ಒಳನೋಟಕ್ಕಾಗಿ ಯೆಹೋವನ ಕಡೆ ನೋಡಿರಿ
“ನೀನು ಒಳನೋಟವುಳ್ಳವನಾಗುವಂತೆ ಮಾಡಿ ಹೋಗಬೇಕಾದ ಮಾರ್ಗವನ್ನು ಉಪದೇಶಿಸುವೆನು.”—ಕೀರ್ತನೆ 32:8, NW.
1. ನಾವು ಮಾಡುವ ನಿರ್ಣಯಗಳು ವಿವೇಕಪೂರ್ಣವೋ ಎಂಬದನ್ನು ನಿರ್ಧರಿಸುವ ಕೆಲವು ವಿಷಯಗಳಾವುವು? (ಧರ್ಮೋಪದೇಶ 32:7, 29 ಹೋಲಿಸಿ.)
ಪ್ರತಿದಿನ ನಾವು ನಿರ್ಣಯಗಳನ್ನು, ಕೆಲವು ಚಿಕ್ಕ ನಿರ್ಣಯಗಳನ್ನು, ಇನ್ನು ಕೆಲವು ದೊಡ್ಡ ನಿರ್ಣಯಗಳನ್ನು ನಿಭಾಯಿಸುತ್ತೇವೆ. ನಮ್ಮ ನಿರ್ಣಯಗಳು ವಿವೇಕವುಳ್ಳವುಗಳೋ? ಅದು ಹೆಚ್ಚಾಗಿ, ನಾವು ಮಾತಾಡುವಾಗ ಅಥವಾ ವರ್ತಿಸುವಾಗ ಉದ್ರೇಕದಿಂದ ವರ್ತಿಸುತ್ತೇವೋ ಯೋಚಿಸಿ ವರ್ತಿಸುತ್ತವೋ ಎಂಬದರ ಮೇಲೆ ಹೊಂದಿಕೊಂಡಿದೆ. ಆದರೂ ಅನೇಕ ವಿಷಯಗಳಲ್ಲಿ ವಿವೇಕದ ನಿರ್ಣಯಗಳನ್ನು ಮಾಡಬೇಕಾದರೆ ಸ್ವತ:ಸಿದ್ಧ ವಿಷಯಗಳ ಹಿಂದುಗಡೆ ಇರುವವುಗಳನ್ನು ನೋಡಲು ನಾವು ಶಕ್ತರಾಗಬೇಕು. ಇದಕ್ಕೆ ಈಗಿನ ಲೋಕ ಘಟನೆಗಳ ಪರಿಣಾಮವೇನು ಎಂದು ಮಾತ್ರವಲ್ಲ ಆತ್ಮ ಕ್ಷೇತ್ರದಲ್ಲಿ ಸಹ ಏನು ನಡಿಯುತ್ತದೆಂದು ತಿಳಿಯುವುದು ಅವಶ್ಯ. ಇದನ್ನು ನಾವು ಮಾಡಶಕ್ತರೋ? ಯಾವ ಮಾನವನೇ ಆಗಲಿ ಕೇವಲ ಊಹೆಯಲ್ಲದೆ ಇನ್ನಾವ ರೀತಿಯಲ್ಲಾದರೂ ಇದನ್ನು ಮಾಡಶಕ್ತನೋ?
2. ಜೀವನದಲ್ಲಿ ಸಫಲ ರೀತಿಯಲ್ಲಿ ಸಾಗಬೇಕಾದರೆ ನಮಗೆ ಯಾವ ಸಹಾಯ ಅಗತ್ಯ ಮತ್ತು ಏಕೆ? (ಜ್ಞಾನೋಕ್ತಿ 20:24)
2. ಮಾನವರಿಗೆ ಗಮನಾರ್ಹವಾದ ಮಾನಸಿಕ ಸಾಮರ್ಥ್ಯವನ್ನು ಒದಗಿಸಲಾಗಿದೆ. ಆದರೆ ದೇವರಿಂದ ಸಹಾಯ ಸ್ವೀಕರಿಸದೇ ಸಫಲ ಮಾರ್ಗದಲ್ಲಿ ಹೋಗುವ ಸಾಮರ್ಥ್ಯ ಅವರಿಗೆ ಕೊಡಲಾಗಿರುವುದಿಲ್ಲ. ಪ್ರೇರಿತ ಪ್ರವಾದಿ ಯೆರೆಮೀಯ ಬರೆದಂತೆ, “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲಿಲ್ಲವ್ಲೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
3. ನಾವು ಮಾರ್ಗದರ್ಶನೆಗಾಗಿ ಯೆಹೋವನ ಕಡೆ ನೋಡಲು ತಪ್ಪಿದರೆ ಆಗುವ ಪರಿಣಾಮವೇನು? (ಆದಿಕಾಂಡ 3:4-6, 16-24 ಹೋಲಿಸಿ.)
3. ನಾವು ಈ ನಿಜತ್ವವನ್ನು ಅಸಡ್ಡೆಮಾಡಿ, ವಿವೇಕ ಅವಿವೇಕ, ಸರಿತಪ್ಪು ಎಂಬ ವಿಷಯಗಳ ನಿರ್ಧಾರಕ್ಕಾಗಿ ನಮ್ಮ ಮೇಲೆ ಅಥವಾ ಇತರರ ಮೇಲೆ ಹೊಂದಿಕೊಳ್ಳುವಲ್ಲಿ ಪರಿಣಾಮವೇನು? ಶರೀರ ರೀತಿಯ ತರ್ಕಗಳ ಕಾರಣ ಕೆಲವು ಸಲ, ದೇವರು ಕೆಟ್ಟದೆಂದು ಹೇಳುವುದನ್ನು ಒಳ್ಳೆಯದೆಂದೂ ದೇವರು ಮುರ್ಖತನವೆಂದು ಹೇಳುವುದನ್ನು ವಿವೇಕ ಮಾರ್ಗವೆಂದೂ ಹೇಳಿಯೇವು. (ಯೆಶಾಯ 5:20) ನಾವಿದನ್ನು ಉದ್ದೇಶಪೂರ್ವಕವಾಗಿ ಮಾಡದಿದ್ದರೂ ಇದರಿಂದಾಗಿ ಇತರರನ್ನು ಮುಗ್ಗರಿಸಲು ಕಾರಣರಾದೇವು. (1 ಕೊರಿಂಥ 8:9 ಹೋಲಿಸಿ.) ಮಾರ್ಗದರ್ಶನೆಗಾಗಿ ಯೆಹೋವನ ಕಡೆ ಪಟ್ಟುಹಿಡಿದು ನೋಡದಿರುವವರಿಗೆ ಬರುವ ಅಂತಿಮ ಪರಿಣಾಮದ ಕುರಿತು ಆತನ ವಾಕ್ಯ ಹೇಳುವುದು: “ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ಮಾರ್ಗ ಉಂಟು. ಅದು ಕಟ್ಟಕಡೆಗೆ ಮರಣ ಮಾರ್ಗವೇ.”—ಜ್ಞಾನೋಕ್ತಿ 14:12.
4. ಯೆಹೋವನು ತನ್ನ ಸೇವಕರಿಗೆ ಉದಾರವಾಗಿ ಯಾವ ಸಹಾಯವನ್ನು ನೀಡಲು ವಾಗ್ದಾನಿಸುತ್ತಾನೆ? (ಯೆರೆಮೀಯ 10:21 ಹೋಲಿಸಿ.)
4. ಹಾಗಾದರೆ ನಮಗೇನು ಅವಶ್ಯ? ಸುಲಭವಾಗಿ ಹೇಳುವುದಾದರೆ ನಮಗೆ ಯೆಹೋವನು ಕೊಡುವ ಸಹಾಯ ಅಗತ್ಯ. ಪ್ರೋತ್ಸಾಹಜನಕವಾಗಿ ಅವನು ಹೇಳುವುದು: “ನೀನು ಒಳನೋಟವುಳ್ಳವನಾಗುವಂತೆ ಮಾಡಿ ಹೋಗಬೇಕಾದ ಮಾರ್ಗದಲ್ಲಿ ಉಪದೇಶಿಸುವೆನು. ನಿನ್ನ ಮೇಲೆ ಕಣ್ಣಿಟ್ಟು ಬುದ್ಧಿವಾದವನ್ನು ಕೊಡುವೆನು.”—ಕೀರ್ತನೆ 32:8.
ಒಳನೋಟದಲ್ಲಿ ಅಡಗಿರುವ ವಿಷಯಗಳು
5. “ಒಳನೋಟ” ವೆಂದರೇನು?
5. ಶಾಸ್ತ್ರದಲ್ಲಿ ಸೂಚಿಸಿರುವ “ಒಳನೋಟ” ಎಂದರೇನು? ಒಂದು ಪರಿಸ್ಥಿತಿಯನ್ನು ಪರೀಕ್ಷಿಸುವ, ಮುಂದೆ ಕಾಣಿಸುವ ವಿಷಯದ ಹಿಂದೆ ಏನಿದೆಂದು ನೋಡುವ ಸಾಮರ್ಥ್ಯವೇ ಇದು. ಥಿಯೊಲಾಜಿಕಲ್ ವರ್ಡ್ ಬುಕ್ ಆಫ್ದಿ ಓಲ್ಡ್ ಟೆಸ್ಟಮೆಂಟ್ ಪುಸ್ತಕಕ್ಕನುಸಾರ “ಒಳನೋಟ” ವೆಂದು ಭಾಷಾಂತರಿಸಲ್ಪಟ್ಟ ಹಿಬ್ರೂ ಪದ, “ಕಾರಣದ ಬುದ್ಧಿಯುಕ್ತ ಜ್ಞಾನ” ಕ್ಕೆ ಸಂಬಂಧಿತವಾಗಿದೆ. ಒಬ್ಬ ವ್ಯಕ್ತಿಯು ವಿವೇಕದಿಂದ ನಡೆದು ಸಾಫಲ್ಯ ಪಡೆಯುವಂತೆ ಮಾಡುವ ಜ್ಞಾನವಿದು. ಈ ಮೂಲಾರ್ಥಕ್ಕೆ ಅನುಸಾರವಾಗಿ ಮತ್ತು ಅದೇ ಹಿಬ್ರೂ ಪದದ ವಿಶಿಷ್ಟಾರ್ಥವನ್ನು ಕೊಡುವ ಕಾರಣದಿಂದ ನ್ಯೂ ವಲ್ಡ್ ಟ್ರಾನ್ಸ್ಲೇಶನ್ ಬೈಬಲ್, “ಒಳನೋಟವುಳ್ಳವನಾಗಿರು’ ಎಂದು ಮಾತ್ರವಲ್ಲದೆ ‘ವಿವೇಕದಿಂದ ವರ್ತಿಸು’ ‘ವಿವೇಚನೆಯಿಂದ ವರ್ತಿಸು’ ಮತ್ತು ‘ಸಾಫಲ್ಯ ಪಡೆ’ ಎಂದೂ ಭಾಷಾಂತರಿಸುತ್ತದೆ.—ಕೀರ್ತನೆ 14:2.
6. “ತುಟಿಗಳನ್ನು ಅಂಕೆಯಲಿಡ್ಲುವವನು” ವಿವೇಕದಿಂದ ಅಥವಾ ಒಳನೋಟದಿಂದ ವರ್ತಿಸುವನೆಂದು ಏಕೆ ಹೇಳಲಾಗಿದೆ?
6. ಹೀಗೆ, “ತನ್ನ ತುಟಿಗಳನ್ನು ಅಂಕೆಯಲಿಡ್ಲುವವನು” ವಿವೇಕದಿಂದ ವರ್ತಿಸುತ್ತಾನೆ ಅಥವಾ ಒಳನೋಟದಿಂದ ವರ್ತಿಸುತ್ತಾನೆ ಎಂದು ಹೇಳಲಾಗಿದೆ. (ಜ್ಞಾನೋಕ್ತಿ 10:19) ಅವನು ಮಾತಾಡುವ ಮೊದಲು, ತಾನು ಹೇಳುವುದನ್ನು ಇತರರು ಹೇಗೆ ಅರ್ಥಮಾಡಿಕೊಂಡಾರು ಮತ್ತು ಇನ್ನೊಬ್ಬನ ಕುರಿತು ತಾನು ಹೇಳುವ ಮಾತುಗಳು ವಿವೇಕ ಮತ್ತು ಪ್ರೀತಿಯವುಗಳೋ ಅಥವಾ ಅಗತ್ಯವುಳ್ಳವುಗಳೋ ಎಂದು ಆಲೋಚಿಸಿ ಬಳಿಕ ಮಾತಾಡುತ್ತಾನೆ. (ಜ್ಞಾನೋಕ್ತಿ 12:18; ಯಾಕೋಬ 1:19) ಅವನು ಯೆಹೋವನ ಮಾರ್ಗಗಳಿಗೆ ಪ್ರೀತಿಯಿಂದ ಮತ್ತು ತನ್ನ ನೆರೆಯವನಿಗೆ ಸಹಾಯ ಮಾಡುವ ನಿಜ ಅಪೇಕ್ಷೆಯಿಂದ ಪ್ರಚೋದಿತನಾಗಿರುವುದರಿಂದ ಅವನ ಹೇಳಿಕೆಗಳು ಇತರರಿಗೆ ಭಕ್ತಿ ವೃದ್ಧಿಯನ್ನುಂಟು ಮಾಡುತ್ತವೆ.—ಜ್ಞಾನೋಕ್ತಿ 16:23.
7. ವಿವೇಕದಿಂದ ವರ್ತಿಸಿದವನೆಂದು ಪ್ರಸಿದ್ಧನಾಗಲು ದಾವೀದನಿಗೆ ಯಾವುದು ಸಾಧ್ಯಮಾಡಿತು?
7. ಇಷಯನ ಪುತ್ರ ದಾವೀದನ ವಿಷಯದಲ್ಲಿ ಅವನು “ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡಿಸುತ್ತಿದ್ದನು” ಅಂದರೆ, ಒಳನೋಟದಿಂದ ನಡಿಸುತ್ತಿದ್ದನು ಎಂದು ಹೇಳಲಾಗಿದೆ. ದಾವೀದನು ತನ್ನ ಕೆಲಸದಲ್ಲಿ, ಯುದ್ಧವೀರರ ಮಧ್ಯೆ ನಡಿಯುವ ಹೋರಾಟಕ್ಕಿಂತ ಯಾವುದೋ ಹೆಚ್ಚಿನ ವಿಷಯ ಒಳಗೂಡಿದೆ ಎಂದು ವಿವೇಚಿಸಿ ತಿಳಿದಿದ್ದನು. ತಾನೂ ತನ್ನ ಸೈನಿಕರು ಯೆಹೋವನ ಯುದ್ಧವನ್ನು ಹೋರಾಡುತ್ತಿದ್ದೇವೆ ಎಂದು ಅವನು ಗ್ರಹಿಸಿದನು. ಹೀಗೆ, ದಾವೀದನು ನಿರ್ದೇಶನ ಮತ್ತು ಆಶೀರ್ವಾದಕ್ಕಾಗಿ ಯೆಹೋವನ ಕಡೆ ನೋಡಿದನು. (1 ಸಮುವೇಲ 17:45; 18:5; 2 ಸಮುವೇಲ 5:19) ಇದರ ಫಲವಾಗಿ, ದಾವೀದನ ದಂಡಯಾತ್ರೆಗಳು ಸಫಲಗೊಂಡವು.
8. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ‘ಒಳನೋಟವುಳ್ಳವನಾಗಿರು’ ಎಂದು ಭಾಷಾಂತರವಾಗಿರುವ ಕ್ರಿಯಾಪದವು ಇನ್ಯಾವ ಅರ್ಥವನ್ನು ಕೊಡುತ್ತದೆ?
8. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ‘ಒಳನೋಟವುಳ್ಳವನಾಗಿರು’ ಎಂದು ಭಾಷಾಂತರವಾಗಿರುವ ಕ್ರಿಯಾಪದವನ್ನು ‘ಅರ್ಥಮಾಡಿಕೋ’ ‘ಗ್ರಹಿಸು’ ಎಂದೂ ತರ್ಜುಮಿಸಲಾಗಿದೆ. (ರೋಮಾಪುರ 3:11; ಮತ್ತಾಯ 13:13-15; ಎಫೆಸ 5:17) ಈ ವಿಷಯಗಳನ್ನು ಮಾಡುವ ಸಾಮರ್ಥ್ಯವನ್ನು ದೇವರು ತನ್ನ ಸೇವಕರುಗಳಿಗೆ ವಾಗ್ದಾನಿಸುತ್ತಾನೆ. ಆದರೆ ಆತನು ಇಂಥ ಒಳನೋಟವನ್ನು ಅವರಿಗೆ ಹೇಗೆ ಕೊಡುತ್ತಾನೆ?
ಯೆಹೋಶುವನು ಒಳನೋಟವುಳ್ಳವನಾದ ವಿಧ
9. ಪುರಾತನ ಇಸ್ರಾಯೇಲಿನಲ್ಲಿ ಯೆಹೋವನು ಜನರಿಗೆ ಹೇಗೆ ಒಳನೋಟವನ್ನು ಕೊಟ್ಟನು?
9. ಪ್ರಾಚೀನ ಇಸ್ರಾಯೇಲಿನಲ್ಲಿ, ಲೇವ್ಯರು ಜನಾಂಗಕ್ಕೆ ತನ್ನ ಧರ್ಮಶಾಸ್ತ್ರವನ್ನು ಭೋದಿಸುವಂತೆ ದೇವರು ಆಜ್ನೆಯಿತ್ತನು. (ಯಾಜಕಕಾಂಡ 10:11; ಧರ್ಮೋಪದೇಶ 33:8, 10) ಧರ್ಮಶಾಸ್ತ್ರ ಪ್ರೇರಿತವಾಗಿತ್ತು ಮತ್ತು ಯಾವ ಸಂಘಟನಾ ಏರ್ಪಾಡು ಅದನ್ನು ಕಲಿಸಲಿಕ್ಕಾಗಿ ನಿಯಮಿಸಲ್ಪಟ್ಟಿತ್ತೋ ಅದರ ಮೇಲೆ ಯೆಹೋವನ ಆತ್ಮ ಕಾರ್ಯ ನಡಿಸುತ್ತಿತ್ತು. (ಮಲಾಕಿಯ 2:7) ಈ ಮೂಲಕ ಯೆಹೋವನು, ನೆಹೆಮೀಯ 9:20 ಹೇಳಿರುವಂತೆ ‘ಇಸ್ರಾಯೇಲ್ಯರನ್ನು ವಿವೇಕಿಗಳಾಗಿ ಮಾಡಿದನು’ ಅಥವಾ ಅವರಿಗೆ ಒಳನೋಟವನ್ನು ಕೊಟ್ಟನು.
10, 11. (ಎ)ಯೆಹೋಶುವ 1:7, 8 ರಲ್ಲಿ ತೋರಿಸಿರುವಂತೆ, ಯೆಹೋಶುವನು ಒಳನೋಟದಿಂದ ವರ್ತಿಸುವಂತೆ ಯಾವುದು ಸಾಧ್ಯ ಮಾಡಲಿತ್ತು? (ಬಿ) ಶಿಕ್ಷಣಕ್ಕಿದ್ದ ಯಾವ ಏರ್ಪಾಡನ್ನು ಯೆಹೋಶುವನು ಗಣ್ಯಮಾಡುವುದು ಪ್ರಾಮುಖ್ಯವಾಗಿತ್ತು? (ಸಿ) ಯೆಹೋಶುವನು ತಾನೇ ಯಾವ ವೈಯಕ್ತಿಕ ಪ್ರಯತ್ನವನ್ನು ಮಾಡಬೇಕಿತ್ತು?
10. ಆದರೆ ಆ ಜನಾಂಗದೊಳಗಿನ ವ್ಯಕ್ತಿಗಳು ಒಳನೋಟದಿಂದ ವರ್ತಿಸುವರೋ? ಹಾಗೆ ವರ್ತಿಸಬೇಕಾದರೆ ಅವರಿಂದ ಏನೋ ಅವಶ್ಯವಾಗಿತ್ತು. ಇಸ್ರಾಯೇಲ್ಯರನ್ನು ವಾಗ್ದಾನ ದೇಶಕ್ಕೆ ನಡಿಸುವ ಜವಾಬ್ದಾರಿ ಯೆಹೋಶುವನಿಗೆ ಕೊಡಲಾಗುವ ಸಮಯದಲ್ಲಿ ಯೆಹೋವನು ಅವನಿಗೆ ಹೀಗಂದನು: “ನನ್ನ ಸೇವಕನಾದ ಮೋಶೆ ನಿನಗೆ ಭೋದಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡಿಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣ ಧೈರ್ಯದಿಂದಿರು. ಅದನ್ನುಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ. ಆಗ ಎಲ್ಲಿ ಹೋದರೂ ವಿವೇಕದಿಂದ ನಡೆಯುವಿ. ಈ ಧರ್ಮ ಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿರುವದೆಲವ್ಲನ್ನು ಕೈಕೊಂಡು ನಡೆ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ವಿವೇಕದಿಂದ ನಡೆಯುವಿ.” ಇಲ್ಲಿ ಕೊಡಲಾಗಿರುವ “ವಿವೇಕದಿಂದ ನಡೆಯುವಿ” ಎಂಬ ಹಿಬ್ರೂ ಪದಕ್ಕೆ “ಒಳನೋಟದಿಂದ ವರ್ತಿಸು” ಎಂದೂ ಅರ್ಥವಿದೆ.—ಯೆಹೋಶುವ 1:7, 8.
11. ಯೆಹೋವನು ಯೆಹೋಶುವನಿಗೆ ಇಂಥ ಒಳನೋಟವನ್ನು ಹೇಗೆ ಕೊಡಲಿದ್ದನು? ಹೇಗೋ ಅದ್ಭುತಕರವಾದ ಸುರಿಸುವಿಕೆಯಿಂದಲ್ಲ. ದೇವರ ಲಿಖಿತ ವಾಕ್ಯವೇ ಇದಕ್ಕೆ ಕೀಲಿಕೈ. ಅದನ್ನು ಯೆಹೋಶುವನು ತನ್ನ ಹೃದಮನಗಳಲ್ಲಿ ತುಂಬಿಸಲಿಕ್ಕಾಗಿ ಕ್ರಮವಾಗಿ ಓದುತ್ತಾ ಧ್ಯಾನಿಸುತ್ತಾ ಇರುವ ಅಗತ್ಯವಿತ್ತು. ಧರ್ಮಶಾಸ್ತ್ರದ ಉಪದೇಶವನ್ನು ಲೇವಿಯರು ಕೊಡುವರೆಂದು ದೇವರ ವಾಕ್ಯ ನುಡಿದದ್ದು ಯೆಹೋಶುವನಿಗೆ ಗೊತ್ತಿತ್ತು. ಯೆಹೋಶುವನು ಇದನ್ನೇ ಮಾಡಬೇಕಿತ್ತೇ ಹೊರತು ರಾಷ್ಟ್ರದಲ್ಲಿ ತನಗಿದ್ದ ಜವಾಬ್ದಾರಿಯ ಸ್ಥಾನದ ಕಾರಣ ತಾನೇ ಅದನ್ನೆಲ್ಲಾ ಅರ್ಥಮಾಡಿಕೊಳ್ಳುವೆನೆಂದು ಹೇಳಿ ತನ್ನನ್ನು ಬೇರ್ಪಡಿಸಿಕೊಳ್ಳಬಾರದಿತ್ತು. (ಜ್ಞಾನೋಕ್ತಿ 18:1) ದೇವರ ಲಖಿತ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದು ಯೆಹೋಶುವನಿಗೆ ಪ್ರಾಮುಖ್ಯವಾಗಿತ್ತು. ಅವನು ಯಾವ ಭಾಗವನ್ನೂ ಅಲಕ್ಷ ಮಾಡದೆ ಅದನ್ನು ಮಾಡಿದಲ್ಲಿ, ಅದಕ್ಕೆ ವಿಧೇಯನಾದಲ್ಲಿ, ಒಳನೋಟದಿಂದ ವರ್ತಿಸಲಿದ್ದನು.—1 ಅರಸು 2:3 ಹೋಲಿಸಿ.
ಯೆಹೋವನು ಇಂದು ಒಳನೋಟವನ್ನು ಕೊಡುವ ವಿಧ
12. ಯೆಹೋವನು ನಮಗೆ ದೊಕಿಸುವ ಒಳನೋಟದಿಂದ ಪ್ರಯೋಜನ ಪಡೆಯಲು ಯಾವ ಮೂರು ವಿಷಯಗಳು ಅಗತ್ಯ?
12. ಯೆಹೋವನು ನಮ್ಮ ದಿನಗಳ ತನಕವೂ ತನ್ನ ಸೇವಕರು ವಿವೇಕದಿಂದ ವರ್ತಿಸಲು ಅವಶ್ಯವಾದ ನಿರ್ದೇಶನಗಳನ್ನು ಒದಗಿಸುತ್ತಾ ಬಂದಿದ್ದಾನೆ. ಆ ಮಾರ್ಗದರ್ಶನದಿಂದ ಪ್ರಯೋಜನ ಪಡೆಯಲು ನಮ್ಮಿಂದ ವೈಯಕ್ತಿಕವಾಗಿ ಅನೇಕ ವಿಷಯಗಳು ಕೇಳಲ್ಪಡುತ್ತವೆ: (1) ನಾವು ಯೆಹೋಶುವನಂತೆ ಯೆಹೋವನ ಸಂಸ್ಥೆಯನ್ನು ಗಣ್ಯಮಾಡುವುದು ಅಗತ್ಯ. ಮತ್ತು ಇಂಥ ಗಣ್ಯತೆಯಲ್ಲಿ ಅಭಿಷಿಕ್ತರ ಕ್ರೈಸ್ತ ಸಭೆಯಾದ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ಅದರ ಆಡಳಿತಾ ಮಂಡಲಿಯೊಂದಿಗೆ ನಾವು ಸಹಕರಿಸುವದೂ ಸೇರಿದೆ. (ಮತ್ತಾಯ 24:45-47; ಇದಕ್ಕೆ ಅಪೋ. 16:4 ಹೋಲಿಸಿ.) ಮತ್ತು ಈ ಗಣ್ಯತೆಯಲ್ಲಿ ಕೂಟಗಳ ಹಾಜರಿಯಲ್ಲಿ ಕ್ರಮತೆ ಸೇರಿದೆ. (ಇಬ್ರಿಯ 10:24, 25) (2) ನಾವು ದೇವರ ವಾಕ್ಯದ ಮತ್ತು ಅದನ್ನು ತಿಳಿಯಲು ಸಹಾಯಕ್ಕಾಗಿ “ಆಳು” ವರ್ಗವು ಒದಗಿಸುವ ಸಾಹಿತ್ಯಗಳ ವ್ಯಕ್ತಿಪರ ಅದ್ಯಯನದಲ್ಲಿ ಶ್ರದ್ಧೆವಹಿಸತಕ್ಕದ್ದು. (3) ನಾವು ಕಲಿಯುವ ವಿಷಯಗಳನ್ನು ನಮ್ಮ ಸ್ವಂತ ಜೀವನದಲ್ಲಿ ಮತ್ತು ಇತರರ ಸಹಾಯಕ್ಕಾಗಿ ಹೇಗೆ ಅನ್ವಯಿಸಿಕೊಳ್ಳಬಹುದೆಂದು ಧ್ಯಾನಿಸಲು ಸಮಯವನ್ನು ತಕ್ಕೊಳ್ಳುವ ಪ್ರಾಮುಖ್ಯತೆಯೂ ಇದೆ.
13. ಯೆರೆಮೀಯ 3:15 ರಲ್ಲಿರುವ ವಾಗ್ದಾನದ ಅರ್ಥವೇನು?
13. ಯೆಹೋವನು ನಮ್ಮ ದಿನಗಳಲ್ಲಿ ನಮಗೆ ಯಾವ ರೀತಿಯ ಮೇಲ್ವಿಚಾರಣೆ ಮತ್ತು ಆತ್ಮಿಕ ಪೋಷಣೆಯನ್ನು ಒದಗಿಸುವನೆಂದು ತಿಳಿಸುತ್ತಾ ಯೆರೆಮೀಯ 3:15 ರಲ್ಲಿ ಆತನು ಹೇಳಿದ್ದು: “ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು. ಅವರು ನಿಮ್ಮನ್ನು ಜ್ಞಾನ ಮತ್ತು ಒಳನೋಟಗಳಿಂದ ಪೋಷಿಸುವರು.” ಮತ್ತು ಈ ಆತ್ಮಿಕ ಪೋಷಣಾ ಕಾರ್ಯಕ್ರಮ ನಾವು ಸಾಫಲ್ಯ ಹೊಂದಲಿಕ್ಕಾಗಿ ಪರಿಸ್ಥಿತಿಗಳನ್ನು ಪರೀಕ್ಷಿಸಿ ಯಾವ ಮಾರ್ಗವನ್ನು ತಕ್ಕೊಳ್ಳಬೇಕೆಂಬದನ್ನು ಗ್ರಹಿಸಲು ಗಮನಾರ್ಹವಾದ ಸಾಮರ್ಥ್ಯವನ್ನೊದಗಿಸುವುದು. ಈ ಒಳನೋಟದ ಮೂಲನು ಯಾರು? ಯೆಹೋವ ದೇವರೇ.
14. ‘ನಂಬಿಗಸ್ತ ಆಳು’ ವರ್ಗಕ್ಕೆ ಒಳನೋಟವಿರುವದೇಕೆ?
14. ಈ ‘ನಂಬಿಗಸ್ತ ಆಳಿಗೆ’ ಇಂತಹ ಒಳನೋಟವಿರುವುದೇಕೆ? ಅವರು ದೇವರ ವಾಕ್ಯವನ್ನು ತಮ್ಮ ಶ್ರದ್ಧಾಪೂರ್ವಕ ಆಸಕ್ತಿಯನ್ನಾಗಿ ಮಾಡಿ ಅದರ ನಿರ್ದೇಶನವನ್ನು ಅನುಸರಿಸುವುದರಿಂದಲೇ. ಇದಲ್ಲದೆ ಅವರು ತಮ್ಮನ್ನು ಯೆಹೋವನ ಮಾರ್ಗದರ್ಶನಕ್ಕೆ ಒಳಪಡಿಸಿಕೊಂಡದರ್ದಿಂದ ಆತನು ಅವರ ಮೇಲೆ ತನ್ನ ಆತ್ಮವನ್ನು ಇರಿಸಿ ತನ್ನ ಉದ್ದೇಶಾನುಸಾರ ಅವರನ್ನು ಉಪಯೋಗಿಸುತ್ತಾನೆ. (ಲೂಕ 12:43, 44; ಅಪೋ. 5:32) ಪ್ರೇರಿತ ಕೀರ್ತನೆಗಾರನು ಬಹು ಪೂರ್ವಕಾಲದಲ್ಲಿ ಬರೆದಿದ್ದಂತೆ, “ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ ನನ್ನ ಉಪಾಧ್ಯಾಯರಿಗಿಂತ ಹೆಚ್ಚು ಒಳನೋಟ ಉಳ್ಳವನಾಗಿದ್ದೇನೆ.”—ಕೀರ್ತನೆ 119:99.
15. (ಎ)“ಆಳು” ವರ್ಗ ಹೊಂದಿಕೆಯಾಗಿ ನಮಗೆ ಕೊಡುವ ಬುದ್ಧಿವಾದದ ಸಾರಾಂಶವೇನು? (ಬಿ) ಅನೇಕ ವರ್ಷಗಳ ಹಿಂದೆ ರಕ್ತಪೂರಣದ ಕುರಿತ ಕ್ರೈಸ್ತ ವೀಕ್ಷಣೆಗೆ ಅವಶ್ಯವಿದ್ದ “ಜ್ಞಾನ ಮತ್ತು ಒಳನೋಟವನ್ನು” ಒದಗಿಸಲು “ಆಳು” ವರ್ಗಕ್ಕೆ ಸಾಧ್ಯವಾದದ್ದು ಹೇಗೆ?
15. ಯಾವುದು ಯೋಗ್ಯ ಮಾರ್ಗವೆಂಬ ಪ್ರಶ್ನೆಗೆ “ನಂಬಿಗಸ್ತನೂ ವಿವೇಕಿಯೂ ಆದ ಆಳು” ಯಾವಾಗಲೂ, ‘ಬೈಬಲಲ್ಲಿ ಬರೆದಿರುವದನ್ನು ಉಪಯೋಗಿಸು. ಯೆಹೋವನಲ್ಲಿ ಭರವಸವಿಡು’ ಎಂದು ಬುದ್ಧಿವಾದ ಹೇಳಿರುತ್ತಾನೆ. (ಕೀರ್ತನೆ 119:105; ಜ್ಞಾನೋಕ್ತಿ 3:5, 6) ರಕ್ತಪೂರಣ ಚಿಕಿತ್ಸೆ ಸಾಧಾರಣ ವೈದ್ಯಕೀಯ ಚಿಕಿತ್ಸೆಯಾಗಿ ಯೆಹೋವನ ಸಾಕ್ಷಿಗಳೆದುರು ಪ್ರಶ್ನೆಯಾಗಿ ನಿಂತಾಗ, 1945ನೇ ಜುಲೈ 1 ರ ವಾಚ್ಟವರ್ ರಕ್ತದ ಪವಿತ್ರತೆಯ ಕುರಿತ ಕ್ರೈಸ್ತ ದೃಷ್ಟಿಕೋನವನ್ನು ವಿವರಿಸಿತು. ದೈವಿಕ ರಕ್ತ ನಿಷೇಧದಲ್ಲಿ ಪ್ರಾಣಿ ಹಾಗೂ ಮನುಷ್ಯ ರಕ್ತ ಸೇರಿದೆ ಎಂದು ಅದು ತೋರಿಸಿತು. (ಆದಿಕಾಂಡ 9:3, 4; ಅಪೋ.15:28, 29) ಆ ಲೇಖನದಲ್ಲಿ ಶಾರೀರಿಕ ಅಡ್ಡ ಪರಿಣಾಮಗಳನ್ನು ಚರ್ಚಿಸಲಾಗಲಿಲ್ಲ. ಆಗ ಈ ಜ್ಞಾನ ಅತಿ ಪರಿಮಿತವಾಗಿತ್ತು. ಆಗ ಮುಖ್ಯ ಪ್ರಶ್ನೆ ದೇವರ ನಿಯಮಕ್ಕೆ ವಿಧೇಯತೆಯು. ಮತ್ತು ಈಗಲೂ ಹಾಗೆಯೇ. ಇಂದು ರಕ್ತಪೂರಣವನ್ನು ನಿರಾಕರಿಸುವ ಪ್ರಾಯೋಗಿಕ ವಿವೇಕವನ್ನು ಅನೇಕರು ಗ್ರಹಿಸುತ್ತಾರೆ, ಹೆಚ್ಚು ಸಂಖ್ಯೆಯಲ್ಲಿ ಅದನ್ನು ನಿರಾಕರಿಸುತ್ತಾರೆ. ಆದರೆ ಯೆಹೋವನ ಸಾಕ್ಷಿಗಳೋ, ರಕ್ತದ ವಿಷಯ ಯಾವ ಮಾನವನಿಗಿಂತಲೂ ಹೆಚ್ಚು ತಿಳುವಳಿಕೆಯಿರುವ ಸೃಷ್ಟಿಕರ್ತನಲ್ಲಿ ಭರವಸವಿಟ್ಟದರಿಂದ ಒಳನೋಟದಿಂದ ವರ್ತಿಸ ಶಕ್ತರಾಗಿದ್ದಾರೆ.
16. ವಾಚ್ಟವರ್ ಪತ್ರಿಕೆಯಲ್ಲಿ ಲೈಂಗಿಕ ನೀತಿ, ಏಕ ಹೆತ್ತವರಿರುವ ಕುಟುಂಬಗಳು, ಮತ್ತು ಖಿನ್ನತೆಯ ಕುರಿತ ಸಲಹೆಗಳು ಅವಶ್ಯಕ ವಿಷಯಗಳಾಗಿದ್ದದ್ದೇಕೆ?
16. ಲೈಂಗಿಕ ನೀತಿಯ ಕುರಿತು ಸಡಿಲು ಮನೋಭಾವ ಹೆಚ್ಚಾಗುತ್ತಾ ಹೋದಷ್ಟಕ್ಕೆ ವಾಚ್ಟವರ್ ಪತ್ರಿಕೆ, ಜನಪ್ರಿಯ ಮಾರ್ಗವನ್ನು ಸಮರ್ಥಿಸುವ ಬದಲು, ಸ್ವಸ್ಥ ರೀತಿಯ ಶಾಸ್ತ್ರಾನುಸಾರದ ಮಾರ್ಗದರ್ಶನೆಯನ್ನು ಒದಗಿಸಿದೆ. ಇದರಿಂದಾಗಿ, ಅನೇಕರು ತಮಗೆ ಯೆಹೋವನೊಂದಿಗಿರುವ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳುವಂತೆಯೂ ಕ್ಷಣಿಕವಾದ ಸುಖಾನುಭವದ ಬದಲಿಗೆ ಶಾಶ್ವತ ಸಂತೋಷದ ಮೇಲೆ ಮನಸ್ಸಿಡುವಂತೆಯೂ ಸಹಾಯ ದೊರಕುತ್ತದೆ. ತದ್ರೀತಿ, ಏಕ ಹೆತ್ತವರಿರುವ ಕುಟುಂಬಗಳಿಗೆ ಮತ್ತು ಖಿನ್ನತೆಯೊಂದಿಗೆ ಹೋರಾಡುತ್ತಿರುವವರಿಗೆ ಬರೆಯಲ್ಪಟ್ಟಿರುವ ವಾಚ್ಟವರ್ ಲೇಖನಗಳು, ಯಾರಿಗೆ ಯೆಹೋವನ ಆಲೋಚನೆಗಳು ಅಮೂಲ್ಯವಾಗಿವೆಯೋ ಮತ್ತು ಯಾರು ಶ್ರದ್ಧಾಪೂರ್ವಕವಾಗಿ, “ನಿನ್ನ ಚಿತ್ತದಂತೆ ನಡೆದುಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?” ಎಂದು ಪ್ರಾರ್ಥಿಸುತ್ತಾರೋ ಅವರಿಗೆ ಮಾತ್ರ ಸಾಧ್ಯವಿರುವ ಒಳನೋಟವನ್ನು ಪ್ರತಿಬಿಂಬಿಸಿದೆ.—ಕೀರ್ತನೆ 143:10; 139:17.a
17. (ಎ)ಹತ್ತಾರು ವರ್ಷಗಳಿಗೆ ಮೊದಲು, ಯೆಹೋವನ ಸೇವಕರಿಗೆ 1914 ರ ಕುರಿತೇನು ಗೊತ್ತಿತ್ತು? (ಬಿ) 1914 ರ ಬಳಿಕ, ಕೆಲವು ವಿವರಣೆಗಳ ಕುರಿತು ದೇವಜನರಿಗೆ ಪ್ರಶ್ನೆಗಳಿದ್ದರೂ ಅವರ ಜೀವನಗಳಿಗೆ ಸ್ವಸ್ಥ ನಿರ್ದೇಶನೆಗಳನ್ನು ಕೊಟ್ಟ ಯಾವ ವಿಷಯಗಳು ಅವರಿಗೆ ತಿಳಿದಿದ್ದವು?
17. ಈ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ, ತನ್ನ ಸೇವಕರು ಹತ್ತಾರು ವರುಷಗಳ ಮೊದಲೇ, 1914 ರಲ್ಲಿ ಇಸ್ರಾಯೇಲ್ಯೇತರರ ಸಮಯಗಳು ಮುಗಿಯುವವೆಂದು ಗ್ರಹಿಸುವಂತೆಯೂ ಯೆಹೋವನು ಸಹಾಯ ಮಾಡಿದನು. (ಲೂಕ 21:24) ಹೌದು, 1ನೇ ಲೋಕ ಯುದ್ಧಾನಂತರದ ಯುಗವನ್ನು ಅವರು ಪ್ರವೇಶಿಸಿದಾಗ ಕಂಗೆಡಿಸುವ ಕೆಲವು ಪ್ರಶ್ನೆಗಳು ಅವರಲ್ಲಿದ್ದವೆಂಬದು ನಿಜ. ಆದರೆ ಅವರಿಗೆ ತಿಳಿದಿದ್ದ ವಿಷಯಗಳು ಅವರು ವಿವೇಕದಿಂದ ವರ್ತಿಸಲು ಸಾಕಾಗಿದ್ದವು. ಹಳೆಯ ವ್ಯವಸ್ಥೆ ನಾಶವಾಗಲು ದೇವರ ತಕ್ಕ ಸಮಯ ನಿಕಟವಾಗಿತ್ತೆಂದು ಅವರು ಶಾಸ್ತ್ರದಿಂದ ತಿಳಿದರು. ಈ ಕಾರಣದಿಂದ, ಅವರ ನಿರೀಕ್ಷೆಯನ್ನು ಅದರ ಮೇಲಿಡುವುದು ಅಥವಾ ಸಾಫಲ್ಯದ ಅದರ ಮಟ್ಟ ಅವರ ಜೀವನವನ್ನು ನಡಸುವಂತೆ ಬಿಡುವುದು ಮೂರ್ಖತನ. ಮತ್ತು ಮಾನವ ಕುಲವನ್ನು ಹಿಂಸಿಸುವ ಎಲ್ಲಾ ಸಮಸ್ಯೆಗಳಿಗೆ ಯೆಹೋವನ ರಾಜ್ಯವೇ ನಿಜ ಪರಿಹಾರವೆಂದು ಅವರು ತಿಳಿದರು. (ದಾನಿಯೇಲ 2:44; ಮತ್ತಾಯ 6:33) ಮತ್ತು ಯೆಹೋವನ ಅಭಿಷಿಕ್ತ ರಾಜನಾದ ಯೇಸು ಕ್ರಿಸ್ತನನ್ನು ಮತ್ತು ಆತನ ರಾಜ್ಯವನ್ನು ಪ್ರಕಟಿಸುವುದು ಎಲ್ಲಾ ಸತ್ರ್ಕೈಸ್ತರ ಜವಾಬ್ದಾರಿ ಎಂಬದನ್ನು ಅವರು ಸ್ಪಷ್ಟವಾಗಿ ತಿಳಿದರು. (ಯೆಶಾಯ 61:1, 2; ಮತ್ತಾಯ 24:14) 1925 ರಲ್ಲಿ ವಾಚ್ಟವರ್ನ “ಜನಾಂಗದ ಜನನ” ವೆಂಬ ಲೇಖನದ ಮುಖೇನ ಪ್ರಕಟನೆ 12ನೇ ಅಧ್ಯಾಯದ ಹೆಚ್ಚು ಸ್ಪಷ್ಟ ಜ್ಞಾನದಿಂದ ಅವರು ಬಲಪಡೆದರು. ಆಗ ಅವರಿಗೆ ಸ್ವರ್ಗದಲ್ಲಿ ಮಾನವ ದೃಷ್ಟಿಗೆ ಅಗೋಚರವಾಗಿ ಏನು ನಡಿಯುತ್ತಿತ್ತೆಂದು ತಿಳಿದುಬಂತು. ಇಂಥ ಒಳನೋಟ ಅವರ ಜೀವನಗಳಿಗೆ ಸ್ವಸ್ಥ ನಿರ್ದೇಶನವನ್ನು ನೀಡಿತು.
18. ನಮಗೆ ಈಗ ಯಾವ ಸುಯೋಗ ಮತ್ತು ಜವಾಬ್ದಾರಿಕೆ ಇವೆ ಮತ್ತು ನಾವು ಯಾವ ಪ್ರಶ್ನೆಗಳನ್ನು ಹಾಕಿ ಕೊಳ್ಳಬೇಕು?
18. ನಂಬಿಕೆಯಿಂದ ವರ್ತಿಸುತ್ತಾ ಯೆಹೋವನ ಸಾಕ್ಷಿಗಳಾಗಿ ಆಗ ಸೇವೆ ಮಾಡುತ್ತಿದ್ದ ಕೆಲವೇ ಸಾವಿರ ಜನರು ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಎಲ್ಲಾ ಭಾಗಗಳಲ್ಲಿ ಸಾರುವುದರಲ್ಲಿ ನುಗ್ಗುಮೊನೆಯಾದರು. ಇದರ ಫಲವಾಗಿ, ಲಕ್ಷಾಂತರ ಜನರು ಯೆಹೋವನನ್ನು ತಿಳಿದು, ಪ್ರೀತಿಸಲು ತೊಡಗಿ, ನಿತ್ಯ ಜೀವದ ಪ್ರತೀಕ್ಷೆಯುಳ್ಳವರಾಗಿದ್ದಾರೆ. ಇವರ ಪ್ರೀತಿಯ ಶ್ರಮದ ಕಾರಣ ಸತ್ಯ ಸ್ವೀಕರಿಸಿರುವ ನಮಗೆ ಯೆಹೋವನು ಕೆಲಸ ಮುಗಿಯಿತೆಂದು ಹೇಳುವ ತನಕ ನಾವು ತಲಪ ಸಾಧ್ಯವಿರುವ ಪ್ರತಿಯೊಬ್ಬರಿಗೆ ಪೂರ್ತಿ ಸಾಕ್ಷಿಯನ್ನು ಕೊಡುತ್ತಾ ಮುಂದುವರಿದು ಈ ಕೆಲಸದಲ್ಲಿ ಪಾಲಿಗರಾಗುವ ಸುಯೋಗ ಮತ್ತು ಜವಾಬ್ದಾರಿ ಇದೆಂದು ಇವರು ತೋರಿಸಿದ್ದಾರೆ. (ಪ್ರಕಟನೆ 22:17; ಇದಕ್ಕೆ ಅಪೋ. 20: 26, 27 ಹೋಲಿಸಿ.) ನೀವು ನಿಮ್ಮ ಜೀವವನ್ನುಪಯೋಗಿಸುವ ವಿಧವು, ಯೆಹೋವನು ತನ್ನ ಸಂಸ್ಥೆಯ ಮೂಲಕ ಕೊಟ್ಟಿರುವ ಒಳನೋಟವನ್ನು ನೀವು ಮಾನ್ಯ ಮಾಡುತ್ತೀರೆಂಬ ರುಜುವಾತನ್ನು ಕೊಡುತ್ತದೋ?
19. (ಎ)ಯೆಹೋವನು ತನ್ನ ಸಂಸ್ಥೆಯ ಮೂಲಕ ಕೊಡುವ ಒಳನೋಟಕ್ಕೆ ತನ್ನ ಜೀವನದಲ್ಲಿ ಮಾನ್ಯತೆ ತೋರಿಸಿದವರೊಬ್ಬರ ದೃಷ್ಟಾಂತ ಕೊಡಿರಿ. (ಬಿ) ನಾವು ಆ ದೃಷ್ಟಾಂತದಿಂದ ಏನು ಕಲಿಯಬಲ್ಲೆವು?
19. ಲೋಕದ ಸರ್ವಭಾಗಗಳಲ್ಲಿ ಒಂದು ಮಹಾ ಸಮೂಹವಾಗಿರುವ ವ್ಯಕ್ತಿಗಳ ಜೀವನಗಳು ಇದು ಹೌದೆಂದು ರುಜುಪಡಿಸುತ್ತವೆ. ಉದಾಹರಣೆಗೆ, ಜಾನ್ ಕಟ್ಫರ್ತ್ ಎಂಬವರನ್ನು ತಕ್ಕೊಳ್ಳಿ. ಸುಮಾರು 49 ವರ್ಪಗಳ ಹಿಂದೆ, ‘ನಂಬಿಗಸ್ತ ಆಳು’ ಈಗ ಹೇಳುವಂತೆಯೇ ಆಗಲೂ ಹೇಳುತ್ತಿದ್ದ, “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವು ನಿಮಗೆ ದೊರಕುವವು. ಆದದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ” ಎಂಬ ಶಾಸ್ತ್ರೀಯ ಬುದ್ಧಿವಾದವನ್ನು ಇವರು ಮನಸ್ಸಿಗೆ ಹಚ್ಚಿಕೊಂಡರು. (ಮತ್ತಾಯ 6:33, 34) ಯೆಹೋವನ ಸೇವೆಯಲ್ಲಿ ಅನೇಕ ವರ್ಷಗಳ ಅನುಭವವನ್ನು ಪಡೆದ ಬಳಿಕ ಸಹೋದರ ಕಟಫರ್ತ್ ಹೇಳಿದ್ದು: ‘ನನ್ನ ಮನಸ್ಸಿನಲ್ಲಿ ಬಲವಾಗಿ ಮುದ್ರೆ ಒತ್ತಿರುವ ಒಂದು ವಿಷಯವೇನಂದರೆ ಯೆಹೋವನು ಭೂಮಿಯ ಮೇಲೆ ನಡಿಸುವ ಒಂದು ಸಂಸ್ಥೆ ಇದೆ, ಮತ್ತು ನಾನು ವೈಯಕ್ತಿಕವಾಗಿ ಆ ಸಂಸ್ಥೆಯೊಂದಿಗೆ ಕೆಲಸ ಮಾಡಬಲ್ಲಿ. ಅದರ ಮಾರ್ಗದರ್ಶನೆ ಮತ್ತು ನಿರ್ದೇಶನೆಯನ್ನು ನಾನು ಪೂರ್ಣವಾಗಿ ಅನುಸರಿಸುವಲ್ಲಿ ಅದು ನನಗೆ ಶಾಂತಿ, ಸಂತುಷ್ಟಿ, ತೃಪ್ತಿ ಮತ್ತು ಅನೇಕ ಮಿತ್ರರು ಮತ್ತು ಹೇರಳವಾದ ಆಶೀರ್ವಾದವನ್ನು ತರುವುದು’. ಇವರು ಅಮೇರಿಕ, ಕೆನಡಾ, ಅಸ್ಟ್ರೇಲಿಯ ಮತ್ತು ಪಾಪುವ ನ್ಯೂಗಿನಿ ದೇಶಗಳಲ್ಲಿ ಹೇರಳ ಆತ್ಮಿಕಾಶೀರ್ವಾದಗಳ ಜೀವನವನ್ನು ಅನುಭವಿಸಿರುವುದರಿಂದ ಈ ದೃಢಭರವಸ ಪದೇಪದೇ ಬಲವಾಗುತ್ತಾ ಹೋಗಿದೆ.b ಆದ್ದರಿಂದ, ಯೆಹೋವನು ಯಾವುದರ ಮೂಲಕ ತನ್ನ ಜನರಿಗೆ ಒಳನೋಟವನ್ನು ಕೊಡುತ್ತಾನೋ ಅದಕ್ಕೆ ಗಣ್ಯತೆಯನ್ನು ಪ್ರತಿಬಿಂಬಿಸುವ ಮಾರ್ಗವೇ ನಮಗೆಲ್ಲರಿಗೆ ನಿಜವಾಗಿಯೂ ವಿವೇಕದ ಮಾರ್ಗವಾಗಿದೆ.—ಮತ್ತಾಯ 6:19-21.
ಒಳನೋಟ ನಷ್ಟವಾದಂತೆ ಎಚ್ಚರ ತೆಗೆದುಕೊಳ್ಳಿ
20, 21. (ಎ)ಕೆಲವರು ತಮಗೆ ಒಮ್ಮೆ ಇದ್ದ ದಿವ್ಯ ಒಳನೋಟವನ್ನು ಕಳೆದುಕೊಂಡದ್ದು ಹೇಗೆ? (ಬಿ) ಹಾನಿಕರವಾದ ಮಾರ್ಗದಿಂದ ನಮ್ಮನ್ನು ಕಾಪಾಡಿಕೊಳ್ಳಲು ಏನು ಸಹಾಯ ಮಾಡುವುದು?
20. ಯೆಹೋವನು ಒದಗಿಸುವ ಒಳನೋಟ ಪಾಲಿಸಬೇಕಾದ ಒಂದು ವಿಧಿ. ಆದರೆ ಯಾವ ಮಾರ್ಗ ನಾವು ಆ ದಿವ್ಯ ಒಳನೋಟವನ್ನು ಪಡೆಯುವಂತೆ ಮಾಡಿದೆಯೋ ಅದರಲ್ಲೀ ನಾವು ಮುಂದರಿಯದಿದ್ದಲ್ಲಿ ಅದನ್ನು ಕಳಕೊಳ್ಳ ಸಾಧ್ಯವಿದೆಂದು ನಮಗೆ ತಿಳಿದಿರಬೇಕು. ಕೆಲವರು ದು:ಖಕರವಾಗಿ ಇದೇ ಅನುಭವವನ್ನು ಪಡೆದಿದ್ದಾರೆ. (ಜ್ಞಾನೋಕ್ತಿ 21:16; ದಾನಿಯೇಲ 11:35) ತಮಗೆ ವೈಯಕ್ತಿಕವಾಗಿ ಸಿಕ್ಕಿದ ಸಲಹೆಯನ್ನು ತಿರಸ್ಕರಿಸುತ್ತಾ ಅವರು ತಮ್ಮ ವರ್ತನೆಯನ್ನು ನ್ಯಾಯೀಕರಿಸಲು ಪ್ರಯತ್ನಿಸಿದರು. ಹೀಗೆ ಹೆಮ್ಮೆ ಅವರಿಗೆ ಬೋನಾಗಿ ಪರಿಣಮಿಸಿತು. ಅವರು ದೇವರ ವಾಕ್ಯ ತಪ್ಪೆಂದು ಹೇಳಿದ್ದನ್ನು ಸರಿಯೆಂದು ಹೇಳತೊಡಗಿ ಯೆಹೋವನ ಸಂಘಟನೆಯಿಂದ ತೊಲಗಿ ಹೋದರು. ಎಷ್ಟು ವಿಷಾಧಕರ!
21. ಇಂಥ ವ್ಯಕ್ತಿಗಳ ಸ್ಥಿತಿಗತಿ ಕೀರ್ತನೆ 36:1-3 ರಲ್ಲಿ ವರ್ಣಿಸಿದಂತಿದೆ. ನಾವಲ್ಲಿ ಓದುವುದು: “ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದು.” ಅಂದರೆ, ಅವನ ಸ್ವಾರ್ಥ ಯೋಚನೆ ಮತ್ತು ಆಶೆಗಳು ತಪ್ಪಿಗೆ ಅವನನ್ನು ನಡಿಸುತ್ತವೆ. “ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ. ಅದು ಅವನನ್ನು ವಂಚಿಸಿ- ನಿನ್ನ ತಪ್ಪು ಬೈಲಿಗೆ ಬರುವುದಿಲ್ಲ, ಹೇಯವಾಗುವುದಿಲ್ಲ ಎಂದು ಊದಿ ಬಿಡುತ್ತದೆ. ಅವನ ಬಾಯಿಂದ ಕೆಡುಕೂ ವಂಚನೆಯೂ ಬರುತ್ತದೆ” ಎಂದು ಕೀರ್ತನೆಗಾರನು ಮುಂದರಿಸುತ್ತಾನೆ. ಮತ್ತು ಅವನಿಗೆ ಇದರ ಪರಿಣಾಮವೋ? ‘ಅವನು ಒಳ್ಳೆಯದನ್ನು ಮಾಡಲು ಒಳನೋಟವಿಲ್ಲದವನಾಗುತ್ತಾನೆ.’ ತಾನು ಮಾಡುವುದು ಸರಿಯೆಂದು ಮಂದಟ್ಟು ಮಾಡಿಕೊಂಡು ಇತರರೂ ಅವನನ್ನು ಹಿಂಬಾಲಿಸುವಂತೆ ವಂಚಿಸುತ್ತಾನೆ. ಆದುದರಿಂದ, ಒಳನೋಟವುಳ್ಳವರಾಗಿರುವುದು ಮಾತ್ರವಲ್ಲ, ನಾವು ಅದನ್ನು ಪಡೆಯುವಂತೆ ಯೆಹೋವನು ಉಪಯೋಗಿಸುವ ಮಾಧ್ಯಮವನ್ನು ಮಾನ್ಯಮಾಡಿ ಅದನ್ನು ಕಾಪಾಡುವದೂ ಎಷ್ಟು ಮಹತ್ವದ ವಿಷಯ! (w89 3/15)
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ 1930-1985 ರ ಕೆಳಗೆ “ಮ್ಯಾರೆಜ್”, “ಫ್ಯಾಮಿಲೀಸ್”, “ಮಾರಲ್ ಬ್ರೇಕ್ಡೌನ್” ಮತ್ತು “ಡಿಪ್ರೆಶನ್ (ಮೆಂಟಲ್)” ನೋಡಿ.
b ಜೂನ್ 1, 1958 ರ ವಾಚ್ಟವರ್ ಪುಟ 333-6 ನೋಡಿ.
ನಿಮಗೇನು ನೆನಪಿದೆ?
◻ ನಾವು ವಿವೇಕದ ನಿರ್ಣಯಗಳನ್ನು ಮಾಡುವಂತೆ ಯಾವುದು ಸಹಾಯ ಮಾಡುವುದು?
◻ “ಒಳನೋಟ” ದಲ್ಲಿ ಏನು ಸೇರಿದೆ?
◻ ಯೆಹೋವನು ನಮ್ಮ ದಿನಗಳಲ್ಲಿ ತನ್ನ ಸೇವಕರಿಗೆ ಹೇಗೆ ಒಳನೋಟವನ್ನು ಕೊಡುತ್ತಾನೆ?
◻ ಯೆಹೋವನು ಕೊಡುವ ಒಳನೋಟದ ಪೂರ್ತಿ ಪ್ರಯೋಜನ ಹೊಂದಲು ನಮ್ಮಿಂದ ಏನು ಕೇಳಿಕೊಳ್ಳಲ್ಪಡುತ್ತದೆ?
[ಪುಟ 28 ರಲ್ಲಿರುವ ಚಿತ್ರ]
ಯೆಹೋವನು ಕೊಡುವ ಒಳನೋಟದಿಂದ ಪ್ರಯೋಜನ ಪಡೆಯಲು ನಾವು ಆತನ ಸಂಸ್ಥೆಯನ್ನು ಗಣ್ಯಮಾಡಿ, ವ್ಯಕ್ತಿಪರ ಅಧ್ಯಯನದಲ್ಲಿ ಶ್ರದ್ಧೆಯಿಂದಿದ್ದು ಕಲಿತದ್ದನ್ನು ಹೇಗೆ ಅನ್ವಯಿಸುವದೆಂದು ಧ್ಯಾನಿಸುವುದು ಅಗತ್ಯ.