ಯೆಹೋವನು—ಒಳ್ಳೇತನದ ಅತ್ಯುತ್ತಮ ಮಾದರಿ
“ಸೇನಾಧೀಶ್ವರನಾದ ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಯೆಹೋವನು ಒಳ್ಳೆಯವನು”!—ಯೆರೆಮೀಯ 33:11.
1. ದೇವರ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸುವಂತೆ ನಾವೇಕೆ ಪ್ರಚೋದಿಸಲ್ಪಡುತ್ತೇವೆ?
ಯೆಹೋವ ದೇವರು ಪರಿಪೂರ್ಣ ಅರ್ಥದಲ್ಲಿ ಒಳ್ಳೆಯವನಾಗಿದ್ದಾನೆ. “ಆಹಾ, ಆತನ ಒಳ್ಳೇತನವು ಎಷ್ಟು ಉದಾತ್ತವಾಗಿದೆ!” ಎಂದು ಪ್ರವಾದಿಯಾದ ಜೆಕರ್ಯನು ಉದ್ಗರಿಸಿದನು. (ಜೆಕರ್ಯ 9:17, NW) ವಾಸ್ತವದಲ್ಲಿ, ನಾವು ಆನಂದಿಸುವಂತೆ ಈ ಭೂಮಿಯನ್ನು ಸಿದ್ಧಪಡಿಸುತ್ತಾ ದೇವರು ಮಾಡಿರುವ ಪ್ರತಿಯೊಂದು ಕೆಲಸದಲ್ಲಿ ಒಳ್ಳೇತನವು ಪ್ರತಿಬಿಂಬಿಸಲ್ಪಟ್ಟಿದೆ. (ಆದಿಕಾಂಡ 1:31) ದೇವರು ಈ ವಿಶ್ವವನ್ನು ಸೃಷ್ಟಿಸಿದಾಗ, ಆತನು ಕಾರ್ಯರೂಪಕ್ಕೆ ತಂದ ಎಲ್ಲ ಜಟಿಲ ನಿಯಮಗಳನ್ನು ನಾವೆಂದಿಗೂ ಅರ್ಥಮಾಡಿಕೊಳ್ಳಲಾರೆವು. (ಪ್ರಸಂಗಿ 3:11; 8:17) ಆದರೆ, ಈ ವಿಶ್ವದ ಕುರಿತು ನಮಗೆ ತಿಳಿದಿರುವ ಅಲ್ಪಸ್ವಲ್ಪ ವಿಷಯವೇ, ದೇವರ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ.
2. ಒಳ್ಳೇತನದ ಅರ್ಥವನ್ನು ನೀವು ಹೇಗೆ ನಿರೂಪಿಸಬಲ್ಲಿರಿ?
2 ಒಳ್ಳೇತನ ಎಂದರೇನು? ಇದು ನೈತಿಕ ಶ್ರೇಷ್ಠತೆ ಅಥವಾ ಸದ್ಗುಣವಾಗಿದೆ. ಆದರೂ, ಇದು ಯಾವುದೇ ರೀತಿಯ ಕೆಟ್ಟತನವು ಇಲ್ಲದಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಂಡಿದೆ. ಒಳ್ಳೇತನವು ದೇವರಾತ್ಮದ ಫಲಗಳಲ್ಲಿ ಒಂದಾಗಿದೆ, ಒಂದು ಸಕಾರಾತ್ಮಕ ಗುಣವಾಗಿದೆ. (ಗಲಾತ್ಯ 5:22, 23, NW) ಇತರರಿಗಾಗಿ ಒಳ್ಳೆಯ ಹಾಗೂ ಪ್ರಯೋಜನಾರ್ಹ ಕೆಲಸಗಳನ್ನು ಮಾಡುವ ಮೂಲಕ ನಾವು ಒಳ್ಳೇತನವನ್ನು ತೋರಿಸುತ್ತೇವೆ. ಈ ವಿಷಯಗಳ ವ್ಯವಸ್ಥೆಯಲ್ಲಿ, ಕೆಲವು ವ್ಯಕ್ತಿಗಳಿಂದ ಯಾವುದು ಒಳ್ಳೇದೆಂದು ಪರಿಗಣಿಸಲ್ಪಡುತ್ತದೋ ಅದು ಬೇರೆ ವ್ಯಕ್ತಿಗಳಿಂದ ಕೆಟ್ಟದ್ದೆಂದು ಪರಿಗಣಿಸಲ್ಪಡಬಹುದು. ಆದುದರಿಂದ, ನಾವು ಶಾಂತಿ ಹಾಗೂ ಸಂತೋಷವನ್ನು ಅನುಭವಿಸಬೇಕಾದರೆ, ಒಳ್ಳೇತನದ ಕುರಿತಾದ ಒಂದು ಮಟ್ಟವಿರಲೇಬೇಕು. ಈ ಮಟ್ಟವನ್ನು ಸ್ಥಾಪಿಸುವ ಹಕ್ಕು ಯಾರಿಗಿದೆ?
3. ಒಳ್ಳೇತನದ ಮಟ್ಟದ ಕುರಿತು ಆದಿಕಾಂಡ 2:16, 17 ಏನನ್ನು ಸೂಚಿಸುತ್ತದೆ?
3 ದೇವರೇ ಒಳ್ಳೇತನದ ಮಟ್ಟವನ್ನು ಸ್ಥಾಪಿಸುತ್ತಾನೆ. ಮಾನವಕುಲದ ಇತಿಹಾಸದಾರಂಭದಲ್ಲಿ, ಯೆಹೋವನೇ ಮೊದಲ ಮಾನವನಿಗೆ ಈ ಮುಂದಿನಂತೆ ಆಜ್ಞಾಪಿಸಿದ್ದನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಹೌದು, ಒಳ್ಳೇದರ ಕೆಟ್ಟದ್ದರ ಅರುಹನ್ನು ಪಡೆದುಕೊಳ್ಳಲಿಕ್ಕಾಗಿ ಮಾನವರು ತಮ್ಮ ಸೃಷ್ಟಿಕರ್ತನ ಕಡೆಗೆ ನೋಡುವ ಅಗತ್ಯವಿದೆ.
ಒಳ್ಳೇತನದ ಅಪಾತ್ರ ವ್ಯಕ್ತಪಡಿಸುವಿಕೆ
4. ಆದಾಮನು ಪಾಪಮಾಡಿದಂದಿನಿಂದ ದೇವರು ಮಾನವಕುಲಕ್ಕಾಗಿ ಯಾವ ಏರ್ಪಾಡನ್ನು ಮಾಡಿದ್ದಾನೆ?
4 ಆದಾಮನು ಪಾಪಮಾಡಿ, ಒಳ್ಳೇತನದ ಮಟ್ಟಗಳನ್ನು ಸ್ಥಾಪಿಸಲಿಕ್ಕಾಗಿರುವ ದೇವರ ಹಕ್ಕನ್ನು ಅಂಗೀಕರಿಸಲು ನಿರಾಕರಿಸಿದಾಗ, ಪರಿಪೂರ್ಣತೆಯಲ್ಲಿ ನಿತ್ಯವಾಗಿ ಸಂತೋಷಿಸಲಿಕ್ಕಾಗಿರುವ ಮಾನವಕುಲದ ಪ್ರತೀಕ್ಷೆಯು ಅಪಾಯಕ್ಕೊಡ್ಡಲ್ಪಟ್ಟಿತು. (ಆದಿಕಾಂಡ 3:1-6) ಆದರೂ, ಆದಾಮನ ಸಂತತಿಯವರು ಪಾಪ ಮತ್ತು ಮರಣದ ವಾರಸುದಾರರಾಗಿ ಜನಿಸುವುದಕ್ಕೆ ಮೊದಲೇ, ಒಂದು ಪರಿಪೂರ್ಣ ಸಂತತಿಯ ಬರೋಣದ ಕುರಿತು ದೇವರು ಮುಂತಿಳಿಸಿದ್ದನು. “ಪುರಾತನ ಸರ್ಪ”ವಾಗಿದ್ದ ಪಿಶಾಚನಾದ ಸೈತಾನನನ್ನು ಸಂಬೋಧಿಸುತ್ತಾ ಯೆಹೋವನು ಘೋಷಿಸಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಪ್ರಕಟನೆ 12:9; ಆದಿಕಾಂಡ 3:15) ಪಾಪಪೂರ್ಣ ಮಾನವರನ್ನು ವಿಮೋಚಿಸುವುದು ಯೆಹೋವನ ಉದ್ದೇಶವಾಗಿತ್ತು. ಒಳ್ಳೇತನದ ಅಪಾತ್ರ ವ್ಯಕ್ತಪಡಿಸುವಿಕೆಯೋಪಾದಿ, ಖಂಡಿತವಾಗಿಯೂ ಯೆಹೋವನು ತನ್ನ ಪ್ರೀತಿಯ ಪುತ್ರನ ವಿಮೋಚನಾ ಯಜ್ಞದಲ್ಲಿ ನಂಬಿಕೆಯಿಡುವವರ ರಕ್ಷಣೆಗಾಗಿ ಅಂತಹ ಒಂದು ಏರ್ಪಾಡನ್ನು ಮಾಡಿದನು.—ಮತ್ತಾಯ 20:28; ರೋಮಾಪುರ 5:8, 12.
5. ನಾವು ಕೆಟ್ಟ ಮನಸ್ಸಂಕಲ್ಪವನ್ನು ವಂಶಾನುಕ್ರಮವಾಗಿ ಪಡೆದಿದ್ದೇವಾದರೂ, ನಾವು ಸ್ವಲ್ಪಮಟ್ಟಿಗಿನ ಒಳ್ಳೇತನವನ್ನು ತೋರಿಸಲು ಏಕೆ ಸಾಧ್ಯವಿದೆ?
5 ಆದಾಮನ ಪಾಪದ ಕಾರಣದಿಂದ, ಕೆಟ್ಟ ಮನಸ್ಸಂಕಲ್ಪವು ನಮ್ಮಲ್ಲಿ ವಂಶಾನುಕ್ರಮವಾಗಿ ಬಂದಿದೆ ಎಂಬುದಂತೂ ನಿಶ್ಚಯ. (ಆದಿಕಾಂಡ 8:21) ಆದರೂ, ಸ್ವಲ್ಪಮಟ್ಟಿಗಾದರೂ ಒಳ್ಳೇತನವನ್ನು ತೋರಿಸುವಂತೆ ಯೆಹೋವನು ನಮಗೆ ಸಹಾಯಮಾಡುತ್ತಾನೆ ಎಂಬುದು ಸಂತೋಷಕರ ಸಂಗತಿಯೇ. ಆತನ ಅಮೂಲ್ಯವಾದ ಪವಿತ್ರ ಬರಹಗಳಿಂದ ಕಲಿತ ಬೋಧನೆಗಳಲ್ಲಿ ನೆಲೆಗೊಳ್ಳುವುದು, ನಮಗೆ ‘ರಕ್ಷಣೆಹೊಂದಿಸುವ ವಿವೇಕವನ್ನು ಕೊಡುತ್ತದೆ’ ಹಾಗೂ ‘ಸಕಲಸತ್ಕಾರ್ಯಕ್ಕೆ ಸನ್ನದ್ಧರನ್ನಾಗಿ’ ಮಾಡುತ್ತದೆ ಮಾತ್ರವಲ್ಲ, ದೇವರ ದೃಷ್ಟಿಯಲ್ಲಿ ಯಾವುದು ಒಳ್ಳೇದಾಗಿದೆಯೋ ಅದನ್ನು ಮಾಡುವಂತೆಯೂ ನಮ್ಮನ್ನು ಶಕ್ತಗೊಳಿಸುತ್ತದೆ. (2 ತಿಮೊಥೆಯ 3:14-17, NW) ಆದರೂ, ಶಾಸ್ತ್ರೀಯ ಉಪದೇಶದಿಂದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಹಾಗೂ ಒಳ್ಳೇತನವನ್ನು ತೋರಿಸಲಿಕ್ಕಾಗಿ, “[ಯೆಹೋವನೇ] ನೀನು ಒಳ್ಳೆಯವನೂ ಒಳ್ಳೆಯದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು” ಎಂದು ಹಾಡಿದಂಥ ಕೀರ್ತನೆಗಾರನ ಮನೋಭಾವವನ್ನೇ ನಾವು ಹೊಂದಿರಬೇಕು.—ಕೀರ್ತನೆ 119:68.
ಯೆಹೋವನ ಒಳ್ಳೇತನವು ಕೊಂಡಾಡಲ್ಪಟ್ಟಿದೆ
6. ರಾಜ ದಾವೀದನು ನಿಬಂಧನ ಮಂಜೂಷವನ್ನು ಯೆರೂಸಲೇಮಿಗೆ ತಂದ ಬಳಿಕ, ಯಾವ ಅಭಿವ್ಯಕ್ತಿಯನ್ನು ಒಳಗೊಂಡಿದ್ದ ಒಂದು ಹಾಡನ್ನು ಲೇವಿಯರು ಹಾಡಿದರು?
6 ಪುರಾತನ ಇಸ್ರಾಯೇಲಿನ ರಾಜ ದಾವೀದನು ದೇವರ ಒಳ್ಳೇತನವನ್ನು ಅಂಗೀಕರಿಸಿದನು ಮತ್ತು ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಬಯಸಿದನು. ದಾವೀದನು ಹೇಳಿದ್ದು: “ಯೆಹೋವನು ದಯಾಳುವೂ ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡಿಸುವನು.” (ಕೀರ್ತನೆ 25:8) ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೈವಿಕ ಉಪದೇಶವು ಹತ್ತು ಪ್ರಮುಖ ನಿಯಮಗಳನ್ನು, ಅಂದರೆ ದಶಾಜ್ಞೆಗಳನ್ನು ಒಳಗೊಂಡಿತ್ತು. ಇವು ಕಲ್ಲಿನ ಎರಡು ಹಲಗೆಗಳ ಮೇಲೆ ಬರೆಯಲ್ಪಟ್ಟಿದ್ದು, ನಿಬಂಧನ ಮಂಜೂಷ ಎಂದು ಕರೆಯಲ್ಪಡುತ್ತಿದ್ದ ಪವಿತ್ರ ಪೆಟ್ಟಿಗೆಯೊಳಗೆ ಇಡಲ್ಪಟ್ಟಿದ್ದವು. ದಾವೀದನು ಮಂಜೂಷವನ್ನು ಇಸ್ರಾಯೇಲಿನ ರಾಜಧಾನಿ ನಗರವಾದ ಯೆರೂಸಲೇಮಿಗೆ ತಂದ ಬಳಿಕ, ಈ ಮುಂದಿನ ಅಭಿವ್ಯಕ್ತಿಯನ್ನು ಒಳಗೊಂಡಿದ್ದ ಒಂದು ಹಾಡನ್ನು ಲೇವಿಯರು ಹಾಡಿದರು: “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತವಾಗಿರುವದು.” (1 ಪೂರ್ವಕಾಲವೃತ್ತಾಂತ 16:34, 37-41) ಲೇವಿಯ ಸಂಗೀತಗಾರರ ತುಟಿಗಳಿಂದ ಆ ಮಾತುಗಳನ್ನು ಕೇಳಿಸಿಕೊಳ್ಳುವುದು ಎಷ್ಟು ಆನಂದಮಯವಾಗಿದ್ದಿರಬೇಕು!
7. ಮಂಜೂಷವು ಅತಿ ಪವಿತ್ರ ಸ್ಥಾನಕ್ಕೆ ತರಲ್ಪಟ್ಟ ಬಳಿಕ ಮತ್ತು ಸೊಲೊಮೋನನು ಪ್ರತಿಷ್ಠಾಪನೆಯ ಪ್ರಾರ್ಥನೆಯನ್ನು ಮುಗಿಸಿದ ಬಳಿಕ ಏನು ಸಂಭವಿಸಿತು?
7 ದಾವೀದನ ಮಗನಾಗಿದ್ದ ಸೊಲೊಮೋನನಿಂದ ಕಟ್ಟಲ್ಪಟ್ಟ ಯೆಹೋವನ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲೂ, ಸ್ತುತಿಯ ಅವೇ ಮಾತುಗಳಿಗೆ ಹೆಚ್ಚಿನ ಒತ್ತು ನೀಡಲ್ಪಟ್ಟಿತು. ಹೊಸದಾಗಿ ಕಟ್ಟಲ್ಪಟ್ಟಿದ್ದ ದೇವಾಲಯದ ಅತಿ ಪವಿತ್ರ ಸ್ಥಾನದಲ್ಲಿ ನಿಬಂಧನ ಮಂಜೂಷವನ್ನು ಇಟ್ಟ ಬಳಿಕ, “ಯೆಹೋವನು ಒಳ್ಳೆಯವನು, ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತವಾಗಿರುವದು” ಎಂದು ಲೇವಿಯರು ಆತನನ್ನು ಸ್ತುತಿಸಲಾರಂಭಿಸಿದರು. ಆ ಸಂದರ್ಭದಲ್ಲಿ, ಯೆಹೋವನ ವೈಭವಯುತ ಸಮಕ್ಷಮವನ್ನು ಸಂಕೇತಿಸುವ ತೇಜಸ್ಸಿನಿಂದ ತುಂಬಿದ್ದ ಮೇಘವು ದೇವಾಲಯವನ್ನು ಆವರಿಸಿತ್ತು. (2 ಪೂರ್ವಕಾಲವೃತ್ತಾಂತ 5:13, 14) ಸೊಲೊಮೋನನು ಪ್ರತಿಷ್ಠಾಪನೆಯ ಪ್ರಾರ್ಥನೆಯನ್ನು ಮುಗಿಸಿದ ಬಳಿಕ, “ಆಕಾಶದಿಂದ ಬೆಂಕಿಬಿದ್ದು ಸರ್ವಾಂಗಹೋಮದ್ರವ್ಯಗಳನ್ನೂ ಯಜ್ಞಮಾಂಸವನ್ನೂ ದಹಿಸಿಬಿಟ್ಟಿತು.” ಇದನ್ನು ನೋಡಿದ ಕೂಡಲೆ “ಇಸ್ರಾಯೇಲ್ಯರೆಲ್ಲರೂ . . . ನೆಲಗಟ್ಟಿನ ಮೇಲೆ ಸಾಷ್ಟಾಂಗವೆರಗಿ ಆರಾಧಿಸಿ—ಯೆಹೋವನು ಒಳ್ಳೆಯವನು, ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತವಾಗಿದೆ ಎಂದು ಕೃತಜ್ಞತಾಸ್ತುತಿಮಾಡಿದರು.” (2 ಪೂರ್ವಕಾಲವೃತ್ತಾಂತ 7:1-3) 14 ದಿವಸಗಳ ಹಬ್ಬದ ಬಳಿಕ, ಇಸ್ರಾಯೇಲ್ಯರು “ಯೆಹೋವನಿಂದ ದಾವೀದ ಸೊಲೊಮೋನರಿಗೂ ಆತನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಉಂಟಾದ ಉಪಕಾರಗಳನ್ನು ನೆನಸಿಕೊಂಡು ಆನಂದಭರಿತರಾಗಿ ಹರ್ಷಿಸುತ್ತಾ” ತಮ್ಮ ತಮ್ಮ ನಿವಾಸಗಳಿಗೆ ಹೋದರು.—2 ಪೂರ್ವಕಾಲವೃತ್ತಾಂತ 7:10.
8, 9. (ಎ) ಯೆಹೋವನ ಒಳ್ಳೇತನಕ್ಕಾಗಿ ಇಸ್ರಾಯೇಲ್ಯರು ಆತನನ್ನು ಸ್ತುತಿಸಿದರೂ, ಕಾಲಕ್ರಮೇಣ ಅವರು ಯಾವ ಮಾರ್ಗವನ್ನು ಬೆನ್ನಟ್ಟಿದರು? (ಬಿ) ಯೆರೆಮೀಯನ ಮೂಲಕ ಯೆರೂಸಲೇಮಿನ ವಿಷಯದಲ್ಲಿ ಏನು ಮುಂತಿಳಿಸಲ್ಪಟ್ಟಿತು, ಮತ್ತು ಆ ಪ್ರವಾದನೆಯು ಹೇಗೆ ನೆರವೇರಿಸಲ್ಪಟ್ಟಿತು?
8 ದುಃಖಕರವಾಗಿ, ಇಸ್ರಾಯೇಲ್ಯರು ದೇವರಿಗೆ ಮಾಡಿದ ತಮ್ಮ ಸ್ತುತಿಗೀತೆಗಳಿಗೆ ಹೊಂದಿಕೆಯಲ್ಲಿ ಜೀವಿಸುವುದನ್ನು ಮುಂದುವರಿಸಲಿಲ್ಲ. ಸಕಾಲದಲ್ಲಿ, ಯೆಹೂದದ ಜನರು ‘ಕೇವಲ ತುಟಿಯಿಂದ ಯೆಹೋವನನ್ನು ಸನ್ಮಾನಿಸಿದರು.’ (ಯೆಶಾಯ 29:13) ಅವರು ದೇವರ ಒಳ್ಳೇತನದ ಮಟ್ಟಗಳಿಗೆ ಅನುಸಾರವಾಗಿ ನಡೆಯುವುದಕ್ಕೆ ಬದಲಾಗಿ, ಯಾವುದು ಕೆಟ್ಟದ್ದಾಗಿತ್ತೋ ಅದನ್ನೇ ನಡೆಸಲು ಆರಂಭಿಸಿದರು. ಅಷ್ಟೇಕೆ, ಅವರು ವಿಗ್ರಹಾರಾಧನೆ, ಅನೈತಿಕತೆ, ಬಡವರ ಮೇಲಿನ ದಬ್ಬಾಳಿಕೆ, ಹಾಗೂ ಇತರ ಘೋರ ಪಾಪಗಳ ದೋಷಾರೋಪ ಹೊತ್ತವರಾದರು! ಇದರ ಫಲಿತಾಂಶವಾಗಿ, ಯೆರೂಸಲೇಮ್ ನಾಶಗೊಳಿಸಲ್ಪಟ್ಟಿತು ಮತ್ತು ಸಾ.ಶ.ಪೂ. 607ರಲ್ಲಿ ಯೆಹೂದದ ನಿವಾಸಿಗಳು ಬಾಬೆಲಿಗೆ ಬಂಧಿವಾಸಿಗಳಾಗಿ ಕೊಂಡೊಯ್ಯಲ್ಪಟ್ಟರು.
9 ಹೀಗೆ ದೇವರು ತನ್ನ ಜನರನ್ನು ಶಿಸ್ತಿಗೊಳಪಡಿಸಿದನು. ಆದರೂ, “ಸೇನಾಧೀಶ್ವರನಾದ ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಯೆಹೋವನು ಒಳ್ಳೆಯವನು, ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತ” ಎಂದು ಹೇಳುತ್ತಿರುವವರ ಧ್ವನಿಯು ಯೆರೂಸಲೇಮಿನಲ್ಲಿ ಕೇಳಿಬರುವುದು ಎಂಬುದನ್ನು ಸಹ ಪ್ರವಾದಿಯಾದ ಯೆರೆಮೀಯನ ಮೂಲಕ ಆತನು ಮುಂತಿಳಿಸಿದನು. (ಯೆರೆಮೀಯ 33:10, 11) ಮತ್ತು ಮುಂತಿಳಿಸಿದಂತೆಯೇ ಅದು ಸಂಭವಿಸಿತು. ಆ ದೇಶವು 70 ವರ್ಷಗಳ ವರೆಗೆ ನಿರ್ಜನವಾಗಿದ್ದ ಬಳಿಕ, ಸಾ.ಶ.ಪೂ. 537ರಲ್ಲಿ, ಯೆಹೂದ್ಯರಲ್ಲಿ ಉಳಿಕೆಯವರು ಯೆರೂಸಲೇಮಿಗೆ ಹಿಂದಿರುಗಿದರು. (ಯೆರೆಮೀಯ 25:11; ದಾನಿಯೇಲ 9:1, 2) ಮೊರೀಯ ಬೆಟ್ಟದ ಮೇಲಿನ ದೇವಾಲಯದ ನಿವೇಶನದಲ್ಲಿ ಅವರು ಯಜ್ಞವೇದಿಯನ್ನು ಪುನಃ ನಿರ್ಮಿಸಿದರು ಮತ್ತು ಅಲ್ಲಿಯೇ ಯಜ್ಞಗಳನ್ನು ಅರ್ಪಿಸಲಾರಂಭಿಸಿದರು. ಅವರು ಬಾಬೆಲಿನಿಂದ ಹಿಂದಿರುಗಿದ ಎರಡನೆಯ ವರ್ಷದಲ್ಲಿ ದೇವಾಲಯದ ಅಸ್ತಿವಾರವು ಹಾಕಲ್ಪಟ್ಟಿತು. ಅದೆಷ್ಟು ಆನಂದಭರಿತ ಸಮಯವಾಗಿತ್ತು! ಎಜ್ರನು ಹೇಳಿದ್ದು: “ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲ್ಯರ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಕೀರ್ತಿಸುವದಕ್ಕೋಸ್ಕರ ದೀಕ್ಷಾವಸ್ತ್ರಭೂಷಿತರಾದ ಯಾಜಕರು ತುತೂರಿಗಳೊಡನೆಯೂ ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡು ಪರಸ್ಪರವಾಗಿ ಹಾಡುತ್ತಾ ಯೆಹೋವನನ್ನು ಕೀರ್ತಿಸುತ್ತಾ—ಆತನು ಒಳ್ಳೆಯವನು; ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಇಸ್ರಾಯೇಲ್ಯರ ಮೇಲೆ ಶಾಶ್ವತವಾದದ್ದೆಂದು ಕೃತಜ್ಞತಾಸ್ತುತಿಮಾಡಿದರು.”—ಎಜ್ರ 3:1-11.
10. ಕೀರ್ತನೆ 118 ಯಾವ ಅರ್ಥಗರ್ಭಿತ ಅಭಿವ್ಯಕ್ತಿಯಿಂದ ಆರಂಭಗೊಳ್ಳುತ್ತದೆ ಮತ್ತು ಕೊನೆಗೊಳ್ಳುತ್ತದೆ?
10 ಯೆಹೋವನ ಒಳ್ಳೇತನದ ವಿಷಯದಲ್ಲಿ ಇದೇ ರೀತಿಯ ಸ್ತುತಿಯ ಅಭಿವ್ಯಕ್ತಿಯು, ಅನೇಕ ಕೀರ್ತನೆಗಳಲ್ಲೂ ಕಂಡುಬರುತ್ತದೆ. ಅವುಗಳಲ್ಲಿ ಒಂದು 118ನೆಯ ಕೀರ್ತನೆಯಾಗಿದೆ. ಇದು ಪಸ್ಕ ಹಬ್ಬದ ಆಚರಣೆಯನ್ನು ಮುಕ್ತಾಯಗೊಳಿಸಲಿಕ್ಕಾಗಿ ಇಸ್ರಾಯೇಲ್ಯ ಮನೆತನಗಳವರಿಂದ ಹಾಡಲ್ಪಟ್ಟಿತು. ಆ ಕೀರ್ತನೆಯು “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತ”ವಾದದ್ದು ಎಂಬ ಮಾತುಗಳಿಂದ ಆರಂಭಗೊಂಡು, ಅವೇ ಮಾತುಗಳಿಂದ ಕೊನೆಗೊಳ್ಳುತ್ತದೆ. (ಕೀರ್ತನೆ 118:1, 29) ಸಾ.ಶ. 33ರಲ್ಲಿ ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು, ಯೇಸು ಕ್ರಿಸ್ತನು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಹಾಡಿದ ಸ್ತುತಿಗೀತೆಯ ಕೊನೆಯ ನುಡಿಗಳು ಇವೇ ಆಗಿದ್ದಿರಬಹುದು.—ಮತ್ತಾಯ 26:30.
“ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು”
11, 12. ಮೋಶೆಯು ದೇವರ ಮಹಿಮೆಯ ಕ್ಷಣದರ್ಶನವನ್ನು ಪಡೆದುಕೊಂಡಾಗ, ಅವನು ಯಾವ ಪ್ರಕಟನೆಯನ್ನು ಕೇಳಿಸಿಕೊಂಡನು?
11 ಯೆಹೋವನ ಒಳ್ಳೇತನ ಮತ್ತು ಆತನ ಪ್ರೀತಿಪೂರ್ವಕ ದಯೆಯ ನಡುವೆ ಇರುವ ಸಂಬಂಧವು, ಮೊದಲ ಬಾರಿಗೆ ಎಜ್ರನ ಸಮಯಕ್ಕಿಂತ ಅನೇಕ ಶತಮಾನಗಳಿಗೆ ಮುಂಚೆಯೇ ಮಾಡಲ್ಪಟ್ಟಿತು. ಅರಣ್ಯದಲ್ಲಿ ಇಸ್ರಾಯೇಲ್ಯರು ಚಿನ್ನದ ಬಸವಾರಾಧನೆ ಮಾಡಿ, ಆ ತಪ್ಪು ಕೃತ್ಯವನ್ನು ಗೈದವರು ವಧಿಸಲ್ಪಟ್ಟು ಸ್ವಲ್ಪ ಸಮಯ ಕಳೆದ ಬಳಿಕ, ಮೋಶೆಯು ಯೆಹೋವನ ಬಳಿ ಹೀಗೆ ಬೇಡಿಕೊಂಡನು: “ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು.” ತನ್ನ ಮುಖವನ್ನು ನೋಡಿ ಮೋಶೆಯು ಜೀವಿಸಲಾರನು ಎಂಬುದನ್ನು ಗ್ರಹಿಸಿದ ಯೆಹೋವನು ಹೇಳಿದ್ದು: “ನನ್ನ ಸರ್ವೋತ್ತಮತ್ವ [“ಒಳ್ಳೇತನ,” NW]ವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು.”—ವಿಮೋಚನಕಾಂಡ 33:13-20.
12 ಮರುದಿನ ಸೀನಾಯಿ ಬೆಟ್ಟದಲ್ಲಿ ಯೆಹೋವನ ಒಳ್ಳೇತನವು ಮೋಶೆಯ ಎದುರಿನಿಂದ ದಾಟಿಹೋಯಿತು. ಆ ಸಮಯದಲ್ಲಿ, ಮೋಶೆಯು ದೇವರ ಮಹಿಮೆಯ ಕ್ಷಣದರ್ಶನವನ್ನು ಪಡೆದುಕೊಂಡನು ಮತ್ತು ಈ ಪ್ರಕಟನೆಯನ್ನು ಕೇಳಿಸಿಕೊಂಡನು: “ಯೆಹೋವ, ಯೆಹೋವ, ಕರುಣೆಯೂ ದಯೆಯೂ ಉಳ್ಳ ದೇವರು, ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯೂ ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧನೂ, ಸಾವಿರಾರು ತಲೆಗಳ ವರೆಗೆ ಪ್ರೀತಿಪೂರ್ವಕ ದಯೆಯನ್ನು ಉಳಿಸಿಕೊಳ್ಳುವಾತನೂ, ದೋಷ ಮತ್ತು ಅಪರಾಧ ಹಾಗೂ ಪಾಪವನ್ನು ಕ್ಷಮಿಸುವವನೂ, ಆದರೆ ಯಾವುದೇ ಕಾರಣಕ್ಕೂ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸದೆ ಬಿಡದವನೂ, ತಂದೆಗಳ ದೋಷಫಲವನ್ನು ಪುತ್ರರ ಮೇಲೆ ಮತ್ತು ಮೊಮ್ಮಕ್ಕಳ ಮೇಲೆ ಮೂರನೆಯ ಸಂತತಿಯ ಮೇಲೂ ನಾಲ್ಕನೆಯ ಸಂತತಿಯ ಮೇಲೂ ಬರಮಾಡುವವನೂ ಆಗಿದ್ದಾನೆ.” (ವಿಮೋಚನಕಾಂಡ 34:6, 7, NW) ಯೆಹೋವನ ಒಳ್ಳೇತನವು ಆತನ ಪ್ರೀತಿಪೂರ್ವಕ ದಯೆಗೆ ಮತ್ತು ಆತನ ವ್ಯಕ್ತಿತ್ವದ ಇತರ ಅಂಶಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಈ ಮಾತುಗಳು ಸೂಚಿಸುತ್ತವೆ. ಇವುಗಳನ್ನು ಪರಿಗಣಿಸುವುದು, ನಾವು ಸಹ ಒಳ್ಳೇತನವನ್ನು ತೋರಿಸುವಂತೆ ನಮಗೆ ಸಹಾಯಮಾಡುವುದು. ದೇವರ ಒಳ್ಳೇತನದ ಈ ಅದ್ಭುತ ಪ್ರಕಟನೆಯಲ್ಲಿ ಎರಡು ಬಾರಿ ಉಲ್ಲೇಖಿಸಲ್ಪಟ್ಟಿರುವ ಈ ಗುಣವನ್ನು ನಾವು ಮೊದಲಾಗಿ ಪರಿಗಣಿಸೋಣ.
‘ಅಪಾರ ಪ್ರೀತಿಪೂರ್ವಕ ದಯೆಯುಳ್ಳ ಒಬ್ಬ ದೇವರು’
13. ದೇವರ ಒಳ್ಳೇತನದ ಕುರಿತಾದ ಪ್ರಕಟನೆಯಲ್ಲಿ, ಯಾವ ಗುಣವನ್ನು ಎರಡು ಬಾರಿ ಉಲ್ಲೇಖಿಸಲಾಗಿದೆ, ಮತ್ತು ಇದು ಏಕೆ ಸೂಕ್ತವಾದದ್ದಾಗಿದೆ?
13 ‘ಯೆಹೋವನು ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧನೂ, ಸಾವಿರಾರು ತಲೆಗಳ ವರೆಗೆ ಪ್ರೀತಿಪೂರ್ವಕ ದಯೆಯನ್ನು ಉಳಿಸಿಕೊಳ್ಳುವಾತನೂ’ ಆಗಿದ್ದಾನೆ. “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ “ನಿಷ್ಠಾವಂತ ಪ್ರೀತಿ” ಎಂಬರ್ಥವೂ ಇದೆ. ಮೋಶೆಗೆ ನೀಡಲ್ಪಟ್ಟ ದೇವರ ಪ್ರಕಟನೆಯಲ್ಲಿ ಎರಡು ಬಾರಿ ಪಟ್ಟಿಮಾಡಲ್ಪಟ್ಟಿರುವ ಏಕಮಾತ್ರ ಗುಣವು ಇದೇ ಆಗಿದೆ. ಯೆಹೋವನ ಪ್ರಮುಖ ಗುಣವು ಪ್ರೀತಿಯಾಗಿರುವುದರಿಂದ, ಇದೆಷ್ಟು ಸೂಕ್ತವಾದದ್ದಾಗಿದೆ! (1 ಯೋಹಾನ 4:8) “ಆತನು ಒಳ್ಳೆಯವನು, ಆತನ ಕೃಪೆಯು [“ಪ್ರೀತಿಪೂರ್ವಕ ದಯೆಯು,” NW] ಶಾಶ್ವತವಾಗಿರುವದು” ಎಂಬ ಯೆಹೋವನ ಸ್ತುತಿಯ ಪ್ರಸಿದ್ಧ ಅಭಿವ್ಯಕ್ತಿಯು ಈ ಗುಣವನ್ನು ಒತ್ತಿಹೇಳುತ್ತದೆ.
14. ದೇವರ ಒಳ್ಳೇತನ ಹಾಗೂ ಪ್ರೀತಿಪೂರ್ವಕ ದಯೆಯನ್ನು ಯಾರು ವಿಶೇಷವಾಗಿ ಅನುಭವಿಸುತ್ತಿದ್ದಾರೆ?
14 ಯೆಹೋವನ ಒಳ್ಳೇತನದ ಒಂದು ವ್ಯಕ್ತಪಡಿಸುವಿಕೆಯು, ಆತನು ‘ಅಪಾರ ಪ್ರೀತಿಪೂರ್ವಕ ದಯೆಯುಳ್ಳವನಾಗಿರುವುದೇ’ ಆಗಿದೆ. ತನ್ನ ಸಮರ್ಪಿತ, ನಂಬಿಗಸ್ತ ಮಾನವ ಸೇವಕರನ್ನು ಆತನು ಕೋಮಲ ರೀತಿಯಲ್ಲಿ ಪರಾಮರಿಸುವ ವಿಧದಲ್ಲಿ ಇದು ವಿಶೇಷವಾಗಿ ವ್ಯಕ್ತವಾಗುತ್ತದೆ. (1 ಪೇತ್ರ 5:6, 7) ಯೆಹೋವನ ಸಾಕ್ಷಿಗಳೇ ಪುರಾವೆ ನೀಡಸಾಧ್ಯವಿರುವಂತೆ, ತನ್ನನ್ನು ಪ್ರೀತಿಸುವ ಹಾಗೂ ತನ್ನ ಸೇವೆಮಾಡುವವರ ಕಡೆಗೆ ಆತನು ‘ಪ್ರೀತಿಪೂರ್ವಕ ದಯೆಯನ್ನು ಉಳಿಸಿಕೊಳ್ಳು’ವಾತನಾಗಿದ್ದಾನೆ. (ವಿಮೋಚನಕಾಂಡ 20:6) ಸ್ವಾಭಾವಿಕ ಇಸ್ರಾಯೇಲ್ ಜನಾಂಗವು ಆತನ ಮಗನನ್ನು ತಿರಸ್ಕರಿಸಿದ್ದರಿಂದ, ಯೆಹೋವನ ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠಾವಂತ ಪ್ರೀತಿಯನ್ನು ಪಡೆಯಲಾರದೇ ಹೋಯಿತು. ಆದರೆ ಎಲ್ಲ ಜನಾಂಗಗಳ ನಂಬಿಗಸ್ತ ಕ್ರೈಸ್ತರ ಕಡೆಗಿನ ದೇವರ ಒಳ್ಳೇತನವು ಹಾಗೂ ನಿಷ್ಠಾವಂತ ಪ್ರೀತಿಯು ಮಾತ್ರ ಶಾಶ್ವತವಾಗಿ ಉಳಿಯುವುದು.—ಯೋಹಾನ 3:36.
ಯೆಹೋವನು ಕರುಣೆಯೂ ದಯೆಯೂ ಉಳ್ಳಾತನು
15. (ಎ) ಸೀನಾಯಿ ಬೆಟ್ಟದಲ್ಲಿ ಮೋಶೆಯು ಕೇಳಿಸಿಕೊಂಡ ಪ್ರಕಟನೆಯು, ಯಾವ ಅಭಿವ್ಯಕ್ತಿಯಿಂದ ಆರಂಭವಾಯಿತು? (ಬಿ) ಕರುಣೆಯಲ್ಲಿ ಏನೆಲ್ಲಾ ಒಳಗೂಡಿದೆ?
15 ಸೀನಾಯಿ ಬೆಟ್ಟದಲ್ಲಿ ಮೋಶೆಯು ಕೇಳಿಸಿಕೊಂಡ ಪ್ರಕಟನೆಯು, ಈ ಅಭಿವ್ಯಕ್ತಿಯಿಂದ ಆರಂಭವಾಯಿತು: “ಯೆಹೋವ, ಯೆಹೋವ, ಕರುಣೆಯೂ ದಯೆಯೂ ಉಳ್ಳ ದೇವರು.” “ಕರುಣೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, “ಕರುಳಿಗೆ” ಸೂಚಿತವಾಗಿರಬಹುದು ಮತ್ತು ಇದು “ಗರ್ಭಾಶಯ”ಕ್ಕಾಗಿರುವ ಪದದೊಂದಿಗೆ ನಿಕಟವಾಗಿ ಸಂಬಂಧಿಸಿದ್ದಾಗಿದೆ. ಆದುದರಿಂದ, ಒಬ್ಬ ವ್ಯಕ್ತಿಯ ಆಂತರ್ಯದಲ್ಲಿರುವ ಕೋಮಲ ಸಹಾನುಭೂತಿಯ ಭಾವನೆಗಳು ಕರುಣೆಯಲ್ಲಿ ಒಳಗೂಡಿವೆ. ಆದರೂ, ಕೇವಲ ಕನಿಕರವನ್ನು ತೋರಿಸುವುದಕ್ಕಿಂತಲೂ ಹೆಚ್ಚಿನದ್ದು ಕರುಣೆಯಲ್ಲಿ ಒಳಗೂಡಿದೆ. ಇತರರ ಕಷ್ಟಾನುಭವವನ್ನು ಪರಿಹರಿಸಲಿಕ್ಕಾಗಿ ಏನನ್ನಾದರೂ ಮಾಡುವಂತೆ ಅದು ನಮ್ಮನ್ನು ಪ್ರಚೋದಿಸಬೇಕು. ಉದಾಹರಣೆಗೆ, ಪ್ರೀತಿಪೂರ್ಣ ಕ್ರೈಸ್ತ ಹಿರಿಯರು, ಸೂಕ್ತವಾಗಿರುವಾಗ ‘ಸಂತೋಷದಿಂದ ಕರುಣೆಯನ್ನು ತೋರಿಸುತ್ತಾ,’ ಜೊತೆ ವಿಶ್ವಾಸಿಗಳ ಕಡೆಗೆ ಕರುಣಾಭರಿತರಾಗಿರುವ ಆವಶ್ಯಕತೆಯನ್ನು ಮನಗಾಣುತ್ತಾರೆ.—ರೋಮಾಪುರ 12:8, NW; ಯಾಕೋಬ 2:13; ಯೂದ 22, 23.
16. ಯೆಹೋವನು ದಯಾಪರನಾಗಿದ್ದಾನೆ ಎಂದು ಏಕೆ ಹೇಳಸಾಧ್ಯವಿದೆ?
16 ದೇವರ ಒಳ್ಳೇತನವು ಆತನ ದಯಾಪರತೆಯಲ್ಲಿಯೂ ವ್ಯಕ್ತಪಡಿಸಲ್ಪಡುತ್ತದೆ. ದಯಾಪರನಾದ ಒಬ್ಬ ವ್ಯಕ್ತಿಯು, “ಇನ್ನೊಬ್ಬ ವ್ಯಕ್ತಿಯ ಭಾವನೆಗಳಿಗೆ ಸುಸ್ಪಷ್ಟವಾಗಿ ಪರಿಗಣನೆ ತೋರಿಸುತ್ತಾನೆ” ಮತ್ತು ‘ವಿಶೇಷವಾಗಿ ಕೆಳಗಿನವರ ವಿಷಯದಲ್ಲಿ ಪ್ರೀತಿಯ ಕರುಣಾಭಾವವನ್ನು’ ತೋರಿಸುತ್ತಾನೆ. ತನ್ನ ನಂಬಿಗಸ್ತ ಸೇವಕರೊಂದಿಗೆ ವ್ಯವಹರಿಸುವುದರಲ್ಲಿ ಯೆಹೋವನು ದಯಾಪರತೆಯ ಅತ್ಯುತ್ತಮ ಮಾದರಿಯಾಗಿದ್ದಾನೆ. ಉದಾಹರಣೆಗಾಗಿ, ದೇವದೂತರ ಮೂಲಕ ದೇವರು ವೃದ್ಧ ಪ್ರವಾದಿಯಾಗಿದ್ದ ದಾನಿಯೇಲನನ್ನು ದಯಾಭಾವದಿಂದ ಬಲಪಡಿಸಿದನು ಮತ್ತು ಯೇಸುವನ್ನು ಹೆರುವ ಸುಯೋಗವನ್ನು ಪಡೆಯುವುದರ ಕುರಿತು ಕನ್ಯೆ ಮರಿಯಳಿಗೆ ದಯಾಭಾವದಿಂದ ತಿಳಿಯಪಡಿಸಿದನು. (ದಾನಿಯೇಲ 10:19; ಲೂಕ 1:26-38) ಯೆಹೋವನ ಸೇವಕರೋಪಾದಿ, ಬೈಬಲಿನ ಪುಟಗಳ ಮೂಲಕ ಆತನು ನಮಗೆ ಮನವಿಮಾಡುವ ದಯಾಪರ ವಿಧಕ್ಕಾಗಿ ನಾವು ಆತನಿಗೆ ಕೃತಜ್ಞರಾಗಿದ್ದೇವೆ. ಆತನ ಒಳ್ಳೇತನದ ವ್ಯಕ್ತಪಡಿಸುವಿಕೆಗಾಗಿ ನಾವು ಆತನನ್ನು ಸ್ತುತಿಸುತ್ತೇವೆ ಮತ್ತು ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ದಯಾಪರರಾಗಿರಲು ಪ್ರಯತ್ನಿಸುತ್ತೇವೆ. ಯಾರಿಗೆ ಆತ್ಮಿಕ ಅರ್ಹತೆಗಳಿವೆಯೋ ಅವರು ಒಬ್ಬ ಜೊತೆ ವಿಶ್ವಾಸಿಯನ್ನು “ಶಾಂತಭಾವದಿಂದ” ತಿದ್ದುವಾಗ, ಅವರು ಸೌಮ್ಯರೂ ದಯಾಪರರೂ ಆಗಿರಲು ಪ್ರಯತ್ನಿಸುತ್ತಾರೆ.—ಗಲಾತ್ಯ 6:1.
ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯಾಗಿರುವ ಒಬ್ಬ ದೇವರು
17. ಯೆಹೋವನು ‘ಕೋಪಿಸಿಕೊಳ್ಳುವುದರಲ್ಲಿ ನಿಧಾನಿ’ಯಾಗಿರುವುದಕ್ಕಾಗಿ ನಾವೇಕೆ ಆತನಿಗೆ ಕೃತಜ್ಞರಾಗಿದ್ದೇವೆ?
17 ‘ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯಾಗಿರುವ ಒಬ್ಬ ದೇವರು.’ ಈ ಮಾತುಗಳು, ಯೆಹೋವನ ಒಳ್ಳೇತನದ ಇನ್ನೊಂದು ಅಂಶದ ಕಡೆಗೆ ಗಮನ ಸೆಳೆಯುತ್ತವೆ. ಯೆಹೋವನು ತಾಳ್ಮೆಯಿಂದ ನಮ್ಮ ಕುಂದುಕೊರತೆಗಳನ್ನು ಸಹಿಸಿಕೊಳ್ಳುತ್ತಾನೆ ಮತ್ತು ಗಂಭೀರವಾದ ದೌರ್ಬಲ್ಯಗಳನ್ನು ಜಯಿಸಲು ಹಾಗೂ ಆತ್ಮಿಕ ಪ್ರಗತಿಯನ್ನು ಮಾಡಲು ನಮಗೆ ಸಾಕಷ್ಟು ಸಮಯಾವಕಾಶವನ್ನು ನೀಡುತ್ತಾನೆ. (ಇಬ್ರಿಯ 5:12–6:3; ಯಾಕೋಬ 5:14, 15) ದೇವರ ತಾಳ್ಮೆಯು, ಇಷ್ಟರ ತನಕ ಆತನ ಆರಾಧಕರಾಗಿ ಪರಿಣಮಿಸಿರದಂಥ ಜನರಿಗೂ ಪ್ರಯೋಜನವನ್ನು ನೀಡುತ್ತದೆ. ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸಲು ಮತ್ತು ಪಶ್ಚಾತ್ತಾಪವನ್ನು ತೋರಿಸಲು ಅವರಿಗೆ ಇನ್ನೂ ಸಮಯವಿದೆ. (ರೋಮಾಪುರ 2:4) ಯೆಹೋವನು ತಾಳ್ಮೆಯುಳ್ಳವನಾಗಿರುವುದಾದರೂ, ಕೆಲವೊಮ್ಮೆ ಆತನ ಒಳ್ಳೇತನವು ಆತನು ತನ್ನ ಕೋಪವನ್ನು ವ್ಯಕ್ತಪಡಿಸುವಂತೆಯೂ ಪ್ರಚೋದಿಸುತ್ತದೆ. ಸೀನಾಯಿ ಬೆಟ್ಟದ ಬಳಿ ಇಸ್ರಾಯೇಲ್ಯರು ಚಿನ್ನದ ಬಸವನನ್ನು ಆರಾಧಿಸಿದಾಗ, ಆತನು ತನ್ನ ಕೋಪವನ್ನು ವ್ಯಕ್ತಪಡಿಸಿದನು. ಅತಿ ಬೇಗನೆ ದೇವರು ಸೈತಾನನ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರುವಾಗ, ಆತನ ಕೋಪವು ಇನ್ನೂ ಮಹತ್ತರವಾದ ವಿಧದಲ್ಲಿ ವ್ಯಕ್ತಪಡಿಸಲ್ಪಡುವುದು.—ಯೆಹೆಜ್ಕೇಲ 38:19, 21-23.
18. ಸತ್ಯದ ವಿಷಯದಲ್ಲಿ, ಯೆಹೋವನು ಹಾಗೂ ಮಾನವ ನಾಯಕರ ನಡುವೆ ಯಾವ ಭಿನ್ನತೆಯಿದೆ?
18 ‘ಯೆಹೋವನು ಸತ್ಯದಲ್ಲಿ ಸಮೃದ್ಧನಾದ ದೇವರಾಗಿದ್ದಾನೆ.’ ದೊಡ್ಡ ದೊಡ್ಡ ವಾಗ್ದಾನಗಳನ್ನು ಮಾಡಿ, ನಂತರ ಅವುಗಳನ್ನು ಪೂರೈಸಲು ಸೋತುಹೋಗುವಂತಹ ಮಾನವ ನಾಯಕರಿಗಿಂತ ಯೆಹೋವನು ಎಷ್ಟು ಭಿನ್ನನಾಗಿದ್ದಾನೆ! ಇದಕ್ಕೆ ತದ್ವಿರುದ್ಧವಾಗಿ, ಆತನ ಪ್ರೇರಿತ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಎಲ್ಲ ವಿಷಯಗಳ ಮೇಲೆ ಯೆಹೋವನ ಆರಾಧಕರು ಪೂರ್ಣ ಭರವಸೆಯಿಡಬಲ್ಲರು. ದೇವರು ಸತ್ಯದಲ್ಲಿ ಸಮೃದ್ಧನಾಗಿರುವುದರಿಂದ, ನಾವು ಯಾವಾಗಲೂ ಆತನ ವಾಗ್ದಾನಗಳಲ್ಲಿ ಭರವಸೆಯಿಡಸಾಧ್ಯವಿದೆ. ತನ್ನ ಒಳ್ಳೇತನದಿಂದಾಗಿ, ಆತ್ಮಿಕ ಸತ್ಯಕ್ಕಾಗಿರುವ ನಮ್ಮ ಪ್ರಾರ್ಥನೆಗಳನ್ನು ತಪ್ಪದೆ ಉತ್ತರಿಸುವ ಮೂಲಕ, ನಮ್ಮ ಸ್ವರ್ಗೀಯ ಪಿತನು ಆ ಸತ್ಯವನ್ನು ಹೇರಳವಾಗಿ ಒದಗಿಸುತ್ತಾನೆ.—ಕೀರ್ತನೆ 43:3; 65:2.
19. ಪಶ್ಚಾತ್ತಾಪಿ ಪಾಪಿಗಳ ಕಡೆಗೆ ಯೆಹೋವನು ಯಾವ ಗಮನಾರ್ಹ ವಿಧದಲ್ಲಿ ಒಳ್ಳೇತನವನ್ನು ತೋರಿಸಿದ್ದಾನೆ?
19 ‘ಯೆಹೋವನು ದೋಷ ಮತ್ತು ಅಪರಾಧ ಹಾಗೂ ಪಾಪವನ್ನು ಕ್ಷಮಿಸುವ ದೇವರಾಗಿದ್ದಾನೆ.’ ತನ್ನ ಒಳ್ಳೇತನದಿಂದಾಗಿ ಯೆಹೋವನು, ಪಶ್ಚಾತ್ತಾಪಪಡುವ ಪಾಪಿಗಳನ್ನು ಮನಃಪೂರ್ವಕವಾಗಿ ಕ್ಷಮಿಸಲು ಸದಾ ಸಿದ್ಧನಿದ್ದಾನೆ. ನಮ್ಮ ಪ್ರೀತಿಯ ಸ್ವರ್ಗೀಯ ಪಿತನು, ಯೇಸುವಿನ ಯಜ್ಞದ ಮೂಲಕ ಕ್ಷಮಾಪಣೆಗಾಗಿ ಒದಗಿಸುವಿಕೆಯನ್ನು ಮಾಡಿದ್ದಾನೆ ಎಂಬುದಕ್ಕಾಗಿ ನಾವು ಖಂಡಿತವಾಗಿಯೂ ಕೃತಜ್ಞರಾಗಿದ್ದೇವೆ. (1 ಯೋಹಾನ 2:1, 2) ವಾಸ್ತವದಲ್ಲಿ, ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಡುವವರೆಲ್ಲರೂ, ಯೆಹೋವನು ವಾಗ್ದಾನಿಸಿರುವ ಹೊಸ ಲೋಕದಲ್ಲಿ ಅಂತ್ಯರಹಿತ ಜೀವನದ ನಿರೀಕ್ಷೆಯೊಂದಿಗೆ, ಆತನೊಂದಿಗೆ ಅನುಗ್ರಹಿತ ಸಂಬಂಧದಲ್ಲಿ ಆನಂದಿಸಲು ಶಕ್ತರಾಗಿರುವುದಕ್ಕಾಗಿ ನಾವು ಸಂತೋಷಿತರಾಗಿದ್ದೇವೆ. ಮಾನವಕುಲದ ಕಡೆಗೆ ಒಳ್ಳೇತನವನ್ನು ತೋರಿಸಿದ್ದಕ್ಕಾಗಿ ಯೆಹೋವನನ್ನು ಸ್ತುತಿಸಲು ಇವು ಎಷ್ಟು ಗಮನಾರ್ಹ ಕಾರಣಗಳಾಗಿವೆ!—2 ಪೇತ್ರ 3:13.
20. ದೇವರು ಕೆಟ್ಟತನವನ್ನು ಮನ್ನಿಸುವುದಿಲ್ಲ ಎಂಬುದಕ್ಕೆ ನಮಗೆ ಯಾವ ಪುರಾವೆಯಿದೆ?
20 ‘ಯಾವುದೇ ಕಾರಣಕ್ಕೂ [ಯೆಹೋವನು] ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸದೆ ಬಿಡುವುದಿಲ್ಲ.’ ಯೆಹೋವನ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸಲು ಇದು ಇನ್ನೊಂದು ಕಾರಣವಾಗಿದೆ. ಏಕೆ? ಏಕೆಂದರೆ ಒಳ್ಳೇತನದ ಒಂದು ಅತ್ಯಾವಶ್ಯಕ ಅಂಶವೇನೆಂದರೆ, ಅದು ಯಾವುದೇ ರೀತಿಯಲ್ಲಿ ಕೆಟ್ಟತನವನ್ನು ಮನ್ನಿಸುವುದಿಲ್ಲ. ಅಷ್ಟುಮಾತ್ರವಲ್ಲ, “ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ” ಬರುವಾಗ, ‘ದೇವರನ್ನರಿಯದವರಿಗೂ ಸುವಾರ್ತೆಗೆ ಒಳಪಡದವರಿಗೂ’ ಪ್ರತೀಕಾರವು ಸಲ್ಲಿಸಲ್ಪಡುವುದು. ಅವರು “ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.” (2 ಥೆಸಲೊನೀಕ 1:6-9) ಆಗ, ಇದರಿಂದ ಪಾರಾಗುವಂಥ ಯೆಹೋವನ ಸೇವಕರು, ‘ಒಳ್ಳೇದನ್ನು ಪ್ರೀತಿಸದಂಥ’ ದೇವಭಕ್ತಿಯಿಲ್ಲದ ಜನರಿಂದ ಯಾವುದೇ ತೊಂದರೆಗೊಳಗಾಗದೆ, ಪೂರ್ಣ ರೀತಿಯಲ್ಲಿ ಜೀವಿತವನ್ನು ಆನಂದಿಸಲು ಶಕ್ತರಾಗುವರು.—2 ತಿಮೊಥೆಯ 3:1-3.
ಯೆಹೋವನ ಒಳ್ಳೇತನವನ್ನು ಅನುಕರಿಸುವವರಾಗಿರಿ
21. ನಾವೇಕೆ ಒಳ್ಳೇತನವನ್ನು ತೋರಿಸಬೇಕು?
21 ಯೆಹೋವನ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸಲು ಹಾಗೂ ಆತನಿಗೆ ಉಪಕಾರ ಸಲ್ಲಿಸಲು ನಮಗೆ ಅನೇಕ ಕಾರಣಗಳಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆತನ ಸೇವಕರೋಪಾದಿ ನಾವು ಈ ಗುಣವನ್ನು ತೋರಿಸಲು ನಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಪ್ರಯತ್ನಿಸಬಾರದೇಕೆ? ಹೌದು, ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಉತ್ತೇಜಿಸಿದ್ದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 5:1) ನಮ್ಮ ಸ್ವರ್ಗೀಯ ಪಿತನು ನಿಷ್ಠೆಯಿಂದ ಒಳ್ಳೇತನವನ್ನು ತೋರಿಸುತ್ತಾನೆ, ಮತ್ತು ನಾವು ಸಹ ಅದನ್ನೇ ಮಾಡಬೇಕು.
22. ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?
22 ನಾವು ಪೂರ್ಣ ಮನಸ್ಸಿನಿಂದ ಯೆಹೋವನಿಗೆ ಸಮರ್ಪಿತರಾಗಿರುವಲ್ಲಿ, ಆತನ ಒಳ್ಳೇತನವನ್ನು ಅನುಕರಿಸಲು ತೀವ್ರಾಸಕ್ತರಾಗಿರುವೆವು ಎಂಬುದರಲ್ಲಿ ಸಂಶಯವಿಲ್ಲ. ನಾವು ಪಾಪಿಯಾಗಿದ್ದ ಆದಾಮನ ವಂಶಜರಾಗಿರುವುದರಿಂದ, ಒಳ್ಳೇದನ್ನು ಮಾಡುವುದು ನಮಗೆ ಸುಲಭವಾದ ವಿಷಯವಾಗಿರುವುದಿಲ್ಲ. ಆದರೂ, ನಾವು ಒಳ್ಳೇತನವನ್ನು ತೋರಿಸುವ ಸಾಧ್ಯತೆ ಏಕೆ ಇದೆಯೆಂಬುದನ್ನು ಮುಂದಿನ ಲೇಖನದಲ್ಲಿ ನೋಡಲಿರುವೆವು. ಒಳ್ಳೇತನದ ಅತ್ಯುತ್ತಮ ಮಾದರಿಯಾಗಿರುವ ಯೆಹೋವನನ್ನು ನಾವು ಅನುಕರಿಸಸಾಧ್ಯವಿರುವ ಹಾಗೂ ಅನುಸರಿಸಬೇಕಾದ ಬೇರೆ ಬೇರೆ ವಿಧಗಳನ್ನು ಸಹ ನಾವು ಪರಿಗಣಿಸುವೆವು.
ನೀವು ಹೇಗೆ ಉತ್ತರಿಸುವಿರಿ?
• ಒಳ್ಳೇತನ ಎಂದರೇನು?
• ದೇವರ ಒಳ್ಳೇತನವನ್ನು ಯಾವ ಶಾಸ್ತ್ರೀಯ ಅಭಿವ್ಯಕ್ತಿಯು ಒತ್ತಿಹೇಳುತ್ತದೆ?
• ಯೆಹೋವನ ಒಳ್ಳೇತನದ ಕೆಲವು ವ್ಯಕ್ತಪಡಿಸುವಿಕೆಗಳಾವುವು?
• ಯೆಹೋವನ ಒಳ್ಳೇತನದ ಮಾದರಿಯನ್ನು ನಾವೇಕೆ ಅನುಕರಿಸಬೇಕು?
[ಪುಟ 12ರಲ್ಲಿರುವ ಚಿತ್ರ]
ತನ್ನ ಪುರಾತನ ಜನರು ತಮ್ಮ ಸ್ತುತಿಯ ಅಭಿವ್ಯಕ್ತಿಗಳಿಗೆ ಹೊಂದಿಕೆಯಲ್ಲಿ ಜೀವಿಸದಿದ್ದ ಕಾರಣ, ಯೆಹೋವನು ಅವರನ್ನು ಶಿಸ್ತಿಗೊಳಪಡಿಸಿದನು
[ಪುಟ 12ರಲ್ಲಿರುವ ಚಿತ್ರ]
ನಂಬಿಗಸ್ತ ಉಳಿಕೆಯವರು ಯೆರೂಸಲೇಮಿಗೆ ಹಿಂದಿರುಗಿದರು
[ಪುಟ 13ರಲ್ಲಿರುವ ಚಿತ್ರ]
ದೇವರ ಒಳ್ಳೇತನದ ಅದ್ಭುತ ಪ್ರಕಟನೆಯನ್ನು ಮೋಶೆಯು ಕೇಳಿಸಿಕೊಂಡನು
[ಪುಟ 15ರಲ್ಲಿರುವ ಚಿತ್ರ]
ಬೈಬಲಿನ ಪುಟಗಳ ಮೂಲಕ ಯೆಹೋವನು ನಮಗೆ ಮನವಿಮಾಡುವ ವಿಧದಲ್ಲಿ ಆತನ ಒಳ್ಳೇತನವು ಕಂಡುಬರುತ್ತದೆ