ನಿಮ್ಮ ಜೀವಿತಕ್ಕೆ ವಿನೋದ ಪ್ರವೃತ್ತಿಯನ್ನು ಬೆರಸಿರಿ
ಅದೊಂದು ಶೀತಲ ಚಳಿಗಾಲದ ದಿನವಾಗಿತ್ತು, ಮತ್ತು ಮೆಟ್ಟಲುಗಳು ಹಿಮದಿಂದ ಆವರಿಸಲ್ಪಟಿದ್ದವು. ಪ್ರಥಮವಾಗಿ ಇಳಿಯಲು ಪ್ರಯತ್ನಿಸಿದವನು ಬಹುಮಟ್ಟಿಗೆ ಬಿದ್ದನು. ಸಾಲಿನಲ್ಲಿದ್ದ ಮತ್ತೊಬ್ಬನು ಘೋಷಿಸಿದ್ದು: “ಈಗ ಮೆಟ್ಟಲುಗಳನ್ನು ಸರಿಯಾಗಿ ಇಳಿಯುವ ವಿಧಾನವು ಇದು!” ಅವನ ಬಾಯಿಂದ ಮಾತುಗಳು ಹೊರಬಂದ ಕೂಡಲೆ ಅವನು ಅಂಗತನ್ತಾಗಿ ಬಿದ್ದನು. ಒಂದು ಕ್ಷಣದ ಗಾಬರಿಗೊಳಿಸುವ ನಿಶಬ್ದತೆ, ಬಳಿಕ ಅವನಿಗೆ ಹಾನಿಯಾಗಿಲ್ಲವೆಂಬುದನ್ನು ನೋಡಿದ ಅನಂತರ ವೀಕ್ಷಕರಿಂದ ನಗುವಿನ ಹೊರಹೊಮ್ಮವಿಕೆ.
“ನಗುವ ಸಮಯ”ವೊಂದಿದೆ. ಬಹುತೇಕ ಮೂರು ಸಾವಿರ ವರ್ಷಗಳ ಹಿಂದೆ ಜ್ಞಾನಿಯಾದ ಸೊಲೊಮೋನನು ಹೀಗೆ ಅಭಿಪ್ರಯಿಸಿದನು. (ಪ್ರಸಂಗಿ 3:4) ಇಂದು ಇದು ಕಡಿಮೆ ಸತ್ಯವಾಗಿರುವುದಿಲ್ಲ. ನಗುವ ಸಾಮರ್ಥ್ಯವು ದೇವದತ್ತ ಗುಣವಾಗಿದೆ—ಬೈಬಲಿನಲ್ಲಿ “ಸಂತೋಷದ ದೇವರು” ಎಂದು ವಿವರಿಸಲ್ಪಟ್ಟಿರುವ ಒಬ್ಬನಿಂದ ಬಂದ ಒಂದು ಕೊಡುಗೆ.—1 ತಿಮೊಥೆಯ 1:11, NW.
ಆದುದರಿಂದ, ಸೃಷ್ಟಿಯು ವಿನೋದಶೀಲ ವಿಷಯಗಳಿಂದ ತುಂಬಿರುವುದರಲ್ಲಿ ಆಶ್ಚರ್ಯವಿಲ್ಲ—ಬೆಕ್ಕಿನ ಮರಿಗಳು ಮತ್ತು ನಾಯಿಮರಿಗಳ ಹಾಸ್ಯಾಸ್ಪದವಾದ ವರ್ತನೆಗಳು, ಸಿಂಹದ ಮರಿಯೊಂದು ಅಪ್ಪಳಿಸಲ್ಪಡುವ ವರೆಗೆ ಅದರ ತಾಯಿಯ ಬಾಲವನ್ನು ಕಡಿಯುವುದು, ಮರಿಕೋತಿಗಳು ಕೊಂಬೆಗಳ ಮೇಲೆ ಒಂದರ ಮೇಲೊಂದು ಉರುಳಾಡುವುದು ಮತ್ತು ಬೆನ್ನಟ್ಟುವುದು. ಗಮನಿಸಲ್ಪಡಲು ಮತ್ತು ಗಣ್ಯಮಾಡಲ್ಪಡಲಿಕ್ಕಾಗಿ ಕಾಯುತ್ತಾ, ನಮ್ಮ ಸುತ್ತಲೆಲ್ಲ ವಿನೋದ ಪ್ರವೃತ್ತಿಯು ಇದೆ.
ಎಲ್ಲಾ ಜನರು ಒಂದೇ ರೀತಿಯ ವಿಷಯಗಳನ್ನು ನೋಡಿ ನಗುತ್ತಾರೆ ಎಂಬುದನ್ನು ಸೂಚಿಸಲಿಕ್ಕಾಗಿ ಹೀಗೆ ಹೇಳುವುದಲ್ಲ. ಅದಕ್ಕೆ ಬದಲಾಗಿ ಹಾಸ್ಯಕರವಾಗಿರುವಂತಹದ್ದು ಅನೇಕ ವೇಳೆ ಒಬ್ಬನ ಸಂಸ್ಕೃತಿ, ವ್ಯಕ್ತಿತ್ವ, ಹಿನ್ನೆಲೆ, ಮತ್ತು ಮನೋಭಾವದ ಮೇಲೆ ಹಾಗೂ ಇತರ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಆದರೂ, ಕಾರ್ಯತಃ ಪ್ರತಿಯೊಬ್ಬರು ಯಾವುದಕ್ಕಾದರೂ—ಒಂದು ವಿನೋದದ ಕತೆ, ಹಿತಕರವಾದ ಒಂದು ಆಶ್ಚರ್ಯ, ಒಂದು ತಮಾಷೆ, ಹದಿರು ನುಡಿಯಾಟಕ್ಕೆ—ನಗುವಿನಿಂದ ಪ್ರತಿಕ್ರಿಯಿಸುತ್ತಾರೆ.
ವಿನೋದ ಪ್ರವೃತ್ತಿಯು ಯಾವ ಉದ್ದೇಶವನ್ನು ನಿರ್ವಹಿಸುತ್ತದೆ? ಕಡಿಮೆ ಪಕ್ಷ, ಇದು ಇತರರಿಗೆ ಉತ್ತಮವಾಗಿ ಸಂಬಂಧಿಸುವ ಒಂದು ಮಾರ್ಗವಾಗಿದೆ. ಒಂದು ವ್ಯಾಖ್ಯೆಯು ನಗುವನ್ನು “ಇಬ್ಬರು ವ್ಯಕ್ತಿಗಳ ನಡುವಿನ ಅತ್ಯಂತ ಕ್ಷಿಪ್ರ ಅಂತರ” ಎಂದು ಕರೆದಿದೆ. ವಾಸ್ತವವಾಗಿ, ವಿವಾಹ ಸಾಂಗತ್ಯದ ಒಂದು ವಾಯುಭಾರಮಾಪಕದೋಪಾದಿ ವಿನೋದ ಪ್ರವೃತ್ತಿಯನ್ನು ಉಪಯೋಗಿಸಸಾಧ್ಯವಿದೆಯೆಂದು ಕೆಲವರು ನಂಬುತ್ತಾರೆ. ಯಾರ ವಿನೋದ ಪ್ರವೃತ್ತಿಗಳ ಆಯ್ಕೆಗಳು ಕಡಿಮೆ ಸದೃಶವಾಗಿರುತ್ತವೊ ಅವರಿಗಿಂತಲೂ, ವಿನೋದಕರವಾಗಿರುವ ವಿಷಯವನ್ನು ಅಂಗೀಕರಿಸುವ ದಂಪತಿಗಳು ಹೆಚ್ಚಾಗಿ ಒಬ್ಬರನ್ನೊಬ್ಬರು ಇಷ್ಟಪಡಲು, ಪ್ರೀತಿಸಲು, ಮತ್ತು ವಿವಾಹವಾಗಲು ಬಯಸುವ ಪ್ರವೃತ್ತಿಯವರಾಗಿರುತ್ತಾರೆ, ಎಂದು ವಿನೋದ ಪ್ರವೃತ್ತಿಯ ಕುರಿತ ಅಧ್ಯಯನವೊಂದು ಕಂಡುಕೊಂಡಿತು. ಯಾಕೆ? ಯಾಕಂದರೆ ವಿನೋದ ಪ್ರವೃತ್ತಿಯು ಅನೇಕ ವಿಷಯಗಳ ನಿರ್ದೇಶಕವಾಗಿದೆ: ಮೌಲ್ಯಗಳು, ಅಭಿರುಚಿಗಳು, ಅವಿಚಾರಾಭಿಪ್ರಾಯಗಳು, ಬುದ್ಧಿಶಕ್ತಿ, ಕಲ್ಪನಾಶಕ್ತಿ, ಮತ್ತು ಆವಶ್ಯಕತೆಗಳು. “ಹಾಸ್ಯ ದೃಷ್ಟಿಯಿರುವ ಜನರು ಹೆಚ್ಚು ಸೃಜನಾತ್ಮಕವಾದ, ಕಡಿಮೆ ಬಿರುಸಾದ ಮತ್ತು ಹೊಸ ಕಲ್ಪನೆಗಳನ್ನು ಮತ್ತು ವಿಧಾನಗಳನ್ನು ಅಂಗೀಕರಿಸಲು ಮತ್ತು ಪರಿಗಣಿಸಲು ಹೆಚ್ಚು ಇಷ್ಟಪಡುವ ಪ್ರವೃತ್ತಿಯುಳ್ಳವರಾಗಿದ್ದಾರೆ,” ಎಂದು ಅಮೆರಿಕದ ಸಾವಿರ ಕಾರ್ಪೊರೇಷನ್ಗಳ 1985ರ ಸಮೀಕ್ಷೆಯೊಂದು ಪ್ರಕಟಪಡಿಸಿತು.
ನಗಬೇಕೊ ನಗಬಾರದೊ
ಒಂದು ವಿಷಯವನ್ನು ನಿಷ್ಕೃಷ್ಟವಾಗಿ ಯಾವುದು ಹಾಸ್ಯಕರವಾಗಿ ಮಾಡುತ್ತದೆಂದು ವಾಸ್ತವವಾಗಿ ಯಾವನೂ ತಿಳಿದಿಲ್ಲ. ವಿನೋದ ಪ್ರವೃತ್ತಿಯ ತಿರುಳಿನಲ್ಲಿ ಅಸಂಬದ್ಧವಿದೆಯೆಂದು ಕೆಲವರು ನಂಬುತ್ತಾರೆ—ಅಸಮಂಜಸವಾಗಿ ತೋರುವ ಮೂಲಾಂಶಗಳನ್ನು ಒಟ್ಟಿಗೆ ತರುವುದು. ಸರ್ಕಸ್ಸಿನ ವಿದೂಷಕನೋಪಾದಿ ಉಡುಪು ತೊಟ್ಟಿರುವ ಪ್ರೌಢ ವಯಸ್ಕನೊಬ್ಬನು, ಒಂದು ಸಣ್ಣ ಮಗುವು ಸ್ವಪ್ರೇರಣೆಯ ನಗುವನ್ನು ಅನುಭವಿಸುವಂತೆ ಮಾಡಬಹುದು. ಆದಾಗ್ಯೂ, ಹೆಚ್ಚು ಮಹತ್ತಾದ ಜೀವಿತದ ಅನುಭವಗಳು ಮತ್ತು ಜ್ಞಾನಗ್ರಹಣದ ಉತ್ಕೃಷ್ಟವಾದ ನೈಪುಣ್ಯಗಳಿಂದಾಗಿ ವಯಸ್ಕನೊಬ್ಬನು ವಿದೂಷಕನ ವರ್ತನೆಗಳನ್ನು ಹಿಂದಿನಂತೆ ಹಾಸ್ಯಕರವಾದದ್ದಾಗಿ ಕಂಡುಕೊಳ್ಳದಿರಬಹುದು. ಒಂದು ಭೌತ ಮಟ್ಟಕ್ಕೆ ಬದಲಾಗಿ ಶಾಬ್ದಿಕ ಮಟ್ಟದ ಮೇಲಿನ ಅಸಂಬದ್ಧವನ್ನು ಕಾರ್ಯರೂಪಕ್ಕೆ ತರುವ, ವಿನೋದ ಪ್ರವೃತ್ತಿಯ ಮಾನಸಿಕ ರೂಪಗಳಲ್ಲಿ—ಶೇಷ್ಲೆಗಳು, ನುಡಿಯಾಟ, ಅಥವಾ ಹಾಸ್ಯಗಳಲ್ಲಿ—ಅವನು ಸಂತೋಷವನ್ನು ಕಂಡುಕೊಳ್ಳಬಹುದು.
ಬಂಧಿಸಿಟ್ಟ ಭಾವನಾತ್ಮಕ ಶಕ್ತಿಯ ಬಿಡುಗಡೆಯಿಂದ ವಿನೋದ ಪ್ರವೃತ್ತಿಯು ಫಲಿಸಬಹುದು ಎಂದು ಕೆಲವು ಸಂಶೋಧಕರು ನಂಬುತ್ತಾರೆ. ಒತ್ತಡ ಮತ್ತು ವೇದನೆಯನ್ನು ಮರೆಮಾಜುವಂತೆ ವಿನೋದ ಪ್ರವೃತ್ತಿಯು ಕಾರ್ಯನಡಿಸಬಹುದು. ಬೈಬಲು ಹೇಳುವುದು: “ನಗುವವನಿಗೂ ಮನೋವ್ಯಥೆಯುಂಟು; ಉಲ್ಲಾಸದ ಅಂತ್ಯವು ವ್ಯಾಕುಲವೇ.”—ಜ್ಞಾನೋಕ್ತಿ 14:13.
ಪ್ರಹಸನವೆಂದು ಕರೆಯಲ್ಪಡುವುದನ್ನು ವಿನೋದ ಪ್ರವೃತ್ತಿಯ ಅನೇಕ ರೂಪಗಳು ಒಳಗೊಂಡಿವೆ. ಒಬ್ಬ ಮನುಷ್ಯನು ಮುಗ್ಗರಿಸುತ್ತಾನೆ ಅಥವಾ ನೀರಿನಿಂದ ತೋಯಿಸಲ್ಪಡುತ್ತಾನೆ. ಹಾಸ್ಯಕರ ಅಲ್ಲವೆ? ಬಹುಶಃ, ಯಾರೊಬ್ಬರೂ ನಿಜವಾಗಿ ಹಾನಿಗೊಳ್ಳದಿರುವುದಾದರೆ.
ಕ್ರೈಸ್ತನೊಬ್ಬನು ಅಸ್ವಸ್ಥಕರವಾದ ಮತ್ತು ಕ್ರೂರ ವಿನೋದ ಪ್ರವೃತ್ತಿಯ ಕುರಿತು ಒಲವನ್ನು ಬೆಳೆಸಿಕೊಳ್ಳದಂತೆ ಶ್ರಮ ತೆಗೆದುಕೊಳ್ಳುತ್ತಾನೆ. ಆದರೂ, ಪ್ರೀತಿಯು “ಅನ್ಯಾಯವನ್ನು ನೋಡಿ ಸಂತೋಷಪಡುವುದಿಲ್ಲ.” (1 ಕೊರಿಂಥ 13:6) ಕ್ರೈಸ್ತನೊಬ್ಬನು ಯಾವುದೇ ರಾಷ್ಟ್ರೀಯತೆ ಅಥವಾ ಕುಲವನ್ನು ಕೀಳೈಸುವ ಹೊಲಸಾದ ಹಾಸ್ಯಗಳನ್ನು ಸಹ ತ್ಯಜಿಸುತ್ತಾನೆ. ಅವನು ತನ್ನ ಹಾಸ್ಯ ದೃಷ್ಟಿಯನ್ನು “ಸಹಾನುಭೂತಿ”ಯಿಂದ ಹದಮಾಡುತ್ತಾನೆ. (1 ಪೇತ್ರ 3:8, NW) ಉದಾಹರಣೆಗೆ, ದಟ್ಟಡಿಯ ಮಗುವು ಕೆಲವೊಂದು ಪ್ರಾಯೋಗಿಕ ಹೆಜ್ಜೆಗಳನ್ನು ಇಡುವುದನ್ನು ಮತ್ತು ಬಳಿಕ ವಕ್ರ ಭಂಗಿಯಲ್ಲಿ ಕೆಳಗೆ ಬೀಳುವುದನ್ನು ವೀಕ್ಷಿಸುವುದು ಸಂತೋಷಕರವಾಗಿ ಮನರಂಜಿಸುವಂತಹದ್ದಾಗಿರಬಹುದು. ಆದರೆ ಒಬ್ಬ ವೃದ್ಧನು ಅಥವಾ ಅಶಕ್ತ ವ್ಯಕ್ತಿಯು ಬೀಳುವುದಾದರೆ, ನಗುವುದಲ್ಲ, ಅವನ ಸಹಾಯಕ್ಕಾಗಿ ಮುನ್ನುಗ್ಗುವುದು ಸೂಕ್ತವಾದ ಪ್ರತಿಕ್ರಿಯೆಯಾಗಿದೆ.
ವಿನೋದ ಪ್ರವೃತ್ತಿ ಮತ್ತು ನಿಮ್ಮ ಆರೋಗ್ಯ
ಯುಕ್ತವಾಗಿ ಉಪಯೋಗಿಸಲ್ಪಟ್ಟ ವಿನೋದ ಪ್ರವೃತ್ತಿಗೆ ಹೆಚ್ಚಿನ ಮಹತ್ವವಿದೆ. ವಾಸ್ತವವಾಗಿ, ನಗುವು ಒಂದು ಚಿಕಿತ್ಸೆಯ ಸಾಧನವಾಗಿ ಸಹ ಕಾರ್ಯನಡಿಸಬಹುದೆಂಬ ಪ್ರಮಾಣವು ನಿಧಾನವಾಗಿ ಒಟ್ಟುಗೂಡುತ್ತಿದೆ. ನಗುವಿನ ಕ್ರಿಯೆಯು ಒಬ್ಬನ ಆಂತರಿಕ ಅವಯವಗಳಿಗೆ ಆರೋಗ್ಯಕರವಾದ ಸಂದೇಶವನ್ನು ಕೊಡುತ್ತದೆಂದು ತಿಳಿಯಲಾಗಿದೆ. ಇನ್ನೂ ಹೆಚ್ಚಾಗಿ, ಅಮೆರಿಕನ್ ಹೆಲ್ತ್ ಪತ್ರಿಕೆಗನುಸಾರ, ಕೆಲವು “ಸಂಶೋಧಕರು ನಗುವು ಸೋಂಕು ರಕ್ಷಾ ವ್ಯವಸ್ಥೆಯನ್ನು ಬಲಗೊಳಿಸಬಹುದೆಂದು ಎಣಿಸುತ್ತಾರೆ.” ಬಳಿಕ ಈ ಪತ್ರಿಕೆಯು ಸೋಂಕು ರಕ್ಷಾ ಶಾಸ್ತ್ರಜ್ಞರಾದ ಲೀ ಎಸ್. ಬರ್ಕ್ ಹೀಗೆ ಹೇಳುವುದನ್ನು ಉದ್ಧರಿಸುತ್ತದೆ: “ನಕಾರಾತ್ಮಕ ಭಾವನೆಗಳು ಸೋಂಕು ರಕ್ಷಾ ವ್ಯವಸ್ಥೆಯನ್ನು ಅಧೀನಪಡಿಸಿಕೊಳ್ಳಬಲ್ಲವು, ಮತ್ತು ಈಗ ಸಕಾರಾತ್ಮಕ ಭಾವನೆಗಳು ತದ್ರೀತಿ ಏನನ್ನಾದರೂ ಮಾಡಬಲ್ಲವು ಎಂಬಂತೆ ಭಾಸವಾಗುತ್ತದೆ.” ಇದು ಬೈಬಲಿನ ಮಾತುಗಳ ಜ್ಞಾನವನ್ನು ಒತ್ತಿಹೇಳುತ್ತದೆ: “ಹರ್ಷಹೃದಯವು ಒಳ್ಳೇ ಔಷಧ.”—ಜ್ಞಾನೋಕ್ತಿ 17:22.
ವಿನೋದ ಪ್ರವೃತ್ತಿಯ ವಾಸಿಮಾಡುವ ಶಕ್ತಿಯನ್ನು ಉಪಯೋಗಿಸುವ ನಿರೀಕ್ಷಣೆಗಳಿಂದ, ರೋಗಿಗಳು ಆಟಗಳನ್ನು ಆಡಲು, ಹಾಸ್ಯಕರ ಚಲನಚಿತ್ರಗಳನ್ನು ವೀಕ್ಷಿಸಲು, ತಮಾಷೆಗಳಿಗೆ ಕಿವಿಗೊಡಲು, ಅಥವಾ ಹೆಚ್ಚು ಪ್ರಸನ್ನ ವಾತಾವರಣವೊಂದರಲ್ಲಿ ಸಂಬಂಧಿಗಳನ್ನು ಭೇಟಿಮಾಡಲು ಸಾಧ್ಯವಿರುವ, ನಗೆ ಕೋಣೆಗಳೆಂದು ಕರೆಯಲ್ಪಟ್ಟಿರುವುದನ್ನು ಕೆಲವು ಆಸ್ಪತ್ರೆಗಳು ಸ್ಥಾಪಿಸಿವೆ. ವಿನೋದ ಪ್ರವೃತ್ತಿಯು ಕೆಲಸ ನಡಿಸುವಂತೆ ನೀವು ಸ್ವತಃ ಬಿಡುತ್ತೀರೊ? ಉದಾಹರಣೆಗೆ ನಿಮ್ಮ ಒಬ್ಬ ಅಸ್ವಸ್ಥ ಸ್ನೇಹಿತ ಅಥವಾ ಸಂಬಂಧಿಯು ಆಸ್ಪತ್ರೆಯಲ್ಲಿ ಇದ್ದಾನೆ. ಸೂಕ್ತವಾಗಿರುವಲ್ಲಿ ಅವನಿಗೆ ಅಥವಾ ಅವಳಿಗೆ ಒಂದು ವಿನೋದಶೀಲ ಪುಸ್ತಕವನ್ನು ಅಥವಾ ಹಾಸ್ಯಕರ ಕಾರ್ಡನ್ನು ಕೊಡುವ ಮೂಲಕ, ಹುಷಾರಿಲ್ಲದವನ ಮನೋಭಾವವನ್ನು ಯಾಕೆ ಗೆಲುವಾಗಿಸಬಾರದು?
ನಗುವು ಕೋಪವನ್ನು ಸಹ ಶಮನಮಾಡಬಲ್ಲದು. ಡಾ. ಆರ್. ಬಿ. ವಿಲ್ಯಮ್ಸ್ ಹೇಳುವುದು: “ಕೋಪಗೊಳ್ಳುವುದು ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದಾಗಿದೆ.” ತದ್ರೀತಿಯಲ್ಲಿ ಬೈಬಲು ಹೇಳುವುದು: “ಶಾಂತಿಗುಣವು ದೇಹಕ್ಕೆ ಜೀವಾಧಾರವು; ಕ್ರೋಧವು ಎಲುಬಿಗೆ ಕ್ಷಯವು.” (ಜ್ಞಾನೋಕ್ತಿ 14:30) ಡಾ. ವಿಲ್ಯಮ್ಸ್ ದಾಖಲಿಸುವುದು: “ನೀವು ನಗುತ್ತಿರುವಾಗ ಕೋಪದಿಂದ ಉಳಿಯುವುದು ಕಷ್ಟವಾಗಿದೆ.” ಹೌದು, ಸನ್ನಿವೇಶವೊಂದರಲ್ಲಿ ವಿನೋದ ಪ್ರವೃತ್ತಿಯನ್ನು ನೋಡುವುದು ಕೋಪವನ್ನು ನಿರ್ವಹಿಸುವುದರ ಕುರಿತಾದ ಅತ್ಯಂತ ಹೆಚ್ಚು ರಚನಾತ್ಮಕ ವಿಧಗಳಲ್ಲಿ ಒಂದಾಗಿದೆ.
ಕುಟುಂಬ ವೃತ್ತದೊಳಗೆ
ವಿನೋದ ಪ್ರವೃತ್ತಿಯನ್ನು ಮನೆಯೊಳಗೆ ಕಾರ್ಯರೂಪಕ್ಕೆ ತರಸಾಧ್ಯವಿದೆ. ಒಬ್ಬ ಗಂಡನು ಹೇಳುವುದು: “ಒಂದು ವಿವಿಧೋದ್ದೇಶ ಸಾಧನವು ಅನೇಕ ಕೆಲಸಗಳನ್ನು ಮಾಡುವುದರಿಂದ, ಅದು ವಾಹನ ಯಂತ್ರಿಗನಿಗೆ ಪ್ರಯೋಜನಕರವಾಗಿರುವಂತೆಯೆ ವಿನೋದ ಪ್ರವೃತ್ತಿಯು ನನಗೆ ಉಪಯೋಗಕರವಾಗಿದೆ. ಅದು ರಕ್ಷಿಸುತ್ತದೆ, ಉತ್ತೇಜಿಸುತ್ತದೆ, ಫಲಭರಿತ ಸಂಭಾಷಣೆಗಳನ್ನು ವಿಕಸಿಸುತ್ತದೆ, ಮುಂದಾಗಿ ಗ್ರಹಿಸಲ್ಪಟ್ಟ ಕಲ್ಪನೆಗಳನ್ನು ವಿಫಲಗೊಳಿಸುತ್ತದೆ, ಮತ್ತು ತೊಂದರೆಯ ಮಾತುಗಳನ್ನು ವಿವೇಕ ಸಮ್ಮತವಾದ ಮತ್ತು ವಿಚಾರಪೂರ್ಣ ಮಾತುಗಳಾಗಿ ಪರಿವರ್ತಿಸುತ್ತದೆ.”
ಸಿಟ್ಟೆಬ್ಬಿಸುವ ಹವ್ಯಾಸಗಳು ಸಂಬಂಧಗಳನ್ನು ತಿರಿಚುವ ಬೆದರಿಕೆ ಹಾಕುವಾಗ ಹಾಸ್ಯದೃಷ್ಟಿಯು ವಿಶೇಷವಾಗಿ ಸಹಾಯಕಾರಿಯಾಗಿದೆ. ಆಟದ ವಸ್ತುಗಳನ್ನು ದೂರವಿಡುವಂತೆ ಪುನಃ ಪುನಃ ಎಚ್ಚರಿಕೆ ಕೊಡಲ್ಪಟ್ಟಾಗ್ಯೂ ನಿಮ್ಮ ಮಗನು ಅವುಗಳನ್ನು ದೂರವಿಡಲು ಮರೆಯುತ್ತಾನೆ. ನಿಮ್ಮ ಗಂಡನು ತನ್ನ ಕೊಳಕಾದ ವಸ್ತ್ರಗಳನ್ನು ಸ್ನಾನಗೃಹದ ನೆಲದ ಮೇಲೆ ಬಿಡುತ್ತಾನೆ. ನಿಮ್ಮ ಹೆಂಡತಿಯು ರಾತ್ರಿಯೂಟವನ್ನು ಸೀಯಿಸುತ್ತಾಳೆ. ತಪ್ಪನ್ನು ಕಂಡುಹಿಡಿಯುವುದು, ಅವಮಾನಗೊಳಿಸುವುದು, ದೂಷಿಸುವುದು, ಅರಚುವುದು, ಅಥವಾ ಚೀತ್ಕರಿಸುವುದು ಕೇವಲ ವಿಷಯವನ್ನು ಹೆಚ್ಚು ಕೆಡಿಸುತ್ತದೆ. ರೆಡ್ಬುಕ್ ಪತ್ರಿಕೆಯಲ್ಲಿ ಉದ್ಧರಿಸಲ್ಪಟ್ಟ ಆರೋಗ್ಯ ಸಂಶೋಧಕಿಯೊಬ್ಬಳು ಗಮನಿಸಿದ್ದು: “ನೀವು ವ್ಯಕ್ತಿಯೊಬ್ಬನನ್ನು ಎದುರಿಸುವುದಾದರೆ ಅಥವಾ ಅವನನ್ನು ಅಪಹಾಸ್ಯ ಮಾಡುವುದಾದರೆ, ಅವನು ರಕ್ಷಣಾತ್ಮಕನಾಗಿ ಪರಿಣಮಿಸುವನು. ಅವರ ನಡೆವಳಿಕೆಯನ್ನು ದೂರದಿಂದಲೇ ನೋಡಿ, ಅದನ್ನು ಬದಲಾಯಿಸುವಂತೆ ವಿನೋದ ಪ್ರವೃತ್ತಿಯು ಜನರನ್ನು ಆಮಂತ್ರಿಸುತ್ತದೆ.”
ಅಚಾತುರ್ಯದ ತಪ್ಪುಳ್ಳ ವ್ಯಕ್ತಿಯನ್ನು ಅಪಹಾಸ್ಯ ಮಾಡಬೇಕೆಂದು ಇದು ಅರ್ಥೈಸುವುದಿಲ್ಲ. ಅದು ಸಾಮಾನ್ಯವಾಗಿ ನಗುವನ್ನಲ್ಲ, ವೇದನೆಯನ್ನು ತರುತ್ತದೆ. ನಿಮ್ಮ ವಿನೋದ ಪ್ರವೃತ್ತಿಯನ್ನು ಸ್ವತಃ ಸನ್ನಿವೇಶದ ಕಡೆಗೆ ಮಾರ್ಗದರ್ಶಿಸಲು ಪ್ರಯತ್ನಿಸಿ. ಒಂದು ಒಳ್ಳೇ ನಗು ಒತ್ತಡವನ್ನು ಸುಲಭಗೊಳಿಸಲು ಹೆಚ್ಚನ್ನು ಮಾಡಬಹುದು. ಹೆಂಡತಿಯೊಬ್ಬಳು ಹೇಳುವುದು: “ನಾನು ಇನ್ನೇನು ಕೋಪಗೊಳ್ಳುವುದರಲ್ಲಿದ್ದೇನೆ ಎಂಬುದನ್ನು ನನ್ನ ಗಂಡನು ಕಾಣುವ ಸಮಯಗಳಿವೆ, ಮತ್ತು ಅವನು ಅದನ್ನು ಕೆಲವು ಹಾಸ್ಯಕರವಾದ ಹೇಳಿಕೆ ಮತ್ತು ಕೃತ್ಯಗಳ ಮೂಲಕ ಮೃದುಗೊಳಿಸುತ್ತಾನೆ. ನನಗೆ ಅದು ತಿಳಿಯುವ ಮೊದಲೇ ನಾನು ನಗುತ್ತಿರುತ್ತೇನೆ. ಬಳಿಕ ಅದು ಅಷ್ಟೊಂದು ಗಂಭೀರವಾದದ್ದಾಗಿರಲಿಲ್ಲವೆಂದು ನಾನು ಗ್ರಹಿಸುತ್ತೇನೆ.”
ಆದರೂ, ಎಚ್ಚರಿಕೆಯ ಕೆಲವು ಮಾತುಗಳು. ಸನ್ನಿವೇಶಗಳು ಗಂಭೀರತೆ ಅಥವಾ ಸಹಾನುಭೂತಿಗೆ ಕರೆಕೊಡುವಾಗ ಹಾಸ್ಯಪ್ರವೃತ್ತಿಯವರಾಗಿರುವುದನ್ನು ತ್ಯಜಿಸಿರಿ. ಜ್ಞಾನೋಕ್ತಿ 25:20 ಹೇಳುವುದನ್ನು ಗಮನಿಸಿ: “ಮನಗುಂದಿದವನಿಗೆ ಸಂಗೀತಹಾಡುವದು ಚಳಿದಿನದಲ್ಲಿ ಬಟ್ಟೆ ತೆಗೆದ ಹಾಗೂ ಸೋಡಉಪ್ಪಿಗೆ ಹುಳಿಹೊಯ್ದ ಹಾಗೂ.” ಭಾವನಾತ್ಮಕವಾಗಿ ಅಥವಾ ಶಾರೀರಿಕವಾಗಿ ಹಾನಿಗೊಳಿಸದಂತೆ, ವಿನೋದ ಪ್ರವೃತ್ತಿಯು ಯುಕ್ತಾಯುಕ್ತ ಪರಿಜ್ಞಾನದಿಂದ ಉಪಯೋಗಿಸಲ್ಪಡಬೇಕು. ವಿನೋದ ಪ್ರವೃತ್ತಿಯು ಅಶ್ಲೀಲವಾದದ್ದಾಗಿಯೂ ಯಾ ಅಗೌರವದ್ದಾಗಿಯೂ ಇರುವಂತೆ ಅನುಮತಿಸದಿರ್ರಿ. ಇದು ದೊಡ್ಡ ಮಕ್ಕಳು ತಮ್ಮ ಎಳೆಯ ರಕ್ತ ಸಂಬಂಧಿಗಳನ್ನು ಸಂತತವಾಗಿ ಅಪಹಾಸ್ಯಕ್ಕೆ ಗುರಿ ಮಾಡುವುದನ್ನು ಅಸಂಬದ್ಧವಾಗಿ ಮಾಡುವುದು. ಮಿತವಾದ ರೇಗಿಸುವಿಕೆಯು ಒಂದು ವಿಚಾರವಾಗಿದೆ, ತೀಕ್ಷೈವಾದ ಹೇಳಿಕೆಗಳು ತೀರ ಬೇರೆಯಾಗಿವೆ. ವಿವಾಹ ಸಂಗಾತಿಗಳು ಸಹ ವಿನೋದ ಪ್ರವೃತ್ತಿಯನ್ನು—ಟೀಕೆಯ ಒಂದು ಆಯುಧದೋಪಾದಿ ಅಥವಾ ಕಡೆಗಣಿಸುವಿಕೆಯ ಮಾರ್ಗವಾಗಿ ಉಪಯೋಗಿಸದಂತೆ—ಪರಿಮಿತಿಯೊಳಗಿಡಲು ಪ್ರಯತ್ನಿಸಬೇಕು.
ಒಮ್ಮೆ ಕವಿ ಲ್ಯಾಂಗ್ಸ್ಟನ್ ಹ್ಯೂಸ್ ಬರೆದದ್ದು: “ಸ್ವಾಗತಿಸಿದ ಬೇಸಗೆಯ ಮಳೆಯಂತೆ, ವಿನೋದ ಪ್ರವೃತ್ತಿಯು ಕೂಡಲೆ ಭೂಮಿಯನ್ನು, ಗಾಳಿಯನ್ನು ಮತ್ತು ನಿಮ್ಮನ್ನು ತಂಪುಗೊಳಿಸಬಹುದು ಹಾಗೂ ಸ್ವಚ್ಛಗೊಳಿಸಬಹುದು.” ನಿಜವಾಗಿಯೂ, ವಿನೋದ ಪ್ರವೃತ್ತಿಯು ನಮ್ಮ ಜೀವಿತಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬಲ್ಲದು. ನಮ್ಮನ್ನು ನಾವು ಗಂಭೀರವಾಗಿ ಪರಿಗಣಿಸಿಕೊಳ್ಳುವುದರಿಂದ ಇದು ನಮ್ಮನ್ನು ಕಾಪಾಡಬಲ್ಲದು. ನಾವು ಸುಮನಸ್ಕರಾಗಿ ಮತ್ತು ಕಡಿಮೆ ಕಾಠಿಣ್ಯವುಳ್ಳವರಾಗಿ ಉಳಿಯುವಂತೆ ಅದು ನಮಗೆ ಸಹಾಯ ಮಾಡಬಲ್ಲದು. ಇದು ಇತರರೊಂದಿಗಿನ ನಮ್ಮ ಸಂಬಂಧಗಳನ್ನು ಮೃದುಗೊಳಿಸಬಲ್ಲದು. ವಿಪತ್ತಿನೊಂದಿಗೆ ನಿಭಾಯಿಸುವಂತೆ ಇದು ನಮಗೆ ಸಹಾಯ ಮಾಡಬಲ್ಲದು. ಇದು ನಮ್ಮ ಆರೋಗ್ಯವನ್ನೂ ಉತ್ತಮಗೊಳಿಸಬಲ್ಲದು.
ಆದುದರಿಂದ ನಿಮ್ಮ ಜೀವಿತಕ್ಕೆ ವಿನೋದ ಪ್ರವೃತ್ತಿಯನ್ನು ಬೆರಸಿರಿ. ಅದನ್ನು ಆವಿಷ್ಕರಿಸಿರಿ. ಅದನ್ನು ಪೋಷಿಸಿರಿ. ಅದನ್ನು ಬೆಳೆಸಿರಿ. ವಿನೋದ ಪ್ರವೃತ್ತಿಯು ನಿಮ್ಮ ಮೇಲೆ ಮತ್ತು ನಿಮ್ಮ ಸುತ್ತಲೂ ಇರುವವರ ಮೇಲೆ ಅತ್ಯಂತ ಒಳ್ಳೇ ಪರಿಣಾಮವನ್ನು ಉಂಟುಮಾಡುವುದು! (g94 5/22)
[ಪುಟ 21 ರಲ್ಲಿರುವ ಚಿತ್ರ]
ಹಾಸ್ಯವು ಗೃಹಕೃತ್ಯದ ದುರ್ಘಟನೆಗಳನ್ನು ಶಾಂತಮಾಡಬಲ್ಲದು