‘ನನ್ನ ವಿಷಯದಲ್ಲಿ ನಿನ್ನ ಮನಸ್ಸು ಯಥಾರ್ಥವಾಗಿದೆಯೊ?’
“ನನ್ನ ಜೊತೆಯಲ್ಲಿ ಬಂದು, ಯೆಹೋವನ ಕಡೆಗಿನ ಯಾವುದೇ ಪ್ರತಿಸ್ಪರ್ಧೆಯ ವಿಷಯದಲ್ಲಿ ನನ್ನ ಅಸಹನೆಯನ್ನು ನೋಡು.”—2 ಅರಸು 10:16, NW.
1, 2. (ಎ) ಇಸ್ರಾಯೇಲಿನ ಧಾರ್ಮಿಕ ಸನ್ನಿವೇಶವು ಹೇಗೆ ಪ್ರಗತಿಪರವಾಗಿ ಹೆಚ್ಚು ಕೆಟ್ಟದಾಗುತ್ತಾ ಹೋಯಿತು? (ಬಿ) ಸಾ.ಶ.ಪೂ. 905ರಲ್ಲಿ, ಇಸ್ರಾಯೇಲಿನಲ್ಲಿ ಯಾವ ನಾಟಕೀಯ ಬದಲಾವಣೆಗಳು ಸಂಭವಿಸಲಿದ್ದವು?
ಇಸ್ರಾಯೇಲಿನಲ್ಲಿ, ಸಾ.ಶ.ಪೂ. 905ನೆಯ ವರ್ಷವು ಮಹತ್ತರವಾದ ಬದಲಾವಣೆಯ ಒಂದು ಸಮಯವಾಗಿತ್ತು. ಬಹುಮಟ್ಟಿಗೆ 100 ವರ್ಷಗಳ ಮುಂಚೆ, ಸೊಲೊಮೋನನ ಧರ್ಮಭ್ರಷ್ಟತೆಯ ಕಾರಣದಿಂದ, ಇಸ್ರಾಯೇಲ್ನ ಐಕ್ಯ ರಾಜ್ಯವನ್ನು ಯೆಹೋವನು ವಿಭಾಗಿಸಿದ್ದನು. (1 ಅರಸು 11:9-13) ಆಗ ದಕ್ಷಿಣ ರಾಜ್ಯವಾಗಿದ್ದ ಯೆಹೂದವು, ಸೊಲೊಮೋನನ ಮಗನಾದ ರೆಹಬ್ಬಾಮನಿಂದ ಆಳಲ್ಪಡುತ್ತಿದ್ದಾಗ, ಉತ್ತರ ರಾಜ್ಯವಾಗಿದ್ದ ಇಸ್ರಾಯೇಲ್, ಎಫ್ರಾಯೀಮ್ನವನಾಗಿದ್ದ ರಾಜ ಯಾರೊಬ್ಬಾಮನ ಆಳ್ವಿಕೆಗೆ ಒಳಗಾಯಿತು. ಅಸಂತೋಷಕರವಾಗಿಯೇ, ಉತ್ತರ ರಾಜ್ಯವು ವಿಪತ್ಕಾರಕವಾದ ಆರಂಭವನ್ನು ಪಡೆದಿತ್ತು. ದೇವಾಲಯದಲ್ಲಿ ಆರಾಧಿಸುವಂತೆ ತನ್ನ ಪ್ರಜೆಗಳು ದಕ್ಷಿಣ ರಾಜ್ಯಕ್ಕೆ ಪ್ರಯಾಣಿಸುವುದನ್ನು ಯಾರೊಬ್ಬಾಮನು ಇಷ್ಟಪಡಲಿಲ್ಲ. ಏಕೆಂದರೆ ದಾವೀದನ ಮನೆತನಕ್ಕೆ ಹಿಂದಿರುಗುವ ಕಲ್ಪನೆಯನ್ನು ಅವರು ಪಡೆದುಕೊಳ್ಳುವರೆಂದು ಅವನು ಹೆದರಿದ್ದನು. ಆದುದರಿಂದ ಅವನು ಇಸ್ರಾಯೇಲಿನಲ್ಲಿ ಬಸವಾರಾಧನೆಯನ್ನು ಸ್ಥಾಪಿಸಿ, ಉತ್ತರ ರಾಜ್ಯದ ಇತಿಹಾಸದಾದ್ಯಂತ ಸ್ವಲ್ಪ ಮಟ್ಟಿಗೆ ಉಳಿದಿದ್ದಂತಹ ವಿಗ್ರಹಾರಾಧನಾ ವಿಧವನ್ನು ಸ್ಥಾಪಿಸಿದನು.—1 ಅರಸು 12:26-33.
2 ಒಮ್ರಿಯ ಮಗನಾದ ಅಹಾಬನು ಅರಸನಾದಾಗ, ಸನ್ನಿವೇಶವು ಹೆಚ್ಚು ಕೆಟ್ಟದಾಯಿತು. ಅವನ ವಿದೇಶಿ ಪತ್ನಿಯಾದ ಈಜೆಬೆಲಳು, ಬಾಳನ ಆರಾಧನೆಯನ್ನು ಪ್ರವರ್ಧಿಸಿ, ಯೆಹೋವನ ಪ್ರವಾದಿಗಳನ್ನು ಕೊಲ್ಲಿಸಿದಳು. ಪ್ರವಾದಿಯಾದ ಎಲೀಯನು ಬಹಿರಂಗವಾದ ಎಚ್ಚರಿಕೆಗಳನ್ನು ಕೊಟ್ಟರೂ, ಅವಳನ್ನು ತಡೆಯಲು ಅಹಾಬನು ಏನನ್ನೂ ಮಾಡಲಿಲ್ಲ. ಆದರೂ, ಸಾ.ಶ.ಪೂ. 905ರಲ್ಲಿ, ಅಹಾಬನು ಮೃತಪಟ್ಟನು, ಮತ್ತು ಅವನ ಮಗನಾದ ಯೋರಾಮನು ಆಳ್ವಿಕೆ ನಡಿಸಿದನು. ಆ ದೇಶವನ್ನು ಶುದ್ಧೀಕರಿಸಲು ಇದೇ ಸೂಕ್ತವಾದ ಸಮಯವಾಗಿತ್ತು. ಎಲೀಯನ ಉತ್ತರಾಧಿಕಾರಿಯಾದ ಎಲೀಷನು, ಸೇನಾಧಿಪತಿಯಾದ ಯೇಹುವಿಗೆ, ಇಸ್ರಾಯೇಲ್ನ ಮುಂದಿನ ಅರಸನಾಗಿ ಅವನನ್ನೇ ಯೆಹೋವನು ಅಭಿಷೇಕಿಸುತ್ತಿದ್ದನೆಂದು ಸುದ್ದಿ ನೀಡಿದನು. ಅವನ ನೇಮಕವೇನಾಗಿತ್ತು? ಅಹಾಬನ ಪಾಪಭರಿತ ಮನೆತನವನ್ನು ಹೊಡೆದುರುಳಿಸಿ, ಈಜೆಬೆಲಳಿಂದ ಸುರಿಸಲ್ಪಟ್ಟಿದ್ದ ಪ್ರವಾದಿಗಳ ರಕ್ತಕ್ಕೆ ಸೇಡುತೀರಿಸುವುದಾಗಿತ್ತು!—2 ಅರಸು 9:1-10.
3, 4. ತನ್ನ ಮನಸ್ಸು ‘ಯೇಹುವಿನ ಮನಸ್ಸಿನೊಂದಿಗೆ ಯಥಾರ್ಥ’ವಾಗಿತ್ತು ಎಂಬುದನ್ನು ಯೆಹೋನಾದಾಬನು ಹೇಗೆ ತೋರಿಸಿದನು?
3 ದೇವರ ಆಜ್ಞೆಗೆ ವಿಧೇಯನಾಗಿ, ದುಷ್ಟ ಈಜೆಬೆಲಳನ್ನು ಯೇಹು ಕೊಂದನು, ಮತ್ತು ತದನಂತರ ಅಹಾಬನ ಮನೆತನವನ್ನು ಹೊಡೆದುರುಳಿಸುವ ಮೂಲಕ ಇಸ್ರಾಯೇಲನ್ನು ಶುದ್ಧೀಕರಿಸಲು ಮುನ್ನಡೆದನು. (2 ಅರಸು 9:15–10:14, 17) ಆ ಬಳಿಕ ಅವನಿಗೆ ಒಬ್ಬ ಬೆಂಬಲಿಗನು ದೊರಕಿದನು. “ಅವನು ಅಲ್ಲಿಂದ ಮುಂದೆ ಹೋಗುತ್ತಿರುವಾಗ ತನ್ನನ್ನು ಎದುರುಗೊಳ್ಳುವದಕ್ಕಾಗಿ ಬಂದ ರೇಕಾಬನ ಮಗನಾದ ಯೆಹೋನಾದಾಬನನ್ನು ಕಂಡು ವಂದಿಸಿ—ನಿನ್ನ ವಿಷಯದಲ್ಲಿ ನನ್ನ ಮನಸ್ಸು ಯಥಾರ್ಥವಾಗಿರುವಂತೆ ನಿನ್ನ ಮನಸ್ಸೂ ಯಥಾರ್ಥವಾಗಿರುತ್ತದೋ ಎಂದು ಕೇಳಿದನು. ಅವನು—ಹೌದು ಎಂದು ಉತ್ತರಕೊಟ್ಟನು. ಆಗ ಯೇಹುವು—ಹಾಗಾದರೆ ನಿನ್ನ ಕೈಕೊಡು ಅನ್ನಲು ಅವನು ಕೈಕೊಟ್ಟನು. ಯೇಹುವು ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ನನ್ನ ಜೊತೆಯಲ್ಲಿ ಬಂದು ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೋಡು [“ನನ್ನ ಜೊತೆಯಲ್ಲಿ ಬಂದು, ಯೆಹೋವನ ಕಡೆಗಿನ ಯಾವುದೇ ಪ್ರತಿಸ್ಪರ್ಧೆಯ ವಿಷಯದಲ್ಲಿ ನನ್ನ ಅಸಹನೆಯನ್ನು ನೋಡು,” NW] ಎಂದು ಹೇಳಿ ಅವನನ್ನು ಕೈಹಿಡಿದು ತನ್ನ ರಥದಲ್ಲಿ ಕರಕೊಂಡು ಹೋದನು.”—2 ಅರಸು 10:15, 16.
4 ಯೆಹೋನಾದಾಬ (ಅಥವಾ ಯೋನಾದಾಬ)ನು ಒಬ್ಬ ಇಸ್ರಾಯೇಲ್ಯನಾಗಿರಲಿಲ್ಲ. ಆದರೂ, ಅವನ ಹೆಸರಿಗೆ ಹೊಂದಿಕೆಯಲ್ಲಿ (“ಯೆಹೋವನು ಸಿದ್ಧಮನಸ್ಕನು,” “ಯೆಹೋವನು ಕೀರ್ತಿವಂತನು,” ಅಥವಾ “ಯೆಹೋವನು ಉದಾರಿ” ಎಂಬರ್ಥ), ಅವನು ಯೆಹೋವನ ಆರಾಧಕನಾಗಿದ್ದನು. (ಯೆರೆಮೀಯ 35:6) ನಿಶ್ಚಯವಾಗಿಯೂ, “ಯೆಹೋವನ ಕಡೆಗಿನ ಯಾವುದೇ ಪ್ರತಿಸ್ಪರ್ಧೆಯ ವಿಷಯದಲ್ಲಿ” ಯೇಹುವಿನ “ಅಸಹನೆಯನ್ನು” ನೋಡುವುದರಲ್ಲಿ ಅವನಿಗೆ ಅಸಾಮಾನ್ಯವಾದ ಅಭಿರುಚಿಯಿತ್ತು. ಅದು ನಮಗೆ ಹೇಗೆ ಗೊತ್ತು? ಒಳ್ಳೇದು, ಇಸ್ರಾಯೇಲ್ನ ಅಭಿಷಿಕ್ತ ಅರಸನೊಂದಿಗಿನ ಅವನ ಭೇಟಿಯು ಅಕಸ್ಮಾತ್ತಾಗಿರಲಿಲ್ಲ. ಯೆಹೋನಾದಾಬನು ‘ಅವನನ್ನು ಎದುರುಗೊಳ್ಳುವುದಕ್ಕೆ ಬರು’ತ್ತಿದ್ದನು, ಮತ್ತು ಇದು, ಯೇಹುವು ಈಜೆಬೆಲಳನ್ನೂ ಅಹಾಬನ ಮನೆತನದ ಇತರರನ್ನೂ ಈಗಾಗಲೇ ವಧಿಸಿದ್ದಂತಹ ಸಮಯವಾಗಿತ್ತು. ತನ್ನ ರಥದೊಳಗೆ ಹತ್ತಲಿಕ್ಕಾಗಿ ಕೊಡಲ್ಪಟ್ಟ ಯೇಹುವಿನ ಆಮಂತ್ರಣವನ್ನು ಯೆಹೋನಾದಾಬನು ಸ್ವೀಕರಿಸಿದಾಗ, ಏನು ನಡೆಯುತ್ತಿತ್ತು ಎಂಬುದು ಅವನಿಗೆ ತಿಳಿದಿತ್ತು. ಸುಳ್ಳು ಹಾಗೂ ಸತ್ಯ ಆರಾಧನೆಯ ನಡುವಿನ ಈ ಹೋರಾಟದಲ್ಲಿ, ಅವನು ಯೇಹುವಿನ—ಮತ್ತು ಯೆಹೋವನ—ಪಕ್ಷದಲ್ಲಿದ್ದನೆಂಬುದು ಸುಸ್ಪಷ್ಟ.
ಆಧುನಿಕ ದಿನದ ಯೇಹು ಮತ್ತು ಆಧುನಿಕ ದಿನದ ಯೆಹೋನಾದಾಬ
5. (ಎ) ಸರ್ವ ಮಾನವಕುಲಕ್ಕೆ ಅತಿ ಬೇಗನೆ ಯಾವ ಬದಲಾವಣೆಗಳು ಸಂಭವಿಸುವವು? (ಬಿ) ಮಹಾ ಯೇಹು ಯಾರು, ಮತ್ತು ಭೂಮಿಯಲ್ಲಿ ಯಾರು ಅವನನ್ನು ಪ್ರತಿನಿಧಿಸುತ್ತಾರೆ?
5 ಸಾ.ಶ.ಪೂ. 905ರಷ್ಟು ಹಿಂದೆ ಇಸ್ರಾಯೇಲಿಗೆ ವಿಷಯಗಳು ಹೇಗೆ ಬದಲಾದವೋ ಹಾಗೆಯೇ ಇಂದು ಇಡೀ ಮಾನವಕುಲಕ್ಕೆ ವಿಷಯಗಳು ಬೇಗನೆ ಅತಿಶಯವಾಗಿ ಬದಲಾಗಲಿವೆ. ಸುಳ್ಳು ಧರ್ಮವನ್ನೂ ಸೇರಿಸಿ, ಸೈತಾನನ ಪ್ರಭಾವದ ಎಲ್ಲ ಕೆಟ್ಟ ಪರಿಣಾಮಗಳಿಂದ ಭೂಮಿಯನ್ನು ಶುದ್ಧೀಕರಿಸುವ ಯೆಹೋವನ ಸಮಯವು ಈಗ ಸಮೀಪವಾಗಿದೆ. ಆಧುನಿಕ ದಿನದ ಯೇಹು ಯಾರು? “ಶೂರನೇ, ಮಹಿಮಪ್ರಭಾವಗಳನ್ನು ಧರಿಸಿಕೊಂಡು ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ. ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡೋಣವಾಗಲಿ” ಎಂಬ ಪ್ರವಾದನಾ ವಾಕ್ಯಗಳು ಯಾರಿಗೆ ಸಂಬೋಧಿಸಲ್ಪಟ್ಟಿವೆಯೋ ಆ ಯೇಸು ಕ್ರಿಸ್ತನಲ್ಲದೆ ಮತ್ತಾರೂ ಅಲ್ಲ. (ಕೀರ್ತನೆ 45:3, 4) ಭೂಮಿಯಲ್ಲಿ ಯೇಸು, “ದೇವರ ಇಸ್ರಾಯೇಲ್ಯ”ರಾದ ಅಭಿಷಿಕ್ತ ಕ್ರೈಸ್ತರಿಂದ ಪ್ರತಿನಿಧಿಸಲ್ಪಡುತ್ತಾನೆ; ಅವರು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಕೊಟ್ಟಿದ್ದಾರೆ. (ಗಲಾತ್ಯ 6:16; ಪ್ರಕಟನೆ 12:17) 1922ರಂದಿನಿಂದ, ಯೇಸುವಿನ ಈ ಅಭಿಷಿಕ್ತ ಸಹೋದರರು, ಯೆಹೋವನ ಬರಲಿರುವ ನ್ಯಾಯತೀರ್ಪಿನ ಕೃತ್ಯಗಳ ಕುರಿತು ನಿರ್ಭಯವಾಗಿ ಎಚ್ಚರಿಸಿದ್ದಾರೆ.—ಯೆಶಾಯ 61:1, 2; ಪ್ರಕಟನೆ 8:7–9:21; 16:2-21.
6. ಅಭಿಷಿಕ್ತ ಕ್ರೈಸ್ತರನ್ನು ಬೆಂಬಲಿಸಲಿಕ್ಕಾಗಿ ಜನಾಂಗಗಳಿಂದ ಯಾರು ಹೊರಬಂದರು, ಮತ್ತು ಸಾಂಕೇತಿಕವಾಗಿ ಹೇಳುವುದಾದರೆ, ಅವರು ಮಹಾ ಯೇಹುವಿನ ರಥವನ್ನು ಹೇಗೆ ಹತ್ತಿದ್ದಾರೆ?
6 ಅಭಿಷಿಕ್ತ ಕ್ರೈಸ್ತರು ಒಬ್ಬೊಂಟಿಗರಾಗಿಲ್ಲ. ಯೇಹುವನ್ನು ಎದುರುಗೊಳ್ಳಲಿಕ್ಕಾಗಿ ಯೆಹೋನಾದಾಬನು ಬಂದಂತೆಯೇ, ಜನಾಂಗಗಳಿಂದ ಅನೇಕರು ಸತ್ಯಾರಾಧನೆಗಾಗಿರುವ ತಮ್ಮ ನಿಲುವಿನಿಂದ, ಮಹಾ ಯೇಹುವಾದ ಯೇಸುವನ್ನೂ ಅವನ ಭೂಪ್ರತಿನಿಧಿಗಳನ್ನೂ ಬೆಂಬಲಿಸಲು ಬಂದಿದ್ದಾರೆ. (ಜೆಕರ್ಯ 8:23) ಇವರು ಯೇಸುವಿನಿಂದ “ಬೇರೆ ಕುರಿಗಳು” ಎಂಬುದಾಗಿ ಕರೆಯಲ್ಪಟ್ಟಿದ್ದು, 1932ರಲ್ಲಿ ಅವರು ಪುರಾತನ ಯೆಹೋನಾದಾಬನ ಆಧುನಿಕ ದಿನದ ಸರಿಸಮಾನರೋಪಾದಿ ಗುರುತಿಸಲ್ಪಟ್ಟರು, ಮತ್ತು ಆಧುನಿಕ ದಿನದ ಯೇಹುವಿನ ‘ರಥದೊಳಗೆ ಹತ್ತು’ವಂತೆ ಆಮಂತ್ರಿಸಲ್ಪಟ್ಟರು. (ಯೋಹಾನ 10:16) ಹೇಗೆ? ‘ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವ’ ಮೂಲಕ ಹಾಗೂ ‘ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವ ಕೆಲಸದಲ್ಲಿ’ ಅಭಿಷಿಕ್ತರೊಂದಿಗೆ ಪಾಲಿಗರಾಗುವ ಮೂಲಕವೇ. ಆಧುನಿಕ ಸಮಯಗಳಲ್ಲಿ, ಅರಸನೋಪಾದಿಯಿರುವ ಯೇಸುವಿನ ಕೆಳಗೆ ಸ್ಥಾಪಿತವಾಗಿರುವ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ಇದರಲ್ಲಿ ಒಳಗೂಡಿದೆ. (ಮಾರ್ಕ 13:10) 1935ರಲ್ಲಿ ಈ “ಯೋನಾದಾಬರು,” ಪ್ರಕಟನೆ 7:9-17ರ “ಮಹಾ ಸಮೂಹ”ವೆಂದು ಗುರುತಿಸಲ್ಪಟ್ಟರು.
7. ಇಂದು ಕ್ರೈಸ್ತರು, ತಮ್ಮ ‘ಮನಸ್ಸು’ ಯೇಸುವಿನ ಮನಸ್ಸಿನೊಂದಿಗೆ ‘ಇನ್ನೂ ಯಥಾರ್ಥವಾಗಿದೆ’ ಎಂಬುದನ್ನು ಹೇಗೆ ತೋರಿಸಿದ್ದಾರೆ?
7 ಮಹಾ ಸಮೂಹವೂ ಅದರ ಅಭಿಷಿಕ್ತ ಸಹೋದರರೂ, 1930ಗಳಂದಿನಿಂದ, ಸತ್ಯಾರಾಧನೆಯ ವಿಷಯದಲ್ಲಿ ತಮ್ಮ ಬೆಂಬಲವನ್ನು ಧೈರ್ಯವಾಗಿ ರುಜುಪಡಿಸಿದ್ದಾರೆ. ಪೂರ್ವ ಹಾಗೂ ಪಶ್ಚಿಮ ಯೂರೋಪ್, ದೂರ ಪ್ರಾಚ್ಯ ದೇಶಗಳು, ಮತ್ತು ಆಫ್ರಿಕದಲ್ಲಿನ ಕೆಲವು ದೇಶಗಳಲ್ಲಿ, ಅವರಲ್ಲಿ ಅನೇಕರು ತಮ್ಮ ನಂಬಿಕೆಗೋಸ್ಕರ ಮರಣಪಟ್ಟಿದ್ದಾರೆ. (ಲೂಕ 9:23, 24) ಬೇರೆ ದೇಶಗಳಲ್ಲಿ, ಅವರನ್ನು ಸೆರೆಯಲ್ಲಿ ಬಂಧಿಸಲಾಗಿದೆ, ಅವರು ದೊಂಬಿಗಲಭೆಗೆ ಒಳಗಾಗಿದ್ದಾರೆ, ಅಥವಾ ಹಿಂಸಿಸಲ್ಪಟ್ಟಿದ್ದಾರೆ. (2 ತಿಮೊಥೆಯ 3:12) ಅವರು ನಂಬಿಕೆಯ ಎಂತಹ ಒಂದು ದಾಖಲೆಯನ್ನು ಸ್ಥಾಪಿಸಿದ್ದಾರೆ! ಮತ್ತು 1997ರ ಸೇವಾ ವರ್ಷದ ವರದಿಯು ತೋರಿಸುವುದೇನೆಂದರೆ, ಪರಿಣಾಮವು ಏನೇ ಆಗಿರಲಿ, ಅವರು ಇನ್ನೂ ದೇವರನ್ನು ಸೇವಿಸುವ ನಿರ್ಧಾರವುಳ್ಳವರಾಗಿದ್ದಾರೆ. ಯೇಸುವಿನ ಮನಸ್ಸಿನೊಂದಿಗೆ ಅವರ ‘ಮನಸ್ಸು ಇನ್ನೂ ಯಥಾರ್ಥವಾಗಿದೆ.’ ಇದು 1997ರಲ್ಲಿ ಪ್ರದರ್ಶಿಸಲ್ಪಟ್ಟಿತು. ಆಗ 55,99,931 ಮಂದಿ ರಾಜ್ಯ ಪ್ರಚಾರಕರು, ಬಹುಮಟ್ಟಿಗೆ ಅವರಲ್ಲಿ ಎಲ್ಲರೂ “ಯೋನಾದಾಬ”ರಾಗಿದ್ದು, ಯೇಸುವಿಗೆ ಸಾಕ್ಷಿನೀಡುವ ಕೆಲಸದಲ್ಲಿ ಒಟ್ಟು 1,17,97,35,841 ತಾಸುಗಳನ್ನು ವ್ಯಯಿಸಿದರು.
ಇನ್ನೂ ಹುರುಪಿನಿಂದ ಸಾರುತ್ತಿರುವುದು
8. ಯೆಹೋವನ ಸಾಕ್ಷಿಗಳು ಸತ್ಯಾರಾಧನೆಗಾಗಿರುವ ತಮ್ಮ ಹುರುಪನ್ನು ಹೇಗೆ ತೋರಿಸುತ್ತಾರೆ?
8 ಯೇಹುವು, ತನ್ನ ರಥವನ್ನು ಬಹಳ ವೇಗವಾಗಿ ಓಡಿಸುವವನೆಂಬ ಖ್ಯಾತಿಯನ್ನು ಪಡೆದಿದ್ದನು—ತನ್ನ ಕೆಲಸವನ್ನು ಪೂರೈಸಲಿಕ್ಕಾಗಿರುವ ಅವನ ಹುರುಪಿನ ಒಂದು ಪುರಾವೆ. (2 ಅರಸು 9:20) ಮಹಾ ಯೇಹುವಾದ ಯೇಸುವನ್ನು, ಹುರುಪಿನಿಂದ ‘ದಹಿಸಿಹೋದವ’ನೋಪಾದಿ ವರ್ಣಿಸಲಾಗಿದೆ. (ಕೀರ್ತನೆ 69:9) ಆದುದರಿಂದ, ಸತ್ಯ ಕ್ರೈಸ್ತರು ಇಂದು ತಮ್ಮ ಹುರುಪಿನ ವಿಷಯದಲ್ಲಿ ಗಮನಾರ್ಹರಾಗಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಸಭೆಯೊಳಗೆ ಮತ್ತು ಸಾರ್ವಜನಿಕರಿಗೆ, ಅವರು ‘ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ . . . ದೇವರ ವಾಕ್ಯವನ್ನು ಸಾರುತ್ತಾರೆ.’ (2 ತಿಮೊಥೆಯ 4:2) ನಮ್ಮ ರಾಜ್ಯದ ಸೇವೆಯಲ್ಲಿನ ಒಂದು ಲೇಖನವು, ಸಾಧ್ಯವಾದಷ್ಟು ಹೆಚ್ಚು ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಿದ ಬಳಿಕ, 1997ರ ಆದಿಭಾಗದಲ್ಲಿ ಅವರ ಹುರುಪು ವಿಶೇಷವಾಗಿ ರುಜುವಾಯಿತು. ಪ್ರತಿ ದೇಶದಲ್ಲಿ ಆಕ್ಸಿಲಿಯರಿ ಪಯನೀಯರರ ಒಂದು ಗುರಿ ಸಂಖ್ಯೆಯು ಇಡಲ್ಪಟ್ಟಿತು. ಪ್ರತಿಕ್ರಿಯೆ ಏನಾಗಿತ್ತು? ಎದ್ದುಕಾಣುವಂತಹದ್ದಾಗಿತ್ತು! ಅನೇಕ ಬ್ರಾಂಚ್ಗಳು ಗುರಿ ಸಂಖ್ಯೆಯನ್ನು ಮೀರಿದವು. ಎಕ್ವಡಾರ್ 4,000 ಮಂದಿಯ ಗುರಿಯನ್ನಿಟ್ಟಿತ್ತಾದರೂ, ಮಾರ್ಚ್ ತಿಂಗಳಿನಲ್ಲಿ 6,936 ಆಕ್ಸಿಲಿಯರಿ ಪಯನೀಯರರನ್ನು ವರದಿಸಿತು. ಆ ಮೂರು ತಿಂಗಳುಗಳಲ್ಲಿ ಜಪಾನ್ ಒಟ್ಟು 1,04,215 ಮಂದಿಯನ್ನು ವರದಿಸಿತು. ಗುರಿ ಸಂಖ್ಯೆಯು 6,000 ಮಂದಿಯಾಗಿದ್ದ ಸಾಂಬಿಯದಲ್ಲಿ, ಮಾರ್ಚ್ ತಿಂಗಳಿನಲ್ಲಿ 6,414, ಎಪ್ರಿಲ್ ತಿಂಗಳಿನಲ್ಲಿ 6,532, ಮತ್ತು ಮೇ ತಿಂಗಳಿನಲ್ಲಿ 7,695 ಮಂದಿ ಆಕ್ಸಿಲಿಯರಿ ಪಯನೀಯರರು ವರದಿಹಾಕಿದರು. ಭೌಗೋಲಿಕವಾಗಿ, ಆಕ್ಸಿಲಿಯರಿ ಹಾಗೂ ಕ್ರಮದ ಪ್ರಯನೀಯರರ ಒಟ್ಟು ಉಚ್ಚಾಂಕವು 11,10,251 ಆಗಿದ್ದು, 1996ಕ್ಕಿಂತ 34.2 ಪ್ರತಿಶತ ಹೆಚ್ಚಳವಿತ್ತು.—ರೋಮಾಪುರ 10:10.
9. ಮನೆಯಿಂದ ಮನೆಯ ಸಾಕ್ಷಿಕಾರ್ಯದ ಜೊತೆಗೆ, ಸುವಾರ್ತೆಯನ್ನು ಜನರಿಗೆ ಹೇಳಲಿಕ್ಕಾಗಿ ಯೆಹೋವನ ಸಾಕ್ಷಿಗಳು ಇತರ ಯಾವ ವಿಧಗಳಲ್ಲಿ ಅವರನ್ನು ಕಂಡುಕೊಳ್ಳುತ್ತಾರೆ?
9 ಎಫೆಸದ ಹಿರಿಯರಿಗೆ ಅಪೊಸ್ತಲ ಪೌಲನು ಹೇಳಿದ್ದು: “ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯ”ಲಿಲ್ಲ. (ಅ. ಕೃತ್ಯಗಳು 20:20, 21) ಯೆಹೋವನ ಸಾಕ್ಷಿಗಳು ಇಂದು ಪೌಲನ ಮಾದರಿಯನ್ನು ಅನುಕರಿಸುತ್ತಾರೆ ಮತ್ತು ಮನೆಯಿಂದ ಮನೆಗೆ ಹುರುಪಿನಿಂದ ಸುವಾರ್ತೆಯನ್ನು ಸಾರುತ್ತಾರೆ. ಆದರೂ, ಜನರನ್ನು ಅವರ ಮನೆಗಳಲ್ಲಿ ಕಂಡುಕೊಳ್ಳುವುದು ಸುಲಭವಾಗಿಲ್ಲದಿರಬಹುದು. ಆದುದರಿಂದ, ಜನರನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆಯೋ ಅಲ್ಲೆಲ್ಲಾ—ಅವರ ವ್ಯಾಪಾರದ ಸ್ಥಳಗಳಲ್ಲಿ, ಬೀದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಸಾರ್ವಜನಿಕ ಉದ್ಯಾನವನಗಳಲ್ಲಿ—ಅವರನ್ನು ಸಮೀಪಿಸುವಂತೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ರಾಜ್ಯ ಪ್ರಚಾರಕರನ್ನು ಉತ್ತೇಜಿಸುತ್ತದೆ. (ಮತ್ತಾಯ 24:45-47) ಫಲಿತಾಂಶಗಳು ಅತ್ಯುತ್ತಮವಾಗಿವೆ.
10, 11. ಸರ್ವಸಾಮಾನ್ಯವಾಗಿ ಮನೆಯಲ್ಲಿ ಸಂಪರ್ಕಿಸಲು ಅಸಾಧ್ಯವಾಗಿರುವ ಆಸಕ್ತರನ್ನು ಕಂಡುಕೊಳ್ಳುವುದರಲ್ಲಿ, ಎರಡು ದೇಶಗಳಲ್ಲಿನ ಪ್ರಚಾರಕರು ಒಳ್ಳೆಯ ಮುನ್ನಡೆಯನ್ನು ಹೇಗೆ ತೋರಿಸಿದ್ದಾರೆ?
10 ಡೆನ್ಮಾರ್ಕಿನ ಕೋಪನ್ಹೇಗನ್ನಲ್ಲಿ, ರೈಲು ನಿಲ್ದಾಣಗಳ ಹೊರಗಿರುವ ಬೀದಿಗಳಲ್ಲಿ, ಪ್ರಚಾರಕರ ಒಂದು ಚಿಕ್ಕ ಗುಂಪು ಸಾಕ್ಷಿನೀಡುತ್ತಾ ಇತ್ತು. ಜನವರಿಯಿಂದ ಜೂನ್ ತಿಂಗಳಿನ ವರೆಗೆ ಅವರು 4,733 ಪತ್ರಿಕೆಗಳನ್ನು ವಿತರಿಸಿ, ಅತ್ಯುತ್ತಮವಾದ ಸಂಭಾಷಣೆಗಳನ್ನು ನಡೆಸಿದರು ಮತ್ತು ಅನೇಕ ಪುನರ್ಭೇಟಿಗಳನ್ನು ಮಾಡಿದರು. ಆ ದೇಶದಲ್ಲಿ ಅನೇಕ ಪ್ರಚಾರಕರು ಅಂಗಡಿಗಳಲ್ಲಿ ಪತ್ರಿಕಾ ಮಾರ್ಗಗಳನ್ನು ಸ್ಥಾಪಿಸಿದ್ದಾರೆ. ಒಂದು ಪಟ್ಟಣದಲ್ಲಿ ಪ್ರತಿ ಶುಕ್ರವಾರ ದೊಡ್ಡದಾದ ಸಂತೆಯಿರುತ್ತದೆ; ಆಗ ಸಾವಿರಾರು ಸಂದರ್ಶಕರು ಅಲ್ಲಿಗೆ ಬರುತ್ತಾರೆ. ಆದುದರಿಂದ ಸಭೆಯು ಅಲ್ಲಿ ಕ್ರಮವಾದ ಮಾರುಕಟ್ಟೆ ಸಾಕ್ಷಿಕಾರ್ಯವನ್ನು ಏರ್ಪಡಿಸಿದೆ. ಒಂದು ಕ್ಷೇತ್ರದಲ್ಲಿ, ಶಾಲಾ ಶಿಕ್ಷಕರಿಗೆ ವಿಶೇಷವಾಗಿ ಸೂಕ್ತವಾಗಿರುವ ಪ್ರಕಾಶನಗಳಿರುವ ಸಮಾಚಾರದ ಪಾರ್ಸಲ್ನೊಂದಿಗೆ ಶಾಲೆಗಳನ್ನು ಸಂದರ್ಶಿಸಲಾಯಿತು.
11 ಹವಾಯಿಯಲ್ಲಿಯೂ, ಮನೆಯಲ್ಲಿ ಕಂಡುಕೊಳ್ಳಲಸಾಧ್ಯವಾದವರಿಗೆ ಸಾಕ್ಷಿಯನ್ನು ತಲಪಿಸಲಿಕ್ಕಾಗಿ ಪ್ರಯತ್ನಗಳು ಮಾಡಲ್ಪಟ್ಟಿವೆ. ವಿಶೇಷ ಟೆರಿಟೊರಿಗಳಲ್ಲಿ ಸಾರ್ವಜನಿಕ ಕ್ಷೇತ್ರಗಳು (ಬೀದಿಗಳು, ಉದ್ಯಾನವನಗಳು, ವಾಹನ ನಿಲ್ದಾಣಗಳು, ಮತ್ತು ಬಸ್ ನಿಲ್ದಾಣಗಳು), ನಗರದ ಪೇಟೆಗಳು, ವ್ಯಾಪಾರ ಮಳಿಗೆಗಳು, ಮತ್ತು ವಿಮಾನ ನಿಲ್ದಾಣಗಳು, ಟೆಲಿಫೋನ್ ಸಾಕ್ಷಿಕಾರ್ಯ, ಸಾರ್ವಜನಿಕ ಸಾರಿಗೆ ವ್ಯವಸ್ಥೆ (ಬಸ್ಗಳಲ್ಲಿ ಸಾರುವುದು), ಮತ್ತು ಕಾಲೇಜ್ ಕ್ಯಾಂಪಸ್ಗಳು ಸಹ ಸೇರಿವೆ. ಪ್ರತಿಯೊಂದು ಟೆರಿಟೊರಿಗೆ ಸರಿಯಾದ ಸಂಖ್ಯೆಯಲ್ಲಿ ಸಾಕ್ಷಿಗಳು ನೇಮಿಸಲ್ಪಟ್ಟಿದ್ದಾರೆ ಮತ್ತು ನೇಮಿಸಲ್ಪಟ್ಟಿರುವವರಿಗೆ ಸರಿಯಾಗಿ ತರಬೇತಿ ನೀಡಲಾಗಿದೆ ಎಂಬುದನ್ನು ಸಭೆಯು ಖಚಿತಪಡಿಸಿಕೊಳ್ಳುತ್ತದೆ. ಇವುಗಳಿಗೆ ಸಮಾನವಾದ ಸುವ್ಯವಸ್ಥಿತ ಪ್ರಯತ್ನಗಳು ಅನೇಕ ದೇಶಗಳಲ್ಲಿ ವರದಿಮಾಡಲ್ಪಟ್ಟಿವೆ. ಫಲಿತಾಂಶವಾಗಿ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಬಹುಶಃ ಎಂದೂ ಕಂಡುಕೊಳ್ಳಲ್ಪಡದ ಆಸಕ್ತ ಜನರನ್ನು ಸಂಪರ್ಕಿಸಲಾಗುತ್ತಿದೆ.
ದೃಢರಾಗಿ ನಿಲ್ಲುವುದು
12, 13. (ಎ) ವರ್ಷ 1997ರ ಸಮಯದಲ್ಲಿ ಸೈತಾನನು ಯೆಹೋವನ ಸಾಕ್ಷಿಗಳ ವಿರುದ್ಧ ಯಾವ ಚತುರೋಪಾಯವನ್ನು ಉಪಯೋಗಿಸಿದನು? (ಬಿ) ಒಂದು ದೇಶದಲ್ಲಿನ ಸುಳ್ಳು ಪ್ರಚಾರಕಾರ್ಯವು ಯಾವ ರೀತಿಯಲ್ಲಿ ಒಂದು ತದ್ವಿರುದ್ಧವಾದ ಪರಿಣಾಮವನ್ನು ತಂದಿತು?
12 ಅನೇಕ ದೇಶಗಳಲ್ಲಿ, 1997ರಲ್ಲಿ ಯೆಹೋವನ ಸಾಕ್ಷಿಗಳು, ಅವರ ವಿರುದ್ಧವಾಗಿ ಬಹುಶಃ ಕಾನೂನುಕ್ರಮ ಕೈಗೊಳ್ಳುವ ಸ್ಪಷ್ಟವಾದ ಹೇತುವಿನಿಂದ ಪ್ರವರ್ಧಿಸಲ್ಪಟ್ಟ ಪಾಪಕರವಾದ, ಸುಳ್ಳು ಪ್ರಚಾರಕಾರ್ಯದ ಬಲಿಪಶುಗಳಾಗಿದ್ದರು. ಆದರೆ ಅವರು ಹಿಮ್ಮೆಟ್ಟಲಿಲ್ಲ! (ಕೀರ್ತನೆ 112:7, 8) ಅವರು ಕೀರ್ತನೆಗಾರನ ಪ್ರಾರ್ಥನೆಯನ್ನು ಜ್ಞಾಪಿಸಿಕೊಂಡರು: “ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳುಕಲ್ಪಿಸಿದ್ದಾರೆ; ನಾನಾದರೋ ಪೂರ್ಣಮನಸ್ಸಿನಿಂದ ನಿನ್ನ ನೇಮಗಳನ್ನು ಕೈಕೊಳ್ಳುವೆನು.” (ಕೀರ್ತನೆ 119:69) ಅಂತಹ ಸುಳ್ಳಾದ ಬಹಿರಂಗ ಪ್ರಕಟನೆಯು, ಯೇಸು ಪ್ರವಾದಿಸಿದಂತೆ ಸತ್ಯ ಕ್ರೈಸ್ತರು ದ್ವೇಷಿಸಲ್ಪಡುತ್ತಾರೆ ಎಂಬುದಕ್ಕೆ ಕೇವಲ ಒಂದು ಪುರಾವೆಯಾಗಿದೆ. (ಮತ್ತಾಯ 24:9) ಮತ್ತು ಇದು ಕೆಲವೊಮ್ಮೆ ತದ್ವಿರುದ್ಧವಾದ ಪರಿಣಾಮಗಳನ್ನೂ ಉಂಟುಮಾಡಿದೆ. ಬೆಲ್ಜಿಯಮ್ನಲ್ಲಿನ ವ್ಯಕ್ತಿಯೊಬ್ಬನು, ಸುಪ್ರಸಿದ್ಧವಾದ ದೈನಂದಿನ ವಾರ್ತಾಪತ್ರಿಕೆಯೊಂದರಲ್ಲಿ ಯೆಹೋವನ ಸಾಕ್ಷಿಗಳ ಕುರಿತಾಗಿ ಬರೆಯಲ್ಪಟ್ಟ ಅಗೌರವಭರಿತವಾದ ಒಂದು ಲೇಖನವನ್ನು ಓದಿದನು. ಮಿಥ್ಯಾಪವಾದದ ಹೇಳಿಕೆಗಳಿಂದ ಆಘಾತಗೊಂಡವನಾಗಿ, ಮುಂದಿನ ಆದಿತ್ಯವಾರ ಅವನು ರಾಜ್ಯ ಸಭಾಗೃಹದಲ್ಲಿನ ಕೂಟವೊಂದಕ್ಕೆ ಹಾಜರಾದನು. ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಅವನು ಏರ್ಪಾಡನ್ನು ಮಾಡಿದನು, ಮತ್ತು ತ್ವರಿತಗತಿಯಲ್ಲಿ ಪ್ರಗತಿಯನ್ನು ಮಾಡುತ್ತಾ ಹೋದನು. ಈ ಹಿಂದೆ ಈ ವ್ಯಕ್ತಿಯು ಗ್ಯಾಂಗಿನ ಒಬ್ಬ ಸದಸ್ಯನಾಗಿದ್ದನು. ಅವನ ಬೈಬಲ್ ಅಭ್ಯಾಸವು ಅವನಿಗೆ ತನ್ನ ಜೀವಿತವನ್ನು ಶುದ್ಧೀಕರಿಸಿಕೊಳ್ಳಲು ಸಹಾಯ ಮಾಡಿತು. ಅವನ ಸುತ್ತಲೂ ಇದ್ದ ಜನರು ಇದನ್ನು ಗಮನಿಸಿದರು. ಖಂಡಿತವಾಗಿಯೂ, ಮಿಥ್ಯಾಪವಾದದ ಲೇಖನವನ್ನು ಬರೆದ ಬರಹಗಾರನಿಗೆ ಅಂತಹ ಒಂದು ಫಲಿತಾಂಶವು ಮನಸ್ಸಿನಲ್ಲಿರಲಿಲ್ಲ!
13 ಬೆಲ್ಜಿಯಮ್ನಲ್ಲಿರುವ ಕೆಲವು ಪ್ರಾಮಾಣಿಕ ಹೃದಯದ ಜನರು, ಈ ವಂಚನಾತ್ಮಕವಾದ ಪ್ರಚಾರಕಾರ್ಯದ ವಿರುದ್ಧ ಧೈರ್ಯವಾಗಿ ಮಾತಾಡಿದ್ದಾರೆ. ಅವರಲ್ಲಿ ಒಬ್ಬ ಮಾಜಿ ಪ್ರಧಾನ ಮಂತ್ರಿಯವರೂ ಒಬ್ಬರಾಗಿದ್ದರು. ಯೆಹೋವನ ಸಾಕ್ಷಿಗಳು ಪೂರೈಸಿರುವ ಕಾರ್ಯಕ್ಕಾಗಿ ತನ್ನ ಮನಸ್ಸು ಶ್ಲಾಘನೆಯಿಂದ ತುಂಬಿದೆ ಎಂಬುದನ್ನು ಅವರು ಒಪ್ಪಿಕೊಂಡರು. ಮತ್ತು ಶಾಸನ ಸಭೆಯ ಪ್ರತಿನಿಧಿಯೊಬ್ಬನು ಬರೆದುದು: “ಆಗಿಂದಾಗ್ಗೆ ಹಬ್ಬಿಸಲ್ಪಡುವ ಹೀನಾಯವಾದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, [ಯೆಹೋವನ ಸಾಕ್ಷಿಗಳು] ಸರಕಾರಕ್ಕೆ ಯಾವುದೇ ಅಪಾಯವನ್ನು ತಂದೊಡ್ಡುತ್ತಾರೆಂದು ನನಗೆ ಕಂಡುಬರುವುದಿಲ್ಲ. ಅವರು ಶಾಂತಿಪ್ರಿಯರೂ, ಶುದ್ಧಾಂತಃಕರಣವುಳ್ಳವರೂ, ಅಧಿಕಾರಿಗಳ ಕಡೆಗೆ ಗೌರವಭಾವವುಳ್ಳವರೂ ಆಗಿರುವ ಪ್ರಜೆಗಳಾಗಿದ್ದಾರೆ.” ನಿಜವಾಗಿಯೂ ಅಪೊಸ್ತಲ ಪೇತ್ರನ ಮಾತುಗಳು ವಿವೇಕಯುತವಾಗಿವೆ: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”—1 ಪೇತ್ರ 2:12.
ಸ್ಮರಣಯೋಗ್ಯವಾದ ಒಂದು ಜ್ಞಾಪಕಾಚರಣೆ
14. ವರ್ಷ 1997ರಲ್ಲಿನ ಜ್ಞಾಪಕದ ಹಾಜರಿಗಳ ಕುರಿತಾದ ಕೆಲವು ರೋಮಾಂಚಕರ ವರದಿಗಳು ಯಾವುವು?
14 ಯೇಸುವಿನ ವಿಷಯದಲ್ಲಿ ಸಾಕ್ಷಿನೀಡುವವರು, ಅವನ ಮರಣದ ಜ್ಞಾಪಕವನ್ನು, ವರ್ಷದಲ್ಲಿ ಅತ್ಯುಜ್ವಲ ಭಾಗದೋಪಾದಿ ವೀಕ್ಷಿಸುವುದು ಸೂಕ್ತವಾದದ್ದಾಗಿದೆ. 1997ರಲ್ಲಿ, ಆ ಘಟನೆಯನ್ನು ಆಚರಿಸಲಿಕ್ಕಾಗಿ ಮಾರ್ಚ್ 23ರಂದು 1,43,22,226 ಮಂದಿ ಉಪಸ್ಥಿತರಿದ್ದರು. ಅದು 1996ರಲ್ಲಿ ಇದ್ದುದಕ್ಕಿಂತಲೂ 14,00,000 ಹೆಚ್ಚಾಗಿತ್ತು. (ಲೂಕ 22:14-20) ಅನೇಕ ದೇಶಗಳಲ್ಲಿ ಜ್ಞಾಪಕದ ಹಾಜರಿಯು, ರಾಜ್ಯ ಪ್ರಚಾರಕರ ಸಂಖ್ಯೆಗಿಂತಲೂ ತುಂಬ ಅಧಿಕವಾಗಿತ್ತು. ಇದು, ಭವಿಷ್ಯತ್ತಿಗಾಗಿರುವ ಒಳ್ಳೆಯ ಪ್ರತೀಕ್ಷೆಗಳನ್ನು ತೋರಿಸುತ್ತದೆ. ಉದಾಹರಣೆಗೆ, ಹೇಟೀಯಲ್ಲಿ, 1997ನೆಯ ವರ್ಷವು 10,621 ಮಂದಿ ಪ್ರಚಾರಕರ ಉಚ್ಚಾಂಕವನ್ನು ಕಂಡಿತು, ಅದೇ ಸಮಯದಲ್ಲಿ 67,259 ಮಂದಿ ಜ್ಞಾಪಕಕ್ಕೆ ಹಾಜರಾದರು. 18ರಿಂದ 21ನೆಯ ಪುಟಗಳಲ್ಲಿರುವ ವಾರ್ಷಿಕ ವರದಿಯನ್ನು ನೀವು ಪರೀಕ್ಷಿಸಬಹುದು, ಮತ್ತು ಪ್ರಚಾರಕರ ಸಂಖ್ಯೆಗೆ ಹೋಲಿಸುವಾಗ ಇನ್ನೂ ಎಷ್ಟು ಇತರ ದೇಶಗಳು ತದ್ರೀತಿಯ ಅಧಿಕ ಹಾಜರಿಗಳನ್ನು ಪಡೆದಿದ್ದವೆಂಬುದನ್ನು ನೋಡಬಹುದು.
15. ಕೆಲವು ದೇಶಗಳಲ್ಲಿ, ಜ್ಞಾಪಕವನ್ನು ಆಚರಿಸುವ ಸಲುವಾಗಿ, ನಮ್ಮ ಸಹೋದರರು ಗಂಭೀರವಾದ ಸಮಸ್ಯೆಗಳನ್ನು ಹೇಗೆ ಜಯಿಸಿದರು?
15 ಕೆಲವರಿಗೆ ಜ್ಞಾಪಕಕ್ಕೆ ಹಾಜರಾಗುವುದು ಸುಲಭವಾದದ್ದಾಗಿರಲಿಲ್ಲ. ಅಲ್ಬೇನಿಯದಲ್ಲಿ, ಸ್ಥಳೀಯ ಕ್ಷೋಭೆಯ ಕಾರಣದಿಂದ ಸಾಯಂಕಾಲ 7:00 ಗಂಟೆಗೆ ಕರ್ಫ್ಯೂ ಇತ್ತು. ಆ ದೇಶದಾದ್ಯಂತವಾಗಿ 115 ಚಿಕ್ಕ ಗುಂಪುಗಳಲ್ಲಿ, ಜ್ಞಾಪಕವು ಸಾಯಂಕಾಲ 5:45ಕ್ಕೆ ಆರಂಭವಾಯಿತು. ನೈಸಾನ್ 14ರ ಆರಂಭವನ್ನು ಗುರುತಿಸುತ್ತಾ, ಸಾಯಂಕಾಲ 6:08ಕ್ಕೆ ಸೂರ್ಯಾಸ್ತಮಾನವಾಯಿತು. ಕುರುಹುಗಳನ್ನು ಸರಿಸುಮಾರಾಗಿ ಸಾಯಂಕಾಲ 6:15ಕ್ಕೆ ದಾಟಿಸಲಾಯಿತು. ಅಧಿಕಾಂಶ ವಿದ್ಯಮಾನಗಳಲ್ಲಿ, ಮುಕ್ತಾಯದ ಪ್ರಾರ್ಥನೆಯು 6:30ಕ್ಕೆಲ್ಲಾ ಮುಗಿಸಲ್ಪಟ್ಟಿತು, ಮತ್ತು ಹಾಜರಾಗಿದ್ದವರು ಕರ್ಫ್ಯೂಗೆ ಮುಂಚಿತವಾಗಿ ಮನೆ ಸೇರಲು ತ್ವರೆಯಾಗಿ ಹೊರಟುಹೋದರು. ಆದರೂ, 1,090 ಮಂದಿ ಪ್ರಚಾರಕರ ಉಚ್ಚಾಂಕದೊಂದಿಗೆ ಹೋಲಿಸುವಾಗ, ಜ್ಞಾಪಕದ ಹಾಜರಿಯು 3,154 ಆಗಿತ್ತು. ಆಫ್ರಿಕದ ಒಂದು ದೇಶದಲ್ಲಿ, ಸ್ಥಳೀಯ ಕ್ಷೋಭೆಯು, ರಾಜ್ಯ ಸಭಾಗೃಹವನ್ನು ಪ್ರವೇಶಿಸುವುದನ್ನು ಅಸಾಧ್ಯವನ್ನಾಗಿ ಮಾಡಿತು. ಆದುದರಿಂದ, ಈ ಆಚರಣೆಯನ್ನು ಚಿಕ್ಕ ಚಿಕ್ಕ ಗುಂಪುಗಳಲ್ಲಿ ನಡೆಸುವಂತೆ ಏರ್ಪಡಿಸಲಿಕ್ಕಾಗಿ, ಇಬ್ಬರು ಹಿರಿಯರು ಮೂರನೆಯ ಹಿರಿಯನ ಮನೆಯಲ್ಲಿ ಭೇಟಿಯಾಗುವ ನಿರ್ಧಾರಮಾಡಿದರು. ಆ ಮನೆಯನ್ನು ತಲಪಲಿಕ್ಕಾಗಿ, ಈ ಇಬ್ಬರು ಹಿರಿಯರು ಒಂದು ಕೊಳಚೆ ಚರಂಡಿಯನ್ನು ದಾಟಬೇಕಾಗಿತ್ತು. ಆದರೂ, ಆ ಕ್ಷೇತ್ರದಲ್ಲಿ ಹೊಡೆದಾಟವು ನಡೆಯುತ್ತಾ ಇತ್ತು, ಮತ್ತು ಮರೆಯಿಂದ ಗುಂಡುಹಾರಿಸುವವರು, ಆ ಕೊಳಚೆ ಚರಂಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಯಾರ ಮೇಲೇ ಆಗಲಿ ಗುಂಡುಹಾರಿಸುತ್ತಿದ್ದರು. ಒಬ್ಬ ಹಿರಿಯನು ಬಹಳ ವೇಗವಾಗಿ ಕೊಳಚೆ ಚರಂಡಿಯನ್ನು ದಾಟಿದನು. ಎರಡನೆಯ ಹಿರಿಯನು ಕೊಳಚೆ ಚರಂಡಿಯನ್ನು ದಾಟುತ್ತಿರುವಾಗ, ಒಂದು ಗುಂಡಿನ ಶಬ್ದವನ್ನು ಕೇಳಿದನು. ಆ ಕೂಡಲೆ ಆ ಹಿರಿಯನು ತನ್ನನ್ನು ನೆಲಕ್ಕೆ ಬೀಳಿಸಿಕೊಂಡು, ಆ ಗುಂಡುಗಳು ಅವನ ತಲೆಯ ಮೇಲಿನಿಂದ ಹಾದುಹೋಗುತ್ತಿರುವಾಗ, ತೆವಳುತ್ತಾ, ಸುರಕ್ಷಿತವಾದ ಸ್ಥಳಕ್ಕೆ ಬಂದು ಮುಟ್ಟಿದನು. ಆ ಹಿರಿಯರ ಕೂಟವು ಯಶಸ್ವಿಕರವಾಗಿ ನಡೆಯಿತು, ಮತ್ತು ಆ ಸಭೆಯ ಆವಶ್ಯಕತೆಗಳಿಗೆ ಗಮನವನ್ನು ಕೊಡಲಾಯಿತು.
‘ಸಕಲ ಜನಾಂಗ ಕುಲ . . . ಮತ್ತು ಸಕಲಭಾಷೆಗಳಿಂದ’
16. ಚಿಕ್ಕ ಭಾಷಾ ಗುಂಪುಗಳ ನಡುವೆ ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಯಾವ ಏರ್ಪಾಡನ್ನು ಮಾಡಿದೆ?
16 ಮಹಾ ಸಮೂಹವು ‘ಸಕಲ ಜನಾಂಗ ಕುಲ ಪ್ರಜೆಗಳಿಂದ ಮತ್ತು ಸಕಲಭಾಷೆಗಳಿಂದ’ ಬರುವುದೆಂದು ಅಪೊಸ್ತಲ ಯೋಹಾನನು ಹೇಳಿದನು. (ಪ್ರಕಟನೆ 7:9) ಆದುದರಿಂದ, ಸಾಹಿತ್ಯವು ಹೆಚ್ಚೆಚ್ಚು ಭಾಷೆಗಳಲ್ಲಿ—ಬಹು ದೂರ ಚದರಿರುವ ಜಾತಿಗಳು ಹಾಗೂ ಜನರ ಚಿಕ್ಕ ಗುಂಪುಗಳಿಂದ ಮಾತಾಡಲ್ಪಡುವ ಭಾಷೆಗಳನ್ನೂ ಒಳಗೊಂಡು—ಲಭ್ಯವಾಗುವಂತೆ ಆಡಳಿತ ಮಂಡಲಿಯು ಏರ್ಪಾಡುಮಾಡುತ್ತದೆ. ಉದಾಹರಣೆಗೆ, ಮೊಸಾಂಬೀಕ್ನಲ್ಲಿ, ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯು ಐದು ಹೆಚ್ಚಿನ ಭಾಷೆಗಳಲ್ಲಿ ಬಿಡುಗಡೆಮಾಡಲ್ಪಟ್ಟಿತು. ನಿಕರಾಗುವದಲ್ಲಿ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಎಂಬ ಬ್ರೋಷರನ್ನು, ಮಿಸ್ಕಿಟೊ ಭಾಷೆಯಲ್ಲಿ—ಆ ಭಾಷೆಯಲ್ಲಿ ವಾಚ್ ಟವರ್ ಸೊಸೈಟಿಯ ಮೊಟ್ಟಮೊದಲ ಪ್ರಕಾಶನ—ಲಭ್ಯಗೊಳಿಸಲಾಯಿತು. ಅನೇಕ ಮಿಸ್ಕಿಟೊ ಮೂಲನಿವಾಸಿಗಳು, ತಮ್ಮ ಸ್ವಂತ ಭಾಷೆಯಲ್ಲಿ ಲಭ್ಯವಾದ ಬ್ರೋಷರನ್ನು ನೋಡಿದ ಬಳಿಕ, ಆನಂದದಿಂದ ಅದನ್ನು ಸ್ವೀಕರಿಸಿದರು. 1997ರಲ್ಲಿ ಸೊಸೈಟಿಯು 25 ಹೆಚ್ಚಿನ ಭಾಷೆಗಳಲ್ಲಿ ಸಾಹಿತ್ಯವನ್ನು ಅನುಮತಿಸಿತು ಮತ್ತು ಒಂದುನೂರು ಕೋಟಿಗಿಂತಲೂ ಹೆಚ್ಚು ಪತ್ರಿಕೆಗಳು ಮುದ್ರಿಸಲ್ಪಟ್ಟವು.
17. ಕೊರಿಯದಲ್ಲಿ ಯಾವ ಭಾಷಾ ಗುಂಪಿಗೆ ಸಹಾಯ ಮಾಡಲಾಯಿತು, ಮತ್ತು ಜನಸಂಖ್ಯೆಯ ಈ ವಿಭಾಗಕ್ಕೆ ವಿಡಿಯೊ ಟೇಪುಗಳು ಹೇಗೆ ಮಹತ್ತರವಾಗಿ ಸಹಾಯ ಮಾಡಿವೆ?
17 ಕೊರಿಯದಲ್ಲಿ ಇನ್ನೊಂದು ಭಾಷಾ ಗುಂಪಿಗೆ ಸಹಾಯ ಮಾಡಲಾಯಿತು. 1997ನೆಯ ವರ್ಷವು, ಕೊರಿಯದ ಸೈನ್ ಲ್ಯಾಂಗ್ವೆಜ್ (ಸನ್ನೆ ಭಾಷೆ)ನಲ್ಲಿ ಮೊಟ್ಟಮೊದಲ ಅಧಿವೇಶನವನ್ನು ಕಂಡಿತು. ಕೊರಿಯದಲ್ಲಿ 543 ಪ್ರಚಾರಕರಿರುವ 15 ಸೈನ್ ಲ್ಯಾಂಗ್ವೆಜ್ ಸಭೆಗಳು ಇವೆಯಾದರೂ, 1,174 ಮಂದಿ ಅಧಿವೇಶನಕ್ಕೆ ಹಾಜರಾದರು, ಮತ್ತು 21 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು. ಮಾತಾಡಲ್ಪಟ್ಟ ಅಥವಾ ಲಿಖಿತ ನುಡಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುವ ಕಿವುಡರಿಗೆ ಸಹಾಯ ಮಾಡಲಿಕ್ಕಾಗಿ, 13 ವಿಭಿನ್ನ ಸೈನ್ ಲ್ಯಾಂಗ್ವೆಜ್ಗಳ ವಿಡಿಯೊ ಟೇಪ್ಗಳಲ್ಲಿ ಪ್ರಕಾಶನಗಳನ್ನು ಬಿಡುಗಡೆಮಾಡಲಾಗುತ್ತಿದೆ. ಹೀಗೆ, ಕಿವುಡರಿಗೆ “ಓದಲು” ಮತ್ತು ಅತ್ಯುತ್ತಮ ಫಲಿತಾಂಶಗಳೊಂದಿಗೆ ಸುವಾರ್ತೆಯನ್ನು ಅಭ್ಯಾಸಿಸಲು ಸಹ ಸಹಾಯ ಮಾಡಲಾಗುತ್ತಿದೆ. ಅಮೆರಿಕದಲ್ಲಿ, ಕಿವುಡ ವ್ಯಕ್ತಿಯೊಬ್ಬನು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿಮಾಡಲಿಕ್ಕಾಗಿ ಈ ಹಿಂದೆ ಸುಮಾರು ಐದು ವರ್ಷಗಳು ತಗಲುತ್ತಿದ್ದವು. ಈಗ, ಅಮೆರಿಕದ ಸೈನ್ ಲ್ಯಾಂಗ್ವೆಜ್ನಲ್ಲಿ ಅನೇಕ ವಿಡಿಯೊಗಳು ಲಭ್ಯವಿರುವುದರಿಂದ, ಕಿವುಡರಲ್ಲಿ ಕೆಲವರಿಗೆ, ಅಭ್ಯಾಸಿಸಲು ಸುಮಾರು ಒಂದೇ ವರ್ಷ ತಗಲುತ್ತದೆ.
‘ರಥದಲ್ಲೇ ಉಳಿಯುವುದು’
18. ಯೆಹೋನಾದಾಬನನ್ನು ಎದುರುಗೊಂಡ ಬಳಿಕ, ಯೇಹು ಯಾವ ಕೆಲಸವನ್ನು ಮಾಡಲು ಮುಂತೊಡಗಿದನು?
18 ಸಾ.ಶ.ಪೂ. 905ರಲ್ಲಿ, ಯೆಹೋನಾದಾಬನೊಂದಿಗೆ ಜೊತೆಗೂಡಿದ ಬಳಿಕ, ಯೇಹುವು ಸುಳ್ಳು ಆರಾಧನೆಯನ್ನು ನಾಶಮಾಡಲು ಮುಂತೊಡಗಿದನು. ಅವನು ಬಾಳನ ಎಲ್ಲ ಆರಾಧಕರಿಗೆ ಈ ಕರೆನೀಡಿದನು: “ಬಾಳನ ಎಲ್ಲಾ ಭಕ್ತರೂ ತಮ್ಮನ್ನು ಶುದ್ಧಪಡಿಸಿಕೊಂಡು ಜಾತ್ರೆಗೆ ಬರಬೇಕು.” ಬಾಳನ ಯಾವ ಭಕ್ತನೂ ತಪ್ಪಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವನು ಇಡೀ ಪಟ್ಟಣವನ್ನೇ ಹುಡುಕಿಸಿದನು. ಸುಳ್ಳು ದೇವನ ದೊಡ್ಡ ದೇವಾಲಯದೊಳಗೆ ಗುಂಪುಗಳು ಒಟ್ಟುಗೂಡುತ್ತಾ ಇದ್ದಾಗ, ಯೆಹೋವನ ಒಬ್ಬ ಆರಾಧಕನೂ ಅಲ್ಲಿರಲಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಗಮನ ಹರಿಸಲಾಯಿತು. ಕೊನೆಯದಾಗಿ, ಯೇಹುವೂ ಅವನ ಸೇನೆಯೂ ಬಾಳನ ಆರಾಧಕರನ್ನು ಸಂಹರಿಸಿಬಿಟ್ಟಿತು. “ಹೀಗೆ ಯೇಹುವು ಇಸ್ರಾಯೇಲ್ಯರಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು.”—2 ಅರಸು 10:20-28.
19. ಮಾನವಕುಲಕ್ಕಾಗಿ ಮುಂದೆ ಏನು ಕಾದಿದೆ ಎಂಬುದರ ನೋಟದಲ್ಲಿ, ನಾವು ಯಾವ ಆತ್ಮವನ್ನು ತೋರಿಸಬೇಕು, ಮತ್ತು ಯಾವ ಕೆಲಸದಲ್ಲಿ ನಾವು ಶ್ರದ್ಧಾಪೂರ್ವಕವಾಗಿ ಮಗ್ನರಾಗಿರಬೇಕು?
19 ಇಂದು, ಎಲ್ಲ ಸುಳ್ಳು ಧರ್ಮದ ಅಂತಿಮ ನ್ಯಾಯತೀರ್ಪು ಇನ್ನೇನು ಮುಂದೆಯೇ ಇದೆ. ದೇವದೂತಸಂಬಂಧವಾದ ಮಾರ್ಗದರ್ಶನದ ಕೆಳಗೆ ಕ್ರೈಸ್ತರು ಸರ್ವ ಮಾನವಕುಲಕ್ಕೆ ಸುವಾರ್ತೆಯನ್ನು ಘೋಷಿಸುತ್ತಿದ್ದಾರೆ. ದೇವರಿಗೆ ಭಯಪಟ್ಟು, ತಮ್ಮನ್ನು ಸುಳ್ಳು ಧರ್ಮದಿಂದ ಬೇರ್ಪಡಿಸಿಕೊಳ್ಳುವಂತೆ ಅವರನ್ನು ಪ್ರೋತ್ರಾಹಿಸುತ್ತಾ ಇದ್ದಾರೆ. (ಪ್ರಕಟನೆ 14:6-8; 18:2, 4) ದೀನ ಜನರು, ಯೆಹೋವನ ಸಿಂಹಾಸನಾರೂಢ ಅರಸನಾದ ಯೇಸು ಕ್ರಿಸ್ತನ ಕೆಳಗೆ ದೇವರ ರಾಜ್ಯಕ್ಕೆ ತಮ್ಮನ್ನು ಅಧೀನಪಡಿಸಿಕೊಳ್ಳುವಂತೆ ಉತ್ತೇಜಿಸಲ್ಪಡುತ್ತಾರೆ. (ಪ್ರಕಟನೆ 12:10) ಈ ರೋಮಾಂಚಕವಾದ ಸಮಯದಲ್ಲಿ, ನಾವು ಸತ್ಯಾರಾಧನೆಗಾಗಿ ದೃಢವಾಗಿ ನಿಲ್ಲುವಾಗ, ನಮ್ಮ ಹುರುಪು ದುರ್ಬಲಗೊಳ್ಳುವಂತೆ ನಾವು ಬಿಡಬಾರದು.
20. 1998ನೆಯ ಸೇವಾ ವರ್ಷದಲ್ಲಿ ನೀವು ಏನು ಮಾಡುವ ನಿರ್ಧಾರವನ್ನು ಮಾಡಲಿದ್ದೀರಿ?
20 ಒಂದು ಸಮಯದಲ್ಲಿ, ರಾಜ ದಾವೀದನು ತೀರ ಒತ್ತಡದ ಕೆಳಗಿದ್ದಾಗ, ಅವನು ಪ್ರಾರ್ಥಿಸಿದ್ದು: “ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ಬಾರಿಸುತ್ತಾ ಹಾಡುವೆನು. ಕರ್ತನೇ [“ಯೆಹೋವನೇ,” NW], ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.” (ಕೀರ್ತನೆ 57:7, 9) ನಾವೂ ಸ್ಥಿರಚಿತ್ತರಾಗಿರೋಣ. 1997ನೆಯ ಸೇವಾ ವರ್ಷದಲ್ಲಿ, ಅನೇಕ ಕಷ್ಟತೊಂದರೆಗಳಿದ್ದಾಗ್ಯೂ, ಯೆಹೋವ ದೇವರ ಮಹಿಮೆಗಾಗಿ ಒಂದು ದೊಡ್ಡ ಸ್ತುತಿಯ ಕೂಗು ಧ್ವನಿಸಲ್ಪಟ್ಟಿತು. ತದ್ರೀತಿಯ, ಅದಕ್ಕಿಂತಲೂ ಹೆಚ್ಚು ದೊಡ್ಡದಾದ ಕೂಗು, ಪ್ರಚಲಿತ ಸೇವಾ ವರ್ಷದ ಸಮಯದಲ್ಲಿ ಕೇಳಿಬರುವಂತಾಗಲಿ. ಮತ್ತು ನಮ್ಮನ್ನು ನಿರುತ್ಸಾಹಗೊಳಿಸಲಿಕ್ಕಾಗಿ ಅಥವಾ ನಮ್ಮನ್ನು ವಿರೋಧಿಸಲಿಕ್ಕಾಗಿ ಸೈತಾನನು ಏನೇ ಮಾಡಲು ಪ್ರಯತ್ನಿಸಬಹುದಾದರೂ, ಇದು ಸತ್ಯವಾಗಿರಲಿ. ಹೀಗೆ, ನಮ್ಮ ಮಹಾ ಯೇಹುವಾದ ಯೇಸು ಕ್ರಿಸ್ತನ ಮನಸ್ಸಿನೊಂದಿಗೆ ನಮ್ಮ ಮನಸ್ಸು ಯಥಾರ್ಥವಾಗಿ ಉಳಿಯುತ್ತದೆ ಎಂಬುದನ್ನು ನಾವು ತೋರಿಸುವೆವು, ಮತ್ತು ಈ ಕೆಳಗಿನ ಪ್ರಬೋಧನೆಗೆ ನಮ್ಮ ಪೂರ್ಣ ಪ್ರಾಣದಿಂದ ನಾವು ಪ್ರತಿಕ್ರಿಯಿಸುವೆವು: “ನೀತಿವಂತರೇ, ಯೆಹೋವನಲ್ಲಿ ಸಂತೋಷೀಸುತ್ತಾ ಉಲ್ಲಾಸವಾಗಿರ್ರಿ. ಯಥಾರ್ಥಚಿತ್ತರೇ, ಆತನ ವಿಷಯದಲ್ಲಿ ಉತ್ಸಾಹಧ್ವನಿಮಾಡಿರಿ.”—ಕೀರ್ತನೆ 32:11.
ನೀವು ವಿವರಿಸಬಲ್ಲಿರೊ?
◻ ಸಾ.ಶ.ಪೂ. 905ರಲ್ಲಿ ಇಸ್ರಾಯೇಲಿನಲ್ಲಿ ಯಾವ ಬದಲಾವಣೆಗಳು ಸಂಭವಿಸಿದವು?
◻ ಆಧುನಿಕ ದಿನದ ಯೇಹು ಯಾರು, ಮತ್ತು ತಮ್ಮ ‘ಮನಸ್ಸು’ ಅವನ ಮನಸ್ಸಿನೊಂದಿಗೆ ‘ಯಥಾರ್ಥವಾಗಿದೆ’ ಎಂಬುದನ್ನು “ಮಹಾ ಸಮೂಹ”ದವರು ಹೇಗೆ ತೋರಿಸಿದ್ದಾರೆ?
◻ 1997ರ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳು ತೋರಿಸಿದ ಹುರುಪನ್ನು, ವಾರ್ಷಿಕ ವರದಿಯ ಯಾವ ಸಂಖ್ಯಾಸಂಗ್ರಹಣಗಳು ದೃಷ್ಟಾಂತಿಸುತ್ತವೆ?
◻ ನಮ್ಮ ವಿರುದ್ಧವಾಗಿ ಸೈತಾನನು ಏನೇ ಮಾಡಲಿ, 1998ನೆಯ ಸೇವಾ ವರ್ಷದಲ್ಲಿ ನಾವು ಯಾವ ಆತ್ಮವನ್ನು ತೋರಿಸುವೆವು?
[ಪುಟ 18-21ರಲ್ಲಿರುವಚಿ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1997ನೆಯ ಸೇವಾ ವರ್ಷದ ವರದಿ
(For fully formatted text, see publication.)
[ಪುಟ 15 ರಲ್ಲಿರುವ ಚಿತ್ರ]
ಜ್ಞಾಪಕದ ಗಮನಾರ್ಹವಾದ ಹಾಜರಿಯು, ಭವಿಷ್ಯತ್ತಿನ ಅಭಿವೃದ್ಧಿಗಾಗಿರುವ ಒಳ್ಳೆಯ ಪ್ರತೀಕ್ಷೆಗಳನ್ನು ತೋರಿಸುತ್ತದೆ
[ಪುಟ 16 ರಲ್ಲಿರುವ ಚಿತ್ರ]
ಯೆಹೋನಾದಾಬನು ಯೇಹುವನ್ನು ಬೆಂಬಲಿಸಿದಂತೆಯೇ, ಇಂದು “ಮಹಾ ಸಮೂಹ”ವು ಮಹಾ ಯೇಹುವಾದ ಯೇಸು ಕ್ರಿಸ್ತನಿಗೂ ಅವನ ಅಭಿಷಿಕ್ತ ಸಹೋದರರಿಗೂ ಬೆಂಬಲನೀಡುತ್ತದೆ