ಅಧ್ಯಾಯ 9
“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”
“ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.”—ಕೊಲೊಸ್ಸೆ 3:5.
1, 2. ಯೆಹೋವನ ಜನರಿಗೆ ಹಾನಿಯನ್ನು ಮಾಡಲಿಕ್ಕಾಗಿ ಬಿಳಾಮನು ಹೇಗೆ ಒಳಸಂಚುಮಾಡಿದನು?
ಮೀನುಗಾರನು ಮೀನು ಹಿಡಿಯಲಿಕ್ಕಾಗಿ ತನ್ನ ಅಚ್ಚುಮೆಚ್ಚಿನ ಸ್ಥಳಕ್ಕೆ ಹೋಗುತ್ತಾನೆ. ಅವನು ಒಂದು ನಿರ್ದಿಷ್ಟ ರೀತಿಯ ಮೀನನ್ನು ಹಿಡಿಯಲು ಬಯಸುತ್ತಾನೆ. ಅವನು ಒಂದು ಸೆಳೆವಸ್ತುವನ್ನು ಆರಿಸಿಕೊಂಡು ಅದನ್ನು ಗಾಳಕ್ಕೆ ಸಿಕ್ಕಿಸಿ ದಾರವನ್ನು ನೀರಿಗೆ ಎಸೆಯುತ್ತಾನೆ. ಕೆಲವೇ ಕ್ಷಣಗಳಲ್ಲಿ ದಾರವು ಬಿಗಿಯಾಗುತ್ತದೆ, ಕೋಲು ಬಾಗುತ್ತದೆ ಮತ್ತು ಅವನು ದಾರವನ್ನು ಹಿಂದಕ್ಕೆಳೆಯುವ ಮೂಲಕ ತಾನು ಹಿಡಿದ ಮೀನನ್ನು ಮೇಲಕ್ಕೆತ್ತುತ್ತಾನೆ. ತಾನು ಸರಿಯಾದ ಸೆಳೆವಸ್ತುವನ್ನು ಆರಿಸಿಕೊಂಡದ್ದಕ್ಕಾಗಿ ಅವನು ನಸುನಗೆ ಬೀರುತ್ತಾನೆ.
2 ಸಾ.ಶ.ಪೂ. 1473ರಲ್ಲಿ ಬಿಳಾಮನೆಂಬ ಒಬ್ಬ ವ್ಯಕ್ತಿಯು ಒಂದು ಗಾಳವನ್ನು ಆರಿಸಿಕೊಳ್ಳುವ ವಿಷಯದಲ್ಲಿ ಆಲೋಚಿಸಿದನು. ಆದರೆ ಅವನ ಉದ್ದೇಶಿತ ಬಲಿಪಶುಗಳು ವಾಗ್ದತ್ತ ದೇಶದ ಗಡಿಯ ಬಳಿ ಮೋವಾಬ್ಯರ ಬೈಲಿನಲ್ಲಿ ಪಾಳೆಯ ಹೂಡಿದ್ದ ದೇವಜನರಾಗಿದ್ದರು. ಬಿಳಾಮನು ತಾನು ಯೆಹೋವನ ಪ್ರವಾದಿ ಎಂದು ಹೇಳಿಕೊಳ್ಳುತ್ತಿದ್ದನಾದರೂ ವಾಸ್ತವದಲ್ಲಿ ಅವನು ಇಸ್ರಾಯೇಲ್ಯರನ್ನು ಶಪಿಸಲು ಹಣಕ್ಕೆ ಗೊತ್ತುಮಾಡಲ್ಪಟ್ಟಿದ್ದ ದುರಾಶೆಭರಿತ ಮನುಷ್ಯನಾಗಿದ್ದನು. ಆದರೆ ಯೆಹೋವನ ಹಸ್ತಕ್ಷೇಪದಿಂದ ಬಿಳಾಮನಿಗೆ ಇಸ್ರಾಯೇಲ್ಯರನ್ನು ಆಶೀರ್ವದಿಸಲು ಮಾತ್ರ ಸಾಧ್ಯವಾಯಿತು. ಹೇಗಾದರೂ ಮಾಡಿ ತನ್ನ ಬಹುಮಾನವನ್ನು ಪಡೆಯಲಿಕ್ಕಾಗಿ, ಒಂದುವೇಳೆ ಇಸ್ರಾಯೇಲ್ಯರು ಘೋರ ಪಾಪವನ್ನು ಮಾಡುವಂತೆ ಪ್ರಲೋಭಿಸಲ್ಪಡುವಲ್ಲಿ ಪ್ರಾಯಶಃ ದೇವರೇ ತನ್ನ ಜನರನ್ನು ಶಪಿಸುವಂತೆ ತಾನು ಮಾಡಸಾಧ್ಯವಿದೆ ಎಂದು ಬಿಳಾಮನು ಮನಸ್ಸಿನಲ್ಲೇ ತರ್ಕಿಸಿದನು. ಈ ಗುರಿಯನ್ನು ಮನಸ್ಸಿನಲ್ಲಿಟ್ಟವನಾಗಿ ಬಿಳಾಮನು ಗಾಳ ಹಾಕಿದನು. ಮೋವಾಬಿನ ವ್ಯಾಮೋಹಕ ಯುವತಿಯರೇ ಆ ಗಾಳದ ಸೆಳೆವಸ್ತುಗಳಾಗಿದ್ದರು.—ಅರಣ್ಯಕಾಂಡ 22:1-7; 31:15, 16; ಪ್ರಕಟನೆ 2:14.
3. ಬಿಳಾಮನ ಒಳಸಂಚು ಎಷ್ಟರ ಮಟ್ಟಿಗೆ ಸಫಲವಾಯಿತು?
3 ಈ ತಂತ್ರ ಸಫಲವಾಯಿತೊ? ಸ್ವಲ್ಪಮಟ್ಟಿಗೆ ಸಫಲವಾಯಿತು. ಸಾವಿರಾರು ಮಂದಿ ಇಸ್ರಾಯೇಲ್ಯ ಪುರುಷರು ‘ಮೋವಾಬಿನ ಪುತ್ರಿಯರ ಸಂಗಡ ಜಾರತ್ವ ಮಾಡುವ’ (NIBV) ಮೂಲಕ ಆ ಗಾಳಕ್ಕೆ ಸಿಕ್ಕಿಹಾಕಿಕೊಂಡರು. ಅವರು ಫಲವತ್ತತೆಯ ಅಥವಾ ಲೈಂಗಿಕತೆಯ ದೇವತೆಯಾಗಿರುವ ಪೆಗೋರದ ಅಸಹ್ಯಕರ ಬಾಳನನ್ನೂ ಸೇರಿಸಿ ಮೋವಾಬಿನ ದೇವತೆಗಳನ್ನು ಆರಾಧಿಸಲಾರಂಭಿಸಿದರು. ಇದರ ಫಲಿತಾಂಶವಾಗಿ ವಾಗ್ದತ್ತ ದೇಶದ ಗಡಿಯಲ್ಲೇ 24,000 ಮಂದಿ ಇಸ್ರಾಯೇಲ್ಯರು ಹತರಾದರು. ಇದು ಎಂಥ ಘೋರ ದುರಂತವಾಗಿತ್ತು!—ಅರಣ್ಯಕಾಂಡ 25:1-9.
4. ಸಾವಿರಾರು ಮಂದಿ ಇಸ್ರಾಯೇಲ್ಯರು ಏಕೆ ಅನೈತಿಕತೆಗೆ ಬಲಿಬಿದ್ದರು?
4 ಈ ಅನಾಹುತಕ್ಕೆ ಯಾವುದು ದಾರಿಮಾಡಿಕೊಟ್ಟಿತು? ತಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ್ದ, ಅರಣ್ಯದಲ್ಲಿ ತಮಗೆ ಉಣಿಸಿದ್ದ ಮತ್ತು ವಾಗ್ದತ್ತ ದೇಶಕ್ಕೆ ತಮ್ಮನ್ನು ಸುರಕ್ಷಿತವಾಗಿ ನಡಿಸಿದ್ದ ದೇವರಾದ ಯೆಹೋವನಿಂದಲೇ ದೂರಹೋಗುವ ಮೂಲಕ ಜನರಲ್ಲಿ ಅನೇಕರು ಕೆಟ್ಟ ಹೃದಯವನ್ನು ಬೆಳೆಸಿಕೊಂಡಿದ್ದರು. (ಇಬ್ರಿಯ 3:12) ಈ ವಿಷಯದ ಕುರಿತು ಆಲೋಚಿಸುತ್ತಾ ಅಪೊಸ್ತಲ ಪೌಲನು, “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವದ ರೂಢಿಯನ್ನು ಮಾಡದಿರೋಣ” ಎಂದು ಬರೆದನು.a—1 ಕೊರಿಂಥ 10:8.
5, 6. ಮೋವಾಬ್ಯರ ಬೈಲಿನಲ್ಲಿ ಇಸ್ರಾಯೇಲ್ಯರು ಮಾಡಿದ ಪಾಪದ ಕುರಿತಾದ ವೃತ್ತಾಂತವು ಇಂದು ನಮಗೆ ಅಮೂಲ್ಯವಾಗಿದೆ ಏಕೆ?
5 ಅರಣ್ಯಕಾಂಡದಲ್ಲಿರುವ ವೃತ್ತಾಂತವು ಇಂದು ಹೆಚ್ಚು ಮಹತ್ತರವಾದ ವಾಗ್ದತ್ತ ದೇಶದ ಹೊಸ್ತಿಲಲ್ಲಿ ನಿಂತಿರುವ ದೇವಜನರಿಗೆ ಅನೇಕ ಪ್ರಮುಖ ಪಾಠಗಳನ್ನು ಹೊಂದಿದೆ. (1 ಕೊರಿಂಥ 10:11) ಉದಾಹರಣೆಗೆ, ಲೈಂಗಿಕತೆಯ ವಿಷಯದಲ್ಲಿ ಈ ಲೋಕಕ್ಕಿರುವ ಗೀಳು ಪುರಾತನ ಮೋವಾಬ್ಯರ ಗೀಳಿಗೆ ಸರಿಹೋಲುತ್ತದೆ, ಆದರೆ ಇಂದು ಹೆಚ್ಚು ವ್ಯಾಪಕವಾದ ಮಟ್ಟದಲ್ಲಿ ಅದು ಕಂಡುಬರುತ್ತದೆ. ಮಾತ್ರವಲ್ಲದೆ ಇಸ್ರಾಯೇಲ್ಯರನ್ನು ಸಿಕ್ಕಿಸಿಹಾಕಿದ ಅದೇ ಗಾಳಕ್ಕೆ ಅಂದರೆ ಅನೈತಿಕತೆಗೆ ಪ್ರತಿ ವರ್ಷ ಸಾವಿರಾರು ಮಂದಿ ಕ್ರೈಸ್ತರು ಬಲಿಬೀಳುತ್ತಾರೆ. (2 ಕೊರಿಂಥ 2:11) ಮತ್ತು ಇಸ್ರಾಯೇಲ್ಯರ ಪಾಳೆಯದೊಳಗಿದ್ದ ತನ್ನ ಸ್ವಂತ ಡೇರೆಗೆ ಒಬ್ಬ ಮಿದ್ಯಾನ್ಯ ಸ್ತ್ರೀಯನ್ನು ಎಲ್ಲರ ಮುಂದೆ ಧೈರ್ಯದಿಂದ ಕರೆದುತಂದ ಜಿಮ್ರೀಯನ್ನು ಅನುಕರಿಸುತ್ತಾ ದೇವಜನರೊಂದಿಗೆ ಸಹವಾಸಮಾಡುವಂಥ ಕೆಲವರು ಇಂದು ಕ್ರೈಸ್ತ ಸಭೆಯೊಳಗೇ ಭ್ರಷ್ಟಕಾರಕ ಪ್ರಭಾವವಾಗಿ ಪರಿಣಮಿಸಿದ್ದಾರೆ.—ಅರಣ್ಯಕಾಂಡ 25:6, 14; ಯೂದ 4.
6 ಮೋವಾಬ್ಯರ ಬೈಲಿನಲ್ಲಿ ನಡೆದ ಘಟನೆಯಿಂದ ಚಿತ್ರಿಸಲ್ಪಟ್ಟಿರುವಂಥ ಒಂದು ಸನ್ನಿವೇಶದಲ್ಲಿ ನೀವಿದ್ದೀರಿ ಎಂಬುದನ್ನು ಗ್ರಹಿಸುತ್ತೀರೊ? ನಿಮ್ಮ ಬಹುಮಾನವು ಅಂದರೆ ದೀರ್ಘ ಕಾಲದಿಂದ ಕಾಯುತ್ತಿದ್ದ ಹೊಸ ಲೋಕವು ಹತ್ತಿರದಲ್ಲಿರುವುದು ನಿಮಗೆ ಕಾಣುತ್ತದೊ? ಹಾಗಿರುವಲ್ಲಿ “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂಬ ಆಜ್ಞೆಗೆ ಕಿವಿಗೊಡುವ ಮೂಲಕ ದೇವರ ಪ್ರೀತಿಯಲ್ಲಿ ಉಳಿಯಲು ನಿಮ್ಮಿಂದಾದುದೆಲ್ಲವನ್ನೂ ಮಾಡಿರಿ.—1 ಕೊರಿಂಥ 6:18.
ಜಾರತ್ವ ಎಂದರೇನು?
7, 8. “ಜಾರತ್ವ” ಎಂದರೇನು ಮತ್ತು ಅದನ್ನು ಮಾಡುತ್ತಿರುವವರು ಏನನ್ನು ಬಿತ್ತುತ್ತಾರೋ ಅದನ್ನೇ ಹೇಗೆ ಕೊಯ್ಯುತ್ತಾರೆ?
7 ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ “ಜಾರತ್ವ” (ಗ್ರೀಕ್, ಪೋರ್ನಿಯ) ಎಂಬ ಪದವು ಶಾಸ್ತ್ರಾಧಾರಿತ ವಿವಾಹ ಸಂಬಂಧದ ಹೊರಗಿನ ನಿಷಿದ್ಧ ಲೈಂಗಿಕ ಸಂಬಂಧಗಳಿಗೆ ಅನ್ವಯವಾಗುತ್ತದೆ. ಇದರಲ್ಲಿ ವ್ಯಭಿಚಾರ, ವೇಶ್ಯಾವಾಟಿಕೆ ಮತ್ತು ಅವಿವಾಹಿತ ವ್ಯಕ್ತಿಗಳ ನಡುವಣ ಲೈಂಗಿಕ ಸಂಬಂಧಗಳು ಹಾಗೂ ಮೌಖಿಕ ಲೈಂಗಿಕತೆ ಮತ್ತು ಗುದದ್ವಾರದ ಮೂಲಕ ನಡೆಸುವ ಲೈಂಗಿಕ ಕ್ರಿಯೆ ಹಾಗೂ ವಿವಾಹಸಂಗಾತಿಯಲ್ಲದ ಒಬ್ಬ ವ್ಯಕ್ತಿಯ ಜನನೇಂದ್ರಿಯವನ್ನು ಲೈಂಗಿಕವಾಗಿ ಉದ್ರೇಕಿಸುವುದು ಒಳಗೂಡಿದೆ. ಇದಲ್ಲದೆ ಒಂದೇ ಲಿಂಗದ ವ್ಯಕ್ತಿಗಳ ಮಧ್ಯೆ ನಡೆಯುವ ಇಂಥ ಕ್ರಿಯೆಗಳು ಹಾಗೂ ಪಶುಗಮನವು ಸಹ ಇದರಲ್ಲಿ ಒಳಗೂಡಿದೆ.b
8 ಶಾಸ್ತ್ರಗ್ರಂಥವು ಈ ವಿಷಯವನ್ನು ತುಂಬ ಸ್ಪಷ್ಟವಾಗಿ ತಿಳಿಸುತ್ತದೆ: ಜಾರತ್ವವನ್ನು ಮಾಡುತ್ತಿರುವವರು ಕ್ರೈಸ್ತ ಸಭೆಯಲ್ಲಿ ಉಳಿಯಲು ಸಾಧ್ಯವಿಲ್ಲ ಮತ್ತು ಅವರಿಗೆ ನಿತ್ಯಜೀವವು ಸಿಗುವುದಿಲ್ಲ. (1 ಕೊರಿಂಥ 6:9; ಪ್ರಕಟನೆ 22:15) ಮಾತ್ರವಲ್ಲದೆ ಈಗಲೂ ಭರವಸೆ ಮತ್ತು ಸ್ವಗೌರವದ ನಷ್ಟ, ವೈವಾಹಿಕ ಘರ್ಷಣೆ, ದೋಷಿ ಮನಸ್ಸಾಕ್ಷಿ, ಅನಪೇಕ್ಷಿತ ಗರ್ಭಧಾರಣೆಗಳು, ರೋಗ ಮತ್ತು ಮರಣದ ರೂಪದಲ್ಲಿ ಅವರು ತಮ್ಮ ಮೇಲೆ ಹೆಚ್ಚಿನ ಹಾನಿಯನ್ನು ತಂದುಕೊಳ್ಳುತ್ತಾರೆ. (ಗಲಾತ್ಯ 6:7, 8 ಓದಿ.) ಇಷ್ಟೊಂದು ದುರವಸ್ಥೆಯಿಂದ ತುಂಬಿರುವಂಥ ಪಥವನ್ನು ಯಾಕೆ ಹಿಡಿಯಬೇಕು? ದುಃಖಕರವಾಗಿ, ಅನೇಕರು ಮೊದಲ ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವಾಗ ಅದರ ಘೋರ ಪರಿಣಾಮಗಳ ಬಗ್ಗೆ ಆಲೋಚಿಸುವುದಿಲ್ಲ. ಈ ತಪ್ಪು ಹೆಜ್ಜೆಯಲ್ಲಿ ಅನೇಕವೇಳೆ ಅಶ್ಲೀಲ ಸಾಹಿತ್ಯವು ಒಳಗೂಡಿರುತ್ತದೆ.
ಅಶ್ಲೀಲ ಸಾಹಿತ್ಯ—ಜಾರತ್ವಕ್ಕೆ ನಡಿಸುವ ಮೊದಲ ಹೆಜ್ಜೆ
9. ಕೆಲವರು ಹೇಳುವಂತೆ ಅಶ್ಲೀಲ ಸಾಹಿತ್ಯದಿಂದ ಏನೂ ಹಾನಿಯಾಗುವುದಿಲ್ಲವೊ? ವಿವರಿಸಿ.
9 ಅನೇಕ ದೇಶಗಳಲ್ಲಿ ಅಶ್ಲೀಲ ಸಾಹಿತ್ಯವನ್ನು ಪತ್ರಿಕೆಗಳ ಮಾರಾಟದ ಅಂಗಡಿಗಳಲ್ಲಿ, ಸಂಗೀತದಲ್ಲಿ ಮತ್ತು ಟೆಲಿವಿಷನ್ನಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಅದು ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ಲಭ್ಯವಿದೆ.c ಕೆಲವರು ಹೇಳುವಂತೆ ಇದರಿಂದ ಏನೂ ಹಾನಿಯಾಗುವುದಿಲ್ಲವೊ? ನಿಶ್ಚಯವಾಗಿಯೂ ಹಾಗೆ ಹೇಳಸಾಧ್ಯವಿಲ್ಲ. ಅಶ್ಲೀಲ ಸಾಹಿತ್ಯವನ್ನು ವೀಕ್ಷಿಸುವವರು ಹಸ್ತಮೈಥುನಮಾಡುವ ಅಭ್ಯಾಸಕ್ಕೆ ಬೀಳಬಹುದು ಮತ್ತು ‘ತುಚ್ಛವಾದ ಕಾಮಾಭಿಲಾಷೆಯನ್ನು’ ಬೆಳೆಸಿಕೊಳ್ಳಬಹುದು. ಇದು ಒಬ್ಬನನ್ನು ಲೈಂಗಿಕತೆಯ ಚಟ, ವಿಕೃತ ಬಯಕೆಗಳು, ಗಂಭೀರವಾದ ವೈವಾಹಿಕ ಅಸಾಮರಸ್ಯ ಮತ್ತು ವಿವಾಹ ವಿಚ್ಛೇದನಕ್ಕೂ ನಡಿಸಬಹುದು.d (ರೋಮನ್ನರಿಗೆ 1:24-27; ಎಫೆಸ 4:19) ಒಬ್ಬ ಸಂಶೋಧಕನು ಲೈಂಗಿಕತೆಯ ಚಟವನ್ನು ಕ್ಯಾನ್ಸರ್ಗೆ ಹೋಲಿಸುತ್ತಾನೆ. “ಇದು ಬೆಳೆಯುತ್ತಾ ಹಬ್ಬುತ್ತಾ ಇರುತ್ತದೆ. ಇದು ಕಡಿಮೆಯಾಗುವುದಂತೂ ತುಂಬ ವಿರಳ ಮತ್ತು ಇದಕ್ಕೆ ಚಿಕಿತ್ಸೆಯನ್ನು ನೀಡಿ ಗುಣಪಡಿಸುವುದಂತೂ ತುಂಬ ಕಷ್ಟ” ಎಂದು ಅವನು ಹೇಳುತ್ತಾನೆ.
10. ಯಾಕೋಬ 1:14, 15ರಲ್ಲಿ ಕಂಡುಬರುವ ಮೂಲತತ್ತ್ವವನ್ನು ನಾವು ಯಾವ ವಿಧಗಳಲ್ಲಿ ಅನ್ವಯಿಸಬಲ್ಲೆವು? (“ನೈತಿಕವಾಗಿ ಶುದ್ಧರಾಗಿರಲು ಬಲವನ್ನು ಕಂಡುಕೊಳ್ಳುವುದು” ಚೌಕವನ್ನೂ ನೋಡಿ.)
10 ಯಾಕೋಬ 1:14, 15ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳನ್ನು ಗಮನಿಸಿರಿ. ಅದು ಹೀಗೆ ಹೇಳುತ್ತದೆ: “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ; ಅಂತೆಯೇ ಪಾಪವು ಮಾಡಿ ಮುಗಿಸಲ್ಪಟ್ಟಾಗ ಮರಣವನ್ನು ಉಂಟುಮಾಡುತ್ತದೆ.” ಆದುದರಿಂದ ಒಂದು ಕೆಟ್ಟ ಬಯಕೆಯು ನಿಮ್ಮ ಮನಸ್ಸಿಗೆ ಬರುವುದಾದರೆ ಅದನ್ನು ತೆಗೆದುಹಾಕಲು ತಕ್ಷಣವೇ ಕ್ರಿಯೆಗೈಯಿರಿ! ಉದಾಹರಣೆಗೆ ನೀವು ತಿಳಿಯದೆ ಕಾಮಪ್ರಚೋದಕ ಚಿತ್ರಗಳನ್ನು ನೋಡುವಲ್ಲಿ ತಕ್ಷಣವೇ ನಿಮ್ಮ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಿರಿ ಅಥವಾ ಕಂಪ್ಯೂಟರನ್ನು ಆಫ್ ಮಾಡಿರಿ ಇಲ್ಲವೆ ಟಿವಿ ಚ್ಯಾನಲನ್ನು ಬದಲಾಯಿಸಿರಿ. ಅನೈತಿಕವಾದ ಬಯಕೆಯು ಎಲ್ಲೆ ಮೀರಿ ಹೋಗಿ ನಿಮ್ಮನ್ನು ಹತೋಟಿಗೆ ತೆಗೆದುಕೊಳ್ಳುವ ಮೊದಲು ಅದಕ್ಕೆ ಬಲಿಬೀಳುವುದರಿಂದ ದೂರವಿರಲು ಅಗತ್ಯವಿರುವುದನ್ನೆಲ್ಲಾ ಮಾಡಿರಿ!—ಮತ್ತಾಯ 5:29, 30 ಓದಿ.
11. ಕೆಟ್ಟ ಬಯಕೆಗಳ ವಿರುದ್ಧ ಹೋರಾಡುವಾಗ ಯೆಹೋವನಲ್ಲಿನ ನಮ್ಮ ಭರವಸೆಯನ್ನು ನಾವು ಹೇಗೆ ತೋರಿಸಬಲ್ಲೆವು?
11 ಸಕಾರಣದಿಂದಲೇ, ಸ್ವತಃ ನಮ್ಮ ಬಗ್ಗೆ ನಮಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ನಮ್ಮ ಕುರಿತು ತಿಳಿದಿರುವಾತನು ಹೀಗೆ ಪ್ರಬೋಧಿಸುತ್ತಾನೆ: “ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.” (ಕೊಲೊಸ್ಸೆ 3:5) ಹೀಗೆ ಮಾಡುವುದು ಒಂದು ಪಂಥಾಹ್ವಾನವಾಗಿರಬಹುದು ಎಂಬುದು ನಿಜ. ಆದರೆ ಸಹಾಯಕ್ಕಾಗಿ ಬೇಡಿಕೊಳ್ಳಲು ನಮಗೆ ಪ್ರೀತಿಭರಿತನಾದ ಹಾಗೂ ತಾಳ್ಮೆಯುಳ್ಳ ಒಬ್ಬ ಸ್ವರ್ಗೀಯ ತಂದೆ ಇದ್ದಾನೆ ಎಂಬುದನ್ನು ನೆನಪಿನಲ್ಲಿಡಿ. (ಕೀರ್ತನೆ 68:19) ಆದುದರಿಂದ ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುವಾಗ ಕೂಡಲೆ ಆತನ ಸಹಾಯವನ್ನು ಯಾಚಿಸಿರಿ. ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಗಾಗಿ’ ಪ್ರಾರ್ಥಿಸಿರಿ ಮತ್ತು ಒತ್ತಾಯಪೂರ್ವಕವಾಗಿ ನಿಮ್ಮ ಮನಸ್ಸನ್ನು ಬೇರೆ ವಿಷಯಗಳ ಕಡೆಗೆ ತಿರುಗಿಸಿರಿ.—2 ಕೊರಿಂಥ 4:7; 1 ಕೊರಿಂಥ 9:27; “ನಾನು ಒಂದು ದುರಭ್ಯಾಸವನ್ನು ಹೇಗೆ ಬಿಡಬಲ್ಲೆ?” ಎಂಬ ಚೌಕವನ್ನು ನೋಡಿ.
12. ನಮ್ಮ “ಹೃದಯ” ಏನಾಗಿದೆ ಮತ್ತು ನಾವು ಅದನ್ನು ಏಕೆ ಕಾಪಾಡಿಕೊಳ್ಳಬೇಕು?
12 ವಿವೇಕಿಯಾದ ಸೊಲೊಮೋನನು ಬರೆದದ್ದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ನಮ್ಮ “ಹೃದಯ” ಎಂಬುದು ನಮ್ಮ ಆಂತರಿಕ ವ್ಯಕ್ತಿತ್ವವಾಗಿದೆ; ದೇವರ ದೃಷ್ಟಿಯಲ್ಲಿ ನಾವು ನಿಜವಾಗಿಯೂ ಎಂಥವರಾಗಿದ್ದೇವೋ ಅದಕ್ಕೆ ಸೂಚಿತವಾಗಿದೆ. ಮಾತ್ರವಲ್ಲದೆ ಬೇರೆಯವರ ದೃಷ್ಟಿಯಲ್ಲಿ ನಾವು ಎಂಥವರಾಗಿ ಕಂಡುಬರುತ್ತೇವೆ ಎಂಬುದಲ್ಲ, ಬದಲಾಗಿ ದೇವರು ನಮ್ಮ “ಹೃದಯವನ್ನು” ವೀಕ್ಷಿಸುವ ವಿಧವು ನಾವು ನಿತ್ಯಜೀವವನ್ನು ಪಡೆದುಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ಇದು ತುಂಬ ಸರಳವಾದ ವಿಷಯವಾಗಿದೆ ಮತ್ತು ಅದೇ ಸಮಯದಲ್ಲಿ ತುಂಬ ಗಂಭೀರವಾದ ವಿಷಯವೂ ಆಗಿದೆ. ನಂಬಿಗಸ್ತನಾಗಿದ್ದ ಯೋಬನು ಒಬ್ಬ ಸ್ತ್ರೀಯನ್ನು ಕೆಟ್ಟ ರೀತಿಯಲ್ಲಿ ನೋಡದಂತೆ ತನ್ನ ಕಣ್ಣುಗಳೊಂದಿಗೆ ನಿಬಂಧನೆಯನ್ನು ಅಥವಾ ಕಟ್ಟುನಿಟ್ಟಾದ ಒಪ್ಪಂದವನ್ನು ಮಾಡಿಕೊಂಡಿದ್ದನು. (ಯೋಬ 31:1) ಅವನು ನಮಗೆ ಎಂಥ ಅತ್ಯುತ್ತಮ ಮಾದರಿಯಾಗಿದ್ದಾನೆ! ಇದೇ ಮನೋಭಾವವನ್ನು ತೋರಿಸುತ್ತಾ ಕೀರ್ತನೆಗಾರನು, “ಬೆಲೆಯಿಲ್ಲದ [ವಿಷಯಗಳಿಂದ] ನನ್ನ ಕಣ್ಣುಗಳನ್ನು ತಿರುಗಿಸು” ಎಂದು ಪ್ರಾರ್ಥಿಸಿದನು.—ಕೀರ್ತನೆ 119:37.
ದೀನಳ ಅವಿವೇಕಯುತ ಆಯ್ಕೆ
13. ದೀನಳು ಯಾರಾಗಿದ್ದಳು ಮತ್ತು ಅವಳ ಸ್ನೇಹಿತರ ಆಯ್ಕೆ ಅವಿವೇಕಯುತವಾಗಿತ್ತು ಏಕೆ?
13 ನಾವು 3ನೇ ಅಧ್ಯಾಯದಲ್ಲಿ ನೋಡಿದಂತೆ ನಮ್ಮ ಸ್ನೇಹಿತರು ನಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಬಲವಾದ ಪ್ರಭಾವವನ್ನು ಬೀರಬಲ್ಲರು. (ಜ್ಞಾನೋಕ್ತಿ 13:20; 1 ಕೊರಿಂಥ 15:33 ಓದಿ.) ಮೂಲಪಿತನಾದ ಯಾಕೋಬನ ಮಗಳಾಗಿದ್ದ ದೀನಳ ಉದಾಹರಣೆಯನ್ನು ಪರಿಗಣಿಸಿರಿ. (ಆದಿಕಾಂಡ 34:1) ದೀನಳು ಒಳ್ಳೇ ರೀತಿಯಲ್ಲಿ ಬೆಳೆಸಲ್ಪಟ್ಟಿದ್ದಳಾದರೂ ಅವಳು ಅವಿವೇಕದಿಂದ ಕಾನಾನ್ಯ ಹುಡುಗಿಯರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಳು. ಮೋವಾಬ್ಯರಂತೆ ಕಾನಾನ್ಯರೂ ಅನೈತಿಕತೆಗೆ ಕುಖ್ಯಾತರಾಗಿದ್ದರು. (ಯಾಜಕಕಾಂಡ 18:6-25) ತನ್ನ ತಂದೆಯ ಮನೆತನದಲ್ಲಿ “ಘನವಂತನಾಗಿದ್ದ” ಶೆಕೆಮನಂತೆ ಕಾನಾನ್ಯ ಪುರುಷರ ದೃಷ್ಟಿಯಲ್ಲಿ ದೀನಳು ಸುಲಭವಾದ ಬಲಿಪಶುವಾಗಿ ಕಂಡುಬಂದಳು.—ಆದಿಕಾಂಡ 34:18, 19.
14. ದೀನಳು ತನ್ನ ಸ್ನೇಹಿತರ ವಿಷಯದಲ್ಲಿ ಮಾಡಿದ ಆಯ್ಕೆಯು ಹೇಗೆ ದುರಂತಕ್ಕೆ ನಡಿಸಿತು?
14 ದೀನಳು ಶೆಕೆಮನನ್ನು ನೋಡಿದಾಗ ಅವಳ ಮನಸ್ಸಿನಲ್ಲಿ ಲೈಂಗಿಕ ಸಂಬಂಧದ ವಿಚಾರವು ಪ್ರಾಯಶಃ ಇದ್ದಿರಲಿಕ್ಕಿಲ್ಲ. ಅವನಾದರೋ ಲೈಂಗಿಕವಾಗಿ ಉದ್ರೇಕಿಸಲ್ಪಟ್ಟಾಗ ಏನು ಮಾಡುವುದು ಸಹಜವೆಂದು ಹೆಚ್ಚಿನ ಕಾನಾನ್ಯರು ಪರಿಗಣಿಸಿದ್ದಿರಬಹುದೋ ಅದನ್ನೇ ಮಾಡಿದನು. ಕೊನೇ ಕ್ಷಣದಲ್ಲಿ ದೀನಳು ಎಷ್ಟೇ ಪ್ರತಿರೋಧವನ್ನು ತೋರಿಸಿದರೂ ಅದರಿಂದ ಪ್ರಯೋಜನವಿರಲಿಲ್ಲ, ಏಕೆಂದರೆ ಅವನು ಅವಳನ್ನು “ತೆಗೆದುಕೊಂಡು ಹೋಗಿ ಕೂಡಿ ಮಾನಭಂಗಪಡಿಸಿದನು.” ಅನಂತರ ಶೆಕೆಮನು ದೀನಳನ್ನು ‘ಪ್ರೀತಿಮಾಡಿದ್ದಿರುವಂತೆ’ (NIBV) ತೋರುತ್ತದೆ, ಆದರೆ ಇದು ಅವನು ಅವಳಿಗೆ ಯಾವ ಅನಾಹುತವನ್ನು ಮಾಡಿದ್ದನೋ ಅದನ್ನು ಬದಲಾಯಿಸಲಿಲ್ಲ. (ಆದಿಕಾಂಡ 34:1-4 ಓದಿ.) ಇದರ ಫಲಿತಾಂಶವಾಗಿ ಕಷ್ಟವನ್ನು ಅನುಭವಿಸಿದ್ದು ದೀನಳು ಮಾತ್ರವೇ ಆಗಿರಲಿಲ್ಲ. ಸಹವಾಸಿಗಳ ವಿಷಯದಲ್ಲಿ ಅವಳು ಮಾಡಿದ ಆಯ್ಕೆಯು ಅವಳ ಇಡೀ ಕುಟುಂಬದ ಮೇಲೆ ಅಪಕೀರ್ತಿಯನ್ನು ಮತ್ತು ಕೆಟ್ಟ ಹೆಸರನ್ನು ತಂದಂಥ ಘಟನೆಗಳಿಗೆ ಕಾರಣವಾಯಿತು.—ಆದಿಕಾಂಡ 34:7, 25-31; ಗಲಾತ್ಯ 6:7, 8.
15, 16. ನಾವು ನಿಜವಾದ ವಿವೇಕವನ್ನು ಹೇಗೆ ಪಡೆಯಬಲ್ಲೆವು? (“ಮನನಕ್ಕಾಗಿರುವ ಶಾಸ್ತ್ರವಚನಗಳು” ಎಂಬ ಚೌಕವನ್ನೂ ನೋಡಿ.)
15 ದೀನಳು ಒಂದು ಪ್ರಮುಖ ಪಾಠವನ್ನು ಕಲಿತದ್ದು ಭಯಾನಕವಾದ ರೀತಿಯಲ್ಲಿ ಕಷ್ಟವನ್ನು ಅನುಭವಿಸಿದ ಬಳಿಕವೇ. ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗುವವರು ಕಹಿಯಾದ ಅನುಭವದಿಂದ ಜೀವನದ ಪಾಠಗಳನ್ನು ಕಲಿಯುವ ಅಗತ್ಯವಿಲ್ಲ. ಅವರು ದೇವರಿಗೆ ಕಿವಿಗೊಡುವುದರಿಂದ ‘ಜ್ಞಾನಿಗಳೊಂದಿಗೆ ಸಹವಾಸಮಾಡುವ’ ಆಯ್ಕೆಯನ್ನು ಮಾಡುತ್ತಾರೆ. (ಜ್ಞಾನೋಕ್ತಿ 13:20ಎ) ಹೀಗೆ ಅವರು “ಸಕಲ ಸನ್ಮಾರ್ಗಗಳನ್ನು” ತಿಳಿದುಕೊಳ್ಳುತ್ತಾರೆ ಮತ್ತು ಅನಗತ್ಯವಾದ ಸಮಸ್ಯೆಗಳಿಂದ ಹಾಗೂ ನೋವುಗಳಿಂದ ದೂರವಿರುತ್ತಾರೆ.—ಜ್ಞಾನೋಕ್ತಿ 2:6-9; ಕೀರ್ತನೆ 1:1-3.
16 ದೈವಿಕ ವಿವೇಕಕ್ಕಾಗಿ ಹಂಬಲಿಸುವ ಮತ್ತು ಪ್ರಾರ್ಥನೆಯಲ್ಲಿ ನಿರತರಾಗಿರುವ ಮೂಲಕ ಹಾಗೂ ದೇವರ ವಾಕ್ಯವನ್ನು ಮತ್ತು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಒದಗಿಸುವ ಮಾಹಿತಿಯನ್ನು ಕ್ರಮವಾಗಿ ಅಧ್ಯಯನಮಾಡುವ ಮೂಲಕ ಈ ಹಂಬಲವನ್ನು ತೃಪ್ತಿಪಡಿಸಲು ಪ್ರಯತ್ನಿಸುವ ಎಲ್ಲರಿಗೂ ಅದು ಲಭ್ಯವಿದೆ. (ಮತ್ತಾಯ 24:45; ಯಾಕೋಬ 1:5) ದೀನಭಾವ ಕೂಡ ಪ್ರಮುಖವಾಗಿದೆ; ಇದು ಶಾಸ್ತ್ರಾಧಾರಿತ ಸಲಹೆಗೆ ಕಿವಿಗೊಡುವುದರಲ್ಲಿ ಒಬ್ಬನು ತೋರಿಸುವ ಸಿದ್ಧಮನಸ್ಸಿನಲ್ಲಿ ಪ್ರತಿಬಿಂಬಿತವಾಗುತ್ತದೆ. (2 ಅರಸುಗಳು 22:18, 19) ಉದಾಹರಣೆಗೆ, ಒಬ್ಬ ಕ್ರೈಸ್ತನು ತನ್ನ ಹೃದಯವು ವಂಚಕವಾಗಿದೆ ಮತ್ತು ಗುಣವಾಗದ ರೋಗಕ್ಕೆ ಒಳಗಾಗಿದೆ ಎಂದು ತತ್ತ್ವದಲ್ಲಿ ಅಂಗೀಕರಿಸಬಹುದು. (ಯೆರೆಮೀಯ 17:9) ಆದರೆ ಒಂದು ಸನ್ನಿವೇಶವನ್ನು ಎದುರಿಸುವಾಗ ಅವನು ನಿರ್ದಿಷ್ಟವಾದ ಪ್ರೀತಿಭರಿತ ಸಲಹೆಯನ್ನು ಮತ್ತು ಸಹಾಯವನ್ನು ಸ್ವೀಕರಿಸುವಷ್ಟು ದೀನಭಾವದವನಾಗಿದ್ದಾನೊ?
17. ಒಂದು ಕುಟುಂಬದಲ್ಲಿ ಏಳಬಹುದಾದ ಸನ್ನಿವೇಶವೊಂದನ್ನು ವಿವರಿಸಿರಿ ಮತ್ತು ಒಬ್ಬ ತಂದೆಯು ತನ್ನ ಮಗಳೊಂದಿಗೆ ಹೇಗೆ ತರ್ಕಿಸಬಹುದು ಎಂಬುದನ್ನು ತೋರಿಸಿರಿ.
17 ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಒಬ್ಬ ಸಹಚರಿಯು ಜೊತೆಯಲ್ಲಿಲ್ಲದೆ ತನ್ನ ಮಗಳು ಒಬ್ಬ ಯುವ ಕ್ರೈಸ್ತ ಪುರುಷನೊಂದಿಗೆ ಹೊರಗೆ ಹೋಗುವುದನ್ನು ಒಬ್ಬ ತಂದೆ ಅನುಮತಿಸುವುದಿಲ್ಲ. ಆಗ ಆ ಹುಡುಗಿ, “ಅಪ್ಪಾ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲವೆ? ನಾವು ಯಾವ ತಪ್ಪನ್ನೂ ಮಾಡುವುದಿಲ್ಲ!” ಎಂದು ಹೇಳುತ್ತಾಳೆ. ಅವಳಿಗೆ ಯೆಹೋವನ ಮೇಲೆ ಪ್ರೀತಿ ಇರಬಹುದು ಮತ್ತು ಅವಳ ಉದ್ದೇಶಗಳು ಒಳ್ಳೆಯವುಗಳಾಗಿರಬಹುದು, ಆದರೂ ಅವಳು ‘[ದೈವಿಕ ವಿವೇಕದಿಂದ] ನಡೆಯುತ್ತಿದ್ದಾಳೊ?’ ಅವಳು ‘ಜಾರತ್ವಕ್ಕೆ ದೂರವಾಗಿ ಓಡಿಹೋಗುತ್ತಿದ್ದಾಳೊ?’ ಅಥವಾ ಅವಳು ಮೂರ್ಖತನದಿಂದ ‘ತನ್ನ [ಹೃದಯದಲ್ಲೇ] ಭರವಸವಿಡುತ್ತಿದ್ದಾಳೊ?’ (ಜ್ಞಾನೋಕ್ತಿ 28:26) ಇಂಥ ಒಬ್ಬ ತಂದೆ ಮತ್ತು ಮಗಳು ಈ ವಿಷಯದ ಕುರಿತು ತರ್ಕಿಸಲು ಉಪಯುಕ್ತವಾಗಿರುವ ಹೆಚ್ಚಿನ ಮೂಲತತ್ತ್ವಗಳು ಪ್ರಾಯಶಃ ನಿಮ್ಮ ನೆನಪಿಗೆ ಬರಬಹುದು.—ನೋಡಿರಿ ಜ್ಞಾನೋಕ್ತಿ 22:3; ಮತ್ತಾಯ 6:13; 26:41.
ಯೋಸೇಫನು ಜಾರತ್ವದಿಂದ ಓಡಿಹೋದನು
18, 19. ಯೋಸೇಫನ ಜೀವನದಲ್ಲಿ ಯಾವ ಪ್ರಲೋಭನೆಯು ಎದುರಾಯಿತು ಮತ್ತು ಅವನು ಅದನ್ನು ಹೇಗೆ ನಿಭಾಯಿಸಿದನು?
18 ದೇವರನ್ನು ಪ್ರೀತಿಸಿದ ಮತ್ತು ಜಾರತ್ವದಿಂದ ಓಡಿಹೋದ ಒಬ್ಬ ಒಳ್ಳೆಯ ಯುವಕನು ದೀನಳ ಮಲತಮ್ಮನಾದ ಯೋಸೇಫನಾಗಿದ್ದನು. (ಆದಿಕಾಂಡ 30:20-24) ಚಿಕ್ಕ ಹುಡುಗನಾಗಿದ್ದಾಗ ಯೋಸೇಫನು ತನ್ನ ಅಕ್ಕನ ಮೂರ್ಖತನದ ಫಲಿತಾಂಶಗಳನ್ನು ವೈಯಕ್ತಿಕವಾಗಿ ನೋಡಿದ್ದನು. ಆ ನೆನಪುಗಳು ಮತ್ತು ದೇವರ ಪ್ರೀತಿಯಲ್ಲಿ ಉಳಿಯಲು ಯೋಸೇಫನಿಗಿದ್ದ ಬಯಕೆಯು ವರ್ಷಗಳಾನಂತರ ಐಗುಪ್ತ ದೇಶದಲ್ಲಿ ತನ್ನ ಯಜಮಾನನ ಹೆಂಡತಿಯು ಅವನನ್ನು “ಪ್ರತಿದಿನವೂ” ಪ್ರಲೋಭಿಸಲು ಪ್ರಯತ್ನಿಸುತ್ತಿದ್ದಾಗ ಅವನನ್ನು ಸಂರಕ್ಷಿಸಿತು. ಯೋಸೇಫನು ಒಬ್ಬ ದಾಸನಾಗಿದ್ದುದರಿಂದ ಅವನು ತನ್ನಿಷ್ಟದಂತೆ ಕೆಲಸವನ್ನು ಬಿಟ್ಟುಹೋಗಲು ಸಾಧ್ಯವಿರಲಿಲ್ಲ! ಅವನು ಆ ಸನ್ನಿವೇಶವನ್ನು ವಿವೇಕದಿಂದಲೂ ಧೈರ್ಯದಿಂದಲೂ ನಿಭಾಯಿಸಬೇಕಿತ್ತು. ಅವನು ಪೋಟೀಫರನ ಹೆಂಡತಿಯು ಸಂಗಮಕ್ಕೆ ಕರೆದಾಗೆಲ್ಲಾ ಪದೇಪದೇ ನಿರಾಕರಿಸುವ ಮೂಲಕ ಮತ್ತು ಕೊನೆಯಲ್ಲಿ ಅವಳಿಂದ ಓಡಿಹೋಗುವ ಮೂಲಕ ಸನ್ನಿವೇಶವನ್ನು ನಿಭಾಯಿಸಿದನು.—ಆದಿಕಾಂಡ 39:7-12 ಓದಿ.
19 ಇದನ್ನು ಪರಿಗಣಿಸಿರಿ: ಯೋಸೇಫನು ಒಂದುವೇಳೆ ಈ ಸ್ತ್ರೀಯೊಂದಿಗೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಲ್ಲಿ ಅಥವಾ ಲೈಂಗಿಕತೆಯ ಕುರಿತು ಯಾವಾಗಲೂ ಹಗಲುಗನಸು ಕಾಣುತ್ತಿದ್ದಲ್ಲಿ ಅವನು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿತ್ತೊ? ಬಹುಶಃ ಇಲ್ಲ. ಯೋಸೇಫನು ಪಾಪಪೂರಿತ ವಿಷಯಗಳ ಕುರಿತು ಆಲೋಚಿಸುತ್ತಾ ಇರುವ ಬದಲು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಬಹುಮೂಲ್ಯವಾಗಿ ಪರಿಗಣಿಸಿದನು. ಇದು ಪೋಟೀಫರನ ಹೆಂಡತಿಗೆ ಅವನು ಹೇಳಿದ ಮಾತುಗಳಲ್ಲಿ ಸುವ್ಯಕ್ತವಾಗಿತ್ತು. ಅವನು, “ನನ್ನ ಧಣಿಯು . . . ನೀನು ಅವನ ಧರ್ಮಪತ್ನಿಯಾದದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ; ಹೀಗಿರುವಲ್ಲಿ ನಾನು ಇಂಥಾ ಮಹಾದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಹೇಳುತ್ತಿದ್ದನು.—ಆದಿಕಾಂಡ 39:8, 9.
20. ಯೋಸೇಫನ ವಿಷಯದಲ್ಲಿ ಯೆಹೋವನು ಹೇಗೆ ಕಾರ್ಯಗಳನ್ನು ನಿರ್ವಹಿಸಿದನು?
20 ತನ್ನ ಕುಟುಂಬದಿಂದ ಬಹಳ ದೂರದಲ್ಲಿದ್ದ ಯುವ ಯೋಸೇಫನು ಪ್ರತಿದಿನವೂ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಿರುವುದನ್ನು ಗಮನಿಸಿದಾಗ ಯೆಹೋವನಿಗೆ ಎಷ್ಟು ಸಂತೋಷವಾಗಿದ್ದಿರಬೇಕು ಎಂಬುದನ್ನು ತುಸು ಊಹಿಸಿಕೊಳ್ಳಿರಿ. (ಜ್ಞಾನೋಕ್ತಿ 27:11) ಸಮಯಾನಂತರ ಯೋಸೇಫನು ಸೆರೆಮನೆಯಿಂದ ಬಿಡುಗಡೆ ಮಾಡಲ್ಪಡುವಂತೆ ಮಾತ್ರವಲ್ಲ ಅವನು ಐಗುಪ್ತದ ಪ್ರಧಾನ ಮಂತ್ರಿಯೂ ಆಹಾರದ ಆಡಳಿತಗಾರನೂ ಆಗಿ ನೇಮಕವನ್ನು ಹೊಂದುವಂತೆ ಯೆಹೋವನು ಕಾರ್ಯಗಳನ್ನು ನಿರ್ವಹಿಸಿದನು. (ಆದಿಕಾಂಡ 41:39-49) “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು” ಎಂಬ ಕೀರ್ತನೆ 97:10ರ ಮಾತುಗಳು ಎಷ್ಟು ಸತ್ಯವಾಗಿವೆ!
21. ಆಫ್ರಿಕ ದೇಶದ ಒಬ್ಬ ಯುವ ಸಹೋದರನು ಹೇಗೆ ನೈತಿಕ ವಿಷಯದಲ್ಲಿ ಧೈರ್ಯವನ್ನು ತೋರಿಸಿದನು?
21 ತದ್ರೀತಿಯಲ್ಲಿ ಇಂದು ದೇವರ ಸೇವಕರಲ್ಲಿ ಅನೇಕರು ತಾವು ‘ಕೆಟ್ಟದ್ದನ್ನು ದ್ವೇಷಿಸುತ್ತೇವೆ ಮತ್ತು ಒಳ್ಳೇದನ್ನು ಪ್ರೀತಿಸುತ್ತೇವೆ’ ಎಂಬುದನ್ನು ತೋರಿಸುತ್ತಾರೆ. (ಆಮೋಸ 5:15) ಆಫ್ರಿಕ ದೇಶದ ಒಬ್ಬ ಯುವ ಸಹೋದರನು, ಗಣಿತ ಪರೀಕ್ಷೆಯ ಸಮಯದಲ್ಲಿ ಸಹಾಯಮಾಡುವುದಾದರೆ ಅದಕ್ಕೆ ಬದಲಿಯಾಗಿ ತಾನು ಅವನಿಗೆ ಸಂಭೋಗಸುಖ ನೀಡಳು ಸಿದ್ಧಳಿದ್ದೇನೆ ಎಂದು ಒಬ್ಬ ಶಾಲಾ ಸಹಪಾಠಿ ಹೇಳಿದ್ದನ್ನು ಜ್ಞಾಪಿಸಿಕೊಳ್ಳುತ್ತಾನೆ. “ನಾನು ಕೂಡಲೆ ಅವಳ ಪ್ರಸ್ತಾಪವನ್ನು ತಳ್ಳಿಹಾಕಿದೆ. ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾನು ನನ್ನ ಮರ್ಯಾದೆಯನ್ನು ಮತ್ತು ಸ್ವಗೌರವನ್ನು ಉಳಿಸಿಕೊಂಡಿದ್ದೇನೆ. ಇವು ನನಗೆ ಬೆಳ್ಳಿಬಂಗಾರಕ್ಕಿಂತಲೂ ಹೆಚ್ಚು ಅಮೂಲ್ಯವಾಗಿವೆ” ಎಂದು ಅವನು ಹೇಳುತ್ತಾನೆ. ಪಾಪವು “ತಾತ್ಕಾಲಿಕ ಸುಖಾನುಭವ” ನೀಡಬಹುದೆಂಬುದು ನಿಜ, ಆದರೆ ಇಂಥ ಕಳಪೆ ರೋಮಾಂಚನವು ಅನೇಕವೇಳೆ ಹೆಚ್ಚು ನೋವನ್ನು ತರುತ್ತದೆ. (ಇಬ್ರಿಯ 11:25) ಮಾತ್ರವಲ್ಲದೆ ಯೆಹೋವನಿಗೆ ವಿಧೇಯರಾಗುವುದರ ಫಲಿತಾಂಶವಾಗಿ ಸಿಗುವ ನಿತ್ಯ ಸಂತೋಷಕ್ಕೆ ಹೋಲಿಸುವಾಗ ಅಂಥ ರೋಮಾಂಚನವು ತೀರ ಕ್ಷುಲ್ಲಕವಾಗಿದೆ.—ಜ್ಞಾನೋಕ್ತಿ 10:22.
ಕರುಣೆಯ ದೇವರಿಂದ ಸಹಾಯವನ್ನು ಪಡೆದುಕೊಳ್ಳಿರಿ
22, 23. (ಎ) ಒಬ್ಬ ಕ್ರೈಸ್ತನು ಒಂದು ಗಂಭೀರವಾದ ಪಾಪವನ್ನು ಮಾಡುವಲ್ಲಿ ಅವನ ಸನ್ನಿವೇಶವು ಏಕೆ ಆಶಾರಹಿತವಾಗಿಲ್ಲ? (ಬಿ) ಒಬ್ಬ ತಪ್ಪಿತಸ್ಥನಿಗೆ ಯಾವ ಸಹಾಯವು ಲಭ್ಯವಿದೆ?
22 ಅಪರಿಪೂರ್ಣರಾಗಿರುವುದರಿಂದ ಶಾರೀರಿಕ ಬಯಕೆಗಳನ್ನು ಹತೋಟಿಯಲ್ಲಿಡಲು ಮತ್ತು ದೇವರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನು ಮಾಡಲು ನಾವೆಲ್ಲರೂ ಹೆಣಗಾಡುತ್ತೇವೆ. (ರೋಮನ್ನರಿಗೆ 7:21-25) ಯೆಹೋವನಿಗೆ ಇದು ತಿಳಿದಿದೆ ಅಂದರೆ “ನಾವು ಧೂಳಿಯಾಗಿದ್ದೇವೆಂಬದನ್ನು [ಆತನು] ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಆದರೂ ಕೆಲವೊಮ್ಮೆ ಒಬ್ಬ ಕ್ರೈಸ್ತನು ಒಂದು ಗಂಭೀರವಾದ ಪಾಪವನ್ನು ಮಾಡಬಹುದು. ಅವನ ಸನ್ನಿವೇಶವು ಆಶಾರಹಿತವಾದದ್ದಾಗಿದೆಯೊ? ಖಂಡಿತವಾಗಿಯೂ ಇಲ್ಲ! ತಪ್ಪುಮಾಡಿದವನು ರಾಜನಾದ ದಾವೀದನಂತೆ ಕಹಿಯಾದ ಫಲವನ್ನು ಕೊಯ್ಯಬಹುದು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೆ ಯಾರು ಪಶ್ಚಾತ್ತಾಪಪಡುತ್ತಾರೋ ಮತ್ತು ತಮ್ಮ ಪಾಪಗಳನ್ನು ‘ಮುಕ್ತಮನಸ್ಸಿನಿಂದ ನಿವೇದಿಸಿಕೊಳ್ಳುತ್ತಾರೋ’ ಅಂಥವರನ್ನು ದೇವರು ‘ಕ್ಷಮಿಸಲು ಸಿದ್ಧನಾಗಿದ್ದಾನೆ.’—ಕೀರ್ತನೆ 86:5, NW; ಯಾಕೋಬ 5:16; ಜ್ಞಾನೋಕ್ತಿ 28:13 ಓದಿ.
23 ಇದಲ್ಲದೆ ದೇವರು ಕರುಣೆಯಿಂದ ಕ್ರೈಸ್ತ ಸಭೆಗೆ “ಮನುಷ್ಯರಲ್ಲಿ ದಾನಗಳನ್ನು” ಒದಗಿಸಿದ್ದಾನೆ; ಇವರು ಪ್ರೌಢರಾದ ಆಧ್ಯಾತ್ಮಿಕ ಕುರುಬರಾಗಿದ್ದು ಸಹಾಯವನ್ನು ನೀಡಲು ಅರ್ಹರೂ ಸಿದ್ಧರೂ ಆಗಿದ್ದಾರೆ. (ಎಫೆಸ 4:8, 12; ಯಾಕೋಬ 5:14, 15) ಅವರ ಗುರಿಯು ಒಬ್ಬ ತಪ್ಪಿತಸ್ಥನು ದೇವರೊಂದಿಗಿನ ತನ್ನ ಸಂಬಂಧವನ್ನು ಪುನಸ್ಸ್ಥಾಪಿಸಲು ಮತ್ತು ಅವನು ಪುನಃ ಪಾಪವನ್ನು ಮಾಡದಂತೆ ‘ಬುದ್ಧಿಯನ್ನು ಪಡೆಯಲು’ ಸಹಾಯಮಾಡುವುದೇ ಆಗಿದೆ.—ಜ್ಞಾನೋಕ್ತಿ 15:32.
‘ಬುದ್ಧಿಯನ್ನು ಪಡೆಯಿರಿ’
24, 25. (ಎ) ಜ್ಞಾನೋಕ್ತಿ 7:6-23ರಲ್ಲಿ ವಿವರಿಸಲ್ಪಟ್ಟಿರುವ ಯುವಕನು ಹೇಗೆ ತನ್ನನ್ನು ‘ಅಲ್ಪಬುದ್ಧಿಯುಳ್ಳವನಾಗಿ’ ತೋರಿಸಿಕೊಂಡನು? (ಬಿ) ನಾವು ಹೇಗೆ ‘ಬುದ್ಧಿಯನ್ನು ಪಡೆಯಬಲ್ಲೆವು?’
24 ಬೈಬಲು “ಅಲ್ಪಬುದ್ಧಿಯುಳ್ಳ” ಮತ್ತು “ಬುದ್ಧಿಯನ್ನು ಪಡೆಯುವ” ಜನರ ಕುರಿತು ಮಾತಾಡುತ್ತದೆ. (ಜ್ಞಾನೋಕ್ತಿ 7:7) ಆಧ್ಯಾತ್ಮಿಕ ಪ್ರೌಢತೆಯಿಲ್ಲದಿರುವುದರಿಂದ ಮತ್ತು ದೇವರ ಸೇವೆಯಲ್ಲಿ ಅನುಭವವಿಲ್ಲದಿರುವುದರಿಂದ “ಅಲ್ಪಬುದ್ಧಿಯುಳ್ಳ” ಒಬ್ಬ ವ್ಯಕ್ತಿಯಲ್ಲಿ ವಿವೇಚನೆ ಹಾಗೂ ಒಳ್ಳೆಯ ತೀರ್ಮಾನಶಕ್ತಿಯ ಕೊರತೆಯಿರಬಹುದು. ಜ್ಞಾನೋಕ್ತಿ 7:6-23ರಲ್ಲಿ ವಿವರಿಸಲ್ಪಟ್ಟಿರುವ ಯುವಕನಂತೆ ಅವನು ಗಂಭೀರವಾದ ಪಾಪಕ್ಕೆ ಸುಲಭವಾಗಿ ಬಲಿಬೀಳಬಹುದು. ಆದರೆ ‘ಬುದ್ಧಿಯನ್ನು ಪಡೆಯುವಂಥ’ ಒಬ್ಬ ವ್ಯಕ್ತಿಯು ದೇವರ ವಾಕ್ಯದ ಕ್ರಮವಾದ ಪ್ರಾರ್ಥನಾಪೂರ್ವಕ ಅಧ್ಯಯನದ ಮೂಲಕ ತನ್ನ ಆಂತರಿಕ ವ್ಯಕ್ತಿಯ ಕಡೆಗೆ ಗಂಭೀರವಾದ ಗಮನವನ್ನು ಕೊಡುತ್ತಾನೆ. ಮತ್ತು ತನ್ನ ಅಪರಿಪೂರ್ಣ ಸ್ಥಿತಿಯಲ್ಲಿ ತನ್ನಿಂದ ಸಾಧ್ಯವಿರುವಷ್ಟರ ಮಟ್ಟಿಗೆ ದೇವರಿಗೆ ಒಪ್ಪಿಗೆಯಾಗುವಂಥ ರೀತಿಯಲ್ಲಿ ತನ್ನ ವಿಚಾರಗಳನ್ನು, ಬಯಕೆಗಳನ್ನು, ಭಾವನೆಗಳನ್ನು ಮತ್ತು ಜೀವನದಲ್ಲಿನ ಗುರಿಗಳನ್ನು ಸರಿಹೊಂದಿಸಿಕೊಳ್ಳುತ್ತಾನೆ. ಹೀಗೆ ಅವನು “ತನ್ನ ಪ್ರಾಣವನ್ನು ಪ್ರೀತಿಸುತ್ತಾನೆ” ಅಥವಾ ತನ್ನನ್ನೇ ಆಶೀರ್ವದಿಸಿಕೊಳ್ಳುತ್ತಾನೆ ಮತ್ತು ಅವನು “ಒಳ್ಳೆಯದನ್ನು ಕಂಡುಕೊಳ್ಳುವನು.”—ಜ್ಞಾನೋಕ್ತಿ 19:8, NIBV.
25 ಸ್ವತಃ ಹೀಗೆ ಕೇಳಿಕೊಳ್ಳಿ: ‘ದೇವರ ಮಟ್ಟಗಳು ಸರಿಯಾಗಿವೆ ಎಂಬುದು ನನಗೆ ಪೂರ್ಣವಾಗಿ ಮನವರಿಕೆಯಾಗಿದೆಯೊ? ಅವುಗಳಿಗನುಸಾರ ನಡೆಯುವುದು ಅತ್ಯಧಿಕ ಸಂತೋಷವನ್ನು ತರುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೊ?’ (ಕೀರ್ತನೆ 19:7-10; ಯೆಶಾಯ 48:17, 18) ಈ ವಿಷಯದಲ್ಲಿ ನಿಮಗೆ ಅತಿ ಚಿಕ್ಕ ಸಂಶಯವಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸಿ. ದೇವರ ನಿಯಮಗಳನ್ನು ಅಲಕ್ಷಿಸುವುದರಿಂದ ಉಂಟಾಗುವ ಪರಿಣಾಮಗಳ ಕುರಿತು ಮನನಮಾಡಿರಿ. ಮಾತ್ರವಲ್ಲದೆ ಸತ್ಯಾನುಸಾರ ಜೀವಿಸುವ ಮೂಲಕ ಮತ್ತು ಸತ್ಯವಾಗಿರುವ, ನೀತಿಯುತವಾಗಿರುವ, ನೈತಿಕವಾಗಿ ಶುದ್ಧವಾಗಿರುವ, ಪ್ರೀತಿಯೋಗ್ಯವಾಗಿರುವ ಹಾಗೂ ಸದ್ಗುಣವಾಗಿರುವಂಥ ಹಿತಕರ ವಿಚಾರಗಳಿಂದ ನಿಮ್ಮ ಮನಸ್ಸನ್ನು ತುಂಬಿಸಿಕೊಳ್ಳುವ ಮೂಲಕ “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ.” (ಕೀರ್ತನೆ 34:8; ಫಿಲಿಪ್ಪಿ 4:8, 9) ಇದನ್ನು ನೀವು ಎಷ್ಟು ಹೆಚ್ಚಾಗಿ ಮಾಡುತ್ತೀರೋ ಅಷ್ಟೇ ಹೆಚ್ಚಾಗಿ ದೇವರ ಮೇಲಣ ನಿಮ್ಮ ಪ್ರೀತಿಯು ಅಧಿಕಗೊಳ್ಳುವುದು, ಆತನು ಏನನ್ನು ಪ್ರೀತಿಸುತ್ತಾನೋ ಅದನ್ನು ಪ್ರೀತಿಸುವಿರಿ ಮತ್ತು ಆತನು ಏನನ್ನು ಹಗೆಮಾಡುತ್ತಾನೋ ಅದನ್ನು ಹಗೆಮಾಡುವಿರಿ ಎಂಬ ಖಾತ್ರಿ ನಿಮಗಿರಬಲ್ಲದು. ಯೋಸೇಫನು ಪರಿಪೂರ್ಣನಾಗಿರಲಿಲ್ಲ. ಆದರೂ ಅವನು ‘ಜಾರತ್ವದಿಂದ ಓಡಿಹೋಗಲು’ ಶಕ್ತನಾದನು, ಏಕೆಂದರೆ ಅನೇಕ ವರ್ಷಗಳ ತನಕ ಯೆಹೋವನು ತನ್ನನ್ನು ರೂಪಿಸುವಂತೆ, ದೇವರನ್ನು ಸಂತೋಷಪಡಿಸುವ ಬಯಕೆಯನ್ನು ತನಗೆ ಕೊಡುವಂತೆ ಅವನು ಅನುಮತಿಸಿದನು. ನಿಮ್ಮ ವಿಷಯದಲ್ಲೂ ಇದು ಸತ್ಯವಾಗಲಿ.—ಯೆಶಾಯ 64:8.
26. ಮುಂದಿನ ಅಧ್ಯಾಯಗಳಲ್ಲಿ ಯಾವ ಮುಖ್ಯ ವಿಚಾರವು ಪರಿಗಣಿಸಲ್ಪಡುವುದು?
26 ನಮ್ಮ ಸೃಷ್ಟಿಕರ್ತನು ನಮಗೆ ಜನನೇಂದ್ರಿಯಗಳನ್ನು ರೂಪಿಸಿರುವುದು ಬರೀ ರೋಮಾಂಚನಕ್ಕಾಗಿರುವ ಆಟಿಕೆಗಳಾಗಿ ಇರಲಿಕ್ಕಾಗಿಯಲ್ಲ, ಬದಲಿಗೆ ಸಂತಾನೋತ್ಪತ್ತಿಮಾಡಿ ವಿವಾಹದಲ್ಲಿನ ಆಪ್ತತೆಯನ್ನು ಅನುಭವಿಸಲಿಕ್ಕಾಗಿಯೇ. (ಜ್ಞಾನೋಕ್ತಿ 5:18) ಮುಂದಿನ ಎರಡು ಅಧ್ಯಾಯಗಳಲ್ಲಿ ವಿವಾಹದ ಕುರಿತಾದ ದೇವರ ದೃಷ್ಟಿಕೋನವು ಚರ್ಚಿಸಲ್ಪಡುವುದು.
a ಅರಣ್ಯಕಾಂಡ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಯು ವಾಸ್ತವದಲ್ಲಿ ನ್ಯಾಯಾಧಿಪತಿಗಳಿಂದ ಕೊಲ್ಲಲ್ಪಟ್ಟ “ಜನರ ಮುಖಂಡರೆಲ್ಲರನ್ನು” ಒಳಗೂಡಿದ್ದು, ಅವರ ಸಂಖ್ಯೆಯು 1,000ದಷ್ಟು ಇದ್ದಿರಬಹುದು; ಉಳಿದವರು ನೇರವಾಗಿ ಯೆಹೋವನಿಂದ ಕೊಲ್ಲಲ್ಪಟ್ಟವರಾಗಿದ್ದರು.—ಅರಣ್ಯಕಾಂಡ 25:4, 5.
b ಅಶುದ್ಧತೆ ಮತ್ತು ಸಡಿಲು ನಡತೆಯ ಅರ್ಥದ ಕುರಿತಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಜುಲೈ 15, 2006ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿ.
c ಇಲ್ಲಿ ಉಪಯೋಗಿಸಲ್ಪಟ್ಟಿರುವಂತೆ “ಅಶ್ಲೀಲ ಸಾಹಿತ್ಯ” ಎಂಬುದು ಲೈಂಗಿಕವಾಗಿ ಉದ್ರೇಕಿಸುವ ಉದ್ದೇಶದಿಂದ ತಯಾರಿಸಲ್ಪಟ್ಟಿರುವ ಚಿತ್ರಗಳು, ಬರಹಗಳು ಅಥವಾ ಕಾಮಪ್ರಚೋದಕ ವಿಷಯಗಳಿರುವ ಧ್ವನಿಗೆ ಸೂಚಿತವಾಗಿದೆ. ಅಶ್ಲೀಲ ಸಾಹಿತ್ಯವು ಕಾಮಪ್ರಚೋದಕ ಭಂಗಿಯಲ್ಲಿರುವ ಒಬ್ಬ ವ್ಯಕ್ತಿಯ ಚಿತ್ರದಿಂದ ಹಿಡಿದು ಇಬ್ಬರು ಅಥವಾ ಹೆಚ್ಚು ಮಂದಿಯ ಮಧ್ಯೆ ನಡೆಯುವ ಅತಿ ತುಚ್ಛವಾದ ಲೈಂಗಿಕ ಕ್ರಿಯೆಗಳನ್ನು ತೋರಿಸುವಷ್ಟು ವ್ಯಾಪಕವಾಗಿ ಕಂಡುಬರಬಹುದು.
d ಹಸ್ತಮೈಥುನದ ಕುರಿತು “ಮುಷ್ಟಿಮೈಥುನದ ದೌರ್ಬಲ್ಯವನ್ನು ಜಯಿಸಿರಿ” ಎಂಬ ಪರಿಶಿಷ್ಟದಲ್ಲಿ ಚರ್ಚಿಸಲಾಗಿದೆ.