ಕ್ರಿಸ್ತನಿಗೆ ಪೂರ್ವದ ಧರ್ಮಶಾಸ್ತ್ರ
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.
1. ಆಕಾಶಸ್ಥ ಕಾಯಗಳ ಚಲನೆಗಳನ್ನು ಯಾವುದು ನಿಯಂತ್ರಿಸುತ್ತದೆ?
ಬಾಲ್ಯಾವಸ್ಥೆಯಿಂದ, ಯೋಬನು ಆಶ್ಚರ್ಯದಿಂದ ನಕ್ಷತ್ರಗಳ ಕಡೆಗೆ ದಿಟ್ಟಿಸಿ ನೋಡಿದ್ದಿರುವುದು ಸಂಭವನೀಯ. ಅವನ ಹೆತ್ತವರು, ಮಹಾ ತಾರಾಗಣಗಳಿಗಾಗಿರುವ ಹೆಸರುಗಳನ್ನು ಮತ್ತು ಆಕಾಶದಾದ್ಯಂತವಾಗಿ ತಾರಾಗಣಗಳ ಚಲನೆಯನ್ನು ನಿಯಂತ್ರಿಸಿದ ನಿಯಮಗಳ ಕುರಿತಾಗಿ ತಮಗೆ ತಿಳಿದಿದ್ದ ವಿಷಯವನ್ನು ಅವನಿಗೆ ಕಲಿಸಿದ್ದಿರಬಹುದು. ಎಷ್ಟೆಂದರೂ, ಪುರಾತನ ಕಾಲಗಳಲ್ಲಿನ ಜನರು, ಬದಲಾಗುತ್ತಿರುವ ಕಾಲಗಳನ್ನು ಗುರುತಿಸಲಿಕ್ಕಾಗಿ, ಈ ವಿಸ್ತಾರವಾದ, ಮನೋಹರ ತಾರಾಪುಂಜಗಳ ಏಕಪ್ರಕಾರದ ಚಲನೆಗಳನ್ನು ಉಪಯೋಗಿಸಿದರು. ಆದರೆ ಯೋಬನು ಅವುಗಳ ಕಡೆಗೆ ಭಯಭಕ್ತಿಯುಳ್ಳವನಾಗಿ ದಿಟ್ಟಿಸಿ ನೋಡಿದಾಗಲೆಲ್ಲಾ, ಈ ನಕ್ಷತ್ರಗಳ ಜೋಡಣೆಗಳನ್ನು ಯಾವ ಪ್ರಬಲವಾದ ಬಲಗಳು ತಡೆಹಿಡಿದಿವೆ ಎಂಬುದು ಅವನಿಗೆ ತಿಳಿದಿರಲಿಲ್ಲ. ಹೀಗೆ, ಯೆಹೋವ ದೇವರು ಅವನನ್ನು “ನೀನು ಆಕಾಶದ ನಿಯಮಗಳನ್ನು ಗ್ರಹಿಸಿಕೊಂಡಿದ್ದೀಯೊ?” ಎಂದು ಕೇಳಿದಾಗ, ಅವನು ಉತ್ತರಿಸಲು ಅಸಮರ್ಥನಾಗಿದ್ದನು. (ಯೋಬ 38:31-33, ದ ನ್ಯೂ ಜೆರೂಸಲೆಮ್ ಬೈಬಲ್) ಹೌದು, ನಕ್ಷತ್ರಗಳು ನಿಯಮಗಳಿಂದ ನಿಯಂತ್ರಿಸಲ್ಪಡುತ್ತವೆ; ಆ ನಿಯಮಗಳು ಎಷ್ಟು ನಿಖರವೂ ಜಟಿಲವೂ ಆಗಿವೆಯೆಂದರೆ, ಇಂದಿನ ವಿಜ್ಞಾನಿಗಳು ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ.
2. ಎಲ್ಲಾ ಸೃಷ್ಟಿಯು ನಿಯಮದಿಂದ ನಿಯಂತ್ರಿಸಲ್ಪಡುತ್ತದೆ ಎಂದು ಏಕೆ ಹೇಳಬಹುದಾಗಿದೆ?
2 ವಿಶ್ವದಲ್ಲಿಯೇ ಯೆಹೋವನು ಅತಿ ಶ್ರೇಷ್ಠ ನಿಯಮದಾತನಾಗಿದ್ದಾನೆ. ಆತನ ಎಲ್ಲಾ ಕಾರ್ಯಗಳು ನಿಯಮದಿಂದ ನಿಯಂತ್ರಿಸಲ್ಪಡುತ್ತವೆ. ಆತನ ಪ್ರಿಯ ಪುತ್ರನು, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನು, ಭೌತಿಕ ವಿಶ್ವವು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ, ತಂದೆಯ ನಿಯಮಕ್ಕೆ ನಂಬಿಗಸ್ತಿಕೆಯಿಂದ ವಿಧೇಯನಾಗಿದ್ದನು! (ಕೊಲೊಸ್ಸೆ 1:15) ದೇವದೂತರು ಸಹ ನಿಯಮದಿಂದ ನಿರ್ದೇಶಿಸಲ್ಪಡುತ್ತಾರೆ. (ಕೀರ್ತನೆ 103:20) ಪ್ರಾಣಿಗಳು, ಅವುಗಳ ಸೃಷ್ಟಿಕರ್ತನು ಅವುಗಳೊಳಗೆ ಮುಂದಾಗಿಯೇ ಯೋಜಿಸಿರುವ ಸಹಜ ಪ್ರವೃತ್ತಿಯ ಆಜ್ಞೆಗಳಿಗೆ ವಿಧೇಯತೆಯನ್ನು ತೋರಿಸುವಾಗ, ಅವುಗಳೂ ನಿಯಮದಿಂದ ನಿಯಂತ್ರಿಸಲ್ಪಡುತ್ತವೆ.—ಜ್ಞಾನೋಕ್ತಿ 30:24-28; ಯೆರೆಮೀಯ 8:7.
3. (ಎ) ಮಾನವಕುಲಕ್ಕೆ ಏಕೆ ನಿಯಮಗಳ ಆವಶ್ಯಕತೆಯಿದೆ? (ಬಿ) ಯೆಹೋವನು ಇಸ್ರಾಯೇಲ್ ಜನಾಂಗವನ್ನು ಯಾವುದರ ಮೂಲಕ ನಿಯಂತ್ರಿಸಿದನು?
3 ಮಾನವಕುಲದ ಕುರಿತಾಗಿ ಏನು? ನಾವು ಬುದ್ಧಿಶಕ್ತಿ, ನೈತಿಕತೆ, ಮತ್ತು ಆತ್ಮಿಕತೆಯಂತಹ ವರದಾನಗಳಿಂದ ಆಶೀರ್ವದಿಸಲ್ಪಟ್ಟಿರುವುದಾದರೂ, ಈ ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ, ನಮಗಿನ್ನೂ ಸ್ವಲ್ಪಮಟ್ಟಿಗಿನ ದೈವಿಕ ನಿಯಮದ ಅಗತ್ಯವಿದೆ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು, ಪರಿಪೂರ್ಣರಾಗಿದ್ದರು, ಆದುದರಿಂದ ಅವರನ್ನು ಮಾರ್ಗದರ್ಶಿಸಲಿಕ್ಕಾಗಿ ಕೇವಲ ಕೆಲವೇ ನಿಯಮಗಳ ಆವಶ್ಯಕತೆಯಿತ್ತು. ತಮ್ಮ ಸ್ವರ್ಗೀಯ ತಂದೆಗಾಗಿರುವ ಪ್ರೀತಿಯು, ಅವರಿಗೆ ಹರ್ಷಚಿತ್ತದಿಂದ ವಿಧೇಯರಾಗಲಿಕ್ಕಾಗಿ ಸಾಕಷ್ಟು ಕಾರಣವನ್ನು ಕೊಟ್ಟಿದ್ದಿರಬೇಕು. ಆದರೆ ಅವರು ಅವಿಧೇಯರಾದರು. (ಆದಿಕಾಂಡ 1:26-28; 2:15-17; 3:6-19) ಫಲಿತಾಂಶವಾಗಿ, ಅವರ ಸಂತತಿಯವರು, ಮಾರ್ಗದರ್ಶನವನ್ನು ಒದಗಿಸಲಿಕ್ಕಾಗಿ ಇನ್ನೂ ಹೆಚ್ಚು ನಿಯಮಗಳ ಆವಶ್ಯಕತೆಯಿದ್ದ, ಪಾಪಪೂರ್ಣ ಜೀವಿಗಳಾದರು. ಸಮಯವು ಗತಿಸಿದಂತೆ, ಯೆಹೋವನು ಈ ಅಗತ್ಯವನ್ನು ಪ್ರೀತಿಪೂರ್ಣವಾಗಿ ಪೂರೈಸಿದನು. ಆತನು ನೋಹನಿಗೆ, ಅವನು ತನ್ನ ಕುಟುಂಬಕ್ಕೆ ದಾಟಿಸಬೇಕಾಗಿದ್ದ ನಿರ್ದಿಷ್ಟ ನಿಯಮಗಳನ್ನು ಕೊಟ್ಟನು. (ಆದಿಕಾಂಡ 9:1-7) ಶತಮಾನಗಳ ತರುವಾಯ, ಮೋಶೆಯ ಮೂಲಕವಾಗಿ, ದೇವರು ಇಸ್ರಾಯೇಲ್ನ ಹೊಸ ಜನಾಂಗಕ್ಕೆ, ಒಂದು ವಿವರವಾದ, ಲಿಖಿತ ಧರ್ಮಶಾಸ್ತ್ರ ನಿಯಮಾವಳಿಯನ್ನು ಕೊಟ್ಟನು. ಯೆಹೋವನು ಇಡೀ ಜನಾಂಗವನ್ನು ದೈವಿಕ ನಿಯಮದಿಂದ ನಿಯಂತ್ರಿಸಿದ್ದು ಇದೇ ಪ್ರಥಮ ಬಾರಿಯಾಗಿತ್ತು. ಆ ಧರ್ಮಶಾಸ್ತ್ರವನ್ನು ಪರೀಕ್ಷಿಸುವುದು, ಇಂದು ಕ್ರೈಸ್ತರ ಜೀವಿತಗಳಲ್ಲಿ ದೈವಿಕ ನಿಯಮವು ವಹಿಸುವ ಅತ್ಯಾವಶ್ಯಕವಾದ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವುದು.
ಮೋಶೆಯ ಧರ್ಮಶಾಸ್ತ್ರ—ಅದರ ಉದ್ದೇಶ
4. ಅಬ್ರಹಾಮನ ಆರಿಸಿಕೊಳ್ಳಲ್ಪಟ್ಟ ವಂಶಜರಿಗೆ, ವಾಗ್ದತ್ತ ಸಂತತಿಯನ್ನು ಉತ್ಪಾದಿಸುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿತ್ತೇಕೆ?
4 ಧರ್ಮಶಾಸ್ತ್ರದ ಒಬ್ಬ ಗಾಢವಾದ ವಿದ್ಯಾರ್ಥಿಯಾಗಿದ್ದ ಅಪೊಸ್ತಲ ಪೌಲನು, “ಹಾಗಾದರೆ . . . ಧರ್ಮಶಾಸ್ತ್ರವು ಯಾತಕ್ಕೆ?” ಎಂದು ಕೇಳಿದನು. (ಗಲಾತ್ಯ 3:19) ಇದನ್ನು ಉತ್ತರಿಸಲಿಕ್ಕಾಗಿ, ಯೆಹೋವನು ತನ್ನ ಸ್ನೇಹಿತನಾದ ಅಬ್ರಹಾಮನಿಗೆ, ಎಲ್ಲಾ ಜನಾಂಗಗಳಿಗೆ ಮಹಾ ಆಶೀರ್ವಾದಗಳನ್ನು ತರುವ ಒಂದು ಸಂತತಿಯನ್ನು ಅವನ ಕುಟುಂಬ ವಂಶವು ಉತ್ಪಾದಿಸುವುದೆಂಬುದಾಗಿ ವಾಗ್ದಾನಿಸಿದನೆಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ. (ಆದಿಕಾಂಡ 22:18) ಆದರೆ ಒಂದು ಪಂಥಾಹ್ವಾನವು ಇಲ್ಲಿದೆ: ಅಬ್ರಹಾಮನ ಆರಿಸಿಕೊಳ್ಳಲ್ಪಟ್ಟ ವಂಶಜರಾದ ಎಲ್ಲಾ ಇಸ್ರಾಯೇಲ್ಯರು, ಎಲ್ಲರೂ ಯೆಹೋವನನ್ನು ಪ್ರೀತಿಸಿದ ವ್ಯಕ್ತಿಗಳಾಗಿರಲಿಲ್ಲ. ಸಮಯವು ಗತಿಸಿದಂತೆ, ಅಧಿಕಾಂಶ ಜನರು ಅಹಂಕಾರಿಗಳಾಗಿ, ದಂಗೆಕೋರರಾಗಿ, ಕೆಲವರು ಬಹುಮಟ್ಟಿಗೆ ಹತೋಟಿಮೀರಿದವರಾಗಿ ಪರಿಣಮಿಸಿದರು! (ವಿಮೋಚನಕಾಂಡ 32:9; ಧರ್ಮೋಪದೇಶಕಾಂಡ 9:7) ಅಂತಹವರಾದರೋ, ದೇವರ ಜನರ ಮಧ್ಯೆಯಿದ್ದದ್ದು ತಮ್ಮ ಸ್ವಂತ ಆಯ್ಕೆಯಿಂದಲ್ಲ, ಬದಲಾಗಿ ಅವರು ಇಸ್ರಾಯೇಲ್ ಜನಾಂಗದೊಳಗೆ ಜನಿಸಿದ್ದ ಕಾರಣದಿಂದಲೇ.
5. (ಎ) ಮೋಶೆಯ ಧರ್ಮಶಾಸ್ತ್ರದ ಮೂಲಕವಾಗಿ ಯೆಹೋವನು ಇಸ್ರಾಯೇಲ್ಯರಿಗೆ ಏನನ್ನು ಕಲಿಸಿದನು? (ಬಿ) ಧರ್ಮಶಾಸ್ತ್ರವು ಅದಕ್ಕೆ ಭದ್ರವಾಗಿ ಅಂಟಿಕೊಳ್ಳುವವರ ನಡತೆಯನ್ನು ಪ್ರಭಾವಿಸುವಂತೆ ಹೇಗೆ ವಿನ್ಯಾಸಿಸಲ್ಪಟ್ಟಿತ್ತು?
5 ಅಂತಹ ಜನಾಂಗವು ವಾಗ್ದತ್ತ ಸಂತತಿಯನ್ನು ಹೇಗೆ ಉತ್ಪಾದಿಸಸಾಧ್ಯವಿತ್ತು ಮತ್ತು ಅದರಿಂದ ಹೇಗೆ ಪ್ರಯೋಜನ ಪಡೆಯಸಾಧ್ಯವಿತ್ತು? ಅವರನ್ನು ಯಂತ್ರಮಾನವರಂತೆ ನಿಯಂತ್ರಿಸುವ ಬದಲಿಗೆ, ಯೆಹೋವನು ಅವರಿಗೆ ನಿಯಮದ ಮೂಲಕವಾಗಿ ಕಲಿಸಿದನು. (ಕೀರ್ತನೆ 119:33-35; ಯೆಶಾಯ 48:17) ವಾಸ್ತವವಾಗಿ, “ನಿಯಮ,” ಟೋರಾಕ್ಕಾಗಿದ್ದ ಹೀಬ್ರು ಶಬ್ದದ ಅರ್ಥವು, “ಉಪದೇಶ” ಎಂದಾಗಿದೆ. ಅದು ಏನನ್ನು ಕಲಿಸಿತು? ಪ್ರಧಾನವಾಗಿ ಇಸ್ರಾಯೇಲ್ಯರನ್ನು ಅವರ ಪಾಪಪೂರ್ಣ ಸ್ಥಿತಿಯಿಂದ ವಿಮೋಚಿಸಲಿದ್ದ ಮೆಸ್ಸೀಯನಿಗಾಗಿ ಅವರಿಗಿರುವ ಅಗತ್ಯವನ್ನು ಅದು ಕಲಿಸಿತು. (ಗಲಾತ್ಯ 3:24) ಧರ್ಮಶಾಸ್ತ್ರವು ದೈವಿಕ ಭಯ ಹಾಗೂ ವಿಧೇಯತೆಯನ್ನೂ ಕಲಿಸಿತು. ಅಬ್ರಹಾಮಸಂಬಂಧಿತ ವಾಗ್ದಾನಕ್ಕೆ ಹೊಂದಿಕೆಯಲ್ಲಿ, ಇಸ್ರಾಯೇಲ್ಯರು ಇತರ ಎಲ್ಲಾ ಜನಾಂಗಗಳಿಗೆ ಯೆಹೋವನ ಸಾಕ್ಷಿಗಳೋಪಾದಿ ಕಾರ್ಯನಡಿಸಲಿದ್ದರು. ಆದುದರಿಂದ ಧರ್ಮಶಾಸ್ತ್ರವು ಅವರಿಗೆ, ಯೆಹೋವನನ್ನು ಅತ್ಯುತ್ತಮವಾಗಿ ಪ್ರತಿಫಲಿಸಲಿದ್ದ ನಡತೆಯ ಉನ್ನತವಾದ, ಶ್ರೇಷ್ಠ ನಿಯಮಾವಳಿಯನ್ನು ಕಲಿಸಬೇಕಾಗಿತ್ತು; ಇದು ಇಸ್ರಾಯೇಲಿಗೆ ಸುತ್ತುಮುತ್ತಲಿನ ಜನಾಂಗಗಳ ಭ್ರಷ್ಟ ಆಚಾರಗಳಿಂದ ಪ್ರತ್ಯೇಕವಾಗಿರಿಸಿಕೊಳ್ಳಲು ಸಹಾಯ ಮಾಡಸಾಧ್ಯವಿತ್ತು.—ಯಾಜಕಕಾಂಡ 18:24, 25; ಯೆಶಾಯ 43:10-12.
6. (ಎ) ಮೋಶೆಯ ಧರ್ಮಶಾಸ್ತ್ರದಲ್ಲಿ ಸುಮಾರು ಎಷ್ಟು ಲಿಖಿತ ಕಟ್ಟಳೆಗಳು ಒಳಗೂಡಿದ್ದವು, ಮತ್ತು ಅದು ವಿಪರೀತವೆಂದು ಏಕೆ ಪರಿಗಣಿಸಲ್ಪಡಬಾರದು? (ಪಾದಟಿಪ್ಪಣಿಯನ್ನು ನೋಡಿರಿ.) (ಬಿ) ಮೋಶೆಯ ಧರ್ಮಶಾಸ್ತ್ರದ ಒಂದು ಅಧ್ಯಯನದ ಮೂಲಕವಾಗಿ ನಾವು ಯಾವ ಒಳನೋಟವನ್ನು ಪಡೆದುಕೊಳ್ಳಬಹುದು?
6 ಆದುದರಿಂದ, ಮೋಶೆಯ ಧರ್ಮಶಾಸ್ತ್ರವು ಅನೇಕ ಲಿಖಿತ ಕಟ್ಟಳೆಗಳನ್ನು—ಅವು 600ಕ್ಕಿಂತಲೂ ಹೆಚ್ಚಾಗಿವೆ—ಒಳಗೊಂಡಿರುವುದು ಆಶ್ಚರ್ಯಕರವಾಗಿರುವುದಿಲ್ಲ.a ಈ ಲಿಖಿತ ನಿಯಮಾವಳಿಯು, ಆರಾಧನೆ, ಸರಕಾರ, ನೈತಿಕತೆಗಳು, ನ್ಯಾಯ, ಆಹಾರಪಥ್ಯ ಮತ್ತು ಆರೋಗ್ಯಸೂತ್ರದ ಕ್ಷೇತ್ರಗಳನ್ನೂ ನಿಯಮಗಳಿಗೆ ಒಳಪಡಿಸಿತು. ಆದರೂ, ಧರ್ಮಶಾಸ್ತ್ರವು ಕೇವಲ ನೀರಸ ನಿಬಂಧನೆಗಳು ಮತ್ತು ಸಂಕ್ಷಿಪ್ತವಾದ ಆಜ್ಞೆಗಳನ್ನು ಒಳಗೊಂಡಿತ್ತೆಂಬುದನ್ನು ಅದು ಅರ್ಥೈಸುತ್ತದೊ? ನಿಶ್ಚಯವಾಗಿಯೂ ಇಲ್ಲ! ಈ ಧರ್ಮಶಾಸ್ತ್ರ ನಿಯಮಾವಳಿಯ ಒಂದು ಅಧ್ಯಯನವು, ಯೆಹೋವನ ಪ್ರೀತಿಪೂರ್ಣ ವ್ಯಕ್ತಿತ್ವದೊಳಗೆ ಅಪಾರ ಒಳನೋಟವನ್ನು ಒದಗಿಸುತ್ತದೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಕರುಣೆ ಮತ್ತು ಸಹಾನುಭೂತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ ಧರ್ಮಶಾಸ್ತ್ರ
7, 8. (ಎ) ಧರ್ಮಶಾಸ್ತ್ರವು, ಕರುಣೆ ಮತ್ತು ಸಹಾನುಭೂತಿಯನ್ನು ಹೇಗೆ ಒತ್ತಿಹೇಳಿತು? (ಬಿ) ದಾವೀದನ ವಿದ್ಯಮಾನದಲ್ಲಿ ಯೆಹೋವನು ಧರ್ಮಶಾಸ್ತ್ರವನ್ನು ಹೇಗೆ ಕರುಣಾಭರಿತವಾಗಿ ಜಾರಿಗೆ ತಂದನು?
7 ವಿಶೇಷವಾಗಿ ವಿನೀತರಾದ ಅಥವಾ ನಿಸ್ಸಹಾಯಕ ಜನರಿಗಾಗಿ, ಧರ್ಮಶಾಸ್ತ್ರವು ಕರುಣೆ ಮತ್ತು ಸಹಾನುಭೂತಿಯನ್ನು ಒತ್ತಿಹೇಳಿತು. ವಿಧವೆಯರು ಹಾಗೂ ಅನಾಥರು ಸಂರಕ್ಷಣೆಗಾಗಿ ಪ್ರತ್ಯೇಕಿಸಲ್ಪಟ್ಟಿದ್ದರು. (ವಿಮೋಚನಕಾಂಡ 22:22-24) ಕೆಲಸದ ಪ್ರಾಣಿಗಳು ಕ್ರೌರ್ಯದಿಂದ ರಕ್ಷಿಸಲ್ಪಟ್ಟಿದ್ದವು. ಮೂಲಭೂತವಾದ ಆಸ್ತಿಯ ಹಕ್ಕುಗಳು ಗೌರವಿಸಲ್ಪಟ್ಟಿದ್ದವು. (ಧರ್ಮೋಪದೇಶಕಾಂಡ 24:10; 25:4) ಕೊಲೆಗೈದುದಕ್ಕಾಗಿ ಧರ್ಮಶಾಸ್ತ್ರವು ಮರಣ ದಂಡನೆಯನ್ನು ತಗಾದೆಪಡಿಸಿತಾದರೂ, ಆಕಸ್ಮಿಕವಾದ ಕೊಲ್ಲುವಿಕೆಯ ವಿದ್ಯಮಾನಗಳಲ್ಲಿ ಅದು ಕರುಣೆಯನ್ನು ಲಭ್ಯಗೊಳಿಸಿತು. (ಅರಣ್ಯಕಾಂಡ 35:11) ತಪ್ಪಿತಸ್ಥನ ಮನೋಭಾವದ ಮೇಲೆ ಅವಲಂಬಿಸಿ, ಕೆಲವು ಅಪರಾಧಗಳಿಗಾಗಿ ದಂಡನೆಯನ್ನು ವಿಧಿಸುವುದರ ಕುರಿತಾಗಿ ನಿರ್ಧರಿಸಲಿಕ್ಕಾಗಿ, ಇಸ್ರಾಯೇಲ್ಯ ನ್ಯಾಯಸ್ಥಾಪಕರಿಗೆ ಅವಕಾಶವಿತ್ತೆಂಬುದು ಸುವ್ಯಕ್ತ.—ಹೋಲಿಸಿರಿ ವಿಮೋಚನಕಾಂಡ 22:7 ಮತ್ತು ಯಾಜಕಕಾಂಡ 6:1-7.
8 ಅಗತ್ಯವಿರುವಲ್ಲಿ ಧರ್ಮಶಾಸ್ತ್ರವನ್ನು ದೃಢತೆಯಿಂದ ಅನ್ವಯಿಸುತ್ತಾ, ಆದರೆ ಸಾಧ್ಯವಿರುವಲ್ಲೆಲ್ಲಾ ಕರುಣೆಯನ್ನು ತೋರಿಸುತ್ತಾ, ಯೆಹೋವನು ನ್ಯಾಯಸ್ಥಾಪಕರಿಗಾಗಿ ಮಾದರಿಯನ್ನು ಸ್ಥಾಪಿಸಿದನು. ವ್ಯಭಿಚಾರ ಮತ್ತು ಕೊಲೆಯನ್ನು ನಡಿಸಿದ್ದ ರಾಜ ದಾವೀದನಿಗೆ ಕರುಣೆಯು ತೋರಿಸಲ್ಪಟ್ಟಿತು. ಅವನು ಶಿಕ್ಷಿಸಲ್ಪಡದೆ ಹೋದನೆಂಬುದು ಅದರರ್ಥವಲ್ಲ, ಏಕೆಂದರೆ ಯೆಹೋವನು ಅವನನ್ನು ಅವನ ಪಾಪದಿಂದ ವಿಕಸಿಸುವ ಭೀಕರ ಪರಿಣಾಮಗಳಿಂದ ರಕ್ಷಿಸಲಿಲ್ಲ. ಆದರೂ, ರಾಜ್ಯದೊಡಂಬಡಿಕೆಯ ಕಾರಣದಿಂದ ಮತ್ತು ದಾವೀದನು ಸ್ವಭಾವತಃ ಒಬ್ಬ ಕರುಣಾಭರಿತ ಮನುಷ್ಯನಾಗಿದ್ದರಿಂದ ಹಾಗೂ ತೀವ್ರವಾದ ಪಶ್ಚಾತ್ತಾಪದ ಹೃದಯ ಮನೋಭಾವವನ್ನು ಹೊಂದಿದ್ದರಿಂದ, ಅವನನ್ನು ಮರಣಕ್ಕೆ ಒಳಪಡಿಸಲಿಲ್ಲ.—1 ಸಮುವೇಲ 24:4-7; 2 ಸಮುವೇಲ 7:16; ಕೀರ್ತನೆ 51:1-4; ಯಾಕೋಬ 2:13.
9. ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರೀತಿಯು ಯಾವ ಪಾತ್ರವನ್ನು ವಹಿಸಿತು?
9 ಇದಕ್ಕೆ ಕೂಡಿಸಿ, ಮೋಶೆಯ ಧರ್ಮಶಾಸ್ತ್ರವು ಪ್ರೀತಿಯನ್ನು ಒತ್ತಿಹೇಳಿತು. ಇಂದಿನ ರಾಷ್ಟ್ರಗಳಲ್ಲಿ ಒಂದು ಜನಾಂಗವು, ವಾಸ್ತವವಾಗಿ ಪ್ರೀತಿಯನ್ನು ಅಗತ್ಯಪಡಿಸುವ ಒಂದು ನಿಯಮಾವಳಿಯನ್ನು ಹೊಂದಿರುವುದನ್ನು ಕಲ್ಪಿಸಿಕೊಳ್ಳಿರಿ! ಹೀಗೆ, ಮೋಶೆಯ ಧರ್ಮಶಾಸ್ತ್ರವು ಕೊಲೆಮಾಡುವುದನ್ನು ನಿಷೇಧಿಸಿತು ಮಾತ್ರವಲ್ಲದೆ, ಅದು ಆಜ್ಞಾಪಿಸಿದ್ದು: “ನೀವು ನಿಮ್ಮ ಸಂಗಡಿಗನನ್ನು ನಿಮ್ಮಂತೆಯೇ ಪ್ರೀತಿಸಬೇಕು.” (ಯಾಜಕಕಾಂಡ 19:18, NW) ಅದು ವಿದೇಶೀಯರ ಕುರಿತಾದ ಅನ್ಯಾಯದ ಉಪಚಾರವನ್ನು ನಿಷೇಧಿಸಿತು ಮಾತ್ರವಲ್ಲದೆ, ಅದು ಆಜ್ಞಾಪಿಸಿದ್ದು: “ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು, ಏಕೆಂದರೆ ನೀವು ಐಗುಪ್ತ ದೇಶದಲ್ಲಿ ವಿದೇಶೀ ನಿವಾಸಿಗಳಾದಿರಿ.” (ಯಾಜಕಕಾಂಡ 19:34, NW) ಅದು ವ್ಯಭಿಚಾರವನ್ನು ಕಾನೂನುಬಾಹಿರವನ್ನಾಗಿ ಮಾಡಿತಲ್ಲದೆ, ತನ್ನ ಸ್ವಂತ ಹೆಂಡತಿಯನ್ನು ಸಂತೋಷಪಡಿಸುವಂತೆ ಅದು ಗಂಡನಿಗೆ ಆಜ್ಞೆಯನ್ನಿತ್ತಿತು! (ಧರ್ಮೋಪದೇಶಕಾಂಡ 24:5) ಧರ್ಮೋಪದೇಶಕಾಂಡ ಪುಸ್ತಕವೊಂದರಲ್ಲಿಯೇ, ಪ್ರೀತಿಯ ಗುಣವನ್ನು ಸೂಚಿಸುತ್ತಿರುವ ಹೀಬ್ರು ಶಬ್ದಗಳು, ಸುಮಾರು 20 ಬಾರಿ ಉಪಯೋಗಿಸಲ್ಪಟ್ಟಿವೆ. ಯೆಹೋವನು ಇಸ್ರಾಯೇಲ್ಯರಿಗೆ ತನ್ನ ಸ್ವಂತ ಪ್ರೀತಿಯ ಕುರಿತಾಗಿ ಆಶ್ವಾಸನೆಯನ್ನಿತ್ತನು—ಗತಸಮಯದಲ್ಲಿ, ಪ್ರಸ್ತುತದಲ್ಲಿ, ಮತ್ತು ಭವಿಷ್ಯತ್ತಿನಲ್ಲಿ. (ಧರ್ಮೋಪದೇಶಕಾಂಡ 4:37; 7:12-14) ನಿಜವಾಗಿಯೂ, ಮೋಶೆಯ ಧರ್ಮಶಾಸ್ತ್ರದ ಅತ್ಯಂತ ಮಹಾನ್ ಆಜ್ಞೆಯು ಹೀಗಿತ್ತು: “ನೀವು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣ ಹೃದಯದಿಂದಲೂ ನಿಮ್ಮ ಪೂರ್ಣ ಪ್ರಾಣದಿಂದಲೂ ನಿಮ್ಮ ಪೂರ್ಣ ಜೀವಶಕ್ತಿಯಿಂದಲೂ ಪ್ರೀತಿಸಬೇಕು.” (ಧರ್ಮೋಪದೇಶಕಾಂಡ 6:5, NW) ಒಬ್ಬನ ನೆರೆಯವನನ್ನು ಪ್ರೀತಿಸುವ ಆಜ್ಞೆಯೊಂದಿಗೆ, ಈ ಆಜ್ಞೆಯ ಮೇಲೆ ಇಡೀ ಧರ್ಮಶಾಸ್ತ್ರವು ಆಧಾರಿತವಾಗಿದೆಯೆಂದು ಯೇಸು ಹೇಳಿದನು. (ಯಾಜಕಕಾಂಡ 19:18; ಮತ್ತಾಯ 22:37-40) ಕೀರ್ತನೆಗಾರನು ಹೀಗೆ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.
ಧರ್ಮಶಾಸ್ತ್ರದ ದುರ್ವಿನಿಯೋಗ
10. ಸಾಮಾನ್ಯವಾಗಿ ಯೆಹೂದ್ಯರು, ಮೋಶೆಯ ಧರ್ಮಶಾಸ್ತ್ರವನ್ನು ಹೇಗೆ ಪರಿಗಣಿಸಿದರು?
10 ಹಾಗಾದರೆ, ಇಸ್ರಾಯೇಲ್, ಮೋಶೆಯ ಧರ್ಮಶಾಸ್ತ್ರಕ್ಕಾಗಿರುವ ಗಣ್ಯತೆಯಲ್ಲಿ ಬಹುಮಟ್ಟಿಗೆ ಕೊರತೆಯುಳ್ಳದ್ದಾಗಿ ಪರಿಣಮಿಸಿದ್ದು ಎಷ್ಟು ದುರಂತಮಯ! ಆ ಜನರು ಧರ್ಮಶಾಸ್ತ್ರಕ್ಕೆ ಅವಿಧೇಯರಾದರು, ಅದನ್ನು ಅಲಕ್ಷಿಸಿದರು, ಅಥವಾ ಅದರ ಕುರಿತಾಗಿ ಮರೆತುಬಿಟ್ಟರು. ಅವರು ಬೇರೆ ಜನಾಂಗಗಳ ಅಸಹ್ಯಕರವಾದ ಧಾರ್ಮಿಕ ಆಚರಣೆಗಳಿಂದ ಶುದ್ಧಾರಾಧನೆಯನ್ನು ಮಲಿನಗೊಳಿಸಿದರು. (2 ಅರಸು 17:16, 17; ಕೀರ್ತನೆ 106:13, 35-38) ಮತ್ತು ಇನ್ನಿತರ ವಿಧಗಳಲ್ಲಿಯೂ ಅವರು ಧರ್ಮಶಾಸ್ತ್ರಕ್ಕೆ ದ್ರೋಹಗೈದರು.
11, 12. (ಎ) ಎಜ್ರನ ದಿನಗಳ ಬಳಿಕ, ಧಾರ್ಮಿಕ ಮುಖಂಡರ ಗುಂಪುಗಳು ಹೇಗೆ ಹಾನಿಯನ್ನು ಉಂಟುಮಾಡಿದವು? (ರೇಖಾಚೌಕವನ್ನು ನೋಡಿರಿ.) (ಬಿ) ಪುರಾತನ ರಬ್ಬಿಗಳಿಗೆ, ‘ಧರ್ಮಶಾಸ್ತ್ರದ ಸುತ್ತಲೂ ಒಂದು ಬೇಲಿಯನ್ನು ನಿರ್ಮಿಸುವುದು’ ಏಕೆ ಅಗತ್ಯವೆಂದೆನಿಸಿತು?
11 ಧರ್ಮಶಾಸ್ತ್ರಕ್ಕೆ ಮಾಡಲ್ಪಟ್ಟ ಅತ್ಯಂತ ಕೆಟ್ಟ ಹಾನಿಗಳಲ್ಲಿ ಕೆಲವು, ಅದನ್ನು ಕಲಿಸುತ್ತಿದ್ದೇವೆ ಮತ್ತು ಸಂರಕ್ಷಿಸುತ್ತಿದ್ದೇವೆ ಎಂಬುದಾಗಿ ಸಮರ್ಥಿಸಿದಂತಹ ಜನರಿಂದಲೇ ನಡೆಸಲ್ಪಟ್ಟವು. ಸಾ.ಶ.ಪೂ. ಐದನೆಯ ಶತಮಾನದ ನಂಬಿಗಸ್ತ ಶಾಸ್ತ್ರಿಯಾದ ಎಜ್ರನ ಜೀವಮಾನಕಾಲದ ಬಳಿಕ, ಇದು ಸಂಭವಿಸಿತು. ಬೇರೆ ಜನಾಂಗಗಳ ಭ್ರಷ್ಟಕರ ಪ್ರಭಾವಗಳ ವಿರುದ್ಧವಾಗಿ ಎಜ್ರನು ಬಹಳವಾಗಿ ಹೋರಾಡಿದನು ಮತ್ತು ಧರ್ಮಶಾಸ್ತ್ರದ ವಾಚನ ಮತ್ತು ಕಲಿಸುವಿಕೆಯನ್ನು ಒತ್ತಿಹೇಳಿದನು. (ಎಜ್ರ 7:10; ನೆಹೆಮೀಯ 8:5-8) ಧರ್ಮಶಾಸ್ತ್ರದ ಕೆಲವು ಬೋಧಕರು, ತಾವು ಎಜ್ರನ ಹೆಜ್ಜೆಜಾಡುಗಳನ್ನು ಅನುಸರಿಸುತ್ತಿದ್ದೇವೆಂದು ಪ್ರತಿಪಾದಿಸುತ್ತಾ, ಯಾವುದು “ಮಹಾ ಸಭಾಮಂದಿರ” ಎಂದು ಹೆಸರಿಸಲ್ಪಟ್ಟಿತೊ ಅದನ್ನು ರೂಪಿಸಿದರು. ಅದರ ಹೇಳಿಕೆಗಳ ನಡುವೆ ಈ ಆದೇಶವಿತ್ತು: “ಧರ್ಮಶಾಸ್ತ್ರದ ಸುತ್ತಲೂ ಒಂದು ಬೇಲಿಯನ್ನು ನಿರ್ಮಿಸಿರಿ.” ಧರ್ಮಶಾಸ್ತ್ರವು ಒಂದು ಅಮೂಲ್ಯವಾದ ತೋಟದಂತಿತ್ತೆಂದು ಈ ಬೋಧಕರು ತರ್ಕಿಸಿದರು. ಅದರ ನಿಯಮಗಳನ್ನು ಉಲ್ಲಂಘಿಸುತ್ತಾ, ಯಾರೊಬ್ಬರೂ ಈ ತೋಟದಲ್ಲಿ ಅತಿಕ್ರಮ ಪ್ರವೇಶಮಾಡಬಾರದೆಂಬ ಕಾರಣದಿಂದ, ಲಿಖಿತ ಧರ್ಮಶಾಸ್ತ್ರವನ್ನು ಉಲ್ಲಂಘಿಸುವುದರಿಂದ ಜನರನ್ನು ತಡೆಗಟ್ಟಲಿಕ್ಕಾಗಿ, ಅವರು ಇನ್ನೂ ಹೆಚ್ಚಿನ ನಿಯಮಗಳನ್ನು, “ಮೌಖಿಕ ನಿಯಮ”ಗಳನ್ನು ರಚಿಸಿದರು.
12 ಈ ರೀತಿಯ ಅನಿಸಿಕೆಯುಳ್ಳವರಾಗಿದ್ದುದರಲ್ಲಿ ಯೆಹೂದಿ ಮುಖಂಡರು ನ್ಯಾಯವಂತರಾಗಿದ್ದರೆಂದು ಕೆಲವರು ವಾದಿಸಬಹುದು. ಎಜ್ರನ ದಿನಗಳ ಬಳಿಕ, ಯೆಹೂದ್ಯರು ವಿದೇಶೀ ಶಕ್ತಿಗಳ—ವಿಶೇಷವಾಗಿ ಗ್ರೀಸ್—ಪ್ರಭಾವದೊಳಗೆ ಬಂದರು. ಗ್ರೀಕ್ ತತ್ವಜ್ಞಾನ ಮತ್ತು ಸಂಸ್ಕೃತಿಯ ಪ್ರಭಾವವನ್ನು ಪ್ರತಿಭಟಿಸಲಿಕ್ಕಾಗಿ, ಯೆಹೂದ್ಯರ ನಡುವೆ ಧಾರ್ಮಿಕ ಮುಖಂಡರ ಗುಂಪುಗಳು ಎದ್ದುಬಂದವು. (ಪುಟ 10ರಲ್ಲಿರುವ ರೇಖಾಚೌಕವನ್ನು ನೋಡಿರಿ.) ಸಕಾಲದಲ್ಲಿ ಈ ಗುಂಪುಗಳಲ್ಲಿ ಕೆಲವರು ಧರ್ಮಶಾಸ್ತ್ರದ ಬೋಧಕರೋಪಾದಿ ಲೇವ್ಯ ಯಾಜಕತ್ವಕ್ಕೆ ಸಮನಾಗಿ ಅದನ್ನು ಅತಿಶಯಿಸಿದರು. (ಹೋಲಿಸಿರಿ ಮಲಾಕಿಯ 2:7.) ಸಾ.ಶ.ಪೂ. 200ರೊಳಗೆ, ಮೌಖಿಕ ನಿಯಮವು, ಯೆಹೂದಿ ಜೀವಿತವನ್ನು ಪ್ರಭಾವಿಸಲಾರಂಭಿಸಿತ್ತು. ಆರಂಭದಲ್ಲಿ ಈ ನಿಯಮಗಳನ್ನು, ಅವು ಲಿಖಿತ ಧರ್ಮಶಾಸ್ತ್ರಕ್ಕೆ ಸಮಾನವಾಗಿ ಪರಿಗಣಿಸಲ್ಪಡದ ಹಾಗೆ, ಬರೆದಿಡಬಾರದಿತ್ತು. ಆದರೆ ಕ್ರಮೇಣವಾಗಿ, ಮಾನವ ಆಲೋಚನೆಯು ದೈವಿಕ ಆಲೋಚನೆಗಿಂತ ಮುಂದಾಗಿಡಲ್ಪಟ್ಟಿತು, ಹೀಗೆ ಕಟ್ಟಕಡೆಗೆ ಈ “ಬೇಲಿ”ಯು, ನಿಜವಾಗಿಯೂ ಅದು ಸಂರಕ್ಷಿಸಬೇಕಾಗಿದ್ದಂತಹ “ತೋಟ”ಕ್ಕೇ ಹಾನಿಯನ್ನುಂಟುಮಾಡಿತು.
ಫರಿಸಾಯವಾದದ ಮಾಲಿನ್ಯ
13. ಅನೇಕ ನಿಬಂಧನೆಗಳನ್ನು ಮಾಡುವುದನ್ನು, ಕೆಲವು ಯೆಹೂದಿ ಧಾರ್ಮಿಕ ಮುಖಂಡರು ಹೇಗೆ ಪ್ರಮಾಣಪೂರ್ವಕವಾಗಿ ಸಮರ್ಥಿಸಿದರು?
13 ಟೋರಾ, ಅಥವಾ ಮೋಶೆಯ ಧರ್ಮಶಾಸ್ತ್ರವು ಪರಿಪೂರ್ಣವಾಗಿದ್ದುದರಿಂದ, ಏಳಬಹುದಾದ ಪ್ರತಿಯೊಂದು ಪ್ರಶ್ನೆಗೆ ಒಂದು ಉತ್ತರವನ್ನು ಅದು ಒಳಗೊಂಡಿರಲೇಬೇಕೆಂದು ರಬ್ಬಿಗಳು ತರ್ಕಿಸಿದರು. ಈ ಕಲ್ಪನೆಯು ನಿಜವಾಗಿಯೂ ಪೂಜ್ಯಭಾವನೆಯದ್ದಾಗಿರಲಿಲ್ಲ. ವಾಸ್ತವವಾಗಿ, ಇದು ರಬ್ಬಿಗಳಿಗೆ ಜಾಣತನದ ಎಲ್ಲಾ ವಾದಾಂಶ—ಕೆಲವು ವೈಯಕ್ತಿಕ, ಇನ್ನು ಕೆಲವು ಕ್ಷುಲ್ಲಕ—ಗಳಲ್ಲಿ, ನಿಯಮಗಳ ಆಧಾರವು ದೇವರ ವಾಕ್ಯವೆಂದು ತೋರಿಬರುವಂತೆ ಮಾನವ ತರ್ಕವನ್ನು ಉಪಯೋಗಿಸಲು ಸ್ವಾತಂತ್ರ್ಯವನ್ನು ಕೊಟ್ಟಿತು.
14. (ಎ) ಯೆಹೂದಿ ಧಾರ್ಮಿಕ ಮುಖಂಡರು, ಜನಾಂಗಗಳಿಂದ ಪ್ರತ್ಯೇಕವಾಗುವುದರ ಕುರಿತಾದ ಶಾಸ್ತ್ರೀಯ ನೀತಿಬೋಧೆಯನ್ನು, ಅಶಾಸ್ತ್ರೀಯವಾದ ವೈಪರೀತ್ಯಕ್ಕೆ ಹೇಗೆ ವಿಸ್ತರಿಸಿದರು? (ಬಿ) ಯೆಹೂದಿ ಜನರನ್ನು ವಿಧರ್ಮಿ ಪ್ರಭಾವಗಳಿಂದ ಸಂರಕ್ಷಿಸುವುದರಲ್ಲಿ, ರಬ್ಬಿಸಂಬಂಧಿತ ನಿಬಂಧನೆಗಳು ವಿಫಲಗೊಂಡವೆಂಬುದನ್ನು ಯಾವುದು ತೋರಿಸುತ್ತದೆ?
14 ಪದೇ ಪದೇ ಧಾರ್ಮಿಕ ಮುಖಂಡರು ಶಾಸ್ತ್ರೀಯ ನೀತಿಬೋಧೆಗಳನ್ನು ಪರಿಗಣಿಸಿ, ಅವುಗಳನ್ನು ವೈಪರೀತ್ಯಗಳಿಗೆ ವಿಸ್ತೃತಗೊಳಿಸಿದರು. ದೃಷ್ಟಾಂತಕ್ಕಾಗಿ, ಮೋಶೆಯ ಧರ್ಮಶಾಸ್ತ್ರವು ಜನಾಂಗಗಳಿಂದ ಪ್ರತ್ಯೇಕತೆಯನ್ನು ಪ್ರವರ್ಧಿಸಿತಾದರೂ, ರಬ್ಬಿಗಳು ಯೆಹೂದ್ಯೇತರವಾದ ಪ್ರತಿಯೊಂದಕ್ಕೂ ಒಂದು ರೀತಿಯ ಅವಿಚಾರಪೂರ್ವಕವಾದ ಅವಹೇಳನವನ್ನು ಸಾರಿದರು. ಅನ್ಯರು “ಪಶುಗಮನಕ್ಕೆ ಸಂಶಯಾಸ್ಪದ”ರಾಗಿದ್ದುದರಿಂದ, ಯೆಹೂದ್ಯನೊಬ್ಬನು ಅನ್ಯನೊಬ್ಬನ ಛತ್ರವೊಂದರಲ್ಲಿ ತನ್ನ ದನಕರುಗಳನ್ನು ಬಿಡಬಾರದೆಂದು ಅವರು ಕಲಿಸಿದರು. ಯೆಹೂದಿ ಸ್ತ್ರೀಯೊಬ್ಬಳು, ಜನ್ಮನೀಡುತ್ತಿರುವ ಅನ್ಯ ಸ್ತ್ರೀಯೊಬ್ಬಳಿಗೆ ಸಹಾಯ ಮಾಡಲು ಅನುಮತಿಸಲ್ಪಟ್ಟಿರಲಿಲ್ಲ, ಏಕೆಂದರೆ ಹೀಗೆ ಮಾಡುವ ಮೂಲಕ ಅವಳು “ವಿಗ್ರಹಾರಾಧನೆಗಾಗಿ ಒಂದು ಮಗುವನ್ನು ಹಡೆಯಲು ಸಹಾಯ ಮಾಡು”ತ್ತಿರುವಳು. ರಬ್ಬಿಗಳು ಗ್ರೀಕ್ ಅಂಗಸಾಧನಾ ಶಾಲೆಗಳ ಕುರಿತಾಗಿ ಸೂಕ್ತವಾಗಿ ಸಂದೇಹಾಸ್ಪದರಾಗಿದ್ದುದರಿಂದ, ಅವರು ಎಲ್ಲಾ ರೀತಿಯ ಅಂಗಸಾಧನೆಯ ವ್ಯಾಯಾಮಗಳನ್ನು ನಿಷೇಧಿಸಿದರು. ಇದೆಲ್ಲವೂ ಯೆಹೂದ್ಯರನ್ನು ಅನ್ಯ ನಂಬಿಕೆಗಳಿಂದ ರಕ್ಷಿಸಲು ಸಹಾಯ ಮಾಡಲಿಲ್ಲವೆಂದು ಇತಿಹಾಸವು ರುಜುಪಡಿಸುತ್ತದೆ. ವಾಸ್ತವದಲ್ಲಿ, ಸ್ವತಃ ಫರಿಸಾಯರೇ, ಪ್ರಾಣದ ಅಮರತ್ವದ ಕುರಿತಾದ ವಿಧರ್ಮಿ ಗ್ರೀಕ್ ಸಿದ್ಧಾಂತವನ್ನು ಕಲಿಸಲಾರಂಭಿಸಿದರು!—ಯೆಹೆಜ್ಕೇಲ 18:4.
15. ಯೆಹೂದಿ ಧಾರ್ಮಿಕ ಮುಖಂಡರು, ಶುದ್ಧೀಕರಣ ಮತ್ತು ಅಗಮ್ಯಗಮನದ ಕುರಿತಾದ ನಿಯಮಗಳಿಗೆ ಹೇಗೆ ಅಪಾರ್ಥವನ್ನು ಕಲ್ಪಿಸಿದರು?
15 ಫರಿಸಾಯರು ಶುದ್ಧೀಕರಣದ ನಿಯಮಗಳಿಗೆ ಅಪಾರ್ಥವನ್ನೂ ಕಲ್ಪಿಸಿದರು. ಸಂದರ್ಭವು ಕೊಡಲ್ಪಟ್ಟದ್ದಾದರೆ, ಫರಿಸಾಯರು ಸೂರ್ಯನನ್ನೇ ಶುದ್ಧೀಕರಿಸುತ್ತಿದ್ದರೆಂದು ಹೇಳಲಾಗಿತ್ತು. “ದೇಹ ಬಾಧೆ ತೀರಿಸುವುದಕ್ಕೆ ಹೋಗುವುದರಲ್ಲಿ” ತಡಮಾಡುವುದು, ಒಬ್ಬ ಮನುಷ್ಯನನ್ನು ಹೊಲೆಮಾಡುತ್ತದೆಂಬುದನ್ನು ಅವರ ನಿಯಮವು ಒಳಗೊಂಡಿತು! ಯಾವ ಕೈಯನ್ನು ಮೊದಲು ತೊಳೆದುಕೊಳ್ಳಬೇಕು ಮತ್ತು ಹೇಗೆ ತೊಳೆದುಕೊಳ್ಳಬೇಕು ಎಂಬ ನಿಬಂಧನೆಗಳೊಂದಿಗೆ, ಕೈ ತೊಳೆದುಕೊಳ್ಳುವುದು ಒಂದು ಜಟಿಲ ಸಂಸ್ಕಾರವಾಗಿ ಪರಿಣಮಿಸಿತು. ವಿಶೇಷವಾಗಿ ಸ್ತ್ರೀಯರು ಅಶುದ್ಧರೆಂದು ಪರಿಗಣಿಸಲ್ಪಟ್ಟಿದ್ದರು. ಯಾವುದೇ ಶಾರೀರಿಕ ಸಂಬಂಧ (ವಾಸ್ತವದಲ್ಲಿ ಅಗಮ್ಯಗಮನದ ವಿರುದ್ಧವಾದ ಒಂದು ನಿಯಮ)ದ “ಸಹವಾಸ ಮಾಡ”ಬಾರದೆಂಬ ಶಾಸ್ತ್ರೀಯ ಆಜ್ಞೆಯ ಆಧಾರದ ಮೇಲೆ, ಗಂಡನೊಬ್ಬನು ತನ್ನ ಹೆಂಡತಿಯ ಹಿಂದೆ ನಡೆಯಬಾರದು ಅಥವಾ ಅವನು ವ್ಯಾಪಾರದ ಚೌಕದಲ್ಲಿ ಅವಳೊಂದಿಗೆ ಸಂಭಾಷಿಸಬಾರದು ಎಂಬ ನಿಯಮವನ್ನು ರಬ್ಬಿಗಳು ವಿಧಿಸಿದ್ದರು.—ಯಾಜಕಕಾಂಡ 18:6.
16, 17. ಒಂದು ಸಾಪ್ತಾಹಿಕ ಸಬ್ಬತ್ತನ್ನು ಆಚರಿಸುವ ಆಜ್ಞೆಯ ಕುರಿತಾಗಿ ಮೌಖಿಕ ನಿಯಮವು ಹೇಗೆ ವಿಸ್ತಾರಗೊಂಡಿತು, ಮತ್ತು ಯಾವ ಫಲಿತಾಂಶದೊಂದಿಗೆ?
16 ಸಬ್ಬತ್ ನಿಯಮದ ಕುರಿತಾಗಿ ಮೌಖಿಕ ನಿಯಮವು ಮಾಡಿದಂತಹ ಆತ್ಮಿಕ ವಿಕಟಾನುಕರಣವು ವಿಶೇಷವಾಗಿ ಕುಪ್ರಸಿದ್ಧವಾಗಿದೆ. ದೇವರು ಇಸ್ರಾಯೇಲ್ಯರಿಗೆ ಒಂದು ಸರಳವಾದ ಆಜ್ಞೆಯನ್ನು ಕೊಟ್ಟನು: ವಾರದ ಏಳನೆಯ ದಿನದಂದು ಯಾವುದೇ ಕೆಲಸವನ್ನು ಮಾಡಬೇಡಿರಿ. (ವಿಮೋಚನಕಾಂಡ 20:8-11) ಹಾಗಿದ್ದರೂ, ಮೌಖಿಕ ನಿಯಮವು, ಒಂದು ಗಂಟನ್ನು ಕಟ್ಟುವುದು ಅಥವಾ ಬಿಚ್ಚುವುದು, ಎರಡು ಹೊಲಿಗೆಗಳನ್ನು ಹೊಲಿಯುವುದು, ಎರಡು ಹೀಬ್ರು ಅಕ್ಷರಗಳನ್ನು ಬರೆಯುವುದು, ಇತ್ಯಾದಿಗಳನ್ನು ಒಳಗೊಂಡು, ಸುಮಾರು 39 ವಿಭಿನ್ನ ವಿಧಗಳ ನಿಷೇಧಿತ ಕಾರ್ಯವನ್ನು ಕೂಡಿಸುವ ಮೂಲಕ, ಆ ನಿಯಮವನ್ನು ವಿಕಸಿಸಿತು. ತದನಂತರ ಈ ವಿಧಗಳಲ್ಲಿ ಪ್ರತಿಯೊಂದು ವಿಧವು ಇನ್ನೂ ಹೆಚ್ಚಿನ ಅಂತ್ಯರಹಿತ ನಿಬಂಧನೆಗಳನ್ನು ಅಗತ್ಯಪಡಿಸಿತು. ಯಾವ ಗಂಟುಗಳು ನಿಷೇಧಿಸಲ್ಪಟ್ಟಿವೆ ಮತ್ತು ಯಾವುವು ಅನುಮತಿಸಲ್ಪಟ್ಟಿವೆ? ಮೌಖಿಕ ನಿಯಮವು ಈ ಪ್ರಶ್ನೆಗಳಿಗೆ ಅವಿಚಾರಿತ ಕಟ್ಟುಪಾಡುಗಳಿಂದ ಉತ್ತರಿಸಿತು. ವಾಸಿಮಾಡುವಿಕೆಯು ಒಂದು ನಿಷೇಧಿತ ಕೆಲಸವಾಗಿ ಪರಿಗಣಿಸಲ್ಪಟ್ಟಿತು. ಉದಾಹರಣೆಗಾಗಿ, ಸಬ್ಬತ್ ದಿನದಲ್ಲಿ ಮುರಿದ ಅಂಗವೊಂದನ್ನು ಸರಿಪಡಿಸುವುದು ನಿಷೇಧಿಸಲ್ಪಟ್ಟಿತ್ತು. ಹಲ್ಲುನೋವು ಇರುವ ಮನುಷ್ಯನೊಬ್ಬನು, ತನ್ನ ಆಹಾರವನ್ನು ರುಚಿಗೊಳಿಸಲಿಕ್ಕಾಗಿ ಸಿರ್ಕವನ್ನು ಉಪಯೋಗಿಸಸಾಧ್ಯವಿತ್ತು, ಆದರೆ ಅವನು ತನ್ನ ಹಲ್ಲುಗಳ ಮೂಲಕ ಈ ಸಿರ್ಕವನ್ನು ಹೀರಿಕೊಳ್ಳಬಾರದಾಗಿತ್ತು. ಅದು ಅವನ ಹಲ್ಲನ್ನು ವಾಸಿಮಾಡಬಹುದು!
17 ಹೀಗೆ ನೂರಾರು ಮಾನವ ನಿರ್ಮಿತ ನಿಬಂಧನೆಗಳ ಕೆಳಗೆ ಹೂಣಲ್ಪಟ್ಟಿದ್ದು, ಅಧಿಕಾಂಶ ಯೆಹೂದ್ಯರ ವಿಷಯದಲ್ಲಿಯಾದರೋ, ಸಬ್ಬತ್ ನಿಯಮವು ತನ್ನ ಆತ್ಮಿಕ ಅರ್ಥವನ್ನು ಕಳೆದುಕೊಂಡಿತು. “ಸಬ್ಬತ್ದಿನಕ್ಕೆ ಒಡೆಯ”ನಾದ ಯೇಸು ಕ್ರಿಸ್ತನು, ಸಬ್ಬತ್ತಿನಂದು ಪ್ರೇಕ್ಷಣೀಯವಾದ, ಹೃತ್ಪೂರ್ವಕವಾದ ಅದ್ಭುತಗಳನ್ನು ಮಾಡಿದಾಗ, ಶಾಸ್ತ್ರಿಗಳೂ ಫರಿಸಾಯರೂ ಅಚಲರಾಗಿದ್ದರು. ಅವನು ತಮ್ಮ ಕಟ್ಟುಪಾಡುಗಳನ್ನು ಅಲಕ್ಷಿಸುತ್ತಿರುವಂತೆ ತೋರಿದ್ದನ್ನು ಮಾತ್ರ ಅವರು ಲಕ್ಷಿಸಿದರು.—ಮತ್ತಾಯ 12:8, 10-14.
ಫರಿಸಾಯರ ತಪ್ಪುಗಳಿಂದ ಪಾಠವನ್ನು ಕಲಿಯುವುದು
18. ಮೋಶೆಯ ಧರ್ಮಶಾಸ್ತ್ರಕ್ಕೆ ನಿಯಮಗಳನ್ನೂ ಸಂಪ್ರದಾಯಗಳನ್ನೂ ಕೂಡಿಸಿದ್ದರ ಪರಿಣಾಮವು ಏನಾಗಿತ್ತು? ದೃಷ್ಟಾಂತಿಸಿರಿ.
18 ಒಟ್ಟಿನಲ್ಲಿ, ಹೆಚ್ಚಿಗೆ ಕೂಡಿಸಲ್ಪಟ್ಟ ಈ ನಿಯಮಗಳು ಹಾಗೂ ಸಂಪ್ರದಾಯಗಳು, ಹಡಗಿನ ಒಡಲಿಗೆ ಅಂಟಿಕೊಳ್ಳುವ ಚಿಪ್ಪುಜಂತುಗಳಂತೆ, ಮೋಶೆಯ ಧರ್ಮಶಾಸ್ತ್ರಕ್ಕೆ ಭದ್ರವಾಗಿ ಅಂಟಿಕೊಂಡವು ಎಂಬುದಾಗಿ ನಾವು ಹೇಳಬಹುದು. ಈ ಚಿಪ್ಪುಜಂತುಗಳು ಹಡಗಿನ ವೇಗವನ್ನು ನಿಧಾನಗೊಳಿಸುವುದರಿಂದ ಹಾಗೂ ಅದರ ತುಕ್ಕುಅಭೇದ್ಯ ಬಣ್ಣವನ್ನು ಹಾಳುಮಾಡುವುದರಿಂದ, ಹಡಗಿನ ಒಡೆಯನು ತನ್ನ ಹಡಗಿನಿಂದ ಈ ಉಪದ್ರವಕೊಡುವ ಜಂತುಗಳನ್ನು ಕೆರೆದುಹಾಕಲಿಕ್ಕಾಗಿ, ಹೆಚ್ಚು ಸಮಯವನ್ನೂ ಪ್ರಯತ್ನವನ್ನೂ ವ್ಯಯಿಸುತ್ತಾನೆ. ತದ್ರೀತಿಯಲ್ಲಿ, ಮೌಖಿಕ ನಿಯಮಗಳು ಮತ್ತು ಸಂಪ್ರದಾಯಗಳು, ಧರ್ಮಶಾಸ್ತ್ರವನ್ನು ಅತಿ ಕಷ್ಟಕರವಾದದ್ದಾಗಿ ಮಾಡಿ, ಅದನ್ನು ನಾಶಕಾರಿ ದುರ್ವಿನಿಯೋಗಕ್ಕೆ ಒಡ್ಡಿದವು. ಆದರೂ, ಅಂತಹ ಬಾಹ್ಯ ನಿಯಮಗಳನ್ನು ತೆಗೆದುಹಾಕುವುದಕ್ಕೆ ಬದಲಾಗಿ, ರಬ್ಬಿಗಳು ಅವುಗಳಿಗೆ ಹೆಚ್ಚನ್ನು ಕೂಡಿಸುತ್ತಾ ಇದ್ದರು. ಮೆಸ್ಸೀಯನು ಧರ್ಮಶಾಸ್ತ್ರವನ್ನು ನೆರವೇರಿಸಲಿಕ್ಕಾಗಿ ಬಂದ ಸಮಯದಷ್ಟರೊಳಗೆ, “ಚಿಪ್ಪುಜಂತುಗ”ಳಿಂದ ಈ “ಹಡಗಿ”ಗೆ ಎಷ್ಟು ಹೊರಪೊರೆ ಕಟ್ಟಲ್ಪಟ್ಟಿತ್ತೆಂದರೆ, ಅದು ಸಾಕಷ್ಟು ತೇಲುತ್ತಿರಲಿಲ್ಲ! (ಹೋಲಿಸಿರಿ ಜ್ಞಾನೋಕ್ತಿ 16:25.) ಧರ್ಮಶಾಸ್ತ್ರದ ಒಡಂಬಡಿಕೆಯನ್ನು ರಕ್ಷಿಸುವುದಕ್ಕೆ ಬದಲಾಗಿ, ಈ ಧಾರ್ಮಿಕ ಮುಖಂಡರು ಅದನ್ನು ಉಲಂಘಿಸುವ ತಪ್ಪನ್ನು ಮಾಡಿದರು. ಆದರೂ, ನಿಬಂಧನೆಗಳ ಅವರ “ಬೇಲಿ”ಯು ಏಕೆ ವಿಫಲಗೊಂಡಿತು?
19. (ಎ) “ಧರ್ಮಶಾಸ್ತ್ರದ ಸುತ್ತಲಿನ ಬೇಲಿ”ಯು ಏಕೆ ವಿಫಲಗೊಂಡಿತು? (ಬಿ) ಯೆಹೂದಿ ಧಾರ್ಮಿಕ ಮುಖಂಡರು ಯಥಾರ್ಥವಾದ ನಂಬಿಕೆಯ ಕೊರತೆಯುಳ್ಳವರಾಗಿದ್ದರೆಂಬುದನ್ನು ಯಾವುದು ತೋರಿಸುತ್ತದೆ?
19 ಯೆಹೂದಿಮತದ ಮುಖಂಡರು, ಭ್ರಷ್ಟತೆಯ ವಿರುದ್ಧವಾದ ಕದನವು ನಿಯಮಪುಸ್ತಕಗಳ ಪುಟಗಳ ಮೇಲಲ್ಲ, ಬದಲಾಗಿ ಹೃದಯದಲ್ಲಿ ಹೋರಾಡಲ್ಪಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲರಾದರು. (ಯೆರೆಮೀಯ 4:14) ವಿಜಯಕ್ಕೆ ಕೀಲಿ ಕೈಯು ಪ್ರೀತಿಯಾಗಿದೆ—ಯೆಹೋವನಿಗಾಗಿ, ಆತನ ನಿಯಮಕ್ಕಾಗಿ ಮತ್ತು ಆತನ ನೀತಿಯ ಮೂಲಸೂತ್ರಗಳಿಗಾಗಿ ಪ್ರೀತಿ. ಅಂತಹ ಪ್ರೀತಿಯು, ಯೆಹೋವನು ದ್ವೇಷಿಸುವಂತಹ ವಿಷಯಗಳಿಗೆ ಅನುರೂಪವಾದ ದ್ವೇಷವನ್ನು ಉತ್ಪಾದಿಸುತ್ತದೆ. (ಕೀರ್ತನೆ 97:10; 119:104) ಹೀಗೆ ಯಾರ ಹೃದಯಗಳು ಪ್ರೀತಿಯಿಂದ ಭರಿತವಾಗಿವೆಯೋ ಅವರು, ಈ ಭ್ರಷ್ಟ ಲೋಕದಲ್ಲಿ ಯೆಹೋವನ ನಿಯಮಗಳಿಗೆ ನಂಬಿಗಸ್ತರಾಗಿ ಉಳಿಯುತ್ತಾರೆ. ಅಂತಹ ಪ್ರೀತಿಯನ್ನು ಪ್ರವರ್ಧಿಸಿ, ಪ್ರೇರಿಸುವಂತೆ, ಜನರಿಗೆ ಕಲಿಸುವ ಮಹಾ ಸುಯೋಗವು ಯೆಹೂದಿ ಧಾರ್ಮಿಕ ಮುಖಂಡರಿಗಿತ್ತು. ಹಾಗೆ ಮಾಡಲು ಅವರು ವಿಫಲರಾದದ್ದೇಕೆ? ಅವರು ನಂಬಿಕೆಯಲ್ಲಿ ಕೊರತೆಯುಳ್ಳವರಾದರು ಎಂಬುದು ಸುವ್ಯಕ್ತ. (ಮತ್ತಾಯ 23:23; NW ಪಾದಟಿಪ್ಪಣಿ) ನಂಬಿಗಸ್ತ ಮಾನವರ ಹೃದಯಗಳಲ್ಲಿ ಕಾರ್ಯನಡಿಸಲಿಕ್ಕಾಗಿರುವ ಯೆಹೋವನ ಆತ್ಮದ ಶಕ್ತಿಯಲ್ಲಿ ಅವರಿಗೆ ನಂಬಿಕೆಯು ಇದ್ದಿರುತ್ತಿದ್ದಲ್ಲಿ, ಇತರರ ಜೀವಿತಗಳ ಕುರಿತಾಗಿ ತಮಗೆ ಕಟ್ಟುನಿಟ್ಟಿನ ನಿಯಂತ್ರಣವನ್ನು ತೆಗೆದುಕೊಳ್ಳುವ ಅಗತ್ಯವಿದೆಯೆಂದು ಅವರು ಭಾವಿಸುತ್ತಿದ್ದಿರಲಿಲ್ಲ. (ಯೆಶಾಯ 59:1; ಯೆಹೆಜ್ಕೇಲ 34:4) ನಂಬಿಕೆಯಲ್ಲಿ ಕೊರತೆಯುಳ್ಳವರಾಗಿದ್ದು, ಅವರು ನಂಬಿಕೆಯನ್ನು ಪ್ರಚೋದಿಸಲಿಲ್ಲ; ಅವರು ಮಾನವ ನಿರ್ಮಿತ ಕಟ್ಟಳೆಗಳಿಂದ ಜನರಿಗೆ ಹೊರೆಯನ್ನು ಹೊರಿಸಿದರು.—ಮತ್ತಾಯ 15:3, 9; 23:4.
20, 21. (ಎ) ಸಂಪ್ರದಾಯಾಭಿಮುಖವಾದ ಮನೋವೃತ್ತಿಯು, ಯೆಹೂದ್ಯಮತದ ಮೇಲೆ ಸಂಪೂರ್ಣವಾಗಿ ಯಾವ ಪರಿಣಾಮವನ್ನು ಬೀರಿತು? (ಬಿ) ಯೆಹೂದ್ಯಮತಕ್ಕೆ ಸಂಭವಿಸಿದ ವಿಷಯಗಳಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
20 ಆ ಯೆಹೂದಿ ಮುಖಂಡರು ಪ್ರೀತಿಯನ್ನು ಪ್ರವರ್ಧಿಸಲಿಲ್ಲ. ಅವರ ಸಂಪ್ರದಾಯಗಳು, ಬಾಹ್ಯಾಚಾರದ ಗೀಳಿನ ಒಂದು ಧರ್ಮವನ್ನು, ಹೊರತೋರಿಕೆ—ಕಪಟಾಚಾರವು ಫಲವತ್ತಾಗಿ ಬೆಳೆಯಲು ಸ್ಥಳ—ಗಾಗಿ ಯಾಂತ್ರಿಕವಾದ ವಿಧೇಯತೆಯಿರುವ ಒಂದು ಧರ್ಮವನ್ನು ಉತ್ಪಾದಿಸಿದವು. (ಮತ್ತಾಯ 23:25-28) ಬೇರೆಯವರಿಗೆ ತೀರ್ಪು ನೀಡಲಿಕ್ಕಾಗಿರುವ ಅವರ ನಿಬಂಧನೆಗಳು ಅಸಂಖ್ಯಾತ ಕಾರಣಗಳನ್ನು ಉತ್ಪಾದಿಸಿದವು. ಹೀಗೆ ಅಹಂಕಾರಿಗಳೂ, ಸರ್ವಾಧಿಕಾರಿಗಳೂ ಆದ ಫರಿಸಾಯರು, ಸ್ವತಃ ಯೇಸು ಕ್ರಿಸ್ತನನ್ನು ಟೀಕಿಸುವುದರಲ್ಲಿ ಪ್ರಮಾಣಪೂರ್ವಕವಾಗಿ ಸಮರ್ಥಿಸಲ್ಪಟ್ಟಿದ್ದೇವೆಂದು ಭಾವಿಸಿಕೊಂಡರು. ಅವರು ಧರ್ಮಶಾಸ್ತ್ರದ ಮೂಲ ಉದ್ದೇಶದ ಮೇಲಿನ ದೃಷ್ಟಿಯನ್ನು ಕಳೆದುಕೊಂಡು, ನಿಜ ಮೆಸ್ಸೀಯನಾದಾತನನ್ನು ತಿರಸ್ಕರಿಸಿದರು. ಫಲಿತಾಂಶವಾಗಿ, ಅವನು ಯೆಹೂದಿ ಜನಾಂಗಕ್ಕೆ ಹೀಗೆ ಹೇಳಬೇಕಾಗಿತ್ತು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”—ಮತ್ತಾಯ 23:38; ಗಲಾತ್ಯ 3:23, 24.
21 ನಮಗಾಗಿ ಯಾವ ಪಾಠವಿದೆ? ಸ್ಪಷ್ಟವಾಗಿ, ಒಂದು ಕಟ್ಟುನಿಟ್ಟಿನ, ಸಂಪ್ರದಾಯಾಭಿಮುಖವಾದ ಮನೋವೃತ್ತಿಯು, ಯೆಹೋವನ ಶುದ್ಧಾರಾಧನೆಯನ್ನು ಪ್ರವರ್ಧಿಸುವುದಿಲ್ಲ! ಆದರೆ ಈ ನಿಬಂಧನೆಗಳು ಪವಿತ್ರ ಶಾಸ್ತ್ರಗಳಲ್ಲಿ ವಿಶಿಷ್ಟವಾಗಿ ವಿಶದಪಡಿಸಲ್ಪಟ್ಟಿರುವ ಹೊರತಾಗಿ, ಇಂದು ಯೆಹೋವನ ಆರಾಧಕರಿಗೆ ಪಾಲಿಸಲು ಯಾವುದೇ ನಿಬಂಧನೆಗಳು ಇಲ್ಲವೇ ಇಲ್ಲವೆಂಬುದನ್ನು ಇದು ಅರ್ಥೈಸುತ್ತದೊ? ಇಲ್ಲ. ಪೂರ್ಣವಾದ ಒಂದು ಉತ್ತರಕ್ಕಾಗಿ, ಯೇಸು ಕ್ರಿಸ್ತನು ಒಂದು ಹೊಸತಾದ ಹಾಗೂ ಹೆಚ್ಚು ಉತ್ತಮವಾದ ನಿಯಮದಿಂದ, ಮೋಶೆಯ ಧರ್ಮಶಾಸ್ತ್ರವನ್ನು ಹೇಗೆ ಪುನರ್ಭರ್ತಿಮಾಡಿದನೆಂಬುದನ್ನು ನಾವು ಮುಂದೆ ಪರಿಗಣಿಸೋಣ.
[ಪಾದಟಿಪ್ಪಣಿ]
a ನಿಶ್ಚಯವಾಗಿ, ಆಧುನಿಕ ಜನಾಂಗಗಳ ಶಾಸನಬದ್ಧ ವ್ಯವಸ್ಥೆಗಳಿಗೆ ಹೋಲಿಕೆಯಲ್ಲಿ ಅದು ಇನ್ನೂ ತೀರ ಚಿಕ್ಕ ಸಂಖ್ಯೆಯಾಗಿದೆ. ಉದಾಹರಣೆಗಾಗಿ, 1990ಗಳ ಆರಂಭದಷ್ಟಕ್ಕೆ, ಅಮೆರಿಕದ ಫೆಡರಲ್ ನಿಯಮಗಳು, 1,25,000 ಪುಟಗಳಿಗಿಂತಲೂ ಹೆಚ್ಚು ಪುಟಗಳನ್ನು ಭರ್ತಿಮಾಡಿದವು; ಇದರೊಂದಿಗೆ ಪ್ರತಿ ವರ್ಷ ಸಾವಿರಾರು ಹೊಸ ನಿಯಮಗಳು ಕೂಡಿಸಲ್ಪಡುತ್ತಿವೆ.
ನೀವು ವಿವರಿಸಬಲ್ಲಿರೊ?
◻ ಸರ್ವ ಸೃಷ್ಟಿಯೂ ದೈವಿಕ ನಿಯಮದಿಂದ ಹೇಗೆ ನಿಯಂತ್ರಿಸಲ್ಪಟ್ಟಿದೆ?
◻ ಮೋಶೆಯ ಧರ್ಮಶಾಸ್ತ್ರದ ಮುಖ್ಯ ಉದ್ದೇಶವು ಯಾವುದಾಗಿತ್ತು?
◻ ಮೋಶೆಯ ಧರ್ಮಶಾಸ್ತ್ರವು, ಕರುಣೆ ಮತ್ತು ಸಹಾನುಭೂತಿಯನ್ನು ಒತ್ತಿಹೇಳಿತೆಂಬುದನ್ನು ಯಾವುದು ತೋರಿಸುತ್ತದೆ?
◻ ಯೆಹೂದಿ ಧಾರ್ಮಿಕ ಮುಖಂಡರು, ಮೋಶೆಯ ಧರ್ಮಶಾಸ್ತ್ರಕ್ಕೆ ಅಸಂಖ್ಯಾತ ನಿಬಂಧನೆಗಳನ್ನು ಏಕೆ ಕೂಡಿಸಿದರು, ಮತ್ತು ಯಾವ ಫಲಿತಾಂಶದೊಂದಿಗೆ?
[ಪುಟ 10 ರಲ್ಲಿರುವ ಚೌಕ]
ಯೆಹೂದಿ ಧಾರ್ಮಿಕ ಮುಖಂಡರು
ಶಾಸ್ತ್ರಿಗಳು: ಅವರು ತಮ್ಮನ್ನು ಎಜ್ರನ ಉತ್ತರಾಧಿಕಾರಿಗಳೋಪಾದಿ, ಮತ್ತು ಧರ್ಮಶಾಸ್ತ್ರದ ನಿರೂಪಕರೋಪಾದಿ ಪರಿಗಣಿಸಿಕೊಂಡರು. ಎ ಹಿಸ್ಟರಿ ಆಫ್ ದ ಜ್ಯೂಸ್ ಎಂಬ ಪುಸ್ತಕಕ್ಕನುಸಾರವಾಗಿ, “ಶಾಸ್ತ್ರಿಗಳೆಲ್ಲರೂ ಉದಾತ್ತ ನೀತಿಯವರಾಗಿರಲಿಲ್ಲ, ಮತ್ತು ನಿಯಮದಿಂದ ಮರೆಯಾದ ಅರ್ಥಗಳನ್ನು ಹೊರಸೆಳೆಯಲಿಕ್ಕಾಗಿ ಅವರು ಮಾಡಿದ ಪ್ರಯತ್ನಗಳು, ಅನೇಕವೇಳೆ ಅರ್ಥಹೀನ ಸೂತ್ರಗಳಾಗಿಯೂ ಮೂರ್ಖ ನಿರ್ಬಂಧಗಳಾಗಿಯೂ ಅವನತಿಗೊಂಡಿದ್ದವು. ಈ ನಿರ್ಬಂಧಗಳು ವಾಡಿಕೆಯಾಗಿ ಕಠಿನಗೊಂಡು, ಬೇಗನೆ ನಿರ್ದಯತೆಯ ಪ್ರಜಾಪೀಡಕವಾಗಿ ಪರಿಣಮಿಸಿದವು.”
ಹಾಸಿಡ್ವಾದ: “ಧರ್ಮಶ್ರದ್ಧೆಯುಳ್ಳವರು” ಅಥವಾ “ಸಂತರು” ಎಂಬುದು ಈ ಹೆಸರಿನ ಅರ್ಥ. ಮೊದಲಾಗಿ ಸಾ.ಶ.ಪೂ. 200ರ ಸುಮಾರಿಗೆ ಒಂದು ವರ್ಗದೋಪಾದಿ ಪ್ರಸ್ತಾಪಿಸಲ್ಪಟ್ಟವರಾಗಿದ್ದು, ಅವರು ರಾಜಕೀಯವಾಗಿ ಪ್ರಬಲರೂ, ಗ್ರೀಕ್ ಪ್ರಭಾವದ ನಿರಂಕುಶಾಧಿಕಾರದ ವಿರುದ್ಧವಾಗಿ ಧರ್ಮಶಾಸ್ತ್ರದ ಶುದ್ಧತೆಯ ಮತಭ್ರಾಂತ ಸಂರಕ್ಷಕರೂ ಆಗಿದ್ದರು. ಹಾಸಿಡ್ವಾದವು ಮೂರು ಗುಂಪುಗಳಾಗಿ ವಿಭಾಗವಾಯಿತು: ಫರಿಸಾಯರು, ಸದ್ದುಕಾಯರು, ಮತ್ತು ಎಸ್ಸೀನರು.
ಫರಿಸಾಯರು: ಈ ಹೆಸರು “ಪ್ರತ್ಯೇಕಿತರಾದವರು” ಅಥವಾ “ಪ್ರತ್ಯೇಕವಾದಿಗಳು” ಎಂಬುದಕ್ಕಾಗಿರುವ ಶಬ್ದಗಳಿಂದ ತೆಗೆದುಕೊಳ್ಳಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುತ್ತಾರೆ. ಅವರು ಅನ್ಯರಿಂದ ಪ್ರತ್ಯೇಕವಾಗಿರಲಿಕ್ಕಾಗಿ ಮಾಡಿದ ತಮ್ಮ ದೃಢ ಪ್ರಯತ್ನದಲ್ಲಿ ಅವರು ವಾಸ್ತವವಾಗಿ ಮತಭ್ರಾಂತರಾಗಿದ್ದರು, ಆದರೆ ಮೌಖಿಕ ನಿಯಮದ ಜಟಿಲತೆಗಳ ಕುರಿತಾಗಿ ಅಜ್ಞಾನಿಗಳಾಗಿದ್ದ, ಸಾಮಾನ್ಯ ಯೆಹೂದಿ ಜನರಿಂದ ತಮ್ಮ ಸಹೋದರತ್ವವು ಪ್ರತ್ಯೇಕವಾದದ್ದೂ, ಅವರಿಗಿಂತ ಉತ್ಕೃಷ್ಟವಾದದ್ದೂ ಆಗಿರುವಂತೆ ನೋಡಿಕೊಂಡರು ಸಹ. ಫರಿಸಾಯರ ಕುರಿತಾಗಿ ಒಬ್ಬ ಇತಿಹಾಸಕಾರನು ಹೇಳಿದ್ದು: “ಸರ್ವಸಾಮಾನ್ಯವಾಗಿ, ಸಂಸ್ಕಾರ ಸಂಬಂಧವಾದ ಆಚರಣೆಗಳ ಅತ್ಯಂತ ಕ್ಷುಲ್ಲಕ ವಿವರಗಳನ್ನು ನಿಯಮಬದ್ಧವನ್ನಾಗಿ ಮಾಡುತ್ತಾ, ಅವುಗಳಿಗೆ ನಿಷ್ಕೃಷ್ಟಾರ್ಥಕೊಟ್ಟು, ಅವರು ಜನರನ್ನು ಮಕ್ಕಳಂತೆ ಉಪಚರಿಸಿದರು.” ಇನ್ನೊಬ್ಬ ವಿದ್ವಾಂಸನು ಹೇಳಿದ್ದು: “ಫರಿಸಾಯವಾದವು, ಎಲ್ಲಾ ಸನ್ನಿವೇಶಗಳೊಂದಿಗೆ ವ್ಯವಹರಿಸುವಂತಹ ಅನೇಕ ನ್ಯಾಯಬದ್ಧ ನಿಬಂಧನೆಗಳನ್ನು ಉತ್ಪಾದಿಸಿತು; ಇದರಿಂದಾಗಿ ಅವರು ಅಲ್ಪ ವಿಚಾರಗಳನ್ನು ಒಂದು ವಾದಾಂಶವಾಗಿ ಮಾಡಿದರು ಮತ್ತು ಪರಿಣಾಮವಾಗಿ ಪ್ರಮುಖ ವಿಚಾರಗಳನ್ನು ಉಪೇಕ್ಷಿಸಿದರು. (ಮತ್ತಾ. 23:23).”
ಸದ್ದುಕಾಯರು: ಕುಲೀನತೆ ಮತ್ತು ಯಾಜಕತ್ವಕ್ಕೆ ನಿಕಟವಾಗಿ ಹೊಸೆದುಕೊಂಡಿದ್ದ ಒಂದು ಗುಂಪು. ಮೌಖಿಕ ನಿಯಮಕ್ಕೆ ಲಿಖಿತ ಧರ್ಮಶಾಸ್ತ್ರದಷ್ಟು ಸಪ್ರಮಾಣತೆಯಿಲ್ಲ ಎಂಬುದಾಗಿ ಹೇಳುತ್ತಾ, ಅವರು ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಅತ್ಯುತ್ಸಾಹದಿಂದ ವಿರೋಧಿಸಿದರು. ಈ ವಾಗ್ವಾದದಲ್ಲಿ ಅವರು ಸೋತುಹೋದರೆಂಬುದು, ಸ್ವತಃ ಮಿಷ್ನದಿಂದಲೇ ಪ್ರದರ್ಶಿಸಲ್ಪಟ್ಟಿದೆ: “[ಲಿಖಿತ] ಧರ್ಮಶಾಸ್ತ್ರದ ಮಾತುಗಳ [ಪಾಲಿಸುವಿಕೆ]ಗಿಂತಲೂ, ಶಾಸ್ತ್ರಿಗಳ ಮಾತುಗಳ [ಪಾಲಿಸುವಿಕೆ]ಗೆ ಹೆಚ್ಚು ಮಹತ್ತಾದ ಕಟ್ಟುನಿಟ್ಟು ಅನ್ವಯವಾಗುತ್ತದೆ.” ಮೌಖಿಕ ನಿಯಮದ ಕುರಿತಾಗಿ ಅಧಿಕ ವ್ಯಾಖ್ಯಾನವನ್ನು ಒಳಗೊಂಡಿರುವ ಟ್ಯಾಲ್ಮುಡ್, ತದನಂತರ ಹೀಗೆ ಹೇಳುವಷ್ಟರ ವರೆಗೆ ಮುಂದುವರಿಯಿತು: “ಶಾಸ್ತ್ರಿಗಳ ಮಾತುಗಳು . . . ಟೋರಾದ ಮಾತುಗಳಿಗಿಂತಲೂ ಹೆಚ್ಚು ಅಮೂಲ್ಯವಾಗಿವೆ.”
ಎಸ್ಸೀನರು: ಪ್ರತ್ಯೇಕಗೊಂಡ ಸಮುದಾಯಗಳಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡ ವಿರಕ್ತರ ಒಂದು ಗುಂಪು. ದಿ ಇಂಟರ್ಪ್ರಿಟರ್ಸ್ ಡಿಕ್ಷನರಿ ಆಫ್ ದ ಬೈಬಲ್ಗನುಸಾರವಾಗಿ, ಎಸ್ಸೀನರು ಫರಿಸಾಯರಿಗಿಂತಲೂ ಹೆಚ್ಚು ವಿಶಿಷ್ಟರಾಗಿದ್ದರು ಮತ್ತು “ಕೆಲವೊಮ್ಮೆ ಅವರು ಫರಿಸಾಯರಿಗಿಂತಲೂ ಹೆಚ್ಚು ಡಾಂಭಿಕರಾಗಿದ್ದಿರಸಾಧ್ಯವಿತ್ತು.”
[ಪುಟ 8 ರಲ್ಲಿರುವ ಚಿತ್ರ]
ಯೋಬನ ಹೆತ್ತವರು ಅವನಿಗೆ, ತಾರಾಗಣಗಳನ್ನು ನಿಯಂತ್ರಿಸುವ ನಿಯಮಗಳ ಕುರಿತಾಗಿ ಕಲಿಸಿದ್ದಿರಬಹುದು