“ಯೆಹೋವನಲ್ಲಿ ಅತ್ಯಾನಂದಪಡು”
“ಯೆಹೋವನಲ್ಲಿ ಅತ್ಯಾನಂದಪಡು, ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.”—ಕೀರ್ತನೆ 37:4, NW.
1, 2. ನಿಜ ಸಂತೋಷದ ಮೂಲನು ಯಾರು, ಮತ್ತು ರಾಜ ದಾವೀದನು ಈ ವಾಸ್ತವಾಂಶಕ್ಕೆ ಹೇಗೆ ಗಮನ ಸೆಳೆದನು?
“ತಮ್ಮ ಆತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರು ಸಂತೋಷಿತರು, . . . ಕರುಣೆಯುಳ್ಳವರು ಸಂತೋಷಿತರು, . . . ಸಮಾಧಾನವುಳ್ಳವರು ಸಂತೋಷಿತರು.” ಯಾರು ಸಂತೋಷಿತರು ಎಂಬುದನ್ನು ತಿಳಿಸುವ ಈ ಹೇಳಿಕೆಗಳು ಹಾಗೂ ಇನ್ನಿತರ ಆರು ಅಭಿವ್ಯಕ್ತಿಗಳು, ಸುವಾರ್ತೆಯ ಬರಹಗಾರನಾದ ಮತ್ತಾಯನಿಂದ ದಾಖಲಿಸಲ್ಪಟ್ಟ ಯೇಸುವಿನ ಪ್ರಸಿದ್ಧ ಪರ್ವತ ಪ್ರಸಂಗದ ಗಮನಾರ್ಹ ಪೀಠಿಕೆಯಿಂದ ತೆಗೆಯಲ್ಪಟ್ಟವುಗಳಾಗಿವೆ. (ಮತ್ತಾಯ 5:3-11, NW) ಯೇಸುವಿನ ಈ ಮಾತುಗಳು ಸಂತೋಷವು ನಮಗೆ ನಿಲುಕುವ ವಿಷಯವಾಗಿದೆ ಎಂಬ ಆಶ್ವಾಸನೆಯನ್ನು ಕೊಡುತ್ತವೆ.
2 ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನಿಂದ ಬರೆಯಲ್ಪಟ್ಟ ಒಂದು ಕೀರ್ತನೆಯು ಸಂತೋಷದ ಮೂಲನಾದ ಯೆಹೋವನ ಕಡೆಗೆ ಗಮನವನ್ನು ಸೆಳೆಯುತ್ತದೆ. “ಯೆಹೋವನಲ್ಲಿ ಅತ್ಯಾನಂದಪಡು, ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು,” ಎಂದು ದಾವೀದನು ಹೇಳಿದನು. (ಕೀರ್ತನೆ 37:4, NW) ಆದರೆ ಯೆಹೋವನ ಮತ್ತು ಆತನ ವ್ಯಕ್ತಿತ್ವದ ವಿಭಿನ್ನ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳುವುದನ್ನು ಯಾವುದು ‘ಅತ್ಯಾನಂದಕರವಾದದ್ದಾಗಿ’ ಮಾಡಸಾಧ್ಯವಿದೆ? ತನ್ನ ಉದ್ದೇಶವನ್ನು ನೆರವೇರಿಸುವುದರಲ್ಲಿ ಆತನು ಇದುವರೆಗೂ ಮಾಡಿರುವ ಮತ್ತು ಇನ್ನೂ ಮಾಡಲಿರುವ ವಿಷಯಗಳ ಪರಿಶೀಲನೆಯು ಹೇಗೆ ‘ನಿಮ್ಮ ಇಷ್ಟಾರ್ಥಗಳ ನೆರವೇರಿಕೆಯ’ ನಿರೀಕ್ಷೆಯನ್ನು ನಿಮಗೆ ಕೊಡುತ್ತದೆ? 37ನೆಯ ಕೀರ್ತನೆಯ 1ರಿಂದ 11 ವಚನಗಳ ಒಳನೋಟವು ನಮಗೆ ಉತ್ತರಗಳನ್ನು ಒದಗಿಸುವುದು.
“ಹೊಟ್ಟೆಕಿಚ್ಚುಪಡಬೇಡ”
3, 4. ಕೀರ್ತನೆ 37:1ರಲ್ಲಿ ದಾಖಲಿಸಲ್ಪಟ್ಟಿರುವಂತೆ ಯಾವ ಬುದ್ಧಿವಾದವನ್ನು ದಾವೀದನು ಕೊಡುತ್ತಾನೆ, ಮತ್ತು ಇಂದು ಅದಕ್ಕೆ ಕಿವಿಗೊಡುವುದು ಏಕೆ ಯುಕ್ತವಾಗಿದೆ?
3 ನಾವು ‘ಕಡೇ ದಿವಸಗಳ ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ, ಮತ್ತು ದುಷ್ಟತನವು ತುಂಬಿತುಳುಕುತ್ತಿದೆ. ನಾವು ಅಪೊಸ್ತಲ ಪೌಲನ ಮಾತುಗಳು ನೆರವೇರುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1, 13) ದುಷ್ಟಜನರ ತೋರಿಕೆಯ ಯಶಸ್ಸು ಮತ್ತು ಸಾಫಲ್ಯವನ್ನು ನೋಡಿ, ಅದರಿಂದ ಬಾಧಿಸಲ್ಪಡುವುದು ಅದೆಷ್ಟು ಸುಲಭ! ಇದು ನಮ್ಮ ಆತ್ಮಿಕ ದೃಷ್ಟಿಯನ್ನು ಗುರಿತಪ್ಪಿಸಿ ನಮ್ಮನ್ನು ತಬ್ಬಿಬ್ಬುಗೊಳಿಸಸಾಧ್ಯವಿದೆ. ಈ ಸಂಭಾವ್ಯ ಅಪಾಯದ ಕುರಿತು ಎಚ್ಚರಿಸುತ್ತಾ 37ನೆಯ ಕೀರ್ತನೆಯು ಹೇಗೆ ಆರಂಭಗೊಳ್ಳುತ್ತದೆ ಎಂಬುದನ್ನು ಗಮನಿಸಿ: “ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ.”
4 ಈ ಲೋಕದ ವಾರ್ತಾಮಾಧ್ಯಮವು ನಡೆಯುತ್ತಿರುವ ಅನ್ಯಾಯಗಳ ಕುರಿತು ದೊಡ್ಡ ಪಟ್ಟಿಯನ್ನೇ ಒದಗಿಸುತ್ತವೆ. ಅಪ್ರಾಮಾಣಿಕ ವ್ಯಾಪಾರಿಗಳು ಮೋಸಮಾಡಿದರೂ ತಪ್ಪಿಸಿಕೊಳ್ಳುತ್ತಾರೆ. ಅಪರಾಧಿಗಳು ಬಡಪಾಯಿಗಳನ್ನು ಶೋಷಣೆಮಾಡುತ್ತಾರೆ. ಕೊಲೆಪಾತಕರು ಕೈಗೆ ಸಿಗುವುದಿಲ್ಲ ಅಥವಾ ದಂಡನೆಯಿಂದ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ವಕ್ರವಾದ ನ್ಯಾಯತೀರಿಸುವಿಕೆಯ ಉದಾಹರಣೆಗಳು ಕೋಪವನ್ನು ಉದ್ರೇಕಿಸಬಹುದು ಮತ್ತು ನಮ್ಮ ಮನಶ್ಶಾಂತಿಯನ್ನು ಕೆಡಿಸಬಹುದು. ದುರಾಚಾರಿಗಳ ತೋರಿಕೆಯ ಯಶಸ್ಸು ನಮ್ಮನ್ನು ಅಸೂಯೆಪಡುವಂತೆ ಮಾಡಬಹುದು. ಆದರೆ ನಾವು ಅಸಮಾಧಾನಪಡುವುದರಿಂದ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಬಲ್ಲದೋ? ದುಷ್ಟರು ಅನುಭವಿಸುವ ತಾತ್ಕಾಲಿಕ ಅನುಕೂಲಗಳನ್ನು ನೋಡಿ ಅಸೂಯೆಪಡುವುದು ಅವರ ಅಂತಿಮ ಫಲವನ್ನು ಬದಲಾಯಿಸಬಲ್ಲದೋ? ಖಂಡಿತವಾಗಿಯೂ ಇಲ್ಲ! ಮತ್ತು ನಾವು ಈ ವಿಷಯದಲ್ಲಿ ‘ಉರಿಗೊಳ್ಳುವ’ ಅಗತ್ಯವೇ ಇಲ್ಲ. ಯಾಕೆ?
5. ದುಷ್ಕರ್ಮಿಗಳನ್ನು ಏಕೆ ಹುಲ್ಲಿಗೆ ಹೋಲಿಸಲಾಗಿದೆ?
5 ಕೀರ್ತನೆಗಾರನು ಉತ್ತರಿಸುವುದು: “ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.” (ಕೀರ್ತನೆ 37:2) ಹಸುರು ಹುಲ್ಲು ಸುಂದರವಾಗಿ ಕಾಣಬಹುದು, ಆದರೆ ಅದರ ಗರಿಗಳು ಬೇಗನೆ ಬಾಡಿ ಮುದುರಿಹೋಗುತ್ತವೆ. ದುಷ್ಕರ್ಮಿಗಳ ವಿಷಯದಲ್ಲೂ ಇದು ಸತ್ಯ. ಅವರ ತೋರಿಕೆಯ ಸಾಫಲ್ಯವು ಶಾಶ್ವತವಲ್ಲ. ಸಾಯುವಾಗ, ಅವರು ಅಕ್ರಮವಾಗಿ ಸಂಪಾದಿಸಿರುವ ವಸ್ತುಗಳು ಅವರಿಗೆ ಇನ್ನು ಯಾವ ಪ್ರಯೋಜನಕ್ಕೂ ಬಾರವು. ಅವರು ಕೊನೆಗೆ ನ್ಯಾಯದ ಕೈಗೆ ಸಿಕ್ಕಿಕೊಳ್ಳುತ್ತಾರೆ. “ಪಾಪವು ಕೊಡುವ ಸಂಬಳ ಮರಣ” ಎಂದು ಪೌಲನು ಬರೆದನು. (ರೋಮಾಪುರ 6:23) ದುಷ್ಕರ್ಮಿಗಳು ಮತ್ತು ಅನೀತಿವಂತರಾಗಿರುವ ಎಲ್ಲರಿಗೂ ಕೊನೆಯದಾಗಿ ಸಿಗುವ “ಸಂಬಳ” ಇದೇ ಆಗಿರುವುದು. ಎಂತಹ ನಿಷ್ಪ್ರಯೋಜಕ ಜೀವನವಿದು!—ಕೀರ್ತನೆ 37:35, 36; 49:16, 17.
6. ಕೀರ್ತನೆ 37:1, 2ರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
6 ಹೀಗಿರುವುದರಿಂದ, ದುಷ್ಕರ್ಮಿಗಳ ಕ್ಷಣಿಕ ಸಾಫಲ್ಯವು ನಮ್ಮ ನೆಮ್ಮದಿಯನ್ನು ಕೆಡಿಸುವಂತೆ ಬಿಡಬೇಕೋ? 37ನೆಯ ಕೀರ್ತನೆಯ ಮೊದಲ ಎರಡು ವಚನಗಳಿಂದ ನಾವು ಕಲಿತುಕೊಳ್ಳುವ ಪಾಠವು ಇದೇ ಆಗಿದೆ: ಅವರ ಯಶಸ್ಸು ನೀವು ಯೆಹೋವನನ್ನು ಸೇವಿಸಲು ಆಯ್ಕೆಮಾಡಿರುವ ಮಾರ್ಗದಿಂದ ನಿಮ್ಮನ್ನು ದಾರಿತಪ್ಪಿಸುವಂತೆ ಅನುಮತಿಸದಿರಿ. ಬದಲಿಗೆ, ನಿಮ್ಮ ಲಕ್ಷ್ಯವು ಆತ್ಮಿಕ ಆಶೀರ್ವಾದಗಳು ಮತ್ತು ಗುರಿಗಳ ಮೇಲೆ ಕೇಂದ್ರೀಕೃತವಾಗಿರಲಿ.—ಜ್ಞಾನೋಕ್ತಿ 23:17.
“ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು”
7. ನಾವು ಏಕೆ ಯೆಹೋವನಲ್ಲಿ ಭರವಸವಿಡಬೇಕು?
7 “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು” ಎಂದು ಕೀರ್ತನೆಗಾರನು ಪ್ರೋತ್ಸಾಹಿಸುತ್ತಾನೆ. (ಕೀರ್ತನೆ 37:3ಎ) ನಾವು ಚಿಂತೆಗಳು ಅಥವಾ ಒಂದುವೇಳೆ ಸಂಶಯಗಳಿಂದಲೂ ಸುತ್ತುವರಿಯಲ್ಪಟ್ಟಿರುವಾಗ, ನಮ್ಮ ನಂಬಿಕೆಯು ಯೆಹೋವನಲ್ಲಿ ಬೇರೂರಿರಬೇಕು. ಸಂಪೂರ್ಣವಾದ ಆತ್ಮಿಕ ಭದ್ರತೆಯನ್ನು ನೀಡುವವನು ಆತನೇ ಆಗಿದ್ದಾನೆ. “ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು” ಎಂದು ಮೋಶೆಯು ಬರೆದನು. (ಕೀರ್ತನೆ 91:1) ಈ ವಿಷಯಗಳ ವ್ಯವಸ್ಥೆಯಲ್ಲಿ ಉಲ್ಬಣಗೊಳ್ಳುತ್ತಿರುವ ದುಷ್ಟತನದಿಂದ ಕ್ಷೋಭೆಗೊಂಡಿರುವಾಗ, ನಾವು ಹೆಚ್ಚೆಚ್ಚಾಗಿ ಯೆಹೋವನ ಮೇಲೆ ಆತುಕೊಳ್ಳುವುದು ಆವಶ್ಯಕವಾಗಿದೆ. ನಾವು ಒಂದು ಕಣಕಾಲನ್ನು ಉಳುಕಿಸಿಕೊಳ್ಳುವಾಗ, ಸ್ನೇಹಿತನೊಬ್ಬನು ಸಹಾಯಹಸ್ತವನ್ನು ನೀಡುವುದಾದರೆ ಸಂತೋಷಿಸುತ್ತೇವೆ. ತದ್ರೀತಿಯಲ್ಲಿ, ನಾವು ನಂಬಿಗಸ್ತಿಕೆಯಿಂದ ನಡೆಯಲು ಪ್ರಯತ್ನಿಸುವಾಗ, ನಮಗೆ ಯೆಹೋವನ ಬೆಂಬಲದ ಅಗತ್ಯವಿದೆ.—ಯೆಶಾಯ 50:10.
8. ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದು, ದುಷ್ಟರ ಸಾಫಲ್ಯವನ್ನು ನೋಡಿ ಮಿತಿಮೀರಿ ಕ್ಷೋಭೆಗೊಳ್ಳುವುದನ್ನು ತಡೆಗಟ್ಟಲು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?
8 ನಾವು ದುಷ್ಟರ ಸಾಫಲ್ಯವನ್ನು ನೋಡಿ ಕ್ಷೋಭೆಗೊಳ್ಳುವುದರಿಂದ ನಮ್ಮನ್ನು ತಡೆಯಬಲ್ಲ ಒಂದು ಪರಿಹಾರ ಮಾರ್ಗವು, ಕುರಿಸದೃಶ ವ್ಯಕ್ತಿಗಳಿಗಾಗಿ ಹುಡುಕಿ, ಯೆಹೋವನ ಉದ್ದೇಶದ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುವುದರಲ್ಲಿ ನಮ್ಮನ್ನು ನಿರತರಾಗಿಸಿಕೊಳ್ಳುವುದೇ ಆಗಿದೆ. ದುಷ್ಟತನವು ಗಗನಕ್ಕೇರುತ್ತಿರುವುದನ್ನು ಕಾಣುವಾಗ, ನಾವು ಇತರರಿಗೆ ಸಹಾಯಮಾಡುವುದರಲ್ಲಿ ನಮ್ಮನ್ನು ಸಂಪೂರ್ಣವಾಗಿ ನಿರತರಾಗಿಸಿಕೊಳ್ಳಬೇಕಾಗಿದೆ. “ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ” ಎಂದು ಅಪೊಸ್ತಲ ಪೌಲನು ಬರೆದನು, ಏಕೆಂದರೆ “ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” ದೇವರ ರಾಜ್ಯದ ಮಹಿಮಾನ್ವಿತ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ನಾವು ಮಾಡಬಲ್ಲ ಅತಿ ದೊಡ್ಡ “ಪರೋಪಕಾರ”ವಾಗಿದೆ. ನಮ್ಮ ಸಾರ್ವಜನಿಕ ಸಾರುವಿಕೆಯು ನಿಜವಾಗಿಯೂ ಒಂದು “ಸ್ತೋತ್ರಯಜ್ಞ”ವಾಗಿದೆ.—ಇಬ್ರಿಯ 13:15, 16; ಗಲಾತ್ಯ 6:10.
9. ‘ದೇಶದಲ್ಲಿ ವಾಸವಾಗಿರು’ ಎಂಬ ದಾವೀದನ ಉತ್ತೇಜನವನ್ನು ವಿವರಿಸಿರಿ.
9 “ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು” ಎಂದು ದಾವೀದನು ಮುಂದುವರಿಸುತ್ತಾನೆ. (ಕೀರ್ತನೆ 37:3ಬಿ) ಇಲ್ಲಿ ತಿಳಿಸಲ್ಪಟ್ಟಿರುವ “ದೇಶ”ವು ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ವಾಗ್ದತ್ತ ದೇಶವಾಗಿತ್ತು. ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ಅದರ ಗಡಿಯು ಉತ್ತರಕ್ಕೆ ದಾನ್ಪಟ್ಟಣದ ವರೆಗೂ ದಕ್ಷಿಣಕ್ಕೆ ಬೇರ್ಷೆಬದ ವರೆಗೂ ವ್ಯಾಪಿಸಿತ್ತು. ಇದು ಇಸ್ರಾಯೇಲಿನ ವಾಸಸ್ಥಳವಾಗಿತ್ತು. (1 ಅರಸುಗಳು 4:25) ಇಂದು ನಾವು ಲೋಕದ ಯಾವುದೇ ಭಾಗದಲ್ಲಿ ಜೀವಿಸುತ್ತಿರಲಿ, ನೀತಿಭರಿತ ಹೊಸ ಲೋಕದಲ್ಲಿ ಭೂಗ್ರಹವೆಲ್ಲಾ ಪರದೈಸಾಗುವ ಆ ಸಮಯಕ್ಕಾಗಿ ಎದುರುನೋಡುತ್ತಿದ್ದೇವೆ. ಈಮಧ್ಯೆ ನಾವು ಆತ್ಮಿಕ ಭದ್ರತೆಯಲ್ಲಿ ಜೀವಿಸುತ್ತಿದ್ದೇವೆ.—ಯೆಶಾಯ 65:13, 14.
10. ನಾವು “ನಂಬಿಕೆಯನ್ನು ಅನುಸರಿಸು”ವಾಗ ಫಲಿತಾಂಶವು ಏನಾಗಿರುವುದು?
10 ನಾವು “ನಂಬಿಕೆಯನ್ನು ಅನುಸರಿಸು”ವಾಗ ಅದರ ಫಲಿತಾಂಶವೇನಾಗಿರುವುದು? ಪ್ರೇರಿತ ಜ್ಞಾನೋಕ್ತಿಯು ನಮಗೆ ಜ್ಞಾಪಕ ಹುಟ್ಟಿಸುವುದು: “ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು.” (ಜ್ಞಾನೋಕ್ತಿ 28:20) ನಾವು ಎಲ್ಲಿ ಜೀವಿಸುತ್ತಿರುವುದಾದರೂ, ನಮ್ಮಿಂದ ಸಾಧ್ಯವಿರುವವರಿಗೆಲ್ಲಾ ಸುವಾರ್ತೆಯನ್ನು ಸಾರುವುದರಲ್ಲಿ ನಂಬಿಗಸ್ತಿಕೆಯಿಂದ ಪಟ್ಟುಹಿಡಿಯುವುದು ಖಂಡಿತವಾಗಿಯೂ ಯೆಹೋವನ ಆಶೀರ್ವಾದಗಳನ್ನು ತರುತ್ತದೆ. ಉದಾಹರಣೆಗೆ, ಫ್ರ್ಯಾಂಕ್ ಮತ್ತು ಅವರ ಹೆಂಡತಿಯಾದ ರೋಸ್, ಉತ್ತರ ಸ್ಕಾಟ್ಲೆಂಡ್ನ ಒಂದು ಪಟ್ಟಣದಲ್ಲಿ 40 ವರ್ಷಗಳ ಹಿಂದೆ ಪಯನೀಯರ್ ನೇಮಕವನ್ನು ಸ್ವೀಕರಿಸಿದರು. ಆಸಕ್ತಿಯನ್ನು ತೋರಿಸಿದ್ದ ಅಲ್ಲಿನ ಕೊಂಚ ಮಂದಿ ಸತ್ಯದಲ್ಲಿ ತಮ್ಮ ಅಭಿರುಚಿಯನ್ನು ಕಳೆದುಕೊಂಡಿದ್ದರು. ಮನಗುಂದದೆ, ಈ ಪಯನೀಯರ್ ದಂಪತಿಯು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈಗ ಆ ಪಟ್ಟಣದಲ್ಲಿ ಫಲಪ್ರದವಾದ ಒಂದು ಸಭೆಯಿದೆ. ಈ ದಂಪತಿಯ ನಂಬಿಗಸ್ತಿಕೆಗೆ ನಿಜವಾಗಿಯೂ ಯೆಹೋವನ ಆಶೀರ್ವಾದವಿತ್ತು. “ಸತ್ಯದಲ್ಲಿ ಉಳಿದಿರುವುದು ಮತ್ತು ಯೆಹೋವನಿಂದ ಉಪಯೋಗಿಸಲ್ಪಡುವುದೇ ಒಂದು ದೊಡ್ಡ ಆಶೀರ್ವಾದವಾಗಿದೆ,” ಎಂದು ಫ್ರ್ಯಾಂಕ್ ವಿನಯದಿಂದ ವಿವರಿಸುತ್ತಾರೆ. ಹೌದು, ನಾವು “ನಂಬಿಕೆಯನ್ನು ಅನುಸರಿಸು”ವಾಗ ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತೇವೆ ಮತ್ತು ಅವುಗಳನ್ನು ಗಣ್ಯಮಾಡುತ್ತೇವೆ.
“ಯೆಹೋವನಲ್ಲಿ ಅತ್ಯಾನಂದಪಡು”
11, 12. (ಎ) ನಾವು ‘ಯೆಹೋವನಲ್ಲಿ ಅತ್ಯಾನಂದಪಡುವುದು’ ಹೇಗೆ? (ಬಿ) ವೈಯಕ್ತಿಕ ಅಧ್ಯಯನದ ವಿಷಯದಲ್ಲಿ ನೀವು ಯಾವ ಗುರಿಯನ್ನು ಇಡಬಲ್ಲಿರಿ, ಮತ್ತು ಯಾವ ಅಪೇಕ್ಷಿತ ಫಲಿತಾಂಶದೊಂದಿಗೆ?
11 ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಲು ಮತ್ತು ಆತನಲ್ಲಿರುವ ನಮ್ಮ ಭರವಸೆಯನ್ನು ಕಾಪಾಡಿಕೊಳ್ಳಲು, ನಾವು ‘ಯೆಹೋವನಲ್ಲಿ ಅತ್ಯಾನಂದಪಡಬೇಕಾಗಿದೆ.’ (ಕೀರ್ತನೆ 37:4ಎ, NW) ನಾವು ಅದನ್ನು ಮಾಡುವುದು ಹೇಗೆ? ನಮ್ಮ ಸ್ವಂತ ಪರಿಸ್ಥಿತಿಯ ಕುರಿತಾದ ಚಿಂತೆಯಲ್ಲೇ ಮುಳುಗಿರುವುದರ ಬದಲಿಗೆ, ನಮ್ಮ ಪರಿಸ್ಥಿತಿಯು ಕಷ್ಟಕರವಾಗಿರುವುದಾದರೂ, ನಾವು ಯೆಹೋವನನ್ನು ನಮ್ಮ ಕೇಂದ್ರಬಿಂದುವಾಗಿ ಮಾಡಿಕೊಳ್ಳುವ ಮೂಲಕವೇ. ಇದನ್ನು ಮಾಡಬಲ್ಲ ಒಂದು ವಿಧವು ಆತನ ವಾಕ್ಯವನ್ನು ಓದುವುದೇ ಆಗಿದೆ. (ಕೀರ್ತನೆ 1:1, 2) ನಿಮ್ಮ ಬೈಬಲ್ ಓದುವಿಕೆಯು ನಿಮಗೆ ಆನಂದವನ್ನು ತರುತ್ತದೋ? ಯೆಹೋವನ ಕುರಿತು ಹೆಚ್ಚನ್ನು ಕಲಿಯುವ ಗುರಿಯೊಂದಿಗೆ ನೀವು ಓದುವುದಾದರೆ ಅದು ಆನಂದವನ್ನು ತರುವುದು. ಒಂದು ಭಾಗವನ್ನು ಓದಿದ ನಂತರ ಸ್ವಲ್ಪ ನಿಲ್ಲಿಸಿ, ‘ಈ ವಾಚನಭಾಗವು ನನಗೆ ಯೆಹೋವನ ಕುರಿತು ಏನನ್ನು ಕಲಿಸಿತು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ನೀವು ಬೈಬಲನ್ನು ಓದುವಾಗ ಒಂದು ನೋಟ್ಪುಸ್ತಕವನ್ನೋ ಅಥವಾ ಒಂದು ಚಿಕ್ಕ ಪೇಪರನ್ನೋ ಸಮೀಪದಲ್ಲಿ ಇಟ್ಟುಕೊಳ್ಳುವುದು ಸಹಾಯಕಾರಿಯಾಗಿರಬಹುದು. ನೀವು ಓದಿದ ವಿಷಯದ ಕುರಿತು ಮನನಮಾಡಲಿಕ್ಕಾಗಿ ಪ್ರತಿ ಬಾರಿ ಓದನ್ನು ನಿಲ್ಲಿಸುವಾಗಲೂ, ಯೆಹೋವನ ಮನಸೆಳೆವ ಗುಣಗಳ ಕುರಿತು ಜ್ಞಾಪಿಸುವಂಥ ಒಂದು ವಾಕ್ಯವನ್ನು ಬರೆಯಿರಿ. ಮತ್ತೊಂದು ಕೀರ್ತನೆಯಲ್ಲಿ ದಾವೀದನು ಹಾಡಿದ್ದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ [“ರಮ್ಯವಾಗಿರಲಿ,” NW].” (ಕೀರ್ತನೆ 19:14) ನಾವು ಈ ರೀತಿಯಲ್ಲಿ ದೇವರ ವಾಕ್ಯದ ಕಡೆಗೆ ಗಮನಹರಿಸುವುದು ಯೆಹೋವನಿಗೆ ‘ರಮ್ಯವಾಗಿದೆ’ ಮತ್ತು ನಮಗೂ ರಮ್ಯವಾಗಿರುತ್ತದೆ.
12 ನಮ್ಮ ಅಧ್ಯಯನ ಮತ್ತು ಧ್ಯಾನದ ಮೂಲಕ ನಾವು ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲೆವು? ನಾವು ನಮ್ಮಿಂದಾದಷ್ಟು ಮಟ್ಟಿಗೆ ಯೆಹೋವನ ಮತ್ತು ಆತನ ಮಾರ್ಗಗಳ ಕುರಿತು ಕಲಿಯುವುದನ್ನು ನಮ್ಮ ಹೇತುವಾಗಿ ಮಾಡಿಕೊಳ್ಳಬಹುದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಮತ್ತು ಯೆಹೋವನ ಸಮೀಪಕ್ಕೆ ಬನ್ನಿರಿa ಎಂಬ ಪ್ರಕಾಶನಗಳು, ನಾವು ಗಣ್ಯತೆಯಿಂದ ಮನನಮಾಡಲು ಸಾಕಷ್ಟು ಮಾಹಿತಿಯನ್ನು ಒದಗಿಸುತ್ತವೆ. ಇದಕ್ಕೆ ಪ್ರತಿಯಾಗಿ, ಯೆಹೋವನು “ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವನು” ಎಂದು ದಾವೀದನು ನೀತಿವಂತರಿಗೆ ಆಶ್ವಾಸನೆ ನೀಡುತ್ತಾನೆ. (ಕೀರ್ತನೆ 37:4ಬಿ) ಈ ರೀತಿಯ ಆಶ್ವಾಸನೆಯೇ ಅಪೊಸ್ತಲ ಯೋಹಾನನನ್ನು ಹೀಗೆ ಬರೆಯುವಂತೆ ಪ್ರೇರಿಸಿರಬೇಕು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಬೇಡಿದವುಗಳು ಆತನಿಂದ ನಮಗೆ ದೊರೆತವೆಂಬದೂ ನಮಗೆ ಗೊತ್ತಾಗಿದೆ.”—1 ಯೋಹಾನ 5:14, 15.
13. ಇತ್ತೀಚಿನ ವರ್ಷಗಳಲ್ಲಿ, ರಾಜ್ಯ ಸಾರುವಿಕೆಯ ಯಾವ ವಿಸ್ತರಣೆಯನ್ನು ಅನೇಕ ದೇಶಗಳಲ್ಲಿ ಗಮನಿಸಲಾಗಿದೆ?
13 ಸಮಗ್ರತೆ ಪಾಲಕರೋಪಾದಿ, ನಮ್ಮ ಪ್ರಪ್ರಧಾನ ಆನಂದವು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವನ್ನು ನೋಡುವುದೇ ಆಗಿದೆ. (ಜ್ಞಾನೋಕ್ತಿ 27:11) ಈ ಮುಂಚೆ ನಿರಂಕುಶಪ್ರಭುತ್ವ ಅಥವಾ ಸರ್ವಾಧಿಕಾರ ಆಡಳಿತದ ಕೆಳಗಿದ್ದ ದೇಶಗಳಲ್ಲಿ ನಮ್ಮ ಸಹೋದರರು ಮಾಡುತ್ತಿರುವ ಮಹತ್ತರವಾದ ಸಾರುವಿಕೆಯ ಕುರಿತು ಕೇಳಿಸಿಕೊಳ್ಳುವಾಗ ನಮ್ಮ ಹೃದಯಗಳು ಆನಂದದಿಂದ ತುಂಬಿತುಳುಕುವುದಿಲ್ಲವೋ? ಈ ವ್ಯವಸ್ಥೆಯು ಅಂತ್ಯಗೊಳ್ಳುವ ಮುನ್ನ ಇನ್ನಾವ ಸ್ವಾತಂತ್ರವು ಸಿಗುತ್ತದೆ ಎಂಬುದನ್ನು ಕಾಣಲು ನಾವು ಹಂಬಲದಿಂದ ಎದುರುನೋಡುತ್ತೇವೆ. ಪಾಶ್ಚಾತ್ಯ ದೇಶಗಳಲ್ಲಿ ವಾಸಿಸುತ್ತಿರುವ ಅನೇಕ ಯೆಹೋವನ ಸೇವಕರು, ತಮ್ಮ ದೇಶಗಳಲ್ಲಿ ತಾತ್ಕಾಲಿಕವಾಗಿ ಬಂದು ಉಳಿಯುವ ಮತ್ತು ಆರಾಧನೆಯ ಸ್ವಾತಂತ್ರ್ಯದಲ್ಲಿ ಆನಂದಿಸುವ ವಿದ್ಯಾರ್ಥಿಗಳು, ನಿರಾಶ್ರಿತರು, ಮತ್ತು ಇತರರಿಗೆ ಸಾರುವುದರಲ್ಲಿ ಹುರುಪಿನಿಂದ ಒಳಗೂಡುತ್ತಾರೆ. ಈ ವ್ಯಕ್ತಿಗಳು ತಮ್ಮ ದೇಶಗಳಿಗೆ ಹಿಂದೆರಳುವಾಗ, ಸತ್ಯದ ಬೆಳಕು ಪ್ರಕಾಶಿಸದಂತೆ ನಿರ್ಬಂಧಕ್ಕೊಳಗಾಗಿರುವ ದೇಶಗಳಲ್ಲೂ ಅವರು ಬೆಳಕನ್ನು ಪ್ರಕಾಶಿಸುತ್ತಾ ಮುಂದುವರಿಯಲಿ ಎಂಬುದು ನಮ್ಮ ಹಾರೈಕೆಯಾಗಿದೆ.—ಮತ್ತಾಯ 5:14-16.
‘ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಡು’
14. ನಾವು ಯೆಹೋವನ ಮೇಲೆ ಆತುಕೊಳ್ಳಸಾಧ್ಯವಿದೆ ಎಂಬುದಕ್ಕೆ ಯಾವ ಪುರಾವೆಯಿದೆ?
14 ನಮ್ಮ ಚಿಂತೆಗಳು ಮತ್ತು ಯಾವೆಲ್ಲಾ ವಿಷಯಗಳು ನಮಗೆ ಒತ್ತಡಭರಿತ ಹೊರೆಗಳಾಗಿ ತೋರುತ್ತವೋ ಅವೆಲ್ಲವೂ ತೆಗೆದುಹಾಕಲ್ಪಡುವವು ಎಂಬುದನ್ನು ತಿಳಿಯುವುದು ಎಷ್ಟು ಸಾಂತ್ವನದಾಯಕವಾಗಿದೆ! ಹೇಗೆ? “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು,” ಎಂದು ದಾವೀದನು ಹೇಳುತ್ತಾನೆ. (ಕೀರ್ತನೆ 37:5) ಬೆಂಬಲಕ್ಕಾಗಿ ನಾವು ಯೆಹೋವನ ಮೇಲೆ ಆತುಕೊಳ್ಳಸಾಧ್ಯವಿದೆ ಎಂಬುದಕ್ಕೆ ಸಾಕಷ್ಟು ಪುರಾವೆಯನ್ನು ನಾವು ನಮ್ಮ ಸಭೆಗಳಲ್ಲಿ ಕಂಡುಕೊಳ್ಳುತ್ತೇವೆ. (ಕೀರ್ತನೆ 55:22) ಪೂರ್ಣ ಸಮಯದ ಶುಶ್ರೂಷೆಯಲ್ಲಿರುವವರು, ಅವರು ಪಯನೀಯರರಾಗಿರಲಿ, ಸಂಚರಣ ಮೇಲ್ವಿಚಾರಕರಾಗಿರಲಿ, ಮಿಷನೆರಿಗಳಾಗಿರಲಿ, ಅಥವಾ ಬೆತೆಲ್ನಲ್ಲಿ ಸೇವೆಮಾಡುತ್ತಿರುವ ಸ್ವಯಂ ಸೇವಕರಾಗಿರಲಿ, ಯೆಹೋವನ ಆರೈಕೆಯ ಭರವಸಾರ್ಹತೆಗೆ ಸಾಕ್ಷ್ಯವನ್ನು ನೀಡಬಲ್ಲರು. ನಿಮಗೆ ಪರಿಚಿತರಾಗಿರುವವರೊಂದಿಗೆ ಮಾತನಾಡಿ ಯೆಹೋವನು ಅವರಿಗೆ ಹೇಗೆ ಸಹಾಯವನ್ನು ನೀಡಿದ್ದಾನೆ ಎಂಬುದನ್ನು ಯಾಕೆ ಕೇಳಿನೋಡಬಾರದು? ಕಷ್ಟದ ಸಮಯಗಳಲ್ಲಿಯೂ ಯೆಹೋವನ ಕೈ ಮೋಟುಗೈಯಾಗಿರಲಿಲ್ಲ ಎಂಬುದನ್ನು ತೋರಿಸುವ ಅನೇಕ ಅನುಭವಗಳನ್ನು ನೀವು ನಿಸ್ಸಂದೇಹವಾಗಿಯೂ ಕೇಳಿಸಿಕೊಳ್ಳುವಿರಿ. ಆತನು ಜೀವನದ ಆವಶ್ಯಕತೆಗಳನ್ನು ಸದಾ ಒದಗಿಸುತ್ತಾನೆ.—ಕೀರ್ತನೆ 37:25; ಮತ್ತಾಯ 6:25-34.
15. ದೇವಜನರ ನೀತಿಯು ಹೇಗೆ ಪ್ರಕಾಶಿಸುವುದು?
15 ನಾವು ಯೆಹೋವನಲ್ಲಿ ಎಳ್ಳಷ್ಟೂ ಸಂದೇಹವಿಲ್ಲದೆ ಭರವಸವಿಡುವುದಾದರೆ, ದಾವೀದನ ಮುಂದಿನ ಮಾತುಗಳ ಅನುಭವ ನಮಗಾಗುವುದು: “ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.” (ಕೀರ್ತನೆ 37:6) ಯೆಹೋವನ ಸಾಕ್ಷಿಗಳಾಗಿರುವ ನಾವು ಅನೇಕವೇಳೆ ತಪ್ಪಾಗಿ ಪ್ರತಿನಿಧಿಸಲ್ಪಡುತ್ತೇವೆ. ಆದರೆ ನಮ್ಮ ಸಾರ್ವಜನಿಕ ಶುಶ್ರೂಷೆಯು ಯೆಹೋವನಿಗಾಗಿರುವ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ಪ್ರಚೋದಿತವಾಗಿದೆ ಎಂಬುದನ್ನು ನೋಡುವಂತೆ ಯೆಹೋವನು ಪ್ರಾಮಾಣಿಕ ಹೃದಯಿಗಳ ಕಣ್ಣನ್ನು ತೆರೆಯುತ್ತಾನೆ. ಅದೇ ಸಮಯದಲ್ಲಿ, ಅನೇಕರಿಂದ ತಪ್ಪಾಗಿ ಪ್ರತಿನಿಧಿಸಲ್ಪಟ್ಟರೂ, ನಮ್ಮ ಸುನಡತೆಯು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಎಲ್ಲಾ ರೀತಿಯ ವಿರೋಧ ಮತ್ತು ಹಿಂಸೆಯ ಎದುರಿನಲ್ಲಿ ಯೆಹೋವನು ನಮಗೆ ಆಸರೆಯಾಗಿರುತ್ತಾನೆ. ಇದರ ಪರಿಣಾಮವಾಗಿ, ದೇವಜನರ ನೀತಿಯು ಮಧ್ಯಾಹ್ನದ ಸೂರ್ಯನಂತೆ ಪ್ರಕಾಶಿಸುತ್ತದೆ.—1 ಪೇತ್ರ 2:12.
“ಶಾಂತನಾಗಿ . . . ಕಾದಿರು”
16, 17. ಕೀರ್ತನೆ 37:7ಕ್ಕೆ ಹೊಂದಿಕೆಯಲ್ಲಿ, ಯಾವುದಕ್ಕೆ ಈಗ ಸಮಯ ಬಂದಿದೆ, ಮತ್ತು ಏಕೆ?
16 ಕೀರ್ತನೆಗಾರನ ಮುಂದಿನ ಮಾತುಗಳು ಹೀಗಿವೆ: “ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.” (ಕೀರ್ತನೆ 37:7) ಯೆಹೋವನು ಕ್ರಿಯೆಗೈಯುವಂತೆ ನಾವು ತಾಳ್ಮೆಯಿಂದ ಕಾಯುವ ಆವಶ್ಯಕತೆಯನ್ನು ಇಲ್ಲಿ ದಾವೀದನು ಒತ್ತಿಹೇಳುತ್ತಾನೆ. ಈ ವ್ಯವಸ್ಥೆಯ ಅಂತ್ಯವು ಇನ್ನು ಬಂದಿಲ್ಲವಾದರೂ, ಇದು ವಿಷಾದಿಸಲು ಯಾವುದೇ ಕಾರಣವಾಗಿರುವುದಿಲ್ಲ. ನಾವು ಮೊದಲು ಯೋಚಿಸಿದ್ದಕ್ಕಿಂತಲೂ ಯೆಹೋವನ ಕರುಣೆ ಮತ್ತು ತಾಳ್ಮೆ ಎಷ್ಟೋ ಮಹತ್ತರವಾಗಿದೆ ಎಂಬುದನ್ನು ನಾವು ಕಂಡಿರುವುದಿಲ್ಲವೋ? ಅಂತ್ಯವು ಬರುವ ಮುನ್ನ ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯನಿರತರಾಗಿರುತ್ತಾ ನಾವೂ ತಾಳ್ಮೆಯಿಂದ ಕಾಯುತ್ತಿದ್ದೇವೆ ಎಂಬುದನ್ನು ಈಗ ನಾವು ತೋರಿಸಬಲ್ಲೆವೋ? (ಮಾರ್ಕ 13:10) ನಮ್ಮ ಸಂತೋಷ ಮತ್ತು ಆತ್ಮಿಕ ಭದ್ರತೆಯನ್ನು ಕೆಡವಿಹಾಕಬಲ್ಲ ಯಾವುದೇ ದುಡುಕಿನ ವರ್ತನೆಗಳನ್ನು ತ್ಯಜಿಸುವ ಸಮಯವು ಇದೇ ಆಗಿದೆ. ಸೈತಾನನ ಲೋಕದ ಭ್ರಷ್ಟಗೊಳಿಸುವ ಪ್ರಭಾವವನ್ನು ಬಲವಾಗಿ ಪ್ರತಿಭಟಿಸುವ ಸಮಯವು ಇದೇ ಆಗಿದೆ. ಮತ್ತು ನೈತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಹಾಗೂ ಯೆಹೋವನೊಂದಿಗಿನ ನಮ್ಮ ನೀತಿಯ ನಿಲುವನ್ನು ಗಂಡಾಂತರಕ್ಕೊಡ್ಡದಿರುವ ಸಮಯವು ಇದೇ ಆಗಿದೆ. ನಾವು ಅನೈತಿಕ ಯೋಚನೆಗಳನ್ನು ಮನಸ್ಸಿನಿಂದ ತೆಗೆದುಹಾಕುತ್ತಾ, ವಿರುದ್ಧ ಲಿಂಗದವರ ಕಡೆಗೆ ಅಥವಾ ಸಮಲಿಂಗದವರ ಕಡೆಗೂ ಅಯೋಗ್ಯ ವರ್ತನೆಗಳನ್ನು ಎಂದಿಗೂ ತೋರಿಸದಿರೋಣ.—ಕೊಲೊಸ್ಸೆ 3:5.
17 “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು” ಎಂದು ದಾವೀದನು ಬುದ್ಧಿಹೇಳುತ್ತಾನೆ. “ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು. ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.” (ಕೀರ್ತನೆ 37:8, 9) ಹೌದು, ಯೆಹೋವನು ಭೂಮಿಯಿಂದ ಎಲ್ಲಾ ಭ್ರಷ್ಟತೆಯನ್ನು ಮತ್ತು ಅದರ ಕಾರಣಭೂತರನ್ನು ತೆಗೆದುಹಾಕುವ ಸಮಯಕ್ಕಾಗಿ ನಾವು ದೃಢನಿಶ್ಚಯದಿಂದ ಎದುರುನೋಡಬಲ್ಲೆವು—ಆ ಸಮಯವು ಈಗ ತೀರ ಹತ್ತಿರವಿದೆ.
“ಇನ್ನು ಸ್ವಲ್ಪಕಾಲದೊಳಗೆ”
18, 19. ಕೀರ್ತನೆ 37:10ರಿಂದ ನೀವು ಯಾವ ಉಪಶಮನವನ್ನು ಕಂಡುಕೊಳ್ಳುತ್ತೀರಿ?
18 “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” (ಕೀರ್ತನೆ 37:10) ಈ ವ್ಯವಸ್ಥೆಯ ಅಂತ್ಯವನ್ನು ಮತ್ತು ಯೆಹೋವನಿಂದ ಸ್ವತಂತ್ರರಾಗಿರುವ ಕಾರಣ ಬಂದಿರುವ ವಿಪತ್ಕಾರಕ ಪರಿಣಾಮದ ಅಂತ್ಯವನ್ನು ಎದುರಿಸುವಾಗ ಆ ಮಾತುಗಳು ನಮ್ಮನ್ನು ಎಷ್ಟು ಉತ್ತೇಜಿಸುತ್ತವೆ! ಮಾನವನಿಂದ ರೂಪತಾಳಿದ ಯಾವುದೇ ರೀತಿಯ ಸರಕಾರ ಅಥವಾ ಅಧಿಕಾರವು ವಿಷಾದಕರವಾಗಿ ನೆಲಕಚ್ಚಿದೆ. ಮತ್ತು ನಾವು ಈಗ ದೇವರ ಆಳ್ವಿಕೆಯ, ನಿಜವಾಗಿಯೂ ದೇವಪ್ರಭುತ್ವಾತ್ಮಕವಾದ ಯೇಸು ಕ್ರಿಸ್ತನ ಕೈಕೆಳಗಿನ ಯೆಹೋವನ ರಾಜ್ಯದ ಪುನಸ್ಥಾಪನೆಯ ಸಮಯವನ್ನು ಸಮೀಪಿಸುತ್ತಿದ್ದೇವೆ. ಇದು ಲೋಕದ ವ್ಯವಹಾರಗಳನ್ನು ಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳುವುದು ಮತ್ತು ದೇವರ ರಾಜ್ಯದ ಎಲ್ಲಾ ವಿರೋಧಿಗಳನ್ನು ತೆಗೆದುಹಾಕುವುದು.—ದಾನಿಯೇಲ 2:44.
19 ದೇವರ ರಾಜ್ಯದ ಕೆಳಗಿರುವ ಹೊಸ ಲೋಕದಲ್ಲಿ, ಎಷ್ಟು ಹುಡುಕಿದರೂ ಒಬ್ಬ ‘ದುಷ್ಟನು’ ಸಹ ನಿಮಗೆ ಸಿಕ್ಕನು. ವಾಸ್ತವದಲ್ಲಿ, ಆಗ ಯಾರಾದರೂ ಯೆಹೋವನ ವಿರುದ್ಧ ದಂಗೆಯೇಳುವುದಾದರೆ, ಅವನು ಕೂಡಲೇ ತೆಗೆದುಹಾಕಲ್ಪಡುವನು. ಆತನ ಪರಮಾಧಿಕಾರದ ಮೇಲೆ ದಾಳಿಮಾಡುವ ಅಥವಾ ದೈವಿಕ ಅಧಿಕಾರಕ್ಕೆ ಅಧೀನನಾಗಲು ನಿರಾಕರಿಸುವ ಯಾವನೂ ಅಲ್ಲಿ ಉಳಿಯುವುದಿಲ್ಲ. ನಿಮ್ಮ ನೆರೆಯವರೆಲ್ಲರೂ ಏಕಮನಸ್ಸಿನಿಂದ ಯೆಹೋವನನ್ನು ಮೆಚ್ಚಿಸುವ ಬಯಕೆಯುಳ್ಳವರಾಗಿರುವರು. ಅದು ಎಂತಹ ಭದ್ರತೆಯನ್ನು ತರುವುದು! ಆಗ ಬೀಗಗಳಿರುವುದಿಲ್ಲ, ಕಂಬಿಗಳಿರುವುದಿಲ್ಲ, ಸಂಪೂರ್ಣವಾದ ಭರವಸೆ ಮತ್ತು ಸಂತೋಷವನ್ನು ಕಸಿದುಕೊಳ್ಳುವ ಯಾವುದೂ ಅಲ್ಲಿರುವುದಿಲ್ಲ!—ಯೆಶಾಯ 65:20; ಮೀಕ 4:4; 2 ಪೇತ್ರ 3:13.
20, 21. (ಎ) ಕೀರ್ತನೆ 37:11ರ “ದೀನರು” ಯಾರು, ಮತ್ತು ಅವರು “ಮಹಾಸೌಖ್ಯ”ವನ್ನು ಎಲ್ಲಿ ಕಂಡುಕೊಳ್ಳುತ್ತಾರೆ? (ಬಿ) ಮಹಾ ದಾವೀದನನ್ನು ಅನುಕರಿಸುವುದಾದರೆ ಯಾವ ಆಶೀರ್ವಾದಗಳು ನಮ್ಮದಾಗುವವು?
20 ಬಳಿಕ “ದೀನರು ದೇಶವನ್ನು ಅನುಭವಿಸುವರು.” (ಕೀರ್ತನೆ 37:11ಎ) ಆದರೆ ಈ ದೀನರು ಯಾರು? ಹೌದು, ತಮ್ಮ ಮೇಲೆ ಬರಮಾಡಲ್ಪಡುವ ಎಲ್ಲಾ ಅನ್ಯಾಯಗಳನ್ನು ಸರಿಪಡಿಸಲಿಕ್ಕಾಗಿ ನಮ್ರತೆಯಿಂದ ಯೆಹೋವನಲ್ಲಿ ಕಾದುಕೊಳ್ಳುವವರೇ ಈ ‘ದೀನರಾಗಿದ್ದಾರೆ.’ “ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11ಬಿ) ಸತ್ಯ ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುತ್ತಿರುವ ನಾವು ಆತ್ಮಿಕ ಪರದೈಸಿನಲ್ಲಿ ಈಗಲೂ ಸಮೃದ್ಧವಾದ ಶಾಂತಿಯನ್ನು ಕಂಡುಕೊಳ್ಳುತ್ತೇವೆ.
21 ನಾವಿನ್ನೂ ಬಾಧೆಗಳಿಂದ ಬಿಡುಗಡೆಯನ್ನು ಹೊಂದಿಲ್ಲವಾದರೂ, ನಾವು ಒಬ್ಬರನ್ನೊಬ್ಬರು ಬೆಂಬಲಿಸುತ್ತೇವೆ ಮತ್ತು ದುಃಖಿತರನ್ನು ಸಂತೈಸುತ್ತೇವೆ. ಇದರ ಫಲಿತಾಂಶವಾಗಿ, ಯೆಹೋವನ ಜನರ ಮಧ್ಯೆ ನಿಜವಾದ ಆಂತರಿಕ ಸಂತೃಪ್ತಿಯು ಪ್ರೋತ್ಸಾಹಿಸಲ್ಪಡುತ್ತದೆ. ಕುರುಬರಾಗಿ ನೇಮಿಸಲ್ಪಟ್ಟಿರುವ ಸಹೋದರರು, ನಾವು ನೀತಿಯ ನಿಮಿತ್ತವಾಗಿ ಅನುಭವಿಸುವ ಬಾಧೆಯನ್ನು ತಾಳಿಕೊಳ್ಳುವಂತೆ ಶಕ್ತಗೊಳಿಸುತ್ತಾ, ನಮ್ಮ ಆತ್ಮಿಕ—ಮತ್ತು ಕೆಲವೊಮ್ಮೆ ಶಾರೀರಿಕ—ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ನೆರವಾಗುತ್ತಾರೆ. (1 ಥೆಸಲೊನೀಕ 2:7, 11; 1 ಪೇತ್ರ 5:2, 3) ಈ ಶಾಂತಿಯು ಎಂತಹ ಅಮೂಲ್ಯ ಸ್ವತ್ತಾಗಿದೆ! ಮತ್ತು ಈಗ ಹತ್ತಿರವಿರುವ ಶಾಂತಿಭರಿತ ಪರದೈಸಿನಲ್ಲಿ ನಿತ್ಯಜೀವದ ನಿರೀಕ್ಷೆಯೂ ನಮಗಿದೆ. ಆದುದರಿಂದ ನಾವು, ಯೆಹೋವನಿಗಾಗಿರುವ ಹುರುಪಿನಿಂದಾಗಿ ಕೊನೆಯ ತನಕ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿದ ಮಹಾ ದಾವೀದನಾದ ಯೇಸು ಕ್ರಿಸ್ತನನ್ನು ಅನುಕರಿಸೋಣ. (1 ಪೇತ್ರ 2:21) ಹೀಗೆ ಮಾಡುವ ಮೂಲಕ, ನಾವು ಅತ್ಯಾನಂದವನ್ನು ಕಂಡುಕೊಳ್ಳುವ ನಮ್ಮ ದೇವರಾದ ಯೆಹೋವನನ್ನು ಸ್ತುತಿಸುತ್ತಾ ಸದಾ ಸಂತೋಷದಿಂದಿರುವೆವು.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ನೀವು ಉತ್ತರಿಸಬಲ್ಲಿರೋ?
• ಕೀರ್ತನೆ 37:1, 2ರಿಂದ ನೀವು ಯಾವ ಪಾಠಗಳನ್ನು ಕಲಿತುಕೊಂಡಿರಿ?
• ನೀವು ‘ಯೆಹೋವನಲ್ಲಿ ಅತ್ಯಾನಂದಪಡುವುದು’ ಹೇಗೆ?
• ನಾವು ಯೆಹೋವನ ಮೇಲೆ ಆತುಕೊಳ್ಳಸಾಧ್ಯವಿದೆ ಎಂಬುದಕ್ಕೆ ಯಾವ ಪುರಾವೆಯಿದೆ?
[ಪುಟ 9ರಲ್ಲಿರುವ ಚಿತ್ರ]
ಕ್ರೈಸ್ತರು ‘ದುರಾಚಾರಿಗಳನ್ನು ನೋಡಿ ಹೊಟ್ಟೆಕಿಚ್ಚುಪಡುವುದಿಲ್ಲ’
[ಪುಟ 10ರಲ್ಲಿರುವ ಚಿತ್ರ]
“ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು”
[ಪುಟ 11ರಲ್ಲಿರುವ ಚಿತ್ರ]
ನಿಮ್ಮಿಂದ ಸಾಧ್ಯವಾಗುವಷ್ಟು ಮಟ್ಟಿಗೆ ಯೆಹೋವನ ಕುರಿತು ಕಲಿಯುವ ಮೂಲಕ ಆತನಲ್ಲಿ ಅತ್ಯಾನಂದಪಡಿರಿ
[ಪುಟ 12ರಲ್ಲಿರುವ ಚಿತ್ರ]
“ದೀನರು ದೇಶವನ್ನು ಅನುಭವಿಸುವರು”