ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
“ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ.”—ಯೋಬ 1:21.
ಕೋಪದಿಂದ ಕೆಂಡಕಾರುತ್ತಿದ್ದ ಫರೋಹನಿಂದ ತಪ್ಪಿಸಿಕೊಳ್ಳಲು ಐಗುಪ್ತದಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿ ನೆಲೆಸಿದಾಗ ಮೋಶೆಗೆ ಸುಮಾರು 40 ವರ್ಷ. (ಅ. ಕಾ. 7:23) ಅಲ್ಲಿದ್ದಾಗಲೇ ಅವನು, ಸಮೀಪದ ಊಚ್ ದೇಶದಲ್ಲಿ ವಾಸಿಸುತ್ತಿದ್ದ ಯೋಬನ ಸಂಕಷ್ಟಗಳ ಬಗ್ಗೆ ಕೇಳಿದ್ದಿರಬಹುದು. ವರ್ಷಗಳಾನಂತರ ಮೋಶೆ ಮತ್ತು ಇಸ್ರಾಯೇಲ್ ಜನಾಂಗದ ಅರಣ್ಯ ಪ್ರಯಾಣ ಕೊನೆಗೊಳ್ಳಲಿದ್ದಾಗ ಅವರು ಊಚ್ನ ಹತ್ತಿರವಿದ್ದರು. ಅಲ್ಲಿ ಮೋಶೆ ಯೋಬನ ಅಂತಿಮ ವರ್ಷಗಳ ಬಗ್ಗೆ ತಿಳಿದುಕೊಂಡಿರಬೇಕು. ಯೆಹೂದ್ಯರ ಪರಂಪರಾಗತ ಅಭಿಪ್ರಾಯಕ್ಕನುಸಾರ ಯೋಬನ ಮರಣದ ಸ್ವಲ್ಪಸಮಯಾನಂತರ ಮೋಶೆಯು ಯೋಬ ಪುಸ್ತಕವನ್ನು ಬರೆದನು.
2 ಯೋಬ ಪುಸ್ತಕವು ಆಧುನಿಕ ದಿನಗಳಲ್ಲಿ ದೇವರ ಸೇವಕರ ನಂಬಿಕೆಯನ್ನು ಬಲಪಡಿಸುತ್ತದೆ. ಯಾವ ವಿಧಗಳಲ್ಲಿ? ಆ ವೃತ್ತಾಂತವು ಸ್ವರ್ಗದಲ್ಲಿ ನಡೆದ ಅತಿ ಮಹತ್ತ್ವದ ಮತ್ತು ಅಂತರಾರ್ಥವುಳ್ಳ ಘಟನೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಅದು, ದೇವರ ವಿಶ್ವ ಪರಮಾಧಿಕಾರದ ಕುರಿತ ಪರಮಪ್ರಧಾನ ವಿವಾದಾಂಶವನ್ನು ಎತ್ತಿತೋರಿಸುತ್ತದೆ. ಅಷ್ಟೇ ಅಲ್ಲ, ಆ ವೃತ್ತಾಂತವು ಸಮಗ್ರತೆ ಕಾಪಾಡಿಕೊಳ್ಳುವುದರಲ್ಲಿ ಏನೆಲ್ಲ ಒಳಗೂಡಿದೆ ಎಂಬುದರ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಹಾಗೂ ತನ್ನ ಜನರು ಕಷ್ಟಾನುಭವಿಸುವಂತೆ ಯೆಹೋವನು ಕೆಲವೊಮ್ಮೆ ಏಕೆ ಅನುಮತಿಸುತ್ತಾನೆಂಬುದನ್ನು ಅರ್ಥಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಅಲ್ಲದೇ, ಯೋಬ ಪುಸ್ತಕವು ಪಿಶಾಚನಾದ ಸೈತಾನನು ಯೆಹೋವನ ಮುಖ್ಯ ಎದುರಾಳಿಯೂ ಮಾನವಕುಲದ ವೈರಿಯೂ ಆಗಿದ್ದಾನೆಂದು ಗುರುತಿಸುತ್ತದೆ. ಯೋಬನಂಥ ಅಪರಿಪೂರ್ಣ ಮಾನವರು ಕಡುಪರೀಕ್ಷೆಗಳ ಮಧ್ಯೆಯೂ ಯೆಹೋವನಿಗೆ ನಿಷ್ಠರಾಗಿರಸಾಧ್ಯವಿದೆ ಎಂಬುದನ್ನೂ ಈ ಪುಸ್ತಕ ತೋರಿಸುತ್ತದೆ. ನಾವೀಗ ಯೋಬ ಪುಸ್ತಕದಲ್ಲಿ ವರ್ಣಿಸಲಾದ ಕೆಲವೊಂದು ಘಟನೆಗಳನ್ನು ಪರಿಗಣಿಸೋಣ.
ಸೈತಾನನಿಂದ ಪರೀಕ್ಷೆಗೊಳಗಾದ ಯೋಬ
3 ಯೋಬನು ಹಣ ಹಾಗೂ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದನು. ಕುಟುಂಬದ ತಲೆಯಾಗಿ ಅವನಲ್ಲಿ ಉತ್ತಮ ನೈತಿಕ ಗುಣಗಳಿದ್ದವು. ಅವನು ಬಡವರ ಬಂಧುವಾಗಿದ್ದನು ಮತ್ತು ಜನರು ಅವನ ಸಲಹೆಯನ್ನು ತುಂಬ ಮಾನ್ಯಮಾಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಯೋಬನಿಗೆ ದೇವಭಯವಿತ್ತು. “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು” ಎಂದು ಯೋಬನ ಬಗ್ಗೆ ವರ್ಣಿಸಲಾಗಿದೆ. ಪಿಶಾಚನಾದ ಸೈತಾನನು ಅವನನ್ನು ತನ್ನ ಆಕ್ರಮಣದ ಮುಖ್ಯ ಗುರಿಹಲಗೆಯಾಗಿ ಮಾಡಿದ್ದು ಅವನ ಸಂಪತ್ತನ್ನು ಇಲ್ಲವೇ ವರ್ಚಸ್ಸನ್ನು ನೋಡಿ ಅಲ್ಲ ಬದಲಾಗಿ ಅವನ ದೇವಭಕ್ತಿಯ ನಿಮಿತ್ತವೇ.—ಯೋಬ 1:1; 29:7-16; 31:1.
4 ಯೋಬ ಪುಸ್ತಕದ ಆರಂಭದ ವೃತ್ತಾಂತವು, ಸ್ವರ್ಗದಲ್ಲಿ ನಡೆದ ಒಂದು ಸಭೆಯ ಕುರಿತು ವರ್ಣಿಸುತ್ತದೆ. ಅಲ್ಲಿ ದೇವದೂತರೆಲ್ಲರೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡರು. ಸೈತಾನನೂ ಅಲ್ಲಿದ್ದನು ಮತ್ತು ಯೋಬನ ಮೇಲೆ ಅಪವಾದಗಳನ್ನು ಹೊರಿಸಿದನು. (ಯೋಬ 1:6-11 ಓದಿ.) ಸೈತಾನನು ಯೋಬನ ಆಸ್ತಿಪಾಸ್ತಿಯ ಮಾತೆತ್ತಿದರೂ ಅವನು ಮುಖ್ಯವಾಗಿ ಯೋಬನ ಸಮಗ್ರತೆಗೆ ಸವಾಲೆಸೆದನು. “ಸಮಗ್ರತೆ” ಎಂಬ ಪದ ಯಥಾರ್ಥಚಿತ್ತ, ದೋಷ ಇಲ್ಲದಿರುವುದು ಮತ್ತು ನೀತಿಯನ್ನು ಸೂಚಿಸುತ್ತದೆ. ಬೈಬಲ್ನಲ್ಲಿ ಉಪಯೋಗಿಸಲಾಗಿರುವಂತೆ ಮಾನವರ ಸಂಬಂಧದಲ್ಲಿ ಸಮಗ್ರತೆ ಎಂಬ ಪದ ಯೆಹೋವನಿಗೆ ಪೂರ್ಣ ಹೃದಯದ ಭಕ್ತಿತೋರಿಸುವುದನ್ನು ಸೂಚಿಸುತ್ತದೆ.
5 ಯೋಬನು ದೇವರನ್ನು ಸ್ವಾರ್ಥ ಕಾರಣಗಳಿಗಾಗಿ ಆರಾಧಿಸುತ್ತಿದ್ದಾನೇ ಹೊರತು ಸಮಗ್ರತೆಯ ಕಾರಣದಿಂದಲ್ಲ ಎಂದು ಸೈತಾನನು ಹೇಳಿದನು. ಯೆಹೋವನು ಎಷ್ಟರವರೆಗೆ ಯೋಬನನ್ನು ಆಶೀರ್ವದಿಸಿ ಸಂರಕ್ಷಿಸುವನೋ ಅಷ್ಟರವರೆಗೆ ಮಾತ್ರ ದೇವರಿಗೆ ನಿಷ್ಠನಾಗಿರುವನೆಂದು ಅವನು ಆರೋಪಿಸಿದನು. ಈ ಆರೋಪಕ್ಕೆ ಉತ್ತರ ಕೊಡುವ ಸಲುವಾಗಿ ಸೈತಾನನು ಆ ನಂಬಿಗಸ್ತ ವ್ಯಕ್ತಿಯ ಮೇಲೆ ಆಕ್ರಮಣ ಮಾಡುವಂತೆ ಯೆಹೋವನು ಬಿಟ್ಟನು. ಫಲಿತಾಂಶವಾಗಿ ಒಂದೇ ದಿನದೊಳಗೆ ಅವನ ಜಾನುವಾರುಗಳೆಲ್ಲವೂ ಕಳವಾದವು ಇಲ್ಲವೇ ನಾಶವಾದವು, ಅವನ ಆಳುಗಳು ಕೊಲ್ಲಲ್ಪಟ್ಟರು ಮತ್ತು ಅವನ ಹತ್ತು ಮಂದಿ ಮಕ್ಕಳೂ ಜೀವ ಕಳೆದುಕೊಂಡರು. (ಯೋಬ 1:13-19) ಸೈತಾನನ ಆಕ್ರಮಣಗಳಿಗೆ ಯೋಬನು ಮಣಿದನೋ? ತನ್ನ ದುರವಸ್ಥೆಗೆ ಯೋಬನು ತೋರಿಸಿದ ಪ್ರತಿಕ್ರಿಯೆಯನ್ನು ದೇವಪ್ರೇರಿತ ವೃತ್ತಾಂತವು ಹೀಗೆ ವರ್ಣಿಸುತ್ತದೆ: “ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ.”—ಯೋಬ 1:21.
6 ಸಮಯಾನಂತರ ಸ್ವರ್ಗದಲ್ಲಿ ಮತ್ತೊಮ್ಮೆ ಸಭೆ ನಡೆಯಿತು. ಸೈತಾನನು ಪುನಃ ಒಮ್ಮೆ ಯೋಬನ ಮೇಲೆ ಆರೋಪ ಹೊರಿಸುತ್ತಾ ಅಂದದ್ದು: “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” ಈ ಆರೋಪದಲ್ಲಿ ಸೈತಾನನು ಇತರರನ್ನೂ ಸೇರಿಸಿದ್ದನ್ನು ಗಮನಿಸಿ. “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎನ್ನುವ ಮೂಲಕ ಪಿಶಾಚನು ಯೋಬನ ಸಮಗ್ರತೆಯನ್ನು ಮಾತ್ರವಲ್ಲ, ಯೆಹೋವನನ್ನು ಆರಾಧಿಸುವ ಪ್ರತಿ “ಮನುಷ್ಯನ” ಸಮಗ್ರತೆಯನ್ನು ಪ್ರಶ್ನಿಸಿದನು. ಅನಂತರ ದೇವರು, ಯೋಬನಿಗೆ ನೋವುಭರಿತ ರೋಗವನ್ನು ಬರಿಸಲು ಸೈತಾನನನ್ನು ಅನುಮತಿಸಿದನು. (ಯೋಬ 2:1-8) ಆದರೆ ಯೋಬನಿಗೆ ಬಂದ ಪರೀಕ್ಷೆಗಳು ಅಷ್ಟಕ್ಕೇ ಮುಗಿಯಲಿಲ್ಲ.
ಯೋಬನ ನಿಲುವಿನಿಂದ ನಮಗಿರುವ ಪಾಠ
7 ಆರಂಭದಲ್ಲಿ, ಯೋಬನ ಹೆಂಡತಿ ಅವನಂತೆಯೇ ಕಷ್ಟಗಳನ್ನು ಸಹಿಸಿಕೊಂಡಳು. ತನ್ನೆಲ್ಲಾ ಮಕ್ಕಳನ್ನು ಮತ್ತು ಕುಟುಂಬದ ಸಂಪತ್ತನ್ನು ಕಳೆದುಕೊಂಡು ಆಕೆ ಛಿದ್ರಗೊಂಡಿದ್ದಳು. ಆದರೆ ತನ್ನ ಗಂಡ ನೋವುಭರಿತ ರೋಗದಿಂದ ನರಳುವುದನ್ನು ನೋಡಿ ಸಂಕಟದಿಂದ ಆಕೆ ಯೋಬನಿಗಂದದ್ದು: “ನಿನ್ನ ಯಥಾರ್ಥತ್ವವನ್ನು [“ಸಮಗ್ರತೆಯನ್ನು,” NW] ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ.” ಅನಂತರ ಎಲೀಫಜ, ಬಿಲ್ದದ ಮತ್ತು ಚೋಫರ ಎಂಬ ಮೂವರು ಬಂದರು. ಅವರು ಬಂದದ್ದು ಯೋಬನಿಗೆ ಸಂತೈಸಲಿಕ್ಕಂತೆ. ಆದರೆ ಸಂತೈಸುವ ಬದಲು ಅವರು ಮೋಸಕರ ತರ್ಕವನ್ನು ಬಳಸುತ್ತಾ “ಬೇಸರಿಕೆಯನ್ನು ಹುಟ್ಟಿಸುವ ಆದರಣೆಯವರಾಗಿ” ಪರಿಣಮಿಸಿದರು. ಉದಾಹರಣೆಗೆ, ಯೋಬನ ಮಕ್ಕಳು ಕೆಟ್ಟ ಕೃತ್ಯಗಳಲ್ಲಿ ಭಾಗಿಗಳಾಗಿದ್ದರಿಂದ ಅವರಿಗೆ ತಕ್ಕ ಶಾಸ್ತಿಯಾಯಿತೆಂದು ಬಿಲ್ದದನು ಹೇಳಿದನು. ಹಿಂದೆ ಮಾಡಿದ ಪಾಪಗಳಿಗಾಗಿಯೇ ಈಗ ಯೋಬನಿಗೆ ಶಿಕ್ಷೆಯಾಗುತ್ತಿದೆಯೆಂದು ಎಲೀಫಜನು ಹೇಳಿದನು. ದೇವರ ದೃಷ್ಟಿಯಲ್ಲಿ ಸಮಗ್ರತೆ ಪಾಲಕರಿಗೆ ಏನಾದರೂ ಬೆಲೆಯಿದೆಯೋ ಎಂದೂ ಪ್ರಶ್ನಿಸಿದನು! (ಯೋಬ 2:9, 11; 4:8; 8:4; 16:2; 22:2, 3) ಅಂಥ ತೀಕ್ಷ್ಣ ಒತ್ತಡದ ಮಧ್ಯೆಯೂ ಯೋಬನು ಸಮಗ್ರತೆ ಕಾಪಾಡಿಕೊಂಡನು. ‘ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡಾಗ’ ಅವನು ತಪ್ಪು ಮಾಡಿದ್ದು ನಿಜ. (ಯೋಬ 32:2) ಆದರೆ, ಇಷ್ಟೆಲ್ಲಾ ಸಂಭವಿಸಿದರೂ ಅವನು ನಂಬಿಗಸ್ತನಾಗಿ ಉಳಿದನು.
8 ಅನಂತರ, ಯೋಬನನ್ನು ಭೇಟಿ ಮಾಡಲು ಬಂದ ಎಲೀಹುವಿನ ಕುರಿತು ನಾವು ಓದುತ್ತೇವೆ. ಅವನು ಮೊದಲು ಯೋಬನ ಮತ್ತು ಅವನ ಮೂವರು ಸ್ನೇಹಿತರ ನಡುವೆ ನಡೆದ ವಾದಗಳಿಗೆ ಕಿವಿಗೊಟ್ಟನು. ಎಲೀಹು ಆ ನಾಲ್ಕು ಮಂದಿಗಿಂತ ಚಿಕ್ಕವನಾಗಿದ್ದರೂ ಅವರಿಗಿಂತ ಹೆಚ್ಚು ವಿವೇಕ ತೋರಿಸಿದನು. ಅವನು ಯೋಬನಿಗೆ ಗೌರವಕೊಟ್ಟು ಮಾತಾಡಿದನು ಮತ್ತು ಅವನ ಯಥಾರ್ಥ ಜೀವನಕ್ರಮಕ್ಕಾಗಿ ಶ್ಲಾಘಿಸಿದನು. ಆದರೆ ಯೋಬನು ತಾನು ನಿರ್ದೋಷಿ ಎಂದು ಸಾಬೀತುಪಡಿಸಲಿಕ್ಕಾಗಿ ಮಾಡುತ್ತಿದ್ದ ಪ್ರಯತ್ನವು ಅತಿಯಾಯಿತೆಂದೂ ಅವನು ಹೇಳಿದನು. ತದನಂತರ ಎಲೀಹು ಯೋಬನಿಗೆ, ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದು ಯಾವಾಗಲೂ ಸಾರ್ಥಕ ಎಂಬ ಆಶ್ವಾಸನೆಯಿತ್ತನು. (ಯೋಬ 36:1, 11 ಓದಿ.) ಇಂದು ಸಲಹೆ ನೀಡುವವರಿಗೆ ಇದೆಷ್ಟು ಉತ್ತಮ ಮಾದರಿ! ಎಲೀಹು ತಾಳ್ಮೆ ತೋರಿಸಿದನು, ಕಿವಿಗೊಟ್ಟು ಕೇಳಿದನು, ಸಾಧ್ಯವಿದ್ದಲ್ಲೆಲ್ಲ ಪ್ರಶಂಸಿಸಿದನು ಮತ್ತು ಭಕ್ತಿವರ್ಧಕ ಸಲಹೆ ಕೊಟ್ಟನು.—ಯೋಬ 32:6; 33:32.
9 ಕೊನೆಗೆ ಯೆಹೋವನು ಯೋಬನೊಂದಿಗೆ ಮಾತಾಡಿದಾಗ ಅವನಿಗಾದ ಅನುಭವವು ಅವಿಸ್ಮರಣೀಯ! ದಾಖಲೆ ಹೇಳುವುದು: “ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರ” ಕೊಟ್ಟನು. ಯೆಹೋವನು ಪ್ರಶ್ನೆಗಳ ಸರಮಾಲೆಯನ್ನು ಬಳಸುತ್ತಾ ಯೋಬನು ತನ್ನ ಯೋಚನಾ ರೀತಿಯನ್ನು ತಿದ್ದಿಕೊಳ್ಳುವಂತೆ ದಯೆಯಿಂದ, ಆದರೂ ದೃಢವಾದ ರೀತಿಯಲ್ಲಿ ಸಹಾಯ ಮಾಡಿದನು. ಈ ತಿದ್ದುಪಾಟನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತಾ ಯೋಬನು ಒಪ್ಪಿಕೊಂಡದ್ದು: “ಅಯ್ಯೋ, ನಾನು ಅಲ್ಪನೇ ಸರಿ. . . . ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” ಯೆಹೋವನು ಯೋಬನೊಂದಿಗೆ ಮಾತಾಡಿದ ನಂತರ ಆ ಮೂವರು ಸ್ನೇಹಿತರ ವಿರುದ್ಧ ತನ್ನ ಸಿಟ್ಟನ್ನು ವ್ಯಕ್ತಪಡಿಸಿದನು ಏಕೆಂದರೆ ಅವರು ‘ಯಥಾರ್ಥವಾದ’ ಮಾತುಗಳನ್ನಾಡಿರಲಿಲ್ಲ. ಯೋಬನು ಅವರಿಗಾಗಿ ಪ್ರಾರ್ಥಿಸಬೇಕಿತ್ತು. “ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು.”—ಯೋಬ 38:1; 40:4; 42:6-10.
ಯೆಹೋವನಿಗಾಗಿ ನಮ್ಮ ಪ್ರೀತಿ ಎಷ್ಟು ಗಾಢವಾಗಿದೆ?
10 ಯೆಹೋವನು ವಿಶ್ವದ ನಿರ್ಮಾಣಿಕನೂ ಸರ್ವ ಸೃಷ್ಟಿಯ ಪರಮಾಧಿಕಾರಿಯೂ ಆಗಿದ್ದಾನೆ. ಹಾಗಿರುವಾಗ ಪಿಶಾಚನ ಆರೋಪವನ್ನು ಆತನು ಅಲಕ್ಷಿಸಬಹುದಿತ್ತಲ್ಲ? ಸೈತಾನನನ್ನು ಅಲಕ್ಷಿಸುವುದರಿಂದಾಗಲಿ ಅವನನ್ನು ಅಳಿಸಿಹಾಕುವುದರಿಂದಾಗಲಿ ಎಬ್ಬಿಸಲ್ಪಟ್ಟ ವಿವಾದಾಂಶ ಇತ್ಯರ್ಥವಾಗುವುದಿಲ್ಲ ಎಂಬುದು ದೇವರಿಗೆ ಗೊತ್ತಿತ್ತು. ಯೆಹೋವನ ನಂಬಿಗಸ್ತ ಸೇವಕನಾದ ಯೋಬನಿಂದ ಸಂಪತ್ತನ್ನು ಕಸಿದುಕೊಳ್ಳುವಲ್ಲಿ ಅವನು ನಿಷ್ಠೆ ತೋರಿಸನು ಎಂದು ಪಿಶಾಚನು ಹೇಳಿದ್ದನು. ಆದರೆ ಆ ಪರೀಕ್ಷೆಯಲ್ಲಿ ಯೋಬನು ನಿಷ್ಠನಾಗಿ ಉಳಿದನು. ಅನಂತರ ಸೈತಾನನು ಹೇಳಿದ್ದೇನೆಂದರೆ, ದೈಹಿಕ ಕಷ್ಟಗಳು ಬಂದರೆ ಯಾವ ಮಾನವನೂ ದೇವರಿಗೆ ಬೆನ್ನುಹಾಕುವನು. ಯೋಬನಿಗೆ ಅಂಥ ಕಷ್ಟಗಳು ಬಂದರೂ ಅವನು ತನ್ನ ಸಮಗ್ರತೆಯನ್ನು ಬಿಟ್ಟುಕೊಡಲಿಲ್ಲ. ನಂಬಿಗಸ್ತ ಆದರೆ ಅಪರಿಪೂರ್ಣನಾದ ಯೋಬನ ವಿಷಯದಲ್ಲಿ ಸೈತಾನನು ಸುಳ್ಳುಗಾರನೆಂದು ರುಜುವಾದನು. ಆದರೆ ದೇವರ ಇತರ ಆರಾಧಕರ ಕುರಿತೇನು?
11 ಸೈತಾನನು ಏನೇ ಮಾಡಲಿ ದೇವರ ಸೇವಕನು ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ತನ್ನ ವಿಷಯದಲ್ಲಿ ಆ ನಿರ್ದಯಿ ವೈರಿ ಮಾಡಿರುವ ಅಪಾದನೆಗಳು ಸುಳ್ಳೆಂದು ರುಜುಪಡಿಸುತ್ತಾನೆ. ಯೇಸು ಭೂಮಿಗೆ ಬಂದು ಸೈತಾನನ ಸವಾಲಿಗೆ ಸರಿಯಾದ ಉತ್ತರಕೊಟ್ಟನು. ಯೇಸು ನಮ್ಮ ಪ್ರಥಮ ತಂದೆಯಾದ ಆದಾಮನಂತೆಯೇ ಪರಿಪೂರ್ಣ ಮಾನವನಾಗಿದ್ದನು. ಹೀಗಿರುವುದರಿಂದ, ಯೇಸು ತನ್ನ ಕೊನೆಯುಸಿರಿನ ತನಕ ನಂಬಿಗಸ್ತನಾಗಿರುವ ಮೂಲಕ, ಸೈತಾನನು ಸುಳ್ಳುಗಾರನೆಂದೂ ಅವನ ಅಪಾದನೆಗಳು ಸುಳ್ಳೆಂದೂ ಅಲ್ಲಗಳೆಯಲಾಗದ ರೀತಿಯಲ್ಲಿ ರುಜುಪಡಿಸಿದನು.—ಪ್ರಕ. 12:10.
12 ಹಾಗಿದ್ದರೂ ಸೈತಾನನು ಯೆಹೋವನ ಆರಾಧಕರನ್ನು ಪರೀಕ್ಷಿಸುವುದನ್ನು ಬಿಟ್ಟುಬಿಟ್ಟಿಲ್ಲ. ಹೀಗಿರುವುದರಿಂದ ವೈಯಕ್ತಿಕವಾಗಿ ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ನಾವು ಯೆಹೋವನ ಆರಾಧನೆಯನ್ನು ಸ್ವಾರ್ಥದಿಂದಲ್ಲ ಪ್ರೀತಿಯಿಂದ ಮಾಡುತ್ತೇವೆ ಎಂದು ತೋರಿಸುವ ಅವಕಾಶ ಮತ್ತು ಜವಾಬ್ದಾರಿ ನಮ್ಮಲ್ಲಿ ಪ್ರತಿಯೊಬ್ಬರಿಗಿದೆ. ಈ ಜವಾಬ್ದಾರಿಯ ಬಗ್ಗೆ ನಮಗೆ ಹೇಗನಿಸುತ್ತದೆ? ಯೆಹೋವನಿಗೆ ನಿಷ್ಠರಾಗಿರುವುದನ್ನು ನಾವು ಒಂದು ಸುಯೋಗವೆಂದೆಣಿಸುತ್ತೇವೆ. ಪರೀಕ್ಷೆಗಳನ್ನು ತಾಳಿಕೊಳ್ಳಲು ಯೆಹೋವನು ಬಲ ಕೊಡುತ್ತಾನೆ ಮತ್ತು ಯೋಬನಿಗೆ ಮಾಡಿದಂತೆ, ನಮಗೆ ಬರುವ ಪರೀಕ್ಷೆಗಳಿಗೂ ಮಿತಿ ಇಡುತ್ತಾನೆಂಬ ತಿಳುವಳಿಕೆ ನಮಗೆ ನೆಮ್ಮದಿ ಕೊಡುತ್ತದೆ.—1 ಕೊರಿಂ. 10:13.
ಸೈತಾನ—ಉದ್ಧಟ ಎದುರಾಳಿ ಮತ್ತು ಧರ್ಮಭ್ರಷ್ಟ
13 ಯೆಹೋವನಿಗೆ ಸವಾಲೆಸೆಯುವುದರಲ್ಲಿ ಮತ್ತು ಮಾನವಕುಲವನ್ನು ದಾರಿತಪ್ಪಿಸುವುದರಲ್ಲಿ ಸೈತಾನನ ನಾಚಿಕೆಗೇಡಿ ಪಾತ್ರದ ಕುರಿತ ವಿವರಗಳು ಹೀಬ್ರು ಶಾಸ್ತ್ರಗಳಲ್ಲಿವೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, ಸೈತಾನನು ಯೆಹೋವನನ್ನು ವಿರೋಧಿಸುವುದರ ಕುರಿತ ಹೆಚ್ಚಿನ ಮಾಹಿತಿ ಇದೆ. ಪ್ರಕಟನೆ ಪುಸ್ತಕದಲ್ಲಿ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಮತ್ತು ಕಟ್ಟಕಡೆಗೆ ಸೈತಾನನಿಗಾಗುವ ನಾಶನದ ಕುರಿತು ಓದುತ್ತೇವೆ. ಯೋಬ ಪುಸ್ತಕವಾದರೋ ಸೈತಾನನ ದಂಗೆಕೋರ ನಡವಳಿಕೆಯ ಕುರಿತ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಸ್ವರ್ಗದಲ್ಲಿ ಸಭೆ ಸೇರಿದಾಗ ಸೈತಾನನು ಅಲ್ಲಿಗೆ ಬಂದದ್ದು ಯೆಹೋವನನ್ನು ಸ್ತುತಿಸುವ ಉದ್ದೇಶದಿಂದಲ್ಲ. ಅವನ ಮನಸ್ಸಲ್ಲಿ ಹಗೆ ಮತ್ತು ದುರುದ್ದೇಶ ತುಂಬಿಕೊಂಡಿತ್ತು. ಆದ್ದರಿಂದಲೇ ಯೋಬನ ಮೇಲೆ ಆರೋಪಹೊರಿಸಿ ಅವನನ್ನು ಪರೀಕ್ಷಿಸಲು ಅನುಮತಿ ಪಡೆದ ಕೂಡಲೇ “ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.”—ಯೋಬ 1:12; 2:7.
14 ಹೀಗೆ ಯೋಬ ಪುಸ್ತಕವು ಸೈತಾನನು ಮಾನವಕುಲದ ನಿರ್ದಯಿ ವೈರಿಯೆಂದು ಗುರುತಿಸುತ್ತದೆ. ಯೋಬ 1:6 ಮತ್ತು 2:1ರಲ್ಲಿ ಸ್ವರ್ಗದಲ್ಲಿ ನಡೆದ ಎರಡು ಸಭೆಗಳ ಕುರಿತು ತಿಳಿಸಲಾಗಿದೆ. ಆದರೆ ಅವೆರಡರ ನಡುವಿನ ಅವಧಿ ಎಷ್ಟು ದೀರ್ಘವಾಗಿತ್ತೆಂದು ತಿಳಿಸಲಾಗಿಲ್ಲ. ಈ ಅವಧಿಯಲ್ಲೇ ಯೋಬನನ್ನು ಕ್ರೂರವಾಗಿ ಪರೀಕ್ಷಿಸಲಾಯಿತು. ಇದರಲ್ಲಿ ಯೋಬನು ತೋರಿಸಿದ ನಂಬಿಗಸ್ತಿಕೆಯಿಂದಾಗಿ ಯೆಹೋವನು ಸೈತಾನನಿಗೆ ಹೀಗೆ ಹೇಳಸಾಧ್ಯವಾಯಿತು: “ಅವನನ್ನು ಕಾರಣವಿಲ್ಲದೆ ನಾಶನಮಾಡುವದಕ್ಕೆ ನೀನು ನನ್ನನ್ನು ಪ್ರೇರಿಸಿದರೂ ಅವನು ತನ್ನ ಯಥಾರ್ಥತ್ವವನ್ನು [“ಸಮಗ್ರತೆಯನ್ನು,” NW] ಬಿಡದೆ ಇದ್ದಾನೆ.” ಆದರೆ ಆಗಲೂ ಸೈತಾನನು ತನ್ನ ಅಪವಾದಗಳು ಸುಳ್ಳೆಂದು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಅದಕ್ಕೆ ಬದಲಾಗಿ ಯೋಬನನ್ನು ಇನ್ನೂ ಕಠಿನ ಪರೀಕ್ಷೆಗೊಳಪಡಿಸುವಂತೆ ಸೈತಾನನು ಒತ್ತಾಯಿಸಿದನು. ಹೀಗೆ ಯೋಬನು ಧನಿಕನಾಗಿದ್ದಾಗಲೂ ನಿರ್ಗತಿಕನಾಗಿದ್ದಾಗಲೂ ಪಿಶಾಚನು ಅವನನ್ನು ಪರೀಕ್ಷಿಸಿದನು. ನಿರ್ಗತಿಕರು ಅಥವಾ ಆಪತ್ತುಗಳಿಗೆ ಗುರಿಯಾದವರ ಕುರಿತು ಸೈತಾನನಿಗೆ ಖಂಡಿತ ಸ್ವಲ್ಪವೂ ಮರುಕವಿಲ್ಲ. ಸಮಗ್ರತಾ ಪಾಲಕರನ್ನಂತೂ ಅವನು ದ್ವೇಷಿಸುತ್ತಾನೆ. (ಯೋಬ 2:3-5) ಇವೆಲ್ಲ ಕಷ್ಟಗಳ ಹೊರತು ಯೋಬನು ತೋರಿಸಿದ ನಂಬಿಗಸ್ತಿಕೆ ಸೈತಾನನು ಸುಳ್ಳುಗಾರನೆಂಬುದನ್ನು ರುಜುಪಡಿಸಿತು.
15 ಈ ವಿಶ್ವದಲ್ಲಿ ಧರ್ಮಭ್ರಷ್ಟನಾದ ಮೊತ್ತಮೊದಲ ಜೀವಿ ಸೈತಾನನೇ. ಆಧುನಿಕ ದಿನಗಳ ಧರ್ಮಭ್ರಷ್ಟರಲ್ಲೂ ಪಿಶಾಚನಲ್ಲಿರುವಂಥದ್ದೇ ಗುಣಲಕ್ಷಣಗಳಿವೆ. ಸಭೆಯಲ್ಲಿರುವವರ, ಕ್ರೈಸ್ತ ಹಿರಿಯರ ಅಥವಾ ಆಡಳಿತ ಮಂಡಲಿಯ ಕಡೆಗಿನ ಟೀಕಾತ್ಮಕ ಮನೋಭಾವದಿಂದ ಅವರ ಮನಸ್ಸು ವಿಷಮಯವಾಗಿರುತ್ತದೆ. ಕೆಲವು ಧರ್ಮಭ್ರಷ್ಟರು ಯೆಹೋವ ಎಂಬ ದೈವಿಕ ನಾಮದ ಬಳಕೆಯನ್ನೂ ವಿರೋಧಿಸುತ್ತಾರೆ. ಅವರಿಗೆ ಯೆಹೋವನ ಕುರಿತು ತಿಳಿಯಲಿಕ್ಕಾಗಲಿ ಆತನ ಸೇವೆ ಮಾಡುವುದಕ್ಕಾಗಲಿ ಆಸಕ್ತಿಯಿಲ್ಲ. ಅವರ ತಂದೆಯಾದ ಸೈತಾನನಂತೆ ಧರ್ಮಭ್ರಷ್ಟರು ಕೂಡ ಸಮಗ್ರತಾ ಪಾಲಕರನ್ನು ತಮ್ಮ ಗುರಿಹಲಗೆಯನ್ನಾಗಿ ಮಾಡುತ್ತಾರೆ. (ಯೋಹಾ. 8:44) ಈ ಕಾರಣದಿಂದಲೇ ಯೆಹೋವನ ಸೇವಕರು ಅವರೊಂದಿಗಿನ ಎಲ್ಲಾ ಸಂಪರ್ಕವನ್ನು ಕಡಿದುಹಾಕುತ್ತಾರೆ.—2 ಯೋಹಾ. 10, 11.
ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
16 ಯೋಬನು ಯೆಹೋವನ ಹೆಸರನ್ನು ಬಳಸಿದನು ಮತ್ತು ಸ್ತುತಿಸಿದನು. ಅವನ ಮಕ್ಕಳ ಸಾವಿನ ಸುದ್ದಿಯಿಂದ ಜರ್ಜರಿತನಾದಾಗಲೂ ಅವನು ದೇವರ ಮೇಲೆ ತಪ್ಪುಹೊರಿಸಲಿಲ್ಲ. ತನ್ನ ನಷ್ಟಕ್ಕೆ ದೇವರು ಕಾರಣನೆಂದು ತಪ್ಪಾಗಿ ಹೇಳಿದನಾದರೂ ಯೆಹೋವನ ಹೆಸರನ್ನು ಎತ್ತಿಹಿಡಿದನು. ತದನಂತರ ಯೋಬನು ನಾಣ್ಣುಡಿ ರೂಪದಲ್ಲಿ ಹೇಳಿದ್ದು: “ಇಗೋ, ಕರ್ತನ ಭಯವೇ ಜ್ಞಾನವು ದುಷ್ಟತನವನ್ನು ಬಿಡುವದೇ ವಿವೇಕವು.”—ಯೋಬ 28:28.
17 ಯೋಬನಿಗೆ ಸಮಗ್ರತೆ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡಿತು? ಖಂಡಿತವಾಗಿ, ಅವನು ವಿಪತ್ತುಗಳು ಬಂದೆರಗುವ ಮುಂಚೆಯೇ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಸೈತಾನನು ಯೆಹೋವನಿಗೆಸೆದ ಸವಾಲಿನ ಬಗ್ಗೆ ಯೋಬನಿಗೆ ತಿಳಿದಿತ್ತೆಂದು ಹೇಳಲು ಸಾಕ್ಷ್ಯವಿಲ್ಲದಿದ್ದರೂ, ನಿಷ್ಠನಾಗಿ ಉಳಿಯುವ ದೃಢಸಂಕಲ್ಪ ಅವನದ್ದಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವನಂದದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು.” (ಯೋಬ 27:5) ಇಷ್ಟು ಆಪ್ತ ಸಂಬಂಧವನ್ನು ಯೋಬನು ಹೇಗೆ ಬೆಳೆಸಿಕೊಂಡನು? ತನ್ನ ದೂರದ ಸಂಬಂಧಿಗಳಾಗಿದ್ದ ಅಬ್ರಹಾಮ, ಇಸಾಕ ಮತ್ತು ಯಾಕೋಬರೊಂದಿಗೆ ದೇವರು ವ್ಯವಹರಿಸಿದ ರೀತಿಯ ಬಗ್ಗೆ ಕೇಳಿಸಿಕೊಂಡದ್ದನ್ನು ಅವನು ಹೃದಯದಲ್ಲಿ ಜೋಪಾನವಾಗಿರಿಸಿದ್ದನು. ಅಲ್ಲದೇ, ಸೃಷ್ಟಿಯನ್ನು ಅವಲೋಕಿಸುವ ಮೂಲಕ ಯೆಹೋವನ ಅನೇಕ ಗುಣಗಳನ್ನು ಗ್ರಹಿಸಿದನು.—ಯೋಬ 12:7-9, 13, 16 ಓದಿ.
18 ಯೋಬನು ಏನನ್ನು ಕಲಿತಿದ್ದನೋ ಅದು ಅವನಲ್ಲಿ ಯೆಹೋವನನ್ನು ಸ್ತುತಿಸುವ ಬಯಕೆಯನ್ನು ಹುಟ್ಟಿಸಿತು. ತನ್ನ ಕುಟುಂಬದ ಸದಸ್ಯರು ದೇವರನ್ನು ಅಪ್ರಸನ್ನಗೊಳಿಸಿರಬಹುದು ಇಲ್ಲವೇ “ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು” ಎಂಬ ಕಾರಣಕ್ಕಾಗಿ ಅವನು ಕ್ರಮವಾಗಿ ಯಜ್ಞಗಳನ್ನು ಅರ್ಪಿಸುತ್ತಿದ್ದನು. (ಯೋಬ 1:5) ಕಠಿನ ಪರೀಕ್ಷೆಗೊಳಗಾದಾಗಲೂ ಯೋಬನು ಯೆಹೋವನ ಬಗ್ಗೆ ಸಕಾರಾತ್ಮಕ ಮಾತುಗಳನ್ನೇ ಆಡಿದನು. (ಯೋಬ 10:12) ಎಂಥ ಉತ್ತಮ ಮಾದರಿ! ನಾವು ಕೂಡ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತ ನಿಷ್ಕೃಷ್ಟ ಜ್ಞಾನವನ್ನು ಕ್ರಮವಾಗಿ ತೆಗೆದುಕೊಳ್ಳುತ್ತಿರಬೇಕು. ಅಧ್ಯಯನ, ಕೂಟಗಳು, ಪ್ರಾರ್ಥನೆ ಮತ್ತು ಸುವಾರ್ತೆ ಸಾರುವುದರಂಥ ಆಧ್ಯಾತ್ಮಿಕ ಚಟುವಟಿಕೆಗಳ ವಿಷಯದಲ್ಲಿ ನಾವೊಂದು ಉತ್ತಮ ನಿಯತಕ್ರಮಕ್ಕೆ ಅಂಟಿಕೊಳ್ಳುತ್ತೇವೆ. ಅಲ್ಲದೇ, ನಾವು ಯೆಹೋವನ ಹೆಸರನ್ನು ಪ್ರಸಿದ್ಧಪಡಿಸಲಿಕ್ಕಾಗಿ ನಮ್ಮಿಂದಾದದ್ದೆಲ್ಲವನ್ನೂ ಮಾಡುತ್ತೇವೆ. ಯೋಬನ ಸಮಗ್ರತೆಯಂತೆ ದೇವರ ಇಂದಿನ ಸೇವಕರ ಸಮಗ್ರತೆಯೂ ಯೆಹೋವನನ್ನು ಸಂತೋಷಪಡಿಸುತ್ತದೆ. ಈ ವಿಷಯವನ್ನೇ ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ನಿಮಗೆ ಜ್ಞಾಪಕವಿದೆಯೋ?
• ಯೋಬನು ಪಿಶಾಚನಾದ ಸೈತಾನನ ಗುರಿಹಲಗೆಯಾದದ್ದೇಕೆ?
• ಯೋಬನು ಯಾವ ಪರೀಕ್ಷೆಗಳನ್ನು ಸಹಿಸಿಕೊಂಡನು, ಮತ್ತು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಿದನು?
• ಯೋಬನಂತೆ ಸಮಗ್ರತೆ ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು?
• ಯೋಬ ಪುಸ್ತಕದಿಂದ ಸೈತಾನನ ಕುರಿತು ನಮಗೇನು ತಿಳಿದುಬರುತ್ತದೆ?
[ಅಧ್ಯಯನ ಪ್ರಶ್ನೆಗಳು]
1. ಯೋಬ ಪುಸ್ತಕವನ್ನು ಯಾರು ಬರೆದಿರಬೇಕು, ಮತ್ತು ಯಾವಾಗ?
2. ಯೋಬ ಪುಸ್ತಕವು ಯೆಹೋವನ ಆಧುನಿಕ ದಿನದ ಸೇವಕರಿಗೆ ಯಾವೆಲ್ಲ ವಿಧಗಳಲ್ಲಿ ಉತ್ತೇಜನ ಕೊಡುತ್ತದೆ?
3. ಯೋಬನ ಕುರಿತು ನಮಗೇನು ತಿಳಿದಿದೆ, ಮತ್ತು ಸೈತಾನನು ಅವನನ್ನು ತನ್ನ ಗುರಿಹಲಗೆಯಾಗಿ ಮಾಡಿದ್ದೇಕೆ?
4. ಸಮಗ್ರತೆ ಎಂದರೇನು?
5. ಯೋಬನ ಬಗ್ಗೆ ಸೈತಾನನು ಏನೆಂದು ಹೇಳಿದನು?
6. (ಎ) ಸ್ವರ್ಗದಲ್ಲಿ ಇನ್ನೊಂದು ಸಭೆ ನಡೆದಾಗ ಏನಾಯಿತು? (ಬಿ) ಯೋಬನ ಸಮಗ್ರತೆಯನ್ನು ಪ್ರಶ್ನಿಸುವಾಗ ಸೈತಾನನು ಇನ್ಯಾರಿಗೆ ಬೆರಳು ತೋರಿಸುತ್ತಿದ್ದನು?
7. ಯೋಬನ ಹೆಂಡತಿ ಮತ್ತು ಅವನನ್ನು ಭೇಟಿಮಾಡಲು ಬಂದವರು ಯಾವ ವಿಧಗಳಲ್ಲಿ ಅವನ ಮೇಲೆ ಒತ್ತಡ ಹೇರಿದರು?
8. ಇಂದು ಸಲಹೆ ನೀಡುವವರಿಗೆ ಎಲೀಹು ಹೇಗೆ ಉತ್ತಮ ಮಾದರಿಯಾಗಿದ್ದಾನೆ?
9. ಯೆಹೋವನು ಯೋಬನಿಗೆ ಹೇಗೆ ಸಹಾಯ ಮಾಡಿದನು?
10. ಯೆಹೋವನು ಸೈತಾನನನ್ನು ಏಕೆ ಅಲಕ್ಷಿಸಲಿಲ್ಲ ಅಥವಾ ಅಳಿಸಿಹಾಕಲಿಲ್ಲ?
11. ಯೇಸು ಸೈತಾನನ ಸವಾಲಿಗೆ ಸರಿಯಾದ ಉತ್ತರಕೊಟ್ಟದ್ದು ಹೇಗೆ?
12. ದೇವರ ಪ್ರತಿಯೊಬ್ಬ ಸೇವಕನಿಗೆ ಯಾವ ಅವಕಾಶ ಮತ್ತು ಜವಾಬ್ದಾರಿ ಇದೆ?
13. ಸೈತಾನನ ಕುರಿತು ಯೋಬ ಪುಸ್ತಕವು ಯಾವ ವಿವರಗಳನ್ನು ಕೊಡುತ್ತದೆ?
14. ಯೋಬನ ಕಡೆಗೆ ಸೈತಾನನ ಮನೋಭಾವ ಏನಾಗಿತ್ತು?
15. ಸೈತಾನನಿಗೂ ಆಧುನಿಕ ದಿನಗಳ ಧರ್ಮಭ್ರಷ್ಟರಿಗೂ ಯಾವ ಹೋಲಿಕೆಗಳಿವೆ?
16. ಯೋಬನಿಗೆ ಯೆಹೋವನ ಕಡೆಗೆ ಯಾವ ಮನೋಭಾವವಿತ್ತು?
17. ಯೋಬನಿಗೆ ತನ್ನ ಸಮಗ್ರತೆ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡಿತು?
18. (ಎ) ಯೋಬನು ಯೆಹೋವನಿಗೆ ಭಕ್ತಿ ತೋರಿಸಿದ್ದು ಹೇಗೆ? (ಬಿ) ಯಾವ ವಿಧಗಳಲ್ಲಿ ನಾವು ಯೋಬನ ಉತ್ತಮ ಮಾದರಿಯನ್ನು ಅನುಕರಿಸಬಹುದು?
[ಪುಟ 4ರಲ್ಲಿರುವ ಚಿತ್ರ]
ಯೋಬನ ವೃತ್ತಾಂತವು ದೇವರ ವಿಶ್ವ ಪರಮಾಧಿಕಾರದ ಕುರಿತ ಪರಮಪ್ರಧಾನ ವಿವಾದಾಂಶವನ್ನು ನೆನಪಿಗೆ ತರುತ್ತದೆ
[ಪುಟ 6ರಲ್ಲಿರುವ ಚಿತ್ರ]
ನಿಮ್ಮ ಸಮಗ್ರತೆ ಯಾವ ಸನ್ನಿವೇಶಗಳಲ್ಲಿ ಪರೀಕ್ಷೆಗೊಳಗಾಗಬಹುದು?