ಸಮಗ್ರತೆಯ ಮಾರ್ಗದಲ್ಲಿ ನಡೆಯಿರಿ
“ನಾನಾದರೋ, ನನ್ನ ಸಮಗ್ರತೆಯಲ್ಲೇ ನಡೆಯುವೆನು.”—ಕೀರ್ತನೆ 26:11, Nw.
ಏದೆನ್ ತೋಟದಲ್ಲಿ ಸೈತಾನನು ದಂಗೆಯೆದ್ದಾಗ, ತನ್ನೆಲ್ಲಾ ಸೃಷ್ಟಿಜೀವಿಗಳ ಮೇಲೆ ದೇವರಿಗಿರುವ ಪರಮಾಧಿಕಾರದ ಹಕ್ಕಿನ ವಿಷಯದಲ್ಲಿ ಅವನು ಸಾರ್ವತ್ರಿಕ ವಿವಾದಾಂಶವನ್ನು ಎಬ್ಬಿಸಿದನು. ಸಮಯಾನಂತರ, ದೇವರ ಸೇವೆಯನ್ನು ಮಾಡುವುದು ಮಾನವರಿಗೆ ಎಷ್ಟರ ತನಕ ಪ್ರಯೋಜನವನ್ನು ತರುತ್ತದೋ ಅಷ್ಟರ ತನಕ ಮಾತ್ರ ಅವರು ಆತನ ಸೇವೆಮಾಡುತ್ತಾರೆ ಎಂದು ಅವನು ಪ್ರಶ್ನೆಯೊಡ್ಡಿದನು. (ಯೋಬ 1:9-11; 2:4) ಹೀಗೆ, ಮನುಷ್ಯನ ಸಮಗ್ರತೆ ಅಥವಾ ಯಥಾರ್ಥತ್ವವು ಯೆಹೋವನ ವಿಶ್ವ ಪರಮಾಧಿಕಾರದ ವಾದಾಂಶದಲ್ಲಿ ಒಂದು ಪ್ರಮುಖ ಭಾಗವಾಗಿ ಪರಿಣಮಿಸಿದೆ.
2 ಯೆಹೋವನ ಪರಮಾಧಿಕಾರವು ಆತನ ಸೃಷ್ಟಿಜೀವಿಗಳ ಸಮಗ್ರತೆಯ ಮೇಲೆ ಹೊಂದಿಕೊಂಡಿಲ್ಲದಿರುವುದಾದರೂ, ಈ ವಾದಾಂಶದಲ್ಲಿ ತಮ್ಮ ಸ್ಥಾನವೇನು ಎಂಬುದನ್ನು ಮಾನವರು ಹಾಗೂ ದೇವರ ಆತ್ಮಪುತ್ರರು ತೋರ್ಪಡಿಸಬಲ್ಲರು. ಹೇಗೆ? ಸಮಗ್ರತೆಯ ಮಾರ್ಗವನ್ನು ಅನುಸರಿಸುವ ಅಥವಾ ಅನುಸರಿಸದಿರುವ ಆಯ್ಕೆಯನ್ನು ಮಾಡುವ ಮೂಲಕವೇ. ಹೀಗಿರುವುದರಿಂದ, ಒಬ್ಬನ ಅಥವಾ ಒಬ್ಬಳ ಕುರಿತು ತೀರ್ಪುಮಾಡಲು, ಪ್ರತಿಯೊಬ್ಬರ ವ್ಯಕ್ತಿಗತ ಸಮಗ್ರತೆಯು ಒಂದು ಬಲವಾದ ಆಧಾರವಾಗಿದೆ.
3 ದೃಢವಿಶ್ವಾಸದಿಂದ ಯೋಬನು ಹೀಗೆ ಹೇಳಿದನು: “[ಯೆಹೋವನು] ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!” (ಯೋಬ 31:5) “ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ [“ನನ್ನ ಸ್ವಂತ ಸಮಗ್ರತೆಯಲ್ಲೇ ನಡೆದಿದ್ದೇನೆ,” NW]. ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ” ಎಂದು ಪುರಾತನ ಇಸ್ರಾಯೇಲಿನ ರಾಜ ದಾವೀದನು ಪ್ರಾರ್ಥಿಸಿದಾಗ, ಯೆಹೋವನ ಬಳಿ ಅವನು ಪರೀಕ್ಷಿಸುವಂತೆ ಕೇಳಿಕೊಂಡದ್ದು ಸಮಗ್ರತೆಯನ್ನೇ. (ಕೀರ್ತನೆ 26:1) ನಾವು ಸಹ ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು ಎಷ್ಟು ಅತ್ಯಾವಶ್ಯಕ! ಆದರೆ ಸಮಗ್ರತೆ ಎಂದರೇನು, ಮತ್ತು ಸಮಗ್ರತೆಯಿಂದ ನಡೆಯುವುದರ ಅರ್ಥವೇನು? ಸಮಗ್ರತೆಯ ಮಾರ್ಗದಲ್ಲಿ ಉಳಿಯುವಂತೆ ನಮಗೆ ಯಾವುದು ಸಹಾಯಮಾಡುವುದು?
‘ನನ್ನ ಸಮಗ್ರತೆಯಲ್ಲೇ ನಡೆದಿದ್ದೇನೆ’
4 ಸಮಗ್ರತೆ ಎಂಬ ಪದವು, ಯಥಾರ್ಥರಾಗಿರುವುದು, ನಿರ್ದೋಷಿಗಳಾಗಿರುವುದು, ನೀತಿವಂತರಾಗಿರುವುದು ಮತ್ತು ನಿಷ್ಕಳಂಕರಾಗಿರುವ ಅರ್ಥವನ್ನು ಕೊಡುತ್ತದೆ. ಆದರೆ, ಯಾವುದು ಸರಿಯಾಗಿದೆಯೋ ಅದನ್ನು ಮಾಡುವುದಕ್ಕಿಂತಲೂ ಹೆಚ್ಚಿನದ್ದು ಸಮಗ್ರತೆಯಲ್ಲಿ ಒಳಗೂಡಿದೆ. ಅದು ನೈತಿಕ ಸ್ವಸ್ಥತೆಯಾಗಿದೆ ಅಥವಾ ದೇವರಿಗೆ ಹೃದಯದಾಳದಿಂದ ತೋರಿಸುವ ಭಕ್ತಿಯ ಪೂರ್ಣತೆ ಆಗಿದೆ. ಸೈತಾನನು ದೇವರಿಗೆ ಹೀಗೆ ಹೇಳಿದಾಗ ಅವನು ಯೋಬನ ಹೇತುಗಳನ್ನು ಪ್ರಶ್ನೆಗೆಳೆದನು: “ಆದರೆ ನಿನ್ನ ಕೈಚಾಚಿ [ಯೋಬನ] ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 2:5) ಹೀಗೆ, ಸಮಗ್ರತೆಯು ಸರಿಯಾದ ಕ್ರಿಯೆಯ ಜೊತೆಗೆ ಸರಿಯಾದ ಹೃದಯಪ್ರೇರಣೆಯನ್ನು ಅಗತ್ಯಪಡಿಸುತ್ತದೆ.
5 ಹಾಗಿದ್ದರೂ, ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಪರಿಪೂರ್ಣತೆಯನ್ನು ಅಗತ್ಯಪಡಿಸುವುದಿಲ್ಲ. ರಾಜ ದಾವೀದನು ಅಪರಿಪೂರ್ಣನಾಗಿದ್ದನು ಮತ್ತು ತನ್ನ ಜೀವಮಾನಕಾಲದಲ್ಲಿ ಅನೇಕ ಗಂಭೀರ ತಪ್ಪುಗಳನ್ನು ಮಾಡಿದನು. ಆದರೂ, ಬೈಬಲು ಅವನ ಕುರಿತು “ಹೃದಯದಲ್ಲಿ ಸಮಗ್ರತೆಯಿಂದ” ನಡೆದ ಒಬ್ಬ ಮನುಷ್ಯನು ಎಂದು ಮಾತಾಡುತ್ತದೆ. (1 ಅರಸುಗಳು 9:4, NW) ಏಕೆ? ಏಕೆಂದರೆ ದಾವೀದನು ಯೆಹೋವನನ್ನು ಪ್ರೀತಿಸಿದನು. ಅವನ ಹೃದಯವು ದೇವರಿಗೆ ದೃಢನಿಷ್ಠೆಯುಳ್ಳದ್ದಾಗಿತ್ತು. ಅವನು ಮನಃಪೂರ್ವಕವಾಗಿ ತನ್ನ ತಪ್ಪುಗಳನ್ನು ಒಪ್ಪಿಕೊಂಡನು, ತಿದ್ದುಪಾಟನ್ನು ಸ್ವೀಕರಿಸಿದನು, ಮತ್ತು ತನ್ನ ಮಾರ್ಗಗಳನ್ನು ಸರಿಪಡಿಸಿಕೊಂಡನು. ವಾಸ್ತವದಲ್ಲಿ, ದಾವೀದನ ಸಮಗ್ರತೆಯು ಅವನ ಪೂರ್ಣ ಹೃದಯದ ಭಕ್ತಿಯಲ್ಲಿ ಹಾಗೂ ತನ್ನ ದೇವರಾದ ಯೆಹೋವನಿಗಾಗಿರುವ ಅವನ ಪ್ರೀತಿಯಲ್ಲಿ ಕಂಡುಬರುತ್ತದೆ.—ಧರ್ಮೋಪದೇಶಕಾಂಡ 6:5, 6.
6 ಸಮಗ್ರತೆಯು ಮಾನವ ನಡವಳಿಕೆಯ ಒಂದು ನಿರ್ದಿಷ್ಟ ಅಂಶಕ್ಕೆ ಅಂದರೆ ಧಾರ್ಮಿಕ ಭಕ್ತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ನಮ್ಮ ಸಂಪೂರ್ಣ ಜೀವನ ರೀತಿಯನ್ನು ಆವರಿಸುತ್ತದೆ. ದಾವೀದನು ತನ್ನ ಸಮಗ್ರತೆಯಲ್ಲಿ ‘ನಡೆದನು.’ “‘ನಡೆಯುವುದು’ ಎಂಬ ಕ್ರಿಯಾಪದವು, ‘ಜೀವನಮಾರ್ಗ’ ಅಥವಾ ‘ಜೀವನ ಶೈಲಿ’ಯನ್ನು ಅರ್ಥೈಸುತ್ತದೆ” ಎಂದು ದ ನ್ಯೂ ಇಂಟರ್ಪ್ರಿಟರ್ಸ್ ಬೈಬಲ್ ಹೇಳುತ್ತದೆ. “ಸದಾಚಾರಿಗಳಾಗಿ ನಡೆಯುವವರ” ಕುರಿತಾಗಿ ಮಾತಾಡುತ್ತಾ ಕೀರ್ತನೆಗಾರನು ಹಾಡಿದ್ದು: “[ದೇವರ] ಕಟ್ಟಳೆಗಳನ್ನು ಕೈಕೊಂಡು ಸಂಪೂರ್ಣಮನಸ್ಸಿನಿಂದ ಆತನನ್ನು ಹುಡುಕುವವರು ಭಾಗ್ಯವಂತರು. ಅವರು ಆತನ ಮಾರ್ಗದಲ್ಲಿ ನಡೆಯುತ್ತಾರೆ; ಅನ್ಯಾಯಮಾಡುವದೇ ಇಲ್ಲ.” (ಕೀರ್ತನೆ 119:1-3) ಸಮಗ್ರತೆಯು, ದೇವರ ಚಿತ್ತವನ್ನು ಮಾಡಲು ಸತತವಾಗಿ ಪ್ರಯತ್ನಿಸುವುದು ಹಾಗೂ ಆತನ ಮಾರ್ಗದಲ್ಲಿ ನಡೆಯುವುದನ್ನು ಕೇಳಿಕೊಳ್ಳುತ್ತದೆ.
7 ಸಮಗ್ರತೆಯಲ್ಲಿ ನಡೆಯುವುದು, ಅನನುಕೂಲಕರವಾದ ಸನ್ನಿವೇಶಗಳಲ್ಲಿಯೂ ದೇವರಿಗೆ ನಿಷ್ಠೆಯಿಂದ ಅಂಟಿಕೊಂಡಿರುವುದನ್ನು ಅಗತ್ಯಪಡಿಸುತ್ತದೆ. ಪರೀಕ್ಷೆಗಳ ಕೆಳಗೆ ನಾವು ತಾಳಿಕೊಳ್ಳುವಾಗ, ವಿಪತ್ತುಗಳ ಮಧ್ಯೆಯೂ ದೃಢನಿಶ್ಚಿತರಾಗಿ ಉಳಿಯುವಾಗ, ಅಥವಾ ದುಷ್ಟ ಲೋಕದಿಂದ ಬರುವ ಪ್ರಲೋಭನೆಗಳನ್ನು ಪ್ರತಿರೋಧಿಸುವಾಗ ನಮ್ಮ ಸಮಗ್ರತೆಯು ಸುವ್ಯಕ್ತವಾಗುತ್ತದೆ. ನಾವು ಯೆಹೋವನ ‘ಮನಸ್ಸನ್ನು ಸಂತೋಷಪಡಿಸುತ್ತೇವೆ,’ ಏಕೆಂದರೆ ತನ್ನನ್ನು ದೂರುವವನಿಗೆ ಆತನು ಉತ್ತರವನ್ನು ಕೊಡಲು ಶಕ್ತನಾಗುತ್ತಾನೆ. (ಜ್ಞಾನೋಕ್ತಿ 27:11) ಹೀಗಿರುವುದರಿಂದ, ಸಕಾರಣದಿಂದಲೇ ನಾವು ಯೋಬನಂಥ ನಿರ್ಧಾರವನ್ನು ತೆಗೆದುಕೊಳ್ಳಸಾಧ್ಯವಿದೆ: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.” (ಯೋಬ 27:5) ನಾವು ಸಮಗ್ರತೆಯಲ್ಲಿ ನಡೆಯಲು ಯಾವುದು ನಮಗೆ ಸಹಾಯಮಾಡುವುದು ಎಂಬುದನ್ನು 26ನೆಯ ಕೀರ್ತನೆಯು ತೋರಿಸುತ್ತದೆ.
“ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು”
8 ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.” (ಕೀರ್ತನೆ 26:2) ಈ ವಚನದಲ್ಲಿ “ಅಂತರಿಂದ್ರಿಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, ಒಬ್ಬನ ಆಳವಾದ ಆಲೋಚನೆಗಳು ಹಾಗೂ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಮತ್ತು ಸಾಂಕೇತಿಕ ಹೃದಯವು ಇಡೀ ಆಂತರಿಕ ವ್ಯಕ್ತಿಯನ್ನು, ಅಂದರೆ ಒಬ್ಬನ ಪ್ರಚೋದನೆ, ಅನಿಸಿಕೆಗಳು, ಹಾಗೂ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ. ತನ್ನನ್ನು ಪರೀಕ್ಷಿಸುವಂತೆ ದಾವೀದನು ಯೆಹೋವನನ್ನು ಕೇಳಿಕೊಂಡಾಗ, ತನ್ನ ಆಂತರಿಕ ಆಲೋಚನೆಗಳು ಮತ್ತು ಭಾವನೆಗಳನ್ನು ಪರಿಶೋಧಿಸುವಂತೆ ಹಾಗೂ ಜಾಗ್ರತೆಯಿಂದ ಪರಿಶೀಲಿಸುವಂತೆ ಅವನು ಪ್ರಾರ್ಥಿಸಿದನು.
9 ತನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸುವಂತೆ ದಾವೀದನು ಬೇಡಿಕೊಂಡನು. ನಮ್ಮ ಆಂತರಿಕ ವ್ಯಕ್ತಿತ್ವವನ್ನು ಯೆಹೋವನು ಹೇಗೆ ಪರಿಶೋಧಿಸುತ್ತಾನೆ? ದಾವೀದನು ಹಾಡಿದ್ದು: “ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.” (ಕೀರ್ತನೆ 16:7) ಇದು ಏನನ್ನು ಅರ್ಥೈಸುತ್ತದೆ? ಇದರ ಅರ್ಥ, ದೈವಿಕ ಸಲಹೆಯು ದಾವೀದನ ಆಂತರಿಕ ಭಾಗಗಳಿಗೆ ತಲಪಿತು ಮತ್ತು ಅವನ ಮನದಾಳದ ಆಲೋಚನೆಗಳು ಹಾಗೂ ಭಾವನೆಗಳನ್ನು ಸರಿಪಡಿಸುತ್ತಾ ಅಲ್ಲಿಯೇ ಉಳಿಯಿತು ಎಂದಾಗಿದೆ. ದೇವರ ವಾಕ್ಯದಿಂದ, ಆತನ ಪ್ರತಿನಿಧಿಗಳಿಂದ, ಮತ್ತು ಆತನ ಸಂಘಟನೆಯಿಂದ ಪಡೆದುಕೊಳ್ಳುವ ಸಲಹೆಯ ಕುರಿತು ನಾವು ಕೃತಜ್ಞತಾಭಾವದಿಂದ ಧ್ಯಾನಿಸುವುದಾದರೆ ಮತ್ತು ನಮ್ಮ ಅಂತರಾಳದಲ್ಲಿ ಅದು ಬೇರೂರುವಂತೆ ಅನುಮತಿಸುವುದಾದರೆ, ನಮ್ಮ ಆಂತರಿಕ ಆಲೋಚನೆಗಳು ಮತ್ತು ಭಾವನೆಗಳು ಸಹ ಸರಿಪಡಿಸಲ್ಪಡಸಾಧ್ಯವಿದೆ. ಈ ರೀತಿಯಲ್ಲಿ ನಮ್ಮನ್ನು ಪರಿಶೋಧಿಸುವಂತೆ ನಾವು ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸುವುದು, ಸಮಗ್ರತೆಯಲ್ಲಿ ನಡೆಯಲು ನಮಗೆ ಸಹಾಯಮಾಡುವುದು.
‘ನಿನ್ನ ಪ್ರೀತಿಪೂರ್ವಕ ದಯೆಯನ್ನು ನನ್ನ ಮುಂದೆ ಇಟ್ಟುಕೊಂಡಿದ್ದೇನೆ’
10 “ನಿನ್ನ ಕೃಪೆಯನ್ನು ನನ್ನ ದೃಷ್ಟಿಯಲ್ಲೇ [“ಪ್ರೀತಿಪೂರ್ವಕ ದಯೆಯನ್ನು ನನ್ನ ಮುಂದೆ,” NW] ಇಟ್ಟುಕೊಂಡಿದ್ದೇನೆ; ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.” (ಕೀರ್ತನೆ 26:3) ದೇವರ ಪ್ರೀತಿಪೂರ್ವಕ ದಯೆಯ ಕೃತ್ಯಗಳು ದಾವೀದನಿಗೆ ಚಿರಪರಿಚಿತವಾಗಿದ್ದವು ಮತ್ತು ಅವನು ಗಣ್ಯತಾಭಾವದಿಂದ ಅವುಗಳ ಕುರಿತು ಧ್ಯಾನಿಸಿದನು. ಅವನು ಹಾಡಿದ್ದು: “ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.” ದೇವರ “ಉಪಕಾರಗಳಲ್ಲಿ” ಒಂದನ್ನು ಜ್ಞಾಪಿಸಿಕೊಳ್ಳುತ್ತಾ ದಾವೀದನು ಮುಂದುವರಿಸಿ ಹೇಳಿದ್ದು: “ಯೆಹೋವನು ನೀತಿಯನ್ನು ಸಾಧಿಸುವವನಾಗಿ ಕುಗ್ಗಿಹೋದವರೆಲ್ಲರ [“ಮೋಸಗೊಳಿಸಲ್ಪಟ್ಟವರಿಗೆ,” NW] ನ್ಯಾಯವನ್ನು ಸ್ಥಾಪಿಸುತ್ತಾನೆ. ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.” (ಕೀರ್ತನೆ 103:2, 6, 7) ಮೋಶೆಯ ದಿನಗಳಲ್ಲಿ ಐಗುಪ್ತದವರಿಂದ ಇಸ್ರಾಯೇಲ್ಯರು ಮೋಸಕ್ಕೊಳಗಾದದ್ದರ ಕುರಿತು ದಾವೀದನು ಆಲೋಚಿಸುತ್ತಿದ್ದಿರಬಹುದು. ಹೀಗಿರುವಲ್ಲಿ, ವಿಮೋಚನೆಯ ಮಾರ್ಗಗಳ ಕುರಿತು ಯೆಹೋವನು ಮೋಶೆಗೆ ತಿಳಿಯಪಡಿಸಿದ ವಿಧದ ಕುರಿತು ಧ್ಯಾನಿಸುವುದು, ದಾವೀದನ ಹೃದಯದ ಮೇಲೆ ಪ್ರಭಾವ ಬೀರಿದ್ದಿರಬೇಕು ಮತ್ತು ದೇವರ ಸತ್ಯದಲ್ಲಿ ನಡೆಯುವ ಅವನ ನಿರ್ಧಾರವನ್ನು ಇನ್ನಷ್ಟು ಬಲಪಡಿಸಿದ್ದಿರಬೇಕು.
11 ದೇವರ ವಾಕ್ಯವನ್ನು ಕ್ರಮವಾಗಿ ಅಧ್ಯಯನಮಾಡುವುದು ಮತ್ತು ಅದರಿಂದ ಕಲಿಯುವಂಥ ವಿಷಯಗಳ ಕುರಿತು ಧ್ಯಾನಿಸುವುದು ಸಹ ಸಮಗ್ರತೆಯ ಮಾರ್ಗದಲ್ಲಿ ನಡೆಯಲು ನಮಗೆ ಸಹಾಯಮಾಡುವುದು. ಉದಾಹರಣೆಗೆ, ಪೋಟೀಫರನ ಹೆಂಡತಿಯು ಅನೈತಿಕ ಪ್ರಸ್ತಾಪವನ್ನು ಮಾಡಿದಾಗ ಯೋಸೇಫನು ಅಲ್ಲಿಂದ ಓಡಿಹೋದನೆಂಬುದನ್ನು ಜ್ಞಾಪಿಸಿಕೊಳ್ಳುವುದು, ನಮ್ಮ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಅಥವಾ ಬೇರೆಲ್ಲಿಯಾದರೂ ತದ್ರೀತಿಯ ಪ್ರಸ್ತಾಪಗಳಿಂದ ದೂರ ಓಡಿಹೋಗುವಂತೆ ನಮ್ಮನ್ನು ಉತ್ತೇಜಿಸುವುದಂತೂ ಖಂಡಿತ. (ಆದಿಕಾಂಡ 39:7-12) ಭೌತಿಕ ಸಂಪತ್ತು ಅಥವಾ ಐಹಿಕ ಜಗತ್ತಿನಲ್ಲಿ ಸ್ಥಾನಮಾನ ಹಾಗೂ ಅಧಿಕಾರಕ್ಕಾಗಿರುವ ಸುಸಂದರ್ಭಗಳಿಂದ ನಾವು ಪ್ರಲೋಭಿತರಾಗುವಲ್ಲಿ ಆಗೇನು? ಐಗುಪ್ತದ ಸಕಲ ವೈಭವಗಳನ್ನೂ ತಿರಸ್ಕರಿಸಿದಂಥ ಮೋಶೆಯ ಉದಾಹರಣೆ ನಮಗಿದೆ. (ಇಬ್ರಿಯ 11:24-26) ಯೋಬನ ತಾಳ್ಮೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಅನಾರೋಗ್ಯ ಹಾಗೂ ವಿಪತ್ತುಗಳ ನಡುವೆಯೂ ಯೆಹೋವನಿಗೆ ನಿಷ್ಠರಾಗಿ ಉಳಿಯುವ ನಮ್ಮ ನಿರ್ಧಾರವನ್ನು ಬಲಪಡಿಸಲು ನಮಗೆ ಸಹಾಯಮಾಡುವುದು ಎಂಬುದರಲ್ಲಿ ಸಂಶಯವೇ ಇಲ್ಲ. (ಯಾಕೋಬ 5:11) ಒಂದುವೇಳೆ ನಾವು ಹಿಂಸೆಗೆ ಬಲಿಯಾಗುವುದಾದರೆ ಆಗೇನು? ಆಗ, ಸಿಂಹಗಳ ಗವಿಯಲ್ಲಿ ದಾನಿಯೇಲನಿಗಾದ ಅನುಭವವನ್ನು ಜ್ಞಾಪಿಸಿಕೊಳ್ಳುವುದು ನಮ್ಮಲ್ಲಿ ಧೈರ್ಯವನ್ನು ತುಂಬಿಸುವುದು!—ದಾನಿಯೇಲ 6:16-22.
“ನಾನು ಅಸತ್ಯಸ್ವಭಾವಿಗಳ ಸಹವಾಸಮಾಡುವವನಲ್ಲ”
12 ತನ್ನ ಸಮಗ್ರತೆಯನ್ನು ಬಲಪಡಿಸಿದಂಥ ಇನ್ನೊಂದು ಅಂಶವನ್ನು ಸೂಚಿಸುತ್ತಾ ದಾವೀದನು ಹೇಳಿದ್ದು: “ನಾನು ಕುಟಿಲ [“ಅಸತ್ಯ,” NW]ಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ. ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ.” (ಕೀರ್ತನೆ 26:4, 5) ದಾವೀದನು ದುಷ್ಟರ ಸಂಗವನ್ನು ಮಾಡುತ್ತಿರಲಿಲ್ಲ. ಅವನು ದುಸ್ಸಹವಾಸವನ್ನು ದ್ವೇಷಿಸಿದನು.
13 ನಮ್ಮ ಕುರಿತಾಗಿ ಏನು? ನಾವು ಟೆಲಿವಿಷನ್ ಕಾರ್ಯಕ್ರಮಗಳು, ವಿಡಿಯೋಗಳು, ಚಲನಚಿತ್ರಗಳು, ಇಂಟರ್ನೆಟ್ ಸೈಟ್ಗಳು, ಅಥವಾ ಇತರ ಮಾಧ್ಯಮಗಳ ಮೂಲಕ ಅಸತ್ಯಸ್ವಭಾವಿಗಳೊಂದಿಗೆ ಸಹವಾಸಮಾಡುತ್ತೇವೋ? ನಾವು ಕಪಟಿಗಳಿಂದ ದೂರ ಇರುತ್ತೇವೋ? ಶಾಲೆಯಲ್ಲಿ ಅಥವಾ ನಮ್ಮ ಉದ್ಯೋಗದ ಸ್ಥಳದಲ್ಲಿ ಕೆಲವರು ವಂಚನಾತ್ಮಕ ಉದ್ದೇಶಗಳಿಗಾಗಿ ನಮ್ಮೊಂದಿಗೆ ಸ್ನೇಹಸಂಬಂಧವನ್ನು ಬೆಳೆಸಬಹುದು. ದೇವರ ಸತ್ಯದಲ್ಲಿ ನಡೆಯದವರೊಂದಿಗೆ ನಿಕಟ ಸಂಬಂಧಗಳನ್ನು ಬೆಸೆಯಲು ನಾವು ನಿಜವಾಗಿಯೂ ಇಷ್ಟಪಡುತ್ತೇವೋ? ಧರ್ಮಭ್ರಷ್ಟರು ತಾವು ಯಥಾರ್ಥರೆಂದು ಪ್ರತಿಪಾದಿಸುವುದಾದರೂ, ಯೆಹೋವನ ಸೇವೆಯಿಂದ ನಮ್ಮನ್ನು ದೂರ ಸೆಳೆಯುವ ತಮ್ಮ ಹೇತುವನ್ನು ಅವರು ಮರೆಮಾಚಬಹುದು. ಕ್ರೈಸ್ತ ಸಭೆಯಲ್ಲಿ ಇಬ್ಬಗೆಯ ಜೀವಿತವನ್ನು ನಡೆಸುವಂಥ ಕೆಲವರು ಇರುವಲ್ಲಿ ಆಗೇನು? ಅವರು ಸಹ ಕಪಟಿಗಳಾಗಿದ್ದಾರೆ. ಈಗ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಿರುವ ಜೇಸನ್ ಯುವಪ್ರಾಯದವನಾಗಿದ್ದಾಗ ಅವನಿಗೆ ಇಂಥ ಸ್ನೇಹಿತರಿದ್ದರು. ಅವರ ಕುರಿತು ಅವನು ಹೀಗನ್ನುತ್ತಾನೆ: “ಒಂದು ದಿನ ಅವರಲ್ಲೊಬ್ಬನು ನನಗೆ ಹೇಳಿದ್ದು: ‘ಈಗ ನಾವು ಏನು ಮಾಡಿದರೂ ಚಿಂತೆಯಿಲ್ಲ, ಏಕೆಂದರೆ ಹೊಸ ವ್ಯವಸ್ಥೆಯು ಬರುವಾಗ ನಾವು ಹೇಗೂ ಸತ್ತುಹೋಗಿರುತ್ತೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದು ನಮಗೆ ಗೊತ್ತಾಗುವುದೂ ಇಲ್ಲ.’ ಈ ರೀತಿಯ ಮಾತುಗಳು ನನ್ನನ್ನು ಜಾಗೃತಗೊಳಿಸಿದವು. ಹೊಸ ವ್ಯವಸ್ಥೆಯು ಬರುವಾಗ ನಾನು ಸತ್ತಿರಲು ಬಯಸುವುದಿಲ್ಲ.” ಇಂಥವರೊಂದಿಗಿನ ತನ್ನ ಸಹವಾಸವನ್ನು ಜೇಸನ್ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟನು. ಈ ವಿಷಯದಲ್ಲಿ ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ದುಸ್ಸಹವಾಸದಿಂದ ದೂರವಿರುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ!
‘ನಿನ್ನ ಅದ್ಭುತಕೃತ್ಯವರ್ಣನೆಯ ಪದಗಳನ್ನು ಹಾಡುವೆನು’
14 ದಾವೀದನು ಮುಂದುವರಿಸುತ್ತಾ ಹೇಳಿದ್ದು: “ಯೆಹೋವನೇ, ನಾನು ನಿಷ್ಕಳಂಕನೆಂದು ಕೈಗಳನ್ನು ತೊಳೆದುಕೊಂಡವನಾಗಿ ನಿನ್ನ ಅದ್ಭುತಕೃತ್ಯವರ್ಣನೆಯ ಪದಗಳನ್ನು ಹಾಡುತ್ತಾ ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.” (ಕೀರ್ತನೆ 26:6, 7) ಯೆಹೋವನನ್ನು ಆರಾಧಿಸಲು ಹಾಗೂ ದೇವರಿಗೆ ತನ್ನ ಭಕ್ತಿಯನ್ನು ಪ್ರಕಟಪಡಿಸಲು ಸಾಧ್ಯವಾಗುವಂತೆ ದಾವೀದನು ನೈತಿಕವಾಗಿ ಶುದ್ಧನಾಗಿ ಉಳಿಯಲು ಬಯಸಿದನು.
15 ದೇವದರ್ಶನದ ಗುಡಾರದಲ್ಲಿ ಮತ್ತು ಸಮಯಾನಂತರ ದೇವಾಲಯದಲ್ಲಿ ಸತ್ಯಾರಾಧನೆಗೆ ಸಂಬಂಧಪಟ್ಟದ್ದೆಲ್ಲವೂ, “ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ” ಆಗಿತ್ತು. (ಇಬ್ರಿಯ 8:5; 9:23) ಯಜ್ಞವೇದಿಯು, ಮಾನವಕುಲದ ವಿಮೋಚನೆಗಾಗಿ ಯೇಸು ಕ್ರಿಸ್ತನ ಯಜ್ಞವನ್ನು ಅಂಗೀಕರಿಸುವುದರಲ್ಲಿನ ಯೆಹೋವನ ಚಿತ್ತವನ್ನು ಚಿತ್ರಿಸಿತು. (ಇಬ್ರಿಯ 10:5-10) ಈ ಯಜ್ಞದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವ ಮೂಲಕ, ನಾವು ನಿಷ್ಕಳಂಕತೆಯಿಂದ ಕೈಗಳನ್ನು ತೊಳೆದುಕೊಳ್ಳುತ್ತೇವೆ ಮತ್ತು “[ಯೆಹೋವನ] ಯಜ್ಞವೇದಿಯನ್ನು ಪ್ರದಕ್ಷಿಣೆಮಾಡು”ತ್ತೇವೆ.—ಯೋಹಾನ 3:16-18.
16 ಈಡು ಯಜ್ಞವು ಸಾಧ್ಯಗೊಳಿಸಿರುವ ಸರ್ವ ವಿಷಯಗಳ ಕುರಿತು ಆಲೋಚಿಸುವಾಗ, ಯೆಹೋವನಿಗಾಗಿ ಮತ್ತು ಆತನ ಏಕಜಾತ ಪುತ್ರನಿಗಾಗಿ ನಮ್ಮ ಹೃದಯವು ಕೃತಜ್ಞತೆಯಿಂದ ತುಂಬುವುದಿಲ್ಲವೋ? ಹಾಗಾದರೆ, ನಮ್ಮ ಹೃದಯದಲ್ಲಿ ಕೃತಜ್ಞತಾ ಮನೋಭಾವವುಳ್ಳವರಾಗಿದ್ದು, ದೇವರ ಅದ್ಭುತಕಾರ್ಯಗಳ ಕುರಿತು—ಏದೆನ್ ತೋಟದಲ್ಲಿ ಮನುಷ್ಯನ ಸೃಷ್ಟಿಯಿಂದಾರಂಭಿಸಿ ದೇವರ ನೂತನ ಲೋಕದಲ್ಲಿ ಎಲ್ಲಾ ವಿಷಯಗಳ ಸಂಪೂರ್ಣ ಪುನಸ್ಸ್ಥಾಪನೆಯ ವರೆಗೆ—ಇತರರಿಗೆ ತಿಳಿಯಪಡಿಸೋಣ. (ಆದಿಕಾಂಡ 2:7; ಅ. ಕೃತ್ಯಗಳು 3:21) ರಾಜ್ಯದ ಕುರಿತು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸವು ಎಂಥ ಒಂದು ಆಧ್ಯಾತ್ಮಿಕ ಸಂರಕ್ಷಣೆಯಾಗಿದೆ! (ಮತ್ತಾಯ 24:14; 28:19, 20) ಇದರಲ್ಲಿ ಕಾರ್ಯಮಗ್ನರಾಗಿರುವುದು, ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯನ್ನು ಪ್ರಕಾಶಮಾನವಾಗಿ ಇಟ್ಟುಕೊಳ್ಳುವಂತೆ, ದೇವರ ವಾಗ್ದಾನಗಳಲ್ಲಿನ ನಮ್ಮ ನಂಬಿಕೆಯನ್ನು ಬಲಪಡಿಸುವಂತೆ, ಮತ್ತು ಯೆಹೋವನಿಗಾಗಿಯೂ ಜೊತೆಮಾನವರಿಗಾಗಿಯೂ ಇರುವ ನಮ್ಮ ಪ್ರೀತಿಯನ್ನು ಸಜೀವವಾಗಿಡುವಂತೆ ನಮಗೆ ಸಹಾಯಮಾಡುತ್ತದೆ.
“ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ”
17 ಇಸ್ರಾಯೇಲಿನಲ್ಲಿ, ದೇವದರ್ಶನದ ಗುಡಾರ ಮತ್ತು ಯಜ್ಞಗಳಿಗಾಗಿದ್ದ ಅದರ ಯಜ್ಞವೇದಿಯು ಯೆಹೋವನ ಆರಾಧನೆಯ ಕೇಂದ್ರವಾಗಿತ್ತು. ಈ ಸ್ಥಳದಲ್ಲಿ ತಾನು ಕಂಡುಕೊಳ್ಳುವ ಸಂತೋಷವನ್ನು ವ್ಯಕ್ತಪಡಿಸುತ್ತಾ ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವಸ್ಥಾನವು ನನಗೆ ಇಷ್ಟ.”—ಕೀರ್ತನೆ 26:8.
18 ಯೆಹೋವನ ಕುರಿತು ನಾವು ಎಲ್ಲಿ ಕಲಿತುಕೊಳ್ಳುತ್ತೇವೋ ಅಂಥ ಸ್ಥಳಗಳಲ್ಲಿ ಕೂಡಿಬರುವುದು ನಮಗೆ ಪ್ರಿಯವಾಗಿದೆಯೋ? ಪ್ರತಿಯೊಂದು ರಾಜ್ಯ ಸಭಾಗೃಹ ಹಾಗೂ ಅದರ ಆಧ್ಯಾತ್ಮಿಕ ಉಪದೇಶದ ನಿಯತ ಕಾರ್ಯಕ್ರಮವು, ಒಂದು ಸಮುದಾಯದಲ್ಲಿ ಸತ್ಯಾರಾಧನೆಯ ಕೇಂದ್ರಭಾಗವಾಗಿ ಕಾರ್ಯನಡಿಸುತ್ತದೆ. ಇದಕ್ಕೆ ಕೂಡಿಸಿ, ನಮಗೆ ವಾರ್ಷಿಕ ಅಧಿವೇಶನಗಳು, ಸರ್ಕಿಟ್ ಸಮ್ಮೇಳನಗಳು ಮತ್ತು ವಿಶೇಷ ಸಮ್ಮೇಳನ ದಿನಗಳು ಇರುತ್ತವೆ. ಇಂಥ ಕೂಟಗಳಲ್ಲಿ ಯೆಹೋವನ “ಕಟ್ಟಳೆಗಳ” ಕುರಿತು ಚರ್ಚಿಸಲಾಗುತ್ತದೆ. ಒಂದುವೇಳೆ ನಾವು ಅವುಗಳನ್ನು “ಬಹುಪ್ರಿಯವಾಗಿ” ಪರಿಗಣಿಸಲು ಕಲಿಯುವಲ್ಲಿ, ನಾವು ಅತ್ಯಾಸಕ್ತಿಯಿಂದ ಕೂಟಗಳಿಗೆ ಹಾಜರಾಗುವೆವು ಮತ್ತು ಕೂಟಗಳಲ್ಲಿರುವಾಗ ನಿಕಟ ಗಮನವನ್ನು ಕೊಡುವೆವು. (ಕೀರ್ತನೆ 119:167) ನಮ್ಮ ವೈಯಕ್ತಿಕ ಹಿತಕ್ಷೇಮದಲ್ಲಿ ಆಸಕ್ತರಾಗಿದ್ದು, ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲೇ ಉಳಿಯುವಂತೆ ನಮಗೆ ಸಹಾಯಮಾಡುವಂಥ ಜೊತೆವಿಶ್ವಾಸಿಗಳೊಂದಿಗೆ ಇರುವುದು ಎಷ್ಟು ಚೈತನ್ಯದಾಯಕವಾಗಿದೆ!—ಇಬ್ರಿಯ 10:24, 25.
‘ನನ್ನ ಜೀವವನ್ನು ತೆಗೆಯಬೇಡ’
19 ದೇವರ ಸತ್ಯದಲ್ಲಿ ನಡೆಯುವುದರಿಂದ ವಿಪಥಗೊಳ್ಳುವುದರ ಪರಿಣಾಮಗಳನ್ನು ಪೂರ್ಣ ರೀತಿಯಲ್ಲಿ ಅರಿತವನಾಗಿದ್ದ ದಾವೀದನು ಬೇಡಿಕೊಂಡದ್ದು: “ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ. ಅವರ ಕೈಗಳು ಬಲಾತ್ಕಾರ ನಡಿಸುತ್ತವೆ; ಅವರ ಬಲಗೈ ಲಂಚದಿಂದ ತುಂಬಿದೆ.” (ಕೀರ್ತನೆ 26:9, 10) ದಾವೀದನು ಬಲಾತ್ಕಾರ ಅಥವಾ ಸಡಿಲು ನಡತೆ ಇಲ್ಲವೆ ಲಂಚಕೋರತನದ ದೋಷಾರೋಪವುಳ್ಳ ಭಕ್ತಿಹೀನ ಜನರ ನಡುವೆ ಒಳಗೂಡಿಸಲ್ಪಡಲು ಇಷ್ಟಪಡಲಿಲ್ಲ.
20 ಇಂದು ಲೋಕವು ಅತ್ಯಧಿಕ ಪ್ರಮಾಣದ ಅನೈತಿಕ ರೂಢಿಗಳಿಂದ ತುಂಬಿಹೋಗಿದೆ. ಟೆಲಿವಿಷನ್, ಪತ್ರಿಕೆಗಳು ಮತ್ತು ಚಲನಚಿತ್ರಗಳು ಸಡಿಲು ನಡತೆಯನ್ನು ಅಂದರೆ “ಜಾರತ್ವ ಬಂಡುತನ ನಾಚಿಕೆಗೇಡಿತನ”ವನ್ನು ಉತ್ತೇಜಿಸುತ್ತವೆ. (ಗಲಾತ್ಯ 5:19) ಕೆಲವರು, ಅನೇಕವೇಳೆ ಅನೈತಿಕ ನಡತೆಗೆ ಮುನ್ನಡಿಸುವಂಥ ಅಶ್ಲೀಲ ಸಾಹಿತ್ಯಕ್ಕೆ ದಾಸರಾಗಿಬಿಟ್ಟಿದ್ದಾರೆ. ವಿಶೇಷವಾಗಿ ಯುವ ಜನರು ಇಂಥ ಪ್ರಭಾವಗಳಿಗೆ ಸುಲಭವಾಗಿ ಬಲಿಬೀಳುತ್ತಾರೆ. ಕೆಲವು ದೇಶಗಳಲ್ಲಿ, ಡೇಟಿಂಗ್ ಒಂದು ರೂಢಿಯಾಗಿದ್ದು, ಡೇಟಿಂಗ್ ಮಾಡುವುದು ಅತ್ಯಗತ್ಯ ಆವಶ್ಯಕತೆಯಾಗಿದೆ ಎಂದು ಹದಿವಯಸ್ಕರು ನಂಬುವಂತೆ ಒತ್ತಾಯಿಸಲ್ಪಡುತ್ತಾರೆ. ಅನೇಕ ಯುವ ಜನರು ವಿವಾಹವಾಗುವಷ್ಟು ಪ್ರೌಢ ಪ್ರಾಯದವರಾಗದಿದ್ದರೂ, ರೊಮ್ಯಾಂಟಿಕ್ ಪ್ರೀತಿಯಲ್ಲಿ ಸಿಕ್ಕಿಕೊಂಡುಬಿಡುತ್ತಾರೆ. ತಮ್ಮೊಳಗೆ ಬೆಳೆಯುತ್ತಿರುವ ಲೈಂಗಿಕ ಬಯಕೆಗಳನ್ನು ತೃಪ್ತಿಪಡಿಸಲಿಕ್ಕಾಗಿ ಅವರು ಜಾರತ್ವದ ಹಂತದ ವರೆಗೂ ಅನೈತಿಕ ನಡತೆಯಲ್ಲಿ ಒಳಗೂಡುತ್ತಾರೆ.
21 ವಯಸ್ಕರು ದುಷ್ಪ್ರಭಾವಗಳಿಗೆ ತುತ್ತಾಗದವರೇನಲ್ಲ. ಅಪ್ರಾಮಾಣಿಕ ವ್ಯಾಪಾರ-ವ್ಯವಹಾರಗಳು ಹಾಗೂ ಸ್ವಾರ್ಥಪರ ಹೇತುಗಳ ಮೇಲಾಧಾರಿತವಾದ ನಿರ್ಣಯಗಳು, ಸಮಗ್ರತೆಯ ಕೊರತೆಯ ಸೂಚನೆಗಳಾಗಿವೆ. ಲೋಕದ ಮಾರ್ಗಗಳಲ್ಲಿ ನಡೆಯುವುದು ನಮ್ಮನ್ನು ಯೆಹೋವನಿಂದ ದೂರಮಾಡುವುದು. ಆದುದರಿಂದ, ನಾವೆಲ್ಲರೂ ‘ಕೆಟ್ಟದ್ದನ್ನು ದ್ವೇಷಿಸೋಣ, ಒಳ್ಳೇದನ್ನು ಪ್ರೀತಿಸೋಣ’ ಮತ್ತು ಸಮಗ್ರತೆಯ ಮಾರ್ಗದಲ್ಲಿ ನಡೆಯುತ್ತಾ ಇರೋಣ.—ಆಮೋಸ 5:15.
“ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು”
22 ದಾವೀದನು ದೇವರಿಗೆ ತನ್ನ ಅಭಿವ್ಯಕ್ತಿಯನ್ನು ಹೀಗೆ ಹೇಳುವ ಮೂಲಕ ಮುಕ್ತಾಯಗೊಳಿಸಿದನು: “ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು [“ನನ್ನ ಸಮಗ್ರತೆಯಲ್ಲೇ ನಡೆಯುವೆನು,” NW]; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು. ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು.” (ಕೀರ್ತನೆ 26:11, 12) ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ದಾವೀದನ ದೃಢನಿರ್ಧಾರವು ವಿಮೋಚನೆಗಾಗಿರುವ ಅವನ ಬೇಡಿಕೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಇದು ಎಷ್ಟು ಉತ್ತೇಜನದಾಯಕವಾಗಿದೆ! ನಮ್ಮ ಪಾಪಪೂರ್ಣ ಸ್ಥಿತಿಯ ಹೊರತೂ, ಸಮಗ್ರತೆಯ ಮಾರ್ಗದಲ್ಲಿ ನಡೆಯಲು ನಾವು ದೃಢನಿರ್ಧಾರವನ್ನು ಮಾಡಿರುವಲ್ಲಿ ಯೆಹೋವನು ನಮಗೆ ಸಹಾಯಮಾಡುವನು.
23 ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ದೇವರ ಪರಮಾಧಿಕಾರವನ್ನು ನಾವು ಗೌರವಿಸುತ್ತೇವೆ ಹಾಗೂ ಗಣ್ಯಮಾಡುತ್ತೇವೆ ಎಂಬುದನ್ನು ನಮ್ಮ ಜೀವನ ರೀತಿಯೇ ತೋರಿಸಲಿ. ನಮ್ಮ ಅಂತರಾಳದ ಆಲೋಚನೆಗಳು ಹಾಗೂ ಭಾವನೆಗಳನ್ನು ಪರಿಶೋಧಿಸುವಂತೆ ಹಾಗೂ ಪರೀಕ್ಷಿಸುವಂತೆ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಬಳಿ ಕೇಳಿಕೊಳ್ಳಸಾಧ್ಯವಿದೆ. ದೇವರ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನದ ಸಹಾಯದಿಂದ ನಾವು ಆತನ ಸತ್ಯವನ್ನು ಯಾವಾಗಲೂ ನಮ್ಮ ದೃಷ್ಟಿಯಲ್ಲೇ ಇಟ್ಟುಕೊಳ್ಳಬಲ್ಲೆವು. ಹೀಗಿರುವುದರಿಂದ, ಸರ್ವ ರೀತಿಯಲ್ಲೂ ನಾವು ದುಸ್ಸಹವಾಸವನ್ನು ತೊರೆಯೋಣ, ಆದರೆ ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡೋಣ. ದೇವರೊಂದಿಗಿನ ನಮ್ಮ ಅಮೂಲ್ಯ ಸಂಬಂಧವನ್ನು ಲೋಕವು ಅಪಾಯಕ್ಕೊಡ್ಡಲು ಬಿಡದೆ, ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸೋಣ. ಸಮಗ್ರತೆಯ ಮಾರ್ಗದಲ್ಲಿ ನಡೆಯಲಿಕ್ಕಾಗಿ ನಮ್ಮಿಂದಾದಷ್ಟು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಿಸುವಾಗ, ಯೆಹೋವನು ನಮಗೆ ಅನುಗ್ರಹವನ್ನು ತೋರಿಸುವನು ಎಂಬ ದೃಢವಿಶ್ವಾಸದಿಂದಿರಸಾಧ್ಯವಿದೆ.
24 ಸಮಗ್ರತೆಯು ಜೀವನದ ಎಲ್ಲಾ ಕ್ಷೇತ್ರಗಳನ್ನು ಒಳಗೂಡಿರುವುದರಿಂದ, ನಾವು ಒಂದು ಮಾರಕ ಪಾಶವಾಗಿರುವ ಮದ್ಯದ ದುರುಪಯೋಗದ ವಿಷಯದಲ್ಲಿ ಅರಿವುಳ್ಳವರಾಗಿರುವ ಅಗತ್ಯವಿದೆ. ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ನಿಮಗೆ ನೆನಪಿದೆಯೆ?
• ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳ ಸಮಗ್ರತೆಯ ಆಧಾರದ ಮೇಲೆ ಅವರನ್ನು ಸೂಕ್ತವಾಗಿಯೇ ತೀರ್ಪುಮಾಡಸಾಧ್ಯವಿದೆ ಏಕೆ?
• ಸಮಗ್ರತೆ ಎಂದರೇನು, ಮತ್ತು ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು ಏನನ್ನು ಒಳಗೂಡಿದೆ?
• ಸಮಗ್ರತೆಯ ಮಾರ್ಗದಲ್ಲಿ ನಡೆಯಲು ಯಾವುದು ನಮಗೆ ಸಹಾಯಮಾಡುವುದು?
• ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಯಾವ ಅಪಾಯಗಳ ಅರಿವುಳ್ಳವರಾಗಿರಬೇಕು ಮತ್ತು ಅವುಗಳಿಂದ ದೂರವಿರಬೇಕು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ದೇವರ ಪರಮಾಧಿಕಾರದ ವಾದಾಂಶದಲ್ಲಿ ಮನುಷ್ಯನ ಸಮಗ್ರತೆಯು ಏಕೆ ಒಂದು ಪ್ರಮುಖ ಭಾಗವಾಗಿದೆ? (ಬಿ) ತಾವು ಯೆಹೋವನ ಪರಮಾಧಿಕಾರದ ಪಕ್ಷದಲ್ಲಿದ್ದೇವೆ ಎಂಬುದನ್ನು ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳು ಹೇಗೆ ತೋರ್ಪಡಿಸಬಲ್ಲರು?
3. (ಎ) ಯೆಹೋವನು ಏನನ್ನು ಪರೀಕ್ಷಿಸುವಂತೆ ಹಾಗೂ ನ್ಯಾಯವನ್ನು ನಿರ್ಣಯಿಸುವಂತೆ ಯೋಬನೂ ದಾವೀದನೂ ಬಯಸುತ್ತಾರೆ? (ಬಿ) ಸಮಗ್ರತೆಯ ವಿಷಯದಲ್ಲಿ ಯಾವ ಪ್ರಶ್ನೆಗಳು ಏಳುತ್ತವೆ?
4. ಸಮಗ್ರತೆ ಎಂದರೇನು?
5. ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ನಾವು ಪರಿಪೂರ್ಣರಾಗಿರುವುದನ್ನು ಅಗತ್ಯಪಡಿಸುವುದಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?
6, 7. ಸಮಗ್ರತೆಯಲ್ಲಿ ನಡೆಯುವುದು ಏನನ್ನು ಒಳಗೂಡಿದೆ?
8. ತನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸುವಂತೆ ದಾವೀದನು ಮಾಡಿದ ಬಿನ್ನಹದಿಂದ ನೀವು ಏನನ್ನು ಕಲಿಯುತ್ತೀರಿ?
9. ನಮ್ಮ ಸಾಂಕೇತಿಕ ಅಂತರಿಂದ್ರಿಯವನ್ನೂ ಹೃದಯವನ್ನೂ ಯೆಹೋವನು ಯಾವ ರೀತಿಯಲ್ಲಿ ಪರಿಶೋಧಿಸುತ್ತಾನೆ?
10. ದೇವರ ಸತ್ಯದಲ್ಲಿ ನಡೆಯುವಂತೆ ದಾವೀದನಿಗೆ ಯಾವುದು ಸಹಾಯಮಾಡಿತು?
11. ಸಮಗ್ರತೆಯ ಮಾರ್ಗದಲ್ಲಿ ನಡೆಯಲು ಯಾವುದು ನಮಗೆ ಸಹಾಯಮಾಡಬಲ್ಲದು?
12, 13. ಯಾವ ರೀತಿಯ ಸಹವಾಸದಿಂದ ನಾವು ದೂರವಿರಬೇಕು?
14, 15. ನಾವು ಹೇಗೆ “[ಯೆಹೋವನ] ಯಜ್ಞವೇದಿಯನ್ನು ಪ್ರದಕ್ಷಿಣೆಮಾಡ”ಸಾಧ್ಯವಿದೆ?
16. ದೇವರ ಅದ್ಭುತಕಾರ್ಯಗಳ ಕುರಿತು ತಿಳಿಯಪಡಿಸುವುದು ನಮಗೆ ಹೇಗೆ ಪ್ರಯೋಜನದಾಯಕವಾಗಿದೆ?
17, 18. ಕ್ರೈಸ್ತ ಕೂಟಗಳ ಕಡೆಗೆ ನಮ್ಮ ಮನೋಭಾವ ಹೇಗಿರಬೇಕು?
19. ದಾವೀದನು ಯಾವ ಪಾಪಗಳ ವಿಷಯದಲ್ಲಿ ದೋಷಿಯಾಗಿರಲು ಇಷ್ಟಪಡಲಿಲ್ಲ?
20, 21. ನಮ್ಮನ್ನು ಯಾವುದು ಭಕ್ತಿಹೀನ ಜನರ ಮಾರ್ಗದಲ್ಲಿ ಮುನ್ನಡಿಸಸಾಧ್ಯವಿದೆ?
22-24. (ಎ) ಕೀರ್ತನೆ 26ರ ಮುಕ್ತಾಯದ ಮಾತುಗಳಲ್ಲಿ ನೀವು ಯಾವ ಉತ್ತೇಜನವನ್ನು ಕಂಡುಕೊಳ್ಳುತ್ತೀರಿ? (ಬಿ) ಮುಂದಿನ ಲೇಖನದಲ್ಲಿ ಯಾವ ಪಾಶದ ಕುರಿತು ಚರ್ಚಿಸಲಾಗುವುದು?
[ಪುಟ 14ರಲ್ಲಿರುವ ಚಿತ್ರ]
ನಿಮ್ಮ ಅಂತರಾಳದ ಆಲೋಚನೆಗಳನ್ನು ಪರಿಶೋಧಿಸುವಂತೆ ನೀವು ಕ್ರಮವಾಗಿ ಯೆಹೋವನನ್ನು ಬೇಡಿಕೊಳ್ಳುತ್ತೀರೋ?
[ಪುಟ 14ರಲ್ಲಿರುವ ಚಿತ್ರ]
ಯೆಹೋವನ ಪ್ರೀತಿಪೂರ್ವಕ ದಯೆಯ ಕೃತ್ಯಗಳನ್ನು ನಿಮ್ಮ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೀರೋ?
[ಪುಟ 15ರಲ್ಲಿರುವ ಚಿತ್ರಗಳು]
ಪರೀಕ್ಷೆಗಳ ಕೆಳಗೆ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ
[ಪುಟ 17ರಲ್ಲಿರುವ ಚಿತ್ರಗಳು]
ಸಮಗ್ರತೆಯ ಮಾರ್ಗದಲ್ಲಿ ನಡೆಯುವಂತೆ ನಿಮಗೆ ಸಹಾಯಮಾಡಲು ಯೆಹೋವನು ಮಾಡಿರುವ ಒದಗಿಸುವಿಕೆಗಳನ್ನು ನೀವು ಸದುಪಯೋಗಿಸುತ್ತೀರೋ?