ಅಧ್ಯಾಯ ಹನ್ನೆರಡು
ತನ್ನ ದೇವರಿಂದ ಸಾಂತ್ವನ ಪಡೆದಾತನು
1, 2. ಎಲೀಯನ ಜೀವನದ ಅತಿ ಮಹತ್ತರ ದಿನದಂದು ನಡೆದ ಘಟನೆಗಳು ಯಾವುವು?
ಎಲೀಯನು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಓಡುತ್ತಾ ಇದ್ದನು. ಎಲ್ಲೆಡೆ ಕತ್ತಲು ಕವಿಯುತ್ತಿತ್ತು. ಇಜ್ರೇಲ್ ಇನ್ನೂ ಬಹು ದೂರದಲ್ಲಿತ್ತು. ಎಲೀಯ ಯುವಕನಾಗಿರದಿದ್ದರೂ ದಣಿಯದೆ ಓಡುತ್ತಿದ್ದನು. “ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದದರಿಂದ” ಅವನಲ್ಲಿ ಹಿಂದೆಂದೂ ಇರದ ಶಕ್ತಿ ಪುಟಿಯುತ್ತಿತ್ತು. ಎಷ್ಟೆಂದರೆ, ದೌಡಾಯಿಸುತ್ತಿದ್ದ ರಾಜರಥದ ಕುದುರೆಗಳನ್ನೂ ಹಿಂದಿಕ್ಕಿ ಓಡುತ್ತಿದ್ದನು!—1 ಅರಸುಗಳು 18:46 ಓದಿ.
2 ದಾರಿಯಲ್ಲಿ ಎಲೀಯ ಈಗ ಒಬ್ಬನೇ ಇದ್ದ. ಅವನ ಮುಖಕ್ಕೆ ಮಳೆ ಹನಿಗಳು ರಾಚುತ್ತಿದ್ದಂತೆ ಕಣ್ರೆಪ್ಪೆಗಳು ಪಟಪಟನೆ ಬಡಿದುಕೊಳ್ಳುತ್ತಿದ್ದವು. ಅವನ ಮನದಲ್ಲಾದರೋ ತನ್ನ ಬದುಕಿನ ಅತಿ ಮಹತ್ತರವಾದ ಆ ದಿನದಂದು ನಡೆದ ಘಟನೆಗಳು ಮೂಡಿಬರುತ್ತಿದ್ದವು. ತನ್ನ ದೇವರಾದ ಯೆಹೋವನಿಗೂ ಸತ್ಯಾರಾಧನೆಗೂ ಮಹಾ ವಿಜಯ ಸಿಕ್ಕಿದ ದಿನ ಅದಾಗಿತ್ತು. ಎತ್ತರದ ಕರ್ಮೆಲ್ ಬೆಟ್ಟದ ಮೇಲೆ ಯೆಹೋವನು ಅದ್ಭುತ ವಿಧದಲ್ಲಿ ಬಾಳನ ಆರಾಧನೆಗೆ ಮಾರಕ ಏಟು ಕೊಟ್ಟಿದ್ದನು. ಬಾಳನ ದುಷ್ಟ ವಂಚಕರಾದ ನೂರಾರು ಪ್ರವಾದಿಗಳ ನಿಜ ಬಣ್ಣ ಬಯಲಾಗಿ ಅವರನ್ನು ಸಂಹಾರಮಾಡಲಾಗಿತ್ತು. ಮೂರುವರೆ ವರ್ಷಗಳಿಂದ ದೇಶವನ್ನು ಬಾಧಿಸಿದ್ದ ಬರಗಾಲವನ್ನು ಕೊನೆಗಾಣಿಸುವಂತೆ ಎಲೀಯ ಯೆಹೋವನಿಗೆ ಪ್ರಾರ್ಥಿಸಿದಾಗ ಮಳೆ ಧೋ ಎಂದು ಸುರಿಯಲಾರಂಭಿಸಿತ್ತು. ಇದೆಲ್ಲವೂ ಅವನ ಮನಃಪಟಲದಲ್ಲಿ ತೇಲಿಬರುತ್ತಿತ್ತು.—1 ಅರ. 18:18-45.
3, 4. (1) ಮುಂದೆ ದೊಡ್ಡ ಬದಲಾವಣೆಗಳು ಆಗಲಿವೆಯೆಂದು ಎಲೀಯ ಏಕೆ ನಿರೀಕ್ಷಿಸಿರಬಹುದು? (2) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
3 ಮೂವತ್ತು ಕಿಲೋಮೀಟರ್ ದೂರದ ಇಜ್ರೇಲಿಗೆ ಹೋಗಲು ದಾರಿಯಲ್ಲಿ ಓಡುತ್ತಿದ್ದ ಎಲೀಯನಿಗೆ ದೊಡ್ಡ ಬದಲಾವಣೆಯ ಸಮಯ ಕೊನೆಗೂ ಬಂದಿದೆಯೆಂದು ಅನಿಸಿರಬೇಕು. ರಾಜ ಅಹಾಬ ಖಂಡಿತ ಬದಲಾಗುವನೆಂದು ನೆನಸಿರಬೇಕು. ಸತ್ಯ ದೇವರು ಯಾರೆಂದು ರುಜುಪಡಿಸಿದ ಪರೀಕ್ಷೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅಹಾಬನು ಇನ್ನಾದರೂ ಬಾಳನ ಆರಾಧನೆ ತ್ಯಜಿಸಿ, ಹೆಂಡತಿ ಈಜೆಬೆಲಳನ್ನು ಹದ್ದುಬಸ್ತಿನಲ್ಲಿಟ್ಟು, ಯೆಹೋವನ ಸೇವಕರಿಗೆ ಆಗುತ್ತಿದ್ದ ಹಿಂಸೆಯನ್ನು ನಿಲ್ಲಿಸುವನು ಎಂದೆಲ್ಲಾ ಎಲೀಯ ಮನಸ್ಸಲ್ಲಿ ಆಶಾಗೋಪುರ ಕಟ್ಟಿರಬೇಕು.
4 ನಮ್ಮ ವಿಷಯದಲ್ಲೂ ಇದು ನಿಜವಲ್ಲವೇ? ಬದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆ ಆಗುತ್ತಿದೆಯೆಂದು ಅನಿಸುವಾಗ ನಮ್ಮ ನಿರೀಕ್ಷೆಗಳೂ ಮುಗಿಲೇರುವುದು ಸಹಜ. ಕಷ್ಟದ ಕಾರ್ಮೋಡ ಸರಿದು ಹೋಗಿದೆ, ಇನ್ನು ಮುಂದೆ ಬದುಕಲ್ಲಿ ಸುಖದ ಹೊಂಗಿರಣವೇ ಇರುವುದೆಂದು ನಾವು ಕನಸು ಕಾಣಬಹುದು. ಎಲೀಯ ಕೂಡ ಆ ರೀತಿ ಯೋಚಿಸಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ. ಏಕೆಂದರೆ ಅವನು “ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದ.” (ಯಾಕೋ. 5:17) ಆದರೆ ಅವನು ನೆನಸಿದ್ದೆಲ್ಲ ತಲೆಕೆಳಗಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಕೆಲವೇ ತಾಸುಗಳಲ್ಲಿ ನಡೆದ ಘಟನೆಯೊಂದರಿಂದ ಅವನೆಷ್ಟು ಖಿನ್ನನೂ ಭಯಭೀತನೂ ಆದನೆಂದರೆ ತಾನು ಸಾಯುವುದೇ ಒಳ್ಳೇದೆಂದು ನೆನಸಿದನು. ಅಂಥದ್ದೇನು ನಡೆಯಿತು? ಯೆಹೋವನು ತನ್ನ ಪ್ರವಾದಿಯಾದ ಎಲೀಯನ ನಂಬಿಕೆಯನ್ನು ಬಲಪಡಿಸಿ ಧೈರ್ಯ ತುಂಬಿಸಿದ್ದು ಹೇಗೆ? ನಾವೀಗ ನೋಡೋಣ.
ನಿರೀಕ್ಷೆ ನುಚ್ಚುನೂರಾಯಿತು
5. (1) ಕರ್ಮೆಲ್ ಬೆಟ್ಟದಲ್ಲಿ ನಡೆದ ಘಟನೆಗಳನ್ನು ನೋಡಿದ ಮೇಲೆ ಅಹಾಬ ಯೆಹೋವನನ್ನು ಗೌರವಿಸಲು ಕಲಿತನೇ? (2) ಅವನದನ್ನು ಕಲಿಯಲಿಲ್ಲವೆಂದು ನಾವು ಹೇಗೆ ಹೇಳಬಹುದು?
5 ಇಜ್ರೇಲಿನಲ್ಲಿದ್ದ ತನ್ನ ಅರಮನೆಗೆ ತಲಪಿದ ಮೇಲೆ ಅಹಾಬನು ತನ್ನ ಪಾಪಗಳಿಗೆ ಪಶ್ಚಾತ್ತಾಪಪಟ್ಟಿದ್ದೇನೆಂದು ತೋರಿಸಿದನೇ? ‘ಎಲೀಯನು ಎಲ್ಲಾ ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದನ್ನೂ ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದನು’ ಎನ್ನುತ್ತದೆ ಬೈಬಲ್. (1 ಅರ. 19:1) ಗಮನಿಸಿ, ಆ ದಿನ ನಡೆದ ಘಟನೆಗಳನ್ನು ಅಹಾಬನು ತಿಳಿಸುವಾಗ ಎಲೀಯನ ದೇವರಾದ ಯೆಹೋವನ ಬಗ್ಗೆ ಮಾತೇ ಎತ್ತಲಿಲ್ಲ. ಲೌಕಿಕ ವ್ಯಕ್ತಿಯಾಗಿದ್ದ ಅಹಾಬನು ಆ ದಿನದ ಅದ್ಭುತಕರ ಘಟನೆಗಳನ್ನು ಬರೀ ಮಾನವ ದೃಷ್ಟಿಕೋನದಿಂದ ನೋಡಿದನು. ಆದ್ದರಿಂದಲೇ ಅವುಗಳನ್ನು ‘ಎಲೀಯನು ಮಾಡಿದ ಕಾರ್ಯಗಳು’ ಎಂದು ವರ್ಣಿಸಿದನು. ಯೆಹೋವ ದೇವರನ್ನು ಗೌರವಿಸಲು ಅವನು ಕಲಿಯಲೇ ಇಲ್ಲವೆಂದು ಇದರಿಂದ ಗೊತ್ತಾಗುತ್ತದೆ. ಪ್ರತೀಕಾರ ಸ್ವಭಾವದ ಈಜೆಬೆಲಳು ಅವನ ಮಾತಿಗೆ ಹೇಗೆ ಪ್ರತಿಕ್ರಿಯಿಸಿದಳು?
6. (1) ಈಜೆಬೆಲಳು ಎಲೀಯನಿಗೆ ಏನೆಂದು ಹೇಳಿಕಳುಹಿಸಿದಳು? (2) ಅವಳ ಮಾತಿನ ಅರ್ಥವೇನಾಗಿತ್ತು?
6 ಕೆರಳಿದ ಸರ್ಪದಂತಾದಳು ಅವಳು! ಎಲೀಯನಿಗೆ, “ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಹೇಳಿಕಳುಹಿಸಿದಳು. (1 ಅರ. 19:2) ಎಷ್ಟು ಭಯಂಕರ ಜೀವ ಬೆದರಿಕೆ! ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಾಳೆ ಇಷ್ಟರೊಳಗೆ ಒಂದೋ ಅವನಿರಬೇಕು ಇಲ್ಲ ತಾನಿರಬೇಕು ಎಂದು ಶಪಥಮಾಡಿದಳು. ಆ ಬಿರುಮಳೆಯ ರಾತ್ರಿಯಲ್ಲಿ ಎಲೀಯ ಇಜ್ರೇಲಿನ ಯಾವುದೊ ಚಿಕ್ಕ ಮನೆಯಲ್ಲಿ ಮಲಗಿದ್ದಿರಬಹುದು. ಈಜೆಬೆಲಳ ಸಂದೇಶವಾಹಕನು ಅಲ್ಲಿಗೆ ಬಂದು ಅವನನ್ನು ಎಬ್ಬಿಸಿ ಅವಳ ಮಾತುಗಳನ್ನು ತಿಳಿಸಿದ್ದನ್ನು ಸ್ವಲ್ಪ ಊಹಿಸಿ! ಎಲೀಯ ಹೇಗೆ ಪ್ರತಿಕ್ರಿಯಿಸಿದನು?
ನಿರಾಶೆ, ಭಯದಿಂದ ಕುಗ್ಗಿಹೋದನು
7. (1) ಈಜೆಬೆಲಳ ಬೆದರಿಕೆ ಎಲೀಯನ ಮೇಲೆ ಯಾವ ಪರಿಣಾಮ ಬೀರಿತು? (2) ಅವನೇನು ಮಾಡಿದ?
7 ಬಾಳಾರಾಧನೆಯ ವಿರುದ್ಧದ ಸಂಗ್ರಾಮಕ್ಕೆ ತೆರೆಬೀಳುತ್ತದೆಂದು ಎಲೀಯ ಏನಾದರೂ ಆಸೆ ಇಟ್ಟುಕೊಂಡಿದ್ದರೆ ಅದು ಆ ಕ್ಷಣವೇ ನೀರುಪಾಲಾಯಿತು! ಈಜೆಬೆಲಳು ಸ್ವಲ್ಪವೂ ಬದಲಾಗಿಲ್ಲವೆಂದು ಅವನಿಗೆ ತಿಳಿಯಿತು. ಎಲೀಯನಂಥ ಇತರ ಅನೇಕ ನಂಬಿಗಸ್ತ ಪ್ರವಾದಿಗಳು ಅವಳ ಆಣತಿ ಮೇರೆಗೆ ಈಗಾಗಲೇ ಸಂಹಾರವಾಗಿದ್ದರು. ಈಗ ತನ್ನ ಸರದಿಯೆಂದು ಅನಿಸಿತು ಅವನಿಗೆ. ಆಗೇನು ಮಾಡಿದನು? ಹೆದರಿ “ಪ್ರಾಣರಕ್ಷಣೆಗಾಗಿ” ತಕ್ಷಣ ಅಲ್ಲಿಂದ ಕಾಲ್ಕಿತ್ತನು. ಈಜೆಬೆಲಳು ತನ್ನನ್ನು ಕ್ರೂರವಾಗಿ ಕೊಲ್ಲಿಸುತ್ತಿರುವ ದೃಶ್ಯ ಅವನ ಕಣ್ಮುಂದೆ ಸುಳಿದಿರಬಹುದೇ? ಬಹುಶಃ ಇಂಥ ಅಪಾಯಗಳ ಕುರಿತು ಅವನು ಯೋಚಿಸುತ್ತಾ ಇದದ್ದರಿಂದಲೇ ಏನೋ ಅವನ ಧೈರ್ಯ ಕರಗಿ ಹೋಯಿತು.—1 ಅರ. 18:4; 19:3.
ನಾವು ಧೈರ್ಯದಿಂದ ಇರಬೇಕಾದರೆ ನಮ್ಮಲ್ಲಿ ಹೆದರಿಕೆ ಹುಟ್ಟಿಸುವ ಕಷ್ಟ, ಅಪಾಯಗಳ ಕುರಿತು ಯೋಚಿಸುತ್ತಾ ಇರಬಾರದು
8. (1) ಎಲೀಯನಿಗೆ ಇದ್ದಂಥದ್ದೇ ಸಮಸ್ಯೆ ಪೇತ್ರನಿಗಿತ್ತೆಂದು ಹೇಗೆ ಹೇಳಬಹುದು? (2) ಎಲೀಯ ಮತ್ತು ಪೇತ್ರನಿಂದ ಯಾವ ಪಾಠ ಕಲಿಯುತ್ತೇವೆ?
8 ಹೆದರಿ ಕಂಗಾಲಾದ ನಂಬಿಗಸ್ತ ಪುರುಷ ಎಲೀಯನೊಬ್ಬನೇ ಅಲ್ಲ. ಎಷ್ಟೋ ವರ್ಷಗಳ ನಂತರ ಜೀವಿಸಿದ ಅಪೊಸ್ತಲ ಪೇತ್ರನಿಗೂ ಹಾಗೇ ಆಯಿತು. ಉದಾಹರಣೆಗೆ, ನೀರಿನ ಮೇಲೆ ನಡೆದು ಬರಲು ಯೇಸು ಅವನನ್ನು ಶಕ್ತಗೊಳಿಸಿದಾಗ ಏನಾಯಿತೆಂದು ಗಮನಿಸಿ. ಪೇತ್ರ ನೀರಿನ ಮೇಲೆ ತುಸು ದೂರ ಧೈರ್ಯದಿಂದ ನಡೆದನಾದರೂ ಸ್ವಲ್ಪದರಲ್ಲೇ ಹೆದರಿ ಮುಳುಗಲಾರಂಭಿಸಿದನು. ಏಕೆ? ಅವನು “ಬಿರುಗಾಳಿಯನ್ನು ನೋಡಿ”ದ್ದರಿಂದಲೇ. (ಮತ್ತಾಯ 14:30 ಓದಿ.) ಪೇತ್ರ ಮತ್ತು ಎಲೀಯನ ಉದಾಹರಣೆಗಳಿಂದ ಒಂದು ಮಹತ್ವದ ಪಾಠ ಕಲಿಯುತ್ತೇವೆ. ನಾವು ಧೈರ್ಯದಿಂದ ಇರಬೇಕಾದರೆ ನಮ್ಮಲ್ಲಿ ಹೆದರಿಕೆ ಹುಟ್ಟಿಸುವ ಕಷ್ಟ, ಅಪಾಯಗಳ ಕುರಿತು ಯೋಚಿಸುತ್ತಾ ಇರಬಾರದು. ನಮ್ಮ ನಿರೀಕ್ಷೆ ಮತ್ತು ಬಲದ ಮೂಲನಾಗಿರುವ ಯೆಹೋವನ ಮೇಲೆ ಗಮನ ನೆಡಬೇಕು.
“ನನಗೆ ಸಾಕಾಯಿತು”
9. ಪಲಾಯನಗೈಯುತ್ತಿದ್ದ ಎಲೀಯನ ಪ್ರಯಾಣವನ್ನು ಹಾಗೂ ಅವನ ಮನಃಸ್ಥಿತಿಯನ್ನು ವರ್ಣಿಸಿ.
9 ಭಯಭೀತನಾಗಿ ಎಲೀಯ ಇಜ್ರೇಲಿನಿಂದ ನೈರುತ್ಯ ದಿಕ್ಕಿಗೆ ಪಲಾಯನ ಮಾಡುತ್ತಾ ಸುಮಾರು 150 ಕಿ.ಮೀ. ದೂರದಲ್ಲಿದ್ದ ಯೆಹೂದದ ದಕ್ಷಿಣ ಗಡಿಪಟ್ಟಣವಾದ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ಸೇವಕನನ್ನು ಬಿಟ್ಟು ಒಂಟಿಯಾಗಿ ಅರಣ್ಯದೊಳಗೆ ಹೋದನು. “ಒಂದು ದಿವಸದ ಪ್ರಯಾಣದಷ್ಟು ದೂರ” ಅವನು ಹೋದನೆಂದು ದಾಖಲೆ ಹೇಳುತ್ತದೆ. ಹಾಗಾದರೆ ಅವನು ಸೂರ್ಯ ಉದಯಿಸುತ್ತಿದ್ದಾಗಲೇ ಹೊರಟಿರಬೇಕು. ಆಹಾರ ಅಥವಾ ಆವಶ್ಯಕ ವಸ್ತುಗಳೇನನ್ನೂ ತಕ್ಕೊಂಡಿರಲಿಲ್ಲ. ಸುಡುಬಿಸಿಲಿನಲ್ಲಿ ಆ ಉಬ್ಬುತಗ್ಗುಗಳ ನಿರ್ಜನ ಪ್ರದೇಶದಲ್ಲಿ ಬಿರಬಿರನೆ ನಡೆದು ಏದುಸಿರು ಬಿಡುತ್ತಾ ಮುಂದೆ ಸಾಗುತ್ತಿದ್ದ ಅವನು ಖಿನ್ನನೂ ಭಯಪೀಡಿತನೂ ಆಗಿದ್ದ. ಸೂರ್ಯ ಕ್ರಮೇಣ ಕೆಂಪಾಗುತ್ತಾ ದಿಗಂತದಲ್ಲಿ ಅಸ್ತಮಿಸುತ್ತಿದ್ದಂತೆ ಎಲೀಯನ ತ್ರಾಣವೂ ಬತ್ತಿಹೋಯಿತು. ಬಳಲಿಬೆಂಡಾದ ಅವನು ಒಂದು ಜಾಲೀಗಿಡದ ಕೆಳಗೆ ಕೂತನು. ಆ ಬರಡು ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲಿಕ್ಕಾಗಿ ಇದ್ದಂಥ ಸ್ಥಳ ಅದೊಂದೇ.—1 ಅರ. 19:4.
10, 11. (1) ಎಲೀಯನು ಯೆಹೋವನಿಗೆ ಮಾಡಿದ ಪ್ರಾರ್ಥನೆಯ ಅರ್ಥವೇನು? (2) ಮನಗುಂದಿ ಹೋದ ಇತರ ದೇವಭಕ್ತ ವ್ಯಕ್ತಿಗಳ ಭಾವನೆಗಳನ್ನು ಕೊಡಲಾದ ವಚನಗಳಿಂದ ವರ್ಣಿಸಿ.
10 ಎಲೀಯ ತೀವ್ರ ಹತಾಶೆಯಿಂದ ಪ್ರಾರ್ಥಿಸಿದ. ಸಾಯುವ ಅಪೇಕ್ಷೆಯನ್ನೂ ವ್ಯಕ್ತಪಡಿಸಿದ. “ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ” ಎಂದನವನು. ತನ್ನ ಪಿತೃಗಳು ಸಮಾಧಿಯಲ್ಲಿ ಮಣ್ಣಾಗಿ ಹೋಗಿರುವುದರಿಂದ ಅವರು ಯಾರಿಗೂ ಒಳ್ಳೇದನ್ನು ಮಾಡಲು ಅಶಕ್ತರೆಂದು ಅವನಿಗೆ ತಿಳಿದಿತ್ತು. (ಪ್ರಸಂ. 9:10) ಅದೇ ರೀತಿ ತಾನು ನಿಷ್ಪ್ರಯೋಜಕನೆಂದು ಅವನಿಗನಿಸಿತು. “ನನಗೆ ಸಾಕಾಯಿತು” ಎಂದು ಕೂಗಿದನು. ತಾನು ಬದುಕಿದ್ದು ಪ್ರಯೋಜನವಿಲ್ಲ ಎಂದನಿಸಿತು ಅವನಿಗೆ.
11 ದೇವಭಕ್ತನೊಬ್ಬನು ಇಷ್ಟು ಮನಗುಂದಿಹೋಗಲು ಸಾಧ್ಯವೇ ಎಂದು ನಮಗೆ ಆಶ್ಚರ್ಯವಾಗಬೇಕೇ? ಆಗಬೇಕಾಗಿಲ್ಲ. ಏಕೆಂದರೆ ಸಾಯಲು ಬಯಸುವಷ್ಟರ ಮಟ್ಟಿಗೆ ಮನಗುಂದಿ ಹೋಗಿದ್ದ ಅನೇಕ ನಂಬಿಗಸ್ತ ಸ್ತ್ರೀಪುರುಷರ ಕುರಿತು ಬೈಬಲ್ ತಿಳಿಸುತ್ತದೆ. ಅವರಲ್ಲಿ ರೆಬೆಕ್ಕ, ಯಾಕೋಬ, ಮೋಶೆ, ಯೋಬ ಕೆಲವರು.—ಆದಿ. 25:22; 37:35; ಅರ. 11:13-15; ಯೋಬ 14:13.
12. ನೀವು ಮನಗುಂದಿರುವಾಗ ಎಲೀಯನ ಮಾದರಿಯನ್ನು ಹೇಗೆ ಅನುಸರಿಸಬಲ್ಲಿರಿ?
12 ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ನಾವಿಂದು ಜೀವಿಸುತ್ತಿದ್ದೇವೆ. ಆದ್ದರಿಂದ ಅನೇಕ ಜನರು, ದೇವರ ನಂಬಿಗಸ್ತ ಸೇವಕರು ಸಹ ಕೆಲವೊಮ್ಮೆ ಮನಗುಂದಿ ಹೋಗುವುದು ಸಹಜ. (2 ತಿಮೊ. 3:1) ನೀವೆಂದಾದರೂ ಅಂಥ ಕಷ್ಟಕರ ಸನ್ನಿವೇಶದಲ್ಲಿದ್ದರೆ ಎಲೀಯನ ಮಾದರಿಯನ್ನು ಅನುಸರಿಸುತ್ತಾ ದೇವರಲ್ಲಿ ನಿಮ್ಮ ಹೃದಯ ತೋಡಿಕೊಳ್ಳಿ. ಏಕೆಂದರೆ ಯೆಹೋವನು “ಸಕಲ ಸಾಂತ್ವನದ” ದೇವರು. (2 ಕೊರಿಂಥ 1:3, 4 ಓದಿ.) ಆತನು ಎಲೀಯನನ್ನು ಸಂತೈಸಿದನೊ?
ಯೆಹೋವನು ತನ್ನ ಪ್ರವಾದಿಯನ್ನು ಪೋಷಿಸಿದನು
13, 14. (1) ಮನಗುಂದಿದ್ದ ತನ್ನ ಪ್ರವಾದಿಗೆ ಯೆಹೋವನು ದೇವದೂತನ ಮೂಲಕ ಹೇಗೆ ಕಾಳಜಿ ತೋರಿಸಿದನು? (2) ನಮ್ಮ ಇತಿಮಿತಿಗಳನ್ನೂ ಸೇರಿಸಿ ಎಲ್ಲವೂ ಯೆಹೋವನಿಗೆ ತಿಳಿದಿದೆ ಎಂಬುದು ಏಕೆ ಸಾಂತ್ವನದಾಯಕ?
13 ಬಂಜರು ಪ್ರದೇಶದಲ್ಲಿ ತನ್ನ ನೆಚ್ಚಿನ ಪ್ರವಾದಿ ಒಂದು ಗಿಡದ ಕೆಳಗೆ ಕೂತು ಮರಣಕ್ಕಾಗಿ ಬೇಡುವುದನ್ನು ನೋಡಿ ಯೆಹೋವನಿಗೆ ಹೇಗನಿಸಿರಬಹುದು? ಮುಂದೇನಾಯಿತೋ ಅದರಿಂದ ಉತ್ತರ ಸಿಗುತ್ತದೆ. ಬಳಲಿದ್ದ ಎಲೀಯನು ನಿದ್ರೆಗೆ ಜಾರಿದಾಗ ಯೆಹೋವನು ತನ್ನ ದೂತನನ್ನು ಅವನ ಬಳಿಗೆ ಕಳುಹಿಸಿದನು. ಆ ದೇವದೂತನು ಎಲೀಯನ ಮುಂದೆ ಬಿಸಿಯಾದ ತಾಜಾ ರೊಟ್ಟಿ ಹಾಗೂ ನೀರನ್ನು ಇಟ್ಟು, ಅವನನ್ನು ಮೃದುವಾಗಿ ತಟ್ಟಿ, “ಎದ್ದು ಊಟಮಾಡು” ಎಂದನು. ಅವನು ಎದ್ದು ಅದನ್ನು ತಿಂದು ಕುಡಿದನು. ಆ ದೇವದೂತನಿಗೆ ಎಲೀಯ ಧನ್ಯವಾದ ಹೇಳಿದನೊ? ತಿಂದು ಕುಡಿದು ಪುನಃ ಮಲಗಿದನು ಎಂದು ಮಾತ್ರ ದಾಖಲೆ ಹೇಳುತ್ತದೆ. ಒಂದು ಮಾತೂ ಆಡಲಾಗದಷ್ಟು ಅವನು ಎದೆಗುಂದಿರಬೇಕು. ದೇವದೂತನು ಅವನನ್ನು ಎರಡನೇ ಸಲ ಬಹುಶಃ ಮುಂಜಾನೆ ಎಬ್ಬಿಸಿ, “ಎದ್ದು ಊಟಮಾಡು” ಎಂದನು. ಬಳಿಕ ಏನೆಂದನೆಂದು ಗಮನಿಸಿ: “ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ.”—1 ಅರ. 19:5-7.
14 ದೇವರು ಕೊಟ್ಟ ಒಳನೋಟದಿಂದಾಗಿ ಆ ದೇವದೂತನಿಗೆ ಎಲೀಯ ಎಲ್ಲಿಗೆ ಹೋಗುತ್ತಿದ್ದಾನೆಂದು ತಿಳಿದಿತ್ತು. ಅಷ್ಟು ದೂರ ಪ್ರಯಾಣಮಾಡಲು ಎಲೀಯನಿಗೆ ತನ್ನ ಸ್ವಂತ ಶಕ್ತಿ ಸಾಲದೆಂದೂ ಆ ದೂತನಿಗೆ ತಿಳಿದಿತ್ತು. ಇದು ನಮಗೂ ಸಾಂತ್ವನದಾಯಕ. ಏಕೆಂದರೆ ನಾವು ಸೇವೆಸಲ್ಲಿಸುತ್ತಿರುವ ದೇವರಿಗೆ ನಮ್ಮ ಗುರಿಗಳು ಮತ್ತು ಇತಿಮಿತಿಗಳ ಬಗ್ಗೆ ನಮಗಿಂತಲೂ ಚೆನ್ನಾಗಿ ತಿಳಿದಿದೆ. (ಕೀರ್ತನೆ 103:13, 14 ಓದಿ.) ಎಲೀಯನಿಗೆ ಆ ಊಟದಿಂದ ಹೇಗೆ ಪ್ರಯೋಜನವಾಯಿತು?
15, 16. (1) ಯೆಹೋವನ ಪೋಷಣೆಯಿಂದ ಎಲೀಯ ಏನು ಮಾಡಲು ಶಕ್ತನಾದನು? (2) ಯೆಹೋವನು ತನ್ನ ಸೇವಕರಾದ ನಮಗೆ ಇಂದು ಕೊಡುತ್ತಿರುವ ಪೋಷಣೆಗಾಗಿ ನಾವೇಕೆ ಕೃತಜ್ಞರಾಗಿರಬೇಕು?
15 ‘ಅವನು ಎದ್ದು ತಿಂದು ಕುಡಿದು ಅದರ ಬಲದಿಂದ ನಲ್ವತ್ತು ದಿವಸ ಹಗಲಿರುಳು ಪ್ರಯಾಣಮಾಡಿ ದೇವಗಿರಿಯಾದ ಹೋರೇಬಿಗೆ ಮುಟ್ಟಿದನು’ ಎನ್ನುತ್ತದೆ ವೃತ್ತಾಂತ. (1 ಅರ. 19:8, 9) ಅವನಿಗಿಂತ ಸುಮಾರು 600 ವರ್ಷಗಳ ಮುಂಚೆ ಇದ್ದ ಮೋಶೆಯಂತೆ ಮತ್ತು ಅವನ ನಂತರ ಹತ್ತಿರಹತ್ತಿರ 1,000 ವರ್ಷಗಳ ಬಳಿಕ ಜೀವಿಸಿದ ಯೇಸುವಿನಂತೆ ಎಲೀಯ ಸಹ 40 ದಿನ ಹಗಲಿರುಳು ಉಪವಾಸವಿದ್ದನು. (ವಿಮೋ. 34:28; ಲೂಕ 4:1, 2) ಒಂದು ಊಟ ಅವನೆಲ್ಲ ಸಮಸ್ಯೆಯನ್ನು ಹೋಗಲಾಡಿಸಲಿಲ್ಲ ನಿಜ. ಆದರೆ ಅದು ಅದ್ಭುತ ರೀತಿಯಲ್ಲಿ ಅವನನ್ನು ಪೋಷಿಸಿತು. ಯಾವುದೇ ರಸ್ತೆ-ಹಾದಿಗಳಿಲ್ಲದ ಅರಣ್ಯದಲ್ಲಿ ವಯೋವೃದ್ಧನಾದ ಎಲೀಯ ದಿನದಿನವೂ ವಾರವಾರವೂ ಸುಮಾರು ಒಂದೂವರೆ ತಿಂಗಳ ತನಕ ಪ್ರಯಾಸಪಟ್ಟು ನಡೆಯಲು ಬಲಕೊಟ್ಟಿತು!
16 ಇಂದು ಕೂಡ ಯೆಹೋವನು ತನ್ನ ಸೇವಕರನ್ನು ಪೋಷಿಸುತ್ತಾನೆ. ಚಮತ್ಕಾರದಿಂದ ಅವರ ಮುಂದೆ ಊಟ ಇಡುವ ಮೂಲಕವಲ್ಲ. ಅದಕ್ಕಿಂತ ಹೆಚ್ಚು ಪ್ರಮುಖ ವಿಧದಲ್ಲಿ ಅಂದರೆ ತನ್ನ ಸೇವಕರಿಗೆ ಆಧ್ಯಾತ್ಮಿಕ ಪೋಷಣೆ ಒದಗಿಸುವ ಮೂಲಕ. (ಮತ್ತಾ. 4:4) ಈ ಪೋಷಣೆ ನಮಗೆ ಹೇಗೆ ಸಿಗುತ್ತದೆ? ಬೈಬಲ್ ಹಾಗೂ ಬೈಬಲ್ ಆಧರಿತ ಪ್ರಕಾಶನಗಳಿಂದ ದೇವರ ಕುರಿತು ಕಲಿಯುವ ಮೂಲಕವೇ. ಅಂಥ ಆಧ್ಯಾತ್ಮಿಕ ಪೋಷಣೆ ನಮ್ಮೆಲ್ಲ ಸಮಸ್ಯೆಗಳನ್ನು ಹೋಗಲಾಡಿಸದಿದ್ದರೂ ಅವುಗಳನ್ನು ಸಹಿಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಆ ಪೋಷಣೆ ಇರದಿದ್ದರೆ ನಮ್ಮಿಂದ ಆ ಸಮಸ್ಯೆಗಳನ್ನು ಸಹಿಸಲು ಆಗಲಿಕ್ಕಿಲ್ಲ. ಅದು ನಮ್ಮನ್ನು ‘ನಿತ್ಯಜೀವಕ್ಕೂ’ ನಡೆಸುತ್ತದೆ.—ಯೋಹಾ. 17:3.
17. (1) ಎಲೀಯ ಹೋದದ್ದು ಎಲ್ಲಿಗೆ? (2) ಅದೊಂದು ಪ್ರಮುಖ ಸ್ಥಳವಾಗಿತ್ತೇಕೆ?
17 ಎಲೀಯ ಸುಮಾರು 320 ಕಿ.ಮೀ. ಕ್ರಮಿಸಿ ಕೊನೆಗೆ ಹೋರೇಬ್ ಬೆಟ್ಟ (ಸೀನಾಯಿ ಬೆಟ್ಟ) ತಲಪಿದನು. ಅದೊಂದು ಮಹತ್ವಪೂರ್ಣವಾದ ಐತಿಹಾಸಿಕ ಸ್ಥಳವಾಗಿತ್ತು. ಏಕೆಂದರೆ ಬಹು ವರ್ಷಗಳ ಹಿಂದೆ ಅಲ್ಲೇ ಯೆಹೋವ ದೇವರು ತನ್ನ ದೂತನ ಮೂಲಕ ಉರಿಯುವ ಪೊದೆಯಲ್ಲಿ ಮೋಶೆಗೆ ಕಾಣಿಸಿಕೊಂಡಿದ್ದನು. ಇಸ್ರಾಯೇಲ್ಯರೊಂದಿಗೆ ಯೆಹೋವನು ಧರ್ಮಶಾಸ್ತ್ರದ ಒಡಂಬಡಿಕೆ ಮಾಡಿದ್ದೂ ಅಲ್ಲಿಯೇ. ಈಗ ಅದೇ ಬೆಟ್ಟಕ್ಕೆ ಎಲೀಯ ಬಂದು ಗವಿಯೊಂದರಲ್ಲಿ ಉಳುಕೊಂಡನು.
ಯೆಹೋವನು ತನ್ನ ಪ್ರವಾದಿಯನ್ನು ಸಂತೈಸಿ ಬಲಪಡಿಸಿದ ವಿಧ
18, 19. (1) ಯೆಹೋವನ ದೂತನು ಎಲೀಯನಿಗೆ ಯಾವ ಪ್ರಶ್ನೆ ಕೇಳಿದನು? (2) ಅದಕ್ಕೆ ಎಲೀಯ ಹೇಗೆ ಪ್ರತಿಕ್ರಿಯಿಸಿದನು? (3) ಯಾವ ಮೂರು ಕಾರಣಗಳಿಂದ ಎಲೀಯ ಖಿನ್ನನಾಗಿದ್ದನು?
18 ಹೋರೇಬ್ನಲ್ಲಿ ಎಲೀಯನಿಗೆ ದೇವದೂತನ ಮೂಲಕ ಯೆಹೋವನ “ವಾಣಿ” ಕೇಳಿಬಂತು. ಅದು ಈ ಚಿಕ್ಕ ಪ್ರಶ್ನೆ ಕೇಳಿತು: “ಎಲೀಯನೇ, ನೀನು ಇಲ್ಲೇನು ಮಾಡುತ್ತೀ?” ಬಹುಶಃ ಈ ಪ್ರಶ್ನೆಯನ್ನು ಸೌಮ್ಯವಾಗಿ ಕೇಳಲಾಯಿತು. ಆದ್ದರಿಂದಲೇ ಅದನ್ನು ತನ್ನ ಭಾವನೆಗಳನ್ನು ತೋಡಿಕೊಳ್ಳಲು ಆಮಂತ್ರಣವೆಂದೆಣಿಸಿ ಎಲೀಯ ಹೀಗಂದನು: “ಸೇನಾಧೀಶ್ವರನಾದ ದೇವರೇ, ಯೆಹೋವನೇ, ಇಸ್ರಾಯೇಲ್ಯರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ, ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ, ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ.” (1 ಅರ. 19:9, 10) ಈ ಮಾತುಗಳು ಅವನು ಖಿನ್ನನಾಗಿದ್ದಕ್ಕೆ ಕಡಿಮೆಪಕ್ಷ ಮೂರು ಕಾರಣಗಳನ್ನು ಕೊಡುತ್ತವೆ.
19 ಮೊದಲನೆಯದಾಗಿ ತಾನು ಈ ತನಕ ಮಾಡಿದ ಕೆಲಸವೆಲ್ಲವೂ ವ್ಯರ್ಥವೆಂದು ಎಲೀಯನಿಗೆ ಅನಿಸಿತು. ಅವನು ಯೆಹೋವನ ಸೇವೆಯನ್ನು ಅನೇಕ ವರ್ಷಗಳಿಂದ “ಆಸಕ್ತನಾಗಿ” ಅಂದರೆ ಬಹು ಹುರುಪಿನಿಂದ ಮಾಡುತ್ತಾ ಆತನ ಪವಿತ್ರ ನಾಮಕ್ಕೆ, ಆರಾಧನೆಗೆ ಆದ್ಯತೆ ಕೊಟ್ಟಿದ್ದನು. ಆದರೂ ಪರಿಸ್ಥಿತಿಗಳು ಹೆಚ್ಚು ಕೆಟ್ಟದ್ದಾಗುತ್ತಾ ಹೋಗುವುದನ್ನು, ಜನರು ನಂಬಿಕೆಹೀನರೂ ದಂಗೆಕೋರರೂ ಆಗಿ ಮುಂದುವರಿಯುವುದನ್ನು, ಸುಳ್ಳಾರಾಧನೆ ಹಬ್ಬುತ್ತಾ ಇರುವುದನ್ನು ಎಲೀಯ ಕಂಡನು. ಎರಡನೆಯದಾಗಿ ಎಲೀಯನಿಗೆ ತಾನು ಒಂಟಿ ಎಂದನಿಸಿತು. ‘ನಾನೊಬ್ಬನೇ ಉಳಿದಿದ್ದೇನೆ’ ಎಂದನವನು. ಆ ಇಡೀ ಜನಾಂಗದಲ್ಲಿ ಯೆಹೋವನ ಸೇವೆಯಲ್ಲಿ ಉಳಿದವನು ತಾನೊಬ್ಬನೇ ಎಂದು ಅವನಿಗನಿಸಿತು. ಮೂರನೆಯದಾಗಿ ಎಲೀಯನು ತುಂಬ ಹೆದರಿದ್ದನು. ಈಗಾಗಲೇ ಎಷ್ಟೋ ನಂಬಿಗಸ್ತ ಪ್ರವಾದಿಗಳ ಕೊಲೆಯಾಗಿತ್ತು. ಮುಂದಿನ ಸರದಿ ತನ್ನದೇ ಎಂದು ಖಾತ್ರಿಯಾಗಿತ್ತು ಅವನಿಗೆ. ತನ್ನ ಈ ಮನಃಸ್ಥಿತಿಯನ್ನು ಹೇಳಲು ಎಲೀಯನಿಗೆ ಅಷ್ಟೇನೂ ಸುಲಭ ಆಗಿದ್ದಿರಲಿಕ್ಕಿಲ್ಲ. ಹಾಗಿದ್ದರೂ ಅಹಂಕಾರ ಅಥವಾ ಮುಜುಗರ ಪಡದೆ ಪ್ರಾರ್ಥನೆಯಲ್ಲಿ ದೇವರ ಮುಂದೆ ತನ್ನ ಹೃದಯವನ್ನು ಬಿಚ್ಚಿಟ್ಟನು. ಹೀಗೆ ಎಲೀಯ ನಂಬಿಗಸ್ತ ಜನರೆಲ್ಲರಿಗೆ ಒಳ್ಳೇ ಮಾದರಿಯನ್ನಿಟ್ಟನು.—ಕೀರ್ತ. 62:8.
20, 21. (1) ಎಲೀಯ ಗವಿಯ ದ್ವಾರದ ಹೊರಗೆ ನಿಂತು ನೋಡಿದ್ದೆಲ್ಲವನ್ನು ವರ್ಣಿಸಿ. (2) ನೈಸರ್ಗಿಕ ಶಕ್ತಿಗಳ ಅದ್ಭುತ ಪ್ರದರ್ಶನ ಎಲೀಯನಿಗೆ ಏನು ಕಲಿಸಿತು?
20 ಯೆಹೋವನು ಎಲೀಯನ ಭಯ, ಚಿಂತೆಗಳನ್ನು ಹೇಗೆ ಶಮನಗೊಳಿಸಿದನು? ದೇವದೂತನು ಎಲೀಯನಿಗೆ ಗವಿಯ ದ್ವಾರದ ಹೊರಗೆ ಬಂದು ನಿಲ್ಲುವಂತೆ ಹೇಳಿದನು. ಏನಾಗಲಿದೆಯೆಂದು ಎಲೀಯನಿಗೆ ಗೊತ್ತಿರದಿದ್ದರೂ ವಿಧೇಯನಾದನು. ದೊಡ್ಡ ಬಿರುಗಾಳಿ ಬೀಸತೊಡಗಿತು! ಕಿವಿಗಡಚಿಕ್ಕುವಂತಿತ್ತು ಅದರ ಆರ್ಭಟ. ಅದರ ಪ್ರಚಂಡ ಶಕ್ತಿ ಪರ್ವತಗಳನ್ನೂ ಬಂಡೆಗಳನ್ನೂ ಸೀಳಿಹಾಕಿತು. ಗಾಳಿಯ ರಭಸಕ್ಕೆ ತನ್ನ ಕಂಬಳಿ ಹಾರಿಹೋಗದಂತೆ ಎಲೀಯನು ಅದನ್ನು ಗಟ್ಟಿಯಾಗಿ ಹಿಡಿದು, ಕಣ್ಣುಗಳಿಗೆ ಕೈಯನ್ನು ಮರೆಯಾಗಿಡಲು ಪ್ರಯತ್ನಿಸುವುದನ್ನು ಚಿತ್ರಿಸಿಕೊಳ್ಳಿ. ಅನಂತರ ಭೂಮಿ ಕಂಪಿಸತೊಡಗಿತು! ನೆಲ ಅಲುಗಾಡುತ್ತಿದ್ದಾಗ ಅವನು ಬೀಳದಂತೆ ಕಾಲೂರಿ ನಿಲ್ಲಲು ಒದ್ದಾಡಿದನು. ಇದರಿಂದ ಸಾವರಿಸಿಕೊಳ್ಳುವಷ್ಟರಲ್ಲಿ “ಸಿಡಿಲುಂಟಾಯಿತು.” ಪವಿತ್ರ ಗ್ರಂಥ ಭಾಷಾಂತರ ಇದನ್ನು “ಬೆಂಕಿ” ಎಂದು ಕರೆಯುತ್ತದೆ. ಅದರ ಉರಿಯುವ ತಾಪದಿಂದ ಸುಟ್ಟುಹೋಗದಂತೆ ಅವನು ತಟ್ಟನೆ ಗವಿಯೊಳಗೆ ಹಿಂದೆಸರಿದನು.—1 ಅರ. 19:11, 12.
21 ಅದ್ಭುತವಾಗಿ ಪ್ರದರ್ಶಿಸಲಾದ ಈ ನೈಸರ್ಗಿಕ ಶಕ್ತಿಗಳಲ್ಲಿ ಯಾವುದರಲ್ಲೂ ಯೆಹೋವನು ಇರಲಿಲ್ಲವೆಂದು ದಾಖಲೆ ನಮಗೆ ನೆನಪಿಸುತ್ತದೆ. “ಮೇಘ-ಸವಾರ” ಇಲ್ಲವೆ ಮಳೆರಾಯನೆಂದು ನಂಬಲಾಗುತ್ತಿದ್ದ ಬಾಳನಂತೆ ಯೆಹೋವನು ಪೌರಾಣಿಕ ಪ್ರಕೃತಿ ದೇವರಲ್ಲ ಎಂದು ಎಲೀಯನಿಗೆ ಗೊತ್ತಿತ್ತು. ನಿಸರ್ಗದಲ್ಲಿ ಕಂಡುಬರುವ ಪ್ರಚಂಡ ಶಕ್ತಿಯ ಮೂಲನು ಯೆಹೋವನು. ಮಾತ್ರವಲ್ಲ ತಾನು ಸೃಷ್ಟಿಸಿದ್ದೆಲ್ಲದಕ್ಕಿಂತ ಎಷ್ಟೋ ಮಹೋನ್ನತನು. ಇಡೀ ಆಕಾಶವೂ ಆತನ ವಾಸಕ್ಕೆ ಸಾಲದು! (1 ಅರ. 8:27) ನೈಸರ್ಗಿಕ ಶಕ್ತಿಯ ಪ್ರದರ್ಶನದಿಂದ ಎಲೀಯನಿಗೆ ಹೇಗೆ ಸಹಾಯವಾಯಿತು? ಅವನು ಅಹಾಬ, ಈಜೆಬೆಲಳಿಗೆ ಹೆದರಿ ಓಡಿಬಂದಿದ್ದನೆಂದು ನೆನಪಿಸಿಕೊಳ್ಳಿ. ಅಷ್ಟೊಂದು ಅಪಾರ ಶಕ್ತಿಯುಳ್ಳ ಯೆಹೋವ ದೇವರೇ ಎಲೀಯನ ಪಕ್ಷದಲ್ಲಿದ್ದದರಿಂದ ಅವರಿಬ್ಬರಿಗೆ ಹೆದರಲು ಈಗ ಕಾರಣವೇ ಅವನಿಗಿರಲಿಲ್ಲ!—ಕೀರ್ತನೆ 118:6 ಓದಿ.
22. (1) ಎಲೀಯನು ನಿಷ್ಪ್ರಯೋಜಕನಲ್ಲವೆಂಬ ಆಶ್ವಾಸನೆಯನ್ನು “ಶಾಂತವಾದ ಮೆಲುದನಿ” ಹೇಗೆ ಕೊಟ್ಟಿತು? (2) “ಶಾಂತವಾದ ಮೆಲುದನಿ” ಕೇಳಿಬಂದದ್ದು ಯಾರ ಮೂಲಕ? (ಪಾದಟಿಪ್ಪಣಿ ನೋಡಿ.)
22 ಬೆಂಕಿಯ ನಂತರ ಮೌನ ಆವರಿಸಿತು. ಎಲೀಯನಿಗೆ “ಮಂದಮಾರುತಶಬ್ದ”a ಅಥವಾ ಮೂಲ ಹೀಬ್ರು ಬರಹಕ್ಕನುಸಾರ “ಶಾಂತವಾದ ಮೆಲುದನಿ” ಕೇಳಿಬಂತು. ಅದು ಎಲೀಯನಿಗೆ ಪುನಃ ತನ್ನ ಚಿಂತೆಗಳನ್ನು ವ್ಯಕ್ತಪಡಿಸುವಂತೆ ಆಮಂತ್ರಿಸಿತು. ಆಗ ಅವನು ಎರಡನೇ ಬಾರಿ ತನ್ನ ಹೃದಯ ತೋಡಿಕೊಂಡನು. ಇದರಿಂದ ಅವನ ಮನಸ್ಸು ಇನ್ನಷ್ಟು ಹಗುರವಾಗಿರಬೇಕು. ಆದರೆ ಅವನಿಗೆ ಹೆಚ್ಚು ಸಾಂತ್ವನ ಸಿಕ್ಕಿದ್ದು “ಶಾಂತವಾದ ಮೆಲುದನಿ” ಹೇಳಿದ ಮಾತುಗಳಿಂದ. ಎಲೀಯನು ನಿಷ್ಪ್ರಯೋಜಕನಲ್ಲ ಎಂಬ ಆಶ್ವಾಸನೆಯನ್ನು ಯೆಹೋವನು ಕೊಟ್ಟನು. ಹೇಗೆ? ಇಸ್ರಾಯೇಲಿನಲ್ಲಿ ಬಾಳ್ ಆರಾಧನೆಯ ವಿರುದ್ಧ ತಾನು ಮುಂದೇನು ಮಾಡಲಿದ್ದೇನೆಂದು ಯೆಹೋವನು ತಿಳಿಸಿದನು. ಹೌದು, ಎಲೀಯನು ಮಾಡಿದ ಕೆಲಸವು ವ್ಯರ್ಥವಾಗಿರಲಿಲ್ಲ ಏಕೆಂದರೆ ಬಾಳ್ ಆರಾಧನೆ ವಿರುದ್ಧ ದೇವರು ಇನ್ನೂ ಹೆಚ್ಚಿನ ಕ್ರಮ ತಕ್ಕೊಳ್ಳಲಿದ್ದನು. ಅಲ್ಲದೆ ಈ ಕೆಲಸದಲ್ಲಿ ಎಲೀಯನ ಪಾತ್ರ ಮುಂದುವರಿಯಲಿತ್ತು. ಆದ್ದರಿಂದ ಯೆಹೋವನು ಅವನಿಗೆ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟು ವಾಪಸ್ ಆ ಕೆಲಸಕ್ಕೆ ಕಳುಹಿಸಿದನು.—1 ಅರ. 19:12-17.
23. ಯಾವ ಎರಡು ಸಂಗತಿಗಳನ್ನು ಹೇಳುವ ಮೂಲಕ ಯೆಹೋವನು ಎಲೀಯನ ಒಂಟಿ ಭಾವನೆಯನ್ನು ದೂರ ಮಾಡಿದನು?
23 ಎಲೀಯನಿಗಿದ್ದ ಒಂಟಿತನದ ಭಾವನೆಗಳನ್ನು ಯೆಹೋವನು ದೂರ ಮಾಡಿದ್ದು ಹೇಗೆ? ಎರಡು ಸಂಗತಿಗಳನ್ನು ಹೇಳಿದನು. ಮೊದಲನೇದಾಗಿ, ಎಲೀಷನನ್ನು ಪ್ರವಾದಿಯಾಗಿ ಅಭಿಷೇಕಿಸಿ ಉತ್ತರಾಧಿಕಾರಿಯಾಗಿ ಮಾಡಿಕೊಳ್ಳುವಂತೆ ಎಲೀಯನಿಗೆ ಹೇಳಿದನು. ಮುಂದಿನ ಅನೇಕ ವರ್ಷಗಳ ವರೆಗೆ ಎಲೀಯನಿಗೆ ಒಬ್ಬ ಸಂಗಡಿಗ ಮತ್ತು ಸಹಾಯಕನಾಗಿ ಈ ಯುವ ಪುರುಷನನ್ನು ಯೆಹೋವನು ನೇಮಿಸಿದ್ದು ವ್ಯಾವಹಾರಿಕವಾಗಿತ್ತು. ಈ ಮೂಲಕ ಯೆಹೋವನು ಅವನನ್ನು ಸಂತೈಸಿದನು. ಎರಡನೆಯದಾಗಿ ಯೆಹೋವನು ಈ ರೋಮಾಂಚಕ ಸುದ್ದಿಯನ್ನು ತಿಳಿಸಿದನು: “ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಮಂದಿ ಇಸ್ರಾಯೇಲ್ಯರನ್ನು ಉಳಿಸುವೆನು.” (1 ಅರ. 19:18) ಇದನ್ನು ಕೇಳಿ ಖಂಡಿತ ಅವನ ಮನಸ್ಸಿಗೆ ನೆಮ್ಮದಿಯಾಗಿರಬೇಕು. ಏಕೆಂದರೆ ಅವನು ಒಂಟಿಯಲ್ಲ, ಬಾಳನನ್ನು ಆರಾಧಿಸಲು ನಿರಾಕರಿಸಿದ ನಂಬಿಗಸ್ತ ಜನರು ಸಾವಿರಾರು ಸಂಖ್ಯೆಯಲ್ಲಿದ್ದರು. ಆ ಕಷ್ಟಕರ ಸಮಯಗಳಲ್ಲೂ ಎಲೀಯ ಯೆಹೋವನಿಗೆ ಅಚಲ ನಿಷ್ಠೆ ತೋರಿಸುತ್ತಾ ನಂಬಿಗಸ್ತ ಸೇವೆಯನ್ನು ಮುಂದುವರಿಸುವ ಮೂಲಕ ಇಡುವ ಮಾದರಿ ಆ ಜನರೆಲ್ಲರಿಗೆ ಅಗತ್ಯವಾಗಿತ್ತು. ತನ್ನ ದೂತನ ಮೂಲಕ ಯೆಹೋವನು “ಶಾಂತವಾದ ಮೆಲುದನಿ”ಯಲ್ಲಿ ಹೇಳಿದ ಮಾತುಗಳು ಎಲೀಯನನ್ನು ಹುರಿದುಂಬಿಸಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೈಬಲ್ ನಮ್ಮನ್ನು ಇಂದು ಮಾರ್ಗದರ್ಶಿಸುವಂತೆ ನಾವು ಬಿಟ್ಟರೆ ಅದು ಒಂದರ್ಥದಲ್ಲಿ ಆ “ಶಾಂತವಾದ ಮೆಲುದನಿ”ಯಂತಿರಬಲ್ಲದು
24, 25. (1) ಯೆಹೋವನ “ಶಾಂತವಾದ ಮೆಲುದನಿ” ನಮಗಿಂದು ಯಾವುದರ ಮೂಲಕ ಕೇಳಿಬರುತ್ತಿದೆ? (2) ಯೆಹೋವನು ಕೊಟ್ಟ ಸಾಂತ್ವನವನ್ನು ಎಲೀಯ ಸ್ವೀಕರಿಸಿದನೆಂದು ಏಕೆ ಹೇಳಬಲ್ಲೆವು?
24 ಎಲೀಯನಂತೆ ನಾವೂ ಪ್ರಾಕೃತಿಕ ಶಕ್ತಿಗಳ ಪ್ರದರ್ಶನವನ್ನು ನೋಡಿದಾಗೆಲ್ಲ ಮೂಕವಿಸ್ಮಿತರಾಗುತ್ತೇವೆ. ಸೃಷ್ಟಿಕರ್ತನಿಗಿರುವ ಶಕ್ತಿಯು ಆತನ ಸೃಷ್ಟಿಯಲ್ಲಿ ಸ್ಪಷ್ಟವಾಗಿ ತೋರಿಬರುತ್ತದೆ. (ರೋಮ. 1:20) ತನ್ನ ನಂಬಿಗಸ್ತ ಸೇವಕರಿಗೆ ಸಹಾಯಮಾಡಲು ಯೆಹೋವನು ಈಗಲೂ ತನ್ನ ಅಪರಿಮಿತ ಶಕ್ತಿಯನ್ನು ಬಳಸಲು ಸಂತೋಷಿಸುತ್ತಾನೆ. (2 ಪೂರ್ವ. 16:9) ಆದರೆ ನಮ್ಮ ದೇವರ ಬಗ್ಗೆ ನಾವು ಬಹಳಷ್ಟನ್ನು ಕಲಿಯಲು ಸಾಧ್ಯವಾಗುವುದು ಆತನ ವಾಕ್ಯವಾದ ಬೈಬಲಿನ ಮೂಲಕ. (ಯೆಶಾಯ 30:21 ಓದಿ.) ಬೈಬಲ್ ನಮ್ಮನ್ನು ಇಂದು ಮಾರ್ಗದರ್ಶಿಸುವಂತೆ ನಾವು ಬಿಟ್ಟರೆ ಅದು ಒಂದರ್ಥದಲ್ಲಿ ಆ “ಶಾಂತವಾದ ಮೆಲುದನಿ”ಯಂತಿರಬಲ್ಲದು. ಬೈಬಲ್ ಪುಟಗಳಲ್ಲಿರುವ ಅಮೂಲ್ಯ ವಿಷಯಗಳ ಮೂಲಕ ಯೆಹೋವನು ನಮ್ಮನ್ನು ಇಂದು ತಿದ್ದುತ್ತಾನೆ, ಪ್ರೋತ್ಸಾಹಿಸುತ್ತಾನೆ ಮತ್ತು ನಮ್ಮನ್ನು ಪ್ರೀತಿಸುತ್ತಾನೆಂಬ ಆಶ್ವಾಸನೆಯನ್ನೂ ಕೊಡುತ್ತಾನೆ.
25 ಹೋರೇಬ್ ಬೆಟ್ಟದಲ್ಲಿ ಯೆಹೋವನು ಕೊಟ್ಟ ಸಾಂತ್ವನವನ್ನು ಎಲೀಯ ಸ್ವೀಕರಿಸಿದನೊ? ಖಂಡಿತವಾಗಿಯೂ ಹೌದು! ಆದ್ದರಿಂದಲೇ ಅವನು ಧೈರ್ಯದಿಂದ ದೇವರ ಸೇವೆಮಾಡುವುದನ್ನು ಕೂಡಲೆ ಆರಂಭಿಸುತ್ತಾ ಸುಳ್ಳಾರಾಧನೆಯನ್ನು ಬಿಟ್ಟುಬಿಡುವಂತೆ ಜನರಿಗೆ ಎಚ್ಚರಿಕೆ ಕೊಟ್ಟ. ನಾವು ಸಹ ದೇವರ ಪ್ರೇರಿತ ಮಾತುಗಳನ್ನು, “ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನ”ವನ್ನು ಹೃದಯಕ್ಕೆ ತಕ್ಕೊಳ್ಳುವಲ್ಲಿ ಎಲೀಯನ ನಂಬಿಕೆಯನ್ನು ಅನುಕರಿಸಬಲ್ಲೆವು.—ರೋಮ. 15:4.
a “ಶಾಂತವಾದ ಮೆಲುದನಿ” ಮತ್ತು 1 ಅರಸುಗಳು 19:9 ರಲ್ಲಿ ತಿಳಿಸಲಾದ ‘ಯೆಹೋವನ ವಾಣಿ’ ಕೇಳಿಬಂದದ್ದು ಬಹುಶಃ ಒಬ್ಬನೇ ದೇವದೂತನ ಮೂಲಕ. 15ನೇ ವಚನದಲ್ಲಿ ಈ ದೇವದೂತನನ್ನು “ಯೆಹೋವ” ಎಂದು ಸೂಚಿಸಲಾಗಿದೆ. ಇದು ನಮಗೆ ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ಮಾರ್ಗದರ್ಶಿಸಿದ ದೂತನ ಕುರಿತು ಯೆಹೋವನು ಏನಂದನೆಂಬುದನ್ನು ನೆನಪಿಗೆ ತರುತ್ತದೆ. ದೇವರು ಹೀಗಂದಿದ್ದನು: “ನನ್ನ ನಾಮಮಹಿಮೆ ಆತನಲ್ಲಿ ಇರುವದು.” (ವಿಮೋ. 23:21) ಎಲೀಯನಿಗೆ ಸಂದೇಶ ನೀಡಿದ ದೇವದೂತ ಯಾರೆಂದು ನಿಶ್ಚಯವಾಗಿ ಹೇಳಲಾಗದು ನಿಜ. ಆದರೆ ಗಮನಿಸತಕ್ಕ ವಿಷಯವೇನೆಂದರೆ, ಯೇಸು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ “ವಾಕ್ಯ” ಅಂದರೆ ಯೆಹೋವನ ಸೇವಕರಿಗೆ ಆತನ ಮಾತುಗಳನ್ನು ತಲಪಿಸುತ್ತಿದ್ದ ವಿಶೇಷ ವಕ್ತಾರನಾಗಿ ಸೇವೆಮಾಡಿದ್ದನು.—ಯೋಹಾ. 1:1.