ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿರಿ
“ಭೂಜನಾಂಗಗಳೇ, [“ಜನಾಂಗಗಳ ಕುಟುಂಬಗಳೇ,” NW] ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.”—ಕೀರ್ತನೆ 96:7.
1. ಕುಟುಂಬ ಜೀವನಕ್ಕೆ ಯೆಹೋವನು ಯಾವ ರೀತಿಯ ಆರಂಭವನ್ನು ನೀಡಿದನು?
ಯೆಹೋವನು ಪ್ರಥಮ ಪುರುಷ ಹಾಗೂ ಪ್ರಥಮ ಸ್ತ್ರೀಯನ್ನು ವಿವಾಹದಲ್ಲಿ ಕೂಡಿಸಿದಾಗ, ಕುಟುಂಬ ಜೀವನಕ್ಕೆ ಒಂದು ಶಾಂತಿಭರಿತ ಹಾಗೂ ಸಂತೋಷಕರ ಆರಂಭವನ್ನು ನೀಡಿದನು. ವಾಸ್ತವವಾಗಿ ಆದಾಮನು ಎಷ್ಟೊಂದು ಸಂತೋಷಿತನಾಗಿದ್ದನೆಂದರೆ, ಅವನು ತನ್ನ ಆನಂದವನ್ನು ಬಹಳ ಸಮಯದ ಹಿಂದೆಯೇ ದಾಖಲಿಸಲ್ಪಟ್ಟ ಕಾವ್ಯದಲ್ಲಿ ಹೀಗೆ ಅಭಿವ್ಯಕ್ತಪಡಿಸಿದನು: “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ; ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು.”—ಆದಿಕಾಂಡ 2:23.
2. ತನ್ನ ಮಾನವ ಮಕ್ಕಳಿಗೆ ಸಂತೋಷವನ್ನು ತರುವುದರ ಜೊತೆಗೆ ವಿವಾಹದ ವಿಷಯವಾಗಿ ಯಾವ ವಿಷಯವು ದೇವರ ಮನಸ್ಸಿನಲ್ಲಿತ್ತು?
2 ದೇವರು ವಿವಾಹ ಮತ್ತು ಕುಟುಂಬದ ಏರ್ಪಾಡನ್ನು ಸ್ಥಾಪಿಸಿದಾಗ, ತನ್ನ ಮಾನವ ಮಕ್ಕಳಿಗೆ ಕೇವಲ ಸಂತೋಷವನ್ನು ತರುವುದಕ್ಕಿಂತ ಹೆಚ್ಚನ್ನು ಆತನು ಉದ್ದೇಶಿಸಿದನು. ಅವರು ತನ್ನ ಚಿತ್ತವನ್ನು ಮಾಡಬೇಕೆಂದು ಆತನು ಬಯಸಿದನು. ಪ್ರಥಮ ಜೋಡಿಗೆ ದೇವರು ಹೇಳಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ನಿಶ್ಚಯವಾಗಿಯೂ ಪ್ರತಿಫಲದಾಯಕವಾದ ಒಂದು ನೇಮಕ. ಪ್ರಥಮ ವಿವಾಹಿತ ದಂಪತಿಗಳು ಯೆಹೋವನ ಚಿತ್ತವನ್ನು ವಿಧೇಯಪೂರ್ವಕವಾಗಿ ಮಾಡಿರುವುದಾದಲ್ಲಿ, ಆದಾಮನು, ಹವ್ವಳು, ಮತ್ತು ಅವರ ಭಾವೀ ಮಕ್ಕಳು ಎಷ್ಟೊಂದು ಸಂತೋಷಿತರಾಗಿದ್ದಿರಬಹುದು!
3. ದಿವ್ಯ ಭಕ್ತಿಯಿಂದ ಜೀವಿಸಲು, ಕುಟುಂಬಗಳಿಗೆ ಯಾವುದರ ಆವಶ್ಯಕತೆಯಿದೆ?
3 ಇಂದು ಕೂಡ, ಕುಟುಂಬಗಳು ದೇವರ ಚಿತ್ತವನ್ನು ಮಾಡಲು ಒಟ್ಟಿಗೆ ಕೆಲಸಮಾಡುವಾಗ ಅತಿಯಾದ ಸಂತೋಷವನ್ನು ಅನುಭವಿಸುತ್ತವೆ. ಮತ್ತು ಇಂತಹ ವಿಧೇಯ ಕುಟುಂಬಗಳಿಗೆ ಎಂತಹ ಭವ್ಯವಾದ ಪ್ರತೀಕ್ಷೆಗಳಿವೆ! ಅಪೊಸ್ತಲ ಪೌಲನು ಬರೆದುದು: “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.” (1 ತಿಮೊಥೆಯ 4:8) ನಿಜವಾದ ದಿವ್ಯ ಭಕ್ತಿಯಿಂದ ಜೀವಿಸುವ ಕುಟುಂಬಗಳು ಯೆಹೋವನ ವಾಕ್ಯದ ಮೂಲತತ್ವಗಳನ್ನು ಅನುಸರಿಸಿ, ಆತನ ಚಿತ್ತವನ್ನು ಮಾಡುತ್ತವೆ. ಅವು ದೈವಿಕ ಶಾಂತಿಯನ್ನು ಬೆನ್ನಟ್ಟಿ, ಹೀಗೆ ‘ಇಹಜೀವನ’ದಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತವೆ.
ಕುಟುಂಬ ಜೀವನವು ಗಂಡಾಂತರಕ್ಕೊಳಗಾಗಿದೆ
4, 5. ಕುಟುಂಬ ಜೀವನವು ಈಗ ಲೋಕವ್ಯಾಪಕವಾಗಿ ಗಂಡಾಂತರಕ್ಕೊಳಗಾಗಿದೆ ಎಂದು ಏಕೆ ಹೇಳಸಾಧ್ಯವಿದೆ?
4 ವಾಸ್ತವವಾಗಿ ಪ್ರತಿಯೊಂದು ಕುಟುಂಬದಲ್ಲಿ ನಾವು ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳುವುದಿಲ್ಲ. ಜನಸಂಖ್ಯಾ ಸಭೆ ಎಂಬುದಾಗಿ ಕರೆಯಲ್ಪಡುವ ಒಂದು ಜನಸಂಖ್ಯಾ ಅಭ್ಯಾಸದ ಸಂಸ್ಥೆಯಿಂದ ಮಾಡಲ್ಪಟ್ಟ ಅಧ್ಯಯನವನ್ನು ಉದ್ಧರಿಸುತ್ತಾ, ದ ನ್ಯೂ ಯಾರ್ಕ್ ಟೈಮ್ಸ್ ಹೇಳುವುದು: “ಶ್ರೀಮಂತ ಹಾಗೂ ಬಡ ರಾಷ್ಟ್ರಗಳಲ್ಲಿ ಏಕರೂಪವಾಗಿ, ಕುಟುಂಬ ಜೀವನದ ರಚನೆಯು ಅಗಾಧವಾದ ಬದಲಾವಣೆಗಳನ್ನು ಅನುಭವಿಸುತ್ತಿದೆ.” ಈ ಅಧ್ಯಯನದ ಬರಹಗಾರ್ತಿಯೊಬ್ಬಳು ಹೀಗೆ ಹೇಳುವುದಾಗಿ ತಿಳಿಸಲಾಯಿತು: “ಕುಟುಂಬವು ಒಂದು ಸ್ಥಿರವಾದ ಹಾಗೂ ಒಂದಾಗಿಸುವ ಅಂಶವಾಗಿದ್ದು, ಅದರಲ್ಲಿ ತಂದೆಯು ಹಣಕಾಸನ್ನು ಒದಗಿಸುವವನಾಗಿ ಮತ್ತು ತಾಯಿಯು ಭಾವನಾತ್ಮಕ ಆರೈಕೆ ನೀಡುವವಳಾಗಿ ಕಾರ್ಯಮಾಡುತ್ತಾರೆಂಬ ಕಲ್ಪನೆಯು ಒಂದು ಮಿಥ್ಯೆಯಾಗಿದೆ. ವಾಸ್ತವಿಕತೆ ಏನೆಂದರೆ, ಅವಿವಾಹಿತ ತಾಯ್ತನ, ಹೆಚ್ಚುತ್ತಿರುವ ವಿವಾಹ ವಿಚ್ಛೇದದ ಪ್ರಮಾಣಗಳು, [ಮತ್ತು] ಹೆಚ್ಚು ಚಿಕ್ಕದಾದ ಮನೆವಾರ್ತೆಗಳಂತಹ ಪ್ರವೃತ್ತಿಗಳು . . . ಲೋಕವ್ಯಾಪಕವಾಗಿ ಸಂಭವಿಸುತ್ತಿವೆ.” ಇಂತಹ ಪ್ರವೃತ್ತಿಗಳ ಕಾರಣ, ಲಕ್ಷಾಂತರ ಕುಟುಂಬಗಳಲ್ಲಿ ಸ್ಥಿರತೆ, ಶಾಂತಿ, ಮತ್ತು ಸಂತೋಷದ ಕೊರೆತೆಯಿದೆ, ಮತ್ತು ಅನೇಕ ಕುಟುಂಬಗಳು ಒಡೆದುಹೋಗುತ್ತಿವೆ. ಸ್ಪೇನಿನಲ್ಲಿ 20ನೆಯ ಶತಮಾನದ ಕೊನೆಯ ದಶಕದ ಆರಂಭದೊಳಗಾಗಿ ವಿವಾಹ ವಿಚ್ಛೇದದ ಪ್ರಮಾಣವು 8 ವಿವಾಹಗಳಲ್ಲಿ ಒಂದಕ್ಕೆ ಏರಿತು—ಕೇವಲ 25 ವರ್ಷಗಳ ಹಿಂದೆ 100 ವಿವಾಹಗಳಲ್ಲಿ ಒಂದು ವಿಚ್ಛೇದದ ಪ್ರಮಾಣಕ್ಕೆ ಹೋಲಿಸುವಾಗ ಹಠಾತ್ ಹೆಚ್ಚಳ. ಯೂರೋಪ್ನಲ್ಲಿ ಅತ್ಯಂತ ಉನ್ನತವಾದ ವಿವಾಹ ವಿಚ್ಛೇದದ ಪ್ರಮಾಣಗಳು ಇಂಗ್ಲೆಂಡ್ನಲ್ಲಿರುವುದಾಗಿ ವರದಿಸಲಾಗಿದೆ—10 ವಿವಾಹಗಳಲ್ಲಿ 4 ವಿಫಲಗೊಳ್ಳುತ್ತವೆ. ಆ ದೇಶವು ಒಂಟಿ ಹೆತ್ತವರ ಕುಟುಂಬಗಳ ಸಂಖ್ಯೆಯಲ್ಲಿಯೂ ಅಭಿವೃದ್ಧಿಯನ್ನು ಕಂಡಿದೆ.
5 ಕೆಲವು ಜನರು ವಿವಾಹ ವಿಚ್ಛೇದ ಮಾಡಿಕೊಳ್ಳಲು ಬಹಳ ಆತುರದಿಂದಿರುವಂತೆ ತೋರುತ್ತದೆ. ಅನೇಕರು ಜಪಾನಿನ ಟೋಕ್ಯೊ ಹತ್ತಿರವಿರುವ “ಸಂಬಂಧ ಕಡಿದುಹಾಕುವ ಮಂದಿರ”ಕ್ಕೆ ನುಗ್ಗುತ್ತಾರೆ. ಈ ಶಿಂಟೊ ದೇವಾಲಯವು ವಿವಾಹ ವಿಚ್ಛೇದ ಹಾಗೂ ಇತರ ಅನಪೇಕ್ಷಿತ ಸಂಬಂಧಗಳ ಮುರಿಯುವಿಕೆಗಾಗಿರುವ ಬಿನ್ನಹಗಳನ್ನು ಸ್ವೀಕರಿಸುತ್ತದೆ. ಪ್ರತಿಯೊಬ್ಬ ಆರಾಧಕನು, ಅವನ ಅಥವಾ ಅವಳ ಬಿನ್ನಹವನ್ನು ಒಂದು ತೆಳುವಾದ ಮರದ ಹಲಗೆಯ ಮೇಲೆ ಬರೆದು, ಅದನ್ನು ಮಂದಿರದ ಆವರಣಗಳಲ್ಲಿ ತೂಗುಹಾಕಿ, ಉತ್ತರಕ್ಕಾಗಿ ಪ್ರಾರ್ಥಿಸುತ್ತಾನೆ. ಟೋಕ್ಯೊದ ಒಂದು ವಾರ್ತಾಪತ್ರಿಕೆಯು ಹೇಳುವುದೇನೆಂದರೆ, ಮಂದಿರವನ್ನು ಸುಮಾರು ಒಂದು ಶತಮಾನದಷ್ಟು ಹಿಂದೆ ಸ್ಥಾಪಿಸಲಾದಾಗ, “ಸ್ಥಳೀಯ ಶ್ರೀಮಂತ ವ್ಯಾಪಾರಿಗಳ ಪತ್ನಿಯರು, ತಮ್ಮ ಗಂಡಂದಿರು ಅವರ ಪ್ರೇಯಸಿಯರನ್ನು ಬಿಟ್ಟು ತಮ್ಮ ಕಡೆಗೆ ಹಿಂದಿರುಗುವಂತೆ ಕೇಳಿಕೊಳ್ಳುವ ಪ್ರಾರ್ಥನೆಗಳನ್ನು ಬರೆದರು.” ಆದರೆ ಇಂದು ಹೆಚ್ಚಿನ ಬಿನ್ನಹಗಳು ಸಂಧಾನಕ್ಕಾಗಿ ಅಲ್ಲ, ವಿವಾಹ ವಿಚ್ಛೇದಕ್ಕಾಗಿ ಇರುತ್ತವೆ. ನಿಸ್ಸಂದೇಹವಾಗಿ ಲೋಕದಾದ್ಯಂತ ಕುಟುಂಬ ಜೀವನವು ಗಂಡಾಂತರಕ್ಕೊಳಗಾಗಿದೆ. ಇದು ಕ್ರೈಸ್ತರನ್ನು ಆಶ್ಚರ್ಯಗೊಳಿಸಬೇಕೊ? ಇಲ್ಲ, ಏಕೆಂದರೆ ಪ್ರಚಲಿತ ಕುಟುಂಬ ಬಿಕ್ಕಟ್ಟಿನ ವಿಷಯವಾಗಿ ಬೈಬಲ್ ನಮಗೆ ಒಳನೋಟ ನೀಡುತ್ತದೆ.
ಕುಟುಂಬ ಬಿಕ್ಕಟ್ಟು ಏಕೆ?
6. ಇಂದಿನ ಕುಟುಂಬ ಬಿಕ್ಕಟ್ಟಿನ ಮೇಲೆ 1 ಯೋಹಾನ 5:19 ಯಾವ ಪ್ರಭಾವವನ್ನು ಬೀರುತ್ತದೆ?
6 ಇಂದಿನ ಕುಟುಂಬ ಬಿಕ್ಕಟ್ಟಿಗಾಗಿರುವ ಒಂದು ಕಾರಣವು ಇದಾಗಿದೆ: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ದುಷ್ಟ ವ್ಯಕ್ತಿ, ಪಿಶಾಚನಾದ ಸೈತಾನನಿಂದ ನಾವು ಏನನ್ನು ಅಪೇಕ್ಷಿಸಬಲ್ಲೆವು? ಅವನೊಬ್ಬ ದುಷ್ಟ, ಅನೈತಿಕ ಸುಳ್ಳುಗಾರನು. (ಯೋಹಾನ 8:44) ಅವನ ಲೋಕವು, ಕುಟುಂಬ ಜೀವನಕ್ಕೆ ಬಹಳಷ್ಟು ವಿಧ್ವಂಸಕವಾಗಿರುವ ವಂಚನೆ ಹಾಗೂ ಅನೈತಿಕತೆಯಲ್ಲಿ ಓಲಾಡುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ! ದೇವರ ಸಂಸ್ಥೆಯ ಹೊರಗೆ, ಸೈತಾನ ಸಂಬಂಧಿತ ಪ್ರಭಾವವು ಯೆಹೋವನು ಸ್ಥಾಪಿಸಿದ ವಿವಾಹ ಪದ್ಧತಿಯನ್ನು ನಾಶಗೊಳಿಸುವ ಮತ್ತು ಶಾಂತಿಭರಿತ ಕುಟುಂಬ ಜೀವನಕ್ಕೆ ಅಂತ್ಯವನ್ನು ತರುವ ಬೆದರಿಕೆಯನ್ನು ಹಾಕುತ್ತದೆ.
7. ಈ ಕಡೇ ದಿವಸಗಳಲ್ಲಿ ಅನೇಕ ಜನರು ಪ್ರದರ್ಶಿಸುವ ಗುಣಗಳಿಂದ ಕುಟುಂಬಗಳು ಹೇಗೆ ಬಾಧಿಸಲ್ಪಡಸಾಧ್ಯವಿದೆ?
7 ಈಗ ಮಾನವಜಾತಿಯನ್ನು ಬಾಧಿಸುತ್ತಿರುವ ಕುಟುಂಬ ಸಮಸ್ಯೆಗಳಿಗಾಗಿರುವ ಮತ್ತೊಂದು ಕಾರಣವು, 2 ತಿಮೊಥೆಯ 3:1-5ರಲ್ಲಿ ಸೂಚಿಸಲ್ಪಟ್ಟಿದೆ. ಅಲ್ಲಿ ದಾಖಲಿಸಲ್ಪಟ್ಟ ಪೌಲನ ಪ್ರವಾದನಾತ್ಮಕ ಮಾತುಗಳು, ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದನ್ನು ತೋರಿಸುತ್ತವೆ. ಕುಟುಂಬಗಳ ಸದಸ್ಯರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ” ಆಗಿರುವಲ್ಲಿ, ಕುಟುಂಬಗಳು ಶಾಂತಿಯಿಂದಿರಸಾಧ್ಯವಿಲ್ಲ. ಕುಟುಂಬದ ಒಬ್ಬ ಸದಸ್ಯನಲ್ಲಿಯೂ ಸ್ವಾಭಾವಿಕ ಮಮತೆಯ ಕೊರತೆಯಿರುವಲ್ಲಿ ಇಲ್ಲವೆ ಅವನು ನಿಷ್ಠಾದ್ರೋಹಿಯಾಗಿರುವಲ್ಲಿ ಆ ಕುಟುಂಬವು ಸಂಪೂರ್ಣವಾಗಿ ಸಂತೋಷದಿಂದಿರಸಾಧ್ಯವಿಲ್ಲ. ಮನೆವಾರ್ತೆಯಲ್ಲಿ ಒಬ್ಬನು ಉಗ್ರವಾಗಿದ್ದು, ಯಾವುದೇ ಒಪ್ಪಂದಕ್ಕೆ ಸಮ್ಮತಿಸದಿದ್ದರೆ, ಕುಟುಂಬ ಜೀವನವು ಎಷ್ಟು ಶಾಂತಿಭರಿತವಾಗಿರಸಾಧ್ಯ? ಇನ್ನೂ ಕೆಟ್ಟದಾಗಿ, ಕುಟುಂಬದ ಸದಸ್ಯರು ದೇವರನ್ನು ಪ್ರೀತಿಸುವವರಾಗಿರುವುದಕ್ಕಿಂತ ಸುಖಭೋಗಗಳನ್ನು ಪ್ರೀತಿಸುವವರಾಗಿರುವಾಗ ಶಾಂತಿ ಮತ್ತು ಸಂತೋಷ ಹೇಗೆ ಇರಸಾಧ್ಯ? ಇವು ಸೈತಾನನಿಂದ ಆಳಲ್ಪಡುವ ಈ ಲೋಕದಲ್ಲಿರುವ ಜನರ ಗುಣಲಕ್ಷಣಗಳು. ಈ ಕಡೇ ದಿವಸಗಳಲ್ಲಿ ಕುಟುಂಬ ಸಂತೋಷವು ಹಿಡಿತಕ್ಕೆ ಸಿಗದ ವಿಷಯವಾಗಿರುವುದು ಆಶ್ಚರ್ಯಕರವಲ್ಲ!
8, 9. ಕುಟುಂಬ ಸಂತೋಷದ ಮೇಲೆ ಮಕ್ಕಳ ವರ್ತನೆಯು ಯಾವ ಪರಿಣಾಮವನ್ನು ಬೀರಬಲ್ಲದು?
8 ಅನೇಕ ಕುಟುಂಬಗಳಲ್ಲಿ ಶಾಂತಿ ಮತ್ತು ಸಂತೋಷದ ಕೊರತೆಯಿರುವುದಕ್ಕೆ ಮತ್ತೊಂದು ಕಾರಣವು, ಮಕ್ಕಳ ಕೆಟ್ಟ ನಡತೆಯಾಗಿದೆ. ಕಡೇ ದಿವಸಗಳಲ್ಲಿನ ಪರಿಸ್ಥಿತಿಗಳ ಕುರಿತಾಗಿ ಪೌಲನು ಮುಂತಿಳಿಸಿದಾಗ, ಅನೇಕ ಮಕ್ಕಳು ಹೆತ್ತವರಿಗೆ ಅವಿಧೇಯರಾಗಿರುವರೆಂದು ಅವನು ಪ್ರವಾದಿಸಿದನು. ನೀವು ಒಬ್ಬ ಯುವ ವ್ಯಕ್ತಿಯಾಗಿರುವಲ್ಲಿ, ನಿಮ್ಮ ವರ್ತನೆಯು ನಿಮ್ಮ ಕುಟುಂಬವನ್ನು ಶಾಂತಿಭರಿತವೂ ಸಂತೋಷಿತವೂ ಆಗಿರಲು ಸಹಾಯ ಮಾಡುತ್ತದೊ?
9 ಕೆಲವು ಮಕ್ಕಳು ವರ್ತನೆಯಲ್ಲಿ ಆದರ್ಶಪ್ರಾಯರಾಗಿರುವುದಿಲ್ಲ. ದೃಷ್ಟಾಂತಕ್ಕೆ, ಒಬ್ಬ ಎಳೆಯ ಹುಡುಗನು ತನ್ನ ತಂದೆಗೆ ಈ ಆಕ್ಷೇಪಣೀಯ ಪತ್ರವನ್ನು ಬರೆದನು: “ನೀವು ನನ್ನನ್ನು ಅಲೆಗ್ಸಾಂಡ್ರಿಯಕ್ಕೆ ಕರೆದುಕೊಂಡು ಹೋಗದಿದ್ದಲ್ಲಿ, ನಾನು ನಿಮಗೆ ಪತ್ರವನ್ನು ಬರೆಯೆನು, ನಿಮ್ಮೊಂದಿಗೆ ಮಾತಾಡೆನು, ಇಲ್ಲವೆ ನಿಮಗೆ ವಿದಾಯ ಹೇಳೆನು, ಮತ್ತು ನೀವು ಅಲೆಗ್ಸಾಂಡ್ರಿಯಕ್ಕೆ ಹೋಗುವುದಾದರೆ ನಾನು ನಿಮ್ಮ ಕೈಯನ್ನು ಹಿಡಿಯೆನು ಇಲ್ಲವೆ ನಿಮ್ಮನ್ನು ಎಂದಿಗೂ ವಂದಿಸೆನು. ನೀವು ನನ್ನನ್ನು ಕರೆದುಕೊಂಡು ಹೋಗದಿದ್ದಲ್ಲಿ ಸಂಭವಿಸುವುದು ಇದೇ . . . ಆದರೆ ನನಗೊಂದು [ಹಾರ್ಪ್ವಾದ್ಯ] ಕಳುಹಿಸಿಕೊಡಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಕಳುಹಿಸಿಕೊಡದಿದ್ದಲ್ಲಿ, ನಾನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸೆನು. ಗೊತ್ತಾಯಿತಲ್ಲ!” ಅದೊಂದು ಆಧುನಿಕ ದಿನದ ಸನ್ನಿವೇಶದಂತೆ ಧ್ವನಿಸುತ್ತದೊ? ಒಬ್ಬ ಹುಡುಗನಿಂದ ತನ್ನ ತಂದೆಗೆ ಕಳುಹಿಸಲ್ಪಟ್ಟ ಆ ಪತ್ರವು ಪ್ರಾಚೀನ ಐಗುಪ್ತದಲ್ಲಿ 2,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಬರೆಯಲ್ಪಟ್ಟಿತ್ತು.
10. ತಮ್ಮ ಕುಟುಂಬಗಳು ದೈವಿಕ ಶಾಂತಿಯನ್ನು ಬೆನ್ನಟ್ಟುವಂತೆ ಎಳೆಯರು ಹೇಗೆ ಸಹಾಯ ಮಾಡಬಲ್ಲರು?
10 ಐಗುಪ್ತದ ಆ ಯೌವನಸ್ಥನ ಮನೋಭಾವವು ಕುಟುಂಬ ಶಾಂತಿಯನ್ನು ಪ್ರವರ್ಧಿಸಲಿಲ್ಲ. ನಿಶ್ಚಯವಾಗಿಯೂ ಈ ಕಡೇ ದಿವಸಗಳಲ್ಲಿ ಹೆಚ್ಚು ಗಂಭೀರವಾದ ಸಂಗತಿಗಳು ಕುಟುಂಬಗಳೊಳಗೆ ಸಂಭವಿಸುತ್ತವೆ. ಆದರೂ ನಿಮ್ಮ ಕುಟುಂಬವು ದೈವಿಕ ಶಾಂತಿಯನ್ನು ಬೆನ್ನಟ್ಟುವಂತೆ ಎಳೆಯರಾದ ನೀವು ಸಹಾಯ ಮಾಡಬಲ್ಲಿರಿ. ಹೇಗೆ? ಬೈಬಲಿನ ಈ ಸಲಹೆಗೆ ವಿಧೇಯರಾಗುವ ಮೂಲಕ: “ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.”—ಕೊಲೊಸ್ಸೆ 3:20.
11. ತಮ್ಮ ಮಕ್ಕಳು ಯೆಹೋವನ ನಂಬಿಗಸ್ತ ಸೇವಕರಾಗುವಂತೆ ಹೆತ್ತವರು ಹೇಗೆ ಸಹಾಯ ಮಾಡಬಲ್ಲರು?
11 ಹೆತ್ತವರಾದ ನಿಮ್ಮ ಕುರಿತೇನು? ಯೆಹೋವನ ನಂಬಿಗಸ್ತ ಸೇವಕರಾಗುವಂತೆ ನಿಮ್ಮ ಮಕ್ಕಳಿಗೆ ಪ್ರೀತಿಪೂರ್ವಕವಾಗಿ ಸಹಾಯ ಮಾಡಿರಿ. “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು” ಎಂಬುದಾಗಿ ಜ್ಞಾನೋಕ್ತಿ 22:6 ಹೇಳುತ್ತದೆ. ಉತ್ತಮವಾದ ಶಾಸ್ತ್ರೀಯ ಬೋಧನೆ ಮತ್ತು ಹೆತ್ತವರ ಒಳ್ಳೆಯ ಮಾದರಿಗಳಿಂದ ಅನೇಕ ಹುಡುಗಹುಡುಗಿಯರು, ತಾವು ದೊಡ್ಡವರಾಗಿ ಬೆಳೆದಾಗ ಯೋಗ್ಯವಾದ ಮಾರ್ಗದಿಂದ ಪಕ್ಕಕ್ಕೆ ಸರಿಯುವುದಿಲ್ಲ. ಆದರೆ ಹೆಚ್ಚಿನ ವಿಷಯವು ಬೈಬಲ್ ತರಬೇತಿಯ ಗುಣಮಟ್ಟ ಹಾಗೂ ವಿಸ್ತಾರದ ಮೇಲೆ ಮತ್ತು ಎಳೆಯ ವ್ಯಕ್ತಿಯ ಹೃದಯದ ಮೇಲೆ ಅವಲಂಬಿಸುತ್ತದೆ.
12. ಕ್ರೈಸ್ತ ಮನೆಯೊಂದು ಶಾಂತಿಭರಿತವಾಗಿರಬೇಕು ಏಕೆ?
12 ನಮ್ಮ ಕುಟುಂಬದ ಎಲ್ಲ ಸದಸ್ಯರು ಯೆಹೋವನ ಚಿತ್ತವನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ನಾವು ದೈವಿಕ ಶಾಂತಿಯನ್ನು ಅನುಭವಿಸುತ್ತಿರಬೇಕು. ಕ್ರೈಸ್ತ ಮನೆಯೊಂದು ‘ಶಾಂತಿಯ ಮಿತ್ರ’ರಿಂದ (NW) ತುಂಬಿರಬೇಕು. ಯೇಸು 70 ಶಿಷ್ಯರನ್ನು ಶುಶ್ರೂಷಕರಂತೆ ಕಳುಹಿಸಿ, “ನೀವು ಯಾವ ಮನೆಯೊಳಗೆ ಹೋದರೂ—ಈ ಮನೆಗೆ ಶುಭವಾಗಲಿ ಎಂದು ಮೊದಲು ಹೇಳಿರಿ. ಆಶೀರ್ವಾದಪಾತ್ರನು [“ಶಾಂತಿಯ ಮಿತ್ರನು,” NW] ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು [“ಶಾಂತಿಯು,” NW] ಅವನ ಮೇಲೆ ನಿಲ್ಲುವದು,” ಎಂದು ಅವರಿಗೆ ಹೇಳಿದಾಗ, ಅವನ ಮನಸ್ಸಿನಲ್ಲಿ ಇಂತಹ ಜನರಿದ್ದರೆಂದು ಲೂಕ 10:1-6 ತೋರಿಸುತ್ತದೆ. ಯೆಹೋವನ ಸೇವಕರು ಶಾಂತಿಭರಿತವಾಗಿ ಮನೆಯಿಂದ ಮನೆಗೆ “ಶಾಂತಿಯ ಸುವಾರ್ತೆ”ಯೊಂದಿಗೆ ಹೋಗುವಾಗ, ಅವರು ಶಾಂತಿಯ ಮಿತ್ರರಿಗಾಗಿ ಹುಡುಕುತ್ತಾರೆ. (ಅ. ಕೃತ್ಯಗಳು 10:34-36; ಎಫೆಸ 2:13-18) ನಿಶ್ಚಯವಾಗಿಯೂ, ಶಾಂತಿಯ ಮಿತ್ರರಿಂದ ರಚಿಸಲ್ಪಟ್ಟ ಒಂದು ಕ್ರೈಸ್ತ ಮನೆವಾರ್ತೆಯು ಶಾಂತಿಭರಿತವಾಗಿರಬೇಕು.
13, 14. (ಎ) ರೂತ್ ಮತ್ತು ಒರ್ಫಾರಿಗಾಗಿ ನೊವೊಮಿ ಏನನ್ನು ಬಯಸಿದಳು? (ಬಿ) ಕ್ರೈಸ್ತ ಮನೆಯೊಂದು ಯಾವ ರೀತಿಯ ಆಶ್ರಯಸ್ಥಳವಾಗಿರಬೇಕು?
13 ಮನೆಯೊಂದು ಶಾಂತಿ ಮತ್ತು ನಿಶ್ಚಿಂತೆಯ ಸ್ಥಳವಾಗಿರಬೇಕು. ದೇವರು ತನ್ನ ಯುವ ಸೊಸೆಗಳಾದ ರೂತ್ ಮತ್ತು ಒರ್ಫಾರಿಗೆ, ಒಬ್ಬ ಒಳ್ಳೆಯ ಗಂಡ ಮತ್ತು ಮನೆಯನ್ನು ಪಡೆದಿರುವುದರಿಂದ ಬರುವ ನಿಶ್ಚಿಂತೆ ಮತ್ತು ಸುಖವನ್ನು ದಯಪಾಲಿಸಲೆಂದು ವೃದ್ಧ ವಿಧವೆ ನೊವೊಮಿ ಆಶಿಸಿದಳು. ನೊವೊಮಿ ಹೇಳಿದ್ದು: “ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು ಅನುಗ್ರಹಿಸಲಿ.” (ರೂತಳು 1:9) ನೊವೊಮಿಯ ಬಯಕೆಯ ಕುರಿತು ಒಬ್ಬ ಪಂಡಿತನು ಬರೆದದ್ದೇನೆಂದರೆ, ಅಂತಹ ಮನೆಗಳಲ್ಲಿ ರೂತ್ ಮತ್ತು ಒರ್ಫಾ “ಅಶಾಂತಿ ಮತ್ತು ಕಳವಳದಿಂದ ಬಿಡುಗಡೆಯನ್ನು ಕಂಡುಕೊಳ್ಳುವರು. ಅವರು ವಿಶ್ರಾಂತಿಯನ್ನು ಕಂಡುಕೊಳ್ಳುವರು. ಅವರು ಉಳಿಯ ಸಾಧ್ಯವಿದ್ದ ಸ್ಥಳವು ಅದಾಗಿದ್ದು, ಅಲ್ಲಿ ಅವರ ಅತಿ ಕೋಮಲವಾದ ಅನಿಸಿಕೆಗಳು ಮತ್ತು ಅತಿ ಗೌರವಾರ್ಹವಾದ ಬಯಕೆಗಳು ಈಡೇರುವವು ಮತ್ತು ಅವರು ಆರಾಮವನ್ನು ಕಂಡುಕೊಳ್ಳುವರು. ಹೀಬ್ರುವಿನ ವಿಶಿಷ್ಟವಾದ ತೀವ್ರತೆಯು . . . [ಯೆಶಾಯ 32:17, 18]ರಲ್ಲಿರುವ ಸಂಬಂಧಿತ ಅಭಿವ್ಯಕ್ತಿಗಳ ಸ್ವರೂಪದಿಂದ ಉತ್ತಮವಾಗಿ ಪ್ರದರ್ಶಿಸಲ್ಪಟ್ಟಿದೆ.”
14 ಯೆಶಾಯ 32:17, 18ಕ್ಕಿರುವ ಈ ಉಲ್ಲೇಖವನ್ನು ದಯವಿಟ್ಟು ಗಮನಿಸಿರಿ. ಅಲ್ಲಿ ನಾವು ಓದುವುದು: “ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು. ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” ಕ್ರೈಸ್ತ ಮನೆಯೊಂದು ನೀತಿಯ, ಶಾಂತತೆಯ, ಭದ್ರತೆಯ, ಮತ್ತು ದೈವಿಕ ಶಾಂತಿಯ ಆಶ್ರಯಸ್ಥಾನವಾಗಿರಬೇಕು. ಆದರೆ ಸಂಕಷ್ಟಗಳು, ಭಿನ್ನತೆಗಳು, ಇಲ್ಲವೆ ಇತರ ಸಮಸ್ಯೆಗಳು ಏಳುವುದಾದರೆ ಆಗೇನು? ಆಗ ನಮಗೆ ವಿಶೇಷವಾಗಿ ಕುಟುಂಬ ಸಂತೋಷದ ರಹಸ್ಯ ತಿಳಿದಿರುವ ಅಗತ್ಯವಿರುತ್ತದೆ.
ನಾಲ್ಕು ಅತ್ಯಾವಶ್ಯಕ ಮೂಲತತ್ವಗಳು
15. ಕುಟುಂಬ ಸಂತೋಷದ ರಹಸ್ಯವನ್ನು ನೀವು ಹೇಗೆ ವಿಶದೀಕರಿಸುವಿರಿ?
15 ಭೂಮಿಯ ಮೇಲಿರುವ ಪ್ರತಿಯೊಂದು ಕುಟುಂಬವು ಅದರ ಹೆಸರಿಗಾಗಿ, ಕುಟುಂಬಗಳ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಋಣಿಯಾಗಿದೆ. (ಎಫೆಸ 3:14, 15) ಆದುದರಿಂದ ಕುಟುಂಬ ಸಂತೋಷವನ್ನು ಅನುಭವಿಸಬಯಸುವವರು ಆತನ ಮಾರ್ಗದರ್ಶನವನ್ನು ಕೋರಿ, ಕೀರ್ತನೆಗಾರನು ಮಾಡಿದಂತೆ ಆತನನ್ನು ಸ್ತುತಿಸಬೇಕು: “ಭೂಜನಾಂಗಗಳೇ [“ಜನಾಂಗಗಳ ಕುಟುಂಬಗಳೇ,” NW] ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.” (ಕೀರ್ತನೆ 96:7) ಕುಟುಂಬ ಸಂತೋಷದ ರಹಸ್ಯವು ದೇವರ ವಾಕ್ಯವಾದ ಬೈಬಲಿನ ಪುಟಗಳಲ್ಲಿ ಮತ್ತು ಅದರ ಮೂಲತತ್ವಗಳ ಅನ್ವಯದಲ್ಲಿ ಅಡಕವಾಗಿದೆ. ಈ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವ ಕುಟುಂಬವು ಸಂತೋಷವಾಗಿರುವುದು ಮತ್ತು ದೈವಿಕ ಶಾಂತಿಯನ್ನು ಅನುಭವಿಸುವುದು. ಆದುದರಿಂದ ಈ ಪ್ರಾಮುಖ್ಯವಾದ ಮೂಲತತ್ವಗಳಲ್ಲಿ ನಾಲ್ಕನ್ನು ನಾವು ಪರಿಶೀಲಿಸೋಣ.
16. ಕುಟುಂಬ ಜೀವನದಲ್ಲಿ ಆತ್ಮಸಂಯಮವು ಯಾವ ಪಾತ್ರವನ್ನು ವಹಿಸಬೇಕು?
16 ಈ ಮೂಲತತ್ವಗಳಲ್ಲಿ ಒಂದು ಇದರ ಮೇಲೆ ಕೇಂದ್ರೀಕರಿಸುತ್ತದೆ: ಆತ್ಮಸಂಯಮವು ಕುಟುಂಬ ಜೀವನದಲ್ಲಿನ ದೈವಿಕ ಶಾಂತಿಗೆ ಅತ್ಯಾವಶ್ಯಕವಾಗಿದೆ. ರಾಜ ಸೊಲೊಮೋನನು ಹೇಳಿದ್ದು: “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 25:28) ಒಂದು ಶಾಂತಿಭರಿತ ಹಾಗೂ ಸಂತೋಷದ ಕುಟುಂಬವನ್ನು ಪಡೆದಿರಲು ನಾವು ಬಯಸುವುದಾದರೆ, ನಮ್ಮ ಆತ್ಮವನ್ನು ತಡೆಯುವುದು—ಆತ್ಮಸಂಯಮವನ್ನು ಪ್ರಯೋಗಿಸುವುದು—ಅತ್ಯಾವಶ್ಯಕ. ನಾವು ಅಪರಿಪೂರ್ಣರಾಗಿರುವುದಾದರೂ, ದೇವರ ಪವಿತ್ರಾತ್ಮದ ಫಲವಾಗಿರುವ ಆತ್ಮಸಂಯಮವನ್ನು ಪ್ರಯೋಗಿಸುವ ಅಗತ್ಯವಿದೆ. (ರೋಮಾಪುರ 7:21, 22; ಗಲಾತ್ಯ 5:22, 23) ಈ ಗುಣಕ್ಕಾಗಿ ನಾವು ಪ್ರಾರ್ಥಿಸುವುದಾದರೆ, ಅದರ ಬಗ್ಗೆ ಇರುವ ಬೈಬಲಿನ ಸಲಹೆಯನ್ನು ಅನ್ವಯಿಸುವುದಾದರೆ, ಮತ್ತು ಅದನ್ನು ಪ್ರದರ್ಶಿಸುವ ಇತರರೊಂದಿಗೆ ಸಹವಸಿಸುವುದಾದರೆ, ಆತ್ಮವು ನಮ್ಮಲ್ಲಿ ಆತ್ಮಸಂಯಮವನ್ನು ಉತ್ಪಾದಿಸುವುದು. ಈ ಕ್ರಮವು “ಜಾರತ್ವಕ್ಕೆ ದೂರವಾಗಿ ಓಡಿ”ಹೋಗುವಂತೆ ನಮಗೆ ಸಹಾಯ ಮಾಡುವುದು. (1 ಕೊರಿಂಥ 6:18) ಹಿಂಸಾಚಾರವನ್ನು ತಿರಸ್ಕರಿಸಲು, ಮದ್ಯರೋಗಾವಸ್ಥೆಯನ್ನು ದೂರವಿರಿಸಲು ಇಲ್ಲವೆ ಜಯಿಸಲು, ಮತ್ತು ಕಷ್ಟಕರ ಸನ್ನಿವೇಶಗಳೊಂದಿಗೆ ಹೆಚ್ಚು ಶಾಂತವಾಗಿ ವ್ಯವಹರಿಸುವಂತೆಯೂ ಆತ್ಮಸಂಯಮವು ನಮಗೆ ಸಹಾಯ ಮಾಡುವುದು.
17, 18. (ಎ) 1 ಕೊರಿಂಥ 11:3 ಕ್ರೈಸ್ತ ಕುಟುಂಬ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ? (ಬಿ) ತಲೆತನದ ಅಂಗೀಕಾರವು, ಒಂದು ಕುಟುಂಬದಲ್ಲಿ ದೈವಿಕ ಶಾಂತಿಯನ್ನು ಹೇಗೆ ಪ್ರವರ್ಧಿಸುತ್ತದೆ?
17 ಮತ್ತೊಂದು ಆವಶ್ಯಕ ಮೂಲತತ್ವವನ್ನು ಈ ರೀತಿಯಲ್ಲಿ ಹೇಳಸಾಧ್ಯವಿದೆ: ತಲೆತನದ ಅಂಗೀಕಾರವು ನಮ್ಮ ಕುಟುಂಬಗಳಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟುವಂತೆ ನಮಗೆ ಸಹಾಯ ಮಾಡುವುದು. ಪೌಲನು ಬರೆದುದು: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಇದರ ಅರ್ಥವೇನೆಂದರೆ, ಕುಟುಂಬದಲ್ಲಿ ಪುರುಷನು ನಾಯಕತ್ವವನ್ನು ವಹಿಸುತ್ತಾನೆ, ಅವನ ಹೆಂಡತಿಯು ನಿಷ್ಠಾವಂತಳಾಗಿ ಅದನ್ನು ಬೆಂಬಲಿಸುತ್ತಾಳೆ, ಮತ್ತು ಮಕ್ಕಳು ವಿಧೇಯರಾಗಿರುತ್ತಾರೆ. (ಎಫೆಸ 5:22-25, 28-33; 6:1-4) ಅಂತಹ ನಡತೆಯು ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಪ್ರವರ್ಧಿಸುವುದು.
18 ಶಾಸ್ತ್ರೀಯ ತಲೆತನವು ನಿರಂಕುಶಾಧಿಕಾರವಲ್ಲವೆಂದು ಒಬ್ಬ ಕ್ರೈಸ್ತ ಗಂಡನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ತನ್ನ ತಲೆಯಾದ ಯೇಸುವನ್ನು ಅವನು ಅನುಕರಿಸಬೇಕು. ಯೇಸು ‘ಎಲ್ಲಾದರ ಮೇಲೆ ಶಿರಸ್ಸಾಗಿರ’ಬೇಕಾಗಿದ್ದರೂ, ಅವನು “ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೆ” ಬಂದನು. (ಎಫೆಸ 1:22; ಮತ್ತಾಯ 20:28) ತದ್ರೀತಿಯಲ್ಲಿ, ಒಬ್ಬ ಕ್ರೈಸ್ತ ಪುರುಷನು, ತನ್ನ ಕುಟುಂಬದ ಆಸಕ್ತಿಗಳ ಒಳ್ಳೆಯ ಪರಾಮರಿಕೆ ಮಾಡಶಕ್ತನಾಗುವಂತೆ ಒಂದು ಪ್ರೀತಿಪೂರ್ವಕವಾದ ವಿಧದಲ್ಲಿ ತಲೆತನವನ್ನು ಪ್ರಯೋಗಿಸುತ್ತಾನೆ. ಮತ್ತು ನಿಶ್ಚಯವಾಗಿಯೂ ಒಬ್ಬ ಕ್ರೈಸ್ತ ಹೆಂಡತಿಯು ತನ್ನ ಗಂಡನೊಂದಿಗೆ ಸಹಕರಿಸಲು ಬಯಸುತ್ತಾಳೆ. ಅವನ “ಸಹಾಯಕಿ” ಮತ್ತು “ಪರಿಪೂರಕ”ಳೋಪಾದಿ ತನ್ನ ಗಂಡನಲ್ಲಿರದ ಗುಣಗಳನ್ನು ಒದಗಿಸುತ್ತಾ, ಬೇಕಾದ ಬೆಂಬಲವನ್ನು ಅವಳು ನೀಡುತ್ತಾಳೆ. (ಆದಿಕಾಂಡ 2:20; ಜ್ಞಾನೋಕ್ತಿ 31:10-31) ತಲೆತನದ ಯೋಗ್ಯವಾದ ಪ್ರಯೋಗವು, ಗಂಡಹೆಂಡಿರು ಒಬ್ಬರನ್ನೊಬ್ಬರು ಗೌರವದಿಂದ ಉಪಚರಿಸುವಂತೆ ಸಹಾಯ ಮಾಡುತ್ತದೆ ಮತ್ತು ಮಕ್ಕಳು ವಿಧೇಯರಾಗಿರುವಂತೆ ಪ್ರೇರಿಸುತ್ತದೆ. ಹೌದು, ತಲೆತನದ ಅಂಗೀಕಾರವು ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಪ್ರವರ್ಧಿಸುತ್ತದೆ.
19. ಕುಟುಂಬ ಶಾಂತಿ ಮತ್ತು ಸಂತೋಷಕ್ಕೆ ಒಳ್ಳೆಯ ಸಂವಾದವು ಏಕೆ ಆವಶ್ಯಕ?
19 ಮೂರನೆಯ ಪ್ರಾಮುಖ್ಯ ಮೂಲತತ್ವವನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಸಾಧ್ಯವಿದೆ: ಕುಟುಂಬ ಶಾಂತಿ ಮತ್ತು ಸಂತೋಷಕ್ಕಾಗಿ ಒಳ್ಳೆಯ ಸಂವಾದವು ಅತ್ಯಾವಶ್ಯಕ. ಯಾಕೋಬ 1:19 ನಮಗೆ ಹೇಳುವುದು: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” ಕುಟುಂಬದ ಸದಸ್ಯರು ಪರಸ್ಪರ ಕಿವಿಗೊಡುವ ಮತ್ತು ಮಾತಾಡುವ ಅಗತ್ಯವಿದೆ ಏಕೆಂದರೆ ಕುಟುಂಬ ಸಂವಾದವು ದ್ವಿಮಾರ್ಗದ ರಸ್ತೆಯಾಗಿದೆ. ನಾವು ಹೇಳುವಂತಹ ವಿಷಯವು ಸತ್ಯವಾಗಿರುವಾಗಲೂ, ಅದನ್ನು ಕ್ರೂರವಾಗಿ, ಗರ್ವದಿಂದ, ಇಲ್ಲವೆ ಅಸಂವೇದಿಯ ವಿಧಾನದಲ್ಲಿ ಹೇಳುವುದಾದರೆ ಅದು ಒಳಿತಿಗಿಂತ ಹೆಚ್ಚಿನ ಹಾನಿಯನ್ನೇ ಮಾಡಬಹುದು. ನಮ್ಮ ನುಡಿ ರುಚಿಕರವಾಗಿ, “ರಸವತ್ತಾಗಿಯೂ” ಇರಬೇಕು. (ಕೊಲೊಸ್ಸೆ 4:6) ಶಾಸ್ತ್ರೀಯ ಮೂಲತತ್ವಗಳನ್ನು ಅನುಸರಿಸಿ, ಚೆನ್ನಾಗಿ ಸಂವಾದ ಮಾಡುವ ಕುಟುಂಬಗಳು ದೈವಿಕ ಶಾಂತಿಯನ್ನು ಬೆನ್ನಟ್ಟುತ್ತಿವೆ.
20. ಪ್ರೀತಿಯು ಕುಟುಂಬ ಶಾಂತಿಗೆ ಆವಶ್ಯಕವೆಂದು ನೀವು ಏಕೆ ಹೇಳುವಿರಿ?
20 ನಾಲ್ಕನೆಯ ಮೂಲತತ್ವವು ಇದಾಗಿದೆ: ಕುಟುಂಬ ಶಾಂತಿ ಮತ್ತು ಸಂತೋಷಕ್ಕೆ ಪ್ರೀತಿಯು ಆವಶ್ಯಕ. ವಿವಾಹದಲ್ಲಿ ಪ್ರಣಯಾತ್ಮಕ ಪ್ರೀತಿಯು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸಬಹುದು, ಮತ್ತು ಗಾಢವಾದ ಮಮತೆಯು ಕುಟುಂಬದ ಸದಸ್ಯರ ನಡುವೆ ವಿಕಸಿಸಬಲ್ಲದು. ಆದರೆ ಇದಕ್ಕಿಂತ ಹೆಚ್ಚು ಪ್ರಾಮುಖ್ಯವಾದದ್ದು, ಗ್ರೀಕ್ ಶಬ್ದವಾದ ಅಗಾಪೆಯಿಂದ ಸೂಚಿಸಲ್ಪಟ್ಟ ಪ್ರೀತಿಯಾಗಿದೆ. ಇದು ನಾವು ಯೆಹೋವನಿಗಾಗಿ, ಯೇಸುವಿಗಾಗಿ, ಮತ್ತು ನಮ್ಮ ನೆರೆಯವರಿಗಾಗಿ ಬೆಳೆಸಿಕೊಳ್ಳುವ ಪ್ರೀತಿಯಾಗಿದೆ. (ಮತ್ತಾಯ 22:37-39) ಮಾನವಜಾತಿಗಾಗಿ ‘ತನ್ನ ಒಬ್ಬನೇ ಮಗನನ್ನು ಕೊಟ್ಟು, ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು’ ಕೊಡುವ ಮೂಲಕ ದೇವರು ಈ ಪ್ರೀತಿಯನ್ನು ತೋರಿಸಿದನು. (ಯೋಹಾನ 3:16) ನಾವು ನಮ್ಮ ಕುಟುಂಬದ ಸದಸ್ಯರಿಗಾಗಿ ಅದೇ ರೀತಿಯ ಪ್ರೀತಿಯನ್ನು ಪ್ರದರ್ಶಿಸಸಾಧ್ಯವಾಗುವುದು ಎಷ್ಟು ಅದ್ಭುತಕರ! ಉನ್ನತ ಮಟ್ಟದಲ್ಲಿರುವ ಈ ಪ್ರೀತಿಯು, “ಐಕ್ಯದ ಒಂದು ಪರಿಪೂರ್ಣ ಬಂಧವಾಗಿದೆ.” (ಕೊಲೊಸ್ಸೆ 3:14, NW) ಅದು ಒಂದು ವಿವಾಹಿತ ದಂಪತಿಗಳನ್ನು ಒಟ್ಟುಸೇರಿಸುತ್ತದೆ ಮತ್ತು ಪರಸ್ಪರರಿಗಾಗಿ ಹಾಗೂ ತಮ್ಮ ಮಕ್ಕಳಿಗಾಗಿ ಯಾವುದು ಅತ್ಯುತ್ತಮವಾಗಿದೆಯೊ ಅದನ್ನು ಮಾಡುವಂತೆ ಅವರನ್ನು ಪ್ರಚೋದಿಸುತ್ತದೆ. ಕಷ್ಟಗಳು ವಿಕಸಿಸುವಾಗ, ವಿಷಯಗಳನ್ನು ಒಟ್ಟಾಗಿ ನಿರ್ವಹಿಸುವಂತೆ ಪ್ರೀತಿಯು ಅವರಿಗೆ ಸಹಾಯ ಮಾಡುತ್ತದೆ. ನಾವು ಇದರ ವಿಷಯವಾಗಿ ನಿಶ್ಚಿತರಾಗಿರಬಲ್ಲೆವು ಏಕೆಂದರೆ, “ಪ್ರೀತಿಯು . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, . . . ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:4-8) ಯಾವ ಕುಟುಂಬಗಳಲ್ಲಿ ಪರಸ್ಪರರಿಗಾಗಿರುವ ಪ್ರೀತಿಯು ಯೆಹೋವನಿಗಾಗಿರುವ ಪ್ರೀತಿಯಿಂದ ಕೂಡಿಸಲ್ಪಟ್ಟಿದೆಯೊ ಅಂತಹ ಕುಟುಂಬಗಳು ನಿಜವಾಗಿಯೂ ಸಂತೋಷಿತ ಕುಟುಂಬಗಳು!
ದೈವಿಕ ಶಾಂತಿಯನ್ನು ಬೆನ್ನಟ್ಟುತ್ತಾ ಇರಿ
21. ನಿಮ್ಮ ಕುಟುಂಬದ ಶಾಂತಿ ಮತ್ತು ಸಂತೋಷವನ್ನು ಯಾವುದು ಹೆಚ್ಚಿಸಬಹುದು?
21 ಈ ಮೊದಲೇ ತಿಳಿಸಲ್ಪಟ್ಟ ಮೂಲತತ್ವಗಳು ಮತ್ತು ಬೈಬಲಿನಿಂದ ತೆಗೆಯಲ್ಪಟ್ಟ ಇತರ ಮೂಲತತ್ವಗಳು, ಯೆಹೋವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ದಯೆಯಿಂದ ಒದಗಿಸಿರುವ ಪ್ರಕಾಶನಗಳಲ್ಲಿ ರೇಖಿಸಲ್ಪಟ್ಟಿವೆ. (ಮತ್ತಾಯ 24:45) ಉದಾಹರಣೆಗೆ, ಇಂತಹ ಮಾಹಿತಿಯು 1996/97ರಲ್ಲಿ ಲೋಕದಾದ್ಯಂತ ಜರುಗಿದ ಯೆಹೋವನ ಸಾಕ್ಷಿಗಳ “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆ ಮಾಡಲ್ಪಟ್ಟ, ಕುಟುಂಬ ಸಂತೋಷದ ರಹಸ್ಯ ಎಂಬ 192 ಪುಟಗಳ ಪುಸ್ತಕದಲ್ಲಿ ಅಡಕವಾಗಿದೆ. ಇಂತಹ ಪ್ರಕಾಶನದ ಸಹಾಯದೊಂದಿಗೆ ಶಾಸ್ತ್ರಗಳ ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನವು ಅನೇಕ ಪ್ರಯೋಜನಗಳಲ್ಲಿ ಫಲಿಸಬಲ್ಲದು. (ಯೆಶಾಯ 48:17, 18) ಹೌದು, ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಿಕೊಳ್ಳುವುದು, ನಿಮ್ಮ ಕುಟುಂಬದ ಶಾಂತಿ ಮತ್ತು ಸಂತೋಷವನ್ನು ಹೆಚ್ಚಿಸಬಹುದು.
22. ನಮ್ಮ ಕುಟುಂಬ ಜೀವನವನ್ನು ನಾವು ಯಾವುದರ ಮೇಲೆ ಕೇಂದ್ರೀಕರಿಸಬೇಕು?
22 ಯೆಹೋವನು, ತನ್ನ ಚಿತ್ತವನ್ನು ಮಾಡುತ್ತಿರುವ ಕುಟುಂಬಗಳಿಗೆ ಅದ್ಭುತಕರವಾದ ವಿಷಯಗಳನ್ನು ದಯಪಾಲಿಸಲಿದ್ದಾನೆ, ಮತ್ತು ಆತನು ನಮ್ಮ ಸ್ತುತಿ ಹಾಗೂ ಸೇವೆಗೆ ಅರ್ಹನಾಗಿದ್ದಾನೆ. (ಪ್ರಕಟನೆ 21:1-4) ಆದುದರಿಂದ ನಿಮ್ಮ ಕುಟುಂಬವು ಅದರ ಜೀವಿತವನ್ನು ಸತ್ಯ ದೇವರ ಆರಾಧನೆಯ ಮೇಲೆ ಕೇಂದ್ರೀಕರಿಸಲಿ. ಮತ್ತು ನೀವು ನಿಮ್ಮ ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿದಂತೆ, ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯಾದ ಯೆಹೋವನು ನಿಮಗೆ ಸಂತೋಷವನ್ನು ದಯಪಾಲಿಸಿ, ಆಶೀರ್ವದಿಸಲಿ!
ನೀವು ಹೇಗೆ ಉತ್ತರಿಸುವಿರಿ?
◻ ಕುಟುಂಬಗಳು ದಿವ್ಯ ಭಕ್ತಿಯಿಂದ ಜೀವಿಸಬೇಕಾದಲ್ಲಿ ಯಾವುದರ ಆವಶ್ಯಕತೆಯಿದೆ?
◻ ಇಂದು ಕುಟುಂಬ ಬಿಕ್ಕಟ್ಟಿರುವುದು ಏಕೆ?
◻ ಕುಟುಂಬ ಸಂತೋಷದ ರಹಸ್ಯವೇನು?
◻ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಪ್ರವರ್ಧಿಸಲು ನಮಗೆ ಸಹಾಯ ಮಾಡುವ ಕೆಲವು ಮೂಲತತ್ವಗಳಾವುವು?
[ಪುಟ 24 ರಲ್ಲಿರುವ ಚಿತ್ರ]
ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಲು ಒಳ್ಳೆಯ ಸಂವಾದವು ನಮಗೆ ಸಹಾಯ ಮಾಡುತ್ತದೆ