ಸತ್ಯವನ್ನು ಪ್ರೀತಿಸುವ ಯುವ ಜನರು
“ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ?” ಎಂದು ಸಾವಿರಾರು ವರ್ಷಗಳ ಹಿಂದೆ ಒಬ್ಬ ಹೀಬ್ರು ಕೀರ್ತನೆಗಾರನು ಕೇಳಿದನು. (ಕೀರ್ತನೆ 119:9) ಇದು ಈಗಲೂ ಒಂದು ಸಮಂಜಸವಾದ ಪ್ರಶ್ನೆಯಾಗಿದೆ, ಯಾಕೆಂದರೆ ಯುವ ಜನರು ಲೋಕದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ವೇಚ್ಛಾಚಾರದ ಲೈಂಗಿಕ ಚಟುವಟಿಕೆಯು ಅನೇಕ ಯುವ ಜನರನ್ನು ಏಡ್ಸ್ ರೋಗಕ್ಕೆ ಒಡ್ಡಿದೆ ಮತ್ತು ಈ ಘೋರ ವ್ಯಾಧಿಯಿಂದ ಸೋಂಕಿತರಾಗಿರುವ ಸುಮಾರು ಅರ್ಧದಷ್ಟು ಮಂದಿ, 15ರಿಂದ 24ರ ವರೆಗಿನ ವಯಸ್ಸಿನವರಾಗಿದ್ದಾರೆ. ಅಮಲೌಷಧದ ದುರುಪಯೋಗ ಸಹ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಅದು ಎಳೆಯ ಜೀವಗಳನ್ನು ಅರ್ಧದಲ್ಲೇ ಹಿಸುಕಿಹಾಕುತ್ತದೆ. ಕೀಳ್ಮಟ್ಟದ ಸಂಗೀತ, ಹಿಂಸಾತ್ಮಕ ಹಾಗೂ ಅನೈತಿಕ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಹಾಗೂ ವಿಡಿಯೋಗಳು ಮತ್ತು ಇಂಟರ್ನೆಟ್ನಲ್ಲಿನ ಅಶ್ಲೀಲ ಚಿತ್ರಗಳು ಎಳೆಯರ ಮೇಲೆ ಧ್ವಂಸಕಾರಕ ಪ್ರಭಾವವನ್ನು ಬೀರುತ್ತವೆ. ಆದುದರಿಂದ, ಕೀರ್ತನೆಗಾರನು ಕೇಳಿರುವ ಪ್ರಶ್ನೆಯು, ಇಂದು ಅನೇಕ ಹೆತ್ತವರು ಮತ್ತು ಯುವ ಜನರು ಗಂಭೀರವಾಗಿ ಚಿಂತಿಸುವ ವಿಷಯವಾಗಿದೆ.
ಆ ಕೀರ್ತನೆಗಾರನೇ ತನ್ನ ಸ್ವಂತ ಪ್ರಶ್ನೆಗೆ ಈ ಉತ್ತರವನ್ನು ಕೊಟ್ಟನು: “ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” ನಿಶ್ಚಯವಾಗಿಯೂ ದೇವರ ವಾಕ್ಯವಾದ ಬೈಬಲಿನಲ್ಲಿ, ಯುವ ಜನರಿಗಾಗಿ ಉತ್ತಮ ರೀತಿಯ ನಿರ್ದೇಶನವಿದೆ, ಮತ್ತು ಅದನ್ನು ಅನುಸರಿಸುವ ಮೂಲಕ ಅನೇಕ ಯುವ ಜನರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಿದ್ದಾರೆ. (ಕೀರ್ತನೆ 119:105) ದೇವರನ್ನು ಪ್ರೀತಿಸುವ ಮತ್ತು ವಿಲಾಸಪ್ರಿಯ ಹಾಗೂ ಪ್ರಾಪಂಚಿಕಭಾವದ ಈ ಲೋಕದಲ್ಲಿ ಆತ್ಮಿಕವಾಗಿ ಬಲಾಢ್ಯರಾಗಿರಲು ಪ್ರಯತ್ನಿಸುತ್ತಿರುವ ಕೆಲವು ಯುವ ಜನರ ಮಾದರಿಗಳನ್ನು ಪರಿಗಣಿಸೋಣ.
ಹೆತ್ತವರ ಮಾರ್ಗದರ್ಶನವನ್ನು ಅವರು ಗಣ್ಯಮಾಡುತ್ತಾರೆ
ಹಾಕೋಬ್ ಎಮಾನೂಎಲ್ ಎಂಬವನು, ಯೆಹೋವನ ಸಾಕ್ಷಿಗಳ ಮೆಕ್ಸಿಕೊ ಬ್ರಾಂಚ್ ಆಫೀಸಿನಲ್ಲಿ ಸೇವೆಸಲ್ಲಿಸುವ ಮುಂಚೆ ಕೆಲವು ವರ್ಷಗಳ ವರೆಗೆ ಪೂರ್ಣ ಸಮಯದ ಪಯನೀಯರ್ ಶುಶ್ರೂಷಕನಾಗಿದ್ದನು. ದೇವರ ಸೇವೆಗಾಗಿ ತನ್ನಲ್ಲಿರುವ ಪ್ರೀತಿಯು ಹೇಗೆ ಬೆಳೆಸಲ್ಪಟ್ಟಿತ್ತೆಂಬುದನ್ನು ಅವನು ಗಣ್ಯತೆಯಿಂದ ಜ್ಞಾಪಿಸಿಕೊಳ್ಳುತ್ತಾನೆ: “ನಾನು ಯಾರೊಂದಿಗೆ ಗೆಳೆತನವನ್ನು ಮಾಡಿದ್ದೆನೊ ಆ ಕೆಲವು ಅನುಭವೀ ಆತ್ಮಿಕ ಸಹೋದರರು ತುಂಬ ಸಹಾಯಮಾಡಿದ್ದರೂ, ಪ್ರಧಾನವಾಗಿ ಪ್ರಭಾವ ಬೀರಿದವರು ನನ್ನ ಹೆತ್ತವರೇ. ಇವರೆಲ್ಲರೂ ನಾನು ಸಾರುವ ಕೆಲಸವನ್ನು ಪ್ರೀತಿಸುವಂತೆ ಪ್ರಚೋದಿಸಿದರು. ಸೌಮ್ಯವಾದ ರೀತಿಯಲ್ಲಿ ಅವರು ನನ್ನನ್ನು ಸರಿಯಾದ ದಾರಿಗೆ ನಿರ್ದೇಶಿಸಿದರು. ಅವರು ನನ್ನ ಮೇಲೆ ಒತ್ತಡಹಾಕುತ್ತಿದ್ದಾರೆಂಬ ಅನಿಸಿಕೆಯೇ ನನಗಾಗಲಿಲ್ಲ.”
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಈಗಾಗಲೇ ಹಲವಾರು ವರ್ಷಗಳನ್ನು ಕಳೆದಿರುವ ಡೇವಿಡ್ ಎಂಬವನು, ಅವನು ಮತ್ತು ಅವನ ತಮ್ಮ ಚಿಕ್ಕವರಾಗಿದ್ದರೂ, ಅವನ ಹೆತ್ತವರು ವಿಶೇಷ ಪಯನೀಯರರಾಗಿ ಸೇವೆಸಲ್ಲಿಸಲು ಆರಂಭಿಸಿದ್ದ ಸಂಗತಿಯು ಅವನ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರಿತೆಂಬುದನ್ನು ಜ್ಞಾಪಿಸಿಕೊಳ್ಳುತ್ತಾನೆ. ಅವನ ತಂದೆಯು ಮರಣಹೊಂದಿದಾಗಲೂ, ಅವನ ತಾಯಿ ವಿಶೇಷ ಪಯನೀಯರ್ ಸೇವೆಯಲ್ಲಿ ಮುಂದುವರಿದರು. ಸುವಾರ್ತೆಯನ್ನು ಸಾರುವ ಕೆಲಸದ ಜೊತೆಯಲ್ಲಿ ಅವರು ತಮ್ಮ ಮಕ್ಕಳ ಆರೈಕೆಯನ್ನೂ ಮಾಡಿದರು. “ನಾನೂ ಒಬ್ಬ ಪಯನೀಯರನಾಗುವಂತೆ ನನ್ನ ತಂದೆತಾಯಿ ಎಂದೂ ನನ್ನನ್ನು ಒತ್ತಾಯಿಸಲಿಲ್ಲ. ಆದರೆ ಒಂದು ಕುಟುಂಬದೋಪಾದಿ ನಾವು ಪಯನೀಯರ್ ಸೇವೆಯಲ್ಲಿ ಎಷ್ಟು ಆನಂದಿಸಿದೆವೆಂದರೆ, ಆ ಸಾಂಗತ್ಯ ಮತ್ತು ಪರಿಸರವು ನಾನು ಸಹ ಅದನ್ನೇ ಮಾಡುವಂತೆ ನನ್ನನ್ನು ಪ್ರೇರಿಸಿತು” ಎಂದು ಡೇವಿಡ್ ಹೇಳುತ್ತಾನೆ. ಹೆತ್ತವರಿಂದ ಸಿಗುವ ಉಪಯುಕ್ತವಾದ ನಿರ್ದೇಶನ ಮತ್ತು ಗಮನದ ಮಹತ್ವದ ಕುರಿತಾಗಿ ಡೇವಿಡ್ ಹೇಳುವುದು: “ಪ್ರತಿ ರಾತ್ರಿ ನನ್ನ ತಾಯಿ ನಮಗೆ, ಕಳೆದುಕೊಂಡ ಪ್ರಮೋದವನದಿಂದ ಮತ್ತೆ ಪಡೆದುಕೊಂಡ ಪ್ರಮೋದವನಕ್ಕೆ (ಇಂಗ್ಲಿಷ್)a ಎಂಬ ಪುಸ್ತಕದಿಂದ ಕಥೆಗಳನ್ನು ಓದಿ ಹೇಳುತ್ತಿದ್ದರು. ಅವರು ನಮಗೆ ಅದನ್ನು ಹೇಳುತ್ತಿದ್ದ ರೀತಿಯು, ನಾವು ಆತ್ಮಿಕ ಆಹಾರವನ್ನು ಸೇವಿಸುವುದನ್ನು ತುಂಬ ಇಷ್ಟಪಡುವಂತೆ ಸಹಾಯಮಾಡಿತು.”
ಕೂಟಗಳಿಗಾಗಿ ಗಣ್ಯತೆ
ಕೆಲವು ಯುವ ಜನರಿಗೆ ಕ್ರೈಸ್ತ ಕೂಟಗಳನ್ನು ಗಣ್ಯಮಾಡುವುದು ಕಷ್ಟಕರವಾಗಿರುತ್ತದೆ. ಅವರ ಹೆತ್ತವರು ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದರಿಂದ ಮಾತ್ರ ಅವರು ಕೂಟಗಳಿಗೆ ಹೋಗುತ್ತಾರೆ ಅಷ್ಟೆ. ಆದರೆ ಅವರು ಕೂಟಕ್ಕೆ ಹಾಜರಾಗುವುದನ್ನು ಮುಂದುವರಿಸುವುದಾದರೆ, ಸಕಾಲದಲ್ಲಿ ಕೂಟಗಳನ್ನು ಪ್ರೀತಿಸಲಾರಂಭಿಸುವರು. 11 ವರ್ಷ ಪ್ರಾಯದಲ್ಲಿ ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದ ಆಲ್ಫ್ರೇತೊನನ್ನು ಪರಿಗಣಿಸಿರಿ. ಅವನು ಸುಮಾರು ಐದು ವರ್ಷದವನಾಗಿದ್ದಾಗ ಕೂಟಗಳಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನೆಂದು ಅವನು ಒಪ್ಪಿಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಅಲ್ಲಿ ನಿದ್ರೆಬರುತ್ತಿತ್ತು. ಆದರೆ ಅವನ ಹೆತ್ತವರು ಅವನು ಕೂಟಗಳಲ್ಲಿ ಮಲಗುವಂತೆ ಬಿಡುತ್ತಿರಲಿಲ್ಲ. ಅವನು ಜ್ಞಾಪಿಸಿಕೊಳ್ಳುವುದು: “ನಾನು ದೊಡ್ಡವನಾಗುತ್ತಾ ಬಂದಂತೆ, ಸ್ವಲ್ಪ ಸ್ವಲ್ಪವಾಗಿ ಕೂಟಗಳಲ್ಲಿನ ನನ್ನ ಆಸಕ್ತಿಯು ಹೆಚ್ಚಿತು. ಇದು ವಿಶೇಷವಾಗಿ ನಾನು ಓದುಬರಹವನ್ನು ಕಲಿತುಕೊಂಡ ನಂತರ ಆರಂಭವಾಯಿತು, ಯಾಕೆಂದರೆ ಆಗ ನಾನು ನನ್ನ ಸ್ವಂತ ಮಾತುಗಳಲ್ಲಿ ಉತ್ತರಗಳನ್ನು ಕೊಡಲಾರಂಭಿಸಿದೆ.”
ಒಬ್ಬ ರೆಗ್ಯುಲರ್ ಪಯನೀಯರಳೋಪಾದಿ ಸೇವೆಸಲ್ಲಿಸುತ್ತಿರುವ ಸೀಂಟೀಯಾ ಎಂಬ 17 ವರ್ಷ ಪ್ರಾಯದ ಹುಡುಗಿಯು, ಅವಳು ದೇವರ ಸೇವೆಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಒಳ್ಳೇ ಸಹವಾಸವು ಹೇಗೆ ಒಂದು ದೊಡ್ಡ ಪಾತ್ರವನ್ನು ವಹಿಸಿತೆಂಬುದನ್ನು ತಿಳಿಸುತ್ತಾಳೆ. ಅವಳನ್ನುವುದು: “ಸಹೋದರರೊಂದಿಗಿನ ಸುಸಂಬಂಧವು ಮತ್ತು ಕೂಟಗಳಲ್ಲಿ ಕ್ರಮವಾದ ಹಾಜರಿಯು, ನಾನು ಲೌಕಿಕ ಸ್ನೇಹಿತರು ಮತ್ತು ಡಿಸ್ಕೋಗಳಿಗೆ ಹೋಗುವುದರಂಥ ಯುವ ಜನರ ಜನಪ್ರಿಯ ಚಟುವಟಿಕೆಗಳ ಅಭಾವವನ್ನು ಅನುಭವಿಸುವುದರಿಂದ ಕಾಪಾಡಿದೆ. ಕೂಟಗಳಲ್ಲಿ ಉತ್ತರಗಳಿಗೆ ಮತ್ತು ಅನುಭವಗಳಿಗೆ ಕಿವಿಗೊಡುವುದು, ನನ್ನ ಬಳಿ ಇರುವುದೆಲ್ಲವನ್ನೂ ಯೆಹೋವನಿಗೆ ಕೊಡುವ ಅಪೇಕ್ಷೆಯನ್ನು ನನ್ನಲ್ಲಿ ಹುಟ್ಟಿಸಿತು. ಮತ್ತು ನನ್ನ ಬಳಿ ಇರುವ ಅತ್ಯುತ್ತಮವಾದ ವಿಷಯವು ನನ್ನ ಯೌವನವೇ ಎಂದು ನನಗನಿಸುತ್ತದೆ. ಆದುದರಿಂದ ಅದನ್ನೇ ಆತನ ಸೇವೆಯಲ್ಲಿ ಉಪಯೋಗಿಸುವ ನಿರ್ಣಯವನ್ನು ಮಾಡಿದೆ.”
ಹೀಗಿದ್ದರೂ ಅವಳು ಒಪ್ಪಿಕೊಳ್ಳುವುದು: “ಆದರೆ ನಾನು ದೀಕ್ಷಾಸ್ನಾನವನ್ನು ಪಡೆಯುವ ಮುಂಚೆ, ನಾನು ಕೂಟಗಳನ್ನು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ ಒಂದು ಸಮಯವಿತ್ತು. ನನಗೆ ಹೋಮ್ವರ್ಕ್ ಮಾಡಲಿಕ್ಕಿದೆ ಇಲ್ಲವೆ ಇನ್ನಿತರ ಶಾಲಾ ಚಟುವಟಿಕೆಗಳಿವೆ ಎಂಬ ನೆವವನ್ನು ಕೊಡುತ್ತಿದ್ದೆ. ನಾನು ಹಲವಾರು ಕೂಟಗಳಿಗೆ ತಪ್ಪಿಸಿಕೊಂಡೆ, ಮತ್ತು ಇದು ನನ್ನನ್ನು ಆತ್ಮಿಕವಾಗಿ ಬಾಧಿಸಲು ಆರಂಭಿಸಿತು. ಬೈಬಲನ್ನು ಅಧ್ಯಯನ ಮಾಡದೆ ಇದ್ದ ಒಬ್ಬ ಹುಡುಗನೊಂದಿಗೆ ನಾನು ಸಹವಾಸ ಮಾಡುವುದನ್ನು ಆರಂಭಿಸಿದೆ. ಆದರೆ ಯೆಹೋವನ ಸಹಾಯದಿಂದಾಗಿ, ಸಕಾಲದಲ್ಲೇ ನಾನು ಇದೆಲ್ಲವನ್ನೂ ತಿದ್ದಿಕೊಂಡೆ.”
ಒಂದು ವೈಯಕ್ತಿಕ ನಿರ್ಣಯ
ಪೂರ್ಣ ಸಮಯ ಯೆಹೋವನ ಸೇವೆಮಾಡುತ್ತಿರುವ ಪಾಬ್ಲೊ ಎಂಬ ಇನ್ನೊಬ್ಬ ಯುವಕನಿಗೆ, ದೇವರ ವಾಕ್ಯದ ಸತ್ಯಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಯಾವುದು ಮುಖ್ಯ ಅಂಶವಾಗಿದೆಯೆಂಬುದರ ಕುರಿತು ಅವನ ಅಭಿಪ್ರಾಯವನ್ನು ಕೇಳಲಾಗಿ, ಅವನು ಹೇಳಿದ್ದು: “ಎರಡು ವಿಷಯಗಳಿವೆಯೆಂದು ನನಗನಿಸುತ್ತದೆ: ಕ್ರಮವಾದ ಬೈಬಲ್ ಅಧ್ಯಯನ ಮತ್ತು ಸಾರುವ ಕೆಲಸಕ್ಕಾಗಿ ಹುರುಪು. ಯೆಹೋವನ ಕುರಿತಾದ ಸತ್ಯವನ್ನು ನನಗೆ ಕಲಿಸಿದ್ದಕ್ಕಾಗಿ ನಾನು ನನ್ನ ಹೆತ್ತವರಿಗೆ ಕೃತಜ್ಞನಾಗಿದ್ದೇನೆ ಮತ್ತು ಅವರು ನನಗೆ ಕೊಡಬಲ್ಲ ಅತ್ಯುತ್ತಮವಾದ ವಿಷಯ ಇದೇ ಆಗಿದೆ ಎಂದು ನನಗನಿಸುತ್ತದೆ. ಆದರೆ ನಾನು ಯೆಹೋವನನ್ನು ಏಕೆ ಪ್ರೀತಿಸುತ್ತೇನೆ ಎಂಬುದರ ಬಗ್ಗೆ ವೈಯಕ್ತಿಕವಾಗಿ ಸ್ವತಃ ನನಗೆ ಮನವರಿಕೆಯಾಗಬೇಕು. ಅದಕ್ಕೋಸ್ಕರ ಬೈಬಲ್ ಸತ್ಯದ ‘ಅಗಲ ಎತ್ತರವನ್ನು’ ತಿಳಿಯುವ ಅಗತ್ಯವಿದೆ. ಹೀಗೆ ಮಾಡುವುದರಿಂದ ಮಾತ್ರ ನಾವು ಯೆಹೋವನ ವಾಕ್ಯಕ್ಕಾಗಿ ಹಂಬಲವನ್ನು ಹೊಂದುವೆವು, ಮತ್ತು ಇದರ ಬಗ್ಗೆ ನಾವು ಇತರರೊಂದಿಗೆ ಮಾತಾಡುವಂತೆ ಇದು ನಮ್ಮೊಳಗೆ ‘ಉರಿಯುವ ಬೆಂಕಿಯನ್ನು’ ಹೆಚ್ಚಿಸುತ್ತದೆ. ಸಾರುವ ಕಾರ್ಯಕ್ಕಾಗಿರುವ ಆ ಹುರುಪು ಸತ್ಯಕ್ಕಾಗಿರುವ ನಮ್ಮ ಗಣ್ಯತೆಯನ್ನು ಸಜೀವವಾಗಿರಿಸುತ್ತದೆ.”—ಎಫೆಸ 3:18; ಯೆರೆಮೀಯ 20:9.
ಈ ಮುಂಚೆ ತಿಳಿಸಲ್ಪಟ್ಟಿರುವ ಹಾಕೋಬ್ ಎಮಾನೂಎಲ್, ಯೆಹೋವನ ಸೇವೆಮಾಡಲಿಕ್ಕಾಗಿ ವೈಯಕ್ತಿಕವಾದ ಆಯ್ಕೆಯನ್ನು ಮಾಡುವುದು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ನೆನಪಿಸಿಕೊಳ್ಳುತ್ತಾನೆ. ಅವನು ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಅವನ ಹೆತ್ತವರು ಎಂದೂ ಒತ್ತಾಯಿಸಲಿಲ್ಲವೆಂದು ಅವನು ಹೇಳುತ್ತಾನೆ. “ಅದು ಒಳ್ಳೇದೇ ಆಯಿತೆಂದು ನಾನು ನಂಬುತ್ತೇನೆ, ಯಾಕೆಂದರೆ ನಾನು ಅದರ ಒಳ್ಳೇ ಫಲಿತಾಂಶಗಳನ್ನು ನೋಡುತ್ತಿದ್ದೇನೆ. ಉದಾಹರಣೆಗಾಗಿ, ನಾನು ಯಾರೊಂದಿಗೆ ಬಹಳಷ್ಟು ಸಮಯ ಸಹವಾಸ ಮಾಡುತ್ತಿದ್ದೆನೊ ಆ ಯುವಕರಲ್ಲಿ ಕೆಲವರು ಜೊತೆಯಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಣಯವನ್ನು ಮಾಡಿದರು. ಅದು ಒಳ್ಳೇ ಸಂಗತಿಯಾಗಿದ್ದರೂ, ಅವರಲ್ಲಿ ಕೆಲವರು ಕೇವಲ ಭಾವುಕರಾಗಿ ಹಾಗೆ ಮಾಡಿದ್ದರೆಂಬುದನ್ನು ನಾನು ನೋಡಸಾಧ್ಯವಿತ್ತು. ತದನಂತರ ಸ್ವಲ್ಪ ಸಮಯದೊಳಗೆ, ರಾಜ್ಯ ಚಟುವಟಿಕೆಗಾಗಿದ್ದ ಅವರ ಹುರುಪು ತಣ್ಣಗಾಗಿ ಹೋಯಿತು. ನನ್ನ ವಿಷಯದಲ್ಲಾದರೊ, ನನ್ನ ಹೆತ್ತವರು ನಾನು ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಳ್ಳುವ ನಿರ್ಣಯವನ್ನು ಮಾಡುವಂತೆ ನನ್ನ ಮೇಲೆ ಒತ್ತಡ ಹೇರಲಿಲ್ಲ. ಅದು ನನ್ನ ವೈಯಕ್ತಿಕ ನಿರ್ಣಯವಾಗಿತ್ತು.”
ಸಭೆಯ ಪಾತ್ರ
ಕೆಲವು ಯುವ ಜನರು ದೇವರ ವಾಕ್ಯದ ಸತ್ಯವನ್ನು, ತಮ್ಮ ಹೆತ್ತವರ ಸಹಾಯವಿಲ್ಲದೆ ತಮ್ಮಷ್ಟಕ್ಕೇ ಕಲಿತುಕೊಂಡಿದ್ದಾರೆ. ಅಂಥ ಪರಿಸ್ಥಿತಿಗಳಲ್ಲಿ, ಸರಿಯಾದದ್ದನ್ನು ಮಾಡಲು ಕಲಿತುಕೊಂಡು ಅದನ್ನು ಮಾಡುವುದರಲ್ಲಿ ಪಟ್ಟುಹಿಡಿಯುವುದು ಖಂಡಿತವಾಗಿಯೂ ಒಂದು ಪಂಥಾಹ್ವಾನವಾಗಿದೆ.
ಸತ್ಯವು ತನಗೆ ಎಷ್ಟೊಂದು ಪ್ರಯೋಜನಗಳನ್ನು ತಂದಿದೆಯೆಂಬುದನ್ನು ನೋಎ ಎಂಬವನು ಜ್ಞಾಪಿಸಿಕೊಳ್ಳುತ್ತಾನೆ. ತುಂಬ ಚಿಕ್ಕ ಪ್ರಾಯದಿಂದಲೇ ಅವನಿಗೆ ಸಿಡುಕು ಮತ್ತು ಹಿಂಸಾತ್ಮಕ ಸ್ವಭಾವವಿತ್ತು. 14 ವರ್ಷ ಪ್ರಾಯದಲ್ಲಿ ಅವನು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದಾಗ ಅವನ ಮನೋಪ್ರಕೃತಿಯು ಸುಧಾರಿಸಲಾರಂಭಿಸಿತು. ಮತ್ತು ಆ ಸಮಯದಲ್ಲಿ ಬೈಬಲ್ ಬಗ್ಗೆ ಆಸಕ್ತಿಯಿಲ್ಲದಿದ್ದ ಅವನ ಹೆತ್ತವರು ಇದಕ್ಕಾಗಿ ತುಂಬ ಆಭಾರಿಗಳಾಗಿದ್ದರು. ನೋಎ ಆತ್ಮಿಕವಾಗಿ ಪ್ರಗತಿಮಾಡುತ್ತಾ ಹೋದಂತೆ, ದೇವರ ಸೇವೆಯಲ್ಲಿ ತನ್ನ ಜೀವಿತವನ್ನು ಹೆಚ್ಚು ಪೂರ್ಣವಾಗಿ ಉಪಯೋಗಿಸಲು ಬಯಸಿದನು. ಈಗ ಅವನು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದಾನೆ.
ಅದೇ ರೀತಿಯಲ್ಲಿ ಆಲೇಹಾಂಡ್ರೊ ಎಂಬವನು ತುಂಬ ಎಳೆಯವನಾಗಿದ್ದಾಗ ಕ್ರೈಸ್ತ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಲಾರಂಭಿಸಿದನು. ಸತ್ಯಕ್ಕಾಗಿರುವ ತನ್ನ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಅವನು ಹೇಳುವುದು: “ನಾನೊಂದು ಸಂಪ್ರದಾಯಸ್ಥ ಕ್ಯಾಥೊಲಿಕ್ ಕುಟುಂಬದಲ್ಲಿ ಬೆಳೆದಿದ್ದೆ. ಆದರೆ ಕಮ್ಯೂನಿಸ್ಟರ ನಾಸ್ತಿಕತೆಯ ದಿಕ್ಕಿನಲ್ಲಿ ನನ್ನ ಚಿತ್ತವು ಓಲುತ್ತಾ ಇತ್ತು. ಏಕೆಂದರೆ ತುಂಬ ಚಿಕ್ಕ ಪ್ರಾಯದಿಂದಲೇ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಗಳಿಗೆ ಚರ್ಚು ಉತ್ತರವನ್ನು ಕೊಟ್ಟಿರಲಿಲ್ಲ. ಆದರೆ ಯೆಹೋವನ ಸಂಸ್ಥೆಯು ನಾನು ದೇವರ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿತು. ಅದು ಅಕ್ಷರಶಃ ನನ್ನ ಜೀವವನ್ನೇ ಉಳಿಸಿತು. ಏಕೆಂದರೆ ಒಂದುವೇಳೆ ನಾನು ಬೈಬಲನ್ನು ಅಧ್ಯಯನ ಮಾಡಿರದಿದ್ದರೆ, ನಾನು ಬಹುಶಃ ಅನೈತಿಕತೆ, ಮದ್ಯವ್ಯಸನ ಇಲ್ಲವೆ ಅಮಲೌಷಧಗಳಲ್ಲಿ ಮುಳುಗಿರುತ್ತಿದ್ದೆ. ನಾನು ಯಾವುದೊ ಕ್ರಾಂತಿಕಾರಿ ಗುಂಪಿನ ಭಾಗವಾಗಿ, ದುಃಖಕರವಾದ ಫಲಿತಾಂಶಗಳನ್ನು ಕೊಯ್ಯುತ್ತಿದ್ದೆನೊ ಏನೊ.”
ಸತ್ಯಕ್ಕಾಗಿರುವ ತನ್ನ ಅನ್ವೇಷಣೆಯಲ್ಲಿ ಒಬ್ಬ ವ್ಯಕ್ತಿಯು ಪಟ್ಟುಹಿಡಿದು, ತನ್ನ ಹೆತ್ತವರ ಬೆಂಬಲವಿಲ್ಲದಿದ್ದರೂ ಅದಕ್ಕೆ ಹೇಗೆ ಅಂಟಿಕೊಂಡಿರಬಲ್ಲನು? ಸಭೆಯಲ್ಲಿರುವ ಹಿರಿಯರು ಮತ್ತು ಇತರರು ಸುವ್ಯಕ್ತವಾಗಿ ಒಂದು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ನೋಎ ಜ್ಞಾಪಿಸಿಕೊಳ್ಳುವುದು: “ನಾನು ಒಂಟಿಯಾಗಿದ್ದೇನೆಂದು ನನಗೆಂದೂ ಅನಿಸಿಲ್ಲ, ಯಾಕೆಂದರೆ ಯೆಹೋವನು ಯಾವಾಗಲೂ ನನಗೆ ಹತ್ತಿರದಲ್ಲೇ ಇದ್ದಾನೆ. ಅಲ್ಲದೆ ನನ್ನ ಆತ್ಮಿಕ ತಂದೆತಾಯಂದಿರು ಮತ್ತು ಸಹೋದರರಾಗಿ ಪರಿಣಮಿಸಿರುವ ಅನೇಕ ಮಂದಿ ಪ್ರೀತಿಯ ಸಹೋದರ ಸಹೋದರಿಯರ ಬೆಂಬಲ ನನಗಿದೆ.” ಅವನೀಗ ಬೆತೆಲ್ನಲ್ಲಿ ಕೆಲಸಮಾಡುತ್ತಿದ್ದು, ತನ್ನ ಸಮಯವನ್ನು ದೇವರ ಸೇವೆಯಲ್ಲಿ ಉಪಯೋಗಿಸುತ್ತಿದ್ದಾನೆ. ಅದೇ ರೀತಿಯಲ್ಲಿ ಆಲೇಹಾಂಡ್ರೊ ಜ್ಞಾಪಿಸಿಕೊಳ್ಳುವುದು: “ನಾನು ಎಂದೆಂದಿಗೂ ಆಭಾರಿಯಾಗಿರುವ ಒಂದು ವಿಷಯವು ಯಾವುದೆಂದರೆ, ನನ್ನಲ್ಲಿ ವ್ಯಕ್ತಿಗತವಾಗಿ ಪ್ರೀತಿಪರ ಆಸಕ್ತಿಯನ್ನು ತೋರಿಸಿದ ಹಿರಿಯರ ಮಂಡಲಿಯುಳ್ಳ ಒಂದು ಸಭೆಯಲ್ಲಿರುವ ಆಶೀರ್ವಾದವೇ. ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ, ಏಕೆಂದರೆ ನಾನು 16 ವರ್ಷ ಪ್ರಾಯದಲ್ಲಿ ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದಾಗ, ಯುವ ಜನರಿಗೆ ಸಾಮಾನ್ಯವಾಗಿರುವ ಚಡಪಡಿಕೆಯು ನನ್ನಲ್ಲೂ ಇತ್ತು. ಆದರೆ ಸಭೆಯಲ್ಲಿದ್ದ ಕುಟುಂಬಗಳು ಎಂದೂ ನನ್ನ ಕೈಬಿಡಲಿಲ್ಲ. ನನಗೆ ಅತಿಥಿಸತ್ಕಾರ ತೋರಿಸಲು ಮತ್ತು ತಮ್ಮ ಮನೆ ಹಾಗೂ ಊಟವನ್ನು ಮಾತ್ರವಲ್ಲ ಬದಲಾಗಿ ತಮ್ಮ ಹೃದಯವನ್ನೂ ಹಂಚಿಕೊಳ್ಳಲು ಯಾರಾದರೊಬ್ಬರು ಇದ್ದೇ ಇರುತ್ತಿದ್ದರು.” ಆಲೇಹಾಂಡ್ರೊ ಈಗ 13ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೂರ್ಣ ಸಮಯದ ಸೇವೆಯಲ್ಲಿ ಇದ್ದಾನೆ.
ಧರ್ಮವು ಕೇವಲ ವಯಸ್ಸಾದ ಜನರಿಗಾಗಿರುವ ವಿಷಯವೆಂದು ಕೆಲವು ಜನರು ನೆನಸುತ್ತಾರೆ. ಆದರೆ ಅನೇಕ ಯುವ ಜನರು ಬೈಬಲ್ ಸತ್ಯವನ್ನು ಎಳೆಯ ಪ್ರಾಯದಲ್ಲಿ ಕಲಿತಿದ್ದಾರೆ ಮತ್ತು ಯೆಹೋವನನ್ನು ಪ್ರೀತಿಸಲಾರಂಭಿಸಿ, ಆತನಿಗೆ ನಂಬಿಗಸ್ತರಾಗಿ ಉಳಿಯುತ್ತಾರೆ. ಈ ಯುವ ಜನರಿಗೆ ಕೀರ್ತನೆ 110:3ರಲ್ಲಿ ದಾಖಲಿಸಲ್ಪಟ್ಟಿರುವ ದಾವೀದನ ಮಾತುಗಳನ್ನು ಅನ್ವಯಿಸಸಾಧ್ಯವಿದೆ: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧವಸ್ತ್ರಭೂಷಿತರಾದ ನಿನ್ನ ಯುವಕಸೈನಿಕರು ಉದಯಕಾಲದ ಇಬ್ಬನಿಯಂತಿರುವರು.”
ಸತ್ಯವನ್ನು ಕಲಿತುಕೊಂಡು, ಅದಕ್ಕೆ ಅಂಟಿಕೊಳ್ಳುವುದು ಯುವ ಜನರಿಗೆ ಒಂದು ಪಂಥಾಹ್ವಾನವಾಗಿದೆ. ಅನೇಕರು ಯೆಹೋವನ ಸಂಸ್ಥೆಗೆ ಅತಿ ನಿಕಟವಾಗಿ ಇರುವುದು, ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿರುವುದು ಮತ್ತು ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡುತ್ತಿರುವುದನ್ನು ನೋಡುವುದು ಎಂಥ ಆನಂದವನ್ನು ಕೊಡುತ್ತದೆ. ಹೀಗೆ ಮಾಡುವ ಮೂಲಕ, ಅವರು ದೇವರ ವಾಕ್ಯಕ್ಕಾಗಿಯೂ ಆತನ ಸೇವೆಗಾಗಿಯೂ ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳಲು ಶಕ್ತರಾಗಿದ್ದಾರೆ!—ಕೀರ್ತನೆ 119:15, 16.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ 1958ರಲ್ಲಿ ಪ್ರಕಾಶಿತ; ಈಗ ಮುದ್ರಿಸಲ್ಪಡುತ್ತಿಲ್ಲ.