ಯೆಹೋವನೇ ನಮ್ಮ ವಾಸಸ್ಥಾನ
“[ಯೆಹೋವನೇ] ತಲತಲಾಂತರಗಳಿಂದಲೂ ನಮ್ಮ ವಾಸಸ್ಥಾನವು ನೀನೇ.”—ಕೀರ್ತ. 90:1.
ನಿಮ್ಮ ಉತ್ತರ . . .
ಪ್ರಾಚೀನಕಾಲದ ಸೇವಕರಿಗೆ ಯೆಹೋವನು ಹೇಗೆ “ವಾಸಸ್ಥಾನ” ಆಗಿದ್ದನು?
ಅಬ್ರಹಾಮ ನಮಗೆ ಯಾವ ಮಾದರಿ ಇಟ್ಟಿದ್ದಾನೆ?
ಯೆಹೋವನು ನಮ್ಮ “ವಾಸಸ್ಥಾನ” ಆಗಿದ್ದಾನೆಂದು ನಾವು ಹೇಗೆ ತೋರಿಸಬಲ್ಲೆವು?
1, 2. (1) ದೇವಜನರಿಗೆ ಈ ಲೋಕದಲ್ಲಿ ಜೀವಿಸುತ್ತಿರುವಾಗ ಹೇಗನಿಸಿದೆ? (2) ಅವರಿಗೆ ಯಾವ ಮನೆ ಇದೆ?
ಈ ದುಷ್ಟ ಲೋಕದಲ್ಲಿ ಜೀವಿಸುವುದು ನಿಮಗೆ ಹಾಯಾಗಿದೆಯಾ? ಹಾಯಾಗಿಲ್ಲವಾದರೆ ಅದು ನಿಮ್ಮ ಬಗ್ಗೆ ಒಳ್ಳೇದೇನನ್ನೋ ತೋರಿಸಿಕೊಡುತ್ತದೆ. ನಿಮ್ಮ ಅನಿಸಿಕೆ ಅನೇಕ ನಂಬಿಗಸ್ತರನ್ನು ಹೋಲುತ್ತೆ. ಯೆಹೋವನನ್ನು ಮನಸಾರೆ ಪ್ರೀತಿಸಿದ ಎಲ್ಲರಿಗೂ ಈ ಲೋಕದಲ್ಲಿ ತಾವು ತಾತ್ಕಾಲಿಕ ನಿವಾಸಿಗಳಂತೆ ಪರದೇಶೀಯರಂತೆ ವಾಸಿಸುತ್ತಿದ್ದೇವೆ ಎಂದನಿಸಿತು. ಉದಾಹರಣೆಗೆ, ಕಾನಾನ್ ದೇಶದಲ್ಲಿ ಡೇರೆಗಳಲ್ಲಿ ವಾಸಿಸುತ್ತಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದ ದೇವರ ನಂಬಿಗಸ್ತ ಆರಾಧಕರು, ತಾವು ‘ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಬಹಿರಂಗವಾಗಿ ಪ್ರಕಟಿಸಿದರು.’—ಇಬ್ರಿ. 11:13.
2 ಅದೇರೀತಿ ‘ಸ್ವರ್ಗದಲ್ಲಿ ಪೌರತ್ವವಿರುವ’ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ತಮ್ಮನ್ನು ಈ ಲೋಕದಲ್ಲಿ ‘ಪರದೇಶೀಯರಾಗಿ ತಾತ್ಕಾಲಿಕ ನಿವಾಸಿಗಳಾಗಿ’ ವೀಕ್ಷಿಸುತ್ತಾರೆ. (ಫಿಲಿ. 3:20; 1 ಪೇತ್ರ 2:11) ಕ್ರಿಸ್ತನ “ಬೇರೆ ಕುರಿಗಳು” ಸಹ ಯೇಸುವಿನಂತೆಯೇ “ಲೋಕದ ಭಾಗವಾಗಿಲ್ಲ.” (ಯೋಹಾ. 10:16; 17:16) ಹಾಗಂತ ದೇವಜನರಿಗೆ ಮನೆಯೇ ಇಲ್ಲ ಅಂತಾನಾ? ಹಾಗಲ್ಲ. ನಿಜವೇನೆಂದರೆ ವಿಶ್ವಾಸದ ಕಣ್ಣುಗಳಿಗೆ ಮಾತ್ರ ಗೋಚರವಾಗುವ ಅತ್ಯಂತ ಸುರಕ್ಷಿತವೂ ಭದ್ರವೂ ಪ್ರೀತಿಪರವೂ ಆಗಿರುವ ಮನೆ ನಮಗಿದೆ. ಯಾವುದದು? ಅದು ಯಾವುದೆಂದು ಮೋಶೆ ಹೇಳಿದ್ದಾನೆ: ‘ಯೆಹೋವನೇ, ತಲತಲಾಂತರಗಳಿಂದಲೂ ನಮ್ಮ ವಾಸಸ್ಥಾನವು ನೀನೇ.’a (ಕೀರ್ತ. 90:1) ಪ್ರಾಚೀನ ಕಾಲದ ನಿಷ್ಠಾವಂತ ಸೇವಕರಿಗೆ ಯೆಹೋವನು ಹೇಗೆ “ವಾಸಸ್ಥಾನ” ಆಗಿದ್ದನು? ಇಂದು ತನ್ನ ಹೆಸರನ್ನು ಧರಿಸಿರುವ ಜನರಿಗೆ ಹೇಗೆ ಯೆಹೋವನು “ವಾಸಸ್ಥಾನ” ಆಗಿದ್ದಾನೆ? ಭವಿಷ್ಯತ್ತಿನಲ್ಲೂ ಆತನು ತನ್ನ ಜನರಿಗೆ ಹೇಗೆ ಏಕಮಾತ್ರ ಸುಭದ್ರ “ವಾಸಸ್ಥಾನ” ಆಗಲಿದ್ದಾನೆ?
ಪ್ರಾಚೀನಕಾಲದ ಸೇವಕರಿಗೆ ಯೆಹೋವನೇ “ವಾಸಸ್ಥಾನ”
3. ಕೀರ್ತನೆ 90:1ರಲ್ಲಿ ಕೊಡಲಾಗಿರುವ ಶಬ್ದಚಿತ್ರವನ್ನು ವಿವರಿಸಿ.
3 ಬೈಬಲಿನಲ್ಲಿ ಅನೇಕ ವಿಷಯಗಳನ್ನು ಅರ್ಥಮಾಡಿಸಲು ಶಬ್ದಚಿತ್ರಗಳನ್ನು ಬಳಸಲಾಗಿದೆ. ಅದೇ ರೀತಿ ಕೀರ್ತನೆ 90:1ರಲ್ಲಿಯೂ ಇದೆ. ಇದರಲ್ಲಿ ಒಂದು ವಿಷಯ, ಚಿತ್ರಣ, ಹಾಗೂ ಹೋಲಿಕೆಯ ಅಂಶವಿದೆ. ಯೆಹೋವನೇ ಆ ವಿಷಯ. ಮತ್ತು ಅಲ್ಲಿ “ವಾಸಸ್ಥಾನ” ಅಥವಾ ಮನೆಯ ಚಿತ್ರಣ ಕೊಡಲಾಗಿದೆ. ಯೆಹೋವನಿಗೂ ‘ವಾಸಸ್ಥಾನಕ್ಕೂ’ ಅನೇಕ ಹೋಲಿಕೆಗಳಿವೆ. ಅದರಲ್ಲಿ ಒಂದು ಹೋಲಿಕೆಯ ಅಂಶ ಸಂರಕ್ಷಣೆ. ಯೆಹೋವನು ತನ್ನ ಜನರಿಗೆ ಸಂರಕ್ಷಣೆಯನ್ನು ಒದಗಿಸುತ್ತಾನೆ. ಏಕೆಂದರೆ ಪ್ರೀತಿಯ ಇನ್ನೊಂದು ಹೆಸರೇ ಯೆಹೋವನಾಗಿದ್ದಾನೆ. (1 ಯೋಹಾ. 4:8) ಅಷ್ಟೇ ಅಲ್ಲ ಶಾಂತಿದಾಯಕ ದೇವರಾಗಿರುವ ಆತನು ತನ್ನ ನಿಷ್ಠಾವಂತ ಸೇವಕರನ್ನು ‘ಯಾವ ಅಪಾಯವೂ ಇಲ್ಲದೆ ಸುರಕ್ಷಿತರಾಗಿರುವಂತೆ ಕಾಪಾಡುತ್ತಾನೆ.’ (ಕೀರ್ತ. 4:8) ಪೂರ್ವಜರೊಂದಿಗೆ ಆತನು ವ್ಯವಹರಿಸಿದ ರೀತಿಯಿಂದ ಇದು ತಿಳಿದುಬರುತ್ತದೆ. ಮೊದಲನೇದಾಗಿ ಅಬ್ರಹಾಮನ ಕುರಿತು ನೋಡೋಣ.
4, 5. ಯೆಹೋವನು ಅಬ್ರಹಾಮನಿಗೆ ಹೇಗೆ ‘ವಾಸಸ್ಥಾನವಾದನು’?
4 “ನೀನು ಸ್ವದೇಶವನ್ನೂ ಬಂಧುಬಳಗವನ್ನೂ . . . ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು” ಎಂದು ಯೆಹೋವನು ಅಬ್ರಹಾಮನಿಗೆ ಹೇಳಿದಾಗ ಅವನಿಗೆ ಹೇಗನಿಸಿರಬೇಕು ಎಂದು ನಾವು ಸರಿಯಾಗಿ ಊಹಿಸಸಾಧ್ಯವಿಲ್ಲ. ಒಂದುವೇಳೆ ಆತನಿಗೆ ಚಿಂತೆ ಕಾಡಿದ್ದರೆ ಯೆಹೋವನು ಆಡಿದ ಮುಂದಿನ ಮಾತುಗಳು ಅವನ ದುಗುಡವನ್ನು ಶಮನಗೊಳಿಸಿರಬೇಕು: “ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. . . . ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು.”—ಆದಿ. 12:1-3.
5 ಈ ಮಾತುಗಳನ್ನು ಹೇಳುವ ಮೂಲಕ ಯೆಹೋವನು ಅಬ್ರಹಾಮನನ್ನು ಮತ್ತು ಅವನ ಸಂತತಿಯನ್ನು ಸಂರಕ್ಷಿಸುವ ಹೊಣೆ ಹೊತ್ತನು. (ಆದಿ. 26:1-6) ಕೊಟ್ಟ ಮಾತನ್ನು ಯೆಹೋವನು ಉಳಿಸಿಕೊಂಡನು. ಉದಾಹರಣೆಗೆ, ಈಜಿಪ್ಟಿನ ಫರೋಹನು ಮತ್ತು ಗೆರಾರಿನ ರಾಜ ಅಬೀಮೆಲೆಕನು ಅಬ್ರಹಾಮನ ಹೆಂಡತಿ ಸಾರಳಿಗೆ ಕೇಡು ಮಾಡದಂತೆ ಯೆಹೋವನು ಕಾಪಾಡಿದನು. ಅಬ್ರಹಾಮನ ಜೀವಕ್ಕೆ ಅಪಾಯ ಬರದಂತೆಯೂ ನೋಡಿಕೊಂಡನು. ಇಸಾಕ ಮತ್ತು ರೆಬೆಕ್ಕರನ್ನೂ ಇಂಥದ್ದೇ ಸನ್ನಿವೇಶದಿಂದ ಪಾರುಮಾಡಿದನು. (ಆದಿ. 12:14-20; 20:1-14; 26:6-11) “ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. [ಯೆಹೋವನು] ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ— ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು ಎಂದು ಹೇಳಿದನು.”—ಕೀರ್ತ. 105:14, 15.
6. (1) ಇಸಾಕನು ಯಾಕೋಬನಿಗೆ ಏನು ಮಾಡಲು ಹೇಳಿದನು? (2) ಯಾಕೋಬನಿಗೆ ಆಗ ಹೇಗೆ ಅನಿಸಿರಬೇಕು?
6 ಯೆಹೋವನು ಹೇಳಿದ ಪ್ರವಾದಿಗಳಲ್ಲಿ ಅಬ್ರಹಾಮನ ಮೊಮ್ಮಗ ಯಾಕೋಬನೂ ಸೇರಿದ್ದಾನೆ. ಯಾಕೋಬನು ತನಗಾಗಿ ಪತ್ನಿಯನ್ನು ಹುಡುಕುವ ಸಂದರ್ಭ ಬಂದಾಗ ಅವನ ತಂದೆ ಇಸಾಕನು ಯಾಕೋಬನಿಗೆ: “ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳಬೇಡ; ಪದ್ದನ್ಅರಾಮ್ ದೇಶದಲ್ಲಿರುವ ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೊರಟುಹೋಗಿ ಅಲ್ಲಿ ನಿನ್ನ ಸೋದರಮಾವನಾದ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೋ” ಎಂದು ಹೇಳಿದನು. (ಆದಿ. 28:1, 2) ಇಸಾಕ ಹೇಳಿದಂತೆಯೇ ಯಾಕೋಬ ನಡೆದನು. ಕಾನಾನಿನಲ್ಲಿ ಸುರಕ್ಷಿತನಾಗಿದ್ದ ಯಾಕೋಬನು ತನ್ನ ಮನೆಯವರೆನ್ನೆಲ್ಲ ಬಿಟ್ಟು ಖಾರಾನಿಗೆ ನೂರಾರು ಮೈಲುಗಳ ಪ್ರಯಾಣ ಮಾಡಿದನು. ಪ್ರಾಯಶಃ ಒಬ್ಬನೇ ಹೋಗಿರಬೇಕು. (ಆದಿ. 28:10) ಆದರೆ ಅವನು, ‘ನಾನು ಎಷ್ಟು ದಿನ ಅಲ್ಲಿರಬೇಕು? ನನ್ನ ಮಾವ ನನ್ನನ್ನು ಆದರದಿಂದ ಬರಮಾಡಿಕೊಳ್ಳುತ್ತಾನಾ? ಅವನ ಕುಟುಂಬದಿಂದ ನನಗೆ ದೇವಭಕ್ತಿಯಿರುವ ಪತ್ನಿ ಸಿಗುತ್ತಾಳಾ?’ ಎಂದೆಲ್ಲ ಯೋಚಿಸಿರಬೇಕು. ಒಂದುವೇಳೆ ಈ ಪ್ರಶ್ನೆಗಳು ಯಾಕೋಬನನ್ನು ಕಾಡಿದ್ದರೂ ಅವನು ಬೇರ್ಷೆಬದಿಂದ 100ಕಿ.ಮೀ. ದೂರದಲ್ಲಿರುವ ಲೂಜ್ ಊರಿಗೆ ಮುಟ್ಟಿದಾಗ ಅವನೆಲ್ಲ ಚಿಂತೆ ದೂರವಾಯಿತು. ಅಲ್ಲಿ ಅಂಥದ್ದೇನಾಯಿತು?
7. ಯೆಹೋವನು ಹೇಗೆ ಕನಸಿನ ಮೂಲಕ ಯಾಕೋಬನಿಗೆ ಭರವಸೆ ನೀಡಿದನು?
7 ಲೂಜ್ನಲ್ಲಿ ಯೆಹೋವನು ಯಾಕೋಬನಿಗೆ ಕನಸಿನಲ್ಲಿ ಕಾಣಿಸಿಕೊಂಡು ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಇದ್ದು ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನನ್ನು ಕಾಪಾಡಿ ತಿರಿಗಿ ಈ ದೇಶಕ್ಕೆ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವದಿಲ್ಲ.” (ಆದಿ. 28:15) ಈ ಕಾಳಜಿಭರಿತ ಮಾತುಗಳು ಯಾಕೋಬನ ಮನಸ್ಸಿಗೆ ಮುದನೀಡಿರಬೇಕಲ್ಲವೇ! ಈಗ ಯಾಕೋಬನು ಬೇಗ ಬೇಗನೆ ಹೆಜ್ಜೆ ಹಾಕುತ್ತಾ ಯೆಹೋವನು ತನ್ನ ಮಾತುಗಳನ್ನು ಹೇಗೆ ನೆರವೇರಿಸಲಿದ್ದಾನೆ ಎಂದು ತಿಳಿಯಲು ಹೆಚ್ಚು ಕಾತರನಾಗಿದ್ದಿರಬೇಕು! ಒಂದುವೇಳೆ ನೀವೂ ನಿಮ್ಮ ಮನೆಯವರಿಂದ ದೂರವಿದ್ದು ಸೇವೆ ಮಾಡುತ್ತಿರುವುದಾದರೆ, ಪ್ರಾಯಶಃ ಅಗತ್ಯವಿರುವಲ್ಲಿ ಸೇವೆ ಮಾಡಲು ದೂರದ ಊರಿಗೆ ಹೋಗಿರುವುದಾದರೆ ಯಾಕೋಬನ ಭಾವನೆಗಳು ನಿಮಗೂ ಅರ್ಥ ಆಗಿರಬಹುದು. ಯಾಕೋಬನ ಹಾಗೆ ನೀವೂ ಯೆಹೋವನ ಆರೈಕೆಯನ್ನು ಅನೇಕ ವಿಧಗಳಲ್ಲಿ ಈಗಾಗಲೇ ಅನುಭವಿಸಿದ್ದೀರಿ ಅನ್ನುವುದರಲ್ಲಿ ಎರಡು ಮಾತಿಲ್ಲ.
8, 9. (1) ಯಾಕೋಬನಿಗೆ ಯೆಹೋವನು ಹೇಗೆ ‘ವಾಸಸ್ಥಾನವಾದನು’? (2) ಇದರಿಂದ ನಮಗೇನು ತಿಳಿಯುತ್ತದೆ?
8 ಯಾಕೋಬನು ಖಾರಾನಿಗೆ ಹೋದಾಗ ಅವನ ಮಾವ ಲಾಬಾನ ಅವನನ್ನು ಸಂತೋಷದಿಂದ ಸ್ವಾಗತಿಸಿದನು. ಸಮಯಾನಂತರ ಲೇಯ ಮತ್ತು ರಾಹೇಲಳನ್ನು ಅವನಿಗೆ ಹೆಂಡತಿಯರನ್ನಾಗಿ ಕೊಟ್ಟನು. ಆದರೆ ನಂತರ ಲಾಬಾನನೇ ತನ್ನ ಬಳಿ ದುಡಿಯುತ್ತಿದ್ದ ಯಾಕೋಬನ ಸಂಬಳವನ್ನು ಹತ್ತು ಬಾರಿ ಬದಲಾಯಿಸುತ್ತಾ ಮೋಸಮಾಡಲು ಪ್ರಯತ್ನಿಸಿದನು. (ಆದಿ. 31:41, 42) ಆದರೂ ತನಗಾದ ಅನ್ಯಾಯವನ್ನು ಯಾಕೋಬನು ಸಹಿಸಿಕೊಂಡನು. ಯೆಹೋವನೇ ನನ್ನನ್ನು ನೋಡಿಕೊಳ್ಳುತ್ತಾನೆ ಎಂದು ಪೂರ್ಣ ಭರವಸೆ ಇಟ್ಟನು. ಹಾಗೆಯೇ ಆಯಿತು. ಆದ್ದರಿಂದಲೇ ಯಾಕೋಬನು ಕಾನಾನಿಗೆ ಹಿಂದಿರುಗಿದಾಗ ಅವನ ಬಳಿ “ದೊಡ್ಡ ದೊಡ್ಡ ಹಿಂಡುಗಳೂ ದಾಸದಾಸಿಯರೂ ಒಂಟೆಕತ್ತೆಗಳೂ ಹೇರಳವಾಗಿದ್ದವು.” (ಆದಿ. 30:43) ಇದಕ್ಕೆಲ್ಲ ಗಣ್ಯತಾಭಾವದಿಂದ ಯಾಕೋಬನು ಹೀಗೆ ಪ್ರಾರ್ಥಿಸಿದನು: “ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಪಾತ್ರನಾಗಿದ್ದೇನೆ. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಪಾಳೆಯಗಳಿಗೆ ಒಡೆಯನಾಗಿದ್ದೇನೆ.”—ಆದಿ. 32:10.
9 ಹಾಗಾದರೆ ಮೋಶೆ ಯೆಹೋವನ ಕುರಿತು ಹೇಳಿದ ಮಾತುಗಳು ಎಷ್ಟು ಸತ್ಯವಲ್ಲವೇ? “ಕರ್ತನೇ, ತಲತಲಾಂತರಗಳಿಂದಲೂ ನಮ್ಮ ವಾಸಸ್ಥಾನವು ನೀನೇ.” (ಕೀರ್ತ. 90:1) ಈ ಮಾತುಗಳು ಇಂದಿಗೂ ಸತ್ಯ. “ಆತನಲ್ಲಿ ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ.” ಆದ್ದರಿಂದ ಯೆಹೋವನು ಇಂದು ಕೂಡ ತನ್ನ ನಿಷ್ಠಾವಂತ ಸೇವಕರಿಗೆ ಯಾವಾಗಲೂ ಪ್ರೀತಿಭರಿತ, ಸುಭದ್ರ ವಾಸಸ್ಥಾನವಾಗಿದ್ದಾನೆ. (ಯಾಕೋ. 1:17) ಅದು ಹೇಗೆಂದು ಮುಂದೆ ನೋಡೋಣ.
ಯೆಹೋವನು ನಮ್ಮ ವಾಸಸ್ಥಾನ ಇಂದು ಕೂಡ
10. ಯೆಹೋವನು ಇಂದೂ ತನ್ನ ಸೇವಕರ ವಾಸಸ್ಥಾನವಾಗಿದ್ದಾನೆ ಎಂದು ನಾವು ಹೇಗೆ ಹೇಳಬಹುದು?
10 ಈ ಸನ್ನಿವೇಶವನ್ನು ಊಹಿಸಿಕೊಳ್ಳಿ. ನೀವು ಕೋರ್ಟ್ನ ಕಟಕಟೆಯಲ್ಲಿ ನಿಂತು ಒಬ್ಬ ಪಾತಕಿಯ ವಿರುದ್ಧ ಸಾಕ್ಷಿ ಹೇಳುತ್ತಿದ್ದೀರಿ. ಆ ಪಾತಕಿ ತುಂಬ ಶಕ್ತಿಶಾಲಿ ಜಾಣನೂ ಆಗಿದ್ದಾನೆ. ಅಷ್ಟೇ ಅಲ್ಲ ಕ್ರೂರಿಯೂ ಕೊಲೆಗಾರನೂ ಆಗಿದ್ದಾನೆ. ಅವನ ಪರ ಕೆಲಸಮಾಡುವ ಜನರು ಎಲ್ಲ ಕಡೆ ಇದ್ದಾರೆ. ನೀವು ಅವನ ವಿರುದ್ಧ ಸಾಕ್ಷಿಕೊಟ್ಟು ಕೋರ್ಟ್ನಿಂದ ಹೊರಗೆ ಬರುವಾಗ ಹೇಗನಿಸುತ್ತದೆ? ಸುರಕ್ಷಿತರಾಗಿದ್ದೀರಿ ಎಂದು ಅನಿಸುತ್ತಾ? ಇಲ್ಲವಲ್ಲ? ಸಂರಕ್ಷಣೆ ಓದಗಿಸುವಂತೆ ಕೇಳಿ ಖಂಡಿತ ಕೋರ್ಟಿನ ಮೊರೆ ಹೋಗುತ್ತೀರಿ. ಅದೇ ರೀತಿಯ ಸನ್ನಿವೇಶದಲ್ಲಿ ಇಂದು ಯೆಹೋವನ ಸೇವಕರಿದ್ದಾರೆ. ಯೆಹೋವನ ಕಡುವೈರಿಯಾಗಿರುವ ಸೈತಾನನನ್ನು ಎದುರು ಹಾಕಿಕೊಂಡು ಧೈರ್ಯದಿಂದ ಅವನ ವಿರುದ್ಧ ಸಾಕ್ಷಿ ಹೇಳುತ್ತಿದ್ದಾರೆ. (ಪ್ರಕಟನೆ 12:17 ಓದಿ.) ಹಾಗಿದ್ದರೂ ಸೈತಾನನಿಗೆ ದೇವಜನರ ಬಾಯಿಮುಚ್ಚಿಸಲು ಸಾಧ್ಯವಾಗಿಲ್ಲ. ಅದಕ್ಕೆ ಬದಲು ನಾವು ಆಧ್ಯಾತ್ಮಿಕವಾಗಿ ಹೆಚ್ಚೆಚ್ಚು ಪ್ರಗತಿಯಾಗುತ್ತಾ ಇದ್ದೇವೆ. ಅದಕ್ಕೆ ಕಾರಣ ಒಂದೇ. ಈ ಕಡೆ ದಿವಸಗಳಲ್ಲೂ ಯೆಹೋವನು ನಮ್ಮ ಆಶ್ರಯ, “ವಾಸಸ್ಥಾನ” ಆಗಿರುವುದೇ. (ಯೆಶಾಯ 54:14, 17 ಓದಿ.) ನಾವೇನಾದರೂ ಸೈತಾನನು ನಮ್ಮನ್ನು ಆ ವಾಸಸ್ಥಾನದಿಂದ ದೂರಮಾಡುವಂತೆ ಬಿಟ್ಟರೆ ಯೆಹೋವನು ನಮ್ಮ ವಾಸಸ್ಥಾನವಾಗಿರನು.
11. ನಮ್ಮ ಪೂರ್ವಜರಿಂದ ನಮಗೆ ಯಾವ ಪಾಠ ಇದೆ?
11 ನಮ್ಮ ಪೂರ್ವಜರಿಂದ ನಮಗೆ ಕಲಿಯಲು ಇನ್ನೊಂದು ಪಾಠವೂ ಇದೆ. ಅವರು ಕಾನಾನಿನಲ್ಲಿ ವಾಸಿಸಿದರೂ ಅಲ್ಲಿನ ದುಷ್ಟ ಹಾಗೂ ಅನೈತಿಕ ಜೀವನ ನಡೆಸುತ್ತಿದ್ದ ಜನರಿಂದ ಪ್ರತ್ಯೇಕವಾಗಿ ಉಳಿದರು. (ಆದಿ. 27:46) ಅವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಕೊಳ್ಳಲು ನಿಯಮಗಳ ದೊಡ್ಡ ಪಟ್ಟಿ ಬೇಕಾಗಿರಲಿಲ್ಲ. ಯೆಹೋವನ ಬಗ್ಗೆ ಮತ್ತು ಆತನ ವ್ಯಕ್ತಿತ್ವದ ಬಗ್ಗೆ ಅವರು ತಿಳಿದಿದ್ದ ವಿಷಯಗಳೇ ಅವರನ್ನು ಮಾರ್ಗದರ್ಶಿಸಿದವು. ಯೆಹೋವನೇ ಅವರ ವಾಸಸ್ಥಾನವಾಗಿದ್ದರಿಂದ ಅವರು ಲೋಕದೊಂದಿಗೆ ಸಹವಾಸ ಮಾಡಲು ಕಿಂಚಿತ್ತೂ ಆಸೆಪಡಲಿಲ್ಲ. ಲೋಕದ ವಿಷಯಗಳಿಂದ ಆದಷ್ಟು ದೂರ ಉಳಿದರು. ನಮ್ಮೆಲ್ಲರಿಗೆ ಎಂಥ ಉತ್ತಮ ಮಾದರಿ! ಒಡನಾಡಿಗಳ ಮತ್ತು ಮನರಂಜನೆಯ ಆಯ್ಕೆಯ ವಿಷಯದಲ್ಲಿ ನೀವು ಪೂರ್ವಜರ ಈ ಮಾದರಿಯನ್ನು ಅನುಸರಿಸುತ್ತಾ ಇದ್ದೀರಾ? ದುಃಖದ ವಿಷಯವೆಂದರೆ ಕ್ರೈಸ್ತ ಸಭೆಯಲ್ಲಿರುವ ಕೆಲವರಿಗೆ ಸೈತಾನನ ಲೋಕ ಸ್ವಲ್ಪಮಟ್ಟಿಗೆ ಹಿತಕರವೆನಿಸುತ್ತಿದೆ. ಈ ರೀತಿ ಭಾವನೆ ನಿಮ್ಮಲ್ಲಿ ಸ್ವಲ್ಪ ಬರುವುದಾದರೂ ಅದರ ಕುರಿತು ಪ್ರಾರ್ಥಿಸಿ. ಒಂದನ್ನು ಮಾತ್ರ ಯಾವತ್ತೂ ಮರೆಯಬೇಡಿ, ಇದು ಸೈತಾನನ ಲೋಕ. ಅವನಂತೆ ಈ ಲೋಕವೂ ಸ್ವಾರ್ಥಮಯವಾಗಿದೆ. ನಿಮ್ಮ ಬಗ್ಗೆ ಅದಕ್ಕೆ ಸ್ವಲ್ಪವೂ ಕಾಳಜಿ ಇಲ್ಲ.—2 ಕೊರಿಂ. 4:4; ಎಫೆ. 2:1, 2.
12. (1) ಯೆಹೋವನು ತನ್ನ ಜನರನ್ನು ಹೇಗೆ ಪೋಷಿಸುತ್ತಾನೆ? (2) ಈ ಒದಗಿಸುವಿಕೆಗಳ ಕುರಿತು ನಿಮಗೆ ಹೇಗನಿಸುತ್ತೆ?
12 ಸೈತಾನನ ಕುತಂತ್ರಗಳನ್ನು ಪ್ರತಿರೋಧಿಸಲು, ಯೆಹೋವನು ತನ್ನ ಜನರಿಗಾಗಿ ಮಾಡಿರುವ ಎಲ್ಲ ಆಧ್ಯಾತ್ಮಿಕ ಏರ್ಪಾಡುಗಳಿಂದ ನಾವು ಪೂರ್ಣ ಪ್ರಯೋಜನ ಪಡೆಯಬೇಕು. ಈ ಒದಗಿಸುವಿಕೆಯಲ್ಲಿ ಕ್ರೈಸ್ತ ಕೂಟಗಳು, ಕುಟುಂಬ ಆರಾಧನೆ ಮತ್ತು ‘ಮನುಷ್ಯರಲ್ಲಿ ದಾನಗಳಾಗಿರುವ’ ಹಿರಿಯರು ಸೇರಿದ್ದಾರೆ. ಜೀವನದ ಜಂಜಾಟಗಳನ್ನು ಜಯಿಸಲು ನಮಗೆ ಬೇಕಾದ ಸಾಂತ್ವನವನ್ನು ಸಹಾಯವನ್ನು ದೇವರಿಂದ ನೇಮಿತರಾದ ಈ ಜವಾಬ್ದಾರಿಯುತ ಹಿರಿಯರು ನೀಡುತ್ತಾರೆ. (ಎಫೆ. 4:8-12) ಅನೇಕ ವರ್ಷಗಳ ವರೆಗೆ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಸಹೋದರ ಜಾರ್ಜ್ ಗ್ಯಾಂಗಸ್ ಹೀಗೆ ಬರೆದರು: “ನಾನು [ದೇವಜನರ] ಮಧ್ಯೆ ಇರುವಾಗ ಮನೆಮಂದಿ ಜತೆ ಇದ್ದಹಾಗೆ ಅನಿಸುತ್ತದೆ. ನಿಜವಾಗಿಯೂ ಇದು ಆಧ್ಯಾತ್ಮಿಕ ಪರದೈಸ್.” ನಿಮಗೂ ಹೀಗೆಯೇ ಅನಿಸುತ್ತಾ?
13. ಇಬ್ರಿಯ 11:13ರಿಂದ ನಾವು ಯಾವ ಪಾಠ ಕಲಿಯಬಹುದು?
13 ನಮ್ಮ ಪೂರ್ವಜರು ಸುತ್ತಮುತ್ತಲಿನ ಜನರಿಗಿಂತ ಭಿನ್ನರಾಗಿ ಕಾಣಲು ಹಿಂಜರಿಯಲಿಲ್ಲ. ಈ ಗುಣ ನಮ್ಮ ಅನುಕರಣೆಗೂ ಯೋಗ್ಯ. ಪ್ಯಾರ 1ರಲ್ಲಿ ನೋಡಿದಂತೆ ತಾವು ‘ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಅವರು ಬಹಿರಂಗವಾಗಿ ಪ್ರಕಟಿಸಿದರು.’ (ಇಬ್ರಿ. 11:13) ನೀವು ಸಹ ಲೋಕದಿಂದ ಭಿನ್ನರೆಂದು ತೋರಿಸಿಕೊಡುತ್ತಿದ್ದೀರಾ? ಹಾಗೆ ಮಾಡುವುದು ಯಾವಾಗಲೂ ಸುಲಭವಲ್ಲ ನಿಜ. ಆದರೂ ದೇವರ ಸಹಾಯದಿಂದ ಮತ್ತು ಜೊತೆ ಕ್ರೈಸ್ತರ ಬೆಂಬಲದಿಂದ ಅದನ್ನು ಮಾಡಿ ತೋರಿಸಲು ನಿಮ್ಮಿಂದ ಸಾಧ್ಯ. ನೆನಪಿಡಿ, ನೀವು ಒಬ್ಬರೇ ಇಲ್ಲ. ಯೆಹೋವನನ್ನು ಆರಾಧಿಸಲು ಬಯಸುವ ಎಲ್ಲರೂ ನಿಮ್ಮ ಜೊತೆಯಲ್ಲಿದ್ದಾರೆ. ಏಕೆಂದರೆ ಅವರೆಲ್ಲರೂ ಲೋಕಕ್ಕೆ ವಿರುದ್ಧ ಹೋರಾಡುತ್ತಿದ್ದಾರೆ! (ಎಫೆ. 6:12) ಯೆಹೋವನಲ್ಲಿ ಭರವಸೆಯಿಟ್ಟು ಆತನನ್ನು ನಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಾಗಲೇ ನಾವು ಈ ಹೋರಾಟದಲ್ಲಿ ಜಯಗಳಿಸಬಲ್ಲೆವು.
14. ಅಬ್ರಹಾಮನು ಯಾವ ‘ಪಟ್ಟಣವನ್ನು’ ಎದುರುನೋಡಿದನು?
14 ಇನ್ನೊಂದು ಪ್ರಾಮುಖ್ಯ ಪಾಠವನ್ನು ನಾವು ಅಬ್ರಹಾಮನಿಂದ ಕಲಿಯಬಹುದು. ಅದೇನೆಂದರೆ ನಾವು ಬಹುಮಾನದ ಮೇಲೆ ನಮ್ಮ ಕಣ್ಣನ್ನು ನೆಡಬೇಕು. (2 ಕೊರಿಂ. 4:18) ಅಪೊಸ್ತಲ ಪೌಲನು ಅಬ್ರಹಾಮನ ಕುರಿತು, ಅವನು “ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು” ಎಂದು ಬರೆದನು. (ಇಬ್ರಿ. 11:10) ಇಲ್ಲಿ ತಿಳಿಸಿರುವ “ಪಟ್ಟಣ” ಮೆಸ್ಸೀಯ ರಾಜ್ಯವಾಗಿದೆ. ಆದರೆ ಅಬ್ರಹಾಮನಂತೆ ನಾವು ಆ ಪಟ್ಟಣಕ್ಕಾಗಿ ಎದುರುನೋಡಬೇಕೆಂದಿಲ್ಲ. ಏಕೆಂದರೆ ಮೆಸ್ಸೀಯ ರಾಜ್ಯ ಈಗಾಗಲೇ ಸ್ವರ್ಗದಲ್ಲಿ ಸ್ಥಾಪನೆಯಾಗಿದೆ. ಅದು ಬೇಗನೆ ಇಡೀ ಭೂಮಿಯನ್ನು ಆಳಲಿಕ್ಕಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಇವೆ. ಮೆಸ್ಸೀಯ ರಾಜ್ಯವನ್ನು ನೀವು ನಿಜವಾದ ರಾಜ್ಯವಾಗಿ ಪರಿಗಣಿಸುತ್ತಿದ್ದೀರಾ? ಅದು ನಿಮ್ಮ ಜೀವನವನ್ನು, ಸದ್ಯದ ಲೋಕದ ಕಡೆಗಿನ ನಿಮ್ಮ ಅಭಿಪ್ರಾಯವನ್ನು ಹಾಗೂ ನಿಮ್ಮ ಆದ್ಯತೆಗಳನ್ನು ಪ್ರಭಾವಿಸುತ್ತಿದೆಯಾ?—2 ಪೇತ್ರ 3:11, 12 ಓದಿ.
ಅಂತ್ಯಕಾಲದಲ್ಲಿ ನಮ್ಮ ಸುಭದ್ರ “ವಾಸಸ್ಥಾನ”
15. ಸದ್ಯದ ಲೋಕದಲ್ಲಿ ಭರವಸೆ ಇಡುವವರಿಗೆ ಏನು ಕಾದಿದೆ?
15 ಸೈತಾನನ ಈ ದುಷ್ಟ ಲೋಕವು ಅಂತ್ಯವನ್ನು ಸಮೀಪಿಸಿದಂತೆ ಅದರ “ಸಂಕಟದ ಶೂಲೆ” ಇನ್ನೂ ಹೆಚ್ಚಾಗುತ್ತದೆ. (ಮತ್ತಾ. 24:7, 8) ಮಹಾ ಸಂಕಟದ ಸಮಯದಲ್ಲಂತೂ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಇಡೀ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ, ಜೀವಗಳನ್ನು ಉಳಿಸಿಕೊಳ್ಳಲು ಜನರು ಅತ್ತಿತ್ತ ಪರದಾಡುತ್ತಾರೆ. (ಹಬ. 3:16, 17) ಭಯಭ್ರಾಂತರಾದ ಜನರು ಕೊನೆಯ ಪ್ರಯತ್ನವೆಂಬಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು “ಗುಹೆಗಳಲ್ಲಿಯೂ ಪರ್ವತಗಳ ಬಂಡೆರಾಶಿಗಳಲ್ಲಿಯೂ” ಅಡಗಿಕೊಳ್ಳುವರು. (ಪ್ರಕ. 6:15-17) ಆದರೆ ಗುಹೆಗಳಾಗಲಿ ಪರ್ವತಗಳಂತಿರುವ ಯಾವುದೇ ರಾಜಕೀಯ ಯಾ ಸಾಮಾಜಿಕ ಸಂಘಟನೆಗಳೇ ಆಗಲಿ ಕೊಂಚ ಸಂರಕ್ಷಣೆಯನ್ನೂ ಒದಗಿಸಲಾರವು.
16. ಕ್ರೈಸ್ತ ಸಭೆಯ ಕಡೆಗೆ ನಮಗೆ ಯಾವ ನೋಟವಿರಬೇಕು? ಏಕೆ?
16 ದೇವಜನರಾದರೋ ತಮ್ಮ ‘ವಾಸಸ್ಥಾನವಾಗಿರುವ’ ಯೆಹೋವನಲ್ಲಿ ಭರವಸೆಯಿಟ್ಟು ಸದಾ ಸುಭದ್ರರಾಗಿರುವರು. ಪ್ರವಾದಿ ಹಬಕ್ಕೂಕನಂತೆ ‘ಯೆಹೋವನಲ್ಲಿ ಉಲ್ಲಾಸಿಸುವರು. ತಮ್ಮ ರಕ್ಷಕನಾದ ದೇವರಲ್ಲಿ ಆನಂದಿಸುವರು.’ (ಹಬ. 3:18) ಅಂಥ ಪ್ರಕ್ಷುಬ್ಧ ಸಮಯದಲ್ಲಿ ಯಾವ ರೀತಿಯಲ್ಲಿ ಯೆಹೋವನು ತನ್ನ ಜನರಿಗೆ “ವಾಸಸ್ಥಾನ” ಆಗಲಿದ್ದಾನೆ? ಅದನ್ನು ಕಾದು ನೋಡಬೇಕು. ಅದೇನೇ ಇರಲಿ, ಈಜಿಪ್ಟಿನಿಂದ ಬಿಡುಗಡೆಯಾಗುವಾಗ ಇಸ್ರಾಯೇಲ್ಯರು ಹೇಗೆ ಐಕ್ಯರಾಗಿ ಉಳಿದರೋ ಹಾಗೆಯೇ “ಮಹಾ ಸಮೂಹದವರು” ಸಂಘಟಿತರಾಗಿದ್ದು ದೇವರಿಂದ ಬರುವ ನಿರ್ದೇಶನಗಳನ್ನು ತಕ್ಷಣ ಪಾಲಿಸುವರು. (ಪ್ರಕ. 7:9; ವಿಮೋಚನಕಾಂಡ 13:18 ಓದಿ.) ಯೆಹೋವನು ನಿರ್ದೇಶನಗಳನ್ನು ಹೇಗೆ ಕೊಡುವನು? ಆತನು ಅದನ್ನು ಸಭೆಗಳ ಮೂಲಕವೂ ಕೊಡಬಹುದು. ಯೆಶಾಯ 26:20ರಲ್ಲಿ (ಓದಿ) ಮುಂತಿಳಿಸಲಾಗಿರುವಂತೆ ದೇವಜನರಿಗೆ “ಕೋಣೆ”ಗಳು ಸಂರಕ್ಷಣೆ ಒದಗಿಸುವವು. ಲೋಕವ್ಯಾಪಕವಾಗಿ ಲಕ್ಷಕ್ಕಿಂತಲೂ ಹೆಚ್ಚಿರುವ ಸಭೆಗಳೇ ಈ ‘ಕೋಣೆಗಳಾಗಿರಬಹುದು.’ ಸಭಾ ಕೂಟಗಳನ್ನು ನೀವು ಗಣ್ಯ ಮಾಡುತ್ತಿದ್ದೀರಾ? ಸಭಾ ಕೂಟಗಳ ಮೂಲಕ ಯೆಹೋವನು ನಿರ್ದೇಶನಗಳನ್ನು ಕೊಡುವಾಗ ನೀವು ಅವನ್ನು ತಕ್ಷಣ ಪಾಲಿಸುತ್ತಿದ್ದೀರಾ?—ಇಬ್ರಿ. 13:17.
17. ಮೃತಪಟ್ಟ ನಿಷ್ಠಾವಂತ ಸೇವಕರಿಗೂ ಯೆಹೋವನು ಹೇಗೆ “ವಾಸಸ್ಥಾನ” ಆಗಿದ್ದಾನೆ?
17 ಮಹಾಸಂಕಟ ಬರುವುದಕ್ಕೆ ಮುಂಚೆ ನಂಬಿಗಸ್ತರಾಗಿ ಕಣ್ಣು ಮುಚ್ಚುವವರ ಕುರಿತೇನು? ಅವರು ಸಹ ಯೆಹೋವನ ‘ವಾಸಸ್ಥಾನದಲ್ಲಿ’ ಸುಭದ್ರವಾಗಿರುತ್ತಾರೆ. ಹೇಗೆ? ನಮ್ಮ ಕೆಲವು ಪೂರ್ವಜರು ಸತ್ತು ಎಷ್ಟೋ ವರ್ಷಗಳ ಮೇಲೆ ಯೆಹೋವನು ಮೋಶೆಗೆ ಹೇಳಿದ್ದನ್ನು ಗಮನಿಸಿ: “ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು.” (ವಿಮೋ. 3:6) ಇದೇ ಮಾತನ್ನು ಹೇಳಿ ಯೇಸು ಕೂಡಿಸಿದ್ದು: “[ಯೆಹೋವನು] ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾನೆ. ಅವರೆಲ್ಲರೂ ಆತನಿಗೆ ಜೀವಿಸುವವರೇ.” (ಲೂಕ 20:38) ಹೌದು, ನಂಬಿಗಸ್ತರಾಗಿ ಮೃತಪಟ್ಟ ನಿಷ್ಠಾವಂತ ಸೇವಕರೆಲ್ಲ ಯೆಹೋವನಿಗೆ ಇನ್ನೂ ಜೀವಿತರೇ. ಅವರ ಪುನರುತ್ಥಾನ ಖಂಡಿತ.—ಪ್ರಸಂ. 7:1.
18. ನೂತನ ಲೋಕದಲ್ಲಿ ಯೆಹೋವನು ಯಾವ ವಿಶೇಷ ಅರ್ಥದಲ್ಲಿ ನಮ್ಮ “ವಾಸಸ್ಥಾನ” ಆಗಲಿದ್ದಾನೆ?
18 ಮುಂಬರಲಿರುವ ಹೊಸ ಲೋಕದಲ್ಲಿ ಯೆಹೋವನು ತನ್ನ ಜನರಿಗೆ ಇನ್ನೊಂದು ಅರ್ಥದಲ್ಲಿ ವಾಸಸ್ಥಾನವಾಗಿರುವನು. ಪ್ರಕಟನೆ 21:3 ಹೇಳುವುದು: “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು.” ಪ್ರಥಮವಾಗಿ ಯೆಹೋವನ ಪ್ರತಿನಿಧಿಯಾಗಿ ಕ್ರಿಸ್ತ ಯೇಸು ಭೂಮಿಯಲ್ಲಿರುವ ಜನರೊಂದಿಗೆ ವಾಸಮಾಡುವನು ಅಂದರೆ ಅವರ ಮೇಲೆ ರಾಜನಾಗಿ ಆಳ್ವಿಕೆ ನಡೆಸುವನು. ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಯೇಸು ಭೂಮಿಯ ಕಡೆಗಿನ ಯೆಹೋವನ ಉದ್ದೇಶವನ್ನು ಸಂಪೂರ್ಣವಾಗಿ ನೆರವೇರಿಸಿರುವನು. ಅನಂತರ ಯೇಸು ರಾಜ್ಯಾಧಿಕಾರವನ್ನು ತಂದೆಗೆ ಹಿಂದಿರುಗಿಸುವನು. (1 ಕೊರಿಂ. 15:28) ಯೆಹೋವನು ಮಾನವಕುಲವನ್ನು ಯಾವುದೇ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಆಳುವ ಮೂಲಕ ಅವರೊಂದಿಗೆ ವಾಸಿಸುವನು. ಎಂಥ ಅದ್ಭುತಕರ ಭವಿಷ್ಯತ್ತು ನಮ್ಮ ಕಣ್ಣ ಮುಂದಿದೆ! ಆದ್ದರಿಂದ ಈ ಉಳಿದಿರುವ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾ ನಮ್ಮ ಪೂರ್ವಜರ ಮಾದರಿಯನ್ನು ಅನುಸರಿಸುತ್ತಾ ಯೆಹೋವನನ್ನು ನಮ್ಮ ‘ವಾಸಸ್ಥಾನವನ್ನಾಗಿ’ ಮಾಡಿಕೊಳ್ಳೋಣ.
[ಪಾದಟಿಪ್ಪಣಿ]
a ಕೀರ್ತನೆ 90:1ನ್ನು ಕಂಟೆಂಪರರಿ ಇಂಗ್ಲಿಷ್ ವರ್ಷನ್ ಹೀಗೆ ಭಾಷಾಂತರಿಸಿದೆ: “ನಮ್ಮ ಕರ್ತನೇ, ಯುಗಯುಗಾಂತರಕ್ಕೂ ನೀನೇ ನಮ್ಮ ಮನೆ.”
[ಪುಟ 19ರಲ್ಲಿರುವ ಚಿತ್ರ]
[ಪುಟ 20ರಲ್ಲಿರುವ ಚಿತ್ರ]
‘ನಾನು ನಿನ್ನ ಕೈ ಬಿಡುವುದಿಲ್ಲ’
[ಪುಟ 22ರಲ್ಲಿರುವ ಚಿತ್ರ]
ದೇವದೂತರು ದೇವಸೇವಕರಿಗೆ ಬೆಂಬಲವಾಗಿದ್ದು ಸಂರಕ್ಷಿಸುತ್ತಿದ್ದಾರೆ