ಅಧ್ಯಾಯ 106
ದ್ರಾಕ್ಷೇ ತೋಟಗಳ ಸಾಮ್ಯಗಳಿಂದ ಬಯಲು ಮಾಡಲ್ಪಟ್ಟದ್ದು
ಯೇಸುವು ದೇವಾಲಯದಲ್ಲಿ ಇದ್ದಾನೆ. ಅವನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಾನೆ ಎಂದು ತಿಳಿಯಲು ಅಪೇಕ್ಷಿಸಿದ ಧಾರ್ಮಿಕ ಮುಖಂಡರುಗಳನ್ನು ಈಗಲೇ ಗೊಂದಲದಲ್ಲಿ ಹಾಕಿದ್ದನು. ಅವರ ಗೊಂದಲದಿಂದ ಅವರು ಪುನಃ ಚೇತರಿಸಿಕೊಳ್ಳುವ ಮೊದಲೇ, ಯೇಸುವು ಕೇಳುವದು: “ಆದರೆ ನಿಮಗೆ ಹೇಗೆ ತೋರುತ್ತದೆ?” ಅನಂತರ ಸಾಮ್ಯಗಳ ಮೂಲಕ ಅವರು ನಿಜವಾಗಿ ಎಂಥಾ ವಿಧದ ವ್ಯಕ್ತಿಗಳಾಗಿದ್ದಾರೆಂದು ಅವನು ಅವರಿಗೆ ತೋರಿಸುತ್ತಾನೆ.
“ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು” ಯೇಸುವು ಹೇಳುತ್ತಾನೆ. “ಅವನು ಮೊದಲನೆಯವನ ಬಳಿಗೆ ಬಂದು—ಮಗನೇ, ಹೋಗಿ ಈ ಹೊತ್ತು ದ್ರಾಕ್ಷೇತೋಟದಲ್ಲಿ ಕೆಲಸಮಾಡು ಅಂದಾಗ ಅವನು—ನಾನು ಹೋಗುತ್ತೇನಪ್ಪಾ ಅಂದಾಗ್ಯೂ ಹೋಗಲೇ ಇಲ್ಲ. ಆ ಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ—ನಾನು ಹೋಗುವದಿಲ್ಲ ಎಂದು ಹೇಳಿದಾಗ್ಯೂ ತರುವಾಯ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು. ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು?” ಎಂದು ಯೇಸುವು ಕೇಳುತ್ತಾನೆ.
“ಕಡೆಯವನು” ಎಂದು ಅವನ ವಿರೋಧಿಗಳು ಉತ್ತರಿಸುತ್ತಾರೆ.
ಆದುದರಿಂದ ಯೇಸುವು ಉತ್ತರಿಸುವದು: “ಭ್ರಷ್ಟರೂ [ಸುಂಕದವರು, NW] ಸೂಳೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಸುಂಕದವರು ಮತ್ತು ಸೂಳೆಯರು, ಆರಂಭಿಕ ಹಂತದಲ್ಲಿ ದೇವರನ್ನು ಸೇವಿಸಲು ನಿರಾಕರಿಸಿದವರಂತೆ ಇದ್ದರು. ಆದರೆ ಎರಡನೆಯ ಮಗನಂತೆ, ಅವರು ಪಶ್ಚಾತ್ತಾಪ ಪಟ್ಟರು ಮತ್ತು ಅವನ ಸೇವೆ ಮಾಡಿದರು. ಇನ್ನೊಂದು ಪಕ್ಕದಲ್ಲಿ ಧಾರ್ಮಿಕ ಮುಖಂಡರುಗಳು, ಮೊದಲನೆಯ ಮಗನಂತೆ, ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವದಾದರೂ, ಯೇಸುವು ಗಮನಿಸಿದಂತೆ ಇದ್ದರು: “ಯೋಹಾನನು [ಸ್ನಾನಿಕನು] ಧರ್ಮ ಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಇದನ್ನು ನೋಡಿದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.”
ಈ ಧಾರ್ಮಿಕ ಮುಖಂಡರುಗಳ ತಪ್ಪಿಹೋಗುವಿಕೆಯು ದೇವರನ್ನು ಸೇವಿಸಲು ಅವರು ಕೇವಲ ತಾತ್ಸಾರಮಾಡಿದ್ದರಿಂದ ಅಲ್ಲ ಎಂದು ಯೇಸುವು ಮುಂದಕ್ಕೆ ತೋರಿಸುತ್ತಾನೆ. ಅಲ್ಲ, ಅವರು ನಿಜವಾಗಿ ಕೆಟ್ಟವರೂ, ದುಷ್ಟ ಜನರೂ ಆಗಿದ್ದರು. “ಒಬ್ಬ ಮನೆಯ ಯಜಮಾನನಿದ್ದನು,” ಯೇಸುವು ತಿಳಿಸುವದು, “ಅವನು ಒಂದು ದ್ರಾಕ್ಷೇತೋಟವನ್ನು ಮಾಡಿ ಅದರ ಸುತ್ತಲೂ ಬೇಲಿಹಾಕಿಸಿ ಅದರಲ್ಲಿ ದ್ರಾಕ್ಷೆಯ ಆಲೆಯನ್ನು ಮಾಡಿಸಿ ಹೂಡೆಯನ್ನು ಕಟ್ಟಿಸಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬೇರೊಂದು ದೇಶಕ್ಕೆ ಹೋದನು. ಫಲಕಾಲ ಹತ್ತರವಾದಾಗ, ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವದಕ್ಕಾಗಿ ಆ ಒಕ್ಕಲಿಗರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು ಒಕ್ಕಲಿಗರು ಅವನ ಆಳುಗಳನ್ನು ಹಿಡುಕೊಂಡು ಒಬ್ಬನನ್ನು ಹೊಡೆದರು, ಒಬ್ಬನನ್ನು ಕಡಿದು ಹಾಕಿದರು, ಒಬ್ಬನನ್ನು ಕಲ್ಲಿಸೆದು ಕೊಂದರು. ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು. ಅವರಿಗೂ ಹಾಗೆಯೇ ಮಾಡಿದನು.”
“ಮನೆಯ ಯಜಮಾನನಾದ” ಯೆಹೋವ ದೇವರು ಅವನ “ದ್ರಾಕ್ಷೇತೋಟದ” “ಒಕ್ಕಲಿಗರಿಗೆ” ಕಳುಹಿಸಿದ “ಆಳುಗಳು” ಪ್ರವಾದಿಗಳಾಗಿದ್ದರು. ಇಸ್ರಾಯೇಲ್ ಜನಾಂಗದ ಮುಖ್ಯ ಪ್ರತಿನಿಧಿಗಳು ಈ ಒಕ್ಕಲಿಗರಾಗಿದ್ದರು, ಈ ಜನಾಂಗವನ್ನು ದೇವರ “ದ್ರಾಕ್ಷೇತೋಟ” ಎಂದು ಬೈಬಲು ಗುರುತಿಸುತ್ತದೆ.
“ಒಕ್ಕಲಿಗರು” “ಆಳುಗಳನ್ನು” ಕೆಟ್ಟದ್ದಾಗಿ ಉಪಚರಿಸಿ, ಕೊಲ್ಲುವದರಿಂದ, ಯೇಸುವು ವಿವರಿಸುವದು: “ಕಡೆಯಲ್ಲಿ [ದ್ರಾಕ್ಷೇತೋಟದ ಧನಿಯು] ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು ಅಂದುಕೊಂಡು ತನ್ನ ಮಗನನ್ನು ಕಳುಹಿಸಿದನು. ಆದರೆ ಒಕ್ಕಲಿಗರು ಅವನ ಮಗನನ್ನು ಕಂಡು—ಇವನೇ ಬಾಧ್ಯಸ್ಥನು, ಬನ್ನಿ ಇವನನ್ನು ಕೊಂದುಹಾಕೋಣ, ಇವನ ಸ್ವಾಸ್ಥ್ಯವನ್ನು ನಾವೇ ತೆಗೆದುಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು ಅವನನ್ನು ಹಿಡಿದು ದ್ರಾಕ್ಷೇತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.”
ಈಗ ಧಾರ್ಮಿಕ ಮುಖಂಡರುಗಳನ್ನು ಸಂಬೋಧಿಸುತ್ತಾ, ಯೇಸುವು ವಿಚಾರಿಸುವದು: “ಹಾಗಾದರೆ ದ್ರಾಕ್ಷೇತೋಟದ ಧಣಿಯು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡುವನು?”
“ಆ ಕೆಡುಕರನ್ನು” ಧಾರ್ಮಿಕ ಮುಖಂಡರುಗಳು ಉತ್ತರಿಸುವದು, “ಕ್ರೂರವಾಗಿ ಸಂಹರಿಸಿ ಕಾಲಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ಒಕ್ಕಲಿಗರಿಗೆ ತನ್ನ ತೋಟವನ್ನು ವಾರಕ್ಕೆ ಕೊಡುವನು.”
ಈ ರೀತಿಯಲ್ಲಿ, ಅವರಿಗೆ ಅರಿವಿಲ್ಲದೆ ಸ್ವತಃ ತಮ್ಮ ಮೇಲೆ ಅವರು ನ್ಯಾಯತೀರ್ಪನ್ನು ಮಾಡಿಕೊಳ್ಳುತ್ತಾರೆ, ಯಾಕಂದರೆ ಯೆಹೋವನ ಇಸ್ರಾಯೇಲ್ ಎಂಬ ರಾಷ್ಟ್ರೀಯ “ದ್ರಾಕ್ಷೇತೋಟದ” ಇಸ್ರಾಯೇಲ್ “ಒಕ್ಕಲಿಗರಲ್ಲಿ” ಅವರೂ ಸೇರಿರುತ್ತಾರೆ. ಆ ಒಕ್ಕಲಿಗರಿಂದ ಯೆಹೋವನು ನಿರೀಕ್ಷಿಸುವ ಫಲವು ನಿಜ ಮೆಸ್ಸೀಯನಾದ ಅವನ ಮಗನ ಮೇಲೆ ನಂಬಿಕೆಯನ್ನಿಡುವದಾಗಿದೆ. ಅಂಥಹ ಫಲಗಳನ್ನು ಒದಗಿಸಲು ಅವರು ಸೋತ ಕಾರಣ, ಯೇಸುವು ಎಚ್ಚರಿಸುವದು: “ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು, ಇದು ಕರ್ತನಿಂದಲೇ [ಯೆಹೋವನಿಂದಲೇ, NW] ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ಶಾಸ್ತ್ರದಲ್ಲಿ (ಕೀರ್ತನೆ 118:22, 23 ರಲ್ಲಿ) ಎಂದಾದರೂ ಓದಲಿಲ್ಲವೋ? ಆದದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು. ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅವನನ್ನು ಪುಡಿಪುಡಿಮಾಡುವದು.”
ಯೇಸುವು ತಮ್ಮ ಕುರಿತೇ ಮಾತಾಡುತ್ತಾನೆಂದು ಶಾಸ್ತ್ರಿಗಳೂ ಮಹಾಯಾಜಕರೂ ಈಗ ತಿಳಿದುಕೊಳ್ಳುತ್ತಾರೆ ಮತ್ತು ನ್ಯಾಯಬದ್ಧ “ಬಾಧ್ಯಸ್ಥ”ನಾದ ಅವನನ್ನು ಕೊಲ್ಲಲು ಅವರು ಬಯಸುತ್ತಾರೆ. ಒಂದು ಜನಾಂಗದೋಪಾದಿ ದೇವರ ರಾಜ್ಯದಲ್ಲಿ ಅರಸರಾಗಿರುವ ಸುಯೋಗವು ಅವರಿಂದ ತೆಗೆಯಲ್ಪಡುವದು ಮತ್ತು ‘ದ್ರಾಕ್ಷೇತೋಟದ ಒಕ್ಕಲಿಗರಾಗಿ’ ತಕ್ಕದ್ದಾದ ಫಲಗಳನ್ನು ಉತ್ಪಾದಿಸುವ ಒಂದು ಹೊಸ ಜನಾಂಗವನ್ನು ರಚಿಸಲಾಗುವದು.
ಯೇಸುವು ಒಬ್ಬ ಪ್ರವಾದಿಯೆಂದು ಜನರು ಎಣಿಸಿದ್ದರಿಂದ, ಧಾರ್ಮಿಕ ಮುಂದಾಳುಗಳು ಜನರಿಗೆ ಭಯಪಟ್ಟು, ಆ ಸಂದರ್ಭದಲ್ಲಿ ಯೇಸುವನ್ನು ಕೊಲ್ಲಲು ಪ್ರಯತ್ನಿಸಲಿಲ್ಲ. ಮತ್ತಾಯ 21:28-46; ಮಾರ್ಕ 12:1-12; ಲೂಕ 20:9-19; ಯೆಶಾಯ 5:1-7.
▪ ಯೇಸುವಿನ ಮೊದಲ ಸಾಮ್ಯದಲ್ಲಿನ ಇಬ್ಬರು ಮಕ್ಕಳು ಯಾರನ್ನು ಪ್ರತಿನಿಧಿಸುತ್ತಾರೆ?
▪ ಎರಡನೆಯ ಸಾಮ್ಯದಲ್ಲಿ “ಮನೆಯ ಯಜಮಾನನು,” “ದ್ರಾಕ್ಷೇತೋಟ,” “ಒಕ್ಕಲಿಗರು,” “ಆಳುಗಳು,” ಮತ್ತು “ಬಾಧ್ಯಸ್ಥನು” ಯಾರನ್ನು ಪ್ರತಿನಿಧಿಸುತ್ತಾರೆ?
▪ ‘ದ್ರಾಕ್ಷೇತೋಟದ ಒಕ್ಕಲಿಗರು’ ಯಾರು ಆಗಲಿದ್ದರು, ಮತ್ತು ಅವರನ್ನು ಯಾರು ಸ್ಥಾನಪಲ್ಲಟ ಮಾಡುವರು?