ಸಹಾಯಕ್ಕಾಗಿ ಮೊರೆಯಿಡುವವರನ್ನು ಯಾರು ಉದ್ಧರಿಸಶಕ್ತನು?
‘ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು ಕಲಿಸಿಕೊಡು; ಯಾಕಂದರೆ ಅವನು ಮೊರೆಯಿಡುವವರನ್ನು ಉದ್ಧರಿಸುವನು.’—ಕೀರ್ತ. 72:1, 12.
1. ದಾವೀದನ ವಿಷಯದಲ್ಲಿ ದೇವರ ಕರುಣೆಯ ಕುರಿತು ನಾವೇನನ್ನು ಕಲಿಯುತ್ತೇವೆ?
ಎಂಥ ಮನಮುಟ್ಟುವ ಮಾತುಗಳಿವು! ಇವನ್ನು ಪುರಾತನ ಇಸ್ರಾಯೇಲಿನ ರಾಜ ದಾವೀದನು ಬರೆದನೆಂಬುದು ಸುವ್ಯಕ್ತ.a ಈ ಮಾತುಗಳನ್ನು ಬರೆಯುವ ಅನೇಕ ವರ್ಷಗಳ ಮುಂಚೆ ಅವನು ಬತ್ಷೆಬೆಯೊಂದಿಗೆ ಗೈದ ವ್ಯಭಿಚಾರದಿಂದಾಗಿ ತೀವ್ರ ಪಶ್ಚಾತ್ತಾಪದಿಂದ ಮನನೊಂದವನಾಗಿದ್ದನು. ಆ ಸಮಯದಲ್ಲಿ ದಾವೀದನು, “ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. . . . ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. . . . ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ” ಎಂದು ದೇವರನ್ನು ಬೇಡಿಕೊಂಡನು. (ಕೀರ್ತ. 51:1-5) ಬಾಧ್ಯತೆಯಾಗಿ ಪಡೆದ ನಮ್ಮ ಪಾಪಪೂರ್ಣ ಸ್ಥಿತಿಯನ್ನು ಯೆಹೋವನು ಕರುಣೆಯಿಂದ ಪರಿಗಣನೆಗೆ ತಂದುಕೊಳ್ಳುತ್ತಾನೆ ಎಂಬುದು ಇದರಿಂದ ವ್ಯಕ್ತ.
2. ಎಪ್ಪತ್ತೆರಡನೇ ಕೀರ್ತನೆಯು ನಮಗೇನು ತಿಳಿಸುತ್ತದೆ?
2 ಯೆಹೋವನು ನಮ್ಮ ಶೋಚನೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾನೆ. ಮುಂತಿಳಿಸಲ್ಪಟ್ಟಂತೆ ದೇವರ ಅಭಿಷಿಕ್ತ ರಾಜನಾದರೋ “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.” (ಕೀರ್ತ. 72:12, 13) ಅವನು ಹೇಗೆ ಉಪಶಮನವನ್ನು ನೀಡುವನು? 72ನೇ ಕೀರ್ತನೆ ಅದನ್ನು ತಿಳಿಸುತ್ತದೆ. ಈ ಕೀರ್ತನೆಯು ದಾವೀದನ ಮಗನಾದ ಸೊಲೊಮೋನನ ರಾಜತ್ವದ ಕುರಿತಾಗಿ ರಚಿಸಲ್ಪಟ್ಟಿರುತ್ತದೆ. ಹಾಗಿದ್ದರೂ ದೇವರ ಮಗನಾದ ಯೇಸು ಕ್ರಿಸ್ತನ ಆಳ್ವಿಕೆಯು ಹೇಗೆ ಮಾನವಕುಲವನ್ನು ಸಂಕಟಗಳಿಂದ ಬಿಡುಗಡೆಗೊಳಿಸುವುದು ಎಂಬುದರ ಮುನ್ನೋಟವನ್ನು ಅದು ನೀಡುತ್ತದೆ.
ಕ್ರಿಸ್ತನ ಆಳ್ವಿಕೆಯ ಮುನ್ಚಿತ್ರಣ
3. ಸೊಲೊಮೋನನು ಏನನ್ನು ಕೇಳಿಕೊಂಡನು? ದೇವರು ಅವನಿಗೆ ಏನನ್ನು ದಯಪಾಲಿಸಿದನು?
3 ಸೊಲೊಮೋನನನ್ನು ರಾಜನಾಗಿ ಮಾಡಬೇಕೆಂದು ದಾವೀದನು ಆಜ್ಞಾಪಿಸಿದನು. ಸಮಯಾನಂತರ ವೃದ್ಧ ದಾವೀದನು ಸೊಲೊಮೋನನನ್ನು ಕರೆದು ನಿರ್ದಿಷ್ಟ ನಿರ್ದೇಶನಗಳನ್ನು ಕೊಟ್ಟನು. ಅವುಗಳನ್ನು ಸೊಲೊಮೋನನು ನಂಬಿಗಸ್ತಿಕೆಯಿಂದ ಪಾಲಿಸಿದನು. (1 ಅರ. 1:32-35; 2:1-3) ಯೆಹೋವನು ತದನಂತರ ಒಮ್ಮೆ ಸೊಲೊಮೋನನ ಕನಸಿನಲ್ಲಿ ಬಂದು, “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಿದನು. ಆಗ ಅವನು ಒಂದೇ ಒಂದು ವಿನಂತಿಯನ್ನು ಮಾಡಿದನು. “[ನಿನ್ನ ಜನರನ್ನು] ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು ದಯಪಾಲಿಸು” ಎಂದು ಕೇಳಿಕೊಂಡನು. ಸೊಲೊಮೋನನು ದೀನತೆಯಿಂದ ಈ ವಿನಂತಿಯನ್ನು ಮಾಡಿದ್ದರಿಂದ ದೇವರು ಅವನು ಕೇಳಿದ್ದನ್ನೂ ಅದರೊಂದಿಗೆ ಹೆಚ್ಚಿನದ್ದನ್ನೂ ದಯಪಾಲಿಸಿದನು.—1 ಅರ. 3:5, 9-13.
4. ಸೊಲೊಮೋನನ ಸಮಕಾಲೀನಳಾದ ರಾಣಿಯು ಅವನ ಆಳ್ವಿಕೆಯನ್ನು ಹೇಗೆ ವರ್ಣಿಸಿದಳು?
4 ಯೆಹೋವನ ಆಶೀರ್ವಾದದಿಂದಾಗಿ ಸೊಲೊಮೋನನ ಆಳ್ವಿಕೆಯ ಕಾಲವು ಅತ್ಯಂತ ಗಮನಾರ್ಹ ಸಮಯಾವಧಿಯಾಗಿತ್ತು. ಭೂಮಿಯ ಮೇಲಿನ ಯಾವುದೇ ಸರಕಾರದ ಕೆಳಗೆ ಎಂದೂ ಇದ್ದಿರದ ಶಾಂತಿ ಮತ್ತು ಸಮೃದ್ಧಿ ಆ ಸಮಯದಲ್ಲಿತ್ತು. (1 ಅರ. 4:25) ಸೊಲೊಮೋನನ ಆಡಳಿತ ಹೇಗಿತ್ತು ಎಂದು ನೋಡಲು ಬಂದವರಲ್ಲಿ ಶೆಬದ ರಾಣಿ ಒಬ್ಬಳು. ಆಕೆಯು ತನ್ನ ದೊಡ್ಡ ಪರಿವಾರದೊಡನೆ ಬಂದಳು. ಅವಳು ಸೊಲೋಮೋನನಿಗೆ ಹೀಗಂದಳು: “ನಾನು ನನ್ನ ದೇಶದಲ್ಲಿ . . . ಕೇಳಿದ್ದು ಸತ್ಯವಾಗಿದೆ. . . . ಈಗ ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ; ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.” (1 ಅರ. 10:1, 6, 7) ಆದರೆ ಇದಕ್ಕಿಂತಲೂ ಅತಿ ಹೆಚ್ಚಾದ ವಿವೇಕವನ್ನು ಯೇಸು ತೋರಿಸಿದನು. ಆದುದರಿಂದ ಸೂಕ್ತವಾಗಿಯೇ ಅವನು ತನ್ನ ಕುರಿತಾಗಿ “ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ” ಎಂದು ಹೇಳಿದನು.—ಮತ್ತಾ. 12:42.
ಮಹಾ ಸೊಲೊಮೋನನ ಆಳ್ವಿಕೆಯ ಕೆಳಗೆ ಉಪಶಮನ
5. ಕೀರ್ತನೆ 72 ಏನನ್ನು ತೋರಿಸಿಕೊಡುತ್ತದೆ? ಇದು ಯಾವುದರ ಮುನ್ಚಿತ್ರಣವನ್ನು ಕೊಡುತ್ತದೆ?
5 ಮಹಾ ಸೊಲೊಮೋನನಾದ ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ ಸಿಗುವ ಆಶೀರ್ವಾದಗಳನ್ನು ತಿಳಿಯಲಿಕ್ಕಾಗಿ ನಾವೀಗ 72ನೇ ಕೀರ್ತನೆಯಲ್ಲಿರುವ ವೈಶಿಷ್ಟ್ಯಗಳನ್ನು ಪರಿಗಣಿಸೋಣ. (ಕೀರ್ತನೆ 72:1-4 ಓದಿ.) ಈ ಕೀರ್ತನೆಯು, “ಸಮಾಧಾನದ ಪ್ರಭು” ಆಗಿರುವ ತನ್ನ ಮಗನಾದ ಯೇಸು ಕ್ರಿಸ್ತನ ‘ಆಡಳಿತದ’ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. (ಯೆಶಾ. 9:6, 7) ಯೆಹೋವನ ಮಾರ್ಗದರ್ಶನದ ಕೆಳಗೆ ಈ ಮಹಾ ಸೊಲೊಮೋನನು ‘ಕುಗ್ಗಿಹೋದವರಿಗೆ ತೀರ್ಪುಕೊಡುವನು ಹಾಗೂ ದೀನರ ಮಕ್ಕಳನ್ನು ಉದ್ಧರಿಸುವನು.’ ಅವನು ಶಾಂತಿ ಮತ್ತು ನೀತಿಯಿಂದ ಆಳ್ವಿಕೆ ನಡೆಸುವನು. ಭೂಮಿಯಲ್ಲಿದ್ದಾಗ ಯೇಸು, ತನ್ನ ಸಾವಿರ ವರ್ಷಗಳ ಆಳ್ವಿಕೆಯು ಏನನ್ನು ಪೂರೈಸುವುದು ಎಂಬುದರ ಮುನ್ಚಿತ್ರಣ ಕೊಟ್ಟನು.—ಪ್ರಕ. 20:4.
6. ದೇವರ ರಾಜ್ಯದಲ್ಲಿ ಸಿಗುವ ಆಶೀರ್ವಾದಗಳ ಯಾವ ನಸುನೋಟವನ್ನು ಯೇಸು ನೀಡಿದನು?
6 ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ಮಾಡಿದ ಕೆಲವು ಚಟುವಟಿಕೆಗಳನ್ನು ಪರಿಗಣಿಸಿರಿ. ಇವು 72ನೇ ಕೀರ್ತನೆಯ ನೆರವೇರಿಕೆಯಲ್ಲಿ ಆತನು ಮಾನವಕುಲಕ್ಕಾಗಿ ಏನನ್ನು ಮಾಡುವನು ಎಂಬುದರ ನಸುನೋಟವನ್ನು ನಮಗೆ ಕೊಡುತ್ತವೆ. ಕಷ್ಟವನ್ನು ಅನುಭವಿಸುತ್ತಿದ್ದವರ ಕಡೆಗೆ ಆತನು ತೋರಿಸಿದ ಮಹಾ ಕನಿಕರವು ನಮ್ಮನ್ನು ಖಂಡಿತವಾಗಿಯೂ ಪ್ರಭಾವಿಸುತ್ತದೆ. (ಮತ್ತಾ. 9:35, 36; 15:29-31) ಉದಾಹರಣೆಗೆ, ಒಬ್ಬ ಕುಷ್ಠರೋಗಿಯು ಯೇಸುವಿನ ಹತ್ತಿರ ಬಂದು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಅದಕ್ಕೆ ಯೇಸು, “ನನಗೆ ಮನಸ್ಸುಂಟು. ಶುದ್ಧನಾಗು” ಎಂದುತ್ತರಿಸಿದನು ಮತ್ತು ಆ ಮನುಷ್ಯನು ಗುಣಹೊಂದಿದನು. (ಮಾರ್ಕ 1:40-42) ಇನ್ನೊಮ್ಮೆ ಯೇಸು, ವಿಧವೆಯೊಬ್ಬಳನ್ನು ಸಂಧಿಸಿದನು; ಆಕೆ ತನ್ನ ಒಬ್ಬನೇ ಮಗನನ್ನು ಮರಣದಲ್ಲಿ ಕಳಕೊಂಡಿದ್ದಳು. ಯೇಸು “ಕನಿಕರಪಟ್ಟು” ಸತ್ತುಹೋಗಿದ್ದ ಆ ಯೌವನಸ್ಥನಿಗೆ “ಏಳು” ಎಂದು ಹೇಳಿದನು, ಆಗ ಅವನು ಎದ್ದನು. ಹೀಗೆ ಅವನು ಪುನಃ ಜೀವವನ್ನು ಪಡೆದನು!—ಲೂಕ 7:11-15.
7, 8. ಯೇಸುವಿನ ವಾಸಿಮಾಡುವ ಶಕ್ತಿಯ ಕೆಲವು ನಿದರ್ಶನಗಳು ಯಾವುವು?
7 ಅದ್ಭುತಗಳನ್ನು ಮಾಡಲು ಯೆಹೋವನು ಯೇಸುವಿಗೆ ಶಕ್ತಿ ಕೊಟ್ಟನು. ಇದು, ‘ಹನ್ನೆರಡು ವರ್ಷಗಳಿಂದ ರಕ್ತಸ್ರಾವರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಗೆ’ ಆದ ಸಂಗತಿಯಿಂದ ರುಜುವಾಯಿತು. ಆಕೆಯು “ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಕಷ್ಟವನ್ನು ಅನುಭವಿಸಿ ತನ್ನಲ್ಲಿದ್ದದ್ದೆಲ್ಲವನ್ನು ಖರ್ಚುಮಾಡಿದರೂ” ಅವಳ ಸ್ಥಿತಿ ಮಾತ್ರ ಇನ್ನೂ ಹದಗೆಟ್ಟಿತ್ತು. ಆದುದರಿಂದ ಆ ಸ್ತ್ರೀಯು ಜನರ ಗುಂಪಿನಲ್ಲಿ ಬಂದು ಯೇಸುವನ್ನು ಮುಟ್ಟಿದಳು. ಹೀಗೆ ಮಾಡುವ ಮೂಲಕ ‘ರಕ್ತಸ್ರಾವವಿರುವ’ ಸ್ತ್ರೀಯ ಕುರಿತಾದ ಧರ್ಮಶಾಸ್ತ್ರದ ನಿಯಮವನ್ನು ಅವಳು ಉಲ್ಲಂಘಿಸಿದಳು. (ಯಾಜ. 15:19, 25) ಈಗ ಯೇಸುವಿಗೆ ತನ್ನಿಂದ ಶಕ್ತಿ ಹೊರಟುಹೋದದ್ದು ತಿಳಿದು ತನ್ನನ್ನು ಮುಟ್ಟಿದವರು ಯಾರೆಂದು ಕೇಳಿದನು. ಆ ಸ್ತ್ರೀಯು “ಭಯದಿಂದ ನಡುಗುತ್ತಾ ಬಂದು ಅವನ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲ ಹೇಳಿದಳು.” ಆಕೆಯನ್ನು ಯೆಹೋವನೇ ಗುಣಪಡಿಸಿದ್ದಾನೆಂದು ತಿಳಿದು ಯೇಸು ಅವಳನ್ನು ದಯೆಯಿಂದ ಉಪಚರಿಸಿ “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದು ಹೇಳಿದನು.—ಮಾರ್ಕ 5:25-27, 30, 33, 34.
8 ಯೇಸುವಿಗೆ ದೇವರಿಂದ ಕೊಡಲ್ಪಟ್ಟ ವಾಸಿಮಾಡುವ ಶಕ್ತಿಯಿಂದಾಗಿ ಅನೇಕ ರೋಗಿಗಳು ಗುಣಹೊಂದಿದರು ಮಾತ್ರವಲ್ಲ ಇದು ಇತರರ ಮೇಲೆ ಗಾಢವಾದ ಪ್ರಭಾವ ಬೀರಿತು. ಉದಾಹರಣೆಗೆ, ತನ್ನ ಪ್ರಸಿದ್ಧ ಪರ್ವತ ಪ್ರಸಂಗದ ಮೊದಲು ಯೇಸು ಜನರನ್ನು ಗುಣಪಡಿಸಿದ್ದನ್ನು ನೋಡಿ ಅನೇಕರು ಬಹಳ ಪ್ರಭಾವಿತರಾದರು. (ಲೂಕ 6:17-19) ಯೇಸುವೇ ಮೆಸ್ಸೀಯನು ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ನಾನಿಕನಾದ ಯೋಹಾನನು ಇಬ್ಬರು ಶಿಷ್ಯರನ್ನು ಕಳುಹಿಸಿದಾಗ ಯೇಸು ‘ರೋಗಗಳಿಂದಲೂ ಗುರುತರವಾದ ವ್ಯಾಧಿಗಳಿಂದಲೂ ದೆವ್ವಗಳಿಂದಲೂ ಪೀಡಿತರಾದ ಅನೇಕರನ್ನು ಗುಣಪಡಿಸುವುದನ್ನು ಮತ್ತು ಅನೇಕ ಮಂದಿ ಕುರುಡರಿಗೆ ದೃಷ್ಟಿಯನ್ನು ಅನುಗ್ರಹಿಸುವುದನ್ನು’ ಅವರು ಕಂಡರು. ತದನಂತರ ಯೇಸು ಆ ಇಬ್ಬರಿಗೆ “ನೀವು ನೋಡಿದ್ದನ್ನೂ ಕೇಳಿದ್ದನ್ನೂ ಹೋಗಿ ಯೋಹಾನನಿಗೆ ವರದಿಮಾಡಿರಿ: ಕುರುಡರು ದೃಷ್ಟಿಯನ್ನು ಪಡೆದುಕೊಳ್ಳುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸುತ್ತಿದೆ, ಸತ್ತವರು ಎಬ್ಬಿಸಲ್ಪಡುತ್ತಿದ್ದಾರೆ ಮತ್ತು ಬಡವರಿಗೆ ಸುವಾರ್ತೆಯು ತಿಳಿಸಲ್ಪಡುತ್ತಿದೆ” ಎಂದು ಹೇಳಿದನು. (ಲೂಕ 7:19-22) ಈ ಸಂದೇಶವು ಯೋಹಾನನನ್ನು ಎಷ್ಟು ಉತ್ತೇಜಿಸಿರಬೇಕು!
9. ಯೇಸು ಮಾಡಿದ ಅದ್ಭುತಗಳು ಯಾವುದರ ಮುನ್ನೋಟವಾಗಿದ್ದವು?
9 ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಜನರನ್ನು ಕಷ್ಟಸಂಕಟದಿಂದ ಉಪಶಮನಗೊಳಿಸಿದ್ದು ತಾತ್ಕಾಲಿಕವಾಗಿತ್ತು ನಿಜ. ಏಕೆಂದರೆ ಆತನು ಗುಣಪಡಿಸಿದ ಹಾಗೂ ಪುನರುತ್ಥಾನಗೊಳಿಸಿದ ಜನರು ತದನಂತರ ಸತ್ತರು. ಆದರೂ ಭೂಮಿಯಲ್ಲಿ ಯೇಸು ಮಾಡಿದ ಅದ್ಭುತಗಳು ಮೆಸ್ಸೀಯನ ಆಳ್ವಿಕೆಯ ಕೆಳಗೆ ಮಾನವಕುಲವು ಆನಂದಿಸಲಿರುವ ಶಾಶ್ವತ ಉಪಶಮನದ ಮುನ್ನೋಟವಾಗಿದ್ದವು.
ಭೂವ್ಯಾಪಕ ಪರದೈಸ್ ನಮ್ಮ ಮುಂದಿದೆ!
10, 11. (ಎ) ದೇವರ ರಾಜ್ಯದ ಆಶೀರ್ವಾದಗಳು ಎಷ್ಟರ ವರೆಗೆ ಇರುವವು? ಯೇಸುವಿನ ಆಳ್ವಿಕೆಯು ಯಾವ ರೀತಿ ಇರುವುದು? (ಬಿ) ಯೇಸುವಿನೊಂದಿಗೆ ಪರದೈಸಿನಲ್ಲಿ ಯಾರಿರುವನು? ಅವನು ಹೇಗೆ ನಿರಂತರ ಜೀವಿಸಬಲ್ಲನು?
10 ಭೂಮಿಯ ಮೇಲೆ ಪರದೈಸಿನಲ್ಲಿ ಜೀವನವು ಹೇಗಿರುವುದೆಂದು ಊಹಿಸಲು ಪ್ರಯತ್ನಿಸಿ. (ಕೀರ್ತನೆ 72:5-9 ಓದಿ.) ಒಬ್ಬನೇ ಸತ್ಯ ದೇವರನ್ನು ಆರಾಧಿಸುವವರು ಸೂರ್ಯ ಮತ್ತು ಚಂದ್ರರಿರುವ ವರೆಗೂ ಅಂದರೆ ನಿರಂತರಕ್ಕೂ ಪರದೈಸಿನಲ್ಲಿ ಜೀವಿಸುತ್ತಾ ಆನಂದಿಸುವರು! ಅವರಿಗೆ ರಾಜನಾದ ಯೇಸು ಕ್ರಿಸ್ತನು “ಹುಲ್ಲುಕೊಯಿದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆಯೂ ಭೂಮಿಯನ್ನು ನೆನಸುವ ಹದಮಳೆಯಂತೆಯೂ” ಚೈತನ್ಯಕಾರಿಯಾಗಿರುವನು.
11 ಈ ಕೀರ್ತನೆಯು ನೆರವೇರುವುದನ್ನು ನೀವು ಕಲ್ಪಿಸಿಕೊಳ್ಳುವಾಗ ಭೂಮಿಯ ಮೇಲೆ ಪರದೈಸಿನಲ್ಲಿ ನಿರಂತರವಾಗಿ ಜೀವಿಸುವುದನ್ನು ಯೋಚಿಸಿ ನಿಮ್ಮ ಮನಸ್ಸು ಹಿರಿ ಹಿರಿ ಹಿಗ್ಗುವುದಿಲ್ಲವೇ? “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಯೇಸು ಶೂಲಕ್ಕೇರಿಸಲ್ಪಟ್ಟ ದುಷ್ಕರ್ಮಿಗೆ ಹೇಳಿದಾಗ ಅವನು ರೋಮಾಂಚಿತನಾದನು. (ಲೂಕ 23:43) ಅವನು ಯೇಸುವಿನ ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ಪುನಃ ಜೀವವನ್ನು ಪಡೆದುಕೊಳ್ಳುವನು. ಆಗ ಅವನು ಯೇಸುವಿನ ಆಳ್ವಿಕೆಗೆ ಅಧೀನನಾಗುವಲ್ಲಿ ಭೂಮಿಯ ಮೇಲೆ ನಿರಂತರವಾಗಿ ಪರಿಪೂರ್ಣ ಆರೋಗ್ಯ ಹಾಗೂ ಸಂತೋಷದಿಂದ ಬದುಕುವ ಅವಕಾಶವು ಅವನಿಗೆ ಸಿಗುವುದು.
12. ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಪುನರುತ್ಥಾನಗೊಂಡ ಅನೀತಿವಂತರಿಗೆ ಯಾವ ಅವಕಾಶ ನೀಡಲಾಗುವುದು?
12 ಮಹಾ ಸೊಲೊಮೋನನಾದ ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ನೀತಿವಂತನು ‘ವೃದ್ಧಿಯಾಗುವನು’ ಅಂದರೆ ಅವನು ಅಭ್ಯುದಯ ಹೊಂದುವನು ಅಥವಾ ಸಮೃದ್ಧಿಯಾಗುವನು. (ಕೀರ್ತ. 72:7) ಕ್ರಿಸ್ತನ ಪ್ರೀತಿ ಹಾಗೂ ಕೋಮಲ ಪರಾಮರಿಕೆಯು ಆಗ ಹೇರಳವಾಗಿರುವುದು; ಆತನು ಭೂಮಿಯಲ್ಲಿದ್ದಾಗ ಹೇಗಿದ್ದವೋ ಹಾಗೆಯೇ. ದೇವರ ವಾಗ್ದತ್ತ ಹೊಸ ಲೋಕದಲ್ಲಿ ಪುನರುತ್ಥಾನಗೊಳ್ಳುವ ‘ಅನೀತಿವಂತರಿಗೆ’ ಸಹ ತಮ್ಮ ಜೀವಿತಗಳನ್ನು ಯೆಹೋವನ ಮಟ್ಟಗಳಿಗೆ ಸರಿಹೊಂದಿಸಿಕೊಳ್ಳಲು ಮತ್ತು ಜೀವಿಸಲು ಪ್ರೀತಿಪರ ಅವಕಾಶ ಕೊಡಲಾಗುವುದು. (ಅ. ಕಾ. 24:15) ಆದರೆ ದೈವಿಕ ಮಟ್ಟಗಳಿಗೆ ಹೊಂದಿಕೆಯಲ್ಲಿ ನಡೆಯಲು ನಿರಾಕರಿಸುವವರಿಗೆ ಜೀವಿಸಲಿಕ್ಕಾಗಲಿ ಹೊಸ ಲೋಕದ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಗೆಡವಲಿಕ್ಕಾಗಲಿ ಅನುಮತಿ ಕೊಡಲಾಗುವುದಿಲ್ಲ.
13. ದೇವರ ರಾಜ್ಯದ ಆಳ್ವಿಕೆಯು ಎಷ್ಟು ವ್ಯಾಪಕವಾಗಿರುವುದು? ಇದರ ಶಾಂತಿಯು ಎಂದೂ ಭಂಗವಾಗದು ಏಕೆ?
13 ಮಹಾ ಸೊಲೊಮೋನನ ಆಳ್ವಿಕೆಯ ಭೂವ್ಯಾಪಕ ವಿಸ್ತರಣೆಯನ್ನು ಈ ಮಾತುಗಳು ಸೂಚಿಸುತ್ತವೆ: “ಅವನು ಸಮುದ್ರದಿಂದ ಸಮುದ್ರದ ವರೆಗೂ [ಯೂಫ್ರೇಟೀಸ್] ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ. ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.” (ಕೀರ್ತ. 72:8, 9) ಹೌದು, ಯೇಸು ಕ್ರಿಸ್ತನು ಇಡೀ ಭೂಮಿಯನ್ನು ಆಳುವನು. (ಜೆಕ. 9:9, 10) ಯಾರು ಆತನ ಆಳ್ವಿಕೆಯನ್ನು ಹಾಗೂ ಅದರಿಂದ ಸಿಗುವ ಆಶೀರ್ವಾದಗಳನ್ನು ಗಣ್ಯಮಾಡುತ್ತಾರೋ ಅವರು ಸಿದ್ಧಮನಸ್ಸಿನ ಅಧೀನತೆ ತೋರಿಸುತ್ತಾ ‘ಅಡ್ಡಬೀಳುವರು.’ ಆದರೆ ಪಶ್ಚಾತ್ತಾಪಪಡದ ಪಾಪಿಗಳು ‘ನೂರು ವರುಷ’ ಬದುಕಿದರೂ ಕೂಡ ನಾಶಮಾಡಲ್ಪಡುವರು. (ಯೆಶಾ. 65:20) ಅವರು ಖಂಡಿತ ‘ಮಣ್ಣುಮುಕ್ಕುವರು.’
ನಮಗಾಗಿ ಅನುತಾಪದ ಚಿಂತನೆ
14, 15. ಯೇಸು ಮಾನವ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ‘ಮೊರೆಯಿಡುವ ಬಡವರನ್ನು ಉದ್ಧರಿಸುತ್ತಾನೆ’ ಎಂದು ನಮಗೆ ಹೇಗೆ ತಿಳಿದಿದೆ?
14 ಪಾಪಭರಿತ ಮಾನವಕುಲವು ಶೋಚನೀಯ ಸ್ಥಿತಿಯಲ್ಲಿದೆ ಹಾಗೂ ಅದಕ್ಕೆ ಸಹಾಯದ ತೀವ್ರ ಅಗತ್ಯವಿದೆ. ಆದರೆ ನಮಗೆ ನಿರೀಕ್ಷೆಯಿದೆ. (ಕೀರ್ತನೆ 72:12-14 ಓದಿ.) ಮಹಾ ಸೊಲೊಮೋನನಾದ ಯೇಸುವಿಗೆ ನಮ್ಮ ಕುರಿತು ಅನುತಾಪ ಅಥವಾ ಅನುಕಂಪವಿದೆ ಏಕೆಂದರೆ ನಮ್ಮ ಅಪರಿಪೂರ್ಣ ಪರಿಸ್ಥಿತಿಯನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ. ಮಾತ್ರವಲ್ಲ, ಯೇಸು ನೀತಿಗಾಗಿ ಕಷ್ಟವನ್ನು ಅನುಭವಿಸಿದನು ಹಾಗೂ ಅವನು ಒಬ್ಬಂಟಿಗನಾಗಿಯೇ ಸಂಕಷ್ಟಗಳನ್ನು ಅನುಭವಿಸುವಂತೆ ದೇವರು ಬಿಟ್ಟನು. ಅಷ್ಟೇ ಏಕೆ, ಅವನು ಭಾವನಾತ್ಮಕವಾಗಿ ಎಷ್ಟು ಕಡುವೇದನೆಯನ್ನು ಅನುಭವಿಸಿದನೆಂದರೆ “ಅವನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ಹನಿಗಳಂತಿತ್ತು”! (ಲೂಕ 22:44) ನಂತರ ಯಾತನಾ ಕಂಬದ ಮೇಲೆ ಯೇಸು “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಕೂಗಿಕೊಂಡನು. (ಮತ್ತಾ. 27:45, 46) ಇಷ್ಟೆಲ್ಲವನ್ನು ಅನುಭವಿಸಿದರೂ ಹಾಗೂ ಅವನನ್ನು ಯೆಹೋವನಿಂದ ದೂರಮಾಡಲು ಸೈತಾನನು ತನ್ನಿಂದ ಸಾಧ್ಯವಿರುವುದೆಲ್ಲವನ್ನು ಮಾಡಿದರೂ ಯೇಸು ಯೆಹೋವ ದೇವರಿಗೆ ನಂಬಿಗಸ್ತನಾಗಿಯೇ ಉಳಿದನು.
15 ಯೇಸು ನಮ್ಮ ನೋವನ್ನು ನೋಡುತ್ತಾನೆ ಮತ್ತು ‘ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುತ್ತಾನೆ’ ಎಂದು ನಾವು ಬಲು ಖಾತ್ರಿಯಿಂದಿರಸಾಧ್ಯವಿದೆ. ತನ್ನ ತಂದೆಯಂತೆಯೇ ಯೇಸು ಕೂಡ ಪ್ರೀತಿಪರ ಕಾಳಜಿಯಿಂದ ‘ಬಡವರ ಮೊರೆಗೆ ಲಕ್ಷ್ಯಕೊಡುತ್ತಾನೆ’ ಮತ್ತು “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.” (ಕೀರ್ತ. 69:33; 147:3) ಆತನು ‘ನಮ್ಮಂತೆಯೇ ಎಲ್ಲ ವಿಷಯಗಳಲ್ಲಿ ಪರೀಕ್ಷಿತನಾದದ್ದರಿಂದ ನಮ್ಮ ಬಲಹೀನತೆಗಳ ಕಡೆಗೆ ಅನುತಾಪಪಡಬಲ್ಲನು.’ (ಇಬ್ರಿ. 4:15) ಈಗ ರಾಜ ಯೇಸು ಕ್ರಿಸ್ತನು ಸ್ವರ್ಗದಲ್ಲಿ ಆಳುತ್ತಿದ್ದಾನೆ ಮತ್ತು ಸಂಕಷ್ಟಗಳಿಂದ ಬಳಲುತ್ತಿರುವ ಮಾನವರಿಗೆ ಉಪಶಮನ ತರಲು ಕಾತರನಾಗಿ ಕಾಯುತ್ತಿದ್ದಾನೆ ಎಂಬುದನ್ನು ತಿಳಿಯುವುದು ಎಷ್ಟು ಸಾಂತ್ವನದಾಯಕ!
16. ಸೊಲೊಮೋನನು ತನ್ನ ಪ್ರಜೆಗಳ ಕುರಿತು ಅನುತಾಪಪಡಲು ಶಕ್ತನಾದದ್ದು ಹೇಗೆ?
16 ಸೊಲೊಮೋನನಲ್ಲಿ ವಿವೇಕ ಹಾಗೂ ಒಳನೋಟವಿದ್ದದರಿಂದ ಅವನು ಖಂಡಿತವಾಗಿಯೂ ‘ದೀನರ ಮೇಲೆ ಕರುಣೆಯುಳ್ಳವನಾಗಿದ್ದನು.’ ಅದೂ ಅಲ್ಲದೆ ಅವನ ಜೀವನದಲ್ಲೂ ದುಃಖಕರ ಹಾಗೂ ಆಘಾತಕರ ಘಟನೆಗಳು ನಡೆದಿದ್ದವು. ಅವನ ಸಹೋದರನಾದ ಅಮ್ನೋನನು ಅವನ ತಂಗಿಯಾದ ತಾಮಾರಳನ್ನು ಕೆಡಿಸಿದನು. ಅವನು ಮಾಡಿದ ಈ ಕೆಟ್ಟ ಕೃತ್ಯಕ್ಕಾಗಿ ಸೊಲೊಮೋನನ ಸಹೋದರ ಅಬ್ಷಾಲೋಮನು ಅಮ್ನೋನನನ್ನು ಕೊಂದನು. (2 ಸಮು. 13:1, 14, 28, 29) ನಂತರ ಅಬ್ಷಾಲೋಮನು ದಾವೀದನ ಸಿಂಹಾಸನವನ್ನು ಕಿತ್ತುಕೊಂಡನು. ಆದರೆ ಅವನ ಕ್ಷಿಪ್ರ ತಂತ್ರ ಫಲಿಸಲಿಲ್ಲ. ಏಕೆಂದರೆ ಯೋವಾಬನಿಂದ ಅವನು ಕೊಲ್ಲಲ್ಪಟ್ಟನು. (2 ಸಮು. 15:10, 14; 18:9, 14) ನಂತರ ಸೊಲೊಮೋನನ ಸಹೋದರ ಅದೋನೀಯನು ರಾಜತ್ವವನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. ಅವನ ತಂತ್ರ ಸಫಲಗೊಳ್ಳುತ್ತಿದ್ದಲ್ಲಿ ಖಂಡಿತವಾಗಿಯೂ ಸೊಲೊಮೋನನ ಕೊಲೆಯಾಗುತ್ತಿತ್ತು. (1 ಅರ. 1:5) ಸೊಲೊಮೋನನು ಮಾನವರ ಕಷ್ಟಗಳನ್ನು ಅರ್ಥಮಾಡಿಕೊಂಡನು ಎಂಬುದು ಯೆಹೋವನ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಅವನು ಮಾಡಿದ ಪ್ರಾರ್ಥನೆಯಿಂದ ತಿಳಿದುಬರುತ್ತದೆ. ತನ್ನ ಪ್ರಜೆಗಳ ಕುರಿತಾಗಿ ರಾಜನು ಹೀಗೆ ಪ್ರಾರ್ಥಿಸಿದನು: ‘ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳು ಪ್ರತಿಯೊಬ್ಬನಿಗೆ ತಿಳಿದಿವೆ. ನೀನು [ಯೆಹೋವನು] ಅವರಿಗೆ ಪಾಪಪರಿಹಾರವನ್ನು ಒದಗಿಸಿ ಪ್ರತಿಯೊಬ್ಬನಿಗೆ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು.’—2 ಪೂರ್ವ. 6:29, 30.
17, 18. ದೇವರ ಸೇವಕರಲ್ಲಿ ಕೆಲವರು ಎಂಥ ದುಃಖವನ್ನು ಸಹಿಸಿಕೊಳ್ಳಬೇಕಾಯಿತು? ಹಾಗೆ ಸಹಿಸಿಕೊಳ್ಳಲು ಯಾವುದು ಅವರಿಗೆ ಸಹಾಯಮಾಡಿದೆ?
17 ‘ನಾವು ಅನುಭವಿಸುತ್ತಿರುವ ದುಃಖಕ್ಕೆ’ ನಮ್ಮ ಜೀವನದಲ್ಲಿ ಹಿಂದೆ ನಡೆದ ಯಾವುದಾದರೂ ಘಟನೆ ಕಾರಣವಾಗಿರಬಹುದು. 30ರ ಪ್ರಾಯದಲ್ಲಿರುವ ಮೇರಿb ಎಂಬ ಯೆಹೋವನ ಸಾಕ್ಷಿಯೊಬ್ಬಳು ಬರೆಯುವುದು: “ನನಗೆ ಸಂತೋಷವಾಗಿರಲು ಬಹಳಷ್ಟು ಕಾರಣಗಳಿವೆ. ಆದರೆ ಈ ಹಿಂದೆ ಆದ ವಿಷಯಗಳು ನನ್ನಲ್ಲಿ ಆಗಾಗ ಅವಮಾನ ಹಾಗೂ ಜಿಗುಪ್ಸೆಯ ಭಾವನೆಯನ್ನುಂಟುಮಾಡುತ್ತವೆ. ನನಗೆ ಅತೀವ ದುಃಖವಾಗುತ್ತದೆ ಮತ್ತು ಎಲ್ಲವು ನಿನ್ನೆಯೇ ಸಂಭವಿಸಿತೋ ಎಂಬಂತೆ ಅಳುತ್ತೇನೆ. ಮನಸ್ಸಿನಲ್ಲಿ ಅಚ್ಚೊತ್ತಲ್ಪಟ್ಟಿರುವ ಆ ಕಹಿ ನೆನಪುಗಳು ನನ್ನಲ್ಲಿ ಅಯೋಗ್ಯಳು, ಅಪರಾಧಿ ಎಂಬ ಕಂಗೆಡಿಸುವ ಭಾವನೆಗಳನ್ನು ಇನ್ನೂ ಉಂಟುಮಾಡುತ್ತವೆ.”
18 ಇಂಥಹದ್ದೇ ಭಾವನೆಗಳನ್ನು ಅನೇಕ ದೇವಜನರು ಸಹ ಹೊಂದಿರಬಹುದು. ಅವುಗಳನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ಯಾವುದು ನೀಡಬಲ್ಲದು? “ನಿಜ ಸ್ನೇಹಿತರಿರುವುದು ಹಾಗೂ ಆಧ್ಯಾತ್ಮಿಕ ಕುಟುಂಬವಿರುವುದು ನನಗೆ ಈಗ ಸಂತೋಷವನ್ನು ಕೊಡುತ್ತದೆ. ಮಾತ್ರವಲ್ಲ ಯೆಹೋವನು ಭವಿಷ್ಯತ್ತಿಗಾಗಿ ವಾಗ್ದಾನಿಸಿರುವ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಹ ನಾನು ಪ್ರಯತ್ನಿಸುತ್ತೇನೆ ಮತ್ತು ಸಹಾಯಕ್ಕಾಗಿರುವ ನನ್ನ ಮೊರೆಯು ಆನಂದಘೋಷವಾಗುತ್ತದೆ ಎಂಬ ಭರವಸೆ ನನಗಿದೆ” ಎಂದು ಹೇಳುತ್ತಾಳೆ ಮೇರಿ. (ಕೀರ್ತ. 126:5) ದೇವರು ನಮಗಾಗಿ ಮಾಡಿರುವ ತನ್ನ ಮಗನ ಅಂದರೆ ನೇಮಿತ ರಾಜನ ಏರ್ಪಾಡಿನಲ್ಲಿ ನಾವು ನಿರೀಕ್ಷೆಯನ್ನಿಡಬೇಕು. ಆ ರಾಜನ ಕುರಿತು ಹೀಗೆ ಮುಂತಿಳಿಸಲಾಗಿತ್ತು: “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” (ಕೀರ್ತ. 72:13, 14) ಎಂಥ ಭರವಸೆ ಮೂಡಿಸುವ ಮಾತುಗಳಿವು!
ಸಮೃದ್ಧಿಭರಿತ ಹೊಸಲೋಕ ನಮ್ಮ ಮುಂದಿದೆ
19, 20. (ಎ) ಕೀರ್ತನೆ 72ರಲ್ಲಿ ಸೂಚಿಸಿರುವಂತೆ ರಾಜ್ಯದ ಆಳ್ವಿಕೆಯು ಯಾವ ಸಮಸ್ಯೆಯನ್ನು ಬಗೆಹರಿಸುವುದು? (ಬಿ) ಕ್ರಿಸ್ತನ ಆಳ್ವಿಕೆಗಾಗಿ ಮೊದಲಾಗಿ ಕೀರ್ತಿಯು ಯಾರಿಗೆ ಸಲ್ಲಬೇಕು? ಈ ರಾಜ್ಯವು ಪೂರೈಸುವ ವಿಷಯಗಳ ಕುರಿತು ನಿಮಗೆ ಹೇಗನಿಸುತ್ತದೆ?
19 ಮಹಾ ಸೊಲೊಮೋನನ ಆಳ್ವಿಕೆಯ ಕೆಳಗೆ ಮಾನವರು ಹೊಸ ಲೋಕದಲ್ಲಿ ಜೀವಿಸುವ ಕುರಿತು ಪುನಃ ಒಮ್ಮೆ ಊಹಿಸಲು ಪ್ರಯತ್ನಿಸಿ. ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಿರುವುದು’ ಎಂದು ನಮಗೆ ವಾಗ್ದಾನಿಸಲಾಗಿದೆ. (ಕೀರ್ತ. 72:16) ಸಾಮಾನ್ಯವಾಗಿ ಬೆಟ್ಟಗಳ ಮೇಲೆ ಬೆಳೆಯನ್ನು ಬೆಳೆಸುವುದಿಲ್ಲ. ಆದುದರಿಂದ ಈ ಮಾತುಗಳು ಭೂಮಿಯು ಎಷ್ಟು ಫಲಭರಿತವಾಗುವುದು ಎಂಬುದನ್ನು ಒತ್ತಿಹೇಳುತ್ತವೆ. ಅದರ ‘ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರುವುದು’ ಎನ್ನಲಾಗಿದೆ. ಲೆಬನೋನ್ ಸೊಲೊಮೋನನ ಸಮಯದಲ್ಲಿ ಸಮೃದ್ಧಿಯಾಗಿ ಫಲಫಲಿಸಿದ ಪ್ರದೇಶವಾಗಿತ್ತು! ತುಸು ಯೋಚಿಸಿ! ಇನ್ನೆಂದೂ ಆಹಾರ ಅಭಾವಗಳಿಲ್ಲ, ಯಾರಿಗೂ ಪೋಷಕಾಂಶಗಳ ಕೊರತೆಯೇ ಇಲ್ಲ, ಯಾರೂ ಹಸಿವೆಯಿಂದ ಬಳಲುವುದಿಲ್ಲ! ಎಲ್ಲರೂ ‘ಸಾರವತ್ತಾದ ಮೃಷ್ಟಾನ್ನದ ಔತಣವನ್ನು’ ಆನಂದಿಸುವರು.—ಯೆಶಾ. 25:6-8; 35:1, 2.
20 ಈ ಎಲ್ಲ ಆಶೀರ್ವಾದಗಳಿಗಾಗಿ ಕೀರ್ತಿ ಯಾರಿಗೆ ಸಲ್ಲುತ್ತದೆ? ಮೊದಲಾಗಿ ನಿತ್ಯನಾದ ಅರಸನೂ ವಿಶ್ವಾಧಿಪತಿಯೂ ಆಗಿರುವ ಯೆಹೋವ ದೇವರಿಗೇ. ಆ ಆಶೀರ್ವಾದಗಳು ನಮ್ಮದಾಗುವಾಗ ನಾವೆಲ್ಲರೂ ಈ ಸುಂದರ ಹಾಗೂ ಮನಸ್ಸನ್ನು ಮುದಗೊಳಿಸುವ ಹಾಡಿನ ಕೊನೆಯ ಭಾಗವನ್ನು ಆನಂದದಿಂದ ಸ್ವರಮೇಳಿಸಿ ಹಾಡುವೆವು: “ಆತನ [ರಾಜ ಯೇಸು ಕ್ರಿಸ್ತನ] ನಾಮವು ಸ್ಥಿರವಾಗಿರಲಿ; ಅವನ ಹೆಸರು ಸೂರ್ಯನಿರುವ ವರೆಗೆ ಇರಲಿ. ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ. ಮಹತ್ಕಾರ್ಯಗಳನ್ನು ನಡಿಸುವದರಲ್ಲಿ ಅದ್ವಿತೀಯನೂ ಇಸ್ರಾಯೇಲ್ಯರ ದೇವರೂ ಆದ ಯೆಹೋವ ದೇವರಿಗೆ ಸ್ತೋತ್ರವು. ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲವೂ ಪ್ರಣಾಮವಿರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.”—ಕೀರ್ತ. 72:17-19.
[ಪಾದಟಿಪ್ಪಣಿಗಳು]
a ಕನ್ನಡ ಬೈಬಲಿನಲ್ಲಿ ಕೀರ್ತನೆ 72ರ ಮೇಲ್ಬರಹವು ಅದನ್ನು “ಸೊಲೊಮೋನನ ಕೀರ್ತನೆ” ಎಂದು ಹೇಳುತ್ತದಾದರೂ ಅದು ನಿಜವಾಗಿ ದಾವೀದನು ರಚಿಸಿದ ಕೀರ್ತನೆಯೆಂದು ಕೊನೆಯ ವಚನದಲ್ಲಿ ಸೂಚಿಸಲಾಗಿದೆ.
b ಹೆಸರನ್ನು ಬದಲಾಯಿಸಲಾಗಿದೆ.
ನಿಮ್ಮ ಉತ್ತರವೇನು?
• 72ನೇ ಕೀರ್ತನೆಯು ಪ್ರವಾದನಾತ್ಮಕವಾಗಿ ಯಾವುದರ ಮುನ್ಚಿತ್ರಣವನ್ನು ಕೊಟ್ಟಿದೆ?
• ಮಹಾ ಸೊಲೊಮೋನನು ಯಾರು? ಆತನ ಆಳ್ವಿಕೆಯು ಎಷ್ಟು ವ್ಯಾಪಕವಾಗಿರುವುದು?
• 72ನೇ ಕೀರ್ತನೆಯಲ್ಲಿರುವ ಆಶೀರ್ವಾದಗಳಲ್ಲಿ ಯಾವುದು ವೈಯಕ್ತಿಕವಾಗಿ ನಿಮ್ಮ ಮನಸ್ಪರ್ಶಿಸುತ್ತದೆ?
[ಪುಟ 29ರಲ್ಲಿರುವ ಚಿತ್ರ]
ಸೊಲೊಮೋನನ ಆಳ್ವಿಕೆಯ ಸಮಯದಲ್ಲಿದ್ದ ಸಮೃದ್ಧಿಯು ಯಾವುದನ್ನು ಮನ್ಚಿತ್ರಿಸಿತು?
[ಪುಟ 32ರಲ್ಲಿರುವ ಚಿತ್ರ]
ಮಹಾ ಸೊಲೊಮೋನನ ಆಳ್ವಿಕೆಯಲ್ಲಿ ಪರದೈಸಿನ ಜೀವನವನ್ನು ಗಳಿಸಲು ಮಾಡುವ ಪ್ರಯತ್ನ ಸಾರ್ಥಕ