ಆಧ್ಯಾಯ 1
ನಿಮಗೆ ಒಂದು ಸಂತೋಷಕರವಾದ ಭವಿಷ್ಯವಿರಬಲ್ಲದು!
1, 2. ನಿಮ್ಮ ಸೃಷ್ಟಿಕರ್ತನು ನಿಮಗಾಗಿ ಏನನ್ನು ಬಯಸುತ್ತಾನೆ?
ನೀವು ಪ್ರೀತಿಸುವ ಒಬ್ಬರಿಂದ ಒಂದು ಹೃದಯೋಲ್ಲಾಸದ ಆಲಿಂಗನ. ಪ್ರಿಯ ಮಿತ್ರರೊಂದಿಗೆ ಮಾಡುವ ಒಂದು ಉತ್ತಮ ಭೋಜನದ ಸಮಯದಲ್ಲಿ ಹೃತ್ಪೂರ್ವಕವಾದ ನಗೆ. ನಿಮ್ಮ ಮಕ್ಕಳು ಹರ್ಷಚಿತ್ತರಾಗಿ ಆಡುತ್ತಿರುವಾಗ ಪ್ರೇಕ್ಷಿಸುವ ಸಂತೋಷ. ಇಂತಹ ಕ್ಷಣಗಳು ಜೀವನದ ಉಲ್ಲಾಸಪೂರಿತ ಎಡೆಗಳು. ಆದರೆ ಅನೇಕರಿಗೆ, ಜೀವನವು ಒಂದರ ಅನಂತರ ಇನ್ನೊಂದು ಗಂಭೀರವಾದ ಸಮಸ್ಯೆಗಳನ್ನು ನೀಡುವಂತೆ ತೋರುತ್ತದೆ. ಅದು ನಿಮ್ಮ ಅನುಭವವಾಗಿರುವಲ್ಲಿ, ಧೈರ್ಯ ತೆಗೆದುಕೊಳ್ಳಿರಿ.
2 ಅದ್ಭುತಕರವಾದ ಸುತ್ತುಗಟ್ಟುಗಳಲ್ಲಿ ಅತ್ಯುತ್ತಮ ಪರಿಸ್ಥಿತಿಗಳಲ್ಲಿ ಬಾಳಿಕೆ ಬರುವ ಸಂತೋಷವನ್ನು ನೀವು ಅನುಭವಿಸುವುದು ದೇವರ ಚಿತ್ತ. ಇದು ಬರಿಯ ಸ್ವಪ್ನವಲ್ಲ, ಏಕೆಂದರೆ ಇಂತಹ ಒಂದು ಭವಿಷ್ಯತ್ತಿಗಾಗಿ ದೇವರು ವಾಸ್ತವವಾಗಿ ಕೀಲಿ ಕೈಯನ್ನು ನಿಮಗೆ ನೀಡುತ್ತಾನೆ. ಆ ಕೀಲಿ ಕೈ ಜ್ಞಾನವೇ.
3. ಯಾವ ಜ್ಞಾನವು ಸಂತೋಷಕ್ಕೆ ಕೀಲಿ ಕೈ, ಮತ್ತು ಆ ಜ್ಞಾನವನ್ನು ದೇವರು ಒದಗಿಸಬಲ್ಲನೆಂದು ನಾವು ಏಕೆ ಖಾತರಿಯಿಂದಿರಬಲ್ಲೆವು?
3 ನಾವೊಂದು ವಿಶೇಷ ರೀತಿಯ ಜ್ಞಾನದ ಕುರಿತು, ಮಾನವ ವಿವೇಕಕ್ಕಿಂತ ಎಷ್ಟೋ ಮಿಗಿಲಾದ ಜ್ಞಾನದ ಕುರಿತು ಮಾತಾಡುತ್ತಿದ್ದೇವೆ. ಅದು “ದೈವಜ್ಞಾನ.” (ಜ್ಞಾನೋಕ್ತಿ 2:5) ಸುಮಾರು 2,000 ವರ್ಷಗಳ ಹಿಂದೆ, ಒಬ್ಬ ಬೈಬಲ್ ಲೇಖಕನು ಹೇಳಿದ್ದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಸಕಲ ವಸ್ತುಗಳ ನಿರ್ಮಾಣಿಕನಲ್ಲಿರಬೇಕಾದ ಜ್ಞಾನದ ಕುರಿತು ಭಾವಿಸಿ! ದೇವರು ಸಕಲ ನಕ್ಷತ್ರಗಳನ್ನು ಎಣಿಸಿ ಅವುಗಳನ್ನು ಹೆಸರಿಸುತ್ತಾನೆಂದು ಬೈಬಲು ಹೇಳುತ್ತದೆ. ಅನೇಕಾನೇಕ ಕೋಟಿಗಟ್ಟಲೆ ನಕ್ಷತ್ರಗಳು ನಮ್ಮ ಸ್ವಂತ ಆಕಾಶಗಂಗೆಯಲ್ಲಿರುವಾಗ ಮತ್ತು ಸುಮಾರು ಹತ್ತು ಸಾವಿರ ಕೋಟಿ ಇತರ ಆಕಾಶಗಂಗೆಗಳು ಇವೆಯೆಂದು ಖಗೋಳಜ್ಞರು ಹೇಳುವಾಗ, ಅದೆಂತಹ ತತ್ತರಗುಟ್ಟಿಸುವ ಆಲೋಚನಾ ವಿಷಯ! (ಕೀರ್ತನೆ 147:4) ದೇವರು ನಮ್ಮ ಕುರಿತು ಸಹ ಸಕಲ ವಿಷಯಗಳನ್ನು ಬಲ್ಲವನಾಗಿರುವುದರಿಂದ, ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಹೆಚ್ಚು ಉತ್ತಮವಾದ ಉತ್ತರಗಳನ್ನು ಇನ್ನಾವನು ತಾನೇ ಒದಗಿಸಬಲ್ಲನು?—ಮತ್ತಾಯ 10:30.
4. ನಮ್ಮನ್ನು ಮಾರ್ಗದರ್ಶಿಸಲು ದೇವರು ಉಪದೇಶಗಳನ್ನು ಒದಗಿಸುವನೆಂದು ನಾವು ಏಕೆ ನಿರೀಕ್ಷಿಸಬೇಕು, ಮತ್ತು ಈ ಆವಶ್ಯಕತೆಯನ್ನು ಯಾವ ಗ್ರಂಥವು ಪೂರೈಸುತ್ತದೆ?
4 ಇಬ್ಬರು ಪುರುಷರು ತಮ್ಮ ಕಾರುಗಳನ್ನು ರಿಪೇರಿ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಭಾವಿಸಿಕೊಳ್ಳಿರಿ. ಒಬ್ಬನು ಹತಾಶನಾಗಿ ತನ್ನ ಉಪಕರಣಗಳನ್ನು ಕೆಳಗೆ ಎಸೆಯುತ್ತಾನೆ. ಇನ್ನೊಬ್ಬನು ಶಾಂತಭಾವದಿಂದ ಸಮಸ್ಯೆಯನ್ನು ಸರಿಪಡಿಸಿ, ಇಗ್ನಿಷನ್ ಕೀಲಿ ಕೈಯನ್ನು ತಿರುಗಿಸಿ, ಎಂಜಿನು ಸಲೀಸಾಗಿ ಚಲನೆಗೊಂಡು ಕೆಲಸ ನಡೆಸುವಾಗ ನಸುನಗೆ ಬೀರುತ್ತಾನೆ. ಈ ಇಬ್ಬರಲ್ಲಿ ಯಾರ ಬಳಿ ತಯಾರಕರ ಉಪದೇಶದ ಕೈಪಿಡಿಯಿತ್ತೆಂದು ಊಹಿಸುವುದು ನಿಮಗೆ ಕಷ್ಟಕರವಾಗಲಿಕ್ಕಿಲ್ಲ. ಜೀವನದಲ್ಲಿ ನಮ್ಮನ್ನು ಮಾರ್ಗದರ್ಶಿಸಲು ದೇವರು ಉಪದೇಶಗಳನ್ನು ಒದಗಿಸುವನೆಂಬುದು ಅರ್ಥಯುಕ್ತವಲ್ಲವೆ? ನಿಮಗೆ ಗೊತ್ತಿರಬಹುದಾದಂತೆ, ಬೈಬಲು ಹಾಗೆಂದೇ—ನಮ್ಮ ಸೃಷ್ಟಿಕರ್ತನಿಂದ ಬಂದಿರುವ ಉಪದೇಶ ಮತ್ತು ಮಾರ್ಗದರ್ಶನೆಯ, ದೇವರ ಜ್ಞಾನವನ್ನು ನೀಡಲಿಕ್ಕಾಗಿ ರಚಿಸಿರುವ ಒಂದು ಗ್ರಂಥವೆಂದೇ—ವಾದಿಸುತ್ತದೆ.—2 ತಿಮೊಥೆಯ 3:16.
5. ಬೈಬಲಿನಲ್ಲಿ ಅಡಕವಾಗಿರುವ ಜ್ಞಾನವು ಅದೆಷ್ಟು ಅಮೂಲ್ಯ?
5 ಬೈಬಲಿನ ವಾದವು ಸತ್ಯವಾಗಿರುವಲ್ಲಿ, ಆ ಗ್ರಂಥದಲ್ಲಿ ಎಂತಹ ಜ್ಞಾನನಿಧಿಗಳು ಅಡಗಿರಬೇಕೆಂದು ಯೋಚಿಸಿರಿ! ಜ್ಞಾನೋಕ್ತಿ 2:1-5 ರಲ್ಲಿ, ನಾವು ವಿವೇಕವನ್ನು ಹುಡುಕುವಂತೆ, ಅಡಗಿರುವ ನಿಧಿಗಾಗಿ ಹೇಗೋ ಹಾಗೆಯೇ, ಮಾನವ ಯೋಚನೆಯ ಮಣ್ಣಿನಲ್ಲಲ್ಲ, ದೇವರ ಸ್ವಂತ ವಾಕ್ಯದಲ್ಲಿ ಅದಕ್ಕಾಗಿ ಅಗೆಯುವಂತೆ ಅದು ನಮ್ಮನ್ನು ಪ್ರೋತ್ಸಾಹಿಸುತ್ತದೆ. ನಾವು ಅಲ್ಲಿ ಹುಡುಕುವುದಾದರೆ, “ದೈವಜ್ಞಾನವನ್ನು ಪಡೆದು” ಕೊಳ್ಳುವೆವು. ನಮ್ಮ ಇತಿಮಿತಿಗಳು ಮತ್ತು ಆವಶ್ಯಕತೆಗಳನ್ನು ದೇವರು ಅರ್ಥಮಾಡಿಕೊಳ್ಳುವುದರಿಂದ, ನಾವು ಶಾಂತಿಭರಿತವಾದ, ಸಂತೋಷದ ಬಾಳ್ವೆಯನ್ನು ನಡೆಸಲು ಸಹಾಯ ಮಾಡುವಂತಹ ಉಪದೇಶವನ್ನು ಆತನು ಕೊಡುತ್ತಾನೆ. (ಕೀರ್ತನೆ 103:14; ಯೆಶಾಯ 48:17) ಇದಲ್ಲದೆ, ದೇವರ ಜ್ಞಾನವು ನಮಗೆ ಭಾವೋದ್ರೇಕಿಸುವ ಸುವಾರ್ತೆಯನ್ನು ನೀಡುತ್ತದೆ.
ನಿತ್ಯಜೀವ!
6. ದೇವರ ಜ್ಞಾನದ ಕುರಿತು ಯಾವ ಆಶ್ವಾಸನೆಯನ್ನು ಯೇಸು ಕ್ರಿಸ್ತನು ಕೊಟ್ಟನು?
6 ಪ್ರಖ್ಯಾತ ಐತಿಹಾಸಿಕ ವ್ಯಕ್ತಿಯಾದ ಯೇಸು ಕ್ರಿಸ್ತನು ದೇವರ ಜ್ಞಾನದ ಈ ವೈಶಿಷ್ಟ್ಯವನ್ನು ಸ್ಪಷ್ಟವಾದ ಮಾತುಗಳಲ್ಲಿ ವರ್ಣಿಸಿದನು. ಅವನು ಹೇಳಿದ್ದು: “ಒಬ್ಬನೇ ಸತ್ಯದೇವರಾದ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಅವರು ಪಡೆದುಕೊಳ್ಳುವುದು—ಇದೇ ನಿತ್ಯಜೀವವು.” (ಯೋಹಾನ 17:3, NW) ಊಹಿಸಿರಿ—ನಿತ್ಯಜೀವಕ್ಕೆ ನಡೆಸುವ ಜ್ಞಾನ!
7. ನಾವು ಸಾಯುವಂತೆ ದೇವರು ಉದ್ದೇಶಿಸಿರಲಿಲ್ಲವೆಂಬುದಕ್ಕೆ ಯಾವ ಪುರಾವೆ ಇದೆ?
7 ನಿತ್ಯಜೀವವು ಬರಿಯ ಸ್ವಪ್ನವೆಂದು ಒಡನೆ ಮನಸ್ಸಿನಿಂದ ತೊಲಗಿಸಿ ಬಿಡಬೇಡಿ. ಬದಲಾಗಿ, ಮಾನವ ದೇಹವು ಮಾಡಲ್ಪಟ್ಟಿರುವ ವಿಧವನ್ನು ನೋಡಿರಿ. ರಸನ, ಶ್ರವಣ, ಘ್ರಾಣ, ದರ್ಶನ ಮತ್ತು ಸ್ಪರ್ಶಗಳಿಗಾಗಿ ಅದು ಅತ್ಯುತ್ಕೃಷ್ಟವಾಗಿ ರೂಪಿಸಲ್ಪಟ್ಟಿದೆ. ನಮ್ಮ ಜ್ಞಾನೇಂದ್ರಿಯಗಳನ್ನು ನಲಿಸುವ ಎಷ್ಟೋ ವಸ್ತುಗಳು—ರಸವತ್ತಾದ ಆಹಾರ, ಸುಶ್ರಾವ್ಯವಾದ ಪಕ್ಷಿಗೀತ, ಸುಗಂಧದ ಪುಷ್ಪಗಳು, ಸುಂದರವಾದ ದೃಶ್ಯ, ಆನಂದಕಾರಕ ಒಡನಾಟ—ಭೂಮಿಯಲ್ಲಿವೆ! ಮತ್ತು ನಮ್ಮ ಬೆರಗುಗೊಳಿಸುವ ಮಿದುಳು ಒಂದು ಸೂಪರ್ಕಂಪ್ಯೂಟರಿಗಿಂತಲೂ ಶ್ರೇಷ್ಠ, ಹೇಗೆಂದರೆ ನಾವು ಅಂತಹ ಎಲ್ಲ ವಿಷಯಗಳನ್ನು ಗಣ್ಯಮಾಡಿ, ಅವುಗಳಲ್ಲಿ ಆನಂದಿಸುವಂತೆ ಅದು ಸಾಧ್ಯಮಾಡುತ್ತದೆ. ನಾವು ಸತ್ತು ಇವೆಲ್ಲವನ್ನು ಕಳೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆಂದು ನೀವು ನೆನಸುತ್ತೀರೊ? ನಾವು ಸಂತೋಷದಿಂದ ಬದುಕಬೇಕು ಮತ್ತು ಅನಂತ ಜೀವನವನ್ನು ಅನುಭೋಗಿಸಬೇಕೆಂದು ಆತನು ಬಯಸುತ್ತಾನೆಂದು ತೀರ್ಮಾನಿಸುವುದು ಹೆಚ್ಚು ನ್ಯಾಯಸಮ್ಮತವಲ್ಲವೊ? ಹೌದು, ದೇವರ ಜ್ಞಾನವು ನಿಮಗೆ ಆ ಅರ್ಥದಲ್ಲಿರಬಲ್ಲದು.
ಪ್ರಮೋದವನದಲ್ಲಿ ಜೀವನ
8. ಮಾನವ ಕುಲದ ಭವಿಷ್ಯತ್ತಿನ ಕುರಿತು ಬೈಬಲು ಏನು ಹೇಳುತ್ತದೆ?
8 ಭೂಮಿಯ ಮತ್ತು ಮಾನವಕುಲದ ಭವಿಷ್ಯದ ಕುರಿತು ಬೈಬಲು ಏನು ಹೇಳುತ್ತದೊ ಅದರ ಸಾರಾಂಶವನ್ನು ಒಂದು ಶಬ್ದದಲ್ಲಿ ಹೇಳಬಹುದು—ಪ್ರಮೋದವನ! ಒಬ್ಬ ಸಾಯುತ್ತಿದ್ದ ಮನುಷ್ಯನಿಗೆ, “ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ,” ಎಂದು ಯೇಸು ಕ್ರಿಸ್ತನು ಹೇಳಿದಾಗ ಅವನು ಇದರ ಕುರಿತು ಮಾತಾಡಿದನು. (ಲೂಕ 23:43, NW) ಪ್ರಮೋದವನದ ಆ ಪ್ರಸ್ತಾಪವು ಆ ಮನುಷ್ಯನ ಮನಸ್ಸಿಗೆ ನಮ್ಮ ಪ್ರಥಮ ಹೆತ್ತವರಾದ ಆದಾಮ ಮತ್ತು ಹವ್ವರಿದ್ದ ಸಂತೋಷದ ಸ್ಥಿತಿಯನ್ನು ತಂದಿತೆಂಬುದು ನಿಸ್ಸಂದೇಹ. ದೇವರು ಅವರನ್ನು ಸೃಷ್ಟಿಸಿದಾಗ, ಅವರು ಪರಿಪೂರ್ಣರಾಗಿದ್ದು, ದೇವರು ವಿನ್ಯಾಸಿಸಿ ನೆಟ್ಟಿದ್ದ ಉದ್ಯಾನಸದೃಶವಾದ ವನದಲ್ಲಿ ಜೀವಿಸಿದರು. ಅದನ್ನು ಸಮಂಜಸವಾಗಿಯೇ, ಯಾವ ಹೆಸರು ಸುಖಾನುಭವವನ್ನು ಸೂಚಿಸುತ್ತದೊ ಆ ಏದೆನ್ ಉದ್ಯಾನವನವೆಂದು ಕರೆಯಲಾಯಿತು.
9. ಆ ಆದಿ ಪ್ರಮೋದವನದಲ್ಲಿ ಜೀವನವು ಹೇಗಿತ್ತು?
9 ಅದೆಂತಹ ಹರ್ಷಕಾರಕ ಉದ್ಯಾನವಾಗಿತ್ತು! ಅದೊಂದು ವಾಸ್ತವವಾದ ಪ್ರಮೋದವನವಾಗಿತ್ತು. ಅದರ ಸುಂದರ ವೃಕ್ಷಗಳಲ್ಲಿ, ಮಧುರವಾದ ಫಲಗಳನ್ನು ಬಿಡುವವುಗಳಿದ್ದವು. ಆದಾಮ, ಹವ್ವರು ತಮ್ಮ ಕಾರ್ಯಕ್ಷೇತ್ರವನ್ನು ಸುತ್ತಿ ಪರೀಕ್ಷಿಸುತ್ತಾ, ಅದರ ಹಿತಕರವಾದ ಜಲವನ್ನು ಕುಡಿಯುತ್ತಾ, ಅದರ ಮರಗಳಿಂದ ಫಲಗಳನ್ನು ಕೂಡಿಸುತ್ತಾ ಇದ್ದಾಗ, ಅವರಿಗೆ ವ್ಯಾಕುಲಪಡುವ ಅಥವಾ ಭಯಭೀತರಾಗುವ ಕಾರಣವಿರಲಿಲ್ಲ. ಮೃಗಗಳಿಂದ ಸಹ ಯಾವುದೇ ಬೆದರಿಕೆ ಇರಲಿಲ್ಲ, ಏಕೆಂದರೆ ದೇವರು ಪುರುಷನನ್ನೂ ಅವನ ಹೆಂಡತಿಯನ್ನೂ ಅವುಗಳ ಮೇಲೆ ಪ್ರೀತಿಯ ಆಧಿಪತ್ಯವನ್ನು ನಡೆಸುವಂತೆ ಇಟ್ಟಿದ್ದನು. ಇದಕ್ಕೆ ಕೂಡಿಸಿ, ಪ್ರಥಮ ಮಾನವ ಜೊತೆಗೆ ಮಿಡಿಯುವ ಆರೋಗ್ಯವಿತ್ತು. ಅವರು ದೇವರಿಗೆ ವಿಧೇಯರಾಗಿದ್ದಷ್ಟು ಕಾಲ, ಒಂದು ಅನಂತವಾದ, ಸಂತೋಷದ ಭವಿಷ್ಯತ್ತು ಅವರ ಮುಂದಿತ್ತು. ತಮ್ಮ ಅದ್ಭುತಕರವಾದ ಪ್ರಮೋದವನ್ಯ ಭವನವನ್ನು ಪರಾಮರಿಸುವ ತೃಪ್ತಿದಾಯಕ ಕೆಲಸವನ್ನು ಅವರಿಗೆ ಕೊಡಲಾಗಿತ್ತು. ಅಲ್ಲದೆ, ದೇವರು ಆದಾಮ ಮತ್ತು ಹವ್ವರಿಗೆ “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶ” ಮಾಡಿಕೊಳ್ಳುವ ಆದೇಶವನ್ನು ಕೊಟ್ಟನು. ನಮ್ಮ ಇಡೀ ಗ್ರಹವು ಸೌಂದರ್ಯ ಮತ್ತು ಹರ್ಷದ ಒಂದು ಸ್ಥಳವಾಗಿ ಪರಿಣಮಿಸುವ ವರೆಗೆ ಅವರು ಮತ್ತು ಅವರ ಸಂತತಿಯವರು ಪ್ರಮೋದವನದ ಮೇರೆಗಳನ್ನು ವಿಸ್ತರಿಸಬೇಕಾಗಿತ್ತು.—ಆದಿಕಾಂಡ 1:28.
10. ಯೇಸುವು ಪ್ರಮೋದವನದ ಕುರಿತು ಮಾತಾಡಿದಾಗ, ಅವನ ಮನಸ್ಸಿನಲ್ಲಿ ಏನಿತ್ತು?
10 ಆದರೂ ಯೇಸುವು ಪ್ರಮೋದವನದ ಕುರಿತು ಮಾತಾಡಿದಾಗ, ಸಾಯುತ್ತಿದ್ದ ಒಬ್ಬ ಮನುಷ್ಯನು ಅತಿಪೂರ್ವದ ಗತಕಾಲದ ಕುರಿತು ಯೋಚಿಸುವಂತೆ ಹೇಳುತ್ತಿರಲಿಲ್ಲ. ಇಲ್ಲ, ಯೇಸುವು ಭವಿಷ್ಯತ್ತಿನ ಕುರಿತು ಮಾತಾಡುತ್ತಿದ್ದನು! ನಮ್ಮ ಇಡೀ ಭೂನಿವಾಸವು ಒಂದು ಪ್ರಮೋದವನವಾಗುವುದೆಂದು ಅವನಿಗೆ ತಿಳಿದಿತ್ತು. ಹೀಗೆ ದೇವರು ಮಾನವಕುಲಕ್ಕಾಗಿ ಮತ್ತು ನಮ್ಮ ಭೂಮಿಗಾಗಿ ತನ್ನ ಮೂಲ ಉದ್ದೇಶವನ್ನು ನೆರವೇರಿಸಲಿರುವನು. (ಯೆಶಾಯ 55:10, 11) ಹೌದು, ಪ್ರಮೋದವನವು ಪುನಃಸ್ಥಾಪಿಸಲ್ಪಡಲಿರುವುದು! ಮತ್ತು ಅದು ಹೇಗಿರುವುದು? ದೇವರ ವಾಕ್ಯವಾದ ಪವಿತ್ರ ಬೈಬಲು ಉತ್ತರ ನೀಡಲಿ.
ಪುನಃಸ್ಥಾಪಿತ ಪ್ರಮೋದವನದಲ್ಲಿ ಜೀವನ
11. ಪುನಃಸ್ಥಾಪಿತ ಪ್ರಮೋದವನದಲ್ಲಿ, ಕಾಯಿಲೆ, ವಾರ್ಧಕ್ಯ ಮತ್ತು ಮರಣಕ್ಕೆ ಏನು ಸಂಭವಿಸುವುದು?
11 ಕಾಯಿಲೆ, ವಾರ್ಧಕ್ಯ ಮತ್ತು ಮರಣ ಇನ್ನಿರವು. “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) “ದೇವರು ತಾನೇ ಅವರ [ಮಾನವ ಕುಲದ] ಸಂಗಡ ಇರುವನು; ಆತನು ಅವರ ಕಣ್ಣುಗಳಿಂದ ಕಣ್ಣೀರನ್ನೆಲ್ಲ ಒರಸಿಬಿಡುವನು. ಇನ್ನು ಮರಣವಿರದು, ಇನ್ನು ದುಃಖವಾಗಲಿ ಗೋಳಾಟವಾಗಲಿ ವೇದನೆಯಾಗಲಿ ಇರವು; ಮೊದಲಿನ ಸಂಗತಿಗಳು ದಾಟಿ ಹೋಗಿವೆ.”—ಪ್ರಕಟನೆ 21:3, 4, NW.
12. ಭವಿಷ್ಯತ್ತಿನ ಪ್ರಮೋದವನದಲ್ಲಿ, ಪಾತಕ, ಹಿಂಸಾಚಾರ ಮತ್ತು ದುಷ್ಟತ್ವ ಇರವು ಎಂದು ನಾವು ಏಕೆ ಖಾತರಿಯಿಂದಿರಬಲ್ಲೆವು?
12 ಪಾತಕ, ಹಿಂಸಾಚಾರ ಮತ್ತು ದುಷ್ಟತ್ವ ಸದಾ ಇಲ್ಲದೆ ಹೋಗುವುವು. “ಕೆಡುಕರು ತೆಗೆದುಹಾಕಲ್ಪಡುವರು; . . . ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು.” (ಕೀರ್ತನೆ 37:9-11) “ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:22.
13. ದೇವರು ಶಾಂತಿಯನ್ನು ಹೇಗೆ ತರುವನು?
13 ಶಾಂತಿಯು ಭೂವ್ಯಾಪಕವಾಗಿ ನೆಲಸುವುದು. “ಆತನು [ದೇವರು] ಭೂಮಿಯ ಎಲ್ಲೆಯ ವರೆಗೆ ಯುದ್ಧಗಳು ನಿಲ್ಲುವಂತೆ ಮಾಡುತ್ತಿದ್ದಾನೆ. ಬಿಲ್ಲುಗಳನ್ನು ಆತನು ಮುರಿದು, ಈಟಿಯನ್ನು ತುಂಡುತುಂಡಾಗಿ ಕಡಿಯುತ್ತಾನೆ ನಿಶ್ಚಯ.” (ಕೀರ್ತನೆ 46:9, NW) “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರಲಿ.”—ಕೀರ್ತನೆ 72:7.
14, 15. ಪುನಃಸ್ಥಾಪಿತವಾದ ಪ್ರಮೋದವನದಲ್ಲಿ ವಸತಿ, ಕೆಲಸ ಮತ್ತು ಆಹಾರದ ವಿಷಯದಲ್ಲಿ ಬೈಬಲು ಏನನ್ನುತ್ತದೆ?
14 ವಸತಿ ಭದ್ರವಾಗಿರುವುದು ಮತ್ತು ಕೆಲಸ ತೃಪ್ತಿದಾಯಕವಾಗಿ ಇರುವುದು. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು.”—ಯೆಶಾಯ 65:21-23.
15 ಆರೋಗ್ಯಕರವಾದ ಆಹಾರವು ಧಾರಾಳವಾಗಿ ದೊರೆಯುವುದು. “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.” (ಕೀರ್ತನೆ 72:16) “ಭೂಮಿಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.”—ಕೀರ್ತನೆ 67:6.
16. ಪ್ರಮೋದವನದಲ್ಲಿ ಜೀವನವು ಏಕೆ ಹರ್ಷಕರವಾಗಿರುವುದು?
16 ಪ್ರಮೋದವನವಾಗಿರುವ ಭೂಮಿಯ ಮೇಲೆ ನಿತ್ಯಜೀವವು ಹರ್ಷಕರವಾಗಿರುವುದು. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”—ಯೆಶಾಯ 35:1.
ಜ್ಞಾನ ಮತ್ತು ನಿಮ್ಮ ಭವಿಷ್ಯತ್ತು
17. (ಎ) ಪ್ರಮೋದವನದಲ್ಲಿ ಜೀವಿತವು ನಿಮಗೆ ಹಿಡಿಸುವಲ್ಲಿ ನೀವು ಏನು ಮಾಡಬೇಕು? (ಬಿ) ದೇವರು ಭೂಮಿಯ ಮೇಲೆ ಮಹಾ ಬದಲಾವಣೆಗಳನ್ನು ತರುವನೆಂದು ನಮಗೆ ಹೇಗೆ ಗೊತ್ತು?
17 ಪ್ರಮೋದವನದಲ್ಲಿನ ಜೀವನವು ನಿಮಗೆ ಹಿಡಿಸುವುದಾದರೆ, ನೀವು ದೇವರ ಜ್ಞಾನವನ್ನು ಸಂಪಾದಿಸುವುದರಿಂದ ನಿಮ್ಮನ್ನು ಯಾವುದೂ ತಡೆದು ಹಿಡಿಯುವಂತೆ ಬಿಡಬೇಡಿರಿ. ಆತನು ಮಾನವ ಕುಲವನ್ನು ಪ್ರೀತಿಸುತ್ತಾನೆ ಮತ್ತು ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡಲು ಅವಶ್ಯವಿರುವ ಬದಲಾವಣೆಗಳನ್ನು ಆತನು ತರುವನು. ಎಷ್ಟೆಂದರೂ, ಜಗತ್ತಿನಲ್ಲಿ ಭಾರಿ ಚಾಲ್ತಿಯಲ್ಲಿರುವ ದುರವಸ್ಥೆ ಮತ್ತು ಅನ್ಯಾಯಕ್ಕೆ ಅಂತ್ಯವನ್ನು ತರುವ ಶಕ್ತಿಯು ನಿಮಗಿದ್ದಲ್ಲಿ, ನೀವು ಹಾಗೆ ಮಾಡುತ್ತಿರಲಿಲ್ಲವೆ? ದೇವರು ಅದಕ್ಕಿಂತ ಕಡಮೆಯಾದುದನ್ನು ಮಾಡುವನೆಂದು ನಾವು ನಿರೀಕ್ಷಿಸುವೆವೊ? ವಾಸ್ತವವಾಗಿ, ದೇವರು ಈ ಬಿಕ್ಕಟ್ಟಿಗೀಡಾಗಿರುವ ವ್ಯವಸ್ಥೆಯನ್ನು ಒಂದು ಪರಿಪೂರ್ಣವಾದ ನೀತಿಯ ಆಳಿಕೆಯಿಂದ ಭರ್ತಿಮಾಡುವ ಸಮಯದ ಕುರಿತು ಬೈಬಲು ಸುವ್ಯಕ್ತವಾದ ಭಾಷೆಯಲ್ಲಿ ಮಾತಾಡುತ್ತದೆ. (ದಾನಿಯೇಲ 2:44) ಆದರೆ ಇದೆಲ್ಲದರ ಕುರಿತು ಕೇವಲ ಹೇಳುವುದಕ್ಕಿಂತ ಎಷ್ಟೋ ಹೆಚ್ಚಿನದ್ದನ್ನು ಬೈಬಲು ಮಾಡುತ್ತದೆ. ನಾವು ದೇವರ ವಾಗ್ದಾನಿತ ನೂತನ ಜಗತ್ತಿನೊಳಗೆ ಹೇಗೆ ಪಾರಾಗಬಲ್ಲೆವೆಂದು ಅದು ತೋರಿಸುತ್ತದೆ.—2 ಪೇತ್ರ 3:13; 1 ಯೋಹಾನ 2:17.
18. ದೇವರ ಜ್ಞಾನವು ನಿಮಗಾಗಿ ಈಗ ಏನು ಮಾಡಬಲ್ಲದು?
18 ದೇವರ ಜ್ಞಾನವು ಇದೀಗಲೂ ನಿಮಗೆ ಪ್ರಯೋಜನವನ್ನು ತರಬಲ್ಲದು. ಜೀವನದ ಅತ್ಯಗಾಧವಾದ ಮತ್ತು ಮನಸ್ಸನ್ನು ತೀರ ಕಲಕಿಸುವ ಪ್ರಶ್ನೆಗಳು ಬೈಬಲಿನಲ್ಲಿ ಉತ್ತರಿಸಲ್ಪಟ್ಟಿವೆ. ಅದರ ಮಾರ್ಗದರ್ಶನವನ್ನು ಅಂಗೀಕರಿಸುವುದು, ದೇವರೊಂದಿಗೆ ಮಿತ್ರತ್ವವನ್ನು ಬೆಳೆಸುವಂತೆ ನಿಮಗೆ ಸಹಾಯ ಮಾಡುವುದು. ಎಂತಹ ಮಹಾ ಸುಯೋಗವಿದು! ಮತ್ತು ಇದು ದೇವರು ಮಾತ್ರ ಕೊಡಬಲ್ಲ ಶಾಂತಿಯನ್ನು ಅನುಭವಿಸುವಂತೆ ನಿಮಗೆ ಸಾಧ್ಯಮಾಡುವುದು. (ರೋಮಾಪುರ 15:13, 33) ಈ ಜೀವಾವಶ್ಯಕವಾದ ಜ್ಞಾನವನ್ನು ತೆಗೆದುಕೊಳ್ಳಲು ನೀವು ಆರಂಭಿಸುತ್ತಿರುವಂತೆಯೇ, ನಿಮ್ಮ ಜೀವನದ ಅತಿ ಪ್ರಾಮುಖ್ಯ ಮತ್ತು ಪ್ರತಿಫಲದಾಯಕವಾದ ಪ್ರಯತ್ನದಲ್ಲಿ ನೀವು ತೊಡಗುತ್ತಿದ್ದೀರಿ. ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಸಂಪಾದಿಸಿದ್ದಕ್ಕಾಗಿ ನೀವೆಂದಿಗೂ ವಿಷಾದಿಸಲಾರಿರಿ.
19. ಮುಂದಿನ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಯನ್ನು ಪರಿಗಣಿಸುವೆವು?
19 ನಾವು ಬೈಬಲನ್ನು, ಅದು ದೇವರ ಜ್ಞಾನವು ಅಡಕವಾಗಿರುವ ಗ್ರಂಥವೆಂದು ಸೂಚಿಸಿದ್ದೇವೆ. ಆದರೂ, ಅದು ಮಾನವ ವಿವೇಕದ ಗ್ರಂಥವಲ್ಲ, ಬದಲಾಗಿ ಅದಕ್ಕಿಂತ ಎಷ್ಟೋ ಶ್ರೇಷ್ಠವಾದುದೆಂದು ನಮಗೆ ಹೇಗೆ ಗೊತ್ತು? ಈ ಪ್ರಶ್ನೆಯನ್ನು ನಾವು ಮುಂದಿನ ಅಧ್ಯಾಯದಲ್ಲಿ ಪರಿಗಣಿಸುವೆವು.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ದೇವರ ಜ್ಞಾನವು ನಿಮ್ಮನ್ನು ನಿತ್ಯ ಸಂತೋಷಕ್ಕೆ ಏಕೆ ನಡೆಸಬಲ್ಲದು?
ಬರಲಿರುವ ಭೂಪ್ರಮೋದವನದಲ್ಲಿ ಜೀವನವು ಯಾವ ವಿಧದ್ದಾಗಿರುವುದು?
ದೇವರ ಜ್ಞಾನವನ್ನು ಈಗ ಪಡೆದುಕೊಳ್ಳುವುದರಿಂದ ನಿಮಗೆ ಏಕೆ ಪ್ರಯೋಜನವಾಗುವುದು?