ಉದಾರಭಾವವು ತುಂಬಿತುಳುಕುವಾಗ
ಒಬ್ಬ ಅರಸನಿಗೆ ಒಂದು ಉಡುಗೊರೆಯನ್ನು ಕೊಡುವ ಅವಕಾಶವು ನಿಮಗಿರುತ್ತಿದ್ದಲ್ಲಿ, ನೀವು ಅವನಿಗೆ ಏನನ್ನು ಕೊಡುತ್ತಿದ್ದಿರಿ? ಆ ಅರಸನು ಇಡೀ ಲೋಕದಲ್ಲೇ ತುಂಬ ಐಶ್ವರ್ಯವಂತನೂ ಅತಿ ಬುದ್ಧಿವಂತನೂ ಆಗಿರುತ್ತಿದ್ದಲ್ಲಿ ಆಗೇನು? ಅವನಿಗೆ ಇಷ್ಟವಾಗುವಂತಹ ಯಾವುದಾದರೂ ಉಡುಗೊರೆಯು ನಿಮ್ಮ ಮನಸ್ಸಿಗೆ ಹೊಳೆಯಸಾಧ್ಯವಿತ್ತೊ? ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಇಂತಹ ಒಬ್ಬ ಅರಸನನ್ನು, ಅಂದರೆ ಇಸ್ರಾಯೇಲ್ನ ಅರಸನಾದ ಸೊಲೊಮೋನನನ್ನು ಭೇಟಿಮಾಡಲು ಸಿದ್ಧಳಾಗುತ್ತಿದ್ದಾಗ, ಶೆಬದ ರಾಣಿಯು ಆ ಪ್ರಶ್ನೆಗಳನ್ನು ಪರಿಗಣಿಸಬೇಕಾಗಿತ್ತು.
ಅವಳ ಉಡುಗೊರೆಗಳಲ್ಲಿ, ನೂರಿಪ್ಪತ್ತು ತಲಾಂತು ಚಿನ್ನ ಹಾಗೂ ‘ಅಪರಿಮಿತ ಸುಗಂಧದ್ರವ್ಯ ಮತ್ತು ರತ್ನಗಳು’ ಒಳಗೂಡಿದ್ದವು ಎಂದು ಬೈಬಲು ನಮಗೆ ಹೇಳುತ್ತದೆ. ಇಂದಿನ ಬೆಲೆಯಲ್ಲಿ ಹೇಳುವುದಾದರೆ, ಅವಳು ತಂದ ಚಿನ್ನವೊಂದೇ ಸುಮಾರು 160 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವಂತಹದ್ದಾಗಿತ್ತು. ಪರಿಮಳದಿಂದ ಕೂಡಿದ್ದ ಔಷಧೀಯ ತೈಲವಾಗಿದ್ದ ಸುಗಂಧದ್ರವ್ಯವು, ಒಂದು ಅಮೂಲ್ಯ ವಸ್ತುವಿನೋಪಾದಿ ಚಿನ್ನದ ಪಂಕ್ತಿಗೆ ಸೇರಿದ್ದಾಗಿತ್ತು. ಆ ರಾಣಿಯು ಸೊಲೊಮೋನನಿಗೆ ಎಷ್ಟು ಸುಗಂಧದ್ರವ್ಯವನ್ನು ಕೊಟ್ಟಳು ಎಂಬುದನ್ನು ಬೈಬಲು ಹೇಳುವುದಿಲ್ಲವಾದರೂ, ಸುಗಂಧದ್ರವ್ಯವು ಅಪರಿಮಿತವಾಗಿತ್ತೆಂದು ಅದು ಹೇಳುತ್ತದೆ.—1 ಅರಸು 10:10.
ಶೆಬದ ರಾಣಿಯು ತುಂಬ ಐಶ್ವರ್ಯವಂತಳೂ ಉದಾರಿಯೂ ಆಗಿದ್ದಳು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಷ್ಟುಮಾತ್ರವಲ್ಲ, ಅವಳು ತೋರಿಸಿದ ಉದಾರಭಾವವು ಅವಳಿಗೇ ಹಿಂದಿರುಗಿಸಲ್ಪಟ್ಟಿತು. “ಅರಸನಾದ ಸೊಲೊಮೋನನು ಶೆಬದ ರಾಣಿಯಿಂದ ತನಗೆ ದೊರಕಿದ ಬಹುಮಾನಕ್ಕೆ ಪ್ರತಿಯಾಗಿ ಆಕೆಗೆ ತಾನು ಕೊಟ್ಟ ವಸ್ತುಗಳನ್ನಲ್ಲದೆ ಆಕೆಯು ಕೇಳಿದವುಗಳನ್ನೆಲ್ಲಾ ಕೊಟ್ಟುಬಿಟ್ಟನು” ಎಂದು ಬೈಬಲು ಹೇಳುತ್ತದೆ. (2 ಪೂರ್ವಕಾಲವೃತ್ತಾಂತ 9:12, ಓರೆ ಅಕ್ಷರಗಳು ನಮ್ಮವು.) ರಾಜಮನೆತನದವರು ಉಡುಗೊರೆಗಳನ್ನು ವಿನಿಮಯಮಾಡಿಕೊಳ್ಳುವುದು ಒಂದು ಪದ್ಧತಿಯಾಗಿದ್ದಿರಬಹುದು ಎಂಬುದು ನಿಜ; ಆದರೂ ಸೊಲೊಮೋನನ “ಧಾರಾಳತನ”ವನ್ನು ಬೈಬಲು ವಿಶೇಷವಾಗಿ ಉಲ್ಲೇಖಿಸುತ್ತದೆ. (1 ಅರಸು 10:13, NW) ಸೊಲೊಮೋನನು ತಾನೇ ಬರೆದುದು: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.”—ಜ್ಞಾನೋಕ್ತಿ 11:25.
ಸೊಲೊಮೋನನನ್ನು ಭೇಟಿಮಾಡಲಿಕ್ಕಾಗಿ ಶೆಬದ ರಾಣಿಯು ಸಮಯ ಹಾಗೂ ಪ್ರಯತ್ನದಲ್ಲಿ ಬಹು ದೊಡ್ಡ ತ್ಯಾಗವನ್ನು ಮಾಡಿದಳು ಎಂಬುದು ನಿಶ್ಚಯ. ಆಧುನಿಕ ದಿನದ ರಿಪಬ್ಲಿಕ್ ಆಫ್ ಯೆಮನ್ನ ಕ್ಷೇತ್ರದಲ್ಲಿ ಶೆಬ ದೇಶವು ಇತ್ತೆಂಬುದು ಸುವ್ಯಕ್ತ; ಆದುದರಿಂದ, ಒಂಟೆಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ದೊಡ್ಡ ಪರಿವಾರದೊಡನೆ ರಾಣಿಯು ಸುಮಾರು 1,600 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿ ಯೆರೂಸಲೇಮಿಗೆ ಬಂದು ಮುಟ್ಟಿದ್ದಳು. ಯೇಸು ಹೇಳಿದಂತೆ ಅವಳು “ಭೂಮಿಯ ಕಟ್ಟಕಡೆಯಿಂದ ಬಂದಳು.” ಶೆಬದ ರಾಣಿಯು ಇಷ್ಟೆಲ್ಲಾ ಶ್ರಮವನ್ನು ಏಕೆ ತೆಗೆದುಕೊಂಡಳು? ಮುಖ್ಯವಾಗಿ ಅವಳು “ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳು”ವುದಕ್ಕೋಸ್ಕರ ಬಂದಿದ್ದಳು.—ಲೂಕ 11:31.
“[ಅವಳು] ಅವನನ್ನು [ಸೊಲೊಮೋನನನ್ನು] ಒಗಟುಗಳಿಂದ ಪರೀಕ್ಷಿಸುವದಕ್ಕೆ ಬಂದಳು. . . . ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು” ಎಂದು 1 ಅರಸುಗಳು 10:1, 2ನೆಯ ವಚನಗಳು ಹೇಳುತ್ತವೆ. ಇದಕ್ಕೆ ಸೊಲೊಮೋನನು ಹೇಗೆ ಪ್ರತಿಕ್ರಿಯಿಸಿದನು? “ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಾದ ಅವನಿಗೆ ತಿಳಿಯದಂಥದು ಅವುಗಳಲ್ಲಿ ಒಂದೂ ಇರಲಿಲ್ಲವಾದದರಿಂದ ಎಲ್ಲವುಗಳಿಗೂ ಉತ್ತರಕೊಟ್ಟನು.”—1 ಅರಸು 10:3.
ತಾನು ಕೇಳಿಸಿಕೊಂಡ ಹಾಗೂ ನೋಡಿದ ಸಂಗತಿಗಳಿಂದ ಅತ್ಯಾಶ್ಚರ್ಯಗೊಂಡ ರಾಣಿಯು ದೀನಭಾವದಿಂದ ಹೇಳಿದ್ದು: “ನಿನ್ನ ಪ್ರಜೆಗಳೂ ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರೂ ಧನ್ಯರು.” (1 ಅರಸು 10:4-8) ಸೊಲೊಮೋನನ ಸೇವಕರು ಸುಖಭೋಗದಲ್ಲಿ ಜೀವಿಸುತ್ತಿದ್ದುದರಿಂದ ಅವರು ಧನ್ಯರು ಎಂದು ಅವಳು ಹೇಳಲಿಲ್ಲ. ಅವರು ಸುಖಭೋಗದಲ್ಲಿ ಜೀವಿಸುತ್ತಿದ್ದರೂ, ಸೊಲೊಮೋನನ ದೇವದತ್ತ ವಿವೇಕವನ್ನು ಯಾವಾಗಲೂ ಕೇಳಿಸಿಕೊಳ್ಳುವ ಅವಕಾಶ ಅವರಿಗಿದ್ದುದರಿಂದ ಅವರು ಆಶೀರ್ವದಿಸಲ್ಪಟ್ಟಿದ್ದರು. ಸ್ವತಃ ಸೃಷ್ಟಿಕರ್ತನ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ವಿವೇಕದ ಅಭಯ ಹಸ್ತದ ಕೆಳಗಿರುವಂತಹ ಇಂದಿನ ಯೆಹೋವನ ಜನರಿಗೆ ಶೆಬದ ರಾಣಿಯು ಎಂತಹ ಅತ್ಯುತ್ತಮ ಮಾದರಿಯಾಗಿದ್ದಾಳೆ!
ಶೆಬದ ರಾಣಿಯು ಸೊಲೊಮೋನನಿಗೆ ಹೇಳಿದ ಮುಂದಿನ ಮಾತು ಸಹ ತುಂಬ ಗಮನಾರ್ಹವಾದದ್ದಾಗಿತ್ತು: “ನಿನ್ನ ದೇವರಾದ ಕರ್ತನಿಗೆ [“ಯೆಹೋವನಿಗೆ,” NW] ಸ್ತೋತ್ರವಾಗಲಿ.” (1 ಅರಸು 10:9) ಸೊಲೊಮೋನನ ವಿವೇಕ ಹಾಗೂ ಸಮೃದ್ಧಿಯಲ್ಲಿ ಯೆಹೋವನ ಹಸ್ತವು ಒಳಗೂಡಿದ್ದನ್ನು ಅವಳು ಮನಗಂಡಳು ಎಂಬುದು ಸುವ್ಯಕ್ತ. ಈ ಮುಂಚೆ ಯೆಹೋವನು ಇಸ್ರಾಯೇಲ್ಯರಿಗೆ ಏನನ್ನು ವಾಗ್ದಾನಿಸಿದನೋ ಅದರೊಂದಿಗೆ ಇದು ಹೊಂದಿಕೆಯಲ್ಲಿದೆ. ‘ಆಜ್ಞಾವಿಧಿಗಳನ್ನು ಕೈಕೊಂಡು ಅನುಸರಿಸಿರಿ’ ಎಂದು ಆತನು ಹೇಳಿದನು. “ಇವುಗಳನ್ನು . . . ಅನುಸರಿಸಿದರೇ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ—ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ ಎಂದು ಮಾತಾಡಿಕೊಳ್ಳುವರು.”—ಧರ್ಮೋಪದೇಶಕಾಂಡ 4:5-7.
ವಿವೇಕವನ್ನು ಕೊಡುವಾತನ ಬಳಿಗೆ ಬರುವುದು
ಆಧುನಿಕ ಸಮಯಗಳಲ್ಲಿ ಲಕ್ಷಾಂತರ ಮಂದಿ ಯೆಹೋವನ ಸಂಸ್ಥೆಯ ಕಡೆಗೆ ಆಕರ್ಷಿಸಲ್ಪಟ್ಟಿದ್ದಾರೆ. ಏಕೆಂದರೆ “ದೇವರ ಇಸ್ರಾಯೇಲ್ಯರು” “ಜ್ಞಾನವಿವೇಕವುಳ್ಳ ಜನಾಂಗ”ವಾಗಿದ್ದಾರೆ ಎಂಬುದನ್ನು ಅವರು ಗ್ರಹಿಸಿದ್ದಾರೆ; ಇವರು ಸ್ವಾಭಾವಿಕವಾಗಿ “ಜ್ಞಾನವಿವೇಕವುಳ್ಳ ಜನಾಂಗ”ವಾಗಿಲ್ಲ, ಬದಲಾಗಿ ದೇವರ ಪರಿಪೂರ್ಣ ನಿಯಮಗಳು ಹಾಗೂ ಮೂಲತತ್ವಗಳು ಅವರನ್ನು ಮಾರ್ಗದರ್ಶಿಸುತ್ತವೆ. (ಗಲಾತ್ಯ 6:16) ಇತ್ತೀಚಿನ ವರ್ಷಗಳಲ್ಲಿ, ಪ್ರತಿ ವರ್ಷ ಲಕ್ಷಾಂತರ ಮಂದಿ ಹೊಸ ಶಿಷ್ಯರು ಆತ್ಮಿಕ ಇಸ್ರಾಯೇಲ್ಗೆ “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಹೇಳಿದ್ದಾರೆ ಎಂಬುದನ್ನು ದೀಕ್ಷಾಸ್ನಾನದ ಸಂಖ್ಯೆಗಳು ತೋರಿಸುತ್ತವೆ. (ಜೆಕರ್ಯ 8:23) ತನ್ನ ಸೇವಕರ ಮುಂದೆ ಯೆಹೋವನು ಅಣಿಮಾಡಿಟ್ಟಿರುವ ಆತ್ಮಿಕ ಆಹಾರದ ಔತಣವನ್ನು ನೋಡುವಾಗ ಈ ಹೊಸಬರು ಎಷ್ಟು ಅತ್ಯಾಶ್ಚರ್ಯಪಡುತ್ತಾರೆ! ತಮ್ಮ ಹಿಂದಿನ ಧರ್ಮಗಳಲ್ಲಿ ಅವರು ಇದಕ್ಕೆ ಸಮಾನವಾದ ಆತ್ಮಿಕ ಔತಣವನ್ನು ಎಂದೂ ನೋಡಿರುವುದಿಲ್ಲ.—ಯೆಶಾಯ 25:6.
ಅತ್ಯಂತ ಮಹಾನ್ ದಾತನಿಗೆ ಕೊಡುವುದು
ಇಷ್ಟೆಲ್ಲವನ್ನೂ ಯೆಹೋವನಿಂದ ಪಡೆದುಕೊಂಡಿರುವುದರಿಂದ, ಇದಕ್ಕಾಗಿ ಗಣ್ಯತೆಯನ್ನು ತೋರಿಸುವವರು, ಇದಕ್ಕೆ ಪ್ರತಿಯಾಗಿ ತಾವು ಅತ್ಯಂತ ಮಹಾನ್ ಅರಸನೂ ದಾತನೂ ಆಗಿರುವ ಯೆಹೋವ ದೇವರಿಗೆ ಏನು ಕೊಡಸಾಧ್ಯವಿದೆ ಎಂದು ಸಹಜವಾಗಿಯೇ ಯೋಚಿಸುತ್ತಾರೆ. ‘ಸ್ತೋತ್ರಯಜ್ಞವೇ’ ನಾವು ಯೆಹೋವನಿಗೆ ಕೊಡಸಾಧ್ಯವಿರುವ ಅತ್ಯುತ್ತಮ ಉಡುಗೊರೆಯಾಗಿದೆ ಎಂದು ಬೈಬಲು ಪ್ರಕಟಪಡಿಸುತ್ತದೆ. (ಇಬ್ರಿಯ 13:15) ಏಕೆ? ಏಕೆಂದರೆ ಈ ಅಂತ್ಯದ ಸಮಯದಲ್ಲಿ ಯೆಹೋವನಿಗೆ ಆದ್ಯ ಚಿಂತೆಯಾಗಿರುವ ಜೀವರಕ್ಷಣೆಯ ಕೆಲಸದೊಂದಿಗೆ ಈ ಯಜ್ಞವು ನೇರವಾಗಿ ಸಂಬಂಧಿಸಿದೆ. (ಯೆಹೆಜ್ಕೇಲ 18:23) ಇದಕ್ಕೆ ಕೂಡಿಸಿ, ಅಸ್ವಸ್ಥರಿಗೆ, ಖಿನ್ನರಿಗೆ, ಮತ್ತು ಇತರರಿಗೆ ಸಹಾಯ ಮಾಡಲಿಕ್ಕಾಗಿ ಒಬ್ಬನ ಬಲಸಾಮರ್ಥ್ಯಗಳನ್ನು ಹಾಗೂ ಸಮಯವನ್ನು ಕೊಡುವುದು ಸಹ ಅಂಗೀಕಾರಾರ್ಹವಾದ ಯಜ್ಞವಾಗಿದೆ.—1 ಥೆಸಲೊನೀಕ 5:14; ಇಬ್ರಿಯ 13:16; ಯಾಕೋಬ 1:27.
ಹಣಕಾಸಿನ ಕಾಣಿಕೆಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದ ಬೈಬಲ್ಗಳು, ಬೈಬಲಾಧಾರಿತ ಸಾಹಿತ್ಯಗಳ ಉತ್ಪಾದನೆಯನ್ನು ಸಾಧ್ಯಗೊಳಿಸಲು, ಮತ್ತು ಕ್ರೈಸ್ತರು ಸಭೆಯಾಗಿ ಒಟ್ಟುಗೂಡಸಾಧ್ಯವಿರುವ ಸ್ಥಳಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. (ಇಬ್ರಿಯ 10:24, 25) ಯುದ್ಧಗಳು ಹಾಗೂ ನೈಸರ್ಗಿಕ ವಿಪತ್ತುಗಳಿಗೆ ಆಹುತಿಯಾದವರಿಗೆ ಸಹಾಯ ಮಾಡಲಿಕ್ಕಾಗಿ ಪರಿಹಾರ ಧನಗಳನ್ನು ಒದಗಿಸಲಿಕ್ಕಾಗಿಯೂ ಈ ಕಾಣಿಕೆಗಳು ನೆರವಿಗೆ ಬರುತ್ತವೆ.
ಕೊಡುವ ವಿಷಯದಲ್ಲಿ ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ, ದೇವರ ವಾಕ್ಯವು ಕೆಲವು ಮೂಲತತ್ವಗಳನ್ನು ನಮಗೆ ತಿಳಿಯಪಡಿಸುತ್ತದೆ. ಕೊಡುವಂತೆ ಅದು ಕ್ರೈಸ್ತರಿಗೆ ಕಲಿಸುತ್ತದೆ, ಆದರೆ ನಿರ್ದಿಷ್ಟ ಮೊತ್ತದ ಹಣವನ್ನಲ್ಲ, ಬದಲಾಗಿ ತಮ್ಮ ಕೈಲಾದಷ್ಟನ್ನು, ಮನಃಪೂರ್ವಕವಾಗಿ, ಸಂತೋಷಭರಿತ ಹೃದಯದಿಂದ ಕೊಡುವಂತೆ ಉತ್ತೇಜಿಸುತ್ತದೆ. (2 ಕೊರಿಂಥ 9:7) ಕೆಲವರು ಬಹಳಷ್ಟನ್ನು ಕೊಡಬಲ್ಲರು; ಯೇಸುವಿನ ಸಮಯದಲ್ಲಿದ್ದ ಬಡ ವಿಧವೆಯಂತೆ, ಇನ್ನಿತರರು ಕೊಂಚವೇ ಕೊಡಲು ಶಕ್ತರಿರಬಹುದು. (ಲೂಕ 21:2-4) ತನ್ನ ಹೆಸರಿನಲ್ಲಿ ಒಳ್ಳೆಯ ಮನಸ್ಸಿನಿಂದ ಕೊಡುವಂತಹ ಉಡುಗೊರೆಯನ್ನು ಹಾಗೂ ತ್ಯಾಗವನ್ನು ಇಡೀ ವಿಶ್ವದ ಒಡೆಯನಾದ ಯೆಹೋವನು ಅಮೂಲ್ಯವಾಗಿ ಎಣಿಸುತ್ತಾನೆ ಎಂಬ ಸಂಗತಿಯು ಗಮನಾರ್ಹವಾಗಿರುವುದಿಲ್ಲವೋ?—ಇಬ್ರಿಯ 6:10.
ಯೆಹೋವನ ಸೇವಕರು ಸಂತೋಷಭರಿತ ಹೃದಯದಿಂದ ಕೊಡಸಾಧ್ಯವಾಗುವಂತೆ, ವಿವಿಧ ಆವಶ್ಯಕತೆಗಳ ಕುರಿತು ಹಾಗೂ ಈ ಆವಶ್ಯಕತೆಗಳನ್ನು ಹೇಗೆ ಪೂರೈಸಸಾಧ್ಯವಿದೆ ಎಂಬುದರ ಕುರಿತಾದ ಎಲ್ಲ ವಿಷಯಗಳನ್ನು ಅವರಿಗೆ ಸವಿಸ್ತಾರವಾಗಿ ತಿಳಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಯಾರಿಗೆ ಹೀಗೆ ಮಾಡಲು ಮನಸ್ಸಿದೆಯೋ ಅವರನ್ನು ಯೆಹೋವನ ಪವಿತ್ರಾತ್ಮವು ಪ್ರಚೋದಿಸುತ್ತದೆ. ಪುರಾತನ ಇಸ್ರಾಯೇಲ್ನಲ್ಲಿ, ದೇವದರ್ಶನಗುಡಾರ, ಮತ್ತು ಸಮಯಾನಂತರ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಇದೇ ವಿಧಾನವನ್ನು ಅನುಸರಿಸಲಾಗಿತ್ತು. (ವಿಮೋಚನಕಾಂಡ 25:2; 35:5, 21, 29; 36:5-7; 39:32; 1 ಪೂರ್ವಕಾಲವೃತ್ತಾಂತ 29:1-19) ಸಾ.ಶ. ಮೊದಲನೆಯ ಶತಮಾನದಲ್ಲಿ, ರಾಜ್ಯದ ಸುವಾರ್ತೆಯನ್ನು ಎಲ್ಲ ಜನಾಂಗಗಳಿಗೆ ಕೊಂಡೊಯ್ಯಲು ಮತ್ತು ಕ್ಷಾಮದ ಸಮಯದಲ್ಲಿ ಇಸ್ರೇಲ್ನಲ್ಲಿರುವ ಸಹೋದರರಿಗೆ ಬೆಂಬಲವನ್ನು ನೀಡಲು ಅಗತ್ಯವಾಗಿದ್ದ ಸಂಪನ್ಮೂಲಗಳನ್ನು ಪಡೆದುಕೊಳ್ಳಲು, ಇದೇ ವಿಧಾನವು ಕ್ರೈಸ್ತರಿಗೆ ಸಹಾಯ ಮಾಡಿತು.—1 ಕೊರಿಂಥ 16:2-4; 2 ಕೊರಿಂಥ 8:4, 15; ಕೊಲೊಸ್ಸೆ 1:23.
ತದ್ರೀತಿಯಲ್ಲಿ ಇಂದು, ಇದುವರೆಗೂ ಲೋಕವು ನೋಡಿಯೇ ಇಲ್ಲದಂತಹ ಅತಿ ವ್ಯಾಪಕವಾದ ಸಾರುವ ಹಾಗೂ ಕಲಿಸುವ ಸುಸಂಘಟಿತ ಪ್ರಯತ್ನವನ್ನು ಪೂರ್ಣಗೊಳಿಸಲು ತನ್ನ ಜನರಿಗೆ ಅಗತ್ಯವಿರುವುದೆಲ್ಲವನ್ನೂ ಒದಗಿಸುವ ಮೂಲಕ, ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ, ಮತ್ತು ಮುಂದೆಯೂ ಆಶೀರ್ವದಿಸುತ್ತಾ ಇರುವನು.—ಮತ್ತಾಯ 24:14; 28:19, 20.
ಸದ್ಯದ ಆವಶ್ಯಕತೆಗಳು ಯಾವುವು?
ಇತ್ತೀಚಿನ ವರ್ಷಗಳಲ್ಲಿ, ಈ ಮುಂಚೆ ಯೆಹೋವನ ಸಾಕ್ಷಿಗಳ ಸಾರುವ ಕೆಲಸವನ್ನು ಎಲ್ಲಿ ನಿರ್ಬಂಧಿಸಲಾಗಿತ್ತೋ ಅಂತಹ ಅನೇಕ ದೇಶಗಳಲ್ಲಿ ಅದನ್ನು ಅಧಿಕೃತವಾಗಿ ನೋಂದಣಿಮಾಡಲಾಗಿದೆ. ಇದರ ಫಲಿತಾಂಶವಾಗಿ, ಇಂತಹ ಅನೇಕ ದೇಶಗಳಲ್ಲಿನ ಪ್ರಚಾರಕರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಬೈಬಲ್ಗಳು ಮತ್ತು ಬೈಬಲಾಧಾರಿತ ಸಾಹಿತ್ಯಗಳ ಬೇಡಿಕೆ ಅತ್ಯಧಿಕಗೊಂಡಿದೆ ಎಂಬುದು ಗ್ರಾಹ್ಯವೇ.
ಅದೇ ರೀತಿಯಲ್ಲಿ ರಾಜ್ಯ ಸಭಾಗೃಹಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಸದ್ಯಕ್ಕೆ ಲೋಕದಾದ್ಯಂತ ಸುಮಾರು 9,000 ಹೊಸ ರಾಜ್ಯ ಸಭಾಗೃಹಗಳು ಬೇಕಾಗಿವೆ. ಪ್ರತಿ ದಿನ ಒಂದು ರಾಜ್ಯ ಸಭಾಗೃಹವನ್ನು ಕಟ್ಟುವುದಾದರೂ, ಸದ್ಯದ ಆವಶ್ಯಕತೆಗಳನ್ನು ಪೂರೈಸಲು 24 ವರ್ಷಗಳಿಗಿಂತಲೂ ಹೆಚ್ಚು ಸಮಯವು ಹಿಡಿಯಸಾಧ್ಯವಿದೆ! ಈ ಮಧ್ಯೆ, ಪ್ರತಿ ದಿನ ಸುಮಾರು ಏಳು ಸಭೆಗಳು ಹೊಸದಾಗಿ ರಚಿಸಲ್ಪಡುತ್ತಿವೆ, ಮತ್ತು ಅವುಗಳಲ್ಲಿ ಅನೇಕ ಸಭೆಗಳು, ಲೋಕದ ಯಾವ ಭಾಗಗಳಲ್ಲಿ ಹಣಕಾಸಿನ ಮುಗ್ಗಟ್ಟು ಇದೆಯೋ ಅಂತಹ ಸ್ಥಳಗಳಲ್ಲಿ ರೂಪಿಸಲ್ಪಡುತ್ತಿವೆ. ಇನ್ನೊಂದು ಕಡೆಯಲ್ಲಿ ನೋಡುವುದಾದರೆ, ಇಂತಹ ಅನೇಕ ಸ್ಥಳಗಳಲ್ಲಿ ತುಂಬ ದುಬಾರಿ ವೆಚ್ಚದ ಕಟ್ಟಡಗಳನ್ನು ಕಟ್ಟುವ ಅಗತ್ಯವಿಲ್ಲ. ಕೆಲವು ಸ್ಥಳಗಳಲ್ಲಿ, ಜನರ ಆವಶ್ಯಕತೆಗಳಿಗೆ ಅನುಕೂಲಕರವಾಗಿರುವ ಮತ್ತು ಆ ಸಮುದಾಯದಲ್ಲಿ ಒಂದು ಒಳ್ಳೆಯ ಸಾಕ್ಷಿಯನ್ನು ಕೊಡಲು ಸಹಾಯಕವಾಗಿರುವಂತಹ ಒಂದು ರಾಜ್ಯ ಸಭಾಗೃಹವನ್ನು, 2.4 ಲಕ್ಷ ರೂಪಾಯಿಗಳಷ್ಟು ಕಡಿಮೆ ಹಣದಿಂದ ಕಟ್ಟಸಾಧ್ಯವಿದೆ.
ಪ್ರಥಮ ಶತಮಾನದಲ್ಲಿ, ಹಣಕಾಸಿನ ವಿಷಯದಲ್ಲಿ ಕೆಲವು ಕ್ರೈಸ್ತರು ಇತರರಿಗಿಂತ ತುಂಬ ಅನುಕೂಲಸ್ಥರಾಗಿದ್ದರು. ಆದುದರಿಂದ ಅಪೊಸ್ತಲ ಪೌಲನು ಬರೆದುದು: “ಸಮಾನತ್ವವಿರಬೇಕೆಂಬದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು.” (2 ಕೊರಿಂಥ 8:14) ಇಂದು, ತದ್ರೀತಿಯ ಸಮಾನತ್ವವು, ಲೋಕದ ಅನೇಕ ಭಾಗಗಳಲ್ಲಿ ಬೈಬಲ್ಗಳು, ಬೈಬಲ್ ಸಾಹಿತ್ಯಗಳು, ರಾಜ್ಯ ಸಭಾಗೃಹಗಳು, ವಿಪತ್ತುಗಳಿಗೆ ಪರಿಹಾರ, ಮತ್ತು ಇನ್ನಿತರ ಆವಶ್ಯಕತೆಗಳನ್ನು ಪೂರೈಸಲು ಅಗತ್ಯವಾಗಿರುವ ಹಣಕಾಸನ್ನು ಒದಗಿಸುವುದೇ ಆಗಿದೆ. ಈ ರೀತಿಯ ಕೊಡುವಿಕೆಯು, ಕೊಡುವವನಿಗೆ ಮತ್ತು ಪಡೆದುಕೊಳ್ಳುವವನಿಗೆ—ಇಬ್ಬರಿಗೂ ಎಂತಹ ಆಶೀರ್ವಾದವಾಗಿದೆ!—ಅ. ಕೃತ್ಯಗಳು 20:35.
ಉದಾರಮನಸ್ಸಿನ ಜನರಿಂದ ಸೊಸೈಟಿಗೆ ಬರುವ ಪತ್ರಗಳಿಂದ ಸೂಚಿಸಲ್ಪಟ್ಟಿರುವಂತೆ, ಈ ಪತ್ರಿಕೆಯ ಅನೇಕ ಓದುಗರು ಸಹಾಯ ಮಾಡಲು ಬಯಸುವುದಾದರೂ, ದಾನಗಳನ್ನು ಮಾಡಸಾಧ್ಯವಿರುವ ಬೇರೆ ಬೇರೆ ವಿಧಗಳ ಕುರಿತು ಅವರು ಅನಿಶ್ಚಿತರಾಗಿದ್ದಾರೆ. ಈ ಲೇಖನದ ಜೊತೆಯಿರುವ ರೇಖಾಚೌಕ, ಅವರ ಪ್ರಶ್ನೆಗಳನ್ನು ಉತ್ತರಿಸಲು ಖಂಡಿತವಾಗಿಯೂ ಸಹಾಯ ಮಾಡುವುದು ಎಂಬುದರಲ್ಲಿ ಸಂಶಯವಿಲ್ಲ.
ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ, ಅವನ ಕುರಿತಾದ ಸುದ್ದಿಯನ್ನು ಕೇಳಿಸಿಕೊಂಡ “ಭೂರಾಜರೆಲ್ಲರೂ” ಅವನನ್ನು ಭೇಟಿಯಾಗಲು ಬಂದರು. ಆದರೂ, ಬೈಬಲು ಕೇವಲ ಒಂದು ಹೆಸರನ್ನು, ಅಂದರೆ ಶೆಬದ ರಾಣಿಯ ಹೆಸರನ್ನು ಮಾತ್ರ ನಮೂದಿಸುತ್ತದೆ. (2 ಪೂರ್ವಕಾಲವೃತ್ತಾಂತ 9:23) ಅವಳು ಎಂತಹ ತ್ಯಾಗವನ್ನು ಮಾಡಿದ್ದಳು! ಅದಕ್ಕಾಗಿ ಅವಳು ಹೇರಳವಾಗಿ ಆಶೀರ್ವದಿಸಲ್ಪಟ್ಟಳು—ಎಷ್ಟು ಅತ್ಯಧಿಕವಾಗಿ ಆಶೀರ್ವದಿಸಲ್ಪಟ್ಟಿದ್ದಳೆಂದರೆ, ತನ್ನ ಭೇಟಿಯನ್ನು ಮುಗಿಸಿ ಹಿಂದಿರುಗುವಷ್ಟರಲ್ಲಿ ಅವಳು “ದಿಗ್ಭ್ರಮೆಗೊಂಡಿದ್ದಳು ಮತ್ತು ಮೂಕವಿಸ್ಮಿತಳಾಗಿದ್ದಳು.”—2 ಪೂರ್ವಕಾಲವೃತ್ತಾಂತ 9:4, ಟುಡೇಸ್ ಇಂಗ್ಲಿಷ್ ವರ್ಷನ್.
ಭವಿಷ್ಯತ್ತಿನಲ್ಲಿ, ಅತ್ಯಂತ ಮಹಾನ್ ಅರಸನೂ ದಾತನೂ ಆಗಿರುವ ಯೆಹೋವನು, ತನಗೋಸ್ಕರ ತ್ಯಾಗಗಳನ್ನು ಮಾಡುವಂತಹ ಜನರಿಗೆ, ಸೊಲೊಮೋನನು ಮಾಡಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ಮಾಡುವನು. ಇದಕ್ಕೆ ಪ್ರತ್ಯುತ್ತರವಾಗಿ, ಇವರು ‘ದಿಗ್ಭ್ರಮೆಗೊಳ್ಳುವರು ಮತ್ತು ಮೂಕವಿಸ್ಮಿತರಾಗುವರು,’ ಏಕೆಂದರೆ ಯೆಹೋವನು ಅವರನ್ನು ತನ್ನ ನ್ಯಾಯತೀರ್ಪಿನ ಭಯಪ್ರೇರಕ ದಿನದಿಂದ ಸಂರಕ್ಷಿಸುತ್ತಾನೆ ಮಾತ್ರವಲ್ಲ, ತದನಂತರ ಆತನು ‘ಕೈದೆರೆದು ಎಲ್ಲ ಜೀವಿಗಳ ಇಷ್ಟವನ್ನು ಸಹ ನೆರವೇರಿಸುವನು.’—ಕೀರ್ತನೆ 145:16.
[ಪುಟ 22 ರಲ್ಲಿರುವ ಚೌಕ]
ಲೋಕವ್ಯಾಪಕವಾದ ಕೆಲಸಕ್ಕಾಗಿ
ಕೆಲವರು ಕಾಣಿಕೆಗಳನ್ನು ಕೊಡುವ ವಿಧಗಳು
ಅನೇಕರು, “ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು—ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್ ಮಾಡುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಹಣವನ್ನು ಸ್ಥಳಿಕ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ, ಟ್ರೆಷರರ್ಸ್ ಆಫೀಸ್, Praharidurg Prakashan Society, Plot A/35, Near Industrial Estate, Nangargaon, Lonavla, 410 401 ಎಂಬ ವಿಳಾಸಕ್ಕೆ ಸಹ ಕಳುಹಿಸಬಹುದು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.
ಯೋಜಿತ ಕೊಡುಗೆ
ನೇರವಾದ ಹಣದ ಕೊಡುಗೆಗಳು ಮತ್ತು ಹಣದ ಷರತ್ತು ದಾನಗಳಿಗೆ ಕೂಡಿಸಿ, ಲೋಕವ್ಯಾಪಕವಾದ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುವ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:
ವಿಮೆ: ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಅಥವಾ ನಿವೃತ್ತಿ/ಪೆನ್ಷನ್ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು, ಸ್ಥಳಿಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣಹೊಂದುವಲ್ಲಿ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸತಕ್ಕದ್ದು.
ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರದ ಮೂಲಕ, ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ಸೊಸೈಟಿಗೆ ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು.
“ಯೋಜಿತ ಕೊಡುಗೆ” ಎಂಬ ಪದಗಳೇ ಸೂಚಿಸುವಂತೆ, ಈ ರೀತಿಯ ದಾನಗಳು, ದಾನಿಯು ಸ್ವಲ್ಪ ಯೋಜನೆ ಮಾಡುವುದನ್ನು ಅವಶ್ಯಪಡಿಸುತ್ತವೆ.
[ಪುಟ 23 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಡುತ್ತವೆ