ ಶಿಕ್ಷೆ ಸಿಗುವುದಿಲ್ಲ ಎಂದು ನೆನಸಿದರು. (ಧರ್ಮೋ 32:27; ಯೆರೆ 50:7) ಆದ್ದರಿಂದ ಯೆಹೋವನು ಹಾಗೆ ಕೊಚ್ಚಿಕೊಂಡ ಗರ್ವಿಷ್ಠ ವಿರೋಧಿಗಳನ್ನು ತಗ್ಗಿಸಲೇಬೇಕಾಯಿತು. (ಯೆಶಾ 1:24; 26:11; 59:18; ನಹೂ 1:2) ಇದನ್ನು ಆತನು ತನ್ನ ಪವಿತ್ರ ನಾಮಕ್ಕೋಸ್ಕರವಾಗಿ ಮಾಡಿದನು.—ಯೆಶಾ 64:2; ಯೆಹೆ 36:21-24.
jr 161 ¶15
“ಯೆಹೋವನು ಅಂದುಕೊಂಡಿದ್ದನ್ನೇ ಮಾಡಿದನು”
15 ಐಗುಪ್ತವನ್ನು ಸೋಲಿಸಿದ ಬಾಬೆಲಿನ ಅಂತ್ಯವನ್ನು ಸಹ ಯೆರೆಮೀಯನು ಪ್ರವಾದಿಸಿದನು. ಅದು ಸಂಭವಿಸುವುದಕ್ಕೆ 100 ವರ್ಷಕ್ಕೆ ಮುಂಚಿತವಾಗಿ ಬಾಬೆಲು ಥಟ್ಟನೆ ಬಿದ್ದುಹೋಗುವುದೆಂದು ಯೆರೆಮೀಯನು ನಿಖರವಾಗಿ ಮುಂತಿಳಿಸಿದನು. ಹೇಗೆ? ಬಾಬೆಲಿಗೆ ಸಂರಕ್ಷಣೆ ನೀಡುತ್ತಿದ್ದ ನೀರು ‘ಬತ್ತಿಹೋಗುವುದೆಂದು’ ಮತ್ತು ಅದರ ಶೂರರು ಯುದ್ಧ ಮಾಡುವುದಿಲ್ಲವೆಂದು ದೇವರ ಪ್ರವಾದಿಯಾದ ಯೆರೆಮೀಯನು ಮುಂತಿಳಿಸಿದನು. (ಯೆರೆ 50:38; 51:30) ಈ ಪ್ರವಾದನೆಗಳ ಒಂದೊಂದು ವಿವರ ಸಹ ನೆರವೇರಿತು. ಮೇದ್ಯ ಮತ್ತು ಪಾರಸೀಯರು ಯೂಫ್ರೇಟಿಸ್ ನದಿಯ ದಿಕ್ಕನ್ನು ಬದಲಾಯಿಸಿದರು ಮತ್ತು ನದಿತಳದಲ್ಲಿ ನಡೆದುಹೋಗಿ ಪಟ್ಟಣವನ್ನು ಪ್ರವೇಶಿಸಿದರು. ದಿಢೀರೆಂದು ಬಾಬೆಲಿನವರನ್ನು ಸುತ್ತವರಿದು ಸೋಲಿಸಿದರು. ಆ ಪಟ್ಟಣವು ಜನನಿವಾಸವಿಲ್ಲದ ಬರಡು ಭೂಮಿಯಾಗುವುದು ಎಂದು ಮುಂತಿಳಿಸಿಲಾದ ವಿಷಯ ಕೂಡ ಗಮನಾರ್ಹವಾಗಿದೆ. (ಯೆರೆ 50:39; 51:26) ಒಮ್ಮೆ ಬಲಾಢ್ಯ ದೇಶವಾಗಿದ್ದ ಬಾಬೆಲ್ ಈ ದಿನದ ವರೆಗೂ ನಿರ್ಜನವಾಗಿದೆ. ಯೆಹೋವನ ಪ್ರವಾದನೆ ಸತ್ಯವೆಂಬುದಕ್ಕೆ ಇದು ರುಜುವಾತಾಗಿದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 94 ¶6
ಅಮ್ಮೋನಿಯರು
3 ನೇ ತಿಗ್ಲತ್ ಫಿಲ್ಸರ್ನಿಂದ ಮತ್ತು ಅವನ ಉತ್ತರಾಧಿಕಾರಿಗಳಲ್ಲಿ ಒಬ್ಬನಿಂದ ಇಸ್ರಾಯೇಲಿನ ಉತ್ತರ ರಾಜ್ಯದವರ ಗಡಿಪಾರನ್ನು ಹಿಂಬಾಲಿಸಿ (2ಅರ 15:29; 17:6) ಅಮ್ಮೋನಿಯರು ಗಾದನ ಕುಲದ ಪ್ರದೇಶವನ್ನು ವಶಪಡಿಸಿಕೊಳ್ಳಲು ತೊಡಗಿದರು. ಅದಕ್ಕಾಗಿ ಈ ಹಿಂದೆ ಅವರು ಯೆಪ್ತಾಹನ ವಿರುದ್ಧವಾಗಿ ಯುದ್ಧಮಾಡಿ ಸೋತಿದ್ದರು. (ಕೀರ್ತ 83:4-8 ಹೋಲಿಸಿ.) ಹೀಗೆ ಯೆರೆಮೀಯನ ಮೂಲಕ ಯೆಹೋವನು ಮುಂತಿಳಿಸಿದ ಪ್ರವಾದನೆಗೆ ಅನುಸಾರ ಅಮ್ಮೋನಿಯರು ಗಾದ್ಯರ ಸ್ವಾಸ್ಥ್ಯವನ್ನು ಆಕ್ರಮಿಸಿದ್ದಕ್ಕಾಗಿ ಗದರಿಸಲ್ಪಟ್ಟರು ಮತ್ತು ಅಮ್ಮೋನ್ ದೇಶವು ನಿರ್ಜನವಾಗಿ, ಅದರ ದೇವರಾದ ಮಲ್ಕಾಮನು ನಾಶವಾಗುವನೆಂದು ಎಚ್ಚರಿಸಲಾಯಿತು. (ಯೆರೆ 49:1-5) ಅಮ್ಮೋನಿಯರು ಇನ್ನೂ ಮುಂದುವರಿದು ಯೆಹೂದ ರಾಜ್ಯದ ಅಂತಿಮ ವರ್ಷಗಳಲ್ಲಿ ರಾಜ ಯೆಹೋಯಾಕೀಮನನ್ನು ಪೀಡಿಸಲು ಸುಲಿಗೆಯ ಗುಂಪುಗಳನ್ನು ಕಳುಹಿಸಿದರು.—2ಅರ 24:2, 3.
jr 163 ¶18
“ಯೆಹೋವನು ಅಂದುಕೊಂಡಿದ್ದನ್ನೇ ಮಾಡಿದನು”
18 ಕ್ರಿ.ಶ. 1 ನೇ ಶತಮಾನದಲ್ಲಿ ಇನ್ನೊಂದು ಪ್ರವಾದನೆ ಕೂಡ ನೆರವೇರಿತು. ಬಾಬೆಲಿನವರ ಆಕ್ರಮಣದಿಂದ ಎದೋಮ್ ಕಷ್ಟವನ್ನು ಅನುಭವಿಸುವುದು ಎಂದು ಯೆರೆಮೀಯನ ಮೂಲಕ ದೇವರು ಮುಂತಿಳಿಸಿದನು. (ಯೆರೆ. 25:15-17, 21; 27:1-7) ಆದರೆ ದೇವರ ಮಾತು ಅದಕ್ಕಿಂತಲೂ ಹೆಚ್ಚನ್ನು ಹೇಳಿತು. ಏನೆಂದರೆ ಸೋದೋಮ್ ಗೊಮೋರ ಪಟ್ಟಣಗಳಂತೆ ಎದೋಮ್ ಆಗುವುದೆಂದು ಮುಂತಿಳಿಸಿತು. ಇದರ ಅರ್ಥವೇನೆಂದು ನಿಮಗೆ ಗೊತ್ತಿದೆ. ಸದಾಕಾಲ ನಿರ್ಜನ ಪ್ರದೇಶವಾಗಿದ್ದು ಅಸ್ತಿತ್ವದಲ್ಲೇ ಇಲ್ಲದೆ ಹೋಗುವುದು. (ಯೆರೆ. 49:7-10, 17, 18) ಅದೇ ರೀತಿ ಸಂಭವಿಸಿತು. ಎದೋಮ್ ಮತ್ತು ಎದೋಮ್ಯರ ಹೆಸರು ಇಂದು ನಾವು ಎಲ್ಲಿಯಾದರೂ ಕಾಣುತ್ತೇವೋ? ಯಾವುದೇ ಆಧುನಿಕ ನಕ್ಷೆಯಲ್ಲಿ ನೋಡುತ್ತೇವೋ? ಇಲ್ಲ. ಅವು ಮುಖ್ಯವಾಗಿ ಪುರಾತನ ಪುಸ್ತಕಗಳಲ್ಲಿ, ಬೈಬಲಿನ ಇತಿಹಾಸದಲ್ಲಿ, ಆ ಕಾಲದ ನಕ್ಷೆಗಳಲ್ಲಿ ಮಾತ್ರ ಕಂಡುಬರುತ್ತವೆ. ಫ್ಲೇವಿಯಸ್ ಜೊಸೀಫಸನು ತಿಳಿಸುವ ಪ್ರಕಾರ ಎದೋಮ್ಯರು ಕ್ರಿ.ಪೂ. 2 ನೇ ಶತಮಾನದಲ್ಲಿ ಯೆಹೂದಿ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಲ್ಪಟ್ಟರು. ಆ ಬಳಿಕ ಕ್ರಿ.ಶ. 70 ರಲ್ಲಿ ಯೆರೂಸಲೇಮ್ ನಾಶವಾದಾಗ ಅವರ ಇಡೀ ಜನಾಂಗ ನಶಿಸಿಹೋಯಿತು.