ಅಹಂಕಾರದ ಮನೋಭಾವವನ್ನು ವಿಸರ್ಜಿಸಿರಿ!
ವಿವೇಕದ ಬೈಬಲ್ ಜ್ಞಾನೋಕ್ತಿಯೊಂದು ಹೇಳುವುದು: “ತನ್ನ ಬಾಗಿಲನ್ನು ಎತ್ತರಿಸುವವನು ಹಾಳಾಗುವನು.” (ಜ್ಞಾನೋಕ್ತಿ 17:19) ಎತ್ತರದ ಬಾಗಿಲಿನಲ್ಲಿ ತಪ್ಪೇನು ಮತ್ತು ಈ ಜ್ಞಾನೋಕ್ತಿಯ ಮುಖ್ಯಾರ್ಥವೇನು?
ಪುರಾತನ ಕಾಲಗಳಲ್ಲಿ ಕುದುರೆ ಸವಾರಿ ಮಾಡುತ್ತಾ ಬರುವ ವ್ಯಕ್ತಿಗಳೂ ಲೂಟಿ ಮಾಡುವ ತಂಡಗಳೂ ಅಸಾಮಾನ್ಯವಾಗಿರಲಿಲ್ಲ. ಬಯಲು ಪ್ರದೇಶಗಳಲ್ಲಿದ್ದ ಅರಕ್ಷಿತ ಮನೆಗಳು ಕಳ್ಳರಿಗೆ ಸುಲಭಭೇದ್ಯವಾಗಿದ್ದವು. ತಮ್ಮ ಸ್ವತ್ತುಗಳ ಕಳ್ಳತನವನ್ನು ತಡೆಯಲು ಕೆಲವು ಧಣಿಗಳು ಒಂದು ಪ್ರತ್ಯೇಕ ಬಾಗಲಿರುವ ಗೋಡೆಯನ್ನು ಕಟ್ಟಿದ್ದರು. ಗೋಡೆ ಎತ್ತರವಾಗಿದ್ದರೂ ಬಾಗಿಲು ತಗ್ಗಾಗಿತ್ತು. ವಾಸ್ತವವಾಗಿ ಕೆಲವು ಮೂರು ಅಡಿ—ಕುದುರೆ ಮತ್ತು ಸವಾರನ ಪ್ರವೇಶಕ್ಕೆ ತೀರಾ ತಗ್ಗು—ಗಿಂತ ಹೆಚ್ಚು ಎತ್ತರವಾಗಿರಲಿಲ್ಲ. ತಮ್ಮ ಅಂಗಳಗಳಿಗೆ ಬರುವ ಬಾಗಲನ್ನು ತಗ್ಗಾಗಿ ಮಾಡದವರು, ಕುದುರೆ ಸವಾರಿ ಮಾಡುತ್ತಾ ಒಳಬರುವ ಪುರುಷರಿಂದ ತಮ್ಮ ವಸ್ತುಗಳು ಸೂರೆಮಾಡಲ್ಪಡುವ ಅಪಾಯಕ್ಕೊಳಗಾಗುತ್ತಿದ್ದರು.
ನಗರಗಳಲ್ಲಿ ಅಂಗಳ ದ್ವಾರಗಳು ಸಾಮಾನ್ಯವಾಗಿ ತಗ್ಗಾಗಿಯೂ ಅನಾಕರ್ಷಕವಾಗಿಯೂ ಇದ್ದು, ಗೋಡೆಯಾವರಣದೊಳಗೆ ಇರಬಹುದಾದ ಐಶ್ವರ್ಯದ ಯಾವ ಸೂಚನೆಯನ್ನೂ ಕೊಡುತ್ತಿರಲಿಲ್ಲ. ಆದರೂ ಪರ್ಸಿಯದಲ್ಲಿ ಎತ್ತರದ ದ್ವಾರವು ರಾಜಮನೆತನದ ಸೂಚನೆಗಳಾಗಿದ್ದವು. ಇದನ್ನು ಕೆಲವು ಪ್ರಜೆಗಳು ಮಹಾ ಅಪಾಯಕ್ಕೆ ತಲೆಯೊಡ್ಡುತ್ತಾ ಅನುಕರಿಸಲು ಪ್ರಯತ್ನಿಸಿದರು. ತನ್ನ ಮನೆಗೆ ಎತ್ತರದ ಬಾಗಿಲನ್ನು ಮಾಡಿದ ಯಾವನೂ, ತನ್ನ ಸಮೃದ್ಧಿಯ ಪ್ರದರ್ಶನದ ಕಾರಣ ದರೋಡೆಯನ್ನು ಆಮಂತ್ರಿಸುತ್ತಿದ್ದನು.
ಹೀಗೆ, ಎತ್ತರದ ಬಾಗಿಲನ್ನು ಮಾಡುವವರು, ತಮ್ಮ ನಿಜ ಮೌಲ್ಯಕ್ಕಿಂತ ತಮ್ಮನ್ನು ಹೆಚ್ಚಿಸಿಕೊಳ್ಳುವದರಿಂದ ವಿಪತ್ತಿಗೆ ಕರೆಕೊಡುತ್ತಿದ್ದಾರೆಂದು ಜ್ಞಾನೋಕ್ತಿ 17:19 ತೋರಿಸುತ್ತದೆ. ಬಾಯಿಯು ಜಂಬದ ಮತ್ತು ಅಹಂಕಾರದ ಮಾತಿನ ಮೂಲಕ ಎತ್ತರಿಸಿದ ಬಾಗಿಲಿನಂತಿದೆ ಎಂದೂ ಈ ಜ್ಞಾನೋಕ್ತಿ ಅಪ್ರತ್ಯಕ್ಷವಾಗಿ ಸೂಚಿಸಬಲ್ಲದು. ಇಂತಹ ಮಾತು ಕಲಹವನ್ನು ಘೋಷಿಸಿ, ಕ್ರಮೇಣ ಅಹಂಕಾರದ ವ್ಯಕ್ತಿಯನ್ನು ವಿಪತ್ತಿಗೆ ನಡಿಸಬಲ್ಲದು. ಆದುದರಿಂದ ಒಂದು ಅಹಂಕಾರದ ಮನೋಭಾವವನ್ನು ವಿಸರ್ಜಿಸುವುದು ಎಷ್ಟು ವಿವೇಕಪ್ರದ!
[ಪುಟ 31 ರಲ್ಲಿರುವ ಚಿತ್ರ ಕೃಪೆ]
Picturesque Palestine, Sinai and Egypt, Volume 1, by Colonel Wilson (1881)