ಪಾಠ 03
ಪವಿತ್ರ ಗ್ರಂಥದಲ್ಲಿರೋ ಮಾತುಗಳನ್ನ ನಂಬಬಹುದಾ?
ಹಿಂದಿನ ಪಾಠದಲ್ಲಿ ಕಲಿತ ಹಾಗೆ ಪವಿತ್ರ ಗ್ರಂಥ ಭವಿಷ್ಯದ ಬಗ್ಗೆ ತುಂಬ ವಿಷಯಗಳನ್ನ ಹೇಳುತ್ತೆ. ಅಷ್ಟೇ ಅಲ್ಲ, ಜೀವನಕ್ಕೆ ಬೇಕಾದ ಸಲಹೆಗಳನ್ನೂ ಕೊಡುತ್ತೆ. ಪವಿತ್ರ ಗ್ರಂಥದಲ್ಲಿ ನಿಜವಾಗಿ ಏನಿದೆ ಅಂತ ತಿಳಿದುಕೊಳ್ಳೋ ಕುತೂಹಲ ನಿಮಗೆ ಇರಬಹುದು. ‘ಆದ್ರೆ ಬೈಬಲ್ ತುಂಬ ಹಳೇ ಪುಸ್ತಕ ಅಲ್ವಾ, ಅದ್ರಲ್ಲಿ ಇರೋ ಸಲಹೆಗಳಿಂದ ಈಗ ನಮಗೆ ಪ್ರಯೋಜನ ಇದೆಯಾ? ಭವಿಷ್ಯದ ಬಗ್ಗೆ ಅದರಲ್ಲಿ ಹೇಳಿರೋ ಮಾತುಗಳನ್ನ ನಂಬಬಹುದಾ?’ ಅಂತನೂ ಅನಿಸಬಹುದು. ಲಕ್ಷಾಂತರ ಜನರಿಗೆ ಪವಿತ್ರ ಗ್ರಂಥದಿಂದ ಪ್ರಯೋಜನ ಸಿಕ್ಕಿದೆ, ನಮಗೂ ಪ್ರಯೋಜನ ಸಿಗುತ್ತೆ. ಅದು ಹೇಗೆ ಅಂತ ನೋಡೋಣ್ವಾ?
1. ಪವಿತ್ರ ಗ್ರಂಥದಲ್ಲಿ ಇರೋದು ನಿಜಾನಾ? ಕಟ್ಟುಕಥೆನಾ?
ಪವಿತ್ರ ಗ್ರಂಥದಲ್ಲಿ ‘ಸ್ಪಷ್ಟವಾದ ಸತ್ಯ ಮಾತುಗಳಿವೆ.’ (ಪ್ರಸಂಗಿ 12:10) ಅದರಲ್ಲಿ ಹಿಂದೆ ಬದುಕಿದ್ದ ಜನರ ಬಗ್ಗೆ ಮತ್ತು ನಿಜವಾಗ್ಲೂ ನಡೆದ ಘಟನೆಗಳ ಬಗ್ಗೆ ತಿಳಿಸಲಾಗಿದೆ. (ಲೂಕ 1:3; 3:1, 2 ಓದಿ.) ಅದರಲ್ಲಿರೋ ದಿನಾಂಕಗಳು, ಜನರು, ಸ್ಥಳಗಳು ಮತ್ತು ಘಟನೆಗಳೆಲ್ಲಾ ನಿಖರವಾಗಿವೆ ಅಂತ ವಿಜ್ಞಾನಿಗಳು, ಸಂಶೋಧಕರು ಮತ್ತು ಇತಿಹಾಸಗಾರರು ಒಪ್ಪಿಕೊಂಡಿದ್ದಾರೆ.
2. ಪವಿತ್ರ ಗ್ರಂಥದಲ್ಲಿರೋ ವಿಷಯಗಳಿಂದ ಈಗಲೂ ಪ್ರಯೋಜನ ಇದೆಯಾ?
ಪವಿತ್ರ ಗ್ರಂಥದಲ್ಲಿರೋ ವಿಷಯಗಳನ್ನ “ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.” (ಕೀರ್ತನೆ 111:8) ಬೈಬಲ್ ಬರೆದ ಕಾಲದಲ್ಲಿ ತುಂಬ ಜನರು ಅದರಲ್ಲಿರೋ ಅನೇಕ ವಿಷಯಗಳನ್ನ ನಂಬುತ್ತಿರಲಿಲ್ಲ. ಉದಾಹರಣೆಗೆ ಅದರಲ್ಲಿ ವಿಜ್ಞಾನದ ಬಗ್ಗೆ ಬರೆಯಲಾದ ಕೆಲವು ವಿಷಯಗಳನ್ನ ಅವರು ನಂಬುತ್ತಿರಲಿಲ್ಲ. ಆದ್ರೆ ಇತ್ತೀಚಿಗೆ ಅದರಲ್ಲಿರೋ ವಿಷಯಗಳು ನಿಜ ಅಂತ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
3. ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಹೇಳೋ ವಿಷಯಗಳನ್ನ ನಂಬಬಹುದಾ?
“ಇನ್ನೂ ನಡೆಯದ ವಿಷ್ಯಗಳ” ಬಗ್ಗೆ ಪವಿತ್ರ ಗ್ರಂಥದಲ್ಲಿ ತುಂಬ ಹಿಂದೆನೇ ಭವಿಷ್ಯವಾಣಿa ನುಡಿಯಲಾಗಿದೆ. (ಯೆಶಾಯ 46:10) ಉದಾಹರಣೆಗೆ ಇತಿಹಾಸದಲ್ಲಿ ನಡೆದ ಘಟನೆಗಳ ಬಗ್ಗೆ ಪವಿತ್ರ ಗ್ರಂಥ ಎಷ್ಟೋ ವರ್ಷಗಳ ಹಿಂದೆನೇ ಹೇಳಿತ್ತು. ಅದು ಹಾಗೇ ನಡೆದಿದೆ. ಇವತ್ತು ನಡೆಯುತ್ತಿರೋ ವಿಷಯಗಳ ಬಗ್ಗೆನೂ ಪವಿತ್ರ ಗ್ರಂಥದಲ್ಲಿ ವಿವರವಾಗಿ ತಿಳಿಸಲಾಗಿದೆ. ನಾವೀಗ ಅದರಲ್ಲಿರೋ ಕೆಲವು ಭವಿಷ್ಯವಾಣಿಗಳ ಬಗ್ಗೆ ನೋಡೋಣ. ಅದೆಲ್ಲಾ ನಿಜವಾಗಿ ನಡೆದಿರೋದನ್ನ ನೋಡಿದ್ರೆ ನಮಗೆ ತುಂಬ ಆಶ್ಚರ್ಯ ಆಗುತ್ತೆ!
ಹೆಚ್ಚನ್ನ ತಿಳಿಯೋಣ
ಪವಿತ್ರ ಗ್ರಂಥದಲ್ಲಿ ಹೇಳಲಾಗಿರೋ ವಿಷಯಗಳನ್ನ ವಿಜ್ಞಾನ ಹೇಗೆ ಒಪ್ಪುತ್ತೆ ಅಂತ ನೋಡಿ ಮತ್ತು ಅದರಲ್ಲಿರೋ ಕೆಲವು ಭವಿಷ್ಯವಾಣಿಗಳ ಬಗ್ಗೆ ತಿಳಿದುಕೊಳ್ಳಿ.
4. ಪವಿತ್ರ ಗ್ರಂಥ ಹೇಳೋದನ್ನ ವಿಜ್ಞಾನ ಒಪ್ಪುತ್ತೆ
ಹಿಂದಿನ ಕಾಲದಲ್ಲಿ ಭೂಮಿ ಯಾವುದೋ ವಸ್ತುವಿನ ಮೇಲೆ ಅಥವಾ ಪ್ರಾಣಿಗಳ ಮೇಲೆ ನಿಂತಿದೆ ಅಂತ ಜನ ನಂಬುತ್ತಿದ್ರು. ವಿಡಿಯೋ ನೋಡಿ.
ಸುಮಾರು 3,500 ವರ್ಷಗಳ ಹಿಂದೆ ಪವಿತ್ರ ಗ್ರಂಥದಲ್ಲಿ ಭೂಮಿಯ ಬಗ್ಗೆ ಏನು ಬರೆದಿತ್ತು ಅಂತ ನೋಡಿ. ಯೋಬ 26:7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಭೂಮಿಯನ್ನ “ಯಾವ ಆಧಾರನೂ ಇಲ್ಲದೆ” ತೂಗು ಹಾಕಲಾಗಿದೆ ಅನ್ನೋ ಮಾತಿಂದ ನಮಗೆ ಏನು ಗೊತ್ತಾಗುತ್ತೆ?
ಸುಮಾರು 200 ವರ್ಷಗಳ ಹಿಂದಿನವರೆಗೆ ಜಲ ಚಕ್ರ ಅಂದ್ರೆ ಏನು ಅಂತ ಜನರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಆದರೆ ಸುಮಾರು 3,500 ವರ್ಷಗಳ ಹಿಂದೆನೇ ಪವಿತ್ರ ಗ್ರಂಥ ಅದರ ಬಗ್ಗೆ ಏನು ಹೇಳಿತ್ತು ಅಂತ ನೋಡಿ. ಯೋಬ 36:27, 28 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಜಲ ಚಕ್ರದ ಬಗ್ಗೆ ಪವಿತ್ರ ಗ್ರಂಥದಲ್ಲಿರೋ ಸರಳ ವಿವರಣೆಯಿಂದ ನಾವೇನು ಕಲಿಬಹುದು?
ಈ ವಚನಗಳು ಪವಿತ್ರ ಗ್ರಂಥದ ಮೇಲಿರೋ ನಿಮ್ಮ ನಂಬಿಕೆನ ಜಾಸ್ತಿ ಮಾಡುತ್ತಾ? ಯಾಕೆ?
5. ಪ್ರಾಮುಖ್ಯ ಘಟನೆಗಳ ಬಗ್ಗೆ ಪವಿತ್ರ ಗ್ರಂಥ ಮುಂಚೆನೇ ತಿಳಿಸಿದೆ
ಯೆಶಾಯ 44:27–45:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಬಾಬೆಲ್ ನಾಶವಾಗೋದಕ್ಕಿಂತ 200 ವರ್ಷಗಳ ಮುಂಚೆನೇ ಪವಿತ್ರ ಗ್ರಂಥ ಅದರ ಬಗ್ಗೆ ಏನಂತ ಹೇಳಿತ್ತು?
ಕ್ರಿ.ಪೂ.b 539ರಲ್ಲಿ ಬಾಬೆಲನ್ನ ಕೋರೆಷ ರಾಜ ವಶಪಡಿಸಿಕೊಂಡ ಅಂತ ಇತಿಹಾಸ ಹೇಳುತ್ತೆ. ಆ ಪಟ್ಟಣದ ಸುತ್ತ ಒಂದು ನದಿ ಇತ್ತು. ಅದು ಪಟ್ಟಣವನ್ನ ಸಂರಕ್ಷಿಸುತ್ತಿತ್ತು. ಕೋರೆಷ ಆ ನದಿಯನ್ನ ಇನ್ನೊಂದು ಕಡೆಗೆ ಹರಿಯುವಂತೆ ಮಾಡಿದನು. ಅಷ್ಟೇ ಅಲ್ಲ, ಆ ಪಟ್ಟಣದ ಬಾಗಿಲುಗಳು ಈಗಾಗಲೇ ತೆರೆದಿದ್ದರಿಂದ ಅವನ ಸೈನಿಕರು ಸುಲಭವಾಗಿ ಒಳಗೆ ನುಗ್ಗಿದರು. ಯುದ್ಧಾನೇ ಮಾಡದೆ ಆ ಪಟ್ಟಣವನ್ನ ವಶಮಾಡಿಕೊಂಡರು. 2,500ಕ್ಕೂ ಹೆಚ್ಚು ವರ್ಷಗಳಿಂದ ಇವತ್ತಿನವರೆಗೂ ಆ ಪಟ್ಟಣ ಹಾಗೇ ಹಾಳು ಬಿದ್ದಿದೆ. ಇದರ ಬಗ್ಗೆ ಪವಿತ್ರ ಗ್ರಂಥ ಮುಂಚೆನೇ ಏನು ತಿಳಿಸಿತ್ತು ಅಂತ ನೋಡಿ.
ಯೆಶಾಯ 13:19, 20 ಓದಿ, ನಂತರ ಈ ಪ್ರಶ್ನೆ ಚರ್ಚಿಸಿ:
ಬಾಬೆಲಿನ ಬಗ್ಗೆ ತಿಳಿಸಲಾದ ಭವಿಷ್ಯವಾಣಿ ಹೇಗೆ ಹೇಳಿದ ಹಾಗೆನೇ ನಡೀತು?
6. ಈಗ ನಡೀತಿರೋ ವಿಷಯಗಳ ಬಗ್ಗೆ ಪವಿತ್ರ ಗ್ರಂಥ ಮುಂಚೆನೇ ತಿಳಿಸಿದೆ
ನಮ್ಮ ಈ ದಿನಗಳನ್ನ ಪವಿತ್ರ ಗ್ರಂಥ ‘ಕೊನೇ ದಿನಗಳು’ ಅಂತ ಹೇಳುತ್ತೆ. (2 ತಿಮೊತಿ 3:1) ಬೈಬಲ್ ಇದರ ಬಗ್ಗೆ ಏನು ಹೇಳುತ್ತೆ ಅಂತ ನೋಡಿ.
ಮತ್ತಾಯ 24:6, 7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಕೊನೇ ದಿನಗಳಲ್ಲಿ ಯಾವೆಲ್ಲಾ ಘಟನೆಗಳು ನಡೆಯುತ್ತೆ ಅಂತ ಪವಿತ್ರ ಗ್ರಂಥದಲ್ಲಿದೆ?
2 ತಿಮೊತಿ 3:1-5 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಕೊನೇ ದಿನಗಳಲ್ಲಿ ಜನ ಹೇಗಿರುತ್ತಾರೆ ಅಂತ ಪವಿತ್ರ ಗ್ರಂಥ ಹೇಳುತ್ತೆ?
ಇದರಲ್ಲಿ ತಿಳಿಸಲಾಗಿರೋ ಯಾವೆಲ್ಲಾ ರೀತಿಯ ಜನರನ್ನ ನೀವು ನೋಡಿದ್ದೀರಾ?
ಕೆಲವರು ಹೀಗಂತಾರೆ: “ಬೈಬಲಲ್ಲಿ ಇರೋದೆಲ್ಲಾ ಬರೀ ಕಟ್ಟು ಕಥೆಗಳು.”
ಬೈಬಲ್ನಲ್ಲಿ ಇರೋದು ಸತ್ಯ ಅಂತ ಹೇಳೋಕೆ ಯಾವ ಆಧಾರಗಳಿವೆ?
ನಾವೇನು ಕಲಿತ್ವಿ
ಇತಿಹಾಸ, ವಿಜ್ಞಾನ ಮತ್ತು ಭವಿಷ್ಯವಾಣಿಗಳು ಪವಿತ್ರ ಗ್ರಂಥವನ್ನ ನಂಬಬಹುದು ಅಂತ ತೋರಿಸಿಕೊಡುತ್ತವೆ.
ನೆನಪಿದೆಯಾ
ಪವಿತ್ರ ಗ್ರಂಥದಲ್ಲಿ ಇರೋದು ನಿಜಾನಾ? ಕಟ್ಟುಕಥೆನಾ?
ಪವಿತ್ರ ಗ್ರಂಥದಲ್ಲಿ ಇರೋದನ್ನ ವಿಜ್ಞಾನ ಒಪ್ಪುತ್ತೆ ಅನ್ನೋದಕ್ಕೆ ಕೆಲವು ಉದಾಹರಣೆ ಕೊಡ್ತೀರಾ?
ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಹೇಳಿರೋದು ಸರಿ ಅಂತ ನಿಮಗೆ ಅನಿಸುತ್ತಾ? ಯಾಕೆ ಹಾಗೆ ಅನಿಸುತ್ತೆ?
ಇದನ್ನೂ ನೋಡಿ
ಪವಿತ್ರ ಗ್ರಂಥದಲ್ಲಿ ವಿಜ್ಞಾನದ ಬಗ್ಗೆ ಹೇಳಿರೋ ವಿಷಯಗಳು ಸರಿಯಾಗಿದ್ಯಾ?
“ಕೊನೇ ದಿನಗಳಲ್ಲಿ” ಏನಾಗುತ್ತೆ ಅಂತ ಪವಿತ್ರ ಗ್ರಂಥ ಹೇಳುತ್ತೆ?
“ಆರು ಬೈಬಲ್ ಭವಿಷ್ಯವಾಣಿಗಳ ನೆರವೇರಿಕೆಯನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ” (ಕಾವಲಿನಬುರುಜು ಲೇಖನ)
ಗ್ರೀಕ್ ಸಾಮ್ರಾಜ್ಯದ ಬಗ್ಗೆ ಪವಿತ್ರ ಗ್ರಂಥ ತಿಳಿಸಿರೋ ಭವಿಷ್ಯವಾಣಿಗಳು ಹೇಗೆ ನೆರವೇರಿವೆ ಅಂತ ನೋಡಿ.
ಪವಿತ್ರ ಗ್ರಂಥದಲ್ಲಿರೋ ಭವಿಷ್ಯವಾಣಿಗಳನ್ನ ಓದಿದ ಒಬ್ಬ ವ್ಯಕ್ತಿಗೆ ಅದರ ಬಗ್ಗೆ ಇದ್ದ ಅಭಿಪ್ರಾಯ ಹೇಗೆ ಬದಲಾಯಿತು ಅಂತ ನೋಡಿ.
a ಭವಿಷ್ಯವಾಣಿ ಅಂದರೆ ಮುಂದೆ ನಡೆಯಲಿರೋ ಘಟನೆಗಳ ಬಗ್ಗೆ ದೇವರು ಮೊದಲೇ ತಿಳಿಸಿರೋ ಮಾತು.
b ಕ್ರಿ.ಪೂ. ಅಂದರೆ “ಕ್ರಿಸ್ತ ಪೂರ್ವ” ಕ್ರಿ.ಶ. ಅಂದರೆ “ಕ್ರಿಸ್ತ ಶಕ.”