-
ಬೈಬಲ್ ಕಲಿಯೋದನ್ನ ಮುಂದುವರಿಸಿ!ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 12
ಬೈಬಲ್ ಕಲಿಯೋದನ್ನ ಮುಂದುವರಿಸಿ!
ಬೈಬಲ್ ಕಲಿಯೋದನ್ನ ಒಂದು ಸುಂದರ ಪ್ರಯಾಣಕ್ಕೆ ಹೋಲಿಸಬಹುದು. ಈ ಪ್ರಯಾಣದಲ್ಲಿ ಕೆಲವು ಅಡೆತಡೆಗಳು ಬರಬಹುದು. ಹಾಗಿದ್ರೂ ಬೈಬಲ್ ಕಲಿಯೋದನ್ನ ತಪ್ಪದೇ ಮುಂದುವರಿಸಲು ಯಾವುದು ಸಹಾಯ ಮಾಡುತ್ತೆ? ಹೀಗೆ ಮಾಡೋದ್ರಿಂದ ಏನು ಪ್ರಯೋಜನ ಇದೆ? ಇದರ ಬಗ್ಗೆ ನೋಡೋಣ.
1. ಬೈಬಲ್ ಕಲಿಯೋದ್ರಿಂದ ಏನು ಪ್ರಯೋಜನ ಇದೆ?
“ಪವಿತ್ರ ಗ್ರಂಥಕ್ಕೆ ಜೀವ ಇದೆ, ತುಂಬಾ ಶಕ್ತಿ ಇದೆ.” (ಇಬ್ರಿಯ 4:12) ದೇವರು ನಿಮ್ಮನ್ನ ಎಷ್ಟು ಪ್ರೀತಿಸುತ್ತಾನೆ ಅಂತ ಬೈಬಲಿನಿಂದ ಕಲಿಯಬಹುದು. ಅಷ್ಟೇ ಅಲ್ಲ ದೇವರಿಗೆ ಏನಿಷ್ಟ, ಏನಿಷ್ಟ ಇಲ್ಲ ಅನ್ನೋದರ ಬಗ್ಗೆನೂ ಕಲಿಯಬಹುದು. ಬೈಬಲಿನಿಂದ ವಿವೇಕವನ್ನ ಪಡೆದುಕೊಳ್ಳಬಹುದು ಮತ್ತು ನಿರೀಕ್ಷೆಯ ಬಗ್ಗೆನೂ ತಿಳಿದುಕೊಳ್ಳಬಹುದು. ಇದ್ರಿಂದ ಕಷ್ಟ ಸಮಸ್ಯೆಗಳನ್ನ ಎದುರಿಸೋಕಾಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ದೇವರ ಗೆಳೆಯರಾಗಲು ಬೈಬಲ್ ಸಹಾಯ ಮಾಡುತ್ತೆ. ಜೀವನದಲ್ಲಿ ಯಾವಾಗಲೂ ಖುಷಿಖುಷಿಯಾಗಿ ಇರಲು ಕೂಡ ಸಹಾಯ ಮಾಡುತ್ತೆ. ಹಾಗಾಗಿ ಬೈಬಲ್ ಕಲಿಯೋದನ್ನ ಮುಂದುವರಿಸೋಣ.
2. ಬೈಬಲಲ್ಲಿ ಇರೋ ಸತ್ಯ ತುಂಬ ಮುಖ್ಯ ಅಂತ ನಾವು ಯಾಕೆ ತಿಳಿದುಕೊಳ್ಳಬೇಕು?
ಬೈಬಲಲ್ಲಿ ಇರೋ ಸತ್ಯಗಳು ಅಮೂಲ್ಯವಾದ ನಿಧಿಗಳಂತಿವೆ. ಅದಕ್ಕೆ ಬೈಬಲ್, “ಅದನ್ನ ಯಾವತ್ತೂ ಮಾರಿಬಿಡಬೇಡ” ಅಂತ ಹೇಳುತ್ತೆ. (ಜ್ಞಾನೋಕ್ತಿ 23:23) ಬೈಬಲಲ್ಲಿ ಇರೋ ಸತ್ಯ ಎಷ್ಟು ಅಮೂಲ್ಯ ಅನ್ನೋದನ್ನ ಮನಸ್ಸಲ್ಲಿ ಇಟ್ರೆ ಅದನ್ನ ಕಲಿಯೋಕೆ ನಮ್ಮ ಕೈಯಲ್ಲಿ ಆಗೋದನ್ನೆಲ್ಲಾ ಮಾಡ್ತೇವೆ. ಎಷ್ಟೇ ಕಷ್ಟ ಆದ್ರೂ ನಾವದನ್ನ ಕಲಿಯೋದನ್ನ ನಿಲ್ಲಿಸಲ್ಲ.—ಜ್ಞಾನೋಕ್ತಿ 2:4, 5 ಓದಿ.
3. ಬೈಬಲ್ ಕಲಿಯೋದನ್ನ ಮುಂದುವರಿಸಲು ಯೆಹೋವನು ನಿಮಗೆ ಹೇಗೆ ಸಹಾಯ ಮಾಡ್ತಾನೆ?
ಯೆಹೋವನು ಸರ್ವಶಕ್ತ, ಸೃಷ್ಟಿಕರ್ತ ಮತ್ತು ನಮ್ಮ ಸ್ನೇಹಿತ. ತನ್ನ ಬಗ್ಗೆ ಕಲಿಯೋಕೆ ಆತನು ನಿಮಗೆ ಸಹಾಯ ಮಾಡಕ್ಕೆ ಇಷ್ಟಪಡ್ತಾನೆ. “ದೇವರಿಗೆ ಇಷ್ಟ ಆಗೋ ಕೆಲಸಗಳನ್ನ ಮಾಡೋಕೆ ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ದೇವರೇ ಕೊಡ್ತಾನೆ.” (ಫಿಲಿಪ್ಪಿ 2:13 ಓದಿ.) ಬೈಬಲನ್ನ ಕಲಿಯೋಕೆ ಮತ್ತು ಅದರ ಪ್ರಕಾರ ನಡೆಯೋಕೆ ಕಷ್ಟ ಅನಿಸಿದ್ರೆ ಯೆಹೋವನು ನಿಮಗೆ ಸಹಾಯ ಮಾಡ್ತಾನೆ. ಯಾವುದೇ ಅಡೆತಡೆಗಳು ಬಂದರೂ ಅದನ್ನ ಜಯಿಸೋಕೆ ಬೇಕಾದ ಬಲ, ಧೈರ್ಯ ಕೊಡ್ತಾನೆ. ಹಾಗಾಗಿ ಬೈಬಲ್ ಸ್ಟಡಿಯನ್ನ ನಿಲ್ಲಿಸದೇ ಇರೋಕೆ ಸಹಾಯ ಮಾಡುವಂತೆ ಯೆಹೋವನಿಗೆ ಪ್ರತಿದಿನ ಪ್ರಾರ್ಥಿಸಿ.—1 ಥೆಸಲೊನೀಕ 5:17.
ಹೆಚ್ಚನ್ನ ತಿಳಿಯೋಣ
ನಿಮಗೆ ಎಷ್ಟೇ ಕೆಲಸಗಳು ಇದ್ದರೂ ಅಥವಾ ಯಾರೇ ವಿರೋಧ ಮಾಡಿದ್ರೂ ತಪ್ಪದೇ ಬೈಬಲ್ ಕಲಿಯೋದನ್ನ ಹೇಗೆ ಮುಂದುವರಿಸಬಹುದು ಅಂತ ತಿಳಿಯಿರಿ. ಇದನ್ನ ಮಾಡೋಕೆ ಯೆಹೋವನು ಹೇಗೆ ಸಹಾಯ ಮಾಡ್ತಾನೆ ಅಂತನೂ ನೋಡಿ.
4. ಬೈಬಲ್ ಕಲಿಯೋದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ
ಕೆಲವೊಮ್ಮೆ ನಮಗೆ ಬೈಬಲ್ ಕಲಿಯೋಕೆ ಪುರುಸೊತ್ತೇ ಇರಲ್ಲ. ಆಗ ಏನು ಮಾಡೋದು? ಅದರ ಬಗ್ಗೆ ತಿಳಿಯಲು ಫಿಲಿಪ್ಪಿ 1:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
“ತುಂಬ ಮುಖ್ಯವಾದ” ವಿಷಯಗಳು ಯಾವುವು ಅಂತ ನಿಮಗೆ ಅನಿಸುತ್ತೆ?
ನೀವು ಹೇಗೆ ಬೈಬಲ್ ಕಲಿಯೋಕೆ ಹೆಚ್ಚು ಪ್ರಾಮುಖ್ಯತೆ ಕೊಡಬಹುದು?
ನೀವು ಒಂದು ಬಕೆಟಿನಲ್ಲಿ ಮರಳನ್ನ ಹಾಕಿ ಆಮೇಲೆ ಕಲ್ಲನ್ನ ಹಾಕಿದರೆ ಎಲ್ಲಾ ಕಲ್ಲನ್ನ ಬಕೆಟಿನಲ್ಲಿ ಹಾಕೋಕೆ ಆಗಲ್ಲ
ನೀವು ಬಕೆಟಿನಲ್ಲಿ ಮೊದಲು ಕಲ್ಲನ್ನ ಹಾಕಿದರೆ ಆದಷ್ಟು ಮರಳನ್ನ ಅದರೊಳಗೆ ಹಾಕೋಕೆ ಆಗುತ್ತೆ. ಅದೇ ತರ ನಿಮ್ಮ ಜೀವನದಲ್ಲಿ ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಮೊದಲು ಆದ್ಯತೆ ಕೊಟ್ಟರೆ ನೀವು ಅವುಗಳನ್ನೆಲ್ಲಾ ಚೆನ್ನಾಗಿ ಮಾಡೋಕಾಗುತ್ತೆ. ಅಷ್ಟೇ ಅಲ್ಲ ಬೇರೆ ವಿಷಯಗಳಿಗೂ ಸಮಯ ಸಿಗುತ್ತೆ
ದೇವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು, ಆತನನ್ನ ಆರಾಧಿಸಬೇಕು ಅನ್ನೋ ಅಗತ್ಯವನ್ನ ಇಟ್ಟು ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಬೈಬಲನ್ನ ಕಲಿಯುವಾಗ ಆ ಅಗತ್ಯವನ್ನ ಪೂರೈಸಿಕೊಳ್ಳೋಕೆ ಆಗುತ್ತೆ. ಮತ್ತಾಯ 5:3 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಬೈಬಲ್ ಕಲಿಯೋಕೆ ಹೆಚ್ಚು ಪ್ರಾಮುಖ್ಯತೆ ಕೊಡುವಾಗ ನಮಗೆ ಯಾವ ಪ್ರಯೋಜನ ಸಿಗುತ್ತೆ?
5. ಎಷ್ಟೇ ವಿರೋಧ ಬಂದ್ರೂ ಬೈಬಲ್ ಕಲಿಯೋದನ್ನ ನಿಲ್ಲಿಸಬೇಡಿ
ನೀವು ಬೈಬಲ್ ಕಲಿಯೋದನ್ನ ಕೆಲವೊಮ್ಮೆ ಬೇರೆಯವರು ವಿರೋಧಿಸಬಹುದು. ಇಂಥ ಸಮಯದಲ್ಲಿ ಏನು ಮಾಡಬೇಕು ಅಂತ ಫ್ರಾನ್ಚೆಸ್ಕೋರವರ ಅನುಭವದಿಂದ ತಿಳಿದುಕೊಳ್ಳಿ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.
ಬೈಬಲ್ ಕಲಿಯುತ್ತಿದ್ದೀನಿ ಅಂತ ಫ್ರಾನ್ಚೆಸ್ಕೋ ಹೇಳಿದಾಗ ಅವನ ಕುಟುಂಬದವರು ಮತ್ತು ಗೆಳೆಯರು ಏನು ಮಾಡಿದರು?
ಅವನು ಬೈಬಲ್ ಕಲಿಯೋದನ್ನ ನಿಲ್ಲಿಸದೇ ಇದ್ದಿದ್ದರಿಂದ ಯಾವ ಆಶೀರ್ವಾದ ಸಿಕ್ತು?
2 ತಿಮೊತಿ 2:24, 25 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನೀವು ಬೈಬಲ್ ಕಲಿಯುತ್ತಾ ಇರೋದರ ಬಗ್ಗೆ ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಗನಿಸುತ್ತಿದೆ?
ಈ ವಚನದಲ್ಲಿ ಓದಿದ ಪ್ರಕಾರ ನೀವು ಬೈಬಲ್ ಕಲಿಯೋದು ಯಾರಿಗಾದ್ರೂ ಇಷ್ಟ ಆಗಲಿಲ್ಲ ಅಂದರೆ ನೀವೇನು ಮಾಡಬೇಕು? ಯಾಕೆ?
6. ಯೆಹೋವ ನಿಮಗೆ ಖಂಡಿತ ಸಹಾಯ ಮಾಡ್ತಾನೆ
ನಾವು ಯೆಹೋವನಿಗೆ ಆಪ್ತರಾಗುತ್ತಾ ಹೋದಂತೆ ಆತನನ್ನ ಮೆಚ್ಚಿಸಬೇಕು ಅನ್ನೋ ಆಸೆನೂ ಹೆಚ್ಚಾಗುತ್ತೆ. ಆದ್ರೂ ಆತನಿಗೆ ಇಷ್ಟ ಆಗೋ ರೀತಿ ಜೀವಿಸೋಕೆ, ಬದಲಾವಣೆ ಮಾಡಿಕೊಳ್ಳೋಕೆ ನಮಗೆ ಕಷ್ಟ ಅನಿಸಬಹುದು. ನಿಮಗೂ ಈ ರೀತಿ ಅನಿಸೋದಾದ್ರೆ ಪ್ರಯತ್ನ ಬಿಡಬೇಡಿ. ಯೆಹೋವ ನಿಮಗೆ ಸಹಾಯ ಮಾಡ್ತಾನೆ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಜಿಮ್ ಯಾವೆಲ್ಲಾ ಬದಲಾವಣೆ ಮಾಡಿಕೊಂಡನು?
ಅವನ ಉದಾಹರಣೆಯಿಂದ ನೀವೇನು ಕಲಿತ್ರಿ?
ಇಬ್ರಿಯ 11:6 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
‘ಶ್ರದ್ಧೆಯಿಂದ ಆರಾಧಿಸೋರು’ ಅಂದರೆ ಯೆಹೋವನ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಆತನನ್ನ ಮೆಚ್ಚಿಸೋಕೆ ತಮ್ಮಿಂದಾದ ಎಲ್ಲವನ್ನ ಮಾಡುವವರು. ಇಂಥವರಿಗಾಗಿ ಯೆಹೋವನು ಏನು ಮಾಡ್ತಾನೆ?
ಬೈಬಲ್ ಕಲಿಯೋಕೆ ನೀವು ಹಾಕುವ ಪ್ರಯತ್ನಗಳನ್ನ ನೋಡುವಾಗ ಯೆಹೋವನಿಗೆ ಹೇಗನಿಸುತ್ತೆ?
ಕೆಲವರು ಹೀಗೆ ಕೇಳಬಹುದು: “ನೀವು ಯಾಕೆ ಬೈಬಲ್ ಕಲೀತಿದ್ದೀರಾ?”
ಆಗ ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ಕಷ್ಟಗಳು ಬಂದರೂ ತಪ್ಪದೇ ಬೈಬಲ್ ಕಲಿಯುತ್ತಾ ಇದ್ದರೆ ಯಾವಾಗ್ಲೂ ಖುಷಿ ಖುಷಿಯಾಗಿ ಇರಬಹುದು. ಸಮಸ್ಯೆಗಳು ಬರುವಾಗ ಯೆಹೋವನ ಮೇಲೆ ಭರವಸೆ ಇಡಿ, ಆತನು ನಿಮಗೆ ಖಂಡಿತ ಸಹಾಯ ಮಾಡ್ತಾನೆ.
ನೆನಪಿದೆಯಾ
ಬೈಬಲಿನ ಸತ್ಯಗಳು ನಿಮಗೆ ಯಾಕಷ್ಟು ಅಮೂಲ್ಯ?
‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಪ್ರಾಮುಖ್ಯತೆ ಕೊಡೋಕೆ ನೀವೇನು ಮಾಡಬಹುದು?
ತಪ್ಪದೇ ಬೈಬಲ್ ಕಲಿಯೋಕೆ ನಾವು ಯಾಕೆ ಯೆಹೋವ ದೇವರ ಸಹಾಯ ಪಡೆದುಕೊಳ್ಳಬೇಕು?
ಇದನ್ನೂ ನೋಡಿ
ಸಮಯವನ್ನ ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅಂತ ತಿಳಿಯಲು ನಾಲ್ಕು ವಿಷಯಗಳನ್ನ ನೋಡಿ. ಇದನ್ನ ಮಾಡಿ ತುಂಬ ಜನ ಪ್ರಯೋಜನ ಪಡೆದಿದ್ದಾರೆ.
ಒಬ್ಬ ಸ್ತ್ರೀ ಬೈಬಲ್ ಕಲಿಯುತ್ತಿರೋದು ಅವಳ ಗಂಡನಿಗೆ ಇಷ್ಟ ಆಗುತ್ತಿರಲಿಲ್ಲ. ಆಗ ಯೆಹೋವ ದೇವರು ಅವಳಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡಿ.
ಪತ್ನಿಯ ಪಟ್ಟುಬಿಡದ ಪ್ರಯತ್ನದಿಂದ ಪತಿಗಾದ ಪ್ರಯೋಜನ.
ಯೆಹೋವನ ಸಾಕ್ಷಿಗಳು ಕುಟುಂಬಗಳನ್ನ ಒಡೆಯುತ್ತಾರೆ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ನಿಜಾನಾ?
“ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆಯುತ್ತಾರಾ? ಇಲ್ಲ ಕಟ್ಟುತ್ತಾರಾ?” (jw.org ಲೇಖನ)
-
-
ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 35
ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ?
ನಾವೆಲ್ಲರೂ ತೀರ್ಮಾನಗಳನ್ನ ಮಾಡಬೇಕಾಗುತ್ತೆ. ಉದಾಹರಣೆಗೆ, ಜೀವನ ನಡೆಸೋದು ಹೇಗೆ? ಹಣ ಸಂಪಾದಿಸೋದು ಹೇಗೆ? ಅಥವಾ ಮದುವೆ ಆಗಬೇಕಾ ಬೇಡ್ವಾ? ಅನ್ನೋ ತೀರ್ಮಾನಗಳನ್ನ ಮಾಡಬೇಕಾಗುತ್ತೆ. ಕೆಲವು ತೀರ್ಮಾನಗಳಿಂದ ನಮಗೆ ಒಳ್ಳೇದಾಗುತ್ತೆ ಅಥವಾ ಕೆಟ್ಟದಾಗುತ್ತೆ. ಈ ತೀರ್ಮಾನಗಳು ಯೆಹೋವ ದೇವರ ಜೊತೆ ನಮಗಿರೋ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ನಾವು ಒಳ್ಳೇ ತೀರ್ಮಾನಗಳನ್ನ ಮಾಡಿದ್ರೆ ಖುಷಿಯಾಗಿರುತ್ತೇವೆ ಮತ್ತು ಯೆಹೋವನ ಮನಸ್ಸನ್ನೂ ಖುಷಿಪಡಿಸ್ತೇವೆ.
1. ಒಳ್ಳೇ ತೀರ್ಮಾನಗಳನ್ನ ಮಾಡಲು ಬೈಬಲ್ ನಮಗೆ ಹೇಗೆ ಸಹಾಯ ಮಾಡುತ್ತೆ?
ಒಂದು ತೀರ್ಮಾನವನ್ನ ಮಾಡುವ ಮೊದಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ನಂತರ ಅದರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡಬೇಕು. (ಜ್ಞಾನೋಕ್ತಿ 2:3-6 ಓದಿ.) ಯೆಹೋವನು ಕೆಲವೊಂದು ವಿಷಯಗಳ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮಗಳನ್ನ ಕೊಟ್ಟಿದ್ದಾನೆ. ಆ ನಿಯಮಗಳನ್ನ ಪಾಲಿಸಿದ್ರೆ ನಮಗೆ ಒಳ್ಳೇದಾಗುತ್ತೆ.
ಒಂದುವೇಳೆ ಒಂದು ವಿಷಯದ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮ ಇಲ್ಲ ಅಂದರೆ ಏನು ಮಾಡ್ತೀರ? ಆಗ್ಲೂ ‘ನಾವು ಯಾವ ದಾರಿಯಲ್ಲಿ ನಡೆಯಬೇಕಂತ’ ಯೆಹೋವ ದೇವರು ನಮ್ಮನ್ನ ಮಾರ್ಗದರ್ಶಿಸ್ತಾನೆ. (ಯೆಶಾಯ 48:17) ಹೇಗೆ? ಇಂಥ ಸಮಯದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡಲು ಬೈಬಲ್ ತತ್ವಗಳು ನಮಗೆ ಸಹಾಯ ಮಾಡ್ತವೆ. ತತ್ವಗಳು ಅಂದರೆ ಏನು? ದೇವರ ಯೋಚನೆ ಮತ್ತು ಭಾವನೆಗಳನ್ನ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮೂಲಭೂತ ಸತ್ಯಗಳೇ ತತ್ವಗಳು. ಉದಾಹರಣೆಗೆ, ಒಂದು ವಿಷಯದ ಬಗ್ಗೆ ದೇವರಿಗೆ ಹೇಗನಿಸುತ್ತೆ ಅಂತ ಬೈಬಲಿನ ಒಂದು ವಚನ ಅಥವಾ ಘಟನೆಯನ್ನ ಓದಿದಾಗ ಗೊತ್ತಾಗುತ್ತೆ. ಯೆಹೋವ ದೇವರ ಅನಿಸಿಕೆ ನಮಗೆ ಗೊತ್ತಾದರೆ ನಮ್ಮ ಜೀವನದಲ್ಲಿ ಆತನಿಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡಲು ಆಗುತ್ತೆ.
2. ತೀರ್ಮಾನಗಳನ್ನ ತೆಗೆದುಕೊಳ್ಳುವ ಮುಂಚೆ ನೀವು ಯಾವೆಲ್ಲಾ ವಿಷಯಗಳನ್ನ ಮನಸ್ಸಿನಲ್ಲಿಡಬೇಕು?
“ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 14:15) ಇದರ ಅರ್ಥ ನಾವು ಒಂದು ತೀರ್ಮಾನವನ್ನ ಮಾಡುವುದಕ್ಕಿಂತ ಮುಂಚೆ ನಮ್ಮ ಹತ್ತಿರ ಯಾವೆಲ್ಲಾ ಆಯ್ಕೆಗಳಿವೆ ಅಂತ ಯೋಚಿಸಬೇಕು. ಪ್ರತಿಯೊಂದು ಆಯ್ಕೆಗಳ ಬಗ್ಗೆ ಯೋಚಿಸುವಾಗ ಹೀಗೆ ಕೇಳಿಕೊಳ್ಳಿ: ‘ಇದಕ್ಕೆ ಯಾವ ಬೈಬಲ್ ತತ್ವವನ್ನ ಅನ್ವಯಿಸಬಹುದು? ಯಾವ ಆಯ್ಕೆ ಸರಿಯಾಗಿದೆ? ನಾನು ಮಾಡುವ ಆಯ್ಕೆಯಿಂದ ಬೇರೆಯವರಿಗೆ ಒಳ್ಳೇದಾಗುತ್ತಾ ಅಥವಾ ಕೆಟ್ಟದಾಗುತ್ತಾ? ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮಾಡುವ ಆಯ್ಕೆಯಿಂದ ಯೆಹೋವ ದೇವರಿಗೆ ಖುಷಿಯಾಗುತ್ತಾ?’—ಧರ್ಮೋಪದೇಶಕಾಂಡ 32:29.
ಯಾವುದು ಒಳ್ಳೇದು ಮತ್ತು ಕೆಟ್ಟದ್ದು ಅಂತ ಹೇಳುವ ಅಧಿಕಾರ ಇರೋದು ಯೆಹೋವ ದೇವರಿಗೆ ಮಾತ್ರ. ಆತನ ನಿಯಮಗಳ ಬಗ್ಗೆ, ತತ್ವಗಳ ಬಗ್ಗೆ ಚೆನ್ನಾಗಿ ಕಲಿತು ಅದರಂತೆ ನಡೆಯಲು ತೀರ್ಮಾನ ಮಾಡುವಾಗ ನಾವು ಒಳ್ಳೇ ಮನಸ್ಸಾಕ್ಷಿಯನ್ನ ಬೆಳೆಸಿಕೊಳ್ಳುತ್ತೇವೆ. ಅದು ನಮಗೆ ಯಾವುದು ಸರಿ, ಯಾವುದು ತಪ್ಪು ಅಂತ ತಿಳಿಸುತ್ತೆ. (ರೋಮನ್ನರಿಗೆ 2:14, 15) ನಮ್ಮ ಮನಸ್ಸಾಕ್ಷಿಗೆ ಒಳ್ಳೇ ತರಬೇತಿ ಕೊಟ್ಟರೆ ಅದು ನಮಗೆ ಸರಿಯಾದ ತೀರ್ಮಾನಗಳನ್ನ ಮಾಡಲು ಸಹಾಯ ಮಾಡುತ್ತೆ.
ಹೆಚ್ಚನ್ನ ತಿಳಿಯೋಣ
ಬೈಬಲ್ ತತ್ವಗಳು ಮತ್ತು ನಮ್ಮ ಮನಸ್ಸಾಕ್ಷಿ ಹೇಗೆ ಒಳ್ಳೇ ತೀರ್ಮಾನಗಳನ್ನ ತೆಗೆದುಕೊಳ್ಳೋಕೆ ಸಹಾಯ ಮಾಡುತ್ತೆ ಅಂತ ತಿಳಿಯಿರಿ.
3. ಬೈಬಲ್ ನಮಗೆ ಸಹಾಯ ಮಾಡುತ್ತೆ
ತೀರ್ಮಾನಗಳನ್ನ ತೆಗೆದುಕೊಳ್ಳಲು ಬೈಬಲ್ ತತ್ವಗಳು ನಮಗೆ ಹೇಗೆ ಸಹಾಯ ಮಾಡುತ್ತೆ? ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
ಯೆಹೋವನು ನಮಗೆ ಯಾವ ಸ್ವಾತಂತ್ರ್ಯ ಕೊಟ್ಟಿದ್ದಾನೆ?
ಯೆಹೋವ ದೇವರು ನಮಗೆ ಯಾಕೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ?
ನಮ್ಮ ಇಚ್ಛಾಸ್ವಾತಂತ್ರ್ಯವನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಯೆಹೋವ ದೇವರು ಯಾವೆಲ್ಲಾ ವಿಷಯಗಳನ್ನ ಕೊಟ್ಟಿದ್ದಾನೆ?
ಉದಾಹರಣೆಗೆ, ನಾವೊಂದು ಬೈಬಲ್ ತತ್ವವನ್ನ ನೋಡೋಣ. ಎಫೆಸ 5:15, 16 ಓದಿ, ನಂತರ ಕೆಳಗೆ ಕೊಡಲಾಗಿರುವ ‘ಮುಖ್ಯವಾದ ವಿಷಯಗಳಿಗೆ ಹೇಗೆ ಸಮಯ ಕೊಡಬಹುದು’ ಅಂತ ಚರ್ಚಿಸಿ.
ಬೈಬಲನ್ನ ಪ್ರತಿದಿನ ಓದಲು
ಒಳ್ಳೇ ಗಂಡ/ಹೆಂಡತಿ, ಅಪ್ಪ/ಅಮ್ಮ, ಮಗ/ಮಗಳು ಆಗಲು
ಕೂಟಗಳಿಗೆ ಹೋಗಲು
4. ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ
ಒಂದು ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬೈಬಲಿನಲ್ಲಿ ನೇರವಾದ ನಿಯಮಗಳು ಇರೋದಾದ್ರೆ ಅದನ್ನ ಮಾಡೋದು ತುಂಬ ಸುಲಭ. ಆದರೆ ನೇರವಾದ ನಿಯಮಗಳು ಇಲ್ಲದಿದ್ದರೆ ಏನು ಮಾಡಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ತನ್ನ ಮನಸ್ಸಾಕ್ಷಿಗೆ ತರಬೇತಿ ಕೊಡಲು ಮತ್ತು ಯೆಹೋವನಿಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡಲು ವಿಡಿಯೋದಲ್ಲಿದ್ದ ಸಹೋದರಿ ಏನೆಲ್ಲಾ ಮಾಡಿದ್ರು?
ನಾವು ಮಾಡಬೇಕಾದ ತೀರ್ಮಾನಗಳನ್ನ ಬೇರೆಯವರು ನಮಗಾಗಿ ಮಾಡುವಂತೆ ಕೇಳಿಕೊಳ್ಳಬಾರದು ಯಾಕೆ? ಇಬ್ರಿಯ 5:14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಮಗಾಗಿ ತೀರ್ಮಾನವನ್ನ ತೆಗೆದುಕೊಳ್ಳುವಂತೆ ಬೇರೆಯವರನ್ನ ಕೇಳೋದು ತುಂಬನೇ ಸುಲಭ. ಆದರೆ ತೀರ್ಮಾನ ತೆಗೆದುಕೊಳ್ಳುವ ಪ್ರೌಢತೆಯನ್ನ (ಸಾಮರ್ಥ್ಯ) ನಾವೇ ಬೆಳೆಸಿಕೊಳ್ಳಬೇಕು ಯಾಕೆ?
ವಿಡಿಯೋದಲ್ಲಿ ನೋಡಿದ ಹಾಗೆ ಒಳ್ಳೇ ತೀರ್ಮಾನ ತೆಗೆದುಕೊಳ್ಳೋಕೆ ನಮಗೆ ಯಾವೆಲ್ಲಾ ವಿಷಯಗಳು ಸಹಾಯ ಮಾಡುತ್ತೆ?
5. ಬೇರೆಯವರ ಮನಸ್ಸಾಕ್ಷಿಯನ್ನ ಗೌರವಿಸಿ
ಜನರು ತಮಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡುತ್ತಾರೆ. ಎಲ್ಲರು ಮಾಡುವ ತೀರ್ಮಾನಗಳು ಒಂದೇ ತರ ಇರಲ್ಲ. ನಾವು ಬೇರೆಯವರ ನಿರ್ಧಾರಗಳನ್ನ ಗೌರವಿಸುತ್ತೇವೆ ಅಂತ ಹೇಗೆ ತೋರಿಸಬಹುದು? ಎರಡು ಸನ್ನಿವೇಶಗಳನ್ನ ನೋಡೋಣ:
ಸನ್ನಿವೇಶ 1: ಒಬ್ಬ ಸಹೋದರಿಗೆ ಮೇಕಪ್ ಮಾಡಿಕೊಳ್ಳೋದು ಅಂದ್ರೆ ತುಂಬ ಇಷ್ಟ. ಈಗ ಅವರ ಸಭೆ ಬದಲಾಗಿದೆ. ಅಲ್ಲಿರುವ ಹೆಚ್ಚಿನ ಸಹೋದರಿಯರಿಗೆ ಮೇಕಪ್ ಮಾಡಿಕೊಳ್ಳೋದು ಇಷ್ಟ ಆಗಲ್ಲ.
ರೋಮನ್ನರಿಗೆ 15:1 ಮತ್ತು 1 ಕೊರಿಂಥ 10:23, 24 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಈ ವಚನಗಳ ಆಧಾರದ ಮೇಲೆ ಆ ಸಹೋದರಿ ಯಾವ ತೀರ್ಮಾನವನ್ನ ತೆಗೆದುಕೊಳ್ಳಬಹುದು? ನಿಮ್ಮ ಮನಸ್ಸಾಕ್ಷಿ ಒಪ್ಪುವ ಕೆಲವು ವಿಷಯಗಳನ್ನ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿ ಒಪ್ಪಲ್ಲ ಅಂತ ನೆನಸಿ. ಅಂಥವರ ಜೊತೆ ಇದ್ದಾಗ ನೀವೇನು ಮಾಡ್ತೀರಾ?
ಸನ್ನಿವೇಶ 2: ಮಿತವಾದ ಮದ್ಯಪಾನ ತಪ್ಪಲ್ಲ ಅಂತ ಒಬ್ಬ ಸಹೋದರನಿಗೆ ಗೊತ್ತು. ಆದರೂ ಅವನು ಕುಡಿಯಲ್ಲ ಅಂತ ತೀರ್ಮಾನ ಮಾಡ್ತಾನೆ. ಒಬ್ಬ ಸಹೋದರ ಅವನನ್ನ ಊಟಕ್ಕೆ ಕರೆಯುತ್ತಾನೆ. ಅಲ್ಲಿ ಕೆಲವು ಸಹೋದರರು ಮದ್ಯ ಕುಡಿಯೋದನ್ನ ಅವನು ನೋಡ್ತಾನೆ.
ಪ್ರಸಂಗಿ 7:16 ಮತ್ತು ರೋಮನ್ನರಿಗೆ 14:1, 10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಈ ವಚನಗಳ ಆಧಾರದ ಮೇಲೆ ಆ ಸಹೋದರ ಯಾವ ತೀರ್ಮಾನವನ್ನ ತೆಗೆದುಕೊಳ್ಳಬಹುದು? ನಿಮ್ಮ ಮನಸ್ಸಾಕ್ಷಿ ಮಾಡಬಾರದು ಅಂತ ಹೇಳುವ ವಿಷಯಗಳನ್ನ ಒಬ್ಬ ವ್ಯಕ್ತಿ ಮಾಡೋದನ್ನ ನೋಡಿದ್ರೆ ಏನು ಮಾಡ್ತೀರಾ?
ಒಳ್ಳೇ ತೀರ್ಮಾನಗಳನ್ನ ಮಾಡಲು ಸಲಹೆಗಳು:
1. ಸಹಾಯಕ್ಕಾಗಿ ಯೆಹೋವನ ಹತ್ತಿರ ಕೇಳಿ.—ಯಾಕೋಬ 1:5.
2. ಸಂಶೋಧನೆ ಮಾಡಿ ತತ್ವಗಳನ್ನ ಹುಡುಕಲು ಬೈಬಲ್ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನ ನೋಡಿ. ಜೊತೆಗೆ ಅನುಭವ ಇರುವ ಸಹೋದರ ಸಹೋದರಿಯರ ಸಲಹೆಗಳನ್ನ ಕೇಳಿ.
3. ಪರಿಣಾಮದ ಬಗ್ಗೆ ಯೋಚಿಸಿ ‘ನಾನು ತೆಗೆದುಕೊಳ್ಳುವ ನಿರ್ಧಾರದಿಂದ ನನ್ನ ಮತ್ತು ಬೇರೆಯವರ ಮನಸ್ಸಾಕ್ಷಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ’ ಅಂತ ಯೋಚಿಸಿ.
ಕೆಲವರು ಹೀಗಂತಾರೆ: “ನಿಮಗೆ ಏನು ಇಷ್ಟನೋ ಅದನ್ನೇ ಮಾಡಿ, ಬೇರೆಯವರು ಏನು ಅಂದುಕೊಳ್ಳುತ್ತಾರೆ ಅಂತ ತಲೆಕೆಡಿಸಿಕೊಳ್ಳಬೇಡಿ.”
ಒಂದು ತೀರ್ಮಾನ ತೆಗೆದುಕೊಳ್ಳುವಾಗ ದೇವರಿಗೆ ಮತ್ತು ಬೇರೆಯವರಿಗೆ ಹೇಗನಿಸುತ್ತೆ ಅಂತ ಯಾಕೆ ಯೋಚನೆ ಮಾಡಬೇಕು?
ನಾವೇನು ಕಲಿತ್ವಿ
ಒಂದು ವಿಷಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಮತ್ತು ಬೇರೆಯವರ ಭಾವನೆಗಳ ಮೇಲೆ ಯಾವ ಪರಿಣಾಮ ಬೀರುತ್ತೆ ಅಂತ ಯೋಚಿಸುವಾಗ ನಾವು ಒಳ್ಳೇ ತೀರ್ಮಾನಗಳನ್ನ ಮಾಡುತ್ತೇವೆ.
ನೆನಪಿದೆಯಾ
ಯೆಹೋವ ದೇವರಿಗೆ ಇಷ್ಟವಾಗುವ ತೀರ್ಮಾನಗಳನ್ನ ಹೇಗೆ ತೆಗೆದುಕೊಳ್ಳಬಹುದು?
ನಿಮ್ಮ ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಬಹುದು?
ಬೇರೆಯವರ ಮನಸ್ಸಾಕ್ಷಿಯನ್ನ ಗೌರವಿಸುತ್ತೇವೆ ಅಂತ ಹೇಗೆ ತೋರಿಸಬಹುದು?
ಇದನ್ನೂ ನೋಡಿ
ಯೆಹೋವನ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸುವ ತೀರ್ಮಾನಗಳನ್ನ ನೀವು ಹೇಗೆ ಮಾಡಬಹುದು?
“ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ” (ಕಾವಲಿನಬುರುಜು, ಏಪ್ರಿಲ್ 15, 2011)
ಯೆಹೋವ ದೇವರು ನಮಗೆ ಹೇಗೆಲ್ಲಾ ಸಲಹೆಗಳನ್ನ ಕೊಡುತ್ತಾನೆ ಅನ್ನೋದರ ಬಗ್ಗೆ ಹೆಚ್ಚು ಕಲಿಯಿರಿ.
ಒಬ್ಬ ವ್ಯಕ್ತಿಗೆ ಕಷ್ಟಕರವಾದ ತೀರ್ಮಾನಗಳನ್ನ ತೆಗೆದುಕೊಳ್ಳಲು ಯಾವುದೆಲ್ಲಾ ಸಹಾಯ ಮಾಡಿತು ಅಂತ ನೋಡಿ.
ನೇರವಾದ ನಿಯಮ ಇಲ್ಲದಿದ್ದಾಗ ಯೆಹೋವನು ಮೆಚ್ಚುವ ಒಂದು ತೀರ್ಮಾನವನ್ನ ತೆಗೆದುಕೊಳ್ಳಲು ಏನು ಮಾಡಬೇಕು ಅಂತ ನೋಡಿ.
“ನಿಮಗೆ ಯಾವಾಗಲೂ ಒಂದು ಬೈಬಲ್ ಆಜ್ಞೆಯ ಅಗತ್ಯವಿದೆಯೋ?” (ಕಾವಲಿನಬುರುಜು, ಡಿಸೆಂಬರ್ 1, 2003)
-