ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ
“ಯಾಕೆಂದರೆ ನೀನು ಹೇಳಿದ್ದು: ‘ಯೆಹೋವನು ನನ್ನ ಆಶ್ರಯದುರ್ಗವಾಗಿದ್ದಾನೆ,’ . . . ಯಾವುದೇ ವಿಪತ್ತು ನಿನಗೆ ಸಂಭವಿಸುವುದಿಲ್ಲ.”—ಕೀರ್ತನೆ 91:9, 10, NW.
1. ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ ಎಂದು ನಾವೇಕೆ ಹೇಳಸಾಧ್ಯವಿದೆ?
ಯೆಹೋವನು ತನ್ನ ಜನರಿಗೆ ನಿಜವಾದ ಆಶ್ರಯದುರ್ಗವಾಗಿದ್ದಾನೆ. ಒಂದುವೇಳೆ ನಾವು ನಮ್ಮನ್ನು ಆತನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿರುವಲ್ಲಿ, ‘ಸರ್ವ ವಿಧದಲ್ಲಿ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ದಿಕ್ಕುಕಾಣದವರಾಗಿದ್ದರೂ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.’ ಏಕೆ? ಏಕೆಂದರೆ ಯೆಹೋವನು ನಮಗೆ “ಬಲಾಧಿಕ್ಯ”ವನ್ನು ನೀಡುತ್ತಾನೆ. (2 ಕೊರಿಂಥ 4:7-9) ಹೌದು, ನಮ್ಮ ಸ್ವರ್ಗೀಯ ತಂದೆಯು ದೈವಿಕ ಜೀವನವನ್ನು ಬೆನ್ನಟ್ಟುವಂತೆ ನಮಗೆ ಸಹಾಯಮಾಡುತ್ತಾನೆ ಮತ್ತು ನಾವು ಕೀರ್ತನೆಗಾರನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳಸಾಧ್ಯವಿದೆ: “ಯಾಕೆಂದರೆ ನೀನು ಹೇಳಿದ್ದು: ‘ಯೆಹೋವನು ನನ್ನ ಆಶ್ರಯದುರ್ಗವಾಗಿದ್ದಾನೆ,’ ನೀನು ಮಹೋನ್ನತನನ್ನೇ ನಿನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದೀ; ಯಾವುದೇ ವಿಪತ್ತು ನಿನಗೆ ಸಂಭವಿಸುವುದಿಲ್ಲ.”—ಕೀರ್ತನೆ 91:9, 10, NW.
2. ಕೀರ್ತನೆ 91ರ ಕುರಿತು ಏನು ಹೇಳಸಾಧ್ಯವಿದೆ ಮತ್ತು ಅದು ಏನನ್ನು ವಾಗ್ದಾನಿಸುತ್ತದೆ?
2 ಕೀರ್ತನೆ 91ರ ಆ ಮಾತುಗಳು ಮೋಶೆಯಿಂದಲೇ ಬರೆಯಲ್ಪಟ್ಟಿದ್ದಿರಬಹುದು. ಒಂದು ಮೇಲ್ಬರಹವು ಅವನನ್ನು 90ನೆಯ ಕೀರ್ತನೆಯ ರಚನಕಾರನೆಂದು ಹೆಸರಿಸುತ್ತದೆ. ಮತ್ತು ಅದರ ನಂತರ ಹಿಂಬಾಲಿಸಿ ಬರುವ 91ನೆಯ ಕೀರ್ತನೆಯು ಇನ್ನೊಬ್ಬ ಬರಹಗಾರನ ಹೆಸರನ್ನು ಸೂಚಿಸುವುದಿಲ್ಲ. 91ನೆಯ ಕೀರ್ತನೆಯು ಸರದಿಗಾಯನ ರೂಪದಲ್ಲಿ ಹಾಡಲ್ಪಟ್ಟಿದ್ದಿರಬೇಕು; ಅಂದರೆ ಮೊದಲಾಗಿ ಒಬ್ಬ ವ್ಯಕ್ತಿಯು ಹಾಡುವಾಗ (91:1, 2), ಅದಕ್ಕೆ ಒಂದು ಗಾಯಕವೃಂದವು ಪ್ರತಿವಚನ ಹಾಡುತ್ತಿತ್ತು (91:3-8). ತದನಂತರ ಪ್ರಾಯಶಃ ಒಬ್ಬ ಹಾಡುಗಾರನ ಧ್ವನಿಯು ಕೇಳಿಬರುತ್ತಿತ್ತು (91:9ಎ) ಮತ್ತು ಇದಕ್ಕೆ ಒಂದು ಗುಂಪು ಉತ್ತರಿಸುತ್ತಿತ್ತು (91:9ಬಿ-13). ತರುವಾಯ ಒಬ್ಬ ಹಾಡುಗಾರನು ಆ ಕೀರ್ತನೆಯ ಕೊನೆಯ ಮಾತುಗಳನ್ನು ಹಾಡಿದ್ದಿರಬಹುದು (91:14-16). ವಿಷಯವು ಏನೇ ಇರಲಿ, 91ನೆಯ ಕೀರ್ತನೆಯು ಒಂದು ವರ್ಗದೋಪಾದಿ ಅಭಿಷಿಕ್ತ ಕ್ರೈಸ್ತರಿಗೆ ಆತ್ಮಿಕ ಭದ್ರತೆಯನ್ನು ವಾಗ್ದಾನಿಸುತ್ತದೆ ಮತ್ತು ಒಂದು ಗುಂಪಿನೋಪಾದಿ ಅವರ ಸಮರ್ಪಿತ ಸಂಗಡಿಗರಿಗೂ ತದ್ರೀತಿಯ ಆಶ್ವಾಸನೆಯನ್ನು ಕೊಡುತ್ತದೆ.a ಯೆಹೋವನ ಅಂತಹ ಎಲ್ಲ ಸೇವಕರ ದೃಷ್ಟಿಕೋನದಿಂದ ನಾವು ಈ ಕೀರ್ತನೆಯನ್ನು ಪರಿಗಣಿಸೋಣ.
‘ದೇವರ ಗುಪ್ತ ಸ್ಥಳದಲ್ಲಿ’ ಭದ್ರರಾಗಿರುವುದು
3. (ಎ) “ಪರಾತ್ಪರನ ಗುಪ್ತ ಸ್ಥಳ”ವು ಏನಾಗಿದೆ? (ಬಿ) ‘ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತರಾಗಿ’ ಉಳಿಯುವ ಮೂಲಕ ನಾವು ಏನನ್ನು ಅನುಭವಿಸುತ್ತೇವೆ?
3 ಕೀರ್ತನೆಗಾರನು ಹಾಡುವುದು: “ಪರಾತ್ಪರನ ಮರೆಹೊಕ್ಕಿರುವವನು [“ಗುಪ್ತ ಸ್ಥಳದಲ್ಲಿರುವವನು,” NW] ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು. ನಾನು ಯೆಹೋವನಿಗೆ—ನೀನೇ ನನ್ನ ಶರಣನು [“ಆಶ್ರಯದುರ್ಗವು,” NW] . . . ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.” (ಕೀರ್ತನೆ 91:1, 2) “ಪರಾತ್ಪರನ ಗುಪ್ತ ಸ್ಥಳ”ವು ನಮಗೆ, ಅದರಲ್ಲೂ ನಿರ್ದಿಷ್ಟವಾಗಿ ಪಿಶಾಚನ ವಿಶೇಷ ಗುರಿಹಲಗೆಗಳಾಗಿರುವ ಅಭಿಷಿಕ್ತ ಕ್ರೈಸ್ತರಿಗೆ ರಕ್ಷಣೆ ನೀಡುವಂತಹ ಸಾಂಕೇತಿಕ ಸ್ಥಳವಾಗಿದೆ. (ಪ್ರಕಟನೆ 12:15-17) ಆತ್ಮಿಕ ಅತಿಥಿಗಳೋಪಾದಿ ದೇವರ ಆಶ್ರಯದಲ್ಲಿ ನಾವು ಆನಂದಿಸುವ ಸಂರಕ್ಷಣೆಯು ಒಂದುವೇಳೆ ಇಲ್ಲದಿರುತ್ತಿದ್ದಲ್ಲಿ, ಪಿಶಾಚನು ನಮ್ಮೆಲ್ಲರನ್ನೂ ಸಂಪೂರ್ಣವಾಗಿ ಕಬಳಿಸಿಬಿಡುತ್ತಿದ್ದನು. ‘ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತರಾಗಿ’ ಉಳಿಯುವ ಮೂಲಕ, ನಾವು ದೇವರ ರಕ್ಷಣಾತ್ಮಕ ನೆರಳು ಅಥವಾ ಛಾಯೆಯಲ್ಲಿರುತ್ತೇವೆ. (ಕೀರ್ತನೆ 15:1, 2; 121:5) ನಮ್ಮ ಸೇನಾಧೀಶ್ವರನಾದ ಯೆಹೋವನಿಗಿಂತಲೂ ಹೆಚ್ಚು ಸುರಕ್ಷಿತವಾದ ಆಶ್ರಯಸ್ಥಾನ ಅಥವಾ ಹೆಚ್ಚು ಬಲವಾದ ದುರ್ಗವು ಬೇರೊಂದಿಲ್ಲ.—ಜ್ಞಾನೋಕ್ತಿ 18:10.
4. ‘ಪಕ್ಷಿಗಳನ್ನು ಹಿಡಿಯುವವನಾದ’ ಸೈತಾನನು ಯಾವ ಸಾಧನಗಳನ್ನು ಉಪಯೋಗಿಸುತ್ತಾನೆ, ಮತ್ತು ನಾವು ಹೇಗೆ ತಪ್ಪಿಸಿಕೊಳ್ಳುತ್ತೇವೆ?
4 ಕೀರ್ತನೆಗಾರನು ಕೂಡಿಸಿ ಹೇಳುವುದು: “ನಿನ್ನನ್ನು ಬೇಟೆಗಾರನ [“ಪಕ್ಷಿಗಳನ್ನು ಹಿಡಿಯುವವನ,” NW] ಬಲೆಯಿಂದಲೂ ಮರಣಕರವ್ಯಾಧಿಯಿಂದಲೂ ತಪ್ಪಿಸುವವನು [ಯೆಹೋವನೇ].” (ಕೀರ್ತನೆ 91:3) ಪುರಾತನ ಇಸ್ರಾಯೇಲಿನಲ್ಲಿ ಪಕ್ಷಿಗಳನ್ನು ಹಿಡಿಯುವ ಒಬ್ಬ ವ್ಯಕ್ತಿಯು, ಅನೇಕವೇಳೆ ಪಾಶಗಳನ್ನು ಅಥವಾ ಬಲೆಗಳನ್ನು ಉಪಯೋಗಿಸುವ ಮೂಲಕ ಪಕ್ಷಿಗಳನ್ನು ಹಿಡಿಯುತ್ತಿದ್ದನು. ‘ಪಕ್ಷಿಗಳನ್ನು ಹಿಡಿಯುವವನಾದ’ ಸೈತಾನನು ಉಪಯೋಗಿಸುವ ಪಾಶಗಳಲ್ಲಿ, ಅವನ ದುಷ್ಟ ಸಂಸ್ಥೆ ಹಾಗೂ ‘ತಂತ್ರೋಪಾಯಗಳು’ ಸೇರಿವೆ. (ಎಫೆಸ 6:11) ನಮ್ಮನ್ನು ದುಷ್ಟತನಕ್ಕೆ ಸೆಳೆಯಲಿಕ್ಕಾಗಿ ಮತ್ತು ನಮಗೆ ಆತ್ಮಿಕ ಹಾನಿಯನ್ನು ಉಂಟುಮಾಡಲಿಕ್ಕಾಗಿ ನಮ್ಮ ದಾರಿಯಲ್ಲಿ ಗುಪ್ತವಾದ ಬಲೆಗಳು ಇರಿಸಲ್ಪಟ್ಟಿವೆ. (ಕೀರ್ತನೆ 142:3) ಆದರೂ, ನಾವು ಅನೀತಿಯನ್ನು ತೊರೆದಿರುವುದರಿಂದ, ‘ನಮ್ಮ ಪ್ರಾಣವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ.’ (ಕೀರ್ತನೆ 124:7, 8) ‘ಪಕ್ಷಿಗಳನ್ನು ಹಿಡಿಯುವ’ ಕೆಡುಕನಿಂದ ಯೆಹೋವನು ನಮ್ಮನ್ನು ಕಾಪಾಡುತ್ತಿರುವುದಕ್ಕೆ ನಾವೆಷ್ಟು ಕೃತಜ್ಞರಾಗಿದ್ದೇವೆ!—ಮತ್ತಾಯ 6:13.
5, 6. ಯಾವುದು ‘ಮರಣಕರವ್ಯಾಧಿಯನ್ನು’ ಉಂಟುಮಾಡಿದೆ, ಆದರೂ ಯೆಹೋವನ ಜನರು ಏಕೆ ಅದಕ್ಕೆ ಬಲಿಯಾಗುವುದಿಲ್ಲ?
5 ಕೀರ್ತನೆಗಾರನು ‘ಮರಣಕರವ್ಯಾಧಿಗಳ’ ಕುರಿತು ಉಲ್ಲೇಖಿಸುತ್ತಾನೆ. ಒಂದು ಸಾಂಕ್ರಾಮಿಕ ರೋಗದಂತೆ, ಮಾನವ ಕುಟುಂಬಕ್ಕೆ ಮತ್ತು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವವರಿಗೆ ‘ಮರಣಕರವ್ಯಾಧಿಯನ್ನು’ ಬರಮಾಡುವ ಯಾವುದೋ ಒಂದು ಸಂಗತಿಯಿದೆ. ಈ ವಿಷಯದಲ್ಲಿ ಇತಿಹಾಸಕಾರನಾದ ಆರ್ನಲ್ಡ್ ಟಾಯ್ನ್ಬೀ ಬರೆದುದು: “IIನೆಯ ಲೋಕ ಯುದ್ಧವು ಕೊನೆಗೊಂಡಂದಿನಿಂದ, ರಾಷ್ಟ್ರೀಯತೆಯು ಸ್ಥಳಿಕ ಸರ್ವ ಸ್ವತಂತ್ರ ರಾಜ್ಯಗಳ ಸಂಖ್ಯೆಗಿಂತ ದ್ವಿಗುಣಗೊಂಡಿದೆ . . . ಮಾನವಕುಲದ ಸದ್ಯದ ಮನೋಭಾವವು ಅತ್ಯಧಿಕವಾಗಿ ವಿಭಾಗಗೊಂಡಿದೆ.”
6 ಶತಮಾನಗಳಾದ್ಯಂತ, ಆಳ್ವಿಕೆ ನಡೆಸುವಂತಹ ಕೆಲವರು ವಿಭಾಜಕವಾದ ಅಂತಾರಾಷ್ಟ್ರೀಯ ಕಲಹವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಪೂಜ್ಯಭಕ್ತಿಯು ತಮಗೆ ಅಥವಾ ಬೇರೆ ಬೇರೆ ವಿಗ್ರಹಗಳಿಗೆ ಇಲ್ಲವೆ ಸಂಕೇತಗಳಿಗೆ ಸಲ್ಲಿಸಲ್ಪಡಬೇಕು ಎಂದು ಸಹ ಅವರು ತಗಾದೆಮಾಡಿದ್ದಾರೆ. ಆದರೆ ತನ್ನ ನಂಬಿಗಸ್ತ ಜನರು ಅಂತಹ ‘ವ್ಯಾಧಿಗೆ’ ಬಲಿಯಾಗುವಂತೆ ಯೆಹೋವನು ಎಂದೂ ಅನುಮತಿಸಿಲ್ಲ. (ದಾನಿಯೇಲ 3:1, 2, 20-27; 6:7-10, 16-22) ಒಂದು ಪ್ರೀತಿಯ ಅಂತಾರಾಷ್ಟ್ರೀಯ ಸಹೋದರರ ಬಳಗದೋಪಾದಿ ನಾವು ಯೆಹೋವನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸುತ್ತೇವೆ, ಶಾಸ್ತ್ರೀಯ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತೇವೆ, ಮತ್ತು “ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು [ದೇವರಿಗೆ] ಮೆಚ್ಚಿಗೆಯಾಗಿದ್ದಾರೆ” ಎಂಬುದನ್ನು ನಾವು ನಿಷ್ಪಕ್ಷಪಾತದಿಂದ ಒಪ್ಪಿಕೊಳ್ಳುತ್ತೇವೆ. (ಅ. ಕೃತ್ಯಗಳು 10:34, 35; ವಿಮೋಚನಕಾಂಡ 20:4-6; ಯೋಹಾನ 13:34, 35; 17:16; 1 ಪೇತ್ರ 5:8, 9) ಕ್ರೈಸ್ತರೋಪಾದಿ ನಾವು ಹಿಂಸೆಯ ರೂಪದಲ್ಲಿ ‘ಮರಣಕರವ್ಯಾಧಿಯನ್ನು’ ಅನುಭವಿಸುತ್ತೇವಾದರೂ, ನಾವು ಆನಂದಭರಿತರಾಗಿದ್ದೇವೆ ಮತ್ತು “ಪರಾತ್ಪರನ ಗುಪ್ತ ಸ್ಥಳದಲ್ಲಿ” ಆತ್ಮಿಕವಾಗಿ ಭದ್ರರಾಗಿದ್ದೇವೆ.
7. ಯೆಹೋವನು “ತನ್ನ ಗರಿಗಳಿಂದ” ನಮ್ಮನ್ನು ಹೇಗೆ ಕಾಪಾಡುತ್ತಾನೆ?
7 ಯೆಹೋವನು ನಮ್ಮ ಆಶ್ರಯದುರ್ಗವಾಗಿರುವುದರಿಂದ, ಈ ಮಾತುಗಳಿಂದ ನಾವು ಸಾಂತ್ವನವನ್ನು ಪಡೆದುಕೊಳ್ಳುತ್ತೇವೆ: “ತನ್ನ ಗರಿಗಳಿಂದ ಆತನು ನಿನ್ನನ್ನು ಹೊದಗಿಸಿಕೊಳ್ಳುವನು, ಮತ್ತು ಆತನ ರೆಕ್ಕೆಗಳ ಕೆಳಗೆ ನೀನು ಆಶ್ರಯವನ್ನು ಪಡೆದುಕೊಳ್ಳುವಿ. ಆತನ ಸತ್ಯತೆಯೇ ನಿನಗೆ ದೊಡ್ಡ ಗುರಾಣಿಯೂ ಕೋಟೆಯೂ ಆಗಿರುವುದು.” (ಕೀರ್ತನೆ 91:4, NW) ತನ್ನ ಮರಿಗಳನ್ನು ಕಾಪಾಡಲಿಕ್ಕಾಗಿ ಹೆಣ್ಣುಹಕ್ಕಿಯು ಅವುಗಳ ಮೇಲೆ ಹಾರಾಡುತ್ತಾ ಇರುವಂತಹ ರೀತಿಯಲ್ಲೇ ದೇವರು ನಮ್ಮನ್ನು ಸಂರಕ್ಷಿಸುತ್ತಾನೆ. (ಯೆಶಾಯ 31:5) ‘ತನ್ನ ಗರಿಗಳಿಂದ ಆತನು ನಮ್ಮನ್ನು ಹೊದಗಿಸಿಕೊಳ್ಳುತ್ತಾನೆ.’ ವಿಶಾಲಾರ್ಥದಲ್ಲಿ ಹೇಳುವುದಾದರೆ, ಒಂದು ಪಕ್ಷಿಯ ‘ಗರಿಗಳು’ ಅದರ ರೆಕ್ಕೆಗಳೇ ಆಗಿವೆ. ಅವುಗಳಿಂದ ಒಂದು ಪಕ್ಷಿಯು ತನ್ನ ಮರಿಗಳನ್ನು ಮರೆಮಾಡುತ್ತದೆ ಮತ್ತು ಪರಭಕ್ಷಕ ಪ್ರಾಣಿಗಳಿಂದ ಅವುಗಳನ್ನು ಸಂರಕ್ಷಿಸುತ್ತದೆ. ಯೆಹೋವನ ಸತ್ಯ ಕ್ರೈಸ್ತ ಸಂಸ್ಥೆಯಲ್ಲಿ ನಾವು ಆಶ್ರಯವನ್ನು ಪಡೆದುಕೊಂಡಿರುವುದರಿಂದ, ಆ ಮರಿಹಕ್ಕಿಗಳಂತೆ ನಾವು ಆತನ ಸಾಂಕೇತಿಕ ಗರಿಗಳ ಕೆಳಗೆ ಸುರಕ್ಷಿತರಾಗಿದ್ದೇವೆ.—ರೂತಳು 2:12; ಕೀರ್ತನೆ 5:1, 11.
8. ಯೆಹೋವನ “ಸತ್ಯತೆ”ಯು ಹೇಗೆ ಒಂದು ದೊಡ್ಡ ಗುರಾಣಿಯಂತೆ ಹಾಗೂ ಕೋಟೆಯಂತೆ ಕಾರ್ಯನಡಿಸುತ್ತದೆ?
8 ನಾವು “ಸತ್ಯತೆ”ಯಲ್ಲಿ ಅಥವಾ ನಂಬಿಗಸ್ತಿಕೆಯಲ್ಲಿ ಭರವಸೆಯಿಡುತ್ತೇವೆ. ಇದು ಪುರಾತನಕಾಲದ ದೊಡ್ಡ ಗುರಾಣಿಯಂತಿದೆ; ಕೆಲವೊಮ್ಮೆ ಇದು ಆಯತಾಕಾರದ ಬಾಗಿಲಿನ ಆಕಾರದಲ್ಲಿದ್ದು, ಒಬ್ಬ ವ್ಯಕ್ತಿಯ ಇಡೀ ಶರೀರವನ್ನು ಮುಚ್ಚುವಷ್ಟು ದೊಡ್ಡದಾಗಿರುತ್ತಿತ್ತು. (ಕೀರ್ತನೆ 5:12) ಅಂತಹ ಸಂರಕ್ಷಣೆಯಲ್ಲಿನ ಭರವಸೆಯು ನಮ್ಮನ್ನು ಭಯದಿಂದ ವಿಮೋಚಿಸುತ್ತದೆ. (ಆದಿಕಾಂಡ 15:1; ಕೀರ್ತನೆ 84:11) ನಮ್ಮ ನಂಬಿಕೆಯಂತೆ, ದೇವರ ಸತ್ಯತೆಯು ಸಹ ಒಂದು ದೊಡ್ಡ ರಕ್ಷಣಾತ್ಮಕ ಗುರಾಣಿಯಂತಿದ್ದು, ಅದು ಸೈತಾನನ ಅಗ್ನಿಬಾಣಗಳನ್ನು ತಡೆಯುತ್ತದೆ ಮತ್ತು ವೈರಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಹಾಯಮಾಡುತ್ತದೆ. (ಎಫೆಸ 6:16) ಅಷ್ಟುಮಾತ್ರವಲ್ಲ, ಇದು ಒಂದು ಕೋಟೆಯಂತೆ ಅಥವಾ ಅತ್ಯಧಿಕ ರಕ್ಷಣೆಯನ್ನು ನೀಡುವ ದಿಬ್ಬದಂತಿದ್ದು, ಅದರ ಹಿಂದೆ ನಾವು ಸುರಕ್ಷಿತರಾಗಿ ನಿಂತುಕೊಳ್ಳುತ್ತೇವೆ.
‘ನಾವು ಅಂಜುವುದಿಲ್ಲ’
9. ರಾತ್ರಿ ಸಮಯವು ಭಯವನ್ನುಂಟುಮಾಡುವ ಸಮಯವಾಗಿರಸಾಧ್ಯವಿದೆ ಏಕೆ, ಆದರೆ ನಾವೇಕೆ ಭಯಪಡುವುದಿಲ್ಲ?
9 ದೇವರ ಸಂರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೀರ್ತನೆಗಾರನು ಹೇಳುವುದು: “ರಾತ್ರಿಯಲ್ಲಿ ನೀನು ಭೀಕರವಾದ ಯಾವುದಕ್ಕೂ ಭಯಪಡುವುದಿಲ್ಲ, ಅಥವಾ ಹಗಲಿನಲ್ಲಿ ಹಾರಿಬರುವ ಬಾಣಕ್ಕೂ, ಅಂಧಕಾರದಲ್ಲಿ ಸಂಚರಿಸುವ ರೋಗಕ್ಕೂ, ಮಧ್ಯಾಹ್ನದಲ್ಲಿ ಕೊಳ್ಳೆಹೊಡೆಯುವ ನಾಶನಕ್ಕೂ ಹೆದರುವುದಿಲ್ಲ.” (ಕೀರ್ತನೆ 91:5, 6, NW) ಕತ್ತಲೆಯ ಮರೆಯಲ್ಲಿ ಅನೇಕ ಕೆಟ್ಟ ಕೃತ್ಯಗಳು ನಡೆಸಲ್ಪಡುವುದರಿಂದ, ರಾತ್ರಿ ಸಮಯವು ಭಯವನ್ನುಂಟುಮಾಡುವ ಸಮಯವಾಗಿರಸಾಧ್ಯವಿದೆ. ಅದೇ ರೀತಿಯಲ್ಲಿ, ಇಂದು ಭೂಮಿಯನ್ನು ಆವರಿಸಿರುವ ಆತ್ಮಿಕ ಅಂಧಕಾರದ ನಡುವೆ, ನಮ್ಮ ಆತ್ಮಿಕತೆಯನ್ನು ಹಾಳುಮಾಡುವ ಮತ್ತು ನಮ್ಮ ಸಾರುವ ಕೆಲಸವನ್ನು ನಿಲ್ಲಿಸುವ ಪ್ರಯತ್ನದಿಂದ ನಮ್ಮ ವೈರಿಗಳು ಅನೇಕವೇಳೆ ವಂಚನಾತ್ಮಕ ಕೃತ್ಯಗಳನ್ನು ಅವಲಂಬಿಸುತ್ತಾರೆ. ಆದರೆ ‘ರಾತ್ರಿಯಲ್ಲಿ ನಡೆಯುವ ಯಾವುದಕ್ಕೂ ನಾವು ಭಯಪಡುವುದಿಲ್ಲ,’ ಏಕೆಂದರೆ ಯೆಹೋವನು ನಮ್ಮ ಕಾವಲುಕಾಯುತ್ತಿದ್ದಾನೆ.—ಕೀರ್ತನೆ 64:1, 2; 121:4; ಯೆಶಾಯ 60:2.
10. (ಎ) ‘ಹಗಲಿನಲ್ಲಿ ಹಾರಿಬರುವ ಬಾಣಗಳು’ ಏನನ್ನು ಸೂಚಿಸುತ್ತಿರುವಂತೆ ತೋರುತ್ತದೆ, ಮತ್ತು ನಾವು ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸುತ್ತೇವೆ? (ಬಿ) “ಅಂಧಕಾರದಲ್ಲಿ ಸಂಚರಿಸುವ ರೋಗ”ದ ಸ್ವರೂಪ ಲಕ್ಷಣವೇನು, ಮತ್ತು ನಾವು ಅದಕ್ಕೆ ಏಕೆ ಹೆದರುವುದಿಲ್ಲ?
10 ‘ಹಗಲಿನಲ್ಲಿ ಹಾರಿಬರುವ ಬಾಣಗಳು’ ವಾಗ್ದಾಳಿಯನ್ನು ಸೂಚಿಸುತ್ತಿರುವಂತೆ ತೋರುತ್ತದೆ. (ಕೀರ್ತನೆ 64:3-5; 94:20) ಸತ್ಯಭರಿತ ಮಾಹಿತಿಯನ್ನು ತಿಳಿಯಪಡಿಸುವುದರಲ್ಲಿ ನಾವು ಎಡೆಬಿಡದೆ ಮುಂದುವರಿಯುವಾಗ, ನಮ್ಮ ಪವಿತ್ರ ಸೇವೆಗೆ ತೋರಿಸಲ್ಪಡುವ ಅಂತಹ ಸಾರ್ವಜನಿಕ ವಿರೋಧವು ನಿಷ್ಫಲವಾಗಿಬಿಡುತ್ತದೆ. ಅಷ್ಟುಮಾತ್ರವಲ್ಲ, “ಅಂಧಕಾರದಲ್ಲಿ ಸಂಚರಿಸುವ ರೋಗ”ಕ್ಕೂ ನಾವು ಹೆದರುವುದಿಲ್ಲ. ಇದು ಒಂದು ಸಾಂಕೇತಿಕ ರೋಗವಾಗಿದ್ದು, ಸೈತಾನನ ಅಧಿಕಾರದ ಕೆಳಗೆ ನೈತಿಕವಾಗಿಯೂ ಧಾರ್ಮಿಕವಾಗಿಯೂ ವ್ಯಾಧಿಗ್ರಸ್ತ ಸ್ಥಿತಿಯಲ್ಲಿರುವ ಈ ಲೋಕದ ಕತ್ತಲೆಯ ಮಧ್ಯೆ ಹುಟ್ಟಿಕೊಳ್ಳುತ್ತದೆ. (1 ಯೋಹಾನ 5:19) ಇದು ಮನಸ್ಸಿಗೆ ಹಾಗೂ ಹೃದಯಕ್ಕೆ ಒಂದು ಮಾರಕ ಸ್ಥಿತಿಯನ್ನು ಉಂಟುಮಾಡುತ್ತದೆ, ಹಾಗೂ ಜನರು ಯೆಹೋವನ ಕುರಿತು, ಆತನ ಉದ್ದೇಶಗಳ ಕುರಿತು ಮತ್ತು ಆತನ ಪ್ರೀತಿಯ ಏರ್ಪಾಡುಗಳ ಕುರಿತು ಅಜ್ಞಾನಿಗಳಾಗಿರುವಂತೆ ಮಾಡುತ್ತದೆ. (1 ತಿಮೊಥೆಯ 6:4) ಈ ಅಂಧಕಾರದ ನಡುವೆಯೂ ನಾವು ಹೆದರುವುದಿಲ್ಲ, ಏಕೆಂದರೆ ನಾವು ಬೇಕಾದಷ್ಟು ಆತ್ಮಿಕ ಬೆಳಕಿನಲ್ಲಿ ಆನಂದಿಸುತ್ತೇವೆ.—ಕೀರ್ತನೆ 43:3, NW.
11. ‘ಮಧ್ಯಾಹ್ನ ಕೊಳ್ಳೆಯನ್ನು’ ಅನುಭವಿಸುವವರಿಗೆ ಏನು ಸಂಭವಿಸುತ್ತದೆ?
11 ‘ಮಧ್ಯಾಹ್ನದಲ್ಲಿ ಕೊಳ್ಳೆಹೊಡೆಯುವ ನಾಶನವು’ ಸಹ ನಮ್ಮನ್ನು ಹೆದರಿಸುವುದಿಲ್ಲ. “ಮಧ್ಯಾಹ್ನ”ವು, ಲೋಕವು ಯಾವುದನ್ನು ಜ್ಞಾನೋದಯ ಎಂದು ಕರೆಯುತ್ತದೋ ಅದನ್ನು ಸೂಚಿಸಬಹುದು. ಅದರ ಪ್ರಾಪಂಚಿಕ ದೃಷ್ಟಿಕೋನಗಳಿಗೆ ಬಲಿಬೀಳುವವರು ಆತ್ಮಿಕ ನಾಶನವನ್ನು ಅನುಭವಿಸುತ್ತಾರೆ. (1 ತಿಮೊಥೆಯ 6:20, 21) ನಾವು ಧೈರ್ಯದಿಂದ ರಾಜ್ಯದ ಸಂದೇಶವನ್ನು ಪ್ರಕಟಿಸುವಾಗ, ನಮ್ಮ ವೈರಿಗಳಲ್ಲಿ ಯಾರಿಗೂ ನಾವು ಅಂಜುವುದಿಲ್ಲ; ಏಕೆಂದರೆ ಯೆಹೋವನೇ ನಮ್ಮ ಸಂರಕ್ಷಕನಾಗಿದ್ದಾನೆ.—ಕೀರ್ತನೆ 64:1; ಜ್ಞಾನೋಕ್ತಿ 3:25, 26.
12. ಯಾರ ಪಕ್ಕದಲ್ಲಿ ಸಾವಿರಾರು ಮಂದಿ ‘ಸತ್ತು ಬಿದ್ದಿದ್ದಾರೆ,’ ಮತ್ತು ಯಾವ ರೀತಿಯಲ್ಲಿ?
12 ಕೀರ್ತನೆಗಾರನು ಮುಂದುವರಿಸುವುದು: “ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತು ಬಿದ್ದರೂ ನಿನಗೇನೂ ತಟ್ಟದು. ನೀನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ಪ್ರತಿದಂಡನೆಯುಂಟೆಂಬದಕ್ಕೆ ಸಾಕ್ಷಿಯಾಗಿರುವಿಯಷ್ಟೆ.” (ಕೀರ್ತನೆ 91:7, 8) ಯೆಹೋವನನ್ನು ತಮ್ಮ ಆಶ್ರಯದುರ್ಗವಾಗಿ ಮಾಡಿಕೊಳ್ಳಲು ತಪ್ಪಿಹೋದದ್ದರ ಕಾರಣ, ನಮ್ಮ ‘ಮಗ್ಗುಲಲ್ಲೇ’ ಅನೇಕರು ಆತ್ಮಿಕ ಮರಣದಲ್ಲಿ ‘ಸತ್ತು ಬೀಳುವರು.’ ವಾಸ್ತವದಲ್ಲಿ, ಇಂದಿನ ಆತ್ಮಿಕ ಇಸ್ರಾಯೇಲ್ಯರ “ಬಲಗಡೆಯಲ್ಲಿ ಹತ್ತುಸಾವಿರ” ಮಂದಿ ಸತ್ತು ಬಿದ್ದಿದ್ದಾರೆ. (ಗಲಾತ್ಯ 6:16) ಆದರೆ ನಾವು ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಅವರ ಸಮರ್ಪಿತ ಸಂಗಡಿಗರಾಗಿರಲಿ, ದೇವರ “ಗುಪ್ತ ಸ್ಥಳದಲ್ಲಿ” ಸುರಕ್ಷಿತರಾಗಿದ್ದೇವೆ. ನಾವು ವಾಣಿಜ್ಯ, ಧಾರ್ಮಿಕ ಹಾಗೂ ಇತರ ವಿಧಗಳಲ್ಲಿ ತೊಂದರೆಯನ್ನು ಕೊಯ್ಯುತ್ತಿರುವ ‘ದುಷ್ಟರ ಪ್ರತಿದಂಡನೆಗೆ ಸಾಕ್ಷಿಗಳಾಗಿದ್ದೇವಷ್ಟೇ.’—ಗಲಾತ್ಯ 6:7.
‘ಯಾವ ವಿಪತ್ತೂ ನಮಗೆ ಸಂಭವಿಸದು’
13. ಯಾವ ವಿಪತ್ತುಗಳು ನಮ್ಮ ಮೇಲೆ ಬರುವುದಿಲ್ಲ, ಮತ್ತು ಏಕೆ?
13 ಈ ಲೋಕದ ಭದ್ರತೆಯು ಕುಸಿಯುತ್ತಿರುವುದಾದರೂ, ನಾವು ದೇವರಿಗೆ ಪ್ರಥಮ ಸ್ಥಾನವನ್ನು ನೀಡುತ್ತೇವೆ ಮತ್ತು ಕೀರ್ತನೆಗಾರನ ಈ ಮಾತುಗಳಿಂದ ಧೈರ್ಯವನ್ನು ಪಡೆದುಕೊಳ್ಳುತ್ತೇವೆ: “ಯಾಕೆಂದರೆ ನೀನು ಹೇಳಿದ್ದು: ‘ಯೆಹೋವನು ನನ್ನ ಆಶ್ರಯದುರ್ಗವಾಗಿದ್ದಾನೆ,’ ನೀನು ಮಹೋನ್ನತನನ್ನೇ ನಿನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದೀ; ಯಾವುದೇ ವಿಪತ್ತೂ ನಿನಗೆ ಸಂಭವಿಸುವುದಿಲ್ಲ, ಮತ್ತು ಒಂದು ಉಪದ್ರವವೂ ನಿನ್ನ ಗುಡಾರದ ಸಮೀಪಕ್ಕೆ ಬರದು.” (ಕೀರ್ತನೆ 91:9, 10, NW) ಹೌದು, ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ. ಆದರೂ, ನಾವು ಮಹೋನ್ನತ ದೇವರನ್ನು ‘ನಮ್ಮ ವಾಸಸ್ಥಾನವಾಗಿಯೂ’ ಮಾಡಿಕೊಳ್ಳುತ್ತೇವೆ ಮತ್ತು ಅಲ್ಲಿ ನಾವು ಸುರಕ್ಷೆಯನ್ನು ಕಂಡುಕೊಳ್ಳುತ್ತೇವೆ. ನಾವು ಯೆಹೋವನನ್ನು ವಿಶ್ವದ ಪರಮಾಧಿಕಾರಿಯೆಂದು ಕೊಂಡಾಡುತ್ತೇವೆ, ನಮ್ಮ ಸುರಕ್ಷೆಯ ಮೂಲನೋಪಾದಿ ಆತನಲ್ಲಿ ‘ವಾಸಿಸುತ್ತೇವೆ’ ಮತ್ತು ಆತನ ರಾಜ್ಯದ ಸುವಾರ್ತೆಯನ್ನು ಸಾರುತ್ತೇವೆ. (ಮತ್ತಾಯ 24:14) ಆದುದರಿಂದ, ‘ಯಾವ ವಿಪತ್ತೂ ನಮಗೆ ಸಂಭವಿಸುವುದಿಲ್ಲ.’ ಇದೇ ಕೀರ್ತನೆಯಲ್ಲಿ ಈ ಮುಂಚೆ ವರ್ಣಿಸಲ್ಪಟ್ಟಿರುವ ಯಾವ ವಿಪತ್ತುಗಳೂ ನಮ್ಮ ಮೇಲೆ ಬರುವುದಿಲ್ಲ. ಭೂಕಂಪಗಳು, ತುಫಾನುಗಳು, ಪ್ರವಾಹಗಳು, ಬರಗಳು, ಮತ್ತು ಯುದ್ಧದ ಪರಿಣಾಮಗಳಂತಹ ವಿಪತ್ತುಗಳನ್ನು ಇತರರೊಂದಿಗೆ ನಾವು ಅನುಭವಿಸುವಾಗಲೂ, ಇವು ನಮ್ಮ ನಂಬಿಕೆಯನ್ನು ಅಥವಾ ನಮ್ಮ ಆತ್ಮಿಕ ಭದ್ರತೆಯನ್ನು ಹಾಳುಮಾಡುವುದಿಲ್ಲ.
14. ಯೆಹೋವನ ಸೇವಕರೋಪಾದಿ, ಮಾರಕ ಉಪದ್ರವಗಳಿಂದ ನಾವು ಏಕೆ ಬಾಧಿತರಾಗುವುದಿಲ್ಲ?
14 ಅಭಿಷಿಕ್ತ ಕ್ರೈಸ್ತರು, ಈ ವಿಷಯಗಳ ವ್ಯವಸ್ಥೆಯಿಂದ ಪ್ರತ್ಯೇಕವಾಗಿರುವ ಗುಡಾರಗಳಲ್ಲಿ ವಾಸಿಸುತ್ತಿರುವ ಪರದೇಶಸ್ಥರಂತಿದ್ದಾರೆ. (1 ಪೇತ್ರ 2:11) ‘ಒಂದು ಉಪದ್ರವವೂ ಅವರ ಗುಡಾರದ ಸಮೀಪಕ್ಕೆ ಬರುವುದಿಲ್ಲ.’ ಸ್ವರ್ಗೀಯ ನಿರೀಕ್ಷೆಯುಳ್ಳವರಾಗಿರಲಿ ಭೂನಿರೀಕ್ಷೆಯುಳ್ಳವರಾಗಿರಲಿ, ನಾವು ಈ ಲೋಕದ ಭಾಗವಾಗಿರುವುದಿಲ್ಲ. ಮತ್ತು ಅನೈತಿಕತೆ, ಪ್ರಾಪಂಚಿಕತೆ, ಸುಳ್ಳು ಧರ್ಮ ಮತ್ತು “ಮೃಗ” ಹಾಗೂ ಅದರ “ವಿಗ್ರಹ”ವಾಗಿರುವ ವಿಶ್ವ ಸಂಸ್ಥೆಯ ಆರಾಧನೆಯಂತಹ ಆತ್ಮಿಕವಾಗಿ ಮಾರಕವಾಗಿರುವ ಉಪದ್ರವಗಳಿಂದ ನಾವು ಎಂದೂ ಬಾಧಿತರಾಗುವುದಿಲ್ಲ.—ಪ್ರಕಟನೆ 9:20, 21; 13:1-18; ಯೋಹಾನ 17:16.
15. ಯಾವ ವಿಷಯಗಳಲ್ಲಿ ನಾವು ದೇವದೂತರ ಸಹಾಯವನ್ನು ಅನುಭವಿಸುತ್ತೇವೆ?
15 ನಾವು ಅನುಭವಿಸುವ ಸುರಕ್ಷೆಯ ಕುರಿತು ಕೀರ್ತನೆಗಾರನು ಕೂಡಿಸುತ್ತಾ ಹೇಳಿದ್ದು: “ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು [ಯೆಹೋವನು] ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು. ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.” (ಕೀರ್ತನೆ 91:11, 12) ನಮ್ಮನ್ನು ಸಂರಕ್ಷಿಸುವ ಅಧಿಕಾರವು ದೇವದೂತರಿಗೆ ಕೊಡಲ್ಪಟ್ಟಿದೆ. (2 ಅರಸುಗಳು 6:17; ಕೀರ್ತನೆ 34:7-9; 104:4; ಮತ್ತಾಯ 26:53; ಲೂಕ 1:19) ಅವರು ‘ನಾವು ಹೋಗುವಲ್ಲೆಲ್ಲಾ’ ನಮ್ಮನ್ನು ಕಾಯುವರು. (ಮತ್ತಾಯ 18:10) ರಾಜ್ಯ ಘೋಷಕರೋಪಾದಿ ನಾವು ದೇವದೂತರ ಮಾರ್ಗದರ್ಶನ ಹಾಗೂ ಸಂರಕ್ಷಣೆಯಲ್ಲಿ ಆನಂದಿಸುತ್ತೇವೆ ಮತ್ತು ಆತ್ಮಿಕವಾಗಿ ಎಡವಿ ಬೀಳುವುದಿಲ್ಲ. (ಪ್ರಕಟನೆ 14:6, 7) ನಮ್ಮ ಕೆಲಸದ ವಿರುದ್ಧ ಬರುವ ನಿಷೇಧಗಳಂತಹ ‘ಕಲ್ಲುಗಳು’ ಸಹ, ನಾವು ಎಡವುವಂತೆ ಹಾಗೂ ದೈವಿಕ ಅನುಗ್ರಹವನ್ನು ಕಳೆದುಕೊಳ್ಳುವಂತೆ ಮಾಡಿಲ್ಲ.
16. ‘ಪ್ರಾಯದ ಸಿಂಹದಿಂದ’ ಹಾಗೂ ‘ನಾಗರಹಾವಿನಿಂದ’ ಬರುವಂತಹ ಆಕ್ರಮಣಗಳು ಹೇಗೆ ಭಿನ್ನವಾಗಿರುತ್ತವೆ, ಮತ್ತು ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತೇವೆ?
16 ಕೀರ್ತನೆಗಾರನು ಮುಂದುವರಿಸುವುದು: “ಪ್ರಾಯದ ಸಿಂಹ ಹಾಗೂ ನಾಗರಹಾವಿನ ಮೇಲೆ ನೀನು ನಡೆಯುವಿ; ಕೇಸರವುಳ್ಳ ಪ್ರಾಯದ ಸಿಂಹವನ್ನು ಹಾಗೂ ದೊಡ್ಡ ಹಾವನ್ನೂ ನೀನು ತುಳಿದುಬಿಡುವಿ.” (ಕೀರ್ತನೆ 91:13, NW) ಪ್ರಾಯದ ಸಿಂಹವೊಂದು ನೇರವಾದ ರೀತಿಯಲ್ಲಿ ಮುಂದಾಕ್ರಮಣ ಮಾಡುವಂತೆಯೇ, ನಮ್ಮ ವೈರಿಗಳಲ್ಲಿ ಕೆಲವರು ನಮ್ಮ ಸಾರುವ ಕೆಲಸವನ್ನು ನಿಲ್ಲಿಸಲಿಕ್ಕಾಗಿ ರೂಪಿಸಲ್ಪಟ್ಟ ನಿಯಮಗಳನ್ನು ಜಾರಿಗೆ ತರುವ ಮೂಲಕ ತಮ್ಮ ವಿರೋಧವನ್ನು ಬಹಿರಂಗವಾಗಿ ತೋರ್ಪಡಿಸುತ್ತಾರೆ. ಆದರೆ, ಒಂದು ಗುಪ್ತವಾದ ಸ್ಥಳದಿಂದ ಹೊಡೆತ ನೀಡುವ ನಾಗರಹಾವಿನಂತಹ ಅನಿರೀಕ್ಷಿತ ಆಕ್ರಮಣಗಳು ಸಹ ನಮ್ಮ ಮೇಲೆ ಮಾಡಲ್ಪಡುತ್ತವೆ. ಗುಪ್ತವಾಗಿ ಪಾದ್ರಿಗಳು ಕೆಲವೊಮ್ಮೆ ಶಾಸನಕಾರರು, ನ್ಯಾಯಾಧೀಶರು ಹಾಗೂ ಇನ್ನಿತರರ ಮೂಲಕ ನಮ್ಮ ಮೇಲೆ ಆಕ್ರಮಣಮಾಡುತ್ತಾರೆ. ಆದರೆ ಯೆಹೋವನ ಬೆಂಬಲದಿಂದ ನಾವು ಸಮಾಧಾನಕರ ರೀತಿಯಲ್ಲಿ ಕೋರ್ಟುಗಳ ಮೂಲಕ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಮತ್ತು ಹೀಗೆ ‘ಸುವಾರ್ತೆಯ ಪರವಾಗಿ ಉತ್ತರ ಹೇಳಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸುತ್ತೇವೆ.’—ಫಿಲಿಪ್ಪಿ 1:7, NW; ಕೀರ್ತನೆ 94:14, 20-22.
17. “ಕೇಸರವುಳ್ಳ ಪ್ರಾಯದ ಸಿಂಹವನ್ನು” ನಾವು ಹೇಗೆ ತುಳಿದುಬಿಡುತ್ತೇವೆ?
17 ಕೀರ್ತನೆಗಾರನು “ಕೇಸರವುಳ್ಳ ಪ್ರಾಯದ ಸಿಂಹವನ್ನು ಹಾಗೂ ದೊಡ್ಡ ಹಾವನ್ನೂ” ತುಳಿದುಬಿಡುವುದರ ಕುರಿತು ಮಾತಾಡುತ್ತಾನೆ. ಪ್ರಾಯದ ಸಿಂಹವೊಂದು ತುಂಬ ಉಗ್ರವಾಗಿರಸಾಧ್ಯವಿದೆ ಮತ್ತು ಒಂದು ದೊಡ್ಡ ಹಾವು ಭಾರಿ ಗಾತ್ರದ ಉರಗವಾಗಿರಸಾಧ್ಯವಿದೆ. (ಯೆಶಾಯ 31:4) ನೇರವಾದ ಮುಂದಾಕ್ರಮಣವನ್ನು ಮಾಡುವಾಗ ಕೇಸರವುಳ್ಳ ಪ್ರಾಯದ ಸಿಂಹವು ಎಷ್ಟೇ ಉಗ್ರವಾದದ್ದಾಗಿರಲಿ, ನಾವು ಸಿಂಹದಂತಹ ಮನುಷ್ಯರಿಗೆ ಅಥವಾ ಸಂಸ್ಥೆಗಳಿಗೆ ಬದಲಾಗಿ ದೇವರಿಗೆ ವಿಧೇಯರಾಗುವ ಮೂಲಕ ಅದನ್ನು ಸಾಂಕೇತಿಕವಾಗಿ ತುಳಿದುಬಿಡುತ್ತೇವೆ. (ಅ. ಕೃತ್ಯಗಳು 5:29) ಆದುದರಿಂದ ಭೀತಿಹುಟ್ಟಿಸುವಂತಹ “ಸಿಂಹ”ವು ನಮಗೆ ಯಾವುದೇ ರೀತಿಯ ಆತ್ಮಿಕ ಹಾನಿಯನ್ನು ಉಂಟುಮಾಡಲಾರದು.
18. ‘ದೊಡ್ಡ ಹಾವು’ ಯಾರನ್ನು ನಮ್ಮ ನೆನಪಿಗೆ ತರುತ್ತದೆ, ಮತ್ತು ಒಂದುವೇಳೆ ನಾವು ಆಕ್ರಮಣಕ್ಕೆ ತುತ್ತಾಗಿರುವುದಾದರೆ ನಾವೇನು ಮಾಡುವ ಅಗತ್ಯವಿದೆ?
18 ಗ್ರೀಕ್ ಸೆಪ್ಟ್ಯುಅಜಿಂಟ್ನಲ್ಲಿ ‘ದೊಡ್ಡ ಹಾವನ್ನು’ “ಘಟಸರ್ಪ” ಎಂದು ಕರೆಯಲಾಗಿದೆ. ಇದು ನಮಗೆ “ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ”ವನ್ನು ನೆನಪಿಗೆ ತರಬಹುದು. (ಪ್ರಕಟನೆ 12:7-9; ಆದಿಕಾಂಡ 3:15) ಅವನು ತನ್ನ ಬೇಟೆಪ್ರಾಣಿಯನ್ನು ಜಜ್ಜಿ ನುಂಗಿಬಿಡಲು ಸಮರ್ಥವಾಗಿರುವ ವಿಕಾರವಾದ ಉರಗದಂತಿದ್ದಾನೆ. (ಯೆರೆಮೀಯ 51:34) ಸೈತಾನನು ನಮ್ಮ ಸುತ್ತಲೂ ಸುರುಳಿ ಸುತ್ತಿಕೊಳ್ಳಲು, ಈ ಲೋಕದ ಒತ್ತಡಗಳಿಂದ ನಮ್ಮನ್ನು ಜಜ್ಜಿ ನುಂಗಲು ಪ್ರಯತ್ನಿಸುತ್ತಿರುವಾಗ, ನಾವು ಆತನ ಬಂಧನದಿಂದ ಬಿಡಿಸಿಕೊಳ್ಳೋಣ ಮತ್ತು ಈ ‘ದೊಡ್ಡ ಹಾವನ್ನು’ ತುಳಿದುಬಿಡೋಣ. (1 ಪೇತ್ರ 5:8) ಅಭಿಷಿಕ್ತ ಉಳಿಕೆಯವರು ರೋಮಾಪುರ 16:20ರ ನೆರವೇರಿಕೆಯಲ್ಲಿ ಪಾಲ್ಗೊಳ್ಳಬೇಕಾದರೆ, ಅವರು ಇದನ್ನು ಮಾಡಲೇಬೇಕಾಗಿದೆ.
ಯೆಹೋವನು ರಕ್ಷಣೆಯ ಮೂಲನಾಗಿದ್ದಾನೆ
19. ನಾವು ಯೆಹೋವನಲ್ಲಿ ಏಕೆ ಆಶ್ರಯವನ್ನು ಪಡೆದುಕೊಳ್ಳುತ್ತೇವೆ?
19 ಸತ್ಯಾರಾಧಕನ ಕುರಿತು ಕೀರ್ತನೆಗಾರನು ದೇವರನ್ನು ಪ್ರತಿನಿಧಿಸುತ್ತಾ ಹೇಳುವುದು: “ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.” (ಕೀರ್ತನೆ 91:14) ನಾನು “ಅವನನ್ನು ಉದ್ಧರಿಸುವೆನು” ಎಂಬ ವಾಕ್ಸರಣಿಯು, ಅಕ್ಷರಾರ್ಥವಾಗಿ “ನಾನು ಅವನನ್ನು ಮೇಲೇರಿಸುವೆನು,” ಅಂದರೆ ಕೈಗೆಟುಕದಂತೆ ಮಾಡುವೆನು ಎಂದರ್ಥೈಸುತ್ತದೆ. ಯೆಹೋವನ ಆರಾಧಕರೋಪಾದಿ ನಾವು ಆತನಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತೇವೆ, ಏಕೆಂದರೆ ‘ನಾವು ಆತನಲ್ಲಿ ಆಸಕ್ತರಾಗಿದ್ದೇವೆ.’ (ಮಾರ್ಕ 12:29, 30; 1 ಯೋಹಾನ 4:19) ಇದಕ್ಕೆ ಪ್ರತಿಯಾಗಿ ದೇವರು ನಮ್ಮ ವೈರಿಗಳಿಂದ ನಮ್ಮನ್ನು ‘ರಕ್ಷಿಸುತ್ತಾನೆ.’ ನಾವೆಂದಿಗೂ ಸಂಪೂರ್ಣವಾಗಿ ನಾಶಗೊಳಿಸಲ್ಪಡೆವು. ಅದಕ್ಕೆ ಬದಲಾಗಿ ನಾವು ರಕ್ಷಿಸಲ್ಪಡುವೆವು, ಏಕೆಂದರೆ ನಮಗೆ ದೇವರ ಹೆಸರು ತಿಳಿದಿದೆ ಮತ್ತು ನಂಬಿಕೆಯಿಂದ ಅದನ್ನು ಕರೆಯುತ್ತೇವೆ. (ರೋಮಾಪುರ 10:11-13) ಮತ್ತು ನಾವು ‘ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವ’ ನಿರ್ಧಾರವನ್ನು ಮಾಡಿದ್ದೇವೆ.—ಮೀಕ 4:5; ಯೆಶಾಯ 43:10-12.
20. ಕೀರ್ತನೆ 91 ಮುಕ್ತಾಯಗೊಳ್ಳುವಾಗ, ತನ್ನ ನಂಬಿಗಸ್ತ ಸೇವಕನಿಗೆ ಯೆಹೋವನು ಏನನ್ನು ವಾಗ್ದಾನಿಸುತ್ತಾನೆ?
20 ಕೀರ್ತನೆ 91 ಮುಕ್ತಾಯಗೊಳ್ಳುವಾಗ, ತನ್ನ ನಂಬಿಗಸ್ತ ಸೇವಕನ ಕುರಿತು ಯೆಹೋವನು ಹೇಳುವುದು: “ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು; ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.” (ಕೀರ್ತನೆ 91:15, 16) ನಾವು ದೇವರ ಚಿತ್ತಕ್ಕನುಸಾರ ಪ್ರಾರ್ಥನೆಯಲ್ಲಿ ಆತನನ್ನು ಕರೆಯುವುದಾದರೆ ಆತನು ಅದಕ್ಕೆ ಓಗೊಡುತ್ತಾನೆ. (1 ಯೋಹಾನ 5:13-15) ಸೈತಾನನು ಉತ್ತೇಜಿಸಿದ ಹಗೆತನದಿಂದಾಗಿ ಈಗಾಗಲೇ ನಾವು ಬಹಳಷ್ಟು ಸಂಕಟವನ್ನು ಅನುಭವಿಸಿದ್ದೇವೆ. ಆದರೂ, ‘ಇಕ್ಕಟ್ಟಿನಲ್ಲಿ ಅವನ ಹತ್ತಿರವಿರುವೆನು’ ಎಂಬ ಮಾತುಗಳು, ಭವಿಷ್ಯತ್ತಿನ ಪರೀಕ್ಷೆಗಳಿಗಾಗಿ ನಮ್ಮನ್ನು ಸಿದ್ಧಗೊಳಿಸುತ್ತವೆ ಮತ್ತು ಈ ದುಷ್ಟ ವ್ಯವಸ್ಥೆಯು ನಾಶಮಾಡಲ್ಪಡುವಾಗ ದೇವರು ನಮ್ಮನ್ನು ಪೋಷಿಸುತ್ತಾನೆ ಎಂಬ ಆಶ್ವಾಸನೆಯನ್ನು ನೀಡುತ್ತವೆ.
21. ಅಭಿಷಿಕ್ತರು ಈಗಾಗಲೇ ಹೇಗೆ ಮಹಿಮೆಗೇರಿಸಲ್ಪಟ್ಟಿದ್ದಾರೆ?
21 ಸೈತಾನನ ಕ್ರೋಧೋನ್ಮತ್ತ ವಿರೋಧದ ಮಧ್ಯೆಯೂ, “ದೀರ್ಘಾಯುಷ್ಯ”ವನ್ನು ಪಡೆದ ಬಳಿಕ, ನಮ್ಮ ನಡುವೆ ಇರುವ ಅಭಿಷಿಕ್ತರ ಪೂರ್ಣ ಸಂಖ್ಯೆಯು ಯೆಹೋವನ ಕ್ಲುಪ್ತ ಕಾಲದಲ್ಲಿ ಪರಲೋಕದಲ್ಲಿ ಮಹಿಮೆಗೇರಿಸಲ್ಪಡುವುದು. ಆದರೂ, ದೇವರ ಗಮನಾರ್ಹ ರಕ್ಷಣೆಗಳು ಅಭಿಷಿಕ್ತರಿಗೆ ಈಗಾಗಲೇ ಆತ್ಮಿಕ ಮಹಿಮೆಯನ್ನು ತಂದಿವೆ. ಮತ್ತು ಈ ಕಡೇ ದಿವಸಗಳಲ್ಲಿ ಭೂಮಿಯ ಮೇಲೆ ಯೆಹೋವನ ಸಾಕ್ಷಿಗಳೋಪಾದಿ ಮುಂದಾಳುತ್ವವನ್ನು ವಹಿಸಲು ಅವರೆಷ್ಟು ಗೌರವಾರ್ಹರು! (ಯೆಶಾಯ 43:10-12) ಯೆಹೋವನು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಿ, ತನ್ನ ಪರಿಶುದ್ಧ ನಾಮವನ್ನು ಪವಿತ್ರೀಕರಿಸುವಾಗ, ಅರ್ಮಗೆದ್ದೋನಿನಲ್ಲಾಗುವ ಆತನ ಮಹಾ ಯುದ್ಧದ ಸಮಯದಲ್ಲಿ ಆತನು ತನ್ನ ಜನರ ಪರವಾಗಿ ನಡೆಸುವ ವಿಶೇಷ ರಕ್ಷಣೆಯು ಸಂಭವಿಸುವುದು.—ಕೀರ್ತನೆ 83:18; ಯೆಹೆಜ್ಕೇಲ 38:23; ಪ್ರಕಟನೆ 16:14, 16.
22. ಯೆಹೋವನ ‘ರಕ್ಷಣೆಯನ್ನು’ ಯಾರು ನೋಡುವರು?
22 ನಾವು ಅಭಿಷಿಕ್ತ ಕ್ರೈಸ್ತರೇ ಆಗಿರಲಿ ಅಥವಾ ಅವರ ಸಮರ್ಪಿತ ಸಂಗಡಿಗರೇ ಆಗಿರಲಿ, ರಕ್ಷಣೆಗಾಗಿ ನಾವು ದೇವರ ಕಡೆಗೆ ನೋಡುತ್ತೇವೆ. “ಯೆಹೋವನ ಆಗಮನದ ಭಯಂಕರವಾದ ಮಹಾದಿನವು” ಬರುವಾಗ, ನಿಷ್ಠೆಯಿಂದ ದೇವರ ಸೇವೆಮಾಡುತ್ತಿರುವವರು ರಕ್ಷಿಸಲ್ಪಡುವರು. (ಯೋವೇಲ 2:30-32) ನಮ್ಮಲ್ಲಿ ಯಾರು ದೇವರ ನೂತನ ಲೋಕವನ್ನು ಪ್ರವೇಶಿಸಲಿರುವ, ಪಾರಾಗುವವರ ‘ಮಹಾಸಮೂಹವನ್ನು’ ರಚಿಸುತ್ತೇವೋ ಅವರು ಮತ್ತು ಅಂತಿಮ ಪರೀಕ್ಷೆಯ ಸಮಯದಲ್ಲಿ ನಂಬಿಗಸ್ತರಾಗಿ ಉಳಿಯುತ್ತೇವೋ ಅವರು, ಆತನಿಂದ ‘ದೀರ್ಘಾಯುಷ್ಯವನ್ನು’ ಪಡೆದವರಾಗಿ ಅಂದರೆ ಅಂತ್ಯವೇ ಇಲ್ಲದ ಜೀವನವನ್ನು ಪಡೆದವರಾಗಿ ‘ತೃಪ್ತಿಗೊಳ್ಳುವೆವು.’ ಅನೇಕಾನೇಕ ಜನರನ್ನು ಸಹ ಆತನು ಪುನರುತ್ಥಾನಗೊಳಿಸುವನು. (ಪ್ರಕಟನೆ 7:9; 20:7-15) ಯೇಸು ಕ್ರಿಸ್ತನ ಮೂಲಕ ನಾವು ‘ರಕ್ಷಣೆಯನ್ನು’ ನೋಡುವಂತೆ ಮಾಡುವುದರಲ್ಲಿ ಯೆಹೋವನು ಅತ್ಯಧಿಕವಾಗಿ ಆನಂದಿಸುತ್ತಾನೆ ಎಂಬುದಂತೂ ನಿಶ್ಚಯ. (ಕೀರ್ತನೆ 3:8) ಇಂತಹ ಮಹಾನ್ ಪ್ರತೀಕ್ಷೆಗಳು ನಮ್ಮ ಮುಂದಿರುವಾಗ, ದೇವರ ಮಹಿಮೆಗಾಗಿ ನಮ್ಮ ದಿನಗಳನ್ನು ಎಣಿಸುವುದರಲ್ಲಿ ಸಹಾಯಮಾಡುವಂತೆ ನಾವು ಆತನೆಡೆಗೆ ನೋಡುತ್ತಾ ಇರೋಣ. ನಮ್ಮ ನಡೆನುಡಿಗಳ ಮುಲಕ ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ ಎಂಬುದನ್ನು ರುಜುಪಡಿಸುತ್ತಾ ಮುಂದುವರಿಯೋಣ.
[ಪಾದಟಿಪ್ಪಣಿ]
a ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಬರಹಗಾರರು, ಮೆಸ್ಸೀಯ ಸಂಬಂಧಿತ ಪ್ರವಾದನೆಯ ದೃಷ್ಟಿಕೋನದಿಂದ 91ನೆಯ ಕೀರ್ತನೆಯನ್ನು ಚರ್ಚಿಸಲಿಲ್ಲ. ನಿಶ್ಚಯವಾಗಿಯೂ, ಮನುಷ್ಯನಾಗಿದ್ದ ಯೇಸು ಕ್ರಿಸ್ತನಿಗೆ ಯೆಹೋವನು ಆಶ್ರಯದುರ್ಗವಾಗಿದ್ದನು ಮತ್ತು ಬಲವಾದ ಕೋಟೆಯಾಗಿದ್ದನು; ಈ “ಅಂತ್ಯಕಾಲ”ದಲ್ಲಿ ಆತನು ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಮತ್ತು ಒಂದು ಗುಂಪಿನೋಪಾದಿ ಅವರ ಸಮರ್ಪಿತ ಸಂಗಡಿಗರಿಗೆ ಆಶ್ರಯದುರ್ಗವಾಗಿದ್ದಾನೆ.—ದಾನಿಯೇಲ 12:4.
ನೀವು ಹೇಗೆ ಉತ್ತರಿಸುವಿರಿ?
• “ಪರಾತ್ಪರನ ಗುಪ್ತ ಸ್ಥಳ”ವು ಏನಾಗಿದೆ?
• ನಾವೇಕೆ ಭಯಪಡುವುದಿಲ್ಲ?
• ಹೇಗೆ ನಮಗೆ ‘ಯಾವ ವಿಪತ್ತೂ ಸಂಭವಿಸುವುದಿಲ್ಲ?’
• ಯೆಹೋವನು ನಮ್ಮ ರಕ್ಷಣೆಯ ಮೂಲನಾಗಿದ್ದಾನೆ ಎಂದು ನಾವೇಕೆ ಹೇಳಸಾಧ್ಯವಿದೆ?
[ಪುಟ 17ರಲ್ಲಿರುವ ಚಿತ್ರ]
ಯೆಹೋವನ ಸತ್ಯತೆಯು ಹೇಗೆ ನಮಗೆ ಒಂದು ದೊಡ್ಡ ಗುರಾಣಿಯಾಗಿದೆ ಎಂಬುದು ನಿಮಗೆ ಗೊತ್ತೋ?
[ಪುಟ 18ರಲ್ಲಿರುವ ಚಿತ್ರಗಳು]
ಅನಿರೀಕ್ಷಿತ ಆಕ್ರಮಣ ಮತ್ತು ಬಹಿರಂಗವಾದ ವಿರೋಧದ ನಡುವೆಯೂ ತನ್ನ ಸೇವಕರು ತಮ್ಮ ಶುಶ್ರೂಷೆಯನ್ನು ನಡೆಸುವಂತೆ ಯೆಹೋವನು ಅವರಿಗೆ ಸಹಾಯಮಾಡುತ್ತಾನೆ
[ಕೃಪೆ]
ನಾಗರಹಾವು: A. N. Jagannatha Rao, Trustee, Madras Snake Park Trust