ಬೈಬಲಿನ ದೃಷ್ಟಿಕೋನ
ಸಮಾಧಾನಪಡಿಸುವವರು ಆಗಿರುವುದು ವ್ಯಾವಹಾರಿಕವೊ?
ಯೇಸು ಕ್ರಿಸ್ತನು ತನ್ನ ಸುಪ್ರಸಿದ್ಧವಾದ ಪರ್ವತ ಪ್ರಸಂಗದಲ್ಲಿ, “ಸಮಾಧಾನ ಪಡಿಸುವವರು ಧನ್ಯರು” ಎಂದು ಹೇಳಿದನು. “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು” ಎಂದೂ ಅವನು ಹೇಳಿದನು. (ಮತ್ತಾಯ 5:5, 9) ಸಮಾಧಾನಪಡಿಸುವವರು ಆಗಿರುವುದು ಅಂದರೆ ಸಮಾಧಾನದಿಂದ ಜೀವಿಸುವುದು ಇಲ್ಲವೆ ಶಾಂತಭಾವವನ್ನು ಹೊಂದಿರುವುದು ಎಂದಷ್ಟೇ ಅಲ್ಲ. ಸಮಾಧಾನಪಡಿಸುವ ವ್ಯಕ್ತಿಯು ಸಹಾಯಮಾಡಲು ಮುಂದಾಗುತ್ತಾನೆ ಮತ್ತು ಸಮಾಧಾನವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಾನೆ.
ಆದರೆ ಮೇಲೆ ಉಲ್ಲೇಖಿಸಲ್ಪಟ್ಟಿರುವ ಯೇಸುವಿನ ಮಾತುಗಳು ನಮ್ಮ ಈ ದಿನದಲ್ಲಿ ವ್ಯಾವಹಾರಿಕವೊ? ಈ ಆಧುನಿಕ ಲೋಕದಲ್ಲಿ ಜೀವಿಸಬೇಕಾದರೆ, ಒಬ್ಬ ವ್ಯಕ್ತಿಯು ಇತರರಲ್ಲಿ ತನ್ನ ಬಗ್ಗೆ ಸ್ವಲ್ಪ ಭಯಮೂಡಿಸಬೇಕು, ಆಕ್ರಮಣಶೀಲ ಸ್ವಭಾವದವನಾಗಿರಬೇಕು ಮತ್ತು ಕೆಲವೊಮ್ಮೆ ಹಿಂಸಾಚಾರವನ್ನೂ ಬಳಸಬೇಕೆಂದು ಕೆಲವರು ನೆನಸುತ್ತಾರೆ. ಹಾಗಾದರೆ ‘ಮುಳ್ಳಿನಿಂದ ಮುಳ್ಳನ್ನು ತೆಗೆಯಬೇಕು’ ಎಂಬ ಮಾತಿಗನುಸಾರ ನಡೆಯುವುದು ಬುದ್ಧಿವಂತಿಕೆಯ ಸಂಗತಿಯೊ? ಅಥವಾ ಸಮಾಧಾನಪಡಿಸುವವರು ಆಗಿರುವುದು ವ್ಯವಹಾರಿಕವೊ? “ಸಮಾಧಾನಪಡಿಸುವವರು ಧನ್ಯರು” ಎಂಬ ಯೇಸುವಿನ ಮಾತುಗಳ ಬಗ್ಗೆ ನಾವು ಏಕೆ ಯೋಚಿಸಬೇಕೆಂಬುದಕ್ಕೆ ಮೂರು ಕಾರಣಗಳನ್ನು ಪರಿಗಣಿಸೋಣ.
◼ ಶಾಂತಹೃದಯ “ಶಾಂತಹೃದಯವು ದೇಹಕ್ಕೆ ಜೀವ” ಎಂದು ಜ್ಞಾನೋಕ್ತಿ 14:30 (NIBV) ಹೇಳುತ್ತದೆ. ಕೋಪ ಮತ್ತು ವೈರಭಾವವು, ಲಕ್ವ ಮತ್ತು ಹೃದಯಾಘಾತಗಳಿಗೆ ಕಾರಣವಾಗಬಲ್ಲವೆಂದು ಅನೇಕ ವೈದ್ಯಕೀಯ ವರದಿಗಳು ಸೂಚಿಸುತ್ತವೆ. ಇತ್ತೀಚೆಗೆ ಒಂದು ವೈದ್ಯಕೀಯ ಪತ್ರಿಕೆಯು ಹೃದ್ರೋಗವಿರುವ ಜನರ ಬಗ್ಗೆ ಮಾತಾಡುವಾಗ, ವಿಪರೀತ ಕೋಪ ತೋರಿಸುವುದು ವಿಷಕ್ಕೆ ಸಮಾನವಾಗಿದೆಯೆಂದು ತಿಳಿಸಿತು. “ಕೋಪದಿಂದ ಕೆಂಡಕಾರುವ ಫಲ ತೀವ್ರ ಕಾಯಿಲೆಯೇ” ಎಂದೂ ಆ ಪತ್ರಿಕೆಯು ತಿಳಿಸಿತು. ಆದರೆ ಯಾರು ಸಮಾಧಾನಕ್ಕಾಗಿ ಪ್ರಯತ್ನಿಸುತ್ತಾರೊ ಅವರು ‘ಶಾಂತಹೃದಯವನ್ನು’ ಬೆಳೆಸಿಕೊಂಡು ಪ್ರಯೋಜನಗಳನ್ನು ಪಡೆಯುವರು.
ಇದಕ್ಕೆ ಒಂದು ಉದಾಹರಣೆ ಜಿಮ್ ಎಂಬವರದ್ದಾಗಿದೆ. ಅವರು 61 ವರ್ಷ ಪ್ರಾಯದವರಾಗಿದ್ದಾರೆ ಮತ್ತು ಈಗ ವಿಯೆಟ್ನಾಮ್ ದೇಶೀಯರ ಒಂದು ಸಮುದಾಯದಲ್ಲಿ ಬೈಬಲನ್ನು ಕಲಿಸುವ ಬೋಧಕರಾಗಿದ್ದಾರೆ. ಅವರು ವಿವರಿಸುವುದು: “ವಿಯೆಟ್ನಾಮ್ನಲ್ಲಿ ಆರು ವರ್ಷಗಳನ್ನು ಮಿಲಿಟರಿಯಲ್ಲಿ ಮತ್ತು ಮೂರು ಬಾರಿ ಕದನದಲ್ಲಿ ಹೋರಾಡಿದ ನನಗೆ ಹಿಂಸಾಚಾರ, ಕೋಪ ಮತ್ತು ಆಶಾಭಂಗವೆಂದರೇನೆಂದು ಚೆನ್ನಾಗಿ ಗೊತ್ತಿದೆ. ನನ್ನ ಆ ಗತಕಾಲದ ಚರಿತ್ರೆಯು ನನ್ನನ್ನು ಕಾಡುತ್ತಿತ್ತು ಮತ್ತು ಇದರಿಂದಾಗಿ ನನಗೆ ನಿದ್ದೆಯ ಸಮಸ್ಯೆಗಳಿದ್ದವು. ಇದಾದ ಸ್ವಲ್ಪದರಲ್ಲೇ, ಮಾನಸಿಕ ಒತ್ತಡ ಹಾಗೂ ನನ್ನ ಹೊಟ್ಟೆ ಮತ್ತು ನರಗಳಿಗೆ ಸಂಬಂಧಪಟ್ಟ ಕಾಯಿಲೆಗಳು ನನ್ನ ಆರೋಗ್ಯವನ್ನು ಕೆಡಿಸಿದವು.” ಅವರಿಗೆ ಹೇಗೆ ಉಪಶಮನ ಸಿಕ್ಕಿತು? ಅವರು ಉತ್ತರಿಸುವುದು: “ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಮಾಡಿದ್ದರಿಂದ ನನ್ನ ಜೀವವು ಉಳಿಯಿತು. ಒಂದು ಶಾಂತಿಭರಿತ ಹೊಸ ಲೋಕದ ಬಗ್ಗೆ ದೇವರಿಗಿರುವ ಉದ್ದೇಶದ ಕುರಿತು ಮತ್ತು ನಾನು ‘ಹೊಸ ವ್ಯಕ್ತಿತ್ವವನ್ನು’ ಹೇಗೆ ಧರಿಸಿಕೊಳ್ಳಬಲ್ಲೆ ಎಂಬುದರ ಕುರಿತು ಕಲಿತುಕೊಂಡದ್ದರಿಂದ ನನಗೀಗ ಶಾಂತಹೃದಯವಿದೆ. ಇದರಿಂದಾಗಿ ನನ್ನ ಆರೋಗ್ಯವು ಬಹಳಷ್ಟು ಮಟ್ಟಿಗೆ ಸುಧಾರಿಸಿದೆ.” (ಎಫೆಸ 4:22-24; ಯೆಶಾಯ 65:17; ಮೀಕ 4:1-4) ಸಮಾಧಾನದ ಸ್ವಭಾವವನ್ನು ಬೆಳೆಸಿಕೊಳ್ಳುವುದರಿಂದ ಭಾವನಾತ್ಮಕ, ಶಾರೀರಿಕ ಮತ್ತು ಆಧ್ಯಾತ್ಮಿಕ ಆರೋಗ್ಯವು ಉತ್ತಮಗೊಳ್ಳಸಾಧ್ಯವಿದೆಯೆಂದು ಅನೇಕ ಇತರ ಜನರು ತಮ್ಮ ಸ್ವಂತ ಅನುಭವದಿಂದ ಕಂಡುಹಿಡಿದಿದ್ದಾರೆ.—ಜ್ಞಾನೋಕ್ತಿ 15:13.
◼ ಹೆಚ್ಚು ಸಂತೋಷಭರಿತ ಸಂಬಂಧಗಳು ನಾವು ಸಮಾಧಾನದ ಸ್ವಭಾವವನ್ನು ತೋರಿಸುವಾಗ ಇತರರೊಂದಿಗಿನ ನಮ್ಮ ಸಂಬಂಧಗಳು ಉತ್ತಮಗೊಳ್ಳುವವು. ‘ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ದೂರಮಾಡಬೇಕು’ ಎಂದು ಬೈಬಲ್ ತಿಳಿಸುತ್ತದೆ. (ಎಫೆಸ 4:31) ಆಕ್ರಮಣಶೀಲ ಸ್ವಭಾವವನ್ನು ತೋರಿಸುವವರು, ಇತರರು ತಮ್ಮಿಂದ ದೂರಹೋಗುವಂತೆ ಮಾಡುತ್ತಾರೆ ಮತ್ತು ಹೀಗೆ ಅವರು ಒಂಟಿಗರಾಗಿಬಿಡುತ್ತಾರೆ. ಅವರಿಗೆ ಹೊಂದಿಕೊಳ್ಳಬಹುದಾದ ಸ್ನೇಹಿತರು ಇರುವುದಿಲ್ಲ ಎಂಬುದನ್ನು ಅನೇಕವೇಳೆ ಗಮನಿಸಲಾಗಿದೆ. ಜ್ಞಾನೋಕ್ತಿ 15:18 ತಿಳಿಸುವುದು: “ಕೋಪಿಷ್ಟನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.”
ನ್ಯೂ ಯಾರ್ಕ್ ಸಿಟಿಯಲ್ಲಿ ಒಬ್ಬ ಕ್ರೈಸ್ತ ಹಿರಿಯನಾಗಿರುವ 42 ವರ್ಷ ಪ್ರಾಯದ ಆ್ಯಂಡಿ ಎಂಬವರು ಸದಾ ಜಗಳಗಳಾಗುತ್ತಿದ್ದ ಪರಿಸರದಲ್ಲಿ ಬೆಳೆದವರು. ಅವರು ವಿವರಿಸುವುದು: “ನಾನು ಎಂಟು ವರ್ಷದವನಾಗಿದ್ದಾಗ ನನ್ನನ್ನು ಕುಸ್ತಿರಂಗಕ್ಕೆ ಸೇರಿಸಿ ತರಬೇತಿಯನ್ನು ಆರಂಭಿಸಲಾಯಿತು. ನನ್ನ ಎದುರಿಗಿದ್ದವರು ಮನುಷ್ಯರಾಗಿದ್ದಾರೆಂದು ನಾನೆಣಿಸುತ್ತಿರಲಿಲ್ಲ. ಬದಲಿಗೆ, ‘ಹೊಡೆ ಇಲ್ಲದಿದ್ದಲ್ಲಿ ನಿನಗೆ ಹೊಡೆತಬೀಳುವುದು’ ಎಂಬ ವಿಚಾರವು ನನ್ನ ಮನಸ್ಸಿನಲ್ಲಿ ಯಾವಾಗಲೂ ಸುತ್ತುತ್ತಿತ್ತು. ತದನಂತರ, ನಾನು ಒಂದು ಗ್ಯಾಂಗ್ಗೆ ಸೇರಿದೆ. ಯಾವಾಗಲೂ ಬೀದಿಗಳಲ್ಲಿ ನಮ್ಮ ಹೊಡೆದಾಟ ಬಡಿದಾಟಗಳು ನಡೆಯುತ್ತಿದ್ದವು. ಎಷ್ಟೋ ಸಲ ನನ್ನ ತಲೆಗೆ ಬಂದೂಕನ್ನು ಇಡಲಾಗಿದೆ ಮತ್ತು ಚೂರಿ ತೋರಿಸಿ ಬೆದರಿಸಲಾಗಿದೆ. ನನಗಿದ್ದ ಹೆಚ್ಚಿನ ಗೆಳೆತನಗಳು ಸಮಸ್ಯೆಗಳಿಂದ ಮತ್ತು ಭಯದಿಂದ ತುಂಬಿದ್ದವು.”
ಹಾಗಾದರೆ ಆ್ಯಂಡಿ ಸಮಾಧಾನವನ್ನು ಅರಸುವಂತೆ ಮಾಡಿದ್ದು ಯಾವುದು? ಅವರು ಹೇಳುವುದು: “ಒಂದು ದಿನ ನಾನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಹೋದೆ. ಅಲ್ಲಿದ್ದ ಜನರ ನಡುವಿನ ಪ್ರೀತಿತುಂಬಿದ ವಾತಾವರಣವನ್ನು ಕೂಡಲೇ ಗ್ರಹಿಸಿದೆ. ಅಂದಿನಿಂದ ಈ ಸಮಾಧಾನಪ್ರಿಯ ಜನರೊಂದಿಗಿನ ನನ್ನ ಸಹವಾಸವು ನಾನು ಶಾಂತಹೃದಯವನ್ನು ಬೆಳೆಸಿಕೊಳ್ಳಲು ಸಹಾಯಮಾಡಿದೆ, ಮತ್ತು ಕಟ್ಟಕಡೆಗೆ ನನ್ನ ಹಳೆಯ ಆಲೋಚನಾ ರೀತಿಯನ್ನು ತೊಲಗಿಸಿದೆ. ನಾನು ಅನೇಕರೊಂದಿಗೆ ಬಾಳುವಂಥ ಗೆಳೆತನಗಳನ್ನು ಸಹ ಮಾಡಿದ್ದೇನೆ.”
◼ ಭವಿಷ್ಯಕ್ಕಾಗಿ ನಿರೀಕ್ಷೆ ಸಮಾಧಾನಪಡಿಸುವವರಾಗಿರಲು ಇರುವ ಅತಿ ಪ್ರಾಮುಖ್ಯ ಕಾರಣವು ಇಷ್ಟೇ: ಅದು, ನಮ್ಮ ಸೃಷ್ಟಿಕರ್ತನು ತಿಳಿಯಪಡಿಸಿರುವ ಚಿತ್ತಕ್ಕಾಗಿ ನಮ್ಮ ಗೌರವವನ್ನು ತೋರಿಸುತ್ತದೆ. ದೇವರ ಸ್ವಂತ ವಾಕ್ಯವಾದ ಬೈಬಲ್ ನಮ್ಮನ್ನು ಉತ್ತೇಜಿಸುವುದು: “ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು.” (ಕೀರ್ತನೆ 34:14) ಯೆಹೋವ ದೇವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಒಪ್ಪಿಕೊಳ್ಳುವುದು ಮತ್ತು ಆತನ ಜೀವದಾಯಕ ಬೋಧನೆಗಳನ್ನು ಕಲಿತು ಅವುಗಳಿಗೆ ವಿಧೇಯರಾಗಿ ನಡೆದುಕೊಳ್ಳುವುದು ಆತನೊಂದಿಗೆ ನಾವು ಒಂದು ಆಪ್ತ ಸ್ನೇಹವನ್ನು ಹೊಂದುವಂತೆ ಸಾಧ್ಯಮಾಡುತ್ತದೆ. ಈ ಬಲವಾದ ಸಂಬಂಧದಿಂದಾಗಿ ನಮಗೆ “ದೇವಶಾಂತಿಯು” ಸಿಗುತ್ತದೆ, ಮತ್ತು ಇದು ಜೀವನದಲ್ಲಿ ಯಾವುದೇ ಸವಾಲುಗಳು ಎದುರಾದರೂ ನಮಗಿರುವ ಉತ್ಕೃಷ್ಟ ರೀತಿಯ ಶಾಂತಿಯಾಗಿದೆ.—ಫಿಲಿಪ್ಪಿ 4:6, 7.
ಅಲ್ಲದೆ, ನಾವು ಸಮಾಧಾನಪಡಿಸುವವರು ಆಗಿರುವುದರಿಂದ, ನಾವು ಎಂಥ ರೀತಿಯ ವ್ಯಕ್ತಿಯಾಗಿರಲು ಬಯಸುತ್ತೇವೆಂಬುದನ್ನು ಯೆಹೋವನಿಗೆ ತೋರಿಸುತ್ತೇವೆ. ಆತನು ವಾಗ್ದಾನಿಸಿರುವ ಶಾಂತಿಭರಿತ ಹೊಸ ಲೋಕದಲ್ಲಿನ ಆತನ ಮಟ್ಟಗಳಿಗೆ ನಾವು ಹೊಂದಿಕೆಯಲ್ಲಿ ಜೀವಿಸುವೆವು ಎಂಬುದನ್ನು ರುಜುಪಡಿಸುವೆವು. ಆತನು ದುಷ್ಟರನ್ನು ತೆಗೆದುಹಾಕಿ, ಯೇಸು ಹೇಳಿದಂತೆ ಶಾಂತರು ‘ಭೂಮಿಗೆ ಬಾಧ್ಯರಾಗುವಂತೆ’ ಮಾಡುವಾಗ ನಾವಲ್ಲಿ ಇರುವೆವು. ಇದೆಂಥ ಒಂದು ಆಶೀರ್ವಾದವಾಗಿರುವುದು!—ಕೀರ್ತನೆ 37:10, 11; ಜ್ಞಾನೋಕ್ತಿ 2:20-22.
ಈ ಮೂಲಕ, “ಸಮಾಧಾನಪಡಿಸುವವರು ಧನ್ಯರು” ಎಂಬ ಯೇಸುವಿನ ಮಾತುಗಳ ವ್ಯಾವಹಾರಿಕ ಮೌಲ್ಯವು ಸ್ಪಷ್ಟವಾಗಿ ತೋರಿಬರುತ್ತದೆ. ಅದರಿಂದಾಗಿ ನಾವು ಶಾಂತಹೃದಯವನ್ನು, ಅರ್ಥಪೂರ್ಣ ಸಂಬಂಧಗಳನ್ನು ಮತ್ತು ಭವಿಷ್ಯಕ್ಕಾಗಿ ದೃಢವಾದ ನಿರೀಕ್ಷೆಯನ್ನು ಹೊಂದಬಲ್ಲೆವು. ಈ ಎಲ್ಲ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬಲ್ಲೆವು, ಆದರೆ ಅದಕ್ಕಾಗಿ ನಾವು ‘ಎಲ್ಲರ ಸಂಗಡ ಸಮಾಧಾನದಿಂದಿರಲು’ ನಮ್ಮಿಂದ ಸಾಧ್ಯವಿರುವಷ್ಟು ಉತ್ತಮವಾದದ್ದನ್ನು ಮಾಡಬೇಕು.—ರೋಮಾಪುರ 12:18. (g 5/06)
[ಪುಟ 28ರಲ್ಲಿರುವ ಚಿತ್ರಗಳು]
“ನನ್ನ ಆರೋಗ್ಯವು ಬಹಳಷ್ಟು ಮಟ್ಟಿಗೆ ಸುಧಾರಿಸಿದೆ.” —ಜಿಮ್
[ಪುಟ 29ರಲ್ಲಿರುವ ಚಿತ್ರಗಳು]
“ನಾನು ಅನೇಕರೊಂದಿಗೆ ಬಾಳುವಂಥ ಗೆಳೆತನಗಳನ್ನು ಸಹ ಮಾಡಿದ್ದೇನೆ.” —ಆ್ಯಂಡಿ