ಯೆಹೋವನ ವಾಕ್ಯವು ಸಜೀವವಾದದ್ದು
ಎರಡನೇ ಅರಸುಗಳು ಪುಸ್ತಕದ ಮುಖ್ಯಾಂಶಗಳು
ಬೈಬಲಿನ ಎರಡನೇ ಅರಸುಗಳು ಪುಸ್ತಕವು, ಒಂದನೇ ಅರಸುಗಳು ಪುಸ್ತಕದ ಮುಂದುವರಿಸುವಿಕೆ ಆಗಿದೆ. ಅದು 29 ಮಂದಿ ರಾಜರುಗಳ ಒಂದು ವೃತ್ತಾಂತವಾಗಿದೆ. ಈ ರಾಜರುಗಳಲ್ಲಿ 12 ಮಂದಿ, ಉತ್ತರದ ಇಸ್ರಾಯೇಲ್ ರಾಜ್ಯದವರಾಗಿದ್ದರು, ಮತ್ತು 17 ಮಂದಿ ದಕ್ಷಿಣದ ಯೆಹೂದ ರಾಜ್ಯದವರಾಗಿದ್ದರು. ಎರಡನೇ ಅರಸುಗಳು ಪುಸ್ತಕವು ಪ್ರವಾದಿಗಳಾದ ಎಲೀಯ, ಎಲೀಷ, ಮತ್ತು ಯೆಶಾಯನ ಚಟುವಟಿಕೆಗಳನ್ನೂ ತಿಳಿಸುತ್ತದೆ. ಈ ದಾಖಲೆಯು ಎಲ್ಲವನ್ನೂ ನಿಷ್ಕೃಷ್ಟವಾದ ಕಾಲಗಣನಾ ಕ್ರಮದಲ್ಲಿ ಕೊಡದಿದ್ದರೂ, ಸಮಾರ್ಯ ಮತ್ತು ಯೆರೂಸಲೇಮಿನ ನಾಶನದ ವರೆಗೆ ನಡೆದಂಥ ಘಟನೆಗಳನ್ನು ಅದು ವರದಿಸುತ್ತದೆ. ಒಟ್ಟಿನಲ್ಲಿ ಎರಡನೇ ಅರಸುಗಳು, 340 ವರ್ಷಗಳ ಅವಧಿಯನ್ನು ಆವರಿಸುತ್ತದೆ. ಇದು ಸಾ.ಶ.ಪೂ. 920ರಿಂದ ಆರಂಭಗೊಂಡು ಪ್ರವಾದಿ ಯೆರೆಮೀಯನು ಈ ಪುಸ್ತಕವನ್ನು ಬರೆದು ಮುಗಿಸಿದ ಸಾ.ಶ.ಪೂ. 580ರ ವರೆಗಿನ ಕಾಲಾವಧಿಯಾಗಿದೆ.
ಎರಡನೇ ಅರಸುಗಳು ಪುಸ್ತಕದಿಂದ ನಮಗೇನು ಪ್ರಯೋಜನವಿದೆ? ಯೆಹೋವನ ಮತ್ತು ಆತನ ವ್ಯವಹಾರಗಳ ಬಗ್ಗೆ ಅದು ನಮಗೇನನ್ನು ಕಲಿಸುತ್ತದೆ? ಈ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ರಾಜರುಗಳು, ಪ್ರವಾದಿಗಳು, ಮತ್ತು ಇತರರಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು? ಈ ಎರಡನೇ ಅರಸುಗಳು ಪುಸ್ತಕದಿಂದ ನಾವೇನನ್ನು ಕಲಿಯಬಲ್ಲೆವೆಂದು ನೋಡೋಣ.
ಎಲೀಷನು ಎಲೀಯನ ಉತ್ತರಾಧಿಕಾರಿಯಾಗುತ್ತಾನೆ
ಇಸ್ರಾಯೇಲಿನ ರಾಜ ಅಹಜ್ಯನು ತನ್ನ ಮನೆಯಲ್ಲಿ ಬಿದ್ದು ಅಸ್ವಸ್ಥನಾಗುತ್ತಾನೆ. ತಾನು ಸಾಯಲಿದ್ದೇನೆಂದು ಅವನಿಗೆ ಪ್ರವಾದಿ ಎಲೀಯನಿಂದ ತಿಳಿದುಬರುತ್ತದೆ. ಅಹಜ್ಯನು ಸಾಯುತ್ತಾನೆ, ಮತ್ತು ಅವನ ತಮ್ಮನಾದ ಯೋರಾಮನು ಪಟ್ಟಕ್ಕೇರುತ್ತಾನೆ. ಈ ಸಮಯದಲ್ಲಿ, ಯೆಹೂದದಲ್ಲಿ ಯೆಹೋಷಾಫಾಟನು ರಾಜನಾಗಿರುತ್ತಾನೆ. ಎಲೀಯನು ಸುಳಿಗಾಳಿಯಲ್ಲಿ ಮೇಲೆ ಹೋಗುತ್ತಾನೆ, ಮತ್ತು ಅವನ ಸಹಾಯಕನಾದ ಎಲೀಷನು ಪ್ರವಾದಿಯಾಗಿ ಅವನ ಉತ್ತರಾಧಿಕಾರಿಯಾಗುತ್ತಾನೆ. ಎಲೀಷನು ಮುಂದೆ ತನ್ನ ಶುಶ್ರೂಷೆಯ ಸುಮಾರು 60 ವರ್ಷಗಳಲ್ಲಿ ಹಲವಾರು ಅದ್ಭುತಗಳನ್ನು ನಡೆಸುತ್ತಾನೆ.—“ಎಲೀಷನ ಅದ್ಭುತಗಳು” ಎಂಬ ಚೌಕವನ್ನು ನೋಡಿರಿ.
ಒಬ್ಬ ಮೋವಾಬ್ಯ ರಾಜನು ಇಸ್ರಾಯೇಲಿನ ವಿರುದ್ಧ ತಿರುಗಿಬಿದ್ದಾಗ ಯೋರಾಮ, ಯೆಹೋಷಾಫಾಟ ಮತ್ತು ಎದೋಮಿನ ರಾಜನು ಅವನೊಂದಿಗೆ ಕದನಕ್ಕಿಳಿಯುತ್ತಾರೆ. ಯೆಹೋಷಾಫಾಟನ ನಂಬಿಗಸ್ತಿಕೆಯಿಂದಾಗಿ ಅವರಿಗೆ ಜಯ ಸಿಗುತ್ತದೆ. ತದನಂತರ, ಅರಾಮ್ಯರ ಅರಸನು ಇಸ್ರಾಯೇಲಿನ ವಿರುದ್ಧ ಒಂದು ಅನಿರೀಕ್ಷಿತ ಆಕ್ರಮಣವನ್ನು ಯೋಜಿಸುತ್ತಾನೆ. ಆದರೆ ಎಲೀಷನು ಅವನ ಆ ಯೋಜನೆಯನ್ನು ಭಂಗಗೊಳಿಸುತ್ತಾನೆ. ಇದರಿಂದ ಕುಪಿತನಾದ ಅರಾಮ್ಯರ ಅರಸನು, ಎಲೀಷನನ್ನು ಸೆರೆಹಿಡಿಯಲು “ರಥರಥಾಶ್ವಸಹಿತವಾದ ಮಹಾಸೈನ್ಯವನ್ನು” ಕಳುಹಿಸುತ್ತಾನೆ. (2 ಅರಸುಗಳು 6:14) ಎಲೀಷನು ಎರಡು ಅದ್ಭುತಗಳನ್ನು ನಡೆಸಿ, ಅರಾಮ್ಯರನ್ನು ಶಾಂತಿಯಿಂದ ಹಿಂದೆ ಹೋಗಗೊಡಿಸುತ್ತಾನೆ. ಕಾಲಾನಂತರ, ಅರಾಮ್ಯರ ರಾಜನಾದ ಬೆನ್ಹದದನು ಸಮಾರ್ಯಕ್ಕೆ ಮುತ್ತಿಗೆಹಾಕುತ್ತಾನೆ. ಇದರಿಂದಾಗಿ ಘೋರವಾದ ಕ್ಷಾಮವುಂಟಾಗುತ್ತದೆ. ಆದರೆ ಈ ಕ್ಷಾಮವು ಅಂತ್ಯಗೊಳ್ಳುವುದೆಂದು ಎಲೀಷನು ಮುಂತಿಳಿಸುತ್ತಾನೆ.
ಸ್ವಲ್ಪ ಸಮಯದ ಬಳಿಕ, ಎಲೀಷನು ದಮಸ್ಕಕ್ಕೆ ಹೋಗುತ್ತಾನೆ. ಕಾಯಿಲೆಬಿದ್ದಿದ್ದ ರಾಜ ಬೆನ್ಹದದನು, ತಾನು ಈ ಕಾಯಿಲೆಯಿಂದ ಗುಣಮುಖನಾಗುವೆನೊ ಎಂಬುದನ್ನು ವಿಚಾರಿಸಲು ಹಜಾಯೇಲನನ್ನು ಕಳುಹಿಸುತ್ತಾನೆ. ರಾಜನು ಸಾಯುವನು ಮತ್ತು ಅವನ ಸ್ಥಾನದಲ್ಲಿ ಹಜಾಯೇಲನು ಆಳುವನೆಂದು ಎಲೀಷನು ಮುಂತಿಳಿಸುತ್ತಾನೆ. ಮರುದಿನವೇ ಹಜಾಯೇಲನು, ನೀರಿನಲ್ಲಿ ತೋಯಿಸಿದ “ಕವುದಿ”ಯಿಂದ ರಾಜನನ್ನು ಉಸಿರುಗಟ್ಟಿಸಿ ಸಾಯಿಸುತ್ತಾನೆ ಮತ್ತು ಪ್ರಭುತ್ವವನ್ನು ವಹಿಸಿಕೊಳ್ಳುತ್ತಾನೆ. (2 ಅರಸುಗಳು 8:15) ಯೆಹೂದದಲ್ಲಿ ಯೆಹೋಷಾಫಾಟನ ಮಗನಾದ ಯೆಹೋರಾಮನು ರಾಜನಾಗುತ್ತಾನೆ, ಮತ್ತು ಅವನ ಬಳಿಕ ಅವನ ಮಗನಾದ ಅಹಜ್ಯನು ರಾಜನಾಗುತ್ತಾನೆ.—“ಯೆಹೂದದ ಮತ್ತು ಇಸ್ರಾಯೇಲಿನ ರಾಜರು” ಎಂಬ ಚೌಕವನ್ನು ನೋಡಿರಿ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
2:9—ಎಲೀಷನು ‘ಎಲೀಯನ ಆತ್ಮದಲ್ಲಿ ಎರಡು ಪಾಲನ್ನು’ ಕೇಳಿದ್ದೇಕೆ? ಇಸ್ರಾಯೇಲಿನ ಪ್ರವಾದಿಯಾಗಿ ತನಗಿರುವ ಜವಾಬ್ದಾರಿಯನ್ನು ಪೂರೈಸಲಿಕ್ಕಾಗಿ, ಎಲೀಷನಿಗೆ ಎಲೀಯನು ತೋರಿಸಿದಂಥ ಧೈರ್ಯ ಹಾಗೂ ನಿರ್ಭೀತತೆಯ ಅದೇ ಆತ್ಮವನ್ನು ತೋರಿಸುವ ಅಗತ್ಯವಿತ್ತು. ಇದನ್ನು ಗ್ರಹಿಸಿಯೇ, ಎಲೀಷನು ಎಲೀಯನ ಆತ್ಮದಲ್ಲಿ ಎರಡು ಪಾಲನ್ನು ಕೇಳಿದನು. ಎಲೀಷನನ್ನು ಎಲೀಯನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದನು, ಮತ್ತು ಆರು ವರ್ಷಗಳ ವರೆಗೆ ಎಲೀಷನು ಅವನ ಸೇವಕನಾಗಿದ್ದನು. ಆದುದರಿಂದ ಎಲೀಷನು ಎಲೀಯನನ್ನು ತನ್ನ ಆಧ್ಯಾತ್ಮಿಕ ತಂದೆಯಾಗಿ ದೃಷ್ಟಿಸುತ್ತಿದ್ದನು. ಎಲೀಷನು ಎಲೀಯನ ಆಧ್ಯಾತ್ಮಿಕ ಜ್ಯೇಷ್ಠಪುತ್ರನಂತೆ ಇದ್ದನು. (1 ಅರಸುಗಳು 19:19-21; 2 ಅರಸುಗಳು 2:12) ಹೀಗಿರಲಾಗಿ, ಒಬ್ಬ ನಿಜವಾದ ಜ್ಯೇಷ್ಠಪುತ್ರನು ತನ್ನ ತಂದೆಯ ಆಸ್ತಿಯಲ್ಲಿ ಎರಡು ಭಾಗಗಳನ್ನು ಪಡೆಯುತ್ತಿದ್ದಂತೆಯೇ ಎಲೀಷನು ಎಲೀಯನಿಂದ ಆಧ್ಯಾತ್ಮಿಕ ಆಸ್ತಿಯಲ್ಲಿ ಎರಡು ಪಾಲನ್ನು ಕೇಳಿ ಪಡೆದುಕೊಂಡನು.
2:11—ಎಲೀಯನು ‘ಸುಳಿಗಾಳಿಯ ಮುಖಾಂತರ’ ಏರಿಹೋದ “ಪರಲೋಕ” (“ಆಕಾಶ,” NIBV) ಏನಾಗಿತ್ತು? ಇದು ಅಕ್ಷರಶಃ ವಿಶ್ವದ ದೂರದ ಭಾಗಗಳಾಗಿರಲಿಲ್ಲ, ಇಲ್ಲವೆ ದೇವರು ಮತ್ತು ಆತನ ದೂತರು ವಾಸಿಸುವ ಆತ್ಮಿಕ ಸ್ಥಳವಾಗಿರಲಿಲ್ಲ. (ಧರ್ಮೋಪದೇಶಕಾಂಡ 4:19; ಕೀರ್ತನೆ 11:4; ಮತ್ತಾಯ 6:9; 18:10) ಎಲೀಯನು ಎಲ್ಲಿಗೆ ಏರಿಹೋದನೊ ಆ ‘ಆಕಾಶವು’ ವಾಯುಮಂಡಲದ ಆಕಾಶಗಳಾಗಿದ್ದವು. (ಕೀರ್ತನೆ 78:26; ಮತ್ತಾಯ 6:26) ಭೂಮಿಯ ವಾಯುಮಂಡಲದಲ್ಲಿ ಬಿರುಸಾಗಿ ಓಡುತ್ತಾ ಆ ಅಗ್ನಿಮಯ ರಥವು ಎಲೀಯನನ್ನು ಭೂಮಿಯ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸಿದ್ದಿರಬಹುದು ಮತ್ತು ಅವನು ಅಲ್ಲಿ ಸ್ವಲ್ಪಕಾಲ ವಾಸಿಸಿದ್ದಿರಬಹುದು. ವಾಸ್ತವದಲ್ಲಿ ಕಾಲಾನಂತರ, ಎಲೀಯನು ಯೆಹೂದದ ರಾಜನಾದ ಯೆಹೋರಾಮನಿಗೆ ಒಂದು ಪತ್ರವನ್ನು ಬರೆದನು.—2 ಪೂರ್ವಕಾಲವೃತ್ತಾಂತ 21:1, 12-15.
5:15, 16—ಎಲೀಷನು ನಾಮಾನನು ಕೊಟ್ಟ ಕಾಣಿಕೆಯನ್ನು ಏಕೆ ಸ್ವೀಕರಿಸಲಿಲ್ಲ? ನಾಮಾನನು ಅದ್ಭುತವಾಗಿ ವಾಸಿಯಾದದ್ದು ತನ್ನ ಶಕ್ತಿಯಿಂದಲ್ಲ ಬದಲಾಗಿ ಯೆಹೋವನ ಶಕ್ತಿಯಿಂದ ಎಂಬುದನ್ನು ಎಲೀಷನು ಗ್ರಹಿಸಿದ್ದರಿಂದಲೇ ಅವನು ಆ ಕಾಣಿಕೆಯನ್ನು ಸ್ವೀಕರಿಸಲಿಲ್ಲ. ತನ್ನ ದೇವನೇಮಿತ ಸ್ಥಾನವನ್ನು ಸ್ವಲಾಭಕ್ಕಾಗಿ ಉಪಯೋಗಿಸುವುದನ್ನು ಅವನಿಂದ ಯೋಚಿಸಲೂ ಸಾಧ್ಯವಿರಲಿಲ್ಲ. ಇಂದು ಸತ್ಯಾರಾಧಕರು, ಯೆಹೋವನ ಸೇವೆಯಿಂದ ವೈಯಕ್ತಿಕ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದಿಲ್ಲ. ಅವರು ಯೇಸುವಿನ ಈ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುತ್ತಾರೆ: “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.”—ಮತ್ತಾಯ 10:8.
5:18, 19—ಒಂದು ಧಾರ್ಮಿಕ ಕೃತ್ಯದಲ್ಲಿ ಪಾಲ್ಗೊಳ್ಳಬೇಕಾಗುವುದಕ್ಕಾಗಿ ನಾಮಾನನು ಕ್ಷಮೆಯನ್ನು ಕೋರುತ್ತಿದ್ದನೊ? ಅರಾಮ್ಯರ ರಾಜನು ವೃದ್ಧನೂ ದುರ್ಬಲನೂ ಆಗಿದ್ದನೆಂಬುದು ವ್ಯಕ್ತವಾಗುತ್ತದೆ. ಈ ಕಾರಣದಿಂದ ಅವನು ಆಧಾರಕ್ಕಾಗಿ ನಾಮಾನನ ಮೇಲೆ ಒರಗಿಕೊಳ್ಳಬೇಕಾಗುತ್ತಿತ್ತು. ಈ ರಾಜನು ರಿಮ್ಮೋನನನ್ನು ಆರಾಧಿಸಲು ಬಾಗುತ್ತಿದ್ದಾಗ, ನಾಮಾನನೂ ಬಾಗಬೇಕಾಗುತ್ತಿತ್ತು. ನಾಮಾನನಿಗೆ ಇದು ಬರಿಯ ಯಾಂತ್ರಿಕ ಕೃತ್ಯವಾಗಿತ್ತು, ಯಾಕಂದರೆ ಅವನು ಇದನ್ನು ಆರಾಧನೆಗಾಗಿ ಅಲ್ಲ ಬದಲಾಗಿ ರಾಜನ ದೇಹಕ್ಕೆ ಆಧಾರವನ್ನು ಕೊಡುವ ಒಂದೇ ಕಾರಣಕ್ಕಾಗಿ ಮಾಡಬೇಕಾಗುತ್ತಿತ್ತು. ತನ್ನ ಈ ಪೌರ ಕರ್ತವ್ಯವನ್ನು ನಡಸುತ್ತಿರುವುದಕ್ಕಾಗಿ ಯೆಹೋವನು ತನ್ನನ್ನು ಕ್ಷಮಿಸುವಂತೆ ನಾಮಾನನು ಕೇಳಿಕೊಳ್ಳುತ್ತಿದ್ದನು. ನಾಮಾನನ ಮಾತುಗಳನ್ನು ನಂಬಿ ಎಲೀಷನು ಅವನಿಗೆ “ಸಮಾಧಾನದಿಂದ ಹೋಗು” ಎಂದು ಹೇಳಿದನು.
ನಮಗಾಗಿರುವ ಪಾಠಗಳು:
1:13, 14. ವಿಷಯಗಳನ್ನು ಗಮನಿಸುವುದರಿಂದ ಪಾಠ ಕಲಿತು, ದೀನತೆಯಿಂದ ವರ್ತಿಸುವುದು ಜೀವಗಳನ್ನು ಉಳಿಸಬಲ್ಲದು.
2:2, 4, 6. ಎಲೀಷನು ಬಹುಶಃ ಆರು ವರ್ಷಗಳ ವರೆಗೆ ಎಲೀಯನ ಸೇವಕನಾಗಿದ್ದರೂ, ಅವನನ್ನು ಬಿಟ್ಟುಹೋಗುವುದಿಲ್ಲವೆಂದು ಪಟ್ಟುಹಿಡಿದು ಹೇಳಿದನು. ನಿಷ್ಠೆ ಮತ್ತು ಸ್ನೇಹದ ಎಷ್ಟೊಂದು ಉತ್ತಮ ಮಾದರಿ!—ಜ್ಞಾನೋಕ್ತಿ 18:24.
2:23, 24. ಎಲೀಷನನ್ನು ಗೇಲಿಮಾಡುವುದಕ್ಕೆ ಮುಖ್ಯ ಕಾರಣವು, ಬೋಳುತಲೆಯವನಾಗಿದ್ದ ಅವನು ಎಲೀಯನ ಅಧಿಕೃತ ಉಡುಪನ್ನು ಧರಿಸುತ್ತಿದ್ದದ್ದೇ ಆಗಿತ್ತೆಂದು ತೋರುತ್ತದೆ. ಆ ಮಕ್ಕಳು, ಎಲೀಷನು ಯೆಹೋವನ ಪ್ರತಿನಿಧಿಯಾಗಿದ್ದಾನೆಂಬುದನ್ನು ಗುರುತುಹಿಡಿದು, ಅವನು ತಮ್ಮ ಪ್ರದೇಶದಲ್ಲಿ ಇರಲೇಬಾರದೆಂದು ಬಯಸಿದರು. ಅವರು ಅವನಿಗೆ “ಏರು” ಅಂದರೆ ಬೇತೇಲಿಗೆ ಮೇಲಕ್ಕೇರಿ ಹೋಗುವಂತೆ ಇಲ್ಲವೆ ಎಲೀಯನಂತೆ ಮೇಲಕ್ಕೆತ್ತಲ್ಪಡುವಂತೆ ಹೇಳಿದರು. ಈ ಮಕ್ಕಳು ಅವರ ಹೆತ್ತವರ ವೈರ ಮನೋಭಾವವನ್ನು ಪ್ರತಿಬಿಂಬಿಸಿದರೆಂದು ವ್ಯಕ್ತವಾಗುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ದೇವರ ಪ್ರತಿನಿಧಿಗಳನ್ನು ಗೌರವಿಸಲು ಕಲಿಸುವುದು ಎಷ್ಟು ಆವಶ್ಯಕ!
3:14, 18, 24. ಯೆಹೋವನ ವಾಕ್ಯವು ಯಾವಾಗಲೂ ಸತ್ಯವೆಂದು ರುಜುವಾಗುತ್ತದೆ.
3:22. ಮುಂಜಾನೆಯ ಬೆಳಕಿನ ಪ್ರತಿಬಿಂಬವು ನೀರು ರಕ್ತವಾಗಿದೆ ಎಂಬ ಭ್ರಮೆಯನ್ನು ಹುಟ್ಟಿಸಿತು. ಆಗತಾನೇ ಅಗೆಯಲಾಗಿದ್ದ ಆ ತೋಡುಗಳಲ್ಲಿ ಬಹುಶಃ ಕೆಮ್ಮಣ್ಣು ಇದ್ದಿರಬಹುದು. ತನ್ನ ಉದ್ದೇಶಗಳನ್ನು ಸಾಧಿಸಲು ಯೆಹೋವನು ಪ್ರಾಕೃತಿಕ ವಿಷಯಗಳನ್ನು ಬಳಸುವ ಆಯ್ಕೆಮಾಡಬಹುದು.
4:8-11. ಎಲೀಷನು “ದೇವರ ಮನುಷ್ಯನು” ಆಗಿದ್ದಾನೆಂದು ಗುರುತಿಸಿ, ಶೂನೇಮಿನ ಸ್ತ್ರೀಯೊಬ್ಬಳು ಅವನಿಗೆ ಅತಿಥಿಸತ್ಕಾರವನ್ನು ತೋರಿಸಿದಳು. ಯೆಹೋವನ ನಂಬಿಗಸ್ತ ಆರಾಧಕರಿಗೆ ನಾವು ಸಹ ಹಾಗೆಯೇ ಮಾಡಬೇಕಲ್ಲವೇ?
5:3. ಅದ್ಭುತಗಳನ್ನು ನಡೆಸುವ ದೇವರ ಸಾಮರ್ಥ್ಯದಲ್ಲಿ ಆ ಚಿಕ್ಕ ಇಸ್ರಾಯೇಲ್ಯ ಹುಡುಗಿಗೆ ನಂಬಿಕೆಯಿತ್ತು. ತನ್ನ ಈ ನಂಬಿಕೆಯ ಬಗ್ಗೆ ಮಾತಾಡಲು ಅವಳಲ್ಲಿ ಧೈರ್ಯವೂ ಇತ್ತು. ಎಳೆಯರೇ, ದೇವರ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸಿ, ನಿಮ್ಮ ಶಿಕ್ಷಕರೊಂದಿಗೂ ಜೊತೆ ವಿದ್ಯಾರ್ಥಿಗಳೊಂದಿಗೂ ಸತ್ಯದ ಕುರಿತಾಗಿ ಧೈರ್ಯದಿಂದ ಮಾತಾಡುತ್ತೀರೊ?
5:9-19. ಒಬ್ಬ ಅಹಂಕಾರಿ ವ್ಯಕ್ತಿ ದೀನತೆಯನ್ನು ಕಲಿಯಬಲ್ಲನೆಂಬುದನ್ನು ನಾಮಾನನ ಉದಾಹರಣೆಯು ತೋರಿಸುತ್ತದಲ್ಲವೊ?—1 ಪೇತ್ರ 5:5.
5:20-27. ಸುಳ್ಳು ಬದುಕನ್ನು ನಡೆಸಿದ್ದಕ್ಕಾಗಿ ಗೇಹಜಿ ಎಂಥ ಬೆಲೆಯನ್ನು ತೆರಬೇಕಾಯಿತು! ಇಬ್ಬಗೆಯ ಜೀವನವನ್ನು ನಡೆಸುವುದರಿಂದ ಫಲಿಸುವ ವೈಯಕ್ತಿಕ ಮನೋವೇದನೆ ಹಾಗೂ ಆಪತ್ತಿನ ಕುರಿತು ಗಂಭೀರವಾಗಿ ಯೋಚಿಸುವುದು, ನಾವು ಅಂಥ ಮಾರ್ಗದಿಂದ ದೂರವಿರುವಂತೆ ಸಹಾಯಮಾಡುವುದು.
ಇಸ್ರಾಯೇಲ್ ಮತ್ತು ಯೆಹೂದವನ್ನು ಗಡೀಪಾರುಮಾಡಲಾಗುತ್ತದೆ
ಯೇಹು ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಲ್ಪಡುತ್ತಾನೆ. ಅವನು ಕೂಡಲೇ, ಅಹಾಬನ ಮನೆತನವನ್ನು ಸಂಹರಿಸಿಬಿಡುವ ಕಾರ್ಯಾಚರಣೆಯನ್ನು ಆರಂಭಿಸುತ್ತಾನೆ. ಯೇಹು ಚಾಣಾಕ್ಷತೆಯಿಂದ ‘ಇಸ್ರಾಯೇಲ್ಯರಲ್ಲಿ ಬಾಳನ ಪೂಜೆಯನ್ನು ನಿಲ್ಲಿಸುತ್ತಾನೆ.’ (2 ಅರಸುಗಳು 10:28) ಯೇಹು ಅಹಜ್ಯನನ್ನು ಕೊಂದುಹಾಕಿದ್ದಾನೆಂದು ಅಹಜ್ಯನ ತಾಯಿಯಾದ ಅತಲ್ಯಳಿಗೆ ತಿಳಿದುಬಂದಾಗ ಅವಳು “ರಾಜ ಸಂತಾನದವರನ್ನೆಲ್ಲಾ ಸಂಹರಿಸಿ”ಬಿಡುತ್ತಾಳೆ ಮತ್ತು ಸಿಂಹಾಸನವನ್ನು ಕಸಿದುಕೊಳ್ಳುತ್ತಾಳೆ. (2 ಅರಸುಗಳು 11:1) ಅಹಜ್ಯನ ಮಗನಾಗಿದ್ದು ಆಗ ಪುಟ್ಟ ಕೂಸಾಗಿದ್ದ ಯೆಹೋವಾಷನು ಮಾತ್ರ ಉಳಿಸಲ್ಪಡುತ್ತಾನೆ. ಆರು ವರ್ಷಗಳ ವರೆಗೆ ಬಚ್ಚಿಡಲ್ಪಟ್ಟ ನಂತರ, ಅವನನ್ನು ಯೆಹೂದದ ಮೇಲೆ ರಾಜನಾಗಿ ನೇಮಿಸಲಾಗುತ್ತದೆ. ಯಾಜಕನಾದ ಯೆಹೋಯಾದಾವನಿಂದ ಉಪದೇಶಪಡೆದ ಯೆಹೋವಾಷನು, ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುತ್ತಾ ಮುಂದುವರಿಯುತ್ತಾನೆ.
ಯೇಹುವಿನ ಬಳಿಕ, ಇಸ್ರಾಯೇಲಿನಲ್ಲಿ ಆಳಿದಂಥ ಎಲ್ಲ ರಾಜರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿರುವುದನ್ನು ಮಾಡುತ್ತಾರೆ. ಯೇಹುವಿನ ಮೊಮ್ಮಗನ ಆಳ್ವಿಕೆಯ ಸಮಯದಲ್ಲಿ ಎಲೀಷನು ಸಹಜವಾದ ಸಾವನ್ನಪ್ಪುತ್ತಾನೆ. ಯೆಹೋವಾಷನ ಬಳಿಕ ಯೆಹೂದದ ನಾಲ್ಕನೆಯ ಅರಸನು ಆಹಾಜನಾಗಿದ್ದಾನೆ. ಅವನು “ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವ”ನಲ್ಲ. (2 ಅರಸುಗಳು 16:1, 2) ಆದರೆ ಅವನ ಮಗನಾದ ಹಿಜ್ಕೀಯನು, ‘ಯೆಹೋವನನ್ನೇ ಹೊಂದಿಕೊಂಡಿದ್ದ’ ಒಬ್ಬ ರಾಜನಾಗುತ್ತಾನೆ. (2 ಅರಸುಗಳು 17:20; 18:6) ಸಾ.ಶ.ಪೂ. 740ರಲ್ಲಿ ಹಿಜ್ಕೀಯನು ಯೆಹೂದದ ಅರಸನಾಗಿರುವಾಗ ಮತ್ತು ಹೋಶೇಯನು ಇಸ್ರಾಯೇಲಿನ ಮೇಲೆ ಆಳ್ವಿಕೆಯನ್ನು ನಡೆಸುತ್ತಿರುವಾಗ, ಅಶ್ಶೂರದ ರಾಜ ಶಲ್ಮನೆಸರನು ‘ಸಮಾರ್ಯವನ್ನು ಸ್ವಾಧೀನಪಡಿಸಿ ಎಲ್ಲಾ ಇಸ್ರಾಯೇಲ್ಯರನ್ನು ಅಶ್ಶೂರ್ದೇಶಕ್ಕೆ ಒಯುತ್ತಾನೆ.’ (2 ಅರಸುಗಳು 17:5, 6) ಕ್ರಮೇಣ, ವಿದೇಶೀಯರನ್ನು ಇಸ್ರಾಯೇಲ್ ಕ್ಷೇತ್ರದೊಳಕ್ಕೆ ಕರೆತರಲಾಗುತ್ತದೆ ಮತ್ತು ಹೀಗೆ ಸಮಾರ್ಯದವರ ಧರ್ಮವು ಹುಟ್ಟುತ್ತದೆ.
ಯೆಹೂದದಲ್ಲಿ ಹಿಜ್ಕೀಯನ ಬಳಿಕ ಬಂದ ಏಳು ಮಂದಿ ರಾಜರಲ್ಲಿ, ಕೇವಲ ಯೋಷೀಯನು ಸುಳ್ಳಾರಾಧನೆಯನ್ನು ದೇಶದಿಂದ ತೊಲಗಿಸಲು ಕ್ರಮ ತೆಗೆದುಕೊಳ್ಳುತ್ತಾನೆ. ಕೊನೆಗೆ ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಯೆರೂಸಲೇಮನ್ನು ಸೆರೆಹಿಡಿಯುತ್ತಾರೆ ಮತ್ತು ‘ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗುತ್ತಾರೆ.’—2 ಅರಸುಗಳು 25:21.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
13:20, 21—ಈ ಅದ್ಭುತವು, ಧಾರ್ಮಿಕ ಅವಶೇಷಗಳನ್ನು ಪೂಜಿಸುವುದನ್ನು ಬೆಂಬಲಿಸುತ್ತದೊ? ಇಲ್ಲ. ಎಲೀಷನ ಎಲುಬುಗಳನ್ನು ಪೂಜಿಸಲಾಗುತ್ತಿತ್ತೆಂದು ಬೈಬಲ್ ತಿಳಿಸುವುದಿಲ್ಲ. ಈ ಅದ್ಭುತವು ದೇವರ ಶಕ್ತಿಯಿಂದ ಸಾಧ್ಯವಾಯಿತು. ಇದು, ಎಲೀಷನು ಜೀವದಿಂದಿದ್ದಾಗ ನಡೆಸಿದಂಥ ಎಲ್ಲ ಅದ್ಭುತಗಳ ವಿಷಯದಲ್ಲಿಯೂ ಸತ್ಯವಾಗಿತ್ತು.
15:1-6—ಯೆಹೋವನು ಅಜರ್ಯನನ್ನು (ಉಜ್ಜೀಯ) ಕುಷ್ಠರೋಗದಿಂದ ಬಾಧಿಸಿದ್ದು ಏಕೆ? “[ಉಜ್ಜೀಯನು] ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು.” ಯಾಜಕರು “ಅವನೆದುರಿಗೆ ನಿಂತು” ಅವನಿಗೆ “ಪವಿತ್ರಾಲಯವನ್ನು ಬಿಟ್ಟುಹೋಗು” ಎಂದು ಹೇಳಿದಾಗ ಅವನು ಯಾಜಕರ ವಿರುದ್ಧ ಕ್ರೋಧಿತನಾದನು ಮತ್ತು ಆಗ ಅವನು ಕುಷ್ಠರೋಗದಿಂದ ಬಾಧಿತನಾದನು.—2 ಪೂರ್ವಕಾಲವೃತ್ತಾಂತ 26:16-20.
18:19-21, 25—ಹಿಜ್ಕೀಯನು ಐಗುಪ್ತದೊಂದಿಗೆ ಮೈತ್ರಿಸಂಬಂಧವನ್ನು ಮಾಡಿದ್ದನೊ? ಇಲ್ಲ. ರಬ್ಷಾಕೆಯ ಈ ಆಪಾದನೆಯು, ತಾನು ‘ಯೆಹೋವನ ಚಿತ್ತದಿಂದಾಗಿ’ ಬಂದಿದ್ದೇನೆಂದು ಅವನು ನುಡಿದ ಮಾತುಗಳಂತೆಯೇ ಸುಳ್ಳಾಗಿತ್ತು. ನಂಬಿಗಸ್ತನಾದ ರಾಜ ಹಿಜ್ಕೀಯನು ಕೇವಲ ಯೆಹೋವನ ಮೇಲೆಯೇ ಅವಲಂಬಿಸಿದ್ದನು.
ನಮಗಾಗಿರುವ ಪಾಠಗಳು:
9:7, 26. ಅಹಾಬನ ಮನೆತನದ ವಿರುದ್ಧವಾದ ಭಾರೀ ನ್ಯಾಯತೀರ್ಪು, ಸುಳ್ಳಾರಾಧನೆ ಮತ್ತು ನಿರ್ದೋಷಿಗಳ ರಕ್ತವನ್ನು ಹರಿಸುವುದು ಯೆಹೋವನಿಗೆ ಅಸಹ್ಯವಾಗಿವೆ ಎಂಬುದನ್ನು ತೋರಿಸುತ್ತದೆ.
9:20. ರಭಸದಿಂದ ರಥವನ್ನು ಓಡಿಸುವ ಸಾರಥಿ ಎಂದು ಯೇಹುವಿಗಿದ್ದ ಖ್ಯಾತಿ, ತನ್ನ ನೇಮಕವನ್ನು ಪೂರೈಸುವುದರಲ್ಲಿ ಅವನಿಗಿದ್ದ ಹುರುಪಿನ ಸಾಕ್ಷ್ಯವಾಗಿತ್ತು. ಹುರುಪಿನ ರಾಜ್ಯ ಘೋಷಕ ಎಂಬ ಖ್ಯಾತಿ ನಿಮಗಿದೆಯೊ?—2 ತಿಮೊಥೆಯ 4:2.
9:36, 37; 10:17; 13:18, 19, 25; 14:25; 19:20, 32-36; 20:16, 17; 24:13. ಯೆಹೋವನ ‘ಬಾಯಿಂದ ಹೊರಡುವ ಮಾತು ಆತನು ಉದ್ದೇಶಿಸಿದ್ದನ್ನು ಕೈಗೂಡಿಸುತ್ತದೆ’ ಎಂಬ ದೃಢಭರವಸೆ ನಮಗಿರಬಲ್ಲದು.—ಯೆಶಾಯ 55:10, 11.
10:15. ತನ್ನೊಂದಿಗೆ ರಥದಲ್ಲಿ ಜೊತೆಗೂಡುವಂತೆ ಯೇಹು ಕೊಟ್ಟ ಆಮಂತ್ರಣವನ್ನು ಯೆಹೋನಾದಾಬನು ಪೂರ್ಣಹೃದಯದಿಂದ ಸ್ವೀಕರಿಸಿದಂತೆಯೇ, “ಮಹಾ ಸಮೂಹ”ದವರು ಆಧುನಿಕ ದಿನದ ಯೇಹು ಆಗಿರುವ ಯೇಸು ಕ್ರಿಸ್ತನನ್ನು ಮತ್ತು ಅವನ ಅಭಿಷಿಕ್ತ ಹಿಂಬಾಲಕರನ್ನು ಮನಃಪೂರ್ವಕವಾಗಿ ಬೆಂಬಲಿಸುತ್ತಾರೆ.—ಪ್ರಕಟನೆ 7:9.
10:30, 31. ಯೇಹುವಿನ ಚರಿತ್ರೆಯು ಯಾವುದೇ ಕುಂದು ಇಲ್ಲದಂಥದ್ದು ಆಗಿರದಿದ್ದರೂ, ಅವನೇನು ಮಾಡಿದನೊ ಅದೆಲ್ಲದ್ದಕ್ಕಾಗಿ ಯೆಹೋವನು ಗಣ್ಯತೆಯನ್ನು ತೋರಿಸಿದನು. ದೇವರು ‘ನಮ್ಮ ಕೆಲಸವನ್ನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ’ ಎಂಬುದು ಖಂಡಿತ.—ಇಬ್ರಿಯ 6:10.
13:14-19. ಯೇಹುವಿನ ಮೊಮ್ಮಗನಾದ ಯೋವಾಷನು, ಹೆಚ್ಚು ಪ್ರಯತ್ನವನ್ನು ಹಾಕದೆ, ನೆಲಕ್ಕೆ ಕೇವಲ ಮೂರು ಸಲ ಬಾಣ ಹೊಡೆದದ್ದರಿಂದ, ಅರಾಮ್ಯರನ್ನು ಸೋಲಿಸುವುದರಲ್ಲಿ ಅವನ ಯಶಸ್ಸು ಅಪೂರ್ಣವಾಗಿತ್ತು. ನಾವು ಯೆಹೋವನ ಕೆಲಸವನ್ನು ಪೂರ್ಣಹೃದಯದಿಂದ ಮತ್ತು ಹುರುಪಿನಿಂದ ಮಾಡಬೇಕೆಂದು ಆತನು ನಮ್ಮಿಂದ ನಿರೀಕ್ಷಿಸುತ್ತಾನೆ.
20:2-6. ಯೆಹೋವನು ‘ಪ್ರಾರ್ಥನೆಗಳನ್ನು ಕೇಳುವವನಾಗಿದ್ದಾನೆ.’—ಕೀರ್ತನೆ 65:2.
24:3, 4. ಮನಸ್ಸೆಯ ರಕ್ತಾಪರಾಧದಿಂದಾಗಿ ಯೆಹೋವನು ಯೆಹೂದವನ್ನು ‘ಕ್ಷಮಿಸದೇ ಹೋದನು.’ ದೇವರು ನಿರ್ದೋಷಿಗಳ ರಕ್ತವನ್ನು ಗೌರವಿಸುತ್ತಾನೆ. ಅದನ್ನು ಸುರಿಸಲು ಕಾರಣರಾದವರನ್ನು ನಾಶಮಾಡುವ ಮೂಲಕ ಯೆಹೋವನು ನಿರ್ದೋಷ ರಕ್ತಕ್ಕೆ ಮುಯ್ಯಿ ತೀರಿಸುವನೆಂದು ನಾವು ದೃಢಭರವಸೆಯಿಂದ ಇರಬಲ್ಲೆವು.—ಕೀರ್ತನೆ 37:9-11; 145:20.
ನಮಗೆ ಅಮೂಲ್ಯವಾದದ್ದು
ಎರಡನೇ ಅರಸುಗಳು ಪುಸ್ತಕವು ಯೆಹೋವನನ್ನು, ವಾಗ್ದಾನಗಳನ್ನು ನೆರವೇರಿಸುವಾತನಾಗಿ ಚಿತ್ರಿಸುತ್ತದೆ. ಎರಡೂ ರಾಜ್ಯಗಳ ನಿವಾಸಿಗಳ, ಅಂದರೆ ಮೊದಲಾಗಿ ಇಸ್ರಾಯೇಲ್ ರಾಜ್ಯ, ಅನಂತರ ಯೆಹೂದ ರಾಜ್ಯದ ಗಡೀಪಾರುಮಾಡುವಿಕೆಯು, ಧರ್ಮೋಪದೇಶಕಾಂಡ 28:15–29:28ರಲ್ಲಿರುವ ಪ್ರವಾದನಾತ್ಮಕ ತೀರ್ಪು ಹೇಗೆ ಸತ್ಯವಾಯಿತು ಎಂಬುದನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ನಮ್ಮ ಗಮನಕ್ಕೆ ತರುತ್ತದೆ. ಎರಡನೇ ಅರಸುಗಳು ಪುಸ್ತಕವು ಎಲೀಷನನ್ನು, ಯೆಹೋವನ ನಾಮ ಮತ್ತು ಸತ್ಯಾರಾಧನೆಗಾಗಿ ಮಹಾ ಹುರುಪುಳ್ಳ ಪ್ರವಾದಿಯಾಗಿ ವರ್ಣಿಸುತ್ತದೆ. ಹಿಜ್ಕೀಯ ಮತ್ತು ಯೋಷೀಯರನ್ನು, ದೇವರ ನಿಯಮವನ್ನು ಗೌರವಿಸಿದಂಥ ದೀನ ರಾಜರಾಗಿ ಚಿತ್ರಿಸಲಾಗಿದೆ.
ಎರಡನೇ ಅರಸುಗಳು ಪುಸ್ತಕದಲ್ಲಿ ಸೂಚಿಸಲ್ಪಟ್ಟಿರುವ ರಾಜರು, ಪ್ರವಾದಿಗಳು ಮತ್ತು ಇತರರ ಮನೋಭಾವ ಹಾಗೂ ಕೃತ್ಯಗಳ ಕುರಿತಾಗಿ ನಾವು ಗಂಭೀರವಾಗಿ ಯೋಚಿಸುವಾಗ, ನಾವೇನನ್ನು ಬೆನ್ನಟ್ಟಬೇಕು ಮತ್ತು ಯಾವುದರಿಂದ ದೂರವಿರಬೇಕು ಎಂಬುದರ ಕುರಿತು ಅಮೂಲ್ಯವಾದ ಪಾಠಗಳನ್ನು ಕಲಿಯುವುದಿಲ್ಲವೊ? (ರೋಮಾಪುರ 15:4; 1 ಕೊರಿಂಥ 10:11) ಹೌದು, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.”—ಇಬ್ರಿಯ 4:12.
[ಪುಟ 10ರಲ್ಲಿರುವ ಚೌಕ/ಚಿತ್ರ]
ಎಲೀಷನ ಅದ್ಭುತಗಳು
1. ಯೊರ್ದನ್ ನದಿಯ ನೀರನ್ನು ಎರಡು ಭಾಗವನ್ನಾಗಿ ಮಾಡಲಾಗುತ್ತದೆ.—2 ಅರಸುಗಳು 2:14
2. ಯೆರಿಕೋ ಪಟ್ಟಣದ ಕೆಟ್ಟ ನೀರಿನ ಸರಬರಾಯಿಯನ್ನು ಆರೋಗ್ಯಕರವನ್ನಾಗಿ ಮಾಡಲಾಗುತ್ತದೆ.—2 ಅರಸುಗಳು 2:19-22
3. ಬಾಲಾಪರಾಧಿಗಳ ಮೇಲೆ ಕರಡಿಗಳು ದಾಳಿಮಾಡುತ್ತವೆ.—2 ಅರಸುಗಳು 2:23, 24
4. ಸೈನ್ಯಗಳಿಗೆ ನೀರು ಸರಬರಾಯಿ ಮಾಡಲಾಗುತ್ತದೆ.—2 ಅರಸುಗಳು 3:16-26
5. ಒಬ್ಬ ವಿಧವೆಗೆ ಅಡಿಗೆಮಾಡುವ ಎಣ್ಣೆ ಸಿಗುತ್ತದೆ.—2 ಅರಸುಗಳು 4:1-7
6. ಬಂಜೆಯಾಗಿದ್ದ ಶೂನೇಮಿನ ಸ್ತ್ರೀಗೆ ಮಗು ಹುಟ್ಟುತ್ತದೆ.—2 ಅರಸುಗಳು 4:8-17
7. ಸತ್ತುಹೋಗಿದ್ದ ಮಗುವನ್ನು ಜೀವಕ್ಕೆ ಎಬ್ಬಿಸಲಾಗುತ್ತದೆ.—2 ಅರಸುಗಳು 4:18-37
8. ವಿಷಕಾರಿಯಾಗಿದ್ದ ಆಹಾರಪದಾರ್ಥವನ್ನು ತಿನ್ನಲು ಯೋಗ್ಯವಾದುದಾಗಿ ಮಾಡಲಾಗುತ್ತದೆ.—2 ಅರಸುಗಳು 4:38-41
9. ಇಪ್ಪತ್ತು ರೊಟ್ಟಿಗಳಿಂದ ನೂರು ಮಂದಿಯನ್ನು ಉಣಿಸಲಾಗುತ್ತದೆ.—2 ಅರಸುಗಳು 4:42-44
10. ನಾಮಾನನ ಕುಷ್ಟರೋಗವನ್ನು ವಾಸಿಮಾಡಲಾಗುತ್ತದೆ.—2 ಅರಸುಗಳು 5:1-14
11. ಗೇಹಜಿಗೆ ನಾಮಾನನ ಕುಷ್ಠರೋಗವು ಅಂಟುತ್ತದೆ.—2 ಅರಸುಗಳು 5:24-27
12. ಒಂದು ಕೊಡಲಿಯನ್ನು ನೀರಿನಲ್ಲಿ ತೇಲುವಂತೆ ಮಾಡಲಾಗುತ್ತದೆ.—2 ಅರಸುಗಳು 6:5-7
13. ಒಬ್ಬ ಸೇವಕನು ದೇವದೂತ ರಥಗಳನ್ನು ನೋಡುತ್ತಾನೆ.—2 ಅರಸುಗಳು 6:15-17
14. ಅರಾಮ್ಯರ ಸೈನ್ಯವು ಕುರುಡಾಗುತ್ತದೆ.—2 ಅರಸುಗಳು 6:18
15. ಅರಾಮ್ಯರ ಸೈನ್ಯಕ್ಕೆ ದೃಷ್ಟಿಶಕ್ತಿಯನ್ನು ಹಿಂದಿರುಗಿಸಲಾಗುತ್ತದೆ.—2 ಅರಸುಗಳು 6:19-23
16. ಸತ್ತ ವ್ಯಕ್ತಿ ಜೀವ ಹೊಂದುತ್ತಾನೆ.—2 ಅರಸುಗಳು 13:20, 21
[ಪುಟ 12ರಲ್ಲಿರುವ ಚಾರ್ಟು/ಚಿತ್ರಗಳು]
ಯೆಹೂದದ ಮತ್ತು ಇಸ್ರಾಯೇಲಿನ ರಾಜರು
ಸೌಲ/ದಾವೀದ/ಸೊಲೊಮೋನ: ಸಾ.ಶ.ಪೂ. 1117/1077/1037a
ಯೆಹೂದ ರಾಜ್ಯ ತಾರೀಖು (ಸಾ.ಶ.ಪೂ.) ಇಸ್ರಾಯೇಲ್ ರಾಜ್ಯ
ರೆಹಬ್ಬಾಮ ................997................ ಯಾರೊಬ್ಬಾಮ
ಅಬೀಯ/ಆಸ ............980/978..........
.........976/975/952....... ನಾದಾಬ/ಬಾಷ/ಏಲ
.........951/951/951........ ಜಿಮ್ರಿ/ಒಮ್ರಿ/ತಿಬ್ನಿ
................940.................. ಅಹಾಬ
ಯೆಹೋಷಾಫಾಟ ................937.................
..............920/917............ ಅಹಜ್ಯ/ಯೋರಾಮ
ಯೆಹೋರಾಮ .................913..................
ಅಹಜ್ಯ .................906..................
(ಅತಲ್ಯ) ................905................... ಯೇಹು
ಯೆಹೋವಾಷ ................898..................
............876/859.............. ಯೆಹೋವಾಹಾಜ/ಯೋವಾಷ
ಅಮಚ್ಯ .................858..................
..................844.................. ಯಾರೊಬ್ಬಾಮ II
ಅಜರ್ಯ (ಉಜ್ಜೀಯ) ...............829....................
.........803/791/791......... ಜೆಕರ್ಯ/ಶಲ್ಲೂಮ/ಮೆನಹೇಮ
............780/778................ ಪೆಕಹ್ಯ/ಪೆಕಹ
ಯೋತಾಮ/ಆಹಾಜ .............777/762.................
................758...................... ಹೋಶೇಯ
ಹಿಜ್ಕೀಯ ................746....................
..................740................... ಸಮಾರ್ಯವನ್ನು ಸೆರೆಹಿಡಿಯಲಾಗುತ್ತದೆ
ಮನಸ್ಸೆ/ಆಮೋನ/ಯೋಷೀಯ ....716/661/659.....
ಯೆಹೋವಾಹಾಜ/ಯೆಹೋಯಾಕೀಮ ...628/628.....
ಯೆಹೋಯಾಖೀನ/ಚಿದ್ಕೀಯ .........618/617.........
ಯೆರೂಸಲೇಮಿನ ನಾಶನ ...............607.................
[ಪಾದಟಿಪ್ಪಣಿ]
a ಕೆಲವು ತಾರೀಖುಗಳು ಆಳ್ವಿಕೆಯ ಆರಂಭದ ಸರಿಸುಮಾರಿನ ವರ್ಷವನ್ನು ಸೂಚಿಸುತ್ತವೆ.
[ಪುಟ 8, 9ರಲ್ಲಿರುವ ಚಿತ್ರ]
ನಾಮಾನನು ದೀನಭಾವವನ್ನು ಧರಿಸಿ, ಯೆಹೋವನ ಶಕ್ತಿಯಿಂದ ವಾಸಿಯಾಗುತ್ತಾನೆ
[ಪುಟ 8, 9ರಲ್ಲಿರುವ ಚಿತ್ರ]
ಎಲೀಯನು “ಸುಳಿಗಾಳಿಯಲ್ಲಿ” ಮೇಲೆ ಹೋದಾಗ ಅವನಿಗೇನಾಯಿತು?