-
ದುರಭಿಮಾನದ ಪರಿಣಾಮ ಅವಮಾನವೇ!ಕಾವಲಿನಬುರುಜು—2000 | ಆಗಸ್ಟ್ 1
-
-
16. ಯಾವ ರೀತಿಯಲ್ಲಿ ಸೌಲನು ಅಸಹನೆಯುಳ್ಳ ವ್ಯಕ್ತಿಯಾಗಿದ್ದನು?
16 ಆದರೂ, ಸಮಯಾನಂತರ ಸೌಲನ ವಿನಯಶೀಲತೆಯು ಕಣ್ಮರೆಯಾಯಿತು. ಒಮ್ಮೆ ಫಿಲಿಷ್ಟಿಯರೊಂದಿಗೆ ಯುದ್ಧ ಮಾಡುತ್ತಿದ್ದಾಗ, ಅವನು ಗಿಲ್ಗಾಲಿಗೆ ಹಿಂದಿರುಗಿದನು. ದೇವರಿಗೆ ಸರ್ವಾಂಗಹೋಮವನ್ನು ಸಮರ್ಪಿಸಲಿಕ್ಕಾಗಿ ಸಮುವೇಲನು ಅಲ್ಲಿಗೆ ಬರುವ ತನಕ ಸೌಲನು ಅವನಿಗಾಗಿ ಕಾಯಬೇಕಾಗಿತ್ತು. ನಿಗದಿತ ಸಮಯಕ್ಕೆ ಸಮುವೇಲನು ಬರದಿದ್ದಾಗ, ದುರಹಂಕಾರದಿಂದ ಸೌಲನು ತಾನೇ ಹೋಗಿ ಸರ್ವಾಂಗಹೋಮವನ್ನು ಸಮರ್ಪಿಸಿದನು. ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. “ಇದೇನು ನೀನು ಮಾಡಿದ್ದು”? ಎಂದು ಸಮುವೇಲನು ಕೇಳಿದನು. ಸೌಲನು ಉತ್ತರಿಸಿದ್ದು: “ಜನರು ಚದರಿಹೋಗುವದನ್ನೂ ನೀನು ನಿಯಮಿತಕಾಲದಲ್ಲಿ ಬಾರದಿರುವದನ್ನೂ . . . ನೋಡಿ . . . ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವದಕ್ಕೆ ಮುಂಗೊಂಡೆನು.”—1 ಸಮುವೇಲ 13:8-12.
17. (ಎ) ಮೇಲುನೋಟಕ್ಕೆ ಸೌಲನ ಕೃತ್ಯವು ಏಕೆ ನ್ಯಾಯಯುತವಾಗಿ ಕಂಡುಬರಬಹುದು? (ಬಿ) ಸೌಲನು ಅಸಹನೆಯಿಂದ ಮಾಡಿದ ಕೃತ್ಯಕ್ಕಾಗಿ ಯೆಹೋವನು ಅವನನ್ನು ಏಕೆ ಆಕ್ಷೇಪಿಸಿದನು?
17 ಮೇಲುನೋಟಕ್ಕೆ ಸೌಲನ ಕೃತ್ಯವು ನ್ಯಾಯಯುತವಾಗಿ ಕಂಡುಬರಬಹುದು. ಏಕೆಂದರೆ ದೇವಜನರಾಗಿದ್ದ ಇಸ್ರಾಯೇಲ್ಯರ ಮೇಲೆ ‘ಕೇಡು ಬಂದಿತ್ತು,’ ಅವರು “ಇಕ್ಕಟ್ಟಿನಲ್ಲಿದ್ದರು” ಮತ್ತು ತಮ್ಮ ಹತಾಶ ಸನ್ನಿವೇಶವನ್ನು ನೋಡಿ ಅವರು ಭಯದಿಂದ ನಡುಗುತ್ತಿದ್ದರು. (1 ಸಮುವೇಲ 13:6, 7) ಅಷ್ಟುಮಾತ್ರವಲ್ಲ, ಕೆಲವೊಮ್ಮೆ ಕೆಲವು ಸನ್ನಿವೇಶಗಳಲ್ಲಿ ಒಂದು ಕೆಲಸವನ್ನು ಮಾಡಲು ಮುನ್ನೆಜ್ಜೆಯಿಡುವುದು ನಿಜವಾಗಿಯೂ ತಪ್ಪಾಗಿರುವುದಿಲ್ಲ.d ಆದರೂ, ಯೆಹೋವನು ನಮ್ಮ ಹೃದಯಗಳನ್ನು ಓದಬಲ್ಲನು ಮತ್ತು ನಮ್ಮ ಅಂತರಂಗದ ಉದ್ದೇಶಗಳನ್ನು ಗ್ರಹಿಸಬಲ್ಲನು ಎಂಬುದು ನಿಮಗೆ ನೆನಪಿರಲಿ. (1 ಸಮುವೇಲ 16:7) ಆದುದರಿಂದ, ಆತನು ಸೌಲನ ಮನಸ್ಸಿನಲ್ಲಿದ್ದ ಕೆಲವು ಭಾವನೆಗಳನ್ನು ನೇರವಾಗಿ ನೋಡಿದ್ದಿರಬಹುದು. ಆದರೆ ಈ ಬೈಬಲ್ ವೃತ್ತಾಂತದಲ್ಲಿ ಅವು ನೇರವಾಗಿ ತಿಳಿಸಲ್ಪಟ್ಟಿಲ್ಲ. ಉದಾಹರಣೆಗೆ, ಸೌಲನ ಅಸಹನೆಯು ಅಹಂಕಾರದಿಂದಲೇ ಉಂಟಾಗಿತ್ತು ಎಂಬುದನ್ನು ಯೆಹೋವನು ಗಮನಿಸಿದ್ದಿರಬಹುದು. ಏಕೆಂದರೆ, ಇಸ್ರಾಯೇಲ್ಯರ ಅಸನಾಗಿರುವ ತಾನು, ವೃದ್ಧನೂ ಕಾಲಹರಣಮಾಡುವವನೂ ಆಗಿರುವಂತಹ ಒಬ್ಬ ವ್ಯಕ್ತಿಗೋಸ್ಕರ ಕಾಯಬೇಕಲ್ಲ ಎಂಬ ಅನಿಸಿಕೆಯೇ ಸೌಲನಿಗೆ ಕೋಪವನ್ನುಂಟುಮಾಡಿದ್ದಿರಬಹುದು! ಏನೇ ಇರಲಿ, ಸಮುವೇಲನು ತಡಮಾಡಿದ್ದರಿಂದ, ಆ ಕೆಲಸವನ್ನು ಪೂರೈಸುವ ಹಕ್ಕು ತನ್ನದೇ ಎಂಬ ಅನಿಸಿಕೆ ಸೌಲನಿಗಾಯಿತು. ಆದುದರಿಂದಲೇ ಅವನು ತನಗೆ ಕೊಡಲ್ಪಟ್ಟಿದ್ದ ಸುಸ್ಪಷ್ಟ ಸೂಚನೆಗಳನ್ನು ಧಿಕ್ಕರಿಸಿ, ಸಮುವೇಲನ ಕೆಲಸವನ್ನು ತಾನೇ ಮಾಡಿಮುಗಿಸಿದನು. ಇದರ ಫಲಿತಾಂಶವೇನು? ಸೌಲನು ಮುನ್ನೆಜ್ಜೆಯನ್ನು ತೆಗೆದುಕೊಂಡದ್ದಕ್ಕಾಗಿ ಸಮುವೇಲನು ಅವನನ್ನು ಹೊಗಳಲಿಲ್ಲ. ಅದಕ್ಕೆ ಬದಲಾಗಿ, ‘ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದಿ’ ಎಂದು ಹೇಳುತ್ತಾ ಸೌಲನನ್ನು ಖಂಡಿಸಿದನು. (1 ಸಮುವೇಲ 13:13, 14) ಹೀಗೆ, ಸೌಲನ ದುರಭಿಮಾನವು ಅವಮಾನಕ್ಕೆ ನಡಿಸಿತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
-
-
ದುರಭಿಮಾನದ ಪರಿಣಾಮ ಅವಮಾನವೇ!ಕಾವಲಿನಬುರುಜು—2000 | ಆಗಸ್ಟ್ 1
-
-
d ಉದಾಹರಣೆಗೆ, ಸಾವಿರಾರು ಮಂದಿ ಇಸ್ರಾಯೇಲ್ಯರನ್ನು ಕೊಂದಂತಹ ವ್ಯಾಧಿಯನ್ನು ನಿಲ್ಲಿಸಲಿಕ್ಕಾಗಿ ಫೀನೆಹಾಸನು ಆ ಕೂಡಲೆ ಕ್ರಿಯೆಗೈದನು. ಮತ್ತು ‘ದೇವರ ಮಂದಿರದಲ್ಲಿದ್ದ’ ನೈವೇದ್ಯದ ರೊಟ್ಟಿಗಳನ್ನು ತಿನ್ನುವಂತೆ ದಾವೀದನು ತುಂಬ ಹಸಿದಿದ್ದ ತನ್ನ ಆಳುಗಳಿಗೆ ಉತ್ತೇಜಿಸಿದನು. ಇವೆರಡೂ ಸನ್ನಿವೇಶಗಳಲ್ಲಿ ಯಾವುದನ್ನೂ ದೇವರು ದುರಭಿಮಾನವೆಂದು ಖಂಡಿಸಲಿಲ್ಲ.—ಮತ್ತಾಯ 12:2-4; ಅರಣ್ಯಕಾಂಡ 25:7-9; 1 ಸಮುವೇಲ 21:1-6.
-