ನಿಮ್ಮ ಪ್ರಾರ್ಥನೆಗಳು “ಧೂಪದಂತೆ ತಯಾರಿಸಲ್ಪಟ್ಟಿವೆಯೊ?”
“ನನ್ನ ಪ್ರಾರ್ಥನೆಯು ನಿನ್ನ ಮುಂದೆ ಧೂಪದಂತೆ ತಯಾರಿಸಲ್ಪಟ್ಟದ್ದಾಗಿರಲಿ.”—ಕೀರ್ತನೆ 141:2, NW.
1, 2. ಧೂಪವನ್ನು ಸುಡುವುದು ಏನನ್ನು ಸಂಕೇತಿಸಿತು?
ಇಸ್ರಾಯೇಲಿನ ಆರಾಧನಾ ದೇವಗುಡಾರದಲ್ಲಿ ಉಪಯೋಗಕ್ಕಾಗಿ ಪವಿತ್ರ ಧೂಪವನ್ನು ತಯಾರಿಸುವಂತೆ ಯೆಹೋವ ದೇವರು ಪ್ರವಾದಿಯಾದ ಮೋಶೆಗೆ ಆಜ್ಞೆ ಕೊಟ್ಟನು. ಅದನ್ನು ತಯಾರಿಸಲು ದೇವರು ತಿಳಿಸಿದಂತಹ ಸಾಮಗ್ರಿಗಳಲ್ಲಿ, ನಾಲ್ಕು ವಿಧದ ಸುಗಂಧಿತ ಮಿಶ್ರಣವು ಒಳಗೂಡಿತ್ತು. (ವಿಮೋಚನಕಾಂಡ 30:34-38) ಆ ಧೂಪವು ನಿಶ್ಚಯವಾಗಿಯೂ ಸುಗಂಧಭರಿತವಾಗಿತ್ತು.
2 ಇಸ್ರಾಯೇಲ್ ಜನಾಂಗವನ್ನು ಧರ್ಮಶಾಸ್ತ್ರದ ಒಡಂಬಡಿಕೆಯೊಳಗೆ ತೆಗೆದುಕೊಳ್ಳಲಾಗಿತ್ತು, ಮತ್ತು ಆ ಒಡಂಬಡಿಕೆಯಲ್ಲಿ, ದಿನಾಲೂ ಧೂಪವನ್ನು ಸುಡುವ ಏರ್ಪಾಡು ಇತ್ತು. (ವಿಮೋಚನಕಾಂಡ 30:7, 8) ಈ ಧೂಪದ ಬಳಕೆಗೆ ಯಾವುದಾದರೂ ವಿಶೇಷಾರ್ಥವಿತ್ತೊ? ಹೌದು. ಆ ಕಾರಣದಿಂದಲೇ ಕೀರ್ತನೆಗಾರನು ಹಾಡಿದ್ದು: “ನನ್ನ ಪ್ರಾರ್ಥನೆಯು ನಿನ್ನ [ಯೆಹೋವ ದೇವರ] ಮುಂದೆ ಧೂಪದಂತೆ ತಯಾರಿಸಲ್ಪಟ್ಟದ್ದಾಗಿರಲಿ, ನಾನು ಕೈಗಳನ್ನೆತ್ತುವದು ಸಂಧ್ಯಾ ಧಾನ್ಯನೈವೇದ್ಯದಂತಿರಲಿ.” (ಕೀರ್ತನೆ 141:2, NW) ದೇವರ ಸ್ವರ್ಗೀಯ ಸಿಂಹಾಸನದ ಸುತ್ತಲಿರುವವರ ಬಳಿ, ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳಿರುವುದನ್ನು ಅಪೊಸ್ತಲ ಯೋಹಾನನು ಪ್ರಕಟನೆ ಪುಸ್ತಕದಲ್ಲಿ ವರ್ಣಿಸುತ್ತಾನೆ. ಆ ಪ್ರೇರಿತ ವೃತ್ತಾಂತವು ಹೇಳುವುದು: “ಧೂಪವೆಂದರೆ ದೇವಜನರ ಪ್ರಾರ್ಥನೆಗಳೆಂದು ಅರ್ಥ.” (ಪ್ರಕಟನೆ 5:8, NW) ಆದುದರಿಂದ, ಆ ಸುಗಂಧಭರಿತ ಧೂಪದ ಸುಡುವಿಕೆಯು, ಹಗಲೂರಾತ್ರಿ ಯೆಹೋವನ ಸೇವಕರು ಸಲ್ಲಿಸುವ ಸ್ವೀಕಾರಾರ್ಹ ಪ್ರಾರ್ಥನೆಗಳನ್ನು ಸಂಕೇತಿಸಿತು.—1 ಥೆಸಲೊನೀಕ 3:10; ಇಬ್ರಿಯ 5:7.
3. ‘ದೇವರ ಮುಂದೆ ನಮ್ಮ ಪ್ರಾರ್ಥನೆಗಳನ್ನು ಧೂಪದಂತೆ’ ತಯಾರಿಸಲು ಯಾವುದು ನಮಗೆ ಸಹಾಯಮಾಡಬೇಕು?
3 ದೇವರು ನಮ್ಮ ಪ್ರಾರ್ಥನೆಗಳನ್ನು ಅಂಗೀಕರಿಸಬೇಕಾದರೆ, ನಾವು ಯೇಸು ಕ್ರಿಸ್ತನ ಹೆಸರಿನಲ್ಲಿ ಆತನಿಗೆ ಪ್ರಾರ್ಥಿಸಬೇಕು. (ಯೋಹಾನ 16:23, 24) ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ನಾವು ಹೇಗೆ ಉತ್ತಮಗೊಳಿಸಬಲ್ಲೆವು? ಕೆಲವೊಂದು ಶಾಸ್ತ್ರೀಯ ಉದಾಹರಣೆಗಳಿಗೆ ಗಮನಕೊಡುವ ಮೂಲಕ, ನಮ್ಮ ಪ್ರಾರ್ಥನೆಗಳನ್ನು ಯೆಹೋವನ ಮುಂದೆ ಧೂಪದಂತೆ ತಯಾರಿಸಲು ಸಹಾಯ ಸಿಗುತ್ತದೆ.—ಜ್ಞಾನೋಕ್ತಿ 15:8.
ನಂಬಿಕೆಯಿಂದ ಪ್ರಾರ್ಥಿಸಿರಿ
4. ದೇವರಿಂದ ಸ್ವೀಕರಿಸಲ್ಪಡುವ ಪ್ರಾರ್ಥನೆ ಮತ್ತು ನಂಬಿಕೆಗೆ ಯಾವ ಸಂಬಂಧವಿದೆ?
4 ನಮ್ಮ ಪ್ರಾರ್ಥನೆಯು ಸುಗಂಧಭರಿತ ಧೂಪದಂತೆ ದೇವರಿಗೆ ತಲಪಬೇಕಾಗಿರುವಲ್ಲಿ, ನಾವು ನಂಬಿಕೆಯಿಂದ ಪ್ರಾರ್ಥಿಸಬೇಕು. (ಇಬ್ರಿಯ 11:6) ಆತ್ಮಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿಯೊಬ್ಬನು, ಕ್ರೈಸ್ತ ಹಿರಿಯರು ನೀಡುವ ಸಹಾಯಕ್ಕೆ ಪ್ರತಿಕ್ರಿಯೆಯನ್ನು ತೋರಿಸುವಾಗ, ಆ ಹಿರಿಯರು “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು.” (ಯಾಕೋಬ 5:15) ನಂಬಿಕೆಯಿಂದ ಮಾಡಲ್ಪಟ್ಟಿರುವ ಪ್ರಾರ್ಥನೆಗಳು, ಮತ್ತು ದೇವರ ವಾಕ್ಯದ ಪ್ರಾರ್ಥನಾಪೂರ್ವಕ ಅಧ್ಯಯನವು ನಮ್ಮ ಸ್ವರ್ಗೀಯ ತಂದೆಗೆ ಸಂತೋಷವನ್ನು ತರುತ್ತದೆ. ಕೀರ್ತನೆಗಾರನು ಹೀಗೆ ಹಾಡಿದಾಗ, ಒಂದು ಒಳ್ಳೆಯ ಮನೋಭಾವವನ್ನು ಪ್ರದರ್ಶಿಸಿದನು: “ನಿನ್ನ ಆಜ್ಞೆಗಳಿಗಾಗಿಯೇ ಕೈಯೊಡ್ಡುತ್ತೇನೆ, ಅವು ನನಗೆ ಇಷ್ಟವಾಗಿವೆ; ನಿನ್ನ ನಿಬಂಧನೆಗಳನ್ನು ಧ್ಯಾನಿಸುವೆನು. ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು; ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.” (ಕೀರ್ತನೆ 119:48, 66) ನಾವು ನಮ್ರವಾದ ಪ್ರಾರ್ಥನೆಯಲ್ಲಿ ‘ನಮ್ಮ ಕೈಗಳನ್ನೊಡ್ಡೋಣ,’ ಮತ್ತು ದೇವರ ಆಜ್ಞೆಗಳಿಗನುಸಾರವಾಗಿ ನಡೆಯುವ ಮೂಲಕ ನಂಬಿಕೆಯನ್ನು ಪ್ರದರ್ಶಿಸೋಣ.
5. ನಮಗೆ ವಿವೇಕದ ಕೊರತೆಯಿರುವಲ್ಲಿ ನಾವೇನು ಮಾಡಬೇಕು?
5 ಒಂದು ಪರೀಕ್ಷೆಯನ್ನು ಎದುರಿಸಲು ಬೇಕಾದ ವಿವೇಕದ ಕೊರತೆ ನಮಗಿದೆಯೆಂದು ಭಾವಿಸೋಣ. ಅಥವಾ ಒಂದು ನಿರ್ದಿಷ್ಟ ಬೈಬಲ್ ಪ್ರವಾದನೆಯು ಈಗ ನೆರವೇರುತ್ತಿದೆಯೊ ಎಂಬ ವಿಷಯದಲ್ಲಿ ನಾವು ಸಂಶಯ ವ್ಯಕ್ತಪಡಿಸಬಹುದು. ಇದು ನಮ್ಮನ್ನು ಆತ್ಮಿಕವಾಗಿ ಅಸ್ಥಿರಗೊಳ್ಳುವಂತೆ ಬಿಡುವ ಬದಲಿಗೆ, ನಾವು ವಿವೇಕಕ್ಕಾಗಿ ಪ್ರಾರ್ಥಿಸೋಣ. (ಗಲಾತ್ಯ 5:7, 8; ಯಾಕೋಬ 1:5-8) ಅದ್ಭುತಕರವಾದ ರೀತಿಯಲ್ಲಿ ದೇವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ನಾವು ಖಂಡಿತವಾಗಿಯೂ ನಿರೀಕ್ಷಿಸಲಾರೆವು. ತನ್ನ ಜನರೆಲ್ಲರೂ ಏನನ್ನು ಮಾಡುವಂತೆ ಆತನು ಅಪೇಕ್ಷಿಸುತ್ತಾನೊ ಅದನ್ನೇ ಮಾಡುವ ಮೂಲಕ ನಾವು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದೇವೆಂಬುದನ್ನು ತೋರಿಸಬೇಕು. ನಮ್ಮ ನಂಬಿಕೆಯನ್ನು ವರ್ಧಿಸುವಂತಹ ಬೈಬಲ್ ಅಧ್ಯಯನವನ್ನು ನಾವು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಪ್ರಕಾಶನಗಳ ಸಹಾಯದೊಂದಿಗೆ ಮಾಡುವುದು ಆವಶ್ಯಕ. (ಮತ್ತಾಯ 24:45-47; ಯೆಹೋಶುವ 1:7, 8) ನಾವು ಕ್ರಮವಾಗಿ ದೇವರ ಜನರೊಂದಿಗೆ ಕೂಟಗಳಲ್ಲಿ ಪಾಲ್ಗೊಳ್ಳುವ ಮೂಲಕವೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.—ಇಬ್ರಿಯ 10:24, 25.
6. (ಎ) ನಾವು ಜೀವಿಸುತ್ತಿರುವ ಈ ಸಮಯ ಮತ್ತು ಬೈಬಲಿನ ಪ್ರವಾದನೆಗಳ ನೆರವೇರಿಕೆಯ ಕುರಿತಾಗಿ ನಾವೆಲ್ಲರೂ ಏನನ್ನು ಗ್ರಹಿಸಬೇಕು? (ಬಿ) ನಾವು ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸುವುದಕ್ಕೆ ಕೂಡಿಸಿ, ನಾವು ಇನ್ನೇನು ಮಾಡಬೇಕು?
6 ಇಂದು ಕೆಲವು ಕ್ರೈಸ್ತರು ವೈಯಕ್ತಿಕ ಅಭಿರುಚಿಗಳನ್ನು ಮತ್ತು ಜೀವನೋದ್ಯೋಗಗಳನ್ನು ಬೆನ್ನಟ್ಟುತ್ತಿದ್ದಾರೆ. ಇದು ‘ಅಂತ್ಯಕಾಲದ’ ಕಡೇ ಭಾಗದಲ್ಲಿ ನಾವು ಜೀವಿಸುತ್ತಿದ್ದೇವೆಂಬ ವಾಸ್ತವಾಂಶಕ್ಕೆ ಅವರು ಮಹತ್ವವನ್ನು ಕೊಡುತ್ತಿಲ್ಲವೆಂಬಂತೆ ತೋರುತ್ತದೆ. (ದಾನಿಯೇಲ 12:4) 1914ರಲ್ಲಿ ಯೆಹೋವನು ಕ್ರಿಸ್ತನನ್ನು ಸ್ವರ್ಗೀಯ ರಾಜನೋಪಾದಿ ಪ್ರತಿಷ್ಠಾಪಿಸಿದಾಗ, ಕ್ರಿಸ್ತನ ಸಾನ್ನಿಧ್ಯವು ಆರಂಭಗೊಂಡಿತು. ಮತ್ತು ಈಗ ಅವನು ತನ್ನ ಶತ್ರುಗಳ ನಡುವೆ ಆಳುತ್ತಿದ್ದಾನೆ. ಆ ವಿಷಯದ ಕುರಿತಾದ ಶಾಸ್ತ್ರೀಯ ರುಜುವಾತಿನಲ್ಲಿನ ಅವರ ನಂಬಿಕೆಯನ್ನು ಪುನಃ ಹೊತ್ತಿಸುವಂತೆ ಅಥವಾ ಎತ್ತಿಹಿಡಿಯುವಂತೆ ಜೊತೆವಿಶ್ವಾಸಿಗಳು ಅಂಥವರಿಗಾಗಿ ಸೂಕ್ತವಾಗಿಯೇ ಪ್ರಾರ್ಥಿಸಸಾಧ್ಯವಿದೆ. (ಕೀರ್ತನೆ 110:1, 2; ಮತ್ತಾಯ 24:3) ಸುಳ್ಳು ಧರ್ಮದ ಅಂದರೆ ‘ಮಹಾ ಬಾಬೆಲಿನ’ ನಾಶನವು, ಯೆಹೋವನ ಜನರ ಮೇಲೆ ಮಾಗೋಗಿನ ಗೋಗನಾಗಿರುವ ಸೈತಾನನ ಆಕ್ರಮಣವು, ಮತ್ತು ಅರ್ಮಗೆದೋನ್ ಯುದ್ಧದಿಂದ ಸರ್ವಶಕ್ತನಾದ ದೇವರ ಮೂಲಕ ಅವರಿಗಾಗುವ ರಕ್ಷಣೆಯಂತಹ ಮುಂತಿಳಿಸಲ್ಪಟ್ಟಿರುವ ಘಟನೆಗಳು, ಬೆಚ್ಚಿಬೀಳಿಸುವಷ್ಟು ಥಟ್ಟನೆ ಆರಂಭವಾಗುವವು. ಇವೆಲ್ಲವೂ ತುಲನಾತ್ಮಕವಾಗಿ ಸ್ವಲ್ಪ ಸಮಯಾವಧಿಯೊಳಗೆ ಸಂಭವಿಸಬಲ್ಲವೆಂಬುದನ್ನು ನಾವೆಲ್ಲರೂ ಗ್ರಹಿಸಬೇಕು. (ಪ್ರಕಟನೆ 16:14, 16; 18:1-5; ಯೆಹೆಜ್ಕೇಲ 38:18-23) ಆದುದರಿಂದಲೇ ನಾವು ಆತ್ಮಿಕವಾಗಿ ಎಚ್ಚರವಾಗಿರುವಂತೆ ದೇವರ ಸಹಾಯಕ್ಕಾಗಿ ಪ್ರಾರ್ಥಿಸೋಣ. ಯೆಹೋವನ ನಾಮವು ಪವಿತ್ರೀಕರಿಸಲ್ಪಡುವಂತೆ, ಆತನ ರಾಜ್ಯವು ಬರುವಂತೆ, ಮತ್ತು ಆತನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ ನಾವೆಲ್ಲರೂ ಶ್ರದ್ಧೆಯಿಂದ ಪ್ರಾರ್ಥಿಸೋಣ. ಹೌದು, ನಾವು ನಂಬಿಕೆಯನ್ನು ಪ್ರದರ್ಶಿಸುತ್ತಾ ಇದ್ದು, ನಮ್ಮ ಪ್ರಾರ್ಥನೆಗಳು ಪ್ರಾಮಾಣಿಕವಾಗಿವೆಯೆಂಬ ಪುರಾವೆಯನ್ನು ಕೊಡುತ್ತಾ ಇರೋಣ. (ಮತ್ತಾಯ 6:9, 10) ಯೆಹೋವನನ್ನು ಪ್ರೀತಿಸುವವರೆಲ್ಲರೂ ಆತನ ರಾಜ್ಯವನ್ನು ಮತ್ತು ಆತನ ನೀತಿಯನ್ನು ಪ್ರಥಮವಾಗಿ ಹುಡುಕಲಿ ಮತ್ತು ಅಂತ್ಯವು ಬರುವುದರೊಳಗೆ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ತಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಾಗಿ ಪಾಲ್ಗೊಳ್ಳಲಿ.—ಮತ್ತಾಯ 6:33; 24:14.
ಯೆಹೋವನಿಗೆ ಉಪಕಾರಸ್ತುತಿಗಳನ್ನು ಸಲ್ಲಿಸಿರಿ
7. 1 ಪೂರ್ವಕಾಲವೃತ್ತಾಂತ 29:10-13ರಲ್ಲಿ ಭಾಗಶಃ ದಾಖಲಿಸಲ್ಪಟ್ಟಿರುವ ದಾವೀದನ ಪ್ರಾರ್ಥನೆಯಲ್ಲಿ ನಿಮಗೆ ಯಾವ ಭಾಗವು ಹೃದಯಸ್ಪರ್ಶಿಯಾಗಿದೆ?
7 ‘ನಮ್ಮ ಪ್ರಾರ್ಥನೆಗಳನ್ನು ಧೂಪದಂತೆ ತಯಾರಿಸುವ’ ಒಂದು ಪ್ರಮುಖ ವಿಧವು, ದೇವರಿಗೆ ಹೃತ್ಪೂರ್ವಕ ಉಪಕಾರಸ್ತುತಿಗಳನ್ನು ಸಲ್ಲಿಸುವ ಮೂಲಕವೇ. ರಾಜ ದಾವೀದನು ಮತ್ತು ಇಸ್ರಾಯೇಲ್ ಜನರು ಯೆಹೋವನ ಆಲಯದ ನಿರ್ಮಾಣಕ್ಕಾಗಿ ಕಾಣಿಕೆಗಳನ್ನು ಕೊಟ್ಟಾಗ, ದಾವೀದನು ಅಂತಹ ಒಂದು ಪ್ರಾರ್ಥನೆಯನ್ನು ಸಲ್ಲಿಸಿದನು. ಅವನು ಹೇಳಿದ್ದು: “ನಮ್ಮ ಪಿತೃವಾಗಿರುವ ಇಸ್ರಾಯೇಲನ ದೇವರೇ, ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ. ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. ಪ್ರಭಾವೈಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ; ನೀನು ಸರ್ವಾಧಿಕಾರಿಯು; ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ; ಎಲ್ಲಾ ದೊಡ್ಡಸ್ತಿಕೆಗೂ ಶಕ್ತಿಗೂ ನೀನೇ ಮೂಲನು. ಆದದರಿಂದ ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.”—1 ಪೂರ್ವಕಾಲವೃತ್ತಾಂತ 29:10-13.
8. (ಎ) ಕೀರ್ತನೆ 148ರಿಂದ 150ರಲ್ಲಿರುವ ಸ್ತುತಿಯ ಯಾವ ಪದಗಳು ವಿಶೇಷವಾಗಿ ನಿಮ್ಮ ಮನಸ್ಸನ್ನು ಸ್ಪರ್ಶಿಸುತ್ತವೆ? (ಬಿ) ಕೀರ್ತನೆ 27:4ರಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಭಾವನೆಗಳು ನಮಗೂ ಇರುವಲ್ಲಿ, ನಾವೇನನ್ನು ಮಾಡುವೆವು?
8 ಉಪಕಾರಸ್ತುತಿಯ ಎಂತಹ ಸುಂದರ ಅಭಿವ್ಯಕ್ತಿಗಳು! ನಮ್ಮ ಪ್ರಾರ್ಥನೆಗಳು ಅಷ್ಟೊಂದು ಭಾವಗರ್ಭಿತವಾಗಿರಲಿಕ್ಕಿಲ್ಲವಾದರೂ, ಅವು ಹೃತ್ಪೂರ್ವಕವಾಗಿರಸಾಧ್ಯವಿದೆ. ಕೀರ್ತನೆಗಳ ಪುಸ್ತಕವು ಉಪಕಾರಸ್ತುತಿಗಳ ಪ್ರಾರ್ಥನೆಗಳಿಂದ ತುಂಬಿದೆ. ಕೀರ್ತನೆ 148ರಿಂದ 150ನೆಯ ಅಧ್ಯಾಯಗಳಲ್ಲಿ ಸ್ತುತಿಯ ಅತ್ಯುತ್ಕೃಷ್ಟ ಪದಗಳಿವೆ. ಅನೇಕ ಕೀರ್ತನೆಗಳಲ್ಲಿ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲಾಗಿದೆ. “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನೂ ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು” ಎಂದು ದಾವೀದನು ಹಾಡಿದನು. (ಕೀರ್ತನೆ 27:4) ಯೆಹೋವನ ಸಭೆಯಲ್ಲಿ ಎಲ್ಲ ಚಟುವಟಿಕೆಗಳಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ನಾವು ಅಂತಹ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ವರ್ತಿಸೋಣ. (ಕೀರ್ತನೆ 26:12) ಹಾಗೆ ಮಾಡುವುದರಿಂದ ಮತ್ತು ದೇವರ ವಾಕ್ಯದ ಕುರಿತು ದಿನಾಲೂ ಮನನಮಾಡುವದರಿಂದ, ಯೆಹೋವನಿಗೆ ಹೃತ್ಪೂರ್ವಕ ಉಪಕಾರಸ್ತುತಿಗಳಿಂದ ಪ್ರಾರ್ಥಿಸಲು ನಮಗೆ ಅನೇಕ ಕಾರಣಗಳು ಸಿಗುವವು.
ನಮ್ರತೆಯಿಂದ ಯೆಹೋವನ ಸಹಾಯವನ್ನು ಕೇಳಿರಿ
9. ರಾಜ ಆಸನು ಹೇಗೆ ಪ್ರಾರ್ಥಿಸಿದನು, ಮತ್ತು ಫಲಿತಾಂಶವೇನಾಗಿತ್ತು?
9 ನಾವು ಯೆಹೋವನಿಗೆ ಮನಃಪೂರ್ವಕವಾಗಿ ಆತನ ಸಾಕ್ಷಿಗಳೋಪಾದಿ ಸೇವೆ ಸಲ್ಲಿಸುತ್ತಿರುವುದಾದರೆ, ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಆತನು ಕೇಳುವನೆಂದು ನಮಗೆ ಖಾತ್ರಿಯಿರಬಲ್ಲದು. (ಯೆಶಾಯ 43:10-12) ಯೆಹೂದದ ರಾಜನಾದ ಆಸನನ್ನು ಪರಿಗಣಿಸಿರಿ. ಅವನು ಆಳಿದಂತಹ 41 ವರ್ಷಗಳಲ್ಲಿ (ಸಾ.ಶ.ಪೂ. 977-937), ಆರಂಭದ 10 ವರ್ಷಗಳು ನೆಮ್ಮದಿಯಿಂದ ಕಳೆದವು. ಅನಂತರ ಕೂಷನಾದ ಜೆರಹನ ನೇತೃತ್ವದಲ್ಲಿ ಹತ್ತು ಲಕ್ಷ ಸೈನಿಕರು ಯೆಹೂದವನ್ನು ಆಕ್ರಮಿಸಿದರು. ಅವರ ಮುಂದೆ, ಆಸನು ಮತ್ತು ಅವನ ಸೈನಿಕರ ಸಂಖ್ಯೆ ತುಂಬ ಚಿಕ್ಕದಾಗಿದ್ದರೂ ಅವರು ಆ ಶತ್ರುಗಳನ್ನು ಎದುರಿಸಲು ಹೊರಟರು. ಆದರೆ ಯುದ್ಧಕ್ಕಿಂತ ಮೊದಲು, ಆಸನು ತುಂಬ ಭಯಭಕ್ತಿಯಿಂದ ಪ್ರಾರ್ಥನೆಮಾಡಿದನು. ತಮ್ಮನ್ನು ರಕ್ಷಿಸಲು ಯೆಹೋವನಿಗಿರುವ ಶಕ್ತಿಯನ್ನು ಅವನು ಗುರುತಿಸಿದನು. ಸಹಾಯಕ್ಕಾಗಿ ಬೇಡುತ್ತಾ, ಅವನಂದದ್ದು: “ಯೆಹೋವನೇ, ನಮ್ಮನ್ನು ರಕ್ಷಿಸು, ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು.” ಯೆಹೋವನು ತನ್ನ ಮಹಾ ಹೆಸರಿಗೋಸ್ಕರ ಯೆಹೂದವನ್ನು ರಕ್ಷಿಸಿದಾಗ, ಅವರಿಗೇ ಜಯ ಸಿಕ್ಕಿತು. (2 ಪೂರ್ವಕಾಲವೃತ್ತಾಂತ 14:1-15) ದೇವರು ನಮ್ಮನ್ನು ಒಂದು ಪರೀಕ್ಷೆಯಿಂದ ಪಾರುಮಾಡಬಹುದು ಇಲ್ಲವೆ ಅದನ್ನು ತಾಳಿಕೊಳ್ಳಲು ನಮ್ಮನ್ನು ಬಲಪಡಿಸಬಹುದು. ಆದರೆ ಒಂದು ಮಾತಂತೂ ಸತ್ಯ: ಆತನ ಸಹಾಯಕ್ಕಾಗಿ ನಾವು ಮಾಡುವ ಭಿನ್ನಹಗಳನ್ನು ಆತನು ನಿಶ್ಚಯವಾಗಿಯೂ ಕೇಳಿಸಿಕೊಳ್ಳುತ್ತಾನೆ.
10. ಒಂದು ನಿರ್ದಿಷ್ಟ ಸಮಸ್ಯೆಯನ್ನು ನಿಭಾಯಿಸುವುದು ಹೇಗೆಂಬುದು ನಮಗೆ ಗೊತ್ತಿರದಿರುವಲ್ಲಿ, ರಾಜ ಯೆಹೋಷಾಫಾಟನ ಪ್ರಾರ್ಥನೆಯು ಹೇಗೆ ಸಹಾಯಕಾರಿಯಾಗಿರಬಲ್ಲದು?
10 ಒಂದು ನಿರ್ದಿಷ್ಟ ಸಮಸ್ಯೆಯೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಮಗೆ ಗೊತ್ತಿರದಿರುವಲ್ಲಿಯೂ, ನಾವು ಸಹಾಯಕ್ಕಾಗಿ ಮಾಡುವ ಭಿನ್ನಹಗಳನ್ನು ಯೆಹೋವನು ಕೇಳಿಸಿಕೊಳ್ಳುವನೆಂಬ ಭರವಸೆಯಿಂದಿರಬಲ್ಲೆವು. ಸಾ.ಶ.ಪೂ. 936ರಲ್ಲಿ, ತನ್ನ 25 ವರ್ಷಗಳ ಆಳ್ವಿಕೆಯನ್ನು ಆರಂಭಿಸಿದ ಯೆಹೂದದ ರಾಜನಾದ ಯೆಹೋಷಾಫಾಟನ ದಿನಗಳಲ್ಲಿ ಅದು ನಿಜವಾಯಿತು. ಮೋವಾಬ್ಯರು, ಅಮ್ಮೋನಿಯರು ಮತ್ತು ಸೇಯೀರ್ ಪರ್ವತಪ್ರದೇಶದವರು ಸೇರಿ ಯೆಹೂದಕ್ಕೆ ಬೆದರಿಕೆಯನ್ನೊಡ್ಡಿದಾಗ, ಯೆಹೋಷಾಫಾಟನು ಬೇಡಿಕೊಂಡದ್ದು: “ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ.” ಶತ್ರುಪಡೆಗಳಲ್ಲಿ ಗಲಿಬಿಲಿಯನ್ನುಂಟುಮಾಡಿ, ಅವರು ಒಬ್ಬರನ್ನೊಬ್ಬರನ್ನು ಸಂಹರಿಸುವಂತೆ ಮಾಡುವ ಮೂಲಕ, ಯೆಹೂದದ ಪರವಾಗಿ ಹೋರಾಡುವ ಮೂಲಕ ಯೆಹೋವನು ಆ ನಮ್ರ ಪ್ರಾರ್ಥನೆಗೆ ಉತ್ತರಿಸಿದನು. ಫಲಿತಾಂಶವಾಗಿ, ಸುತ್ತಮುತ್ತಲಿನ ಜನಾಂಗಗಳು ಭಯಭೀತರಾದರು ಮತ್ತು ಯೆಹೂದದಲ್ಲಿ ಶಾಂತಿ ನೆಲೆಸಿತು. (2 ಪೂರ್ವಕಾಲವೃತ್ತಾಂತ 20:1-30) ಒಂದು ಸಮಸ್ಯೆಯನ್ನು ಎದುರಿಸಲು ಬೇಕಾಗಿರುವ ವಿವೇಕದ ಕೊರತೆ ನಮಗಿರುವಾಗ, ಯೆಹೋಷಾಫಾಟನಂತೆ ನಾವು ಸಹ ಹೀಗೆ ಪ್ರಾರ್ಥಿಸಬಹುದು: ‘ಏನು ಮಾಡಬೇಕೆಂದು ನಮಗೆ ತಿಳಿಯದು, ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ ಯೆಹೋವನೇ.’ ಆ ಸಮಸ್ಯೆಯನ್ನು ಬಗೆಹರಿಸಲು ಬೇಕಾಗಿರುವ ಶಾಸ್ತ್ರೀಯ ವಿಷಯಗಳು ನಮ್ಮ ಮನಸ್ಸಿಗೆ ಬರುವಂತೆ ಪವಿತ್ರಾತ್ಮವು ಮಾಡಬಹುದು, ಅಥವಾ ಯಾವ ಮನುಷ್ಯನು ಯೋಚಿಸಲಸಾಧ್ಯವಾದಂತಹ ರೀತಿಯಲ್ಲಿ ದೇವರು ನಮಗೆ ಸಹಾಯಮಾಡಬಹುದು.—ರೋಮಾಪುರ 8:26, 27.
11. ಯೆರೂಸಲೇಮಿನ ಗೋಡೆಯ ಸಂಬಂಧದಲ್ಲಿ ನೆಹೆಮೀಯನು ಕೈಗೊಂಡ ಕ್ರಿಯೆಗಳಿಂದ ನಾವು ಪ್ರಾರ್ಥನೆಯ ಕುರಿತಾಗಿ ಏನನ್ನು ಕಲಿಯಸಾಧ್ಯವಿದೆ?
11 ದೇವರ ಸಹಾಯಕ್ಕಾಗಿ ಮಾಡುವ ಪ್ರಾರ್ಥನೆಯಲ್ಲಿ ನಾವು ಪಟ್ಟುಹಿಡಿಯಬೇಕಾದೀತು. ಯೆರೂಸಲೇಮಿನ ಪಾಳುಬಿದ್ದ ಗೋಡೆ ಮತ್ತು ಯೆಹೂದದ ನಿವಾಸಿಗಳ ದುಃಖಕರ ಅವಸ್ಥೆಯ ಕುರಿತಾಗಿ ನೆಹೆಮೀಯನು ಅನೇಕ ದಿನಗಳ ವರೆಗೆ ಶೋಕಿಸಿದನು, ಉಪವಾಸಮಾಡಿದನು ಮತ್ತು ಪ್ರಾರ್ಥಿಸಿದನು. (ನೆಹೆಮೀಯ 1:1-11) ಅವನ ಪ್ರಾರ್ಥನೆಗಳು, ಸುಗಂಧಭರಿತ ಧೂಪದಂತೆ ದೇವರ ಬಳಿ ತಲಪಿರಬೇಕು. ಆದುದರಿಂದ ಒಂದು ದಿನ ಪಾರಸಿಯ ರಾಜನಾದ ಅರ್ತಷಸ್ತನು, ಮನಗುಂದಿದ್ದ ನೆಹೆಮೀಯನಿಗೆ, “ನಿನ್ನ ಅಪೇಕ್ಷೆಯೇನು” ಎಂದು ಕೇಳಿದನು. ನೆಹೆಮೀಯನು ವರದಿಸುವುದು: ‘ನಾನು ಪರಲೋಕದ ದೇವರನ್ನು ಪ್ರಾರ್ಥಿಸಿದೆ.’ ಚಿಕ್ಕದಾಗಿ ಮತ್ತು ಮೌನದಿಂದ ಮಾಡಿದ ಆ ಪ್ರಾರ್ಥನೆಗೆ ಉತ್ತರ ಸಿಕ್ಕಿತು. ಯೆರೂಸಲೇಮಿಗೆ ಹೋಗಿ ಅದರ ಪಾಳುಬಿದ್ದಿದ್ದ ಗೋಡೆಯನ್ನು ಪುನರ್ನಿರ್ಮಿಸುವ ನೆಹೆಮೀಯನ ಮನದಿಚ್ಛೆಯನ್ನು ಪೂರೈಸಲು ಅವನಿಗೆ ಅನುಮತಿಯನ್ನು ಕೊಡಲಾಯಿತು.—ನೆಹೆಮೀಯ 2:1-8.
ಪ್ರಾರ್ಥನೆಯನ್ನು ಹೇಗೆ ಮಾಡಬೇಕೆಂಬುದನ್ನು ಯೇಸು ನಿಮಗೆ ಕಲಿಸಲಿ
12. ನಿಮ್ಮ ಸ್ವಂತ ಮಾತುಗಳಲ್ಲಿ ಹೇಳುವುದಾದರೆ, ಯೇಸುವಿನ ಮಾದರಿ ಪ್ರಾರ್ಥನೆಯ ಮುಖ್ಯ ಅಂಶಗಳನ್ನು ನೀವು ಹೇಗೆ ಸಾರಾಂಶಿಸುವಿರಿ?
12 ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಎಲ್ಲ ಪ್ರಾರ್ಥನೆಗಳಲ್ಲಿ, ಸುಗಂಧಭರಿತ ಧೂಪದೋಪಾದಿ ಯೇಸು ಕ್ರಿಸ್ತನು ಕಲಿಸಿದ ಮಾದರಿ ಪ್ರಾರ್ಥನೆಯಿಂದ ವಿಶೇಷವಾಗಿ ಹೆಚ್ಚನ್ನು ಕಲಿಯಸಾಧ್ಯವಿದೆ. ಲೂಕನ ಸುವಾರ್ತೆಯು ತಿಳಿಸುವುದು: “ಆತನ [ಯೇಸುವಿನ] ಶಿಷ್ಯರಲ್ಲಿ ಒಬ್ಬನು ಆತನಿಗೆ—ಸ್ವಾಮೀ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು. ಅದಕ್ಕಾತನು—ನೀವು ಪ್ರಾರ್ಥಿಸುವಾಗ—ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು. ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ ಎಂದು ಹೇಳಿರಿ ಅಂದನು.” (ಲೂಕ 11:1-4; ಮತ್ತಾಯ 6:9-13) ಈ ಪ್ರಾರ್ಥನೆಯನ್ನು ಕಂಠಪಾಠವಾಗಿ ಹೇಳಲಿಕ್ಕಾಗಿ ಅಲ್ಲ, ಬದಲಾಗಿ ಮಾರ್ಗದರ್ಶಿಯೋಪಾದಿ ಕಾರ್ಯಸಲ್ಲಿಸುವ ಉದ್ದೇಶದಿಂದ ತಿಳಿಸಲಾಗಿತ್ತು. ನಾವದನ್ನು ಈಗ ಪರಿಗಣಿಸೋಣ.
13. “ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಪದಗಳ ಅರ್ಥವನ್ನು ನೀವು ಹೇಗೆ ವಿವರಿಸುವಿರಿ?
13 “ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” ಯೆಹೋವನನ್ನು ತಂದೆಯೆಂದು ಸಂಬೋಧಿಸುವುದು ಆತನ ಸಮರ್ಪಿತ ಸೇವಕರಿಗೆ ಒಂದು ವಿಶೇಷ ಸುಯೋಗವಾಗಿದೆ. ಯಾವುದಾದರೂ ಸಮಸ್ಯೆಯಿರುವಾಗ ಮಕ್ಕಳು ಹೇಗೆ ಕರುಣಾಮಯಿಯಾದ ತಂದೆಯ ಬಳಿಗೆ ಓಡಿಹೋಗುತ್ತವೋ ಅದೇ ರೀತಿ ನಾವು ಕ್ರಮವಾಗಿ ದೇವರಿಗೆ ಘನತೆ ಮತ್ತು ಭಯಭಕ್ತಿಯಿಂದ ಪ್ರಾರ್ಥನೆಮಾಡಲು ಸಮಯವನ್ನು ಬದಿಗಿರಿಸಬೇಕು. (ಕೀರ್ತನೆ 103:13, 14) ನಮ್ಮ ಪ್ರಾರ್ಥನೆಗಳಲ್ಲಿ, ಯೆಹೋವನ ನಾಮದ ಪವಿತ್ರೀಕರಣಕ್ಕಾಗಿರುವ ನಮ್ಮ ಚಿಂತೆಯು ವ್ಯಕ್ತವಾಗಬೇಕು. ಯಾಕೆಂದರೆ ಆ ಹೆಸರಿನ ಮೇಲೆ ಹೊರಿಸಲ್ಪಟ್ಟಿರುವ ಎಲ್ಲ ನಿಂದೆಯಿಂದ ಅದು ಮುಕ್ತವಾಗುವುದನ್ನು ನಾವು ನೋಡಲು ಹಾತೊರೆಯುತ್ತೇವೆ. ಹೌದು, ಯೆಹೋವನ ಹೆಸರು ಪ್ರತ್ಯೇಕವಾಗಿರಿಸಲ್ಪಟ್ಟು, ಪವಿತ್ರ ಅಥವಾ ಪರಿಶುದ್ಧವಾಗಿ ಎಣಿಸಲ್ಪಡಬೇಕೆಂಬುದು ನಮ್ಮ ಬಯಕೆಯಾಗಿದೆ.—ಕೀರ್ತನೆ 5:11; 63:3, 4; 148:12, 13; ಯೆಹೆಜ್ಕೇಲ 38:23.
14. “ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸುವುದರ ಅರ್ಥವೇನು?
14 “ನಿನ್ನ ರಾಜ್ಯವು ಬರಲಿ.” ಆ ರಾಜ್ಯವು ಯೆಹೋವನ ಆಧಿಪತ್ಯವಾಗಿದೆ. ಅದು, ಆತನ ಪುತ್ರನ ಮತ್ತು ಅವನ ಜೊತೆಯಲ್ಲಿರುವ “ಪವಿತ್ರ ಜನರ” ಸ್ವರ್ಗೀಯ ಮೆಸ್ಸೀಯಸಂಬಂಧಿತ ಸರಕಾರದ ಮೂಲಕ ವ್ಯಕ್ತಪಡಿಸಲ್ಪಡುವುದು. (ದಾನಿಯೇಲ 7:13, 14, 18, 27; ಪ್ರಕಟನೆ 20:6) ಅದು ಬಹು ಬೇಗನೆ, ಭೂಮಿಯ ಮೇಲಿರುವ ದೇವರ ಪರಮಾಧಿಕಾರದ ವಿರೋಧಿಗಳನ್ನು ನಾಶಮಾಡುವ ಮೂಲಕ ಅವರ ವಿರುದ್ಧ ‘ಬರಲಿದೆ.’ (ದಾನಿಯೇಲ 2:44) ಆಗ, ಯೆಹೋವನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಮಿಯ ಮೇಲೆಯೂ ನೆರವೇರಲಿರುವುದು. (ಮತ್ತಾಯ 6:10) ವಿಶ್ವದ ಪರಮಾಧಿಕಾರಿಯನ್ನು ನಿಷ್ಠೆಯಿಂದ ಸೇವಿಸುತ್ತಿರುವ ಎಲ್ಲ ಸೃಷ್ಟಿಜೀವಿಗಳಿಗೆ ಅದು ಎಷ್ಟೊಂದು ಆನಂದವನ್ನು ತರಲಿರುವುದು!
15. ‘ನಮ್ಮ ಅನುದಿನದ ಆಹಾರ’ಕ್ಕಾಗಿ ಯೆಹೋವನ ಬಳಿ ಬೇಡಿಕೊಳ್ಳುವುದು ಏನನ್ನು ಸೂಚಿಸುತ್ತದೆ?
15 “ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು.” “ಅನುದಿನದ” ಆಹಾರಕ್ಕಾಗಿ ಯೆಹೋವನಿಗೆ ಬೇಡುವುದೆಂದರೆ, ನಾವು ಹೇರಳವಾದ ಒದಗಿಸುವಿಕೆಗಳನ್ನು ವಿನಂತಿಸುವುದಿಲ್ಲ, ಬದಲಾಗಿ ನಮ್ಮ ದೈನಂದಿನ ಆವಶ್ಯಕತೆಗಳನ್ನು ಪೂರೈಸುವಂತೆ ಬೇಡುತ್ತೇವೆಂಬುದನ್ನು ಸೂಚಿಸುತ್ತದೆ. ದೇವರು ಒದಗಿಸುವನೆಂಬ ಭರವಸೆ ನಮಗಿರುವುದಾದರೂ, ಆಹಾರ ಮತ್ತು ಇತರ ಅಗತ್ಯಗಳನ್ನು ಪಡೆದುಕೊಳ್ಳಲಿಕ್ಕೋಸ್ಕರ ನಾವು ಕೆಲಸವನ್ನೂ ಮಾಡುತ್ತೇವೆ ಮತ್ತು ನಮಗೆ ಲಭ್ಯವಿರುವ ಯಾವುದೇ ಯೋಗ್ಯ ಮಾಧ್ಯಮವನ್ನೂ ಉಪಯೋಗಿಸುತ್ತೇವೆ. (2 ಥೆಸಲೊನೀಕ 3:7-10) ಈ ಒದಗಿಸುವಿಕೆಗಳು, ನಮ್ಮ ಸ್ವರ್ಗೀಯ ದಾತನ ಪ್ರೀತಿ, ವಿವೇಕ, ಮತ್ತು ಶಕ್ತಿಯಿಂದಾಗಿ ದೊರಕುವುದರಿಂದ, ನಿಶ್ಚಯವಾಗಿ ನಾವು ಆತನಿಗೆ ಉಪಕಾರಸಲ್ಲಿಸಬೇಕು.—ಅ. ಕೃತ್ಯಗಳು 14:15-17.
16. ನಾವು ದೇವರ ಕ್ಷಮೆಯನ್ನು ಹೇಗೆ ಪಡೆದುಕೊಳ್ಳಬಹುದು?
16 “ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು.” ನಾವು ಅಪರಿಪೂರ್ಣರೂ ಪಾಪಿಗಳೂ ಆಗಿರುವುದರಿಂದ, ಯೆಹೋವನ ಪರಿಪೂರ್ಣ ಮಟ್ಟಗಳನ್ನು ನಾವು ಪೂರ್ಣಮಟ್ಟಿಗೆ ಪಾಲಿಸಲಾರೆವು. ಆದುದರಿಂದ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಾವು ಆತನ ಕ್ಷಮೆಗಾಗಿ ಪ್ರಾರ್ಥಿಸಬೇಕು. ಆದರೆ ‘ಪ್ರಾರ್ಥನೆಯನ್ನು ಕೇಳುವವನು’ ನಮ್ಮ ಪಾಪಗಳಿಗೆ ಆ ಯಜ್ಞದ ಮೌಲ್ಯವನ್ನು ಅನ್ವಯಿಸಲು ಬಯಸುವುದಾದರೆ, ನಾವು ಪಶ್ಚಾತ್ತಾಪಪಡಬೇಕು ಮತ್ತು ಆತನು ನಮಗೆ ಕೊಡುವ ಯಾವುದೇ ಶಿಸ್ತನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. (ಕೀರ್ತನೆ 65:2; ರೋಮಾಪುರ 5:8; 6:23; ಇಬ್ರಿಯ 12:4-11) ಅಷ್ಟುಮಾತ್ರವಲ್ಲದೆ, “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿ”ದರೆ ಮಾತ್ರ, ದೇವರು ನಮ್ಮನ್ನು ಕ್ಷಮಿಸುವಂತೆ ನಾವು ನಿರೀಕ್ಷಿಸಬಲ್ಲೆವು.—ಮತ್ತಾಯ 6:12, 14, 15.
17. “ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ” ಎಂಬ ಪದಗಳ ಅರ್ಥವೇನು?
17 “ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ.” ಕೆಲವೊಂದು ಸಂಗತಿಗಳು ಸಂಭವಿಸುವಂತೆ ಯೆಹೋವನು ಅನುಮತಿಸುವಾಗ, ಆತನೇ ಅದನ್ನು ಬರಮಾಡುತ್ತಿದ್ದಾನೋ ಎಂಬಂತೆ ಬೈಬಲು ಕೆಲವೊಮ್ಮೆ ವರ್ಣನೆ ನೀಡುತ್ತದೆ. (ರೂತ 1:20, 21) ಪಾಪವನ್ನು ಮಾಡುವಂತೆ ದೇವರು ನಮ್ಮನ್ನು ಪ್ರಲೋಭಿಸುವುದಿಲ್ಲ. (ಯಾಕೋಬ 1:13) ಕೆಟ್ಟದ್ದನ್ನು ಮಾಡಲಿಕ್ಕಾಗಿ ಪ್ರಲೋಭನೆಗಳು ಪಿಶಾಚನಿಂದ, ನಮ್ಮ ಪಾಪಪೂರ್ಣ ಶರೀರ ಮತ್ತು ಈ ಲೋಕದಿಂದ ಬರುತ್ತವೆ. ದೇವರ ವಿರುದ್ಧ ಪಾಪಮಾಡುವಂತೆ ನಮ್ಮನ್ನು ಸೆಳೆಯಲು ಪ್ರಯತ್ನಿಸುವವನು ಶೋಧಕನಾದ ಸೈತಾನನಾಗಿದ್ದಾನೆ. (ಮತ್ತಾಯ 4:3; 1 ಥೆಸಲೊನೀಕ 3:5) “ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ” ಎಂಬಂತಹ ವಿನಂತಿಯನ್ನು ನಾವು ಮಾಡುವಾಗ, ದೇವರಿಗೆ ಅವಿಧೇಯರಾಗುವಂತೆ ನಾವು ಪ್ರಲೋಭಿಸಲ್ಪಟ್ಟಾಗ ನಾವು ತಪ್ಪಿಬೀಳಲು ಅನುಮತಿಸದಂತೆ ನಾವು ಆತನನ್ನು ಕೇಳಿಕೊಳ್ಳುತ್ತಿದ್ದೇವೆ. ನಾವು ಆ ಶೋಧನೆಗೆ ಬಲಿಯಾಗಿ, “ಕೆಡುಕನ” ಅಂದರೆ, ಸೈತಾನನ ಕೈಗೆ ಸಿಕ್ಕಿಬೀಳದಂತೆ ಆತನು ನಮ್ಮನ್ನು ಮಾರ್ಗದರ್ಶಿಸಬಲ್ಲನು.—ಮತ್ತಾಯ 6:13; 1 ಕೊರಿಂಥ 10:13.
ನಿಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಿರಿ
18. ಒಂದು ಸಂತೋಷಭರಿತ ವಿವಾಹ ಮತ್ತು ಕುಟುಂಬ ಜೀವಿತಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳಿಗನುಸಾರ ಹೇಗೆ ಕ್ರಿಯೆಗೈಯಬಲ್ಲೆವು?
18 ಯೇಸುವಿನ ಮಾದರಿ ಪ್ರಾರ್ಥನೆಯು ಪ್ರಮುಖ ಅಂಶಗಳನ್ನು ಸೇರಿಸಿತು. ಆದರೆ ನಾವು ಬೇರೆ ಯಾವುದೇ ವಿಷಯದ ಕುರಿತಾಗಿ ಪ್ರಾರ್ಥಿಸಬಲ್ಲೆವು. ಉದಾಹರಣೆಗಾಗಿ, ಒಂದು ಸಂತೋಷಭರಿತ ವಿವಾಹಕ್ಕಾಗಿರುವ ನಮ್ಮ ಬಯಕೆಯ ಕುರಿತಾಗಿ ನಾವು ಪ್ರಾರ್ಥಿಸಬಹುದು. ಮದುವೆಯ ಮುಂಚೆ ನಿರ್ಮಲರಾಗಿರಲು, ನಾವು ಆತ್ಮಸಂಯಮಕ್ಕಾಗಿ ಪ್ರಾರ್ಥಿಸಬಹುದು. ಆದರೆ ನಾವು ಸಹ, ಅನೈತಿಕ ಸಾಹಿತ್ಯ ಮತ್ತು ಮನೋರಂಜನೆಯನ್ನು ದೂರವಿಡುವ ಮೂಲಕ ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯೋಣ. ನಾವು ‘ಕರ್ತನಲ್ಲಿ ಮಾತ್ರ ವಿವಾಹಮಾಡಿಕೊಳ್ಳಲು’ ಸಹ ದೃಢಚಿತ್ತವುಳ್ಳವರಾಗಿರೋಣ. (1 ಕೊರಿಂಥ 7:39, NW; ಧರ್ಮೋಪದೇಶಕಾಂಡ 7:3, 4) ವಿವಾಹವಾದ ಬಳಿಕ, ದೇವರ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ಸಂತೋಷಕ್ಕಾಗಿರುವ ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ನಾವು ಕ್ರಿಯೆಗೈಯಬೇಕಾದೀತು. ಮತ್ತು ನಮಗೆ ಮಕ್ಕಳಿರುವಲ್ಲಿ, ಅವರು ಯೆಹೋವನ ನಂಬಿಗಸ್ತ ಸೇವಕರಾಗಲಿ ಎಂದು ಕೇವಲ ಪ್ರಾರ್ಥಿಸುವುದು ಸಾಕಾಗುವುದಿಲ್ಲ. ಬೈಬಲ್ ಅಭ್ಯಾಸದ ಮೂಲಕ ಮತ್ತು ಅವರೊಂದಿಗೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಅವರ ಮನಸ್ಸುಗಳಲ್ಲಿ ದೇವರ ಸತ್ಯಗಳನ್ನು ಬೇರೂರಿಸಲಿಕ್ಕಾಗಿ ನಮ್ಮಿಂದ ಸಾಧ್ಯವಾದುದೆಲ್ಲವನ್ನು ನಾವು ಮಾಡಬೇಕು.—ಧರ್ಮೋಪದೇಶಕಾಂಡ 6:5-9; 31:12; ಜ್ಞಾನೋಕ್ತಿ 22:6.
19. ನಮ್ಮ ಶುಶ್ರೂಷೆಯ ಕುರಿತಾಗಿ ಪ್ರಾರ್ಥಿಸುತ್ತಿರುವಲ್ಲಿ ನಾವೇನನ್ನು ಮಾಡಬೇಕು?
19 ಶುಶ್ರೂಷೆಯಲ್ಲಿ ಆಶೀರ್ವಾದಗಳಿಗಾಗಿ ನಾವು ಪ್ರಾರ್ಥಿಸುತ್ತೇವೊ? ಹಾಗಿರುವಲ್ಲಿ, ರಾಜ್ಯ ಸಾರುವಿಕೆಯ ಕೆಲಸದಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ಅಂತಹ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ವರ್ತಿಸೋಣ. ನಿತ್ಯಜೀವಕ್ಕೆ ನಡಿಸುವ ಮಾರ್ಗದಲ್ಲಿ ಇತರರು ಬರುವಂತೆ ಸಹಾಯಮಾಡಲಿಕ್ಕಾಗಿರುವ ಸಂದರ್ಭಗಳಿಗಾಗಿ ನಾವು ಪ್ರಾರ್ಥಿಸುತ್ತಿರುವಲ್ಲಿ, ನಾವು ಆಸಕ್ತ ವ್ಯಕ್ತಿಗಳ ಬಗ್ಗೆ ಮನೆಮನೆಯ ಒಳ್ಳೆಯ ರೆಕಾರ್ಡ್ಗಳನ್ನು ಇಡಬೇಕು ಮತ್ತು ನಮ್ಮ ಶೆಡ್ಯೂಲಿನಲ್ಲಿ ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಲಿಕ್ಕಾಗಿ ಸಮಯವನ್ನು ಬದಿಗಿರಿಸಬೇಕು. ನಾವು ಪಯನೀಯರರೋಪಾದಿ ಪೂರ್ಣ ಸಮಯದ ಸಾರುವ ಕೆಲಸವನ್ನು ಆರಂಭಿಸಲು ಬಯಸುತ್ತಿರುವಲ್ಲಿ ಆಗೇನು? ನಮ್ಮ ಸಾರುವ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ, ಮತ್ತು ಪಯನೀಯರರೊಂದಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮ ಪ್ರಾರ್ಥನೆಗಳಿಗನುಸಾರ ಕ್ರಿಯೆಗೈಯೋಣ. ಹಾಗೆ ಮಾಡುವುದು, ನಾವು ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕೆಲಸಮಾಡುತ್ತಿದ್ದೇವೆಂಬುದನ್ನು ತೋರಿಸುತ್ತದೆ.
20. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
20 ನಾವು ಯೆಹೋವನನ್ನು ನಂಬಿಗಸ್ತರಾಗಿ ಸೇವಿಸುತ್ತಿರುವಲ್ಲಿ, ಆತನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ನಮ್ಮ ಪ್ರಾರ್ಥನೆಗಳಿಗೆ ಆತನು ಉತ್ತರಕೊಡುವನೆಂಬ ಭರವಸೆ ನಮಗಿರಬಲ್ಲದು. (1 ಯೋಹಾನ 5:14, 15) ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಪ್ರಾರ್ಥನೆಗಳಲ್ಲಿ ಕೆಲವೊಂದನ್ನು ಪರಿಶೀಲಿಸುವ ಮೂಲಕ ನಾವು ಉಪಯುಕ್ತಕರ ಅಂಶಗಳನ್ನು ಪಡೆದುಕೊಂಡೆವು. ‘ಯೆಹೋವನ ಮುಂದೆ ತಮ್ಮ ಪ್ರಾರ್ಥನೆಗಳನ್ನು ಧೂಪದಂತೆ’ ತಯಾರಿಸಲು ಇಚ್ಚಿಸುವವರಿಗಾಗಿರುವ ಇನ್ನಿತರ ಶಾಸ್ತ್ರೀಯ ನಿರ್ದೇಶನಗಳನ್ನು ನಮ್ಮ ಮುಂದಿನ ಲೇಖನವು ಪರಿಗಣಿಸುವುದು.
ನೀವು ಹೇಗೆ ಉತ್ತರಿಸುವಿರಿ?
◻ ನಾವು ನಂಬಿಕೆಯಿಂದ ಪ್ರಾರ್ಥಿಸಬೇಕು ಏಕೆ?
◻ ನಮ್ಮ ಪ್ರಾರ್ಥನೆಗಳಲ್ಲಿ ಉಪಕಾರಸ್ತುತಿಗಳು ಯಾವ ಪಾತ್ರವನ್ನು ವಹಿಸಬೇಕು?
◻ ನಮ್ಮ ಪ್ರಾರ್ಥನೆಯಲ್ಲಿ ಭರವಸೆಯಿಂದ ನಾವು ಯೆಹೋವನ ಸಹಾಯವನ್ನು ಬೇಡಬಹುದು ಏಕೆ?
◻ ಮಾದರಿ ಪ್ರಾರ್ಥನೆಯ ಕೆಲವೊಂದು ಮುಖ್ಯ ಅಂಶಗಳು ಯಾವುವು?
◻ ನಾವು ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಹೇಗೆ ಕ್ರಿಯೆಗೈಯಬಲ್ಲೆವು?
[ಪುಟ 12 ರಲ್ಲಿರುವ ಚಿತ್ರ]
ರಾಜ ಯೆಹೋಷಾಫಾಟನಂತೆ ನಾವು ಕೆಲವೊಮ್ಮೆ ಹೀಗೆ ಪ್ರಾರ್ಥಿಸಬೇಕಾದೀತು: ‘ಏನು ಮಾಡಬೇಕೆಂದು ನಮಗೆ ತಿಳಿಯದು, ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ ಯೆಹೋವನೇ’
[ಪುಟ 13 ರಲ್ಲಿರುವ ಚಿತ್ರ]
ಯೇಸುವಿನ ಮಾದರಿ ಪ್ರಾರ್ಥನೆಗೆ ಹೊಂದಿಕೆಯಲ್ಲಿ ನೀವು ಪ್ರಾರ್ಥಿಸುತ್ತೀರೊ?