ನೀತಿವಂತರು ದೇವರನ್ನು ಸದಾಕಾಲ ಸ್ತುತಿಸುವರು
“ನೀತಿವಂತನನ್ನು ಯಾವಾಗಲೂ ನೆನಸುವರು. . . . ಅವನ ನೀತಿಯ ಫಲವು ಸದಾಕಾಲವೂ ಇರುವದು.”—ಕೀರ್ತ. 112:6, 9.
1. (ಎ) ದೇವರು ಯಾರನ್ನು ನೀತಿವಂತರೆಂದು ಪರಿಗಣಿಸುತ್ತಾನೋ ಅವರೆಲ್ಲರ ಮುಂದೆ ಯಾವ ಸಂತೋಷಭರಿತ ಭವಿಷ್ಯತ್ತಿದೆ? (ಬಿ) ಯಾವ ಪ್ರಶ್ನೆ ಏಳುತ್ತದೆ?
ದೇವರ ದೃಷ್ಟಿಯಲ್ಲಿ ನೀತಿವಂತರಾಗಿರುವ ಮಾನವರಿಗಾಗಿ ಎಂಥ ಅದ್ಭುತಕರ ಭವಿಷ್ಯ ಕಾದಿದೆ! ಅವರು ಯೆಹೋವನ ಸೊಗಸಾದ ಗುಣಗಳ ಕುರಿತು ಇನ್ನಷ್ಟನ್ನು ಕಲಿಯುತ್ತಾ ಸದಾಕಾಲ ಹರ್ಷಿಸುವರು. ಆತನ ಸೃಷ್ಟಿಕಾರ್ಯಗಳ ಬಗ್ಗೆ ಹೆಚ್ಚೆಚ್ಚನ್ನು ಕಲಿಯುತ್ತಾ ಹೋದಂತೆ ಅವರ ಹೃದಯಗಳಲ್ಲಿ ಸ್ತುತಿ ತುಂಬಿತುಳುಕುವುದು. ಆದರೆ ಇಂಥ ಭವ್ಯ ಭವಿಷ್ಯತ್ತನ್ನು ಆನಂದಿಸಲು ಮುಖ್ಯವಾಗಿ ಬೇಕಾಗಿರುವ ಸಂಗತಿಗಳಲ್ಲಿ “ನೀತಿ” ಒಂದಾಗಿದೆ. ಇದನ್ನೇ 112ನೇ ಕೀರ್ತನೆಯಲ್ಲಿ ಒತ್ತಿಹೇಳಲಾಗಿದೆ. ಆದರೆ ಪವಿತ್ರನೂ, ನೀತಿವಂತನೂ ಆದ ಯೆಹೋವ ದೇವರು, ಪಾಪಪೂರ್ಣ ಮಾನವರನ್ನು ನೀತಿವಂತರಾಗಿ ಪರಿಗಣಿಸಲು ಹೇಗೆ ಸಾಧ್ಯ? ಏಕೆಂದರೆ ನಾವು ಸರಿಯಾದದ್ದನ್ನೇ ಮಾಡಲು ಎಷ್ಟೇ ಕಷ್ಟಪಟ್ಟರೂ ತಪ್ಪುಗಳನ್ನು ಮಾಡುತ್ತಿರುತ್ತೇವೆ, ಅದರಲ್ಲೂ ಕೆಲವೊಮ್ಮೆ ಗಂಭೀರ ತಪ್ಪುಗಳನ್ನು ಮಾಡುತ್ತೇವೆ.—ರೋಮಾ. 3:23; ಯಾಕೋ. 3:2.
2. ಯೆಹೋವನು ಪ್ರೀತಿಯಿಂದ ನಡೆಸಿದ ಎರಡು ಅದ್ಭುತಗಳು ಯಾವುವು?
2 ಯೆಹೋವನು ಪ್ರೀತಿಯಿಂದ ಇದಕ್ಕೆ ಸೂಕ್ತ ಪರಿಹಾರ ಒದಗಿಸಿದನು. ಹೇಗೆ? ಮೊದಲಾಗಿ, ಆತನು ಸ್ವರ್ಗದಲ್ಲಿದ್ದ ತನ್ನ ಪ್ರಿಯ ಮಗನ ಜೀವವನ್ನು ಒಬ್ಬ ಕನ್ನಿಕೆಯ ಗರ್ಭಕ್ಕೆ ಸ್ಥಳಾಂತರಿಸುವ ಅದ್ಭುತ ನಡೆಸಿ, ಅವನೊಬ್ಬ ಪರಿಪೂರ್ಣ ಮಾನವನಾಗಿ ಹುಟ್ಟುವಂತೆ ಮಾಡಿದನು. (ಲೂಕ 1:30-35) ಬಳಿಕ, ಯೇಸುವಿನ ಶತ್ರುಗಳು ಅವನನ್ನು ಕೊಂದಾಗ ಯೆಹೋವನು ಇನ್ನೊಂದು ಆಶ್ಚರ್ಯಕರ ಅದ್ಭುತ ನಡೆಸಿದನು. ಆತನು ಯೇಸುವನ್ನು ಮಹಿಮಾಭರಿತ ಆತ್ಮಜೀವಿಯಾಗಿ ಪುನಃ ಜೀವಕ್ಕೆ ತಂದನು.—1 ಪೇತ್ರ 3:18.
3 ಯೆಹೋವನು ತನ್ನ ಪುತ್ರನಿಗೆ, ಸ್ವರ್ಗದಲ್ಲಿ ನಿರ್ಲಯ ಜೀವದ ಬಹುಮಾನ ಕೊಟ್ಟನು. ಅವನಿಗೆ ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಈ ರೀತಿಯ ಜೀವವಿರಲಿಲ್ಲ. (ಇಬ್ರಿ. 7:15-17, 28) ಯೆಹೋವನು ಇದನ್ನು ಸಂತೋಷದಿಂದ ಕೊಟ್ಟನು ಏಕೆಂದರೆ ಯೇಸು ಅತಿ ಕಠಿನ ಪರೀಕ್ಷೆಗಳ ಮಧ್ಯೆಯೂ ಪರಿಪೂರ್ಣ ಸಮಗ್ರತೆ ಕಾಪಾಡಿಕೊಂಡಿದ್ದನು. ಹೀಗೆ, ಮಾನವರು ದೇವರನ್ನು ಅಪ್ಪಟ ಪ್ರೀತಿಯಿಂದಲ್ಲ ಬದಲಾಗಿ ಸ್ವಾರ್ಥ ಹೇತುಗಳಿಂದ ಸೇವಿಸುತ್ತಾರೆಂಬ ಸೈತಾನನ ಸುಳ್ಳಾರೋಪಕ್ಕೆ ಅತ್ಯುತ್ತಮ ಹಾಗೂ ಸಂಪೂರ್ಣ ಉತ್ತರವನ್ನು ಯೇಸು ತನ್ನ ತಂದೆಗೆ ದಯಪಾಲಿಸಿದನು.—ಜ್ಞಾನೋ. 27:11.
4. (ಎ) ಯೇಸು ಸ್ವರ್ಗಕ್ಕೆ ಹೋದ ನಂತರ ನಮಗಾಗಿ ಏನು ಮಾಡಿದನು, ಮತ್ತು ಯೆಹೋವನ ಪ್ರತಿಕ್ರಿಯೆ ಏನಾಗಿತ್ತು? (ಬಿ) ಯೆಹೋವ ಹಾಗೂ ಯೇಸು ನಿಮಗಾಗಿ ಏನು ಮಾಡಿದ್ದಾರೋ ಅದರ ಬಗ್ಗೆ ನಿಮಗೆ ಹೇಗನಿಸುತ್ತದೆ?
4 ಸ್ವರ್ಗದಲ್ಲಿ ಯೇಸು ಇನ್ನೂ ಹೆಚ್ಚನ್ನು ಮಾಡಿದನು. ಅವನು “ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ . . . ದೇವರ ಸನ್ನಿಧಾನಕ್ಕೆ ಪ್ರವೇಶಿಸಿದನು.” ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಯೇಸುವಿನ ಅಮೂಲ್ಯ ಅರ್ಪಣೆಯನ್ನು “ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿ” ಸ್ವೀಕರಿಸಿದನು. ಆದುದರಿಂದ, ‘ಶುದ್ಧ ಮನಸ್ಸಿನಿಂದ’ ಅಂದರೆ ಮನಸ್ಸಾಕ್ಷಿಯಿಂದ ನಾವು ‘ಜೀವವುಳ್ಳ ದೇವರನ್ನು ಆರಾಧಿಸಲು’ ಶಕ್ತರಾಗಿದ್ದೇವೆ. “ಯಾಹುವಿಗೆ ಸ್ತೋತ್ರ!” ಎಂಬ 112ನೇ ಕೀರ್ತನೆಯ ಆರಂಭದ ಮಾತುಗಳನ್ನು ಪ್ರತಿಧ್ವನಿಸಲು ಇದೆಷ್ಟು ಉತ್ತಮ ಕಾರಣ!—ಇಬ್ರಿ. 9:12-14, 24; 1 ಯೋಹಾ. 2:2.
5. (ಎ) ದೇವರೊಂದಿಗೆ ನೀತಿಯ ನಿಲುವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬೇಕು? (ಬಿ) 111 ಮತ್ತು 112ನೇ ಕೀರ್ತನೆಗಳನ್ನು ಹೇಗೆ ಸಂಯೋಜಿಸಲಾಗಿದೆ?
5 ದೇವರೊಂದಿಗೆ ನೀತಿಯ ನಿಲುವನ್ನು ಕಾಪಾಡಿಕೊಳ್ಳಲಿಕ್ಕೋಸ್ಕರ ನಾವು, ಯೇಸುವಿನ ಸುರಿದ ರಕ್ತದಲ್ಲಿ ನಂಬಿಕೆಯನ್ನಿಡುವುದನ್ನು ಮುಂದುವರಿಸಬೇಕು. ಯೆಹೋವನು ನಮಗೆ ಇಷ್ಟೊಂದು ಪ್ರೀತಿತೋರಿಸಿದ್ದಕ್ಕೆ ನಾವಾತನಿಗೆ ದಿನಾಲೂ ಕೃತಜ್ಞತೆ ಹೇಳಬೇಕು. (ಯೋಹಾ. 3:16) ಅಲ್ಲದೆ, ನಾವು ದೇವರ ವಾಕ್ಯವನ್ನು ಅಧ್ಯಯನಮಾಡುತ್ತಿರಬೇಕು ಮತ್ತು ಅದರ ಸಂದೇಶಕ್ಕೆ ಹೊಂದಿಕೆಯಲ್ಲಿ ಜೀವಿಸಲು ಸರ್ವಪ್ರಯತ್ನ ಮಾಡಬೇಕು. 112ನೇ ಕೀರ್ತನೆಯಲ್ಲಿ, ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಬಯಸುವವರೆಲ್ಲರಿಗಾಗಿ ಉತ್ತಮ ಬುದ್ಧಿವಾದವಿದೆ. ಈ ಕೀರ್ತನೆಯು 111ನೇ ಕೀರ್ತನೆಗೆ ಪೂರಕವಾಗಿದೆ. ಇವೆರಡೂ ಕೀರ್ತನೆಗಳು “ಯಾಹುವಿಗೆ ಸ್ತೋತ್ರ” ಇಲ್ಲವೇ ಹಲ್ಲೆಲೂಯಾ ಎಂಬ ಉದ್ಘಾರದೊಂದಿಗೆ ಆರಂಭವಾಗುತ್ತವೆ. ತದನಂತರ ಹಿಂಬಾಲಿಸಿ ಬರುವ 22 ಸಾಲುಗಳಲ್ಲಿ ಪ್ರತಿಯೊಂದು ಸಾಲು ಹೀಬ್ರೂ ಅಕ್ಷರಮಾಲೆಯಲ್ಲಿರುವ 22 ಅಕ್ಷರಗಳಲ್ಲಿ ಒಂದರಿಂದ ಆರಂಭವಾಗುತ್ತದೆ.a
ಸಂತೋಷಕ್ಕಾಗಿ ಆಧಾರ
6. ಕೀರ್ತನೆ 112ರಲ್ಲಿ ವರ್ಣಿಸಲಾಗಿರುವ ದೇವಭೀರು ವ್ಯಕ್ತಿ ಹೇಗೆ ಆಶೀರ್ವದಿಸಲ್ಪಡುತ್ತಾನೆ?
6 “ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು. ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವದು; ನೀತಿವಂತನ ವಂಶವು ಶುಭ [“ಆಶೀರ್ವಾದ,” NIBV] ಹೊಂದುವದು.” (ಕೀರ್ತ. 112:1, 2) ಕೀರ್ತನೆಗಾರನು ‘ಯಾವನು’ ಎಂದು ಹೇಳುತ್ತಾ, ಮೊದಲು ಒಬ್ಬ ವ್ಯಕ್ತಿಗೆ ಸೂಚಿಸುವುದನ್ನು ಗಮನಿಸಿ. ಆದರೆ 2ನೇ ವಚನದಲ್ಲಿರುವ “ನೀತಿವಂತನ” ಎಂಬ ಪದವನ್ನು ಮೂಲಭಾಷೆಯಲ್ಲಿ, ಬಹುವಚನದಲ್ಲಿ ಅಂದರೆ ‘ನೀತಿವಂತರು’ ಎಂದು ಕೊಡಲಾಗಿದೆ. ಇದು 112ನೇ ಕೀರ್ತನೆಯು, ಅನೇಕ ವ್ಯಕ್ತಿಗಳಿಂದ ಕೂಡಿರುವ ಒಂದು ಸಂಘಟಿತ ಗುಂಪಿಗೆ ಸೂಚಿಸುತ್ತಿರಬಹುದೆಂದು ತೋರಿಸುತ್ತದೆ. ಆಸಕ್ತಿಕರ ಸಂಗತಿಯೇನೆಂದರೆ, ಅಪೊಸ್ತಲ ಪೌಲನು ಕೀರ್ತನೆ 112:9ನ್ನು ಪ್ರಥಮ ಶತಮಾನದ ಕ್ರೈಸ್ತರಿಗೆ ಅನ್ವಯಿಸಲು ಪವಿತ್ರಾತ್ಮದಿಂದ ಪ್ರೇರಿತನಾದನು. (2 ಕೊರಿಂಥ 9:8, 9 ಓದಿ.) ಈ ಕೀರ್ತನೆಯು, ಇಂದು ಭೂಮಿ ಮೇಲಿರುವ ಕ್ರಿಸ್ತನ ಹಿಂಬಾಲಕರು ಸಂತೋಷದಿಂದಿರಬಲ್ಲರು ಎಂಬುದನ್ನು ಎಷ್ಟು ಚೆನ್ನಾಗಿ ಚಿತ್ರಿಸುತ್ತದೆ!—ಮತ್ತಾ. 24:45.
7. ದೇವರ ಸೇವಕರಿಗೆ ಏಕೆ ಆತನ ಹಿತಕರ ಭಯವಿರಬೇಕು, ಮತ್ತು ದೇವರ ಆಜ್ಞೆಗಳ ಬಗ್ಗೆ ನಿಮಗೆ ಹೇಗನಿಸಬೇಕು?
7 ಕೀರ್ತನೆ 112:1 ಸೂಚಿಸುವಂತೆ, ಈ ಸತ್ಯ ಕ್ರೈಸ್ತರು ‘ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ’ ನಡೆಯುವಾಗ ಬಹಳಷ್ಟು ಸಂತೋಷ ಅನುಭವಿಸುತ್ತಾರೆ. ದೇವರ ಮನನೋಯಿಸಬಾರದೆಂಬ ಹಿತಕರವಾದ ಭಯವು ಸೈತಾನನ ಲೋಕದ ಆತ್ಮವನ್ನು ಪ್ರತಿರೋಧಿಸಲು ಅವರಿಗೆ ಸಹಾಯ ಮಾಡುತ್ತದೆ. ದೇವರ ವಾಕ್ಯದ ಅಧ್ಯಯನದಲ್ಲಿ ಮತ್ತು ಆತನ ಆಜ್ಞೆಗಳನ್ನು ಪಾಲಿಸುವುದರಲ್ಲಿ ಅವರು ‘ಅತ್ಯಾನಂದಪಡುತ್ತಾರೆ.’ ಆ ಆಜ್ಞೆಗಳಲ್ಲಿ ಒಂದು, ಲೋಕದಾದ್ಯಂತ ರಾಜ್ಯದ ಸುವಾರ್ತೆಯನ್ನು ಸಾರುವುದಾಗಿದೆ. ಸತ್ಯ ಕ್ರೈಸ್ತರು, ದೇವರ ತೀರ್ಪಿನ ದಿನದ ಬರೋಣದ ಬಗ್ಗೆ ದುಷ್ಟರಿಗೆ ಎಚ್ಚರಿಸುತ್ತಿದ್ದಾರೆ ಮತ್ತು ಅದೇ ಸಮಯದಲ್ಲಿ ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡುತ್ತಿದ್ದಾರೆ.—ಯೆಹೆ. 3:17, 18; ಮತ್ತಾ. 28:19, 20.
8. (ಎ) ಇಂದು ದೇವರ ಸಮರ್ಪಿತ ಜನರು ತಮ್ಮ ಹುರುಪಿಗಾಗಿ ಯಾವ ಪ್ರತಿಫಲ ಪಡೆದಿದ್ದಾರೆ? (ಬಿ) ಭೂನಿರೀಕ್ಷೆಯುಳ್ಳವರಿಗಾಗಿ ಮುಂದೆ ಯಾವ ಆಶೀರ್ವಾದಗಳು ಕಾದಿವೆ?
8 ಅಂಥ ಆಜ್ಞೆಗಳನ್ನು ಪಾಲಿಸುತ್ತಿರುವ ಕಾರಣ, ಇಂದು ಭೂಮಿಯಲ್ಲಿರುವ ದೇವರ ಸೇವಕರ ಸಂಖ್ಯೆ ಸುಮಾರು 70 ಲಕ್ಷದಷ್ಟಾಗಿದೆ! ಆತನ ಜನರು ‘ಲೋಕದಲ್ಲಿ ಬಲಿಷ್ಠರಾಗಿದ್ದಾರೆ’ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? (ಯೋಹಾ. 10:16; ಪ್ರಕ. 7:9, 14) ದೇವರು ತನ್ನ ಉದ್ದೇಶವನ್ನು ಪೂರೈಸುವಾಗ ಇವರೆಷ್ಟು ‘ಆಶೀರ್ವಾದ ಹೊಂದುವರು!’ ಭೂನಿರೀಕ್ಷೆಯುಳ್ಳವರನ್ನು ಒಂದು ಗುಂಪಾಗಿ, ಬರಲಿರುವ ‘ಮಹಾ ಸಂಕಟದಲ್ಲಿ’ ಸಂರಕ್ಷಿಸಲಾಗುವುದು ಮತ್ತು ಅವರು ‘ನೀತಿಯು ವಾಸವಾಗಿರುವ ನೂತನ ಭೂಮಂಡಲದ’ ಭಾಗವಾಗುವರು. ಕಾಲಾನಂತರ ಅರ್ಮಗೆದ್ದೋನ್ನಿಂದ ಪಾರಾದವರು ಇನ್ನೂ ಹೆಚ್ಚು ‘ಆಶೀರ್ವಾದ ಹೊಂದುವರು.’ ಲಕ್ಷಗಟ್ಟಲೆ ಪುನರುತ್ಥಿತ ಜನರನ್ನು ಸ್ವಾಗತಿಸಲು ಅವರು ಸಿದ್ಧರಾಗಿರುವರು. ಎಂಥ ರೋಮಾಂಚಕ ಪ್ರತೀಕ್ಷೆ! ಕಟ್ಟಕಡೆಗೆ, ದೇವರ ಆಜ್ಞೆಗಳಲ್ಲಿ ‘ಅತ್ಯಾನಂದಪಡುವವರು’ ಮಾನವ ಪರಿಪೂರ್ಣತೆಯನ್ನು ತಲಪಿ, “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಸದಾಕಾಲ ಆನಂದಿಸುವರು.—2 ಪೇತ್ರ 3:13; ರೋಮಾ. 8:21.
ಐಶ್ವರ್ಯದ ವಿವೇಕಯುತ ಬಳಕೆ
9, 10. ಸತ್ಯ ಕ್ರೈಸ್ತರು ತಮ್ಮ ಆಧ್ಯಾತ್ಮಿಕ ಐಶ್ವರ್ಯವನ್ನು ಹೇಗೆ ಬಳಸಿದ್ದಾರೆ, ಮತ್ತು ಅವರ ನೀತಿಯು ಹೇಗೆ ಸದಾಕಾಲ ಫಲಿಸುತ್ತಿರುವುದು?
9 “ಅವನ ಮನೆಯಲ್ಲಿ ಧನೈಶ್ವರ್ಯಗಳಿರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವದು. ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವದು; ದಯೆಯು ಕನಿಕರವೂ ನೀತಿಯೂ ಉಳ್ಳ ದೇವರೇ ಆ ಜ್ಯೋತಿ.” (ಕೀರ್ತ. 112:3, 4) ಬೈಬಲ್ ಕಾಲಗಳಲ್ಲಿ ದೇವರ ಸೇವಕರಲ್ಲಿ ಕೆಲವರು ತಮಗಿದ್ದ ಭೌತಿಕ ಐಶ್ವರ್ಯಕ್ಕಾಗಿ ಖ್ಯಾತರಾಗಿದ್ದರು. ದೇವರು ಯಾರನ್ನು ನಿಜವಾಗಿ ಮೆಚ್ಚುತ್ತಾನೋ ಅವರು ಭೌತಿಕವಾಗಿ ಅಲ್ಲದಿದ್ದರೂ ಬೇರೊಂದು ಅರ್ಥದಲ್ಲಿ ಐಶ್ವರ್ಯವಂತರಾಗುತ್ತಾರೆ. ವಾಸ್ತವಾಂಶವೇನೆಂದರೆ ಯೇಸುವಿನ ದಿನಗಳಲ್ಲಿದ್ದಂತೆ, ದೇವರ ಮುಂದೆ ತಮ್ಮನ್ನು ತಗ್ಗಿಸಿಕೊಳ್ಳುವವರಲ್ಲಿ ಹೆಚ್ಚಿನವರು ಬಡವರೂ, ಕೀಳಾಗಿ ಕಾಣಲಾದವರೂ ಆಗಿರಬಹುದು. (ಲೂಕ 4:18; 7:22; ಯೋಹಾ. 7:49) ಆದರೆ ಒಬ್ಬ ವ್ಯಕ್ತಿಗೆ ಭೌತಿಕವಾಗಿ ಹೆಚ್ಚಿರಲಿ ಕಡಿಮೆಯೇ ಇರಲಿ, ಅವನು ಆಧ್ಯಾತ್ಮಿಕವಾಗಿಯಂತೂ ಖಂಡಿತ ಐಶ್ವರ್ಯವಂತನಾಗಬಲ್ಲನು.—ಮತ್ತಾ. 6:20; 1 ತಿಮೊ. 6:18, 19; ಯಾಕೋಬ 2:5 ಓದಿ.
10 ಅಭಿಷಿಕ್ತ ಕ್ರೈಸ್ತರು ಹಾಗೂ ಅವರ ಸಂಗಡಿಗರು ಆಧ್ಯಾತ್ಮಿಕ ಐಶ್ವರ್ಯವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ಸೈತಾನನ ಈ ಅಂಧಕಾರಮಯ ಲೋಕದಲ್ಲಿ ಅವರು ‘ಯಥಾರ್ಥರಿಗೆ ಕತ್ತಲೆಯಲ್ಲಿ ಜ್ಯೋತಿಯಾಗಿ ಮೂಡಿದ್ದಾರೆ.’ ಇದನ್ನು ಅವರು, ವಿವೇಕ ಹಾಗೂ ದೇವಜ್ಞಾನವೆಂಬ ಆಧ್ಯಾತ್ಮಿಕ ಖಜಾನೆಯಿಂದ ಇತರರೂ ಪ್ರಯೋಜನ ಪಡೆಯುವಂತೆ ನೆರವಾಗುವ ಮೂಲಕ ಮಾಡಿದ್ದಾರೆ. ವಿರೋಧಿಗಳು ರಾಜ್ಯ ಸಾರುವ ಕೆಲಸಕ್ಕೆ ಮಟ್ಟಹಾಕಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಈ ನೀತಿಯುತ ಕೆಲಸವು “ಸದಾಕಾಲ” ಇರುವುದು. ಪರೀಕ್ಷೆಯ ಕೆಳಗೂ ನೀತಿವಂತರಾಗಿ ಉಳಿಯುವ ದೇವರ ಸೇವಕರಿಗೆ ಶಾಶ್ವತವಾಗಿ ಜೀವಿಸುವ, ಹೌದು “ಸದಾಕಾಲವೂ ಫಲಿಸುತ್ತಿರುವ” ಭರವಸೆ ಇರಬಲ್ಲದು.
11, 12. ದೇವಜನರು ತಮ್ಮ ಭೌತಿಕ ವಸ್ತುಗಳನ್ನು ಬಳಸುವ ಕೆಲವೊಂದು ವಿಧಗಳು ಯಾವುವು?
11 ದೇವಜನರು, ಅಂದರೆ ಅಭಿಷಿಕ್ತ ಆಳು ವರ್ಗದವರು ಹಾಗೂ ‘ಮಹಾ ಸಮೂಹದವರು’ ಭೌತಿಕ ವಿಷಯಗಳ ಕುರಿತು ಉದಾರಿಗಳಾಗಿರುತ್ತಾರೆ. ಕೀರ್ತನೆ 112:9 ಹೇಳುವುದು: “ಬಡವರಿಗೆ ಉದಾರವಾಗಿ ಕೊಡುತ್ತಾನೆ.” ನಿಜ ಕ್ರೈಸ್ತರು ಇಂದು ಕಷ್ಟದಲ್ಲಿರುವ ಜೊತೆ ಕ್ರೈಸ್ತರಿಗೆ ಮತ್ತು ನೆರೆಯವರಿಗೂ ಅನೇಕವೇಳೆ ಭೌತಿಕ ಸಹಾಯ ಕೊಡುತ್ತಾರೆ. ವಿಪತ್ತುಗಳ ಸಮಯದಲ್ಲಿ ಪರಿಹಾರ ಕಾರ್ಯಗಳಿಗಾಗಿಯೂ ಅವರು ಭೌತಿಕ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಾರೆ. ಯೇಸು ಹೇಳಿದಂತೆ, ಹಾಗೆ ಕೊಡುವುದು ಸಹ ಸಂತೋಷ ತರುತ್ತದೆ.—ಅ. ಕೃತ್ಯಗಳು 20:35; 2 ಕೊರಿಂಥ 9:7 ಓದಿ.
12 ಅಷ್ಟುಮಾತ್ರವಲ್ಲದೆ, ಈ ಪತ್ರಿಕೆಯನ್ನು 172 ಭಾಷೆಗಳಲ್ಲಿ ಮುದ್ರಿಸಲು ತಗಲುವ ಖರ್ಚಿನ ಕುರಿತು ಸ್ವಲ್ಪ ಯೋಚಿಸಿರಿ. ಇವುಗಳಲ್ಲಿ ಹೆಚ್ಚಿನ ಭಾಷೆಗಳನ್ನಾಡುವವರು ಬಡಜನರು. ಇದರ ಬಗ್ಗೆಯೂ ಯೋಚಿಸಿರಿ: ನಿಮ್ಮ ಕೈಯಲ್ಲಿರುವ ಈ ಪತ್ರಿಕೆಯನ್ನು, ಕಿವುಡರಿಗಾಗಿ ಭಿನ್ನಭಿನ್ನ ಸನ್ನೆಭಾಷೆಗಳಲ್ಲೂ ಅಂಧರಿಗಾಗಿ ಬ್ರೇಲ್ ಲಿಪಿಯಲ್ಲೂ ಲಭ್ಯಗೊಳಿಸಲಾಗುತ್ತಿದೆ!
ದಯಾಳು ಮತ್ತು ನ್ಯಾಯವಂತ
13. ದಯೆಯಿಂದ ಕೊಡುವ ವಿಷಯದಲ್ಲಿ ಯಾರ ಅತ್ಯುತ್ತಮ ಮಾದರಿಗಳಿವೆ, ಮತ್ತು ನಾವು ಅವರನ್ನು ಹೇಗೆ ಅನುಕರಿಸಬಲ್ಲೆವು?
13 ‘ದಯಾಳುವಾಗಿ ಧನಸಹಾಯಮಾಡುವವನು ಭಾಗ್ಯವಂತನು.’ (ಕೀರ್ತ. 112:5) ಇತರರಿಗೆ ಸಹಾಯನೀಡುವ ಜನರೆಲ್ಲರೂ ದಯಾಳುಗಳಾಗಿರುವುದಿಲ್ಲ ಎಂಬುದನ್ನು ನೀವು ಖಂಡಿತ ಗಮನಿಸಿರಬಹುದು. ಕೆಲವರು ತಮ್ಮ ದೊಡ್ಡಸ್ತಿಕೆಯನ್ನು ತೋರಿಸಲು ಮತ್ತು ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದ ದಾನಮಾಡುತ್ತಾರೆ. ನಿಮ್ಮನ್ನು ಕೀಳಾಗಿ ನೋಡುವ ಇಲ್ಲವೇ ನೀವೊಂದು ಪೀಡೆ ಇಲ್ಲವೆ ಹೊರೆಯಾಗಿದ್ದೀರೆಂದು ಭಾವಿಸುವ ವ್ಯಕ್ತಿಯಿಂದ ಸಹಾಯ ಪಡೆಯುವಾಗಲೂ ಅಷ್ಟೇನೂ ಖುಷಿಯಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಒಬ್ಬ ದಯಾಳು ವ್ಯಕ್ತಿಯಿಂದ ಸಹಾಯ ಪಡೆಯುವುದು ಎಷ್ಟು ಚೈತನ್ಯಕರ! ದಯೆಯಿಂದಲೂ ಸಂತೋಷದಿಂದಲೂ ಕೊಡುವುದರಲ್ಲಿ ಯೆಹೋವನು ಎದ್ದುಕಾಣುವ ಮಾದರಿಯಾಗಿದ್ದಾನೆ. (1 ತಿಮೊ. 1:11; ಯಾಕೋ. 1:5, 17) ಯೇಸು ಕ್ರಿಸ್ತನು ತನ್ನ ತಂದೆಯ ದಯಾಪೂರ್ವಕ ಮಾದರಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಮಾರ್ಕ 1:40-42) ಆದುದರಿಂದ ದೇವರು ನಮ್ಮನ್ನು ನೀತಿವಂತರೆಂದು ಪರಿಗಣಿಸಬೇಕಾದರೆ ನಾವು ಸಂತೋಷ ಹಾಗೂ ದಯೆಯಿಂದ ಕೊಡಬೇಕು. ಇದನ್ನು ವಿಶೇಷವಾಗಿ ಕ್ಷೇತ್ರಸೇವೆಯಲ್ಲಿ ಸಿಗುವ ಜನರಿಗೆ ಆಧ್ಯಾತ್ಮಿಕ ಸಹಾಯ ನೀಡುವ ಮೂಲಕ ಮಾಡಬಹುದು.
14. ‘ನಮ್ಮ ಕಾರ್ಯಗಳನ್ನು ನ್ಯಾಯದಿಂದ ನಡಿಸುವ’ ಕೆಲವೊಂದು ವಿಧಗಳಾವುವು?
14 ‘ತನ್ನ ಕಾರ್ಯಗಳನ್ನು ನೀತಿಯಿಂದ [‘ನ್ಯಾಯದಿಂದ,’ NIBV] ನಡಿಸುವವನು.’ (ಕೀರ್ತ. 112:5) ಮುಂತಿಳಿಸಲಾದಂತೆಯೇ ನಂಬಿಗಸ್ತ ಮನೆವಾರ್ತೆ ವರ್ಗವು ತನ್ನ ಧಣಿಯ ಆಸ್ತಿಯನ್ನು ಯೆಹೋವನ ನ್ಯಾಯಕ್ಕೆ ಹೊಂದಿಕೆಯಲ್ಲಿ ನೋಡಿಕೊಳ್ಳುತ್ತದೆ. (ಲೂಕ 12:42-44 ಓದಿ.) ಈ ನ್ಯಾಯವು, ಕೆಲವೊಮ್ಮೆ ಸಭೆಯಲ್ಲಿ ಗಂಭೀರ ಪಾಪದ ಪ್ರಕರಣಗಳನ್ನು ನಿರ್ವಹಿಸಲಿಕ್ಕಿರುವ ಹಿರಿಯರಿಗೆ ಕೊಡಲಾಗುವ ಶಾಸ್ತ್ರಾಧಾರಿತ ಮಾರ್ಗದರ್ಶನದಲ್ಲಿ ತೋರಿಬರುತ್ತದೆ. ಅಲ್ಲದೆ ಎಲ್ಲ ಸಭೆಗಳು, ಮಿಷನೆರಿ ಮತ್ತು ಬೆತೆಲ್ ಗೃಹಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಆಳು ವರ್ಗ ಕೊಡುವ ಬೈಬಲಾಧರಿತ ನಿರ್ದೇಶನವು ಅದು ನ್ಯಾಯದಿಂದ ಕೆಲಸಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಹಿರಿಯರು ಮಾತ್ರವಲ್ಲ ಬೇರೆ ಕ್ರೈಸ್ತರು ಸಹ ಪರಸ್ಪರರೊಂದಿಗೆ ಮತ್ತು ಅವಿಶ್ವಾಸಿಗಳೊಂದಿಗೆ ವ್ಯವಹಾರಿಸುವಾಗ ನ್ಯಾಯ ತೋರಿಸಬೇಕು. ಈ ಮಾತು ವ್ಯಾಪಾರ ವಹಿವಾಟುಗಳಿಗೂ ಅನ್ವಯಿಸುತ್ತದೆ.—ಮೀಕ 6:8, 11 ಓದಿ.
ನೀತಿವಂತರಿಗಾಗಿ ಆಶೀರ್ವಾದಗಳು
15, 16. (ಎ) ಲೋಕದ ಕೆಟ್ಟ ಸುದ್ದಿಗಳು ನೀತಿವಂತರ ಮೇಲೆ ಯಾವ ಪ್ರಭಾವ ಬೀರುತ್ತವೆ? (ಬಿ) ದೇವರ ಸೇವಕರು ಏನನ್ನು ಮಾಡುತ್ತಿರಲು ದೃಢನಿರ್ಧಾರದಿಂದಿದ್ದಾರೆ?
15 “ಅವನು ಎಂದೂ ಕದಲುವದಿಲ್ಲ; ನೀತಿವಂತನನ್ನು ಯಾವಾಗಲೂ ನೆನಸುವರು. ಅವನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವದರಿಂದ ಅವನ ಮನಸ್ಸು ಸ್ಥಿರವಾಗಿರುವದು. ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವನೆಂಬ ಭರವಸವಿರುವದರಿಂದ ಅವನ ಮನಸ್ಸು ದೃಢವಾಗಿದೆ, ಹೆದರುವದಿಲ್ಲ.” (ಕೀರ್ತ. 112:6-8) ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಯುದ್ಧ, ಭಯೋತ್ಪಾದನೆ, ಹೊಸ ಹೊಸ ರೋಗಗಳು, ಮತ್ತೆ ತಲೆಯೆತ್ತುತ್ತಿರುವ ಹಳೇ ರೋಗಗಳು, ಪಾತಕ, ಬಡತನ ಮತ್ತು ವಿನಾಶಕಾರಿ ಮಾಲಿನ್ಯಗಳೆಂಬ ಕೆಟ್ಟ ಸುದ್ದಿಗಳು ಕೇಳಿಬಂದಿಲ್ಲ. ದೇವರು ಯಾರನ್ನು ನೀತಿವಂತರೆಂದು ಪರಿಗಣಿಸುತ್ತಾನೋ ಅವರ ಕಿವಿಗೂ ಈ ಕೆಟ್ಟ ಸುದ್ದಿಗಳು ಬೀಳುತ್ತವೆ. ಆದರೆ ಅವುಗಳನ್ನು ಕೇಳಿ ಅವರು ಭಯದಿಂದ ಕಂಗಾಲಾಗುವುದಿಲ್ಲ. ಅದರ ಬದಲು ಅವರ ಹೃದಯ “ಸ್ಥಿರ” ಹಾಗೂ “ದೃಢ” ಆಗಿದೆ. ಏಕೆಂದರೆ, ದೇವರ ನೀತಿಯ ಹೊಸ ಲೋಕವು ಹತ್ತಿರವಿದೆಯೆಂದು ತಿಳಿದವರಾಗಿ ಅವರು ಭವಿಷ್ಯವನ್ನು ಭರವಸೆಯಿಂದ ಎದುರುನೋಡುತ್ತಾರೆ. ಒಂದುವೇಳೆ ವಿಪತ್ತು ಬಂದೆರಗಿದರೂ ಅವರು ಸನ್ನಿವೇಶವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಲ್ಲರು ಏಕೆಂದರೆ ಅವರು ಆಸರೆಗಾಗಿ ಯೆಹೋವನ ಮೇಲೆ ಅವಲಂಬಿಸುತ್ತಾರೆ. ಆತನು ನೀತಿವಂತರನ್ನು ‘ಕದಲುವಂತೆ’ ಎಂದಿಗೂ ಬಿಡುವುದಿಲ್ಲ. ತಾಳಿಕೊಳ್ಳಲು ಬೇಕಾದ ಸಹಾಯ ಹಾಗೂ ಬಲ ಖಂಡಿತ ಕೊಡುತ್ತಾನೆ.—ಫಿಲಿ. 4:13.
16 ದೇವರ ದೃಷ್ಟಿಯಲ್ಲಿ ನೀತಿವಂತರಾಗಿರುವವರು, ವಿರೋಧಿಗಳ ದ್ವೇಷವನ್ನೂ ಸುಳ್ಳು ವದಂತಿಗಳನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಇವೆಲ್ಲ ನಿಜ ಕ್ರೈಸ್ತರ ಬಾಯಿ ಕಟ್ಟಿಹಾಕಲು ವಿಫಲವಾಗಿವೆ ಮತ್ತು ಮುಂದಕ್ಕೂ ವಿಫಲವಾಗುವವು. ಅದಕ್ಕೆ ಬದಲಾಗಿ, ಯೆಹೋವನ ಸೇವಕರು ಆತನು ಕೊಟ್ಟಿರುವ ಕೆಲಸ, ಅಂದರೆ ರಾಜ್ಯದ ಸುವಾರ್ತೆ ಸಾರುವ ಮತ್ತು ಪ್ರತಿಕ್ರಿಯೆ ತೋರಿಸುವವರೆಲ್ಲರನ್ನು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸ್ಥಿರರಾಗಿಯೂ ದೃಢರಾಗಿಯೂ ಮುಂದುವರಿಯುತ್ತಾರೆ. ಅಂತ್ಯವು ಹತ್ತಿರ ಬರುತ್ತಾ ಇದ್ದಂತೆ ನೀತಿವಂತರು ಹೆಚ್ಚೆಚ್ಚು ವಿರೋಧ ಅನುಭವಿಸುವರು ಎಂಬುದರಲ್ಲಿ ಸಂಶಯವೇ ಇಲ್ಲ. ಅಂಥ ದ್ವೇಷವು, ಪಿಶಾಚನಾದ ಸೈತಾನನು ಮಾಗೋಗನ ಗೋಗನೆಂಬ ಪಾತ್ರದಲ್ಲಿ ದೇವರ ಸೇವಕರ ಮೇಲೆ ಲೋಕವ್ಯಾಪಕ ಆಕ್ರಮಣ ಮಾಡುವಾಗ ಉತ್ತುಂಗಕ್ಕೇರುವುದು. ಆಗ, ಅವರು ‘ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವರು’ ಏಕೆಂದರೆ ತುಂಬ ಅವಮಾನಕಾರೀ ವಿಧದಲ್ಲಿ ದುಷ್ಟರು ಸೋಲುವರು. ಯೆಹೋವನ ನಾಮದ ಸಂಪೂರ್ಣ ಪವಿತ್ರೀಕರಣವನ್ನು ನೋಡುವುದು ಎಂಥ ರೋಚಕ ಅನುಭವವಾಗಿರುವುದು!—ಯೆಹೆ. 38:18, 22, 23.
‘ಮಹಿಮೆಯಿಂದ ಎತ್ತಲಾಗುವುದು’
17. ನೀತಿವಂತನನ್ನು ‘ಮಹಿಮೆಯಿಂದ ಎತ್ತಲಾಗುವುದು’ ಹೇಗೆ?
17 ಪಿಶಾಚನ ಮತ್ತು ಲೋಕದ ವಿರೋಧವಿಲ್ಲದೆ ಯೆಹೋವನನ್ನು ಐಕ್ಯದಿಂದ ಸ್ತುತಿಸುವುದು ಎಷ್ಟು ಆನಂದದಾಯಕವಾಗಿರುವುದು! ಇದನ್ನು, ದೇವರೊಂದಿಗೆ ನೀತಿಯುತ ನಿಲುವನ್ನು ಕಾಪಾಡಿಕೊಳ್ಳುವವರೆಲ್ಲರು ಶಾಶ್ವತವಾಗಿ ಆನಂದಿಸುವರು. ನೀತಿವಂತರು ಅವಮಾನ ಮತ್ತು ಸೋಲನ್ನು ಅನುಭವಿಸುವುದಿಲ್ಲ, ಏಕೆಂದರೆ ಯೆಹೋವನು ಮಾತುಕೊಡುವಂತೆ ಅವರ ‘ಕೊಂಬನ್ನು ಮಹಿಮೆಯಿಂದ ಎತ್ತಲಾಗುವುದು.’ (ಕೀರ್ತ. 112:9) ಯೆಹೋವನ ಪರಮಾಧಿಕಾರದ ಶತ್ರುಗಳೆಲ್ಲರ ಸೋಲನ್ನು ನೋಡಿ ನೀತಿವಂತನು ವಿಜಯದಿಂದ ಹರ್ಷಿಸುವನು.
18. ಕೀರ್ತನೆ 112ರ ಕೊನೆಯ ಮಾತುಗಳು ಹೇಗೆ ನೆರವೇರುವವು?
18 “ದುಷ್ಟನು ನೋಡಿ ವ್ಯಥೆಪಡುವನು; ಅವನು ಹಲ್ಲುಕಡಿಯುತ್ತಾ ಲಯಹೊಂದುವನು. ದುಷ್ಟರ ನಿರೀಕ್ಷೆಯು [“ಆಶೆಯು,” NIBV] ಭಂಗವಾಗುವದು.” (ಕೀರ್ತ. 112:10) ದೇವಜನರನ್ನು ವಿರೋಧಿಸುತ್ತಾ ಇರುವವರೆಲ್ಲರೂ ತಮ್ಮ ಈರ್ಷ್ಯೆ ಹಾಗೂ ದ್ವೇಷದಲ್ಲೇ ‘ಲಯವಾಗುವರು.’ ನಮ್ಮ ಕೆಲಸ ನಿಂತುಹೋಗುವುದನ್ನು ನೋಡುವ ಅವರ ಆಶೆ, ಬರಲಿರುವ ‘ಮಹಾ ಸಂಕಟದಲ್ಲಿ’ ಅವರೊಂದಿಗೇ ಇಲ್ಲವಾಗುವುದು.—ಮತ್ತಾ. 24:21.
19. ನಾವು ಯಾವ ಭರವಸೆಯಿಂದಿರಬಲ್ಲೆವು?
19 ಆ ಭವ್ಯ ವಿಜಯವನ್ನು ಆಚರಿಸಲು ನೀವೂ ಅಲ್ಲಿರುವಿರೋ? ಅಥವಾ ಒಂದುವೇಳೆ ನೀವು ಸೈತಾನನ ಲೋಕದ ಅಂತ್ಯದ ಮುಂಚೆಯೇ ರೋಗ ಇಲ್ಲವೇ ವೃದ್ಧಾಪ್ಯದಿಂದ ಕೊನೆಯುಸಿರೆಳೆಯುವಲ್ಲಿ, ತದನಂತರ ಪುನರುತ್ಥಾನವಾಗುವ ‘ನೀತಿವಂತರಲ್ಲಿ’ ಒಬ್ಬರಾಗಿರುವಿರೋ? (ಅ. ಕೃ. 24:15) ನೀವು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಡುತ್ತಾ ಇರುವಲ್ಲಿ, ಮತ್ತು 112ನೇ ಕೀರ್ತನೆಯಲ್ಲಿ ತಿಳಿಸಲಾದ “ನೀತಿವಂತ”ನಿಂದ ಪ್ರತಿನಿಧಿಸಲ್ಪಟ್ಟವರು ಮಾಡುವಂತೆಯೇ ಯೆಹೋವನನ್ನು ಅನುಕರಿಸುವಲ್ಲಿ ಅದಕ್ಕೆ ಉತ್ತರ ಹೌದಾಗಿರಬಲ್ಲದು. (ಎಫೆಸ 5:1, 2 ಓದಿ.) ಇಂಥವರ ‘ನೆನಪು’ ಯಾವಾಗಲೂ ಉಳಿಯುವಂತೆ ಯೆಹೋವನು ನೋಡಿಕೊಳ್ಳುವನು ಮತ್ತು ಅವರ ನೀತಿಯ ಕೃತ್ಯಗಳು ನಿರ್ಲಕ್ಷಿಸಲ್ಪಡದಿರುವವು. ಯೆಹೋವನು ಅವರನ್ನು ಎಂದೆಂದಿಗೂ ನೆನಪಿನಲ್ಲಿಡುವನು ಮತ್ತು ಪ್ರೀತಿಸುವನು.—ಕೀರ್ತ. 112:3, 6, 9.
[ಪಾದಟಿಪ್ಪಣಿಗಳು]
a ಈ ಎರಡು ಕೀರ್ತನೆಗಳು ಒಂದಕ್ಕೊಂದು ಪೂರಕವಾಗಿರುವುದು, ಅವುಗಳ ರಚನಾಕ್ರಮ ಹಾಗೂ ಅವುಗಳಲ್ಲಿರುವ ವಿಷಯದಿಂದಲೂ ತೋರಿಬರುತ್ತದೆ. 111ನೇ ಕೀರ್ತನೆಯಲ್ಲಿ ಹೊಗಳಲಾಗಿರುವ ದೇವರ ಗುಣಗಳನ್ನು 112ನೇ ಕೀರ್ತನೆಯಲ್ಲಿ ತಿಳಿಸಲಾಗಿರುವ ದೇವಭೀರು ಮನುಷ್ಯನು ಅನುಕರಿಸುತ್ತಾನೆ. ಇದು, ಕೀರ್ತನೆ 111:3, 4 ಹಾಗೂ ಕೀರ್ತನೆ 112:3, 4ನ್ನು ಹೋಲಿಸಿ ನೋಡುವಾಗ ಗೊತ್ತಾಗುತ್ತದೆ.
3. ದೇವರು ತನ್ನ ಮಗನಿಗೆ ಸ್ವರ್ಗೀಯ ಜೀವದ ಬಹುಮಾನವನ್ನು ಸಂತೋಷದಿಂದ ಕೊಟ್ಟನೇಕೆ?
[ಪುಟ 25ರಲ್ಲಿರುವ ಚಿತ್ರ]
ದೇವರೊಂದಿಗೆ ನೀತಿಯುತ ನಿಲುವನ್ನು ಕಾಪಾಡಿಕೊಳ್ಳಲು ನಾವು ಯೇಸುವಿನ ಸುರಿದ ರಕ್ತದಲ್ಲಿ ನಂಬಿಕೆಯನ್ನಿಡಬೇಕು
[ಪುಟ 26ರಲ್ಲಿರುವ ಚಿತ್ರ]
ಸಂತೋಷದಿಂದ ಕೊಡಲಾಗುವ ಕಾಣಿಕೆಗಳು ಪರಿಹಾರ ಕಾರ್ಯ ಮತ್ತು ಬೈಬಲ್ ಪ್ರಕಾಶನಗಳ ವಿತರಣೆಗೆ ನೆರವು ನೀಡಬಲ್ಲವು
[ಪುಟ 28ರಲ್ಲಿರುವ ಚಿತ್ರ]
ಧ್ಯಾನಕ್ಕಾಗಿ ಪ್ರಶ್ನೆಗಳು
• ‘ಹಲ್ಲೆಲೂಯಾ’ ಎಂದು ಹೇಳಲು ನಮಗಿರುವ ಕೆಲವೊಂದು ಕಾರಣಗಳಾವವು?
• ಆಧುನಿಕ ದಿನದಲ್ಲಾದ ಯಾವ ಅಭಿವೃದ್ಧಿ ಸತ್ಕ್ರೈಸ್ತರಿಗೆ ತುಂಬ ಖುಷಿಕೊಟ್ಟಿದೆ?
• ಯಾವ ರೀತಿಯಲ್ಲಿ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ?