ದೇವರ ಪ್ರೇರಿತ ವಾಕ್ಯವನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು
“ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ [“ಕಲಬೆರಕೆಮಾಡದೆ,” NW] . . . ನಡೆಯುತ್ತೇವೆ.”—2 ಕೊರಿಂಥ 4:2.
1. (ಎ) ಮತ್ತಾಯ 24:14 ಮತ್ತು 28:19, 20ರಲ್ಲಿ ತಿಳಿಸಲ್ಪಟ್ಟ ಕೆಲಸವನ್ನು ಸಾಧಿಸುವ ಸಲುವಾಗಿ ಏನು ಅಗತ್ಯವಾಗಿದೆ? (ಬಿ) ಕಡೇ ದಿವಸಗಳು ಆರಂಭವಾದಾಗ, ಎಷ್ಟರ ಮಟ್ಟಿಗೆ ಬೈಬಲು ಜನರ ಭಾಷೆಗಳಲ್ಲಿ ಲಭ್ಯವಿತ್ತು?
ಯೇಸು ಕ್ರಿಸ್ತನು, ತನ್ನ ರಾಜಯೋಗ್ಯ ಸಾನ್ನಿಧ್ಯ ಮತ್ತು ಹಳೆಯ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಸಮಯದ ವಿಷಯದಲ್ಲಿನ ತನ್ನ ಮಹಾ ಪ್ರವಾದನೆಯಲ್ಲಿ ಮುಂತಿಳಿಸಿದ್ದು: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಅವನು ತನ್ನ ಹಿಂಬಾಲಕರಿಗೆ ಹೀಗೂ ಉಪದೇಶ ನೀಡಿದನು: “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.” (ಮತ್ತಾಯ 24:14; 28:19, 20) ಆ ಪ್ರವಾದನೆಗಳ ನೆರವೇರಿಕೆಯು, ಬೈಬಲನ್ನು ಭಾಷಾಂತರಿಸುವ ಮತ್ತು ಮುದ್ರಿಸುವ ವಿಷಯದಲ್ಲಿ, ಅದು ಏನನ್ನು ಅರ್ಥೈಸುತ್ತದೆಂದು ಜನರಿಗೆ ಕಲಿಸುವುದರಲ್ಲಿ, ಮತ್ತು ಅದನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಲು ಅವರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚಿನ ಕೆಲಸವನ್ನು ಒಳಗೊಳ್ಳುತ್ತದೆ. ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಎಂತಹ ಒಂದು ಸುಯೋಗ! 1914ರೊಳಗಾಗಿ, ಬೈಬಲು ಇಲ್ಲವೆ ಅದರ ಒಂದಿಷ್ಟು ಭಾಗವು ಆಗಲೇ 570 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿತ್ತು. ಆದರೆ ಆ ಸಮಯದಂದಿನಿಂದ, ನೂರಾರು ಹೆಚ್ಚಿನ ಭಾಷೆಗಳು ಮತ್ತು ಹಲವಾರು ಉಪಭಾಷೆಗಳು ಸೇರಿಸಲ್ಪಟ್ಟಿವೆ, ಮತ್ತು ಅನೇಕ ಭಾಷೆಗಳಲ್ಲಿ ಒಂದಕ್ಕಿಂತಲೂ ಹೆಚ್ಚಿನ ಭಾಷಾಂತರವು ಲಭ್ಯಗೊಳಿಸಲ್ಪಟ್ಟಿದೆ.a
2. ಯಾವ ವಿಭಿನ್ನ ಹೇತುಗಳು, ಬೈಬಲ್ ಭಾಷಾಂತರಕಾರರು ಮತ್ತು ಪ್ರಕಾಶಕರ ಕೆಲಸವನ್ನು ಪ್ರಭಾವಿಸಿವೆ?
2 ಒಂದು ಭಾಷೆಯಲ್ಲಿರುವ ವಿಷಯವನ್ನು ತೆಗೆದುಕೊಂಡು, ಮತ್ತೊಂದು ಭಾಷೆಯನ್ನು ಓದುವ ಮತ್ತು ಕೇಳಿಸಿಕೊಳ್ಳುವ ಜನರಿಗೆ ಅರ್ಥವಾಗುವಂತೆ ಮಾಡುವುದು ಯಾವುದೇ ಭಾಷಾಂತರಕಾರನಿಗೆ ಒಂದು ಪಂಥಾಹ್ವಾನವಾಗಿದೆ. ಕೆಲವು ಬೈಬಲ್ ಭಾಷಾಂತರಕಾರರು, ತಾವು ಭಾಷಾಂತರ ಮಾಡುತ್ತಿರುವುದು ದೇವರ ವಾಕ್ಯವೆಂಬ ತೀಕ್ಷ್ಣ ಅರಿವಿನೊಂದಿಗೆ ತಮ್ಮ ಕೆಲಸವನ್ನು ಮಾಡಿದ್ದಾರೆ. ಇತರರು ಆ ಯೋಜನೆಯ ಪಾಂಡಿತ್ಯಪೂರ್ಣ ಆಸಕ್ತಿಯಿಂದಲೇ ಆಕರ್ಷಿಸಲ್ಪಟ್ಟಿದ್ದಾರೆ. ಅವರು ಬೈಬಲಿನ ಒಳವಿಷಯಗಳನ್ನು ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯಾಗಿ ಮಾತ್ರ ವೀಕ್ಷಿಸಿದ್ದಿರಬಹುದು. ಕೆಲವರಿಗೆ, ಧರ್ಮವು ಅವರ ವೃತ್ತಿಯಾಗಿದೆ, ಮತ್ತು ತಮ್ಮ ಹೆಸರನ್ನು ಒಬ್ಬ ಭಾಷಾಂತರಕಾರ ಇಲ್ಲವೆ ಪ್ರಕಾಶಕನಾಗಿ ಹೊಂದಿರುವ ಪುಸ್ತಕವನ್ನು ಮುದ್ರಿಸುವುದು, ಜೀವನೋಪಾಯವನ್ನು ಮಾಡುವುದರ ಒಂದು ಭಾಗವಾಗಿದೆ. ಅವರ ಹೇತುಗಳು ಅವರು ತಮ್ಮ ಕೆಲಸವನ್ನು ಹೇಗೆ ಮಾಡುತ್ತಾರೆಂಬುದನ್ನು ಸ್ಪಷ್ಟವಾಗಿ ಪ್ರಭಾವಿಸುತ್ತವೆ.
3. ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯು ತನ್ನ ಕೆಲಸವನ್ನು ಹೇಗೆ ವೀಕ್ಷಿಸಿತು?
3 ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯಿಂದ ಮಾಡಲ್ಪಟ್ಟ ಈ ಹೇಳಿಕೆಯು ಗಮನಾರ್ಹವಾಗಿದೆ: “ಪವಿತ್ರ ಶಾಸ್ತ್ರಗಳನ್ನು ಭಾಷಾಂತರಿಸುವುದೆಂದರೆ, ಯೆಹೋವ ದೇವರ ಆಲೋಚನೆಗಳು ಹಾಗೂ ಹೇಳಿಕೆಗಳನ್ನು ಮತ್ತೊಂದು ಭಾಷೆಗೆ ತರ್ಜುಮೆಮಾಡುವುದಾಗಿದೆ. . . . ಅದು ಬಹಳಷ್ಟು ಸ್ತಿಮಿತಗೊಳಿಸುವ ವಿಚಾರವಾಗಿದೆ. ಈ ಕೃತಿಯ ಭಾಷಾಂತರಕಾರರು, ಪವಿತ್ರ ಶಾಸ್ತ್ರಗಳ ದೈವಿಕ ಗ್ರಂಥಕಾರನಿಗೆ ಭಯಪಟ್ಟು ಆತನನ್ನು ಪ್ರೀತಿಸುವವರಾಗಿದ್ದು, ಸಾಧ್ಯವಾದಷ್ಟು ನಿಷ್ಕೃಷ್ಟವಾಗಿ ಆತನ ಆಲೋಚನೆಗಳು ಹಾಗೂ ಪ್ರಕಟನೆಗಳನ್ನು ರವಾನಿಸಲಿಕ್ಕಾಗಿ, ಆತನೆಡೆಗೆ ವಿಶೇಷ ಹೊಣೆಯ ಪ್ರಜ್ಞೆಯುಳ್ಳವರಾಗಿದ್ದಾರೆ. ಅಲ್ಲದೆ, ತಮ್ಮ ಅನಂತ ರಕ್ಷಣೆಗಾಗಿ ಪರಮ ಪ್ರಧಾನ ದೇವರ ಪ್ರೇರಿತ ವಾಕ್ಯದ ಒಂದು ಭಾಷಾಂತರದ ಮೇಲೆ ಅವಲಂಬಿಸುವ ಅನ್ವೇಷಕ ಓದುಗರ ಕಡೆಗೂ ಅವರು ಹೊಣೆಯ ಪ್ರಜ್ಞೆಯುಳ್ಳವರಾಗಿದ್ದಾರೆ. ಇಂತಹ ಗಂಭೀರವಾದ ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ, ಅನೇಕ ವರ್ಷಗಳ ಉದ್ದಕ್ಕೂ ಸಮರ್ಪಿತ ಪುರುಷರ ಈ ಕಮಿಟಿಯು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಅನ್ನು ತಯಾರಿಸಿದೆ.” ಈ ಕಮಿಟಿಯ ಗುರಿಯು, ಸ್ಪಷ್ಟವಾದ ಹಾಗೂ ತಿಳಿದುಕೊಳ್ಳಸಾಧ್ಯವಿರುವ ಮತ್ತು ಮೂಲ ಹೀಬ್ರು ಹಾಗೂ ಗ್ರೀಕ್ ಭಾಷೆಗಳಿಗೆ ಬಹಳಷ್ಟು ನಿಕಟವಾಗಿ ಅಂಟಿಕೊಳ್ಳುವ ಬೈಬಲಿನ ಒಂದು ಭಾಷಾಂತರವನ್ನು ಹೊಂದಿರುವುದಾಗಿತ್ತು. ಇದು ನಿಷ್ಕೃಷ್ಟ ಜ್ಞಾನದಲ್ಲಿ ಮುಂದುವರಿದ ಬೆಳವಣಿಗೆಗೆ ಒಂದು ಅಡಿಪಾಯವನ್ನು ಒದಗಿಸಲಿತ್ತು.
ದೇವರ ನಾಮಕ್ಕೆ ಏನು ಸಂಭವಿಸಿದೆ?
4. ಬೈಬಲಿನಲ್ಲಿ ದೇವರ ನಾಮವು ಎಷ್ಟು ಪ್ರಾಮುಖ್ಯವಾಗಿದೆ?
4 ಬೈಬಲಿನ ಪ್ರಧಾನ ಉದ್ದೇಶಗಳಲ್ಲಿ ಒಂದು, ಜನರು ಸತ್ಯ ದೇವರನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ಸಹಾಯ ಮಾಡುವುದೇ. (ವಿಮೋಚನಕಾಂಡ 20:2-7; 34:1-7; ಯೆಶಾಯ 52:6) ತನ್ನ ತಂದೆಯ ನಾಮವು “ಪರಿಶುದ್ಧವೆಂದೆಣಿಸಲ್ಪಡಲಿ,” ಪವಿತ್ರವಾಗಿ ಎಣಿಸಲ್ಪಡಲಿ, ಇಲ್ಲವೆ ಪವಿತ್ರವಾಗಿ ಉಪಚರಿಸಲ್ಪಡುವಂತಾಗಲಿ ಎಂದು ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9) ದೇವರು ತನ್ನ ವೈಯಕ್ತಿಕ ನಾಮವನ್ನು ಬೈಬಲಿನಲ್ಲಿ 7,000ಕ್ಕಿಂತಲೂ ಹೆಚ್ಚು ಬಾರಿ ಒಳಗೂಡಿಸುವಂತೆ ಮಾಡಿದನು. ಆ ಹೆಸರನ್ನು ಮತ್ತು ಅದನ್ನು ಪಡೆದಿರುವವನ ಗುಣಗಳನ್ನು ಜನರು ತಿಳಿದುಕೊಳ್ಳುವಂತೆ ಆತನು ಬಯಸುತ್ತಾನೆ.—ಮಲಾಕಿಯ 1:11.
5. ವಿವಿಧ ಭಾಷಾಂತರಕಾರರು ದೈವಿಕ ನಾಮವನ್ನು ಹೇಗೆ ನಿರೂಪಿಸಿದ್ದಾರೆ?
5 ಅನೇಕ ಬೈಬಲ್ ಭಾಷಾಂತರಕಾರರು ದೈವಿಕ ನಾಮಕ್ಕೆ ಯಥಾರ್ಥವಾದ ಗೌರವವನ್ನು ತೋರಿಸಿದ್ದಾರೆ ಮತ್ತು ತಮ್ಮ ಕೃತಿಯಲ್ಲಿ ಅದನ್ನು ಸುಸಂಗತವಾಗಿ ಬಳಸಿದ್ದಾರೆ. ಕೆಲವು ಭಾಷಾಂತರಕಾರರು ಯಾಹ್ವೆ ಎಂಬ ನಾಮವನ್ನು ಹೆಚ್ಚು ಇಷ್ಟಪಡುತ್ತಾರೆ. ಇತರರು, ತಮ್ಮ ಸ್ವಂತ ಭಾಷೆಗೆ ಹೊಂದಿಕೊಳ್ಳುವ, ಆದರೂ ಹೀಬ್ರು ಗ್ರಂಥಪಾಠದಲ್ಲಿ ಕಾಣಿಸಿಕೊಳ್ಳುವ ಹೆಸರಿನೊಂದಿಗೆ ಸ್ಪಷ್ಟವಾಗಿ ಗುರುತಿಸಸಾಧ್ಯವಿರುವ—ಬಹುಶಃ ದೀರ್ಘವಾದ ಬಳಕೆಯ ಮೂಲಕ ಚಿರಪರಿಚಿತವಾಗಿರುವ ಒಂದು ರೂಪವನ್ನು ಆರಿಸಿಕೊಂಡಿದ್ದಾರೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ (ಜಿಹೋವ) ಯೆಹೋವ ಎಂಬ ಹೆಸರನ್ನು ಅದರ ಮೂಲ ಗ್ರಂಥಪಾಠದಲ್ಲಿ 7,210 ಬಾರಿ ಬಳಸುತ್ತದೆ.
6. (ಎ) ಇತ್ತೀಚಿನ ವರ್ಷಗಳಲ್ಲಿ, ದೈವಿಕ ನಾಮದ ಉಲ್ಲೇಖಗಳನ್ನು ಭಾಷಾಂತರಕಾರರು ಏನು ಮಾಡಿದ್ದಾರೆ? (ಬಿ) ಈ ಆಚರಣೆಯು ಎಷ್ಟು ವ್ಯಾಪಕವಾಗಿದೆ?
6 ಇತ್ತೀಚಿನ ವರ್ಷಗಳಲ್ಲಿ, ಬೈಬಲ್ ಭಾಷಾಂತರಕಾರರು ಬಾಳ್ ಹಾಗೂ ಮೋಲೆಕರಂತಹ ವಿಧರ್ಮಿ ದೇವತೆಗಳ ನಾಮಗಳನ್ನು ಉಳಿಸಿಕೊಳ್ಳುವುದಾದರೂ, ಸತ್ಯ ದೇವರ ವೈಯಕ್ತಿಕ ನಾಮವನ್ನು ಆತನ ಪ್ರೇರಿತ ವಾಕ್ಯದ ಭಾಷಾಂತರಗಳಿಂದ ಅತ್ಯಧಿಕವಾಗಿ ತೆಗೆದುಹಾಕುತ್ತಿದ್ದಾರೆ. (ವಿಮೋಚನಕಾಂಡ 3:15; ಯೆರೆಮೀಯ 32:35) ಮತ್ತಾಯ 6:9 ಮತ್ತು ಯೋಹಾನ 17:6, 26ರಂತಹ ಭಾಗಗಳಲ್ಲಿ, ವ್ಯಾಪಕವಾಗಿ ಹಂಚಲ್ಪಟ್ಟ ಒಂದು ಅಲ್ಬೇನಿಯನ್ ಅನುವಾದವು, “ನಿನ್ನ ನಾಮ” (ಅಂದರೆ, ದೇವರ ನಾಮ) ಎಂಬ ಗ್ರೀಕ್ ಅಭಿವ್ಯಕ್ತಿಯನ್ನು, ಕೇವಲ “ನಿನ್ನ” ಎಂಬುದಾಗಿ—ಆ ವಚನಗಳು ಒಂದು ನಾಮದ ಉಲ್ಲೇಖವನ್ನೇ ಮಾಡಿಲ್ಲವೊ ಎಂಬಂತೆ ತರ್ಜುಮೆಮಾಡುತ್ತದೆ. ಕೀರ್ತನೆ 83:18ರಲ್ಲಿ, ದ ನ್ಯೂ ಇಂಗ್ಲಿಷ್ ಬೈಬಲ್ ಮತ್ತು ಟುಡೇಸ್ ಇಂಗ್ಲಿಷ್ ವರ್ಷನ್—ಎರಡೂ—ಭಾಷಾಂತರಗಳು ದೇವರ ವೈಯಕ್ತಿಕ ನಾಮವನ್ನು ಮತ್ತು ದೇವರಿಗೆ ಒಂದು ನಾಮವಿದೆ ಎಂಬ ನಿಜತ್ವಕ್ಕಿರುವ ಯಾವುದೇ ಉಲ್ಲೇಖವನ್ನೂ ತೆಗೆದುಹಾಕುತ್ತವೆ. ದೈವಿಕ ನಾಮವು ಹೆಚ್ಚಿನ ಭಾಷೆಗಳಲ್ಲಿರುವ ಹೀಬ್ರು ಶಾಸ್ತ್ರಗಳ ಹಳೆಯ ಭಾಷಾಂತರಗಳಲ್ಲಿ ಕಂಡುಬಂದರೂ, ಹೊಸ ಭಾಷಾಂತರಗಳು ಅನೇಕ ವೇಳೆ ಅದನ್ನು ತೆಗೆದುಹಾಕುತ್ತವೆ ಇಲ್ಲವೆ ಪಕ್ಕಟಿಪ್ಪಣಿಯಲ್ಲಿ (ಮಾರ್ಜಿನ್) ಉಲ್ಲೇಖಿಸುತ್ತವೆ. ಇದು ಇಂಗ್ಲಿಷ್ನಲ್ಲಿ, ಅಲ್ಲದೆ ಯೂರೋಪ್, ಆಫ್ರಿಕ, ದಕ್ಷಿಣ ಅಮೆರಿಕ, ಭಾರತ, ಮತ್ತು ಶಾಂತಸಾಗರದ ದ್ವೀಪಗಳ ಅನೇಕ ಭಾಷೆಗಳಲ್ಲಿ ಸತ್ಯವಾಗಿದೆ.
7. (ಎ) ಕೆಲವು ಆಫ್ರಿಕನ್ ಬೈಬಲುಗಳ ಭಾಷಾಂತರಕಾರರು ದೈವಿಕ ನಾಮದೊಂದಿಗೆ ಹೇಗೆ ವ್ಯವಹರಿಸುತ್ತಿದ್ದಾರೆ? (ಬಿ) ನಿಮಗೆ ಅದರ ಕುರಿತು ಹೇಗನಿಸುತ್ತದೆ?
7 ಕೆಲವೊಂದು ಆಫ್ರಿಕನ್ ಭಾಷೆಗಳಿಗೆ ಬೈಬಲನ್ನು ಭಾಷಾಂತರಿಸುವವರು, ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ದೈವಿಕ ನಾಮವನ್ನು ಕೇವಲ ದೇವರು ಇಲ್ಲವೆ ಕರ್ತನೆಂಬ ಒಂದು ಶಾಸ್ತ್ರೀಯ ಬಿರುದಿನಿಂದ ಸ್ಥಾನಪಲ್ಲಟಗೊಳಿಸುವ ಬದಲಿಗೆ, ಸ್ಥಳಿಕ ಧಾರ್ಮಿಕ ನಂಬಿಕೆಗಳಿಂದ ತೆಗೆದುಕೊಳ್ಳಲ್ಪಟ್ಟ ಹೆಸರುಗಳನ್ನು ಅವರು ಸೇರಿಸುತ್ತಿದ್ದಾರೆ. ಸೂಲೂ ಭಾಷೆಯಲ್ಲಿ ಹೊಸ ಒಡಂಬಡಿಕೆ ಮತ್ತು ಕೀರ್ತನೆಗಳು (ಇಂಗ್ಲಿಷ್, 1986ರ ಭಾಷಾಂತರ)—ಇದರಲ್ಲಿ ದೇವರು (ಉಂಕೊಲೂಂಕೊಲೂ) ಎಂಬ ಬಿರುದನ್ನು ಪರಸ್ಪರ ವಿನಿಮಯವಾಗಿ, ‘ಮಾನವಪೂರ್ವಿಕರ ಮುಖೇನ ಆರಾಧಿಸಲ್ಪಡುವ ಮಹಾ ಪೂರ್ವಿಕ’ನಿಗೆ ಸೂಚಿಸುತ್ತದೆಂದು ಸೂಲೂ ಜನರು ತಿಳಿಯುವ (ಉಮ್ವೇಲೀಂಗಾಂಗೀ) ಎಂಬ ವೈಯಕ್ತಿಕ ಹೆಸರಿನೊಂದಿಗೆ ಉಪಯೋಗಿಸಲಾಯಿತು. ಅಕ್ಟೋಬರ್ 1992ರ ಬೈಬಲ್ ಭಾಷಾಂತರಕಾರ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿನ ಒಂದು ಲೇಖನವು ವರದಿಸಿದ್ದೇನೆಂದರೆ, ಬೂಕೂ ಲೊಯೆರಾ ಎಂಬುದಾಗಿ ಕರೆಯಲ್ಪಡಲಿದ್ದ ಚಿಚಿವ ಬೈಬಲನ್ನು ತಯಾರಿಸುವುದರಲ್ಲಿ, ಯೆಹೋವ ಎಂಬ ನಾಮಕ್ಕೆ ಬದಲಾಗಿ ಭಾಷಾಂತರಕಾರರು ಚೌಟಾ ಎಂಬ ಪದವನ್ನು ಒಂದು ವೈಯಕ್ತಿಕ ನಾಮವಾಗಿ ಉಪಯೋಗಿಸುತ್ತಿದ್ದರು. ಚೌಟಾ, ಆ ಲೇಖನವು ವಿವರಿಸಿದಂತೆ, “ಅವರಿಗೆ ಸದಾ ಗೊತ್ತಿದ್ದ ಹಾಗೂ ಆರಾಧಿಸಿದ ದೇವರು” ಆಗಿದ್ದಾನೆ. ಆದರೂ, ಈ ಜನರಲ್ಲಿ ಅನೇಕರು, ಸತ್ತವರ ಆತ್ಮಗಳೆಂದು ತಾವು ನಂಬುವವುಗಳನ್ನೂ ಆರಾಧಿಸುತ್ತಾರೆ. ಜನರು “ಪರಮಾತ್ಮ”ನಿಗೆ ಪ್ರಾರ್ಥಿಸುವುದಾದರೆ, ಆ “ಪರಮಾತ್ಮ”ನಿಗೆ ಅವರು ಬಳಸುವ ಹೆಸರು ಯಾವುದೇ ಆಗಿರಲಿ—ಅವರ ಆರಾಧನೆಯು ಇನ್ನೇನನ್ನೇ ಒಳಗೊಳ್ಳಲಿ ಅದು ಪ್ರಾಮುಖ್ಯವಲ್ಲ—ಯೆಹೋವ ಎಂಬ ವೈಯಕ್ತಿಕ ನಾಮಕ್ಕೆ ಸಮಂಜಸವಾದ ಸಮಾನಾರ್ಥವುಳ್ಳದ್ದಾಗಿದೆ ಎಂಬುದು ಸತ್ಯವೊ? ಖಂಡಿತವಾಗಿಯೂ ಇಲ್ಲ! (ಯೆಶಾಯ 42:8; 1 ಕೊರಿಂಥ 10:20) ದೇವರ ವೈಯಕ್ತಿಕ ನಾಮವನ್ನು, ತಮ್ಮ ಸಾಂಪ್ರದಾಯಿಕ ನಂಬಿಕೆಗಳು ನಿಜವಾಗಿಯೂ ಸತ್ಯವಾಗಿವೆಯೆಂದು ಜನರು ಎಣಿಸುವಂತೆ ಮಾಡುವ ಬೇರೆ ನಾಮದಿಂದ ಸ್ಥಾನಭರ್ತಿಮಾಡುವುದು, ಸತ್ಯ ದೇವರಿಗೆ ನಿಕಟವಾಗಲು ಅವರಿಗೆ ಸಹಾಯ ಮಾಡುವುದಿಲ್ಲ.
8. ತನ್ನ ನಾಮವನ್ನು ತಿಳಿಯಪಡಿಸುವ ವಿಷಯದಲ್ಲಿ, ದೇವರ ಉದ್ದೇಶವು ಏಕೆ ನಿಷ್ಫಲಗೊಂಡಿಲ್ಲ?
8 ತನ್ನ ನಾಮವನ್ನು ಪ್ರಚುರಪಡಿಸಲಿಕ್ಕಾಗಿದ್ದ ಯೆಹೋವನ ಉದ್ದೇಶವನ್ನು ಇವುಗಳಲ್ಲಿ ಯಾವುದೂ ಬದಲಾಯಿಸಿಲ್ಲ ಇಲ್ಲವೆ ನಿಷ್ಫಲಗೊಳಿಸಿಲ್ಲ. ಯೂರೋಪ್, ಆಫ್ರಿಕ, ಅಮೆರಿಕ, ಪೌರಸ್ತ್ಯ, ಮತ್ತು ಸಮುದ್ರದ ದ್ವೀಪಗಳ ಭಾಷೆಗಳಲ್ಲಿ, ದೈವಿಕ ನಾಮವನ್ನು ಸೇರಿಸುವ ಅನೇಕ ಬೈಬಲುಗಳು ಇನ್ನೂ ಚಲಾವಣೆಯಲ್ಲಿವೆ. 54,00,000ಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು, 233 ದೇಶಗಳು ಹಾಗೂ ಟೆರಿಟೊರಿಗಳಲ್ಲಿ, ಸತ್ಯ ದೇವರ ನಾಮ ಮತ್ತು ಉದ್ದೇಶದ ಕುರಿತು ಇತರರಿಗೆ ಹೇಳುತ್ತಾ, ವರ್ಷಕ್ಕೆ 100 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಸಾಮೂಹಿಕವಾಗಿ ವ್ಯಯಿಸುತ್ತಾರೆ. ಅವರು ದೈವಿಕ ನಾಮವನ್ನು ಉಪಯೋಗಿಸುವಂತಹ ಬೈಬಲ್ಗಳನ್ನು, ಇಂಗ್ಲಿಷ್, ಚೈನೀಸ್, ರಷ್ಯನ್, ಸ್ಪ್ಯಾನಿಷ್, ಪೋರ್ಟ್ಯುಗೀಸ್, ಫ್ರೆಂಚ್, ಮತ್ತು ಡಚ್ ಭಾಷೆಗಳನ್ನೊಳಗೊಂಡು, ಭೂಮಿಯ ಸುಮಾರು 3,60,00,00,000ರಷ್ಟು ಜನಸಂಖ್ಯೆಯಿಂದ ಮಾತಾಡಲ್ಪಡುವ ಭಾಷೆಗಳಲ್ಲಿ ಮುದ್ರಿಸಿ, ಹಂಚುತ್ತಾರೆ. ಭೂಮಿಯ ಜನಸಂಖ್ಯೆಯಲ್ಲಿ ಹೆಚ್ಚಿನವರಿಗೆ ಅರ್ಥವಾಗುವ ಭಾಷೆಗಳಲ್ಲಿ ಅವರು ಬೈಬಲ್ ಅಧ್ಯಯನದ ಸಹಾಯಕಗಳನ್ನೂ ಮುದ್ರಿಸುತ್ತಾರೆ. ರಾಷ್ಟ್ರಗಳು “[ಆತನೇ] ಯೆಹೋವನು ಎಂದು ತಿಳಿದುಕೊಳ್ಳುವಂತೆ” ಆತನ ಪ್ರಕಟನೆಯನ್ನು ನಿರ್ಣಾಯಕವಾಗಿ ಪೂರೈಸುವ ವಿಧದಲ್ಲಿ ಬೇಗನೆ ದೇವರೇ ಕ್ರಿಯೆಗೈಯುವನು.—ಯೆಹೆಜ್ಕೇಲ 38:23.
ವೈಯಕ್ತಿಕ ನಂಬಿಕೆಗಳು ಭಾಷಾಂತರವನ್ನು ಪ್ರಭಾವಿಸುವಾಗ
9. ದೇವರ ವಾಕ್ಯವನ್ನು ನಿರ್ವಹಿಸುವವರ ಮೇಲೆ ಇರುವ ಗಂಭೀರವಾದ ಹೊಣೆಗಾರಿಕೆಯನ್ನು ಬೈಬಲು ಹೇಗೆ ಸೂಚಿಸುತ್ತದೆ?
9 ದೇವರ ವಾಕ್ಯವನ್ನು ಭಾಷಾಂತರಿಸುವವರ ಹಾಗೂ ಅದನ್ನು ಕಲಿಸುವವರ ಮೇಲೆ ಗಂಭೀರವಾದೊಂದು ಹೊಣೆಗಾರಿಕೆ ಇದೆ. ಅಪೊಸ್ತಲ ಪೌಲನು ತನ್ನ ಹಾಗೂ ತನ್ನ ಸಂಗಡಿಗರ ಶುಶ್ರೂಷೆಯ ಕುರಿತಾಗಿ ಹೇಳಿದ್ದು: “ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ [“ಕಲಬೆರಕೆಮಾಡದೆ,” NW] ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.” (2 ಕೊರಿಂಥ 4:2) ಕಲಬೆರಕೆಮಾಡುವುದೆಂದರೆ, ಪರಕೀಯ ಇಲ್ಲವೆ ಕೆಳಮಟ್ಟದ ಏನನ್ನೊ ಸೇರಿಸುವ ಮೂಲಕ ಭ್ರಷ್ಟಗೊಳಿಸುವುದು. ಅಪೊಸ್ತಲ ಪೌಲನು ಯೆರೆಮೀಯನ ದಿನಗಳಲ್ಲಿದ್ದ ಇಸ್ರಾಯೇಲಿನ ಅಪನಂಬಿಗಸ್ತ ಕುರುಬರಂತೆ ಇರಲಿಲ್ಲ. ದೇವರು ಏನನ್ನು ಹೇಳಿದನೋ ಅದರ ಬದಲಿಗೆ ತಮ್ಮ ಸ್ವಂತ ವಿಚಾರಗಳನ್ನು ಪ್ರಚಾರಮಾಡಿದ್ದಕ್ಕಾಗಿ ಅವರು ಯೆಹೋವನಿಂದ ಆಕ್ಷೇಪಿಸಲ್ಪಟ್ಟರು. (ಯೆರೆಮೀಯ 23:16, 22) ಆದರೆ ಆಧುನಿಕ ಸಮಯಗಳಲ್ಲಿ ಏನು ಸಂಭವಿಸಿದೆ?
10. (ಎ) ಆಧುನಿಕ ಸಮಯಗಳಲ್ಲಿ ದೇವರೆಡೆಗೆ ನಿಷ್ಠೆಗಿಂತ ಬೇರೆಯಾದ ಹೇತುಗಳು ಕೆಲವು ಭಾಷಾಂತರಕಾರರನ್ನು ಹೇಗೆ ಪ್ರಭಾವಿಸಿವೆ? (ಬಿ) ಅವರು ಯಾವ ಪಾತ್ರವನ್ನು ಅಯೋಗ್ಯವಾಗಿ ವಹಿಸಿಕೊಳ್ಳುತ್ತಿದ್ದರು?
10 ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ದೇವತಾಶಾಸ್ತ್ರಜ್ಞರು ಹಾಗೂ ಪಾಸ್ಟರ್ಗಳ ಒಂದು ಕಮಿಟಿಯು ಜರ್ಮನಿಯಲ್ಲಿದ್ದ ನಾಸಿ ಸರಕಾರದೊಂದಿಗೆ ಸಹಕರಿಸಿ, ಪರಿಷ್ಕೃತ “ಹೊಸ ಒಡಂಬಡಿಕೆ”ಯನ್ನು ತಯಾರಿಸಿತು. ಅದು ಯೆಹೂದ್ಯರಿಗೆ ಅನ್ವಯವಾದ ಎಲ್ಲ ಅನುಕೂಲಕರ ಉಲ್ಲೇಖಗಳನ್ನು ಮತ್ತು ಯೇಸು ಕ್ರಿಸ್ತನ ಯೆಹೂದಿ ವಂಶಾವಳಿಯ ಎಲ್ಲ ಸೂಚನೆಗಳನ್ನು ಅಳಿಸಿಹಾಕಿತು. ತೀರ ಇತ್ತೀಚೆಗೆ, ದ ನ್ಯೂ ಟೆಸ್ಟಮೆಂಟ್ ಆ್ಯಂಡ್ ಸಾಮ್ಸ್: ಆ್ಯನ್ ಇನ್ಕ್ಲೂಸಿವ್ ವರ್ಷನ್ ಅನ್ನು ತಯಾರಿಸಿದ ಭಾಷಾಂತರಕಾರರು, ಭಿನ್ನವಾದ ದಿಕ್ಕಿನ ಕಡೆಗೆ ಬಾಗಿದರು. ಯೆಹೂದ್ಯರು ಕ್ರಿಸ್ತನ ಮರಣದ ಸಂಬಂಧದಲ್ಲಿ ಹೊಣೆಗಾರರಾಗಿದ್ದರೆಂಬ ಎಲ್ಲ ಸೂಚನೆಗಳನ್ನು ತೆಗೆದುಹಾಕಲು ಅವರು ಪ್ರಯತ್ನಿಸಿದರು. ಅಲ್ಲದೆ, ದೇವರು ತಂದೆಯೋಪಾದಿ ಅಲ್ಲ, ಬದಲಿಗೆ ತಂದೆ-ತಾಯಿಯಾಗಿ ಮತ್ತು ಯೇಸು ದೇವರ ಕುಮಾರನಾಗಿ ಅಲ್ಲ, ಬದಲಿಗೆ ಆತನ ಮಗುವಾಗಿ ಹೇಳಲ್ಪಟ್ಟಲ್ಲಿ ಸ್ತ್ರೀ ಓದುಗರು ಹೆಚ್ಚು ಸಂತೋಷಿಸುವರೆಂದು ಆ ಭಾಷಾಂತರಕಾರರಿಗೆ ಅನಿಸಿತು. (ಮತ್ತಾಯ 11:27) ಅವರು ಹಾಗೆ ಮಾಡುತ್ತಿದ್ದಾಗ, ಗಂಡಂದಿರಿಗೆ ಹೆಂಡತಿಯರ ಅಧೀನತೆ ಹಾಗೂ ಹೆತ್ತವರಿಗೆ ಮಕ್ಕಳ ವಿಧೇಯತೆಯ ಮೂಲತತ್ವವನ್ನು ಅವರು ತೆಗೆದುಹಾಕಿದರು. (ಕೊಲೊಸ್ಸೆ 3:18, 20) ಆ ಭಾಷಾಂತರಗಳ ತಯಾರಕರು, ‘ದೇವರ ವಾಕ್ಯವನ್ನು ಕಲಬೆರಕೆಮಾಡ’ಬಾರದೆಂಬ ಅಪೊಸ್ತಲ ಪೌಲನ ದೃಢಸಂಕಲ್ಪದಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಭಾಷಾಂತರಕಾರನ ಪಾತ್ರವನ್ನು ಮರೆತು, ಗ್ರಂಥಕರ್ತನ ಸ್ಥಾನವನ್ನು ತೆಗೆದುಕೊಳ್ಳುತ್ತಾ, ತಮ್ಮ ಸ್ವಂತ ಅಭಿಪ್ರಾಯಗಳನ್ನು ಪ್ರವರ್ಧಿಸಲು ಒಂದು ಮಾಧ್ಯಮವಾಗಿ ಬೈಬಲಿನ ಪ್ರಖ್ಯಾತಿಯನ್ನು ಬಳಸಿದ ಪುಸ್ತಕಗಳನ್ನು ತಯಾರಿಸಿದರು.
11. ಪ್ರಾಣ ಮತ್ತು ಮರಣದ ಕುರಿತಾಗಿ ಬೈಬಲು ಹೇಳುವ ವಿಷಯದೊಂದಿಗೆ, ಕ್ರೈಸ್ತಪ್ರಪಂಚದ ಬೋಧನೆಗಳು ಹೇಗೆ ಅಸಂಗತವಾಗಿವೆ?
11 ಕ್ರೈಸ್ತಪ್ರಪಂಚದ ಚರ್ಚುಗಳು, ಮಾನವ ಪ್ರಾಣವು ಆತ್ಮವಾಗಿದೆಯೆಂದು, ಅದು ಮರಣದಲ್ಲಿ ದೇಹವನ್ನು ತ್ಯಜಿಸುತ್ತದೆಂದು, ಮತ್ತು ಅದು ಅಮರವಾಗಿದೆಯೆಂದು ಸಾಮಾನ್ಯವಾಗಿ ಕಲಿಸುತ್ತವೆ. ಇದಕ್ಕೆ ವಿರುದ್ಧವಾಗಿ, ಅಧಿಕಾಂಶ ಭಾಷೆಗಳಲ್ಲಿರುವ ಹಳೆಯ ಬೈಬಲ್ ಭಾಷಾಂತರಗಳು ಸ್ಪಷ್ಟವಾಗಿ ತಿಳಿಸುವುದೇನೆಂದರೆ, ಮಾನವರು ಪ್ರಾಣಗಳಾಗಿದ್ದಾರೆ, ಮೃಗಗಳು ಪ್ರಾಣಗಳಾಗಿವೆ, ಮತ್ತು ಪ್ರಾಣವು ಸಾಯುತ್ತದೆ. (ಆದಿಕಾಂಡ 12:5; 36:6; ಅರಣ್ಯಕಾಂಡ 31:28; ಯಾಕೋಬ 5:20) ಅದು ವೈದಿಕರನ್ನು ಪೇಚಾಟಕ್ಕೊಳಪಡಿಸಿದೆ.
12. ಮೂಲಭೂತ ಬೈಬಲ್ ಸತ್ಯಗಳನ್ನು ಇತ್ತೀಚಿನ ಕೆಲವು ಅನುವಾದಗಳು ಯಾವ ವಿಧದಲ್ಲಿ ಅಸ್ಪಷ್ಟಗೊಳಿಸಿವೆ?
12 ಈಗ ಕೆಲವು ಹೊಸ ಅನುವಾದಗಳು ಈ ಸತ್ಯಗಳನ್ನು ಅಸ್ಪಷ್ಟಗೊಳಿಸುತ್ತವೆ. ಹೇಗೆ? ಅವು ಕೆಲವು ವಚನಗಳಲ್ಲಿ ಹೀಬ್ರು ನಾಮಪದವಾದ ನೆಫೆಶ್ (ಸೋಲ್)ನ ನೇರವಾದ ಭಾಷಾಂತರವನ್ನು ಮಾಡದೆ ಇರುತ್ತವೆ. ಆದಿಕಾಂಡ 2:7ರಲ್ಲಿ, ಪ್ರಥಮ ಮನುಷ್ಯನು (“ಬದುಕುವ ಪ್ರಾಣವಾದನು” ಎಂಬುದರ ಬದಲಿಗೆ) “ಜೀವಿಸಲಾರಂಭಿಸಿದನು” ಎಂದು ಅವು ಹೇಳಬಹುದು. ಇಲ್ಲವೆ ಪಶುವಿನ ಜೀವನದ ವಿಷಯದಲ್ಲಿ “ಪ್ರಾಣ”ದ ಬದಲಿಗೆ ಅವು “ಜೀವಿ”ಯನ್ನು ಸೂಚಿಸಬಹುದು. (ಆದಿಕಾಂಡ 1:21) ಯೆಹೆಜ್ಕೇಲ 18:4, 20ರಂತಹ ವಚನಗಳಲ್ಲಿ, ಅವು (“ಪ್ರಾಣ”ದ ಬದಲಿಗೆ) “ವ್ಯಕ್ತಿ” ಇಲ್ಲವೆ “ಮನುಷ್ಯ” ಸಾಯುತ್ತಿರುವುದಾಗಿ ಸೂಚಿಸುತ್ತವೆ. ಇಂತಹ ತರ್ಜುಮೆಗಳು ಭಾಷಾಂತರಕಾರನಿಗೆ ನ್ಯಾಯಸಮ್ಮತವಾಗಿರಬಹುದು. ಆದರೆ, ಕ್ರೈಸ್ತಪ್ರಪಂಚದ ಅಶಾಸ್ತ್ರೀಯ ಬೋಧನೆಗಳಿಗೆ ಯಾರ ಆಲೋಚನೆಯು ಈಗಾಗಲೇ ಒಗ್ಗಿಹೋಗಿದೆಯೊ, ಅಂತಹ ಸತ್ಯದ ಒಬ್ಬ ಪ್ರಾಮಾಣಿಕ ಅನ್ವೇಷಕನಿಗೆ ಅವು ಎಷ್ಟು ಸಹಾಯವನ್ನು ಕೊಡುತ್ತವೆ?b
13. ಭೂಮಿಯ ಸಂಬಂಧದಲ್ಲಿ ದೇವರ ಉದ್ದೇಶವನ್ನು ಕೆಲವು ಬೈಬಲ್ ಅನುವಾದಗಳು ಯಾವುದರ ಮೂಲಕ ಮುಚ್ಚಿಟ್ಟಿವೆ?
13 ಎಲ್ಲ ಒಳ್ಳೆಯ ಜನರು ಸ್ವರ್ಗಕ್ಕೆ ಹೋಗುತ್ತಾರೆಂಬ ತಮ್ಮ ನಂಬಿಕೆಯನ್ನು ಸಮರ್ಥಿಸುವ ಒಂದು ಪ್ರಯತ್ನದಲ್ಲಿ, ಭಾಷಾಂತರಕಾರರು ಇಲ್ಲವೆ ಅವರ ಕೆಲಸವನ್ನು ಪುನರ್ವಿಮರ್ಶಿಸುವ ದೇವತಾಶಾಸ್ತ್ರಜ್ಞರು, ಭೂಮಿಗಾಗಿರುವ ದೇವರ ಉದ್ದೇಶದ ಬಗ್ಗೆ ಬೈಬಲ್ ಹೇಳುವುದನ್ನೂ ಮರೆಮಾಡಲು ಪ್ರಯತ್ನಿಸಬಹುದು. ಕೀರ್ತನೆ 37:11ರಲ್ಲಿ, ದೀನರು “ದೇಶವನ್ನು” ಅನುಭವಿಸುವರೆಂದು ಬಹಳಷ್ಟು ಅನುವಾದಗಳು ಓದುತ್ತವೆ. “ದೇಶ” ಎಂಬ ಪದವು, ಹೀಬ್ರು ಗ್ರಂಥಪಾಠದಲ್ಲಿ ಉಪಯೋಗಿಸಲ್ಪಟ್ಟ (ಇರೆಟ್ಸ್) ಎಂಬ ಪದದ ಸಂಭವನೀಯ ತರ್ಜುಮೆಯಾಗಿದೆ. ಹಾಗಿದ್ದರೂ, (ಇತರ ಅನೇಕ ಭಾಷೆಗಳಲ್ಲಿನ ಭಾಷಾಂತರಗಳಿಗಾಗಿ ಆಧಾರವನ್ನು ಒದಗಿಸಿರುವ) ಟುಡೇಸ್ ಇಂಗ್ಲಿಷ್ ವರ್ಷನ್ ತನ್ನ ತರ್ಜುಮೆಯಲ್ಲಿ ಹೆಚ್ಚು ಪ್ರಚಂಡವಾದ ಬದಲಾವಣೆಗಳನ್ನು ಮಾಡುತ್ತದೆ. ಈ ಅನುವಾದವು, ಮತ್ತಾಯನ ಸುವಾರ್ತೆಯಲ್ಲಿ ಗ್ರೀಕ್ ಪದವಾದ ಗೇ ಅನ್ನು, 17 ಬಾರಿ “ಭೂಮಿ” ಎಂಬುದಾಗಿ ತರ್ಜುಮೆ ಮಾಡುತ್ತದಾದರೂ, ಮತ್ತಾಯ 5:5ರಲ್ಲಿ “ಭೂಮಿ” ಎಂಬ ಪದವನ್ನು “ದೇವರು ವಾಗ್ದಾನಿಸಿರುವುದು” ಎಂಬ ವಾಕ್ಸರಣಿಯಿಂದ ಸ್ಥಾನಭರ್ತಿಮಾಡುತ್ತದೆ. ಚರ್ಚ್ ಸದಸ್ಯರು “ದೇವರು ವಾಗ್ದಾನಿಸಿರುವು”ದನ್ನು ಸ್ವಾಭಾವಿಕವಾಗಿಯೇ ಸ್ವರ್ಗದೊಂದಿಗೆ ಜೋಡಿಸುತ್ತಾರೆ. ತನ್ನ ಪರ್ವತ ಪ್ರಸಂಗದಲ್ಲಿ ಸೌಮ್ಯಸ್ವಭಾವದವರು, ದೀನರು, ಇಲ್ಲವೆ ನಮ್ರರು “ಭೂಮಿಯನ್ನು ಪಿತ್ರಾರ್ಜಿತ”ವಾಗಿ (NW) ಪಡೆದುಕೊಳ್ಳುವರೆಂಬುದಾಗಿ ಯೇಸು ಕ್ರಿಸ್ತನು ಹೇಳಿದನೆಂದು ಅವರಿಗೆ ಪ್ರಾಮಾಣಿಕವಾಗಿ ತಿಳಿಸಲಾಗುವುದಿಲ್ಲ.
14. ಕೆಲವು ಬೈಬಲ್ ಅನುವಾದಗಳಲ್ಲಿ ಯಾವ ಸ್ವಾರ್ಥಪರ ಪ್ರಚೋದನೆಯು ವ್ಯಕ್ತವಾಗಿದೆ?
14 ಶಾಸ್ತ್ರಗಳ ಕೆಲವು ಭಾಷಾಂತರಗಳು, ಸಾರುವವರಿಗೆ ಒಳ್ಳೆಯ ಸಂಬಳ ಸಿಗುವಂತೆ ಸಹಾಯ ಮಾಡುವ ನೋಟದಿಂದ ಭಾಷಾಂತರಿಸಲ್ಪಟ್ಟಿವೆ ಎಂಬುದು ಸ್ಪಷ್ಟ. “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಬೈಬಲು ತಿಳಿಸುತ್ತದೆಂಬುದು ಸತ್ಯ. (1 ತಿಮೊಥೆಯ 5:18) ಆದರೆ 1 ತಿಮೊಥೆಯ 5:17ರಲ್ಲಿ—ಎಲ್ಲಿ ಅದು ಚೆನ್ನಾಗಿ ಅಧಿಕಾರ ನಡಿಸುವ ಹಿರಿಯ ಪುರುಷರನ್ನು “ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು” ಎಂಬುದಾಗಿ ಹೇಳುತ್ತದೊ ಅಲ್ಲಿ—ಉಲ್ಲೇಖಕ್ಕೆ ಯೋಗ್ಯವಾಗಿರುವ ಏಕಮಾತ್ರ ಮಾನವು ಹಣವಾಗಿದೆ ಎಂದು ಕೆಲವರು ವೀಕ್ಷಿಸುತ್ತಾರೆ. (1 ಪೇತ್ರ 5:2ನ್ನು ಹೋಲಿಸಿರಿ.) ಹೀಗೆ, ದ ನ್ಯೂ ಇಂಗ್ಲಿಷ್ ಬೈಬಲ್ ಹೇಳುವುದೇನೆಂದರೆ, ಈ ಹಿರಿಯರನ್ನು “ಇಮ್ಮಡಿ ವೇತನಕ್ಕೆ ಯೋಗ್ಯರೆಂದು ಎಣಿಸಬೇಕು,” ಮತ್ತು ಕಂಟೆಂಪೊರರಿ ಇಂಗ್ಲಿಷ್ ವರ್ಷನ್ ಹೇಳುವುದೇನೆಂದರೆ, ಅವರು “ಎರಡು ಪಟ್ಟು ಹಣಸಂಪಾದನೆಗೆ ಅರ್ಹರಾಗಿದ್ದಾರೆ.”
ದೇವರ ವಾಕ್ಯವನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು
15. ಯಾವ ಬೈಬಲ್ ಭಾಷಾಂತರಗಳನ್ನು ಉಪಯೋಗಿಸಬೇಕೆಂದು ನಾವು ಹೇಗೆ ನಿರ್ಧರಿಸಬಲ್ಲೆವು?
15 ಇದೆಲ್ಲವೂ ವ್ಯಕ್ತಿಗತ ಬೈಬಲ್ ಓದುಗನಿಗೆ ಮತ್ತು ಇತರರಿಗೆ ಕಲಿಸಲು ಬೈಬಲನ್ನು ಉಪಯೋಗಿಸುವವರಿಗೆ ಯಾವ ಅರ್ಥದಲ್ಲಿದೆ? ವ್ಯಾಪಕವಾಗಿ ಉಪಯೋಗಿಸಲ್ಪಡುವ ಹೆಚ್ಚಿನ ಭಾಷೆಗಳಲ್ಲಿ, ಆರಿಸಿಕೊಳ್ಳಲಿಕ್ಕಾಗಿ ಒಂದಕ್ಕಿಂತಲೂ ಹೆಚ್ಚಿನ ಬೈಬಲ್ ಭಾಷಾಂತರವಿರುತ್ತದೆ. ನೀವು ಉಪಯೋಗಿಸುವ ಬೈಬಲಿನ ಆಯ್ಕೆಯಲ್ಲಿ ವಿವೇಚನೆಯನ್ನು ತೋರಿಸಿರಿ. (ಜ್ಞಾನೋಕ್ತಿ 19:8) ಸ್ವತಃ ದೇವರ ಗುರುತಿನ ವಿಷಯದಲ್ಲೇ—ಯಾವುದಾದರೊಂದು ಕಾರಣಕ್ಕಾಗಿ ಆತನ ಪ್ರೇರಿತ ವಾಕ್ಯದಿಂದ ಆತನ ನಾಮವನ್ನು ತೆಗೆದುಬಿಡುತ್ತಾ—ಒಂದು ಭಾಷಾಂತರವು ಪ್ರಾಮಾಣಿಕವಾಗಿರದಿದ್ದರೆ, ಬೈಬಲ್ ಗ್ರಂಥಪಾಠದ ಇತರ ಭಾಗಗಳಲ್ಲಿಯೂ ಭಾಷಾಂತರಕಾರರು ಹೆಚ್ಚುಕಡಿಮೆಮಾಡಿರಬಹುದೊ? ಒಂದು ತರ್ಜುಮೆಯ ಸಾಮಂಜಸ್ಯದ ಕುರಿತು ಸಂಶಯವಿರುವಾಗ, ಹಳೆಯ ಭಾಷಾಂತರಗಳೊಂದಿಗೆ ಅದನ್ನು ಹೋಲಿಸಿನೋಡಲು ಪ್ರಯತ್ನಿಸಿರಿ. ನೀವು ದೇವರ ವಾಕ್ಯದ ಶಿಕ್ಷಕರಾಗಿರುವಲ್ಲಿ, ಮೂಲ ಹೀಬ್ರು ಹಾಗೂ ಗ್ರೀಕ್ ಪಾಠದಲ್ಲಿರುವುದಕ್ಕೆ ನಿಕಟವಾಗಿ ಅಂಟಿಕೊಳ್ಳುವ ಅನುವಾದಗಳನ್ನು ಬಳಸಿರಿ.
16. ದೇವರ ಪ್ರೇರಿತ ವಾಕ್ಯದ ನಮ್ಮ ಬಳಕೆಯಲ್ಲಿ ನಾವು ವೈಯಕ್ತಿಕವಾಗಿ ಹೇಗೆ ನಿಷ್ಠೆಯನ್ನು ಪ್ರದರ್ಶಿಸಬಲ್ಲೆವು?
16 ನಾವೆಲ್ಲರೂ ವೈಯಕ್ತಿಕವಾಗಿ ದೇವರ ವಾಕ್ಯಕ್ಕೆ ನಿಷ್ಠಾವಂತರಾಗಿರಬೇಕು. ಅದರಲ್ಲಿರುವ ವಿಷಯದ ಬಗ್ಗೆ ಸಾಕಷ್ಟು ಚಿಂತಿಸುವ ಮೂಲಕ ನಾವದನ್ನು ಮಾಡುತ್ತೇವೆ. ಹೀಗೆ, ಸಾಧ್ಯವಿರುವಲ್ಲಿ ಪ್ರತಿದಿನ ನಾವು ಒಂದಿಷ್ಟು ಸಮಯವನ್ನು ಬೈಬಲ್ ಓದುತ್ತಾ ಕಳೆಯುತ್ತೇವೆ. (ಕೀರ್ತನೆ 1:1-3) ಸ್ವಸ್ಥವಾದ ನಿರ್ಣಯಗಳನ್ನು ಮಾಡಲಿಕ್ಕಾಗಿ ಅದರ ಮೂಲತತ್ವಗಳು ಹಾಗೂ ಉದಾಹರಣೆಗಳನ್ನು ಆಧಾರವಾಗಿ ಉಪಯೋಗಿಸಲು ಕಲಿಯುತ್ತಾ, ಅದು ಹೇಳುವುದನ್ನು ನಮ್ಮ ಸ್ವಂತ ಜೀವಿತಗಳಲ್ಲಿ ಪೂರ್ಣವಾಗಿ ಅನ್ವಯಿಸಿಕೊಳ್ಳುವ ಮೂಲಕ ನಾವು ಹಾಗೆ ಮಾಡುತ್ತೇವೆ. (ರೋಮಾಪುರ 12:2; ಇಬ್ರಿಯ 5:14) ಇತರರಿಗೆ ಹುರುಪಿನಿಂದ ಸಾರುವ ಮೂಲಕ ನಾವು ದೇವರ ವಾಕ್ಯದ ನಿಷ್ಠಾವಂತ ಪಕ್ಷವಾದಿಗಳಾಗಿದ್ದೇವೆಂದು ತೋರಿಸುತ್ತೇವೆ. ಶಿಕ್ಷಕರೋಪಾದಿ ಬೈಬಲನ್ನು ಜಾಗರೂಕವಾಗಿ ಉಪಯೋಗಿಸುತ್ತಾ, ನಮ್ಮ ವಿಚಾರಗಳಿಗೆ ಒಪ್ಪುವಂತೆ ಮಾಡಲಿಕ್ಕಾಗಿ, ಅದು ಹೇಳುವುದನ್ನು ಎಂದಿಗೂ ತಿರುಚದೆ, ಇಲ್ಲವೆ ಅತಿಶಯಿಸದೆ ಇರುವ ಮೂಲಕವೂ ನಾವು ಅದನ್ನು ಮಾಡುತ್ತೇವೆ. (2 ತಿಮೊಥೆಯ 2:15) ದೇವರು ಮುಂತಿಳಿಸಿರುವ ವಿಷಯವು ತಪ್ಪದೆ ಸಂಭವಿಸುವುದು. ತನ್ನ ವಾಕ್ಯವನ್ನು ನೆರವೇರಿಸುವುದರಲ್ಲಿ ಆತನು ನಿಷ್ಠಾವಂತನಾಗಿದ್ದಾನೆ. ಅದನ್ನು ಎತ್ತಿಹಿಡಿಯುವುದರಲ್ಲಿ ನಾವು ನಿಷ್ಠಾವಂತರಾಗಿರೋಣ.
[ಅಧ್ಯಯನ ಪ್ರಶ್ನೆಗಳು]
a 1997ರಲ್ಲಿ ಯುನೈಟೆಡ್ ಬೈಬಲ್ ಸೊಸೈಟಿಗಳು, ಇಡೀ ಬೈಬಲು ಇಲ್ಲವೆ ಅದರ ಭಾಗಗಳು, 2,167 ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿರುವುದಾಗಿ ಪಟ್ಟಿಮಾಡಿದವು. ಈ ಸಂಖ್ಯೆಯಲ್ಲಿ ಕೆಲವು ಭಾಷೆಗಳ ಅನೇಕ ಉಪಭಾಷೆಗಳೂ ಸೇರಿವೆ.
b ಈ ಚರ್ಚೆಯು, ಯಾವ ಭಾಷೆಗಳಿಗೆ ಪ್ರಾಣ ಮತ್ತು ಆತ್ಮದ ವಿವಾದಾಂಶವನ್ನು ಸ್ಪಷ್ಟಗೊಳಿಸುವ ಸಾಮರ್ಥ್ಯವಿದ್ದು, ಹಾಗೆ ಮಾಡಲು ಭಾಷಾಂತರಕಾರರು ಆರಿಸಿಕೊಳ್ಳುವುದಿಲ್ಲವೊ ಆ ಭಾಷೆಗಳ ಮೇಲೆ ಕೇಂದ್ರೀಕರಿಸುತ್ತದೆ. ಕೆಲವೊಂದು ಭಾಷೆಗಳಲ್ಲಿ ಭಾಷಾಂತರಕಾರರು ಏನು ಮಾಡಬಲ್ಲರೊ, ಅದನ್ನು ಲಭ್ಯವಿರುವ ಶಬ್ದಭಂಡಾರವು ತೀವ್ರವಾಗಿ ಸೀಮಿತಗೊಳಿಸುತ್ತದೆ. ಆದರೆ, ಭಾಷಾಂತರಕಾರನು ನೆಫೆಶ್ಗಾಗಿ ವಿವಿಧ ಪದಗಳನ್ನು ಬಳಸಿದರೂ, ಇಲ್ಲವೆ ಅಶಾಸ್ತ್ರೀಯ ಅರ್ಥಗಳುಳ್ಳ ಒಂದು ಪದವನ್ನು ಅವನು ಉಪಯೋಗಿಸಿದರೂ, ಮೂಲ ಭಾಷೆಯ ಪದವಾದ ನೆಫೆಶ್, ಮಾನವರಿಗೆ ಹಾಗೂ ಪ್ರಾಣಿಗಳಿಗೆ ಅನ್ವಯವಾಗುತ್ತದೆ ಮತ್ತು ಉಸಿರಾಡುವ, ತಿನ್ನುವ ಮತ್ತು ಸಾಯಬಲ್ಲದ್ದನ್ನು ಪ್ರತಿನಿಧಿಸುತ್ತದೆ ಎಂದು ಪ್ರಾಮಾಣಿಕ ಧಾರ್ಮಿಕ ಉಪದೇಶಕರು ಆಗ ವಿವರಿಸುವರು.
ನಿಮಗೆ ನೆನಪಿದೆಯೆ?
◻ ಆಧುನಿಕ ಸಮಯಗಳಲ್ಲಿ ಬೈಬಲ್ ಭಾಷಾಂತರಕಾರರ ಕೆಲಸವನ್ನು ಯಾವ ಹೇತುಗಳು ಪ್ರಭಾವಿಸಿವೆ?
◻ ತನ್ನ ಸ್ವಂತ ನಾಮದ ಸಂಬಂಧದಲ್ಲಿ ದೇವರಿಗಿರುವ ಉದ್ದೇಶವನ್ನು ಆಧುನಿಕ ಭಾಷಾಂತರ ಪ್ರವೃತ್ತಿಗಳು ಏಕೆ ನಿಷ್ಫಲಗೊಳಿಸಿರುವುದಿಲ್ಲ?
◻ ಪ್ರಾಣ, ಮರಣ, ಮತ್ತು ಭೂಮಿಯ ಕುರಿತಾಗಿರುವ ಬೈಬಲ್ ಸತ್ಯಗಳನ್ನು ಕೆಲವು ಭಾಷಾಂತರಗಳು ಹೇಗೆ ಅಸ್ಪಷ್ಟಗೊಳಿಸುತ್ತವೆ?
◻ ನಾವು ನಿಷ್ಠೆಯಿಂದ ದೇವರ ವಾಕ್ಯವನ್ನು ಎತ್ತಿಹಿಡಿಯುತ್ತೇವೆಂಬುದನ್ನು ನಾವು ಯಾವ ವಿಧಗಳಲ್ಲಿ ತೋರಿಸಬಲ್ಲೆವು?
[ಪುಟ 16 ರಲ್ಲಿರುವ ಚಿತ್ರ]
ನೀವು ಯಾವ ಬೈಬಲ್ ಭಾಷಾಂತರವನ್ನು ಉಪಯೋಗಿಸಬೇಕು?