ಮದುವೆಯಲ್ಲಿ ಹೊಸ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು
“ನೀವು ನಿಮ್ಮ ಮನಸ್ಸನ್ನು ಪ್ರೇರಿಸುವ ಶಕ್ತಿಯಲ್ಲಿ ಹೊಸಬರಾಗಿ ಮಾಡಲ್ಪಟ್ಟು, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.”—ಎಫೆಸದವರಿಗೆ 4:23, 24, NW.
1. ಮದುವೆಯನ್ನು ಯಾಕೆ ಹಗುರವಾಗಿ ತಕ್ಕೊಳ್ಳಬಾರದು?
ಮದುವೆಯು ಜೀವನದಲ್ಲಿ ಒಬ್ಬನು ತಕ್ಕೊಳ್ಳುವ ಅತ್ಯಂತ ಗಂಭೀರವಾದ ಹೆಜ್ಜೆಗಳಲ್ಲಿ ಒಂದಾಗಿದೆ, ಆದುದರಿಂದ ಅದನ್ನೆಂದೂ ಹಗುರವಾಗಿ ತಕ್ಕೊಳ್ಳಬಾರದು. ಅದೇಕೆ? ಯಾಕಂದರೆ ಅದು ಇನ್ನೊಬ್ಬ ವ್ಯಕ್ತಿಗೆ ಒಂದು ಜೀವಾವಧಿಯ ಕಟ್ಟುಪಾಡನ್ನು ಆವಶ್ಯಪಡಿಸುತ್ತದೆ. ಅದು ಒಬ್ಬನ ಇಡೀ ಜೀವಿತವನ್ನು ಆ ವ್ಯಕ್ತಿಯೊಂದಿಗೆ ಪಾಲಿಗರಾಗುವ ಅರ್ಥದಲ್ಲಿದೆ. ಆ ಕಟ್ಟುಪಾಡು ಯೋಗ್ಯವಾಗಿರಬೇಕಾದರೆ ಬಲಿತ ತೀರ್ಮಾನದ ಅಗತ್ಯತೆ ಇದೆ. ಒಂದು ಸಕಾರಾತ್ಮಕ ಪ್ರಭಾವವು ‘ಮನಸ್ಸನ್ನು ಪ್ರೇರಿಸುವಂತೆ ಮಾಡಲು ಮತ್ತು ಹೀಗೆ ಹೊಸ ವ್ಯಕ್ತಿತ್ವವನ್ನು ರೂಪಿಸಲು’ ಕೂಡ ಅದು ನಿರ್ಬಂಧಪಡಿಸುತ್ತದೆ.—ಎಫೆಸ 4:23, 24; ಹೋಲಿಸಿರಿ ಆದಿಕಾಂಡ 24:10-58; ಮತ್ತಾಯ 19:5, 6.
2, 3. (ಎ) ವಿವಾಹ ಸಂಗಾತಿಯನ್ನು ವಿವೇಕದಿಂದ ಆರಿಸಲು ಏನು ಅಗತ್ಯವಿದೆ? (ಬಿ) ಮದುವೆಯಲ್ಲಿ ಏನು ಒಳಗೂಡಿದೆ?
2 ಬಲವಾದ ಮಾಂಸಿಕ ಅಭಿಲಾಷೆಯಿಂದಾಗಿ ಸೆಳೆಯಲ್ಪಟ್ಟು ವಿವಾಹದೊಳಗೆ ದುಡುಕಿ ಪ್ರವೇಶಿಸದೆ ಇರುವುದಕ್ಕೆ ಸಕಾರಣವದೆ. ಬಲಿತ ವ್ಯಕ್ತಿತ್ವ ಮತ್ತು ಗುಣಲಕ್ಷಣವನ್ನು ವಿಕಸಿಸಲು ಸಮಯ ಬೇಕಾಗಿದೆ. ಸಮಯದೊಂದಿಗೆ, ಒಳ್ಳೇ ತೀರ್ಮಾನಕ್ಕೆ ಬುನಾದಿಯಾಗಿ ಕಾರ್ಯನಡಿಸಬಲ್ಲ ಅನುಭವ ಮತ್ತು ಜ್ಞಾನವು ಕೂಡ ಪ್ರಾಪ್ತಿಸುತ್ತದೆ. ಆಗ, ಹೊಂದಿಕೆಯಾದ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಿಕೆಯು ಅಧಿಕತಮ ಯಶಸ್ಸನ್ನು ಪಡೆಯಬಹುದು. ಸ್ಪ್ಯಾನಿಷ್ ಭಾಷೆಯ ಗಾದೆಯೊಂದು ಸರಳವಾಗಿ ಹೇಳುವುದು: “ಕೆಟ್ಟದಾಗಿ ವಿವಾಹವಾಗಿರುವುದಕ್ಕಿಂತ ಒಂಟಿಯಾಗಿ ನಡೆಯುವುದು ಲೇಸು.”—ಜ್ಞಾನೋಕ್ತಿ 21:9; ಪ್ರಸಂಗಿ 5:2.
3 ಯೋಗ್ಯ ಜೊತೆಗಾರನನ್ನು ಆರಿಸಿಕೊಳ್ಳುವುದು ಒಂದು ಸಾಫಲ್ಯಯುಕ್ತ ಮದುವೆಗೆ ಮೂಲಭೂತವೆಂಬದು ಸ್ಫುಟ. ಅದಕ್ಕಾಗಿ ಕ್ರೈಸ್ತನು ಬೈಬಲ್ ಮಾರ್ಗದರ್ಶನೆಗಳನ್ನು ಬಳಸಬೇಕು ಮತ್ತು ಅನುಸರಿಸಬೇಕು, ಕೇವಲ ದೈಹಿಕ ಆಕರ್ಷಣೆ ಮತ್ತು ಅಯುಕ್ತ ಭಾವನಾತ್ಮಕ ಮತ್ತು ಪ್ರಣಯಾತ್ಮಕ ಒತ್ತಡಗಳಿಂದ ನಡಿಸಲ್ಪಡಬಾರದು. ಮದುವೆಯು ಎರಡು ದೇಹಗಳನ್ನು ಒಂದುಗೂಡಿಸುವುದಕ್ಕಿಂತ ಎಷ್ಟೋ ಹೆಚ್ಚಿನದ್ದಾಗಿದೆ. ಅದು ಎರಡು ವ್ಯಕ್ತಿತ್ವಗಳ, ಎರಡು ಕುಟುಂಬ ಮತ್ತು ಶೈಕ್ಷಣಿಕ ಹಿನ್ನೆಲೆಗಳ, ಒಂದುವೇಳೆ ಎರಡು ಸಂಸ್ಕೃತಿಗಳ ಮತ್ತು ಭಾಷೆಗಳ ಒಂದುಗೂಡಿಸುವಿಕೆಯೂ ಆಗಿದೆ. ವಿವಾಹದಲ್ಲಿ ಎರಡು ವ್ಯಕ್ತಿಗಳನ್ನು ಐಕ್ಯಗೊಳಿಸುವಿಕೆಯು ಖಂಡಿತವಾಗಿಯೂ ನಾಲಿಗೆಯ ಯೋಗ್ಯ ಉಪಯೋಗಕ್ಕೆ ಕರೆಕೊಡುತ್ತದೆ. ವಾಕ್ಶಕ್ತಿಯಿಂದ, ನಾವು ಒಂದಾ ಬಗಿದು ಹಾಕುತ್ತೇವೆ ಇಲ್ಲವೇ ಎತ್ತಿಕಟ್ಟುತ್ತೇವೆ. ಇವೆಲ್ಲವುಗಳಿಂದ, ‘ಕರ್ತನಲ್ಲಿ ಮಾತ್ರವೇ ವಿವಾಹವಾಗು’ ವಂತೆ ಅಂದರೆ ಜೊತೆ ವಿಶ್ವಾಸಿಯನ್ನು ವಿವಾಹವಾಗುವಂತೆ ಪೌಲನು ಕೊಟ್ಟ ಹಿತೋಪದೇಶದಲ್ಲಿರುವ ವಿವೇಕವನ್ನು ಸಹ ನಾವು ಕಾಣಬಲ್ಲೆವು.—1 ಕೊರಿಂಥ 7:39; ಆದಿಕಾಂಡ 24:1-4; ಜ್ಞಾನೋಕ್ತಿ 12:18; 16:24.
ಮದುವೆಯ ಒತ್ತಡಗಳನ್ನು ಎದುರಿಸುವುದು
4. ಮದುವೆಯಲ್ಲಿ ಕೆಲವೊಮ್ಮೆ ಘರ್ಷಣೆ ಮತ್ತು ಉದ್ವೇಗ ಏಳುವುದೇಕೆ?
4 ಒಂದು ಒಳ್ಳೆಯ ಬುನಾದಿಯು ಇದ್ದಾಗ್ಯೂ, ಫರ್ಷಣೆ, ಒತ್ತಡ ಮತ್ತು ಉದ್ವೇಗಗಳ ಸಮಯಗಳು ಇರುವುವು. ಇವು ಯಾವನೇ ವ್ಯಕ್ತಿಗೆ, ಮದುವೆಯಾದನಿಗೆ ಯಾ ಆಗದವನಿಗೆ, ಸಹಜವಾದದ್ದಾಗಿವೆ. ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಯಾವುದೇ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಲ್ಲವು. ಮನೋಸ್ಥಿತಿಯ ಬದಲಾವಣೆಗಳು ಅತ್ಯುತ್ತಮ ವಿವಾಹಗಳಲ್ಲೂ ವ್ಯಕ್ತಿತ್ವದ ಸಂಘರ್ಷಣೆಗಳಿಗೆ ನಡಿಸಬಲ್ಲವು. ಇನ್ನೊಂದು ವಿಷಯವೇನಂದರೆ, ಯಾಕೋಬನು ಹೇಳಿದ ಪ್ರಕಾರ, ಯಾರಿಗೂ ನಾಲಿಗೆಯ ಮೇಲೆ ಸಂಪೂರ್ಣ ಹತೋಟಿ ಇಲ್ಲ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು, ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. . . . ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ.”—ಯಾಕೋಬ 3:2, 5.
5, 6. (ಎ) ಮನಸ್ತಾಪಗಳು ಏಳುವಾಗ ಯಾವುದರ ಅಗತ್ಯವಿದೆ? (ಬಿ) ಒಂದು ಒಡಕನ್ನು ವಾಸಿಮಾಡಲು ಯಾವ ಕ್ರಿಯೆಯನ್ನು ಕೈಕೊಳ್ಳುವ ಅಗತ್ಯವಿರಬಹುದು?
5 ಮದುವೆಯಲ್ಲಿ ಒತ್ತಡಗಳು ಏಳುವಾಗ, ಸನ್ನಿವೇಶವನ್ನು ನಾವು ಹೇಗೆ ಹತೋಟಿಯಲ್ಲಿಡಬಹುದು? ತಪ್ಪು ತಿಳುವಳಿಕೆಯು ಒಂದು ಜಗಳವಾಗಿ ವಿಕಾಸಿಸದಂತೆ ಮತ್ತು ಜಗಳವು ಒಡಕಾದ ಸಂಬಂಧವನ್ನು ತರದಂತೆ ನಾವು ಹೇಗೆ ತಡೆಯಬಲ್ಲೆವು? ಮನಸ್ಸನ್ನು ಪ್ರೇರಿಸುವ ಶಕ್ತಿಯು ತನ್ನ ಪಾತ್ರವನ್ನು ವಹಿಸುವುದು ಇಲ್ಲಿಯೇ. ಈ ಪ್ರಚೋದಕ ಆತ್ಮವು ಸಕಾರಾತ್ಮಕ ಯಾ ನಕಾರಾತ್ಮಕವಾಗಿರಬಲ್ಲದು, ಬಲವರ್ಧಕ ಮತ್ತು ಆತ್ಮಿಕ ಪ್ರವೃತ್ತಿಯುಳ್ಳದ್ದು ಯಾ ಮಾಂಸಿಕ ಪ್ರವೃತ್ತಿಗಳಿಂದ ಆಳಲ್ಪಟ್ಟದ್ದಾಗಿ ಅವನತಿ ಹೊಂದುವಂಥದು ಆಗಿರಬಲ್ಲದು. ಅದು ಬಲವರ್ಧಕವಾಗಿದ್ದರೆ, ವ್ಯಕ್ತಿಯು ಅವನ ಅಥವಾ ಅವಳ ವಿವಾಹವನ್ನು ಯೋಗ್ಯ ಪಥದಲ್ಲಿಡಲಿಕ್ಕಾಗಿ ಒಡಕನ್ನು ವಾಸಿಮಾಡಲು ಕ್ರಿಯೆಗೈಯುವನು. ವಿವಾದಗಳು ಮತ್ತು ಅಸಮ್ಮತಿಗಳು ಒಂದು ವಿವಾಹವನ್ನು ಅಂತ್ಯಗೊಳಿಸಬಾರದು. ಬೈಬಲ್ ಬುದ್ಧಿವಾದವನ್ನು ಅನ್ವಯಿಸುವ ಮೂಲಕ ಕದಡಿದ ವಾತಾವರಣವನ್ನು ತಿಳಿಗೊಳಿಸಬಹುದು ಮತ್ತು ಪರಸ್ಪರ ಗೌರವ ಮತ್ತು ತಿಳಿವಳಿಕೆಯನ್ನು ಪುನಃ ಸ್ಥಾಪಿಸಬಹುದು.—ರೋಮಾಪುರ 14:19; ಎಫೆಸ 4:23, 26, 27.
6 ಈ ಪರಿಸ್ಥಿತಿಗಳ ಕೆಳಗೆ ಪೌಲನ ಮಾತುಗಳು ಅತಿ ಯುಕ್ತವಾಗಿವೆ: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [ಯೆಹೋವನು, NW] ನಿಮ್ಮನ್ನು ಕ್ಷಮಿಸಿದಂತೆ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:12-14.
7. ಕೆಲವರಿಗೆ ಅವರ ಮದುವೆಯಲ್ಲಿ ಯಾವ ಸಮಸ್ಯೆ ಇರಬಹುದು?
7 ಆ ವಚನವನ್ನು ಓದುವುದು ಸುಲಭ, ಆದರೆ ಆಧುನಿಕ ಜೀವನದ ಒತ್ತಡದ ಕೆಳಗೆ, ಅನ್ವಯಿಸಲು ಅದು ಯಾವಾಗಲೂ ಅಷ್ಟು ಸುಲಭವಲ್ಲ. ಮೂಲಭೂತ ಸಮಸ್ಯೆಯು ಏನಾಗಿರಬಹುದು? ಕೆಲವೊಮ್ಮೆ, ಅದರ ಅರಿವಿಲ್ಲದೆನೇ ಕ್ರೈಸ್ತನೊಬ್ಬನು ಇಬ್ಬಗೆಯ ಮಟ್ಟದಿಂದ ಜೀವಿಸಬಹುದು. ರಾಜ್ಯ ಸಭಾಗೃಹದಲ್ಲಿ, ಅವನು ಸಹೋದರರೊಂದಿಗೆ ಇದ್ದಾನೆ, ಮತ್ತು ಅವನು ದಯೆ ಮತ್ತು ಪರಿಗಣನೆಯಿಂದ ಕ್ರಿಯೆಗೈಯುತ್ತಾನೆ. ಅನಂತರ ಮನೆಗೆ ಬಂದಾಗ, ಗೃಹಕೃತ್ಯದ ದಿನಚರ್ಯೆಯಲ್ಲಿ, ಅವನು ತನ್ನ ಆತ್ಮಿಕ ಸಂಬಂಧವನ್ನು ಮರೆತುಬಿಡುವ ಪ್ರವೃತ್ತಿಗೆ ಓಲಬಹುದು. ಅಲ್ಲಿ ಕೇವಲ ಪುರುಷ ಮತ್ತು ಪತ್ನಿ, “ಅವನು” ಮತ್ತು “ಅವಳು.” ಮತ್ತು ಒತ್ತಡದ ಕೆಳಗೆ ಅವನು (ಅಥವಾ ಅವಳು) ರಾಜ್ಯ ಸಭಾ ಗೃಹದಲ್ಲೆಂದೂ ನುಡಿಯಲ್ಪಡದಿರುವ ನಿರ್ದಯೆಯ ಮಾತುಗಳನ್ನು ಹೇಳಿಬಿಡಬಹುದು. ಸಂಭವಿಸಿದ್ದೇನು? ಕಣ್ಷಿಕವಾಗಿ, ಕ್ರೈಸ್ತ ವ್ಯಕ್ತಿತ್ವವು ಮಾಯವಾಗಿ ಹೋಯಿತು. ಮನೆಯಲ್ಲಿ ಇನ್ನೂ ಅವನು (ಅಥವಾ ಅವಳು) ಕ್ರೈಸ್ತ ಸಹೋದರ (ಅಥವಾ ಸಹೋದರಿ) ಎಂಬದನ್ನು ದೇವರ ಸೇವಕನೋರ್ವನು ಮರೆತಿದ್ದಾನೆ. ಮನಸ್ಸನ್ನು ಪ್ರೇರಿಸುವ ಶಕ್ತಿಯು ಸಕಾರಾತ್ಮಕವಾಗಿರುವ ಬದಲಿಗೆ ನಕಾರಾತ್ಮಕವಾಗಿದೆ.—ಯಾಕೋಬ 1:22-25.
8. ಮನಸ್ಸನ್ನು ಪ್ರೇರಿಸುವ ಶಕ್ತಿಯು ನಕಾರಾತ್ಮಕವಾಗುವಾಗ ಫಲಿತಾಂಶವೇನಾಗಬಹುದು?
8 ಫಲಿತಾಂಶವೇನು? ‘ಸ್ತ್ರೀಯು ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ಅವಳೊಂದಿಗೆ ವಿವೇಕದಿಂದ ಒಗತನ ಮಾಡು’ ವುದನ್ನು ಗಂಡನು ನಿಲ್ಲಿಸಬಹುದು. ಹೆಂಡತಿಯು ಇನ್ನು ಮುಂದೆ ಗಂಡನನ್ನು ಗೌರವಿಸದೆ ಇರಬಹುದು; ಅವಳ “ಸಾತ್ವಿಕವಾದ ಶಾಂತ ಮನಸ್ಸು” ಕಾಣೆಯಾಗಿದೆ. ಮನಸ್ಸನ್ನು ಪ್ರೇರಿಸುವ ಶಕ್ತಿಯು ಆತ್ಮಿಕವಾಗುವ ಬದಲಿಗೆ ದೈಹಿಕವಾಗಿದೆ. “ಪ್ರಾಪಂಚಿಕ ಬುದ್ಧಿ”ಯು ಒಡೆತನ ವಹಿಸಿಯದೆ. ಹೀಗೆ ಆ ಪ್ರಚೋದಕ ಶಕ್ತಿಯನ್ನು ಆತ್ಮಿಕವಾಗಿ ಮತ್ತು ಸಕಾರಾತ್ಮಕವಾಗಿ ಇಡಲು ಏನು ಮಾಡ ಸಾಧ್ಯವಿದೆ? ನಮ್ಮ ಆತ್ಮಿಕತೆಯನ್ನು ನಾವು ಬಲಪಡಿಸಿಕೊಳ್ಳಬೇಕು.—1 ಪೇತ್ರ 3:1-4, 7; ಕೊಲೊಸ್ಸೆ 2:18.
ಶಕ್ತಿಯನ್ನು ಬಲಗೊಳಿಸಿರಿ
9. ದಿನನಿತ್ಯದ ಜೀವಿತದಲ್ಲಿ ನಮಗೆ ಯಾವ ಆಯ್ಕೆಗಳನ್ನು ಮಾಡಲಿದೆ?
9 ಆ ಪ್ರೇರಕ ಶಕ್ತಿಯು ಯಾವುದೆಂದರೆ ನಾವು ನಿರ್ಣಯಗಳನ್ನು ಮತ್ತು ಆಯ್ಕೆಗಳನ್ನು ಮಾಡಬೇಕಾದಾಗ ಪಾತ್ರ ವಹಿಸುವ ಮಾನಸಿಕ ಪ್ರವೃತ್ತಿಯೇ. ಜೀವಿತವು—ಒಳ್ಳೇದಾದ ಯಾ ಕೆಟ್ಟದಾದ, ಸ್ವಾರ್ಥದ ಯಾ ನಿಸ್ವಾರ್ಥದ, ನೈತಿಕವಾದ ಯಾ ಅನೈತಿಕವಾದ—ಆಯ್ಕೆಗಳ ಒಂದು ಎಡೆಬಿಡದ ಶ್ರೇಣಿಯನ್ನೇ ನೀಡುತ್ತದೆ. ಯೋಗ್ಯ ನಿರ್ಣಯಗಳನ್ನು ಮಾಡುವಂತೆ ನಮಗೆ ಯಾವುದು ಸಹಾಯ ಮಾಡುವುದು? ಮನಸ್ಸನ್ನು ಪ್ರೇರಿಸುವ ಶಕ್ತಿಯೇ, ಅದು ಯೆಹೋವನ ಚಿತ್ತವನ್ನು ಮಾಡಲು ಕೇಂದ್ರೀಕರಿಸಿದ್ದರೆ ಮಾತ್ರ. ಕೀರ್ತನೆಗಾರನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ನಿಬಂಧನೆಗಳ ಮಾರ್ಗವನ್ನು ಉಪದೇಶಿಸು; ಕಡೇತನಕ ಅದರಲ್ಲಿಯೇ ನಡೆಯುವೆನು.”—ಕೀರ್ತನೆ 119:33; ಯೆಹೆಜ್ಕೇಲ 18:31; ರೋಮಾಪುರ 12:2.
10. ಮನಸ್ಸನ್ನು ಪ್ರೇರೇಪಿಸುವ ಶಕ್ತಿಯನ್ನು ನಾವು ಸಕಾರಾತ್ಮಕವಾಗಿ ಹೇಗೆ ಬಲಗೊಳಿಸಬಹುದು?
10 ಯೆಹೋವನೊಂದಿಗೆ ಒಂದು ಬಲವಾದ ಸಂಬಂಧವು ಆತನನ್ನು ಮೆಚ್ಚಿಸಲು ಮತ್ತು ಯಾವುದು ಕೆಟ್ಟದೋ ಅದರಿಂದ, ಮದುವೆಯಲ್ಲಿ ದಾಂಪತ್ಯ ದ್ರೋಹದಿಂದಲೂ, ದೂರ ತಿರುಗುವಂತೆ ಸಹಾಯ ಮಾಡುವುದು. ಇಸ್ರಾಯೇಲ್ಯರು, “[ಅವರ] ದೇವರಾದ ಯೆಹೋವನಿಗೆ [ಯೆಹೋವನ ದೃಷ್ಟಿಯಲ್ಲಿ, NW] ಒಳ್ಳೇದೂ ಯುಕ್ತವೂ ಆಗಿರುವದನ್ನು ಮಾಡು” ವಂತೆ ಪ್ರೋತ್ಸಾಹಿಸಲ್ಪಟ್ಟಿದ್ದರು. ಆದರೆ ದೇವರು ಉಪದೇಶವನ್ನೂ ಕೊಟ್ಟದ್ದು: “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” “ವ್ಯಭಿಚಾರ ಮಾಡಬಾರದು,” ಎಂಬ ದಶಾಜ್ಞೆಗಳಲ್ಲಿ ಏಳನೆಯ ಆಜ್ಞೆಯ ನೋಟದಲ್ಲಿ, ಇಸ್ರಾಯೇಲ್ಯರು ವ್ಯಭಿಚಾರವನ್ನು ಹಗೆಮಾಡಲೇ ಬೇಕಿತ್ತು. ಮದುವೆಯಲ್ಲಿ ನಂಬಿಗಸ್ತಿಕೆಯ ಕುರಿತ ದೇವರ ಕಟ್ಟುನಿಟ್ಟಿನ ನೋಟವನ್ನು ಆ ಆಜ್ಞೆಯು ತೋರಿಸುತ್ತದೆ.—ಧರ್ಮೋಪದೇಶಕಾಂಡ 12:28; ಕೀರ್ತನೆ 97:10; ವಿಮೋಚನಕಾಂಡ 20:14; ಯಾಜಕಕಾಂಡ 20:10.
11. ನಮ್ಮ ಮನಸ್ಸುಗಳನ್ನು ಪ್ರೇರೇಪಿಸುವ ಶಕ್ತಿಯನ್ನು ನಾವು ಹೇಗೆ ಇನ್ನಷ್ಟು ಹೆಚ್ಚು ಬಲಗೊಳಿಸಬಹುದು?
11 ಮನಸ್ಸನ್ನು ಪ್ರೇರಿಸುವ ಶಕ್ತಿಯನ್ನು ನಾವು ಹೇಗೆ ಇನ್ನಷ್ಟು ಹೆಚ್ಚು ಬಲಗೊಳಿಸಬಲ್ಲೆವು? ಆತ್ಮಿಕ ಚಟುವಟಿಕೆಗಳನ್ನು ಮತ್ತು ಮೌಲ್ಯಗಳನ್ನು ಗಣ್ಯಮಾಡುವ ಮೂಲಕವೇ. ಅಂದರೆ ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸುವ ಅಗತ್ಯವನ್ನು ನಾವು ತೃಪ್ತಿಗೊಳಿಸಬೇಕು ಮತ್ತು ಯೆಹೋವನ ಆಲೋಚನೆಗಳನ್ನು ಮತ್ತು ಬುದ್ಧಿವಾದವನ್ನು ಒಟ್ಟಾಗಿ ಕೂಡಿ ಚರ್ಚಿಸುವುದರಲ್ಲಿ ಆನಂದಿಸುವುದನ್ನು ಕಲಿಯಬೇಕು. ನಮ್ಮ ಹೃದಯಪುರ್ವಕವಾದ ಭಾವನೆಗಳು ಕೀರ್ತನೆಗಾರನಂಥವುಗಳಾಗಿರಬೇಕು: “ನಾನು ಪೂರ್ಣ ಮನಸ್ಸಿನಿಂದ ನಿನ್ನನ್ನು ಹುಡುಕುತ್ತೇನೆ; ನಿನ್ನ ಆಜೆಗ್ಞಳಿಗೆ ತಪ್ಪಿಹೋಗದಂತೆ ನನ್ನನ್ನು ಕಾಯಿ. ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ. ಯೆಹೋವನೇ, ನಿನ್ನ ನಿಬಂಧನೆಗಳ ಮಾರ್ಗವನ್ನು ಉಪದೇಶಿಸು; ಕಡೇತನಕ ಅದರಲ್ಲೇ ನಡೆಯುವೆನು. ನನಗೆ ಜ್ಞಾನವನ್ನು ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣ ಮನಸ್ಸಿನಿಂದ ಕೈಕೊಂಡು ನಡೆಯುವೆನು.”—ಕೀರ್ತನೆ 119:10, 11, 33, 34.
12. ಕ್ರಿಸ್ತನ ಮನಸ್ಸನ್ನು ಪ್ರತಿಬಿಂಬಿಸುವುದರಲ್ಲಿ ಯಾವ ವಿಷಯಗಳು ನಮ್ಮನ್ನು ಐಕ್ಯಗೊಳಿಸಬಲ್ಲವು?
12 ಯೆಹೋವನ ನೀತಿಯುಳ್ಳ ತತ್ವಗಳಿಗಾಗಿ ಈ ರೀತಿಯ ಗಣ್ಯತೆಯು ಬೈಬಲಿನ ಅಭ್ಯಾಸದ ಮೂಲಕವಾಗಿ ಮಾತ್ರವಲ್ಲ ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಪಾಲಿಗರಾಗುವ ಮೂಲಕ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಒಟ್ಟುಗೂಡಿ ಭಾಗವಹಿಸುವ ಮೂಲಕವೂ ಕಾಪಾಡಲ್ಪಡುತ್ತದೆ. ಈ ಎರಡು ಪ್ರಬಲವಾದ ಪ್ರಭಾವಗಳು ನಮ್ಮ ಮನಸ್ಸುಗಳನ್ನು ಪ್ರೇರಿಸುವ ಶಕ್ತಿಯನ್ನು ಎಡೆಬಿಡದೆ ಬಲಗೊಳಿಸಬಲ್ಲವು, ಹೀಗೆ ನಮ್ಮ ನಿಸ್ವಾರ್ಥ ಜೀವನ ಮಾರ್ಗವು ಯಾವಾಗಲೂ ಕ್ರಿಸ್ತನ ಮನಸ್ಸನ್ನು ಪ್ರತಿಬಿಂಬಿಸುವಂಥಾಗುವುದು.—ರೋಮಾಪುರ 15:5; 1 ಕೊರಿಂಥ 2:16.
13. (ಎ) ಮನಸ್ಸನ್ನು ಪ್ರೇರಿಸುವ ಶಕ್ತಿಯನ್ನು ಬಲಗೊಳಿಸುವುದರಲ್ಲಿ ಪ್ರಾರ್ಥನೆಯು ಒಂದು ಬೆಲೆಯುಳ್ಳ ವಿಷಯವೇಕೆ? (ಬಿ) ಈ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?
13 ಇನ್ನೊಂದು ವಿಷಯವು ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ಏನನ್ನು ಎತ್ತಿಹೇಳಿದ್ದಾನೋ ಅದಾಗಿದೆ: “ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ . . . ದೇವರನ್ನು ಪ್ರಾರ್ಥಿಸಿರಿ.” (ಎಫೆಸ 6:18) ಗಂಡಂದಿರು ಮತ್ತು ಹೆಂಡತಿಯರು ಒಟ್ಟುಗೂಡಿ ಪ್ರಾರ್ಥಿಸುವ ಅಗತ್ಯವಿದೆ. ಹೆಚ್ಚಾಗಿ ಆ ಪ್ರಾರ್ಥನೆಗಳು ಹೃದಯವನ್ನು ತೆರೆಯುತ್ತವೆ ಮತ್ತು ಯಾವುದೇ ಒಡಕನ್ನು ದುರುಸ್ತಿಮಾಡುವ ನಿಷ್ಕಪಟ ಮಾತುಕತೆಗಳಿಗೆ ನಡಿಸುತ್ತವೆ. ಸಂಕಷ್ಟ ಮತ್ತು ಶೋಧನೆಯ ಸಮಯಗಳಲ್ಲಿ, ಕ್ರಿಸ್ತನ ಮನಸ್ಸಿನೊಂದಿಗೆ ಸಹಮತದಲ್ಲಿರುವ ವಿಷಯವನ್ನು ಮಾಡುವಂತೆ ಆತ್ಮಿಕ ಬಲಕ್ಕಾಗಿ, ಪ್ರಾರ್ಥನೆಯಲ್ಲಿ ದೇವರೆಡೆಗೆ ಸಹಾಯಕ್ಕಾಗಿ ತಿರುಗುವ ಅಗತ್ಯ ನಮಗಿದೆ. ಪರಿಪೂರ್ಣನಾದ ಯೇಸುವು ಸಹ ಬಲಕ್ಕಾಗಿ ಬೇಡುತ್ತಾ, ಅನೇಕ ಸಂದರ್ಭಗಳಲ್ಲಿ ಪ್ರಾರ್ಥನೆಯಲ್ಲಿ ತನ್ನ ತಂದೆಯೆಡೆಗೆ ತಿರುಗಿದ್ದನು. ಆತನ ಪ್ರಾರ್ಥನೆಗಳು ಹೃದಯಪೂರ್ವಕವೂ ತೀವ್ರಾಸಕ್ತಿಯುಳ್ಳದ್ದೂ ಆಗಿದ್ದವು. ತದ್ರೀತಿಯಲ್ಲಿ ಇಂದು, ಶೋಧನೆಯ ಸಮಯದಲ್ಲಿ, ಮಾಂಸಿಕ ಇಚ್ಛೆಗೆ ಬಲಿಬೀಳುವ ಅಪೇಕ್ಷೆಯನ್ನು ಎದುರಿಸುವಂತೆ ಮತ್ತು ವಿವಾಹದ ಶಪಥವನ್ನು ಪರಿತ್ಯಜಿಸದೆ ಇರುವಂತೆ ಸಹಾಯಕ್ಕಾಗಿ ಯೆಹೋವನನ್ನು ಕೇಳಿಕೊಳ್ಳುವ ಮೂಲಕ, ಯೋಗ್ಯ ನಿರ್ಣಯವನ್ನು ಮಾಡಲು ಬೇಕಾದ ಬಲವನ್ನು ಕಂಡುಕೊಳ್ಳಬಲ್ಲೆವು.—ಕೀರ್ತನೆ 119:101, 102.
ನಡೆವಳಿಯ ಮಾದರಿಗಳನ್ನು ಹೋಲಿಸುವುದು
14, 15. (ಎ) ಯೋಸೇಫನು ಶೋಧನೆಗೆ ಹೇಗೆ ಪ್ರತಿಕ್ರಿಯೆ ತೋರಿಸಿದನು? (ಬಿ) ಶೋಧನೆಯನ್ನು ಎದುರಿಸಲು ಯೋಸೇಫನಿಗೆ ಸಹಾಯಮಾಡಿದ್ದು ಯಾವುದು?
14 ಶೋಧನೆಯನ್ನು ನಾವು ಎದುರಿಸುವುದು ಹೇಗೆ? ಈ ಸಂಬಂಧದಲ್ಲಿ ಯೋಸೇಫನಿಂದ ಮತ್ತು ದಾವೀದನಿಂದ ತಕ್ಕೊಳ್ಳಲ್ಪಟ್ಟ ನಡೆವಳಿಗಳ ನಡುವಣ ಸ್ಪಷ್ಟ ವ್ಯತ್ಯಾಸವು ನಮಗಿದೆ. ಪೊಟೀಫರನ ಹೆಂಡತಿಯು, ಆ ಸಮಯದಲ್ಲಿ ಅವಿವಾಹಿತನಾಗಿದ್ದನೆಂದು ವ್ಯಕ್ತವಾಗುವ ಸುಂದರನಾದ ಯೋಸೇಫನನ್ನು ಮೋಹಿಸಲು ಎಡೆಬಿಡದೆ ಪ್ರಯತ್ನಿಸಿದಾಗ, ಅವನು ಅವಳಿಗೆ ಕೊನೆಗೆ ಹೀಗಂದ ಮೂಲಕ ಪ್ರತ್ಯುತ್ತರ ಕೊಟ್ಟನು: “ಈ ಮನೆಯಲ್ಲಿ ಅವನೂ ನನಗಿಂತ ದೊಡ್ಡವನಲ್ಲ; ನೀನು ಅವನ ಧರ್ಮಪತ್ನಿಯಾದದರಿಂದ ನಿನ್ನನ್ನು ಮಾತ್ರ ನನಗೆ ಅಧೀನಮಾಡಲಿಲ್ಲ; ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರ ವಿರುದ್ಧವಾಗಿ ಹೇಗೆ ಪಾಪ ಮಾಡಲಿ.”—ಆದಿಕಾಂಡ 39:6-9.
15 ಅದಕ್ಕೆ ಬಲಿಬೀಳಲು ಅಷ್ಟು ಸುಲಭವಾಗಿದ್ದಾಗ ಯೋಗ್ಯ ಮಾರ್ಗವನ್ನು ತಕ್ಕೊಳ್ಳುವಂತೆ ಯೋಸೇಫನಿಗೆ ಸಹಾಯಿಸಿದ್ದು ಯಾವುದು? ಅವನ ಮನಸ್ಸನ್ನು ಪ್ರೇರಿಸುವ ಒಂದು ಪ್ರಬಲವಾದ ಶಕ್ತಿಯು ಅವನಲ್ಲಿತ್ತು. ಯೆಹೋವನೊಂದಿಗೆ ಅವನ ಸಂಬಂಧದ ಕುರಿತು ಅವನು ಅತಿ ಪ್ರಜ್ಞೆಯುಳ್ಳವನಾಗಿದ್ದನು. ಈ ಕಾಮಾತುರ ಸ್ತ್ರೀಯೊಂದಿಗೆ ಹಾದರವನ್ನು ನಡಿಸುವುದು ಅವಳ ಗಂಡನ ವಿರುದ್ಧವಾಗಿ ಮಾತ್ರವೇ ಅಲ್ಲ, ಹೆಚ್ಚು ಪ್ರಾಮುಖ್ಯವಾಗಿ, ದೇವರ ವಿರುದ್ಧವಾಗಿ ಕಾರ್ಯತಃ ಒಂದು ಪಾಪವಾಗಿತ್ತೆಂದು ಅವನಿಗೆ ತಿಳಿದಿತ್ತು.—ಆದಿಕಾಂಡ 39:12.
16. ದಾವೀದನು ಒಂದು ಶೋಧನೆಗೆ ಪ್ರತಿಕ್ರಿಯಿಸಿದ್ದು ಹೇಗೆ?
16 ಇದಕ್ಕೆ ಹೋಲಿಕೆಯಲ್ಲಿ, ದಾವೀದನಿಗೆ ಸಂಭವಿಸಿದ್ದೇನು? ಅವನು ವಿವಾಹಿತ ಪುರುಷನಾಗಿದ್ದನು, ಧರ್ಮಶಾಸ್ತ್ರದಿಂದ ಅನುಮತಿಸಲ್ಪಟ್ಟ ಹಲವಾರು ಪತ್ನಿಯರು ಅವನಿಗಿದ್ದರು. ಒಂದು ದಿನ ಸಂಜೇ ಹೊತ್ತಿನಲ್ಲಿ ತನ್ನ ಅರಮನೆಯಿಂದ ಅವನು ಒಬ್ಬಾಕೆ ಸ್ತ್ರೀಯು ಸ್ನಾನಮಾಡುವುದನ್ನು ಕಂಡನು. ಅವಳು ಸುಂದರಿಯಾದ ಬತ್ಷೆಬೆ, ಊರೀಯನ ಹೆಂಡತಿಯಾಗಿದ್ದಳು. ದಾವೀದನಿಗೆ ಸ್ಪಷ್ಟವಾಗಿಗಿ ಒಂದು ಕ್ರಿಯೆಯ ಆಯ್ಕೆಯು ಇತ್ತು—ಕಾಮಾಸಕ್ತಿಯು ಹೃದಯದಲ್ಲೇರುವ ತನಕ ನೋಡುತ್ತಾ ಮುಂದರಿಯುವುದು ಅಥವಾ ದೂರ ಸರಿದು ಶೋಧನೆಯನ್ನು ನಿರಾಕರಿಸುವುದು. ಅವನು ಏನನ್ನು ಮಾಡಲು ಆರಿಸಿಕೊಂಡನು? ಅವನು ಆಕೆಯನ್ನು ಅರಮನೆಗೆ ಕರೇಕಳುಹಿಸಿದನು, ಮತ್ತು ಅವಳೊಂದಿಗೆ ವ್ಯಭಿಚಾರಗೈದನು. ಇನ್ನೂ ಕೆಟ್ಟದಾಗಿ, ಅವನು ಮುಂದರಿದು ಅವಳ ಗಂಡನ ಮರಣಕ್ಕೂ ಕಾರಣನಾದನು.—2 ಸಮುವೇಲ 11:2-4, 12-27.
17. ದಾವೀದನ ಆತ್ಮಿಕ ಸ್ಥಿತಿಯ ಕುರಿತು ನಾವೇನನ್ನು ಊಹಿಸಬಹುದು?
17 ದಾವೀದನ ಸಮಸ್ಯೆಯು ಏನಾಗಿತ್ತು? ಕೀರ್ತನೆ 51 ರಲ್ಲಿ ಅವನ ನಂತರದ ಪಶ್ಚಾತ್ತಾಪದ ಅರಿಕೆಯಿಂದ ನಾವು ಕೆಲವು ನಿಜತ್ವಗಳನ್ನು ಊಹಿಸಬಹುದು. ಅವನಂದದ್ದು: “ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನೂ ನಿರ್ಮಿಸು; ಒಂದು ಸ್ಥಿರವಾದ, ನೂತನ ಆತ್ಮವನ್ನು ಅನುಗ್ರಹಿಸು.” ಅವನ ಶೋಧನೆಯ ಸಂದರ್ಭದಲ್ಲಿ, ಅವನಲ್ಲಿ ಒಂದು ಶುದ್ಧವಾದ ಮತ್ತು ಸ್ಥಿರವಾದ ಆತ್ಮವು ಇರಲಿಲ್ಲವೆಂದು ವ್ಯಕ್ತವಾಗುತ್ತದೆ. ಪ್ರಾಯಶಃ ಯೆಹೋವನ ಧರ್ಮಶಾಸ್ತ್ರವನ್ನು ಓದುವುದನ್ನು ಅವನು ಅಸಡ್ಡೆ ಮಾಡಿರಬಹುದು, ಫಲಿತಾಂಶವಾಗಿ ಅವನ ಆತ್ಮಿಕತೆಯು ಬಲಹೀನಗೊಂಡಿತ್ತು. ಅಥವಾ ರಾಜನೋಪಾದಿ ತನ್ನ ಸ್ಥಾನ ಮತ್ತು ಅಧಿಕಾರವು ತನ್ನ ಆಲೋಚನೆಯನ್ನು ಭ್ರಷ್ಟಗೊಳಿಸುವಂತೆ ಬಿಟ್ಟದರಿಂದ ಅವನು ಈ ವಿಷಯಾಭಿಲಾಷೆಗೆ ಬಲಿಬಿದ್ದನು. ನಿಶ್ಚಯವಾಗಿಯೂ ಆ ಸಮಯದಲ್ಲಿ, ಅವನ ಮನಸ್ಸನ್ನು ಪ್ರೇರಿಸುವ ಶಕ್ತಿಯು ಸ್ವಾರ್ಥಿಯೂ ಪಾಪಪೂರ್ಣವೂ ಆಗಿತ್ತು. ಹೀಗೆ, ತನಗೆ “ಸ್ಥಿರವಾದ, ಒಂದು ನೂತನ ಆತ್ಮ” ದ ಅಗತ್ಯವಿದೆ ಎಂದು ಅವನು ಅರಿತುಕೊಂಡನು.—ಕೀರ್ತನೆ 51:10, NW; ಧರ್ಮೋಪದೇಶಕಾಂಡ 17:18-20.
18. ವ್ಯಭಿಚಾರದ ಕುರಿತು ಯೇಸು ಯಾವ ಹಿತೋಪದೇಶ ಕೊಟ್ಟನು?
18 ಅರಸ ದಾವೀದನಂಥ ಆತ್ಮಿಕ ಬಲಹೀನತೆಯ ಸ್ಥಿತಿಗೆ ಬೀಳುವಂತೆ ಒಬ್ಬರು ಅಥವಾ ಇಬ್ಬರೂ ಜೊತೆಗಾರರು ತಮ್ಮನ್ನು ಬಿಟ್ಟುಕೊಟ್ಟ ಕಾರಣ ಕೆಲವು ಕ್ರೈಸ್ತರ ಮದುವೆಗಳು ಧ್ವಂಸಗೊಂಡಿವೆ. ಅವನ ಉದಾಹರಣೆಯು, ಇನ್ನೊಬ್ಬ ಸ್ತ್ರೀ, ಅಥವಾ ಪುರುಷನನ್ನು ಕಾಮಾಸಕ್ತಿಯಿಂದ ನೋಡುತ್ತಾ ಇರುವುದರ ವಿರುದ್ಧ ನಮಗೆ ಎಚ್ಚರಿಕೆ ಕೊಡಬೇಕು, ಯಾಕಂದರೆ ಕೊನೆಗೆ ವ್ಯಭಿಚಾರವು ಸಂಭವಿಸಬಹುದು. ಈ ಸಂಬಂಧದಲ್ಲಿ ಮನುಷ್ಯ ಭಾವನೆಗಳನ್ನು ತಾನು ತಿಳಿದಿದ್ದನೆಂದು ಯೇಸು ತೋರಿಸಿದನು, ಯಾಕಂದರೆ ಅವನಂದದ್ದು: ““ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” ಅಂಥ ವಿದ್ಯಮಾನದಲ್ಲಿ, ಮನಸ್ಸನ್ನು ಪ್ರೇರಿಸುವ ಶಕ್ತಿಯು ಸ್ವಾರ್ಥ ಮತ್ತು ಐಹಿಕತೆಯದ್ದಾಗಿದೆ, ಆತ್ಮಿಕವಲ್ಲ. ಹೀಗಿರಲಾಗಿ, ವ್ಯಭಿಚಾರವನ್ನು ವರ್ಜಿಸಲು ಮತ್ತು ತಮ್ಮ ವಿವಾಹಗಳನ್ನು ಸಂತೋಷಕರವೂ ತೃಪ್ತಿಕರವೂ ಆಗಿಡುವಂತೆ ಕ್ರೈಸ್ತರು ಏನು ಮಾಡಬಲ್ಲರು?—ಮತ್ತಾಯ 5:27, 28.
ವಿವಾಹ ಬಂಧವನ್ನು ಬಲಪಡಿಸಿರಿ
19. ಒಂದು ಮದುವೆಯನ್ನು ಹೇಗೆ ಬಲಗೊಳಿಸ ಸಾಧ್ಯವಿದೆ?
19 ರಾಜ ಸೊಲೊಮೋನನು ಬರೆದದ್ದು: “ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ.” ಒಂದು ಹೊಂದಿಕೆಯಾದ ಮದುವೆಯಲ್ಲಿ ಆಪತ್ತನ್ನು ಒಬ್ಬನಿಗಿಂತ ಇಬ್ಬರು ಹೆಚ್ಚು ಒಳ್ಳೇದ್ದಾಗಿ ಎದುರಿಸಬಲ್ಲರು ನಿಶ್ಚಯ. ಆದರೆ ಅದರಲ್ಲಿ ದೇವರೂ ಇರುವ ಮೂಲಕ, ಅವರ ಬಂಧವು ಮೂರು ಹುರಿಯ ಹಗ್ಗವಾಗಿದ್ದರೆ, ಆ ಮದುವೆಯು ಸುದೃಢವಾಗಿರುವುದು. ಮತ್ತು ದೇವರು ಒಂದು ಮದುವೆಯಲ್ಲಿ ಇರುವುದು ಹೇಗೆ? ವಿವಾಹಕ್ಕಾಗಿ ಆತನ ತತ್ವಗಳನ್ನು ಮತ್ತು ಬುದ್ಧಿವಾದವನ್ನು ದಂಪತಿಗಳು ಅನ್ವಯಿಸುವ ಮೂಲಕವೇ.—ಪ್ರಸಂಗಿ 4:12.
20. ಯಾವ ಬೈಬಲ್ ಬುದ್ಧಿವಾದವು ಗಂಡನಿಗೆ ಸಹಾಯ ಮಾಡಬಲ್ಲದು?
20 ನಿಶ್ಚಯವಾಗಿಯೂ ಒಬ್ಬ ಗಂಡನು ಕೆಳಗಿನ ವಚನಗಳ ಬುದ್ಧಿವಾದವನ್ನು ಅನ್ವಯಿಸುವುದಾದರೆ, ಅವನ ವಿವಾಹದ ಸಾಫಲ್ಯಕ್ಕೆ ಒಂದು ಉತ್ತಮ ಆಧಾರವು ಇರುವುದು:
“ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನ ಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗೆ ಅಡ್ಡಿಯಿರುವದಿಲ್ಲ.”—1 ಪೇತ್ರ 3:7.
“ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.”—ಎಫೆಸ 5:25, 26, 28.
“ಪತಿಯು ಸಹ—ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೆಷ್ಠಳು ಎಂದು ಆಕೆಯನ್ನು ಕೊಂಡಾಡುವನು.”—ಜ್ಞಾನೋಕ್ತಿ 31:29.
“ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವದಿಲ್ಲವೋ? ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವದು, ಯಾವನು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು. . . . ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, . . . ತನ್ನನ್ನೇ ನಾಶಪಡಿಸಿಕೊಳ್ಳುವನು.”—ಜ್ಞಾನೋಕ್ತಿ 6:28, 29, 32.
21. ಯಾವ ಬೈಬಲ್ ಬುದ್ಧಿವಾದವು ಹೆಂಡತಿಗೆ ಸಹಾಯ ಮಾಡಬಲ್ಲದು?
21 ಹೆಂಡತಿಯು ಕೆಳಗಿನ ಬೈಬಲ್ ಸೂತ್ರಗಳಿಗೆ ಗಮನ ಕೊಡುವುದಾದರೆ, ಅದು ಅವಳ ಮದುವೆಯ ಶಾಶ್ವತತೆಗೆ ನೆರವಾಗುವುದು:
“ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು [ಮತ್ತು ನಿಮ್ಮ] ಸಾತ್ವಿಕವಾದ ಶಾಂತ ಮನಸ್ಸು [ಅನ್ನು] ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1-4.
“ಗಂಡನು ಹೆಂಡತಿಗೆ [ಲೈಂಗಿಕವಾಗಿ] ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ. . . . ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ದಂಪತಿಧರ್ಮವನ್ನು ಬಿಟ್ಟು ಅಗಲಿರಬಹುದೇ ಹೊರತು ಅನ್ಯಥಾ ಹಾಗೆ ಮಾಡಬಾರದು.”—1 ಕೊರಿಂಥ 7:3-5.
22. (ಎ) ಯಾವ ಇತರ ವಿಷಯಗಳು ಮದುವೆಯ ಬಾಳಿಕೆಗೆ ಪರಿಣಾಮ ಬೀರಬಲ್ಲವು? (ಬಿ) ಯೆಹೋವನು ವಿವಾಹ ವಿಚ್ಛೇದವನ್ನು ಹೇಗೆ ವೀಕ್ಷಿಸುತ್ತಾನೆ?
22 ಮದುವೆಯ ರತ್ನದ ಇತರ ಆವಶ್ಯಕ ಮುಖಗಳು ಪ್ರೀತಿ, ದಯೆ, ಕನಿಕರ, ತಾಳ್ಮೆ, ತಿಳಿವಳಿಕೆ, ಪ್ರೋತ್ಸಾಹನೆ, ಮತ್ತು ಹೊಗಳಿಕೆ ಎಂದೂ ಬೈಬಲ್ ತೋರಿಸುತ್ತದೆ. ಅವುಗಳ ಹೊರತಾದ ಮದುವೆಯು ಬಿಸಿಲು ಮತ್ತು ನೀರಿನ ಹೊರತಾದ ಸಸ್ಯದಂತಿದೆ—ಅದು ಅರಳುವುದೇ ವಿರಳ. ಆದುದರಿಂದ ನಮ್ಮ ಮನಸ್ಸುಗಳನ್ನು ಪ್ರೇರಿಸುವ ಶಕ್ತಿಯು ನಮ್ಮ ವಿವಾಹದಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಮತ್ತು ಚೇತನಗೊಳಿಸಲು ಪ್ರಚೋದಿಸಲಿ. ನೆನಪಿಡಿರಿ, ಯೆಹೋವನು ‘ವಿವಾಹ ವಿಚ್ಛೇದವನ್ನು’ ಹಗೆಮಾಡುತ್ತಾನೆ. ಕ್ರಿಸ್ತೀಯ ಪ್ರೀತಿಯು ಅಭ್ಯಾಸಿಸಲ್ಪಟ್ಟಲ್ಲಿ, ವ್ಯಭಿಚಾರಕ್ಕೆ ಮತ್ತು ವಿವಾಹದ ಕುಸಿತಕ್ಕೆ ಅವಕಾಶವಿರಬಾರದು. ಯಾಕೆ? ಯಾಕಂದರೆ “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”—ಮಲಾಕಿಯ 2:16; 1 ಕೊರಿಂಥ 13:4-8; ಎಫೆಸ 5:3-5.
ನೀವು ವಿವರಿಸಬಲ್ಲಿರೋ?
▫ ಸಂತೋಷವುಳ್ಳ ಮದುವೆಗೆ ಯಾವುದು ಮೂಲಭೂತವಾಗಿದೆ?
▫ ಮನಸ್ಸನ್ನು ಪ್ರೇರಿಸುವ ಶಕ್ತಿಯು ಒಂದು ವಿವಾಹವನ್ನು ಹೇಗೆ ಪ್ರಭಾವಿಸಬಲ್ಲದು?
▫ ಮನಸ್ಸುಗಳನ್ನು ಪ್ರೇರಿಸುವ ಶಕ್ತಿಯನ್ನು ಬಲಗೊಳಿಸಲು ನಾವೇನು ಮಾಡಬಲ್ಲೆವು?
▫ ಶೋಧನೆಯ ಕೆಳಗೆ ಯೋಸೇಫ ಮತ್ತು ದಾವೀದರು ಹೇಗೆ ಭಿನ್ನ ಪ್ರತಿವರ್ತನೆ ತೋರಿಸಿದರು?
▫ ವಿವಾಹ ಬಂಧವನ್ನು ಬಲಗೊಳಿಸಲು ಗಂಡಂದಿರಿಗೆ ಮತ್ತು ಹೆಂಡತಿಯರಿಗೆ ಯಾವ ಬೈಬಲ್ ಹಿತೋಪದೇಶ ಸಹಾಯ ಮಾಡುವುದು?
[ಪುಟ 18 ರಲ್ಲಿರುವ ಚಿತ್ರಗಳು]
ನಾವು ಇಬ್ಬಗೆಯ ಮಟ್ಟದಿಂದ—ಸಭೆಯಲ್ಲಿ ದಯೆಯಿಂದ ಮತ್ತು ಮನೆಯಲ್ಲಿ ನಿರ್ದಯೆಯಿಂದ ಜೀವನ ನಡಿಸುತ್ತೇವೋ?