ಎಲೀಯನಂಥ ನಂಬಿಕೆ ನಿಮಗಿದೆಯೇ?
ಮಾನವ ಸಮಾಜವು ಇಂದು ನಂಬಿಕೆಯನ್ನು ತುಚ್ಛಮಾಡುತ್ತದೆ. ಪ್ರಜ್ಞಾಶಾಲಿಗಳು ದೇವರ ಅಸ್ತಿತ್ವದ ಬಗ್ಗೆ ಚೇಷ್ಟೆ ಮಾಡುತ್ತಾರೆ. ಧಾರ್ಮಿಕ ಕಪಟಿಗಳು ದೇವರನ್ನು ಪರಿಹಾಸ್ಯಕ್ಕೆ ಗುರಿಮಾಡಿದ್ದಾರೆ. ಮತ್ತು ಐಹಿಕ ಲೋಕವು ದೇವರು ಪ್ರಾಮುಖ್ಯವೇ ಅಲ್ಲವೆಂಬಂತೆ ಅಧಿಕಾಧಿಕವಾಗಿ ಕ್ರಿಯೆಗೈಯುತ್ತಾ ಇದೆ. ಈ ಮನೋಭಾವನೆಗಳು ಒಬ್ಬ ವ್ಯಕ್ತಿಯನ್ನು ಭಯಪಡಿಸಲಿ ಅಥವಾ ಯಾ ನಿರುತ್ತೇಜನಗೊಳಿಸಲಿ ಇಲ್ಲವೇ ಔದಾಸೀನ್ಯಕ್ಕೆ ಪ್ರಭಾವಿಸಲಿ, ಹೇಗಿದ್ದರೂ ಫಲಿತಾಂಶವು ಒಂದೇ: ಅವನ ನಂಬಿಕೆಯು ಸವೆದು ಹೋಗಿದೆ. ಆದ್ದರಿಂದ ಪೌಲನು ನಂಬಿಕೆಯ ಕೊರತೆಯನ್ನು, “ನಮಗೆ ಸುಲಭವಾಗಿ ಹತ್ತಿಸಿಕೊಳ್ಳುವ ಪಾಪ” ಎಂದು ಕರೆದದರ್ದಲ್ಲಿ ಏನೂ ಆಶ್ಚರ್ಯವಿಲ್ಲ!—ಇಬ್ರಿಯ 12:1.
ಪ್ರಾಯಶಃ ಅದೇ ಕಾರಣದಿಂದಾಗಿ ಪೌಲನು ಬಲವಾದ ನಂಬಿಕೆಯ ಪುರುಷರು ಮತ್ತು ಸ್ತ್ರೀಯರ ಜೀವಿತಕ್ಕೆ ಗಮನ ಸೆಳೆಯುವ ವಿಶೇಷ ಪ್ರಯತ್ನವನ್ನು ಮಾಡಿರಬೇಕು. (ಇಬ್ರಿಯರಿಗೆ, ಅಧ್ಯಾಯ 11) ಅಂಥ ಮಾದರಿಗಳು ನಮ್ಮ ನಂಬಿಕೆಯನ್ನು ದೃಢಪಡಿಸಲು ಪ್ರಚೋದಕವಾಗಿರಬಲ್ಲವು. ದೃಷ್ಟಾಂತಕ್ಕಾಗಿ, ಪ್ರವಾದಿ ಎಲೀಯನ ದೀರ್ಘ ಹಾಗೂ ಪೂರ್ಣವಾದ ಪ್ರವಾದನಾ ಕಾರ್ಯದ ಕೇವಲ ಆರಂಭದ ಭಾಗದ ಮೇಲೆ ನಮ್ಮ ಗಮನವನ್ನು ತುಸು ಕೇಂದ್ರೀಕರಿಸೋಣ. ಇಂದು ಹೇಗೋ ಹಾಗೆ, ಯಾವಾಗ ಸತ್ಯ ದೇವರ ಮೇಲಣ ನಂಬಿಕೆಯು ಅತ್ಯಂತ ಅವನತಿಗೆ ಇಳಿದಿತ್ತೋ ಅಂಥ ಒಂದು ಸಮಯದಲ್ಲಿ, ಅರಸನಾದ ಆಹಾಬನ ಮತ್ತು ಅವನ ವಿಧರ್ಮಿ ಹೆಂಡತಿಯಾದ ರಾಣಿ ಈಜೆಬೇಲಳ ಆಡಳಿತದ ಸಮಯದಲ್ಲಿ ಅವನು ಜೀವಿಸಿದ್ದನು.
ಭ್ರಷ್ಟಗೊಂಡ ಹತ್ತು-ಕುಲಗಳ ರಾಜ್ಯ
ಅವರದ್ದು ಎಂಥ ಒಂದು ಜೋಡಿಯಾಗಿತ್ತು! ಆಹಾಬನು ಇಸ್ರಾಯೇಲ್ಯರ ಹತ್ತು-ಕುಲಗಳ ರಾಜ್ಯದ ಏಳನೆಯ ಅರಸನಾಗಿದ್ದನು. ಅವನಿಗೆ ಮುಂಚಿನ ಆರು ಪೂರ್ವಾಧಿಕಾರಿಗಳು ಸ್ವತಃ ದುಷ್ಟರಾಗಿದ್ದರೂ, ಆಹಾಬನು ಅವರಿಗಿಂತಲೂ ಕೆಡುಕನು. ದೇಶದ ಭ್ರಷ್ಟ ಬಸವನಾರಾಧನೆಯನ್ನು ಅವನು ಸ್ಥಿರಗೊಳಿಸಿದ್ದು ಮಾತ್ರವಲ್ಲ ವಿಧರ್ಮಿ ರಾಜಕುವರಿ ಈಜೆಬೆಲಳನ್ನೂ ಅವನು ಮದುವೆಯಾಗಿ, ಆ ಮೂಲಕ ದೇಶದಲ್ಲಿ ಸುಳ್ಳು ದೇವರಾದ ಬಾಳನ ಒಂದು ಹೆಚ್ಚು ಪ್ರಬಲ ಭಕ್ತಿಯನ್ನು ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬಳಕೆಗೆ ತಂದನು.—1 ಅರಸು 16:30-33.
ಈಜೆಬೆಲ್ ಬಾಲ್ಯದಿಂದಲೇ ಬಾಳ್ ಧರ್ಮದಲ್ಲಿ ಆಳವಾಗಿ ಮುಳುಗಿದ್ದಳು. (ಬಾಳನ ಪತ್ನಿ) ಅಷ್ಟೋರೆತಳ ಯಾಜಕನಾಗಿದ್ದ ಅವಳ ತಂದೆ ಎತ್ಬಾಳನು, ಇಸ್ರೇಲಿನ ತುಸು ಉತ್ತರಕ್ಕಿದ್ದ ರಾಜ್ಯವಾದ ಚಿದೋನ್ನ ಸಿಂಹಾಸನವನ್ನು ಪಡೆದದ್ದು ಇತರರನ್ನು ಕೊಲೆಗೈದ ಮೂಲಕವೇ. ಇಸ್ರಾಯೇಲಿನಲ್ಲಿ ಬಾಳನ ಭಕ್ತಿಯನ್ನು ಸ್ಥಾಪಿಸುವುದಕ್ಕೆ ಈಜೆಬೆಲ್ ನೈತಿಕವಾಗಿ ದುರ್ಬಲನಾಗಿದ್ದ ತನ್ನ ಗಂಡನನ್ನು ಪ್ರಭಾವಿಸಿದ್ದಳು. ತುಸು ಸಮಯದೊಳಗೆ ಆ ದೇಶದಲ್ಲಿ ಆ ಸುಳ್ಳು ದೇವರ 450 ಪ್ರವಾದಿಗಳು ಮತ್ತು ಆಶೇರ ದೇವತೆಯ 400 ಪ್ರವಾದಿಗಳು, ಎಲ್ಲರೂ ಅರಸನ ಮೇಜಿನ ಮೇಲೆ ಕೂತು ತಿನ್ನುವವರಾದರು. ಸತ್ಯದೇವರಾದ ಯೆಹೋವನ ದೃಷ್ಟಿಯಲ್ಲಿ ಅವರ ಭಕ್ತಿಯು ಎಷ್ಟು ಅಸಹ್ಯಕರವಾಗಿತ್ತು! ಶಿಶ್ನ ಸಂಕೇತಗಳು, ಫಲೋತ್ಪತ್ತಿಯ ವಿಧಿಗಳು, ದೇವಸ್ಥಾನ ವೇಶ್ಯೆಯರು (ಪುರುಷರು ಮತ್ತು ಸ್ತ್ರೀಯರು ಇಬ್ಬರೂ), ಮತ್ತು ಮಕ್ಕಳನ್ನು ಬಲಿಯಾಗಿ ಅರ್ಪಿಸುವುದು ಸಹ—ಈ ಅಸಹ್ಯ ಧರ್ಮದ ಅಂಥ ಎದ್ದುಕಾಣುವ ವೈಶಿಷ್ಠ್ಯಗಳಾಗಿದ್ದವು. ಆಹಾಬನ ಆಶೀರ್ವಾದದೊಂದಿಗೆ ಅದು ದೇಶದಲ್ಲೆಲ್ಲಾ ಅಡಚಣೆಯಿಲ್ಲದೆ ಹಬ್ಬತೊಡಗಿತು.
ಇಸ್ರಾಯೇಲ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಭೂಮಿಯ ಮತ್ತು ಅದರ ಜಲಚಕ್ರದ ನಿರ್ಮಾಣಿಕನಾದ ಯೆಹೋವನನ್ನು ಮರೆತುಬಿಟ್ಟರು. ಅವರಿಗೆ ಬೇಸಗೆಯ ಅಂತ್ಯದಲ್ಲಿ ದೇಶವನ್ನು ಮಳೆಯಿಂದ ಆಶೀರ್ವದಿಸುವವನು ಬಾಳನಾದನು. ಪ್ರತಿ ವರ್ಷ ಒಣಹವೆಯನ್ನು ಕೊನೆಗೊಳಿಸುವಂತೆ ಅವರು ಈ ‘ಮುಗಿಲು ಸವಾರ’ ನಿಗಾಗಿ, ಫಲೋತ್ಪತ್ತಿಯ ಮತ್ತು ಮಳೆಗಾಲದ ದೇವರೆನಿಸಿಕೊಳ್ಳುವವನಿಗಾಗಿ ನಿರೀಕ್ಷೆಯಿಂದ ಮುನ್ನೋಡಿದರು. ವರ್ಷಾನುವರ್ಷ, ಮಳೆಗಾಲ ಬಂತು. ವರ್ಷಾನುವರ್ಷ, ಕೀರ್ತಿಯು ಸಲ್ಲಿಸಲ್ಪಟ್ಟಿತು ಬಾಳನಿಗೆ.
ಎಲೀಯನು ಒಂದು ಅನಾವೃಷ್ಟಿಯನ್ನು ಪ್ರಕಟಿಸುತ್ತಾನೆ
ಅದು ಬಹುಶಃ ಒಂದು ದೀರ್ಘಕಾಲದ, ಮಳೆಯಿಲ್ಲದ ಬೇಸಗೆಯ ಕೊನೆಯಲ್ಲಿ—ಜೀವ-ದಾಯಕ ವೃಷ್ಟಿಯನ್ನು ಬೀಳಿಸುವಂತೆ ಜನರು ಬಾಳನ ಕಡೆಗೆ ನಿರೀಕ್ಷೆಯಿಂದ ನೋಡಲು ತೊಡಗುವ ಸಮಯದಲ್ಲೇ—ಎಲೀಯನು ದೃಶ್ಯಗೋಚರನಾದನು.a ಅವನು ಬೈಬಲ್ ದಾಖಲೆಯೊಳಗೆ ಸಿಡಿಲೆರಗುವ ತೀವ್ರತೆಯಲ್ಲಿ ರಭಸದಿದ ಬರುತ್ತಾನೆ. ಅವನ ಹಿನ್ನೆಲೆಯ ಕುರಿತು ನಮಗೆ ಕೊಂಚವೇ ತಿಳಿಸಲ್ಪಟ್ಟಿದೆ, ಅವನ ಕುಲಗೋತ್ರದ ವಿಷಯ ಏನೂ ಇಲ್ಲ. ಆದರೆ ಎಲೀಯನೇನೂ ಸಿಡಿಲಿನಂತೆ ಅತಿವೃಷಿಗ್ಟೆ ಪೂರ್ವಚಿಹ್ನೆಯಾಗಿರಲಿಲ್ಲ. ಅವನು ಆಹಾಬನಿಗೆ ಪ್ರಕಟಿಸಿದ್ದು: “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ಯ ದೇವರಾದ ಯೆಹೋವನಾಣೆ, ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ.”—1 ಅರಸು 17:1.
ಕೂದಲಿನ ಒರಟಾದ ಬಟ್ಟೆಯನ್ನು ಧರಿಸಿಕೊಂಡಿದ್ದ ಈ ಮನುಷ್ಯನನ್ನು ಕಲ್ಪಿಸಿಕೊಳ್ಳಿರಿ. ಅವನು ಗಿಲ್ಯಾದಿನ ಕೊರಕಲು ಬೆಟ್ಟಗಳ ನಾಡಿಗನಾಗಿದ್ದನು, ಕುರಿಹಿಂಡಿನ ಬಡ ಕುರುಬರ ನಡುವೆ ಬೆಳೆದು ದೊಡ್ಡವನಾಗಿದ್ದಿರಬಹುದು. ಅವನು ಪರಾಕ್ರಮಿ ಅರಸ ಆಹಾಬನ ಮುಂದೆ ನಿಲ್ಲುತ್ತಾನೆ, ಪ್ರಖ್ಯಾತ ದಂತಮಹಲಿನಿಂದೊಡಗೂಡಿದ್ದ, ಬೆಲೆಬಾಳುವ ಮತ್ತು ವಿಶೇಷಾಕರ್ಷಕ ಅಲಂಕಾರಗಳಿಂದ ಮತ್ತು ಪ್ರಭಾವಯುಕ್ತ ವಿಗ್ರಹಗಳಿಂದ ಭೂಷಿತವಾದ ಅವನ ಭವ್ಯ ಅರಮನೆಯಲ್ಲಿಯೇ ಪ್ರಾಯಶಃ ನಿಂತಿದ್ದಿರಬಹುದು. ಎಲ್ಲಿ ಯೆಹೋವನ ಆರಾಧನೆಯು ಬಹುಮಟ್ಟಿಗೆ ಮರೆತೇ ಹೋಗಿತ್ತೋ ಆ ಕೋಲಾಹಲದ ಕೋಟೆಕೊತಲ್ತಗಳ ಸಮಾರ್ಯ ಪಟ್ಟಣದಲ್ಲಿ, ಅವನು ಆಹಾಬನಿಗೆ, ಅವನ ದೇವರಾದ ಆ ಬಾಳನು ಶಕಿಹ್ತೀನನು, ಅಸ್ತಿತ್ವರಹಿತನು ಎಂದು ಹೇಳುತ್ತಾನೆ. ಈ ವರ್ಷ, ಮತ್ತು ಬರಲಿರುವ ಕೆಲವು ವರ್ಷಗಳಲ್ಲಿ, ಎಲೀಯನು ಘೋಷಿಸಿದ್ದು, ಮಳೆಯಾಗಲಿ ಮಂಜಾಗಲಿ ಬೀಳುವುದಿಲ್ಲ!
ಅಂಥ ನಂಬಿಕೆಯನ್ನು ಅವನು ಪಡೆದದ್ದು ಎಲ್ಲಿಂದ? ಅಲ್ಲಿ ಆ ದುರಹಂಕಾರದ, ಧರ್ಮಭ್ರಷ್ಟ ಅರಸನ ಮುಂದೆ ನಿಲ್ಲಲು ಅವನಿಗೆ ಭಯವಾಗಿರಲಿಲ್ಲವೇ? ಇದ್ದರೂ ಇರಬಹುದು. ಎಲೀಯನು “ನಮ್ಮಂಥ ಸ್ವಭಾವವುಳ್ಳವನಾಗಿದ್ದನು,” ಎಂಬ ಆಶ್ವಾಸನೆಯನ್ನು ಯೇಸುವಿನ ಮಲತಮ್ಮ ಯಾಕೋಬನು ಒಂದು ಸಾವಿರ ವರ್ಷಗಳ ಅನಂತರ ನಮಗೆ ಕೊಟ್ಟಿದ್ದಾನೆ. (ಯಾಕೋಬ 5:17) ಆದರೆ ಎಲೀಯನ ಮಾತುಗಳನ್ನು ಗಮನಿಸಿರಿ: “ನಾನು ಸನ್ನಿಧಿ ಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಾಣೆ.” ಯೆಹೋವನ ಸೇವಕನೋಪಾದಿ ತಾನು ಆಹಾಬನಿಗಿಂತ ಎಷ್ಟೋ ಹೆಚ್ಚು ಉನ್ನತವಾದ ಸಿಂಹಾಸನವಾದ—ವಿಶ್ವದ ಸಾರ್ವಭೌಮ ಕರ್ತನಾದ ಯೆಹೋವನ ಸಿಂಹಾಸನದ ಮುಂದೆ ನಿಂತಿರುತ್ತೇನೆಂಬದನ್ನು ಎಲೀಯನು ಮನಸ್ಸಲ್ಲಿಟ್ಟನು! ಅವನು ಆ ಸಿಂಹಾಸನದ ಒಬ್ಬ ಪ್ರತಿನಿಧಿ, ಒಬ್ಬ ಗುಪ್ತದೂತನಾಗಿದ್ದನು. ಈ ಕಣ್ನೆಲೆಯುಳ್ಳವನಾಗಿದ್ದ ಆತನಿಗೆ, ಯೆಹೋವನ ಆಶೀರ್ವಾದವನ್ನು ಕಳಕೊಂಡಿದ್ದ ಈ ಅಲ್ಪ ಮಾನವ ಸಾಮ್ರಾಟ ಆಹಾಬನಿಂದ ಭಯವೇತರದ್ದು?
ಎಲೀಯನಿಗೆ ಯೆಹೋವನು ಅಷ್ಟು ನೈಜವಾಗಿದ್ದದ್ದು ಒಂದು ಆಕಸ್ಮಿಕ ಘಟನೆಯಲ್ಲ. ತನ್ನ ಜನರೊಂದಿಗೆ ದೇವರ ವ್ಯವಹಾರದ ದಾಖಲೆಯನ್ನು ಪ್ರವಾದಿಯು ನಿಸ್ಸಂದೇಹವಾಗಿ ಅಧ್ಯಯನಿಸಿದ್ದಿರಬೇಕು. ಯೆಹೂದ್ಯರು ಸುಳ್ಳು ದೇವರುಗಳ ಆರಾಧನೆಗೆ ತಿರುಗಿದರೆ ತಾನು ಅವರನ್ನು ಅನಾವೃಷ್ಟಿ ಮತ್ತು ಬರಗಳಿಂದ ಶಿಕ್ಷಿಸುವನೆಂದು ಯೆಹೋವನು ಎಚ್ಚರಿಕೆಯನ್ನು ಕೊಟ್ಟಿದ್ದನು. (ಧರ್ಮೋಪದೇಶಕಾಂಡ 11:16, 17) ಯೆಹೋವನು ತನ್ನ ಮಾತುಗಳನ್ನು ಯಾವಾಗಲೂ ನೆರವೇರಿಸುತ್ತಾನೆಂಬ ಭರವಸವುಳ್ಳನಾಗಿ, ಎಲೀಯನು, “ಮಳೆ ಬರಬಾರದೆಂದು ಪ್ರಾರ್ಥಿಸಿದನು.”—ಯಾಕೋಬ 5:17.
ಮಾರ್ಗದರ್ಶನೆ ಅನುಸರಿಸುವುದರಲ್ಲಿ ನಂಬಿಕೆ ವ್ಯಕ್ತವಾಗುತ್ತದೆ
ಎಲೀಯನ ಘೋಷಣೆಯು ಆ ಕ್ಷಣಕ್ಕಾದರೂ ಅವನನ್ನು ಪ್ರಾಣಾಪಾಯಕ್ಕೆ ಹಾಕಿತ್ತು. ಅವನ ನಂಬಿಕೆಯ ಇನ್ನೊಂದು ವೈಶಿಷ್ಟ್ಯವನ್ನು ಅವಶ್ಯಪಡಿಸಿದ ಸಮಯವದು. ಜೀವಂತನಾಗಿ ಉಳಿಯಬೇಕಾದರೆ ಯೆಹೋವನ ಮಾರ್ಗದರ್ಶನೆಯನ್ನು ಪಾಲಿಸುವುದರಲ್ಲಿ ಅವನು ನಂಬಿಗಸ್ತನಾಗಿರಬೇಕಿತ್ತು: “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ ಯೊರ್ದನ್ ಹೊಳೆಯ ಆಚೆಯಲ್ಲಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ. ಆ ಹಳ್ಳದ ನೀರು ನಿನಗೆ ಪಾನವಾಗಿರುವದು; ನಿನಗೆ ಆಹಾರ ತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ.”—1 ಅರಸು 17:3, 4.
ಎಲೀಯನು ಕೂಡಲೇ ವಿಧೇಯನಾದನು. ತನ್ನ ದೇಶದ ಮೇಲೆ ಬಂದ ಅನಾವೃಷ್ಟಿ ಮತ್ತು ಬರಗಾಲವನ್ನು ಅವನು ಪಾರಾಗಬೇಕಾದರೆ, ಯೆಹೋವನು ಅವನಿಗಾಗಿ ಮಾಡಿದ ಯಾವುವೇ ಒದಗಿಸುವಿಕೆಗಳ ಮೇಲೆ ಅವನು ಆತುಕೊಂಡಿರಬೇಕಿತ್ತು. ಅದೇನೂ ಅಷ್ಟು ಸುಲಭವಾಗಿರಲ್ಲಿಲ್ಲ. ಅದು ಅವನನ್ನು ಅವಿತುಕೊಳ್ಳುವಂತೆ ಕೇಳಿತ್ತು, ಹಲವಾರು ತಿಂಗಳುಗಳ ತನಕ ಬಿಡದೆ ಪೂರ್ಣ ಏಕಾಂತದಲ್ಲಿ ಜೀವಿಸುವ ಅರ್ಥದಲ್ಲಿತ್ತು. ಮೋಶೆಯ ಧರ್ಮಶಾಸ್ತ್ರದಲ್ಲಿ ಅಶುದ್ಧವೆಂದು ಪರಿಗಣಿಸಲ್ಪಟ್ಟ ಸತ್ತ ಹೊಲೆ ಮಾಂಸ-ಭಕ್ಷಕಗಳಾದ—ಕಾಗೆಗಳು ತಂದುಕೊಡುವ ರೊಟ್ಟಿ ಮತ್ತು ಮಾಂಸವನ್ನು ತಿನ್ನುವ ಹಾಗೂ ಅಂಥ ಮಾಂಸವು ಸತ್ತ ಪ್ರಾಣಿಯದ್ದಲ್ಲ, ನೇಮಕ್ಕನುಸಾರ ಸರಿಯಾಗಿ ರಕ್ತ ಬಸಿದ ಮಾಂಸವೇ ಎಂದು ಯೆಹೋವನನ್ನು ನಂಬುವ ಅರ್ಥದಲ್ಲಿತ್ತು. ಕೆಲವು ಬೈಬಲ್ ವ್ಯಾಖ್ಯಾನಗಾರರಿಗೆ ಈ ವಿಸ್ತಾರ್ಯ ಅದ್ಭುತವು ಎಷ್ಟು ಅಸಂಭವನೀಯವಾಗಿ ಕಾಣುತ್ತದೆಂದರೆ, ಅಲ್ಲಿ ಉಪಯೋಗಿಸಲ್ಪಟ್ಟ ಮೂಲ ಪದವು “ಅರಬರು” ಎಂಬರ್ಥ ಕೊಟ್ಟಿರಬೇಕೇ ಹೊರತು “ಕಾಗೆಗಳು” ಅಲ್ಲವೇ ಅಲ್ಲ ಎಂದವರು ಸೂಚಿಸುತ್ತಾರೆ. ಆದರೆ ಕಾಗೆಗಳು ಯುಕ್ತವಾದ ಆಯ್ಕೆಯಾಗಿದ್ದವು. ಯಾರಿಗಾಗಿ ಆಹಾಬ ಮತ್ತು ಈಜೆಬೆಲ್ ತಮ್ಮ ರಾಜ್ಯದ ಸುತ್ತಮುತ್ತಲ್ಲೆಲ್ಲಾ ಹುಡುಕಾಡುತ್ತಿದ್ದರೋ ಆ ಎಲೀಯನನ್ನು, ಆಹಾರದ ತುಣುಕುಗಳೊಂದಿಗೆ ಅರಣ್ಯದ ಕಡೆಗೆ ಹಾರುತ್ತಾ ಇರುವ ಈ ತುಚ್ಛ, ಅಶುದ್ಧ ಪಕ್ಷಿಗಳು ಕಾರ್ಯತಃ ಉಣಿಸುತ್ತಿದ್ದವೆಂದು ಯಾರೂ ಸಂಶಯ ಪಟ್ಟಿರಲಿಕ್ಕಿಲ್ಲ!—1 ಅರಸು 18:3, 4, 10.
ಅನಾವೃಷ್ಟಿಯು ಪಟ್ಟುಹಿಡಿದು ಮುಂದರಿದಂತೆ, ಕೆರೀತ್ ಹಳ್ಳದಲ್ಲಿ ತನ್ನ ನೀರಿನ ಸರಬರಾಯಿಯ ವಿಷಯದಲ್ಲಿ ಎಲೀಯನು ಚಿಂತೆಪಟ್ಟಿದ್ದಿರಬಹುದು. ಇಸ್ರಾಯೇಲಿನ ಹೆಚ್ಚಿನ ಹಳ್ಳಗಳು ಅನಾವೃಷ್ಟಿಯ ಸಮಯದಲ್ಲಿ ಬತ್ತಿಹೋಗುತ್ತಿದ್ದವು, ಮತ್ತು “ಕೆಲವು ದಿವಸಗಳಾದ ನಂತರ” ಇದೂ ಬತ್ತಿಹೋಯಿತು. ನೀರು ಕ್ರಮೇಣ ಹನಿಹನಿಯಾಗಿ ತೊಟ್ಟಿಕ್ಕಲು ತೊಡಗಿದಾಗ ಮತ್ತು ಹಳ್ಳಗಳು ದಿನದಿನವೂ ಬತ್ತಿಹೋಗುತ್ತಾ ಬಂದಾಗ, ಎಲೀಯನ ಅನಿಸಿಕೆಗಳನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ನೀರು ಪೂರಾ ಬತ್ತಿಹೋದಾಗ ಏನು ಸಂಭವಿಸಬಹುದೆಂದು ಅವನು ಯೋಚಿಸುತ್ತಿದ್ದಿರಬೇಕು ನಿಶ್ಚಯ. ಆದಾಗ್ಯೂ ಎಲೀಯನು ನಂಬಿಗಸ್ತಿಕೆಯಿಂದ ಅಲ್ಲೇ ಉಳಿದನು. ಅವನಿಗೆ ಯೆಹೋವನು ಮುಂದಿನ ಸೂಚನೆಗಳನ್ನು ಕೊಟ್ಟದ್ದು ಹಳ್ಳವು ಪೂರಾ ಬತ್ತಿಹೋದ ಮೇಲೆ ಮಾತ್ರವೇ. ಚಾರೆಪ್ತಾಕ್ಕೆ ಹೋಗು, ಎಂದು ಹೇಳಲಾಯಿತು ಪ್ರವಾದಿಗೆ. ಅಲ್ಲಿ ಒಬ್ಬ ವಿಧವೆಯ ಮನೆಯಲ್ಲಿ ಅವನು ಪೋಷಣೆಯನ್ನು ಕಂಡುಕೊಳ್ಳುವನು.—1 ಅರಸು 17:7-9.
ಚಾರೆಪ್ತಾ! ಆ ಊರು ಈಜೆಬೆಲ್ ಎಲ್ಲಿಂದ ಬಂದಿದ್ದಳೋ ಮತ್ತು ಎಲ್ಲಿ ಅವಳ ಸ್ವಂತ ತಂದೆ ರಾಜನಾಗಿ ಆಳಿದ್ದನೋ ಆ ಚಿದೋನ್ ಶಹರಕ್ಕೆ ಸೇರಿತ್ತು! ಅದು ಸುರಕ್ಷಿತವೋ? ಎಲೀಯನು ಯೋಚಿಸಿದಿರ್ದಬಹುದು. ಆದರೆ ಅವನು ಎದ್ದು “ಅಲ್ಲಿಂದ ಹೊರಟನು.”—1 ಅರಸು 17:10.
ಯೆಹೋವನು ಪೋಷಣೆ ಮತ್ತು ಜೀವವನ್ನು ಒದಗಿಸುತ್ತಾನೆ
ಅವನ ವಿಧೇಯತೆಗೆ ಕೂಡಲೇ ಫಲದೊರೆಯಿತು. ಮುಂತಿಳಿಸಿದಂತೆಯೇ ಅವನು ಒಬ್ಬ ವಿಧವೆಯನ್ನು ಭೇಟಿಯಾಗುತ್ತಾನೆ ಮತ್ತು ತನ್ನ ದೇಶವಾಸಿಗಳಲ್ಲಿ ಎಷ್ಟೋ ಲೋಪವಾಗಿದ್ದ ಒಂದು ಸಮಂಜಸ ನಂಬಿಕೆಯ ಪ್ರಮಾಣವನ್ನು ಆಕೆಯಲ್ಲಿ ಕಂಡುಕೊಂಡನು. ಈ ಬಡ ವಿಧವೆಯೊಂದಿಗೆ ಅವಳಿಗಾಗಿ ಮತ್ತು ಅವಳ ಚಿಕ್ಕ ಮಗನಿಗಾಗಿ ಒಂದು ಕೊನೆಯ ಊಟಕ್ಕೆ ಸಾಕಾಗುವಷ್ಟು ಮಾತ್ರವೇ ಹಿಟ್ಟು ಮತ್ತು ಎಣ್ಣೆ ಇತ್ತು. ಆದರೂ ತನ್ನ ಅತ್ಯಾವಶ್ಯಕತೆಯ ಮಧ್ಯೆಯೂ, ಎಷ್ಟರತನಕ ಕೊರತೆ ಇರುವುದೋ ಆ ತನಕ ಅವಳ ಎಣ್ಣೆಯ ಮೊಗೆಯನ್ನು ಮತ್ತು ಹಿಟ್ಟಿನ ಮಡಕೆಯನ್ನು ಯೆಹೋವನು ತುಂಬಿಸುವನು ಎಂಬ ಎಲೀಯನ ವಾಗ್ದಾನದಲ್ಲಿ ಭರವಸವಿಟ್ಟವಳಾಗಿ, ಮೊದಲು ಅವನಿಗಾಗಿ ರೊಟ್ಟಿ ಮಾಡಿಕೊಡಲು ಆಕೆ ಸಿದ್ಧಳಾಗಿದ್ದಳು. ತನ್ನ ಕಾಲದ ಅಪನಂಬಿಗಸ್ತ ಇಸ್ರಾಯೇಲ್ಯರನ್ನು ಖಂಡಿಸಿದಾಗ ಯೇಸು ಕ್ರಿಸ್ತನು ಈ ವಿಧವೆಯ ನಂಬಿಗಸ್ತ ಮಾದರಿಯನ್ನು ಮರುಕಳಿಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ!—1 ಅರಸು 17:13-16; ಲೂಕ 4:25, 26.
ಈ ಅದ್ಭುತದ ಮಧ್ಯೆಯಾದರೋ ವಿಧವೆಯ ಮತ್ತು ಎಲೀಯನ ಇಬ್ಬರ ನಂಬಿಕೆಯೂ ಆಗಲೇ ಒಂದು ಕಟು ಪರೀಕ್ಷೆಯನ್ನು ಎದುರಿಸಲಿಕ್ಕಿತ್ತು. ದಿಢೀರನೇ ಅವಳ ಮಗನು ತೀರಿಹೋದನು. ಭಾವಪರವಶಳಾದ ಆಕೆ ಈ ದುಃಖಕರ ಹೊಡೆತಕ್ಕೆ “ದೇವರ ಮನುಷ್ಯನಾದ” ಎಲೀಯನು ಹೇಗೋ ಕಾರಣನಿರಬೇಕೆಂದು ಊಹಿಸಲು ಮಾತ್ರವೇ ಶಕ್ತಳಾದಳು. ಗತಕಾಲದ ಯಾವುದೇ ಪಾಪಕ್ಕಾಗಿ ತನಗೆ ಶಿಕ್ಷೆಯಾಗುತ್ತಿದೆಯೇ ಎಂದಾಕೆ ನೆನಸ ತೊಡಗಿದಳು. ಆದರೆ ಎಲೀಯನು ಆ ನಿರ್ಜೀವ ಮಗನನ್ನು ಆಕೆಯ ಉಡಿಲಿನಿಂದ ತೆಗೆದುಕೊಂಡು ಒಂದು ಮೇಲಿನ ಕೋಣೆಗೆ ಒಯ್ದನು. ಯೆಹೋವನು ಪೋಷಣೆಗಿಂತಲೂ ಹೆಚ್ಚಿನದ್ದನ್ನು ಒದಗಿಸಶಕ್ತನೆಂದು ಅವನಿಗೆ ತಿಳಿದಿತ್ತು. ಯೆಹೋವನು ತಾನೇ ಜೀವದ ಮೂಲನು! ಆದುದರಿಂದ ಮಗುವಿನ ಜೀವವು ಹಿಂತಿರುಗುವಂತೆ ಎಲೀಯನು ಮನಃಪೂರ್ವಕವಾಗಿ ಮತ್ತು ಎಡೆಬಿಡದೆ ಯೆಹೋವನಿಗೆ ಪ್ರಾರ್ಥಿಸಿದನು.
ಪುನರುತ್ಥಾನದಲ್ಲಿ ಅಂಥ ನಂಬಿಕೆ ಇದ್ದವರಲ್ಲಿ ಎಲೀಯನು ಮೊದಲಿಗನಲ್ಲ, ಆದರೆ ಬೈಬಲ್ ದಾಖಲೆಯಲ್ಲಿ, ಅದನ್ನು ನಡಿಸಲು ಮೊದಲಾಗಿ ಉಪಯೋಗಿಸಲ್ಪಟ್ಟವನು ಅವನಾಗಿದ್ದನು. ಆ ಹುಡುಗನ “ಪ್ರಾಣವು ತಿರುಗಿ ಬಂತು!” “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ” ಎಂಬ ಸರಳ ಮಾತುಗಳಿಂದ ಎಲೀಯನು ಆಕೆಯ ಮಗನನ್ನು ಅವಳ ಬಳಿಗೆ ತಂದಾಗ ಅವನ ತಾಯಿಗಾದ ಸಂತೋಷವು ನೋಡುವವರ ಕಣ್ಗಳಿಗೆಷ್ಟು ರಮ್ಯವಾಗಿದ್ದಿರಬೇಕು. ನಿಸ್ಸಂದೇಹವಾಗಿ ಅಳುತ್ತಾ ಆಕೆ ಅಂದದ್ದು: “ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು.”—1 ಅರಸು 17:17-24.
“ಯೆಹೋವನು ನನ್ನ ದೇವರು”
ಎಲೀಯ ಎಂಬ ಹೆಸರಿನ ಅರ್ಥವು “ಯೆಹೋವನು ನನ್ನ ದೇವರು” ಎಂದಿರುವುದು ಅದೆಷ್ಟು ಹೃದಯಸ್ಪರ್ಶಿ, ಎಷ್ಟು ಯಥಾಯೋಗ್ಯವು! ಅನಾವೃಷ್ಟಿ ಮತ್ತು ಬರಗಾಲದ ಒಂದು ಸಮಯದಲ್ಲಿ, ಯೆಹೋವನು ಅವನಿಗೆ ಆಹಾರವನ್ನೂ ನೀರನ್ನೂ ಒದಗಿಸಿದನು; ನೈತಿಕ ಅವ್ಯವಸ್ಥೆಯ ಕಾಲದಲ್ಲಿ ಯೆಹೋವನು ಅವನಿಗೆ ಯೋಗ್ಯ ಮಾರ್ಗದರ್ಶನೆಯನ್ನು ಕೊಟ್ಟನು; ಮರಣದ ಸಮಯದಲ್ಲಿ, ಜೀವವನ್ನು ಪುನಃಕೊಡುವಂತೆ ಯೆಹೋವನು ಅವನನ್ನು ಉಪಯೋಗಿಸಿದನು. ಮತ್ತು ಪ್ರತಿ ಸಲ ಎಲೀಯನು ಅವನ ದೇವರಲ್ಲಿ ನಂಬಿಕೆಯನ್ನು ತೋರಿಸುವಂತೆ ಕರೆಯಲ್ಪಟ್ಟನು.—ಪೋಷಣೆಗಾಗಿ ಯೆಹೋವನಲ್ಲಿ ಭರವಸವಿಡುವ ಮೂಲಕ, ಆತನ ಮಾರ್ಗದರ್ಶನೆಗಳನ್ನು ಅನುಸರಿಸುವ ಮೂಲಕ, ಆತನ ನಾಮವನ್ನು ಪವಿತ್ರೀಕರಿಸಲು ಆತನಲ್ಲೇ ಆತುಕೊಳ್ಳುವ ಮೂಲಕ—ಅವನು ಯೆಹೋವನಲ್ಲಿ ನಂಬಿಕೆ ಇಡಲು ಇನ್ನೂ ಹೆಚ್ಚು ಕಾರಣಗಳ ಪ್ರತಿಫಲವನ್ನು ಪಡೆದನು. ಅವನು ತನ್ನ ದೇವರಾದ ಯೆಹೋವನಿಂದ ಇನ್ನೂ ಕಷ್ಟದ, ಭೀತಿದಾಯಕ ನೇಮಕಗಳನ್ನು ಸಹ ಸ್ವೀಕರಿಸುವುದನ್ನು ಮುಂದುವರಿಸಿದಾಗ ಆ ಮಾದರಿಯು ಸತ್ಯವಾಗಿ ತೋರಿಬಂತು. ವಾಸ್ತವದಲ್ಲಿ ಅವನ ಅತ್ಯಂತ ಪ್ರದರ್ಶನಾತ್ಮಕ ಅದ್ಭುತಗಳಲ್ಲಿ ಕೆಲವು ಇನ್ನೂ ಮುಂದಕ್ಕೆ ನಡಿಯಲಿದ್ದವು.—1 ಅರಸು 18 ನೆಯ ಅಧ್ಯಾಯ ನೋಡಿರಿ.
ಇಂದು ಯೆಹೋವನ ಸೇವಕರಿಗೆ ಬಹುಮಟ್ಟಿಗೆ ಹೀಗೆಯೇ ಇದೆ. ನಾವು ಒಂದುವೇಳೆ ಅದ್ಭುತಕರವಾಗಿ ಉಣಿಸಲ್ಪಡಲಿಕ್ಕಿಲ್ಲ ಅಥವಾ ಒಂದು ಪುನರುತ್ಥಾನವನ್ನು ನಡಿಸಲು ಬಳಸಲ್ಪಡಲಿಕ್ಕಿಲ್ಲ. ಇದು ಅಂಥ ಅದ್ಭುತಗಳಿಗಾಗಿರುವ ಯುಗವಲ್ಲ. ಆದರೂ ಯೆಹೋವನು ತಾನೇ ಎಲೀಯನ ದಿನಗಳಿಂದ ಲೇಶವಾದರೂ ಬದಲಾಗಿರುವುದಿಲ್ಲ.—1 ಕೊರಿಂಥ 13:8; ಯಾಕೋಬ 1:17.
ನಮಗೆ ಸಹಾ ಕೆಲವು ಎದೆಗುಂದಿಸುವ ನೇಮಕಗಳು, ನಮ್ಮ ದೇವದತ್ತ ಸಂದೇಶದೊಂದಿಗೆ ತಲಪಲು ಕಷ್ಟಕರವಾದ ಮತ್ತು ಭಯಬರಿಸುವ ಕ್ಷೇತ್ರಗಳು ದೊರೆಯಬಹುದು. ನಮ್ಮ ಮೇಲೆ ಹಿಂಸೆಯು ಬರಬಹುದು. ನಾವು ಹೊಟ್ಟೆಗಿಲ್ಲದೆ ಹೋಗಲೂ ಬಹುದು. ಆದರೆ ನಂಬಿಗಸ್ತ ವ್ಯಕ್ತಿಗಳಿಗೆ ಮತ್ತು ಆತನ ಇಡೀ ಸಂಸ್ಥೆಗೆ, ಯೆಹೋವನು ತಾನಿನ್ನೂ ತನ್ನ ಸೇವಕರನ್ನು ನಡಿಸಿ, ಸಂರಕ್ಷಿಸುತ್ತಾನೆಂದು ಪದೆಪದೇ ರುಜುಪಡಿಸಿರುವನು. ಆತನು ಅವರಿಗೆ ನೇಮಿಸಿದ ಯಾವುವೇ ಕೆಲಸಗಳನ್ನು ನಿರ್ವಹಿಸಲು ಆತನಿನ್ನೂ ಅವರಿಗೆ ಬಲವನ್ನು ಕೊಡುತ್ತಾನೆ. ಮತ್ತು ಈ ತೊಂದರೆಯುಕ್ತ ಲೋಕದಲ್ಲಿ ಅವರ ಮೇಲೆ ಬರಬಹುದಾದ ಯಾವುವೇ ಸಂಕಟಗಳನ್ನು ತಾಳಿಕೊಳ್ಳಲು ಅವನಿನ್ನೂ ಅವರಿಗೆ ಸಹಾಯ ಮಾಡುತ್ತಾನೆ.—ಕೀರ್ತನೆ 55:22. (w92 4/1)
[ಅಧ್ಯಯನ ಪ್ರಶ್ನೆಗಳು]
a ದೇಶದಲ್ಲಿ “ಮೂರು ವರ್ಷ ಆರು ತಿಂಗಳು” ಮಳೆ ಬಾರದೆ ಇತ್ತು ಎಂದು ಯೇಸು ಮತ್ತು ಯಾಕೋಬ ಇಬ್ಬರೂ ಹೇಳುತ್ತಾರೆ. ಆದರೂ, ಎಲೀಯನು ಆಹಾಬನ ಮುಂದೆ—ನಿಸ್ಸಂದೇಹವಾಗಿ ಅನಾವೃಷ್ಟಿಯನ್ನು ಪ್ರಕಟಿಸಿದ ದಿನದಿಂದ ಲೆಕ್ಕಿಸಿ,—ಅನಾವೃಷ್ಟಿಯ “ಮೂರನೆಯ ವರುಷದ” ಕೊನೆಯಲ್ಲಿ ಗೋಚರಿಸಿದನೆಂದು ಹೇಳಲಾಗಿದೆ. ಹೀಗೆ ಒಂದು ದೀರ್ಘಕಾಲದ, ಮಳೆರಹಿತ ಶುಷ್ಕಋತುವಿನ ಅನಂತರವೇ ಎಲೀಯನು ಆಹಾಬನ ಮುಂದೆ ಗೋಚರಿಸಿರಬೇಕು.—ಲೂಕ 4:25; ಯಾಕೋಬ 5:17; 1 ಅರಸು 18:1.
[ಪುಟ 18 ರಲ್ಲಿರುವ ಚಿತ್ರ]
ಯೆಹೋವನು ತನ್ನ ಸೇವಕರ ಆವಶ್ಯಕತೆಗಳನ್ನು ಪೂರೈಸುತ್ತಾನೆಂಬ ಎಲೀಯನಂಥ ನಂಬಿಕೆಯು ನಿಮಗಿದೆಯೇ?