ಅಧ್ಯಾಯ 27
“ಆಹಾ, ಆತನ ಒಳ್ಳೇತನವೆಷ್ಟು ಶ್ರೇಷ್ಠವು!”
1, 2. ದೇವರ ಒಳ್ಳೇತನದ ವ್ಯಾಪ್ತಿಯೆಷ್ಟು, ಮತ್ತು ಈ ಗುಣದ ಮೇಲೆ ಬೈಬಲು ಯಾವ ಒತ್ತನ್ನು ಹಾಕುತ್ತದೆ?
ಸೂರ್ಯಾಸ್ತಮಾನದ ಹೊಂಬೆಳಕಿನಲ್ಲಿ ತೋಯಲ್ಪಟ್ಟು ಕೆಲವು ಮಂದಿ ಹಳೇ ಸ್ನೇಹಿತರು ಹೊರಬಯಲಿನಲ್ಲಿ ಕೂಡಿ ಊಟಮಾಡುತ್ತಾ, ನಗುತ್ತಾ ಮಾತಾಡುತ್ತಾ, ಅಲ್ಲಿನ ದೃಶ್ಯದ ಸೊಬಗನ್ನು ಸವಿಯುತ್ತಿದ್ದಾರೆ. ದೂರದಲ್ಲಿ ರೈತನೊಬ್ಬನು ತನ್ನ ಹೊಲಗಳ ಕಡೆಗೆ ದೃಷ್ಟಿಹಾಯಿಸುತ್ತಾನೆ, ಮತ್ತು ಸಂತೃಪ್ತಿಯ ಕಿರುನಗೆಯೊಂದು ಅವನ ಮುಖದಲ್ಲಿ ಲಾಸ್ಯವಾಡುತ್ತಿದೆ, ಏಕೆಂದರೆ ಆಕಾಶದಲ್ಲಿ ಕರೀಮೋಡಗಳು ಒಟ್ಟುಸೇರುತ್ತಾ ಮಳೆಯ ಮೊದಲ ಹನಿಗಳು ಆ ಬಾಯಾರಿರುವ ಪೈರುಗಳ ಮೇಲೆ ಬೀಳತೊಡಗಿವೆ. ಬೇರೊಂದು ಕಡೆ, ಒಬ್ಬ ಪತಿ ಹಾಗೂ ಪತ್ನಿಯು ತಮ್ಮ ಪುಟ್ಟ ಮಗುವು ತಡವರಿಸುತ್ತಾ ತನ್ನ ಪ್ರಥಮ ಹೆಜ್ಜೆಗಳನ್ನಿಡುವುದನ್ನು ಕಂಡು ಸಂತಸದಿಂದ ಹಿಗ್ಗುತ್ತಾರೆ.
2 ಈ ಜನರಿಗೆ ಅದು ತಿಳಿದಿರಲಿ ತಿಳಿಯದಿರಲಿ, ಅವರೆಲ್ಲರಂತೂ ಒಂದೇ ವಿಷಯದಿಂದ, ಅಂದರೆ ಯೆಹೋವ ದೇವರ ಒಳ್ಳೇತನದ ದೆಸೆಯಿಂದ ಪ್ರಯೋಜನ ಹೊಂದುತ್ತಿದ್ದಾರೆ. “ದೇವರು ಒಳ್ಳೆಯವನು” ಎಂಬ ನುಡಿಯನ್ನು ಕೆಲವು ಧಾರ್ಮಿಕ ಜನರು ಅನೇಕಬಾರಿ ಪುನರುಚ್ಚರಿಸುತ್ತಾರೆ. ಬೈಬಲಾದರೊ ಎಷ್ಟೋ ಹೆಚ್ಚು ಒತ್ತನ್ನು ಹಾಕುತ್ತಾ “ಆಹಾ, ಆತನ ಒಳೇತನವೆಷ್ಟು ಶ್ರೇಷ್ಠವು!” ಎಂದು ಹೇಳುತ್ತದೆ. (ಜೆಕರ್ಯ 9:17, NW) ಆದರೆ ಇಂದು ಆ ಮಾತುಗಳ ಅರ್ಥವೇನೆಂದು ನಿಜವಾಗಿ ತಿಳಿದಿರುವವರು ಕೇವಲ ಕೊಂಚವೇ ಎನ್ನಬೇಕು. ಯೆಹೋವ ದೇವರ ಒಳ್ಳೇತನದಲ್ಲಿ ವಾಸ್ತವದಲ್ಲಿ ಏನು ಒಳಗೊಂಡಿರುತ್ತದೆ ಮತ್ತು ದೇವರ ಈ ಗುಣವು ನಮ್ಮಲ್ಲಿ ಪ್ರತಿಯೊಬ್ಬರನ್ನು ಹೇಗೆ ಪ್ರಭಾವಿಸುತ್ತದೆ?
ದೈವಿಕ ಪ್ರೀತಿಯ ಎದ್ದುಕಾಣುವ ವೈಶಿಷ್ಟ್ಯ
3, 4. ಒಳ್ಳೇತನ ಎಂದರೇನು, ಮತ್ತು ಯೆಹೋವನ ಒಳ್ಳೇತನವನ್ನು ದೈವಿಕ ಪ್ರೀತಿಯ ಅಭಿವ್ಯಕ್ತಿಯಾಗಿ ವರ್ಣಿಸುವುದು ಸರಿಯಾಗಿರುವುದೇಕೆ?
3 ಅನೇಕ ಆಧುನಿಕ ಭಾಷೆಗಳಲ್ಲಿ “ಒಳ್ಳೇತನ” ಎಂಬುದು ಬಹುಮಟ್ಟಿಗೆ ಒಂದು ಸಾಮಾನ್ಯವಾದ ನೀರಸ ಶಬ್ದ. ಆದರೆ ಬೈಬಲಿನಲ್ಲಿ ಪ್ರಕಟಪಡಿಸಲ್ಪಟ್ಟ ವಿಧದಲ್ಲಾದರೊ ಅದು ನೀರಸವಾಗಿರದೆ ಒಂದು ಸತ್ವಭರಿತ ಶಬ್ದವಾಗಿರುತ್ತದೆ. ಪ್ರಾಮುಖ್ಯವಾಗಿ ಅದು ಸೌಶೀಲ್ಯಕ್ಕೆ ಮತ್ತು ನೈತಿಕ ಉತ್ಕೃಷ್ಟತೆಗೆ ಸೂಚಿಸುತ್ತದೆ. ಹೀಗಿರುವುದರಿಂದ ಒಂದರ್ಥದಲ್ಲಿ, ಒಳ್ಳೇತನವು ಯೆಹೋವನಲ್ಲಿ ವ್ಯಾಪಿಸಿದೆ ಎಂದು ನಾವು ಹೇಳಬಹುದು. ಆತನ ಎಲ್ಲಾ ಗುಣಲಕ್ಷಣಗಳು—ಆತನ ಶಕ್ತಿ, ಆತನ ನ್ಯಾಯ, ಮತ್ತು ಆತನ ವಿವೇಕವೂ ಸೇರಿ, ಪೂರ್ತಿಯಾಗಿ ಒಳ್ಳೆಯವುಗಳೇ ಆಗಿರುತ್ತವೆ. ಆದರೂ ಒಳ್ಳೇತನವನ್ನು, ಯೆಹೋವನ ಪ್ರೀತಿಯ ವ್ಯಕ್ತಪಡಿಸುವಿಕೆಯಾಗಿ ವರ್ಣಿಸುವುದು ಸರಿಯಾಗಿರುವುದು. ಯಾಕೆ?
4 ಒಳ್ಳೇತನವು ಒಂದು ಕ್ರಿಯಾಶೀಲ ಗುಣವಾಗಿದೆ, ಅದು ಇತರರ ಕಡೆಗೆ ಕ್ರಿಯೆಗಳಲ್ಲಿ ವ್ಯಕ್ತವಾಗುವಂಥದ್ದಾಗಿದೆ. ಮಾನವರಲ್ಲಿ ಅದು ನೀತಿಗಿಂತಲೂ ಹೆಚ್ಚು ಆಕರ್ಷಣೀಯವಾದದ್ದು ಎಂದು ಅಪೊಸ್ತಲ ಪೌಲನು ಸೂಚಿಸಿದನು. (ರೋಮಾಪುರ 5:7) ನೀತಿವಂತನಾದ ಮನುಷ್ಯನು ನಿಯಮದ ಆವಶ್ಯಕತೆಗಳೆಲ್ಲವನ್ನು ನಂಬಿಗಸ್ತಿಕೆಯಿಂದ ಪರಿಪಾಲಿಸುವನೆಂದು ನಿರೀಕ್ಷಿಸಸಾಧ್ಯವಿದೆ, ಆದರೆ ಒಬ್ಬ ಒಳ್ಳೇ ಮನುಷ್ಯನು ಅದಕ್ಕಿಂತಲೂ ಹೆಚ್ಚನ್ನು ಮಾಡುತ್ತಾನೆ. ಅವನು ಮೊದಲ ಹೆಜ್ಜೆಯನ್ನು ತೆಗೆದುಕೊಂಡು, ಇತರರಿಗೆ ಉಪಕಾರವಾಗುವಂಥ ಮಾರ್ಗಗಳಿಗಾಗಿ ಕ್ರಿಯಾಶೀಲವಾಗಿ ಹುಡುಕುತ್ತಿರುತ್ತಾನೆ. ನಾವು ನೋಡಲಿರುವ ಪ್ರಕಾರ, ಯೆಹೋವನು ಆ ಅರ್ಥದಲ್ಲಿ ನಿಶ್ಚಯವಾಗಿಯೂ ಒಳ್ಳೆಯವನು. ಅಂಥ ಒಳ್ಳೇತನವು ಯೆಹೋವನ ಅಪಾರವಾದ ಪ್ರೀತಿಯಿಂದಾಗಿ ಹೊರಹೊಮ್ಮುತ್ತದೆಂಬುದು ಸ್ಪಷ್ಟ.
5-7. “ಒಳ್ಳೇ ಬೋಧಕ” ಎಂದು ಕರೆಯಲ್ಪಡಲು ಯೇಸು ನಿರಾಕರಿಸಿದ್ದೇಕೆ, ಮತ್ತು ಆ ಮೂಲಕ ಯಾವ ಘನವಾದ ಸತ್ಯವನ್ನು ಅವನು ದೃಢೀಕರಿಸಿದನು?
5 ಯೆಹೋವನು ತನ್ನ ಒಳ್ಳೇತನದಲ್ಲಿ ಅಸದೃಶನೂ ಆಗಿರುತ್ತಾನೆ. ಯೇಸು ಸಾಯುವ ಸ್ವಲ್ಪ ಕಾಲದ ಮುಂಚೆ ಒಬ್ಬ ಮನುಷ್ಯನು ಅವನನ್ನು ಗೋಚರಿಸುತ್ತಾ, ಅವನನ್ನು “ಒಳ್ಳೇ ಬೋಧಕನೇ” ಎಂಬ ಮಾತುಗಳಿಂದ ಸಂಬೋಧಿಸಿದನು. ಯೇಸು ಅವನಿಗೆ ಹೇಳಿದ್ದು: “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.” (ಮಾರ್ಕ 10:17, 18) ಯೇಸು ಕೊಟ್ಟ ಆ ಉತ್ತರವು ಒಂದುವೇಳೆ ನಿಮ್ಮನ್ನು ತಬ್ಬಿಬ್ಬು ಮಾಡೀತು. ಯೇಸು ಆ ಮನುಷ್ಯನನ್ನು ತಿದ್ದಿದ್ದು ಯಾಕೆ? ಯೇಸು ವಾಸ್ತವದಲ್ಲಿ ಒಬ್ಬ “ಒಳ್ಳೇ ಬೋಧಕ”ನಾಗಿದ್ದನಲ್ಲವೋ?
6 “ಒಳ್ಳೇ ಬೋಧಕನೇ” ಎಂಬ ಮಾತುಗಳನ್ನು ಆ ಮನುಷ್ಯನು ವಾಸ್ತವದಲ್ಲಿ ಮುಖಸ್ತುತಿಮಾಡಲಿಕ್ಕಾಗಿ ಒಂದು ಬಿರುದಾಗಿ ಉಪಯೋಗಿಸಿದನೆಂಬುದು ಸ್ಪಷ್ಟ. ಯೇಸು ಮಿತವರ್ತಿ ಭಾವದಿಂದ, ಅಂಥ ಮಹಿಮೆಯು ಪರಮೋಚ್ಚ ಅರ್ಥದಲ್ಲಿ ಒಳ್ಳೆಯವನಾಗಿರುವ ತನ್ನ ಸ್ವರ್ಗೀಯ ತಂದೆಗೇ ಸಲ್ಲತಕ್ಕದ್ದೆಂದು ತೋರಿಸಿದನು. (ಜ್ಞಾನೋಕ್ತಿ 11:2) ಆದರೆ ಯೇಸು ಒಂದು ಘನವಾದ ಸತ್ಯವನ್ನೂ ಅಲ್ಲಿ ದೃಢೀಕರಿಸುತ್ತಿದ್ದನು. ಯಾವುದು ಒಳ್ಳೆಯದೋ ಅದರ ಏಕಮಾತ್ರ ಮಟ್ಟವು ಯೆಹೋವನೊಬ್ಬನೇ. ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದೆಂದು ನಿರ್ಧರಿಸುವ ಪರಮ ಹಕ್ಕು ಆತನಿಗೊಬ್ಬನಿಗೇ ಸೇರಿದೆ. ಆದಾಮಹವ್ವರು ದಂಗೆಯೆದ್ದು, ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವ ಮೂಲಕ ಆ ಹಕ್ಕನ್ನು ತಮಗಾಗಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಯೇಸುವಾದರೊ ಅವರಂತೆ ಮಾಡಲಿಲ್ಲ, ಮಟ್ಟಗಳನ್ನಿಡುವ ಹಕ್ಕನ್ನು ಅವನು ದೀನತೆಯಿಂದ ತನ್ನ ತಂದೆಗೇ ಬಿಟ್ಟುಕೊಡುತ್ತಾನೆ.
7 ಅಷ್ಟಲ್ಲದೆ, ನಿಜವಾಗಿಯೂ ಒಳ್ಳೇದಾಗಿರುವ ಸಕಲ ವಿಷಯಗಳ ಮೂಲವು ಯೆಹೋವನೇ ಆಗಿದ್ದಾನೆಂದು ಯೇಸುವಿಗೆ ತಿಳಿದಿತ್ತು. “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಆತನಿಂದಲೇ ಕೊಡಲ್ಪಡುತ್ತವೆ. (ಯಾಕೋಬ 1:17) ಯೆಹೋವನ ಔದಾರ್ಯದಲ್ಲಿ ಆತನ ಒಳ್ಳೇತನವು ಹೇಗೆ ತೋರಿಬರುತ್ತದೆಂದು ನಾವೀಗ ಪರೀಕ್ಷಿಸೋಣ.
ಯೆಹೋವನ ಅಪಾರವಾದ ಒಳ್ಳೇತನದ ಪುರಾವೆ
8. ಯೆಹೋವನು ಸಕಲ ಮಾನವರ ಕಡೆಗೆ ಒಳ್ಳೇತನವನ್ನು ತೋರಿಸಿರುವುದು ಹೇಗೆ?
8 ಜೀವಿಸಿರುವವರಲ್ಲಿ ಪ್ರತಿಯೊಬ್ಬನು ಯೆಹೋವನ ಒಳ್ಳೇತನದಿಂದ ಪ್ರಯೋಜನವನ್ನು ಹೊಂದಿರುತ್ತಾನೆ. ಕೀರ್ತನೆ 145:9 ಹೇಳುವುದು: “ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.” (ಓರೆ ಅಕ್ಷರಗಳು ನಮ್ಮವು.) (ಪರಿಶುದ್ಧ ಬೈಬಲ್) ಆತನ ಸರ್ವವ್ಯಾಪಿ ಒಳ್ಳೇತನದ ಕೆಲವು ಉದಾಹರಣೆಗಳು ಯಾವುವು? ಬೈಬಲನ್ನುವುದು: “ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ [“ಒಳಿತನ್ನು,” NW] ಮಾಡುತ್ತಾ ಬಂದವನು ಆತನೇ.” (ಅ. ಕೃತ್ಯಗಳು 14:17) ಸ್ವಾದಿಷ್ಟಕರವಾದ ಒಂದು ಊಟವನ್ನು ಮಾಡುತ್ತಿರುವಾಗ ನಿಮಗೆಂದಾದರೂ ಸಂಭ್ರಮದಿಂದ ಹಿಗ್ಗಿದ ಅನುಭವವಾದದ್ದುಂಟೋ? ಭೂಮಿಯನ್ನು ರಚಿಸುತ್ತಿರುವಾಗ, ಸಮೃದ್ಧವಾದ ಆಹಾರವನ್ನೊದಗಿಸಲಿಕ್ಕಾಗಿ ಯೆಹೋವನು ತನ್ನ ಒಳ್ಳೇತನದಿಂದ ಅದರಲ್ಲಿ ಶುದ್ಧ ನೀರಿನ ಸಂಗ್ರಹದ ನಿರಂತರ ಪುನರ್ಚಕ್ರೀಕರಣ ಮತ್ತು ‘ಸುಗ್ಗೀಕಾಲಗಳನ್ನು’ ಕೊಡದಿರುತ್ತಿದ್ದಲ್ಲಿ, ಇಂಥ ಊಟಗಳೇ ಇರುತ್ತಿರಲಿಲ್ಲವಲ್ಲಾ. ಅಂಥ ಒಳ್ಳೇತನವನ್ನು ಯೆಹೋವನು ತನ್ನನ್ನು ಪ್ರೀತಿಸುವವರಿಗಾಗಿ ಮಾತ್ರವೇ ಅಲ್ಲ, ಬದಲಾಗಿ ಎಲ್ಲರಿಗೂ ತೋರಿಸಿದ್ದಾನೆ. ಯೇಸುವಂದದ್ದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.”—ಮತ್ತಾಯ 5:45.
ಯೆಹೋವನು ‘ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿದ್ದಾನೆ’
9. ಸೇಬು ಹಣ್ಣು ಯೆಹೋವನ ಒಳ್ಳೇತನವನ್ನು ಹೇಗೆ ದೃಷ್ಟಾಂತಿಸುತ್ತದೆ?
9 ಸೂರ್ಯ, ಮಳೆ, ಮತ್ತು ಸುಗ್ಗೀಕಾಲಗಳ ನಿರಂತರ ಮುಂದುವರಿಯುತ್ತಿರುವ ಪ್ರಕ್ರಿಯೆಯ ಕಾರಣ, ಮಾನವಕುಲದ ಮೇಲೆ ಹೇರಲ್ಪಟ್ಟಿರುವ ಈ ಅಪಾರ ಔದಾರ್ಯವನ್ನು ಅನೇಕರು ಬಹಳ ಹಗುರವಾಗಿ ಎಣಿಸುತ್ತಾರೆ. ಉದಾಹರಣೆಗೆ, ಸೇಬು ಹಣ್ಣನ್ನು ತೆಗೆದುಕೊಳ್ಳಿ. ಭೂಮಿಯ ಸಮಶೀತೋಷ್ಣ ವಲಯಗಳಲ್ಲೆಲ್ಲಾ ಈ ಹಣ್ಣು ಸರ್ವಸಾಮಾನ್ಯವಾಗಿದೆ. ಆದರೂ ಅದು ಒಂದು ಅಂದವಾದ, ರುಚಿಕರ ಹಣ್ಣು ಆಗಿದೆ, ಮತ್ತು ಚೈತನ್ಯದಾಯಕವಾದ ಜಲ ಹಾಗೂ ಪ್ರಧಾನ ಪೋಷಕಾಂಶಗಳಿಂದ ತುಂಬಿದೆ. ಲೋಕದಾದ್ಯಂತ ಸುಮಾರು 7,500 ವಿವಿಧ ಜಾತಿಯ ಸೇಬು ಹಣ್ಣುಗಳಿವೆಯೆಂದು ನಿಮಗೆ ಗೊತ್ತಿತ್ತೋ? ಕೆಂಪಿನಿಂದ ಹಿಡಿದು ಹೊಂಬಣ್ಣದ ತನಕ, ಹಳದಿಯಿಂದ ಮೊದಲುಗೊಂಡು ಹಸಿರು ಬಣ್ಣದ ತನಕ ವಿವಿಧ ಬಣ್ಣಗಳಲ್ಲಿ ಮತ್ತು ಒಂದು ದ್ರಾಕ್ಷೆಗಿಂತ ಸ್ವಲ್ಪ ದೊಡ್ಡ ಗಾತ್ರದಿಂದ ಹಿಡಿದು ಒಂದು ಚಕ್ಕೋತ ಹಣ್ಣಿನಷ್ಟು ದೊಡ್ಡ ಗಾತ್ರದ ವರೆಗೆ ಅದು ಲಭ್ಯವಿದೆ. ಸೇಬಿನ ಚಿಕ್ಕ ಬೀಜವನ್ನು ನೀವು ಕೈಯಲ್ಲಿ ತೆಗೆದುಕೊಂಡರೆ ಅದು ಕ್ಷುಲ್ಲಕವಾಗಿ ಕಾಣಬಹುದು. ಆದರೆ ಅದರೊಳಗಿಂದಲೇ ಅತಿ ಸುಂದರವಾದ ಒಂದು ವೃಕ್ಷವು ಬೆಳೆಯುತ್ತದೆ. (ಪರಮಗೀತ 2:3) ಪ್ರತಿ ವಸಂತ ಋತುವಿನಲ್ಲಿ ಸೇಬು ವೃಕ್ಷವು ಹೂಗೊಂಚಲುಗಳಿಂದ ಶೋಭಾಯಮಾನವಾಗುತ್ತದೆ; ಪ್ರತಿ ವರ್ಷ ಶರತ್ಕಾಲದಲ್ಲಿ ಹಣ್ಣುಬಿಡುತ್ತದೆ. ಪ್ರತಿ ವರ್ಷ—75 ವರ್ಷಗಳ ತನಕ—ಒಂದು ಸರಾಸರಿ ಸೇಬು ವೃಕ್ಷವು, 19 ಕಿಲೋಗ್ರ್ಯಾಮ್ ಭಾರವನ್ನೆತ್ತುವಂಥ 20 ರಟ್ಟುಪೆಟ್ಟಿಗೆಗಳನ್ನು ತುಂಬಲು ಸಾಕಾಗುವಷ್ಟು ಹಣ್ಣನ್ನು ಉತ್ಪಾದಿಸುತ್ತದೆ!
10, 11. ಇಂದ್ರಿಯಗಳು ಯೆಹೋವನ ಒಳ್ಳೇತನವನ್ನು ಹೇಗೆ ಪ್ರದರ್ಶಿಸುತ್ತವೆ?
10 ತನ್ನ ಎಲ್ಲೆಯಿಲ್ಲದ ಒಳ್ಳೇತನದಿಂದ ಯೆಹೋವನು ನಮಗೆ ‘ಅದ್ಭುತವಾಗಿ ರಚಿಸಲ್ಪಟ್ಟಿರುವ’ ಒಂದು ದೇಹವನ್ನೂ ಅದರೊಂದಿಗೆ ತನ್ನ ಕೆಲಸಗಳನ್ನು ಗ್ರಹಿಸಲು ಮತ್ತು ಅದರಲ್ಲಿ ಆನಂದಿಸಲು ಸಹಾಯಕ್ಕಾಗಿ ರಚಿಸಲ್ಪಟ್ಟ ಇಂದ್ರಿಯಗಳನ್ನೂ ಕೊಟ್ಟಿರುತ್ತಾನೆ. (ಕೀರ್ತನೆ 139:14) ಈ ಅಧ್ಯಾಯದ ಆರಂಭದಲ್ಲಿ ವರ್ಣಿಸಲಾದ ಆ ದೃಶ್ಯಗಳನ್ನು ಪುನಃ ನೆನಪಿಗೆ ತನ್ನಿರಿ. ಅಂಥ ಕ್ಷಣಗಳಲ್ಲಿ ಯಾವ ನೋಟಗಳು ಆನಂದವನ್ನು ತರುತ್ತವೆ? ನಗುತ್ತಿರುವ ಮಗುವಿನ ಕೆಂಪೇರಿದ ಕೆನ್ನೆಗಳು. ಹೊಲಗದ್ದೆಗಳ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಸೂರ್ಯಾಸ್ತಮಾನದ ಕೆಂಪು, ಸ್ವರ್ಣ, ಮತ್ತು ನೇರಳೆ ಬಣ್ಣಗಳು. ಮಾನವ ನೇತ್ರಗಳು ಸುಮಾರು 3,00,000ಕ್ಕಿಂತಲೂ ಹೆಚ್ಚು ವಿವಿಧ ವರ್ಣಗಳನ್ನು ಪತ್ತೆಹಚ್ಚುವಂಥ ರೀತಿಯಲ್ಲಿ ರಚಿಸಲ್ಪಟ್ಟಿವೆ! ಮತ್ತು ನಮ್ಮ ಶ್ರವಣೇಂದ್ರಿಯವು ನಮಗೆ ಅಚ್ಚುಮೆಚ್ಚಿನದ್ದಾಗಿರುವ ಧ್ವನಿಯ, ವೃಕ್ಷಗಳಿಂದ ಹೊರಡುವ ಗಾಳಿಯ ಮರ್ಮರ ಶಬ್ದದ, ದಟ್ಟಗಾಲು ಹಾಕುವ ಪುಟ್ಟನ ಹರ್ಷೋನ್ಮಾದದ ನಗುವಿನ ನಾದದಲ್ಲಿರುವ ಸೂಕ್ಷ್ಮ ವೈವಿಧ್ಯಗಳನ್ನು ಗ್ರಹಿಸುತ್ತದೆ. ಅಂಥ ನೋಟಗಳನ್ನು ಮತ್ತು ಧ್ವನಿಗಳಲ್ಲಿ ನಾವು ಆನಂದಿಸಲು ಶಕ್ತರಾಗಿರುವುದೇಕೆ? ಬೈಬಲನ್ನುವುದು: “ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.” (ಜ್ಞಾನೋಕ್ತಿ 20:12) ಆದರೆ ಇವು ಜ್ಞಾನೇಂದ್ರಿಯಗಳಲ್ಲಿ ಕೇವಲ ಎರಡು.
11 ಯೆಹೋವನ ಒಳ್ಳೇತನದ ಇನ್ನೊಂದು ಪುರಾವೆಯು ನಮಗಿರುವ ಘ್ರಾಣೇಂದ್ರಿಯವೇ. ಮಾನವ ಮೂಗು ಸುಮಾರು 10,000 ವಿವಿಧ ವಾಸನೆಗಳ ವ್ಯತ್ಯಾಸವನ್ನು ಗುರುತಿಸಬಲ್ಲದು. ಇವುಗಳಲ್ಲಿ ಕೇವಲ ಕೆಲವೊಂದರ ಬಗ್ಗೆ ನೆನಸಿ: ಅಡಿಗೆಮನೆಯಲ್ಲಿ ಬೇಯುತ್ತಿರುವ ನಿಮ್ಮ ಅಚ್ಚುಮೆಚ್ಚಿನ ಆಹಾರ, ತರತರದ ಹೂವುಗಳು, ನೆಲದ ಮೇಲೆ ಬಿದ್ದಿರುವ ಎಲೆಗಳು, ಒಂದು ಸಣ್ಣ ಬೆಂಕಿಯಿಂದ ಹೊರಡುವ ತೆಳುವಾದ ಹೊಗೆ. ನಿಮ್ಮ ಸ್ಪರ್ಶೇಂದ್ರಿಯವು, ಗಾಳಿಯು ನಿಮ್ಮ ಮುಖವನ್ನು ಸವರುತ್ತಾ ಹೋಗುವುದನ್ನು, ನಿಮ್ಮ ಪ್ರಿಯ ವ್ಯಕ್ತಿಯ ಧೈರ್ಯತುಂಬುವ ಆಲಿಂಗನವನ್ನು, ನಿಮ್ಮ ಕೈಯಲ್ಲಿರುವ ಹಣ್ಣಿನ ನುಣುಪಾದ ಮೇಲ್ಮೈಯನ್ನು ಅನುಭವಿಸುವಂತೆ ಮಾಡುತ್ತದೆ. ನೀವು ಅದನ್ನು ಕಚ್ಚಿದ ಕೂಡಲೆ ನಿಮ್ಮ ರಸನೇಂದ್ರಿಯವು ಕಾರ್ಯಕ್ಕಿಳಿಯುತ್ತದೆ. ಆ ಹಣ್ಣಿನ ಜಟಿಲವಾದ ರಾಸಾಯನಿಕ ರಚನೆಯಿಂದ ನಿರ್ಮಿಸಲ್ಪಟ್ಟ ಸೂಕ್ಷ್ಮತೆಗಳನ್ನು ನಿಮ್ಮ ರಸಗ್ರಂಥಿಗಳು ಪತ್ತೆಹಚ್ಚುವಾಗ ವಿವಿಧ ಸವಿಗಳ ಮೇಳವೇ ನಿಮ್ಮನ್ನು ಹುರಿದುಂಬಿಸುವುದು. ಹೌದು, ಯೆಹೋವನನ್ನು ಕೊಂಡಾಡಲು ನಮಗೆ ಪ್ರತಿಯೊಂದು ಕಾರಣವೂ ಇರುತ್ತದೆ: “ನಿನಗೆ ಭಯಪಡುವವರಿಗೆ ನೀನು ಶೇಖರಿಸಿಟ್ಟಿರುವ ನಿನ್ನ ಒಳ್ಳೇತನವೆಷ್ಟೋ ಹೇರಳವಾಗಿದೆ.” (ಕೀರ್ತನೆ 31:19, NW) ಆದರೆ ದೇವಭಯವುಳ್ಳವರಿಗಾಗಿ ಒಳ್ಳೇತನವನ್ನು ಯೆಹೋವನು “ಶೇಖರಿಸಿಟ್ಟಿರು”ವುದಾದರೂ ಹೇಗೆ?
ಒಳ್ಳೇತನದೊಂದಿಗೆ ಬರುವ ನಿತ್ಯವಾದ ಪ್ರಯೋಜನಗಳು
12. ಯೆಹೋವನ ಯಾವ ಒದಗಿಸುವಿಕೆಗಳು ಅತಿ ಪ್ರಾಮುಖ್ಯವಾಗಿವೆ, ಮತ್ತು ಏಕೆ?
12 ಯೇಸು ಅಂದದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4) ಶಾರೀರಿಕ ಒದಗಿಸುವಿಕೆಗಳಿಗಿಂತ ಯೆಹೋವನ ಆಧ್ಯಾತ್ಮಿಕ ಒದಗಿಸುವಿಕೆಗಳು ಇನ್ನೂ ಹೆಚ್ಚು ಒಳಿತನ್ನು ಮಾಡಬಲ್ಲವು ನಿಶ್ಚಯ, ಯಾಕಂದರೆ ಅವು ನಿತ್ಯಜೀವಕ್ಕೆ ನಡಿಸುತ್ತವೆ. ಈ ಪುಸ್ತಕದ ಅಧ್ಯಾಯ 8ರಲ್ಲಿ, ಯೆಹೋವನು ಕಡೇ ದಿವಸಗಳಲ್ಲಿ ಒಂದು ಆಧ್ಯಾತ್ಮಿಕ ಪರದೈಸನ್ನು ಅಸ್ತಿತ್ವಕ್ಕೆ ತರಲು ತನ್ನ ಪುನಸ್ಸ್ಥಾಪನಾ ಶಕ್ತಿಯನ್ನು ಉಪಯೋಗಿಸಿದ್ದಾನೆಂಬುದನ್ನು ನಾವು ಗಮನಿಸಿದೆವು. ಆ ಪರದೈಸಿನ ಒಂದು ಮುಖ್ಯ ವೈಶಿಷ್ಟ್ಯವು ಅದರಲ್ಲಿರುವ ಆಧ್ಯಾತ್ಮಿಕ ಆಹಾರದ ಸಮೃದ್ಧಿಯೇ.
13, 14. (ಎ) ಪ್ರವಾದಿ ಯೆಹೆಜ್ಕೇಲನು ದರ್ಶನದಲ್ಲಿ ಏನನ್ನು ಕಂಡನು, ಇಂದು ನಮಗೆ ಅದು ಯಾವ ಅರ್ಥದಲ್ಲಿದೆ? (ಬಿ) ಯೆಹೋವನು ತನ್ನ ನಂಬಿಗಸ್ತ ಸೇವಕರಿಗಾಗಿ ಯಾವ ಜೀವದಾಯಕ ಆತ್ಮಿಕ ಒದಗಿಸುವಿಕೆಗಳನ್ನು ಮಾಡುತ್ತಾನೆ?
13 ಬೈಬಲಿನಲ್ಲಿರುವ ಮಹಾ ಪುನಸ್ಸ್ಥಾಪನಾ ಪ್ರವಾದನೆಗಳೊಂದರಲ್ಲಿ ತಿಳಿಸಲ್ಪಟ್ಟಿರುವಂತೆ, ಪುನಸ್ಸ್ಥಾಪಿಸಲ್ಪಟ್ಟಿರುವ ಮತ್ತು ಮಹಿಮಾಭರಿತವಾದ ಒಂದು ದೇವಾಲಯದ ದರ್ಶನವನ್ನು ಪ್ರವಾದಿಯಾದ ಯೆಹೆಜ್ಕೇಲನಿಗೆ ಕೊಡಲಾಯಿತು. ಆ ದೇವಾಲಯದಿಂದ ನೀರು ಹೊರಟು ಮೆಲ್ಲನೆ ಹರಿಯುತ್ತಾ ಮುಂದುವರಿದಾಗ, ಅದು ಅಗಲವಾಗುತ್ತಾ, ಏರುತ್ತಾ ಪ್ರವಾಹವಾಗಿ “ಇಮ್ಮಡಿ ಪ್ರಮಾಣದ ತೊರೆ” (NW) ಆಯಿತು. ಈ ನದಿಯು ಎಲ್ಲೆಲ್ಲಿ ಹರಿಯುತ್ತಿತ್ತೊ ಅಲ್ಲಲ್ಲಿ ಪ್ರಯೋಜನಕರವಾದ ಆಶೀರ್ವಾದಗಳನ್ನು ತಂದಿತು. ತೊರೆಯ ಎರಡೂ ದಡಗಳಲ್ಲಿ ಬೆಳೆದ ಸಕಲ ಫಲ ವೃಕ್ಷಗಳು ಆಹಾರಕ್ಕಾಗಿ ಹಣ್ಣುಗಳನ್ನೂ ಔಷಧಕ್ಕಾಗಿ ಸೊಪ್ಪನ್ನೂ ಒದಗಿಸಿದವು. ಮತ್ತು ಆ ನದಿಯು ಉಪ್ಪುನೀರಿನ ನಿರ್ಜೀವ ಮೃತ ಸಮುದ್ರಕ್ಕೆ ಸಹ ಜೀವವನ್ನೂ ಉತ್ಪಾದಕಶಕ್ತಿಯನ್ನೂ ಒದಗಿಸಿತು! (ಯೆಹೆಜ್ಕೇಲ 47:1-12) ಆದರೆ ಇದೆಲ್ಲಾದರ ಅರ್ಥವೇನಾಗಿತ್ತು?
14 ಯೆಹೆಜ್ಕೇಲನು ಕಂಡ ದೇವಾಲಯದಿಂದ ಚಿತ್ರಿಸಲ್ಪಟ್ಟಿದ್ದ ಶುದ್ಧಾರಾಧನೆಗಾಗಿರುವ ಯೆಹೋವನ ಏರ್ಪಾಡನ್ನು ಆತನು ಪುನಸ್ಸ್ಥಾಪಿಸಲಿದ್ದಾನೆಂಬುದು ಆ ದರ್ಶನದ ಅರ್ಥವಾಗಿತ್ತು. ಆ ದಾರ್ಶನಿಕ ನದಿಯಂತೆ, ಜೀವಕ್ಕಾಗಿ ಯೆಹೋವನ ವರದಾನಗಳು ಆತನ ಜನರ ಕಡೆಗೆ ಸದಾ ಹೆಚ್ಚುತ್ತಾ ಸಮೃದ್ಧವಾಗಿ ಹರಿಯಲಿದ್ದವು. 1919ರಲ್ಲಿ ಶುದ್ಧಾರಾಧನೆಯ ಪುನಸ್ಸ್ಥಾಪನೆಯಂದಿನಿಂದ ಆರಂಭಿಸಿ, ಯೆಹೋವನು ತನ್ನ ಜನರಿಗೆ ಜೀವದಾಯಕ ಕೊಡುಗೆಗಳನ್ನು ಲಭ್ಯವಾಗುವಂತೆ ಮಾಡಿ ಅವರನ್ನು ಆಶೀರ್ವದಿಸಿದ್ದಾನೆ. ಅದು ಹೇಗೆ? ಹೇಗಂದರೆ ಬೈಬಲ್, ಬೈಬಲ್ ಸಾಹಿತ್ಯ, ಕೂಟಗಳು, ಮತ್ತು ಅಧಿವೇಶನಗಳೆಲ್ಲವು ಲಕ್ಷಗಟ್ಟಲೆ ಜನರಿಗೆ ಪ್ರಾಮುಖ್ಯವಾದ ಸತ್ಯಗಳನ್ನು ತಿಳಿಸಲು ಸಹಾಯಮಾಡಿವೆ. ಅಂಥ ಮಾಧ್ಯಮಗಳ ಮೂಲಕ ಯೆಹೋವನು ಜನರಿಗೆ ಜೀವಕ್ಕಾಗಿರುವ, ತನ್ನ ಅತ್ಯಂತ ಪ್ರಾಮುಖ್ಯವಾದ ವರದಾನದ ಕುರಿತು—ಕ್ರಿಸ್ತನ ಈಡು ಯಜ್ಞದ ಕುರಿತು—ಕಲಿಸಿದ್ದಾನೆ. ಈ ಯಜ್ಞವು ಯೆಹೋವನನ್ನು ನಿಜವಾಗಿ ಪ್ರೀತಿಸಿ ದೇವರಿಗೆ ಭಯಪಡುವವರೆಲ್ಲರಿಗೆ ಆತನ ಮುಂದೆ ಒಂದು ಶುದ್ಧವಾದ ನಿಲುವನ್ನೂ ನಿತ್ಯಜೀವದ ನಿರೀಕ್ಷೆಯನ್ನೂ ತಂದಿರುತ್ತದೆ.a ಆದುದರಿಂದ ಈ ಕಡೇ ದಿವಸಗಳಲ್ಲೆಲ್ಲಾ ಲೋಕವು ಆಧ್ಯಾತ್ಮಿಕ ಕ್ಷಾಮವನ್ನು ಅನುಭವಿಸಿರುವುದಾದರೂ, ಯೆಹೋವನ ಜನರು ಆಧ್ಯಾತ್ಮಿಕ ಔತಣದಲ್ಲಿ ಆನಂದಿಸಿರುತ್ತಾರೆ.—ಯೆಶಾಯ 65:13.
15. ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ನಂಬಿಗಸ್ತ ಮಾನವಜಾತಿಗೆ ಯೆಹೋವನ ಒಳ್ಳೇತನವು ಯಾವ ಅರ್ಥದಲ್ಲಿ ಹರಿಯುವುದು?
15 ಆದರೆ ಈ ಹಳೇ ಲೋಕ ವ್ಯವಸ್ಥೆಯು ತನ್ನ ಅಂತ್ಯವನ್ನು ಮುಟ್ಟಿದ ಬಳಿಕವೂ ಯೆಹೆಜ್ಕೇಲನ ದಾರ್ಶನಿಕ ತೊರೆಯ ಹರಿಯುವಿಕೆಯು ನಿಲ್ಲುವುದಿಲ್ಲ. ಬದಲಿಗೆ ಅದು, ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಇನ್ನಷ್ಟು ಹೆಚ್ಚು ಸಮೃದ್ಧವಾಗಿ ಹರಿಯುವುದು. ಆಗ ಯೆಹೋವನು, ಮೆಸ್ಸೀಯ ರಾಜ್ಯದ ಮೂಲಕ ಕ್ರಿಸ್ತನ ಯಜ್ಞದ ಪೂರ್ಣ ಮೌಲ್ಯವನ್ನು ಅನ್ವಯಿಸುತ್ತಾ, ಕ್ರಮೇಣ ನಂಬಿಗಸ್ತ ಮಾನವಜಾತಿಯನ್ನು ಪರಿಪೂರ್ಣತೆಗೆ ಏರಿಸುವನು. ಆ ಸಮಯದಲ್ಲಿ ನಾವು ಯೆಹೋವನ ಒಳ್ಳೇತನದ ಬಗ್ಗೆ ಅದೆಷ್ಟು ಹರ್ಷಿಸುವೆವು!
ಯೆಹೋವನ ಒಳ್ಳೇತನದ ಅಧಿಕ ವೈಶಿಷ್ಟ್ಯಗಳು
16. ಯೆಹೋವನ ಒಳ್ಳೇತನವು ಇತರ ಗುಣಗಳನ್ನೂ ಆವರಿಸುತ್ತದೆಂದು ಬೈಬಲು ತೋರಿಸುವುದು ಹೇಗೆ, ಮತ್ತು ಅವುಗಳಲ್ಲಿ ಕೆಲವು ಯಾವುವು?
16 ಯೆಹೋವನ ಒಳ್ಳೇತನದಲ್ಲಿ ಉದಾರತೆಗಿಂತ ಹೆಚ್ಚಿನದ್ದು ಒಳಗೂಡಿರುತ್ತದೆ. ದೇವರು ಮೋಶೆಗೆ ಹೇಳಿದ್ದು: “ನನ್ನ ಸರ್ವೋತ್ತಮತ್ವ [“ಸರ್ವ ಒಳ್ಳೇತನ,” NW] ವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು; ಯೆಹೋವನ ನಾಮದ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು.” ತದನಂತರ, ಆ ವೃತ್ತಾಂತವು ತಿಳಿಸುವುದು: “ಯೆಹೋವನು ಮೋಶೆಯ ಎದುರಾಗಿ ಹೋಗುತ್ತಾ ಪ್ರಕಟವಾಗಿ ಹೇಳಿದ್ದೇನಂದರೆ:—ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು [“ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧನು,” NW].” (ವಿಮೋಚನಕಾಂಡ 33:19; 34:6) ಹಾಗಾದರೆ, ಯೆಹೋವನ ಒಳ್ಳೇತನದಲ್ಲಿ ಅನೇಕ ಉತ್ಕೃಷ್ಟ ಗುಣಗಳು ಒಳಗೂಡಿರುತ್ತವೆ. ಇವುಗಳಲ್ಲಿ ಕೇವಲ ಎರಡು ಗುಣಗಳನ್ನು ನಾವೀಗ ಪರಿಶೀಲಿಸೋಣ.
17. ದಯಾಪರತೆ ಎಂದರೇನು, ಮತ್ತು ಯೆಹೋವನು ಅದನ್ನು ಅಪರಿಪೂರ್ಣರಾದ ಮನುಷ್ಯ ಮಾತ್ರದವರಿಗೆ ಹೇಗೆ ಪ್ರದರ್ಶಿಸಿದ್ದಾನೆ?
17 ‘ದಯೆ ಉಳ್ಳವನು.’ ತನ್ನ ಸೃಷ್ಟಿಜೀವಿಗಳೊಂದಿಗೆ ಆತನು ವ್ಯವಹರಿಸುವ ರೀತಿಯ ಕುರಿತು ಈ ಗುಣವು ಬಹಳಷ್ಟನ್ನು ತಿಳಿಸುತ್ತದೆ. ಇತರರ ಮೇಲೆ ಅಧಿಕಾರ ತೋರಿಸುವವರು ವರ್ತಿಸುವ ಮೇರೆಗೆ ಒರಟಾಗಿ, ನಿರ್ದಯವಾಗಿ ಅಥವಾ ಕ್ರೌರ್ಯದಿಂದ ವರ್ತಿಸುವ ಬದಲಿಗೆ ಯೆಹೋವನು ಕೋಮಲನೂ ದಯಾಪರನೂ ಆಗಿರುತ್ತಾನೆ. ಉದಾಹರಣೆಗೆ, ಅಬ್ರಹಾಮನಿಗೆ ಯೆಹೋವನು ಹೇಳಿದ್ದು: “ನೀನಿರುವ ಸ್ಥಳದಿಂದ ದಯವಿಟ್ಟು ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು.” (ಆದಿಕಾಂಡ 13:14, NW) ಅನೇಕ ತರ್ಜುಮೆಗಳು “ದಯವಿಟ್ಟು” ಎಂಬ ಪದವನ್ನು ಬಿಟ್ಟುಬಿಟ್ಟಿವೆ. ಬೈಬಲ್ ವಿದ್ವಾಂಸರು ಹೇಳುವುದೇನೆಂದರೆ ಮೂಲ ಹೀಬ್ರು ಭಾಷೆಯಲ್ಲಿ ಈ ವಚನದಲ್ಲಿ ಒಂದು ಪ್ರತ್ಯಯಪದವಿದ್ದು, ಅದು ಈ ಹೇಳಿಕೆಯನ್ನು ಒಂದು ಆಜ್ಞೆಯಿಂದ ಒಂದು ವಿನಮ್ರ ಬಿನ್ನಹಕ್ಕೆ ಬದಲಾಯಿಸುತ್ತದೆ. ತದ್ರೀತಿಯ ಬೇರೆ ಸಂದರ್ಭಗಳು ಕೂಡ ಇವೆ. (ಆದಿಕಾಂಡ 31:12; ಯೆಹೆಜ್ಕೇಲ 8:5) ವಿಶ್ವದ ಪರಮಾಧಿಕಾರಿ ಪ್ರಭುವು ಮನುಷ್ಯಮಾತ್ರದವರಿಗೆ ವಿನಮ್ರವಾದ ಬಿನ್ನಹವನ್ನು ಮಾಡುತ್ತಿದ್ದಾನೆ. ತುಸು ಊಹಿಸಿಕೊಳ್ಳಿರಿ! ನಿರ್ದಯತೆ, ದಬಾಯಿಸುವಿಕೆ, ಮತ್ತು ಒರಟು ಸ್ವಭಾವವು ಸರ್ವಸಾಮಾನ್ಯವಾಗಿರುವ ಲೋಕದಲ್ಲಿ, ನಮ್ಮ ದೇವರಾದ ಯೆಹೋವನ ಈ ದಯಾಪರತೆಯ ಕುರಿತು ನೆನಸುವುದು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದಲ್ಲವೇ?
18. ಯಾವ ಅರ್ಥದಲ್ಲಿ ಯೆಹೋವನು ‘ಸತ್ಯದಲ್ಲಿ ಸಮೃದ್ಧನಾಗಿದ್ದಾನೆ,’ ಮತ್ತು ಈ ಮಾತುಗಳು ಆಶ್ವಾಸನದಾಯಕವೇಕೆ?
18 ‘ಸತ್ಯದಲ್ಲಿ ಸಮೃದ್ಧನು.’ ಅಪ್ರಾಮಾಣಿಕತೆಯು ಇಂದು ಲೋಕದ ಜೀವನ ರೀತಿಯಾಗಿದೆ. ಆದರೆ ಬೈಬಲು ನಮಗೆ ಮರುಜ್ಞಾಪನವನ್ನೀಯುವುದು: “ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ.” (ಅರಣ್ಯಕಾಂಡ 23:19) ವಾಸ್ತವದಲ್ಲಿ ತೀತ 1:2 ಆತನನ್ನು “ಸುಳ್ಳಾಡದ ದೇವರು” ಎಂದು ಕರೆದಿದೆ. (ಓರೆ ಅಕ್ಷರಗಳು ನಮ್ಮವು.) ಯೆಹೋವನ ಒಳ್ಳೇತನವು ಆತನು ಸುಳ್ಳಾಡುವಂತೆ ಅನುಮತಿಯನ್ನೀಯುವುದಿಲ್ಲ. ಹೀಗಿರುವುದರಿಂದ ಯೆಹೋವನ ವಾಗ್ದಾನಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿವೆ; ಆತನ ಮಾತುಗಳು ಯಾವಾಗಲೂ ಸತ್ಯವಾಗಿ ನೆರವೇರಿಯೇ ತೀರುವವು. ಯೆಹೋವನನ್ನು “ಸತ್ಯದ ದೇವರು” ಎಂಬುದಾಗಿಯೂ ಕರೆಯಲಾಗಿದೆ. (ಕೀರ್ತನೆ 31:5, NW) ಆತನು ಸುಳ್ಳಾಡುವುದರಿಂದ ವಿಮುಖನಾಗಿರುತ್ತಾನೆ ಮಾತ್ರವೇ ಅಲ್ಲ ಹೇರಳವಾದ ಸತ್ಯತೆಯನ್ನು ಪ್ರಕಟಪಡಿಸುವ ದೇವರೂ ಆಗಿದ್ದಾನೆ. ಆತನು ಮಾಹಿತಿಯನ್ನು ಬಚ್ಚಿಡುವುದಿಲ್ಲ ಅಥವಾ ನಿಗೂಢನಲ್ಲ; ಬದಲಿಗೆ ತನ್ನ ಬಳಿಯಿರುವ ಮಿತಿಯಿಲ್ಲದ ಜ್ಞಾನದ ಭಂಡಾರದಿಂದ ಉದಾರವಾಗಿ ತನ್ನ ನಂಬಿಗಸ್ತ ಸೇವಕರಿಗೆ ಜ್ಞಾನೋದಯವನ್ನು ಉಂಟುಮಾಡುತ್ತಾನೆ.b ಅವರು “ಸತ್ಯವನ್ನನುಸರಿಸಿ ನಡೆಯುವವ”ರಾಗುವಂತೆ, ತಾನು ದಯಪಾಲಿಸಿರುವ ಸತ್ಯಗಳಿಗನುಸಾರ ಹೇಗೆ ಜೀವಿಸಬೇಕೆಂತಲೂ ಅವರಿಗೆ ಕಲಿಸುತ್ತಾನೆ. (3 ಯೋಹಾನ 4) ಹೀಗಿರಲಾಗಿ, ಯೆಹೋವನ ಒಳ್ಳೇತನವು ನಮ್ಮನ್ನು ವೈಯಕ್ತಿಕವಾಗಿ ಹೇಗೆ ಪ್ರಭಾವಿಸಬೇಕು?
‘ಯೆಹೋವನ ಒಳ್ಳೇತನದಿಂದಾಗಿ ಕಳೆಯೇರಿದವರಾಗಿರಿ’
19, 20. (ಎ) ಯೆಹೋವನ ಒಳ್ಳೇತನದಲ್ಲಿ ಹವ್ವಳ ಭರವಸೆಯನ್ನು ಸೈತಾನನು ಕೆಡವಿಹಾಕಲು ಪ್ರಯತ್ನಿಸಿದ್ದು ಹೇಗೆ, ಮತ್ತು ಪರಿಣಾಮವೇನಾಯಿತು? (ಬಿ) ಯೆಹೋವನ ಒಳ್ಳೇತನವು ಯುಕ್ತವಾಗಿಯೇ ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಬೇಕು, ಮತ್ತು ಏಕೆ?
19 ಏದೆನ್ ತೋಟದಲ್ಲಿ ಸೈತಾನನು ಹವ್ವಳನ್ನು ಶೋಧನೆಗೆ ಒಳಪಡಿಸಿದಾಗ, ಅವನು ಮೊದಲು ಯೆಹೋವನ ಒಳ್ಳೇತನದ ಮೇಲೆ ಅವಳಿಗಿದ್ದ ಭರವಸೆಯನ್ನು ಕೆಡವಿಹಾಕಲು ನಯವಾಗಿ ಪ್ರಯತ್ನಿಸಿದನು. ಯೆಹೋವನು ಆದಾಮನಿಗೆ ಹೀಗೆ ಹೇಳಿದ್ದನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು.” ಆ ತೋಟವನ್ನು ಅಲಂಕರಿಸಿದ್ದ ಸಾವಿರಾರು ವೃಕ್ಷಗಳಲ್ಲಿ ಕೇವಲ ಒಂದು ವೃಕ್ಷವು ಮಾತ್ರ ಯೆಹೋವನಿಂದ ನಿಷೇಧಿಸಲ್ಪಟ್ಟಿತ್ತು. ಆದರೂ, ಸೈತಾನನು ಹವ್ವಳಿಗೆ ತನ್ನ ಮೊದಲ ಪ್ರಶ್ನೆಯನ್ನು ಹೇಗೆ ಹಾಕಿದನೆಂದು ಗಮನಿಸಿರಿ: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? (ಆದಿಕಾಂಡ 2:9, 16; 3:1) ಯೆಹೋವನು ಯಾವುದೋ ಒಂದು ಒಳ್ಳೆಯ ಸಂಗತಿಯನ್ನು ತಮ್ಮಿಂದ ತಡೆದಿಟ್ಟಿದ್ದಾನೆಂದು ಹವ್ವಳು ನೆನಸುವಂತೆ ಸೈತಾನನು ಯೆಹೋವನ ಮಾತುಗಳನ್ನು ವಕ್ರಗೊಳಿಸಿದನು. ಅವನ ಈ ಕುತಂತ್ರವು ಪರಿಣಾಮಕಾರಿಯಾದದ್ದು ವಿಷಾದವೇ ಸರಿ. ಅವಳಿಗಿದ್ದ ಸಮಸ್ತವನ್ನೂ ಆಕೆಗೆ ಅನುಗ್ರಹಿಸಿದ್ದ ದೇವರ ಒಳ್ಳೇತನವನ್ನು ಹವ್ವಳು, ಅವಳ ಅನಂತರದ ಎಷ್ಟೋ ಮಂದಿ ಸ್ತ್ರೀಪುರುಷರಂತೆಯೇ, ಸಂದೇಹಿಸತೊಡಗಿದಳು.
20 ಅಂಥ ಸಂದೇಹಗಳಿಂದ ಉಂಟಾದ ದುಃಖ ಮತ್ತು ದುರವಸ್ಥೆಯ ಅಗಾಧತೆಯನ್ನು ನಾವು ಬಲ್ಲೆವು. ಆದುದರಿಂದ ನಾವು ಯೆರೆಮೀಯ 31:12 ರ (NW) ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳೋಣ: “ಅವರು ನಿಶ್ಚಯವಾಗಿಯೂ . . . ಯೆಹೋವನ ಒಳ್ಳೇತನದಿಂದಾಗಿ ಕಳೆಯೇರುವರು.” ಯೆಹೋವನ ಒಳ್ಳೇತನವು ನಮ್ಮನ್ನು ಸಂತೋಷದಿಂದ ಕಳೆಯೇರುವಂತೆ ಮಾಡಬೇಕು ನಿಶ್ಚಯ. ಅಷ್ಟೊಂದು ಒಳ್ಳೇತನದಿಂದ ತುಂಬಿರುವ ನಮ್ಮ ದೇವರ ಹೇತುಗಳನ್ನು ನಾವೆಂದೂ ಸಂದೇಹಿಸಬೇಕಾಗಿಲ್ಲ. ನಾವಾತನಲ್ಲಿ ಪೂರ್ಣವಾಗಿ ಭರವಸೆಯನ್ನಿಡಬಹುದು, ಯಾಕಂದರೆ ತನ್ನನ್ನು ಪ್ರೀತಿಸುವವರಿಗಾಗಿ ಆತನು ಒಳ್ಳೇದನ್ನೇ ಅಲ್ಲದೆ ಬೇರೇನನ್ನೂ ಅಪೇಕ್ಷಿಸುವುದಿಲ್ಲ.
21, 22. (ಎ) ಯೆಹೋವನ ಒಳ್ಳೇತನಕ್ಕೆ ನೀವು ಸ್ಪಂದಿಸಲು ಇಷ್ಟಪಡುವ ಕೆಲವು ಮಾರ್ಗಗಳು ಯಾವುವು? (ಬಿ) ಮುಂದಿನ ಅಧ್ಯಾಯದಲ್ಲಿ ನಾವು ಯಾವ ಗುಣವನ್ನು ಚರ್ಚಿಸುವೆವು, ಮತ್ತು ಅದು ಒಳ್ಳೇತನದಿಂದ ಹೇಗೆ ಭಿನ್ನವಾಗಿದೆ?
21 ಅದಲ್ಲದೆ, ದೇವರ ಒಳ್ಳೇತನದ ಕುರಿತಾಗಿ ಇತರರೊಂದಿಗೆ ಮಾತಾಡುವ ಸಂದರ್ಭವು ನಮಗೆ ದೊರೆತಾಗ ನಾವು ಉಲ್ಲಾಸಪಡುತ್ತೇವೆ. ಯೆಹೋವನ ಜನರ ಕುರಿತು ಕೀರ್ತನೆ 145:7 ಹೇಳುವುದು: “ಜನರು ನಿನ್ನ ಮಹೋಪಕಾರವನ್ನು [“ಒಳ್ಳೇತನದ ಸಮೃದ್ಧಿಯನ್ನು,” NW] ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು.” ನಾವು ಜೀವಿಸುವ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ನಾವು ಯೆಹೋವನ ಒಳ್ಳೇತನದಿಂದ ಪ್ರಯೋಜನ ಹೊಂದುತ್ತೇವೆ. ಸಾಧ್ಯವಾದಷ್ಟು ನಿರ್ದಿಷ್ಟವಾಗಿ ತಿಳಿಸುತ್ತಾ, ಯೆಹೋವನ ಒಳ್ಳೇತನಕ್ಕಾಗಿ ಪ್ರತಿ ದಿನ ಉಪಕಾರ ಹೇಳುವ ರೂಢಿಯನ್ನು ನಾವೇಕೆ ಮಾಡಿಕೊಳ್ಳಬಾರದು? ಆ ಗುಣದ ಕುರಿತು ಯೋಚಿಸುತ್ತಾ, ಅದಕ್ಕಾಗಿ ದಿನಂಪ್ರತಿ ಯೆಹೋವನಿಗೆ ಉಪಕಾರ ಹೇಳುತ್ತಾ, ಮತ್ತು ಅದರ ಕುರಿತು ಇತರರಿಗೆ ತಿಳಿಸುತ್ತಾ ಇರುವ ಮೂಲಕ ನಮ್ಮ ಒಳ್ಳೆಯ ದೇವರನ್ನು ಅನುಕರಿಸಲು ನಮಗೆ ಸಹಾಯವು ಸಿಗುವುದು. ಯೆಹೋವನಂತೆ ನಾವೂ ಒಳ್ಳೇದನ್ನು ಮಾಡುವ ಮಾರ್ಗಗಳನ್ನು ಹುಡುಕುವುದಾದರೆ, ಆತನಿಗೆ ಸದಾ ಸಮೀಪ ಬರುತ್ತಿರುವೆವು. ವೃದ್ಧ ಅಪೊಸ್ತಲ ಯೋಹಾನನು ಬರೆದದ್ದು: “ಪ್ರಿಯನೇ, ನೀನು ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು; ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ.”—3 ಯೋಹಾನ 11.
22 ಯೆಹೋವನ ಒಳ್ಳೇತನವು ಬೇರೆ ಗುಣಲಕ್ಷಣಗಳೊಂದಿಗೂ ಜೊತೆಗೂಡಿರುತ್ತದೆ. ಉದಾಹರಣೆಗೆ, ದೇವರು “ಪ್ರೀತಿಪೂರ್ವಕ ದಯೆಯಲ್ಲಿ” ಅಥವಾ ನಿಷ್ಠಾವಂತ ಪ್ರೀತಿಯಲ್ಲಿ “ಸಮೃದ್ಧ”ನಾಗಿದ್ದಾನೆ. (ವಿಮೋಚನಕಾಂಡ 34:6, NW) ಈ ಗುಣವು ಒಳ್ಳೇತನದಂತೆ ಎಲ್ಲರಿಗೂ ತೋರಿಸಲ್ಪಡುವುದಿಲ್ಲ, ಯಾಕಂದರೆ ಯೆಹೋವನು ಇದನ್ನು ನಿರ್ದಿಷ್ಟವಾಗಿ ತನ್ನ ನಂಬಿಗಸ್ತ ಸೇವಕರ ಕಡೆಗೆ ವ್ಯಕ್ತಪಡಿಸುತ್ತಾನೆ. ಮುಂದಿನ ಅಧ್ಯಾಯದಲ್ಲಿ, ಆತನು ಅದನ್ನು ಹೇಗೆ ಮಾಡುತ್ತಾನೆಂಬುದನ್ನು ನಾವು ಕಲಿಯಲಿದ್ದೇವೆ.
a ಯೆಹೋವನ ಒಳ್ಳೇತನದ ಬಗ್ಗೆ, ಈಡು ಯಜ್ಞಕ್ಕಿಂತ ಹೆಚ್ಚು ಶ್ರೇಷ್ಠವಾದ ಉದಾಹರಣೆಯು ಬೇರೊಂದು ಇರಲಾರದು. ಆರಿಸಿಕೊಳ್ಳಬಹುದಾಗಿದ್ದ ಕೋಟ್ಯನುಕೋಟಿ ಆತ್ಮಜೀವಿಗಳು ಇದ್ದಿರಲಾಗಿ, ನಮ್ಮ ಪರವಾಗಿ ಸಾಯಲು ದೇವರು ಆದುಕೊಂಡದ್ದು ತನ್ನ ಪ್ರಿಯ, ಏಕಜಾತ ಪುತ್ರನನ್ನೇ.
b ಯುಕ್ತವಾಗಿಯೇ, ಬೈಬಲು ಸತ್ಯವನ್ನು ಬೆಳಕಿನೊಂದಿಗೆ ಜತೆಗೂಡಿಸಿದೆ. “ನಿನ್ನ ಸತ್ಯ ಹಾಗೂ ಬೆಳಕನ್ನು ಕಳುಹಿಸು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 43:3, NW) ಯಾರು ಆತನಿಂದ ಕಲಿಸಲ್ಪಡಲು ಅಥವಾ ಜ್ಞಾನೋದಯ ಪಡೆಯಲು ಇಚ್ಛಿಸುತ್ತಾರೋ ಅವರ ಮೇಲೆ ಯೆಹೋವನು ಸಮೃದ್ಧವಾದ ಆತ್ಮಿಕ ಬೆಳಕನ್ನು ಬೀರುತ್ತಾನೆ.—2 ಕೊರಿಂಥ 4:6; 1 ಯೋಹಾನ 1:5.