ಸಂತೋಷದಿಂದ ತುಂಬಿಕೊಳ್ಳಿರಿ
“ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು.”—ಅಪೊಸ್ತಲರ ಕೃತ್ಯ 13:52.
1. (ಎ) ಸಂತೋಷವು ಯಾವ ರೀತಿಯ ಫಲವು? (ಬಿ) ಯಾವ ಸಂತೋಷಭರಿತ ಒದಗಿಸುವಿಕೆಗಾಗಿ ದೇವರನ್ನು ಮಹಿಮೆ ಪಡಿಸಬೇಕು?
ಸಂತೋಷ! ಈ ಕ್ರೈಸ್ತಗುಣವು, ಪವಿತ್ರಾತ್ಮದ ಫಲಗಳ ಪೌಲನ ವರ್ಣನೆಯಲ್ಲಿ ಪ್ರೀತಿಗೆ ಮಾತ್ರವೇ ಎರಡನೇ ಸ್ಥಾನದಲ್ಲಿದೆ. (ಗಲಾತ್ಯ 5:22-25) ಮತ್ತು ಆ ಸಂತೋಷಕ್ಕೆ ಕಾರಣವು ಯಾವುದು? ಸುಮಾರು 1900 ವರ್ಷಗಳ ಹಿಂದೆ ದೇವದೂತನು ದೀನ ಕುರುಬರಿಗೆ ಪ್ರಕಟಿಸಿದ ಆ ಸುವಾರ್ತೆಯೇ ಅದಕ್ಕೆ ಕಾರಣ: “ಕೇಳಿರಿ, ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಿನಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.” ಆನಂತರ ದೇವದೂತಗಣವು ಕಾಣಿಸಿಕೊಂಡು, ಆ ದೇವದೂತನ ಸಂಗಡ ಕೂಡಿಕೊಂಡು ದೇವರನ್ನು ಸ್ತುತಿಸುತ್ತಾ, ಅಂದದ್ದು: “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಹಿತೇಚ್ಛೆಯ ಮನುಷ್ಯರೊಳಗೆ ಸಮಾಧಾನ.”—ಲೂಕ 2:10-14, NW.
2, 3. (ಎ) ಮಾನವ ಕುಲದ ವಿಮೋಚಕನಾಗಲು ದೇವರು ತನ್ನ ಜ್ಯೇಷ್ಠ ಪುತ್ರನನ್ನು ಕಳುಹಿಸಿದ್ದು ಅತಿ ಯೋಗ್ಯವೇಕೆ? (ಬಿ) ಭೂಮಿಯಲ್ಲಿರುವಾಗ ಬೇರೆ ಯಾವ ರೀತಿಗಳಲ್ಲಿ ಯೇಸು ದೇವರ ಉದ್ದೇಶಗಳನ್ನು ಪೂರೈಸಿದನು?
2 ಯೆಹೋವನ ಹಿತೇಚ್ಛೆಯು ಮನುಷ್ಯರ ಕಡೆಗೆ ವ್ಯಕ್ತವಾದದ್ದು ಕರ್ತನಾದ ಕ್ರಿಸ್ತನ ಮೂಲಕ ರಕ್ಷಣೆಯನ್ನು ಒದಗಿಸಿದ್ದರಲ್ಲಿಯೇ. ಈ ಜ್ಯೇಷ್ಠ ದೇವ ಕುಮಾರನು ನಿಜ ಜ್ಞಾನದ ವ್ಯಕ್ತೀಕರಣವಾಗಿದ್ದಾನೆ, ಮತ್ತು ಈತನು ಸೃಷ್ಟಿಯ ಸಮಯದಲ್ಲಿ ತನ್ನ ತಂದೆಯ ಕುರಿತು ಹೀಗಂದದ್ದು ವಿವರಿಸಲ್ಪಟ್ಟಿದೆ: “ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ಸಂತೋಷಿಸುತ್ತಾ ಆತನ ಭೂಲೋಕದ ಫಲಭರಿತ ದೇಶದಲ್ಲಿ ಉಲ್ಲಾಸಿಸುತ್ತಾ ಮಾನವ ಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.”—ಜ್ಞಾನೋಕ್ತಿ 8:30, 31, ರಾದರ್ಹ್ಯಾಮ್.
3 ಮಾನವ ಸಂತಾನದಲ್ಲಿ ಅಷ್ಟೊಂದು ಹರ್ಷವನ್ನು ಕಂಡುಕೊಂಡು ಈ ಕುಮಾರನನ್ನು, ಮಾನವ ಕುಲದ ವಿಮೋಚಕನಾಗಿ ಯೆಹೋವನು ಕಳುಹಿಸಿಕೊಟ್ಟದ್ದು ಅತ್ಯಂತ ಯೋಗ್ಯವೇ ಸರಿ. ಮತ್ತು ಇದು ದೇವರಿಗೆ ಮಹಿಮೆಯನ್ನು ತರುವುದು ಹೇಗೆ? ಹೇಗಂದರೆ ಅದು ನೀತಿವಂತರೂ ಶಾಂತಿಪ್ರಿಯರೂ ಆದ ಮಾನವರಿಂದ ಭೂಮಿಯನ್ನು ತುಂಬಿಸುವ ದೇವರ ಮಹಾ ಉದ್ದೇಶವನ್ನು ಪೂರೈಸುವ ದಾರಿಯನ್ನು ಅವನಿಗಾಗಿ ತೆರೆಯಲಿತ್ತು. (ಆದಿಕಾಂಡ 1:28) ಅದಲ್ಲದೆ ಈ ಕುಮಾರನಾದ ಯೇಸು, ಭೂಮಿಯಲ್ಲಿರುವಾಗ, ಅತ್ಯಂತ ಕಠಿಣ ಪರೀಕ್ಷೆಯ ಕೆಳಗೂ ಸಾರ್ವಭೌಮ ಕರ್ತನಾದ ಯೆಹೋವನಿಗೆ ಒಬ್ಬ ಪರಿಪೂರ್ಣ ಮನುಷ್ಯನು ನಿಷ್ಠೆಯಿಂದ ವಿಧೇಯನಾಗಶಕ್ತನು ಎಂದು ತೋರಿಸಿ, ತನ್ನ ಸೃಷ್ಟಿಯ ಮೇಲೆ ತಂದೆಯ ನ್ಯಾಯಬದ್ಧ ಒಡೆತನವನ್ನು ಹೀಗೆ ಪೂರ್ಣವಾಗಿ ಸಮರ್ಥಿಸಲಿದ್ದನು. (ಇಬ್ರಿಯ 4:15; 5:8, 9) ಯೇಸುವಿನ ಸಮಗ್ರತೆ-ಪಾಲನೆಯ ಮಾರ್ಗವು ಸಹಾ, ಎಲ್ಲಾ ನಿಜ ಕ್ರೈಸ್ತರಿಗೆ ಆತನ ಹೆಜ್ಜೆಗಳನ್ನು ಒತ್ತಾಗಿ ಹಿಂಬಾಲಿಸುವಂತೆ ಒಂದು ಮಾದರಿಯನ್ನು ಇಟ್ಟಿತು.—1 ಪೇತ್ರ 2:21.
4. ಯೇಸುವಿನ ತಾಳ್ಮೆಯು ಯಾವ ಮಹಾ ಸಂತೋಷದಲ್ಲಿ ಫಲಿಸಿಯದೆ ಮತ್ತು ಇದು ನಮ್ಮನ್ನು ಹೇಗೆ ಪ್ರೋತ್ಸಾಹಿಸಬೇಕು?
4 ಹೀಗೆ ತನ್ನ ತಂದೆಯ ಚಿತ್ತವನ್ನು ಮಾಡಿದರಲ್ಲಿ ಅತ್ಯಂತ ಮಿಗಿಲಾದ ಸಂತೋಷವನ್ನು ಯೇಸು ಪಡೆದನು ಮತ್ತು ಅದು, ಇನ್ನೂ ಹೆಚ್ಚಿನ ಸಂತೋಷದ ಮುನ್ನೋಟದಲ್ಲಿ, ಅಪೊಸ್ತಲ ಪೌಲನು ಇಬ್ರಿಯರಿಗೆ 12:1, 2 ರಲ್ಲಿ ಅದನ್ನು ಸೂಚಿಸಿದ್ದು: “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾಕಂಭದ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” ಇದು ಎಂತಹ ಸಂತೋಷ? ಯೇಸುವಿಗಿದ್ದ ಈ ಸಂತೋಷವು ಯಾವುದೆಂದರೆ, ತನ್ನ ತಂದೆಯ ಹೆಸರನ್ನು ಪವಿತ್ರ ಮಾಡುವುದರಿಂದ ಹಾಗೂ ಮಾನವ ಕುಲವನ್ನು ಮರಣದಿಂದ ವಿಮೋಚಿಸುವುದರಿಂದ ಮಾತ್ರವೇ ಅಲ್ಲ, ರಾಜ-ಯಾಜಕನಾಗಿ ವಿಧೇಯ ಮಾನವರನ್ನು ಪರದೈಸ ಭೂಮಿಯಲ್ಲಿ ಅನಂತ ಜೀವನಕ್ಕೆ ಪುನಃಸ್ಥಾಪಿಸುವುದರಿಂದಲೂ ದೊರೆಯಲಿದ್ದ ಸಂತೋಷವೇ.—ಮತ್ತಾಯ 6:9, 20:28; ಇಬ್ರಿಯರಿಗೆ 7:23-26.
5. ಯೇಸುವಿನ “ಸಹೋದರರು” ಯಾರು, ಮತ್ತು ಯಾವ ಅಸದೃಶ ಸಂತೋಷದಲ್ಲಿ ಅವರು ಪಾಲಿಗರಾಗಿದ್ದಾರೆ?
5 ಹೌದು, ದೇವರ ಮಗನು ಯಾವಾಗಲೂ ಮಾನವಕುಲದ ಸೇವೆಯಲ್ಲಿ ಆನಂದವನ್ನು ಕಂಡುಕೊಂಡನು. ಮತ್ತು, ಯಾರನ್ನು ತನ್ನ “ಸಹೋದರರು” ಎಂದಾತನು ಕರೆಯುತ್ತಾನೋ ಮತ್ತು ಯಾರು ಮರಣದಲ್ಲಿ ಪರಲೋಕಕ್ಕೆ ಪುನರುತ್ಥಾನ ಪಡೆಯುತ್ತಾರೋ ಆ ಸಮಗ್ರತೆ-ಪಾಲಕ ಮಾನವರ ಗುಂಪನ್ನು ಆರಿಸುವುದರಲ್ಲಿಯೂ ತನ್ನ ತಂದೆಯೊಂದಿಗೆ ಜತೆಗೂಡುವುದರಲ್ಲಿ ಅವನು ಸಂತೋಷಪಟ್ಟನು. ಅವರು ಯೇಸುವಿನೊಂದಿಗೆ ಆ ಅಸದೃಶ ಸಂತೋಷಕ್ಕೆ ಪ್ರವೇಶಿಸುವರು. ಅವರು “ಧನ್ಯರೂ ಪರಿಶುದ್ಧರೂ” ಆಗಿ ಕರೆಯಲ್ಪಟ್ಟಿದ್ದಾರೆ, ಮತ್ತು ಅವರು “ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.”—ಇಬ್ರಿಯರಿಗೆ 2:11; ಪ್ರಕಟನೆ 14:1, 4; 20:6.
6. (ಎ) ಯಾವ ಸಂತೋಷಭರಿತ ಆಮಂತ್ರಣವನ್ನು ರಾಜನು ತನ್ನ “ಬೇರೆ ಕುರಿ”ಗಳಿಗೆ ನೀಡುತ್ತಾನೆ? (ಬಿ) ಈ ಕುರಿಗಳಲ್ಲಿ ಹೆಚ್ಚಿನವರು ಇಂದು ಯಾವ ಸುಯೋಗಗಳಲ್ಲಿ ಆನಂದಿಸುತ್ತಾರೆ?
6 ಅದಲ್ಲದೆ ಆಳುವ ರಾಜನು ಯಾರನ್ನು ತನ್ನ ಅನುಗ್ರಹದ ಬಲಗಡೆಗೆ ಪ್ರತ್ಯೇಕಿಸುತ್ತಾನೋ ಆ “ಬೇರೆ ಕುರಿಗಳ” ಮಹಾ ಸಮೂಹದವರು ಆತನ ಈ ಆಮಂತ್ರಣವನ್ನು ಪಡೆಯುವರು: “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ತೆಗೆದುಕೊಳ್ಳಿರಿ.” (ಯೋಹಾನ 10:16; ಮತ್ತಾಯ 25:34) ಎಂತಹ ಸಂತೋಷಭರಿತ ಸುಯೋಗವು! ರಾಜ್ಯದ ಭೂಕ್ಷೇತ್ರವನ್ನು ಸ್ವಾಸ್ಥ್ಯವಾಗಿ ಪಡೆಯುವ ಇವರಲ್ಲಿ ಅನೇಕರು, ಅಭಿಷಿಕ್ತ ಉಳಿಕೆಯವರೊಂದಿಗೆ ಈಗಲೂ ಜವಾಬ್ದಾರಿಕೆಯ ನೇಮಕಗಳನ್ನು ಪಡೆಯುತ್ತಲಿದ್ದಾರೆ. ಇದು ಯೆಹೋವನು ಮುಂತಿಳಿಸಿದಂತೆಯೇ ಇದೆ: “ಆಗ ವಿದೇಶಿಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ತೋಟಗಾರರರೂ ಆಗುವರು. ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ. ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು.” ಇವರೆಲ್ಲರೂ ದೇವರ ಪ್ರವಾದಿಯೊಂದಿಗೆ ಹೀಗನ್ನುವುದರಲ್ಲಿ ಕೂಡಿಕೊಳ್ಳುವರು: “ನಾನು ಯೆಹೋವನಲ್ಲಿ ಪರಮಾನಂದ ಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿದ್ದಾನೆ.”—ಯೆಶಾಯ 61:5, 6, 10.
7. 1914ರಿಂದ ಈ “ದಿನ”ವು ಅತ್ಯಂತ ವಿಶೇಷವಾಗಿರುವುದೇಕೆ?
7 ನಾವಿಂದು ಒಂದು ಅತ್ಯಂತ ವಿಶೇಷ ದಿನದಲ್ಲಿ ಜೀವಿಸುತ್ತಿದ್ದೇವೆ. 1914ರಿಂದ ಅದು ಸ್ವರ್ಗೀಯ ಅರಸನಾದ ಕ್ರಿಸ್ತನ ಆಳಿಕೆಯ ದಿನವಾಗಿದೆ. ಕೀರ್ತನೆ 118:24, 25ರಲ್ಲಿ ಅದು ವರ್ಣಿಸಲ್ಪಟ್ಟದ್ದು: “ಈ ದಿನವು ಯೆಹೋವನಿಂದಲೇ ನೇಮಕವಾದದ್ದು. ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ. ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.” ಆ ದಿನವು, ಯೆಹೋವನು ಬಬಿಲೋನ್ಯ ಧರ್ಮವನ್ನು ನಾಶಗೊಳಿಸುವಾಗ ಮತ್ತು 144,000 ಸಹೋದರರಾದ ಕ್ರಿಸ್ತನ ವಧುವನ್ನು ಅವರ ಸ್ವರ್ಗೀಯ ರಾಜನೊಂದಿಗೆ ಒಟ್ಟುಗೂಡಿಸುವಾಗ, ಒಂದು ತುತ್ತತುದಿಯನ್ನು ಮುಟ್ಟುವುದು. ಇದರಿಂದಾಗಿ ದೇವಜನರೆಲ್ಲರೂ “ಸಂತೋಷ ಪಡುವರು, ಪರಮಾನಂದ ಹೊಂದುವರು.” ಅವರ ಮೆಸ್ಸೀಯ ರಾಜನು ಹರ್ಮಗೆದ್ದೋನಿನಲ್ಲಿ, ತನ್ನ ನಿಷ್ಠೆಯುಳ್ಳ ರಾಷ್ಟ್ರವನ್ನು ನೀತಿಯ ನೂತನ ಲೋಕಕ್ಕೆ ರಕ್ಷಿಸುವುದಕ್ಕಾಗಿ ಹೋರಾಡುವಾಗಲೂ ಅವರು ಸಂತೋಷ ಪಡುವರು. (ಪ್ರಕಟನೆ 19:1-7, 10-16) ಆತನ ಜನರು ಈ ಸಂತೋಷಭರಿತ ನಿರೀಕ್ಷೆಯನ್ನು ಘೋಷಿಸುವಾಗ ಯೆಹೋವನು ಸಾಫಲ್ಯವನ್ನು ಕೊಡುತ್ತಾನೋ? ಕೆಳಗಿನ ವರದಿಯು ವಿವರಿಸುತ್ತದೆ.
ಲೋಕವ್ಯಾಪಕ ವೃದ್ಧಿ
8. (ಎ) ಪವಿತ್ರಾತ್ಮದೊಂದಿಗಿನ ಸಂತೋಷವು 1991 ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ ವರದಿಯಲ್ಲಿ ಹೇಗೆ ಪ್ರತಿಬಿಂಬಿತವಾಗಿದೆ? (ಬಿ) ಆ ವರದಿಯ ಕೆಲವು ಮುಖ್ಯಾಂಶಗಳು ಯಾವುವು?
8 ಯೆಹೋವನ ಆಧುನಿಕ ದಿನದ ಸಾಕ್ಷಿಗಳು “ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದು”ತ್ತಲಿದ್ದಾರೆ. (ರೋಮಾಪುರ 15:13) ಇದು, ಎಲ್ಲಿ 1990ರ ರಾಜ್ಯಸೇವೆಯ ಲೋಕವ್ಯಾಪಕ ವರದಿಯು ಸವಿಸ್ತಾರವಾಗಿ ಕೊಡಲ್ಪಟ್ಟಿದೆಯೋ ಆ 1991ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ ತಖ್ತೆಯಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಕ್ಷೇತ್ರದಲ್ಲಿ ಕ್ರಿಯಾಶೀಲ ಶುಶ್ರೂಷಕರ 40,17,213 ಹೊಸ ಉನ್ನತ ಸಂಖ್ಯೆಯನ್ನು ಕಾಣಲು ನಾವೆಷ್ಟು ಸಂತೋಷಪಡುತ್ತೇವೆ! ಇದು ಕಳೆದ ಹತ್ತು ವರ್ಷಗಳಲ್ಲಿ, ಕುರಿಗಳ ಒಟ್ಟುಗೂಡಿಸುವಿಕೆಯು ಭೂಸುತ್ತಲೂ 212 ದೇಶಗಳಲ್ಲಿ ಮುಂದರಿಯುತ್ತಾ ಹೋಗುವಾಗ, 77 ಶೇಕಡಾ ಅಭಿವೃದ್ಧಿಯನ್ನು ಬರಮಾಡಿದೆ. 15 ವರ್ಷಗಳ ತರುವಾಯ, ದೀಕ್ಷಾಸ್ನಾನವು ಪುನಃ ಅತ್ಯುನ್ನತ ಸಂಖ್ಯೆಯಾದ—3,01,518ನ್ನು ಮುಟ್ಟಿದೆ! ಅನೇಕ ಅಧಿವೇಶನಗಳಲ್ಲಿ, ವಿಶೇಷವಾಗಿ ಪೂರ್ವ ಯುರೋಪಿನ ಸಾಕ್ಷಿಗಳಿಂದ ಹಾಜರಾದವುಗಳಲ್ಲಿ, ವಿಶೇಷ ರೀತಿಯಲ್ಲಿ ಅತ್ಯುನ್ನತವಾದ ದೀಕ್ಷಾಸ್ನಾನದ ಸಂಖ್ಯೆಗಳು ಸಿಕ್ಕಿವೆ. ಇವರಲ್ಲಿ ಅಧಿಕ ಸಂಖ್ಯಾತರು ಯುವಜನರಾಗಿದ್ದ ನಿಜತ್ವವು, ಧರ್ಮವು ಮುದೀಜನರೊಂದಿಗೆ ಸತ್ತುಹೋಗುವುದು ಎಂಬ ಸಮತಾವಾದಿಗಳ ವಾದವನ್ನು ಹುಸಿಮಾಡಿದೆ.
9. (ಎ) ಬಾಲ್ಯದಿಂದಲೇ ಹೆತ್ತವರು ಕೊಡುವ ತರಬೇತು ಯಾವ ಸಂತೋಷವುಳ್ಳ ಫಲಿತಾಂಶವನ್ನು ತರುತ್ತದೆ? (ಬಿ) ಯಾವ ಸ್ಥಳೀಕ ಅಥವಾ ಬೇರೆ ಅನುಭವಗಳು ಇದನ್ನು ದೃಢೀಕರಿಸುತ್ತವೆ?
9 ಯುವಜನರ ದೊಡ್ಡ ಸಮುದಾಯವೇ ಕೀರ್ತನೆ 32:11ರ ಕರೆಗೆ ಓಗೊಡುತ್ತಾ ಇದೆ: “ನೀತಿವಂತರೇ, ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸಿಸಿರಿ. ಯಥಾರ್ಥಚಿತ್ತರೇ, ಆತನ ವಿಷಯದಲ್ಲಿ ಉತ್ಸಾಹಧ್ವನಿ ಮಾಡಿರಿ.” ಅನೇಕ ಹೆತ್ತವರು ತಮ್ಮ ಎಳೆಯರನ್ನು “ಬಾಲ್ಯದಿಂದಲೇ” ತರಬೇತು ಮಾಡುವ ಸೂಚನೆಯನ್ನು ಅನ್ವಯಿಸುತ್ತಿರುವಂತೆ ಕಾಣುತ್ತದೆ. (2 ತಿಮೋಥಿ 3:15) ಆ ಕಿರು ವಯಸ್ಸಿನವರಿಗಾಗಿ ಒದಗಿಸಲ್ಪಟ್ಟ ಪ್ರಕಾಶನಗಳನ್ನು ಮತ್ತು ಕ್ಯಾಸೆಟ್ ಟೇಪುಗಳನ್ನು ಸದುಪಯೋಗಕ್ಕೆ ಹಾಕಲಾಗಿದೆ. ಈ ಎಳೆಯರು ಶಾಲೆಯನ್ನು ಪ್ರವೇಶಿಸುವಾಗ, ಬೇಗನೆ ಉತ್ತಮ ಸಾಕ್ಷಿಯನ್ನು ಕೊಡಶಕ್ತರಾಗುತ್ತಾರೆ. ಉದಾಹರಣೆಗಾಗಿ, ಒಬ್ಬ ಎಂಟು ವಯಸ್ಸಿನ ಜಾಪನೀಸ್ ಹುಡುಗಿ ವರದಿ ಮಾಡಿದ್ದು: “ಬೇಸಗೆಯ ರಜೆಯ ನಂತರ ನಾನು ನನ್ನ ಟೀಚರನ್ನು ಗೋಚರಿಸಿ, ‘ರಜೆಯಲ್ಲಿ ನೀವು ನಿಮ್ಮ ತಂದೆಯ ಸಮಾಧಿಯನ್ನು ಸಂದರ್ಶಿಸಿದಿರೋ’ ಎಂದು ಕೇಳಿದೆ. ‘ಹೌದು, ನನ್ನ ತಂದೆ ಬಹು ದಯಾರ್ದ್ರ ಜನ, ನಾನವರ ಸಮಾಧಿಯನ್ನು ಪ್ರತಿ ವರ್ಷ ಸಂದರ್ಶಿಸುತ್ತೇನೆ’ ಎಂದು ಆಕೆ ಉತ್ತರಿಸಿದಳು. ನಾನಂದದ್ದು: ‘ನೀವು ಬೈಬಲನ್ನು ಅಭ್ಯಾಸಿಸಿದರೆ ಮತ್ತು ದೇವರ ಬೋಧನೆಗಳನ್ನು ಪಾಲಿಸಿದರೆ, ಭೂಪ್ರಮೋದವನದಲ್ಲಿ ಅವರನ್ನು ನೀವು ನೋಡುವಿರಿ.’ ಅನಂತರ ನಾನು ಅವಳಿಗೆ ಮೈ ಬುಕ್ ಆಫ್ ಬೈಬಲ್ ಸ್ಟೋರಿಸ್ ಕೊಟ್ಟೆ. ಈಗ ನಮ್ಮ ಟೀಚರ್ ಈ ಪುಸ್ತಕದ ಒಂದು ಅಧ್ಯಾಯವನ್ನು ಪ್ರತೀ ವಾರ ಮಧ್ಯಾಹ್ನದೂಟದ ಸಮಯ ಇಡೀ ಕ್ಲಾಸಿಗೆ ಓದಿಹೇಳುತ್ತಾರೆ.”
10. ಯಂಗ್ ಪೀಪಲ್ ಆಸ್ಕ್ ಎಂಬ ಪುಸ್ತಕದಿಂದ ಯಾವ ಸದುದ್ದೇಶವು ಪೂರೈಸಲ್ಪಟ್ಟಿದೆ, ಮತ್ತು ಕೆಲವು ಉದಾಹರಣೆಗಳಾವುವು?
10 ಹದಿವಯಸ್ಸಿನ ಯುವಜನರು, ಕ್ವೆಶ್ಚನ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಪುಸ್ತಕದ ಸದುಪಯೋಗವನ್ನು, ವ್ಯಕ್ತಿಪರ ಅಧ್ಯಯನದಲ್ಲಿ ಮತ್ತು ಇತರ ಯುವಕರಿಗೆ ಸಾಕ್ಷಿಕೊಡುವುದರಲ್ಲಿ ಎರಡರಲ್ಲಿಯೂ ಮಾಡಿದ್ದಾರೆ. ಹೆತ್ತವರು ಸಹಾ ಈ ಪುಸ್ತಕವನ್ನು ಗಣ್ಯಮಾಡಿರುತ್ತಾರೆ. ಸಹಾಯಕ ಪಯನೀಯರ ಸೇವೆ ಮಾಡುತ್ತಿದ್ದ ಒಬ್ಬ ಸ್ವಿಟ್ಸರ್ಲೆಂಡಿನ ಸಹೋದರಿಯು ತನ್ನ ಮಗುವಿನ ಸಹಪಾಠಿಗಳ ಹೆತ್ತವರನ್ನು ಸಂದರ್ಶಿಸಲು ನಿಶ್ಚೈಸಿದಳು. ಇದು ಅನೇಕ ಹೆತ್ತವರೊಂದಿಗೆ ಉತ್ತಮ ಚರ್ಚೆಗಳಿಗೆ ದಾರಿಮಾಡಿತು, ಮತ್ತು 20 ಪುಸ್ತಕಗಳು (ಹೆಚ್ಚಿನವು ಯಂಗ್ ಪೀಪಲ್ ಆಸ್ಕ್) ಹಾಗೂ 27 ಪತ್ರಿಕೆಗಳು ಅವರೊಂದಿಗೆ ನೀಡಲ್ಪಟ್ಟವು. ತ್ರಿನಿದಾದ್ನ ವಿದ್ಯಾರ್ಥಿನಿ ಒಬ್ಬಳು ಈ ಪುಸ್ತಕವನ್ನು ತನ್ನ ಶಾಲಾ ಅಧ್ಯಾಪಿಕೆಯೊಂದಿಗೆ ನೀಡಿದಾಗ, ಅವಳ ತಾಯಿ ಪುನರ್ಭೇಟಿ ಮಾಡಿದಳು ಮತ್ತು 36 ಮಂದಿಯ ಸಿಬ್ಬಂಧಿಯೊಂದಿಗೆ 25 ಪ್ರತಿಯನ್ನು ಹಂಚಿದಳು. ಮುಂದಿನ ತಿಂಗಳಲ್ಲೂ ಮುಂದರಿಸಿ, ತನಗೆ ವ್ಯಕ್ತಿಶಃ ಪರಿಚಿತರಿದ್ದ ಹೆತ್ತವರಿಗೆ ವಿಶೇಷ ಗಮನಕೊಟ್ಟು ಸಂದರ್ಶಿಸಿ, ಮತ್ತೂ 92 ಪುಸ್ತಕಗಳನ್ನು ಹಂಚಿದಳು ಹಾಗೂ ಹೊಸ ಮನೆ ಬೈಬಲಬ್ಯಾಸಗಳನ್ನು ಪ್ರಾರಂಭಿಸಿದಳು. ಕೊರಿಯಾದಲ್ಲಿ ಒಬ್ಬಾಕೆ ಮಾಧ್ಯಮಿಕ ಶಾಲಾ ಟೀಚರ್ ಯಂಗ್ ಪೀಪಲ್ ಆಸ್ಕ್ ಪುಸ್ತಕವನ್ನುಪಯೋಗಿಸಿ, “ನಾನು ನನ್ನ ರ್ಯಾಂಕನ್ನು ಪ್ರಗತಿ ಮಾಡುವುದು ಹೇಗೆ?” ಮತ್ತು “ನಾನು ನನ್ನ ಟೀಚರೊಂದಿಗೆ ಒಳ್ಳೇ ಸಂಬಂಧಲ್ಲಿರುವುದು ಹೇಗೆ? ಮುಂತಾದ ವಿಷಯಗಳ ಮೇಲೆ ಚಿಕ್ಕ ಪ್ರಸಂಗವನ್ನು ಕೊಟ್ಟು ಆನಂತರ ಪುಸ್ತಕ ನೀಡಿದಳು. ವಿದ್ಯಾರ್ಥಿಗಳು 39 ಪುಸ್ತಕಗಳನ್ನು ತಕ್ಕೊಂಡಾದ ಮೇಲೆ, ಕೆಲವು ಹೆತ್ತವರು ದೂರಲು ಪ್ರಾರಂಭಿಸಿದರು. ಆದರೆ ಪ್ರಾಧ್ಯಾಪಕನು ಪುಸ್ತಕವನ್ನು ಪರೀಕ್ಷಿಸಿ, “ಬಹಳ ಒಳ್ಳೇದು” ಅಂದನು ಮತ್ತು ತನ್ನ ಸ್ವಂತ ಮಗಳಿಗಾಗಿ ಒಂದನ್ನು ಆರ್ಡರ್ ಮಾಡಿದನು.
ಅತ್ಯುತ್ತಮ ಶಿಕ್ಷಣ
11, 12. ವಾಚ್ಟವರ್ ಸೊಸೈಟಿಯ ಪ್ರಕಾಶನಗಳು ಅತ್ಯುತ್ತಮ ಶಿಕ್ಷಣವನ್ನು ಒದಗಿಸುತ್ತವೆಂಬ ನಿಜತ್ವಕ್ಕೆ ಕೆಲವು ಸಾಕ್ಷ್ಯಗಳು ಯಾವುವು?
11 ನಮ್ಮ ಪತ್ರಿಕೆಗಳ ಶೈಕ್ಷಣಿಕ ಮೂಲ್ಯತೆಯು ಅನೇಕರಿಂದ ಗಣ್ಯ ಮಾಡಲ್ಪಟ್ಟಿದೆ. ಉದಾಹರಣೆಗೆ, ಅಮೆರಿಕದ ಒಂದು ಶಾಲೆಯು ತನ್ನ ಕ್ಲಾಸುಗಳ ಉಪಯೋಗಕ್ಕಾಗಿ, ಜುಲೈ 22, 1990ರ ಅವೇಕ್! (ಕ್ರಾಕ್ ಮಾದಕದ್ರವ್ಯ ಚಟವನ್ನು ಬಯಲುಪಡಿಸಿದ) ಪತ್ರಿಕೆಯ 1,200 ಪ್ರತಿಗಳಿಗಾಗಿ ಆರ್ಡರ್ ಮಾಡಿತ್ತು. ಅದಲ್ಲದೆ, ಶಾಲೆಯಲ್ಲಿ ಯೆಹೋವನ ಸಾಕ್ಷಿಗಳ ಮಕ್ಕಳ ಆದರ್ಶ ನಡವಳಿಕೆಯು ಒಳ್ಳೇ ಪ್ರಭಾವವನ್ನು ಬೀರುತ್ತಲಿದೆ. ಥೈಲೆಂಡಿನ ಒಂದು ಗಲಭೆಯ ಕ್ಲಾಸ್ರೂಮ್ನಲ್ಲಿ ಅಧ್ಯಾಪಕನು 11 ವಯಸ್ಸಿನ ರೇಚಾನನ್ನು ಕ್ಲಾಸಿನ ಮಂದೆ ಕರೆದು ಅವನನ್ನು ಹೊಗಳುತ್ತಾ, “ನೀವೆಲ್ಲರೂ ಇವನನ್ನು ಏಕೆ ಮಾದರಿಯಾಗಿ ತಕ್ಕೊಳ್ಳುವುದಿಲ್ಲ? ಇವನು ತನ್ನ ಪಾಠಗಳಲ್ಲಿ ಆಸಕ್ತನೂ ಸದ್ವರ್ತನೆಯವನೂ ಆಗಿದ್ದಾನೆ” ಎಂದಳು. ಅವಳು ಮತ್ತೂ ಅಂದದ್ದು: “ನಿಮ್ಮ ನಡವಳಿಕೆಯನ್ನು ಪ್ರಗತಿ ಮಾಡಲು ನೀವು ರೇಚಾನಂತೆ ಯೆಹೋವನ ಸಾಕ್ಷಿಯಾಗಲೇ ಬೇಕೆಂತ ನನಗೆ ತೋಚುತ್ತದೆ.”—ಜ್ಞಾನೋಕ್ತಿ 1:8; 23:22, 23 ಹೋಲಿಸಿರಿ.
12 ಡೊಮಿನಿಕನ್ ರಿಪಬ್ಲಿಕನ್ ಒಬ್ಬ ಯುವ ಸಹೋದರಿಯು ಬರೆಯುವುದು: “ನಾನು ಕೇವಲ ನಾಲ್ಕು ವರ್ಷದವಳಾಗಿದ್ದಾಗ. ಓದು-ಬರಹವನ್ನು ಕಲಿಯುತಿದ್ದ ಒಂದು ಧಾರ್ಮಿಕ ಶಾಲಾಪೂರ್ವ ತರಗತಿಯಲ್ಲಿ ಉತ್ತೀರ್ಣಳಾಗುವುದರಲ್ಲಿದ್ದೆ. ನನ್ನ ಟೀಚರಾದ ‘ನನ್’ (ಕ್ಯಾಥಲಿಕ್ ಸಂನ್ಯಾಸಿನಿ)ಗೆ ಕೊಡುಗೆಯಾಗಿ ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರಡೈಸ್ ಆನ್ ಅರ್ಥ್ ಪುಸ್ತಕವನ್ನು ಕೊಟ್ಟೆ, ಈ ಸಂದೇಶದೊಂದಿಗೆ: ‘ನನಗೆ ಓದು-ಬರಹ ಕಲಿಸಿದಕ್ಕಾಗಿ ನಾನು ನಿಮಗೆ ತುಂಬಾ ಆಭಾರಿ. ನನ್ನ ನಂಬಿಕೆಯನ್ನು ಸಹಾ ನೀವು ತಿಳುಕೊಳ್ಳುವಂತೆ ಮತ್ತು ಈ ಭೂಮಿಯು ಪರದೈಸವಾಗುವಾಗ ಸದಾ ಜೀವಿಸುವ ನನ್ನ ನಿರೀಕ್ಷೆಯನ್ನು ನೀವೂ ಹೊಂದುವಂತೆ ನಾನು ಇಚ್ಛೈಸುತ್ತೇನೆ.’ ಇದಕ್ಕಾಗಿ ನನ್ನನ್ನು ಶಾಲೆಯಿಂದ ತೆಗೆದುಹಾಕಿದರು. ಎಂಟು ವರ್ಷಗಳ ನಂತರ ನನಗೆ ಪುನಃ ಈ ಟೀಚರ್ ಭೇಟಿಯಾದಳು. ಪಾದ್ರಿಯಿಂದ ಬಹಳ ವಿರೋಧದ ಮಧ್ಯೆಯೂ ತಾನು ಆ ಪುಸ್ತಕವನ್ನು ಹೇಗೆ ಓದಿಮುಗಿಸಿದೆ ಎಂದಾಕೆ ವಿವರಿಸಿದಳು. ಮತ್ತು ಶಹರಕ್ಕೆ ಸ್ಥಳಾಂತರ ಮಾಡಿ, ಅಲ್ಲಿ ಒಬ್ಬ ಸಾಕ್ಷಿಯೊಂದಿಗೆ ಬೈಬಲಭ್ಯಾಸ ತಕ್ಕೊಂಡಳು. ‘ಶುದ್ಧಭಾಷೆ’ ಜಿಲ್ಲಾ ಅಧಿವೇಶನದಲ್ಲಿ ನನ್ನೊಂದಿಗೆ ಅವಳೂ ದೀಕ್ಷಾಸ್ನಾನ ಪಡಕೊಂಡಳು.” ಪ್ರವಾದಿಸಲ್ಪಟ್ಟ ಪ್ರಕಾರವೇ, “ಬಾಲಕರ ಬಾಯಿಂದಲೂ” ವಿವೇಕದ ನುಡಿಗಳು ಹೊರಡಬಲ್ಲವು!—ಮತ್ತಾಯ 21:16; ಕೀರ್ತನೆ 8:1, 2.
13. ಸೊಲೊಮೋನನ ಸೂಚನೆಗೆ ಅನೇಕ ಹದಿಹರೆಯದವರು ಹೇಗೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ, ಮತ್ತು ಲೋಕವ್ಯಾಪಕ ವರದಿಯಲ್ಲಿ ಇದು ಹೇಗೆ ಪ್ರತಿಬಿಂಬಿಸಿಯದೆ?
13 ಸೊಲಮೋನನು ಪ್ರೋತ್ಸಾಹನೀಯ ಸೂಚನೆಯನ್ನು ಕೊಟ್ಟನು: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಹರ್ಷಗೊಳಿಸಲಿ. ಹೃದಯಕ್ಕೆ ತಕ್ಕಂತೆ ನಡೆದುಕೋ.” (ಪ್ರಸಂಗಿ 11:9) ಯೆಹೋವನ ಸಾಕ್ಷಿಗಳ ಎಷ್ಟೋ ಮಕ್ಕಳು ಇಂದು ಈ ಮಾತುಗಳನ್ನು ಅನ್ವಯಿಸಿಕೊಳ್ಳುತ್ತಾ, ತಮ್ಮ ಹದಿಹರೆಯದ ವರ್ಷಗಳನ್ನು ಯೆಹೋವನ ಪೂರ್ಣ ಸಮಯದ ಸೇವೆಯ ಒಂದು ಜೀವಿತಕ್ಕಾಗಿ ತಮ್ಮನ್ನು ತಯಾರಿಸಲು ಉಪಯೋಗಿಸುವುದು ಮತ್ತು ಶಾಲೆಯಿಂದ ಉತ್ತೀರ್ಣರಾದಾಗ ಎಲ್ಲಾ ಕಸುಬಿಗಿಂತ ಅತ್ಯಂತ ಮಹತ್ತಾದ ಆ ಸೇವೆಯೊಳಗೆ ಪ್ರವೇಶಿಸುವುದನ್ನು ಕಾಣುವುದು ಸಂತೋಷವೇ ಸರಿ. ಪಯನೀಯರ ದರ್ಜೆಗಳು ತೀವ್ರಗತಿಯಲ್ಲಿ ವೃದ್ಧಿಯಾಗುತ್ತಾ ಇವೆ, ವರ್ಷದಲ್ಲಿ 8,21,108 ಪಯನೀಯರರು ವರದಿ ಮಾಡಿದ್ದಾರೆ. ಬೆತೇಲ್ನಲ್ಲಿ ಸೇವೆಮಾಡುವ 11,092 ಮಂದಿ ಸಹೋದರ ಮತ್ತು ಸಹೋದರಿಯರೊಂದಿಗೆ ಅದು, ಜುಮ್ಲಾ ಪ್ರಚಾರಕರ 21 ಶೇಕಡಾವನ್ನು ಪ್ರತಿನಿಧೀಕರಿಸುತ್ತದೆ!
14. ನಮ್ಮ ಸಹೋದರಿಯರು ಯಾವ ನೆರವನ್ನು ನೀಡುತ್ತಿದ್ದಾರೆ ಮತ್ತು ಅವರು ಯಾವ ಪ್ರಶಂಸೆಗೆ ಪಾತ್ರರು?
14 ಅಮೆರಿಕವೇ ಮುಂತಾದ ಅನೇಕ ದೇಶಗಳಲ್ಲಿ ಎಲ್ಲಾ ಪಯನೀಯರ ಪ್ರಚಾರಕರ ಸುಮಾರು 75 ಶೇಕಡಾ ಜನರು ಸಹೋದರಿಯರಾಗಿರುವುದು. ಸ್ವಾರಸ್ಯಕರ; ಇದು ಕೀರ್ತನೆ 68:11ರ ಮಾತುಗಳಿಗೆ ಬಲವನ್ನು ಕೊಡುತ್ತದೆ: “ಯೆಹೋವನು ನುಡಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀ ಸಮೂಹವು ಎಷ್ಟೋ ದೊಡ್ಡದು.” ಕ್ಷೇತ್ರ ಸೇವೆಯ ಹೆಚ್ಚಿನ ಪಾಲನ್ನು ಮಾಡುತ್ತಿರುವ ನಮ್ಮ ಸಹೋದರಿಯರು ಪ್ರಶಂಸೆಗೆ ಪಾತ್ರರೇ ಸರಿ. ಮನೆ ಬೈಬಲಭ್ಯಾಸಗಳಲ್ಲಿ ಅವರ ನೈಪುಣ್ಯಯುಕ್ತ ಕಲಿಸುವಿಕೆಯು ಅನೇಕರನ್ನು ಸತ್ಯಕ್ಕೆ ನಡಿಸುತ್ತಾ ಇದೆ, ಮತ್ತು ಅನೇಕ ಸಭಾ ಕರ್ತವ್ಯಗಳಿರುವ ತಮ್ಮ ಗಂಡಂದಿರನ್ನು ನಿಷ್ಠೆಯಿಂದ ಬೆಂಬಲಿಸುವ ವಿವಾಹಿತ ಸಹೋದರಿಯರೂ ಹೃತ್ಪೂರ್ವಕವಾದ ಹೊಗಳಿಕೆಗೆ ಪಾತ್ರರು.—ಜ್ಞಾನೋಕ್ತಿ 31:10-12; ಎಫೆಸ 5:21-25, 33.
ಬೈಬಲ್ ಶಿಕ್ಷಣದ ಸಮೃದ್ಧಿ
15. (ಎ) ಲೋಕವ್ಯಾಪಕ ವರದಿಯಲ್ಲಿ ತಿಳಿಸಲ್ಪಟ್ಟ ಕೆಲವು ದೇಶಗಳು ಮನೆ ಬೈಬಲಭ್ಯಾಸಗಳಲ್ಲಿ ಮಿಗಿಲಾಗಿದ್ದಾರೆ ಹೇಗೆ? (ಬಿ) ಬೈಬಲಭ್ಯಾಸಗಳು ಹೇಗೆ ಫಲಕಾರಿಯಾಗಬಲ್ಲವೆಂದು ತೋರಿಸಲು ನೀವು ಯಾವ ಅನುಭವಗಳನ್ನು ಕೊಡಬಲ್ಲಿರಿ?
15 ಬೈಬಲ್ ಶಿಕ್ಷಣದ ಕೆಲಸವು ಸಮೃದ್ಧಿಯಾಗುತ್ತಾ ಇದೆ, ಬೈಬಲಭ್ಯಾಸಗಳು ಲೋಕವ್ಯಾಪಕವಾಗಿ ಪ್ರತಿ ತಿಂಗಳು ಸರಾಸರಿ 36,24,091 ಸ್ಥಳಗಳಲ್ಲಿ ನಡಿಸಲ್ಪಡುತ್ತಾ ಇವೆ. ಆಸ್ಟ್ರೇಲಿಯದಿಂದ ಬಂದ ಒಂದು ವರದಿಯು ತೋರಿಸುವಂತೆ, ಬೈಬಲ್ ಸತ್ಯತೆಗಳು ವ್ಯಕ್ತಿತ್ವಗಳನ್ನು ಬದಲಾಯಿಸಬಲ್ಲವು. ಒಬ್ಬ ಮನುಷ್ಯನು ದರೋಡೆ ಮತ್ತು ಸುಳ್ಳುಪತ್ರ ತಯಾರಿಸಿದಕ್ಕಾಗಿ 25 ತಿಂಗಳ ಜೈಲನ್ನು ಅನುಭವಿಸಿದ ನಂತರ, ಜನವರಿ 1987ರ ಆರಂಭದಲ್ಲಿ, ಆಸ್ಟ್ರೇಲಿಯದಿಂದ ನ್ಯೂಝಿಲ್ಯಾಂಡಿಗೆ ಗಡೀಪಾರು ಮಾಡಲ್ಪಟ್ಟನು. ಅವನಿಗೆ ಮಾದಕದ್ರವ್ಯದ ಚಟವಿತ್ತು ಮತ್ತು 17ಕ್ಕಿಂತಲೂ ಹೆಚ್ಚು ವರ್ಷದಿಂದ ಅದರ ವ್ಯಾಪಾರವನ್ನು ಮಾಡುತ್ತಿದ್ದನು. ಮರುವರ್ಷ ಅವನ ಹೆಂಡತಿ ಯೆಹೋವನ ಸಾಕ್ಷಿಗಳೊಡನೆ ಅಭ್ಯಾಸ ಮಾಡತೊಡಗಿದಳು, ಮತ್ತು ಅವಳ ಜ್ಞಾನವು ಬೆಳೆದಷ್ಟಕ್ಕೆ ಅವಳ ನಡತೆಯಲ್ಲಿ ಗಮನಾರ್ಹ ಬದಲಾವಣೆಯಾದದ್ದನ್ನು ಅವನು ಕಂಡನು. ಆಕೆ ಒಬ್ಬ ಉತ್ತಮ ಪತ್ನಿ ಮತ್ತು ತಾಯಿಯಾದಳು. ತನ್ನ ಹೆಂಡತಿ ಆಗ್ರಹದಿಂದಾಗಿ ಅವನು ಜೂನ್ 1989ರಲ್ಲಿ ಒಂದು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾದನು. ಅವನೀಗ ಒಂದು ಮನೆ ಬೈಬಲಭ್ಯಾಸವನ್ನು ಸ್ವೀಕರಿಸಿದನು ಮತ್ತು ಅವನ ತೋರಿಕೆಯಲ್ಲಿ ಮತ್ತು ಜೀವನಕ್ರಮದಲ್ಲಿ ದೊಡ್ಡ ಬದಲಾವಣೆಗಳು ತೋರಿಬರಲಾರಂಭಿಸಿದವು, ಕುಟುಂಬದ ಏಳು ಸದಸ್ಯರಲ್ಲಿ ಎಲ್ಲರೂ ಕೂಟಗಳಿಗೆ ಹಾಜರಾಗ ತೊಡಗಿದರು. ಅವನು ಜನವರಿ 1990ರಲ್ಲಿ, ಎಫೆಸ 4:17-24ರ ಪೌಲನ ಅತ್ಯುತ್ತಮ ಸೂಚನೆಯನ್ನು ಪಾಲಿಸಿದವನಾಗಿ, ದೀಕ್ಷಾಸ್ನಾನ ಪಡಕೊಂಡನು.
16. (ಎ) 1990ರ ಸ್ಮಾರಕಾಚರಣೆಯ ವರದಿಗಳು ಒಂದು ಸಂತೋಷದ ಮೂಲವಾಗಿವೆ ಹೇಗೆ? (ಬಿ) ಯಾವ ಜರೂರಿಯನ್ನು ಅವಲೋಕಿಸಬೇಕಾಗಿದೆ ಮತ್ತು ಸಹಾಯಕ್ಕಾಗಿ ನಾವು ಯಾವ ಪ್ರಯತ್ನವನ್ನು ಮಾಡಬೇಕು?
16 ಈ ವರ್ಷದ ವರದಿಯ ಒಂದು ಮಹತ್ತಾದ ವೈಶಿಷ್ಟ್ಯವು, ಎಪ್ರಿಲ್ 10, 1990ನೇ ಮಂಗಳವಾರ ನಡೆದ ಸ್ಮಾರಕಾಚರಣೆಯಲ್ಲಿ 99,50,058 ಜನರ ದಾಖಲೆ ಹಾಜರಿಯೇ. 212 ದೇಶಗಳಲ್ಲಿ 70ಕ್ಕಿಂತಲೂ ಹೆಚ್ಚು ದೇಶಗಳು, ತಮ್ಮ ಪ್ರಚಾರಕ ಉನ್ನತ ಸಂಖ್ಯೆಗಿಂತ ಮುಮ್ಮಡಿ ಪಾಲಷ್ಟು ಹೆಚ್ಚು ಹಾಜರಿಯನ್ನು ವರದಿಸಿದವು! ಉದಾಹರಣೆಗೆ, ನಿರ್ಬಂಧಗಳ ನಡುವೆಯೂ, ಒಟ್ಟು 62,712 ಪ್ರಚಾರಕರಿದ್ದ ಏಳು ಆಫ್ರಿಕನ್ ದೇಶಗಳು ಸ್ಮಾರಕಾಚರಣೆಗೆ 2,04,356 ಹಾಜರಿಯನ್ನು ವರದಿ ಮಾಡಿದ್ದರು. ಯುದ್ಧಭಗ್ನ ಲೈಬೀರಿಯದ 1,914 ಪ್ರಚಾರಕರು ಸ್ಮಾರಕಾಚರಣೆಯಲ್ಲಿ 7,811 ಹಾಜರಿಯಲ್ಲಿ ಆನಂದಿಸಿದರು. 6,427 ಪ್ರಚಾರಕ ಉನ್ನತ ಸಂಖ್ಯೆಯ ಹೈಟೀ, 36,551 ಹಾಜರಿಯನ್ನು ವರದಿಮಾಡಿತು. ಮೈಕ್ರೊನೇಸ್ಯಾದ ಚದರಿದ ದ್ವೀಪಗಳಲ್ಲಿನ 886 ಪ್ರಚಾರಕರಿಗೆ 3,958 ಹಾಜರಿ ದೊರೆಯಿತು. ಶ್ರೀಲಂಕದ 1,298 ಪ್ರಚಾರಕರು 4,521 ಹಾಜರಿಯನ್ನು ವರದಿಸಿದರು ಮತ್ತು 73,729 ಪ್ರಚಾರಕರಿರುವ ಜಾಂಬಿಯ ಸ್ಮಾರಕಾಚರಣೆಗೆ 3,26,991 ಹಾಜರಿಯನ್ನು, ಜಾಂಬಿಯದ ಜನಸಂಖ್ಯೆಯ 25ಕ್ಕೆ ಒಬ್ಬ ವ್ಯಕ್ತಿಯ ಪರಿಮಾಣದಲ್ಲಿ ವರದಿಸಿದೆ. ಲೋಕವ್ಯಾಪಕ ವರದಿಯು ಪ್ರಕಟಿಸುವ ಮೇರೆಗೆ ಲಕ್ಷಾಂತರ ಪ್ರಾಮಾಣಿಕ ಜನರು ಇನ್ನೂ ಕುರೀಹಟ್ಟಿಯೊಳಗೆ ಒಟ್ಟುಗೂಡಿಸಲ್ಪಡಲು ಕಾಯುತ್ತಿದ್ದಾರೆ. ಆದರೆ ಪ್ರಾಮಾಣಿಕತೆಯು ಮಾತ್ರವೇ ಸಾಲದು. ಸ್ಮಾರಕಕ್ಕೆ ಹಾಜರಾದ ಹೆಚ್ಚಿನವರಲ್ಲಿ ಬಲವಾದ ನಂಬಿಕೆಯನ್ನು ಕಟ್ಟುವಂತೆ ನಾವು ನಮ್ಮ ಮನೇ ಬೈಬಲಭ್ಯಾಸದ ದರ್ಜೆಯನ್ನು ಹೆಚ್ಚಿಸಿ, ಪ್ರಗತಿ ಮಾಡಬಲ್ಲೆವೋ? ಅವರು ಯೆಹೋವನನ್ನು ಸ್ತುತಿಸುವ ನಮ್ಮ ಕ್ರಿಯಾಶೀಲ ಸಂಗಡಿಗರಾಗುವಂತೆ ನಾವು ಬಯಸುತ್ತೇವೆ. ಅದು ಅವರಿಗೆ ಜೀವರಕ್ಷಣೆಯ ಅರ್ಥದಲ್ಲಿದೆ!—ಕೀರ್ತನೆ 148:12, 13. ಯೋಹಾನ 17:3. 1 ಯೋಹಾನ 2:15-17.
ಸಂತೋಷದ ಪೂರ್ಣತೆ
17. ಒಂದನೇ ಶತಕದ ಯಾವ ಮಾದರಿಗಳು ಸಂತೋಷವನ್ನು ದೃಢಹಿಡಿಯುವ ನಮ್ಮ ನಿರ್ಧಾರವನ್ನು ಬಲಗೊಳಿಸಲು ಸಹಾಯ ಮಾಡಬೇಕು?
17 ಯಾವುದೇ ಸಂಕಷ್ಟಗಳು ನಮಗೆ ಎದುರಾಗಲಿ, ನಾವು ನಮ್ಮ ಸಂತೋಷವನ್ನು ದೃಢವಾಗಿ ಹಿಡಿಯಲು ನಿರ್ಧಾರವನ್ನು ಮಾಡೋಣ. ಸ್ತೆಫನಿಗಾದಂಥ ಅಷ್ಟು ಕಷ್ಟದ ಅನುಭವವನ್ನು ಒಂದುವೇಳೆ ನಮಗೆ ಸಹಿಸಲಿಕ್ಕಿರಲಿಕ್ಕಿಲ್ಲ ಆದರೂ, ಆತನ ಮಾದರಿಯು ನಮ್ಮನ್ನು ಬಲಪಡಿಸಬಲ್ಲದು. ದೋಷಾರೋಷದ ಕೆಳಗೂ ಅವನು ಸಂತೋಷದ ಮುಖಚರ್ಯೆಯನ್ನು ಕಾಪಾಡ ಶಕ್ತನಾದನು. “ಅವನ ಮುಖವು ದೇವದೂತನ ಮುಖದಂತೆ ಇರುವದನ್ನು” ಅವನ ಶತ್ರುಗಳು ಕಂಡರು. ಅವನ ಕಠಿನ ಪರೀಕ್ಷೆಯಲ್ಲಿ ದೇವರು ಅವನಿಗೆ ಬೆಂಗಾವಲಿದ್ದನು. “ಪವಿತ್ರಾತ್ಮಭರಿತನಾಗಿ,” ತನ್ನ ಹುತಾತ್ಮ ಮರಣದ ತನಕವೂ ಅವನು ಧೈರ್ಯದಿಂದ ಸಾಕ್ಷಿಕೊಟ್ಟನು. ಪೌಲ ಮತ್ತು ಬಾರ್ನಬರು ತಮ್ಮ ಇರುವಿಕೆಯಲ್ಲಿ ಅನ್ಯ ಜನಾಂಗಗಳ ಕಡೆಗೆ ತಿರುಗಲಾಗಿ ಅವರೂ, “ಆ ಮಾತನ್ನು ಕೇಳಿ ಸಂತೋಷಪಟ್ಟು ದೇವರ ವಾಕ್ಯವನ್ನು ಹೊಗಳಿದರು.” ಹಿಂಸೆಯು ಪುನಃ ತಲೆದೋರಿತು. ಆದರೆ ಅದು ವಿಶ್ವಾಸಿಗಳನ್ನು ಭಯಪಡಿಸಲಿಲ್ಲ. “ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು.” (ಅಪೊಸ್ತಲ ಕೃತ್ಯ 6:15; 7:55; 13:48-52) ನಮ್ಮ ಶತ್ರುಗಳು ನಮಗೇನನ್ನೇ ಮಾಡಲಿ, ಜೀವಿತದಲ್ಲಿ ನಮ್ಮ ನಿತ್ಯದ ಕಷ್ಟಗಳು ಏನೇ ಇರಲಿ, ಪವಿತ್ರಾತ್ಮದ ನಮ್ಮ ಸಂತೋಷವನ್ನು ನಂದಿಸಲು ನಾವು ಬಿಟ್ಟುಕೊಡಲೇ ಬಾರದು. ಪೌಲನು ಸೂಚಿಸಿದ್ದು: “ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರ್ರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.”—ರೋಮಾಪುರ 12:12.
18. (ಎ) ಹೊಸ ಯೆರೂಸಲೇಮ್ ಎಂದರೇನು, ಮತ್ತು ದೇವಜನರು ಆಕೆಯೊಂದಿಗೆ ಹರ್ಷಿಸಬೇಕು, ಏಕೆ? (ಬಿ) “ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು” ಮಾನವ ಕುಲವನ್ನು ಆಶೀರ್ವದಿಸುವುದು ಹೇಗೆ?
18 ಎಂಥಾ ಆಶ್ಚರ್ಯಕರ ನಿರೀಕ್ಷೆಯದು! ತನ್ನ ಜನರೆಲ್ಲರಿಗೆ ಯೆಹೋವನು ಪ್ರಕಟಿಸುವುದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ನಿರ್ಮಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿ ಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” ಕರ್ತನಾದ ಕ್ರಿಸ್ತನು ಮತ್ತು “ಹೊಸ ಯೆರೂಸಲೇಮ್” (ಈಗ, ದೇವರ ಸ್ವರ್ಗೀಯ ಸಂಸ್ಥೆಯಾದ “ಮೇಲಿನ ಯೆರೂಸಲೇಮಿನ” ಪ್ರಧಾನ ಪಟ್ಟಣ) ಹಾಗೂ ಭೂಮಿಯಲ್ಲಿರುವ ನೂತನ ಲೋಕ ಸಮಾಜವು ಜತೆಗೂಡಿ ಮಾನವಕುಲಕ್ಕೆ ಸಮೃದ್ಧವಾದ ಸಂತೋಷವನ್ನು ತರಲಿದ್ದಾರೆ. (ಗಲಾತ್ಯ 4:26) ಮೃತರ ಪುನರುತ್ಥಾನ, ವಿಧೇಯರೆಲ್ಲರನ್ನು ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವಕ್ಕೆ ಏರಿಸುವುದು, ಪರದೈಸ ಭೂಮಿಯಲ್ಲಿನ ಉಪಯುಕ್ತ, ಸ್ಪಂದಕ ಜೀವನ—ಎಂತಹ ಆಶ್ಚರ್ಯಕರವಾದ ಮತ್ತು ಉಲ್ಲಾಸಕ್ಕೆ ಕಾರಣವಾದ ನಿರೀಕ್ಷೆಯಿದು! ಯೆಹೋವನು ತಾನೇ ‘ಯೆರೂಸಲೇಮಿನಲ್ಲಿ ಉಲ್ಲಾಸವನ್ನು ಮತ್ತು ತನ್ನ ಜನರಲ್ಲಿ ಹರ್ಷವನ್ನು’ ಕಾಣುತ್ತಿರಲಾಗಿ, ದೇವರ ಜನರಿಗೆ ಆತನ ಪ್ರವಾದಿಯು ಇನ್ನೂ ಕರೆಗೊಡುತ್ತಾ, ಅನ್ನುವುದು: “ಯೆರೂಸಲೇಮ್ ಪುರಿಯನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ. ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ.” (ಯೆಶಾಯ 65:17-19; 66:10; ಪ್ರಕಟನೆ 14:1; 20:12, 13; 21:2-4) ನಾವು ಯಾವಾಗಲೂ ಸಂತೋಷದಿಂದಲೂ ಪವಿತ್ರಾತ್ಮದಿಂದಲೂ ತುಂಬಿದವರಾಗಿ ಅಪೊಸ್ತಲ ಪೌಲನ ಈ ಬುದ್ಧಿವಾದವನ್ನು ಪಾಲಿಸುವವರಾಗೋಣ: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”—ಫಿಲಿಪ್ಪಿಯ 4:4.
ನಮ್ಮ ಸಂತೋಷನ್ನು ಸಾರಾಂಶಿಸುವುದು
◻ ಸಂತೋಷಭರಿತ ತಾಳ್ಮೆಯ ಯಾವ ಮಾದರಿಯನ್ನು ಯೇಸು ನಮಗಾಗಿ ಬಿಟ್ಟುಹೋದನು?
◻ ಎರಡು ಸಮರ್ಪಿತ ಗುಂಪುಗಳಿಗೆ ಸಂತೋಷಪಡಲು ಯಾವ ಕಾರಣಗಳಿವೆ?
◻ ಯುವಕರೂ ವೃದ್ಧರೂ ಇಂದು ಸತ್ಯದಲ್ಲಿ ಉಲ್ಲಾಸಿಸುವುದು ಹೇಗೆ?
◻ 1990 ರ ವರದಿಯನ್ನು ಪರಾಮರ್ಶಿಸುವಲ್ಲಿ, “ಯೆಹೋವನೇ, ದಯವಿಟ್ಟು ಸಾಫಲ್ಯಕೊಡು” ಎಂಬ ಪ್ರಾರ್ಥನೆಗೆ ಯಾವ ಉತ್ತರವು ಈಗ ಕೊಡಲ್ಪಡುತ್ತಾ ಇದೆ?
◻ ಸಂತೋಷದ ಪೂರ್ಣತೆಯು ಯಾವಾಗ ಮತ್ತು ಹೇಗೆ ಪ್ರಾಪ್ತವಾಗುವುದು?
[ಪುಟ 25 ರಲ್ಲಿರುವ ಚಿತ್ರ]
ಯೆಹೋವನ ದೂತನು ಕರ್ತನಾದ ಕ್ರಿಸ್ತನ ಜನನವನ್ನು “ಮಹಾ ಸಂತೋಷವನ್ನುಂಟು ಮಾಡುವ ಶುಭವರ್ತಮಾನ”ವಾಗಿ ಪ್ರಕಟಿಸಿದನು.