“ನಮ್ಮ ಯೆಹೋವ ದೇವರಿಗೆ ಸಮಾನರು ಯಾರು?”
“ನಮ್ಮ ಯೆಹೋವ ದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿದ್ದಾನೆ.”—ಕೀರ್ತನೆ 113:5.
1, 2. (ಎ) ಯೆಹೋವನ ಸಾಕ್ಷಿಗಳು ದೇವರನ್ನು ಮತ್ತು ಬೈಬಲನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ಯಾವ ಪ್ರಶ್ನೆಗಳು ಪರಿಗಣನೆಗೆ ಪಾತ್ರವು?
ಯೆಹೋವನ ಸ್ತುತಿಗಾರರು ನಿಶ್ಚಯವಾಗಿಯೂ ಆಶೀರ್ವದಿತರು. ಈ ಸಂತೋಷಿತ ಜನಸಂದಣಿಯಲ್ಲಿರುವುದು ಎಂತಹ ಒಂದು ಸೌಭಾಗ್ಯ! ಆತನ ಸಾಕ್ಷಿಗಳೋಪಾದಿ, ನಾವು ದೇವರ ವಾಕ್ಯವಾದ ಬೈಬಲಿನ ಸೂಚನೆ, ನಿಯಮಗಳು, ಬೋಧನೆಗಳು, ವಾಗ್ದಾನಗಳು, ಮತ್ತು ಪ್ರವಾದನೆಗಳನ್ನು ಸ್ವೀಕರಿಸುತ್ತೇವೆ. ಶಾಸ್ತ್ರಗ್ರಂಥಗಳಿಂದ ಕಲಿಯುವುದಕ್ಕೆ ಮತ್ತು “ದೇವರಿಂದ [ಯೆಹೋವನಿಂದ, NW] ಶಿಕ್ಷಿತರಾಗಿರು” ವುದಕ್ಕೆ ನಾವು ಸಂತೋಷಪಡುತ್ತೇವೆ.—ಯೋಹಾನ 6:45.
2 ದೇವರ ಕಡೆಗೆ ಅವರಿಗಿರುವ ಗಾಢವಾದ ಭಯಭಕ್ತಿಯ ಕಾರಣ, ಯೆಹೋವನ ಸಾಕ್ಷಿಗಳು ಹೀಗೆ ಕೇಳಬಲ್ಲರು: “ನಮ್ಮ ಯೆಹೋವದೇವರಿಗೆ ಸಮಾನರು ಯಾರು?” (ಕೀರ್ತನೆ 113:5) ಕೀರ್ತನೆಗಾರನ ಆ ಮಾತುಗಳು ನಂಬಿಕೆಯನ್ನು ಸೂಚಿಸುತ್ತವೆ. ಆದರೆ ಸಾಕ್ಷಿಗಳಿಗೆ ದೇವರಲ್ಲಿ ಅಂಥ ನಂಬಿಕೆಯು ಇರುವುದೇಕೆ? ಮತ್ತು ಯೆಹೋವನನ್ನು ಸ್ತುತಿಸಲಿಕ್ಕಾಗಿ ಯಾವ ಕಾರಣಗಳು ಅವರಿಗಿವೆ?
ನಂಬಿಕೆ ಮತ್ತು ಸ್ತುತಿ ಯೋಗ್ಯವಾಗಿವೆ
3. ಹಲ್ಲೆಲ್ ಕೀರ್ತನೆಗಳು ಯಾವುವು, ಮತ್ತು ಅವುಗಳಿಗೆ ಹಾಗೇಕೆ ಹೆಸರಿವೆ?
3 ಯೆಹೋವನಲ್ಲಿ ನಂಬಿಕೆಯು ಸಮರ್ಥನೀಯ ಯಾಕಂದರೆ ಆತನು ಅದ್ವಿತೀಯ ದೇವರು. ಇದು ಆರು ಹಲ್ಲೆಲ್ ಕೀರ್ತನೆಗಳ ಭಾಗವಾದ ಕೀರ್ತನೆ 113, 114, ಮತ್ತು 115 ರಲ್ಲಿ ಒತ್ತಿಹೇಳಲ್ಪಟ್ಟಿದೆ. ರಬ್ಬಿಗಳ ಸ್ಕೂಲ್ ಆಫ್ ಹಿಲ್ಲೆಲ್ಗೆ ಅನುಸಾರವಾಗಿ, 113 ಮತ್ತು 114 ನೆಯ ಕೀರ್ತನೆಗಳು, ಯೆಹೂದ್ಯ ಪಸ್ಕದೂಟದಲ್ಲಿ ದ್ರಾಕ್ಷಾಮದ್ಯದ ಎರಡನೆಯ ಪಾತ್ರೆಯನ್ನು ಸುರಿದಾದ ಮೇಲೆ ಮತ್ತು ಆಚರಣೆಯ ತಾತ್ಪರ್ಯವನ್ನು ವಿವರಿಸಿದ ಅನಂತರ ಹಾಡಲಾಗುತ್ತಿದ್ದವು. ದ್ರಾಕ್ಷಾಮದ್ಯದ ನಾಲ್ಕನೆಯ ಪಾತ್ರೆಯ ಅನಂತರ, 115 ರಿಂದ 118 ರ ತನಕದ ಕೀರ್ತನೆಗಳು ಹಾಡಲ್ಪಡುತ್ತಿದ್ದವು. (ಮತ್ತಾಯ 26:30 ಹೋಲಿಸಿರಿ.) ಅವುಗಳಿಗೆ “ಹಲ್ಲೆಲ್ ಕೀರ್ತನೆಗಳು” ಎಂಬ ಹೆಸರಿದೆ ಯಾಕಂದರೆ ಅವು ಪದೇ ಪದೇ ಹಲ್ಲೆಲೂಯಾ!—“ಯಾಹುವಿಗೆ ಸ್ತೋತ್ರ!” ಎಂಬ ಉದ್ಗಾರವನ್ನು ಉಪಯೋಗಿಸುತ್ತವೆ.
4. “ಹಲ್ಲೆಲೂಯಾ” ಎಂಬ ಪದರೂಪದ ಅರ್ಥವೇನು, ಮತ್ತು ಬೈಬಲಿನಲ್ಲಿ ಅದೆಷ್ಟು ಸಾರಿ ಬರುತ್ತದೆ?
4 “ಹಲ್ಲೆಲೂಯಾ!” ಎಂಬದು ಕೀರ್ತನೆಗಳಲ್ಲಿ 24 ಸಾರಿ ತೋರಿಬರುವ ಒಂದು ಹೀಬ್ರು ಅಭಿವ್ಯಂಜಕದ ಲಿಪ್ಯಂತರವಾಗಿದೆ. ಬೈಬಲಿನಲ್ಲಿ ಬೇರೆಕಡೆ, ಅದರ ಒಂದು ಗ್ರೀಕ್ ಪದರೂಪವು, ಸುಳ್ಳು ಧರ್ಮವಾದ ಮಹಾ ಬಾಬೆಲಿನ ನಾಶನದ ಮೇಲಾದ ಸಂತೋಷಕ್ಕೆ ಸಂಬಂಧದಲ್ಲಿ, ಮತ್ತು ಯೆಹೋವ ದೇವರು ಅರಸನಾಗಿ ಆಳಲು ಆರಂಭಿಸಿದೊಂದಿಗೆ ಜತೆಗೂಡಿದ್ದ ಉಲ್ಲಾಸದ ಸಂಬಂಧದಲ್ಲಿ ನಾಲ್ಕು ಬಾರಿ ಗೋಚರಿಸುತ್ತದೆ. (ಪ್ರಕಟನೆ 19:1-6) ಈ ಹಲ್ಲೆಲ್ ಕೀರ್ತನೆಗಳಲ್ಲಿ ಮೂರನ್ನು ನಾವೀಗ ಪರೀಕ್ಷೆ ಮಾಡುವಾಗ, ಯೆಹೋವನ ಸ್ತೋತ್ರಕ್ಕಾಗಿ ನಾವೀ ಹಾಡುಗಳನ್ನು ಹಾಡುತ್ತಿರುವೆವೋ ಎಂಬಂತೆ ನಮ್ಮನ್ನು ಚೆನ್ನಾಗಿ ಕಲ್ಪಿಸಿಕೊಳ್ಳಬಹುದು.
ಯಾಹುವಿಗೆ ಸ್ತೋತ್ರ!
5. ಕೀರ್ತನೆ 113 ಯಾವ ಪ್ರಶ್ನೆಯನ್ನು ಉತ್ತರಿಸುತ್ತದೆ, ಮತ್ತು ಕೀರ್ತನೆ 113:1, 2 ರ ಆಜ್ಞೆಯು ವಿಶೇಷವಾಗಿ ಯಾರಿಗೆ ಅನ್ವಯಿಸುತ್ತದೆ?
5 ಯೆಹೋವನನ್ನು ಸ್ತುತಿಸುವುದೇಕೆ ಎಂಬ ಪ್ರಶ್ನೆಯನ್ನು ಕೀರ್ತನೆ 113 ಉತ್ತರಿಸುತ್ತದೆ. ಅದು ಈ ಅಪ್ಪಣೆಯಿಂದ ಆರಂಭಿಸುತ್ತದೆ: “ಯಾಹುವಿಗೆ ಸ್ತೋತ್ರ! ಯೆಹೋವನ ಸೇವಕರೇ, ಸ್ತೋತ್ರ ಮಾಡಿರಿ; ಯೆಹೋವನಾಮಸ್ತುತಿ ಮಾಡಿರಿ. ಇಂದಿನಿಂದ ಯುಗಯುಗಕ್ಕೂ ಯೆಹೋವನಾಮವು ಕೀರ್ತಿಸಲ್ಪಡಲಿ.” (ಕೀರ್ತನೆ 113:1, 2) “ಹಲ್ಲೆಲೂಯಾ!” ಹೌದು, “ಯಾಹುವಿಗೆ ಸ್ತೋತ್ರ!” ಆ ಆಜ್ಞೆಯು ವಿಶೇಷವಾಗಿ ಈ “ಅಂತ್ಯಕಾಲದಲ್ಲಿ” ದೇವಜನರಿಗೆ ಅನ್ವಯಿಸುತ್ತದೆ. (ದಾನಿಯೇಲ 12:4) ಇಂದಿನಿಂದ ಮತ್ತು ಯುಗಯುಗಕ್ಕೂ ಯೆಹೋವನ ನಾಮವು ಭೂವ್ಯಾಪಕವಾಗಿ ಫನತೆಗೇರಿಸಲ್ಪಡಲಿರುವುದು. ಯೆಹೋವನು ದೇವರೆಂತಲೂ, ಕ್ರಿಸ್ತನು ರಾಜನೆಂತಲೂ, ಮತ್ತು ರಾಜ್ಯವು ಪರಲೋಕದಲ್ಲಿ ಸ್ಥಾಪಿತವಾಗಿದೆಯೆಂತಲೂ ಆತನ ಸಾಕ್ಷಿಗಳೀಗ ಘೋಷಿಸುತ್ತಾರೆ. ಯೆಹೋವನ ಈ ಸ್ತುತಿಸುವಿಕೆಯನ್ನು ಪಿಶಾಚನಾದ ಸೈತಾನನು ಮತ್ತು ಅವನ ಸಂಸ್ಥೆಯು ತಡೆಗಟ್ಟಲಾರದು.
6. ಯೆಹೋವನು ‘ಮೂಡಣಿಂದ ಪಡುವಣ ವರೆಗೂ’ ಸ್ತುತಿಹೊಂದುವುದು ಹೇಗೆ?
6 ಈ ಸ್ತುತಿ ಗಾನವು ಯೆಹೋವನು ಅದನ್ನು ಭೂಮಿಯಲ್ಲೆಲ್ಲಾ ತುಂಬುವಂತೆ ಮಾಡುವ ತನಕ ಮುಂದುವರಿಯುತ್ತಾ ಇರುವುದು. “ಯೆಹೋವನ ನಾಮವು ಮೂಡಣಿಂದ ಪಡುವಣ ವರೆಗೂ ಸ್ತುತಿಹೊಂದಲಿ.” (ಕೀರ್ತನೆ 113:3) ಇದು ಯಾವುದೇ ಐಹಿಕ ಜೀವಿಗಳಿಂದ ಮಾಡಲ್ಪಡುವ ದೈನಂದಿನದ ಆರಾಧನೆಗಿಂತ ಹೆಚ್ಚಿನ ಅರ್ಥದಲ್ಲಿದೆ. ಭೂಮಿಯೆಲ್ಲವನ್ನು ಆವರಿಸುತ್ತಾ, ಸೂರ್ಯನು ಮೂಡಣಿಂದ ಉದಯಿಸುತ್ತಾನೆ ಮತ್ತು ಪಡುವಣದಲ್ಲಿ ಕಂತುತ್ತಾನೆ. ಸೂರ್ಯನು ಪ್ರಕಾಶಿಸುವಲ್ಲಿಲ್ಲಾ, ಸುಳ್ಳು ಧರ್ಮದ ಮತ್ತು ಸೈತಾನನ ಸಂಸ್ಥೆಯ ಬಂಧನದಿಂದ ಮುಕ್ತರಾದ ಜನರೆಲ್ಲರಿಂದ ಯೆಹೋವನ ನಾಮವು ಶೀಘ್ರದಲ್ಲೇ ಸ್ತುತಿಸಲ್ಪಡುವುದು. ವಾಸ್ತವದಲ್ಲಿ, ಎಂದಿಗೂ ಅಂತ್ಯವಾಗದ ಈ ಗಾನವು ಈಗ ಯೆಹೋವನ ಅಭಿಷಿಕ್ತ ಸಾಕ್ಷಿಗಳಿಂದ ಮತ್ತು ಆತನ ರಾಜನಾದ ಯೇಸು ಕ್ರಿಸ್ತನ ಐಹಿಕ ಮಕ್ಕಳಾಗುವವರಿಂದ ಹಾಡಲ್ಪಡುತ್ತಿದೆ. ಯೆಹೋವನ ಸ್ತೋತ್ರಗಳ ಗಾಯಕರೋಪಾದಿ ಎಂಥ ಒಂದು ಸುಯೋಗವು ಅವರಿಗಿದೆ!
ಯೆಹೋವನು ಅತುಲ್ಯನು
7. ಕೀರ್ತನೆ 113:4 ರಲ್ಲಿ ಯೆಹೋವನ ಪರಮಾಧಿಕಾರದ ಯಾವ ಎರಡು ವೈಶಿಷ್ಠ್ಯಗಳು ಗಮನಿಸಲ್ಪಟ್ಟಿವೆ?
7 ಕೀರ್ತನೆಗಾರನು ಕೂಡಿಸಿದ್ದು: “ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಗಳಲ್ಲಿ ಮೆರೆಯುತ್ತದೆ.” (ಕೀರ್ತನೆ 113:4) ಇದು ದೇವರ ಸರ್ವಶ್ರೇಷ್ಠತೆಯ ಎರಡು ವೈಶಿಷ್ಟ್ಯಗಳಿಗೆ ಗಮನ ಕೊಡುತ್ತದೆ: (1) “ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾದ” ಸರ್ವಶ್ರೇಷ್ಠ ಯೆಹೋವನಿಗೆ ಅವರು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇದ್ದಾರೆ; (ಯೆಶಾಯ 40:15; ದಾನಿಯೇಲ 7:18) (2) ಆತನ ಮಹಿಮೆಯು ಭೌತಿಕ ಆಕಾಶಗಳಿಗಿಂತಲೂ ಎಷ್ಟೋ ಮಹತ್ತಾಗಿದೆ ಯಾಕಂದರೆ ದೇವದೂತರು ಆತನ ಪರಮ ಚಿತ್ತವನ್ನು ನಡಿಸುತ್ತಾರೆ.—ಕೀರ್ತನೆ 19:1, 2; 103:20, 21.
8. ಪರಲೋಕದಲ್ಲಿ ಮತ್ತು ಭೂಮಿಯಲ್ಲಿ ವಿಷಯಗಳನ್ನು ಲಕ್ಷಿಸುವುದಕ್ಕಾಗಿ ಏಕೆ ಮತ್ತು ಹೇಗೆ ಯೆಹೋವನು ಬಾಗುತ್ತಾನೆ?
8 ದೇವರ ಮಹೋನ್ನತೆಯಿಂದ ಪ್ರೇರಿಸಲ್ಪಟ್ಟವನಾಗಿ, ಕೀರ್ತನೆಗಾರನು ಅಂದದ್ದು: “ನಮ್ಮ ಯೆಹೋವದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ.” (ಕೀರ್ತನೆ 113:5, 6) ದೇವರು ಎಷ್ಟು ಮಹೋನ್ನತನೆಂದರೆ ಪರಲೋಕದಲ್ಲಿ ಮತ್ತು ಭೂಮಿಯ ಮೇಲಿನ ವಿಷಯಗಳನ್ನು ಗಮನಕ್ಕೆ ತರಲು ಆತನು ಬಾಗಬೇಕಾಗಿದೆ. ಯೆಹೋವನು ಯಾರಿಗೂ ಕನಿಷ್ಠನಲ್ಲ ಅಥವಾ ಇತರರಿಗೆ ಅಧೀನನಲ್ಲದಿದ್ದರೂ, ಅಲ್ಪರಾದ ಪಾಪಿಗಳ ಕಡೆಗೆ ದಯೆ ಮತ್ತು ಕನಿಕರವನ್ನು ತೋರಿಸುವುದರಲ್ಲಿ ಆತನು ದೀನತೆಯನ್ನು ಪ್ರದರ್ಶಿಸುತ್ತಾನೆ. ಅಭಿಷಿಕ್ತ ಕ್ರೈಸ್ತರಿಗಾಗಿ ಮತ್ತು ಮಾನವಕುಲದ ಲೋಕಕ್ಕಾಗಿ ತನ್ನ ಮಗನಾದ ಯೇಸು ಕ್ರಿಸ್ತನನ್ನು “ನಿವಾರಣಮಾಡುವ ಯಜ್ಞವಾಗಿ” ಒದಗಿಸಿಕೊಟ್ಟದ್ದು ದೇವರ ದೀನತೆಯ ಒಂದು ಅಭಿವ್ಯಂಜಕವಾಗಿದೆ.—1 ಯೋಹಾನ 2:1, 2.
ಯೆಹೋವನು ಕನಿಕರವುಳ್ಳಾತನು
9, 10. ದೇವರು ಹೇಗೆ ‘ಬಡವರನ್ನು ಎತ್ತಿ, ಪ್ರಭುಗಳ ಜೊತೆಯಲ್ಲಿ ಕುಳ್ಳಿರಿಸುತ್ತಾನೆ’?
9 ದೇವರ ಕನಿಕರವನ್ನು ಒತ್ತಿಹೇಳುತ್ತಾ, ಕೀರ್ತನೆಗಾರನು ಮತ್ತೂ ಹೇಳುವುದೇನಂದರೆ, ಯೆಹೋವನು “ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ. ಪ್ರಭುಗಳ ಜೊತೆಯಲ್ಲಿ ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ. ಬಂಜೆಯು ಮಕ್ಕಳೊಂದಿಗಳಾಗಿ ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ. ಯಾಹುವಿಗೆ ಸ್ತೋತ್ರ!” (ಕೀರ್ತನೆ 113:7-9) ಯೆಹೋವನ ಜನರಿಗೆ ನಂಬಿಕೆ ಇದೆ ಏನಂದರೆ ಆತನು ದೀನರಾದ ಬಡವರನ್ನು ರಕ್ಷಿಸಿ, ಅವರ ಸ್ಥಿತಿಗತಿಯನ್ನು ಬದಲಾಯಿಸಿ, ಅವರ ಯೋಗ್ಯ ಆವಶ್ಯಕತೆಗಳನ್ನು ಮತ್ತು ಅಪೇಕ್ಷೆಗಳನ್ನು ತೃಪ್ತಿಗೊಳಿಸುವನು. ‘ಮಹೋನ್ನತನು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದಾನೆ.’—ಯೆಶಾಯ 57:15.
10 ಯೆಹೋವನು ‘ಬಡವರನ್ನು ಎತ್ತಿ ಪ್ರಭುಗಳ ಜೊತೆಯಲ್ಲಿ ಕುಳ್ಳಿರಿಸುವುದು’ ಹೇಗೆ? ದೇವರ ಚಿತ್ತವಾದಾಗ, ಅವನು ತನ್ನ ಸೇವಕರನ್ನು ಆ ಪ್ರಭುಗಳಿಗೆ ಸರಿಸಮಾನವಾದ ಮಹಿಮೆಯ ಸ್ಥಾನಗಳಲ್ಲಿ ಇಡುತ್ತಾನೆ. ಐಗುಪ್ತದ ಆಹಾರ ಮಂತ್ರಿಯಾದ ಯೋಸೇಫನ ಸಂದರ್ಭದಲ್ಲಿ ಆತನು ಇದನ್ನು ಮಾಡಿದ್ದನು. (ಆದಿಕಾಂಡ 41:37-49) ಇಸ್ರಾಯೇಲ್ನಲ್ಲಿ, ಪ್ರಭುಗಳೊಂದಿಗೆ ಅಥವಾ ಯೆಹೋವನ ಜನರಲ್ಲಿ ಅಧಿಕಾರಸ್ಥಾನದಲ್ಲಿರುವವರ ಸಂಗಡ ಕೂತುಕೊಳ್ಳುವುದು ಒಂದು ನೆಚ್ಚತಕ್ಕ ಸುಯೋಗವಾಗಿತ್ತು. ಇಂದಿನ ಕ್ರೈಸ್ತ ಹಿರಿಯರ ಹಾಗೆ, ಅಂಥ ಪುರುಷರಿಗೆ ದೇವರ ಸಹಾಯ ಮತ್ತು ಆಶೀರ್ವಾದವು ಇತ್ತು.
11. ಕೀರ್ತನೆ 113:7-9 ವಿಶೇಷವಾಗಿ ಆಧುನಿಕ ಕಾಲದ ಯೆಹೋವನ ಜನರಿಗೆ ಅನ್ವಯಿಸುತ್ತದೆ ಎಂದು ಏಕೆ ಹೇಳಬಹುದು?
11 ‘ಬಂಜೆಯು ಮಕ್ಕಳೊಂದಿಗಳಾಗಿ ಸಂತೋಷದಿಂದಿರುವ ಹಾಗೆ ಮಾಡುವ’ ಕುರಿತೇನು? ದೇವರು ಬಂಜೆಯಾಗಿದ್ದ ಹನ್ನಳಿಗೆ ಒಬ್ಬ ಮಗ—ಸಮುವೇಲನನ್ನು ಕೊಟ್ಟನು, ಅವನನ್ನು ಆಕೆ ಆತನ ಸೇವೆಗೆ ಮುಡಿಪಾಗಿಟಳ್ಟು. (1 ಸಮುವೇಲ 1:20-28) ಅಧಿಕ ಅರ್ಥಗರ್ಭಿತವಾಗಿ, ಯೇಸುವಿನಿಂದ ಮತ್ತು ಸಾ.ಶ. 33ರ ಪಂಚಾಶತ್ತಮದಲ್ಲಿ ಆತನ ಶಿಷ್ಯರ ಮೇಲೆ ಪವಿತ್ರ ಆತ್ಮದ ಸುರಿಸುವಿಕೆಯಿಂದ ಆರಂಭಿಸಿ, ದೇವರ ಸಾಂಕೇತಿಕ ಸ್ತ್ರೀಯಾದ ಸ್ವರ್ಗೀಯ ಯೆರೂಸಲೇಮು, ಆತ್ಮಿಕ ಮಕ್ಕಳಿಗೆ ಜನ್ಮಕೊಡಲಾರಂಭಿಸಿದಳು. (ಯೆಶಾಯ 54:1-10, 13; ಅ. ಕೃತ್ಯಗಳು 2:1-4) ಮತ್ತು ಬಾಬೆಲಿನ ಬಂದಿವಾಸದ ಅನಂತರ ದೇವರು ಯೆಹೂದ್ಯರನ್ನು ಅವರ ಸ್ವದೇಶಕ್ಕೆ ಪುನಃಸ್ಥಾಪಿಸಿದ ಹಾಗೆ, 1919 ರಲ್ಲಿ ಅವನು “ದೇವರ ಇಸ್ರಾಯೇಲ್’ ಆಗಿರುವ ಅಭಿಷಿಕ್ತ ಉಳಿಕೆಯವರನ್ನು ಬಾಬೆಲಿನ ಬಂದಿವಾಸದಿಂದ ಮುಕ್ತಗೊಳಿಸಿದನು ಮತ್ತು ಅವರನ್ನು ಆತ್ಮಿಕವಾಗಿ ಎಷ್ಟು ಮಹತ್ತಾಗಿ ಆಶೀರ್ವದಿಸಿದನೆಂದರೆ ಕೀರ್ತನೆ 113:7-9 ರ ಮಾತುಗಳು ಅವರಿಗೆ ಅನ್ವಯಿಸುತ್ತವೆ. (ಗಲಾತ್ಯ 6:16) ಯೆಹೋವನ ಕರ್ತವ್ಯನಿಷ್ಠ ಸಾಕ್ಷಿಗಳೋಪಾದಿ ಆತ್ಮಿಕ ಇಸ್ರಾಯೇಲ್ಯರಲ್ಲಿ ಉಳಿಕೆಯವರು ಮತ್ತು ಭೂನಿರೀಕ್ಷೆಗಳುಳ್ಳ ಅವರ ಸಂಗಡಿಗರು, ಕೀರ್ತನೆ 113 ರ ಕೊನೆಯ ಮಾತುಗಳಿಗೆ ಹೃದಯಪೂರ್ವಕ ಪ್ರತಿವರ್ತನೆಯನ್ನು ತೋರಿಸುತ್ತಿದ್ದಾರೆ: “ಯಾಹುವಿಗೆ ಸ್ತೋತ್ರ!”
ಯೆಹೋವನ ಅದ್ವಿತೀಯತೆಯ ರುಜುವಾತು
12. ಕೀರ್ತನೆ 114 ಯೆಹೋವನ ಅದ್ವಿತೀಯತೆಯನ್ನು ಹೇಗೆ ತೋರಿಸುತ್ತದೆ?
12 ಇಸ್ರಾಯೇಲ್ಯರನ್ನು ಒಳಗೂಡಿಸಿದ್ದ ಅಸದೃಶ ಫಟನೆಗಳನ್ನು ತಿಳಿಸಿದ ಮೂಲಕ ಕೀರ್ತನೆ 114 ಯೆಹೋವನ ಅದ್ವಿತೀಯತೆಯನ್ನು ತೋರಿಸುತ್ತದೆ. ಕೀರ್ತನೆಗಾರನು ಹಾಡಿದ್ದು: “ಇಸ್ರಾಯೇಲ್ಯರು ಐಗುಪ್ತ ದೇಶವನ್ನೂ ಯಾಕೋಬನ ಮನೆತನದವರು ಅನ್ಯಭಾಷೆಯ ಜನಾಂಗವನ್ನೂ ಬಿಟಮ್ಟೇಲೆ ಯೆಹೂದವು ದೇವರ ಪರಿಶುದ್ಧವಾಸಸ್ಥಾನವೂ ಇಸ್ರಾಯೇಲು ಆತನ ರಾಜ್ಯವೂ ಆದವು.” (ಕೀರ್ತನೆ 114:1, 2) ಯಾರ ಭಾಷೆಯು ಅವರ ಕಿವಿಗಳಿಗೆ ವಿಚಿತ್ರವಾಗಿತ್ತೋ ಆ ಐಗುಪ್ತ್ಯರ ದಾಸ್ಯದಿಂದ ದೇವರು ಇಸ್ರಾಯೇಲ್ಯರನ್ನು ಬಿಡಿಸಿದನು. ಯೆಹೂದ ಮತ್ತು ಇಸ್ರಾಯೇಲನ್ನು ಕವಿತಾರೂಪದ ಅನುರೂಪತೆಯಲ್ಲಿ ಸಂಬೋಧಿಸಿದ ಯೆಹೋವನ ಜನರ ಬಿಡುಗಡೆಯು, ಇಂದು ತನ್ನ ಸೇವಕರೆಲ್ಲರನ್ನು ದೇವರು ವಿಮೋಚಿಸಶಕ್ತನು ಎಂಬದನ್ನು ತೋರಿಸುತ್ತದೆ.
13. ಕೀರ್ತನೆ 114:3-6 ಯೆಹೋವನ ಪರಮಾಧಿಕಾರವನ್ನು ಹೇಗೆ ತೋರಿಸುತ್ತದೆ ಮತ್ತು ಪುರಾತನ ಇಸ್ರಾಯೇಲಿನ ಅನುಭವಗಳಿಗೆ ಅನ್ವಯಿಸುತ್ತದೆ?
13 ಸಮಸ್ತ ಸೃಷ್ಟಿಯ ಮೇಲೆ ಯೆಹೋವನ ಪರಮಾಧಿಕಾರವು ಈ ಮಾತುಗಳಲ್ಲಿ ಪ್ರತ್ಯಕ್ಷವಾಗುತ್ತದೆ: “ಸಮುದ್ರವು ಕಂಡು ಓಡಿಹೋಯಿತು; ಯೊರ್ದನ್ ಹೊಳೆಯು ಹಿಂದಿರುಗಿತು. ಪರ್ವತಗಳು ಟಗರುಗಳಂತೆಯೂ ಗುಡ್ಡಗಳು ಕುರಿಮರಿಗಳಂತೆಯೂ ಹಾರಾಡಿದವು. ಸಮುದ್ರವೇ, ನಿನಗೇನಾಯಿತು? ಯೊರ್ದನೇ, ಯಾಕೆ ಹಿಂತಿರುಗುತ್ತೀ? ಪರ್ವತಗಳೇ, ನೀವು ಟಗರುಗಳಂತೆಯೂ ಗುಡ್ಡಗಳೇ, ನೀವು ಕುರಿಮರಿಗಳಂತೆಯೂ ಯಾಕೆ ಹಾರಾಡುತ್ತೀರಿ?” (ಕೀರ್ತನೆ 114:3-6) ದೇವರು ಕೆಂಪು ಸಮುದ್ರದ ಮಧ್ಯೆ ತನ್ನ ಜನರಿಗಾಗಿ ಒಂದು ದಾರಿಯನ್ನು ತೆರೆದಾಗ ಅದು “ಓಡಿಹೋಯಿತು.” ಆಗ ಇಸ್ರಾಯೇಲ್ಯರು ಮೊದಲಿನಂತೆ ಹಿಂತಿರುಗಿದ ನೀರಿನಲ್ಲಿ ಸತ್ತ ಐಗುಪ್ತ್ಯರ ವಿರುದ್ಧ ದೇವರ ಮಹಾ ಹಸ್ತಕ್ರಿಯೆಯನ್ನು ಕಣ್ಣಾರೆಕಂಡರು. (ವಿಮೋಚನಕಾಂಡ 14:21-31) ದೈವಿಕ ಶಕ್ತಿಯ ಒಂದು ತದ್ರೀತಿಯ ಪ್ರದರ್ಶನದಲ್ಲಿ, ಯೊರ್ದನ್ ನದಿಯ “ನೀರು ಹಿಂದೆ ಸರಿದು” ಇಸ್ರಾಯೇಲ್ಯರು ಕಾನಾನ್ ದೇಶಕ್ಕೆ ದಾಟಿಹೋಗುವಂತೆ ಬಿಟ್ಟುಕೊಟ್ಟಿತು. (ಯೆಹೋಶುವ 3:14-16) ನಿಯಮದ ಒಡಬಂಡಿಕೆಯು ಪ್ರತಿಷ್ಠಿಸಲ್ಪಟ್ಟ ಸಮಯದಲ್ಲಿ ಸೀನಾಯಿ ಬೆಟ್ಟವು ಹೊಗೆಯೇರಿ ಕಂಪಿಸಿದಾಗ ‘ಪರ್ವತಗಳು ಟಗರುಗಳಂತೆ ಹಾರಾಡಿದವು.’ (ವಿಮೋಚನಕಾಂಡ 19:7-18) ಆವನ ಹಾಡಿನ ಪರಮಾವಧಿಯು ಹತ್ತಿರವೇ ಇದದ್ದರಿಂದ, ನಿರ್ಜೀವ ಸಮುದ್ರ, ಹೊಳೆ, ಪರ್ವತಗಳು ಮತ್ತು ಬೆಟ್ಟಗಳು ಯೆಹೋವನ ಶಕ್ತಿಯ ಈ ಪ್ರದರ್ಶನಗಳಿಂದ ಭಯಚಕಿತಗೊಂಡಿದ್ದವೆಂದು ಪ್ರಾಯಶಃ ಸೂಚಿಸಲು ಕೀರ್ತನೆಗಾರನು ವಿಷಯಗಳನ್ನು ಪ್ರಶ್ನಾರೂಪದಲ್ಲಿ ಹಾಕಿರಬೇಕು.
14. ಮೆರೀಬಾ ಮತ್ತು ಕಾದೇಶ್ನಲ್ಲಿ ಯೆಹೋವನ ಶಕಿಯ್ತಿಂದ ಏನನ್ನು ಮಾಡಲಾಯಿತು, ಮತ್ತು ಇದು ಆತನ ಆಧುನಿಕ-ದಿನದ ಸೇವಕರನ್ನು ಹೇಗೆ ಪ್ರಭಾವಿಸಬೇಕು?
14 ಯೆಹೋವನ ಶಕ್ತಿಗೆ ಮತ್ತೂ ಸೂಚಿಸುತ್ತಾ, ಕೀರ್ತನೆಗಾರನು ಹಾಡಿದ್ದು: “ಭೂಲೋಕವೇ, ಕರ್ತನು ಪ್ರತ್ಯಕ್ಷನಾಗಿದ್ದಾನೆ, ಯಾಕೋಬನ ದೇವರು ನಿನ್ನ ಮುಂದೆ ಇದ್ದಾನೆ, ಕಂಪಿಸು. ಆತನು ಬಂಡೆಯನ್ನು ಕೆರೆಯನ್ನಾಗಿಯೂ ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುತ್ತಾನೆ.” (ಕೀರ್ತನೆ 114:7, 8) ಭೂಮಿಯೆಲ್ಲಾದರ ಕರ್ತನೂ ಸಾರ್ವತ್ರಿಕ ಅರಸನೂ ಆದ ಯೆಹೋವನ ಮುಂದೆ ಮಾನವಕುಲವು ಭಯಚಕಿತರಾಗಿ ನಿಂತಿರಬೇಕೆಂದು ಕೀರ್ತನೆಗಾರನು ಹೀಗೆ ಒಂದು ಸಾಂಕೇತಿಕ ರೀತಿಯಲ್ಲಿ ಸೂಚಿಸುತ್ತಾನೆ. ಆತನು ಇಸ್ರಾಯೇಲ್ ಅಥವಾ “ಯಾಕೋಬನ ದೇವರು” ಆಗಿದ್ದಂತೆಯೇ ಆತ್ಮಿಕ ಇಸ್ರಾಯೇಲ್ಯರ ಮತ್ತು ಅವರ ಐಹಿಕ ಸಂಗಡಿಗರ ದೇವರೂ ಆಗಿದ್ದಾನೆ. ಮೆರೀಬಾ ಮತ್ತು ಕಾದೇಶ್ ಅರಣ್ಯದಲ್ಲಿ, ಇಸ್ರಾಯೇಲ್ಯರಿಗೆ ಆಶ್ಚರ್ಯಕರವಾಗಿ ನೀರನ್ನು ಒದಗಿಸಿದ ಮೂಲಕ “ಬಂಡೆಯನ್ನು ಕೆರೆಯನ್ನಾಗಿಯೂ ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುವ” ತನ್ನ ಶಕ್ತಿಯನ್ನು ಯೆಹೋವನು ತೋರಿಸಿದನು. (ವಿಮೋಚನಕಾಂಡ 17:1-7; ಅರಣ್ಯಕಾಂಡ 20:1-11) ಯೆಹೋವನ ಅಪಾರವಾದ ಶಕ್ತಿಯ ಮತ್ತು ಕೋಮಲ ಪರಾಮರಿಕೆಯ ಅಂಥ ಮರುಜ್ಞಾಪಕಗಳು, ಆತನಲ್ಲಿ ಸಂಪೂರ್ಣವಾದ ನಂಬಿಕೆಯನ್ನಿಡುವಂತೆ ಆತನ ಸಾಕ್ಷಿಗಳಿಗೆ ಯುಕ್ತ ಕಾರಣಗಳನ್ನು ಕೊಡುತ್ತವೆ.
ವಿಗ್ರಹ ದೇವರುಗಳಿಗೆ ಅಸದೃಶ
15. ಕೀರ್ತನೆ 115 ನ್ನು ಹೇಗೆ ಹಾಡಿರಬಹುದು?
15 ಯೆಹೋವನನ್ನು ಸ್ತುತಿಸುವಂತೆ ಮತ್ತು ಆತನಲ್ಲಿ ಭರವಸೆ ಇಡುವಂತೆ ಕೀರ್ತನೆ 115 ನಮ್ಮನ್ನು ಪ್ರೇರೇಪಿಸುತ್ತದೆ. ಆಶೀರ್ವಾದ ಮತ್ತು ಸಹಾಯವು ಆತನಿಗೇ ಸೇರಿದ್ದೆಂದು ಅದು ಹೇಳುತ್ತದೆ ಮತ್ತು ವಿಗ್ರಹಗಳನ್ನು ವ್ಯರ್ಥವೆಂದು ರುಜುಪಡಿಸುತ್ತದೆ. ಈ ಕೀರ್ತನೆಯನ್ನು ಸಂವಾದಗಾನವಾಗಿ ಹಾಡಿರಬಹುದಾಗಿದೆ. ಅಂದರೆ, ಒಂದು ದ್ವನಿಯು, “ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ” ಎಂದು ಹಾಡಬಹುದು. ಮತ್ತು ಸಭೆಯು, “ಅವರ ಸಹಾಯಕನೂ ಗುರಾಣಿಯೂ ಆತನೇ” ಎಂದು ಪ್ರತ್ಯುತ್ತರವನ್ನು ಕೊಟ್ಟಿರಬಹುದು.—ಕೀರ್ತನೆ 115:11.
16. ಯೆಹೋವ ಮತ್ತು ಜನಾಂಗಗಳ ವಿಗ್ರಹಗಳ ನಡುವೆ ಯಾವ ವ್ಯತ್ಯಾಸತೋರಿಸಬಹುದು?
16 ಘನವು ನಮಗಲ್ಲ, ಬದಲಿಗೆ ಕೃಪೆ, ಕರ್ತವ್ಯನಿಷ್ಠ ಪ್ರೀತಿ, ಮತ್ತು ಸತ್ಯತೆಗಳ ದೇವರಾದ ಯೆಹೋವನ ನಾಮಕ್ಕೆ ಸಲ್ಲಬೇಕು. (ಕೀರ್ತನೆ 115:1) ಶತ್ರುಗಳು ಅಣಕಿಸುತ್ತಾ ಹೀಗೆ ಕೇಳಬಹುದು: “ಅವರ ದೇವರು ಎಲ್ಲಿದ್ದಾನೆ?” ಆದರೆ ಯೆಹೋವನ ಜನರು ಹೀಗೆ ಉತ್ತರಿಸಬಲ್ಲರು: “ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾನೆ.” (ವಚನಗಳು 2, 3) ಜನಾಂಗಗಳ ವಿಗ್ರಹಗಳಾದರೋ ಏನನ್ನೂ ಮಾಡಲಾರವು ಯಾಕಂದರೆ ಅವು ಮನುಷ್ಯನು ಮಾಡಿರುವ ಬೆಳ್ಳಿ ಮತ್ತು ಬಂಗಾರದ ಮೂರ್ತಿಗಳೇ. ಅವುಗಳಿಗೆ ಬಾಯಿಗಳು, ಕಣ್ಣುಗಳು ಮತ್ತು ಕಿವಿಗಳು ಇದ್ದರೂ ಅವು ಮೂಕ, ಕುರುಡು, ಮತ್ತು ಕಿವುಡಾಗಿವೆ. ಅವುಗಳಿಗೆ ಮೂಗುಗಳಿವೆ, ಆದರೆ ಮೂಸಲಾರವು, ಕಾಲುಗಳಿವೆ, ಆದರೆ ನಡೆಯಲಾರವು. ಗಂಟಲುಗಳಿವೆ, ಆದರೆ ಯಾವ ಶಬ್ದವನ್ನೂ ಮಾಡಲಾರವು. ನಿರ್ಬಲ ವಿಗ್ರಹಗಳನ್ನು ಮಾಡುವವರು ಹಾಗೂ ಅವುಗಳಲ್ಲಿ ಭರವಸೆಯಿಡುವವರು ಅವುಗಳಂತೆಯೇ ನಿರ್ಜೀವಿಗಳಾಗಿ ಪರಿಣಮಿಸುವರು.—ವಚನಗಳು 4-8.
17. ಮೃತರು ಯೆಹೋವನನ್ನು ಸ್ತುತಿಸುವುದಿಲ್ಲವಾದ್ದರಿಂದ, ನಾವೇನು ಮಾಡಬೇಕು ಮತ್ತು ಯಾವ ಪ್ರತೀಕ್ಷೆಗಳೊಂದಿಗೆ?
17 ಇಸ್ರಾಯೇಲ್ಯರ, ಆರೋನನ ಯಾಜಕ ಮನೆತನದ, ಮತ್ತು ದೇವರಿಗೆ ಭಯಪಡುವವರೆಲ್ಲರ ಸಹಾಯಕನೂ, ರಕ್ಷಣಾ ಗುರಾಣಿಯೂ ಆದ ಯೆಹೋವನಲ್ಲಿ ಭರವಸೆಯಿಡುವಂತೆ ಅನಂತರ ಬುದ್ಧಿವಾದವನ್ನು ನೀಡಲಾಗಿದೆ. (ಕೀರ್ತನೆ 115:9-11) ಯೆಹೋವನಿಗೆ ಭಯಪಡುವವರೋಪಾದಿ, ದೇವರೆಡೆಗೆ ಪರಮ ಪೂಜ್ಯತೆಯೂ ಮತ್ತು ಆತನನ್ನು ಅಪ್ರಸನ್ನಗೊಳಿಸುವ ಹಿತಕರವಾದ ಭಯವೂ ನಮಗಿದೆ. “ಭೂಪರಲೋಕಗಳನ್ನು ಉಂಟುಮಾಡಿದ” ಆತನು ತನ್ನ ಕರ್ತವ್ಯನಿಷ್ಠ ಆರಾಧಕರನ್ನು ಆಶೀರ್ವದಿಸುತ್ತಾನೆಂಬ ನಂಬಿಕೆಯೂ ನಮಗಿದೆ. (ವಚನಗಳು 12-15) ಪರಲೋಕವು ದೇವರ ಸಿಂಹಾಸನದ ಸ್ಥಾನವು, ಆದರೆ ಭೂಮಿಯನ್ನು ಆತನು ಕರ್ತವ್ಯನಿಷ್ಠ ಮತ್ತು ವಿಧೇಯ ಮಾನವಕುಲದ ನಿತ್ಯ ಬೀಡಾಗಿ ಮಾಡಿರುತ್ತಾನೆ. ಮೌನರೂ, ಪ್ರಜ್ಞರಹಿತರೂ ಆದ ಮೃತರು ಯೆಹೋವನನ್ನು ಸ್ತುತಿಸಲಾರರಾದರ್ದಿಂದ, ಜೀವಿತರಾಗಿರುವ ನಾವು, ಸಂಪೂರ್ಣ ಭಕ್ತಿ ಮತ್ತು ಕರ್ತವ್ಯನಿಷ್ಠೆಯಿಂದ ಹಾಗೆ ಮಾಡತಕ್ಕದ್ದು. (ಪ್ರಸಂಗಿ 9:5) ಯಾರು ಯೆಹೋವನನ್ನು ಸ್ತುತಿಸುತ್ತಾರೋ ಅವರು ಮಾತ್ರವೇ ನಿತ್ಯ ಜೀವವನ್ನು ಆನಂದಿಸುವರು ಮತ್ತು ನಿತ್ಯವಾಗಿ “ಯಾಹುವನ್ನು ಸ್ತುತಿಸಲು,” ಮತ್ತು ”ಸದಾಕಾಲವೂ” ಆತನನ್ನು ಕೊಂಡಾಡಲು ಶಕ್ತರಾಗುವರು. ಆದುದರಿಂದ, “ಯಾಹುವಿಗೆ ಸ್ತೋತ್ರ!” ಮಾಡಿರಿ ಎಂಬ ಪ್ರಬೋಧನೆಯನ್ನು ಪಾಲಿಸುತ್ತಿರುವವರೊಂದಿಗೆ ಕರ್ತವ್ಯನಿಷ್ಠೆಯಿಂದ ನಾವೂ ಭಾಗಿಗಳಾಗೋಣ.—ಕೀರ್ತನೆ 115:16-18.
ಯೆಹೋವನ ಆಶ್ಚರ್ಯಕರ ಗುಣಗಳು
18, 19. ಯಾವ ರೀತಿಗಳಲ್ಲಿ ಯೆಹೋವನ ಗುಣಗಳು ಸುಳ್ಳು ದೇವರುಗಳಿಂದ ಆತನನ್ನು ಪ್ರತ್ಯೇಕಿಸುತ್ತವೆ?
18 ನಿರ್ಜೀವ ವಿಗ್ರಹಗಳಿಗೆ ಅಸದೃಶವಾಗಿ, ಯೆಹೋವನಾದರೋ ಆಶ್ಚರ್ಯಕರ ಗುಣಗಳನ್ನು ಪ್ರದರ್ಶಿಸುವವನಾದ ಜೀವಂತ ದೇವರಾಗಿದ್ದಾನೆ. ಆತನು ಪ್ರೀತಿಸ್ವರೂಪಿಯು, “ಕನಿಕರವೂ ದಯೆಯೂ . . . ದೀರ್ಘಶಾಂತನೂ ಕೃಪೆಯೂ” ಉಳ್ಳಾತನು. (ವಿಮೋಚನಕಾಂಡ 34:6; 1 ಯೋಹಾನ 4:8) ಯಾರಿಗೆ ಮಕ್ಕಳನ್ನು ಬಲಿಯರ್ಪಿಸಲಾಗುತ್ತಿತ್ತೋ ಆ ಕ್ರೂರ ಕಾನಾನ್ಯ ದೇವರಾದ ಮೋಲೇಕನಿಗಿಂತ ಆತನೆಷ್ಟು ಬೇರೆಯಾಗಿದ್ದಾನೆ! ಈ ದೇವರ ವಿಗ್ರಹಕ್ಕೆ ಒಬ್ಬ ಮನುಷ್ಯನ ರೂಪವೂ ಹೋರಿಯ ತಲೆಯೂ ಇತ್ತೆಂದು ಸೂಚಿಸಲಾಗಿದೆ. ವಿಗ್ರಹವನ್ನು ಕೆಂಪಗೆ ಕಾಯಿಸಲಾಗುತ್ತಿತ್ತೆಂದೂ, ಮತ್ತು ಅದರ ಚಾಚಿದ ತೋಳುಗಳಿಗೆ ಎಸೆಯಲ್ಪಡುವ ಮಕ್ಕಳು, ಕೆಳಗೆ ಜ್ವಲಿಸುವ ಕುಲುಮೆಗೆ ಬೀಳುತ್ತಿದ್ದವೆಂದೂ ವರದಿಯಾಗಿದೆ. ಆದರೆ ಯೆಹೋವನು ಎಷ್ಟು ಪ್ರೀತಿಯೂ ಕನಿಕರವೂ ಉಳ್ಳವನೆಂದರೆ ಅಂಥ ಮನುಷ್ಯಾಹುತಿಗಳ ಕಲ್ಪನೆಯೂ ಆತನ “ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.”—ಯೆರೆಮೀಯ 7:31.
19 ಯೆಹೋವನ ಪ್ರಧಾನ ಗುಣಗಳಲ್ಲಿ ಪರಿಪೂರ್ಣ ನ್ಯಾಯ, ಅಪಾರ ವಿವೇಕ, ಮತ್ತು ಸರ್ವಶಕ್ತ ಬಲವೂ ಸೇರಿರುತ್ತವೆ. (ಧರ್ಮೋಪದೇಶಕಾಂಡ 32:4; ಯೋಬ 12:13; ಯೆಶಾಯ 40:26) ಪುರಾಣ ಸಾಹಿತ್ಯಕ್ಕೆ ಸಂಬಂಧಿಸಿದ ದೇವತೆಗಳ ಕುರಿತೇನು? ನ್ಯಾಯವನ್ನು ಆಚರಿಸುವ ಬದಲಿಗೆ, ಬಬಿಲೋನ್ಯ ದೇವ-ದೇವತೆಗಳು ಪ್ರತೀಕಾರಕರಾಗಿದ್ದರು. ಐಗುಪ್ತದ ದೇವರುಗಳು ನ್ಯಾಯದ ಆದರ್ಶ ಮೂರ್ತಿಗಳಲ್ಲ, ಬದಲಾಗಿ ಮಾನುಷ ನಿರ್ಬಲತೆಗಳಿರುವವರಾಗಿ ಚಿತ್ರಿಸಲ್ಪಟ್ಟಿದ್ದರು. ಅದೇನೂ ಆಶ್ಚರ್ಯಕರವಲ್ಲ, ಯಾಕಂದರೆ ಸುಳ್ಳು ದೇವ-ದೇವತೆಗಳು ಜ್ಞಾನಿಗಳೆಂದು ಹೇಳಿಕೊಳ್ಳುವ “ವಿವೇಕವಿಲ್ಲದ ಮನಸ್ಸಿನ” ಮಾನವರ ಉತ್ಪಾದನೆಗಳಾಗಿರುತ್ತವೆ. (ರೋಮಾಪುರ 1:21-23) ಗ್ರೀಕ್ ದೇವರುಗಳು ಒಬ್ಬರ ವಿರುದ್ಧವಾಗಿ ಒಬ್ಬರು ಒಳಸಂಚು ಹೂಡಿದ್ದರೆಂದು ಊಹಿಸಲಾಗಿದೆ. ದೃಷ್ಟಾಂತಕ್ಕಾಗಿ, ದಂತ ಕಥೆಗಳಲ್ಲಿ, ಜೀಯಸ್ ತನ್ನ ತಂದೆಯಾದ ಕ್ರಾನಸ್ನ್ನು ಪಟ್ಟದಿಂದುರುಳಿಸಿದ ಮೂಲಕ ತನ್ನ ಅಧಿಕಾರದ ದುರುಪಯೋಗ ಮಾಡಿದನು, ಕ್ರಾನಸ್ ತನ್ನ ಸ್ವಂತ ತಂದೆ ಯುರೇನಸ್ನನ್ನು ಪದಚ್ಯುತನನ್ನಾಗಿ ಮಾಡಿದ್ದನು. ಪರಿಪೂರ್ಣವಾದ ಪ್ರೀತಿ, ನ್ಯಾಯ, ವಿವೇಕ, ಮತ್ತು ಶಕ್ತಿಯನ್ನು ತೋರಿಸುವ ಜೀವಂತನೂ ಸತ್ಯಸ್ವರೂಪನೂ ಆದ ದೇವರಾದ ಯೆಹೋವನನ್ನು ಸೇವಿಸುವುದು ಮತ್ತು ಸ್ತುತಿಸುವುದು ಅದೆಷ್ಟು ಆಶೀರ್ವಾದಕರವು!
ಯೆಹೋವನು ನಿತ್ಯ ಸ್ತುತಿಗೆ ಪಾತ್ರನು
20. ಯೆಹೋವನ ನಾಮವನ್ನು ಸ್ತುತಿಸುವುದಕ್ಕೆ ದಾವೀದನು ಯಾವ ಕಾರಣಗಳನ್ನು ಕೊಟ್ಟನು?
20 ಹಲ್ಲೆಲ್ ಕೀರ್ತನೆಗಳು ತೋರಿಸುವ ಪ್ರಕಾರ, ಯೆಹೋವನು ನಿತ್ಯ ಸ್ತುತಿಗೆ ಪಾತ್ರನು. ತದ್ರೀತಿಯಲ್ಲಿ, ದಾವೀದನು ಮತ್ತು ಅವನ ಜತೆ ಇಸ್ರಾಯೇಲ್ಯರು ದೇವಾಲಯದ ಕಟ್ಟುವಿಕೆಗೆ ನೆರವಾದಾಗ, ಸಭಾಸಮೂಹದ ಮುಂದೆ ಅವನನಂದದ್ದು: “ನಮ್ಮ ಪಿತೃವಾಗಿರುವ ಇಸ್ರಾಯೇಲನ ದೇವರೇ, ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ. ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವನಾಗಿರುತ್ತೀ. ಪ್ರಭಾವೈಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ; ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ; ಎಲ್ಲಾ ದೊಡ್ಡಸ್ತಿಕೆಗೂ ಶಕಿಗ್ತೂ ನೀನೇ ಮೂಲನು. ಆದದರಿಂದ ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.”—1 ಪೂರ್ವಕಾಲ 29:10-13.
21. ಯೆಹೋವನು ಸ್ವರ್ಗೀಯ ಸೇನೆಯಿಂದ ಸ್ತುತಿಸಲ್ಪಡುತ್ತಾನೆಂಬದಕ್ಕೆ ಪ್ರಕಟನೆ 19:1-6 ಯಾವ ರುಜುವಾತನ್ನು ಕೊಡುತ್ತದೆ?
21 ಯೆಹೋವನು ಪರಲೋಕದಲ್ಲಿ ಸಹ ಕೊಂಡಾಡಲ್ಪಡುತ್ತಾನೆ ಮತ್ತು ನಿತ್ಯವಾಗಿ ಸ್ತುತಿಸಲ್ಪಡುತ್ತಾನೆ. ಅಪೊಸ್ತಲ ಯೋಹಾನನು “ಪರಲೋಕದಲ್ಲಿ ದೊಡ್ಡ ಗುಂಪು” ಹೀಗನ್ನುವುದನ್ನು ಕೇಳಿದನು: “ಹಲ್ಲೆಲೂಯಾ. ಜಯವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲಿ ಉಂಟು; ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀ [ಮಹಾ ಬಾಬೆಲ್] ಗೆ ಆತನು ನ್ಯಾಯ ತೀರಿಸಿ ಆವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಪುನಃ ಅವರಂದದ್ದು: “ಹಲ್ಲೆಲೂಯಾ.” ಆಗ “ಇಪ್ಪತ್ತುನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ” ಹಾಗೆಯೇ ಅಂದರು. ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು ಅಂದದ್ದು: “ದೇವರ ದಾಸರೆಲ್ಲರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ.” ಅನಂತರ ಯೋಹಾನನು ಕೂಡಿಸಿದ್ದು: “ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಜಲಪ್ರವಾಹಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ಕೇಳಿದೆನು. ಅದು—ಹಲ್ಲೆಲೂಯಾ; ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು [ಯೆಹೋವನು, NW] ಆಳುತ್ತಾನೆ . . . ಎಂದು ಹೇಳಿತು.”—ಪ್ರಕಟನೆ 19:1-6.
22. ಯೆಹೋವನು ಆತನ ವಾಗ್ದತ್ತ ಹೊಸ ಲೋಕದಲ್ಲಿ ಹೇಗೆ ಸ್ತುತಿಸಲ್ಪಡಲಿರುವನು?
22 ಸ್ವರ್ಗೀಯ ಸೇನೆಗಳು ಯೆಹೋವನನ್ನು ಸ್ತುತಿಸುವುದು ಅದೆಷ್ಟು ಯುಕ್ತವಾಗಿದೆ! ಈಗ ಹತ್ತಿರವಾಗಿರುವ ಆತನ ಹೊಸಲೋಕದಲ್ಲಿ, ಪುನರುತ್ಥಾನಗೊಳ್ಳುವ ಕರ್ತವ್ಯನಿಷ್ಠ ಜನರು ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗುವವರೊಂದಿಗೆ ಯೆಹೋವನನ್ನು ಸ್ತುತಿಸುವುದರಲ್ಲಿ ಭಾಗಿಗಳಾಗುವರು. ಉನ್ನತವಾದ ಪರ್ವತಗಳು ತಮ್ಮ ತಲೆಯೆತ್ತಿ ದೇವರಿಗೆ ಸ್ತುತಿಗಾನಗಳನ್ನು ಹಾಡುವುವು. ಹಚ್ಚನೆಯ ಗುಡ್ಡಗಳೂ ಫಲಭರಿತ ವೃಕ್ಷಗಳೂ ಆತನ ಸ್ತುತಿಗಳನ್ನು ಹಾಡುವುವು. ಹೌದು, ಜೀವವಿರುವ ಮತ್ತು ಉಸಿರಾಡುವ ಪ್ರತಿಯೊಂದು ಜೀವಿಯೂ ಮಹಾ ಹಲ್ಲೆಲೂಯಾ ಮೇಳಗೀತದಲ್ಲಿ ಯೆಹೋವನ ನಾಮವನ್ನು ಸ್ತುತಿಸುವುದು! (ಕೀರ್ತನೆ 148) ಆ ಸಂತೋಷಭರಿತ ಗುಂಪಿನಲ್ಲಿ ನಿಮ್ಮ ದ್ವನಿಯೂ ಕೇಳಿಬರುವುದೋ? ಯಾಹುವನ್ನು ಆತನ ಜನರೊಂದಿಗೆ ಕರ್ತವ್ಯನಿಷ್ಠೆಯಿಂದ ಸೇವಿಸಿದ್ದಲ್ಲಿ ಅದು ಕೇಳಿಬರುವುದು. ಅದು ನಿಮ್ಮ ಜೀವಿತದ ಉದ್ದೇಶವಾಗಿರಬೇಕು, ಯಾಕಂದರೆ ನಮ್ಮ ಯೆಹೋವ ದೇವರಿಗೆ ಸಮಾನರು ಯಾರು?
ನೀವು ಹೇಗೆ ಉತ್ತರಿಸುವಿರಿ?
▫ ಯೆಹೋವ ದೇವರನ್ನು ಸ್ತುತಿಸುವುದೇಕೆ?
▫ ಯಾವ ವಿಧಗಳಲ್ಲಿ ಯೆಹೋವನು ಅತುಲ್ಯನಾಗಿದ್ದಾನೆ?
▫ ಯೆಹೋವನು ಕನಿಕರವುಳ್ಳಾತನು ಎಂಬದಕ್ಕೆ ಯಾವ ರುಜುವಾತು ಇದೆ?
▫ ನಿರ್ಜೀವ ವಿಗ್ರಹಗಳು ಮತ್ತು ಸುಳ್ಳು ದೇವರುಗಳಿಂದ ಯೆಹೋವನು ಹೇಗೆ ಪ್ರತ್ಯೇಕನಾಗಿದ್ದಾನೆ?
▫ ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಯೆಹೋವನಿಗೆ ನಿತ್ಯ ಸುತ್ತಿಯು ಸಿಗಲಿದೆ ಎಂದು ನಾವೇಕೆ ಹೇಳಬಲ್ಲೆವು?
[ಪುಟ 9 ರಲ್ಲಿರುವ ಚಿತ್ರ]
ಹಲ್ಲೆಲ್ ಕೀರ್ತನೆಗಳು ಪಸ್ಕದೂಟದ ಸಮಯದಲ್ಲಿ ಹಾಡಲ್ಪಡುತ್ತಿದ್ದವು