ವಾಚಕರಿಂದ ಪ್ರಶ್ನೆಗಳು
ಸೌಲನ ಸೈನಿಕರು ರಕ್ತದೊಂದಿಗೆ ಮಾಂಸವನ್ನು ತಿಂದಾಗ, ದೇವರ ನಿಯಮದಲ್ಲಿ ಸ್ಥಾಪಿಸಲ್ಪಟ್ಟಂತೆ ಅವರು ವಧಿಸಲ್ಪಡಲಿಲ್ಲವೇಕೆ?
ಈ ಪುರುಷರು ರಕ್ತದ ಕುರಿತಾದ ದೇವರ ನಿಯಮವನ್ನು ಉಲ್ಲಂಘಿಸಿದರು ನಿಜ, ಆದರೆ ರಕ್ತಕ್ಕಾಗಿ ಅವರಲ್ಲಿ ಗೌರವ ಇದ್ದ ಕಾರಣ—ಅಂತಹ ಗೌರವವನ್ನು ತೋರಿಸುವುದರ ಕುರಿತು ಅವರು ಅಧಿಕ ಶ್ರದ್ಧೆಯುಳ್ಳವರಾಗಿರಬೇಕಿತ್ತಾದರೂ—ಅವರಿಗೆ ಕರುಣೆ ತೋರಿಸಲ್ಪಟ್ಟಿರಬಹುದು.
ಸನ್ನಿವೇಶವನ್ನು ಪರಿಗಣಿಸಿರಿ. ಅರಸನಾದ ಸೌಲನ ಮತ್ತು ಅವನ ಮಗನಾದ ಯೋನಾತಾನನ ಕೆಳಗೆ ಇಸ್ರಾಯೇಲ್ಯರು ಫಿಲಿಷ್ಟಿಯರೊಂದಿಗೆ ಯುದ್ಧದಲ್ಲಿ ತೊಡಗಿದ್ದರು. ಯುದ್ಧದಲ್ಲಿ, “ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದ” ಸಮಯದಲ್ಲಿ, ಸೌಲನು ದುಡುಕಿನಿಂದ ವೈರಿಯನ್ನು ಸೋಲಿಸುವ ತನಕ ಅವನ ಸೈನಿಕರು ಊಟಮಾಡಬಾರದೆಂಬ ಪ್ರತಿಜ್ಞೆಯನ್ನು ಮಾಡಿದನು. (1 ಸಮುವೇಲ 14:24) ಬೇಗನೆ ಅವನ ಪ್ರತಿಜ್ಞೆಯು ಒಂದು ಸಮಸ್ಯೆಯನ್ನು ಸೃಷ್ಟಿಸಿತು.
ಕಠಿನ ಹೋರಾಟದ ಯುದ್ಧವನ್ನು ಅವನ ಸೈನಿಕರು ಗೆಲ್ಲುತ್ತಿದ್ದರೂ ಪರಿಶ್ರಮದ ಪ್ರಯತ್ನವು ಅದರ ಹಾನಿಕಾರಕ ಪ್ರಭಾವವನ್ನು ಬೀರುತ್ತಿತ್ತು. ಅವರು ಉಪವಾಸದಿಂದ ಬಳಲಿಹೋಗಿದ್ದರು. ಆ ಉತ್ಕಟ ಸನ್ನಿವೇಶದಲ್ಲಿ ಅವರು ಏನು ಮಾಡಿದರು? “ಅವರು ತಾವು ಕೊಳ್ಳೆಮಾಡಿದ ಎತ್ತು, ಕುರಿ, ಕರು ಇವುಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸದೊಡನೆ ರಕ್ತವನ್ನೂ ತಿಂದರು.”—1 ಸಮುವೇಲ 14:32.
ಸೌಲನ ಜನರಲ್ಲಿ ಕೆಲವರು ಅವನಿಗೆ ಹೇಳಿದಂತೆ, ರಕ್ತದ ವಿಷಯದಲ್ಲಿ ದೇವರ ನಿಯಮದ ಉಲ್ಲಂಘನೆ ಅದಾಗಿತ್ತು. ಅವರಂದದ್ದು: “ನೋಡು, ಜನರು ರಕ್ತವನ್ನು ಭುಜಿಸಿ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡುತ್ತಾರೆ.” (1 ಸಮುವೇಲ 14:33) ಹೌದು, ಪ್ರಾಣಿಗಳು ಕೊಲ್ಲಲ್ಪಟ್ಟಾಗ, ಮಾಂಸವನ್ನು ತಿನ್ನುವ ಮುಂಚೆ ರಕ್ತವು ಹರಿದು ಹೋಗುವಂತೆ ಬಿಡಬೇಕೆಂದು ನಿಯಮವು ಹೇಳಿತು. ರಕ್ತವನ್ನು ಹರಿದು ಹೋಗುವಂತೆ ಬಿಡಲು, ಮತಭ್ರಾಂತ ಕ್ರಿಯೆಗೈಯುವಂತೆ ದೇವರು ತಗಾದೆ ಮಾಡಲಿಲ್ಲ. ರಕ್ತವು ಹರಿದು ಹೋಗುವಂತೆ ಬಿಡುವ ವಿವೇಕಯುತ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ, ರಕ್ತದ ಮಹತ್ವಕ್ಕೆ ಗೌರವವನ್ನು ಆತನ ಸೇವಕರು ಪ್ರದರ್ಶಿಸಬಹುದಿತ್ತು. (ಧರ್ಮೋಪದೇಶಕಾಂಡ 12:15, 16, 21-25) ವೇದಿಕೆಯ ಮೇಲೆ ಪ್ರಾಣಿಯ ರಕ್ತವನ್ನು ಯಜ್ಞದ ರೀತಿಯಲ್ಲಿ ಉಪಯೋಗಿಸಬಹುದಾಗಿದ್ದರೂ, ಅದನ್ನು ತಿನ್ನಬಾರದಾಗಿತ್ತು. ಉದ್ದೇಶಪೂರ್ವಕ ಉಲ್ಲಂಘನೆಗೆ ಮರಣ ಶಿಕ್ಷೆ ವಿಧಿಸಲ್ಪಡುತ್ತಿತ್ತು, ಯಾಕೆಂದರೆ ದೇವರ ಜನರು, “ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ,” ಎಂಬುದಾಗಿ ಹೇಳಲ್ಪಟ್ಟಿದ್ದರು.—ಯಾಜಕಕಾಂಡ 17:10-14.
ಅರಸನಾದ ಸೌಲನ ಸೈನಿಕರು ಉದ್ದೇಶಪೂರ್ವಕವಾಗಿ ನಿಯಮವನ್ನು ಉಲ್ಲಂಘಿಸುತ್ತಿದ್ದರೊ? ರಕ್ತದ ಮೇಲಿದ್ದ ದೈವಿಕ ನಿಯಮಕ್ಕೆ ಪೂರ್ಣ ಅನಾದರವನ್ನು ಅವರು ತೋರಿಸಿತ್ತಿದ್ದರೊ?—ಹೋಲಿಸಿ ಅರಣ್ಯಕಾಂಡ 15:30.
ನಾವು ಹಾಗೆಂದು ತೀರ್ಮಾನಿಸುವ ಅಗತ್ಯವಿಲ್ಲ. ‘ಅವರು ಪ್ರಾಣಿಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸದೊಡನೆ ರಕ್ತವನ್ನೂ ತಿಂದರು,’ ಎಂದು ವರದಿಯು ಹೇಳುತ್ತದೆ. ಆದುದರಿಂದ ಅವರು ರಕ್ತವು ಹರಿದು ಹೋಗುವಂತೆ ಬಿಡುವ ಸ್ವಲ್ಪ ಪ್ರಯತ್ನವನ್ನಾದರೂ ಮಾಡುತ್ತಿದ್ದಿರಬಹುದು. ಆದರೂ, ಅವರ ಹಸಿವಿನಿಂದ ಬಳಲಿದ ಸ್ಥಿತಿಯಲ್ಲಿ, ಕೊಲ್ಲಲ್ಪಟ್ಟ ಪಶುವಿನ ಹೆಣಗಳನ್ನು ಅವರು ತೂಗುಹಾಕಲಿಲ್ಲ ಹಾಗೂ ಸಾಮಾನ್ಯ ರಕ್ತ ಹರಿಯುವಿಕೆಗಾಗಿ ಸಾಕಷ್ಟು ಸಮಯವನ್ನು ಕೊಡಲಿಲ್ಲ. ಕುರಿ ಮತ್ತು ಎತ್ತುಗಳನ್ನು ಅವರು “ನೆಲದ ಮೇಲೆ” ಕೊಂದರು, ಇದು ರಕ್ತದ ಹರಿಯುವಿಕೆಯನ್ನು ನಿಧಾನಗೊಳಿಸಸಾಧ್ಯವಿತ್ತು. ಮತ್ತು ರಕ್ತದ ಮಧ್ಯೆ ಬಿದ್ದಿದ್ದ ಮೃಗ ದೇಹಗಳಿಂದ ಅವರು ಮಾಂಸವನ್ನು ಬೇಗನೆ ಕತ್ತರಿಸಿದರು. ಆದಕಾರಣ, ದೇವರ ನಿಯಮಕ್ಕೆ ವಿಧೇಯರಾಗಿರುವುದು ಅವರ ಮನಸ್ಸಿನಲ್ಲಿ ಇದಿದ್ದರ್ದೂ, ಅವರು ಯೋಗ್ಯವಾದ ರೀತಿಗಳಲ್ಲಿ ಯಾ ಸಾಕಷ್ಟು ಮಟ್ಟಿಗೆ ಅದನ್ನು ಪಾಲಿಸಲಿಲ್ಲ.
ಫಲಿತಾಂಶವು ಏನಾಗಿತ್ತೆಂದರೆ ಜನರು “ಮಾಂಸದೊಡನೆ ರಕ್ತವನ್ನೂ ತಿಂದರು,” ಅದು ಪಾಪಕರವಾಗಿತ್ತು. ಸೌಲನು ಇದನ್ನು ಗ್ರಹಿಸಿದನು ಮತ್ತು ಅವನ ಕಡೆ ದೊಡ್ಡ ಕಲ್ಲನ್ನು ಹೊರಳಿಸಿ ತಂದಿಡುವಂತೆ ಆಜ್ಞಾಪಿಸಿದನು. “ರಕ್ತವನ್ನು ಭುಜಿಸಿ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಬೇಡಿರಿ; ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿ ತಂದು ಕೊಂದು ತಿನ್ನಬೇಕೆಂದು,” ಅವನು ಸೈನಿಕರನ್ನು ಆಜ್ಞಾಪಿಸಿದನು. (1 ಸಮುವೇಲ 14:32, 34) ದೋಷಿಗಳಾದ ಸೈನಿಕರು ವಿಧೇಯರಾದರು, ಮತ್ತು “ಸೌಲನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.”—1 ಸಮುವೇಲ 14:35.
ಕಲ್ಲಿನ ಮೇಲೆ ಪ್ರಾಣಿಗಳನ್ನು ಕೊಲ್ಲುವುದು ಸಾಕಷ್ಟು ರಕ್ತ ಹರಿಯುವಿಕೆಯನ್ನು ಬಹುಶಃ ಪ್ರಭಾವಿಸಿದ್ದಿರಬೇಕು. ಪ್ರಾಣಿಸಂಹಾರ ಎಲ್ಲಿ ಸಂಭವಿಸಿತೊ ಆ ಸ್ಥಳದಿಂದ ದೂರದಲ್ಲಿ ಪ್ರಾಣಿಮಾಂಸ ತಿನ್ನಲ್ಪಡಲಿಕ್ಕಿತ್ತು. ಹರಿದು ಹೋದ ರಕ್ತದಿಂದ ಸ್ವಲ್ಪ ಭಾಗವನ್ನು ವೇದಿಯ ಮೇಲೆ ಸೌಲನು, ಪಾಪಗೈದವರ ಕಡೆಗೆ ದೇವರ ಕರುಣೆಯನ್ನು ಕೋರುವುದರಲ್ಲಿ ಉಪಯೋಗಿಸಿರಬಹುದು. ಸೈನಿಕರು ಬಹಳಷ್ಟು ಆಯಾಸಗೊಂಡು ಹಸಿವಿನಿಂದಿದ್ದರೂ, ಅವರು ಮಾಡಿದ್ದ ಪ್ರಯತ್ನಗಳು ಆತನಿಗೆ ಗೊತ್ತಿದ್ದ ಕಾರಣದಿಂದಾಗಿ ಯೆಹೋವನು ಕರುಣೆಯನ್ನು ವಿಸ್ತೃತಗೊಳಿಸಿದನೆಂದು ತೋರುತ್ತದೆ. ಸೌಲನ ದುಡುಕಿನ ಪ್ರತಿಜ್ಞೆಯು ಅವನ ಸೈನಿಕರನ್ನು ಆ ಅಪಾಯಕರವಾದ ಸನ್ನಿವೇಶದೊಳಗೆ ಒತ್ತಾಯಿಸಿತೆಂಬ ವಿಷಯವನ್ನು ಕೂಡ ದೇವರು ಪರಿಗಣಿಸಿರಬಹುದು.
ದೈವಿಕ ನಿಯಮವನ್ನು ಅನಾದರಿಸಲಿಕ್ಕೆ ತುರ್ತಿನ ಸನ್ನಿವೇಶವು ನೆಪವಾಗಿಲ್ಲವೆಂದು ಈ ದಾಖಲೆಯು ಖಂಡಿತವಾಗಿ ತೋರಿಸುತ್ತದೆ. ಪ್ರತಿಜ್ಞೆಯನ್ನು ಮಾಡುವ ಮೊದಲು ಜಾಗರೂಕತೆಯಿಂದ ಯೋಚಿಸುವ ಅಗತ್ಯವನ್ನು ನಾವು ಕಾಣುವಂತೆ ಕೂಡ ಅದು ನೆರವಾಗಬೇಕು, ಯಾಕೆಂದರೆ ದುಡುಕಿನ ಹರಕೆಯೊಂದು ವೈಯಕ್ತಿಕವಾಗಿ ನಮಗೆ ಮತ್ತು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡಬಲ್ಲದು.—ಪ್ರಸಂಗಿ 5:4-6.