ಯೆಹೋವನ ವಾಕ್ಯವು ಸಜೀವವಾದದ್ದು
ಯೋಬ ಪುಸ್ತಕದ ಮುಖ್ಯಾಂಶಗಳು
ಪೂರ್ವಜನಾದ ಯೋಬನು, ಇಂದು ಅರೇಬಿಯದಲ್ಲಿರುವ ಊಚ್ ದೇಶದಲ್ಲಿ ವಾಸಿಸುತ್ತಿದ್ದಾನೆ. ಆ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಯೋಬನು ಒಬ್ಬ ಇಸ್ರಾಯೇಲ್ಯನಾಗಿರದಿದ್ದರೂ, ಯೆಹೋವ ದೇವರ ಆರಾಧಕನಾಗಿದ್ದಾನೆ. ಅವನ ಕುರಿತು ಬೈಬಲ್ ತಿಳಿಸುವುದು: “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” (ಯೋಬ 1:8) ಇದು, ಯೆಹೋವನ ಇಬ್ಬರು ಪ್ರಮುಖ ಸೇವಕರ, ಅಂದರೆ ಯಾಕೋಬನ ಮಗನಾದ ಯೋಸೇಫ ಮತ್ತು ಪ್ರವಾದಿಯಾದ ಮೋಶೆಯ ಜೀವನಾವಧಿಯ ನಡುವಣ ಕಾಲಾವಧಿಯಾಗಿರಬೇಕು.
ಯೋಬನ ಪುಸ್ತಕವನ್ನು ಯಾರು ಬರೆದಿರಬೇಕೆಂದು ಅಭಿಪ್ರಯಿಸಲಾಗಿದೆಯೋ ಆ ಮೋಶೆಯು, ಊಚ್ ದೇಶದ ಸಮೀಪದಲ್ಲಿರುವ ಮಿದ್ಯಾನ್ ದೇಶದಲ್ಲಿ 40 ವರ್ಷ ಇದ್ದಾಗ ಯೋಬನ ಬಗ್ಗೆ ತಿಳಿದುಕೊಂಡಿರಬಹುದು. ಇಸ್ರಾಯೇಲ್ಯರ 40 ವರ್ಷಗಳ ಅರಣ್ಯವಾಸದ ಅಂತ್ಯದಷ್ಟಕ್ಕೆ, ಅವರು ಊಚ್ ದೇಶದ ಸಮೀಪದಲ್ಲಿದ್ದಾಗ ಯೋಬನ ಅಂತಿಮ ವರ್ಷಗಳ ಕುರಿತು ಮೋಶೆಯು ಕೇಳಿಸಿಕೊಂಡಿರಸಾಧ್ಯವಿದೆ.a ಯೋಬನ ಅನುಭವವು ಲಿಖಿತ ರೂಪದಲ್ಲಿ ಎಷ್ಟು ಸುಂದರವಾಗಿ ವಿವರಿಸಲ್ಪಟ್ಟಿದೆಯೆಂದರೆ, ಆ ವೃತ್ತಾಂತವನ್ನು ಸಾಹಿತ್ಯಕ ಮೇರುಕೃತಿಯಾಗಿ ಪರಿಗಣಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಇದು ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ: ಒಳ್ಳೇ ಜನರಿಗೆ ಏಕೆ ಕಷ್ಟಗಳು ಬರುತ್ತವೆ? ಯೆಹೋವನು ದುಷ್ಟತನವನ್ನು ಏಕೆ ಅನುಮತಿಸುತ್ತಾನೆ? ಅಪರಿಪೂರ್ಣ ಮಾನವರು ದೇವರ ಕಡೆಗಿನ ತಮ್ಮ ಯಥಾರ್ಥತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆಯೊ? ಯೋಬನ ಪುಸ್ತಕವು ದೇವರ ವಾಕ್ಯದ ಪ್ರೇರಿತ ಭಾಗವಾಗಿರುವುದರಿಂದ, ಅದರಲ್ಲಿರುವ ಸಂದೇಶವು ಸಜೀವವಾದದ್ದಾಗಿದೆ ಮತ್ತು ಇಂದು ಕೂಡ ಕಾರ್ಯಸಾಧಕವಾದದ್ದಾಗಿದೆ.—ಇಬ್ರಿಯ 4:12.
“ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ”
ಒಂದು ದಿನ ಸೈತಾನನು ದೇವರ ಮುಂದೆ ಯೋಬನ ಯಥಾರ್ಥತೆಯ ಬಗ್ಗೆ ಪಂಥಾಹ್ವಾನವನ್ನು ಎಬ್ಬಿಸುತ್ತಾನೆ. ಯೆಹೋವನು ಈ ಪಂಥಾಹ್ವಾನವನ್ನು ಸ್ವೀಕರಿಸುತ್ತಾನೆ ಮತ್ತು ಸೈತಾನನು ಯೋಬನ ಮೇಲೆ ಒಂದರ ಅನಂತರ ಇನ್ನೊಂದು ವಿಪತ್ತನ್ನು ಬರಗೊಡಿಸುವಂತೆ ಅನುಮತಿಸುತ್ತಾನೆ. ಆದರೆ ಯೋಬನು ‘ದೇವರನ್ನು ದೂಷಿಸಲು’ ನಿರಾಕರಿಸುತ್ತಾನೆ.—ಯೋಬ 2:9.
ಯೋಬನ ಮೂವರು ಸ್ನೇಹಿತರು ಅವನಿಗೆ ‘ಸಂತಾಪವನ್ನು ತೋರ್ಪಡಿಸಲು’ ಬರುತ್ತಾರೆ. (ಯೋಬ 2:11) “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ” ಎಂದು ಹೇಳುವ ಮೂಲಕ ಯೋಬನು ತನ್ನ ಮೌನವನ್ನು ಮುರಿಯುವ ವರೆಗೆ ಅವರು ಒಂದೂ ಮಾತನ್ನಾಡದೆ ಅವನೊಂದಿಗೆ ಕುಳಿತುಕೊಳ್ಳುತ್ತಾರೆ. (ಯೋಬ 3:3) ಅವನು “ಬೆಳಕನ್ನೇ ಕಾಣದೆ ಸತ್ತ ಕೂಸುಗಳಂತೆ” ಅಥವಾ ಮೃತಸ್ಥಿತಿಯಲ್ಲಿ ಹುಟ್ಟಿರುವ ಮಕ್ಕಳಂತೆ ಇರಲು ಬಯಸುತ್ತಾನೆ.—ಯೋಬ 3:11, 16.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:4—ಯೋಬನ ಮಕ್ಕಳು ತಮ್ಮ ಜನ್ಮದಿನವನ್ನು ಆಚರಿಸಿದರೊ? ಇಲ್ಲ, ಅವರು ಜನ್ಮದಿನವನ್ನು ಆಚರಿಸಲಿಲ್ಲ. “ದಿನ” ಮತ್ತು “ಜನ್ಮದಿನ” ಎಂಬುದಕ್ಕಾಗಿರುವ ಮೂಲ ಭಾಷಾ ಪದಗಳು ಬೇರೆ ಬೇರೆಯಾಗಿವೆ ಮತ್ತು ಪ್ರತಿಯೊಂದಕ್ಕೂ ಅದರದ್ದೇ ಆದ ಅರ್ಥವಿದೆ. (ಆದಿಕಾಂಡ 40:20) ಯೋಬ 1:4ರಲ್ಲಿ “ದಿನ” ಎಂಬ ಪದವು ಉಪಯೋಗಿಸಲ್ಪಟ್ಟಿದ್ದು, ಇದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗಿನ ಕಾಲಾವಧಿಯನ್ನು ಸೂಚಿಸುತ್ತದೆ. ಯೋಬನ ಏಳು ಮಂದಿ ಪುತ್ರರು ವರ್ಷಕ್ಕೊಮ್ಮೆ ಏಳು ದಿನದ ಕುಟುಂಬ ಸಮಾರಂಭವನ್ನು ಏರ್ಪಡಿಸುತ್ತಿದ್ದರು ಎಂಬುದು ಸುವ್ಯಕ್ತ. ಸರದಿಯ ಪ್ರಕಾರ ಪ್ರತಿಯೊಬ್ಬ ಮಗನು “ಒಂದೊಂದು ದಿನ” ತನ್ನ ಮನೆಯಲ್ಲಿ ನಡೆಸಲ್ಪಡುವ ಔತಣಕ್ಕೆ ಆತಿಥೇಯನಾಗಿರುತ್ತಿದ್ದನು.
1:6; 2:1—ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬರಲು ಯಾರಿಗೆ ಅನುಮತಿಯಿತ್ತು? ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಲು ಬಂದವರಲ್ಲಿ ದೇವರ ಏಕಜಾತ ಪುತ್ರನು ಅಂದರೆ ವಾಕ್ಯವಾದಾತನು, ನಂಬಿಗಸ್ತ ದೇವದೂತರು ಮತ್ತು ಪಿಶಾಚನಾದ ಸೈತಾನನನ್ನೂ ಸೇರಿಸಿ ಅವಿಧೇಯ ದೂತರೂ ಒಳಗೂಡಿದ್ದರು. (ಯೋಹಾನ 1:1, 18) 1914ರಲ್ಲಿ ದೇವರ ರಾಜ್ಯವು ಸ್ಥಾಪನೆಯಾಗಿ ಸ್ವಲ್ಪದರಲ್ಲೇ ಸೈತಾನನು ಮತ್ತು ಅವನ ದೆವ್ವಗಳು ಪರಲೋಕದಿಂದ ಭೂಮಿಗೆ ದೊಬ್ಬಲ್ಪಟ್ಟರು. (ಪ್ರಕಟನೆ 12:1-12) ಅವರು ತನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವಂತೆ ಅನುಮತಿಸುವ ಮೂಲಕ ಯೆಹೋವನು, ಸೈತಾನನ ಪಂಥಾಹ್ವಾನವನ್ನು ಮತ್ತು ಅದು ಎಬ್ಬಿಸಿದ ವಿವಾದಾಂಶಗಳನ್ನು ಎಲ್ಲ ಆತ್ಮ ಜೀವಿಗಳ ಮುಂದೆ ಸಾದರಪಡಿಸಿದನು.
1:7; 2:2—ಯೆಹೋವನು ಸೈತಾನನೊಂದಿಗೆ ನೇರವಾಗಿ ಮಾತಾಡಿದನೋ? ಯೆಹೋವನು ತನ್ನ ಆತ್ಮಜೀವಿಗಳೊಂದಿಗೆ ಹೇಗೆ ಸಂವಾದಿಸುತ್ತಾನೆ ಎಂಬುದರ ಕುರಿತು ಬೈಬಲ್ ನಮಗೆ ಹೆಚ್ಚಿನ ವಿವರವನ್ನು ಕೊಡುವುದಿಲ್ಲ. ಆದರೆ, ಪ್ರವಾದಿಯಾದ ಮೀಕಾಯೆಹುವು ಒಂದು ದರ್ಶನವನ್ನು ಕಂಡಿದ್ದನು ಮತ್ತು ಅದರಲ್ಲಿ ಒಬ್ಬ ದೇವದೂತನು ಯೆಹೋವನೊಂದಿಗೆ ನೇರವಾಗಿ ಸಂವಾದಿಸುತ್ತಿರುವುದನ್ನು ನೋಡಿದ್ದನು. (1 ಅರಸುಗಳು 22:14, 19-23) ಹೀಗಿರುವುದರಿಂದ, ಯೆಹೋವನು ಒಬ್ಬ ಮಧ್ಯಸ್ಥಗಾರನ ಸಹಾಯವಿಲ್ಲದೆ ನೇರವಾಗಿ ಸೈತಾನನೊಂದಿಗೆ ಮಾತಾಡಿರುವಂತೆ ತೋರುತ್ತದೆ.
2:9—ದೇವರನ್ನು ದೂಷಿಸಿ ಸಾಯುವಂತೆ ಯೋಬನ ಪತ್ನಿಯು ತನ್ನ ಗಂಡನಿಗೆ ಹೇಳಿದಾಗ, ಅವಳು ಯಾವ ಮಾನಸಿಕ ಸ್ಥಿತಿಯಲ್ಲಿದ್ದಿರಬಹುದು? ಯೋಬನ ಪತ್ನಿಯು ತನ್ನ ಗಂಡನು ಅನುಭವಿಸಿದ ನಷ್ಟಗಳನ್ನೇ ಅನುಭವಿಸಿದ್ದಳು. ಈ ಮುಂಚೆ ಆರೋಗ್ಯದಿಂದಿದ್ದ ಅವಳ ಗಂಡನು ಈಗ ಅಸಹ್ಯಕರವಾದ ರೋಗವೊಂದರಿಂದ ಶೋಚನೀಯವಾಗಿ ಪೀಡಿಸಲ್ಪಡುತ್ತಿರುವುದನ್ನು ನೋಡುವುದು ಅವಳಿಗೆ ನೋವನ್ನು ಉಂಟುಮಾಡಿದ್ದಿರಬೇಕು. ತನ್ನ ಪ್ರೀತಿಯ ಮಕ್ಕಳನ್ನು ಅವಳು ಕಳೆದುಕೊಂಡಿದ್ದಳು. ಈ ಎಲ್ಲ ಕಾರಣಗಳಿಂದ ಅವಳು ಎಷ್ಟು ಕ್ಷೋಭೆಗೊಂಡಿದ್ದಿರಬಹುದೆಂದರೆ, ಯಾವುದು ನಿಜವಾಗಿಯೂ ಪ್ರಾಮುಖ್ಯವಾಗಿದೆಯೋ ಅದರ ಕುರಿತು ಅಂದರೆ ದೇವರೊಂದಿಗಿನ ಅವರ ಸಂಬಂಧದ ಕುರಿತು ಅವಳು ಯೋಚಿಸಲಿಲ್ಲ.
ನಮಗಾಗಿರುವ ಪಾಠಗಳು:
1:8-11; 2:3-5. ಯೋಬನ ವಿದ್ಯಮಾನದಲ್ಲಿ ತೋರಿಸಲ್ಪಟ್ಟಿರುವಂತೆ, ಯಥಾರ್ಥತೆಯು ಯೋಗ್ಯವಾದ ಮಾತು ಮತ್ತು ಕೃತ್ಯವನ್ನು ಮಾತ್ರವಲ್ಲದೆ ಯೆಹೋವನ ಸೇವೆಮಾಡುವುದಕ್ಕಾಗಿ ಸರಿಯಾದ ಹೇತು ಇರುವುದನ್ನು ಅಗತ್ಯಪಡಿಸುತ್ತದೆ.
1:21, 22. ಅನುಕೂಲಕರವಾದ ಹಾಗೂ ಅನನುಕೂಲಕರವಾದ ಸನ್ನಿವೇಶಗಳಲ್ಲಿಯೂ ಯೆಹೋವನಿಗೆ ನಿಷ್ಠರಾಗಿರುವ ಮೂಲಕ ನಾವು ಸೈತಾನನನ್ನು ಸುಳ್ಳುಗಾರನನ್ನಾಗಿ ರುಜುಪಡಿಸಸಾಧ್ಯವಿದೆ.—ಜ್ಞಾನೋಕ್ತಿ 27:11.
2:9, 10. ಕುಟುಂಬದ ಸದಸ್ಯರು ನಮ್ಮ ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳನ್ನು ಅಮೂಲ್ಯವಾಗಿ ಪರಿಗಣಿಸದಿರುವುದಾದರೂ ಅಥವಾ ನಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳುವಂತೆ ಇಲ್ಲವೆ ಬಿಟ್ಟುಬಿಡುವಂತೆ ಅವರು ನಮ್ಮ ಮೇಲೆ ಒತ್ತಡವನ್ನು ಹೇರುವಾಗಲೂ, ಯೋಬನಂತೆ ನಾವು ನಂಬಿಕೆಯಲ್ಲಿ ದೃಢರಾಗಿ ಉಳಿಯಬೇಕು.
2:13. ಯೋಬನ ಸ್ನೇಹಿತರು ದೇವರ ಕುರಿತು ಮತ್ತು ಆತನ ವಾಗ್ದಾನಗಳ ಕುರಿತು ಸಾಂತ್ವನದಾಯಕವಾದ ಯಾವ ವಿಷಯವನ್ನೂ ಹೇಳಲು ಶಕ್ತರಾಗಿರಲಿಲ್ಲ, ಏಕೆಂದರೆ ಅವರಲ್ಲಿ ಆಧ್ಯಾತ್ಮಿಕತೆಯ ಕೊರತೆಯಿತ್ತು.
“ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು”
ಯೋಬನ ಮೂವರು ಸ್ನೇಹಿತರು ತಮ್ಮ ಮಾತುಗಳಲ್ಲಿ ತಿಳಿಸಿದ ಮೂಲಭೂತ ಅಂಶವು, ಇಂಥ ಘೋರವಾದ ಶಿಕ್ಷೆಯನ್ನು ದೇವರಿಂದ ಪಡೆದುಕೊಳ್ಳಲು ಯೋಬನು ಏನೋ ಕೆಟ್ಟದ್ದನ್ನು ಮಾಡಿರಲೇಬೇಕು ಎಂಬುದಾಗಿದೆ. ಎಲೀಫಜನು ಮೊದಲು ಮಾತಾಡಲಾರಂಭಿಸುತ್ತಾನೆ. ಎಲೀಫಜನ ಬಳಿಕ ಬಿಲ್ದದನು ಇನ್ನಷ್ಟು ಕಟುವಾದ ಭಾಷೆಯನ್ನು ಉಪಯೋಗಿಸುತ್ತಾ ಮಾತಾಡುತ್ತಾನೆ. ಚೋಫರನು ಇನ್ನೂ ಹೆಚ್ಚು ತಿರಸ್ಕಾರಭಾವದಿಂದ ಮಾತಾಡುತ್ತಾನೆ.
ಯೋಬನು ತನ್ನ ಸಂದರ್ಶಕರ ಸುಳ್ಳು ತರ್ಕವನ್ನು ಅಂಗೀಕರಿಸುವುದಿಲ್ಲ. ತನ್ನ ಕಷ್ಟಾನುಭವವನ್ನು ದೇವರು ಏಕೆ ಅನುಮತಿಸಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಸಮರ್ಥನಾದ ಅವನು, ತನ್ನನ್ನೇ ಸಮರ್ಥಿಸಿಕೊಳ್ಳುವ ವಿಷಯದಲ್ಲಿ ಅತಿಯಾಗಿ ಚಿಂತಿತನಾಗುತ್ತಾನೆ. ಆದರೂ ಯೋಬನು ದೇವರನ್ನು ಪ್ರೀತಿಸುತ್ತಾನೆ ಮತ್ತು ಹೀಗೆ ಉದ್ಗರಿಸುತ್ತಾನೆ: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.”—ಯೋಬ 27:5.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
7:1; 14:14—“ದುಡಿಯುವ ವಾಯಿದೆ” ಅಥವಾ ‘ವಾಯಿದೆಯ ದಿನಗಳು’ ಎಂಬುದರ ಅರ್ಥವೇನು? ಯೋಬನ ಸಂಕಟವು ಎಷ್ಟು ಘೋರವಾಗಿತ್ತೆಂದರೆ, ಜೀವನವು ಕಠಿನವಾದ ಮತ್ತು ಸಹಿಸಲು ಕಷ್ಟಕರವಾದ ದುಡಿಮೆಯ ವಾಯಿದೆಯಂತೆ ಕಡ್ಡಾಯವಾಗಿದೆ ಎಂದು ಅವನಿಗನಿಸಿತು. (ಯೋಬ 10:17, NW) ಮತ್ತು ಒಬ್ಬನು ತನ್ನ ಮರಣದ ಸಮಯದಿಂದ ಪುನರುತ್ಥಾನದ ವರೆಗೆ ಷೀಓಲ್ನಲ್ಲಿ ಕಳೆಯುವ ಸಮಯವು ಕಡ್ಡಾಯಭರಿತ ಕಾಲಾವಧಿಯಾಗಿರುವುದರಿಂದ, ಯೋಬನು ಆ ಕಾಲವನ್ನು ಕಡ್ಡಾಯವಾಗಿರುವಂಥ ವಾಯಿದೆಯ ದಿನಗಳಿಗೆ ಹೋಲಿಸಿದನು.
7:9, 10; 10:21; 16:22—ಈ ಹೇಳಿಕೆಗಳು, ಯೋಬನು ಪುನರುತ್ಥಾನದಲ್ಲಿ ನಂಬಿಕೆಯಿಡಲಿಲ್ಲ ಎಂಬುದನ್ನು ಸೂಚಿಸುತ್ತವೊ? ಇವು ಯೋಬನ ತತ್ಕ್ಷಣದ ಭವಿಷ್ಯತ್ತಿನ ಕುರಿತಾದ ಹೇಳಿಕೆಗಳಾಗಿದ್ದವು. ಹಾಗಾದರೆ ಅವನು ಹೇಳಿದ್ದರ ಅರ್ಥವೇನಾಗಿತ್ತು? ಒಂದು ಅರ್ಥವು, ಒಂದುವೇಳೆ ಅವನು ಮರಣಪಡುವಲ್ಲಿ ಅವನ ಸಮಕಾಲೀನರಲ್ಲಿ ಯಾರೊಬ್ಬರೂ ಅವನನ್ನು ನೋಡಲಾರರು ಎಂದಾಗಿರಬಹುದು. ಅವರ ದೃಷ್ಟಿಕೋನದಲ್ಲಿ, ಅವನು ತನ್ನ ಮನೆಗೆ ಪುನಃ ಸೇರಲು ಸಾಧ್ಯವಿರಲಿಲ್ಲ ಅಥವಾ ದೇವರ ನೇಮಿತ ಸಮಯದ ವರೆಗೆ ಯಾವುದೇ ಸಮ್ಮತಿಯನ್ನು ಪಡೆಯಲು ಸಾಧ್ಯವಿರಲಿಲ್ಲ. ಯಾರೊಬ್ಬರೂ ತಮ್ಮಷ್ಟಕ್ಕೆ ಯಾವುದೇ ಸಹಾಯವಿಲ್ಲದೆ ಷೀಓಲ್ನಿಂದ ಹಿಂದೆ ಬರಲಾರರು ಎಂಬುದು ಸಹ ಯೋಬನ ಹೇಳಿಕೆಯ ಅರ್ಥವಾಗಿದ್ದಿರಬಹುದು. ಯೋಬನು ಭಾವೀ ಪುನರುತ್ಥಾನದಲ್ಲಿ ನಿರೀಕ್ಷೆಯಿಟ್ಟಿದ್ದನು ಎಂಬುದು ಯೋಬ 14:13-15ರಿಂದ ಸ್ಪಷ್ಟವಾಗುತ್ತದೆ.
10:10—ಯೆಹೋವನು ಹೇಗೆ ‘ಯೋಬನನ್ನು ಹಾಲಿನಂತೆ ಹೊಯ್ದು ಮೊಸರಿನ ಹಾಗೆ ಹೆಪ್ಪುಗಟ್ಟಿಸಿದನು?’ ಇದು, ಯೋಬನು ತನ್ನ ತಾಯಿಯ ಗರ್ಭದಲ್ಲಿ ಹೇಗೆ ರೂಪಿಸಲ್ಪಟ್ಟನು ಎಂಬುದರ ಕಾವ್ಯಾತ್ಮಕ ವರ್ಣನೆಯಾಗಿದೆ.
19:20—“ನಾನು ನನ್ನ ಹಲ್ಲುಗಳ ತೊಗಲಿನೊಂದಿಗೆ ತಪ್ಪಿಸಿಕೊಂಡೆನು” (NIBV) ಎಂಬ ಯೋಬನ ಅಭಿವ್ಯಕ್ತಿಯ ಅರ್ಥವೇನು? ಹಲ್ಲುಗಳಿಗೆ ತೊಗಲು ಅಥವಾ ಚರ್ಮವೇ ಇಲ್ಲದಂತೆ ತೋರುತ್ತದೆ. ಹಾಗಾಗಿ, ಹಲ್ಲುಗಳ ತೊಗಲಿನೊಂದಿಗೆ ತಪ್ಪಿಸಿಕೊಂಡೆ ಎಂದು ಹೇಳುವ ಮೂಲಕ, ತಾನು ಕಾರ್ಯತಃ ಏನೂ ಇಲ್ಲದವನಾಗಿ ತಪ್ಪಿಸಿಕೊಂಡೆನೆಂದು ಯೋಬನು ಹೇಳುತ್ತಿದ್ದಿರಬಹುದು.
ನಮಗಾಗಿರುವ ಪಾಠಗಳು:
4:7, 8; 8:5, 6; 11:13-15. ಕಡುಸಂಕಟದಲ್ಲಿರುವ ವ್ಯಕ್ತಿಯೊಬ್ಬನು ತಾನು ಏನನ್ನು ಬಿತ್ತಿದ್ದಾನೋ ಅದನ್ನೇ ಕೊಯ್ಯುತ್ತಿದ್ದಾನೆ ಮತ್ತು ಅವನಿಗೆ ದೇವರ ಸಮ್ಮತಿಯಿಲ್ಲ ಎಂದು ನಾವು ಆ ಕೂಡಲೆ ಊಹಿಸಬಾರದು.
4:18, 19; 22:2, 3. ನಮ್ಮ ಸಲಹೆಯು ವೈಯಕ್ತಿಕ ಅಭಿಪ್ರಾಯದ ಮೇಲಲ್ಲ ಬದಲಾಗಿ ದೇವರ ವಾಕ್ಯದ ಮೇಲೆ ಆಧಾರಿತವಾಗಿರತಕ್ಕದ್ದು.—2 ತಿಮೊಥೆಯ 3:16.
10:1. ತೀವ್ರ ಕಟುಭಾವನೆಯು ಯೋಬನನ್ನು ಕುರುಡುಗೊಳಿಸಿತ್ತು, ಆದುದರಿಂದ ತನ್ನ ಕಷ್ಟಾನುಭವಕ್ಕಾಗಿರುವ ಇತರ ಸಂಭವನೀಯ ಕಾರಣಗಳನ್ನು ಅವನು ಪರಿಗಣಿಸಲಿಲ್ಲ. ನಾವು ಕಷ್ಟಗಳನ್ನು ಅನುಭವಿಸುತ್ತಿರುವಾಗ ಕಟುಭಾವದವರಾಗಬಾರದು. ಏಕೆಂದರೆ, ವಿಶೇಷವಾಗಿ ನಮಗೆ ಅದರಲ್ಲಿ ಒಳಗೂಡಿರುವ ವಿವಾದಾಂಶಗಳ ತಿಳಿವಳಿಕೆ ಇದೆ.
14:7, 13-15; 19:25; 33:24. ಸೈತಾನನು ನಮ್ಮ ಮೇಲೆ ತರಬಹುದಾದ ಯಾವುದೇ ಪರೀಕ್ಷೆಯ ಸಮಯದಲ್ಲಿ ಪುನರುತ್ಥಾನದ ನಿರೀಕ್ಷೆಯು ನಮಗೆ ಪುಷ್ಟಿಕೊಡಬಲ್ಲದು.
16:5; 19:2. ನಮ್ಮ ಮಾತುಗಳು ಇತರರನ್ನು ಕಿರಿಕಿರಿಗೊಳಿಸುವಂತಿರಬಾರದು, ಬದಲಾಗಿ ಅವರನ್ನು ಉತ್ತೇಜಿಸುವಂಥ ಮತ್ತು ಬಲಪಡಿಸುವಂಥ ರೀತಿಯಲ್ಲಿರಬೇಕು.—ಜ್ಞಾನೋಕ್ತಿ 18:21.
22:5-7. ವಾಸ್ತವಿಕ ಪುರಾವೆಯಿಲ್ಲದಿರುವ ಆಪಾದನೆಗಳ ಆಧಾರದ ಮೇಲೆ ಕೊಡಲ್ಪಡುವ ಸಲಹೆಯು ಪ್ರಯೋಜನಕರವಾಗಿರುವುದಿಲ್ಲ ಮತ್ತು ಹಾನಿಕರವಾದದ್ದಾಗಿರುತ್ತದೆ.
27:2; 30:20, 21. ಯಥಾರ್ಥತೆಯನ್ನು ಕಾಪಾಡಿಕೊಳ್ಳಲು ಪರಿಪೂರ್ಣತೆಯ ಅಗತ್ಯವಿಲ್ಲ. ಯೋಬನು ತಪ್ಪಾಗಿ ದೇವರನ್ನು ಟೀಕಿಸಿದನು.
27:5. ಸ್ವತಃ ಯೋಬನೇ ತನ್ನ ಯಥಾರ್ಥತೆಯನ್ನು ಕಳೆದುಕೊಳ್ಳುವ ಇಲ್ಲವೆ ಬಿಟ್ಟುಬಿಡುವ ನಿರ್ಧಾರವನ್ನು ಮಾಡಸಾಧ್ಯವಿತ್ತು, ಏಕೆಂದರೆ ಯಥಾರ್ಥತೆಯು ದೇವರ ಕಡೆಗಿನ ಒಬ್ಬನ ಪ್ರೀತಿಯ ಮೇಲೆ ಆಧಾರಿತವಾದದ್ದಾಗಿದೆ. ಆದುದರಿಂದ ನಾವು ಯೆಹೋವನಿಗಾಗಿ ಬಲವಾದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು.
28:1-28. ಭೂಮಿಯ ನಿಕ್ಷೇಪಗಳು ಎಲ್ಲಿವೆ ಎಂಬುದು ಮಾನವನಿಗೆ ಗೊತ್ತಿದೆ. ಅವನು ಅವುಗಳಿಗಾಗಿ ಅನ್ವೇಷಣೆ ನಡಿಸುವಾಗ, ಅವನ ಜಾಣತನವು ಅವನನ್ನು ದೂರದೃಷ್ಟಿಯುಳ್ಳ ಹದ್ದಿನ ಕಣ್ಣಿಗೂ ಬೀಳದಿರುವಂಥ ಭೂಗತ ದಾರಿಗಳಿಗೆ ಕರೆದೊಯ್ಯುತ್ತದೆ. ಆದರೆ ದೈವಿಕ ವಿವೇಕವು ಯೆಹೋವನಿಗೆ ಭಯಪಡುವುದರಿಂದ ಬರುತ್ತದೆ.
29:12-15. ಅಗತ್ಯದಲ್ಲಿರುವವರಿಗೆ ನಾವು ಮನಃಪೂರ್ವಕವಾಗಿ ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕು.
31:1, 9-28. ಯೋಬನು ನಮಗೆ ಒಂದು ಮಾದರಿಯಾಗಿದ್ದಾನೆ ಹೇಗಂದರೆ, ಅವನು ಪ್ರಣಯಚೇಷ್ಟೆ, ವ್ಯಭಿಚಾರ, ಇತರರೊಂದಿಗೆ ಅನ್ಯಾಯ ಹಾಗೂ ನಿಷ್ಕರುಣೆಯಿಂದ ವರ್ತಿಸುವುದರಿಂದ, ಪ್ರಾಪಂಚಿಕತೆ ಮತ್ತು ವಿಗ್ರಹಾರಾಧನೆಯಿಂದ ದೂರವಿದ್ದನು.
“[ನಾನು] ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ”
ಎಲೀಹು ಎಂಬ ಹೆಸರಿನ ಯುವ ಪ್ರೇಕ್ಷಕನೊಬ್ಬನು ನಡೆಯುತ್ತಿದ್ದ ಚರ್ಚೆಯನ್ನು ತಾಳ್ಮೆಯಿಂದ ಕೇಳಿಸಿಕೊಂಡು, ತದನಂತರ ಅವನು ಮಾತಾಡಲು ಆರಂಭಿಸುತ್ತಾನೆ. ಅವನು ಯೋಬನನ್ನು ಹಾಗೂ ಅವನ ಮೂವರು ಹಿಂಸಕರನ್ನು ತಿದ್ದುತ್ತಾನೆ.
ಎಲೀಹು ಮಾತಾಡಿ ಮುಗಿಸಿದ ಕೂಡಲೆ ಯೆಹೋವನು ಬಿರುಗಾಳಿಯೊಳಗಿಂದ ಉತ್ತರಿಸುತ್ತಾನೆ. ಯೋಬನ ಕಷ್ಟಾನುಭವಕ್ಕೆ ಕಾರಣವೇನು ಎಂಬ ವಿಷಯದಲ್ಲಿ ಆತನು ಯಾವುದೇ ವಿವರಣೆಯನ್ನು ಕೊಡುವುದಿಲ್ಲ. ಆದರೆ, ಯೋಬನಿಗೆ ಅನೇಕಾನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ವಶಕ್ತನು, ತನ್ನ ಭಯಭಕ್ತಿಪ್ರೇರಕ ಶಕ್ತಿಯನ್ನೂ ಮಹಾನ್ ವಿವೇಕವನ್ನೂ ಅವನು ಅರಿತುಕೊಳ್ಳುವಂತೆ ಮಾಡುತ್ತಾನೆ. ತಾನು ಬುದ್ಧಿಹೀನನಾಗಿ ಮಾತಾಡಿದೆ ಎಂಬುದನ್ನು ಯೋಬನು ಒಪ್ಪಿಕೊಂಡು ಹೀಗೆ ಹೇಳುತ್ತಾನೆ: “[ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” (ಯೋಬ 42:6) ಯೋಬನ ಮೇಲೆ ಬಂದ ಪರೀಕ್ಷೆಯು ಕೊನೆಗೊಂಡಾಗ, ಅವನ ಯಥಾರ್ಥತೆಗೆ ಪ್ರತಿಫಲ ಸಿಗುತ್ತದೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
32:1-3—ಎಲೀಹು ಯಾವಾಗ ಬಂದನು? ಎಲೀಹು ಎಲ್ಲರ ಮಾತುಗಳನ್ನು ಕೇಳಿಸಿಕೊಂಡಿದ್ದರಿಂದ, ಯೋಬನು ಮಾತಾಡಲಾರಂಭಿಸುತ್ತಾ ತನ್ನ ಮೂವರು ಸ್ನೇಹಿತರ ಏಳು ದಿನಗಳ ಮೌನವನ್ನು ಕೊನೆಗೊಳಿಸುವುದಕ್ಕೆ ಸ್ವಲ್ಪ ಮುಂಚೆ, ಇವರ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಶಕ್ತನಾಗುವಷ್ಟು ಹತ್ತಿರದಲ್ಲಿ ಅವನು ಕುಳಿತುಕೊಂಡಿದ್ದಿರಬೇಕು.—ಯೋಬ 3:1, 2.
34:7—ಯಾವ ಅರ್ಥದಲ್ಲಿ ಯೋಬನು ‘ದೇವದೂಷಣೆಯನ್ನು ನೀರಿನಂತೆ ಕುಡಿಯುವ’ ವ್ಯಕ್ತಿಯಂತಿದ್ದನು? ಯೋಬನು ಕಡುಸಂಕಟವನ್ನು ಅನುಭವಿಸುತ್ತಿದ್ದಾಗ, ತನ್ನ ಮೂವರು ಸಂದರ್ಶಕರ ಅಪಹಾಸ್ಯವನ್ನು ಅವನು ತನ್ನ ಕಡೆಗೇ ನಿರ್ದೇಶಿಸಿದ್ದಾಗಿ ಪರಿಗಣಿಸುವ ಪ್ರವೃತ್ತಿಯವನಾಗಿದ್ದನು; ಆದರೆ ಅವರು ವಾಸ್ತವದಲ್ಲಿ ಮಾತಾಡುತ್ತಿದ್ದದ್ದು ದೇವರ ವಿರುದ್ಧವಾಗಿಯೇ. (ಯೋಬ 42:7) ಹೀಗೆ ಸಂತೋಷದಿಂದ ನೀರನ್ನು ಕುಡಿಯುವ ಒಬ್ಬ ವ್ಯಕ್ತಿಯಂತೆ ಅವನು ದೇವದೂಷಣೆಯನ್ನು ಕೇಳಿಸಿಕೊಳ್ಳುತ್ತಾ ಇದ್ದನು.
ನಮಗಾಗಿರುವ ಪಾಠಗಳು:
32:8, 9. ಒಬ್ಬ ವ್ಯಕ್ತಿಗೆ ವಯಸ್ಸಾಗಿದೆ ಎಂದ ಮಾತ್ರಕ್ಕೆ ಅವನು ವಿವೇಕಿ ಎಂದರ್ಥವಲ್ಲ. ವಿವೇಕವು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಆತನ ಆತ್ಮದ ನಿರ್ದೇಶನವನ್ನು ಅಗತ್ಯಪಡಿಸುತ್ತದೆ.
34:36. ಯಥಾರ್ಥತೆಯು ನಾವು ಒಂದಲ್ಲ ಒಂದು ವಿಧದಲ್ಲಿ ‘ಪರಿಶೋಧಿಸಲ್ಪಡುವ’ ಮೂಲಕ ರುಜುಪಡಿಸಲ್ಪಡುತ್ತದೆ.
35:2. ತಾನು ಮಾತಾಡುವುದಕ್ಕೆ ಮೊದಲು ಎಲೀಹು ಜಾಗರೂಕತೆಯಿಂದ ಕಿವಿಗೊಟ್ಟನು ಮತ್ತು ನಿಜವಾದ ವಿವಾದಾಂಶವನ್ನು ನಿರ್ದಿಷ್ಟವಾಗಿ ತಿಳಿಸಿದನು. (ಯೋಬ 10:7; 16:7; 34:5) ಸಲಹೆಯನ್ನು ಕೊಡುವುದಕ್ಕೆ ಮೊದಲು ಕ್ರೈಸ್ತ ಹಿರಿಯರು ಜಾಗರೂಕತೆಯಿಂದ ಕಿವಿಗೊಡಬೇಕು, ವಾಸ್ತವಾಂಶಗಳನ್ನು ಸಂಗ್ರಹಿಸಬೇಕು ಮತ್ತು ಸಂಬಂಧಿತ ವಿವಾದಾಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.—ಜ್ಞಾನೋಕ್ತಿ 18:13.
37:14; 38:1–39:30. ಯೆಹೋವನ ಶಕ್ತಿ ಮತ್ತು ವಿವೇಕದ ಅಭಿವ್ಯಕ್ತಿಗಳಾಗಿರುವ ಆತನ ಅದ್ಭುತಕೃತ್ಯಗಳ ಕುರಿತು ಧ್ಯಾನಿಸುವುದು ನಮ್ಮನ್ನು ದೀನಭಾವದವರನ್ನಾಗಿ ಮಾಡುತ್ತದೆ ಮತ್ತು ನಮ್ಮ ಯಾವುದೇ ವೈಯಕ್ತಿಕ ಅಭಿರುಚಿಗಳಿಗಿಂತಲೂ ಆತನ ಪರಮಾಧಿಕಾರದ ನಿರ್ದೋಷೀಕರಣವು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ಮನಗಾಣಲು ಸಹಾಯಮಾಡುತ್ತದೆ.—ಮತ್ತಾಯ 6:9, 10.
40:1-4. ಸರ್ವಶಕ್ತನ ವಿರುದ್ಧ ದೂರುವ ಅನಿಸಿಕೆ ನಮಗಾಗುವಾಗ, ನಾವು ‘ಬಾಯ ಮೇಲೆ ಕೈಯಿಟ್ಟುಕೊಳ್ಳಬೇಕು.’
40:15–41:34. ನೀರಾನೆ (ಬೆಹೇಮೋತ್) ಮತ್ತು ಮೊಸಳೆಗಳು (ಲಿವ್ಯಾತಾನ್) ಎಷ್ಟು ಬಲಶಾಲಿಗಳಾಗಿವೆ! ದೇವರ ಸೇವೆಯಲ್ಲಿ ತಾಳಿಕೊಂಡು ಮುಂದುವರಿಯಬೇಕಾದರೆ, ಈ ಶಕ್ತಿಶಾಲಿ ಪ್ರಾಣಿಗಳ ಸೃಷ್ಟಿಕರ್ತನಿಂದ ನಮಗೂ ಬಲದ ಆವಶ್ಯಕತೆಯಿದೆ ಮತ್ತು ಅದನ್ನು ಆತನು ನಮಗೆ ದಯಪಾಲಿಸುತ್ತಾನೆ.—ಫಿಲಿಪ್ಪಿ 4:13.
42:1-6. ಯೆಹೋವನ ವಾಕ್ಯವನ್ನು ಕೇಳಿಸಿಕೊಳ್ಳುವುದು ಮತ್ತು ಆತನ ಶಕ್ತಿಯ ಪ್ರದರ್ಶನದ ಕುರಿತು ಮರುಜ್ಞಾಪಿಸಲ್ಪಡುವುದು, ‘ದೇವರನ್ನು ನೋಡುವಂತೆ’ ಅಥವಾ ಆತನ ಕುರಿತಾದ ಸತ್ಯವನ್ನು ಮನಗಾಣುವಂತೆ ಯೋಬನಿಗೆ ಸಹಾಯಮಾಡಿತು. (ಯೋಬ 19:26) ಇದು ಅವನ ಆಲೋಚನೆಯನ್ನು ಸರಿಪಡಿಸಿತು. ನಾವು ಬೈಬಲಿನಿಂದ ತಿದ್ದುಪಾಟನ್ನು ಪಡೆದುಕೊಳ್ಳುವಾಗ, ನಮ್ಮ ತಪ್ಪನ್ನು ಒಪ್ಪಿಕೊಳ್ಳಲು ಮತ್ತು ಹೊಂದಾಣಿಕೆಗಳನ್ನು ಮಾಡಲು ಅತ್ಯಾತುರರಾಗಿರಬೇಕು.
‘ಯೋಬನಲ್ಲಿದ್ದ ತಾಳ್ಮೆಯನ್ನು’ ಬೆಳೆಸಿಕೊಳ್ಳಿರಿ
ಮಾನವ ಕಷ್ಟಾನುಭವಕ್ಕೆ ದೇವರು ಕಾರಣನಲ್ಲ ಎಂಬುದನ್ನು ಯೋಬನ ಪುಸ್ತಕವು ಸ್ಪಷ್ಟವಾಗಿ ತೋರಿಸುತ್ತದೆ. ಸೈತಾನನೇ ಇದಕ್ಕೆ ಕಾರಣನಾಗಿದ್ದಾನೆ. ಭೂಮಿಯಲ್ಲಿ ದೇವರು ದುಷ್ಟತನವನ್ನು ಅನುಮತಿಸಿರುವುದು, ಯೆಹೋವನ ಪರಮಾಧಿಕಾರ ಮತ್ತು ನಮ್ಮ ಯಥಾರ್ಥತೆಯ ಕುರಿತಾದ ವಿವಾದಾಂಶಗಳಲ್ಲಿ ನಮ್ಮ ನಿಲುವೇನು ಎಂಬುದಕ್ಕೆ ವೈಯಕ್ತಿಕ ಉತ್ತರವನ್ನು ಕೊಡಲು ಒಂದು ಅವಕಾಶವನ್ನು ನೀಡುತ್ತದೆ.
ಯೆಹೋವನನ್ನು ಪ್ರೀತಿಸುವವರೆಲ್ಲರೂ ಯೋಬನಂತೆ ಪರೀಕ್ಷೆಗೊಳಗಾಗುವರು. ಯೋಬನ ವೃತ್ತಾಂತವು, ನಾವು ತಾಳಿಕೊಳ್ಳಸಾಧ್ಯವಿದೆ ಎಂಬ ದೃಢಭರವಸೆಯನ್ನು ನಮಗೆ ಕೊಡುತ್ತದೆ. ನಮ್ಮ ಸಮಸ್ಯೆಗಳು ಸದಾಕಾಲ ಉಳಿಯುವುದಿಲ್ಲ ಎಂಬುದನ್ನು ಇದು ನಮಗೆ ಜ್ಞಾಪಕಹುಟ್ಟಿಸುತ್ತದೆ. “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ [ಯೆಹೋವನು] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ”ದ್ದೀರಷ್ಟೆ ಎಂದು ಯಾಕೋಬ 5:11 ತಿಳಿಸುತ್ತದೆ. ಯೋಬನು ಯಥಾರ್ಥತೆಯನ್ನು ಕಾಪಾಡಿಕೊಂಡದ್ದಕ್ಕಾಗಿ ಯೆಹೋವನು ಅವನಿಗೆ ಪ್ರತಿಫಲ ನೀಡಿದನು. (ಯೋಬ 42:10-17) ಪರದೈಸ್ ಭೂಮಿಯಲ್ಲಿ ಸದಾಕಾಲ ಜೀವಿಸುವ ಎಂಥ ಮಹಾನ್ ನಿರೀಕ್ಷೆ ನಮ್ಮ ಮುಂದೆ ಇಡಲ್ಪಟ್ಟಿದೆ! ಆದುದರಿಂದ, ಯೋಬನಂತೆ ನಾವು ನಮ್ಮ ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ದೃಢನಿರ್ಧಾರವನ್ನು ಮಾಡೋಣ.—ಇಬ್ರಿಯ 11:6.
[ಪಾದಟಿಪ್ಪಣಿ]
a ಯೋಬನ ಪುಸ್ತಕವು ಸಾ.ಶ.ಪೂ. 1657 ಮತ್ತು 1473ರ ನಡುವಣ ವರ್ಷಗಳಲ್ಲಿ 140ಕ್ಕಿಂತಲೂ ಹೆಚ್ಚು ವರ್ಷಗಳ ಕಾಲಾವಧಿಯನ್ನು ಆವರಿಸುತ್ತದೆ.
[ಪುಟ 16ರಲ್ಲಿರುವ ಚಿತ್ರಗಳು]
‘ಯೋಬನ ತಾಳ್ಮೆಯಿಂದ’ ನಾವು ಏನನ್ನು ಕಲಿಯಬಲ್ಲೆವು?