ಕಳವಳವು—ನಿಮ್ಮ ಮೇಲೆ ಜಯಸಾಧಿಸುವಂತೆ ಬಿಡಬೇಡಿರಿ
“ಆದದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” (ಮತ್ತಾಯ 6:34) ಯೇಸು ಕ್ರಿಸ್ತನು ಕೊಟ್ಟ ಈ ಸಲಹೆಯು, ಇಂದಿನ ತ್ವರಿತಗತಿಯ ಹಾಗೂ ಒತ್ತಡಭರಿತ ಸಮಾಜದಲ್ಲಿ ಜೀವಿಸುತ್ತಿರುವ ನಮಗೆಲ್ಲರಿಗೂ ನಿಶ್ಚಯವಾಗಿಯೂ ಪ್ರಾಯೋಗಿಕವಾಗಿದೆ.
ಹಾಗಿದ್ದರೂ, ನಿಜಜೀವನದಲ್ಲಿ ನಮ್ಮ ಸಮಸ್ಯೆಗಳು, ನಿರ್ಣಯಗಳು, ಕರ್ತವ್ಯಗಳು, ಹಾಗೂ ಜವಾಬ್ದಾರಿಗಳ ಕುರಿತು ಕಳವಳ ಪಡದೆ ಇರಲು ಸಾಧ್ಯವೊ? ಇವುಗಳ ಕಾರಣ, ಕೋಟಿಗಟ್ಟಲೆ ಜನರು ಖಿನ್ನರೂ ವ್ಯಥೆಗೀಡಾದವರೂ ಕುಗ್ಗಿದವರೂ ಆಗಿದ್ದಾರೆ. ಆದುದರಿಂದಲೇ, ಉಪಶಮನಕಾರಿಗಳು ನೂರಾರು ಕೋಟಿ ಡಾಲರುಗಳ ವ್ಯಾಪಾರವಾಗಿದೆ.
ಒಂದು ಸಮತೂಕದ ದೃಷ್ಟಿಕೋನವನ್ನು ಇಟ್ಟುಕೊಳ್ಳುವ ವಿಧ
ನಮ್ಮ ಕರ್ತವ್ಯಗಳು, ನೇಮಕಗಳು, ನಿರ್ಣಯಗಳು, ಮತ್ತು ಸಮಸ್ಯೆಗಳು ತುರ್ತಿನವುಗಳಾಗಿರಲಿ ಇಲ್ಲದಿರಲಿ, ನಾವು ಅವುಗಳಿಗಾಗಿ ಯೋಜಿಸಬೇಕು ಮತ್ತು ಅವುಗಳನ್ನು ಎದುರಿಸಲು ಸಜ್ಜಾಗಿರಬೇಕು. ಯಾವುದೇ ಮುಖ್ಯವಾದೊಂದು ಕೆಲಸವನ್ನು ಆರಂಭಿಸುವ ಮೊದಲು, ನಾವು ‘ಕೂತುಕೊಂಡು ಅದಕ್ಕೆ ಎಷ್ಟು ಖರ್ಚು ಹಿಡಿದೀತು ಎಂದು ಲೆಕ್ಕಮಾಡುವಂತೆ’ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (ಲೂಕ 14:28-30) ಇದು ಲಭ್ಯವಿರುವ ಆಯ್ಕೆಗಳನ್ನು ತೂಗಿನೋಡುವುದು, ಫಲಿತಾಂಶದ ಸಂಭವನೀಯ ಪರಿಣಾಮಗಳನ್ನು ವಿಶ್ಲೇಷಿಸುವುದು, ಮತ್ತು ಸಮಯ, ಶಕ್ತಿ, ಹಾಗೂ ಹಣದ ಸಂಬಂಧದಲ್ಲಿ ವೆಚ್ಚವನ್ನು ನಿರ್ಧರಿಸುವುದನ್ನು ಒಳಗೊಳ್ಳುತ್ತದೆ.
ಸಂಭವಿಸಬಹುದಾದ ವಿಷಯವನ್ನು ಒಬ್ಬನು ಜಾಗರೂಕವಾಗಿ ಪರಿಗಣಿಸಬೇಕಾದರೂ, ಪ್ರತಿಯೊಂದು ಘಟನೆಯ ಕುರಿತು ಮುಂದಾಲೋಚಿಸುವುದು ಸಾಧ್ಯವೂ ಇಲ್ಲ ಪ್ರಯೋಜನಕರವೂ ಇಲ್ಲ. ಉದಾಹರಣೆಗೆ, ಕುಟುಂಬದ ಸುರಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳುವಾಗ ಏನು ಮಾಡಬೇಕೆಂಬುದನ್ನು ನೀವು ಪರಿಗಣಿಸಬಹುದು. ನೀವು ಹೊಗೆಯನ್ನು ಪತ್ತೇಹಚ್ಚುವ ಯಂತ್ರಗಳನ್ನು ಮತ್ತು ಅಗ್ನಿಶಾಮಕ ಸಾಧನಗಳನ್ನು ಖರೀದಿಸಿ ಮನೆಯಲ್ಲಿ ಅಳವಡಿಸಬಹುದು. ಬೆಂಕಿ ಹೊತ್ತಿಕೊಳ್ಳುವಾಗ ಮನೆಯ ವಿಭಿನ್ನ ಭಾಗಗಳಿಂದ ತಪ್ಪಿಸಿಕೊಳ್ಳುವ ಮಾರ್ಗಗಳ ಕುರಿತು ಪರ್ಯಾಲೋಚಿಸಿ ಅದನ್ನು ಪೂರ್ವಾಭಿನಯಿಸಬಹುದು. ಆದರೆ, ನ್ಯಾಯವೂ ಪ್ರಾಯೋಗಿಕವೂ ಆದ ಮುಂದಾಲೋಚನೆಯು ಕೊನೆಗೊಂಡು, ಅತಿಯಾದ ಹಾಗೂ ನಿರಾಧಾರವಾದ ಕಳವಳವು ಆರಂಭಿಸುವುದು ಯಾವಾಗ? ನೀವು ಅನೇಕಾನೇಕ ಊಹಾತ್ಮಕ ಸನ್ನಿವೇಶಗಳ ಕುರಿತು ಪರಿತಪಿಸಲು ತೊಡಗುವಾಗ ಇಂತಹ ಕಳವಳವು ಆರಂಭಿಸುತ್ತದೆ. ಈ ಊಹಾತ್ಮಕ ಸನ್ನಿವೇಶಗಳು, ಬುದ್ಧಿವಂತ ಕಲ್ಪನಾಶಕ್ತಿಯ ಉತ್ಪನ್ನವಾಗಿವೆ. ಇಂತಹ ವ್ಯಾಕುಲಗೊಳಿಸುವ ಆಲೋಚನೆಗಳು ನಿಮ್ಮನ್ನು ಪೂರ್ತಿಯಾಗಿ ಮುಳುಗಿಸಿಬಿಟ್ಟು, ನೀವು ಯಾವುದೊ ಒಂದು ವಿಷಯವನ್ನು ಕಡೆಗಣಿಸಿರಬೇಕು ಇಲ್ಲವೆ ನಿಮ್ಮ ಕುಟುಂಬವನ್ನು ಸಂರಕ್ಷಿಸಲು ನೀವು ಸಾಕಷ್ಟು ಪ್ರಯಾಸಪಟ್ಟಿಲ್ಲ ಎಂಬುದನ್ನು ನಿಮಗೆ ಮನದಟ್ಟುಮಾಡಬಹುದು. ಸ್ವತಃ ಸೃಷ್ಟಿಸಿಕೊಳ್ಳುವ ಈ ಸಂಕಟವು ಎಂತಹ ಒಂದು ಹೊರೆಯಾಗಿರಬಹುದೆಂದರೆ, ಅದರ ನಿಮಿತ್ತ ನಿಮಗೆ ನಿದ್ರೆಯೇ ಬಾರದಿರಬಹುದು.
ಫರೋಹನ ಸಮ್ಮುಖದಲ್ಲಿ ಮೋಶೆ
ಯೆಹೋವ ದೇವರು ತನ್ನ ಪ್ರವಾದಿಯಾದ ಮೋಶೆಗೆ ಕಷ್ಟಕರವಾದ ನೇಮಕವನ್ನು ಕೊಟ್ಟನು. ಪ್ರಥಮವಾಗಿ ಅವನು ಇಸ್ರಾಯೇಲ್ಯರ ಬಳಿಗೆ ಹೋಗಿ, ಅವರನ್ನು ಐಗುಪ್ತದಿಂದ ಹೊರನಡೆಸಲು ಯೆಹೋವನು ತನ್ನನ್ನು ನೇಮಿಸಿದ್ದಾನೆಂದು ಮನಗಾಣಿಸಬೇಕಿತ್ತು. ತರುವಾಯ ಮೋಶೆಯು ಫರೋಹನ ಮುಂದೆ ಹಾಜರಾಗಿ, ಇಸ್ರಾಯೇಲ್ಯರಿಗೆ ಅಲ್ಲಿಂದ ಹೊರಡಲು ಅನುಮತಿಯನ್ನು ನೀಡುವಂತೆ ವಿನಂತಿಸಿಕೊಳ್ಳಬೇಕಿತ್ತು. ಕೊನೆಯದಾಗಿ ಮೋಶೆಯು, ಲಕ್ಷಗಟ್ಟಲೆ ಜನರನ್ನು ಅರಣ್ಯಗಳೊಳಗಿಂದ ನಡೆಸುತ್ತಾ ವೈರಿಗಳಿಂದ ತುಂಬಿದ್ದ ದೇಶದೊಳಕ್ಕೆ ಕರೆತರಬೇಕಿತ್ತು. (ವಿಮೋಚನಕಾಂಡ 3:1-10) ಈ ಎಲ್ಲ ಕಾರ್ಯಗಳು ದಿಗಿಲುಹುಟ್ಟಿಸುವಂತಹವುಗಳಾಗಿದ್ದರೂ, ಈ ಜವಾಬ್ದಾರಿಯಿಂದ ಮೋಶೆಯು ಅನುಚಿತವಾಗಿ ಕಳವಳಗೊಂಡನೊ?
ಮೋಶೆಯು ಹಲವಾರು ವಿಷಯಗಳ ಕುರಿತು ಚಿಂತಿತನಾಗಿದ್ದನೆಂಬುದು ತೀರ ಸ್ಪಷ್ಟ. ಅವನು ಯೆಹೋವನನ್ನು ಕೇಳಿದ್ದು: “ನಾನು ಇಸ್ರಾಯೇಲ್ಯರ ಬಳಿಗೆ ಬಂದು ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಿದಾಗ ಒಂದು ವೇಳೆ ಅವರು—ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರಕೊಡಬೇಕು”? ಆ ಪ್ರಶ್ನೆಗೆ ಉತ್ತರವನ್ನು ಯೆಹೋವನು ನೀಡಿದನು. (ವಿಮೋಚನಕಾಂಡ 3:13, 14) ಫರೋಹನು ತನ್ನನ್ನು ನಂಬದಿದ್ದರೆ ಏನು ಸಂಭವಿಸಬಹುದು ಎಂಬುದರ ಕುರಿತೂ ಮೋಶೆಯು ಚಿಂತಿಸಿದನು. ಮತ್ತೊಮ್ಮೆ ಯೆಹೋವನು ತನ್ನ ಪ್ರವಾದಿಗೆ ಬೇಕಾದ ಉತ್ತರವನ್ನು ನೀಡಿದನು. ಕೊನೆಯ ಸಮಸ್ಯೆಯೋಪಾದಿ, ತಾನು “ವಾಕ್ಚಾತುರ್ಯವಿಲ್ಲದವ”ನೆಂದು ಮೋಶೆಯು ತಿಳಿಸಿದನು. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಸಾಧ್ಯವಿತ್ತು? ಮೋಶೆಯ ಪರವಾಗಿ ಮಾತಾಡುವಂತೆ ಯೆಹೋವನು ಆರೋನನನ್ನು ನೇಮಿಸಿದನು.—ವಿಮೋಚನಕಾಂಡ 4:1-5, 10-16.
ತನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡ ಮೋಶೆಯು, ಯೆಹೋವನಲ್ಲಿ ಪೂರ್ಣ ಭರವಸೆಯುಳ್ಳವನಾಗಿ ದೇವರು ಆಜ್ಞಾಪಿಸಿದುದೆಲ್ಲವನ್ನು ಮಾಡಿದನು. ಫರೋಹನನ್ನು ಎದುರುಗೊಳ್ಳುವಾಗ ಸಂಭವಿಸಬಹುದಾದ ವಿಷಯದ ಕುರಿತು ವಿನಾಕಾರಣ ಗಾಬರಿಗೊಳ್ಳದೆ, ಮೋಶೆಯು ‘ಆಜ್ಞಾಪಿಸಿದಂತೆಯೇ ನಡೆದುಕೊಂಡನು.’ (ವಿಮೋಚನಕಾಂಡ 7:6) ಒಂದು ವೇಳೆ ಆತಂಕಗಳು ಅವನ ಮೇಲೆ ಜಯಸಾಧಿಸುವಂತೆ ಅವನು ಅನುಮತಿಸಿದ್ದರೆ, ತನ್ನ ನೇಮಕವನ್ನು ಪೂರೈಸಲು ಅತ್ಯಾವಶ್ಯಕವಾಗಿದ್ದ ನಂಬಿಕೆ ಹಾಗೂ ಧೈರ್ಯವನ್ನು ಅವು ಸುಲಭವಾಗಿ ದುರ್ಬಲಗೊಳಿಸಿದ್ದಿರಬಹುದು.
ಮೋಶೆಯು ತನ್ನ ನೇಮಕವನ್ನು ಸಮತೂಕವಾಗಿ ನಿರ್ವಹಿಸಿದ್ದು, ಅಪೊಸ್ತಲ ಪೌಲನು ‘ಸ್ವಸ್ಥ ಮನಸ್ಸು’ ಎಂಬುದಾಗಿ ತಿಳಿಸಿದಂತಹ ವಿಷಯಕ್ಕೆ ಉದಾಹರಣೆಯಾಗಿದೆ. (2 ತಿಮೊಥೆಯ 1:7; ತೀತ 2:2-6) ಮೋಶೆಯು ಸ್ವಸ್ಥಮನಸ್ಸಿನವನಾಗಿರದಿದ್ದರೆ, ಅವನು ತನ್ನ ಅಸಾಧಾರಣ ನೇಮಕದಿಂದ ಪೂರ್ತಿಯಾಗಿ ಮುಳುಗಿಹೋಗಿ, ಅದನ್ನು ಸ್ವೀಕರಿಸದೇ ಇದ್ದಿರಬಹುದಿತ್ತು.
ನಿಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು
ನೀವು ನಿಮ್ಮ ಅನುದಿನದ ಜೀವಿತದಲ್ಲಿ ನಂಬಿಕೆಯ ಪರೀಕ್ಷೆಗಳನ್ನು ಇಲ್ಲವೆ ಸಂಕಷ್ಟಗಳನ್ನು ಎದುರಿಸುವಾಗ ಹೇಗೆ ಪ್ರತಿಕ್ರಿಯಿಸುತ್ತೀರಿ? ಭವಿಷ್ಯದಲ್ಲಾಗಬಹುದಾದ ಅಡೆತಡೆಗಳು ಮತ್ತು ಸವಾಲುಗಳ ಕುರಿತು ನೆನಸಿಯೇ ನೀವು ಗಾಬರಿಗೊಳ್ಳುತ್ತೀರೊ? ಇಲ್ಲವೆ ಸಮತೂಕದ ಮನೋಭಾವದೊಂದಿಗೆ ಅವುಗಳನ್ನು ವೀಕ್ಷಿಸುತ್ತೀರೊ? ಇದು, ‘ಸೇತುವೆಯ ಬಳಿಗೆ ಬರುವ ತನಕ ದಾಟುವುದರ ಬಗ್ಗೆ ಯೋಚಿಸದಿರಿ’ ಎಂದು ಕೆಲವರು ಹೇಳುವಂತಿದೆ. ಆ ಕಾಲ್ಪನಿಕ ಸೇತುವೆಯನ್ನು ದಾಟುವ ಅಗತ್ಯವೇ ಇರಲಾರದೇನೊ! ಆದುದರಿಂದ, ಎಂದಿಗೂ ಸಂಭವಿಸದೇ ಇರಬಹುದಾದ ವಿಷಯದಿಂದ ಏಕೆ ಕಳವಳಗೊಳ್ಳಬೇಕು? ಬೈಬಲು ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು.” (ಜ್ಞಾನೋಕ್ತಿ 12:25) ಕಳವಳಪಡುವವನು ಕಾಲ ಮಿಂಚಿ ಹೋಗುವ ವರೆಗೆ ನಿರ್ಣಯವೊಂದನ್ನು ಮಾಡದೇ ಸಮಯವನ್ನು ವ್ಯರ್ಥವಾಗಿ ಕಳೆಯುವನು.
ಅನುಚಿತವಾದ ಕಳವಳವು ಉಂಟುಮಾಡಬಹುದಾದ ಅತ್ಯಂತ ಗಂಭೀರವಾದ ನಷ್ಟ ಆತ್ಮಿಕ ಹಾನಿಯಾಗಿದೆ. “ಪರಲೋಕರಾಜ್ಯದ ವಾಕ್ಯ”ಕ್ಕಾಗಿರುವ ಗಣ್ಯತೆಯನ್ನು ಐಶ್ವರ್ಯದಿಂದುಂಟಾಗುವ ಮೋಸವೂ ಈ “ಪ್ರಪಂಚದ ಚಿಂತೆಯೂ” ಸಂಪೂರ್ಣವಾಗಿ ಅದುಮಿಹಾಕಬಲ್ಲದು ಎಂದು ಯೇಸು ಕ್ರಿಸ್ತನು ಸೂಚಿಸಿದನು. (ಮತ್ತಾಯ 13:19, 22) ಗಿಡಗಳು ದೊಡ್ಡ ಮರಗಳಾಗಿ ಬೆಳೆದು ಹಣ್ಣುಕೊಡುವುದನ್ನು ಮುಳ್ಳುಗಳು ತಡೆಯುವಂತೆಯೇ, ಆತ್ಮಿಕ ಪ್ರಗತಿಯನ್ನು ಮಾಡುವುದರಿಂದ ಮತ್ತು ದೇವರಿಗೆ ಸ್ತುತಿಯನ್ನು ತರುವಂತಹ ಫಲವನ್ನು ಕೊಡುವುದರಿಂದ ಅನಿಯಂತ್ರಿತ ಕಳವಳವು ನಮ್ಮನ್ನು ತಡೆಯಬಲ್ಲದು. ಸ್ವತಃ ಸೃಷ್ಟಿಸಿಕೊಂಡ ಹಾಗೂ ಧ್ವಂಸಕರವಾದ ಕಳವಳದ ಕಾರಣ, ಕೆಲವರು ತಮ್ಮನ್ನು ಯೆಹೋವನಿಗೆ ಸಮರ್ಪಿಕೊಳ್ಳುವುದರಿಂದಲೂ ಹಿಂದೇಟುಹಾಕಿದ್ದಾರೆ. ‘ನಾನು ನನ್ನ ಸಮರ್ಪಣೆಗೆ ಯೋಗ್ಯವಾಗಿ ನಡೆದುಕೊಳ್ಳದಿದ್ದಲ್ಲಿ ಆಗೇನು?’ ಎಂದು ಅವರು ಚಿಂತಿಸುತ್ತಾರೆ.
ನಾವು ನಮ್ಮ ಆತ್ಮಿಕ ಹೋರಾಟದಲ್ಲಿ “ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು” ತರಲು ಪ್ರಯತ್ನಿಸುತ್ತಿದ್ದೇವೆಂದು ಅಪೊಸ್ತಲ ಪೌಲನು ನಮಗೆ ಹೇಳಿದನು. (2 ಕೊರಿಂಥ 10:5) ನಮ್ಮ ಪ್ರಧಾನ ವೈರಿಯಾದ ಪಿಶಾಚನಾದ ಸೈತಾನನು, ನಮ್ಮ ಚಿಂತೆಗಳನ್ನು ಬಂಡವಾಳವನ್ನಾಗಿ ಇಟ್ಟುಕೊಂಡು ನಮ್ಮನ್ನು ನಿರುತ್ತೇಜಿಸಲು ಮತ್ತು ಭೌತಿಕವಾಗಿ, ಭಾವನಾತ್ಮಕವಾಗಿ ಹಾಗೂ ಆತ್ಮಿಕವಾಗಿ ದುರ್ಬಲಗೊಳಿಸಲು ತುಂಬ ಸಂತೋಷಿಸುವನು. ಅಜಾಗರೂಕ ಜನರನ್ನು ಉಪಾಯದಿಂದ ಹಿಡಿಯಲು ಸಂದೇಹಗಳನ್ನು ಉಪಯೋಗಿಸುವುದರಲ್ಲಿ ಅವನು ನಿಸ್ಸೀಮನು. ಆದುದರಿಂದಲೇ ಕ್ರೈಸ್ತರು “ಸೈತಾನನಿಗೆ ಅವಕಾಶಕೊಡ”ಬಾರದೆಂದು ಪೌಲನೂ ಎಚ್ಚರಿಸಿದನು. (ಎಫೆಸ 4:27) “ಈ ಪ್ರಪಂಚದ ದೇವ”ನೋಪಾದಿ ಸೈತಾನನು, ಯಶಸ್ವಿಕರವಾಗಿ “ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿ”ದ್ದಾನೆ. (2 ಕೊರಿಂಥ 4:4) ಅವನು ನಮ್ಮನ್ನು ನಿಯಂತ್ರಿಸುವಂತೆ ನಾವೆಂದಿಗೂ ಬಿಡದಿರೋಣ!
ಸಹಾಯವು ಲಭ್ಯವಿದೆ
ಒಂದು ಮಗುವು ಸಮಸ್ಯೆಗಳನ್ನು ಎದುರಿಸುವಾಗ, ತನ್ನ ಪ್ರೀತಿಪರ ತಂದೆಯ ಬಳಿಗೆ ಹೋಗಿ, ಮಾರ್ಗದರ್ಶನವನ್ನೂ ಸಾಂತ್ವನವನ್ನೂ ಪಡೆದುಕೊಳ್ಳಸಾಧ್ಯವಿದೆ. ತದ್ರೀತಿಯಲ್ಲಿ ನಾವು ನಮ್ಮ ಸಮಸ್ಯೆಗಳೊಂದಿಗೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸಮೀಪಿಸಬಹುದು. ವಾಸ್ತವವಾಗಿ, ನಾವು ನಮ್ಮ ಹೊರೆಗಳು ಹಾಗೂ ಚಿಂತೆಗಳನ್ನು ಆತನ ಮೇಲೆ ಹಾಕುವಂತೆ ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ. (ಕೀರ್ತನೆ 55:22) ಮಗುವಿಗೆ ತನ್ನ ತಂದೆಯಿಂದ ಆಶ್ವಾಸನೆ ಸಿಕ್ಕ ಬಳಿಕ ಅವನು ಹೇಗೆ ತನ್ನ ಸಮಸ್ಯೆಗಳ ಕುರಿತು ಚಿಂತಿಸದೆ ಇರುತ್ತಾನೊ, ಹಾಗೆಯೇ ನಾವು ಯೆಹೋವನ ಮೇಲೆ ನಮ್ಮ ಹೊರೆಗಳನ್ನು ಹಾಕುವುದಲ್ಲದೆ ಅವುಗಳ ಕುರಿತು ಅನುಚಿತವಾಗಿ ಚಿಂತಿಸಲೂಬಾರದು.—ಯಾಕೋಬ 1:6.
ನಾವು ಯೆಹೋವನ ಮೇಲೆ ನಮ್ಮ ಚಿಂತೆಗಳನ್ನು ಹೇಗೆ ಹಾಕಬಹುದು? ಫಿಲಿಪ್ಪಿ 4:6, 7 ಉತ್ತರಿಸುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” ಹೌದು, ನಮ್ಮ ಎಡೆಬಿಡದ ಪ್ರಾರ್ಥನೆಗಳು ಹಾಗೂ ಬಿನ್ನಹಗಳಿಗೆ ಪ್ರತಿಕ್ರಿಯಿಸುತ್ತಾ, ಯೆಹೋವನು ನಮಗೆ ಆಂತರಿಕ ನೆಮ್ಮದಿಯನ್ನು ಕೊಡಬಲ್ಲನು. ಇದರಿಂದ ನಮ್ಮ ಮನಸ್ಸುಗಳು ಅನಾವಶ್ಯಕ ಚಿಂತೆಗಳ ಕಾರಣ ಕ್ಷೋಭೆಗೊಳ್ಳುವುದರಿಂದ ರಕ್ಷಿಸಲ್ಪಡಸಾಧ್ಯವಿದೆ.—ಯೆರೆಮೀಯ 17:7, 8; ಮತ್ತಾಯ 6:25-34.
ಆದರೆ ನಮ್ಮ ಪ್ರಾರ್ಥನೆಗಳಿಗೆ ಅನುಗುಣವಾಗಿ ಕ್ರಿಯೆಗೈಯಲು, ನಾವು ನಮ್ಮನ್ನು ಶಾರೀರಿಕವಾಗಿ ಇಲ್ಲವೆ ಮಾನಸಿಕವಾಗಿ ಪ್ರತ್ಯೇಕಿಸಿಕೊಳ್ಳಬಾರದು. (ಜ್ಞಾನೋಕ್ತಿ 18:1) ಬದಲಿಗೆ ನಮ್ಮ ಸಮಸ್ಯೆಗೆ ಸಂಬಂಧಿಸುವ ಬೈಬಲ್ ತತ್ವಗಳು ಹಾಗೂ ನಿರ್ದೇಶನಗಳನ್ನು ಪರಿಗಣಿಸುವುದು ಒಳ್ಳೆಯದು. ಹೀಗೆ, ನಾವು ನಮ್ಮ ಸ್ವಂತ ಬುದ್ಧಿಯ ಮೇಲೆ ಆತುಕೊಳ್ಳಲಾರೆವು. (ಜ್ಞಾನೋಕ್ತಿ 3:5, 6) ನಿರ್ಣಯಗಳನ್ನು ಮಾಡುವ ಮತ್ತು ಸಮಸ್ಯೆಗಳನ್ನು ನಿಭಾಯಿಸುವ ವಿಷಯದಲ್ಲಿ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುವಂತೆ, ಚಿಕ್ಕವರೂ ದೊಡ್ಡವರೂ ಬೈಬಲಿಗೆ ಹಾಗೂ ವಾಚ್ ಟವರ್ ಪ್ರಕಾಶನಗಳಿಗೆ ಮೊರೆಹೋಗಬಹುದು. ಅಷ್ಟುಮಾತ್ರವಲ್ಲದೆ ಕ್ರೈಸ್ತ ಸಭೆಯಲ್ಲಿ, ನಮ್ಮೊಂದಿಗೆ ಮಾತಾಡಲು ಸದಾ ಸಿದ್ಧರಾಗಿರುವ, ಬುದ್ಧಿವಂತ ಹಾಗೂ ಅನುಭವಸ್ಥ ಹಿರಿಯರು ಮತ್ತು ಇತರ ಪ್ರೌಢ ಕ್ರೈಸ್ತರೂ ಇದ್ದಾರೆ. (ಜ್ಞಾನೋಕ್ತಿ 11:14; 15:22) ನಮ್ಮ ಸಮಸ್ಯೆಯಲ್ಲಿ ಭಾವನಾತ್ಮಕವಾಗಿ ಭಾಗಿಯಾಗಿರದ ಮತ್ತು ಆ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ಪಡೆದಿರುವ ವ್ಯಕ್ತಿಗಳು, ನಾವು ನಮ್ಮ ಸಮಸ್ಯೆಗಳನ್ನು ಭಿನ್ನವಾಗಿ ವೀಕ್ಷಿಸುವಂತೆ ಸಹಾಯ ಮಾಡಬಲ್ಲರು. ಅವರು ನಮಗಾಗಿ ನಿರ್ಣಯಗಳನ್ನು ಮಾಡದಿದ್ದರೂ, ಉತ್ತೇಜನ ಹಾಗೂ ಬೆಂಬಲವನ್ನು ಹೇರಳವಾಗಿ ನೀಡಬಲ್ಲರು.
“ದೇವರನ್ನು ನಿರೀಕ್ಷಿಸು”
ನಾವು ಪ್ರತಿದಿನ ಎದುರಿಸುವ ವಾಸ್ತವಿಕ ಸಮಸ್ಯೆಗಳ ನಿರ್ವಹಣೆಯೇ ಸಾಕಷ್ಟು ಒತ್ತಡವನ್ನು ಉಂಟುಮಾಡುತ್ತದೆ. ಇವುಗಳಿಗೆ ಸೇರಿಸಿ, ನಾವು ಕಾಲ್ಪನಿಕ ಸಮಸ್ಯೆಗಳ ಕುರಿತು ಚಿಂತಿಸುವುದಾದರೆ, ಇದು ಈಗಾಗಲೇ ಇರುವ ಒತ್ತಡಕ್ಕೆ ಇನ್ನೂ ಹೆಚ್ಚನ್ನು ಕೂಡಿಸುವುದೆಂಬುದನ್ನು ಯಾರೊಬ್ಬರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸಂಭವಿಸಬಹುದಾದ ಘಟನೆಯ ಕುರಿತು ನಾವು ಭಯಭೀತರೂ ಚಿಂತಾಭರಿತರೂ ಆಗುವುದಾದರೆ, ಪ್ರಾರ್ಥನೆಯಲ್ಲಿ ನಾವು ಯೆಹೋವನಿಗೆ ಮೊರೆಹೋಗೋಣ. ಮಾರ್ಗದರ್ಶನ, ವಿವೇಕ, ಮತ್ತು ಸ್ವಸ್ಥ ಮನಸ್ಸಿಗಾಗಿ ಆತನ ವಾಕ್ಯ ಹಾಗೂ ಸಂಸ್ಥೆಯ ಕಡೆಗೆ ತಿರುಗಿರಿ. ಆಗ ಪರಿಸ್ಥಿತಿಯು ಹೇಗೆಯೇ ಇರಲಿ, ಅದನ್ನು ನಿಭಾಯಿಸಲು ಸಹಾಯವು ಲಭ್ಯವಿದೆ ಎಂಬುದನ್ನು ನಾವು ಕಂಡುಕೊಳ್ಳುವೆವು.
ಚಿಂತಾಭರಿತನೂ ಕ್ಷೋಭೆಗೊಂಡವನೂ ಆಗಿದ್ದ ಕೀರ್ತನೆಗಾರನು, ಹೀಗೆ ಹಾಡಿದನು: “ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು: ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.” (ಕೀರ್ತನೆ 42:11) ಅವು ನಮ್ಮ ಭಾವನೆಗಳೂ ಆಗಿರಲಿ.
ಹೌದು, ಯಾವುದನ್ನು ನ್ಯಾಯವಾಗಿ ನಿರೀಕ್ಷಿಸಸಾಧ್ಯವಿದೆಯೊ ಅದಕ್ಕಾಗಿ ಮಾತ್ರ ಮುಂದಾಲೋಚಿಸಿ, ಅನಿರೀಕ್ಷಿತವಾದದ್ದನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಡಿರಿ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
[ಪುಟ 23 ರಲ್ಲಿರುವ ಚಿತ್ರ]
ನೀವು ದಾವೀದನಂತೆ ನಿಮ್ಮ ಹೊರೆಗಳನ್ನು ಮತ್ತು ಚಿಂತೆಗಳನ್ನು ಯೆಹೋವನ ಮೇಲೆ ಹಾಕುತ್ತೀರೊ?