ವಾಚಕರಿಂದ ಪ್ರಶ್ನೆಗಳು
ಎರಡನೇ ಸಮುವೇಲ 12:31 ಮತ್ತು 1 ಪೂರ್ವಕಾಲವೃತ್ತಾಂತ 20:3ರಿಂದ ಕೆಲವರು ಅರ್ಥಮಾಡಿಕೊಳ್ಳುವಂತೆ, ದೇವರಿಗೆ ಒಪ್ಪುವ ಮನುಷ್ಯನಾಗಿದ್ದ ದಾವೀದನು ತನ್ನ ಸೆರೆಯಾಳುಗಳನ್ನು ಕ್ರೂರ ರೀತಿಯಲ್ಲಿ ಉಪಚರಿಸಿದನೋ?
ಇಲ್ಲ. ಅಮ್ಮೋನಿಯರ ಸೆರೆಯಾಳುಗಳನ್ನು ದಾವೀದನು ಬಿಟ್ಟಿ ಕೆಲಸಮಾಡುವುದಕ್ಕೆ ಒಪ್ಪಿಸಿದನು ಅಷ್ಟೆ. ಕೆಲವು ಬೈಬಲ್ ಭಾಷಾಂತರಗಳು ಈ ವಚನಗಳನ್ನು ತರ್ಜುಮೆಮಾಡಿರುವ ವಿಧದಿಂದಾಗಿ ದಾವೀದನ ಕೃತ್ಯಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ.
ಅಮ್ಮೋನಿಯರಿಗೆ ವಿಧಿಸಲ್ಪಟ್ಟ ಶಿಕ್ಷೆಯನ್ನು ವರ್ಣಿಸುತ್ತಾ ಆ ಬೈಬಲ್ ಭಾಷಾಂತರಗಳು ದಾವೀದನನ್ನು ಒರಟಾಗಿಯೂ ಕ್ರೂರವಾಗಿಯೂ ಚಿತ್ರಿಸುತ್ತವೆ. ಉದಾಹರಣೆಗೆ, ಕಿಂಗ್ ಜೇಮ್ಸ್ ವರ್ಷನ್ಗನುಸಾರ 2 ಸಮುವೇಲ 12:31 ಹೀಗೆ ಓದುತ್ತದೆ: “ಅವನು ಅಲ್ಲಿದ್ದ ಜನರನ್ನು ಹಿಡಿದು ತಂದನು, ಮತ್ತು ಅವರನ್ನು ಗರಗಸಗಳು, ಕಬ್ಬಿಣದ ಕುಂಟೆಗಳು ಮತ್ತು ಕಬ್ಬಿಣದ ಕೊಡಲಿಗಳ ಕೆಳಗೆ ಹಾಕಿದನು, ಹಾಗೂ ಅವರು ಇಟ್ಟಿಗೆಗೂಡಿನ ಮೂಲಕ ಹಾದುಹೋಗುವಂತೆ ಮಾಡಿದನು: ಮತ್ತು ಅಮ್ಮೋನಿಯರ ಮಕ್ಕಳ ಎಲ್ಲಾ ಪಟ್ಟಣಗಳವರಿಗೂ ಇದೇ ಗತಿಯಾಯಿತು.” 1 ಪೂರ್ವಕಾಲವೃತ್ತಾಂತ 20:3ರಲ್ಲಿರುವ ವೃತ್ತಾಂತವನ್ನು ಸಹ ಇದೇ ರೀತಿಯಲ್ಲಿ ಭಾಷಾಂತರಿಸಲಾಗಿದೆ.
ಆದರೂ, ಬೈಬಲ್ ವಿದ್ವಾಂಸರಾದ ಸ್ಯಾಮುವೆಲ್ ರೋಲ್ಸ್ ಡ್ರೈವರ್ ಹೇಳಿಕೆ ನೀಡಿದಂತೆ, ಕ್ರೌರ್ಯವು “ದಾವೀದನ ವ್ಯಕ್ತಿತ್ವ ಮತ್ತು ಸ್ವಭಾವದ ಕುರಿತು ನಮಗೆ ಏನೆಲ್ಲಾ ತಿಳಿದಿದೆಯೋ ಅದಕ್ಕೆ ಖಂಡಿತವಾಗಿಯೂ ಹೊಂದಿಕೆಯಲ್ಲಿಲ್ಲ.” ಆದುದರಿಂದ ದಿ ಆ್ಯಂಕರ್ ಬೈಬಲ್ನಲ್ಲಿನ ಹೇಳಿಕೆಯೊಂದು ಹೀಗನ್ನುತ್ತದೆ: “ಸ್ವಾಧೀನಮಾಡಿಕೊಂಡ ಕ್ಷೇತ್ರದಿಂದ ಆರ್ಥಿಕ ಲಾಭವನ್ನು ಪಡೆದುಕೊಳ್ಳಲಿಕ್ಕಾಗಿ ದಾವೀದನು ವಶಪಡಿಸಿಕೊಂಡ ಜನರಲ್ಲಿ ಕೆಲವರನ್ನು ಕೆಲಸದಾಳುಗಳನ್ನಾಗಿ ಮಾಡಿಕೊಂಡನು, ಇದು ವಿಜೇತ ಅರಸರು ಮಾಡುತ್ತಿದ್ದ ಸರ್ವಸಾಮಾನ್ಯ ಕೃತ್ಯವಾಗಿತ್ತು ಎಂಬುದು ಸುವ್ಯಕ್ತ.” ಇದೇ ವಿಚಾರಾಧಾರೆಯನ್ನು ಸಮ್ಮತಿಸುತ್ತಾ ಆ್ಯಡಮ್ ಕ್ಲಾರ್ಕ್ ಹೀಗೆ ಹೇಳಿಕೆ ನೀಡುತ್ತಾರೆ: “ಆದುದರಿಂದ, ಇದರ ಅರ್ಥವೇನೆಂದರೆ ದಾವೀದನು ಆ ಜನರನ್ನು ಸೇವಕರನ್ನಾಗಿ ಮಾಡಿಕೊಂಡನು, ಮತ್ತು ಅವರನ್ನು ಗರಗಸದ ಕೆಲಸದಲ್ಲಿ, ಕಬ್ಬಿಣದ ಕುಂಟೆಗಳನ್ನು ಮಾಡುವುದರಲ್ಲಿ, ಅಥವಾ ಗಣಿಗಾರಿಕೆಯಲ್ಲಿ . . . ಮರಗಳನ್ನು ಕಡಿಯುವುದರಲ್ಲಿ ಮತ್ತು ಇಟ್ಟಿಗೆಯನ್ನು ಮಾಡುವುದರಲ್ಲಿ ಕೆಲಸಕ್ಕಿಟ್ಟುಕೊಂಡನು. ಗರಗಸದಿಂದ ಸೀಳುವುದು, ಕೊಚ್ಚುವುದು, ಕತ್ತರಿಸುವುದು, ಮತ್ತು ಮಾನವರನ್ನು ಕಡಿದುಹಾಕುವುದು ಈ ಸಂಗತಿಗಳಿಗೆ ಈ ವಚನದಲ್ಲಿ ಸ್ಥಳವಿಲ್ಲ ಮತ್ತು ಅಮ್ಮೋನಿಯರ ಕಡೆಗಿನ ದಾವೀದನ ನಡತೆಯಲ್ಲಿ ಅಂಥ ದುರುಪಚಾರವು ಯೋಗ್ಯವಾಗಿರದಂಥೆ ಈ ವಚನಕ್ಕೆ ಇಂಥ ಅರ್ಥವನ್ನು ಕೊಡುವುದೂ ಸೂಕ್ತವಲ್ಲ.”
ಹೆಚ್ಚು ನಿಷ್ಕೃಷ್ಟವಾಗಿರುವ ಈ ಅರ್ಥನಿರೂಪಣೆಯ ಕುರಿತು ಪರ್ಯಾಲೋಚಿಸುತ್ತಾ, ದಾವೀದನ ಮೇಲೆ ಅಮಾನುಷ ದುರುಪಚಾರದ ದೋಷಾರೋಪವನ್ನು ಹೊರಿಸುವುದು ಸರಿಯಲ್ಲ ಎಂಬುದನ್ನು ಅನೇಕ ಆಧುನಿಕ ಭಾಷಾಂತರಗಳು ಸ್ಪಷ್ಟಪಡಿಸುತ್ತವೆ.a ನ್ಯೂ ಇಂಗ್ಲಿಷ್ ಟ್ರಾನ್ಸ್ಲೆಷನ್ (2003)ನ ಭಾಷಾಂತರವನ್ನು ಗಮನಿಸಿರಿ: “ಅವನು ಅದರಲ್ಲಿದ್ದ ಜನರನ್ನು ಹಿಡಿದು, ಗರಗಸಗಳು, ಕಬ್ಬಿಣದ ಪಿಕಾಸಿಗಳು, ಮತ್ತು ಕಬ್ಬಿಣದ ಕೊಡಲಿಗಳಿಂದ ಅವರು ಶ್ರಮದ ದುಡಿತವನ್ನು ನಡೆಸುವಂತೆ ಮಾಡಿದನು; ಅವರು ಇಟ್ಟಿಗೆಯ ಗೂಡಿನಲ್ಲಿಯೂ ಕೆಲಸಮಾಡುವಂತೆ ಮಾಡಿದನು. ಅಮ್ಮೋನಿಯರ ಎಲ್ಲಾ ಪಟ್ಟಣಗಳವರ ವಿಷಯದಲ್ಲಿ ಇದೇ ಅವನ ಧೋರಣೆಯಾಗಿತ್ತು.” (2 ಸಮುವೇಲ 12:31) “ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸಮಾಡುವದಕ್ಕೆ ಹಚ್ಚಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ದಾವೀದನು ಹೀಗೆಯೇ ಮಾಡಿದನು.” (1 ಪೂರ್ವಕಾಲವೃತ್ತಾಂತ 20:3) ನೂತನ ಲೋಕ ಭಾಷಾಂತರ (ಇಂಗ್ಲಿಷ್)ದ ತರ್ಜುಮೆಯು ಸಹ ವಿದ್ವಾಂಸರ ಅತ್ಯಾಧುನಿಕ ತಿಳಿವಳಿಕೆಗೆ ಹೊಂದಿಕೆಯಲ್ಲಿದೆ: “ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟಿಗೆಗಳನ್ನು ಮಾಡುವದಕ್ಕೂ ಹಚ್ಚಿದನು.” (2 ಸಮುವೇಲ 12:31) “ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸಮಾಡುವದಕ್ಕೆ ಹಚ್ಚಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ದಾವೀದನು ಈ ರೀತಿಯಾಗಿಯೇ ಮಾಡಿದನು.”—1 ಪೂರ್ವಕಾಲವೃತ್ತಾಂತ 20:3.
ಸೋತ ಅಮ್ಮೋನಿಯರನ್ನು ದಾವೀದನು ಚಿತ್ರಹಿಂಸೆಗೆ ಮತ್ತು ಬೀಭತ್ಸ ಹತ್ಯಾಕಾಂಡಕ್ಕೆ ಒಳಪಡಿಸಲಿಲ್ಲ. ಅವನು ತನ್ನ ದಿನದಲ್ಲಿದ್ದ ಹಿಂಸಾತ್ಮಕ ಹಾಗೂ ಪಾಶವೀಯ ಯುದ್ಧ ಪದ್ಧತಿಗಳನ್ನು ಖಂಡಿತವಾಗಿಯೂ ಅನುಸರಿಸಲಿಲ್ಲ.
[ಪಾದಟಿಪ್ಪಣಿ]
a ಒಂದು ಅಕ್ಷರದ ಬದಲಾವಣೆಯಿಂದ ಹೀಬ್ರು ಮೂಲಪಾಠವನ್ನು, “ಅವನು ಅವರನ್ನು ತುಂಡುಗಳಾಗಿ ಕತ್ತರಿಸಿದನು (ಗರಗಸದಿಂದ ಕೊಯ್ದನು)” ಅಥವಾ “ಅವನು ಅವರನ್ನು ಗರಗಸದಿಂದ ಕೆಲಸಮಾಡುವುದಕ್ಕೆ ಹಚ್ಚಿದನು” ಎಂದು ಓದಸಾಧ್ಯವಿದೆ. ಅಷ್ಟುಮಾತ್ರವಲ್ಲ, “ಇಟ್ಟಿಗೆ ಗೂಡು” ಎಂಬುದಕ್ಕಾಗಿರುವ ಪದವು “ಇಟ್ಟಿಗೆ ಅಚ್ಚು” ಎಂಬುದನ್ನೂ ಅರ್ಥೈಸಸಾಧ್ಯವಿದೆ. ಇಂಥ ಒಂದು ಅಚ್ಚು ಯಾರೇ ಆಗಲಿ ಹಾದುಹೋಗುವಷ್ಟು ಅಗಲವಾಗಿರುವುದಿಲ್ಲ.