ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಆಗಸ್ಟ್ 1-7
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w12 7/15 32 ¶3-4
“ಪರಲೋಕದಲ್ಲಿ ಒಂದು ನಂಬಿಗಸ್ತ ಸಾಕ್ಷಿ”
3,000 ವರ್ಷಗಳ ಹಿಂದೆ, ಯೆಹೋವ ದೇವರು ಇಸ್ರಾಯೇಲಿನ ರಾಜ ದಾವೀದನೊಂದಿಗೆ ರಾಜ್ಯದ ಒಡಂಬಡಿಕೆ ಮಾಡಿಕೊಂಡನು. (2 ಸಮುವೇಲ 7:12-16) ದಾವೀದನ ವಂಶದವನಾದ ಯೇಸು ಕ್ರಿಸ್ತನು ದಾವೀದನ ಸಿಂಹಾಸನದಲ್ಲಿ ಸದಾಕಾಲ ಆಳಲು ನ್ಯಾಯಬದ್ಧ ಹಕ್ಕನ್ನು ಒದಗಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿತ್ತು. (ಯೆಶಾಯ 9:7; ಲೂಕ 1:32, 33) ದಾವೀದನ “ಸಂತತಿ”ಯ ಸಿಂಹಾಸನದ ಕುರಿತು ಕೀರ್ತನೆಗಾರನು ಹೇಳಿದ್ದು, “ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವದು. ಪರಲೋಕದ ಸಾಕ್ಷಿ ಸತ್ಯವೇ ಸರಿ.”—ಕೀರ್ತನೆ 89:36, 37.
‘ಇರುಳನ್ನಾಳುವ’ ಚಂದ್ರನಂತೆ ಕ್ರಿಸ್ತನ ಆಳ್ವಿಕೆ ಶಾಶ್ವತವಾಗಿರುತ್ತದೆ. (ಆದಿಕಾಂಡ 1:16) ಆತನ ರಾಜ್ಯದ ಬಗ್ಗೆ ದಾನಿಯೇಲ 7:14ರಲ್ಲಿ ಹೀಗೆ ತಿಳಿಸಲಾಗಿದೆ: “ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” ಈ ರಾಜ್ಯವು ಮಾನವ ಕುಲಕ್ಕೆ ತರಲಿರುವ ಆಶೀರ್ವಾದಗಳಿಗೆ ಚಂದ್ರನು ಸಾಕ್ಷಿಯಾಗಿದ್ದಾನೆ.
ಆಗಸ್ಟ್ 22-28
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 857-858
ಮುನ್ನರಿವು, ಪೂರ್ವನಿರ್ಧರಿತ
ಪ್ರವಾದನೆ ನೆರವೇರಿಸಲಿಕ್ಕಾಗಿ ಯೇಸುವಿಗೆ ಯೂದನು ದ್ರೋಹಬಗೆಯುವಂತೆ ದೇವರು ಪೂರ್ವದಲ್ಲೇ ನಿರ್ಧರಿಸಿದ್ದನಾ?
ಇಸ್ಕರಿಯೋತ ಯೂದನ ದ್ರೋಹವು ದೇವರ ಪ್ರವಾದನೆಯನ್ನು ನೆರವೇರಿಸಿತು ಮತ್ತು ಭವಿಷ್ಯವನ್ನು ಮುಂತಿಳಿಸಲು ಯೆಹೋವನಿಗೆ ಮತ್ತು ಯೇಸುವಿಗಿರುವ ಸಾಮರ್ಥ್ಯವನ್ನು ರುಜುಪಡಿಸಿತು. (ಕೀರ್ತ 41:9; 55:12, 13; 109:8; ಅಕಾ 1:16-20) ಆದರೆ ಯೂದನು ದ್ರೋಹ ಬಗೆಯಬೇಕೆಂದು ಯೆಹೋವನು ಮೊದಲೇ ನಿರ್ಧರಿಸಿರಲಿಲ್ಲ. ಯೇಸುವಿನ ಜೊತೆಗಿರುವ ಒಬ್ಬನು ದ್ರೋಹ ಬಗೆಯುತ್ತಾನೆ ಎಂದು ಪ್ರವಾದನೆಯು ಮುಂತಿಳಿಸಿತ್ತು. ಆದರೆ ಆ ಒಬ್ಬನು ಯಾರೆಂದು ಸ್ಪಷ್ಟವಾಗಿ ತಿಳಿಸಿರಲಿಲ್ಲ. ಅಷ್ಟೇ ಅಲ್ಲ, ಒಂದುವೇಳೆ ಯೂದನ ಬಗ್ಗೆ ಯೆಹೋವನು ಮೊದಲೇ ನಿರ್ಧರಿಸಿದ್ದರೆ ಅದು ಬೈಬಲಿನ ತತ್ವಕ್ಕೆ ವಿರುದ್ಧವಾಗಿರುತ್ತಿತ್ತು. ಯಾಕೆಂದರೆ ಅಪೊಸ್ತಲನನ್ನಾಗಿ ಆರಿಸುವುದರ ಬಗ್ಗೆ ದೇವರ ಮಟ್ಟ ಹೀಗಿದೆ: “ಅವಸರದಿಂದ ಯಾವ ಮನುಷ್ಯನ ಮೇಲೂ ನಿನ್ನ ಹಸ್ತವನ್ನಿಟ್ಟು ಅವನನ್ನು ಸಭೆಯಲ್ಲಿ ನೇಮಿಸಬೇಡ; ಇತರರ ಪಾಪಗಳಲ್ಲಿ ಪಾಲಿಗನೂ ಆಗಬೇಡ; ನಿನ್ನನ್ನು ನೈತಿಕ ಶುದ್ಧತೆಯಲ್ಲಿ ಸುರಕ್ಷಿತವಾಗಿಟ್ಟುಕೊ.” (1 ತಿಮೊ 5:22; 3:6ನ್ನು ಹೋಲಿಸಿ.) ವಿವೇಚನೆಯಿಂದ ಸರಿಯಾದ ವ್ಯಕ್ತಿಗಳನ್ನೇ ತನ್ನ 12 ಮಂದಿ ಶಿಷ್ಯರನ್ನಾಗಿ ಆರಿಸಲು ಯೇಸು, ಇಡೀ ರಾತ್ರಿ ತನ್ನ ತಂದೆಗೆ ಪ್ರಾರ್ಥಿಸಿದನು. (ಲೂಕ 6:12-16) ಒಂದುವೇಳೆ ಯೂದನೇ ದ್ರೋಹ ಬಗೆಯುವಂತೆ ಯೆಹೋವನು ಮೊದಲೇ ನಿರ್ಧರಿಸಿದ್ದರೆ, ದೇವರ ಮಾರ್ಗದರ್ಶನೆ ಸರಿಯಿಲ್ಲ ಎಂದಾಗುತ್ತಿತ್ತು. ಜೊತೆಗೆ, ಸ್ವತಃ ಆತನೇ ಯೂದನ ಪಾಪದಲ್ಲಿ ಪಾಲಿಗನಾದಂತೆ ಇರುತ್ತಿತ್ತು.
ಹಾಗಾಗಿ, ಯೂದನನ್ನು ಅಪೊಸ್ತಲನಾಗಿ ಆರಿಸುವಾಗ ಅವನಲ್ಲಿ ದ್ರೋಹ ಮಾಡುವ ಉದ್ದೇಶವಾಗಲಿ, ಮನೋಭಾವವಾಗಲಿ ಇರಲಿಲ್ಲವೆಂದು ತೋರುತ್ತದೆ. ಆದರೆ ನಂತರ ಯೂದನು ‘ವಿಷಕಾರಿ ಬೇರು ತನ್ನಲ್ಲಿ ಚಿಗುರುವಂತೆ’ ಬಿಟ್ಟನು. ಅದರ ಪರಿಣಾಮವಾಗಿ ಅವನು ತನ್ನನ್ನು ದೇವರಲ್ಲ, ಬದಲಿಗೆ ಸೈತಾನನು ನಡೆಸುವಂತೆ ಬಿಟ್ಟುಕೊಟ್ಟನು. ಇದು ಕಳ್ಳತನಕ್ಕೆ ಮತ್ತು ದ್ರೋಹಕ್ಕೆ ಅವನನ್ನು ನಡೆಸಿತು. (ಇಬ್ರಿ 12:14, 15; ಯೋಹಾ 13:2; ಅಕಾ 1:24, 25; ಯಾಕೋ 1:14, 15; ಯೂದ 4ನ್ನು ನೋಡಿ.) ಯೂದನ ಮನೋಭಾವ ಎಷ್ಟರ ಮಟ್ಟಿಗೆ ಬದಲಾಯಿತೆಂದರೆ ಯೇಸು ಅವನ ಹೃದಯದಲ್ಲಿದ್ದ ವಿಷಯವನ್ನು ಗ್ರಹಿಸಿದನು ಮತ್ತು ಯೂದನು ತನಗೆ ದ್ರೋಹ ಬಗೆಯುವನೆಂದು ಮುಂತಿಳಿಸಿದನು.—ಯೋಹಾ 13:10,11.
ಒಮ್ಮೆ ಕೆಲವರು ಯೇಸುವಿನ ಬೋಧನೆಯನ್ನು ಕೇಳಿ ಆತನನ್ನು ಹಿಂಬಾಲಿಸುವುದನ್ನು ಬಿಟ್ಟದ್ದರ ಬಗ್ಗೆ ಯೋಹಾನ 6:64ರ ವೃತ್ತಾಂತ ತಿಳಿಸುತ್ತದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ನಂಬದವರು ಯಾರು ಮತ್ತು ತನಗೆ ನಂಬಿಕೆ ದ್ರೋಹಮಾಡುವವನು ಯಾರು ಎಂಬುದು ಆರಂಭದಿಂದಲೇ ಯೇಸುವಿಗೆ ತಿಳಿದಿತ್ತು.” “ಆರಂಭದಿಂದಲೇ” ಎಂಬ ಪದವನ್ನು 2 ಪೇತ್ರ 3:4ರಲ್ಲಿ ಸೃಷ್ಟಿಯ ಆರಂಭವನ್ನು ತಿಳಿಸಲು ಬಳಸಲಾಗಿದೆ, ಆದರೆ ಅದನ್ನು ಬೇರೆ ಸಂದರ್ಭವನ್ನು ಸೂಚಿಸಲೂ ಬಳಸಲಾಗಿದೆ. (ಲೂಕ 1:2; ಯೋಹಾ 15:27) ಉದಾಹರಣೆಗೆ, ಪವಿತ್ರಾತ್ಮವು ಅನ್ಯಜನರ ಮೇಲೆ ಬಂದದ್ದರ ಬಗ್ಗೆ ಅಪೊಸ್ತಲ ಪೇತ್ರನು “ಆರಂಭದಲ್ಲಿ ಪವಿತ್ರಾತ್ಮವು ನಮ್ಮ ಮೇಲೆ ಬಂದಂತೆಯೇ ಅವರ ಮೇಲೆಯೂ ಬಂತು” ಎಂದು ಹೇಳಿದನು. ಅವನು ತನ್ನನ್ನು ಅಪೊಸ್ತಲನಾಗಿ ಆರಿಸಿದ ಆರಂಭದ ದಿನಗಳ ಬಗ್ಗೆ ಮಾತಾಡುತ್ತಿರಲಿಲ್ಲ, ಬದಲಿಗೆ ಪಂಚಾಶತ್ತಮ 33ರಲ್ಲಿ, ಸೇರಿ ಬಂದ ಎಲ್ಲರ ಮೇಲೆ ಪವಿತ್ರಾತ್ಮವು ಬಂದದ್ದರ ಬಗ್ಗೆ ಮಾತಾಡುತ್ತಿದ್ದನು. (ಅಕಾ 11:15; 2:1-4) ಯೋಹಾನ 6:64ರ ಬಗ್ಗೆ ಲ್ಯಾಂಜ್ಸ್ ಕಾಮೆಂಟರಿ ಆನ್ ದ ಹೋಲಿ ಸ್ಕ್ರಿಪ್ಚ (ಪು. 227)ರಲ್ಲಿ ಈ ಆಸಕ್ತಿಕರ ಹೇಳಿಕೆ ಇದೆ: “ಆರಂಭ . . . ಅಂದರೆ ಸೃಷ್ಟಿಯ ಆರಂಭ ಅಲ್ಲ, ಯೇಸು ತನ್ನ ಅಪೊಸ್ತಲರನ್ನು ಆಯ್ಕೆ ಮಾಡಿದ ಆರಂಭವೂ ಅಲ್ಲ, ಮೆಸ್ಸೀಯನ ಸಾರುವಿಕೆಯ ಆರಂಭವೂ ಅಲ್ಲ, . . . ಬದಲಿಗೆ ಜನರ ಮನಸ್ಸಿನಲ್ಲಿ ನಂಬಿಕೆಯ ಕೊರತೆ ಚಿಗುರೊಡೆದ ಆರಂಭವನ್ನು ಸೂಚಿಸುತ್ತಿತ್ತು. [ಕ್ರಮೇಣ ಕೆಲವು ಶಿಷ್ಯರು ಯೇಸುವನ್ನು ಹಿಂಬಾಲಿಸುವುದನ್ನು ಬಿಟ್ಟರು]. ಇದೇ ರೀತಿ, ತನಗೆ ದ್ರೋಹಮಾಡಲಿದ್ದವನ ಬಗ್ಗೆ ಸಹ ಯೇಸುವಿಗೆ ಆರಂಭದಿಂದಲೇ ಗೊತ್ತಿತ್ತು.”— 1ಯೋಹಾ 3:8, 11, 12 ಹೋಲಿಸಿ.
ಆಗಸ್ಟ್ 29–ಸೆಪ್ಟೆಂಬರ್ 4
ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 110-118
“ಯೆಹೋವನ ಮಹೋಪಕಾರಕ್ಕೆ ಬದಲೇನು ಮಾಡಲಿ?”
w87 3/15 24 ¶5
ಸಂತೋಷದ ದೇವರು, ಸಂತೋಷದ ಜನರು
◆116:3—“ಮರಣಪಾಶಗಳು” ಅಂದರೇನು?
ತುಂಡರಿಸಲಾಗದ ಪಾಶ ಅಥವಾ ಹಗ್ಗಗಳಿಂದ ಮರಣವು ತನ್ನನ್ನು ಕಟ್ಟಿಹಾಕಿದೆ, ಅದರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬಂತೆ ಕೀರ್ತನೆಗಾರನಿಗೆ ಅನಿಸಿತು. ಕೈಕಾಲುಗಳನ್ನು ಗಟ್ಟಿಯಾಗಿ ಹಗ್ಗದಿಂದ ಕಟ್ಟಿದರೆ ತುಂಬ ನೋವಾಗುತ್ತದೆ. ಹೀಬ್ರುವಿನಲ್ಲಿ ಹಗ್ಗ ಅಥವಾ ಪಾಶವನ್ನು ಸೂಚಿಸುವ ಪದವನ್ನು ಗ್ರೀಕ್ ಸೆಪ್ಟೂಅಜಿಂಟ್ ಆವೃತ್ತಿಯಲ್ಲಿ ನೋವು ಅಥವಾ ವೇದನೆ ಎಂದು ಭಾಷಾಂತರಿಸಲಾಗಿದೆ. ಯೇಸು ಸಾಯುವಾಗ ಮರಣಕರ ನೋವಿನಲ್ಲಿ ನರಳುತ್ತಿದ್ದನು. ಆದ್ದರಿಂದ ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿದಾಗ, ಅವನು ‘ಮರಣವೇದನೆಗಳಿಂದ ಬಿಡಿಸಲ್ಪಟ್ಟನು.’—ಅಕಾ 2:24.