ಬೈಬಲಿನ ದೃಷ್ಟಿಕೋನ
ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರು!
“ನಾನು ಅನರ್ಹಳು ಎಂಬ ಭಾವನೆಗಳಿಂದ ನನ್ನ ಜೀವಿತದಲ್ಲಿ ಯಾವಾಗಲೂ ನೋವನ್ನು ಅನುಭವಿಸಿದ್ದೇನೆ. ನಾನು ಯೆಹೋವನನ್ನು ಎಷ್ಟೇ ಪ್ರೀತಿಸಿದರೂ ಅಥವಾ ಆತನಿಗೆ ಸೇವೆಯನ್ನು ಸಲ್ಲಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅದು ನಿಷ್ಪ್ರಯೋಜಕವಾಗಿದೆ ಎಂದು ನನಗೆ ಯಾವಾಗಲೂ ಅನಿಸುತ್ತದೆ,” ಎಂದು ಕ್ರೈಸ್ತ ಸ್ತ್ರೀಯೊಬ್ಬಳು ಬರೆದಳು.
ಅಸಮರ್ಥತೆ ಅಥವಾ ಅನರ್ಹತೆಯ ಆಳವಾದ ಭಾವನೆಗಳೊಂದಿಗೆ ಹೋರಾಡುತ್ತಿರುವ ಯಾರಾದರೊಬ್ಬರ ಪರಿಚಯ ನಿಮಗಿದೆಯೇ? ಅಥವಾ ಕೆಲವೊಮ್ಮೆ ನಿಮಗೇ ಅಂತಹ ಅನಿಸಿಕೆಗಳು ಉಂಟಾಗುತ್ತವೋ? ಅಂತಹ ಅನಿಸಿಕೆಗಳು ಸಾಮಾನ್ಯ. ಮತ್ತು ಇದು ದೇವರ ನಂಬಿಗಸ್ತ ಆರಾಧಕರ ಮಧ್ಯೆಯೂ ಇದೆ. ಯಾರೊಬ್ಬರೂ “ನಿಭಾಯಿಸಲು ಕಷ್ಟಕರವಾದ ಸಮಯಗಳಲ್ಲಿ” ಜೀವಿಸುತ್ತಿರುವ ಪರಿಣಾಮಗಳಿಗೆ ಹೊರತಾಗಿಲ್ಲ. “ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಆಗಿರುವ ಜನರಿಂದ, ಅನೇಕರು ತಿರಸ್ಕಾರ ಮತ್ತು ದೂಷಣೆಯನ್ನು ಅನುಭವಿಸಿದ್ದಾರೆ. “ಕಡೇ ದಿವಸಗಳಲ್ಲಿ” ಇಂತಹ ಗುಣಗಳು ವ್ಯಾಪಕವಾಗಿವೆ. (2 ತಿಮೊಥೆಯ 3:1-5) ಇಂತಹ ನೋವಿನ ಅನುಭವಗಳು ಆಳವಾದ ಭಾವನಾತ್ಮಕ ಗಾಯಗಳನ್ನು ಉಂಟುಮಾಡಬಹುದು. ಇದು ಸಂಪೂರ್ಣವಾಗಿ ಅನರ್ಹರೆಂಬ ಭಾವನೆಯನ್ನು ಮನದಲ್ಲಿ ಮೂಡಿಸಬಹುದು.
ಇನ್ನೊಂದು ಕಡೆ, ಜನರು ತಮಗಾಗಿ ಅತ್ಯಂತ ಉಚ್ಚಮಟ್ಟಗಳನ್ನು ಸ್ಥಾಪಿಸಿಕೊಳ್ಳುವಾಗ ನಕಾರಾತ್ಮಕ ಭಾವನೆಗಳು ಏಳಬಹುದು. ನೀವು ಈ ಮಟ್ಟಗಳನ್ನು ತಲಪಲು ಅಸಮರ್ಥರಾದಾಗ, ನಿಷ್ಪ್ರಯೋಜಕ ಎಂಬ ಭಾವನೆಯನ್ನು ಇದು ಪುಷ್ಟಿಗೊಳಿಸುತ್ತದೆ. ಕಾರಣವು ಏನೇ ಆಗಿರಲಿ, ಅನರ್ಹತೆಯ ಅಂತಹ ಭಾವನೆಗಳೊಂದಿಗೆ ಹೋರಾಡುತ್ತಿರುವವರು, ದೇವರು ಅಥವಾ ಇನ್ಯಾರೇ ಆಗಲಿ ತಮ್ಮನ್ನು ಏಕೆ ಪ್ರೀತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅಸಮರ್ಥರಾಗಬಹುದು. ಅಷ್ಟುಮಾತ್ರವಲ್ಲದೆ, ತಮ್ಮನ್ನು ಯಾರೂ ಪ್ರೀತಿಸುವುದಿಲ್ಲ ಎಂದು ಸಹ ಅವರು ನೆನಸಬಹುದು.
ಆದರೆ, ಯೆಹೋವ ದೇವರು ಈ ರೀತಿ ನೆನಸುವುದಿಲ್ಲ! ಅದಕ್ಕೆ ಬದಲಾಗಿ, ಯೆಹೋವನು ತನ್ನ ವಾಕ್ಯದಲ್ಲಿ, ತನ್ನ ವಿರೋಧಿಯಾಗಿರುವ ಪಿಶಾಚನಾದ ಸೈತಾನನ “ತಂತ್ರೋಪಾಯಗಳಿಂದ” ಕಾಪಾಡಿಕೊಳ್ಳುವಂತೆ ನಮಗೆ ಎಚ್ಚರಿಕೆಯನ್ನು ನೀಡುತ್ತಾನೆ. (ಎಫೆಸ 6:11, ಜ್ಯೂಯಿಷ್ ನ್ಯೂ ಟೆಸ್ಟಮೆಂಟ್) ಸೈತಾನನಾದರೋ, ನಮ್ಮ ದೇವರಿಗೆ ಆರಾಧನೆಯನ್ನು ಸಲ್ಲಿಸದಂತೆ ನಮ್ಮನ್ನು ತಡೆಯಲು ಸಕಲ ತಂತ್ರೋಪಾಯಗಳನ್ನು ಉಪಯೋಗಿಸುತ್ತಾನೆ. ಈ ರೀತಿಯಲ್ಲಿ ಸೈತಾನನು, ನಾವು ಅನರ್ಹರು, ಯೆಹೋವನು ನಮ್ಮನ್ನು ಎಂದಿಗೂ ಪ್ರೀತಿಸುವುದಿಲ್ಲ ಎಂಬಂತಹ ಭಾವನೆಯ ಬೀಜವನ್ನು ನಮ್ಮ ಮನದಲ್ಲಿ ಬಿತ್ತುತ್ತಾನೆ. ಆದರೆ ಸೈತಾನನು “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಆಗಿದ್ದಾನೆ. (ಯೋಹಾನ 8:44) ಆದುದರಿಂದ, ಅವನ ತಂತ್ರೋಪಾಯಗಳಿಗೆ ನಾವು ಮೋಸಹೋಗಬಾರದು! ನಾವು ಯೆಹೋವನ ದೃಷ್ಟಿಯಲ್ಲಿ ಎಷ್ಟು ಅಮೂಲ್ಯರಾಗಿದ್ದೇವೆಂಬ ಆಶ್ವಾಸನೆಯನ್ನು ಆತನು ತನ್ನ ವಾಕ್ಯವಾದ ಬೈಬಲಿನಲ್ಲಿ ನೀಡುತ್ತಾನೆ.
ನಮ್ಮ ಯೋಗ್ಯತೆಯ ಕುರಿತ ಸಮತೂಕದ ನೋಟ
ನಿರುತ್ಸಾಹದಿಂದ ನಮ್ಮ ಮೇಲಾಗುವ ನಕಾರಾತ್ಮಕ ಪರಿಣಾಮದ ಕುರಿತಾಗಿ ಬೈಬಲು ಎಚ್ಚರಿಕೆಯನ್ನು ನೀಡುತ್ತದೆ. ಜ್ಞಾನೋಕ್ತಿ 24:10 ಹೇಳುವುದು: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” ದೀರ್ಘಕಾಲದಿಂದಿರುವ ನಕಾರಾತ್ಮಕ ಭಾವನೆಗಳು ನಮ್ಮ ಶಕ್ತಿಯನ್ನು ಕಸಿದುಕೊಂಡು, ನಮ್ಮನ್ನು ದುರ್ಬಲರನ್ನಾಗಿಯೂ ಸುಲಭ ಭೇದ್ಯರನ್ನಾಗಿಯೂ ಮಾಡುತ್ತದೆ. ಸೈತಾನನು ಇದನ್ನು ಚೆನ್ನಾಗಿ ಬಲ್ಲನು ಎಂಬ ವಿಷಯವಂತೂ ಖಂಡಿತ. ಅನರ್ಹ ಭಾವನೆಗಳಿಂದ ನಮ್ಮ ಹೃದಯವು ನೋವನ್ನು ಅನುಭವಿಸುತ್ತಿರುವುದಾದರೆ, ಅದು ಮನಸ್ಸಿಗೆ ತುಂಬ ವೇದನಾಮಯವಾಗಿರುತ್ತದೆ. ಮತ್ತು ಅದನ್ನು ಸೈತಾನನು ಶೋಷಿಸಲು ಪ್ರಯತ್ನಗಳನ್ನು ಮಾಡುವಾಗ, ಪರಿಸ್ಥಿತಿಯು ಇನ್ನೂ ಹೆಚ್ಚು ಹೊರೆಯಾಗಿ ಪರಿಣಮಿಸುತ್ತದೆ.
ಆದುದರಿಂದ, ನಮ್ಮ ಯೋಗ್ಯತೆಯ ಬಗ್ಗೆ ಸ್ವಸ್ಥಕರವೂ ಸಮತೂಕವೂ ಆದಂತಹ ನೋಟವನ್ನು ಹೊಂದಿರುವುದು ಅತಿ ಪ್ರಾಮುಖ್ಯ. “ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು” ಎಂದು ಅಪೊಸ್ತಲ ಪೌಲನು ಪ್ರಚೋದಿಸುತ್ತಾನೆ. (ರೋಮಾಪುರ 12:3) ಮತ್ತೊಂದು ಭಾಷಾಂತರವು ಈ ರೀತಿಯಲ್ಲಿ ಹೇಳುತ್ತದೆ: “ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ, ತನ್ನ ಸ್ವಂತ ಯೋಗ್ಯತೆಗಿಂತ ಹೆಚ್ಚಾಗಿ ಯಾರೊಬ್ಬನೂ ನೆನಸಿಕೊಳ್ಳಬಾರದು, ಬದಲಿಗೆ ತನ್ನ ಕುರಿತಾಗಿ ಸಮತೂಕದಿಂದ ಬೆಲೆಕಟ್ಟಬೇಕು.” (ಚಾರ್ಲ್ಸ್ ಬಿ. ವಿಲ್ಯಮ್ಸ್) ಹೀಗೆ, ಶಾಸ್ತ್ರವಚನವು ನಾವು ನಮ್ಮ ಬಗ್ಗೆ ಸಮತೂಕದ ನೋಟವನ್ನು ಹೊಂದಿರುವಂತೆ ಉತ್ತೇಜಿಸುತ್ತದೆ. ನಾವು ದುರಹಂಕಾರಿಗಳಾಗಿರಬಾರದು ಮತ್ತು ಅದೇ ಸಮಯದಲ್ಲಿ, ಅದಕ್ಕೆ ತೀರ ವಿರುದ್ಧವಾಗಿಯೂ ಹೋಗಬಾರದು. ಏಕೆಂದರೆ, ಸ್ವಸ್ಥಮನಸ್ಸನ್ನು ಹೊಂದಿರಬೇಕಾದರೆ, ನಮ್ಮ ಬಗ್ಗೆ ಸದಭಿಪ್ರಾಯವಿರುವುದು ಅಗತ್ಯ ಎಂದು ಪೌಲನು ಹೇಳುತ್ತಾನೆ. ಹೌದು, ನಾವು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೇವೆಂದು ದೈವಿಕ ಪ್ರೇರಣೆಯಿಂದ ನಮಗೆ ಪೌಲನು ಸೂಚಿಸುತ್ತಾನೆ.
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಯೇಸುವಿನ ನುಡಿಗಳಲ್ಲಿ ಈ ಸ್ವ-ಯೋಗ್ಯತೆಯ ಸಮತೂಕದ ಭಾವವು ಸಹ ಅಡಕವಾಗಿದೆ. (ಮತ್ತಾಯ 22:39) “ನಿನ್ನಂತೆಯೇ” ಎಂಬ ಪದಗಳು ಸ್ವ-ಅರ್ಹತೆ ಅಥವಾ ಸ್ವ-ಗೌರವದ ಒಂದಿಷ್ಟು ಭಾವನೆಯು ನಮ್ಮಲ್ಲಿರಬೇಕು ಎಂಬುದನ್ನು ಸೂಚಿಸುತ್ತದೆ. ನಮ್ಮಲ್ಲಿ ಕುಂದುಕೊರತೆಗಳಿವೆ ಮತ್ತು ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ನಿಜ. ಆದರೆ, ದೇವರನ್ನು ಪ್ರಸನ್ನಗೊಳಿಸಲು ನಾವು ಪರಿಶ್ರಮಪಡುತ್ತಿರುವಾಗ, ನಮ್ಮ ತಪ್ಪುಗಳ ಕುರಿತಾಗಿ ವಿಷಾದಿಸಿ, ಆತನ ಕ್ಷಮಾಪಣೆಯನ್ನು ಕೇಳಿಕೊಳ್ಳುವಾಗ, ಆಗಲೂ ನಮಗೆ ಒಂದಿಷ್ಟು ಸ್ವ-ಅರ್ಹತೆ ಇರಬಲ್ಲದು. ನಮ್ಮ ದೋಷಿ ಹೃದಯಗಳು ಹಾಗಿಲ್ಲವೆಂದು ಖಂಡಿಸುತ್ತಿರಬಹುದು, ಆದರೆ “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿ”ದ್ದಾನೆ ಎಂಬುದನ್ನು ಜ್ಞಾಪಕದಲ್ಲಿಡಬೇಕು. (1 ಯೋಹಾನ 3:20) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸ್ವತಃ ನಮ್ಮ ಕುರಿತು ಇರುವ ಅಭಿಪ್ರಾಯಕ್ಕಿಂತಲೂ ತೀರ ಭಿನ್ನವಾಗಿ ಯೆಹೋವನು ನಮ್ಮನ್ನು ನೋಡಬಹುದು.
ಮುರಿದ ಮನಸ್ಸು, ಕುಗ್ಗಿಹೋದವರು
ಕೀರ್ತನೆಗಾರನಾದ ದಾವೀದನು ಬರೆದುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” ಈ ವಚನದ ಕುರಿತಾಗಿ ಹೇಳಿಕೆಯನ್ನು ನೀಡುತ್ತಾ, ಮ್ಯಾಥ್ಯು ಹೆನ್ರಿಸ್ ಕಾಮೆಂಟರಿ ಆನ್ ದ ಹೋಲ್ ಬೈಬಲ್ ಹೇಳುವುದು: “ಇದು ನೀತಿವಂತರ ಗುಣಲಕ್ಷಣವಾಗಿದೆ. . . . ಅವರು ಮನಮುರಿದವರೂ ಕುಗ್ಗಿದವರೂ, ಪಾಪವನ್ನು ನಮ್ರಭಾವದಿಂದ ಒಪ್ಪಿಕೊಳ್ಳುವವರೂ, ತಮ್ಮ ಸ್ವಂತ ಹಿತವನ್ನು ನೋಡಿಕೊಳ್ಳದವರೂ ಆಗಿರುತ್ತಾರೆ; ಅವರು ತಮ್ಮನ್ನು ಸ್ವಂತ ದೃಷ್ಟಿಯಲ್ಲಿ ಕೀಳಾಗಿ ನೆನಸಿಕೊಳ್ಳುತ್ತಾರೆ ಮತ್ತು ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿಲ್ಲದವರು ಆಗಿರುತ್ತಾರೆ.”
‘ಮುರಿದ ಮನಸ್ಸುಳ್ಳವರು’ ಅಥವಾ ‘ಕುಗ್ಗಿಹೋದವರು,’ ಯೆಹೋವನು ತಮ್ಮ ಸಮೀಪದಲ್ಲಿಲ್ಲ ಎಂದು ನೆನಸಬಹುದು ಮತ್ತು ಆತನ ದೃಷ್ಟಿಯಲ್ಲಿ ತಾವು ತೀರ ಅಮುಖ್ಯರು ಎಂದು ನೆನಸಬಹುದು. ಆದರೆ ವಿಷಯವು ಹಾಗಿರುವುದಿಲ್ಲ. “ತಮ್ಮ ಸ್ವಂತ ದೃಷ್ಟಿಯಲ್ಲಿ ಕೀಳಾಗಿ” ನೆನಸಿಕೊಳ್ಳುವವರನ್ನು ಯೆಹೋವನು ಎಂದಿಗೂ ಕೈಬಿಡುವುದಿಲ್ಲವೆಂದು ದಾವೀದನ ಮಾತುಗಳು ನಮಗೆ ಆಶ್ವಾಸನೆಯನ್ನು ನೀಡುತ್ತದೆ. ನಮ್ಮ ಕರುಣಾಳಾದ ದೇವರು ಅಂತಹ ಸಂದರ್ಭಗಳಲ್ಲಿ ತನ್ನ ಅಗತ್ಯವು ನಮಗೆ ಇನ್ನೂ ಪ್ರಾಮುಖ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾನೆ ಮತ್ತು ಹೆಚ್ಚು ಹತ್ತಿರವಾಗುತ್ತಾನೆ.
ಈ ಉದಾಹರಣೆಯನ್ನು ಪರಿಗಣಿಸಿರಿ. ಕೆಲವು ವರ್ಷಗಳ ಹಿಂದೆ, ಒಬ್ಬ ತಾಯಿಯು ತನ್ನ ಎರಡು ವರ್ಷದ ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದಳು. ಏಕೆಂದರೆ ಗಂಟಲಿನ ಉರಿಯೂತದಿಂದ ಅವನ ಸ್ಥಿತಿಯು ಗಂಭೀರವಾಗಿತ್ತು. ಆ ಹುಡುಗನನ್ನು ಪರೀಕ್ಷಿಸಿದ ಅನಂತರ, ಅಂದಿನ ರಾತ್ರಿ ಅವನು ಆಸ್ಪತ್ರೆಯಲ್ಲಿಯೇ ಇರಬೇಕೆಂದು ವೈದ್ಯರು ತಾಯಿಗೆ ಹೇಳಿದರು. ಆ ರಾತ್ರಿಯನ್ನು ತಾಯಿ ಎಲ್ಲಿ ಕಳೆದಳು? ತನ್ನ ಮಗನ ಹಾಸಿಗೆಯ ಪಕ್ಕದಲ್ಲಿಯೇ, ಇಡೀ ರಾತ್ರಿಯನ್ನು ಆಸ್ಪತ್ರೆಯ ಕೋಣೆಯಲ್ಲಿ ಒಂದು ಕುರ್ಚಿಯಲ್ಲಿ ಕುಳಿತು ಕಳೆದಳು. ಅವಳ ಮುದ್ದಿನ ಮಗನು ತೀರ ಅಸ್ವಸ್ಥನಾಗಿದ್ದನು ಮತ್ತು ಅವಳು ಅವನ ಪಕ್ಕದಲ್ಲಿರುವುದು ಅನಿವಾರ್ಯವಾಗಿತ್ತು. ನಾವು ಯಾರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೋ ಆ ಪ್ರೀತಿಪರ ಸ್ವರ್ಗೀಯ ತಂದೆಯು ಇನ್ನೂ ಹೆಚ್ಚಾಗಿ ಕಾಳಜಿವಹಿಸುತ್ತಾನೆ ಎಂಬುದನ್ನು ನಾವು ಖಂಡಿತವಾಗಿಯೂ ನಿರೀಕ್ಷಿಸಸಾಧ್ಯವಿದೆ. (ಆದಿಕಾಂಡ 1:26; ಯೆಶಾಯ 49:15) ನಾವು “ಮುರಿದ ಮನಸ್ಸುಳ್ಳವ”ರಾಗಿರುವಾಗ, ಯೆಹೋವನು ಒಬ್ಬ ಪ್ರೀತಿಪರ ತಂದೆಯೋಪಾದಿ “ನೆರವಾಗುತ್ತಾನೆ.” ಅಷ್ಟುಮಾತ್ರವಲ್ಲದೆ, ಆತನು ಗಮನಕೊಡುವವನು, ಆಸಕ್ತಿಯುಳ್ಳವನು ಮತ್ತು ಸಹಾಯಮಾಡಲು ಯಾವಾಗಲೂ ಸಿದ್ಧನಾಗಿರುವವನೂ ಆಗಿರುತ್ತಾನೆ ಎಂದು ಕೀರ್ತನೆ 34:18ರ ಹೃದಯಸ್ಪರ್ಶಿ ನುಡಿಗಳು ನಮಗೆ ಆಶ್ವಾಸನೆಯನ್ನು ನೀಡುತ್ತದೆ.—ಕೀರ್ತನೆ 147:1, 3.
“ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು”
ತನ್ನ ಭೌಮಿಕ ಶುಶ್ರೂಷೆಯ ಸಮಯದಲ್ಲಿ, ಯೆಹೋವನ ಆಲೋಚನೆಗಳು, ಭಾವನೆಗಳು, ಮತ್ತು ತನ್ನ ಭೌಮಿಕ ಸೇವಕರ ಬಗ್ಗೆ ಯೆಹೋವನಿಗಿರುವ ಅನಿಸಿಕೆಗಳ ಕುರಿತಾಗಿ ಹೆಚ್ಚಿನದ್ದನ್ನು ಯೇಸು ಪ್ರಕಟಪಡಿಸಿದನು. ಯೆಹೋವನ ದೃಷ್ಟಿಯಲ್ಲಿ ಶಿಷ್ಯರಿಗಿರುವ ಮೌಲ್ಯದ ಕುರಿತು ಯೇಸು ಒಂದಕ್ಕಿಂತಲೂ ಹೆಚ್ಚು ಬಾರಿ ಆಶ್ವಾಸನೆಯನ್ನು ನೀಡಿದನು.—ಮತ್ತಾಯ 6:26; 12:12.
ಉದಾಹರಣೆಗೆ, ತನ್ನ ಒಬ್ಬೊಬ್ಬ ಶಿಷ್ಯನ ಅರ್ಹತೆಯನ್ನು ದೃಷ್ಟಾಂತಿಸುತ್ತಾ ಯೇಸು ಹೇಳಿದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಆ ನುಡಿಗಳು ಪ್ರಥಮ ಶತಮಾನದ ಯೇಸುವಿನ ಕೇಳುಗರಿಗೆ ಏನನ್ನು ಅರ್ಥೈಸಿರಬಹುದು ಎಂಬುದನ್ನು ಪರಿಗಣಿಸಿರಿ.
ಆಹಾರಕ್ಕೆ ಉಪಯೋಗಿಸುತ್ತಿದ್ದ ಪಕ್ಷಿಗಳಲ್ಲಿ ಗುಬ್ಬಿಗಳು ಅತ್ಯಂತ ಅಗ್ಗವಾಗಿದ್ದವು ಎಂಬುದು ಸುವ್ಯಕ್ತ. ಈ ಪುಟ್ಟ ಹಕ್ಕಿಗಳ ಪುಕ್ಕಗಳನ್ನು ತೆಗೆದು, ಮರದ ಕೋಲುಗಳಿಗೆ ಚುಚ್ಚಿ, ಅವನ್ನು ಕಬಾಬ್ಗಳಂತೆ ಸುಡಲಾಗುತ್ತಿತ್ತು. ಬಡ ಸ್ತ್ರೀಯರು ಎಷ್ಟು ಗುಬ್ಬಿಗಳನ್ನು ಕೊಂಡುಕೊಳ್ಳಬಹುದು ಎಂಬುದನ್ನು ನೋಡುವುದಕ್ಕಾಗಿ, ಮಾರುಕಟ್ಟೆಯಲ್ಲಿ ನಾಣ್ಯಗಳನ್ನು ಎಣಿಸುತ್ತಿದ್ದುದನ್ನು ಯೇಸು ಗಮನಿಸಿದ್ದಿರಬೇಕು ಎಂದು ಸತ್ಯ. ಆ ಗುಬ್ಬಿಗಳನ್ನು ಎಷ್ಟು ಕಡಿಮೆ ಕ್ರಯದವುಗಳೆಂದು ಎಣಿಸಲಾಗುತ್ತಿತ್ತೆಂದರೆ, ಒಂದು ಕಡಿಮೆ ಬೆಲೆಯ ನಾಣ್ಯಕ್ಕೆ (ಅಕ್ಷರಾರ್ಥವಾಗಿ, ಎರಡು ರೂಪಾಯಿಗಿಂತ ಕಡಿಮೆ ಮೌಲ್ಯದ ಒಂದು ಅಸಾರಿಯನ್ಗೆ) ಒಬ್ಬನು ಎರಡು ಗುಬ್ಬಿಗಳನ್ನು ಕೊಳ್ಳಬಹುದಾಗಿತ್ತು.
ಈ ದೃಷ್ಟಾಂತವನ್ನು ಸ್ವಲ್ಪ ಸಮಯದ ಅನಂತರ ಯೇಸು ಪುನಃ ಹೇಳಿದನು, ಆದರೆ ಅದರಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಲೂಕ 12:6ಕ್ಕನುಸಾರ ಯೇಸು ಹೇಳಿದ್ದು: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ?” ಇದರ ಬಗ್ಗೆ ಸ್ವಲ್ಪ ಯೋಚಿಸಿರಿ. ಕಡಿಮೆ ಮೌಲ್ಯದ ಒಂದು ನಾಣ್ಯಕ್ಕೆ, ಕೊಳ್ಳುವವನು ಎರಡು ಗುಬ್ಬಿಗಳನ್ನು ಪಡೆದುಕೊಳ್ಳಸಾಧ್ಯವಿತ್ತು. ಆದರೆ ಎರಡು ನಾಣ್ಯಗಳನ್ನು ಕೊಡುವಲ್ಲಿ, ಅವನಿಗೆ ನಾಲ್ಕಲ್ಲ ಬದಲಿಗೆ ಐದು ಗುಬ್ಬಿಗಳು ಸಿಕ್ಕುತ್ತಿದ್ದವು. ಆ ವ್ಯಾಪಾರದಲ್ಲಿ ಒಂದು ಗುಬ್ಬಿಯನ್ನು ಅದಕ್ಕೆ ಏನೂ ಬೆಲೆಯಿಲ್ಲದಂತೆ ಕೊಸರಾಗಿ ಕೊಡಲಾಗುತ್ತಿತ್ತು. “ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ” ಎಂದು ಯೇಸು ಹೇಳಿದನು. ಈ ದೃಷ್ಟಾಂತವನ್ನು ಅನ್ವಯಿಸುತ್ತಾ, ಯೇಸು ಸಮಾಪ್ತಿಗೊಳಿಸಿದ್ದು: “ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:7) ಆ ನುಡಿಗಳು ಅವನ ಕೇಳುಗರಿಗೆ ಎಷ್ಟೊಂದು ಉತ್ತೇಜನವನ್ನು ನೀಡಿದ್ದಿರಬೇಕು!
ಯೇಸುವಿನ ಹೃದಯಸ್ಪರ್ಶಿ ದೃಷ್ಟಾಂತದಿಂದ ನೀವೇನು ಕಲಿತುಕೊಳ್ಳಬಹುದು? ಯೆಹೋವನು ಚಿಕ್ಕ ಗುಬ್ಬಿಗಳನ್ನು ಸಹ ಅಮೂಲ್ಯವಾಗಿ ಎಣಿಸುವಾಗ, ಆತನಿಗೆ ತನ್ನ ಭೌಮಿಕ ಸೇವಕರು ಇನ್ನೆಷ್ಟು ಪ್ರಿಯರಾಗಿರಬೇಕು! ಯೆಹೋವನ ದೃಷ್ಟಿಯಿಂದ, ನಮ್ಮಲ್ಲಿ ಒಬ್ಬರೂ ತಪ್ಪಿಸಿಕೊಳ್ಳಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಎಷ್ಟು ಅಮೂಲ್ಯರಾಗಿದ್ದೇವೆ ಎಂದರೆ, ನಮ್ಮ ತಲೆಗಳ ಒಂದೊಂದು ಕೂದಲನ್ನು ಆತನು ಎಣಿಸುತ್ತಾನೆ, ಅಂದರೆ ಸಣ್ಣಪುಟ್ಟ ವಿವರಗಳನ್ನು ಸಹ ಆತನು ಗಣನೆಗೆ ತೆಗೆದುಕೊಳ್ಳುತ್ತಾನೆ.
ಯೆಹೋವನಿಗೆ ಸೇವೆಸಲ್ಲಿಸುವುದರಿಂದ ನಮ್ಮನ್ನು ತಡೆಯಲು, ಸೈತಾನನು ಅನರ್ಹತೆಯ ಭಾವನೆಗಳಂತಹ “ತಂತ್ರೋಪಾಯಗಳನ್ನು” ಉಪಯೋಗಿಸುತ್ತಾ ಇರುತ್ತಾನೆ ಎಂಬುದು ಸತ್ಯ. ಆದರೆ, ಸೈತಾನನು ಜಯಿಸುವಂತೆ ಬಿಡಬೇಡಿರಿ! ಈ ಹಿಂದೆ ಉಲ್ಲೇಖಿಸಿದ ಆ ಕ್ರೈಸ್ತ ಸ್ತ್ರೀಯನ್ನು ಜ್ಞಾಪಿಸಿಕೊಳ್ಳಿರಿ. ನಮ್ಮ ಭಾವನೆಗಳ ಲಾಭವನ್ನು ತೆಗೆದುಕೊಳ್ಳುವ ಸೈತಾನನ ಪ್ರಯತ್ನಗಳ ಬಗ್ಗೆ ಎಚ್ಚರಿಸಿದ ಕಾವಲಿನಬುರುಜು ಪತ್ರಿಕೆಯ ಲೇಖನದಿಂದ ಅವಳು ಸಹಾಯವನ್ನು ಪಡೆದುಕೊಂಡಳು.a ಅವಳು ಹೇಳುವುದು: “ನನ್ನನ್ನು ನಿರುತ್ತೇಜಿಸಲು ನನ್ನ ಭಾವನೆಗಳನ್ನೇ ಸೈತಾನನು ಉಪಯೋಗಿಸುತ್ತಾನೆ ಎಂಬುದನ್ನು ಈ ವರೆಗೂ ನಾನು ಗ್ರಹಿಸಿರಲೇ ಇಲ್ಲ. ಈಗ ಇದನ್ನು ಅರಿತುಕೊಂಡಿರುವುದರಿಂದ, ನಾನು ಈ ಭಾವನೆಗಳ ವಿರುದ್ಧ ಹೋರಾಡುವಂತೆ ನನಗೆ ಪ್ರೇರಣೆಯನ್ನು ನೀಡುತ್ತದೆ. ಈಗ ನಾನು ಹೆಚ್ಚು ಆತ್ಮವಿಶ್ವಾಸದಿಂದ, ಈ ಸೈತಾನ ಸಂಬಂಧಿತ ಆಕ್ರಮಣಗಳನ್ನು ಧೈರ್ಯದಿಂದ ಎದುರಿಸಬಲ್ಲೆ.”
ಯೆಹೋವನು “ಎಲ್ಲವನ್ನೂ ಬಲ್ಲವನಾಗಿದ್ದಾನೆ.” (1 ಯೋಹಾನ 3:20) ಹೌದು, ನಾವು ಈಗ ಸಹಿಸಿಕೊಳ್ಳುತ್ತಿರುವ ವಿಷಯಗಳು ಆತನಿಗೆ ಗೊತ್ತಿದೆ. ನಮ್ಮ ಸ್ವ-ಗೌರವವನ್ನು ಕುಂದಿಸಿರಬಹುದಾದಂತಹ ನಮ್ಮ ಹಿಂದಿನ ಅನುಭವಗಳನ್ನು ಸಹ ಆತನು ಬಲ್ಲವನಾಗಿದ್ದಾನೆ. ನಮ್ಮನ್ನು ಯೆಹೋವನು ಯಾವ ದೃಷ್ಟಿಕೋನದಲ್ಲಿ ನೋಡುತ್ತಾನೋ ಅದು ಪ್ರಾಮುಖ್ಯವಾಗಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ! ನಾವು ಪ್ರೀತಿಗೆ ಅಪಾತ್ರರು ಅಥವಾ ಅನರ್ಹರು ಎಂದೇ ನೆನಸಲಿ, ತನ್ನ ಪ್ರತಿಯೊಬ್ಬ ಸೇವಕನು ತನಗೆ ಅಮೂಲ್ಯನೆಂದು ಯೆಹೋವನು ಪುನರಾಶ್ವಾಸನೆಯನ್ನು ಕೊಡುತ್ತಾನೆ. ಯೆಹೋವನ ವಾಕ್ಯದಲ್ಲಿ ನಾವು ಭರವಸೆಯಿಡಸಾಧ್ಯವಿದೆ. ಏಕೆಂದರೆ, ಆತನು ತನ್ನ ವೈರಿಗೆ ಅಸದೃಶವಾಗಿ “ಸುಳ್ಳಾಡದ” ದೇವರಾಗಿದ್ದಾನೆ.—ತೀತ 1:2.
[ಅಧ್ಯಯನ ಪ್ರಶ್ನೆಗಳು]
a ಏಪ್ರಿಲ್ 1, 1995, ಕಾವಲಿನಬುರುಜು, ಪುಟಗಳು 10-15 ರಲ್ಲಿರುವ “ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!” ಎಂಬ ಲೇಖನವನ್ನು ನೋಡಿರಿ.
[ಪುಟ 12 ರಲ್ಲಿರುವ ಚಿತ್ರ]
ಒಬ್ಬ ಪ್ರೀತಿಪರ ಹೆತ್ತವನೋಪಾದಿ, ಯೆಹೋವನು ದುಃಖಿತರ ಸಮೀಪದಲ್ಲಿದ್ದಾನೆ
[ಪುಟ 13 ರಲ್ಲಿರುವ ಚಿತ್ರ]
ಯೆಹೋವನು ಗುಬ್ಬಿಯನ್ನು ಮರೆಯದಿರುವಾಗ, ನಿಮ್ಮನ್ನು ಹೇಗೆ ಮರೆತಾನು?
[Credit Lines]
Lydekker
Illustrated Natural History